Tuesday, November 5, 2019

’ರಾಕ್ಷಸ ತಂಗಡಿ’ ನಾಟಕ ಹೇಳುವುದೇನನ್ನು?


ನೀನಾಸಂ ಅಭಿನಯಿಸಿದ ಗಿರೀಶ್ ಕಾರ್ನಾಡರ ಕೊನೆಯ ನಾಟಕ ’ರಾಕ್ಷಸ ತಂಗಡಿ’ಯನ್ನು ನೋಡಿ ಬಂದೊಡನೆಯ  ಮಾಡಿದ ಮೊದಲ ಕೆಲಸವೆಂದರೆ ಮತ್ತೊಮ್ಮೆ ನಾಟಕದ ಅಂತ್ಯವನ್ನು ಓದಿದ್ದು. ಯಾಕೆಂದರೆ ನಾಟಕದ ಅಂತ್ಯ ನನ್ನಲ್ಲಿ ಗೊಂದಲವನ್ನುಂಟು ಮಾಡಿತ್ತು.


ಪಠ್ಯದಲ್ಲಿ ಆ ದೃಶ್ಯ ಕೆತ್ತಲ್ಪಟ್ಟಿದ್ದು ಹೀಗೆ,  ರೂಮಿಖಾನ್ ರಾಮರಾಯನ ತಲೆಯನ್ನು ಕತ್ತರಿಸಿದ ಕೂಡಲೇ ಅದಿಲ್ ಶಾ ರೋದಿಸುತ್ತಾ ಓಡಿ ಹೋಗಿ ಅ ರುಂಡವನ್ನು ಎತ್ತಿಕೊಳ್ಳುತ್ತಾನೆ. ಆಗ ನಿಝಾಮ್ ಶಾ ಆಡುವ ಮಾತುಗಳಿವು; ’ತಗೋ, ಸುಲ್ತಾನ್ ಆದಿಲ್ ಶಾ ಇದನ್ನು ಕಾಶಿಗೆ ಕಳಿಸಿಕೊಡು. ನಿನ್ನ ಮಾವನ ಕಡೆಯಿಂದ ದೊರೆತ ಉಡುಗೊರೆ. ಇಡಿಯ ದಖ್ಖನ್! ಇಡಿಯ ದಖ್ಖನ್ ನಿನ್ನದು!’ ಇದು ನಾಟಕದ ಕೊನೆಯ ಡೈಲಾಗ್ ಕೂಡಾ ಹೌದು.. ನಾಟಕಾರ ಏನು ಹೇಳಬೇಕೆಂದುಕೊಂಡಿದ್ದರೋ ಅದೆಲ್ಲವೂ ಈ ಒಂದೇ ಒಂದು ಡೈಲಾಗ್ ನಲ್ಲಿತ್ತು. ಆದರೆ ಇದನ್ನು ನಾಟದಲ್ಲಿ ನಿಜಾಂ ಶಾ ಆಡಲೇ ಇಲ್ಲ. ನನ್ನ ಕಿವಿ ನನಗೆ ಮೋಸ ಮಾಡಿರಬಹುದೇ? ಎಂದು ನಾಟ ನೋಡಿದ ಒಂದೆರಡು ಮಂದಿಯಲ್ಲಿ ವಿಚಾರಿಸಿದೆ. ಅದರಲ್ಲಿ ಕೆಲವರು ಆ ಡೈಲಾಗ್ ಇರಲಿಲ್ಲ ಅಂದರು. ಇನ್ನು ಕೆಲವರು ಆ ಡೈಲಾಗ್ ಇತ್ತು. ಆದರೆ ರಾಮರಾಯನಿಗೆ ಅವನದೇ ತಲೆಯನ್ನು ಸೈನಿಕನೊಬ್ಬ ಒಪ್ಪಿಸುವಾಗ ಆ ಡೈಲಾಗ್ ಬಂತು. ಆದರೆ ಆಗ ಹಾಡು ಆರಂಭವಾಯ್ತು [ಲೋಳ ಲೋಟೆ]. ಅಂದರು. ಅಂದರೆ ಪ್ರೇಕ್ಷಕರ ಗಮನ ಗೊಂದಲದಲ್ಲಿ ರಾಮರಾಯನ ತಲೆಯ ಮೇಲೆ ನೆಟ್ಟಿತ್ತು. ಆಗ ರಂಗದ ಬಲಬದಿಯಲೆಲ್ಲೋ ಇದ್ದ ನಿಜಾಂ ಆ ಡೈಲಾಗ್ ಆಡಿರಲೂ ಬಹುದು.

. ಗೊಂದಲವಾಗುವುದಕ್ಕೆ ಇನ್ನೂ ಒಂದು ಕಾರಣವೂ ಇತ್ತು. ಸೆರೆ ಸಿಕ್ಕ ರಾಮರಾಯನನ್ನು  ನಿಜಾಂ ಶಾ ನ ಯುದ್ಧದ ಡೇರೆಯೊಳಗೆ ಬಾಗಿಲ ಬಳಿ ಕುಳ್ಳಿರಿಸುತ್ತಾರೆ. ಅವನಿಗೆ ಹಕೀಂ ಕೆಂಪು ಹೂವಿನ ಹಾರ ಹಾಕಿ, ಆರತಿ ಎತ್ತಿ, ಗಂಗೆ ನೀರಿರಿರುವ ಚೊಂಬಿನಿಂದ ನಿವಾಳಿಸುತ್ತಾನೆ. ನಂತರ ನಿಝಾಂ ಶಾನ ಕಣ್ಸನ್ನೆಯಂತೆ ರೂಮಿಖಾನ್ ರಾಮರಾಯನ  ತಲೆಯನ್ನು ಕತ್ತರಿಸುತ್ತಾನೆ.. ತಲೆ ಹೊಸ್ತಿಲಾಚೆ ಬೀಳುತ್ತದೆ. ದೇಹ ಒಳಗೇ ಉಳಿಯುತ್ತದೆ. [ಹಿರಣ್ಯಕಶಿಪ್ ನನ್ನು ನರಸಿಂಹ ಹೊಸ್ತಿಲ ಮೇಲೆ ವಧಿಸಿದ ನೆನಪು ಬಂತು!] ಅನಂತರ ತಲೆಯನ್ನು ಹರಿವಾಣದೊಳಗೆ ಇಟ್ಟು ಎದ್ದು ಕುಳಿತ ರಾಮರಾಯನಿಗೇ ಕೊಡುತ್ತಾರೆ. ತಲೆ ಚಚ್ಚಿಕೊಂಡರೂ ಇದರ ಅರ್ಥವೇನೆಂದು ಹೊಳೆಯಲೇ ಇಲ್ಲ.

.  ಇದೇ ನಾಟಕವನ್ನು ಇಂಗ್ಲೀಷನಲ್ಲಿಯೂ ನೋಡಿದ್ದೆ. ಅಲ್ಲಿ ನಾಟಕ ಕೊನೆ ತನಕ ತನ್ನ ಬಿಗಿಯನ್ನು ಕಾಯ್ದುಕೊಂಡಿತ್ತು. ರಾಮರಾಯ ನಿಜಾಂ ಶಾನಿಗೆ ತಾಂಬೂಲ ತಿನ್ನಿಸುವ ಒಂದೇ ದೃಶ್ಯವನ್ನು ತಾಳೆ ಹಾಕಿದರೂ ಸಾಕು ಅಲ್ಲಿಯ ಬಿಗಿ ಮತ್ತು ಇಲ್ಲಿಯ ಜಾಳುತನ ಅರಿವಾಗುತ್ತದೆ.  ಅಲ್ಲಿ ಅಳಿಯ ರಾಮರಾಯ ಫಿಸಿಕ್ ಆಕರ್ಷಕವಾಗಿರಲಿಲ್ಲ. ಆದರೆ ನಟನೆಯೇ ಜೀವಾಳವಾಗಿತ್ತು. ಇಲ್ಲಿ ಈತನ ಭಾವಬಂಗಿಗೆ ಯಕ್ಷಗಾನದ ಗಂಧವಿತ್ತು. ಅಲ್ಲಿ ರಾಮರಾಯನ ತಲೆ ಹಾರಿಸುವ ದೃಶ್ಯ ಬೆಳಕಿನ ಸಂಯೋಜನೆಯಲ್ಲಿ ಪೈಂಟಿಂಗ್ ನಂತೆ ಬಿಂಬಿತವಾಗಿತ್ತು. ಆತ ಓರೆಯಾಗಿ ಕುಳಿತ ಭಂಗಿ, ಇಳಿ ಬಿದ್ದ ತೋಳು  ಅಸಾಯಯಕತೆಯಲ್ಲೂ ಅತ್ಮಾಭಿಮಾನ ಚೆಲ್ಲುವಂತಿತ್ತು. ಇಲ್ಲಿ ಮತ್ತೆ ಮತ್ತೆ ಅದಿಲ್ ಶಾ ಎಲ್ಲಿ ಎಂದು ಕೇಳುವಲ್ಲಿ ರಾಮರಾಯನ ಅಸಹಾಯಕತೆಯೇ ಎದ್ದು ಕಾಣುತ್ತಿತ್ತು. ರಾಕ್ಷಸ ತಂಗಡಿಯಲ್ಲಿ ಎಲ್ಲಕ್ಕಿಂತಲೂ ಅಭಾಸ ಅನ್ನಿಸಿದ್ದು, ರಾಜಮಾತೆ ವೀಲ್ ಚೈರ್ ನಲ್ಲಿ ಬಂದಿದ್ದು. ವಿಜಯನಗರ ಕಾಲದಲ್ಲಿ ಅದು ಅಸ್ತಿತ್ವದಲ್ಲಿತ್ತೇ?

ಅಂತ್ಯವೊಂದನ್ನು ಬಿಟ್ಟು ಪೂರ್ತಿ ನಾಟಕ ಪಠ್ಯಕ್ಕೆ ನಿಷ್ಠವಾಗಿತ್ತು. ನಿದೇಶಕರು ಮಾಡಿಕೊಂಡ ಈ ಒಂದು ಬದಲಾವಣೆ ನಾಟಕದ ಆಶಯವನ್ನೇ ಪಲ್ಲಟಗೊಳಿಸಿತ್ತು.
 ನಿಜ, ಪಠ್ಯವನ್ನು ಯಾರು, ಯಾವ ಮನಸ್ಥಿತಿಯವರು ಓದುತ್ತಿದ್ದಾರೆ. ನೋಡುತ್ತಿದ್ದಾರೆ, ನಿರ್ದೇಶನ ಮಾಡುತ್ತಿದ್ದಾರೆ. ನೋಡುತ್ತಿದ್ದಾರೆ ಎಂಬುದು ಕೂಡಾ ಮುಖ್ಯವಾಗುತ್ತದೆ., ಭಿನ್ನ ಗ್ರಹಿಕೆ, ಭಿನ್ನ ನೋಟವಿರುವುದು ಅತ್ಯಂತ ಸಹಜ..

ರಾಕ್ಷಸ ತಂಗಡಿ ನಾಟಕದ ಇಂಗ್ಲೀಷ್ ಅವತರಣಿಕೆ ’ಕ್ರಾಸಿಂಗ್ ಟು ತಾಳಿಕೋಟೆ’  ಎರಡೂ ನಾಟಕಳೂ ಮೊತ್ತ ಮೊದಲ ಬಾರಿಗೆ ಒಂದೇ ತಿಂಗಳಿನಲ್ಲಿ ರಂಗದ ಮೇಲೆ ಬಂದವು. ಕನ್ನಡ ನಾಟಕವನ್ನು ನೀನಾಸಂ ರಂಗಕ್ಕೆ ತಂದರೆ ಇಂಗ್ಲೀಷ್ ನಾಟಕವನ್ನು ನಂದನ್ ನೀಲಕೇಣಿ ಮತ್ತು ಕಿರಣ್ ಮುಜುಮ್ ದಾರ್ ಪ್ರಯೋಜಿಸಿ ಅರ್ಜುನ್ ಸೆಜನಾನಿ ನಿರ್ದೆಶಿಸಿದ್ದರು. ಅಕ್ತೋಬರ್ ೨ರಂದು ಕ್ರಾಸಿಂಗ್ ಟೂ ತಾಳಿಕೋಟೆ ಬಂದರೆ ಅಕ್ಟೋಬರ್ ಅ೧೨ರಂದು ರಾಕ್ಷಸ ತಂಗಡಿ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನ ಕಂಡಿತು. ಎರಡೂ ಪ್ರದರ್ಶನಗಳು ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಪ್ರದರ್ಶನಗಳು. ಯಾಕೆಂದರೆ, ಇದು ಕಾರ್ನಾಡರು ಬರೆದ ಕೊನೆಯ ನಾಟಕ. ಮತ್ತು ವಿಜಯನಗರ ಸಾಮ್ರಾಜ್ಯದ ಪತನದ ಕಥೆಯನ್ನು ಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ ನಾಟವಿದು.

 ನಾವು ಬಾಲ್ಯದಿಂದಲೂ ಓದಿಕೊಂಡು ಬಂದಿದ್ದು. ವಿಜಯನಗರ ಸಾಮ್ರಜ್ಯದ ಮೇಲೆ ದಕ್ಷಿಣದ ಮುಸ್ಲಿಂ ರಾಜರೆಲ್ಲಾ ಒಟ್ಟಾಗಿ ಸೇರಿ ದಂಡೆತ್ತಿ ಬಂದರು. ರಕ್ಕಸ ತಂಗಡಿ ಎಂಬಲ್ಲಿ ಘೋರಕದನವಾಗಿ ವಿಜಯನಗರದ ಅರಸರು ಸೋತರು. ಮುಸ್ಲಿಮರೆಲ್ಲಾ ಬಂದು ವಿಜಯನಗರದ ಸಂಪತ್ತನ್ನು ದೋಚಿ ಅದನ್ನು ಹಾಳು ಹಂಪೆಯಾಗಿಸಿದರು ಎಂಬುದನ್ನು, ಆದರೆ ಈ ನಾಟಕ,.ವಿಜಯನಗರದ ಅರಸರೇ ಕೃಷ್ಣಾ ನದಿಯನ್ನು ದಾಟಿ ಉತ್ತರಕ್ಕೆ ದಂಡೆತ್ತಿ ಹೋಗಿದ್ದರು. ಅದಕ್ಕೆ ಅಳಿಯ ರಾಮರಾಯನ ದುರಾಂಹಕಾರವೇ ಕಾರಣವಾಗಿತ್ತು. ಸುಲಭದಲ್ಲಿ ಸೆರೆಸಿಕ್ಕ ರಾಮರಾಯನ ತಲೆಯನ್ನು ಮುಸ್ಲಿಮರು ಹಾರಿಸಿದ ಒಡನೆಯೇ ವಿಜಯನಗರದಲ್ಲಿದ್ದ ಅರಮನೆಯ ಪರಿವಾರದವರೇ ಅಲ್ಲಿದ್ದ ಸಂಪತ್ತಿನೊಡನೆ ಪೆನಗೊಂಡಕ್ಕೆ ಪರಾರಿಯಾದರು ಎಂದು ಹೇಳುತ್ತದೆ. ಇದು ನಾಟಕಾರರ ಅಧ್ಯನ ಮತ್ತು ಬರವಣಿಗೆಯ ಸ್ವಾತಂತ್ರ್ಯ ಅದರ ಬಗ್ಗೆ ತಕರಾರಿಲ್ಲ. ಆದರೆ ಅದನ್ನು ರಂಗಕ್ಕೆ ತಂದಾಗ ಅದು ರಂಗಪಠ್ಯವಾಗುತ್ತದೆ. ಅಲ್ಲಿ ಆತ ತೆಗೆದುಕೊಳ್ಳುವ ಸ್ವಾತಂತ್ಯ ಎಷ್ಟು ಎಂಬುದು ಚರ್ಚಾಸ್ಪದ ಸಂಗತಿ. 


ಎರಡೂ ನಾಟಗಳನ್ನು ನೋಡಿದ ಮೇಲೆ ಅನ್ನಿಸಿದ್ದು.  ಓದು ಕೊಟ್ಟ ಅನುಭವವನ್ನು ಪ್ರದರ್ಶನಗಳು ಕೊಡಲು ಸಾಧ್ಯವಾಗಿಲ್ಲ ಎಂಬುದು
ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಏಕಕಾಲದಲ್ಲಿ ಬಹುಮುಖ್ಯ ರಂಗತಂಡಗಳು ಅದನ್ನು ರಂಗಕ್ಕೆ ತಂದಾಗ ಅದರ ಬಗ್ಗೆ ಚರ್ಚೆಯಾಗಬೇಕಾಗಿತ್ತು. ಅದಾಗಲಿಲ್ಲ ಯಾಕೆ? ಕಾರ್ನಾಡರು ತಮ್ಮ ಕೊನೆಗಾಲದ ದಿನಗಳಲ್ಲಿ ಎದುರಿಸಿದ ಪ್ರತಿರೊಧ ಅವರು ಸತ್ತ ಮೇಲೆಯೂ ಮುಂದುವರಿದಿದೆಯೇ?
 ಇವತ್ತು [ನವೆಂಬರ್ ೫] ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.]


·        
Sunday, May 19, 2019

how do the personal and the universal interact in a creative process?

ಸೃಜನಶೀಲ ಪ್ರಕ್ರಿಯೆಯಲ್ಲಿವೈಯಕ್ತಿಕ ಮತ್ತು ಸಾರ್ವತ್ರಿಕ ಸಂವಹನ ಹೇಗೆ?


ಸೃಜನಶೀಲ ಪ್ರಕ್ರಿಯೆಯಲ್ಲಿ ವೈಯಕ್ತಿಕ ಅನುಭವಗಳು ಸಾರ್ವತ್ರಿಕ ಅನುಭವಗಳಾಗಿ ರೂಪಾಂತರಗೊಳ್ಳುವುದು ಬಲು ಸೋಜಿಗದ ಮತ್ತು ಕುತೂಹಲಕಾರಿಯಾದ  ವಿಚಾರ.

ಬರಹಗಾರ ಅಥವಾ ಕಲಾಕಾರರು ತಾವು ಬದುಕಿನಲ್ಲಿ ನೋಡಿದ್ದು, ಅನುಭವಿಸಿದ್ದು, ಕನಸು ಕಂಡಿದ್ದು, ಸದಾ ಕಾಲ ಕಾಡಿದ್ದು, ಇದೆಲ್ಲವನ್ನೂ ಕಲಾ ರೂಪಕ್ಕೆ ತಂದಾಗ ಅದು ಸಾರ್ವತ್ರಿಕವಾಗುತ್ತದೆ. ಆಗ ಓದುಗ ಅಥವಾ ಕಲಾರಸಿಕ ಅದು ತನ್ನದೇ ಅನುಭವವೆಂಬಂತೆ ಪರಿಭಾವಿಸುತ್ತಾನೆ. ಆ ಕಲಾಕೃತಿ ತನ್ನೊಳಗಿನ ಪ್ರತಿಬಿಂಬ ಎಂದು ಭಾವಿಸಿ ಅದನ್ನು ಸೃಷಿಸಿದಾತನ ಮೇಲೆ ಪ್ರೀತಿ ಮತ್ತು ಗೌರವವನ್ನು ತಾಳುತ್ತಾನೆ. ಇದು ಒಂದು ಕಲೆಗೆ ಮತ್ತು ಕಲಾಕಾರನಿಗೆ ಸಂದ ಗೌರವವಾಗುತ್ತದೆ.

