Thursday, December 27, 2012

ಪೂರ್ಣಾಹುತಿಯ ಸಮಯದಲ್ಲೇಕೆ ಬಂತು ವಿಶ್ವಾಮಿತ್ರ ಹಸ್ತ..?!ಅಂದು ನಾನಿನ್ನೂ ಪುಟ್ಟ ಬಾಲೆ. ಕನಸಿನ ಕೋಟೆಗೆ ಲಗ್ಗೆಯಿಡುವ ಕಾಲ. ಆಕಾಶದಿಂದ ಇಳಿಬಿಟ್ಟ ಹೂವಿನುಯ್ಯಾಲೆಯಲ್ಲಿ ಕುಳಿತಿದ್ದೆ. ಅರೆಗಣ್ಣು ಮುಚ್ಚಿತ್ತು. ಸಪ್ತ ಸಮುದ್ರದಾಚೆಯಿಂದ ಬಿಳಿಯ ಕುದುರೆಯನ್ನೇರಿ ನೀನು ಬಂದೆ. ಕಯ್ಯಲ್ಲಿ ಕುಂಚವಿತ್ತು. ಕಣ್ಣುಗಳಲ್ಲಿ ತುಂಟತನವಿತ್ತು. ನಿರಂತರ ನಾಲ್ಕು ವರ್ಷಗಳ ಕಾಲ ನನ್ನ ಹೃದಯವನ್ನೇ ನೀ ಕ್ಯಾನ್ವಾಸ್ ಮಾಡಿಕೊಂಡೆ. ಒಂದು ದಿನ ಇದರ ಮೇಲೆ ಜಡಿ ಮಳೆ ಸುರಿಯಿತು...

ನೀನು ನನ್ನ ಎದೆಯ ಚೆತ್ತಾರಕ್ಕೆ ತಣ್ಣಿರು ಎರಚಿದ ದಿನ ನಾನು ಎಷ್ಟೊಂದು ಅತ್ತಿದ್ದೆ. ನೀನು ಕೂಡಾ ಅಳುತ್ತಿದ್ದೆ.ನಿನ್ನ ಕಣ್ಣೀರು ನನಗೆ ಕಾಣಬಾರದೆಂದು ನನಗೆ ಬೆನ್ನುಮಾಡಿ ಚಾಪೆಯ ಮೇಲೆ ಕುಳಿತ್ತಿದ್ದೆ. ಹೆಣ್ಣು ಹೃದಯ ನೋಡು ನನ್ನದು, ಬಿಕ್ಕಳಿಸಿ ಅಳುತ್ತಿದ್ದೆ. ಜೀವ ಚೈತನ್ಯವೇ ಉಡುಗಿಹೋದಂತಾಗಿ ನಿನ್ನ ಬೆನ್ನ ಮೇಲೆ ಮುಖವಿಟ್ಟಿದ್ದೆ. ಇಡೀ ಒಂದು ರಾತ್ರಿ ನಿನ್ನ ಬೆನ್ನ ಮೇಲೆ ಕಣ್ಣೀರಿನಲ್ಲಿ ಚಿತ್ತಾರ ಬಿಡಿಸಿದ್ದೆ. ಹೇಳು ಶರೂ, ನಿಜವಾಗಿಯೂ ನನ್ನಲ್ಲಿ ನಿನಗೆ ಪ್ರೀತಿಯಿರುತ್ತಿದ್ದರೆ ನೀನು ನನ್ನನ್ನು ಎದೆಗವಚಿಕೊಂಡು ಸಂತೈಸುತ್ತಿರಲಿಲ್ಲವೇ?

ಈಗ ಅರ್ಥವಾಗುತ್ತಿದೆ; ಆಗ ನೀನು ತುಂಬಾ ಹಿರಿಯನಾಗಿದ್ದೆ. ನಾನು ಚಿಕ್ಕವಳಿದ್ದೆ. ಮಾದರಿಗಳನ್ನು,ಆದರ್ಶ ವ್ಯಕ್ತಿಗಳನ್ನು ಆರಾಧಿಸುವ ವಯಸ್ಸು ಅದು. ನನ್ನ ಪ್ರೀತಿಗೆ ನೀನು ಮಾದರಿಯಾಗಿದ್ದೆ. ನಿನ್ನಂತಹ ಗುಣ ಲಕ್ಷಣಗಳಿರುವ ವ್ಯಕ್ತಿ ನನ್ನ ಬಾಳ ಗೆಳೆಯನಾಗಬೇಕೆಂದು ಆಶಿಸಿದ್ದೆ. ಮನಸ್ಸಿನಲ್ಲಿಯೇ ನಿನಗೆ ಶರಣಾಗಿಬಿಟ್ಟೆ. ಒಬ್ಬ ಚಿತ್ರ ನಟನನ್ನೋ, ಒಬ್ಬ ಲೇಖಕನನ್ನೋ, ಒಬ್ಬ ಇತಿಹಾಸ ಪುರುಷನನ್ನೋ, ಕೊನೆಗೆ ಒಂದು ಪ್ರಾಣಿಯನ್ನಾದರೂ ಪ್ರೀತಿಸುವ ವಯಸ್ಸು ಅದು. ಅಂದರೆ ಒಂದು ರೀತಿಯಲ್ಲಿ ತನ್ನನ್ನೇ ತಾನು ಪ್ರೀತಿಸಿಕೊಳ್ಳುವ ಕಾಲಘಟ್ಟ ಅದು. ನಾನೂ ನಿನ್ನನ್ನು ಪ್ರೀತಿಸಿಬಿಟ್ಟೆ. ನನ್ನ ರಕ್ತ ಮಾಂಸಗಳೊಡನೆ ಸೇರಿಸಿಕೊಂಡು ಬಿಟ್ಟೆ. ಮೊದಲ ಪ್ರೇಮ ಯಾವತ್ತೂ  ಬಾಳ ಪಯಣಕ್ಕೆ ಕಟ್ಟಿಕೊಂಡ ನೆನಪಿನ ಅಕ್ಷಯ ಪಾತ್ರೆಯಲ್ಲವೇ?

ಈಗ ನೀನು ಹೇಗಿದ್ದಿ ಶರೂ? ಇತ್ತೀಚೆಗೆ ಟೀವಿ ಚಾನಲ್ಲೊಂದರಲ್ಲಿ ನಿನ್ನ ಸಂದರ್ಶನ ನೋಡಿದೆ. ಅದೇ ಗಾಂಭೀರ್ಯ ಅದೇ ಸ್ಪಷ್ಟ ನುಡಿಗಳು. ಅದೇ ಕುರುಚಲು ಗಡ್ಡ. ಈಗ ಒಂದೆರಡು ಬೆಳ್ಳಿ ಕೂದಲು ಇಣುಕುತ್ತಿವೆ. ನಿನಗೆ ಗೊತ್ತೇ ಗೆಳೆಯಾ, ಗಡ್ಡವಿರುವ ವ್ಯಕ್ತಿಯೊಬ್ಬ ನನ್ನ ಮುಂದಿನಿಂದ ಹಾದು ಹೋದರೆ ನನಗೆ ನಿನ್ನದೇ ನೆನಪು. ಒಮ್ಮೆಯಾದರೂ ಹಿಂತಿರುಗಿ ಆತನನ್ನು ನೋಡಬೇಕೆನಿಸುತ್ತದೆ. ಆತ ಜುಬ್ಬ ಧರಿಸಿದರಂತೂ ಒಂದು ಕ್ಷಣ ನನ್ನ ಕಣ್ಣುಗಳು ಆತನ ಕಣ್ಣುಗಳಲ್ಲಿ ಸೇರಿಹೋಗುತ್ತದೆ.

ಒಂದೂ ಮಾತಿಲ್ಲದೆ, ಯಾವುದೇ ಸಂಪರ್ಕ ಮಾಧ್ಯಮವಿಲ್ಲದೆ ನಾನು ನಿನ್ನನ್ನು ನಾಲ್ಕು ವರ್ಷಗಳ ಕಾಲ ಆರಾಧಿಸಿದೆ ಎಂದರೆ ನನ್ನ ಬಗ್ಗೆಯೇ ನನಗಿಂದು ಅಚ್ಚರಿ ಮೂಡುತ್ತದೆ. ಮನುಷ್ಯನ ಭಾವನಾತ್ಮಕ ಜಗತ್ತು ಎಷ್ಟೊಂದು ನಿಗೂಢ ಅಲ್ಲವೇ? ನಿನ್ನನ್ನು ಹೋಲುವ ಯಾವನೇ ವ್ಯಕ್ತಿ ನನಗೆ ಕಾರಣವಿಲ್ಲದೆ ಹತ್ತಿರದವನೆನಿಸುತ್ತಾನೆ.

ಮೊನ್ನೆ ಹೀಗಾಯ್ತು ನೋಡು, ತುಂಬಾ ದಿನಗಳಿಂದ ನನ್ನ ಮನಸ್ಸಿನಲ್ಲೊಂದು ಚಿಂತೆ ಕಾಡುತ್ತಿತ್ತು. ಮಾನಸಿಕವಾಗಿ ನಾನು ನಲುಗಿ ಹೋಗಿದ್ದೆ; ದುಭಲಳಾಗಿದ್ದೆ. ನಿನ್ನನ್ನೇ ಹೋಲುವ ಪರಿಚಯದವರೊಬ್ಬರು ನನ್ನ ಮುಂದೆ ಕುಳಿತಿದ್ದರು. ಮಾತಿನ ಮಧ್ಯೆ ನಾನು ಅವರಿಗೆ ನನ್ನ ಚಿಂತೆಗೆ ಕಾರಣವನ್ನು ಹೇಳಲು ಹೊರಟೆ. ಹೇಳಲಾಗಲೇ ಇಲ್ಲ. ಮೈ ನಡುಗಿ, ತುಟಿ ಅದುರಿ, ಕಣ್ಣು ಕತ್ತಲಿಟ್ಟಂತಾಗಿ ನನ್ನನ್ನು ನಾನು ನಿಯಂತ್ರಿಸಿಕೊಳ್ಳದಾದೆ. ಹೊಕ್ಕಳಿನಾಳದಿಂದ ಬಿಕ್ಕಳಿಕೆ ಉಮ್ಮಳಿಸಿ ಬಂತು. ಹೀಗಾಗುತ್ತಿರುವುದು ಇದು ನಾಲ್ಕನೆಯ ಬಾರಿ. ಮೊದಲ ಬಾರಿ ನಿನ್ನೆದುರು ಸಂಭವಿಸಿದ್ದು ಇನ್ನೆರಡು ಬಾರಿ ನನ್ನೆದುರು ನನ್ನ ಪತಿಯಿದ್ದ. ನೀನು ಅಂದು ನನಗೆ ಬೆನ್ನಿನಾಸರೆಯನ್ನಾದರೂ ನೀಡಿದ್ದೆ... ಯಾಕೆ ಶರೂ, ಹೆಣ್ಮಕ್ಕಳ ಬಿಕ್ಕಳಿಕೆಗೆ ಪುರುಷ ಜಗತ್ತು ಬೆನ್ನು ಹಾಕಿ ಪಲಾಯನ ಮಾಡುತ್ತಿದೆ? ಅವರನ್ನು ಎದುರಿಸುವ ಧೈರ್ಯ ನಿಮ್ಮಲಿಲ್ಲವೇ? ನಿಮ್ಮ ಕಲಾಜಗತ್ತಿನಲ್ಲಾದರೂ ಇದಕ್ಕೊಂದು ನ್ಯಾಯ ಒದಗಿಸಬಾರದೇ?

ಹೊಗಲಿ ಬಿಡು, ನನ್ನ ಪಾಲಿಗೆ ಆಕಾಶದ ಅನಂತತೆ, ಸಾಗರದ ಆಳ, ಹಿಮಾಲಯದ ಔನತ್ಯ ಎಲ್ಲವನ್ನೂ ನನ್ನೆಡೆಗೆ ಹೊತ್ತು ತಂದವನು ನೀನು. ಮಲೆನಾಡಿನ ಹಸಿರ ಸೆರಗಿನಲ್ಲಿ ಸುರಗಿ ಹೂವಿನ ಸುವಾಸನೆಗೆ ಕಣ್ಣೆತ್ತಿ ನೋಡಿದಾಗ ಬೊಗಸೆ ತುಂಬಾ ಹೂವಿನ ಮಳೆಗೆರೆದವನು... ಕುಮಾರ ಪರ್ವತದ ತುದಿಯಿಂದ ಅಷ್ಟಮೂಲೆಯ ಕಲ್ಲುಗಳನ್ನು ಆಯ್ದು ತಂದು ನಮ್ಮ  ಸಂಬಂಧಕ್ಕೊಂದು ಪಾವಿತ್ರ್ಯತೆಯ ಆಯಾಮ ಕೊಟ್ಟವನು... ನಿರಂಜನರ ’ಚಿರಸ್ಮರಣೆ’ ಕಾದಂಬರಿಯನ್ನು ಮೊದಲ ಉಡುಗೊರೆಯಾಗಿ ನೀಡಿ, ನನ್ನ ಯೋಚನಾ ಲಹರಿಗೆ ಸ್ಪಷ್ಟತೆಯ ಸಾಣೆ ಹಿಡಿದವನು... ಬದುಕು ಬರಡು ಎನಿಸಿದಾಗ ತನ್ನೆದೆಯ ಬಗೆದು ಪ್ರೀತಿಯ ಜೀವಜಲದ ಕುಂಭವನು ನನ್ನೆದುರಲ್ಲಿ ಹಿಡಿದು ನಿಂದವನು... ಸ್ಪರ್ಶ ಮಾತ್ರದಲ್ಲೇ ನನ್ನ ಮೈಮನದಲ್ಲಿ ಚೈತ್ರ ಪಲ್ಲವಿಸಿದವನು... ಪೂರ್ಣಾಹುತಿಯ ಸಮಯದಲ್ಲೇಕೆ ವಿಶ್ವಾಮಿತ್ರ ಹಸ್ತ ತೋರಿಸಿದೆ. ನನ್ನಿಂದಾದ ಅಪರಾಧವೇನು ಗೆಳೆಯಾ?

ಹೆಜ್ಜೆ ಹೆಜ್ಜೆಗೂ ನಾನು ನಿನ್ನನು ಅನುಸರಿಸಿದೆ. ಪೂರ್ಣ ನಂಬಿಕೆಯಿಂದ ಜೊತೆಯಾದೆ. ನೀನು ನನಗೆ ಗುರುವಾದ;ಗೆಳೆಯನಾದೆ; ತಂದೆಯಾದೆ; ಸಖನಾದೆ;ಕೊನೆಗೆ ದೇವರೇ ಆದೆ. ಹಾಗಾಗಿಯೇ ಆಕಾಶದ ನಕ್ಷತ್ರವೇ ಆದೆ.

