Sunday, December 10, 2017

’ಮಜೂಲಿ ’ ಬ್ರಹ್ಮಪುತ್ರನ ಕಂದ!ಏಳು ಸಮುದ್ರಗಳ ನಡುವೆಯೊಂದು ದ್ವೀಪ. ಅಲ್ಲಿ  ಬಂಧನದಲ್ಲಿರುವ ರಾಜಕುಮಾರಿ. ಅವಳನ್ನು ಬಿಡಿಸಿಕೊಂಡು ಬರಲು ಹೊರಟ್ ರಾಜಕುಮಾರ್. ಅವನು ಎದುರಿಸುವ ಸಂಕಷ್ಟಗಳು...ಇದೆಲ್ಲಾ ಬಾಲ್ಯದಲ್ಲಿ ನಾವು ಕಣ್ಣರಳಿಸಿಕೊಂಡು ಕೇಳುತ್ತಿದ್ದ ರಮ್ಯ ಕಥೆ.  ಆ ರಾಜಕುಮಾರಿ ನಾನಾಗಿದ್ದರೆ? ಆ ದ್ವೀಪಕ್ಕೆ ಹೋಗಲು ಸಾಧ್ಯವಾಗಿದ್ದರೆ?

ಹೌದು, ಕನಸುಗಾರರ. ಸಾಹಸಿಗಳ. ಏಕಾಂತಪ್ರಿಯರ ಮನಸ್ಸನ್ನು ಸೆಳೆಯುವ ನಿಗೂಡಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ. ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯಿಂದ ಸೆಳೆಯಲ್ಪಟ್ಟು ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ. ನನ್ನ ಪ್ರವಾಸದ ಪಟ್ಟಿಯಲ್ಲಿ ಮಜೂಲಿಯ ಹೆಸರಿರಲಿಲ್ಲ. ನನ್ನ ಗಮ್ಯ ಬ್ರಹ್ಮಪುತ್ರ ಎಂಬ ಮಹಾನದಿಯ ಚೊಚ್ಚಲ ಉತ್ಸವ ’ ನಮಾಮಿ ಬ್ರಹ್ಮಪುತ್ರ’ವನ್ನು ನೋಡುವುದಾಗಿತ್ತು ಆದರೆ ನಾನವನ ಮಗುವಿನ ಮೋಹದಲ್ಲಿ ಬಿದ್ದೆ.!

ಹೌದು! ಮಾಜೂಲಿ ಬ್ರಹ್ಮಪುತ್ರ ಸ್ರುಜಿಸಿದ ದ್ವೀಪ. ಜಗತ್ತಿನಲ್ಲಿಯೇ ನದಿಯೊಂದು ಹುಟ್ಟು ಹಾಕಿದ  ಅತ್ಯಂತ ದೊಡ್ಡ ದ್ವೀಪವಿದು. ಹಾಗೆಂದು ಗಿನ್ನಿಸ್ ಬುಕ್ ನಲ್ಲಿಯೂ ದಾಖಲಾಗಿದೆ.
ಸತ್ರದೊಳಗಿನ ಮೂಲದೇವರು ಕೃಷ್ಣ.
ಜಗತ್ತಿನ ಅತೀ ದೊಡ್ಡ ನದಿಗಳ ಪಟ್ಟಿಯಲ್ಲಿ ಭಾರತದ ಬ್ರಹ್ಮಪುತ್ರವೂ ಸೇರಿದೆ. ಅದೊಂದು ಉನ್ಮತ್ತ ನದಿ. ಬ್ರಹ್ಮದೇವನ ಪುತ್ರನಾದ ಕಾರಣ ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವೆನ್ನಬಹುದೇ?. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ.

ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು.