 ಸತ್ಯ ಮತ್ತು ಸೌಂದರ್ಯಗಳಂತ ಅಮೂರ್ತ ವಿಚಾರಗಳನ್ನು ಸಾರ್ವತ್ರಿಕಗೊಳಿಸಬೇಕಾದರೆ ವೈಯಕ್ತಿಕ ಅನುಭವಗಳ ಮುಖಾಂತರ ಹೇಳಿದರೆ ಅದು ಓದುಗನ ಅಥವಾ ನೋಡುಗನ ಮನಸನ್ನು ಬೇಗನೆ ತಟ್ಟುತ್ತದೆ. ವೈಯಕ್ತಿಕ ಅನುಭವಗಳನ್ನು ಪ್ರತಿಮೆಗಳ ಮೂಲಕ ಹೇಳಿದಾಗ  ಕೃತಿ ಆಳವನ್ನು ಪಡೆಯುತ್ತದೆ.

ಒಂದು ಕೃತಿಯಲ್ಲಿ ಕೃತಿಕಾರನ ವೈಯಕ್ತಿಕ ಅನುಭವ ಹೇಗೆ ಸಾರ್ವತ್ರಿಕವಾಗಿ ರೂಪಾಂತರಗೊಂಡಿದೆ ಎಂಬುದು  ಒಬ್ಬ ಸೂಕ್ಷ್ಮ ಓದುಗನಿಗೆ, ಕೇಳುಗನಿಗೆ ಅಥವಾ ನೋಡುಗನಿಗೆ ಗೊತ್ತಾಗುತ್ತದೆ. ಹಾಗಾಗಿ ಆತ ಅದು ತನ್ನದೇ ಬದುಕಿನ ಭಾಗವೆಂಬಂತೆ  ಭಾವಿಸುತ್ತಾನೆ.  ಹಾಗೆ ಆದಲ್ಲಿ ಅದು ಕೃತಿಯ ಗೆಲುವು.

Friday, May 17, 2019

What is the difference between a story and a situation?Story ಅಂದರೆ ಅದಕ್ಕೊಂದು ಆರಂಭ ಮತ್ತು ಅಂತ್ಯವಿರುತ್ತದೆ. ಇದರ ಮಧ್ಯೆ ಅನೇಕ ಘಟನೆಗಳು ನಡೆಯುತ್ತವೆ. ಭಾವನೆಗಳು ಅನಾವರಣಗೊಳ್ಳುತ್ತವೆ.
Situation ಅಂದರೆ ಸಂದರ್ಭ ಅಥವಾ ಸನ್ನಿವೇಶ. ಕಥೆ ಭಾವನೆಗಳ ಮೇಲೆ ನಿಂತಿದ್ದರೆ ಸಂದರ್ಭ ಆ ಕಾಲದ ವರ್ತಮಾನದ ಮೇಲೆ ನಿಂತಿರುತ್ತದೆ. ಹಾಗಾಗಿ ಇವೆರಡರ ನಡುವೆ ಯಾವಾಗಲೂ ಒಂದು ರೀತಿಯ ತಿಕ್ಕಾಟ, ಹೊಂದಾಣಿಕೆ ಮತ್ತು ಘರ್ಷಣೆ ಇರುತ್ತದೆ. ಅದು ಇದ್ದಾಗ ಮಾತ್ರ ಅದೊಂದು ಸಾಹಿತ್ಯ ಕೃತಿಯಾಗುತ್ತದೆ. ಒಳ್ಳೆಯ ನಾಟಕವಾಗುತ್ತದೆ.
ಉದಾಹರಣೆಗೆ ಶೂದ್ರಕ ಬರೆದ ಮೃಚ್ಛಕಟಿಕ ನಾಟಕವನ್ನೇ ತೆಗೆದುಕೊಳ್ಳುವುದಾದರೆ ಅದು ಕ್ರಿಸ್ತಪೂರ್ವ ಐದನೆಯ ಶತಮಾನದ ಕಥೆ. ಅದು ಇವತ್ತಿಗೂ ಯಾಕೆ ಒಂದು ಅತ್ಯುತ್ತಮ ನಾಟಕವಾಗಿ ಉಳಿದುಕೊಂಡಿದೆಯೆಂದರೆ ಅದಕ್ಕಿರುವ ಹಲವು ಆಯಾಮಗಳು. ಮೃಚ್ಚಕಟಿಕ ನಾಟ್ಕ ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸಾರಿಕ ಬದುಕಿನ ವಿವರಗಳನ್ನು ಹೇಳುತ್ತದೆ.
ನಾಟಕದಲ್ಲಿ ಪ್ರತಿಯೊಂದು ಪಾತ್ರಕ್ಕೂ ಮಹತ್ವವನ್ನು ಕೊಡಲಾಗಿದೆ.ಅದು ಚಾರುದತ್ತನ ಸಂಸಾರದ ಕಥೆಯೂ ಹೌದು, ಚಾರುದತ್ತ ವಸಂತಸೇನೆಯ ಪ್ರೇಮದ ಕಥೆಯೂ ಹೌದು. ರಾಜನ ವಿರುದ್ಧ ಬಂಡಾಯವೆದ್ದು ಗೆದ್ದ ಕ್ರಾಂತಿಕಾರಿಗಳ ಕಥೆಯೂ ಹೌದು. ಚಾರುದತ್ತನ ಪ್ರೇಮದ ಕಥೆಯಷ್ಟೇ ಕಳ್ಳ ಮತ್ತು ವಸಂತಸೇನೆಯ ಪ್ರೇಮದ ಕಥೆಯೂ ಮಹತ್ವ ಪಡೆದುಕೊಳ್ಳುತ್ತದೆ. ಕಾಮಸೂತ್ರವನ್ನು ಬರೆದ ವಾತ್ಸಾಯನ ಋಷಿಯೂ ಇಲ್ಲಿ ಪ್ರಮುಖ ಪಾತ್ರ. ಹಾಗಾಗಿ ಇವರೇ ಈ ನಾಟಕದ ನಾಯಕ ಅಥ್ವಾ ನಾಯಕಿ ಎಂದು ಹೇಳಲು ಸಾಧ್ಯವಿಲ್ಲ. ನಿರ್ದೇಶಕ ಈ ನಾಟ್ಕದಲ್ಲಿ ಯಾರನ್ನು ಬೇಕಾದರೂ ಬೇಕಾದರೂ ನಾಯಕ ನಾಯಕಿಯನ್ನಾಗಿ ಮಾಡಬಹುದು. ಶೂದ್ರಕನ ದೃಷ್ಟಿಯಲ್ಲಿ situation ಕೇಂದ್ರ ಪಾತ್ರ ಆಗಿರಲೂ ಬಹುದು.
ಇದೆಲ್ಲಾ ನಾಟಕದೊಳಗಿನ ಸನ್ನಿವೇಶಗಳಾದವು. ಆದರೆ ಸ್ವತಃ ನಾಟಕಕಾರನೇ ನಾಟಕ ರಚನೆಗಿರಬೇಕಾದ ಪರಂಪರಾಗತ ನಿಯಮಾವಳಿಗಳನ್ನು ಉಲ್ಲಂಘಸಿಸುತ್ತಾನೆ. ಭರತನ ‘ನಾಟ್ಯಶಾಸ್ತ್ರ’ದ ನಿಯಮದ ಪ್ರಕಾರ ಕಳ್ಳಕಾಕರು, ವೈಶ್ಯೆಯರಂತಹ ಸಮಾಜನಿಂದಿತ ವರ್ಗದವರು ನಾಟಕದ ಮುಖ್ಯ ಪಾತ್ರಧಾರಿಗಳಾಗಬಾರದು. ಆದ್ರೆ ಶೂದ್ರಕ ಆ ಕಾಲದಲ್ಲೇ ಅದನ್ನು ಮೀರುತ್ತಾನೆ. ಮೃಚ್ಛಕಟಿಕಾದಲ್ಲಿ ಯಾವ ಪಾತ್ರವೂ ಹೆಚ್ಚಲ್ಲ ಯಾವ ಪಾತ್ರವೂ ಕಡಿಮೆಯಲ್ಲ. ಹಾಗಾಗಿ ಇಡೀ ನಾಟಕ, ನಾಟಕದ ಹೊರತಾದ ಇನ್ನೇನನ್ನೋ ಹೇಳುತ್ತದೆ. ಹಾಗಾಗಿಯೇ ಅದು ಸಾರ್ವಕಾಲೀಕವಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಬರೆದರೂ ಇಂದಿಗೂ ಪ್ರಸ್ತುತವಾಗಿದೆ.
ನಾನು ಬರೆಯಬಹುದಾದ ನಾಟಕದ ಬಗ್ಗೆ ಹೇಳುವುದಾದರೆ ಅದು ಬೊಬ್ಬರ್ಯ ಎನ್ನುವ ಒಬ್ಬ ಜಾನಪದ ವ್ಯಕ್ತಿಯ ಕಥೆ. ಮಹಮ್ಮದ್ ಎನ್ನುವ ಕಡಲಿನ ವ್ಯಾಪಾರಿ  ಒಮ್ಮೆ ಊರಿಗೆ ಬಂದಾಗ ತನ್ನ ಪರಿಚಯದ ಇಬ್ಬರು ಅಣ್ಣಂದಿರು ತಮ್ಮ ಒಬ್ಬಳೇ ತಂಗಿಯ ಬಗ್ಗೆ ಚಿಂತಿತರಾಗಿರುವುದನ್ನು ಕಂಡು ಕಾರಣ ಕೇಳುತ್ತಾನೆ. ಆಗ ಅವರು, ತಂಗಿಗೆ ಪ್ರತಿಸಲ ಮದುವೆ ಮಾಡಿದಾಗಲೂ ಪ್ರಥಮ ರಾತ್ರಿಯಂದೇ ವರ ಸತ್ತು ಹೋಗುತ್ತಾನೆ. ಹೀಗೆ ಇಪ್ಪತ್ತೊಂದು ಬಾರಿ ನಡೆಯುತ್ತಾನೆ. ಅಣ್ಣಂದಿರ ಅನುಮತಿಯನ್ನು ಪಡೆದು ಮಹಮ್ಮದ್ ಆಕೆಯನ್ನು ಮದುವೆಯಾಗುತ್ತಾನೆ. ಉಪಾಯದಿಂದ ಬದುಕಿ ಉಳಿಯುತ್ತಾನೆ. ಅವರಿಬ್ಬರಿಗೆ ಹುಟ್ಟಿದವನೇ ಬೊಬ್ಬರ್ಯ. ಬೊಬ್ಬರ್ಯ ಸತ್ತ ಮೇಲೆ ದೈವವಾಗಿ ಹಿಂದು ಮುಸ್ಲಿಂ ಎರಡೂ ಪಂಗಡಗಳಿಂದಲೂ ಆರಾಧನೆಗೆ ಒಳಾಗುತ್ತಾನೆ. ಇದು stoy.
ಕರಾವಳಿಗೆ ಮುಸ್ಲಿಂ ಆಗಮನದಿಂದ ಇಂಗ್ಲೀಶರ ಆಗಮನದವರೆಗೆ stoy ವಿಸ್ತರಿಸಿಕೊಳ್ಳುತ್ತದೆ. Situation ಯಾವುದೆಂದರೆ ಇಂದಿನ ಕರಾವಳಿಯ ಕೋಮು ಸಂಘರ್ಷದ ವಾತಾವರಣ. ಅದಕ್ಕಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು. Story ಮತ್ತು Situation  ನಡುವೆ ಸಂಘರ್ಷ [conflict] ನಡೆದಾಗ ನಾಟಕೀಯ ಅಂಶಗಳು [ dramatic elements] ಸೇರಿ ನಾಟಕ ರಚನೆಯಾಗುತ್ತದೆ.
Usha kattemane

Tuesday, March 26, 2019

ಆಟಿ ಹುಣ್ಣೆಮೆಯ ಹೆಣ್ಣು ನಾನು!

ಚಿತ್ರ; Internaetಮೊನ್ನೆ..

ಮುಂಜಾವಿನಲ್ಲಿ ಬಸ್ಸಿನಿಂದಿಳಿದು
ಪೇಟೆಯ ಕಲ್ಲುಬೆಂಚಿನಲ್ಲಿ ಕುಳಿತಿದ್ದೆ.
ಪಕ್ಕದ ಗೂಡಂಗಡಿಯ ಕಾಕ
ತಟ್ಟೆಯಲ್ಲಿ ತಂದ ಬಿಸಿ ಉಪ್ಪಿಟ್ಟನ್ನು ರಸ್ತೆಬದಿಯಲ್ಲಿ ಚೆಲ್ಲಿದ
ಲೋಟ ತುಂಬಿದ ಬಿಸಿ ಬಿಸಿ ಚಾಹವನ್ನು ಅಲ್ಲೇ ಸುರಿದ.
ತಲೆಯೆತ್ತಿ ಅವನನ್ನೇ ದಿಟ್ಟಿಸಿದೆ.
‘ಲಾಗಾಯ್ತಿನಿಂದ ಬಂದದ್ದು’ ಎಂದು ನಗು ಚಿಲ್ಲಿದ.
ಮೂಡಣಕ್ಕೆ ಕೈಮುಗಿದು ಒಳಗಡೆಗೆ ಹೋದ.

ಇಬ್ಬನಿಯ ಮುಂಜಾವಿನಲ್ಲಿ ನನ್ನಜ್ಜಿ
ನೆಟ್ಟಿಗದ್ದೆಗೆ ಹೋಗಿ ಎಳೆಸಸಿಗಳ ಸವರಿ,
ಬಳ್ಳಿಗಳ ಚಪ್ಪರಕ್ಕೆ ಹಬ್ಬಿಸಿ.
‘ಕಾಯಿಗಟ್ಟಿದೆ ನೆಟ್ಯಜ್ಜಿಗೆ ಎಡೆ ಹಾಕಬೇಕು’
 ಗೊಣಗುತ್ತಾ ಬಂದು
ಇನ್ನೂ ಮಲಗಿಯೇ ಇದ್ದ ನನ್ನ ಕುಂಡೆಗೊಂದು ಒದ್ದು.
ಕೇಪಳೆ ಹೂ ಕೊಯ್ದುಕೊಂಡು ಬಾ ಎಂದು ಅಟ್ಟಿದಳು.
ಕುಂಜ್ಞ್ ಕತ್ತಿ ಹಿಡಿದು  ಎಲ್ಲಿಗೋ ನಡೆದಳು.

ನಟ್ಯಜ್ಜಿಗೆ ರಾಗಿಗಂಜಿ ಏಡಿ ಸಾರು ಬಡಿಸಿದಳು.
ಚಾಮುಂಡಿಯೆಂಬ ಕಲ್ಲುಗುಂಡಿಗೆ ಹಂದಿರಕ್ತದ ಅಭಿಶೇಕ ಮಾಡಿದಳು.
ಕೆಂಪಿ ಹಸುವಿನ ಮೊದಲ ಹಾಲನ್ನು ನದಿಗೆ ಎರೆದಳು.
ಮೀಸಲು ಮೀನನ್ನು ಕಾಡಿಗೆಸೆದು ಬುಟ್ಟಿ ತುಂಬಿಸಿಕೊಂಡಳು.
ಇದೆಲ್ಲವನ್ನೂ ಕೊಟ್ಟ ಭೂಮಿ ತಾಯಿಗೆ
ವರ್ಷದಲ್ಲಿ ಮೂರುದಿನ ಕಳಶಕನ್ನಡಿಯಿಟ್ಟು
ಸೀಗೆಕೊಂಬನ್ನು ನೆಟ್ಟು
ನೆತ್ತಿಗೆ ಎಣ್ಣೆಯೆರೆದಳು.

ನನ್ನ ಬೈತಲೆಯಲ್ಲಿ ಸಿಂಧೂರವಿಲ್ಲ.
ಹಣೆಯಲ್ಲಿ ಗಂಧಚಂದನ.
ಕೊರಳಲ್ಲಿ ತಾಳಿಯಿಲ್ಲ.
ನಾನು ನಿಮ್ಮವಳಲ್ಲ.
ನಿಮ್ಮ ದೇವರು ನನ್ನ ದೇವರಲ್ಲ.
ಆಟಿ ಹುಣ್ಣಿಮೆಯ ಹೆಣ್ಣು ನಾನು
ಬೀಮನ ಅಮಾವಾಸ್ಯೆಯ ಹದಿಬದೆಯಲ್ಲ


ನಿಮ್ಮ ದೇವರುಗಳ ಕೈಯ್ಯಲ್ಲಿ ಮಾರಕ ಆಯುಧಗಳಿವೆ
ಕತ್ತರಿಸಿದ ರುಂಡವಿದೆ.
ನಿಮ್ಮ ಹಾಗೆಯೇ ನಿಮ್ಮ ದೇವರು.
ನಿಮ್ಮ ಭಾರತ ಮಾತೆ ರಕ್ತದಾಹಿ.!

ನನಗೀಗ ಕಾಶ್ಮೀರಿಗಳು ಹೆಚ್ಚು ಅರ್ಥವಾಗುತ್ತಾರೆ.
ಮುಸ್ಲೀಮರು ಹೆಚ್ಚು ಅರ್ಥವಾಗುತ್ತಾರೆ.
ದಲಿತರು ಹೆಚ್ಚು ಅರ್ಥವಾಗುತ್ತಾರೆ.

ಆಟಿ ಹುಣ್ಣಿಮೆಯ ಹೆಣ್ಣು ನಾನು!
ಅಂತಃರಿಕ್ಷದಿಂದ ಉದುರಿದವರು ನೀವು.
ತ್ರಿಶಂಕುವಿಗೆ ಸ್ವರ್ಗವಿಲ್ಲ.!
·         


Saturday, February 9, 2019

ಮಕ್ಕಳನ್ನು ಹುಟ್ಟಿಸುವುದು ಬೇಡ’ ಏಕೆ?


ವಿವಾಹಿತ ಸ್ತೀಯೊಬ್ಬಳು ತಾನು ಮಗುವನ್ನು ಹೆರಲಾರೆ ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಬಹುಶಃ ಸಾಧ್ಯವಿಲ್ಲ. ಮಕ್ಕಳನ್ನು ಹಡೆದು ವಂಶವನ್ನು ಮುಂದುವರಿಸುವುದೇ ಮದುವೆಯ ಮುಖ್ಯ ಉದ್ದೇಶ. ಆದರೆ ಮದುವೆಯಾದ ದಂಪತಿಗಳು ತಾವು ಮಕ್ಕಳನ್ನು ಪಡೆಯುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ? ಆ ನಿರ್ಧಾರಕ್ಕೆ ತಾತ್ವಿಕ ತಳಹದಿಯೂ ಇದ್ದಾಗ ಅದರ ಬಗ್ಗೆ ಸ್ವಲ್ಪ ಯೋಚಿಸಲೇ ಬೇಕು.