ನಾನಿಲ್ಲಿ ಈ ಭೂಮಿಯಲ್ಲಿ ಬಂದು ಬಿದ್ದಿದ್ದೇನೆ ನೋಡು. ನೀನು ನನ್ನನ್ನು ತೊರೆದು ಹೋದ ದಿನ ಆತ ಬಂದಿದ್ದ....ಮರುದಿನವೂ ಬಂದಿದ್ದ...ಆಮೇಲೆಯೂ ಬಂದ...ನನ್ನನ್ನು ಹಿಡಿದೆತ್ತಿದ...ಕಣ್ಣೀರು ಒರೆಸಿದ...ಎದೆಗೊತ್ತಿಕೊಂಡ...ಉಮ್ಮರ್ ಖಯ್ಯಾಮನ ಹಾಡು ಹೇಳಿ ಕಣ್ಣೀರಲ್ಲೂ ನಗುವುದ ಹೇಳಿಕೊಟ್ಟ. ದುಖಃದ ಕಡಲಿಗೆ ಇಳಿತವಿಲ್ಲ..ಭರತ ಮಾತ್ರ...!

ಬದುಕು ಸಾಗಿತು ಮುಂದು ಮುಂದಕೆ...ನೆನಪು ಹಿಂಬಾಲಿಸಿತು ನೆರಳಿನಂತೆ...ಸಂಬಂಧಗಳು ವಿಸ್ತರಿಸಿಕೊಂಡವು ಬಲೆಯಂತೆ...ಯಾವ ದಡದಲ್ಲೂ ಹಡಗು ನಿಲ್ಲಲೇ ಇಲ್ಲ. ಅಲ್ಲಿ ಇತ್ತಾದರೂ ಏನು? ಎಲ್ಲವನ್ನೂ ನೀನು ಬಹು ಹಿಂದೆಯೇ ಲೂಟಿ ಮಾಡಿದ್ದೆ. ನಿನ್ನ ನೆನಪಿನ ಧಾರೆಯಲಿ ನಾನು ತೊಯ್ದು ಹೋಗುತ್ತಲೇ ಇದ್ದೆ...ಆ ಒಂದು ಸಂಜೆ....ಹತ್ತಾರು ವರ್ಷಗಳ ನಂತರ ಅವನು ಬಂದಿದ್ದ. ನನ್ನನು ನೋಡಿ ವಿಸ್ಮಯ ಪಟ್ಟ. ನಾನೇರಿದ ಎತ್ತರಕ್ಕೆ ಬೆಕ್ಕಸ ಬೆರಗಾದ. ನನ್ನ ತಲೆಗೊಂದು ಮೊಟಕಿ ಅವನಂದ ’ ಅವನು ಬಿಟ್ಟು ಹೋದ ದಿನ ನೀ ಅಕ್ಷರಶಃ ಹೆಣವಾಗಿದ್ದೆ. ನಿನಗೆ ಗೊತ್ತಿದೆಯೋ ಇಲ್ಲವೋ ಅಂದು ನಿನಗೆ ನಾನು ಕುಡಿಸಿದ್ದು ಎರಡು ಬಾಟಲ್ ಬಿಯರ್. ನಿನಗೆ ತಾಗಲೇ ಇಲ್ಲ. ಕೊನೆಗೆ ಕುಡಿಸಿದ್ದು ರಮ್. ಆಗ ಒಂದೇ ಸಮನೆ ವಾಂತಿ ಮಾಡಿಕೊಂಡು ಎರಡು ದಿನ ಮಲಗಿದ್ದೆ. ಎಲ್ಲಿ ಗೊತ್ತಾ? ನನ್ನ ತೊಳತೆಕ್ಕೆಯಲ್ಲಿ... ಈಗ ನಾನು ನಿನ್ನನು ಮುಟ್ಟಲೂ ಹಿಂದೇಟು ಹಾಕುವ ರೀತಿಯಲ್ಲಿ ಬೆಳೆದುಬಿಟ್ಟಿದ್ದಿಯಲ್ಲೇ’ ಅಂದುಬಿಟ್ಟ. ಬೆನ್ನು ತಟ್ಟಿದ. ಇದು ನಿಜವಿರಬಹುದೇ? ಅಂತಹದೊಂದು ಸ್ಥಿತಿಯನ್ನು ನಾನು ದಾಟಿ ಬಂದಿರಬಹುದೇ? ಆತ ನಿನ್ನ ಗೆಳೆಯನಲ್ಲವೇ? ನಿನ್ನ ರಾಯಭಾರಿಯಾಗಿ ನನ್ನಲ್ಲಿಗೆ ಬಂದ್ದಿರಬಹುದಲ್ಲವೇ?

ಸಂಬಂಧದ ಕೊಂಡಿ ಮತ್ತೆ ಸೇರಿಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಅಷ್ಟರಲ್ಲೇ ನನಗೆ ಅರ್ಥವಾಗಿಬಿಟ್ಟಿತ್ತು. ಪ್ರೀತಿಯ ಜಗತ್ತೇ ಬೇರೆ. ವಾಸ್ತವವೇ ಬೇರೆ. ಸಾಮಾಜಿಕ ಸ್ಥಾನ-ಮಾನ ನನ್ನ ಘನತೆ ಅಂತಸ್ತುಗಳನ್ನು ಹೆಚ್ಚಿಸಿರಬಹುದು. ಆದರೆ ಒಳಗೊಳಗೇ ನಾನು ಕುಸಿದುಹೋಗಿದ್ದೇನೆ ಶರೂ...ಆತನಿಗೆ ಗೊತ್ತಿಲ್ಲದ ಇನ್ನೊಂದು ವಿಚಾರವಿದೆ ಗೆಳೆಯಾ..ಅಸಹಾಯಕ ಘಳಿಗೆಯಲ್ಲಿ ಆತ ನನ್ನ ತುಟಿಗೆ ಮಧು ಪಾತ್ರೆ ಸೋಕಿಸಿರಬಹುದು. ಆದರೆ ಇವತ್ತು ಅದೇ ನನಗೆ ಜೀವಜಲ. ನನ್ನ ಮನೆಯ ಬೀರು ತೆಗೆದು ನೋಡು; ಲಂಚ್ ಗೆ ರೆಡ್ ವೈನ್, ಡಿನ್ನರ್ ಗೆ ಓಡ್ಕ.. ಅದು ರಕ್ತದೊಡನೆ ಸೇರಿದ ಹೊತ್ತು ನಾನೀ ಕಾಂಕ್ರೀಟ್ ಕಾಡಿನಲ್ಲಿರುವುದಿಲ್ಲ. ಮಲೆನಾಡಿನ ದಟ್ಟ ಕಾಡಿನ ನಡುವಿನ ಸುರಗಿ ಮರದ ಅಡಿಯಲ್ಲಿ ನಿಂತಿರುತ್ತೇನೆ. ತೊಟ್ಟಿದ್ದ ಲಂಗವನ್ನು ಎರಡೂ ಕೈಯ್ಯಲ್ಲಿ ಜೊಂಪೆಯಾಗಿ ಹಿಡಿದಿರುತ್ತೇನೆ. ನೀನು ಮರದ ಮೇಲಿನಿಂದ ಹೂಗಳನ್ನು ಬಿಡಿಸಿ ನನ್ನ ಲಂಗದೊಳಗೆ ಹಾಕುತ್ತಿ. ಆಮೇಲೆ ನಾವಿಬ್ಬರೂ ಸೇರಿ ಅದನ್ನು ಮಾಲೆ ಮಾಡುತ್ತೇವೆ. ಒಂದು ಮಾಲೆಯನ್ನು ದೇವರಿಗೆಂದು ತೆಗೆದಿರಿಸುತ್ತೇನೆ. ಇನ್ನೊಂದನ್ನು ನೀನು ನನಗೆ ಮುಡಿಸುತ್ತಿ. ಅದರ ಪರಿಮಳದ ಮತ್ತಿನಲ್ಲಿ ನಾನು ನಿನ್ನ ಭುಜಕ್ಕೊರಗಿ ನಿದ್ರಿಸುತ್ತೇನೆ........ಬೆಳಿಗ್ಗೆ ಎದ್ದಾಗ ಮನಸ್ಸು ಹಗುರವಾಗಿರುತ್ತದೆ. ಆಪೀಸಿನಲ್ಲಿ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತೇನೆ...ಇದು ನನ್ನ ದಿನಚರಿ. ಕೊನೆ ಉಸಿರಿರುವ ತನಕ ಇದೇ. ನಿನ್ನನ್ನು ನಂಬಿಸುವ ಇರಾದೆ ನನ್ನಲಿಲ್ಲ. ಆದರೂ ಹೇಳುತ್ತಿದ್ದೇನೆ; ನಿನ್ನ ಮೇಲಿನ ನನ್ನ ಪ್ರೀತಿಗೆ ಪಾಲುದಾರರಿಲ್ಲ. ಅದಕ್ಕೆ ನೀನು ಮಾತ್ರ, ಕೇವಲ ನೀನು ಮಾತ್ರ ಹಕ್ಕುದಾರ..

ಬಾಗಿದರೆ ಹಿಮಾಲಯದೆದುರು ಬಾಗಬೇಕು. ಸೋತರೆ ಕಡಲಿನೆದುರು ಸೋಲಬೇಕು. ಒಂದಾಗಿ ಬೆರೆತರೆ ಆಕಾಶದ ಅನಂತತೆಯಲ್ಲಿ ಕರಗಬೇಕು ಎಂಬುದು ನನ್ನ ಹದಿಹರೆಯದ ಕನಸು. ನನ್ನ ಪಾಲಿಗೆ ನೀನು ಇದೆಲ್ಲವೂ ಆಗಿ ಬಂದೆ. ಆದರೂ ಭ್ರಮೆಯಾಗಿ ಉಳಿದೆ. ಯಾಕೆ ಹೀಗಾಯ್ತು? ನಾನು ಎಲ್ಲಿ ತಪ್ಪಿದೆ? ನೀನು ಎಲ್ಲಿ ಸಂದೇಹಿಸಿದೆ? ಕೊನೆಗೂ ಎಲ್ಲವೂ ಪ್ರಶ್ನೆಗಳಾಗಿ ಉಳಿದವು...!

ಮೊನ್ನೆ ಊರಿಗೆ ಹೋದಾಗ ನೋಡಿದೆ; ಸುರಗಿ ಮರವಿದ್ದ ಕಾಡು ಈಗ ರಬ್ಬರ್ ತೋಟವಾಗಿದೆ. ನಾವು ಈಜು ಕಲಿತ ಉಪ್ಪಂಗಳ ಹೊಳೆ ಬತ್ತಿ ಹೋಗಿದೆ. ಭೂಮಿ ತೂಕದ ಹಕ್ಕಿಗೆ ಗೂಡು ಕಟ್ಟಲು ಪೊದೆಗಳೇ ಇಲ್ಲ. ಹುಡುಕಿದರೂ ಕೇದಗೆ ಹೂ ಸಿಗಲಿಲ್ಲ...
ಏನಿಲ್ಲದಿದ್ದರೂ ಏನಂತೆ.?..ನನ್ನೊಳಗೆ ಇವೆಲ್ಲಾ ಸದಾ ಹಸಿರು...![ ನಿಯತಕಾಲಿಕವೊಂದರ ಅಂಕಣವೊಂದರಲ್ಲಿ  ನಾನು ಬರೆಯುತ್ತಿದ್ದ ಪ್ರೇಮ ಪತ್ರದಲ್ಲಿ ಇದೂ ಒಂದು. ಅಲ್ಲಿ ನಾನು ಅನಾಮಧೇಯಳು..!]

Tuesday, December 25, 2012

...... ಪುರುಷತ್ವ ಹರಣದ ಶಿಕ್ಷೆಯೇ ಬೇಕು.·         ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರವಾದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಂತ ಧಾರುಣವಾಗಿ ಸಾಮೂಹಿಕ ಅತ್ಯಚಾರ ನಡೆಯಿತು. ಆಕೆಯ ದೇಹದ ಮೇಲೆ ಮೃಗೀಯವಾಗಿ ವರ್ತಿಸಿದ ಪುರುಷಪುಂಗವರ ಆಟಾಟೋಪವನ್ನು ಮಾಧ್ಯಮಗಳಲ್ಲಿ ಓದಿದಾಗ, ನೋಡಿದಾಗ, ಕೇಳಿದಾಗ ನನಗೆ ತಕ್ಷಣಕ್ಕೆ ಅನ್ನಿಸಿದ್ದು ಅವರಿಗೆ ಅತ್ಯುಗ್ರವಾದ ಶಿಕ್ಷೆ ನೀಡಬೇಕೆಂದು. ಹಾಗಾಗಿ ನನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ನಾನು ಹೀಗೆ ಬರೆದೆ;
·          
·         ”ದೆಹಲಿಯಲ್ಲಿ ವಿದ್ಯಾರ್ಥಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಧಾರುಣವಾಗಿ ಗ್ಯಾಂಗ್ ರೇಪ್ ಮಾಡಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ...
ಆದರೆ.. ಸಾಮೂಹಿಕ ಅತ್ಯಾಚಾರಿಗಳಿಗೆ ಕೊಡುವ ಅತ್ಯುಗ್ರ ಶಿಕ್ಷೆಯೆಂದರೆ ಅವರ ಪುರುಷತ್ವ ಹರಣವಾಗಬೇಕು. ಅವರ ಆಯುಧವನ್ನು ನಿಷ್ಕ್ರೀಯಗೊಳಿಸಬೇಕು; ಅವರು ಬದುಕಬೇಕು; ಬದುಕಿಯೂ ಸತ್ತಂತಿರಬೇಕು; ಪ್ರತಿ ಕ್ಷಣವೂ ಅವರ ಸಾವು ಜಗಜ್ಜಾಹೀರಾಗುತ್ತಲಿರಬೇಕು...
·          
·         ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಹಾಗೂ ಅಂತರ್ಜಾಲದಲ್ಲಿ ಈ ಘಟನೆಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಅನ್ನಿಸಿಕೆಗಳನ್ನು ಗಮನಿಸಿದಾಗ ನನಗನ್ನಿಸಿದ್ದು ಪುರುಷರ ಮತ್ತು ಮಹಿಳೆಯರ ಅಭಿವ್ಯಕ್ತಿಯಲ್ಲಿನ ಭಾಷಾ ಬಳಕೆಯ ವ್ಯತ್ಯಾಸ.

ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಚಾರ ನಡೆದಾಗ ಪುರುಷರಂತೆ ಯೋಚಿಸುವ ಮಹಿಳೆಯರನ್ನೂ ಒಳಗೊಂಡಂತೆ, ಇಡೀ ಪುರುಷ ಜಗತ್ತು ಅದನ್ನು ಬಣ್ಣಿಸುವುದು ’ಶೀಲ ಕಳೆದುಕೊಳ್ಳುವುದು’ ಆದರೆ ಸ್ತ್ರೀ ಮನಸ್ಸು ಗ್ರಹಿಸುವುದು ’ಬದುಕು ಕಳೆದುಕೊಳ್ಳುವುದು’ ಗಂಡಿನ ದೃಷ್ಟಿಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯಲಾಗದು. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳಬಹುದು.