ಬ್ರಹ್ಮಪುತ್ರನ ಪುಟ್ಟ ಮಗು ಮಾಜುಲಿ. ಇದಕ್ಕಿರುವುದು ಕೇವಲ ನಾಲ್ಕು ಶತಮಾನಗಳ ಇತಿಹಾಸ.ಇದರ ಹುಟ್ಟಿನ ಕಥೆ ಕೇಳಿ;
ಮಾಜುಲಿ ಅಂದರೆ ಅಸ್ಸಾಮಿ ಭಾಷೆಯಲ್ಲಿ ಸಮಾನಂತರವಾಗಿ ಹರಿಯುವ ಎರಡು ನದಿಗಳ ನಡುವಿನ ಭೂಮಿ ಎಂದರ್ಥ. ಈಗ ನಮಗೆ ಗೋಚರವಾಗುವ ಮಾಜುಲಿ ದ್ವೀಪ ಹಿಂದೊಮ್ಮೆ ಬ್ರಹ್ಮಪುತ್ರನ ಒಡಲೊಳಗಿತ್ತು. . ಡಿಬಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ಪರಸ್ಪರ ೧೯೦ ಕಿ.ಮೀ ದೂರದಲ್ಲಿ ಸಮಾನಂತರವಾಗಿ ಹರಿಯುತ್ತಿದ್ದವು. ಅದು ೧೭೫೦ ರ ಸಮಯ.ಸತತ ಹದಿನೈದು ದಿನಗಳ ಕಾಲ ಮಳೆ ಸುರಿಯಿತು. ಜೊತೆಗೆ ಆ ಪ್ರದೇಶದಲ್ಲಿ ಭೂಕಂಪನವೊಂದು ಸಂಭವಿಸಿತು. ಎರಡೂ ನದಿಗಳು ಹುಚ್ಚೆದ್ದು ಕುಣಿದು ತಮ್ಮ ತಮ್ಮ ಪಾತ್ರಗಳ ಮೇರೆ ಮೀರಿ ಹರಿದು ಒಂದನ್ನೊಂದು ಅಪ್ಪಿಕೊಂಡವು. ಆವರಿಬ್ಬರೂ ಸೇರಿ ಬಳುಕಿದ ಜಾಗದಲ್ಲಿ ಭೂಭಾಗವೊಂದು ನಿರ್ಮಾಣವಾಯ್ತು, ಅದುವೇ ಮಜೂಲಿ ದ್ವೀಪ.

ಸತ್ರದ ಹೊರಮೈ
ಮಜೂಲಿ ದ್ವೀಪ ಉದಯವಾದ ಕಾಲಕ್ಕೆ ಅದರ ವಿಸ್ತೀರ್ಣ ೧೨೨೫ ಚದರ ಕಿ.ಮೀ ಆಗಿತ್ತು. ಕ್ರಮೇಣ ಬ್ರಹ್ಮಪುತ್ರ ಅದನ್ನು ಕಬಳಿಸುತ್ತಾ ಬಂದು ಈಗ ಕೇವಲ ೫೨೦ ಚದರ ಕಿ.ಮೀ ಭೂಭಾಗ ಉಳಿದುಕೊಂಡಿದೆ. ಭೂಮಿಯ ತಾಪಮಾನ ಏರುತ್ತಲೇ ಇದೆ. ವಾತಾವರಣದಲ್ಲಿ ಅಸಾಧಾರಣವಾದ ಏರುಪೇರುಗಳಾಗುತ್ತಿದೆ. ಹಿಮಾಲಯ ಕರಗುತ್ತಿದೆ. ಹಾಗಾಗಿ ಬ್ರಹ್ಮಪುತ್ರನ ನೆರೆ ಹೆಚ್ಚುತ್ತಲೇ ಇದೆ. ಹೀಗೇ ಮುಂದುವರಿದರೆ ಇನ್ನೆರಡು ದಶಕದಲ್ಲಿ ಮಾಜುಲಿ ದ್ವೀಪ ಮತ್ತೆ ಬ್ರಹ್ಮಪುತ್ರನ ಒಡಲನ್ನು ಸೇರಲಿದೆ ಎಂದು