Saturday, February 9, 2019

ಮಕ್ಕಳನ್ನು ಹುಟ್ಟಿಸುವುದು ಬೇಡ’ ಏಕೆ?


ವಿವಾಹಿತ ಸ್ತೀಯೊಬ್ಬಳು ತಾನು ಮಗುವನ್ನು ಹೆರಲಾರೆ ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಬಹುಶಃ ಸಾಧ್ಯವಿಲ್ಲ. ಮಕ್ಕಳನ್ನು ಹಡೆದು ವಂಶವನ್ನು ಮುಂದುವರಿಸುವುದೇ ಮದುವೆಯ ಮುಖ್ಯ ಉದ್ದೇಶ. ಆದರೆ ಮದುವೆಯಾದ ದಂಪತಿಗಳು ತಾವು ಮಕ್ಕಳನ್ನು ಪಡೆಯುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ? ಆ ನಿರ್ಧಾರಕ್ಕೆ ತಾತ್ವಿಕ ತಳಹದಿಯೂ ಇದ್ದಾಗ ಅದರ ಬಗ್ಗೆ ಸ್ವಲ್ಪ ಯೋಚಿಸಲೇ ಬೇಕು.

ಮಧ್ಯವಯಸ್ಸಿನ ಅಂಚಿನಲ್ಲಿ ನಿಂತು ಹಿಂದಿರುಗಿ ನೋಡಿದಾಗ ನನಗಾಗಿ, ನನ್ನವರಿಗಾಗಿ ಮತ್ತು ಸಮಾಜಕ್ಕಾಗಿ ಬದುಕಿದ ಕಾಲಾವಧಿಯನ್ನು  ಅವಲೋಕಿಸಿಕೊಂಡಾಗ ಒಂದು ಸಣ್ಣ ವ್ಯಥೆ ಆವರಿಸಿಕೊಳ್ಳುತ್ತದೆ. ಬದುಕು ಮುಗಿದೇ ಹೋಯ್ತಲ್ಲಾ ಅನ್ನಿಸಿ ಖಿನ್ನಳಾಗುತ್ತೇನೆ.

ಒಂದು ವೇಳೆ ನಾನು ಮದುವೆಯೇ ಆಗದಿರುತ್ತಿದ್ದರೆ? ಮದುವೆಯಾಗಿಯೂ ಮಕ್ಕಳನ್ನು ಹೊಂದುಬಾರದು ಎನ್ನುವ ನಿರ್ಧಾರ ಮಾಡಿದ್ದರೆ? ನನ್ನ ಬದುಕು ಹೀಗಿರದೆ ಇನ್ಯಾವ ರೀತಿಯಲ್ಲಿರುತ್ತಿತ್ತು?

 ಈ ‘ರೇ’ ಸಾಮ್ರಾಜ್ಯದ ಹರವು ತುಂಬಾ ದೊಡ್ಡದು. ಅದು ಅನಂತ, ಅನೂಹ್ಯ. ಬಹುಶಃ ನನ್ನ ಬದುಕು ಈಗಿನಂತಿಲ್ಲದೆ ಬೇರ್ಯಾವುದೋ ರೀತಿಯಲ್ಲಿ ಇದ್ದಿದ್ದರೂ ಆಗಲೂ ‘ನನ್ನ ಬದುಕು ಇದಲ್ಲ. ನಾನು ಇಲ್ಲಿಗೆ ಸೇರಿದವಳಲ್ಲ’ ಅಂತ ಅಂದುಕೊಳ್ಳುತ್ತಾ, ಕವಲು ಹಾದಿಯಲ್ಲಿ  ಖಿನ್ನಳಾಗಿ ನಿಂತಿರುತ್ತಿದ್ದೆನೇನೋ ಎನಿಸುತ್ತದೆ.