ಕಳೆದ ಭಾನುವಾರ ರಾತ್ರಿ ಕಾಮಾಂಧರ ಪೈಶಾಚಿಕ ಕ್ರೌಯಕ್ಕೆ ತುತ್ತಾಗಿ ಜೀವಚ್ಛವವಾಗಿ ಸಪ್ತರ್ ಜಂಗ್ ಆಸ್ಪತ್ರೆಯಲ್ಲಿ ಮಲಗಿರುವ ಆ ವಿದ್ಯಾರ್ಥಿನಿ ಮತ್ತೆ ಬದುಕಿನ ಬಗ್ಗೆ ಆಶಾವಾದಿಯಾಗಲು ಕಾರಣವೇ ಆಕೆಯಲ್ಲಿನ ”ಬದುಕನ್ನು ಕಟ್ಟಿಕೊಳ್ಳುವ’ ಛಲ. ಶನಿವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಕೆಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ವಿವರಿಸಿದ್ದರು. ಆಕೆಯ ಮಾನಸಿಕ ಸ್ಥಿಮಿತ ಮತ್ತು ಜೀವನ ಪ್ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದರು.  
ನಮಗೆ ಗೊತ್ತಿದೆ; ಅತ್ಯಾಚಾರ ಪ್ರಕರಣಗಳಲ್ಲಿ ಅದು ಬಲತ್ಕಾರದ ದೈಹಿಕ ಸಂಪರ್ಕವೋ ಅಥವಾ ಒಪ್ಪಿತ ಲೈಂಗಿಕ ಕ್ರಿಯೆಯೋ ಎಂದು ನಿರ್ಧರಿಸುವುದು ಕಷ್ಟ ಸಾಧ್ಯ. ಹಾಗಾಗಿ ಅದರ ವಿಚಾರಣೆಯ ಪ್ರಕ್ರಿಯೆ ದೀರ್ಘವಾಗಿರುತ್ತದೆ. ಆದರೆ ಸಾಮೂಹಿಕ ಅತ್ಯಾಚಾರದಲ್ಲಿ ಘಟನೆ ಸ್ಪಷ್ಟವಿರುತ್ತದೆ. ಅಲ್ಲಿ ನಿಸ್ಸಂದೇಹವಾಗಿ ಹೆಣ್ಣು ಬಲಿಪಶುವಾಗಿರುತ್ತಾಳೆ. ಅಲ್ಲೊಂದು ಮೃಗೀಯ ವರ್ತನೆ ನಡೆದಿರುತ್ತದೆ.

ಪುರುಷಪುಂಗವನೆಂದು ತನ್ನನ್ನು ತಾನು ಹೆಮ್ಮೆಯಿಂದ ಕರೆದುಕೊಳ್ಳುವ ಗಂಡಸಿನ ಆಯುಧವೇ ’ಅದು’. ಅದೇ ಇಲ್ಲದಿದ್ದರೆ ಅವನೊಂದು ಹುಳು.ಕಾಲಲ್ಲಿ ಹೊಸಕಿ ಹಾಕಬಹುದಾದ ಜಂತು.ಸೆಕ್ಸ್ ವಿಚಾರದಲ್ಲಿ ಆತನಿಗೆ ವಿವೇಚನೆಯಿಲ್ಲ. ಕಂಡಲ್ಲಿ ನುಗ್ಗುವ ಗೂಳಿ ಅವನು.ಹೆಣ್ಣು ಸಿಗದಿದ್ದರೆ ಅವನಿಗೆ ಇನ್ನೊಂದು ಗಂಡೂ ಆದೀತು..ಕೊನೆಗೆ ಪ್ರಾಣಿಯಾದರೂ ಓಕೆ.

ಒಂದು ವಾರದಿಂದ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ತೃಣಮಾತ್ರವೂ ಅರಿವಿಲ್ಲದಂತೆ ತ್ರಿಪುರದ ಬಿಸ್ಲಾಗಾರದಲ್ಲಿ  ಬುಧವಾರ ರಾತ್ರಿ ಮಹಿಳೆಯೊಬ್ಬಳನ್ನು ಮನೆಯಿಂದ ಹೊರಗೆಳೆದು ತಂದು ಸಾರ್ವಜನಿಕರೇ ಎದುರೇ ಸಾಮೂಹಿಕ ಅತ್ಯಚಾರ ನಡೆಸಿ,ಅನಂತರ ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಮತ್ತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇಂತಹ ಅನಾಗರಿಕ ವರ್ತನೆಗೆ ಸಾರ್ವಜನಿಕರೂ ಸಾಕ್ಷಿಯಾಗಿದ್ದಾರೆ ಎಂದರೆ ಆ ಮನಸ್ಥಿತಿ ಹೇಗೆ ರೂಪುಗೊಂಡಿರಬಹುದು?

ನಾನು ಮತ್ತೆ ಮತ್ತೆ ನಂಬುವುದು ’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂಬುದನ್ನು. ನಾವು ನಮ್ಮ ಮಕ್ಕಳನ್ನು ಅವರ ಹದಿಹರೆಯದ ತನಕ ಯಾವ ಪರಿಸರದಲ್ಲಿ, ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪೋಷಕರು ಸ್ವತಃ ಮಾದರಿಯಾಗಿರದಿದ್ದಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಮಕ್ಕಳು ಬಹುಬೇಗನೆ ಎಲ್ಲವನ್ನೂ ಗ್ರಹಿಸಿಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಜೊತೆಗೆ ಸ್ವರಕ್ಷಣೆಯ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಹೇಳಿಕೊಡಬೇಕು. ಹಾಗೆಯೇ ಗಂಡು ಮಕ್ಕಳಿಗೂ ಸ್ತ್ರೀಯರನ್ನು ಗೌರವದಿಂದ ಕಾಣುವುದನ್ನು ಅವರಿಗೆ ಅರಿವಿಲ್ಲದಂತೆ ಮನಗಾಣಿಸುತ್ತಿರಬೇಕು. ಯಾಕೆಂದರೆ ಪುರುಷ ಪ್ರಧಾನ ಯೋಚನೆಯನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.

ನನಗೀಗಲೂ ನೆನಪಿದೆ. ನನ್ನ ಮಗನೊಮ್ಮೆ ಮಾತಿನ ಮಧ್ಯೆ ”ಹೆಂಗಸು’ ಎಂಬ ಪದವನ್ನು ಉಪಯೋಗಿಸಿದ. ನನಗೆ ಆ ಪದವನ್ನು ಕೇಳಿದರಾಗದು. ನಾನು ಎಂದೂ ಆ ಪದವನ್ನು ಉಪಯೋಗಿಸುವುದಿಲ್ಲ. ಹೆಂಗಸು ಅಂದರೆ ಹೆಣ್ಣು ಕೂಸು. ಹೆರುವವಳು ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆಯೆಂಬುದು ನನ್ನ ಭಾವನೆ., ಮಹಿಳೆಯ ಅಸ್ತಿತ್ವವನ್ನು ಅದು ಸೀಮಿತಗೊಳಿಸುತ್ತದೆಯೆಂಬುದು ನನ್ನ ಗ್ರಹಿಕೆ. ನನ್ನನ್ನು ಯಾರಾದರೂ ’ಆಯಮ್ಮ’ ಎಂದು ಸಂಭೋದಿಸಿದರೆ ನನ್ನ ಸಿಟ್ಟು ನೆತ್ತಿಗೇರುತ್ತದೆ!  ನನ್ನ ಮಗನಿನ್ನೂ ತುಂಬಾ ಚಿಕ್ಕವನು, ಆದರೂ ನಾನವನಿಗೆ ಹೇಳಿದೆ ’ಹೆಂಗಸು ಅನ್ನಬಾರದು, ಮಹಿಳೆ ಅನ್ನು’ ಅಂತ ಆಮೇಲೆ ನಾನದನ್ನು ಮರೆತು ಬಿಟೆ. ಆದರೆ ಒಂದೆರಡು ವರ್ಷಗಳ ಹಿಂದೆ ನಾನೇ ಬಾಯಿತಪ್ಪಿ ’ಆ ಹೆಂಗಸು..’ ಅಂದುಬಿಟ್ಟೆ. ಆಗ ಅಲ್ಲೇ ಇದ್ದ ನನ್ನ ಮಗ ’ ಅಮ್ಮಾ ಗೌರವ..ಮಹಿಳೆ ಅನ್ನು’ ಅಂದುಬಿಟ್ಟ..ನಾನು ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ಟೆ!

ಶನಿವಾರ ಟೈಮ್ಸ್ ನೌ ಚಾನಲ್ಲಿನ ವರದಿಗಾರರೊಬ್ಬರು ತಮ್ಮ ಲೈವ್ ವರಧಿಯಲ್ಲಿ ಹೇಳುತ್ತಿದ್ದರು, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಕಾರರ ಸರಾಸರಿ ವಯಸ್ಸು ೨೨. ಅಂದರೆ ಅದು ಲೈಂಗಿಕ ಪರ್ವಕಾಲ. ಶರೀರದಲ್ಲಿ ಲೈಂಗಿಕ ಹಾರ್ಮೋನ್ ಗಳು ಅತ್ಯಧಿಕವಾಗಿ ಸ್ರವಿಸುವ ಕಾಲಘಟ್ಟ.ಆದರೂ ಮನುಷ್ಯನ ಮೂಲಭೂತ ಅವಶ್ಯಕತೆಯಲ್ಲಿ ಒಂದಾದ ಸೆಕ್ಸ್ ಅನ್ನು ನಿಯಂತ್ರಣ್ದಲ್ಲಿ ಇಟ್ಟುಕೊಳ್ಳಲು ಇವರಿಗೆಲ್ಲಾ ಹೇಗೆ ಸಾಧ್ಯವಾಯಿತು? ಅದು ಸಂಸ್ಕಾರದಿಂದ, ಶಿಕ್ಷಣದಿಂದ, ವೈಯಕ್ತಿಕ ಬದುಕಿನಲ್ಲಿ ನೈತಿಕ ಮೊಲ್ಯಗಳನ್ನು ಅಳವಡಿಕೊಂಡಿರುವುದರಿಂದ ಸಾಧ್ಯವಾಗಿದೆ. ಅಲ್ಲಿ ಅವರೆಲ್ಲಾ ಸೇರಿ ಸಮಾಜಮುಖಿ ಹೋರಾಟವೊಂದರಲ್ಲಿ ತೊಡಗಿಕೊಂಡಿರುವುದನ್ನು ನೋಡಿದಾಗ ಭವಿಷ್ಯದ ಬಗ್ಗೆ ಆಶಾವಾದ ಮೂಡುತ್ತದೆ. ಇಂತಹ ಮನಸ್ಸುಗಳು ರಾಜಕೀಯಕ್ಕೆ ಬರಬೇಕು; ಕಾನೂನು ರಚನೆಯಲ್ಲಿ ಭಾಗಿಯಾಗಬೇಕು.ಆರೋಗ್ಯವಂತ ಸಮಾಜವನ್ನು ಕಟ್ಟಬೇಕು. ಆದರೆ ಅದು ಸಾಧ್ಯವೇ?

ನಮ್ಮ ಕೆಲವು ಜನಪ್ರತಿನಿಧಿಗಳನ್ನು ನೋಡಿದರೆ ಕಾನೂನನ್ನು ರೂಪಿಸುವವರೇ ಕಾನೂನನ್ನು ಉಲ್ಲಂಘಿಸುವವರೂ ಆಗಿರುತ್ತಾರೆ ಎಂಬುದು ಗೊತ್ತಾಗುತ್ತದೆ. ಇದರ ಜೊತೆಗೆ ಕೆಲವರು ರೇಪ್ ಪ್ರಕರಣಗಳಲ್ಲಿ ಆರೋಪಿಗಳೂ ಆಗಿರುತ್ತಾರೆ. ವಯ್ಯಕ್ತಿಕ ಬದುಕಿನಲ್ಲಿ ಹಲವಾರು ಮಹಿಳೆಯರೊಡನೆ ಸಂಬಂಧವಿಟ್ಟುಕೊಂಡವರೂ ಆಗಿರುತ್ತಾರೆ. ಇದರ ಜೊತೆಗೆ ಮೀಡಿಯಾಗಳು, ಸಿನೇಮಾಗಳು,ಜಾಹೀರಾತುಗಳು ಹೆಣ್ಣನು ಭೋಗದ ವಸ್ತುಗಳಾಗಿ, ಮಾರುಕಟ್ಟೆಯ ಸರಕುಗಳಾಗಿ ಕಾಣುತ್ತವೆ. ಹೆಣ್ಣಿನ ಕೊಬ್ಬು ಇಳಿಸಬೇಕಾದರೆ ಆಕೆಯ ಮೇಲೆ ಅತ್ಯಚಾರ ಮಾಡಬೇಕೆಂಬುದು ಸಿನೇಮಾರಂಗ ಒಪ್ಪಿಕೊಂಡ ಮೌಲ್ಯಗಳಲ್ಲಿ ಒಂದು. ನನಗೆ ಈಗಲೂ ನೆನಪಿದೆ. ಬಹುಶಃ ಅದು ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಸಿನೇಮಾವಿರಬೇಕು. ಒಂದು ಬ್ಯಾಂಕ್ ದರೋಡೆ ನಡೆಯುತ್ತದೆ. ಬ್ಯಾಂಕಿನೊಳಗಿದ್ದ ಸುಮನ್ ನಗರ್ ಕರ್ ಅದನ್ನು ಪ್ರತಿಭಟಿಸುತ್ತಾಳೆ.”ಅವಳ ಕೊಬ್ಬು ಇಳಿಸು’ ಎಂದು ಖಳ ನಾಯಕ ತನ್ನ ಸಹಚರನಿಗೆ ಹೇಳುತ್ತಾನೆ. ಆಗ ದಡಿಯನೊಬ್ಬ ಎಲ್ಲರ ಎದುರಿನಲ್ಲೇ ಅವಳ ಮೇಲೆ ಅತ್ಯಚಾರ ಎಸಗುತ್ತಾನೆ. ನನ್ನ ದೃಷ್ಟಿಯಲ್ಲಿ ಹೆಣ್ಣನ್ನು ಶೋಷಣೆ ಮಾಡುತ್ತಿರುವವರಲ್ಲಿ ಚಿತ್ರರಂಗ ಮತ್ತು ಮೀಡಿಯಾಗಳು ಮೊದಲ ಸಾಲಿನಲ್ಲಿ ಬರುತ್ತವೆ. ಹೆಣ್ಣನ್ನು ಸೂಕ್ಷ್ಮಸಂವೇದನೆಯಿಂದ ಕಾಣುವ ಮಾಧ್ಯಮವಿದ್ದರೆ ಅದು ರಂಗಭೂಮಿ ಮಾತ್ರ. ಅತ್ಯಾಚಾರಕ್ಕೆ ಒಳಗಾಗದ ಮಹಿಳೆಯೊಬ್ಬಳು ಆತನ ಮರ್ಮಾಂಗವನ್ನು ಕತ್ತರಿಸಿ ಸೇಡು ತೀರಿಕೊಳ್ಳವ ವಸ್ತುವುಳ್ಳ ’ಪುರುಷ’ ನಾಟ್ಕವನ್ನು ಕೆಲವು ತಿಂಗಳುಗಳ ಹೀದೆ ನಾನು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ದೆ. ಇದು ಸಮಕಾಲೀನ ಸಮಸ್ಯೆಯೊಂದಕ್ಕೆ ಕಲಾ ಮಾಧ್ಯಮವೊಂದು ಪ್ರತಿಕ್ರಿಯಿಸಿದ ರೀತಿ. ಆ ರೀತಿಯ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಾವು ಮಾಧ್ಯಮದಿಂದ ನಿರೀಕ್ಷಿಸುತ್ತೇವೆ.