ತಜ್ನರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವರ್ಷ ಮಾರ್ಚ್ ೩೧ರಿಂದ ಏಪ್ರಿಲ್ ೪ ರತನಕ ಅಸ್ಸಾಂನಲ್ಲಿ ’ನಮಾಮಿ ಬ್ರಹ್ಮಪುತ್ರ’ ಉತ್ಸವ ನಡೆಯಿತು. ಅದರಲ್ಲಿ ಭಾಗವಹಿಸುವುದಕ್ಕಾಗಿ ಅಸ್ಸಾಂನ ರಾಜಧಾನಿ ಗೌಹಾಟಿಗೆ ಹೋಗಿದ್ದೆ. ಈ ಹಿಂದೆ ಕಾಶ್ಮೀರದ ಲಡಾಕ್ ನಲ್ಲಿ ನಡೆಯುತ್ತಿರುವ ’ಸಿಂಧು ಉತ್ಸವ’ ವನ್ನು ನೋಡಿದ್ದೆ. ಹಾಗಾಗಿ ಇದನ್ನೂ ನೋಡುವ ಬಯಕೆ ಹುಟ್ಟಿತ್ತು. ಆದರೆ ಈ ಬಾರಿ ಅಸ್ಸಾಂಗೆ ವಾಡಿಕೆಯ ಮೊದಲೇ ಮಳೆಗಾಲ ಆರಂಭವಾದಂತಿತ್ತು. ಉದ್ಘಾಟನೆಯಂದು ಆರಂಭವಾದ ಮಳೆ ಸಮಾರೋಪದ ತನಕ ಎಡೆಬಿಡದೆ ಸುರಿಯಿತು. ಬ್ರಹ್ಮಪುತ್ರದ ದಂಡೆಯ ಮೇಲೆ ನಿರ್ಮಿಸಿದ ಮುಖ್ಯ ವೇದಿಕೆಯಲ್ಲಿ ಒಂದೇ ಒಂದು ಸಾಂಸ್ಕ್ರುತಿಕ ಕಾರ್ಯಕ್ರಮವೂ ನಡೆಯಲಿಲ್ಲ. ನಾನು ಮತ್ತು ನನ್ನ ಪ್ರೆಂಡ್ ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಬೆಂಗಳೂರಿನ ರಣಬಿಸಿಲನ್ನು ನೆನಪಿಸಿಕೊಳ್ಳುತ್ತಾ ಎರಡು ದಿನ ಕಳೆದವು. ರಿಟರ್ನ್ ಟಿಕೇಟ್ ಬುಕ್ ಆಗಿದ್ದ ಕಾರಣದಿಂದ ಅಲ್ಲಿಯೇ ಉಳಿಯುವುದು ಅನಿವಾರ್ಯವಾಗಿತ್ತು. ಎರಡನೆಯ ರಾತ್ರಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾ  ಗೌಹಾಟಿಯ ಸುತ್ತಮುತ್ತ ಯಾವುದಾದರೂ ಪ್ರೇಕ್ಷಣಿಯ ಸ್ಥಳವಿದೆಯೇ ಎಂದು ಹುಡುಕಾಡತೊಡಗಿದೆವು. ಆಗ ಸಿಕ್ಕಿದ್ದೇ ಈ ಮಜೂಲಿಯೆಂಬ ಸ್ವರ್ಗ. ಸರಿ ಬ್ಯಾಗನ್ನು ಹೋಟೇಲ್ ನಲ್ಲೇ ಬಿಟ್ಟು ಬ್ಯಾಕ್ ಪ್ಯಾಕ್ ಏರಿಸಿಕೊಂಡು ರಾತ್ರಿ ಬಸ್ಸಿನಲ್ಲಿ ಕುಳಿತೆವು.

ಸತ್ರದ ಪ್ರವೇಶ ದ್ವಾರ.