ನಿಜ,  ಮಹಿಳೆ ಓದಬೇಕು, ತನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕು, ಸ್ವಾಭಿಮಾನದಿಂದ ಬದುಕಬೇಕು, ಮದುವೆ ಅವಳದೇ ಆಯ್ಕೆ ಆಗಿರಬೇಕು, ಎಂಬುದು ನನ್ನ ಕಾಲಘಟ್ಟದ ಮಹಿಳೆಯ ಮುಖ್ಯ ಚಿಂತನೆಯಾಗಿತ್ತು. ಮುದುವೆಯನ್ನು ನಿರಾಕರಿಸಿಯೂ  ಬದುಕಬಹುದಾದ ವಾತಾವರಣವೂ ಸಮಾಜದಲ್ಲಿತ್ತು. ಆದರೆ ಮದುವೆಯಾಗಿಯೂ ಮಕ್ಕಳನ್ನು ಹೊಂದದ  ಬಗ್ಗೆ ನನ್ನ ಸ್ನೇಹವಲಯದಲ್ಲಿ ಚರ್ಚೆಯೇ ಆಗಿರಲಿಲ್ಲ. ಆದರೆ ಇಂದಿನ ತಲೆಮಾರು ಹಾಗಿಲ್ಲ. 

ನಿಸರ್ಗಕ್ಕಿರುವ ಸೃಷ್ಟಿ ಸಾಮರ್ಥ್ಯ ಮತ್ತು ಪಾಲನೆಯ ವಿಸ್ಮಯಕ್ಕೆ ಬೆರಗಾಗುತ್ತಾ ನಾನೂ ಅದರಲ್ಲಿ ಭಾಗಿದಾರಳು ಎಂಬ ಅಮಲಿನಲ್ಲಿ ವಿವಾಹ ಬಂಧನದ ಮೊದಲ ದಶಕವನ್ನು ಕಳೆದಿದ್ದೆ. ಆಮೇಲಿನ ಖಾಲಿತನವನ್ನು ಯಾವ್ಯವುದೋ ಸೃಜನಶೀಲ ಚಟುವಟಿಕೆಗಳಲ್ಲಿ ತುಂಬಿಕೊಳ್ಳಲು ಹೆಣಗಾಡುತ್ತಾ ಇದ್ದಾಗಲೇ ಮಗಳು ಹರೆಯಕ್ಕೆ ಕಾಲಿಟ್ಟಾಗಿತ್ತು. ಮದುವೆಯ ಬಗೆಗೆ ಅವಳಿಗಿರಬಹುದಾದ ನಿರೀಕ್ಷೆ, ಕುತೂಹಲಗಳ ಬಗ್ಗೆ ಪ್ರಶ್ನಿಸಿದಾಗ ಸಿಡಿಗುಂಡಿನಂತೆ ಬಂದೆರಗಿದ ಪ್ರಶ್ನೆ. ‘ಮದುವೆಯಿಂದ ನಿನಗೇನು ಸಿಕ್ಕಿತು? ಎರಡು ಮಕ್ಕಳನ್ನು ಹೊತ್ತು, ಹೆತ್ತು ಸಲಹಿದ್ದು ಬಿಟ್ಟರೆ ..? ನಾನು ಉತ್ತರಿಸಲು ತಡಬಡಾಯಿಸುತ್ತಿದ್ದಾಗಲೇ ಅವಳಿಂದ ಮತ್ತೊಂದು ಪ್ರಶ್ನೆ ತೂರಿ ಬಂತು. ‘ನಿನ್ಗೆ ಆಯ್ಂಟಿ ನೆಟಲಿಸಂ [anti natalisum] ಅನ್ನುವ ಹೆಸರು ಕೇಳಿದ್ದಿಯಾ?’ ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. ‘ಹಾಗೆಂದರೇನು? ಅಂದೆ. ಅವಳು ಎರಡು ವಾಕ್ಯದಲ್ಲಿ ಅದರ ಬಗ್ಗೆ ಹೇಳಿ david benatar ನ ಪುಸ್ತಕಗಳನ್ನು ಓದು ಅಂದಳು. ಅವಳು ಹಾಗೆಯೇ, ಆಗಾಗ ಅದನ್ನು ಓದು,  ಇದನ್ನು ನೋಡು ಎಂದು ಹಲವಾರು ಸಲಹೆಗಳನ್ನು ಕೊಡುತ್ತಿರುತ್ತಾಳೆ. ನಾನು ಅದರ ಬಗೆಗೆಲ್ಲಾ ದಿವ್ಯ ನಿರ್ಲಕ್ಯ ತಾಳುತ್ತಾ ನೆಟ್ಪ್ಲಿಕ್ಸ್ ನಲ್ಲಿ ಕೊರಿಯನ್ ಡ್ರಾಮಗಳಿಗೆ ಕಣ್ಣು ನೆಟ್ಟು ಕೂತಿರುತ್ತಿದ್ದೆ. ಆದರೆ ಪೇಸ್ಬುಕ್ ನಲ್ಲಿ ‘ಸ್ಟಾಪ್ ಮೇಕಿಂಗ್ ಬೇಬಿಸ್’ ಎಂಬ ಇವೆಂಟ್ ಗೆ ಅಹ್ವಾನ ಬಂದಾಗ ಅಯಂಟೀ ನೆಟಲಿಸಂ ಬಗ್ಗೆ ನಿಜವಾಗಿಯೂ ಕುತೂಹಲ ಹುಟ್ಟಿತು.