ಮಧ್ಯವಯಸ್ಸಿನ ಅಂಚಿನಲ್ಲಿ ನಿಂತು ಹಿಂದಿರುಗಿ ನೋಡಿದಾಗ ನನಗಾಗಿ, ನನ್ನವರಿಗಾಗಿ ಮತ್ತು ಸಮಾಜಕ್ಕಾಗಿ ಬದುಕಿದ ಕಾಲಾವಧಿಯನ್ನು  ಅವಲೋಕಿಸಿಕೊಂಡಾಗ ಒಂದು ಸಣ್ಣ ವ್ಯಥೆ ಆವರಿಸಿಕೊಳ್ಳುತ್ತದೆ. ಬದುಕು ಮುಗಿದೇ ಹೋಯ್ತಲ್ಲಾ ಅನ್ನಿಸಿ ಖಿನ್ನಳಾಗುತ್ತೇನೆ.

ಒಂದು ವೇಳೆ ನಾನು ಮದುವೆಯೇ ಆಗದಿರುತ್ತಿದ್ದರೆ? ಮದುವೆಯಾಗಿಯೂ ಮಕ್ಕಳನ್ನು ಹೊಂದುಬಾರದು ಎನ್ನುವ ನಿರ್ಧಾರ ಮಾಡಿದ್ದರೆ? ನನ್ನ ಬದುಕು ಹೀಗಿರದೆ ಇನ್ಯಾವ ರೀತಿಯಲ್ಲಿರುತ್ತಿತ್ತು?

 ಈ ‘ರೇ’ ಸಾಮ್ರಾಜ್ಯದ ಹರವು ತುಂಬಾ ದೊಡ್ಡದು. ಅದು ಅನಂತ, ಅನೂಹ್ಯ. ಬಹುಶಃ ನನ್ನ ಬದುಕು ಈಗಿನಂತಿಲ್ಲದೆ ಬೇರ್ಯಾವುದೋ ರೀತಿಯಲ್ಲಿ ಇದ್ದಿದ್ದರೂ ಆಗಲೂ ‘ನನ್ನ ಬದುಕು ಇದಲ್ಲ. ನಾನು ಇಲ್ಲಿಗೆ ಸೇರಿದವಳಲ್ಲ’ ಅಂತ ಅಂದುಕೊಳ್ಳುತ್ತಾ, ಕವಲು ಹಾದಿಯಲ್ಲಿ  ಖಿನ್ನಳಾಗಿ ನಿಂತಿರುತ್ತಿದ್ದೆನೇನೋ ಎನಿಸುತ್ತದೆ.

ನಿಜ,  ಮಹಿಳೆ ಓದಬೇಕು, ತನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕು, ಸ್ವಾಭಿಮಾನದಿಂದ ಬದುಕಬೇಕು, ಮದುವೆ ಅವಳದೇ ಆಯ್ಕೆ ಆಗಿರಬೇಕು, ಎಂಬುದು ನನ್ನ ಕಾಲಘಟ್ಟದ ಮಹಿಳೆಯ ಮುಖ್ಯ ಚಿಂತನೆಯಾಗಿತ್ತು. ಮುದುವೆಯನ್ನು ನಿರಾಕರಿಸಿಯೂ  ಬದುಕಬಹುದಾದ ವಾತಾವರಣವೂ ಸಮಾಜದಲ್ಲಿತ್ತು. ಆದರೆ ಮದುವೆಯಾಗಿಯೂ ಮಕ್ಕಳನ್ನು ಹೊಂದದ  ಬಗ್ಗೆ ನನ್ನ ಸ್ನೇಹವಲಯದಲ್ಲಿ ಚರ್ಚೆಯೇ ಆಗಿರಲಿಲ್ಲ. ಆದರೆ ಇಂದಿನ ತಲೆಮಾರು ಹಾಗಿಲ್ಲ. 

ನಿಸರ್ಗಕ್ಕಿರುವ ಸೃಷ್ಟಿ ಸಾಮರ್ಥ್ಯ ಮತ್ತು ಪಾಲನೆಯ ವಿಸ್ಮಯಕ್ಕೆ ಬೆರಗಾಗುತ್ತಾ ನಾನೂ ಅದರಲ್ಲಿ ಭಾಗಿದಾರಳು ಎಂಬ ಅಮಲಿನಲ್ಲಿ ವಿವಾಹ ಬಂಧನದ ಮೊದಲ ದಶಕವನ್ನು ಕಳೆದಿದ್ದೆ. ಆಮೇಲಿನ ಖಾಲಿತನವನ್ನು ಯಾವ್ಯವುದೋ ಸೃಜನಶೀಲ ಚಟುವಟಿಕೆಗಳಲ್ಲಿ ತುಂಬಿಕೊಳ್ಳಲು ಹೆಣಗಾಡುತ್ತಾ ಇದ್ದಾಗಲೇ ಮಗಳು ಹರೆಯಕ್ಕೆ ಕಾಲಿಟ್ಟಾಗಿತ್ತು. ಮದುವೆಯ ಬಗೆಗೆ ಅವಳಿಗಿರಬಹುದಾದ ನಿರೀಕ್ಷೆ, ಕುತೂಹಲಗಳ ಬಗ್ಗೆ ಪ್ರಶ್ನಿಸಿದಾಗ ಸಿಡಿಗುಂಡಿನಂತೆ ಬಂದೆರಗಿದ ಪ್ರಶ್ನೆ. ‘ಮದುವೆಯಿಂದ ನಿನಗೇನು ಸಿಕ್ಕಿತು? ಎರಡು ಮಕ್ಕಳನ್ನು ಹೊತ್ತು, ಹೆತ್ತು ಸಲಹಿದ್ದು ಬಿಟ್ಟರೆ ..? ನಾನು ಉತ್ತರಿಸಲು ತಡಬಡಾಯಿಸುತ್ತಿದ್ದಾಗಲೇ ಅವಳಿಂದ ಮತ್ತೊಂದು ಪ್ರಶ್ನೆ ತೂರಿ ಬಂತು. ‘ನಿನ್ಗೆ ಆಯ್ಂಟಿ ನೆಟಲಿಸಂ [anti natalisum] ಅನ್ನುವ ಹೆಸರು ಕೇಳಿದ್ದಿಯಾ?’ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. ‘ಹಾಗೆಂದರೇನು? ಅಂದೆ. ಅವಳು ಎರಡು ವಾಕ್ಯದಲ್ಲಿ ಅದರ ಬಗ್ಗೆ ಹೇಳಿ david benatar ನ ಪುಸ್ತಕಗಳನ್ನು ಓದು ಅಂದಳು. ಅವಳು ಹಾಗೆಯೇ, ಆಗಾಗ ಅದನ್ನು ಓದು,  ಇದನ್ನು ನೋಡು ಎಂದು ಹಲವಾರು ಸಲಹೆಗಳನ್ನು ಕೊಡುತ್ತಿರುತ್ತಾಳೆ. ನಾನು ಅದರ ಬಗೆಗೆಲ್ಲಾ ದಿವ್ಯ ನಿರ್ಲಕ್ಯ ತಾಳುತ್ತಾ ನೆಟ್ಪ್ಲಿಕ್ಸ್ ನಲ್ಲಿ ಕೊರಿಯನ್ ಡ್ರಾಮಗಳಿಗೆ ಕಣ್ಣು ನೆಟ್ಟು ಕೂತಿರುತ್ತಿದ್ದೆ. ಆದರೆ ಪೇಸ್ಬುಕ್ ನಲ್ಲಿ ‘ಸ್ಟಾಪ್ ಮೇಕಿಂಗ್ ಬೇಬಿಸ್’ ಎಂಬ ಇವೆಂಟ್ ಗೆ ಅಹ್ವಾನ ಬಂದಾಗ ಅಯಂಟೀ ನೆಟಲಿಸಂ ಬಗ್ಗೆ ನಿಜವಾಗಿಯೂ ಕುತೂಹಲ ಹುಟ್ಟಿತು.

ಈಜು ಕಲಿಯಬೇಕೆಂದರೆ ದಡದಲ್ಲಿ ನಿಂತು ನೋಡಿದರಾಗದು ನೀರಿಗಿಳಿಯಲೇಬೀಕು. ಈವೆಂಟ್ ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದೆ. ಈ ಬಗ್ಗೆ ನನ್ನ ಸ್ನೇಹ ವಲಯದಲ್ಲಿ ಪ್ರಸ್ತಾಪಿಸಿದೆ. ಮಹಿಳೆಯರು ಈ ಕಾನ್ಸೆಪ್ಟ್ ಬಗ್ಗೆ ಕುತೂಹಲ ತಾಳಿದರೆ ಪುರುಷರು ‘ಥತ್, ಇದೆಂತಹ ಯೋಚನೆ ಇವರಿಗೆಲ್ಲೋ ತಲೆ ಕೆಟ್ಟಿರಬೇಕು, ಹುಚ್ಚರು.’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಇಂತಹ ಪ್ರತಿಕ್ರಿಯೆ ಸಹಜವಾದುದೇ! ಸ್ವಂತಿಕೆಯುಳ್ಳ ಮಹಿಳೆಗೆ ಗೊತ್ತಿರುತ್ತೆ; ತನ್ನ ಗುಣಾತ್ಮಕವಾದ ಬದುಕಿನ ಮುಕ್ಕಾಲು ಭಾಗ ತಾಯ್ತನ ಮತ್ತು ಕುಟುಂಬದ ಸಂಭಾಳಿಸುವಿಕೆಯಲ್ಲಿಯೇ ಕಳೆದು ಹೋಗಿರುತ್ತದೆ ಅಂತ. ಇದನ್ನು ಧಿಕ್ಕರಿಸಿ  ಬದುಕಿದರೆ ಅವಳಿಗೆ ತಾನು ಯಾರು? ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿತುಕೊಳ್ಳಲು ಸಮಯಾವಕಾಶ ದೊರೆಯುತ್ತದೆ. ಸಂಪೂರ್ಣ ಬದುಕನ್ನು ಅವಳು ಬಾಳಬಹುದು

ಅಯ್ಂಟಿ ನೆಟಲಿಸ್ಟ್ ಎಂದರೆ ಹುಟ್ಟಿನ ಬಗ್ಗೆ  ವಿರೋಧ ಧೋರಣೆ ಹೊಂದಿರುವವರು. ಮಗುವಿಗೆ ಜನ್ಮನೀಡುವುದು ನೈತಿಕವಾಗಿ ತಪ್ಪು. ‘ಸ್ಟಾಪ್ ಮೇಕಿಂಗ್ ಬೇಬಿಸ್,’  ‘ಚೈಲ್ಡ್ ಪ್ರೀ ಇಂಡಿಯಾ’ ಎಂಬ ಹೆಸರಿನಡಿ ಚರ್ಶೆಯಾಗುತ್ತಿರುವ ಹೀಗೊಂದು ವಾದಕ್ಕೆ ಪ್ರಚಾರ ಮತ್ತು ವೇಗ ಸಿಕ್ಕಿದ್ದು ಮೊನ್ನೆ ಮೊನ್ನೆ ಮುಂಬಯಿಯ ರಪೈಲ್ ಸಾಮ್ಯುವೆಲ್ ಎಂಬ ವ್ಯಕ್ತಿ ತನ್ನ ತಂದೆತಾಯಿಯರ ಮೇಲೆ ‘ನನ್ನ ಒಪ್ಪಿಗೆಯಿಲ್ಲದೆ ನನ್ನನ್ನು ಈ ಭೂಮಿಗೆ ಯಾಕೆ ಕರೆತಂದಿರಿ?’ ಎಂದು ಕೋರ್ಟಿನಲ್ಲಿ ದಾವೆ ಹೂಡಿದಾಗಲೇ. ಈಗ ‘ಸ್ಟಾಪ್ ಮೇಕಿಂಗ್ ಬೇಬಿಸ್’ ಎಂಬ ಸಂವಾದವೊಂದು ನಾಳೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದು ಭಾರತದಲ್ಲಿ ನಡೆಯುತ್ತಿರುವ ಮೊತ್ತಮೊದಲ ಸಂಘಟಿತ ವೇದಿಕೆ.

ಮೇಲಿನ ಸಂಘಟನೆ ಮತ್ತು ಸಾಮ್ಯೂವೆಲ್ ನಡೆ ನೋಡಿದರೆ ಈ  ಚರ್ಚೆ ಕೇವಲ ಮಕ್ಕಳನ್ನು ಹುಟ್ಟಿಸಬೇಡಿ ಎಂಬುದಕಷ್ಟೇ ಸೀಮಿತವಾಗಿದೆಯೇ? ಎಂಬ ಸಂಶಯ ಮೂಡುತ್ತದೆ. ಆದರೆ ಡೆವಿಡ್ ಬೆನೆತರ್ ನನ್ನು ಓದಿಕೊಂಡವರಿಗೆ ಗೊತ್ತಿದೆ, ಇದು ಇಷ್ಟೇ ಅಲ್ಲ.

ದೆವಿಡ್ ಬೆನೆತರ್ ದಕ್ಷಿಣ ಅಪ್ಪ್ರಿಕಾ ದ ಒಬ್ಬ ಫಿಲಾಸಪರ್ ಮತ್ತು ಬರಹಗಾರ. ಆತ ಹೇಳುತ್ತಾನೆ. ‘ಹುಟ್ಟು ಎನ್ನುವುದು ನಕಾರಾತ್ಮಕವಾದುದು. ಮುಗುವಿಗೆ ಜನ್ಮ ನೀಡುವುದು ನೈತಿಕವಾಗಿ ತಪ್ಪು. ಹುಟ್ಟಿನಿಂದ ಮನುಷ್ಯ ಒಂದೇ ದೃಷ್ಟಿಯಲ್ಲಿ ಕೊಳೆಯುವ ಸ್ಥಿತಿಯತ್ತ ಜಾರುತ್ತಾ ಹೋಗುತ್ತಾನೆ. ಈ ಮಧ್ಯದಲ್ಲಿ ಆತ\ಅವಳು ಅನೇಕ ತರಹದ ದೈಹಿಕ ನೋವು, ಡಿಪ್ರೆಶನ್, ಅನ್ಯರ ಧೂಶಣೆ, ಗಾಸಿಪ್, ಮೋಸ, ವಂಚನೆಗಳ ಕಾರಣದಿಂದಾಗಿ ಮಾನಸಿಕ ಹಿಂಸೆಗಳಿಗೆ ತುತ್ತಾಗುತ್ತಾನೆ. ಇದರಿಂದ ಪಾರಾಗುವುದಕ್ಕೆ ಆತ ಜೀವನದುದ್ದಕ್ಕೂ ಹೆಣ್ಗಾಡಬೇಕಾಗುತ್ತದೆ,  ಸಂಗೀತ, ಸಾಹಿತ್ಯ ನೃತ್ಯ ಮುಂತಾದ ಸೃಜನಶೀಲ ಚಟುವಟಿಕೆಗಳ ಮೊರೆ ಹೋಗುತ್ತಾನೆ. ರಿಲಿಜಿಯನ್ ,ವಿಜ್ನಾನ, ದೇವರು ಮುಂತಾದಗಳನ್ನು ರಕ್ಷಣಾತ್ಮಕವಾಗಿ ಬಳಸಿಕೊಳ್ಳುತ್ತಾನೆ. ಆದರೆ ಇವೆಲ್ಲಾ ನೋವಿಗೆ ಹಚ್ಚುವ ಮುಲಾಮ್ ಗಳಷ್ಟೇ. ಇವು ಆಳದ ನೋವನ್ನು ಶಮನಗೊಳಿಸಲಾರದು. 

.ಇಂತಹ ಸಂಕಷ್ಟಗಳಿಗೆ ಮಕ್ಕಳನ್ನು ದೂಡಬೇಕೇ? ಎಂದು ಬೆನೆತರ್ ಪ್ರಶ್ನಿಸುತ್ತಾನೆ. ಹಾಗಾಗಿ ಹುಟ್ಟದೇ ಇದ್ದರೆ ನೋವೇ ಇರೋದಿಲ್ಲ, ಹುಟ್ಟು ಎನ್ನುವುದೇ ಅತ್ಯಂತ ಯಾತನಾಮಯವಾದುದು,. ಎಂಬುದು ಬೆನೆತರ್ ನ ವಾದ. ಸೋಜಿಗದ ವಿಷಯವೆಂದರೆ ಅಯಂಟಿ ನ್ಯಾಟಲಿಸಂಗೆ ಒಂದು ತಾತ್ವಿಕ ತಲಹದಿಯನ್ನು ತಂದು ಕೊಟ್ಟ ಈ ಬೆನೆತರ್ ತನ್ನ ಖಾಸಗಿತನವನ್ನು ಬಲು ಜತನದಿಂದ ಕಾಪಾಡಿಕೊಂಡಿದ್ದಾನೆ. ಆತನ ಕೌಟುಂಬಿಕ ಬದುಕಿನ ಬಗ್ಗೆ ಹೊರಪ್ರಪಂಚಕ್ಕೆ ಏನೇನೂ ಗೊತ್ತಿಲ್ಲ. ಆತನ  ಒಂದು ಭಾವಚಿತ್ರವೂ ಪ್ರಪಂಚಕ್ಕೆ ಬಿಡುಗಡೆಯಾಗಿಲ್ಲ.  ಅತನ ಸಂದರ್ಶ ಮಾಡಿದ್ದು ಬಹುಶಃ ಒಂದೇ ಒಂದು ಪತ್ರಿಕೆ, ಅದು the new Yorker. ಅದರಲ್ಲಿ ಅವರನ್ನು ಪ್ರಪಚಂದ ಅತಿ ದೊಡ್ಡ ನಿರಾಶವಾದಿ ತತ್ವಜ್ನಾನಿ ಎಂದು ಕರೆದಿದೆ

 ಪ್ರಸಿದ್ಧ ತತ್ವಜ್ನಾನಿ ಇಮ್ಯಾನುವಲ್ ಕ್ಯಾಂಟ್ ಕೂಡಾ  ‘ಮಗುವನ್ನು ಮಗುವಿಗಾಗಿಯೇ, ಮಗುವಿಗೋಸ್ಕರವಾಗಿಯೇ ಹುಟ್ಟಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾನೆ. 
ಮಗುವನ್ನು ಹುಟ್ಟಿಸುವುದೇ ಬೇಡ ಎನ್ನುವ ಮೇಲಿನ ವಾದದ ಸಮರ್ಥನೆಗೆ ಅವರು ಕೊಡುವ ಕಾರಣ್ಗಳು ತೆಳುವಾಗಿದೆ ಎಂದು ಲೌಕಿಕದಮೋಹಿತರಿಗೆ ಅನ್ನಿಸಬಹುದು. ಆದರೆ ಪರಿಸರವಾದಿಗಳು, ಸ್ತೀವಾದಿಗಳು, ಮನುಷ್ಯ ಕ್ರಮೇಣ ಭೂಮಿಯಿಂದ ಕಣ್ಮರೆಯಾಗಬೇಕು [ voluntary Human Extinction movement] ಎಂದು ವಾದಿಸುವ ಪ್ರಾಣಿಪ್ರಿಯರು, ಒಟ್ಟಿನಲ್ಲಿ ಈ ಭೂಮಂಡಲವನ್ನು ನಮ್ಮ ಮುಂದಿನ ಪೀಳಿಗೆಗಾಗಿ ಸುರಕ್ಷಿತವಾಗಿ, ವಾಸಯೋಗ್ಯವಾಗಿ ಸುಸ್ಥಿತಿಯಲ್ಲಿ ಇಡಬೇಕೆಂದು ವಾದಿಸುವವರೆಲ್ಲಾ ಬೆನೆತರ್ ನ ತತ್ವವನ್ನು ಭಾಗಶಃ ಒಪ್ಪಿಕೊಳ್ಳುತ್ತಿದ್ದಾರೆ.