 ಗೌಹಾಟಿಯಿಂದ ಮಜೂಲಿ ೩೦೦ ಕಿ.ಮೀ ದೂರದಲ್ಲಿದೆ. ಮಾಜುಲಿಗೆ ಹೋಗಲು ಎರಡು ಮಾರ್ಗಗಳಿವೆ, ಹತ್ತಿರದ ದಾರಿಯೆಂದರೆ ಗೌಹಾಟಿಯಿಂದ ಜೋರಾಟ್ ಗೆ ಹೋಗಬೇಕು. ಬಸ್ಸಿನಲ್ಲಾದರೆ ಆರು ಘಂಟೆ ಬೇಕು. ಅಲ್ಲಿಂದ ಶೇರ್ ಆಟೋ ಹಿಡಿದು ನಿಮಾಟಿ ಘಾಟ್ಗೆ ಬಂದರೆ ಅಲ್ಲಿ ಮಜೂಲಿಗೆ ಹೋಗುವ ಪೆರ್ರಿ ಸಿಗುತ್ತದೆ. ನಿಮಾಟಿ ಘಾಟ್ ಎಂಬುದು ಬ್ರಹ್ಮಪುತ್ರಾದ ನದಿ ಬಂದರು. ಗೌಹಾಟಿಯಿಂದ ಕಾರು ಮಾಡಿಕೊಂಡು ಬಂದರೆ ಕಾರು ಸಮೇತ ಪೆರ್ರಿಯಲ್ಲಿ ಸಾಗಬಹುದು. ನಿಮಟಿಘಾಟ್ ನಿಂದ ಮಜೂಲಿ ೨೦ ಕಿ.ಮೀ ದೂರದಲ್ಲಿದೆ. ಇನ್ನೊಂದು ಹಾದಿ ಲಕಮಿಪುರದ ಮೇಲೆ ನೇರ ಮಜೂಲಿಯನ್ನು ತಲುಪುವುದು. ಇದು ತುಂಬಾ ದೂರದ ಹಾದಿ ಒಂಬತ್ತು ಘಂಟೆಯ ಪಯಣ. ಈ ಹಾದಿಯಲ್ಲಿ ಪೆರ್ರಿಯಲ್ಲಿ ಹೋಗಬೇಕಾಗಿಲ್ಲ. ಬ್ರಹ್ಮಪುತ್ರ ಮತ್ತು ಮಜೂಲಿಯ ನಡುವೆ ಕಿರಿದಾದ ನದಿ ಹರಿವು ಇದ್ದೆಡೆಯಲ್ಲಿ ಭೂಮಿಯನ್ನೇ ಮುಂದೊತ್ತಿ ಒಂದು ಸೇತುವೆಯನ್ನು ನಿರ್ಮಿಸಿ ಅದರ ಮುಖಾಂತರ ಬಸ್ಸು ಹೋಗುವಂತೆ ಮಾಡಲಾಗಿತ್ತು. ನಾವು ಮಾಹಿತಿಯ ಕೊರತೆ ಕಾರಣವಾಗಿ ಈ ಬಸ್ಸಿನಲ್ಲಿ ಟಿಕೇಟ್ ರಿಸರ್ವ ಮಾಡಿಸಿದ್ದೆವು. ಬಸ್ಸು ಹತ್ತುವಾಗಲೇ ನಮಗೆ ಅನುಮಾನ ಮೂಡಿತ್ತು. ಅದರಲ್ಲಿದ್ದುದು ಕೆಲವೇ ಪ್ರಯಾಣಿಕರು. ಲಕುಮಿಪುರಕ್ಕೆ ಹೋಗುವ ಐದಾರು ಪ್ರಯಾಣಿಕರ ಜೊತೆ  ಮಜುಲಿಗೆ ಹೊರಟವರು ನಾವಿಬ್ಬರೇ!

ನಮ್ಮ ಗ್ರಹಚಾರ ನೆಟ್ಟಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಯಾವುದೋ ಊರಲ್ಲಿ ಬಸ್ಸು ಕೆಟ್ಟು ನಿಂತಿತು. ಡ್ರೈವರ್ ರಿಪೇರಿ ಮಾಡಿದ, ಬಸ್ಸು ಮುಂದೆ ಹೋಗುತ್ತಿತ್ತು. ಮತ್ತೆ ಕೆಟ್ಟು ನಿಲ್ಲುತ್ತಿತ್ತು..ಮತ್ತೆ ..ಮತ್ತೆ..
ಆದಿವಾಸಿಗಳ ಗುಡಿಸಲು
ಬೆಳಿಗ್ಗೆ ಮಜೂಲಿಗೆ ತಲುಪಬೇಕಾದವ್ರು ಅಂತೂ ಇಂತೂ ಮಧ್ಯಾಹ್ನ ಒಂದೂವರೆಗೆ ತಲುಪಿದೆವು. ಆದರೆ ಬಹಳಷ್ಟು ಸಂದರ್ಭದಲ್ಲಿ ನನಗೆ ನಾನೇ ಹೇಳಿಕೊಳ್ಳುವ ಹಾಗೆ ಗುರಿಯಷ್ಟೇ ಮುಖ್ಯವಲ್ಲ ಅದನ್ನು ಕ್ರಮಿಸುವ ಹಾದಿಯೂ ಅಷ್ಟೇ ಮುಖ್ಯ ಎಂಬುದು ಇಲ್ಲಿಯೂ ಮನದಟ್ಟಾಯ್ತು. ದಾರಿಯ ಎರಡೂ ಬದಿಯಲ್ಲೂ ಹಸಿರೇ ಹಸಿರು. ಪೈರಿನಿಂದ ಕಂಗೊಳಿಸುವ ಹೊಲಗದ್ದೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.ಅಲ್ಲಲ್ಲಿ ಸಿಗುತ್ತಿದ್ದ ಸ್ಥಳೀಯ ಮುಗ್ಧ ಜನರು, ಅವರ ಪ್ರೀತಿ, ವಿಶ್ವಾಸದ ಮಾತುಗಳ ಮಧ್ಯೆ ಪ್ರಯಾಣ ಕಷ್ಟವೆನಿಸಲಿಲ್ಲ.