ಈಜು ಕಲಿಯಬೇಕೆಂದರೆ ದಡದಲ್ಲಿ ನಿಂತು ನೋಡಿದರಾಗದು ನೀರಿಗಿಳಿಯಲೇಬೀಕು. ಈವೆಂಟ್ ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿದೆ. ಈ ಬಗ್ಗೆ ನನ್ನ ಸ್ನೇಹ ವಲಯದಲ್ಲಿ ಪ್ರಸ್ತಾಪಿಸಿದೆ. ಮಹಿಳೆಯರು ಈ ಕಾನ್ಸೆಪ್ಟ್ ಬಗ್ಗೆ ಕುತೂಹಲ ತಾಳಿದರೆ ಪುರುಷರು ‘ಥತ್, ಇದೆಂತಹ ಯೋಚನೆ ಇವರಿಗೆಲ್ಲೋ ತಲೆ ಕೆಟ್ಟಿರಬೇಕು, ಹುಚ್ಚರು.’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಇಂತಹ ಪ್ರತಿಕ್ರಿಯೆ ಸಹಜವಾದುದೇ! ಸ್ವಂತಿಕೆಯುಳ್ಳ ಮಹಿಳೆಗೆ ಗೊತ್ತಿರುತ್ತೆ; ತನ್ನ ಗುಣಾತ್ಮಕವಾದ ಬದುಕಿನ ಮುಕ್ಕಾಲು ಭಾಗ ತಾಯ್ತನ ಮತ್ತು ಕುಟುಂಬದ ಸಂಭಾಳಿಸುವಿಕೆಯಲ್ಲಿಯೇ ಕಳೆದು ಹೋಗಿರುತ್ತದೆ ಅಂತ. ಇದನ್ನು ಧಿಕ್ಕರಿಸಿ  ಬದುಕಿದರೆ ಅವಳಿಗೆ ತಾನು ಯಾರು? ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿತುಕೊಳ್ಳಲು ಸಮಯಾವಕಾಶ ದೊರೆಯುತ್ತದೆ. ಸಂಪೂರ್ಣ ಬದುಕನ್ನು ಅವಳು ಬಾಳಬಹುದು

ಅಯ್ಂಟಿ ನೆಟಲಿಸ್ಟ್ ಎಂದರೆ ಹುಟ್ಟಿನ ಬಗ್ಗೆ  ವಿರೋಧ ಧೋರಣೆ ಹೊಂದಿರುವವರು. ಮಗುವಿಗೆ ಜನ್ಮನೀಡುವುದು ನೈತಿಕವಾಗಿ ತಪ್ಪು. ‘ಸ್ಟಾಪ್ ಮೇಕಿಂಗ್ ಬೇಬಿಸ್,’  ‘ಚೈಲ್ಡ್ ಪ್ರೀ ಇಂಡಿಯಾ’ ಎಂಬ ಹೆಸರಿನಡಿ ಚರ್ಶೆಯಾಗುತ್ತಿರುವ ಹೀಗೊಂದು ವಾದಕ್ಕೆ ಪ್ರಚಾರ ಮತ್ತು ವೇಗ ಸಿಕ್ಕಿದ್ದು ಮೊನ್ನೆ ಮೊನ್ನೆ ಮುಂಬಯಿಯ ರಪೈಲ್ ಸಾಮ್ಯುವೆಲ್ ಎಂಬ ವ್ಯಕ್ತಿ ತನ್ನ ತಂದೆತಾಯಿಯರ ಮೇಲೆ ‘ನನ್ನ ಒಪ್ಪಿಗೆಯಿಲ್ಲದೆ ನನ್ನನ್ನು ಈ ಭೂಮಿಗೆ ಯಾಕೆ ಕರೆತಂದಿರಿ?’ ಎಂದು ಕೋರ್ಟಿನಲ್ಲಿ ದಾವೆ ಹೂಡಿದಾಗಲೇ. ಈಗ ‘ಸ್ಟಾಪ್ ಮೇಕಿಂಗ್ ಬೇಬಿಸ್’ ಎಂಬ ಸಂವಾದವೊಂದು ನಾಳೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದು ಭಾರತದಲ್ಲಿ ನಡೆಯುತ್ತಿರುವ ಮೊತ್ತಮೊದಲ ಸಂಘಟಿತ ವೇದಿಕೆ.