ನಮ್ಮ ಸುತ್ತಮುತ್ತ ಇರುವ ಮಕ್ಕಳಿಗೆ ಬಾಲ್ಯದ ಮುದವಿಲ್ಲ. ಮುಗ್ದತೆಯಿಲ್ಲ. ನಮ್ಮ ಯುವಜನತೆ ಯಾರದೋ  ಆಸೆ ಅಕಾಂಕ್ಷೆಗಳಿಗಾಗಿ ತಮ್ಮ ಯೌವನವನ್ನು ಬಲಿಗೊಡುತ್ತಿದ್ದಾರೆ, ಪ್ರೌಢರು ಮಕ್ಕಳು ಮರಿಗಳಿಗಾಗಿ ತಮ್ಮ ಅರೋಗ್ಯವನ್ನು ಲೆಕ್ಕಿಸದೆ ದುಡಿಯುತ್ತಿದ್ದಾರೆ. ಇವರೆಲ್ಲರ ದುಡಿಮೆಯಲ್ಲಿ ಕೆಲವೇ ಮಂದಿ ಶ್ರೀಮಂತರು ಐಷಾರಾಮ್ಯದ ಬದುಕನ್ನು ಬದುಕುತ್ತಿದ್ದಾರೆ. ವೃದ್ಧರು ಅನಾಥಪ್ರಜ್ನೆಯಲ್ಲಿ, ನೋವಿನಲ್ಲಿ ದಿನದೂಡುತ್ತಾರೆ. ಮಗುವೊಂದರ ಸ್ಥಿತ್ಯಂತರಗಳು ಇವು. ಈ ಭೂಮಿಯ ಮೇಲೆ ನಮಗಿಂತಲೂ ಮೊದಲು ಹುಟ್ಟಿದ ಈ ನೆಲದ ಸಹಜ ಸಂತಾನವಾದ ಪ್ರಾಣಿಗಳನ್ನು ಹಿಂಸಾಪ್ರಿಯ, ಸ್ವಾರ್ಥಿ ಮಾನವ ತನಗೆ ಬೇಕಾದಂತೆ  ಬಳಸಿಕೊಳ್ಳುತ್ತಿದ್ದಾನೆ. ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾನೆ. ಹಾಲಿಗಾಗಿ, ಮಾಂಸಕ್ಕಾಗಿ ಔಷಧಿಯ ಪ್ರಯೋಗಗಳಿಗಾಗಿ ಅವುಗಳಿಗೆ ಹಾರ್ಮೋನ್ ಇಂಜಕ್ಷನ್ ಚುಚ್ಚಿ ನರಳಿಸುತ್ತಾನೆ. ಚಿತ್ರಹಿಂಸೆ ನೀಡುತ್ತಾನೆ.ಇಂತಹ ನೋವು ತುಂಬಿದ ಜಗತ್ತಿಗೆ ನಮ್ಮ ಮಕ್ಕಳನ್ನು ದೂಡಲು ನಮಗೇನು ಹಕ್ಕಿದೆ?  ಆವು ‘ನಾನು ಹುಟ್ಟಬೇಕು’ ಎಂದು ನಮ್ಮನ್ನೇನೂ ಕೇಳಿಲ್ಲವಲ್ಲಾ! ನಮ್ಮ ಖುಷಿಗಾಗಿ, ನಮ್ಮ ನೆಮ್ಮದಿಯ ನಾಳೆಗಳಿಗಾಗಿ ಮಕ್ಕಳನ್ನು ಹುಟ್ಟಿಸಿಕೊಂಡಿದ್ದೇವೆ. ಕೆಲವೊಮ್ಮೆ ಅದು ಆಕಸ್ಮಿಕವೂ ಆಗಿರಬಹುದು. ಪಿತೃ ಪ್ರಧಾನವಾದ ನಮ್ಮ ದೇಶದಲ್ಲಿ ಮಕ್ಕಳ ಹುಟ್ಟಿಸುವಿಕೆಗೆ ಘನವಾದ ಉದ್ದೇಶವಿದೆ. ಇಲ್ಲಿ ಮಹಿಳೆ ಕೇವಲ ಸಂಸ್ಕೃತಿ ವಾಹಕಳಷ್ಟೇ!  ಅಂದರೆ ಮಗು ಬೇಡವೆಂದು ಯಾವುದಾದರು ದಂಪತಿ ತೀರ್ಮಾನಿಸಿದರೆ ಆ ತೀರ್ಮಾನ ಈಗಿನ ಪರಿಸ್ಥಿತಿಯಲ್ಲಿ  ಸಮಂಜಸವಾದುದೇ. ಅವರು ವೈಯಕ್ತಿಕವಾಗಿ ತಮ್ಮ ಕ್ಷೇತ್ರದಲ್ಲಿ ಬಹಳಷ್ಟನ್ನು ಸಾಧಿಸಬಹುದು, ತನಗೆ ಬದುಕಲು ಎಷ್ಟು ಬೇಕೋ ಅಷ್ಟು ಮಾತ್ರ ದುಡಿಯಬಹು. ದೇಶವಿದೇಶಗಳನ್ನು ಸುತ್ತಬಹುದು. ಸಂಸಾರಕ್ಕಾಗಿ, ತನ್ನ ಮುಂದಿನ ಪೀಳಿಗೆಗಾಗಿ ದುಡಿದು ದುಡ್ಡು ಉಳಿಸಬೇಕು,ಆಸ್ತಿಪಾಸ್ತಿ ಮಾಡಿಡಬೇಕು ಎಂಬ ಯಾವ ಜಂಜಾಟವೂ ಇರೋದಿಲ್ಲ. ಪ್ರಾಂಜಲ ಮನಸ್ಸಿನಿಂದ ಸಮಾಜ ಸೇವೆ ಮಾಡ್ಬಹುದು. ಸಂಪತ್ತು ಜಾಸ್ತಿಯಾಗಿದ್ದರೆ ನಿರ್ಭಾಗ್ಯರಿಗೆ ಹಂಚಬಹುದು. ಸತ್ತ ಮೇಲೆ ಈ ಭೂಮಿಯ ಮೇಲೆ ಯಾವ ಕಾರ್ಬನ್ ಪ್ರಿಂಟ್ ಉಳಿಯದು.ಅಭಿವೃದ್ಧಿಯ ಹೆಸರಲ್ಲಿ ಜನವಸತಿಗಾಗಿ ಕಾಡು ಒತ್ತುವರಿಯಾಗುತ್ತಿವೆ ಜಲಮೂಲಗಳು ಬತ್ತುತ್ತಿವೆ. ಕಾಡುಪ್ರಾಣಿಗಳು ನೀರು ನೆಲೆಯಿಲ್ಲದೆ ನರಳುತ್ತವೆ. ಪ್ರತಿವರ್ಷವೂ ನೂರಾರು ಪಕ್ಷಿ, ಪ್ರಾಣಿಪ್ರಭೇಧಗಳು ಈ ಭೂಮಿಯಿಂದ ಕಣ್ಮರೆಯಾಗುತ್ತಿವೆ.
ಭೂಮಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಎಂದೂ ವರ್ಧಿಸಲಾರದು. ಅದಕ್ಕೆ ಮಿತಿಯಿದೆ. ಅದೊಂದು ದಿನ ಖಾಲಿಯಾಗಬಹುದು. ಆದರೆ ಜನಸಂಖ್ಯೆ ವರ್ಧಿಸುತ್ತಲೇ ಇದೆ. ಅದಕ್ಕೆ ಕಡಿವಾಣ ಹಾಕಲೇಬೇಕು

ನಾಳೆ ನಡೆಯಲಿರುವ ಸಂವಾದ ಇಷ್ಟೆಲ್ಲಾ ವಿಶಾಲರ್ಥದಲ್ಲಿ ಯೋಚಿಸಿದೆಯಾ? ಗೊತ್ತಿಲ್ಲ.
ನನ್ನ ತಲೆಮಾರಿನ ಚಿಂತಕರೊಬ್ಬರ ತಲೆಯಲ್ಲಿ ಮೂಡಿದ ವಿಚಾರವನ್ನು ನನ್ನ ಮಕ್ಕಳ ತಲೆಮಾರಿನ ಒಂದಷ್ಟು ಜನ ಸೇರಿಕೊಂಡುಕೊಂಡು ಸಂವಾದಕ್ಕೆ ಒಡ್ಡುತ್ತಿದ್ದಾರೆ. ಮುಂದೊಂದು ದಿನ ಅದು ಆಂದೋಲನದ ರೂಪವನ್ನು ಪಡೆಯಲೂಬಹುದು.*ಉಷಾಕಟ್ಟೆಮನೆ.

Monday, January 14, 2019

ಭಕ್ತಿ ಪರಾಕಾಷ್ಠೆಯ ಮಾಹಾಮೇರು,ಕುಂಭಮೇಳ


  

 

 ಭಾರತಿಯರ ಬದುಕಿನೊಳಗಿನ ಮಂದಾಕಿನಿಯರು.

ನದಿಗಳ ಮೋಹಕ್ಕೆ ಬಿದ್ದವಳು ನಾನು. ಅದಕ್ಕೆ ಕಾರಣವಿದೆ. ನಾನು ಹುಟ್ಟಿದ್ದು ಬೆಳೆದದ್ದು,ಕೊನೆಗೆ ಬಯಸಿ ಬಯಸಿ ಪುಟ್ಟದೊಂದು ಕುಟೀರವನ್ನು ಕಟ್ಟಿಕೊಂಡದ್ದು ಕೂಡ ನದಿ ದಂಡೆಯ ಮೇಲೆಯೇ ನದಿದಂಡೆಯೊಂದರ ಮೇಲಿರುವ ಬೃಹತ್ ಮರವೊಂದರ ಮೇಲೆ ಕಲಾತ್ಮಕವಾಗಿ ಕಟ್ಟಿರುವ ಟ್ರಿ ಹಟ್ ಒಂದರ ಪುಟ್ಟ ಕೋಣೆಯೊಂದರಲ್ಲಿ ನನ್ನ ಕನಸುಗಳೆಲ್ಲ ಜೋಕಾಲಿಯಾಡುತ್ತಿರುತ್ತವೆ.
ನಾ ಅಲೆಮಾರಿ ಥೇಟ್ ನದಿಯಂತೆ.

ದೇವರನ್ನು ನಾವಿರುವಲ್ಲಿಗೇ ಕರೆಸಿಕೊಳ್ಳಬಹುದು. ಮನಸ್ಸಿಗೆ ಆಶಕ್ತಿಯಿದೆ. ಆದರೆ ನದಿಯನ್ನು ಹಾಗೆ ಕರೆಸಲಾಗದು. ಅದು ಇರುವಲ್ಲಿಗೇ ನಾವು ಹೋಗಬೇಕು. ಅದಕ್ಕೇ ಪುಣ್ಯಸ್ನಾನ ಎಂಬ ಪರಿಕಲ್ಪನೆಯ ಬಗ್ಗೆ ನನಗೆ ಭಕ್ತಿ. ಆದರಗಳಿವೆ. ಭಾರತದ ಉದ್ದಗಲಕ್ಕೂ ಹರಿಯುವ ಹಲವಾರು ನದಿಗಳನ್ನು ಹುಡುಕಿಕೊಂಡು ಹೋಗಿದ್ದೇನೆ. ಹಿಮಾಲಯದಲ್ಲಿ ಹುಟ್ಟುವ ಬಹುತೇಕ ನದಿಗಳು ಪುಣ್ಯನದಿಗಳೆಂದು ಭಕ್ತರು ಭಾವಿಸುತ್ತಾರೆ. ಅದರಲ್ಲಿ ಮಿಂದು ಪುನೀತರಾಗುತ್ತಾರೆ. ನಾನು ಕೂಡಾ ಕೆಲವು ನದಿಗಳಲ್ಲಿ ಸ್ನಾನ ಮಾಡಿದ್ದೇನೆ. ಕೆಲವು ನದಿಗಳ ದಡಲ್ಲಿ ಒಂದರೆಗಳಿಗೆಯಾದರೂ ಕಣ್ಮುಚ್ಚಿ ಕುಳಿತಿದ್ದೇನೆ. ಅವುಗಳ ಮಡಿಲಲ್ಲಿ ದಿವ್ಯಶಾಂತಿಯನ್ನು ಅನುಭವಿಸಿದ್ದೇನೆ.

ನಾಗರೀಕತೆಗಳು ಅರಳಿದ್ದು ನದಿದಂಡೆಗಳ ಮೇಲೆಯೇ. ಅದಕ್ಕೇ ಅವುಗಳನ್ನು ಜೀವನದಿಗಳು ಎಂದು ಕರೆಯುತ್ತಾರೆ.ನದಿಯ ಜಾಡು ಹಿಡಿದು ಸುಮ್ಮನೆ ನಡೆಯುತ್ತಾ ಹೋದರೆ ಮನುಷ್ಯನ ಭೂತ, ವರ್ತಮಾನ, ಭವಿಷ್ಯತ್ ಗಳು ಮನಃಪಟಲದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ
ಇಂತಹ ಶಾಂತ ನದಿಗಳ ದಡದಲ್ಲಿ ನಡೆಯುವ ಗದ್ದಲದ ಜನನಿಭಿಡ ಜಾತ್ರೆಗಳನ್ನೂ ದೂರದಿಂದಲೇ ಗಮನಿಸಿದ್ದೇನೆ. ಅವುಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಅಂತಹ ಜನಜಾತ್ರೆಯ ಮುಕುಟಮಣಿಯಾದ ಕುಂಭಮೇಳದ ಬಗ್ಗೆ ನಾನೀಗ ಹೇಳ ಹೊರಟಿದ್ದೇನೆ.

ಕುಂಭಮೇಳ, ಹಾಗೆಂದರೇನು? ಮಡಕೆಗಳ ಮೇಳವೇ? ಗಂಗೆಯಿಂದ ಕಾವೇರಿತನಕ ಹಿಮಾಲಯದಿಂದ ಸಹ್ಯಾದ್ರಿಯತನಕ ಉತ್ತರದಕ್ಷೀಣ ಪೂರ್ವಪಶ್ಚಿಮಗಳನ್ನು ಅಷ್ಟೇಕೆ ಇಡೀ ಜಗತ್ತನ್ನು ತನ್ನತ್ತ ಸೆಳೆದುಕೊಳ್ಳುವ ಈ ಮಹಾಜಾತ್ರೆಗೆ ಅದ್ಯಾವ ಶಕ್ತಿಯಿದೆ? ಅದಕ್ಕಾಗಿ ನಾವು ಪುರಾಣದತ್ತ ದೃಷ್ಟಿ ಹೊರಳಿಸಬೇಕು.

ಹಿಂದೆ ಕೃತಯುಗದಲ್ಲಿ ದೇವದಾನವರು ಒಟ್ಟಾಗಿ ಸೇರಿ ಸಮುದ್ರಮಂಥನ ಮಾಡುತ್ತಾರೆ. ಆಗ ಸಮುದ್ರ ಮಧ್ಯೆಯಿಂದ ಲಕ್ಷ್ಮಿ ಉದ್ಭವಿಸುತ್ತಾಳೆ. ಅವಳ ಕೈಯ್ಯಲ್ಲಿ ಅಮೃತಕಲಶವಿರುತ್ತದೆ. ಆ ಅಮೃತವನ್ನು ಕುಡಿದವರು ಚಿರಂಜೀವಿಗಳಾಗುತ್ತಾರೆ ಎಂಬುದು ದೇವ ದಾನವರ ನಂಬಿಕೆ. ದಾನವರನ್ನು ಅಮೃತದಿಂದ ವಂಚಿಸುವ ಉದ್ದೇಶದಿಂದ ಶ್ರೀಮನ್ನಾರಾಯಣನು ಮೋಹಿನಿಯ ರೂಪವನ್ನು ತಾಳಿ ಅದನ್ನು ದೇವತೆಗಳಿಗೆ ಮಾತ್ರ ಹಂಚುತ್ತಾಳೆ. ಆಗ ದೇವತೆಗಳ ಈ ದುರ್ಭುದ್ಧಿಯನ್ನು ಅರಿತ ರಾಹು ಎಂಬ ದಾನವ ದೇವತೆಗಳ ಸರತಿಯಲ್ಲಿ ಕುಳಿತು ಅಮೃತಕ್ಕಾಗಿ ಕೈಯ್ಯೊಡ್ಡುತ್ತಾನೆ. ಇದನ್ನರಿತ ನಾರಾಯಣ ಅಮೃತಕಲಶವನ್ನು ದೇವೇಂದ್ರನ ಮಗನಾದ ಜಯಂತನ ಕೈಯ್ಯಲ್ಲಿಟ್ಟು ರಾಹುವಿನ ತಲೆಯನ್ನು ಕತ್ತರಿಸುತ್ತಾನೆ. ಕತ್ತರಿಸಲ್ಪಟ್ಟ ರಾಹುವಿನ ಮುಂಡವೇ ಕೇತು ಎಂಬ ಇನ್ನೊಬ್ಬ ದಾನವನಾಗುತ್ತಾನೆ.
ಇತ್ತ ಜಯಂತ ಅಮೃತ ತುಂಬಿದ ಕಲಶವನ್ನು ತೆಗೆದುಕೊಂಡು ಆಕಾಶಮಾರ್ಗವಾಗಿ ಸ್ವರ್ಗದತ್ತ ಪಯಣಿಸುತ್ತಾನೆ. ಹಾಗೆ ಹೋಗುವಾಗ ದಾರಿಮಧ್ಯೆ ಆತ ವಿಶ್ರಾಂತಿಗೆಂದು ನಾಲ್ಕು ಜಾಗಗಳಲ್ಲಿ ತಂಗುತ್ತಾನೆ. ಆ ಜಾಗಗಳೇ, ಮಹಾರಾಷ್ಟ್ರದ ಗೋದಾವರಿ ನದಿ ದಂಡೆಯ ಮೇಲಿರುವ ನಾಸಿಕ್. ಮಧ್ಯಪ್ರದೇಶದ ಕ್ಷಿಪ್ರಾ ನದಿ ದಂಡೆಯ ಮೇಲಿರುವ ಉಜ್ವೈನಿ. ಉತ್ತರಪ್ರದೇಶದಲ್ಲಿರುವ ಗಂಗಾ, ಯಮುನಾ, ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ದಂಡೆಯ ಮೇಲಿರುವ  ಪ್ರಯಾಗ ಮತ್ತು ಉತ್ತರಾಖಂಡದ ಗಂಗಾ ನದಿ ದಂಡೆಯ ಮೇಲಿರುವ ಹರಿಧ್ವಾರ,