ಪ್ರತಿ ಮಹಿಳೆಯೂ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಅತ್ಯಚಾರಕ್ಕೆ ಒಳಗಾಗಿಯೇ ಆಗಿರುತ್ತಾಳೆ. ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ದೈಹಿಕವಾಗಿ ಆಗಿರಬಹುದು. ಅದು ಕುಟುಂಬದ ಒಳಗೇ ಆಗಿರಬಹುದು ಅಥವ ಹೊರಗೇ ಅಗಿರಬಹುದು. ಆದರೆ ಆಕೆ ಲೈಂಗಿಕ ಆಟಿಕೆಯಾಗಿರುವುದು ಸತ್ಯ. ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲಾರೆವು. ಒಂದು ವೇಳೆ ಯಾರದರೂ ಅದನ್ನು ಹೇಳಿಕೊಳ್ಳುವ ದೈರ್ಯ ಮಾಡಿದರೆ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ. ಆಗ ನಡೆಯುವುದೇ ನಿಜವಾದ ಅತ್ಯಚಾರವಾಗುತ್ತದೆ. ಹಾಗಾಗಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅಲ್ಲಿ ಕ್ರೌರ್ಯ ಇತ್ತೋ ಇಲ್ಲವೋ ಗೊತ್ತಾಗುವುದಿಲ್ಲ. ಆದರೆ ಲೈಂಗಿಕ ಲಾಲಸೆಯೇ ಪರಾಕಾಷ್ಠೆಯಲ್ಲಿರುತ್ತದೆ ಎಂಬುದು ಸತ್ಯ. ಹಾಗಾಗಿ ಪುಟ್ಟ ಕಂದಮ್ಮಗಳ ಮೇಲೂ, ಇಳಿ ವಯಸ್ಸಿನವರ ಮೇಲೂ ಅತ್ಯಚಾರ ನಡೆಯುತ್ತದೆ. ಆದರೆ ಸಾಮೂಹಿಕ ಅತ್ಯಚಾರ ನಡೆದಾಗ ಅಲ್ಲಿ ವಿಜೃಂಭಿಸುವುದೇ ಕೌರ್ಯ. ಹಾಗಾಗಿ ಅಲ್ಲಿ ಮೃಗೀಯ ವರ್ತನೆಯಿರುತ್ತದೆ. ತಾವು ಧಾಳಿ ಮಾಡುತ್ತಿರುವುದು ಒಂದು ಜೀವಂತ ಹೆಣ್ಣಿನ ದೇಹದ ಮೇಲೆ, ಅದರಲ್ಲಿಯೂ ಮಿಡಿತವಿದೆ ಎಂಬುದನ್ನವರು ಮರೆತುಬಿಡುತ್ತಾರೆ. ಹಾಗಿಯೇ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಾರೆ, ಅವಳ ಜನನೇಂದ್ರಿಯಕ್ಕೆ ಕಬ್ಬಿಣದ ಸಲಾಕೆಯನ್ನು ತೂರಿಸುತ್ತಾರೆ. ಹಿಂದೊಮ್ಮೆ ಅಲ್ಲಿಂದಲೇ ತಾವು ಮಾಂಸದ ಮುದ್ದೆಯಂತೆ ಈ ಜಗತ್ತಿಗೆ ಅವತರಿಸಿದ್ದೆವು ಎಂಬುದನ್ನು ಅವರಿಗೆ ತಿಳಿಸಿ ಹೇಳುವವರು ಯಾರು? ಪುರುಷಪ್ರಧಾನವಾದ, ಪುರುಷ ಮನಸ್ಥಿತಿಯ ಪೋಲಿಸ್ ಇಲಾಖೆಯಲ್ಲಿ ಈ ಕಾರ್ಯಕ್ಕೆ ಲಾಠಿಯ ಬಳಕೆಯಾಗುತ್ತದೆ ಅಷ್ಟೇ. ಕ್ರಿಮಿನಲ್ ಕೇಸ್ ಗಳಲ್ಲಿ ಪೋಲಿಸ್ ಠಾಣೆಯಲ್ಲಿ ಅತೀಥ್ಯ ಪಡೆದು ಬಂದ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯವಾಗಿ ಮಾತಾಡಿಸಿ ನೋಡಿ, ಭೀಕರ ಸತ್ಯಗಳು ಹೊರಬರುತ್ತವೆ!.

ಆದರೆ ಲೈಂಗಿಕ ತಜ್ನರು ಹೇಳುವ ಸತ್ಯ ಬೇರೆಯದೇ ಆಗಿರುತ್ತದೆ. ಅವರು ಹೇಳುತ್ತಾರೆ. ಪುರಷನಿಗಿಂತಲೂ ಸ್ತ್ರೀಯ ಲೈಂಗಿಕ ಕಾಮನೆಗಳು ದುಪ್ಪಟ್ಟಾಗಿರುತ್ತವೆ. ಓಶೋ ತಮ್ಮ ’ಸ್ತ್ರೀ’ ಪುಸ್ತಕದಲ್ಲಿ ಇದಕ್ಕೆ ಸಮರ್ಥನೆಗಳನ್ನು ನೀಡುತ್ತರೆ. ಇದಕ್ಕೆ ವರ್ತಮಾನದಲ್ಲಿ ಪುರಾವೆಗಳು ಸಿಗುತ್ತವೆ. ಒಬ್ಬಳು ವೇಶ್ಯ ದಿನವೊಂದರಲ್ಲಿ ಹತ್ತು ಗಿರಾಕಿಗಳನ್ನಾದರೂ ತೃಪ್ತಿ ಪಡಿಸಬಲ್ಲಳು. ಆದರೆ ಒಬ್ಬ ಗಂಡಸು ಎಷ್ಟು ಜನರನ್ನು ಹಾಸಿಗೆಯಲ್ಲಿ ಗೆಲ್ಲಬಲ್ಲ ಹೇಳಿ? ಆಗ ಅವನಿಗೆ ನೆನಪಾಗುವುದೇ  ರಾಡ್, ಲಾಠಿಗಳು...

ಮೊನ್ನೆ ನನ್ನ ಸ್ನೇಹಿತರೊಬ್ಬರೊಡನೆ ದೆಹಲಿ ಘಟನೆ ಬಗ್ಗೆ ಮಾತಾಡುತ್ತಿದ್ದೆ. ಮಾತಿನ ಮಧ್ಯೆ ಅವರಲ್ಲಿ ಹೇಳಿದೆ. ನೀವು ಗಂಡಸರು ಮಾಡಿದ ಹಾಗೆ ಹುಡುಗಿಯರು ಕೂಡಾ ಮಾಡಿದರೆ ಹೇಗಿರುತ್ತೆ ಸ್ವಲ್ಪ ಕಲ್ಪ್ಪಿಸಿಕೊಳ್ಳಿ; ಒಂದು ಆರೇಳು ಹುಡುಗಿಯರು ಹುಡುಗನೊಭ್ಭನನ್ನು ಅಪಹರಿಸಿ ಅವನ ಬಾಯಿಗೆ ಒಂದೆರಡು ವಯಾಗ್ರ ಮಾತ್ರೆ ತುರುಕಿಸಿ ಅವನನ್ನು ಕಬ್ಬಿನ ರಸ ಹೀರಿದಂತೆ ಹೀರಿ ಬಿಟ್ಟರೆ ಹೇಗಿರುತ್ತೆ? ಎಂದೆ. ಬಿಟ್ಟ ಬಾಯಿ ಬಿಟ್ಟಂತೆ ನಿಂತ ಅವರನ್ನು ನಾನು ಮೈ ಮುಟ್ಟಿ ಎಚ್ಚರಿಸಬೇಕಾಯ್ತು. ವಿದೇಶದಲ್ಲಿ ಎಲ್ಲಿಯೋ ಒಂದು ಪ್ರಕರಣ ಈ ರೀತಿ ನಡೆದದ್ದು ವರದಿಯಾಗಿದ್ದು ಬಿಟ್ಟರೆ ಇನ್ನೆಲ್ಲೂ ನಡೆದಂತಿಲ್ಲ. ಆದ್ರೆ ಮುಂದೆ ನಡೆಯಲಾರದು ಎಂದು ಹೇಳುವುದು ಹೇಗೆ?.ಹಾಗಾಗಿ ನನ್ನ ಪುರುಷ ಸಂಗಾತಿಗಳಲ್ಲಿ ಕೇಳಿಕೊಳ್ಳುವುದಿಷ್ಟೇ; ನಿಮ್ಮ ಉಳಿವಿಗಾಗಿಯಾದರೂ ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಿ.........

  [ ಅವಧಿ ವೆಬ್ ಸೈಟ್ ನಲ್ಲಿ ಪ್ರಕಟವಾದ ಲೇಖನ ]
·          
·          

Saturday, December 15, 2012

ನಾವು ಯಾರಿಗಾದರೂ ಸಿಗುತ್ತಿರಲೇ ಬೇಕು ಗೆಳೆಯಾ...

ಪ್ರೇಮದ ವಿಷಯದಲ್ಲಿ ನಾವು ಇನ್ನೊಬ್ಬರ ’ಆಯ್ಕೆ’ ಆಗಿರಬೇಕು ಎಂಬುದು ನನ್ನ ಆಸೆ ಮತ್ತು ನಂಬಿಕೆ. ಆಗ ನಾವು ಸದಾ ಖುಷಿಯಾಗಿರುತ್ತೇವೆ. ಯಾಕೆಂದರೆ ನಮ್ಮ ’ಅಹಂ’ ಈ ಮೂಲಕ ವಿಜೃಂಭಿಸುತ್ತಲೇ ತಣಿಯುತ್ತಿರುತ್ತದೆ.

ಶರೂ, ನೀನು ನನ್ನ ಆಯ್ಕೆ ಆಗಿಬಿಟ್ಟೆ. ನಾನು ನಿನ್ನ ಆಯ್ಕೆ ಆಗಿದ್ದೇನೆಯೇ ಎಂಬುದನ್ನು ತಿಳಿದುಕೊಳ್ಳಲು ಸತತ ಪ್ರಯತ್ನಪಡುತ್ತಲೇ ಇಷ್ಟು ದೂರ ಸಾಗಿ ಬಂದೆ. ದುರ್ಭಲವಾಗುತ್ತಿರುವ ಮನಸ್ಸನ್ನು ಮತ್ತೆ ಮತ್ತೆ  ಗಟ್ಟಿಗೊಳಿಸುತ್ತಲೇ, ಒಳಗೊಳಗೆ ಟೊಳ್ಳಾಗುತ್ತಿದ್ದೆನೆನೋ ಎಂಬ ಭಯದಲ್ಲಿ ಬದುಕಿಬಿಟ್ಟೆ. ನಾನು ಸೋತು ಹೋಗುತ್ತಿದ್ದೆನೆಯೇ? ಸೋತರೇನಂತೆ ಅದು ಶರುವಿನೆದುರು ತಾನೇ? ಎಂದು ನನ್ನನ್ನು ನಾನು ಸಂತೈಸಿಕೊಳ್ಳಬಹುದು. ಆದರೂ ಸೋಲಿನಲ್ಲೂ ಒಂದು ಘನತೆಯಿರಬೇಕಲ್ಲವೇ?

ಸಮುದ್ರದೆದುರು ಸೋತರೆ ಅದು ನನ್ನ ಕಾಲನ್ನು ಚುಂಬಿಸಿ ನನ್ನ ಸೋಲನ್ನು ಗೌರವಿಸುತ್ತದೆ. ಹಿಮಾಲಯದೆದುರು ಸೋತರೆ ಅದು ಹಿಮಮಣಿಯನ್ನು ಸುರಿಸಿ ನನ್ನ ಕಣ್ಣರೆಪ್ಪೆಗಳನ್ನು ಅಲಂಕರಿಸುತ್ತದೆ. ಆಕಾಶದೆದುರು ಸೋತರೆ ಅದು ಬೆಳದಿಂಗಳ ತಂಪನ್ನೆರೆದು ಕ್ಷೋಭೆಗೊಂಡ ಮನಸ್ಸನ್ನು ಸಂತೈಸುತ್ತದೆ. ಆದರೆ ನಿನ್ನೆದುರು ಸೋಲುತ್ತಿದ್ದೇನೆ ಎಂಬ ಭಾವನೆಯೇ ನನ್ನಲ್ಲಿ ಅಸ್ಥಿರತೆಯನ್ನೂ, ಆತಂಕವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿದೆಯಲ್ಲಾ..ಅದೇ ನನಗೆ ಸೋಜಿಗ!.

ನಿನಗ್ಗೊತ್ತಾ ಶರೂ,  ರಾತ್ರಿ ನಿನ್ನ ಕನಸಿನೊಂದಿಗೆ ದಿಂಬಿಗೆ ತೋಳು ಚೆಲ್ಲುತ್ತೇನೆ. ಬೆಳಿಗ್ಗೆ ಏಳುವಾಗಲೂ ಮನಸ್ಸಿನ ತುಂಬಾ ನಿನ್ನದೇ ನೆನಪು. ಹೊತ್ತು ಮೇಲೇರಿದಂತೆಲ್ಲಾ ಕಲ್ಪನಾ ಕುದುರೆಯ ನಾಗಾಲೋಟ. ಕೆಲವೊಮ್ಮೆ ಚಿಕ್ಕಪುಟ್ಟ ಸಂಗತಿಗಳನ್ನೂ ಕೂಡಾ ನಿನ್ನಲ್ಲಿ ಹೇಳಿಕೊಳ್ಳಬೇಕೆಂಬ ತೀವ್ರ ತುಡಿತ. ನಾನು ಇಲ್ಲೇ ಇದ್ದರೂ  ಕುಣಿದು ಕುಪ್ಪಳಿಸುವ ಮನಸ್ಸು ನಿನ್ನ ತೋಳುಗಳಲ್ಲಿ ತೋಳು ಸೇರಿಸಿ ವಾಕಿಂಗ್ ಹೊರಟಿರುತ್ತೆ.