ಮೇಲಿನ ಸಂಘಟನೆ ಮತ್ತು ಸಾಮ್ಯೂವೆಲ್ ನಡೆ ನೋಡಿದರೆ ಈ  ಚರ್ಚೆ ಕೇವಲ ಮಕ್ಕಳನ್ನು ಹುಟ್ಟಿಸಬೇಡಿ ಎಂಬುದಕಷ್ಟೇ ಸೀಮಿತವಾಗಿದೆಯೇ? ಎಂಬ ಸಂಶಯ ಮೂಡುತ್ತದೆ. ಆದರೆ ಡೆವಿಡ್ ಬೆನೆತರ್ ನನ್ನು ಓದಿಕೊಂಡವರಿಗೆ ಗೊತ್ತಿದೆ, ಇದು ಇಷ್ಟೇ ಅಲ್ಲ.

ದೆವಿಡ್ ಬೆನೆತರ್ ದಕ್ಷಿಣ ಅಪ್ಪ್ರಿಕಾ ದ ಒಬ್ಬ ಫಿಲಾಸಪರ್ ಮತ್ತು ಬರಹಗಾರ. ಆತ ಹೇಳುತ್ತಾನೆ. ‘ಹುಟ್ಟು ಎನ್ನುವುದು ನಕಾರಾತ್ಮಕವಾದುದು. ಮುಗುವಿಗೆ ಜನ್ಮ ನೀಡುವುದು ನೈತಿಕವಾಗಿ ತಪ್ಪು. ಹುಟ್ಟಿನಿಂದ ಮನುಷ್ಯ ಒಂದೇ ದೃಷ್ಟಿಯಲ್ಲಿ ಕೊಳೆಯುವ ಸ್ಥಿತಿಯತ್ತ ಜಾರುತ್ತಾ ಹೋಗುತ್ತಾನೆ. ಈ ಮಧ್ಯದಲ್ಲಿ ಆತ\ಅವಳು ಅನೇಕ ತರಹದ ದೈಹಿಕ ನೋವು, ಡಿಪ್ರೆಶನ್, ಅನ್ಯರ ಧೂಶಣೆ, ಗಾಸಿಪ್, ಮೋಸ, ವಂಚನೆಗಳ ಕಾರಣದಿಂದಾಗಿ ಮಾನಸಿಕ ಹಿಂಸೆಗಳಿಗೆ ತುತ್ತಾಗುತ್ತಾನೆ. ಇದರಿಂದ ಪಾರಾಗುವುದಕ್ಕೆ ಆತ ಜೀವನದುದ್ದಕ್ಕೂ ಹೆಣ್ಗಾಡಬೇಕಾಗುತ್ತದೆ,  ಸಂಗೀತ, ಸಾಹಿತ್ಯ ನೃತ್ಯ ಮುಂತಾದ ಸೃಜನಶೀಲ ಚಟುವಟಿಕೆಗಳ ಮೊರೆ ಹೋಗುತ್ತಾನೆ. ರಿಲಿಜಿಯನ್ ,ವಿಜ್ನಾನ, ದೇವರು ಮುಂತಾದಗಳನ್ನು ರಕ್ಷಣಾತ್ಮಕವಾಗಿ ಬಳಸಿಕೊಳ್ಳುತ್ತಾನೆ. ಆದರೆ ಇವೆಲ್ಲಾ ನೋವಿಗೆ ಹಚ್ಚುವ ಮುಲಾಮ್ ಗಳಷ್ಟೇ. ಇವು ಆಳದ ನೋವನ್ನು ಶಮನಗೊಳಿಸಲಾರದು. 