ಇದನ್ನು ಬರೆಯುತ್ತಿರುವಾಗಲೇ ಹೊಳೆದಿದ್ದು; ಹರಿದ್ವಾರವನ್ನು ದೇವಭೂಮಿಗೆ ಪ್ರವೇಶಿಸುವ ಹೆಬ್ಬಾಗಿಲು ಎಂದು ಆಸ್ತಿಕರು ಕರೆಯುತ್ತಾರೆ.. ನಮ್ಮ ಸ್ವರ್ಗದ ಕಲ್ಪನೆಯಿರುವುದು ಹಿಮಾಲಯದಲ್ಲಿ. ಹಿಮಾಲಯದ ಅಂಚಿನಲ್ಲಿರುವುದು ನಮ್ಮ ಉತ್ತರಾಖಂಡ ರಾಜ್ಯ. ಭಾರತೀಯರ ಪರಮಪುಣ್ಯಕ್ಷೇತ್ರ ಗಳಾದ ಚಾರ್ ಧಾಮವಿರುವುದು, ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ ಇರುವುದು ಇದೇ ಉತ್ತರಾಖಂಡ ರಾಜ್ಯದಲ್ಲಿ. ಈ ರಾಜ್ಯವನ್ನು ದೇವಭೂಮಿ ಎಂದು ಕರೆಯುತ್ತಾರೆ.  ಉತ್ತರಾಖಂಡದಲ್ಲಿ ಎಲ್ಲೇ ಸಂಚರಿಸಲಿ, ಅಲ್ಲಿ ನಿಮಗೆ’ ದೇವಭೂಮಿಗೆ ಸ್ವಾಗತ’ ಎಂಬ ಫಲಕ ಕಾಣಸಿಗುತ್ತದೆ. ಹರಿದ್ವಾರದಿಂದ ಈ ಪುಣ್ಯಕ್ಷೇತ್ರಗಳಿಗೆ ಹೋಗುವುದು ಅತ್ಯಂತ ಕಠಿಣವಾದ ಏರು ಹಾದಿಯಲ್ಲಿ. ಅಂದರೆ ನಮ್ಮ ಪಶ್ಚಿಮ ಕರಾವಳಿಯ ಹಿಂದೂಮಹಾಸಾಗರದಲ್ಲೆಲ್ಲೋ ಸಮುದ್ರ ಮಂಥನ ನಡೆದು ಅಲ್ಲಿಂದ ಅಮೃತವನ್ನು ಸ್ವರ್ಗಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಪುರಾಣವನ್ನು ಹಣೆದಿರಬಹುದೇ?! ಗೊತ್ತಿಲ್ಲ. ಆದರೆ ಹಾಗೆ ತರ್ಕಿಸಲು ಅವಕಾಶಗಳಿವೆ.
ಸಾಮನ್ಯರ ತಿಳುವಳಿಕೆಯ ಪ್ರಕಾರ ಕುಂಭಮೇಳವೆಂಬುದು ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಜನಜಾತ್ರೆ. ಆದ್ರೆ ಇದು ಪೂರ್ಣ ಸತ್ಯವಲ್ಲ. ಪ್ರತಿವರ್ಷವೂ  ಜನವರಿ ತಿಂಗಳಿನಲ್ಲಿ ಮಾಘಮಾಸದಲ್ಲಿ ಮಾಘ ಮೇಳ ನಡೆಯುತ್ತದೆ. ಇದೂ ಕುಂಭಮೇಳವೇ. ಹಾಗೆಯೇ ಮೂರು ವರ್ಷಗಳಿಗೊಮ್ಮೆ ವಿಶೇಷ ಕುಂಭಮೇಳವೂ ಜರಗುತ್ತದೆ. ಆರುವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಅರ್ಧ ಕುಂಭಮೇಳ ಎಂದು ಕರೆಯುತ್ತಾರೆ. ಇದು ಹರಿದ್ವಾರ ಮತ್ತು ಪ್ರಯಾಗಗಳಲ್ಲಿ ಮಾತ್ರ ಜರಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಪ್ರಯಾಗದಲ್ಲಿ ಅರ್ಧ ಕುಂಭಮೇಳ ನಡೆಯುತ್ತದೆ,

ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪೂರ್ಣಕುಂಬ ಮೇಳ  ನಾಸಿಕ್,ಉಜ್ಜೈನಿ, ಪ್ರಯಾಗ ಮತ್ತು ಹರಿಧ್ವಾರಗಳಲ್ಲಿ ನಡೆಯುತ್ತದೆ. ಇದಲ್ಲದೆ ಹನ್ನೆರಡು ಕುಂಭಮೇಳಗಳ ನಂತರ ಅಂದರೆ ೧೪೪ ವರ್ಷಗಳಗಳ ನಂತರ ಮಹಾಕುಂಭಮೇಳ ಜರಗುತ್ತದೆ. ಇದು ನಡೆಯುವುದು ಪ್ರಯಾಗದಲ್ಲಿ. ತ್ರಿವೇಣಿ ಸಂಗಮದಲ್ಲಿ. ಇಲ್ಲಿ ೨೦೧೩ರಲ್ಲಿ ಮಹಾಕುಂಭಮೇಳ ನಡೆದಿತ್ತು. ಇದನ್ನು ನೋಡಿದವರು ಭಾಗವಹಿಸಿದವರು ಮಹಾಪುಣ್ಯವಂತರು. ಯಾಕೆಂದರೆ ಇನ್ನೊಂದು ಇಂತಹದೇ ಮಹಾಕುಂಭಮೇಳ ಬರುವುದು ೨೧೫೭ನೇ ಇಸವಿಯ ತನಕ ಕಾಯಬೇಕಾಗುತ್ತದೆ. ಆಗ ಎರಡು ತಲೆಮಾರು ಉರುಳಿರುತ್ತದೆ. ಅಂದರೆ ನನ್ನ ಮೊಮ್ಮಗಳೂ ಇದನ್ನು ನೋಡಲಾರಳು. ಮರಿಮಗಳು ನೋಡಲೂಬಹುದು!

ತ್ರಿವೇಣಿ ಸಂಗಮ.
ನಾಸಿಕ್, ಉಜೈನಿ, ಹರಿಧ್ವಾರಗಳಲ್ಲಿ ನಡೆದರೂ ಕುಂಭಮೇಳಕ್ಕೆ ಸಂವಾಧಿಪದವಾಗಿ ಪ್ರಯಾಗವೇ ಯಾಕಿದೆ? ಯಾಕೆಂದರೆ ಇಲ್ಲಿ ಸಮಸ್ತ ಭಾರತೀಯರು ಪವಿತ್ರ ನದಿಗಳೆಂದು ಪೂಜಿಸುತ್ತಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಿಸುತ್ತಿರುವ ಪುಣ್ಯ ಕ್ಷೇತ್ರವಿದು

ಪ್ರಯಾಗ ಎಂಬುದರ ಶಬ್ದಶಃ ಅರ್ಥವನ್ನು ನೋಡಿದರೆ ಸಂಗಮ ಎಂದಾಗುತ್ತದೆ. ಭಾರತದಲ್ಲಿ ಪವಿತ್ರವಾದ  ಐದು ಸಂಗಮಕ್ಷೇತ್ರಗಳಿವೆ. ಅವೇ ದೇವಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ. ನಂದ ಪ್ರಯಾಗ ಮತ್ತು ವಿಷ್ಣುಪ್ರಯಾಗ. ಇವೆಲ್ಲವೂ ವಿಷ್ಣುಪ್ರಯಾಗದಲ್ಲಿ ಬದರಿಯಿಂದ ಬರುವ ಅಲಕಾನಂದ ಮತ್ತು ದವಳಗಿರಿಯಿಂದ ಹರಿದು ಬರುವ ದವಳಿಗಂಗಾದ ಸಮಾಗಮವಾಗುತ್ತದೆ. ಅದರಿಂದ ಹತ್ತಾರು ಕಿ.ಮೀಗಳ ಕೆಳಗೆ ಕರ್ಣಪ್ರಯಾಗದಲ್ಲಿ ಪಿಂಡಾರಿ ಹಿಮಪರ್ವತದಿಂದ ಬರುವ ಪಿಂಡಾರಿ ನದಿಯೊಡನೆ ಅಲಕಾನಂದೆಯ ಸಂಗಮವಾಗುತ್ತದೆ. ಅದರಿಂದ ಇನ್ನೂ ಕೆಳಗೆ ಬಂದಾಗ ರುದ್ರಪ್ರಯಾಗ ಸಿಗುತ್ತದೆ. ಇಲ್ಲಿ ಅಲಕಾನಂದ ಮತ್ತು ಭಾಗೀರಥಿ ನದಿಯ ಸಂಗಮವಾಗುತ್ತದೆ. ಮುಂದೆ ಸಿಗುವುದೇ ದೇವಪ್ರಯಾಗ ಇಲ್ಲಿ ಮಂದಾಕಿನಿ ಮತ್ತು ಅಲಕಾನಂದೆಯ ಸಂಗಮವಾಗುತ್ತದೆ. ಇಲ್ಲಿಗೆ ಬರುವಾಗಲೇ ಮಂದಾಕಿನಿ ನಂದಪ್ರಯಾಗದಲ್ಲಿ ನಂದಾಕಿನಿ ನದಿಯನ್ನು ತನ್ನೊಳಗೆ ಐಕ್ಯ ಮಾಡಿಕೊಂಡಿರುತ್ತಾಳೆ. ತನ್ನೊಡಲಲ್ಲಿ ಹಲವಾರು ಹಿಮನದಿಗಳನ್ನು ತನ್ನೊಳಗೆ ಐಕ್ಯಮಾಡಿಕೊಂಡು ಗಂಭೀರವಾಗಿ ಹರಿದು ಬಂದ ಅಲಕಾನಂದ ದೇವಪ್ರಯಾಗದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮುಂದೆ ಗಂಗಾ ಮಾತೆಯೆಂಬ ನಾಮಧೇಯವನ್ನು ಪಡೆದುಕೊಂಡು ಬಯಲುಸೀಮೆಯನ್ನು ಹಸನುಗೊಳಿಸಲು ಹಳ್ಳ ಕೊರಕಲುಗಳಲ್ಲಿ ಸಾಗುತ್ತಾ ಹರಿಧ್ವಾರದತ್ತ ಇಳಿದುಬರುತ್ತಾಳೆ. ಅಂದರೆ ಅಲಕಾನಂದೆಯೇ ಗಂಗಾನದಿಯೇ? 

ಉತ್ತರಪ್ರದೇಶದ ಪ್ರಯಾಗದಲ್ಲಿ ಗಂಗಾ, ಯಮುನಾ ನದಿಗಳ ಸಂಗಮ ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಯಮುನಾ ನದಿಯ ನೀರು ಕಪ್ಪು ಛಾಯಿಂದ ಕೂಡಿರುತ್ತದೆ. ಕೃಷ್ನ ಜಲಕ್ರೀಡೆಯಾಡಿದ್ದ, ಕಾಳಿಂಗಮರ್ಧನ ಮಾಡಿದ ನದಿಯ ಬಣ್ಣ ನಿಮಗೆ ನೆನಪಾಗಬಹುದು ಗಂಗೆಯದ್ದು ಬೂದಿ ಮಿಶ್ರಿತ ಹಸುರು ಬಣ್ಣ. ಆದರೆ ಭೌತಿಕವಾಗಿ ನಮಗೆ ಸರಸ್ವತಿ ನದಿ ಗೋಚರವಾಗುವುದಿಲ್ಲ. ಅದು ಗುಪ್ತಗಾಮಿನಿಯೆಂದು ಆಸ್ತಿಕರು ನಂಬುತ್ತಾರೆ. ಗಂಗಾನದಿ ಉಗಮಸ್ಥಳವಾದ ಗಂಗೋತ್ರಿಗೆ ಯಾರು ಬೇಕಾದರೂ ಹೋಗಿ ಆಕೆಯ ದರ್ಶನ ಪಡೆಯಬಹುದು. ಹಾಗೆಯೇ ಯಮುನಾನದಿಯ ಉಗಮಸ್ಥಳವಾದ ಯಮುನೋತ್ರಿಗೂ ಹೋಗಬಹುದು. ಆದರೆ ಸರಸ್ವತಿಯ ಉಗಮ ಸ್ಥಾನವನ್ನು ಎಲ್ಲಿ ಹುಡುಕುವುದು? ಋಗ್ವೇದದಲ್ಲಿ ಉಲ್ಲೇಖಿತವಾದ ಈ ನದಿ ರಾಜಸ್ಥಾನದ ಮರುಭೂಮಿಯಲ್ಲಿ ಎಲ್ಲಿಯೋ ಒಂದು ಕಡೆ ಮಾಯವಾಗಿದೆ ಅಥವಾ ಭತ್ತಿಹೋಗಿದ್ದಾಳೆ ಅಂತ ಭೂವಿಜ್ನಾನಿಗಳು, ಸಂಶೋಧಕರು ಅಭಿಪ್ರಾಯ ಪಡುತ್ತಿದ್ದಾರೆ. ಈಗಿನ  ಗಗ್ಗರ್ ನದಿಯೇ ಆಗಿನ ಸರಸ್ವತಿ ನದಿ ಎಂದು ವಾದಿಸುವವರೂ ಇದ್ದಾರೆ. ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆ ಯಾವಾಗಲೂ ಒಂದು ಕುತೂಹಲ, ಜಿಜ್ನಾಸೆ ಭಾರತಿಯರಲ್ಲಿ ಸದಾ ಜಾರಿಯಲ್ಲಿದೆ.

ವರ್ಷದಲ್ಲಿ ಕನಿಷ್ಟ ಒಂದು ಬಾರಿಯಾದರೂ ಹಿಮಾಲಯ ಸುತ್ತವ ಹವ್ಯಾಸವುಳ್ಳ ನಾನು ಭಾರತದ ಕೊನೆಯ ಗ್ರಾಮವಾದ ಉತ್ತರಾಖಂಡದ ಮಾನ ಎಂಬ ಗ್ರಾಮಕ್ಕೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಅಲ್ಲಿ ಸರಸ್ವತಿ ನದಿಯನ್ನು ನಾನು ನೋಡಿದೆ. ಚಾರ್ ಧಾಮಗಳಲ್ಲಿ ಒಂದಾದ ಬದೈ ಪುಣ್ಯಕ್ಷೇತ್ರ ಅಲಕಾನದಿಯ ದಂಡೆಯ ಮೇಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆ ಅಲಕೆಯ ಜಾಡುಹಿಡಿದು ಸುಮಾರು ಮೂರು ಕಿ.ಮೀ ಉತ್ತರಕ್ಕೆ ಹೋದರೆ ನಿಮಗೆ ಮಾನಗ್ರಾಮ ಸಿಗುತ್ತದೆ. ಅಲ್ಲಿ ಅಲಕೆ ಪುಟ್ಟ ತೊರೆಯಂತೆ ಶಾಂತವಾಗಿ ಹರಿಯುತ್ತಿರುತ್ತಾಳೆ. ಆದರೆ ಪಕ್ಕದಲ್ಲೆಲ್ಲೋ ನದಿಯೊಂದು ಭೋರ್ಗೆರೆಯುವ ಸದ್ದು ಕೇಳಿಸುತ್ತದೆ. ಏರು ಹಾದಿಯನ್ನು ಹತ್ತಿ ಹೋದರೆ ಎತ್ತರದ ಬೆಟ್ಟದೆದೆಯಿಂದ ನದಿಯೊಂದು ದುಮ್ಮಿಕ್ಕಿ ಹರಿಯುತ್ತಿರುತ್ತದೆ. ಸ್ವಲ್ಪ ಇಳಿಜಾರಿನ ಸಮತಟ್ಟಾದ ಜಾಗದಲ್ಲಿ ನದಿಯ ಎರಡೂ ದಂಡೆಗಳನ್ನು ಜೋಡಿಸಲು ಬೃಹತ್ ಕಲ್ಲನ್ನು ಸೇತುವೆಯ ಹಾಗೆ ಜೋಡಿಸಲಾಗಿತ್ತು. ಅದರ ಹೆಸರು ಭೀಮಫೂಲ್ ಅಂತೆ. ಆ ಸೇತುವೆಯ ಹಿಂದೊಂದು ಕಥೆಯಿದೆ. ಧರ್ಮರಾಯನು ದ್ರೌಪದಿ ಮತ್ತು ತಮ್ಮಂದಿರೊಂದಿಗೆ ಸಶರೀರನಾಗಿ ಸ್ವರ್ಗದತ್ತ ಪಯಣ ಬೆಳೆಸುತ್ತಿದ್ದಾಗ [ಸ್ವರ್ಗಾರೋಹಿಗೆ ಟ್ರಕ್ಕಿಂಗ್ ಇಲ್ಲಿಂದಲೇ ಆರಂಭವಾಗುತ್ತದೆ] ಇಲ್ಲಿಗೆ ತಲುಪಿದಾಗ ಸರಸ್ವತಿ ನದಿಯ ಅಬ್ಬರವನ್ನು ನೋಡಿ ದ್ರೌಪದಿ ಬೆದರಿದಳಂತೆ ಅವಳಿಗೆ ದಾಟಲು ಅನುಕೂಲವಾಗುವಂತೆ ಬೀಮ ಈ ಸೇತುವೆಯನ್ನು ನಿರ್ಮಿಸಿದನೆಂದು ಸ್ಥಳಪುರಾಣ ಹೇಳುತ್ತದೆ. ನದಿಯ ಅಬ್ಬರಕ್ಕೆ ಬೆದರಿ ದ್ರೌಪದಿ,’ ನೀನು ಅದೃಶ್ಯಳಾಗು ಎಂದು ಶಾಪಕೊಟ್ಟಳು’ ಎಂದು ಇನ್ನೊಂದು ಕಥೆಯೂ ಇದೆ. ‘ಇದು ಸರಸ್ವತಿ ನದಿ’ ಎಂಬ ನಾಮಫಲಕವೂ ಅಲ್ಲಿದೆ. ಪ್ರವಾಸಿಗರು ಕೂಡಾ’ ಅಷ್ಟೊಂದು ನೀರು ದುಮ್ಮಿಕ್ಕುತ್ತದೆಯಲ್ಲಾ ಅದೆಲ್ಲಾ ಎಲ್ಲಿ ಹೋಗುತ್ತದೆ?’ ಎಂದು ಅಚ್ಚರಿಯಿಂದಲೂ ಭಕ್ತಿ ಭಾವದಿಂದಲೂ ತುದಿಗಾಲಿನಲ್ಲಿ ನಿಂತು ಇಣುಕಿ ನೋಡುವುದನ್ನು ಕಂಡಿದ್ದೇನೆ.  ಅಲ್ಲಿಂದ ಬಂದ ನೀರು ಪುಟ್ಟ ಝರಿಯಂತೆ ಪಕ್ಕದಲ್ಲಿರುವ ಅಲಕಾನಂದದ ಜೊತೆ ಕೂಡಿಕೊಳ್ಳುತ್ತದೆ.ಇದು ವೇದದಲ್ಲಿ ಉಲ್ಲೇಖಿತವಾದ ಸರಸ್ವತಿ ನದಿ ಹೌದೋ ಅಲ್ಲವವೋ ಅದರೆ ಇಲ್ಲಿಗೆ ಬಂದ ಆಸ್ತಿಕರು ಈ ನದಿಯಲ್ಲೇ ಪರಮ ಪವಿತ್ರಳಾದ ಸರಸ್ವತಿ ನದಿಯನ್ನು ಕಾಣುತ್ತರೆ! ಎಂದೂ ನಾಮಫಲಕವೂ ಅಲ್ಲಿದೆ.
ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಸ್ಥಳವೇ ತ್ರವೇಣಿ ಸಂಗಮ. ಇದು ಉತ್ತರಪರದೇಶ ರಾಜ್ಯದ ಅಲಹಾಬಾದ್ [ ಈಗ ಅದನ್ನು ಉತ್ತರಾಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅದನ್ನು ಪ್ರಯಾಗರಾಜ್ ಎಂದು ನಾಮಕರಣ ಮಾಡಿದ್ದಾರೆ] ನಗರದ ಹೊರವಲಯದಲ್ಲಿದೆ.