ಮಜೂಲಿ ಬಸ್ ನಿಲ್ದಾಣ್ದಲ್ಲಿ ಇಳಿದ ಜಾಗದಲ್ಲಿ ಪುಟ್ಟ ಕಟ್ಟಡದ ಮಹಡಿ ಮೇಲೊಂದು ಊಟದ ಹೋಟೇಲಿತ್ತು. ಆ ಹೋಟಿಲಿನ ಓನರ್ ಒಬ್ಬ ನಗುಮೊಗದ ಯುವಕ, ಕಲ್ಕತ್ತಾದವನಂತೆ, ಅತ್ಯಂತ ಆದರದಿಂದ ಬಿಸಿ ಬಿಸಿಯಾದ ರುಚಿಯಾದ ಊಟ ಬಡಿಸಿದಾಗ ಆತನೊಬ್ಬ ದೇವದೂತನಂತೆ ನಮಗೆ ಕಂಡ. ಯಾಕೆಂದರೆ ಕಳೆದ ರಾತ್ರಿಯಲ್ಲಿ ಯಾವುದೋ ಊರಿನಲ್ಲಿ ಒಂದು ಮೀನು ಪ್ರೈ ತಿಂದಿದ್ದು ಬಿಟ್ಟರೆ  ಏನನ್ನೂ ತಿಂದಿರಲಿಲ್ಲ. ಬ್ಯಾಗಲಿದ್ದ ಬಿಸ್ಕತ್ತು, ಕುರುಕಲು ತಿಂಡಿಗಳು ಬೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಾಗಿದ್ದವು. ನಮ್ಮೊಡನೆ ನಮ್ಮ ಡ್ರೈವರ್ ಕೂಡಾ ಉಪವಾಸವಿದ್ದ. ಅಷ್ಟು ಅಡೆತಡೆಗಳಾದರೂ ತಮಾಶೆಯಾಗಿ ಹರಟುತ್ತಾ ಇದ್ದ ಕೆಲವೇ ಮಂದಿ ಪ್ರಯಾಣಿಕರನ್ನು ಉಲ್ಲಾಸದಿಂದಿಡಲು ಪ್ರಯತ್ನಿಸುತ್ತಿದ್ದ ಅವರ ನೆನಪು ಊಟ ಮಾಡುತ್ತಿರುವಾಗ ಕಾಡಿತು.
ಇದು ತುಲಸಿ ಮರದ ದಿಮ್ಮಿಯಂತೆ!