.ಇಂತಹ ಸಂಕಷ್ಟಗಳಿಗೆ ಮಕ್ಕಳನ್ನು ದೂಡಬೇಕೇ? ಎಂದು ಬೆನೆತರ್ ಪ್ರಶ್ನಿಸುತ್ತಾನೆ. ಹಾಗಾಗಿ ಹುಟ್ಟದೇ ಇದ್ದರೆ ನೋವೇ ಇರೋದಿಲ್ಲ, ಹುಟ್ಟು ಎನ್ನುವುದೇ ಅತ್ಯಂತ ಯಾತನಾಮಯವಾದುದು,. ಎಂಬುದು ಬೆನೆತರ್ ನ ವಾದ. ಸೋಜಿಗದ ವಿಷಯವೆಂದರೆ ಅಯಂಟಿ ನ್ಯಾಟಲಿಸಂಗೆ ಒಂದು ತಾತ್ವಿಕ ತಲಹದಿಯನ್ನು ತಂದು ಕೊಟ್ಟ ಈ ಬೆನೆತರ್ ತನ್ನ ಖಾಸಗಿತನವನ್ನು ಬಲು ಜತನದಿಂದ ಕಾಪಾಡಿಕೊಂಡಿದ್ದಾನೆ. ಆತನ ಕೌಟುಂಬಿಕ ಬದುಕಿನ ಬಗ್ಗೆ ಹೊರಪ್ರಪಂಚಕ್ಕೆ ಏನೇನೂ ಗೊತ್ತಿಲ್ಲ. ಆತನ  ಒಂದು ಭಾವಚಿತ್ರವೂ ಪ್ರಪಂಚಕ್ಕೆ ಬಿಡುಗಡೆಯಾಗಿಲ್ಲ.  ಅತನ ಸಂದರ್ಶ ಮಾಡಿದ್ದು ಬಹುಶಃ ಒಂದೇ ಒಂದು ಪತ್ರಿಕೆ, ಅದು the new Yorker. ಅದರಲ್ಲಿ ಅವರನ್ನು ಪ್ರಪಚಂದ ಅತಿ ದೊಡ್ಡ ನಿರಾಶವಾದಿ ತತ್ವಜ್ನಾನಿ ಎಂದು ಕರೆದಿದೆ

 ಪ್ರಸಿದ್ಧ ತತ್ವಜ್ನಾನಿ ಇಮ್ಯಾನುವಲ್ ಕ್ಯಾಂಟ್ ಕೂಡಾ  ‘ಮಗುವನ್ನು ಮಗುವಿಗಾಗಿಯೇ, ಮಗುವಿಗೋಸ್ಕರವಾಗಿಯೇ ಹುಟ್ಟಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾನೆ. 
ಮಗುವನ್ನು ಹುಟ್ಟಿಸುವುದೇ ಬೇಡ ಎನ್ನುವ ಮೇಲಿನ ವಾದದ ಸಮರ್ಥನೆಗೆ ಅವರು ಕೊಡುವ ಕಾರಣ್ಗಳು ತೆಳುವಾಗಿದೆ ಎಂದು ಲೌಕಿಕದಮೋಹಿತರಿಗೆ ಅನ್ನಿಸಬಹುದು. ಆದರೆ ಪರಿಸರವಾದಿಗಳು, ಸ್ತೀವಾದಿಗಳು, ಮನುಷ್ಯ ಕ್ರಮೇಣ ಭೂಮಿಯಿಂದ ಕಣ್ಮರೆಯಾಗಬೇಕು [ voluntary Human Extinction movement] ಎಂದು ವಾದಿಸುವ ಪ್ರಾಣಿಪ್ರಿಯರು, ಒಟ್ಟಿನಲ್ಲಿ ಈ ಭೂಮಂಡಲವನ್ನು ನಮ್ಮ ಮುಂದಿನ ಪೀಳಿಗೆಗಾಗಿ ಸುರಕ್ಷಿತವಾಗಿ, ವಾಸಯೋಗ್ಯವಾಗಿ ಸುಸ್ಥಿತಿಯಲ್ಲಿ ಇಡಬೇಕೆಂದು ವಾದಿಸುವವರೆಲ್ಲಾ ಬೆನೆತರ್ ನ ತತ್ವವನ್ನು ಭಾಗಶಃ ಒಪ್ಪಿಕೊಳ್ಳುತ್ತಿದ್ದಾರೆ.