ನಾಗ ಸಾಧುಗಳು
ಕುಂಭಮೇಳವನ್ನು ಹೊರಗಿನಿಂದ ನಿಂತು ನೋಡುವವರಿಗೆ ತಟ್ಟನೆ ಆಕರ್ಷಿಸುವುದು ಇದರಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವ ನಾಗ ಸಾಧುಗಳು. ಯಾಕೆಂದರೆ ಇವರು ಸಂಪೂರ್ಣ ಬೆತ್ತಲೆಯಾಗಿರುತ್ತಾರೆ. ಮೈಗೆಲ್ಲಾ ಬೂದಿಯನ್ನು ಬಳಿದುಕೊಂಡಿರುತ್ತಾರೆ. ಕೈಯ್ಯಲ್ಲಿ ತ್ರಿಶೂಲ, ಡಮರುಗವನ್ನು ಹಿಡಿದಿರುತ್ತಾರೆ, ಜಟಾಧಾರಿಯಾಗಿರುತ್ತರೆ. ಒಟ್ಟಿನಲ್ಲಿ ಶಿವನ ಪ್ರತಿರೂಪದಂತೆ ಗೋಚರಿಸುತ್ತಾರೆ. ಇವರು ತಾಂತ್ರಿಕರಾದ ಕಾರಣ ಅನೇಕ ಪವಾಡಗಳನ್ನು ಪ್ರದರ್ಸಿಸುತ್ತಾರೆ. ನಾಗ ಸಾಧುಗಳ ಹೊರತಾದ ಕುಂಭಮೇಳವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಯಾರೀ ನಾಗಸಾಧುಗಳು? ಅವರನ್ನು ಯಾಕೆ ಹಾಗೆ ಕರೆಯುತ್ತಾರೆ? ಅವರ ವಿಷೇಶತೆಗಳೇನು? ಕುಂಭಮೇಳದಲ್ಲಿ ಅವರಿಗೇಕೆ ಅಗ್ರಸ್ಥಾನ?
ನಾಗಸಾಧುವಾಗಲು ಬಯಸುವ ವ್ಯಕ್ತಿ ಸಂಪೂರ್ಣವಾಗಿ ಸಂಸಾರ ಬಂಧನದಿಂದ ಹೊರಬಂದಿರಬೇಕು. ತನ್ನಲ್ಲಿಗೆ ಬಂದ ವ್ಯಕ್ತಿಯನ್ನು ನಾಗಾಸಾಧು ಗುರು ಅಂದರೆ ಮಂಡಲಾದೀಶ್ವರ ಆತನ ಪೂರ್ವಾಪರಗಳನ್ನು ಕಲೆ ಹಾಕುತ್ತಾರೆ.ತನ್ನ ಬಂಧುಬಾಂಧವರ ಜೊತೆ ಯಾವುದೇ ಮೋಹಪಾಶಗಳಿಲ್ಲವೆಂಬುದು ಮನದಟ್ಟಾದರೆ ಅಂತವನನ್ನು ತನ್ನಲ್ಲಿರಿಸಿಕೊಂಡು ಆತನಿಗೆ ಆರರಿಂದ ಹನ್ನೆರಡು ವರ್ಷಗಳವರೆಗಿನ ಕಠಿಣ ಬ್ರಹ್ಮಚರ್ಯದ ವ್ರತವನ್ನು ವಿಧಿಸುತ್ತಾನೆ. ಇದರಲ್ಲಿ ಗುರುವಿಗೆ ಸಂತೃಪ್ತಿಯೆನಿಸಿದರೆ ಮಾತ್ರ ಆತನಿಗೆ ನಾಗ ದೀಕ್ಷೆಯನ್ನು ಕೊಡುತ್ತಾನೆ.  ದೀಕ್ಷೆಗೆ ಮೊದಲು ಹಲವು ವಿಧಿ ವಿಧಾನಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಬಹುಮುಖ್ಯವಾದುದು ಕೇಶಮುಂಡನ ಮಾಡಿ ಸ್ವತಃ ಆತನೇ ತನಗೆ ತರ್ಪಣವನ್ನು ಬಿಡಬೇಕಾಗುತ್ತದೆ ಪಿಂಡಪ್ರಧಾನ ಮಾಡಬೇಕು. ಈ ಆಚರಣೆಗಳೆಲ್ಲವೂ ಕುಂಭಮೇಳದ ಸಂದರ್ಭದಲ್ಲಿ ಗಂಗಾನದಿಯ ದಡದಲ್ಲಿ ನಡೆಯುತ್ತದೆ.

ನಾಗಾ ಸಾಧುಗಳಾಗಲು ಮಹಿಳೆಯರಿಗೂ ಅವಕಾಶವಿದೆ. ಅವರನ್ನು ನಾಗ ಸನ್ಯಾಸಿನಿಯರೆಂದು ಕರೆಯುತ್ತಾರೆ.ನಾಗ ಸನ್ಯಾಸಿಗಳಾಗಲು ಅವರಿಗಿರುವ ನಿಬಂಧನೆಗಳು, ಆಚರಣೆಗಳು ಪುರುಷರಿಗಿರುವಂತಹದ್ದೇ ಆಗಿರುತ್ತದೆ, ಆದ್ರೆ ಅವರುನಾಗಸಾಧುಗಳ ಹಾಗೆ ನಗ್ನವಾಗಿ ತಿರುಗಾಡುವಂತಿಲ್ಲ, ಹಳದಿ ಅಥವಾ ಬಿಳಿಯ ವಸ್ತ್ರದಿಂದ ಮೈಯ್ಯನ್ನು ಮುಚ್ಚಿಕೊಳ್ಳಬೇಕು, ಅದೂ ಏಕವಸ್ತ್ರ ಮಾತ್ರ. ಕುಂಭಮೇಳದಲ್ಲಿ ಅವರೂ ನಾಗಸಾಧುಗಳ ಜೊತೆ ‘ಶಾಹಿ ಸ್ನಾನ’ ಮಾಡಬಹುದು. ಆದರೆ ಅವರಂತೆ ನಗ್ನ ಸ್ನಾನಕ್ಕೆ ಅನುಮತಿಯಿಲ್ಲ. ಅಖಾಡದಲ್ಲಿ ಗಂಡು ಹೆಣ್ಣೆಂಬ ಬೇಧಭಾವವಿಲ್ಲ, ಎಲ್ಲರೂ ಸಮಾನರು. ನಾಗಾ ಸನ್ಯಾಸಿನಿಯರನ್ನು ‘ಮಾತಾ’ ಎಂದೇ ಎಲ್ಲರೂ ಕರೆಯುತ್ತಾರೆ.

ನಾಗಾ ಸಾಧುಗಳು ಸಮರ ಕಲೆಯಲ್ಲಿ ನಿಷ್ಣಾತರು. ದೇಶಕ್ಕೆ ಗಂಡಾಂತರ ಒದಗಿದಾಗ, ಸನಾತನ ಧರ್ಮಕ್ಕೆ ಕುತ್ತು ಒದಗಿದಾಗ ಇವರು ಶಸ್ತ್ರಸಜ್ಜಿತರಾಗಿ ಕಣಕ್ಕೆ ದುಮುಕುತ್ತಾರಂತೆ. ಇವರಿಗೆಲ್ಲಾ ಧತ್ತಾತ್ರಯನು ಮೂಲಪುರುಷನೆಂದು ಹೇಳಲಾಗುತ್ತಿದ್ದರೂ ಇವರನ್ನು ಶಂಕರಾಚಾರ್ಯರು ಸಂಘಟಿಸಿದರೆಂದು ಇವರ ಬಗ್ಗೆ ಇರುವ ಐತಿಹ್ಯ ಹೇಳುತ್ತದೆ. ಶಂಕರಾಚಾರ್ಯರು ದೇಶ ಯಾತ್ರೆಯ ಕಾಲದಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳಕ್ಕೂ ಭೇಟಿ ನೀಡಿದ್ದರು. ಆಗ ಅಲ್ಲಿಯ ಸನ್ಯಾಸಿಗಳನ್ನು ಒಟ್ಟು ಸೇರಿಸಿ ಅವರನ್ನು ದಶನಾಮ ಪದ್ಧತಿಗೆ ಅಳವಡಿಸಿ ಕುಂಭಮೇಳಕ್ಕೆ ಅವರನ್ನು ಸಜ್ಜುಗೊಳಿಸಿದರಂತೆ. ದಶನಾಮ ಸನ್ಯಾಸಿಗಳು ತಮ್ಮ ಹೆಸರಿನ ಮುಂದೆ ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ,ಸರಸ್ವತಿ, ಭಾರತಿ. ಮತ್ತು ಪುರಿ ಎಂಬ ಪದಗಳನ್ನು ಸೇರಿಸಿಕೊಳ್ಳುತ್ತಾರೆ. ಕುಂಭಮೇಳಗಳಲ್ಲಿ ಈ ಸನ್ಯಾಸಿಗಳ ಪಾತ್ರ ವಿಶಿಷ್ಟವಾದುದು. ಶಂಕರಾಚಾರ್ಯರಿಗಿಂತಲೂ ಹಿಂದೆ ಭಾರತದಲ್ಲಿ ಕುಂಭಮೇಳ ನಡೆಯುತ್ತಿತ್ತು. ಚೀನಾ ಯಾತ್ರಿಕ ಹುಯೆನ್ಸ್ ತ್ಸಾಂಗ್ ಈ ಮೇಳಕ್ಕೆ ಭೇಟಿ ನೀಡಿದ್ದನೆಂದು ಇತಿಹಾಸ ಹೇಳುತ್ತದೆ.

ಕುಂಬ ಮೇಳದಲ್ಲಿ ‘ಶಾಹಿ ಸ್ನಾನ’ ಅಥವಾ ಪವಿತ್ರ ಸ್ನಾನವೆಂಬುದು ಬಹು ಮುಖ್ಯವಾದುದು.  55 ದಿವಸ ನಡೆಯುವ ಕುಂಭಮೇಳ ಜನವರಿ ೧೫ ರ ಮಕರ ಸಂಕ್ರಾತಿಯಂದು ಆರಂಭವಾಗುತ್ತದೆ. ೧೫ರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ತ್ರಿವೇಣಿ ಸಂಗಮದಲ್ಲಿ ಮೊದಲ ಪವಿತ್ರ ಸ್ನಾನ –ಶಾಹಿ ಸ್ನಾನ್- ಆರಂಭವಾಗುತ್ತದೆ. ಅದರ ಹಕ್ಕುದಾರರು ನಾಗಾ ಸಾಧುಗಳು. ಅವರು ಸಾಗರೋಪಾದಿಯಲ್ಲಿ ಬಂದು ಹರ್ಷೋದ್ಘಾರ ಮಾಡುತ್ತಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಎರಡನೆಯ ಶಾಹಿ ಸ್ನಾನ ಪೆಭ್ರವರಿ ೪ರ ಮೌನಿ ಅಮಾವಾಸ್ಯೆಯಂದು ನಡೆಯುತ್ತದೆ. ಮೂರನೆಯ ಶಾಹಿ ಸ್ನಾನ ಪೆಭ್ರವರಿ ೧೦ರ ವಸಂತ ಪಂಚಮಿಯಂದು ನಡೆಯುತ್ತದೆ. ಕುಂಭಮೇಳದಲ್ಲಿ ಮಾತ್ರ ಕಾಣಸಿಗುವ ಈ ಬೂದಿಲೇಪಿತ ದಿಗಂಬರ ಸನ್ಯಾಸಿಗಳನ್ನು ನೋಡುವುದಕ್ಕಾಗಿಯೇ ದೇಶ ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುವುದುಂಟು. ಒಂದು ಅಂಕಿಅಂಶಗಳ ಪ್ರಕಾರ ೫೦ ಲಕ್ಷ ನಾಗಾ ಸಾಧುಗಳಿದ್ದಾರೆಂದು ಅಂದಾಜು ಮಾಡಲಾಗಿದೆ.

ಈ ನಾಗ ಸನ್ಯಾಸಿಗಳಲ್ಲಿಯೂ ಅನೇಕ ಪಂಗಡಗಳಿವೆ. ಅವುಗಳನ್ನು ಅಖಾಡಗಳೆಂದು ಕರೆಯುತ್ತಾರೆ. ಭಾರತೀಯ ಸಾಧುಪರಂಪರೆಯಲ್ಲಿ ಒಟ್ಟು ೧೪ ಅಖಾಡಗಳಿವೆ. ಇವುಗಳಲ್ಲ ಕುಂಭಮೇಳದಲ್ಲಿ ಭಾಗವಹಿಸುತ್ತವೆ. ಇದರಲ್ಲ್ಲಿ ಏಳು ಅಕಾಡಗಳನ್ನು ಬಹುಮುಖ್ಯ ಅಖಾಡಗಳೆಂದು ಪರಿಗಣಿಸಲಾಗಿದೆ. ಇವುಗಳನ್ನು ಶಂಕರಾಚಾರ್ಯರೇ ಸ್ಥಾಪಿಸಿದ್ದಾರೆ ಎನ್ನಲಾಗುತ್ತಿದೆ. ಅವುಗಳು ಯಾವುದೆಂದರೆ ಮಹಾನಿರ್ವಾನಿ, ನಿರಂಜನಿ, ಜೂನಾ, ಅಟಲ್, ಅವಹಾರಿ. ಅಗ್ನಿ ಮತ್ತು ಆನಂದ.

ಈ ನಾಗಾ ಸಾಧುಗಳಲ್ಲಿ ಹಠಯೋಗಿಗಳೆಂಬ ದೇಹದಂಡಧಾರಿಗಳಿರುತ್ತಾರೆ. ಸಾಧನೆಯ ಮಾರ್ಗಕ್ಕೆ ತಮ್ಮ ದೇಹವನ್ನೇ ವಾಹಕವಾಗಿಸಿಕೊಳ್ಳುತ್ತಾರೆ, ಅದನ್ನೇ ದಂಡಿಸಿಕೊಳ್ಳುತ್ತಾರೆ. ಅಂತವರು ಒಂಟಿಕಾಲಿನಲ್ಲಿ ವರ್ಷಾನುಗಟ್ಟಲೆ ನಿಂತುಕೊಳ್ಳುತ್ತಾರೆ, ವರ್ಷಾನುಗಟ್ಟಲೆ ಕೇವಲ ನೀರನ್ನು ಸೇವಿಸಿ ತಮ್ಮ ಜೀವ ಹಿಡಿಟ್ಟುಕೊಂಡಿರುತ್ತಾರೆ. ಬೂಮಿಯಲ್ಲಿ ಹಳ್ಳ ತೋಡಿ ಅದರಲ್ಲಿ ಕುಳಿತು ಮೇಲಿನಿಂದ ಮಣ್ಣು ಮುಚ್ಚಿಸಿಕೊಂಡು ವಾರಗಟ್ಟಲೆ ಭೂಸಮಾಧಿಯಾಗುತ್ತಾರೆ. ತಮ್ಮ ಜನನೇಂದಿಯಿಂದ ಕಾರು ಬಸ್ಸುಗಳನ್ನೇ ಎಳೆಯುತ್ತಾರೆ.  ಹತ್ತಾರು ಕೇಜಿ ತೂಗುವ ಕಲ್ಲುಗಳನ್ನು ತಮ್ಮ ಜನನೇಂದಿಯಕ್ಕೆ ಕಟ್ಟಿಕೊಂಡು ತೂಗುತ್ತಾರೆ. ನಾಗಾ ಸನ್ಯಾಸಿಗಳು ಲೈಂಗಿಕ ಶಕ್ತಿಯನ್ನು ಅಧ್ಯಾತ್ಮೈಕ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ.

ಬೌತಿಕವಾಗಿಯೂ ಶಾರೀರಕವಾಗಿಯೂ ಅತ್ಯಂತ ಸದೃಢರಾಗಿದ್ದರೂ ಇವರು ಸಂಪೂರ್ಣ ನಗ್ನರಾಗಿಯೇ ಇರುತ್ತಾರೆ. ಸಹರೀರವನ್ನು ಬೆಚ್ಚಗಿಡುವ ಕಾರಣದಿಂದಾಗಿಯೂ ಇರಬಹುದು ಇವರು ಭಂಗಿಯನ್ನು ಸೇದುತ್ತಾರೆ, ಮೈಗೆಲ್ಲಾ ಬೂದಿಯನ್ನು ಬಳಿದುಕೊಳ್ಳುತ್ತಾರೆ. ಹಾಗಾಗಿಯೇ ನಾಗರಿಕರಲ್ಲಿ ಒಂದು ರೀತಿಯ ಕುತೂಹಲ ಮತ್ತು ಭೀತಿಯನ್ನು ಹುಟ್ಟಿಸುತ್ತಾರೆ.
. ಕುಂಭ ಮೇಳದಲ್ಲಿ ಕೋಟ್ಯಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಇಡೀ ಜಗತ್ತಿನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ jಜನರು ಒಂದೆಡೆ ಸೇರುವ ಇನ್ನೊಂದು ಧಾರ್ಮಿಕ ಆಚರಣೆ ಇನ್ನೊಂದಿಲ್ಲ. ಹಾಗಾಗಿಯೇ ಇದನ್ನು ೨೦೧೭ರಲ್ಲಿ ಯುನೆಸ್ಕೋ ಜಗತ್ತಿನ ಅತಿ ದೊಡ್ಡ ಶಾಂತಿಯುತ ಧಾರ್ಮಿಕ ಆಚರಣೆ ಎಂದು ಗುರುತಿಸಿ ತನ್ನ ಸಾಂಸ್ಕೃತಿಕ ಪಟ್ಟಿಗೆ ಸೇರಿಸಿದೆ.