ದೊಡ್ಡ ದೊಡ್ಡ ವಿಚಾರಗಳನ್ನು ಹೇಳಿಕೊಳ್ಳಲಿಕೆ, ಚರ್ಚಿಸಲಿಕ್ಕೆ ಬಹಳಷ್ಟು ಜನ ಸ್ನೇಹಿತರು ಸಿಗುತ್ತಾರೆ. ಆದರೆ ಆ ಕ್ಷಣದ ಖುಷಿಗಳನ್ನು ಅನುಭವಿಸಲು, ಬಿಂದುವಿನಲ್ಲೂ ಸಿಂಧುವನ್ನು ಕಾಣುವವರು ಯಾರೂ ಇಲ್ಲ. ಎಂತಹ ಗಂಭೀರ ವ್ಯಕ್ತಿಗೂ ಕೂಡಾ ಮನಸ್ಸು  ಬಿಚ್ಚಿಕೊಳ್ಳಲೊಂದು ಕಂಫರ್ಟ್ ಝೋನ್ ಬೇಕು; ಅಳಲೊಂದು ಹೆಗಲು ಬೇಕು.ಸಾಂತ್ವನದ ಸ್ಪರ್ಷವೊಂದು ಬೇಕು. ಆದರೆ ಬಹಳಷ್ಟು ಜನರಿಗೆ ಆ ಭಾಗ್ಯ ಇರುವುದಿಲ್ಲ. ನಿನ್ನಿಂದ ಆ ಭಾಗ್ಯ ನನಗೆ ಒಲಿದು ಬರಲಿ ಎಂದು ನನ್ನ ಮನಸ್ಸು ಹಂಬಲಿಸುತ್ತಿತ್ತು. ಆದರೆ ಅದು ನಿಜವಾಗಲಾರದು ಎಂದು ನನಗೆ ಗೊತ್ತಿತ್ತು. ಯಾಕೆ ಗೊತ್ತಾ?

ಭಾವನೆಗಳೇ ಇಲ್ಲದ ಬರಡು ನೆಲ ನೀನು. ನಿನ್ನ ಬಾಹ್ಯ ವ್ಯಕ್ತಿತ್ವವನ್ನು ನೋಡಿ ನಾನು ಮನಸೋತು ಹೋದೆ. ನಿನ್ನ ಹೊರ ವ್ಯಕ್ತಿತ್ವಕ್ಕೆ ಆಂತರಿಕ ಗುಣಗಳನ್ನು ನಾನೇ ಆರೋಪಿಸಿಕೊಂಡೆ. ಆ ಗುಣಗಳನ್ನು ಆರಾಧಿಸತೊಡಗಿದೆ. ನಿನ್ನಲ್ಲಿ ಇಲ್ಲದಿರುವುದನ್ನು ಇದೆ ಎಂದು ಭಾವಿಸತೊಡಗಿದೆ. ಆ ಮೂಲಕ ನೀನು ನನ್ನ ಕಲ್ಪನೆಯಲ್ಲೇ ಬೆಳೆಯುತ್ತಾ...ಬೆಳೆಯುತ್ತಾ..ಪರಿಪೂರ್ಣ ಮಾನವನಾಗುತ್ತಾ ಹೋದೆ.

ನೀನು ಇದ್ದಲಿಯೇ ಇದ್ದೆ. ಹಾಗೆಯೇ ಇದ್ದೆ. ಅದನ್ನು ಒಪ್ಪಿಕೊಳ್ಳುವುದು ನನ್ನ ಮನಸ್ಸಿಗೆ ಕಷ್ಟವಾಗುತ್ತಿತ್ತು. ಜಗತ್ತು ನೋಡುವವರ ಕಣ್ಣಲ್ಲಿದೆ ಎಂಬುದು ನನಗೆ ಗೊತ್ತಿತ್ತು. ಶರಧಿ ಎಂಬ ನೀನು ನನ್ನ ದೃಷ್ಟಿಯಲ್ಲಿ ’ಏನೋ ’ ಆಗಿ ಕಂಡು ಬರುತ್ತಲಿದ್ದೆ.
ನೀನೊಬ್ಬ ನನ್ನವನಾಗುತ್ತಿದ್ದರೆ ನನ್ನ ಬದುಕೆಷ್ಟು ಸುಂದರ ಆಗುತ್ತಿತ್ತು. ’ನನ್ನವನಾಗುವುದು’ ಅನ್ನುತ್ತಿಯಲ್ಲ ಹಾಗೆಂದರೇನು? ಎಂದು ನೀನು ಕೇಳಲೂಬಹುದು. ಅದು ನನ್ನೊಳಗಿನ ಭಾವನೆ ಅಷ್ಟೇ. ಅದಕ್ಕೆ ಪುಷ್ಟಿ ಹೊರಜಗತ್ತಿನಿಂದ ದೊರೆಯುತ್ತದೆ. ಅದು ನಿನ್ನ ವರ್ತನೆಯಿಂದ ನನಗೆ ದೊರೆಯಬೇಕಿತ್ತು.

ಬದುಕಿನ ಖುಷಿ ಮತ್ತು ಸತ್ಯದ ಅವಿಷ್ಕಾರ ಅತೀ ಸಣ್ಣ ಅನುಭವಗಳಲ್ಲಿರುತ್ತದೆ. ನಾವು ದೊಡ್ಡ ಘಟನೆಗಳಿಗೆ ತಕ್ಷಣ ಸ್ಪಂದಿಸುತ್ತೇವೆ.ಆದರೆ ನವಿರಾದ ಸೂಕ್ಷ್ಮ ಭಾವಗಳಿಗೆ? ಮೊನ್ನೆ ಅರಮನೆ ಮೈದಾನದಲ್ಲಿ ಏರ್ಪಾಡಾಗಿದ್ದ ಪುಸ್ತಕ ಮೇಳಕ್ಕೆ ’ನೀನು ಬರುವಿಯಾ?’ ಎಂದು ನಾನು ಕರೆದಿದ್ದೆ. ನೀನು ನಿರಾಕರಿಸಿದ್ದೆ. ನಾನೊಬ್ಬಳೇ ಹೋಗಿದ್ದೆ. ಮುನ್ನೂರಕ್ಕೂ ಹೆಚ್ಚು ಮಳಿಗೆಗಳಿದ್ದವು . ಒಂದು ವಾರದ ಅವಧಿಯಲ್ಲಿ ಒಂದೂವರೆ ಲಕ್ಷ ಜನರು ಇದಕ್ಕೆ ಭೇಟಿ ನೀಡಿದ್ದರು. ಅಂದರೆ ದಿನಕ್ಕೆ ಸುಮಾರು ಇಪ್ಪತ್ತೈದು ಸಾವಿರ ಜನರು. ಓದುವ ಅಭಿರುಚಿ ಜಾಸ್ತಿಯಾಗುತ್ತಿದೆಯೆಂದು ಹೆಮ್ಮೆಪಟ್ಟುಕೊಳ್ಳಬೇಡ. ಸೀಡಿ ಮತ್ತು ವ್ಯಕ್ತಿತ್ವ ವಿಕಸನದಂತಹ ಮಾಹಿತಿಗಳನ್ನು ನೀಡುವ ಇಂಗ್ಲೀಷ್ ಬುಕ್ ಸ್ಟಾಲ್ ಗಳ ಎದುರು ಜನರ ಜಾತ್ರೆಯಿರುತ್ತಿತ್ತು. ಕಲೆ ಮತ್ತು ಸಾಹಿತ್ಯ ಸಂಬಂಧಿ ಪುಸ್ತಕಗಳ ಅಂಗಡಿಯೆದುರು ಬೆರಳೆಣಿಕೆಯ ಜನರಿದ್ದರು.

ಆ ಬೆರಳೆಣಿಕೆಯ ಜನರಲ್ಲಿ ನೀನೂ ಒಬ್ಬನಾಗಿರಬೇಕೆಂದು ನಾನು ಬಯಸಿದ್ದೆ. ನನ್ನೊಡನೆ ಸುಮ್ಮನೆ ನಾಲ್ಕು ಹೆಜ್ಜೆ ಹಾಕಿದ್ದರೆ ಆ ಸಾನಿಧ್ಯ ಸುಖ ನನ್ನಲ್ಲಿ ಹೊಸ ಕನಸುಗಳ ಅಂಕುರಕ್ಕೆ ನಾಂದಿಯಾಗುತ್ತಿತ್ತು. ನೀನು ಬರಲಿಲ್ಲ. ಆದರೂ ನಿನಗೆಂದು ಕೆಲವು ಪುಸ್ತಕಗಳನ್ನು ಖರೀದಿ ಮಾಡಿದ್ದೆ. ’ಯಾವಾಗ ಸಿಗ್ತೀಯಾ? ನಿನಗಾಗಿ ಒಂದಷ್ಟು ಪುಸ್ತಕ ಖರೀದಿ ಮಾಡಿದ್ದೆ’ ಎಂದಾಗ ನೀನು, ’ಯಾರಿಗೆಂತ ಕೊಂಡಿದ್ದೆ?’ ಎಂದು ಉಢಾಪೆಯ ಮಾತಾಡಿದ್ದೆ.

ಕಳೆದ ವಾರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಬಿ,ವಿ.ರಾಜಾರಾಂ ಅವರ ’ಮೂಕಜ್ಜಿಯ ಕನಸುಗಳು’ ನಾಟಕಕ್ಕೆ ನಿನ್ನನ್ನು ಬರಹೇಳಿದ್ದೆ. ನೀನು ಬರಲಿಲ್ಲ. ನನಗೇನೂ ನಷ್ಟವಾಗಲಿಲ್ಲ. ನೀನು ಮಾತ್ರ ಈ ವರ್ಷದ ಅತ್ಯುತ್ತಮ ನಾಟಕವೊಂದರ ವೀಕ್ಷಣೆಯಿಂದ ವಂಚಿತನಾದೆ. ನಿನಗೆ ಕಡಿದು ಗುಡ್ಡೆ ಹಾಕುವಷ್ಟು ಕೆಲಸವೇನೂ ಇರುವುದಿಲ್ಲ ಎಂದು ನನಗೆ ಗೊತ್ತು. ಸುಮ್ಮನೆ ಮಲಗಿಕೊಂಡು ಸೂರು ನೋಡುತ್ತಾ ಹಗಲು ಕನಸು ಕಾಣುತ್ತಿರುತ್ತಿಯಾ..ಮನುಷ್ಯನಿಗೆ ಗರಿಷ್ಟ ನೂರು ವರ್ಷ ಆಯುಸ್ಸಿರುವುದು ಎಂಬುದನ್ನು ನೀನು ಆಗಾಗ ಮರೆಯುತ್ತಿಯಾ!

ಕೆಲವು ವರ್ಷಗಳ ಹಿಂದೆ ನನ್ನ ಮನೆಯ ಅಂಗಳದಲ್ಲಿ ನಿನ್ನನ್ನು ನೋಡಿದಾಗ ಹಲವು ಶತಮಾನಗಳಿಂದ ನಾನು ನಿನ್ನನ್ನೇ ಹುಡುಕುತ್ತಿದ್ದೇನೆ ಎನಿಸಿತ್ತು. ನನ್ನ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಿತ್ತು ಎಂದು ರೋಮಾಂಚನಗೊಂಡಿದ್ದೆ. ಈತನ ಕಿರು ಬೆರಳು ಹಿಡಿದು ಎಂತಹ ದುರ್ಭರ ಕ್ಷಣಗಳನ್ನಾದರೂ ಗೆಲ್ಲಬಲ್ಲೆ ಎನಿಸಿತ್ತು. ಆದರೆ ಈಗ....?

ಸೋತು ಹೋಗಿದ್ದೇನೆ ಕಣೋ; ನಿನಗಲ್ಲ
ಬದುಕಿನ ಭ್ರಮೆಗಳಿಗೆ, ಮನಸ್ಸುಗಳ ನಿಗೂಢತೆಗೆ.
ಅಚ್ಚರಿಪಟ್ಟಿದ್ದೇನೆ; ನನ್ನಲ್ಲೇ ಹುಟ್ಟಿಕೊಳ್ಳುವ ಕ್ಷುಲ್ಲಕ ಬಯಕೆಗಳಿಗೆ,
ಬದಲಾಗುವ ಆಕಾಶದ ಬಣ್ಣಗಳಿಗೆ.
ಮನಸ್ಸು ಮ್ಲಾನಗೊಂಡಿದೆ; ಸಂಬಂಧಗಳ ಎಳೆ ಶಿಥಿಲಗೊಂಡಾಗ
ಹಾಲುಗಲ್ಲದ ಹಸುಳೆಗಳು ಬಿಕ್ಕಳಿಸಿದಾಗ.

ಸಂಬಂಧವೊಂದು ನಮ್ಮಲ್ಲಿ ಸದಾ ಅಸ್ಥಿರತೆಗೆ, ಆತಂಕಕ್ಕೆ ಕಾರಣವಾಗುತ್ತಿದ್ದರೆ, ಪ್ರಯತ್ನಪಟ್ಟಾದರೂ ಅಥವಾ ಯಾವ ಬೆಲೆ ತೆತ್ತಾದರೂ ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು. ಇದು ಗೊತ್ತಿದ್ದೂ ಕೂಡಾ ನಿನ್ನ ನೆನಪಿನಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಒಂದು ಒಳ್ಳೆಯ ಗೆಳೆತನವೆಂದರೆ, ಅದು ನಮಗರಿವಿಲ್ಲದಂತೆ ನಮ್ಮನ್ನು ಬದಲಾಯಿಸುತ್ತಿರಬೇಕು. ಮತ್ತು ಆ ಬದಲಾವಣೆ ಸಕಾರಾತ್ಮಕವಾಗಿರಬೇಕು. ನಿನ್ನಿಂದ ನಾನು ಏನು ಬದಲಾವಣೆ ಕಂಡೆ? ಅದು ನನಗೆ ಮಾತ್ರ ಗೊತ್ತು. ಅದನ್ನು ನಿನಗೆ ಹಲವು ಬಾರಿ ಹೇಳಲೆತ್ನಿಸಿದ್ದೆ. ಆದರೆ ನಿನಗೆ ಆ ಬಗ್ಗೆ ಗಮನವಿರಲಿಲ್ಲ.
ನನಗೊತ್ತು ಶರೂ, ಯಾರೂ ಯಾರಿಗೂ ಸಿಗಲಾರರು. ಆದರೂ ಯಾವುದೋ ಒಂದು ಮಿತಿಯೊಳಗೆ ನಾವು ಯಾರಿಗೋ ಸಿಗುತ್ತಲಿರಬೇಕು. ನನ್ನ ಮಟ್ಟಿಗೆ ಆ ’ಯಾರೋ’ ನೀನಾಗಿರಬೇಕೆಂದು ಆಸೆ ಪಟ್ಟಿದ್ದೆ. ಸಂಬಂಧಗಳಿಗೆ ನಿರಂತರತೆಯಿದೆ. ಅನುಭವಕ್ಕೊಂದು ಮಿತಿಯಿದೆ. ನಿನ್ನೊಂದಿಗಿನ  ಸಂಬಂಧವನ್ನು ಅನುಭಾವವನ್ನಾಗಿಸಿಕೊಳ್ಳುವ ನಿರಂತರ ಪ್ರಯತ್ನ ನನ್ನದು. ಅದಕ್ಕೇ ಹೇಳುತ್ತಿದ್ದೇನೆ; ನೀನಿಲ್ಲದೆ ನಾನಿಲ್ಲ