ನಮ್ಮ ಸುತ್ತಮುತ್ತ ಇರುವ ಮಕ್ಕಳಿಗೆ ಬಾಲ್ಯದ ಮುದವಿಲ್ಲ. ಮುಗ್ದತೆಯಿಲ್ಲ. ನಮ್ಮ ಯುವಜನತೆ ಯಾರದೋ  ಆಸೆ ಅಕಾಂಕ್ಷೆಗಳಿಗಾಗಿ ತಮ್ಮ ಯೌವನವನ್ನು ಬಲಿಗೊಡುತ್ತಿದ್ದಾರೆ, ಪ್ರೌಢರು ಮಕ್ಕಳು ಮರಿಗಳಿಗಾಗಿ ತಮ್ಮ ಅರೋಗ್ಯವನ್ನು ಲೆಕ್ಕಿಸದೆ ದುಡಿಯುತ್ತಿದ್ದಾರೆ. ಇವರೆಲ್ಲರ ದುಡಿಮೆಯಲ್ಲಿ ಕೆಲವೇ ಮಂದಿ ಶ್ರೀಮಂತರು ಐಷಾರಾಮ್ಯದ ಬದುಕನ್ನು ಬದುಕುತ್ತಿದ್ದಾರೆ. ವೃದ್ಧರು ಅನಾಥಪ್ರಜ್ನೆಯಲ್ಲಿ, ನೋವಿನಲ್ಲಿ ದಿನದೂಡುತ್ತಾರೆ. ಮಗುವೊಂದರ ಸ್ಥಿತ್ಯಂತರಗಳು ಇವು. ಈ ಭೂಮಿಯ ಮೇಲೆ ನಮಗಿಂತಲೂ ಮೊದಲು ಹುಟ್ಟಿದ ಈ ನೆಲದ ಸಹಜ ಸಂತಾನವಾದ ಪ್ರಾಣಿಗಳನ್ನು ಹಿಂಸಾಪ್ರಿಯ, ಸ್ವಾರ್ಥಿ ಮಾನವ ತನಗೆ ಬೇಕಾದಂತೆ  ಬಳಸಿಕೊಳ್ಳುತ್ತಿದ್ದಾನೆ. ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾನೆ. ಹಾಲಿಗಾಗಿ, ಮಾಂಸಕ್ಕಾಗಿ ಔಷಧಿಯ ಪ್ರಯೋಗಗಳಿಗಾಗಿ ಅವುಗಳಿಗೆ ಹಾರ್ಮೋನ್ ಇಂಜಕ್ಷನ್ ಚುಚ್ಚಿ ನರಳಿಸುತ್ತಾನೆ. ಚಿತ್ರಹಿಂಸೆ ನೀಡುತ್ತಾನೆ.ಇಂತಹ ನೋವು ತುಂಬಿದ ಜಗತ್ತಿಗೆ ನಮ್ಮ ಮಕ್ಕಳನ್ನು ದೂಡಲು ನಮಗೇನು ಹಕ್ಕಿದೆ?  ಆವು ‘ನಾನು ಹುಟ್ಟಬೇಕು’ ಎಂದು ನಮ್ಮನ್ನೇನೂ ಕೇಳಿಲ್ಲವಲ್ಲಾ! ನಮ್ಮ ಖುಷಿಗಾಗಿ, ನಮ್ಮ ನೆಮ್ಮದಿಯ ನಾಳೆಗಳಿಗಾಗಿ ಮಕ್ಕಳನ್ನು ಹುಟ್ಟಿಸಿಕೊಂಡಿದ್ದೇವೆ. ಕೆಲವೊಮ್ಮೆ ಅದು ಆಕಸ್ಮಿಕವೂ ಆಗಿರಬಹುದು. ಪಿತೃ ಪ್ರಧಾನವಾದ ನಮ್ಮ ದೇಶದಲ್ಲಿ ಮಕ್ಕಳ ಹುಟ್ಟಿಸುವಿಕೆಗೆ ಘನವಾದ ಉದ್ದೇಶವಿದೆ. ಇಲ್ಲಿ ಮಹಿಳೆ ಕೇವಲ ಸಂಸ್ಕೃತಿ ವಾಹಕಳಷ್ಟೇ!  