ಮುಂಬರುವ ೨೦೧೯ರ ಅರ್ಧ ಕುಂಬಮೇಳ
೨೦೧೯ರ ಕುಂಭಮೇಳದ ಉಸ್ತುವಾರಿಯನ್ನು ಸ್ವತಃ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರೇ ವಹಿಸಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಅವರು ಮೋಘಲ ಪಳೆಯುಳಿಕೆಯಾಗಿದ್ದ ಅಲಹಾಬಾದ್ ಎಂಬ ಹೆಸರನ್ನು ಈಗ ಪ್ರಯೋಗ ರಾಜ್ ಎಂದು ಬದಲಾಯಿಸಿದ್ದಾರೆ. ಅಕ್ಬರ್ ಪೂರ್ವದಲ್ಲಿ ಅಲಹಾಬಾದಿಗೆ ಪ್ರಯಾಗ್ ರಾಜ್ ಎಂಬ ಹೆಸರಿತ್ತು. ಅಕ್ಬರ್ ೧೫೭೫ರಲ್ಲಿ ಪ್ರಯಾಗದ ದಂಡೆಯಮೇಲೆ ಕೋಟೆಯೊಂದನ್ನು ಕಟ್ಟಿಸಿ ಅದಕ್ಕೆ ಇಲಹಾಬಾದ್ ಎಂದು ಹೆಸರಿಟ್ಟನು. ಪರಿಷಿಯನ್ ಭಾಷೆಯಲ್ಲಿ ಹಾಗೆಂದರೆ ‘ದೇವರ ಜಾಗ’ ಎಂದಾಗಿತ್ತು. ಬ್ರಿಟಿಷರು ಅದನ್ನು ಅಲಹಾಬಾದ್ ಎಂದು ಕರೆದರು. ನಮ್ಮ ಭಾರತದ ಮೊದಲ ಪ್ರಧಾನಿ ಜವಾಹರಲಾಲರ ವಂಶಸ್ಥರು ಬಾಳಿಬದುಕಿದ ಮನೆಯೂ ಇಲ್ಲಿದೆ.ಅಂದು ಅದು ಸ್ವಾತಂತ್ರ್ಯಹೋರಾಟದ ರೂಪುರೇಶೆಗಳು ಸಿದ್ಧಗೊಳ್ಳುತ್ತಿದ್ದ ಜಾಗವಾಗಿತ್ತು. ಈಗದು ಮ್ಯೂಸಿಯಂ ಆಗಿದೆ. ಅಲಹಾಬಾದ್ ಕಾಶಿಯ ನಂತರದ ಅತ್ಯಂತ ಹಳೆಯ ನಗರವಾಗಿದೆ ಪ್ರಯಾಗ್ ಅಲಹಾಬಾದ್ ನಗರದ ಹೊರವಲಯದಲ್ಲಿದೆ. ರಾಜಧಾನಿ ಲಕ್ನೋದಿಂದ ೨೫೦ಕಿಮೀ ದೂರದಲ್ಲಿದೆ ಶ್ರೀರಾಮನು ವನವಾಸದ ಕಾಲದಲ್ಲಿ ಚಿತ್ರಕೂಟಕ್ಕೆ ಇದೇ ದಾರಿಯಲ್ಲಿ ಹೋದನೆಂಬ ಪ್ರತಿತಿಯಿದೆ. ಇಲ್ಲಿಂದ ಅಯೋಧ್ಯೆಗೆ೧೫೪ ಕಿ.ಮೀ ದೂರವಿದ್ದರೆ ಚಿತ್ರಕೂಟಕ್ಕೆ ೯೪ ಕಿ,ಮೀ ದೂರ ಇದೆ.
ಈ ಮೇಳದಲ್ಲಿ ಸುಮಾರು ೧೫ ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪೂರ್ಣ ಕುಂಭಮೇಳದಲ್ಲಿ ಸುಮಾರು ೩೦ ಕೋಟಿ ಜನರು ಭಾಗವಹಿಸುತ್ತಾರೆ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಭಾಗವಿಸುತ್ತಿರುವಾಗ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಒಂದು ಸವಾಲೇ ಸರಿ.

ಹೌದು ಇದಕ್ಕಾಗಿಯೇ ಇಪ್ಪತ್ತು ಚದರ ಮೈಲಿನಲ್ಲಿ ವಸತಿ ಸೌಕರ್ಯದ ವ್ಯವಸ್ಥೆಯಾಗುತ್ತದೆ. ತಾತ್ಕಾಲೀಕ ಟೆಂಟ್ ಗಳ ನಿರ್ಮಾಣವಾಗುತ್ತದೆ. ನಲ್ವತ್ತು ಸಾವಿರ ಟಾಯ್ಲೆಟ್, ಸುರಕ್ಷತೆಗಳಿಗಾಗಿ ಇಪ್ಪತೈದು ಸಾವಿರ ಪೋಲಿಸರು, ಎಲ್ಲಾ ಅಧುನಿಕ ಸಲಕರಣೆಗಳುಳ್ಳ ವಿಶೇಷ ಪೋಲಿಸ್ ಚೌಕಿಗಳು ನೀರು, ವಿದ್ಯುತ್, ಸಾರಿಗೆ ವ್ಯವಸ್ಥೆ ಎಲ್ಲವೂ ಸಿದ್ಧವಾಗುತ್ತಿದೆ. ಹಾಗಿದ್ದರೂ ಕೂಡಾ ಕೆಲವು ಅವಘಡಗಳು ಘಟಿಸಿಬಿಡುತ್ತವೆ. ೧೭೬೦ರಲ್ಲಿ ನಡೆದ ದುರಂತವೇ ಇದಕ್ಕೆ ಸಾಕ್ಷಿ.

೧೭೬೦ರಲ್ಲಿ ನಾಸಿಕ್ ನಲ್ಲಿ ನಡೆದಕುಂಭಮೇಳದಲ್ಲಿ ಶೈವ ಮತ್ತು ವೈಷ್ಣವ ಆರಾಧಕ ಸನ್ಯಾಸಿಗಳ ಮಧ್ಯೆ  ನಡೆದ ವಾದ ವಿವಾದ ಹಿಂಸಾಚಾರಕ್ಕೆ ತಿರುಗಿ ಸುಮಾರು ಹದಿನೆಂಟು ಸಾವಿರ ಸನ್ಯಾಸಿಗಳು ಮೃತಪಟ್ಟಿದ್ದರು. ಕೊನೆಗೆ ಈ ಜಗಳ ಆಗ ರಾಜ್ಯವಾಳುತ್ತಿದ್ದ ಪೇಶ್ವೆಗಳ ತನಕ ಹೋಗಿ ಅವರು ಶೈವ ಪಂಥಿಯರು ಗೋದಾವರಿಯ ಉಗಮಸ್ಥಾನವಾದ ತ್ರೈಂಬಕೇಶ್ವರದಲ್ಲಿ ಶೈವಪಂಥೀಯರು ಮತ್ತು ನಾಸಿಕ್ ನಲ್ಲಿ ವೈಷ್ಣವ ಪಂಥಿಯರು ಸ್ನಾನಮಾಡಬೇಕೆಂದು ಆದೇಶಿಸಿದ್ದರು. ಅದು ಇವತ್ತಿಗೂ ನಡೆದುಕೊಂಡು ಬಂದಿದೆ.

೧೯೫೪ರಲ್ಲಿ ಅಲಹಾಬಾದಿನಲ್ಲಿ ನಡೆದ ಕುಂಭಮೇಳದಲ್ಲಿಯೂ  ಇದು ಭಾರತ ಸ್ವತಂತ್ರಗೊಂಡ ಬಳಿಕ ನಡೆದ ಮೊದಲ ಕುಂಭಮೇಳವಾಗಿತ್ತು. ಹಾಗಾಗಿ ರಾಜಕಾರಣಿಗಳು ಕೂಡಾ ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಆ ಜನನಿಬಿಡ ಪ್ರದೇಶದಲ್ಲಿ ಅವರಿಗೆ ಭದ್ರತೆಗಾಗಿ ಅಂತರ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು. ಆದರೆ ಜನರು ಅದನ್ನು ಮೀರಿ ಮುನ್ನುಗಿದ್ದಾಗ ಆದ ಕಾಲ್ತುಳಿತದಲ್ಲಿ ಸುಮಾರು ಎಂಟುನೂರು ಜನರು ಸತ್ತಿದ್ದರು. ಅನಂತರಲ್ಲಿ ಪ್ರಧಾನಿ ನೆಹರು ಅವರು ಇನ್ನುಮುಂದೆ ರಾಜಕಾರಣಿಗಳು ಮತ್ತು ಗಣ್ಯರು  ಕುಂಭ ಮೇಳ್ದಲ್ಲಿ ಭಾಗವಹಿಸಬಾರದು ಎಂದು ಎಂದು ಆದೇಶ ನೀಡಿದರು. ಹಾಗಾಗಿ ಕುಂಭಮೇಳಕ್ಕೆ ಇವತ್ತಿಗೂ ಯಾವುದೇ ಸರಕಾರಿ ಸವಲತ್ತುಗಳೊಂದಿಗೆ ಗಣ್ಯರು ರಾಜಕಾರಣಿಗಳು ಬೇಟಿ ನೀಡುವುದಿಲ್ಲ.

೨೦೧೩ರ ಮಹಾಪೂರ್ಣ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನ ಮುಗಿಸಿಕೊಂಡು ಬಂದ ಅಸಂಖ್ಯಾತ ಭಕ್ತರು ಅಲಹಾಬಾದಿನ ರೈಲ್ವೆ ಸ್ಟೇಷನ್ನಿನಲ್ಲಿ  ರೈಲಿಗಾಗಿ ಕಾಯುತ್ತಾ ನಿಂತಿದ್ದಾಗ ಪ್ಲಾಟ್ ಪಾರಂ ೬ ಕುಸಿದು ಬಿದ್ದು 42 ಜನರು ಸತ್ತು ನೂರಾರು ಜನರು ಗಾಯಗೊಂಡಿದ್ದರು.

ಪ್ರತಿ ಕುಂಭಮೇಳದಲ್ಲೂ ಕಾಲ್ತುಳಿತಕ್ಕೆ ಸಿಕ್ಕುವುದು , ಜನಜಂಗುಳಿಯಲ್ಲಿ ತಮ್ಮವರನ್ನು ಕಳೆದುಕೊಳ್ಳುವುದು ಮುಂತಾದ ಸಣ್ಣಪುಟ್ಟ ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ಹಾಗೆಲ್ಲಾ ಇದ್ದರೂ ಕುಂಭಮೇಳಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ.  ದೂರದಲ್ಲಿ ನಿಂತು ಈ ಮಾನವ  ಚಟುವಟಿಕೆಗಳನ್ನೆಲ್ಲಾ ನೋಡುವ ಪರಿಸರವಾದಿಗಳಿಗೆ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿರುವ ನದಿಗಳನ್ನು ನೋಡುವಾಗ ಆತಂಕವಾಗುತ್ತಿದೆ.


[ಉದಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ]
Sunday, December 30, 2018

ರಾಘವೇಶ್ವರನ ಬೆಂಬಲಿಗರೂ 'ನಾತಿಚರಾಮಿ'ಯ ನಿಂದಕರೂ..


ಒಬ್ಬಳೇ ಸಿನೇಮಾಕ್ಕೆ ಹೋಗುವುದು ನನಗೆ ಅನಿವಾರ್ಯ. ಮತ್ತು ನಾನದನ್ನು ಇಷ್ಟಪಡುತ್ತೇನೆ ಕೂಡಾ.  ಇಂದು ಕೂಡಾ  ವಂದಿವಾಗದರನ್ನು ಸೇರಿಸಿಕೊಳ್ಳದೆ ಒಬ್ಬಳೇ ನಾತಿಚರಾಮಿ ಸಿನೇಮಾಕ್ಕೆ ಹೋದೆ. ಸಿನೇಮಾದ  ಸಬ್ಜೆಕ್ಟ್ ಹಾಗಿತ್ತು. ಮೊದಲನೆಯದಾಗಿ ಹೇಳಿಬಿಡುತ್ತೇನೆ. ಈ ಸಿನೇಮಾದಲ್ಲಿ ತೊಡಗಿಸಿಕೊಂಡ ಯಾರೂ ನನ್ನ ಸ್ನೇಹದ ವಲಯದಲ್ಲಿರುವವರಲ್ಲ.
ಹೆಡ್ಡಿಂಗ್ ನಲ್ಲೇ ಸ್ವಾಮೀಜಿಯೊಬ್ಬರ ಹೆಸರನ್ನು ಉಲ್ಲೇಖಿಸಿದ ಕಾರಣದಿಂದಲೂ ಹೇಳಿಬಿಡುತ್ತೇನೆ, ರಾಘವೇಶ್ವರರನ್ನು ಪೂಜಿಸುವ ಸಮುದಾಯಕ್ಕೆ ಸೇರಿದವಳೂ ನಾನಲ್ಲ.. ಆದರೆ ನಾನೊಬ್ಬಳು ಹೆಣ್ಣು. ಅದೇ  ಈ ಲೇಖನವನ್ನು ಬರೆಯಲು ನನಗಿರುವ ಅರ್ಹತೆ.

‘ನಾತಿಚರಾಮಿ’ ಸಿನೇಮಾದಲ್ಲಿ ಮೈಮನಗಳ ನಡುವೆ ಸಂಘರ್ಷವಿದೆ ಎಂಬುದನ್ನು ಚಿತ್ರತಂಡ ಮೊದಲೇ ಜಾಹೀರು ಮಾಡಿತ್ತು. ಆಗಲೇ ಈ ಸಿನೇಮಾದ ನನಗೊಂದು ಚೂರು ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿತ್ತು. ಯಾಕೆಂದರೆ ಶಿವರಾಮಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯನ್ನು ನಾನು ಹತ್ತಾರು ಸಲ ಓದಿದ್ದೇನೆ., ಅದು ನನಗೆ ಸ್ನಾತಕೋತ್ತರ ಪದವಿಯಲ್ಲಿ ಪಠ್ಯವಾಗಿತ್ತು. ಮೇಸ್ಟ್ರರಾದ ಕೇಶವ ಶರ್ಮರು ಅದನ್ನು ನಮಗೆ ಅರೆದು ಕುಡಿಸಿದ್ದರು!

ನಾತಿಚರಾಮಿ, ಈ ಹೆಸರೇ ಸಾಮಾನ್ಯರಿಗೆ ಅಪರಿಚಿತ. ತನ್ನ ಹೆಸರಿನಿಂದಲೇ ಈ ಸಿನೇಮಾಕ್ಕೊಂದು ಸೀಮಿತ ಚೌಕಟ್ಟು ಬಂತು, ಅಂದರೆ ಇದರ ವೀಕ್ಷಕರು ಯಾರು ಎಂಬುದು ಮೊದಲೇ ನಿರ್ಧಾರವಾದಂತಿತ್ತು.. ಅಷ್ಟರಮಟ್ಟಿಗೆ ಅದು ಸಾಮಾನ್ಯ ಪ್ರೇಕ್ಷಕರಿಂದ ಅಂತರವನ್ನು ಕಾಯ್ದುಕೊಂಡಿತು. ಸಿನೇಮಾದ ಭಾಷೆಯಲ್ಲಿ ಹೇಳುವುದಾದರೆ ಸಿ ಸೆಂಟರಿಗೆ ಇದು ಹೋಗಲು ಸಾಧ್ಯವೇ ಇಲ್ಲ. ಸಿನೇಮಾ ನೋಡಿದ ಮೇಲೆ ನನಗನ್ನಿಸಿದ್ದು. ಇದು ಬಿ ಸೆಂಟರಿಗೂ ಹೋಗಲಾರದು. ಆದರೆ ಎ ಸೆಂಟರಿನಲ್ಲಿ ಕನಿಷ್ಟ ಇಪ್ಪತೈದು ದಿನವದರೂ ಓಡಬಹುದಾಗಿದ್ದ  ಸದಭಿರುಚಿಯ ಸಿನೇಮಾ. ಆದರೆ ಈಗ ಇದು ಒಂದೇ ವಾರದಲ್ಲಿ ಎತ್ತಂಗಡಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕೆ?