[ ಐದಾರು ವರ್ಷಗಳ ಹಿಂದೆ ಸಾಗರಿಕಾ ಎಂಬ ಹೆಸರಿನಲ್ಲಿ ನಾನು ’ಓಮನಸೇ’ ಗಾಗಿ ಬರೆದ ಲಹರಿ ]

Wednesday, December 12, 2012

ನಲ್ಲಮಲ ಕಾಡಿನಲ್ಲಿ...ಉಗ್ರನರಸಿಂಹ...!ಪಾವನ ನರಸಿಂಹ

ಪ್ರಹ್ಲಾದನ ಅಪ್ಪ ಹಿರಣ್ಯಕಶಿಪನನ್ನು ನರಸಿಂಹ  ಕೊಂದ ಕತೆಯನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಅಂತಹದೊಂದು ಘಟನೆ ನಡೆದಿದೆಯೆಂದು ನಂಬಲಾದ ನಿರ್ಧಿಷ್ಟ  ಜಾಗವೊಂದು ನಿಜವಾಗಿಯೂ ಈ ಭರತ ಭೂಮಿಯಲ್ಲಿದೆಯೆಂದು ನನಗೆ ಗೊತ್ತಿರಲಿಲ್ಲ. ಕಳೆದ ವಾರ ಆ ಜಾಗದಲ್ಲಿ ನಾನು ಅಲೆದಾಡಿ ಬಂದೆ.
ಅಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಲ್ಲಮಲ ಅರಣ್ಯದೊಳಗಿದೆ ಹಿರಣ್ಯಕಶಿಪನನ್ನು ನರಸಿಂಹ ಕೊಂದನೆಂದು ಆಸ್ತಿಕರು ನಂಬಿರುವ ಜಾಗ. ನಲ್ಲಮಲ ಅರಣ್ಯ ಎಂದೊಡನೆ ನಮಗೆ ನೆನಪಾಗುವುದು ಎರಡು ವಿಚಾರಗಳು ಒಂದು ಇಲ್ಲಿನ ದಟ್ಟ ಅರಣ್ಯದಲ್ಲಿ ಹರಡಿಕೊಂಡಿರುವ ನಕ್ಸಲ್ ಮತ್ತು ಮಾವೋ ಉಗ್ರಗಾಮಿಗಳು, ಇನ್ನೊಂದು, ಎರಡು ವರ್ಷಗಳ ಹಿಂದೆ ಇದೇ ಅರಣ್ಯ ಪ್ರದೇಶದಲ್ಲಿ ಆಗಿನ ಅಂಧ್ರ ಮುಖ್ಯಮಂತ್ರಿಗಳಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿದ್ದು.
ಗೋಧೂಳಿ ಲಗ್ನ..!

ನಾನೇನೂ ಉಗ್ರನರಸಿಂಹನನ್ನು ನೋಡುವುದಕ್ಕೆಂದೇ ಹೋದವಳಲ್ಲ. ನನ್ನ ಗುರಿಯಿದ್ದುದು ಕದಳಿ. ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನಲ್ಲಿ ಐಕ್ಯಗೊಂಡ ಆ ಜಾಗವನ್ನು ಬದುಕಿನಲ್ಲಿ ಒಮ್ಮೆಯಾದರೂ ಕಂಡು ಪುನೀತಳಾಗಬೇಕೆಂಬ ಮಹದಾಸೆಯನ್ನು ಹೊತ್ತು ನಾನು ಶ್ರೀಶೈಲಕ್ಕೆ ಹೋಗಿದ್ದೆ. ಚಾರಣದಲ್ಲಿ ಆಸಕ್ತಿಯಿದ್ದ ಒಂದಷ್ಟು ಮಹಿಳೆಯರು ಒಟ್ಟಾಗಿ ಸೇರಿ ಟ್ರಾವಲ್ಸ್ ಏಜನ್ಸಿಯೊಂದನ್ನು ಸಂಪರ್ಕಿಸಿ ನಾವಾಗಿ ಏರ್ಪಡಿಸಿಕೊಂಡ ಪ್ಯಾಕೇಜ್ ಟೂರಾಗಿತ್ತು ಅದು. ನಮ್ಮ ತಂಡದಲ್ಲಿ ಹಿಮಾಲಯದ ವಿವಿಧ ಜಾಗಗಳಲ್ಲಿ ಚಾರಣಗಳನ್ನು ನಡೆಸಿದ ಅನುಭವಿಗಳಿದ್ದರು. ನಮಗಾಗಿಯೇ ರುಚಿಕಟ್ಟಾದ ಅಡುಗೆಯನ್ನು ತಯಾರಿಸುವ ಪಾಕ ಪಂಡಿತರಿದ್ದರು.
ಬೆಂಗಳೂರಿನಿಂದ ೫೮೦ ಕಿ.ಮೀ ದೂರದಲ್ಲಿರುವ ಶ್ರೀಶೈಲವನ್ನು ಹದಿಮೂರು ಘಂಟೆಗಳ ಪ್ರಯಾಣದ ನಂತರ ನಾವು ತಲುಪಿದ್ದೆವು.ನಮಗೆಲ್ಲಾ ಅಕ್ಕನ ಗುಹೆಯನ್ನು ಕಾಣುವ ತವಕ; ಕದಳಿಯನ್ನು ತಲುಪುವ ಹಂಬಲ. ಆದರೆ ನಮ್ಮ ಆಸೆಗೆ ಕರ್ನೂರು ಜಿಲ್ಲಾಡಳಿತ ತಣ್ಣೀರೆರಚಿತು. ಆ ಪ್ರದೇಶದಲ್ಲಿ ನಕ್ಸಲ್ ಮತ್ತು ಮಾವೋ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿವೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಕದಳಿ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದರು. ಅವರ ಮಾತುಗಳಿಂದ ನಮಗೆ ನಿಜವಾಗಿಯೂ ಅಘಾತವಾಯ್ತು. ಅಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕೆಂದು ನಮಗೆ ಗೊತ್ತಿತ್ತು. ಹಾಗಾಗಿ ನಮ್ಮ ಪ್ರವಾಸವನ್ನು ಆಯೋಜಿಸಿದವರಿಗೆ ನಾವು ಈ ಬಗ್ಗೆ ಮೊದಲೇ ಹೇಳಿದ್ದೆವು. ಅವರು ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದು ನಮಗೆ ಬೆಂಗಳೂರಿನಲ್ಲೇ ತಿಳಿಸಿದ್ದರು. ಹಾಗಾಗಿ ನಾವು ನಿಶ್ಚಿಂತೆಯಾಗಿದ್ದೆವು. ಇಲ್ಲಿ ಬಂದಾಗ ಅಕ್ಕನ ಗುಹೆಗೆ ಮತ್ತು ಕದಳಿಗೆ ಹೋಗುವ ಬಗ್ಗೆ ಇರುವ ಕಟ್ಟುನಿಟ್ಟಿನ ನಿರ್ಭಂದದ ಬಗ್ಗೆ ಅರಿವಾಯ್ತು. . ಆಗ ನನಗೆ ನೆನಪಿಗೆ ಬಂದದ್ದು, ನಾವು ಬೆಂಗಳೂರಿನಿಂದ ಶ್ರೀಶೈಲ ಮಾರ್ಗವಾಗಿ ಪಯಣಿಸುತ್ತಿದ್ದಾಗ ಮಧ್ಯರಾತ್ರಿಯಲ್ಲಿ ನಮ್ಮ ವಾಹನವನ್ನು ತಡೆದು ನಿಲ್ಲಿಸಿದ ಅರಣ್ಯ ಇಲಾಖೆಯವರು ನಮ್ಮನೆಲ್ಲಾ ಎಬ್ಬಿಸಿ ಕೈಯ್ಯಲ್ಲಿ ಲಿಸ್ಟ್ ಒಂದನ್ನು ಹಿಡಿದುಕೊಂಡು ಪ್ರತಿಯೊಭ್ಭರ ಹೆಸರು ಕರೆದು ನಮ್ಮ ಐಡೆಂಟಿಟಿಯನ್ನು ಪರಿಶಿಲಿಸಿದ್ದು. ಯಾಕೆ ಹೀಗೆ ಅಂತ ಅಲ್ಲಿ ಅವರನ್ನು ಪ್ರಶ್ನಿಸಿದಾಗ ’ನೀವು ಅರಣ್ಯ ಪ್ರದೇಶವನ್ನು ಪ್ರವೇಶಿಸುತ್ತಿದ್ದೀರಿ’ ಎಂಬ ಉತ್ತರ ಬಂದಿತ್ತು. ಈಗ ಅದು ನೆನಪಿಗೆ ಬಂದು ಅಕ್ಕನ ಗುಹೆವರೆಗಾದರೂ ಹೋಗಲು ಅನುಮತಿ ನೀಡಿ ಎಂದು ಅಂಗಲಾಚಿದೆವು. ಅವರು ಜಪ್ಪಯ್ಯ ಅನ್ನಲಿಲ್ಲ.
ಪಾತಾಳ ಗಂಗೆಯಿಂದ ಹತ್ತಿ ಬರುವುದು ಕಷ್ಟ...ಕಷ್ಟ...!

ಶ್ರೀಶೈಲದಲ್ಲಿರುವುದು ಅಕ್ಕ ಮಹಾದೇವಿಯ ಆರಾಧ್ಯ ದೈವ ಶ್ರೀ ಚೆನ್ನಮಲ್ಲಿಕಾರ್ಜುನ. ಅರ್ಥಾತ್ ಶಿವ. ೧೨ ಜೋತಿರ್ಲಿಂಗಳಲ್ಲಿ ಇದು ಎರಡನೆಯದು.. ಇದು ಶಕ್ತಿಪೀಠವೂ ಹೌದು. ಅಕ್ಕಾ ಇವನನ್ನೇ ಹುಡುಕಿಕೊಂಡು ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರ ಸಮೀಪವಿರುವ ಉಡುತಡಿಯಿಂದ ಬಿದರ್ ಜಿಲ್ಲೆಯ ಬಸವಕಲ್ಯಾಣದ ಮಾರ್ಗವಾಗಿ ಸ್ರೀಶೈಲವನ್ನು ತಲುಪಿದ್ದಳು. ಇಪ್ಪತ್ತೊಂದನೆಯ ಶತಮಾನದಲ್ಲಿರುವ ನಮಗೆ ಅದೇನು ಮಹಾ ಎಂದು ಅನ್ನಿಸಬಹುದು. ಆದರೆ ೧೨ನೇ ಶತಮಾನದಲ್ಲಿ ಇಪ್ಪತ್ತರ ಅಸುಪಾಸಿನ ಸುಂದರ ಯುವತಿಯೊಬ್ಬಳು ಸಾವಿರಾರು ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಅದೂ ಕೂಡಾ ದಟ್ಟವಾದ ಅರಣ್ಯಪ್ರದೇಶದಲ್ಲಿ ಕ್ರಮಿಸಿಸುವುದೆಂದರೆ ಅದು ಸಾಮಾನ್ಯವಾದ ವಿಚಾರವಲ್ಲ. ಮೆಚ್ಚಿದವನನ್ನು ಕೂಡಬೇಕೆಂಬ ಆಕೆಯ ಸಂಕಲ್ಪ ಶಕ್ತಿಯೇ ಆಕೆಯನ್ನು ಅಲ್ಲಿಯ ತನಕ ನಡೆಸಿರಬಹುದು !. ಹಾಗೆನ್ನಿಸಿದ್ದೇ ತಡ ನಾವು ಬೆಂಗಳುರಿನ ಪ್ರಭಾವಿ ವ್ಯಕ್ತಿಗಳನ್ನೆಲ್ಲಾ ಸಂಪರ್ಕಿಸಿದೆವು. ಹೇಗಾದರೂ ನಮಗೆ ಅನುಮತಿಯನ್ನು ದೊರಕಿಸಿಕೊಡಿ ಎಂದು ದುಂಬಾಲು ಬಿದ್ದೆವು. ಮಹಿಳಾಮಣಿಗಳ ಹಠ ತಾನೇ? ಅವರೂ ತಮ್ಮ ಕೈಲಾದ ಪ್ರಯತ್ನ ಮಾಡಿದರು. ಆದರೆ ಅಲ್ಲಿಯ ಜಿಲ್ಲಾಧಿಕಾರಿ, ಅರಣ್ಯಸಂರಕ್ಷಕರು ತಲೆಯಾಡಿಬಿಟ್ಟರು.
ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ

ಶ್ರೀಶೈಲ ಅಂದ್ರಪ್ರದೇಶದಲ್ಲಿ ಇದೆಯಾದರೂ ಅಲ್ಲಿಗೆ ಬರುವವರಲ್ಲಿ ಮುಕ್ಕಾಲು ಭಾಗ ಜನರು ಕರ್ನಾಟಕದವರೇ ಆದ ಕಾರಣದಿಂದಾಗಿ ಅಲ್ಲಿ ಪೂರ್ತಿ ಕನ್ನಡದ ವಾತಾವರಣವಿದೆ. ಅಲ್ಲಿರುವ ಛತ್ರಗಳೆಲ್ಲ ಕನ್ನಡಿಗರು ಕಟ್ಟಿಸಿರುವುದೇ ಆಗಿವೆ. ನಾವು ಹೋದ ದಿನ ಮಲ್ಲಿಕಾರ್ಜುನನ ಪತ್ನಿಯೂ, ಅಲ್ಲಿಯ ಶಕ್ತಿ ದೇವತೆಯೂ ಆದ ಭ್ರಮರಾಂಬಿಕೆಯ ದರ್ಶನ ಮಾಡಿ ನಾಳೆ ಹೇಗಾದರೂ ಮಾಡಿ ಅಕ್ಕನ ಗುಹೆತನಕವಾದರೂ ಹೋಗಬೇಕೆಂದು ಕನಸು ಕಾಣುತ್ತಾ ಮಲಗಿದೆವು.
ಮರುದಿನ ಬೆಳಿಗ್ಗೆ ನಾವು ಸೀದಾ ಹೋಗಿದ್ದು ಪಾತಾಳಗಂಗೆ ನೋಡಲು. ಇದೇ ಪಾತಾಳಗಂಗೆಗೆ ಹೇಮರೆಡ್ಡಿ ಮಲ್ಲಮ್ಮನ ಕಣ್ಣಿಂದ ಹರಿದ ನೀರು ಬಂದು ಸೇರುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಮಲ್ಲಿಕಾರ್ಜುನ ದೇವಸ್ಥಾನದಿಂದ ಸುಮಾರು ಎರಡು ಕೀ.ಮೀ ದೂರದಲ್ಲಿ ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನಿಗೆ ಆಲಯವನ್ನು ಕಟ್ಟಲಾಗಿದೆ. ಆಕೆಯ ವಿಗ್ರಹದ ಪಕ್ಕದಲ್ಲೇ ನಿರಂತರವಾಗಿ ಒಸರುವ ಜಲವಿದೆ. ಅದೇ ಮಲ್ಲಮ್ಮನ ಕಣ್ಣೀರು. ಇದನ್ನೇ  ಭಕ್ತರಿಗೆ ತೀರ್ಥವಾಗಿ ನೀಡುತ್ತಾರೆ. ಪಾತಾಳಗಂಗೆಯನ್ನು ನೋಡಲು  ಐನೂರು ಮೆಟ್ಟಲುಗಳನ್ನು ಇಳಿದು ಹೋಗಬೇಕು. ನಾವು ಬೆಂಗಳೂರಿಗರಲ್ಲವೇ ೫೦ ರೂಪಾಯಿ ಕೊಟ್ಟು ರೋಪ್ ವೇಯಲ್ಲಿ ಹೋದೆವು. ಅಲ್ಲಿ ಹರಿಯುತ್ತಾಳೆ ಕೃಷ್ಣೆ. ಇದೇ ಕೃಷ್ಣಾ ನದಿಯಲ್ಲಿ ದೋಣಿಯಲ್ಲಿ ೧೫ ಕಿ.ಮೀ ಕ್ರಮಿಸಿ,ಕಾಡನ್ನು ಪ್ರವೇಶಿಸಿ ಎರಡು ಮೈಲಿ ನಡೆದರೆ ಅಕ್ಕನ ಗುಹೆಗಳು ಸಿಗುತ್ತವೆ. ಅಲ್ಲಿ ಒಟ್ಟು ಆರು ಗುಹೆಗಳಿವೆ. ಮಧ್ಯದ ಗುಹೆಯಲ್ಲಿ ಅಕ್ಕಾ ನೆಲೆಸಿದಳೆಂದು ನಂಬಲಾಗುತ್ತದೆ. ಇಲ್ಲಿಂದ ಹನ್ನೆರಡು ಮೈಲಿ ದಟ್ಟಾರಣ್ಯದಲ್ಲಿ ನಡೆದರೆ ಕದಳಿವನ ಸಿಗುತ್ತದೆ. ಅಲ್ಲಿ ಆಕೆ ತನ್ನ ಇಷ್ಟ ದೈವನಲ್ಲಿ ಐಕ್ಯವಾದಳೆಂಬುದು ಪ್ರತಿತಿ.
ಭವನಾಶಿನಿಯಲ್ಲಿ ಸ್ನಾನದ ಮೋಜು

ನಮ್ಮ ಕದಳಿಯ ಕನವರಿಕೆ ಕುಂದಿರಲಿಲ್ಲ. ಎಷ್ಟಾದರೂ ನಾವು ಬೆಂಗಳೂರಿಗರು. ವಿಧಾನಸೌಧಕ್ಕೆ ಹತ್ತಿರದಲ್ಲಿರುವವರು. ಹಾಗಾಗಿ ಪಾತಾಳಗಂಗೆಯಲ್ಲಿರುವ ಅಂಬಿಗರಿಗೆ ಲಂಚದ ಆಮೀಷವೊಡ್ಡಿ ’ಅಕ್ಕನ ಗುಹೆಗೆ ದೋಣಿ ಬಿಡಯ್ಯಾ’ ಎಂದು ಕೇಳಿಕೊಂಡೆವು. ಅವರು ತಲೆಯಾಡಿಬಿಟ್ಟರು. ಪೆಚ್ಚು ಮುಖದಿಂದ ತಲೆಯೆತ್ತಿ ನೋಡಿದರೆ ಪಾತಾಳಗಂಗೆಗೆ ಇಳಿದು ಬರುವ ಅಸಂಖ್ಯಾತ ಮೆಟ್ಟಲುಗಳು ನಮ್ಮನ್ನು ಅಣಕಿಸಿದಂತಾಯ್ತು. ಇದನ್ನು ಹತ್ತಿದ ಅನುಭವವಾದರೂ ದಕ್ಕಲಿ ಎಂದುಕೊಂಡು ಉತ್ಸಾಹದಿಂದ ಮೆಟ್ಟಲುಗಳನ್ನು ಹತ್ತಲಾರಂಭಿಸಿದೆವು.
ಅಲ್ಲಿ ಸುತ್ತಮುತ್ತ ಇದ್ದ ಕೆಲವು ಸ್ಥಳಗಳನ್ನು ನೋಡಿಕೊಂಡು ರಾತ್ರಿ ಚೆನ್ನಮಲ್ಲಿಕಾರ್ಜುನನಿಗೆ ಸಲ್ಲಿಸುವ ಏಕಾಂತ ಸೇವೆಯಲ್ಲಿ ಮೂಲ ಲಿಂಗಕ್ಕೆ ಹಣೆ ತಾಗಿಸಿ ಆ ತಣ್ಣನೆಯ ಅವರ್ಣನೀಯ ಅನುಭವವನ್ನು ನನ್ನದಾಗಿಸಿಕೊಂಡೆ. ಅ ಘಳಿಗೆಯಲ್ಲಿ ನನ್ನ, ಚೆನ್ನಮಲ್ಲಿಕಾರ್ಜುನನ ಮತ್ತು ಅಕ್ಕಮಹಾದೇವಿಯರ ತ್ರೀವೇಣಿ ಸಂಗಮವಾಯ್ತು ಎಂದು ಮನದಲ್ಲಿ ಅಂದುಕೊಂಡು ಭಾವಪರವಶಳಾದೆ.
ಜ್ವಾಲಾ ನರಸಿಂಹನ ಸನ್ನಿಧಿಗೆ ಡೋಲಿಯಲ್ಲಿ ಪಯಣ

ಶ್ರೀಶೈಲವೆಂಬ ಶೈವಕ್ಷೇತ್ರದಿಂದ ನಾವು ಹೊರಟಿದ್ದು ಅಹೋಬಲವೆಂಬ ವಿಷ್ಣುಕ್ಷೇತ್ರಕ್ಕೆ. ದಾರಿಯ ಮಧ್ಯದಲ್ಲಿ ಎದುರಾಗುತ್ತದೆ, ಶಿವನ ವಾಹನವಾದ ಮಹಾನಂದಿ ಕ್ಷೇತ್ರ. ಅದನ್ನು ಸಂದರ್ಶಿಸಿ ಮುಂದುವರಿಯುತ್ತಿದ್ದಾಗ ನಮಗೆ ಅನಿರೀಕ್ಷಿತವಾಗಿ ಸಿಕ್ಕಿದ್ದೇ ಬೆಲ್ಲಂ ಕೇವ್ಸ್. ಮಿಲಿಯಾಂತರ ವರ್ಷಗಳ ಹಿಂದೆ ನೀರಿನ ಹರಿವು ಭೂಮಿಯಡಿಯಲ್ಲಿ ಮಣ್ಣನ್ನು ಕೊರೆಯುತ್ತಾ ಹೋದ ನಿಸರ್ಗ ನಿರ್ಮಿಸಿದ ಗುಹೆಯಿದು. ಮೂರೂವರೆ ಕಿ.ಮೀ ಉದ್ದವಿರುವ ಇದು ಭಾರತದ ಎರಡನೆಯ ಅತಿ ದೊಡ್ಡ ಮತ್ತು ಉದ್ದವಾಗಿರುವ ಗುಹೆ. ಇದರಲ್ಲಿ ಓಡಾಡಿ ಕದಳಿ ನೋಡಲಾಗದ ನಿರಾಶೆಯನ್ನು ಕಳೆದುಕೊಳ್ಳಲೆತ್ನಿಸಿದೆವು.
ನಮ್ಮ ತಂಡದಲ್ಲಿ ಹಿಮಾಲಯದ ವಿವಿಧ ಶಿಖರಗಳನ್ನು ಹತ್ತಿ ಬಂದ ಆರೇಳು ಮಹಿಳೆಯರಿದ್ದರು. ಅವರಿಗೆಲ್ಲಾ ರೆಕ್ಕೆ ಬಂದಿದ್ದು ಅಹೋಬಲಕ್ಕೆ ಬಂದಾಗ. ಇಲ್ಲಿ ವಿಸ್ತಾರವಾಗಿ ಹರಡಿಕೊಂಡು ಅಲ್ಲಲ್ಲಿ ತಲೆಯೆತ್ತಿ ನಿಂತಿರುವ ಒಟ್ಟಾಗಿ ಗರುಡಾಚಲವೆಂದು ಕರೆಯಲಾಗುವ ವೇದಾಚಲ ಮತ್ತು ಶೇಷಾಚಲ ಬೆಟ್ಟಶ್ರೇಣಿಯನ್ನು ನೋಡಿದಾಗ. ಅಲ್ಲಿ ಒಂಬತ್ತು ಕಡೆ ಉಗ್ರನರಸಿಂಹನ ವಿವಿಧ ರೂಪಗಳ ದೇವಾಲಯಗಳಿವೆ. ಅದನ್ನು ಒಟ್ಟಾಗಿ ನವ ನರಸಿಂಹರೆಂದು ಕರೆಯಲಾಗುತ್ತದೆ. ಅಲ್ಲಿಗೆ ಚಾರಣ ಮಾಡುವುದು ನಮ್ಮ ಪ್ರವಾಸದ ಎರಡನೆಯ ಉದ್ದೇಶವಾಗಿತ್ತು.
ಉಗ್ರ ಸ್ತಂಭ-ಹಿರಣ್ಯಕಶಿಪನ ಅರಮನೆಯ ಕಂಬವಂತೆ ಇದು....

ಪುರಾತನ ರತ್ನಾವತಿ ಪುರವೇ ಇಂದಿನ ಅಹೋಬಲ. ಇನ್ನೂ ಹಳ್ಳಿಯ ಸೊಗಡುತನ್ನವನ್ನು ಉಳಿಸಿಕೊಂಡಿರುವ ಪುಟ್ಟ ಊರಿದು. ಆದರೆ ಇಲ್ಲಿ ನೆಲೆಸಿರುವ ದೇವ ಸಣ್ಣವನಲ್ಲ. ಆತ ಲಕ್ಷಿನರಸಿಂಹ.  ಆತ ಉಗ್ರನರಸಿಂಹನಾಗಿ ತನ್ನ ಉಗುರುಗಳಿಂದ ಹಿರಣ್ಯಕಸಿಪನ ಹೊಟ್ಟೆಯನ್ನು ಬಗೆದು ಆತನ ಕರುಳನ್ನು   ತನ್ನ ಕೊರಳಿಗೆ ಹಾಕಿಕೊಂಡು ಅಟ್ಟಹಾಸ ಮೆರೆದಾಗ ಅವನ ಸಾಮರ್ಥ್ಯವನ್ನು ನೋಡಿ ದೇವತೆಗಳು ’ ಅಹಾ...ಓಹೋ...ಎನ್ ಬಲಂ..!’ ಎಂದು ಉದ್ಘಾರವೆತ್ತಿದರಂತೆ. ಹಾಗಾಗಿಯೇ ಈ ಪ್ರದೇಶಕ್ಕೆ ’ಅಹೋಬಲ’ ಎಂಬ ಹೆಸರು ಬಂತು ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಇದು ಕೆಳಗಿನ ಅಹೋಬಿಲ..ಇಲ್ಲಿಂದ ಮೂರು ಮೈಲಿ ದೂರದಲ್ಲಿದೆ. ಮೇಲಿನ ಅಹೋಬಿಲ.
ಮೇಲಿನ ಅಹೋಬಲ

ನಮ್ಮ ಚಾರಣ ಆರಂಭವಾಗಿದ್ದು ಮೇಲಿನ ಅಹೋಬಿಲದಿಂದ. ಈ ದೇವಾಲಯದ ಪಕ್ಕದಲ್ಲೇ ಹರಿಯುತ್ತಾಳೆ ಭವನಾಶಿನಿ ಎಂಬ ನದಿ. ಗಂಗೆಯ ಇನ್ನೊಂದು ರೂಪವಿದು. ಉಗ್ರನರಸಿಂಹನನ್ನು ಶಾಂತಗೊಳಿಸಲು ಇವಳು ಸ್ವರ್ಗದಿಂದ ಧರೆಗವತರಿದಳಂತೆ. ಮೇಲಿನ ಅಹೋಬಲದಿಂದ ಚಾರಣ ಆರಂಭಿಸಿದರೆ ಅದು ಕೊನೆಯಾಗುವುದು ಉಗ್ರಸ್ತಂಭದಲ್ಲಿ. ಉಗ್ರಸ್ತಂಭವೆಂದರೆ ದೂರಕ್ಕೆ ಏಕಶಿಲಾ ಸ್ತಂಭವೆಂದು ಭಾಸವಾಗುವ ಎತ್ತರದ ಕಡಿದಾದ ಬೆಟ್ಟ. ಇದು ಹಿರಣ್ಯಕಸಿಪನ ಅರಮನೆಯ ಕಂಬವೆಂಬುದು ಆಸ್ತಿಕರ ನಂಬಿಕೆ. ಇದೇ ಕಂಭವನ್ನೊಡೆದು ನರಸಿಂಹ ಅವತರಿಸಿದನಂತೆ. ಅಲ್ಲಿಂದ ನರಸಿಂಹ ಹಿರಣ್ಯಕಸಿಪನೊಡನೆ ಕುಸ್ತಿಯಾಡುತ್ತಾ ಒಂದೂವರೆ ಕಿ.ಮೀ ಕೆಳಗಡೆ ಬರುತ್ತಾನೆ. ಆ ಜಾಗವೇ ಜ್ವಾಲಾನರಸಿಂಹ ಸನ್ನಿಧಿ. ಅಲ್ಲಿ ಉಗ್ರನರಸಿಂಹ ಆ ರಾಕ್ಷಸನನ್ನು ಕೊಂದು ಅಲ್ಲಿರುವ ಪುಟ್ಟ ಕೊಳದಲ್ಲಿ ತನ್ನ ರಕ್ತಸಿಕ್ತ ಕೈಗಳನ್ನು ತೊಳೆದುಕೊಂಡನಂತೆ. ಅದುವೇ ರಕ್ತಕೊಳ. ಆ ನೀರಿಗೆ ಈಗಲೂ ರಕ್ತ ಛಾಯೆಯಿದೆ. ಭಕ್ತರು ಆ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುವುದಿಲ್ಲ. ಆದರೆ ಅದರ ಪಕ್ಕದಲ್ಲೇ ಉಗ್ರಸ್ತಂಭದ ಶಿಖರದೆಡೆಗಳಿಂದ ಬಿಂದು ಬಿಂದುವಾಗಿ ಬೀಳುವ ಭವನಾಶಿನಿಗೆ ತಲೆಯೊಡ್ಡಿ ಭಕ್ತರು ಪುನೀತರಾಗುತ್ತಾರೆ.
ಪ್ರಹ್ಲಾದ ಸ್ಲೇಟ್