ಅಂದರೆ ಮಗು ಬೇಡವೆಂದು ಯಾವುದಾದರು ದಂಪತಿ ತೀರ್ಮಾನಿಸಿದರೆ ಆ ತೀರ್ಮಾನ ಈಗಿನ ಪರಿಸ್ಥಿತಿಯಲ್ಲಿ  ಸಮಂಜಸವಾದುದೇ. ಅವರು ವೈಯಕ್ತಿಕವಾಗಿ ತಮ್ಮ ಕ್ಷೇತ್ರದಲ್ಲಿ ಬಹಳಷ್ಟನ್ನು ಸಾಧಿಸಬಹುದು, ತನಗೆ ಬದುಕಲು ಎಷ್ಟು ಬೇಕೋ ಅಷ್ಟು ಮಾತ್ರ ದುಡಿಯಬಹು. ದೇಶವಿದೇಶಗಳನ್ನು ಸುತ್ತಬಹುದು. ಸಂಸಾರಕ್ಕಾಗಿ, ತನ್ನ ಮುಂದಿನ ಪೀಳಿಗೆಗಾಗಿ ದುಡಿದು ದುಡ್ಡು ಉಳಿಸಬೇಕು,ಆಸ್ತಿಪಾಸ್ತಿ ಮಾಡಿಡಬೇಕು ಎಂಬ ಯಾವ ಜಂಜಾಟವೂ ಇರೋದಿಲ್ಲ. ಪ್ರಾಂಜಲ ಮನಸ್ಸಿನಿಂದ ಸಮಾಜ ಸೇವೆ ಮಾಡ್ಬಹುದು. ಸಂಪತ್ತು ಜಾಸ್ತಿಯಾಗಿದ್ದರೆ ನಿರ್ಭಾಗ್ಯರಿಗೆ ಹಂಚಬಹುದು. ಸತ್ತ ಮೇಲೆ ಈ ಭೂಮಿಯ ಮೇಲೆ ಯಾವ ಕಾರ್ಬನ್ ಪ್ರಿಂಟ್ ಉಳಿಯದು.ಅಭಿವೃದ್ಧಿಯ ಹೆಸರಲ್ಲಿ ಜನವಸತಿಗಾಗಿ ಕಾಡು ಒತ್ತುವರಿಯಾಗುತ್ತಿವೆ ಜಲಮೂಲಗಳು ಬತ್ತುತ್ತಿವೆ. ಕಾಡುಪ್ರಾಣಿಗಳು ನೀರು ನೆಲೆಯಿಲ್ಲದೆ ನರಳುತ್ತವೆ. ಪ್ರತಿವರ್ಷವೂ ನೂರಾರು ಪಕ್ಷಿ, ಪ್ರಾಣಿಪ್ರಭೇಧಗಳು ಈ ಭೂಮಿಯಿಂದ ಕಣ್ಮರೆಯಾಗುತ್ತಿವೆ.
ಭೂಮಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಎಂದೂ ವರ್ಧಿಸಲಾರದು. ಅದಕ್ಕೆ ಮಿತಿಯಿದೆ. ಅದೊಂದು ದಿನ ಖಾಲಿಯಾಗಬಹುದು. ಆದರೆ ಜನಸಂಖ್ಯೆ ವರ್ಧಿಸುತ್ತಲೇ ಇದೆ. ಅದಕ್ಕೆ ಕಡಿವಾಣ ಹಾಕಲೇಬೇಕು

ನಾಳೆ ನಡೆಯಲಿರುವ ಸಂವಾದ ಇಷ್ಟೆಲ್ಲಾ ವಿಶಾಲರ್ಥದಲ್ಲಿ ಯೋಚಿಸಿದೆಯಾ? ಗೊತ್ತಿಲ್ಲ.
ನನ್ನ ತಲೆಮಾರಿನ ಚಿಂತಕರೊಬ್ಬರ ತಲೆಯಲ್ಲಿ ಮೂಡಿದ ವಿಚಾರವನ್ನು ನನ್ನ ಮಕ್ಕಳ ತಲೆಮಾರಿನ ಒಂದಷ್ಟು ಜನ ಸೇರಿಕೊಂಡುಕೊಂಡು ಸಂವಾದಕ್ಕೆ ಒಡ್ಡುತ್ತಿದ್ದಾರೆ. ಮುಂದೊಂದು ದಿನ ಅದು ಆಂದೋಲನದ ರೂಪವನ್ನು ಪಡೆಯಲೂಬಹುದು.*ಉಷಾಕಟ್ಟೆಮನೆ.