ಇದಕ್ಕೆ ಕಾರಣ ಪೇಸ್ಬುಕ್ ಮದ್ಭಕ್ತರ ಪಡೆ. ಇವರು ಕಂಪ್ಯೂಟರ್ ಕೀಲಿಮಣೆಯ ಮೇಲೆ ಕೈಯಿಟ್ಟರೆ ಎಲ್ಲಿಯೋ ಒಂದು ಕಡೆ ಸರ್ವನಾಶವಾಗುವುದು ಖಚಿತ!
[ಸಿನೇಮಾದ ಬಗ್ಗೆ ನಾನು ಹೆಚ್ಚು ಬರೆಯಲು ಹೋಗುವುದಿಲ್ಲ. ಅ ಬಗ್ಗೆ ಪೇಸ್ಬುಕ್ ನಲ್ಲಿ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ]

ನಿಮಗೆ ನೆನಪಿರಬಹುದು, ಇಂದಿಗೆ ನಾಲ್ಕು ವರ್ಷಗಳ ಹಿಂದೆ ರಾಘವೇಶ್ವರ ಸ್ವಾಮೀಜಿಯಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪ್ರೇಮಲತಾ ಎಂಬ ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಲು ಸಿದ್ಧಳಾಗಿದ್ದರು. ಆದರೆ ಎದರಾಳಿಯಾಗಿದ್ದುದು ಶಂಕರಪರಂಪರೆಯ ಪೀಠಸ್ಥ ಬಲಾಡ್ಯ ಸ್ವಾಮೀಜಿ.  ಮಠದ ಕುತಂತ್ರದ ಕಾರಣವಾಗಿ ಪ್ರೇಮಲತಾ ಮತ್ತು ಆಕೆಯ ಗಂಡನೇ ಇಪ್ಪತ್ತಾರು ದಿನಗಳನ್ನು ಜೈಲಿನಲ್ಲಿ ಕಳೆಯುವಂತಾಯ್ತು. ಆ ಘಟನೆಯನ್ನು ಯಾವ ಮಾಧ್ಯಮವೂ ವರದಿ ಮಾಡಬಾರದು ಎಂದು ಮಠ ನ್ಯಾಯಲಯದಿಂದ ತಡೆಯಾಜ್ನೆ ತಂದಿತ್ತು. ಅವರ ಸಮಾಜಬಾಂಧವರೂ ಅಂದಿನ ದಿನಗಳಲ್ಲಿ ಆ ದಂಪತಿಗಳ ಪರ ವಹಿಸಲಿಲ್ಲ. ಆ ಸಂದರ್ಭದಲ್ಲಿ ‘ಒಪ್ಪಿಸಲ್ಪಡುವ ಸೆಕ್ಸ್ ಎಂಬುದೊಂದು ಇದೆಯಾ?’ ಅಂತ ಲೇಖನವೊಂದನ್ನು ಬರೆದಿದ್ದೆ ಮತ್ತು ಕೆಲವೊಂದು ಸ್ಟೇಟಸ್ ಗಳನ್ನು ಪೇಶ್ಬುಕ್ ಗೆ ಅಪ್ಲೋಡ್ ಮಾಡಿದ್ದೆ.. ಅದನ್ನು ಓದಿ ಕೆರಳಿದ ಗೋಸ್ವಾಮಿ ಭಕ್ತರು ನನ್ನನ್ನು ಟ್ರೋಲ್ ಮಾಡಿ, ಹ್ಯಾಸ್ಟ್ಯಾಗ್ ಸೃಷ್ಟಿಸಿ ಲೇವಡಿ ಮಾಡತೊಡಗಿದರು, ತಲೆಯಲ್ಲಿ ಸೆಗಣಿ ತುಂಬಿಕೊಂಡ ಆ ಭಕ್ತರನ್ನು ನಾನು ನಿರ್ಲಕ್ಷಿಸುತ್ತಾ ಬಂದೆ.

ಈಗ ಕಾಲ ಬದಲಾಗಿದೆ. ಹವ್ಯಕ ಸಮಾಜ ಎರಡು ಬಣಗಳಾಗಿ ಒಡೆದಿದೆ. ಒಂದು ಬಣ ಸ್ವಾಮೀಜಿಯ ಅನೈತಿಕ ಚಟುವಟಿಕೆಗಳನ್ನೆಲ್ಲಾ ಬಯಲು ಮಾಡುತ್ತಾ ಬಂತು. ಇನ್ನೊಂದು ಬಣ ಸ್ವಾಮೀಜಿಗೆ ಬೆನ್ನೆಲುಬಾಗಿ ನಿಂತಿತು.  ಈಗ ಆ ಸ್ವಾಮೀಜಿಯ  ಮೇಲೆ ಮೂರು ಪ್ರಕರಣ್ಗಳಲ್ಲಿ ಚಾರ್ಜ್ ಶೀಟ್ ಪೈಲ್ ಆಗಿದೆ. ಆ ಮಹಿಳೆಯೊಡನೆ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಬಂಧ ಇತ್ತು ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೆರಡು ಪ್ರಕರಣ್ಗಳಲ್ಲಿ ಕೋರ್ಟ್ ಸಮನ್ಸ್ ಇದ್ದರೂ ಆ ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗದೆ , ನ್ಯಾಯಾಲಯದ ಕಣ್ಣಿಗೆ ಮಣ್ಣೇರಚಿ ಆಡಂಬರದಿಂದ ತಿರುಗಾಡುತ್ತಿದ್ದಾರೆ. ಶಂಕರಪರಂಪರೆಯ ಪೀಠಾಧಿಪತಿಯಾಗಿಯೇ ಮುಂದುವರೆದಿದ್ದಾರೆ. ಅವರ ಕಳಂಕಿತ ಕೈಯಿಂದಲೇ ಭಕ್ತರು ಮಂತ್ರಾಕ್ಷತೆಯನ್ನು ಸ್ವೀಕರಿಸುತ್ತಿದ್ದಾರೆ.
ಹವ್ಯಕರ ಸ್ವಾಮೀಜಿ ಪರ ಬಣವು ಶುಕ್ರವಾರದಿಂದ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಿದೆ, ಲಂಪಟ ಸ್ವಾಮೀಯ ಭಕ್ತರು ಗಣನೀಯ ಸಂಖ್ಯೆಯಲ್ಲಿ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಇವತ್ತು ಪೇಸ್ಬುಕ್ ಗೆ ಬಂದಾಗ ಯು.ಬಿ.ಪವನಜ ಎಂಬ ಮದ್ಭಕ್ತರೊಬ್ಬರು ಈ ಸಮ್ಮೇಳನದ ಬಗ್ಗೆ ಹಾಕಿದ ಸ್ಟೇಟಸ್ ಒಂದು ನನ್ನ ವಾಲ್ ನಲ್ಲಿ ಉರುಳುತ್ತಾ ಬಂತು. ಅದರಲ್ಲಿ ಆತ ನನ್ನನ್ನು ಟ್ರೋಲ್ ಮಾಡಿದ್ದ. ಮಾತ್ರವಲ್ಲ ತನ್ನ ಪರಾಕ್ರಮವನ್ನು ತೋರ್ಪಡಿಸಿಕೊಳ್ಳಲು ನನಗೆ  ಹ್ಯಾಸ್ಟ್ಯಾಗ್ ಸೃಷ್ಟಿಸಿದ ರಾಘವೇಂದ್ರ ಸುಬ್ರಹ್ಮಣ್ಯ ಎಂಬಾತನಿಗೂ ಟ್ಯಾಗ್ ಮಾಡಿದ್ದರು. ಅಷ್ಟರಲ್ಲೇ  ‘ಅಕ್ಕಾ ನಿಮ್ಮನ್ನು ಮತ್ತೆ ಕೆಣಕಲು ನೋಡುತ್ತಿದ್ದಾರೆ’ ಅಂತ ಇನ್ನೊಬ್ಬ ಮದ್ಭಕ್ತನ  ಸ್ಕ್ರೀನ್ ಶಾಟ್ ನನ್ನ ಇನ್ಬಾಕ್ಸ್ ಗೆ ಬಂದು ಬಿತ್ತು. ಇದು ಕೂಡಾ ಈ ಲೇಖನವನ್ನು ಬರೆಯಲು ಪರೋಕ್ಷ ಕಾರಣವಾಯ್ತು.

ರಾಘವೇಶನ ಭಕ್ತರ ಪಡೆ ಸತತ ನಾಲ್ಕು ವರ್ಷಗಳ ಕಾಲ ಯಾಕೆ ನನ್ನನ್ನು ಲೇವಡಿ ಮಾಡುತ್ತಿದೆ? ಅವರೇ ಕೊಡುವ ಕಾರಣ ನಾನು ಗಂಜಿ ಗಿರಾಕಿ!

ಈ ಪೇಸ್ಬುಕ್ ನಲ್ಲಿ ಭಕ್ತರ ಬಹುದೊಡ್ಡ ಪಡೆಯೇ ಇದೆ. ಅವರು ಮೋದಿ ಭಕ್ತರಾಗಬಹುದು, ರಾಘವೇಶನ ಭಕ್ತರಾಗಿರಬಹು, ಅರ್ಜುನ ಸರ್ಜರಂತಹ ನಟರ ಭಕ್ತರಾಗಿರಬಹುದು. ಸಿದ್ಧರಾಮಯನಂತ ಅಹಿಂದ ಭಕ್ತರಾಗಿರಬಹುದು. ಒಟ್ಟಿನಲ್ಲಿ ಅವರು ಭಕ್ತರು ಅಷ್ಟೇ. ಅವರ ತಲೆಯಲ್ಲಿ ಮಿದುಳಿರಬೇಕಾದ ಜಾಗದಲ್ಲಿ ಇನ್ನೆನೋ ಇರುತ್ತದೆ! ಅಂತಹ ಚರಂಡಿಹುಳಗಳ ಬಳಗ ಪ್ರೇಮಲತಾ ಬಗ್ಗೆ ಅತ್ಯಂತ ಅಸಹ್ಯವಾಗಿ ಮಾತಾಡುತ್ತಾರೆಯೇ ವಿನಃ ತಮ್ಮ ಗುರುಗಳ ಮೇಲಾದ ಚಾರ್ಜ್ ಶೀಟ್ ಬಗ್ಗೆ ತುಟಿ ಪಿಟಕ್ ಎನ್ನುವುದಿಲ್ಲ. ಚಾರ್ಜ್ ಶೀಟಿನಲ್ಲಿ ಆ ಸ್ವಾಮೀಜಿ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ಇಪ್ಪತ್ತಾರು ಮಹಿಳೆಯರ ಹೆಸರು , ವಿಳಾಸ ಸಮೇತ ಉಲ್ಲೇಖವಾಗಿದೆ. ಆದರೂ ಭಕ್ತರ ಕಣ್ಣಿನ ಪೊರೆ ಕಳೆದಿಲ್ಲ.

 ಶ್ರುತಿಹರಿಹರನ್ ಎದುರು ಹಾಕಿಕೊಂಡದ್ದು ಬಹುತೇಕ ಇಡೀ ಕನ್ನಡ ಚಿತ್ರರಂಗವನ್ನು. ಸ್ಟಾರ್ ನಟನ ಅಭಿಮಾನಿ ಪಡೆಯನ್ನು. ಚರಂಡಿ ಯಾವುದಾದರೇನು? ಹುಳುಗಳೆಲ್ಲಾ ಒಂದೇ ಪ್ರಭೇದಕ್ಕೆ ಸೇರಿದವುಗಳು! ಮೀಟೂ ಪ್ರಕರಣದ ಜ್ವಾಲೆ ಇನ್ನೂ ಜೀವಂತವಾಗಿರುವಾಗಲೇ ಅವಳ ಸಿನೇಮಾ ಗೆಲ್ಲಲು ಬಿಡುವರೇ? ಅಡ್ಡಗಾಲು ಹಾಕಿಯೇ ಹಾಕುತ್ತಾರೆ. ಉಳಿದವರು ಬಿಡಿ, ನಾತಿಚರಾಮಿ ಚಿತ್ರತಂಡವೇ ಅವಳ ಬೆನ್ನಿಗೆ ನಿಂತ ಹಾಗೆ ಕಾಣುತ್ತಿಲ್ಲ.  ಅಡಿಯೋ ರಿಲೀಸ್, ಟೀವಿ ಡಿಸ್ಕಷನ್ ಸೇರಿದಂತೆ ಸಿನೇಮಾ ಬಿಡುಗಡೆಗೆ ಸಂಬಂಧಪಟ್ಟ ಯಾವ ಚಟುವಟಿಕೆಗಳಲ್ಲೂ ಶ್ರುತಿ ಕಾಣಿಸಿಕೊಂಡದ್ದು ನನಗಂತೂ ಕಾಣಿಸಲಿಲ್ಲ. ಪ್ರೇಮಲತಾ ಪ್ರಕರಣದಲ್ಲಿ ಮೊದಲಿಗೆ ಆಕೆಯ ಇಡೀ ಕುಟುಂಬ ಏಕಾಂಗಿಯಾಗಿ ಹೋರಾಡಿತು, ಶ್ರುತಿ ಕೂಡಾ ಈಗ ಏಕಾಂಗಿಯಾಗಿ ಉಳಿದಿದ್ದಾರೆ ಅನ್ನಿಸುತ್ತಿದೆ. 

ಕೇವಲ ಸಿನೇಮಾ ಪ್ರಚಾರಕ್ಕಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲುತ್ತಿರುವ ಈ ಹೊತ್ತಿನಲ್ಲಿ ನಾತಿಚರಾಮಿ ತಂಡ ಪ್ರಚಾರವನ್ನು ತೀರಾ ಕಡೆಗಣಿಸಿದೆ. ಕೇವಲ ಸೋಷಿಯಲ್ ಮೀಡಿಯಾವನ್ನು ಮಾತ್ರ ನೆಚ್ಚಿಕೊಂಡಿದೆ. ಆದರೆ ಸೋಷಿಯಲ್ ಮೀಡಿಯಾ ಅನ್ನುವುದು ಭಕ್ತರ ಅಡುಂಬೊಲ. ಅವು ಗುಂಪುಕಾಗೆಗಳು. ಮೊನ್ನೆ ಜನಪ್ರಿಯ ಟೀವಿಯ ಧಾರವಾಹಿಯ ನಿರ್ದೇಶಕರೊಬ್ಬರು ಚಿತ್ರಕ್ಕೆ ಶುಭ ಹಾರೈಸಿ ಪೋಸ್ಟ್ ಹಾಕಿದರು. ತಕ್ಷಣವೇ ಕಾಗೆಯೊಂದು ಹಾರಿ ಬಂದು ಶ್ರುತಿ ಹರಿಹರನ್ ಅಭಿನಯಿಸಿದ ಚಿತ್ರವನ್ನು ನಾನು ನೋಡುವುದಿಲ್ಲ ಎಂದು ಹಿಕ್ಕೆ ಹಾಕಿತು. ಪಾಪ, ಅವರು ಆ ಪೋಸ್ಟ್ ಅಳಿಸಿಯೇಬಿಟ್ಟರು! ಆಮೇಲೆ ಕಾಗೆಗಳ ಗುಂಪು ಎಲ್ಲೆಲ್ಲೋ ಹಿಕ್ಕೆ ಮಾಡುತ್ತಾ ಸಂಚರಿಸುತ್ತಿದ್ದುದನ್ನು ನೋಡಿದೆ. ಅಂದು ಈ ಗುಂಪು ಸ್ವಾಮೀಜಿಯ ಪರವಾಗಿ ನಿಂತಿತು. ಇಂದು ಈ ಗುಂಪು ಶ್ರುತಿ ವಿರುದ್ಧವಾಗಿ ನಿಂತಿದೆ.ಸಂಪ್ರದಾಯಿಕ ಸಿನೇಮಾ ಪ್ರಮೋಟರ್ಸ್ ಮೌನದ ಮೊರೆ ಹೋಗಿದ್ದಾರೆ. ಮೌನ ಯಾವಗಲೂ ವ್ಯವಸ್ಥೆಯನ್ನು ಪೋಷಿಸುತ್ತಿರುತ್ತದೆ. ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ. ಇದೆಲ್ಲದರ ನಡುವೆಯೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಮೆಲ್ಲ ಮೆಲ್ಲನೆ ಪ್ರಸಾರಿಸುತ್ತಿದೆ. ಅದೊಂದು ಆಶಾದಾಯಕ ಬೆಳವಣಿಗೆ

ಈ ಕಾಗೆಗಳ ಗುಂಪು ಬಿಡಿ. ಕಂಪರ್ಟ್ ಝೋನ್ ನಲ್ಲಿರುವ ಕೆಲ ಮಹಿಳೆಯರು ಕೂಡಾ ‘ಅವಳು ನ್ಯಾಯಾಲಯದ ಅಗ್ನಿದಿವ್ಯದಲ್ಲಿ ಗೆದ್ದು ಬರಲಿ, ಅಲ್ಲಿಯವರೆಗೆ ನನ್ನದು ತಟಸ್ಥ ನಿಲುವು’ ಎನ್ನುತ್ತಾರೆ. ಇವರು ಪ್ರೇಮಲತಾ ಪರವಾಗಿಯೂ ನಿಲ್ಲುವುದಿಲ್ಲ, ಶ್ರುತಿ ಹರಿಹರನ್ ಪರವಾಗಿಯೂ ನಿಲ್ಲುವುದಿಲ್ಲ. 

ಪರ ವಹಿಸಲೇಬೇಕಾದ ಸಂದರ್ಭಗಳಲ್ಲಿ ಕೂಡಾ ತಟಸ್ಥ ನಿಲುವು ತಾಳುವುದು  ವ್ಯವಸ್ಥೆಯನ್ನು ಸಮರ್ಥಿಸಿಕೊಂಡತೆಯೇ ಆಗುತ್ತದೆ. ಲಿಂಗಸಮಾನತೆಯ ಹೋರಾಟದ ಸಂದರ್ಭಗಳಲಂತೂ ಅದು  ಮಹಿಳಾ ವಿರೋಧಿ ನಿಲುವೇ ಆಗಿರುತ್ತದೆ..ಇಂತವರಿಗೆ ಹೇಗೆ ತಿಳಿಸಿಹೇಳುವುದು,?

ನಾತಿಚರಾಮಿ ಎಂಬ ಸಿನೇಮಾವನ್ನು ನೋಡಿದಾಗ ನನಗೆ ನೆನಪಾಗಿದ್ದು ಭವಭೂತಿಯ ‘ಕಟ್ಟಿಯುಮೆನೋ ಮಾಲೆಗಾರನ ಪೊಸ  ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ?’ ಎಂಬ ಭವಭೂತಿಯ ನಿರಿಕ್ಷೆಯಿಂದ ಕೂಡಿದ  ನೋವಿನ ಉದ್ಘಾರ. ನಿರ್ಧೇಶಕ ಮುಂಸೋರೆಯವರು ಅಷ್ಟು ಸೊಗಸಾದ ಹೂಮಾಲೆಯನ್ನು ಪೋಣಿಸಿದ್ದಾರೆ. ಆದರೆ ಅದನ್ನು ಅಘ್ರಾಣಿಸಿ, ಮುಡಿಗೇರಿಸಿಕೊಳ್ಳುವ ರಸಿಕರು ಇಲ್ಲದೆ ಹೋದರೆ ಏನು ಪ್ರಯೋಜನ? ನಾತಿಚಾರಮಿ ಗೆಲ್ಲಬೇಕು, ಅದು ಗೆದ್ದರೆ ಶ್ರುತಿಹರಹರನ್ ಗೆದ್ದಂತೆ. ಅದಕ್ಕಾಗಿ ಚಿತ್ರತಂಡ ಪ್ರಚಾರಕ್ಕಾಗಿ ನಟಿಯನ್ನೇ ಮುನ್ನಲೆಗೆ ತರಬೇಕಾಗಿತ್ತು. ಅದರೆ ಅವರು ಹಿನ್ನೆಲೆಯಲ್ಲೇ ಉಳಿದುಬಿಟ್ಟರು. ಸುಮ್ಮನಾಗಿಬಿಟ್ಟರು


ಒಂದು ವೇಳೆ ಚಿತ್ರದಂಡ ಬಾಕ್ಸ್ ಆಪೀಸ್ ಬಗ್ಗೆ ತಲೆಕೆಡಿಸಿಕೊಳ್ಳದೆ, ಕೇವಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರೆ ಅವರಿಗೆ ನಿರಾಶೆಯಾಗಲಾರದು. ಪ್ರಶಸ್ತಿಗಳ ಸುರಿಮಳೆಯೇ ಆಗಬಹುದು!.

·         ಉಷಾಕಟ್ಟೆಮನೆ.