ನಲ್ಲ ಮಲ ಅರಣ್ಯ ಪ್ರದೇಶಗಳಲ್ಲಿ ನೆಲೆ ನಿಂತಿರುವ ನವ ನರಸಿಂಹರ ಹೆಸರುಗಳು ಇಂತಿವೆ.೧.ಜ್ವಾಲಾ ನರಸಿಂಹ ೨.ಮಾಲೋವ ನರಸಿಂಹ ೩. ವರಹಾ ನರಸಿಂಹ ೪. ಕಾರಂಜ ನರಸಿಂಹ ೫. ಭಾರ್ಗವ ನರಸಿಂಹ ೬ ಯೋಗಾನಂದ ನರಸಿಂಹ ೭ ಅಹೋಬಿಲದ ಲಕ್ಷ್ನಿ ನರಸಿಂಹ ೮ ಛತ್ರವಟ ನರಸಿಂಹ ೯.ಪಾವನ ನರಸಿಂಹ. ಹಿರಣ್ಯಕಶಿಪನನ್ನು ಕೊಂದಾಗ ಪ್ರಹ್ಲಾದನಿನ್ನೂ ಬಾಲಕ. ಹಾಗಾಗಿ ಅವನನ್ನ ಸಿಂಹಾಸನಕ್ಕೆ ಯೋಗ್ಯನನ್ನಾಗಿ ರೂಪುಗೊಳಿಸುವುದು ನರಸಿಂಹನ ಜವಾಬ್ದಾರಿಯಾಗಿತ್ತು. ಹಾಗಾಗಿ ಆತನೇ ಸ್ವತಹ ವಿದ್ಯಾಭ್ಯಾಸ ಹೇಳಿಕೊಡುತ್ತಾನೆ. ಅದುವೇ ಪ್ರಹ್ಲಾದ ಗುಹೆಗಳು. ಆ ಗುಹೆಯ ಎದುರುಗಡೆ ವಿಶಾಲವಾಗಿ ಹರಡಿಕೊಂಡಿರುವ ಹಾಸು ಬಂಡೆಯಿದೆ. ಅದರಲ್ಲಿ ಸ್ಥಳಿಯರು ಸಂಸ್ಕೃತವೆಂದು ಕರೆಯುವ ಅರ್ಥವಾಗ ಲಿಪಿಯ ಕುರುಹುಗಳಿವೆ.ಸ್ಲೇಟಿನಂತೆ ಅದನ್ನು ಆಯಾತಾಕಾರದಲ್ಲಿ ವಿಭಾಜಿಸಲಾಗಿದೆ. ಇದರಲ್ಲೇ ಬಾಲಕ ಪ್ರಹ್ಲಾದ ಅಕ್ಷರಗಳನ್ನು ತಿದ್ದುತ್ತ್ದ್ದನಂತೆ. ಇಲ್ಲಿ ನಿಂತು ನೋಡಿದರೆ ಅಹೋಬಲದ ಸುಂದರ ನೋಟ ಸಿಗುತ್ತದೆ.
ಪ್ರಕ್ಲಾದ ಗುಹೆಯಿಂದ ಮೇಲಿನ ಅಹೋಬಲದ ನೋಟ

 ನವನರಸಿಂಹರಲ್ಲಿ ನನಗೆ ವಾಸ್ತವಕ್ಕೆ ತೀರಾ ಹತ್ತಿರವೆನಿಸಿದ್ದು ಪಾವನ ನರಸಿಂಹ. ಇದರಲ್ಲಿ ನರಸಿಂಹನ ಎಡತೊಡೆಯ ಮೇಲೆ ಕುಳಿತ ಲಕ್ಷ್ಮಿ, ಆಕೆ ಚುಂಚ ಲಕ್ಷ್ಮಿ. ಸ್ಥಳಿಯ ಜಾನಪದದೊಡನೆ ಬೆಸೆದುಕೊಳ್ಳುವ ಅವಳ ಕಥೆ ಪುರಾಣದೊಡನೆ ಬೆಸೆದುಕೊಂಡು ಐತಿಹ್ಯದತ್ತ ಬೆಳಕು ಚೆಲ್ಲುತ್ತದೆ. ನಲ್ಲಮಲ ಅರಣ್ಯದಲ್ಲಿ ಚುಂಚರೆಂಬ ಬೇಡ ಜಾತಿಯವರಿದ್ದಾರೆ. ಈ ಬುಡಕಟ್ಟಿನವರ ಜೀವನ ವಿಧಾನವನ್ನು ಶ್ರೀಶೈಲದಲ್ಲಿರುವ ಮ್ಯೂಸಿಯಂನಲ್ಲಿ ಕಾಣಬಹುದು. ಆ ಕುಲದಲ್ಲಿ ಸಾಕ್ಷತ್ ಲಕ್ಷ್ಮಿ ಹುಟ್ಟುತ್ತಾಳೆ.ಆಮೇಲೆ ಆಕೆ ನರಸಿಂಹನನ್ನು ಮದುವೆಯಾಗುತ್ತಾಳೆ. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕಾಡಿನ ಮಧ್ಯೆ  ಆಕೆ ವಾಸಿಸುತ್ತಿದ್ದಳೆನ್ನಲಾದ ಗುಹೆಯನ್ನು, ಮನೆಯನ್ನೂ ಸ್ಥಳಿಯರು ತೋರಿಸುತ್ತಾರೆ ಇಲ್ಲಿ ಉಗ್ರನರಸಿಂಹ ಸೌಮ್ಯಸ್ವರೂಪಿ. ಭಕ್ತರ ಸಕಲ ಇಷ್ಟಾರ್ಥಗಳನ್ನು ಪಾವನ ನರಸಿಂಹ ಈಡೇರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಕೆಳಗಿನ ಅಹೋಬಿಲದಿಂದ ಕಠಿಣವಾದ ೨೩ ಮೈಲಿಗಳ ಜೀಪಿನ ಹಾದಿಯಿದೆ. ಅಥವಾ ೬ ಮೈಲಿಯ ಚಾರಣ ಹಾದಿಯಿದೆ.
ಡೋಲಿ ಹೊರುವ ಅಣ್ಣಂದಿರು

ಬೆಟ್ಟ ಹತ್ತಲು ಊರುಗೋಲುಗಳ ಸಹಾಯವಿದ್ದರೆ ಚಾರಣದ ನಡಿಗೆ ಹಗುರವಾಗುತ್ತದೆ. ಅದನ್ನು ಮೇಲಿನ ಅಹೋಬಿಲದಲ್ಲಿ ಖರೀದಿ ಮಾಡಬಹುದು. ಒಂದು ಕೋಲಿಗೆ ಕೇವಲ ಐದು ರೂಪಾಯಿ. ಎರಡು ರೂಪಾಯಿಗೆ ಬಾಡಿಗೆಗೂ ಕೊಂಡುಕೊಳ್ಳಬಹುದು. ಇದಲ್ಲದೆ ಇಲ್ಲಿಂದ ಜ್ವಾಲಾ ನರಸಿಂಹನ ತನಕ ಹೋಗಲು ಡೋಲಿಯ ವ್ಯವಸ್ಥೆಯೂ ಇದೆ. ಒಬ್ಬರನ್ನು ಇಬ್ಬರು ವ್ಯಕ್ತಿಗಳು ಹೊರುತ್ತಾರೆ. ಇದಕ್ಕೆ ಅವರು ಕೇಳುವ ಹಣ ೧೮೦೦ ರೂಪಾಯಿಗಳು. 

ಹಿರಣ್ಯಕಶಿಪುವಿನ ರಾಜ್ಯ ನಲ್ಲಮಲ ಅರಣ್ಯಪ್ರದೇಶದಲ್ಲಿತ್ತು. ಹಾಗಾಗಿ ಅವನ ಮಗ ಪ್ರಹ್ಲಾದ ಇಲ್ಲೇ ರಾಜ್ಯವಾಳಿರಬಹುದು. ಆದರೆ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಎಲ್ಲಿ ರಾಜ್ಯಭಾರ ಮಾಡಿದ?ಅವನು ಪ್ರಜಾರಕ್ಷಕನಾಗಿದ್ದ, ಧರ್ಮಾತ್ಮನಾಗಿದ್ದ, ಅವನ ನಾಡು ಸುಭೀಕ್ಷವಾಗಿತ್ತು. ಶ್ರೀಹರಿಯೇ ಅವನ ಬಳಿ ವಾಮನನಾಗಿ ಬಂದು ಮೂರು ಹೆಜ್ಜೆ ನೆಲವನ್ನು ಬೇಡಿದ ಎಂದು ನಮ್ಮ ಪುರಾಣಗಳು ಬಣ್ಣಿಸುತ್ತವೆ. ಆದರೆ ಅವನು ಯಾವ ಪ್ರದೇಶದಲ್ಲಿ ರಾಜ್ಯಭಾರ ಮಾಡಿರಬಹುದು ಎಂಬುದು ಸಧ್ಯ ನನ್ನನ್ನು ಕಾಡುತ್ತಿರುವ ಪ್ರಶ್ನೆ. ವಾಮನ ಅವನನ್ನು ಪಾತಾಳಕ್ಕೆ ತಳ್ಳಿದ ಎಂದು ಪುರಾಣ ಹೇಳುತ್ತದೆ. ಸಾಮಾನ್ಯವಾಗಿ ನಾವು ಪಾತಾಳಲೋಕ ಎಂದು ಗುರುತಿಸುವುದು ಕರಾವಳಿ ಸೀಮೆಗಳಾದ ತುಳುನಾಡು ಮತ್ತು ಕೇರಳವನ್ನು. ಅದು ನಾಗರಾಧನೆಯ ನಾಡೂ ಹೌದು
ರಕ್ತ ಕೊಳ
. ರಾಕ್ಷಸರು ವಾಸಿಸುತ್ತಿದ್ದುದು ದಟ್ಟಾರಣ್ಯಗಳಲ್ಲಿ. ಹಿರಣ್ಯಕಶಿಪು ರಾಜ್ಯವಾಳುತ್ತಿದ್ದು ಅಂಧ್ರದ ನಲ್ಲ ಮಲದಲ್ಲಿ. ’ನಲ್ಲ’ ಅಂದ್ರೆ ತೆಲುಗಿನಲ್ಲಿ ಕಪ್ಪು ಎಂದು ಅರ್ಥ. ಮಲ ಅಂದರೆ ಕಾಡು. ಕಪ್ಪು ಕಾಡು ಅಂದ್ರೆ ದಟ್ಟ ಅರಣ್ಯ. ಕೇರಳದಲ್ಲಿಯೂ ಜಗತ್ಪ್ರಸಿದ್ಧಿಯಾದ ನಿತ್ಯಹರಿದ್ವರ್ಣದ ’ಸೈಲೆಂಟ್ ವ್ಯಾಲಿ’ ಎಂಬ ವಿಸ್ತಾರವಾದ ದಟ್ಟಾರಣ್ಯವಿದೆ. ವಾಮನ ನಲ್ಲಮಲದಿಂದ ಮೌನ ಕಣಿವೆಗೆ ಬಲಿಯನ್ನು ತಳ್ಳಿರಬಹುದೇ? ಅನಂತರದಲ್ಲಿ ಅಲ್ಲೇಲ್ಲಾದರೂ ಬಲಿ ಚಕ್ರವರ್ತಿ ರಾಜ್ಯವಾಳಿರಬಹುದೇ? ಈ ಸಂಶಯಕ್ಕೆ ಇನ್ನೂ ಒಂದು ಸಮರ್ಥನೆಯಿದೆ. ತನ್ನ ಪ್ರಜೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಬಲಿ ಚಕ್ರವರ್ತಿ ತನ್ನ ಪ್ರಜೆಗಳು ಹೇಗಿದ್ದಾರೆಂದು ನೋಡುವುದಕ್ಕಾಗಿಯೇ ಮೂರು ದಿನದ ಮಟ್ಟಿಗೆ ಭೂಲೋಕಕ್ಕೆ ಬರುತ್ತಾನೆ ಎಂಬುದು ಎಲ್ಲಾ ಭಾರತೀಯರ ನಂಬುಗೆ. ಇದೇ ಬೆಳಕಿನ ಹಬ್ಬ ದೀಪಾವಳಿ. ಇದನ್ನು ಕೇರಳಿಗರು ’ಓಣಂ’ ಎಂದು ಆಚರಿಸುತ್ತಾರೆ.  ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಈ ಹಬ್ಬವನ್ನು ನಾಡಿನಾಧ್ಯಂತ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸುತ್ತಾರೆ.
ಅಶಕ್ತರಿಗೆ ಚಾರಣಿಗರ ನೆರವು.

  ಹಾಗಾಗಿಯೇ ಬಲಿಚಕ್ರವರ್ತಿ ಕೇರಳದಲ್ಲಿ ರಾಜ್ಯವಾಳಿರಬಹುದೇ ಎಂಬ ಸಂಶಯದ ಹುಳುವನ್ನು ತಲೆಗೆ ಬಿಟ್ಟುಕೊಂಡಿದ್ದೇನೆ.ನನ್ನ ಈ ಸಂಶಯವನ್ನು ಆಲಿಸಿದ ಗೆಳೆಯರೊಬ್ಬರು ಅದನ್ನು ಪುಷ್ಟಿಕರಿಸುವಂತೆ ಹೌದು ಬಲಿ ಕೇರಳದಲ್ಲಿ ಮತ್ತೆ ರಾಜ್ಯಕಟ್ಟಿ ಅದನ್ನು ನಲ್ಲಮಲದ ತನಕ ವಿಸ್ತರಿಸಿದ್ದ. ಅಲ್ಲಿ ಆತನನ್ನು ಕುತಂತ್ರದಿಂದ ಹತ್ಯೆ ಮಾಡಲಾಯ್ತು.  ಈಗ ಪ್ರಸಿದ್ದ ಕ್ಷೇತ್ರವಾಗಿರುವ ತಿರುಪತಿಯೇ ಅವನ ಸಮಾಧಿ ಸ್ಥಳವಾಗಿತ್ತು.ಕೇರಳದ ಭಕ್ತರು ಅಲ್ಲಿಗೆ ಬೆಲೆಬಾಳುವ ಕಾಣಿಕೆಗಳನ್ನು ಅರ್ಪಿಸಿ ಅದು ಶ್ರೀಮಂತವಾಯ್ತು. ಎಂದು ಹೇಳಿದರು ಇದು ನಿಜವಿರಬಹುದೇ?.
ಇದರ ನೆರವಿಲ್ಲದೆ ಪಾವನ ನರಸಿಂಹನನ್ನು ಕಾಣುವುದು ಕಷ್ಟ..
.ಬಹುಶಃ ನನ್ನ ಮುಂದಿನ ಪ್ರವಾಸ ಕೇರಳದ ಮೌನಕಣಿವೆಯೆಡೆಗೆ..!