ಗೌಹಾಟಿಯಿಂದ ಹೊರಡುವಾಗಲೇ ಮಜೂಲಿಯಲ್ಲಿ ಒಂದು ವೆಹಿಕಲ್ ತಗೊಂಡು ಇಡೀ ದಿನ ದ್ವೀಪ ಸುತ್ತುವ ಪ್ಲಾನ್ ಮಾಡಿದ್ದೆವು. ಸಾಧ್ಯಾವಾದರೆ ಅಲ್ಲಿಯ ಮೂಲನಿವಾಸಿಯ ಮನೆಯಲ್ಲಿ ಅವರದೇ ಶೈಲಿಯ ಊಟ ಮಾಡಬೇಕೆಂದಿದ್ದೆವು. ಆದರೆ ಈ ಲಟಾರಿ ಬಸ್ಸಿನ ದೆಸೆಯಿಂದ ನಮ್ಮ ಪ್ಲಾನ್ ಎಲ್ಲಾ ಉಲ್ಟಾ ಆಗಿತ್ತು. ಈಗ ನಮ್ಮಲ್ಲಿ  ಹೆಚ್ಚೆಂದರೆ ಎರಡು ಘಂಟೆಯಷ್ಟೇ ಸಮಯವಿತ್ತು. ನಮ್ಮ ಸಮಸ್ಯೆಯನ್ನು ನಮಗೆ ಅನ್ನ ನೀಡಿದ ಯುವಕನಲ್ಲಿ ತೋಡಿಕೊಂಡಾಗ ಆತ ಮಹಡಿ ಮೇಲಿನಿಂದಲೇ ಕೆಳಗಿದ್ದ ಕಾರಿನವನಿಗೆ ಏನೋ ಹೇಳಿ ನಮ್ಮತ್ತ ತಿರುಗಿ’ ಆ ಕಾರಿನಲ್ಲಿ ಹೋಗಿ ಆತ ನಿಮ್ಮನ್ನು ಊರಲ್ಲಾ ಸುತ್ತಾಡಿ ನಿಮ್ಮನ್ನು ಪೆರ್ರಿಗೆ ಸಕಾಲದಲ್ಲಿ ತಲುಪಿಸುತ್ತಾನೆ ಎಂದ. ನಿಮಿಟಿಘಾಟ್ ಗೆ ಹೋಗುವ ಕೊನೆಯ ಪೆರ್ರಿ ಮೂರೂವರೆಗೆ ಎಂದು ಗೊತ್ತಾಯ್ತು. ಅಷ್ಟರೊಳಗೆ ಅಂದರೆ ಒಂದೂಮುಕ್ಕಾಲು ಘಂಟೆಯೊಳಗೆ ನಾವು ಊರೆಲ್ಲಾ ಸುತ್ತಬೇಕಾಗಿತ್ತು; ಹೊರಟೆವು. ಪ್ರವಾಸ ಕಾಲದಲ್ಲಿ ಪ್ಲಾನ್ ಗಳು ತಲೆ ಕೆಳಗಾಗುವುದು ಸಾಮನ್ಯ. ಆಗ ಅದನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಿಕೊಳ್ಳುವುದೂ ಒಂದು ಕಲೆ. ’ಇದಲ್ಲದಿದ್ದರೆ ಅದು. ಅದು ಸಾಧ್ಯವಾಗದಿದ್ದರೆ ಇದು ” ಅಷ್ಟೇ. ಮುಖ ಬಾಡಿಸಿಕೊಂಡು ಯಾರನ್ನೋ ಬಯ್ದುಕೊಂಡು, ಅದ್ರುಷ್ಟವನ್ನು ಹಳಿದುಕೊಂಡು ಕೈಚೆಲ್ಲಿ ಕುಳಿತುಕೊಳ್ಳಬಾರದು. .

ತುಲಸಿ ಮರ!
೫೨೦ ಚದರ ಕಿ.ಮೀ ಸುತ್ತಳತೆಯ ಮಜೂಲಿ ಜಿಲ್ಲೆಯ ಜನಸಂಖ್ಯೆ ಸುಮಾರು ಒಂದು ಲಕ್ಷದ ಅರುವತ್ತೇಳು ಸಾವಿರ. ಕಾರಲ್ಲಿ ಕೂತ ಒಡನೆಯೇ ನಾವು ಭೇಟಿ ಕೊಟ್ಟದ್ದು ಇಲ್ಲಿಯ ಸತ್ರಗಳಿಗೆ. ಸತ್ರಗಳು ಮಾಜೂಲಿಯ ವೈಶಿಷ್ಟತೆಗಳಲ್ಲೊಂದು. ೧೬ನೇಯ ಶತಮಾನದ ಸಮಾಜ ಸುಧಾರಕ ಶಂಕರದೇವ ಈ ದ್ವೀಪಕ್ಕೆ ಭೇಟಿ ನೀಡಿ ೬೫ ಸತ್ರಗಳನ್ನು [ಧಾರ್ಮಿಕ ಕೇಂದ್ರ] ಸ್ಥಾಪಿಸಿ ವೈಷ್ಣವ ಧರ್ಮವನ್ನು ಪ್ರಚುರಪಡಿಸಿದರಂತೆ. [ ಅಂದರೆ ೧೬ ಶತಮಾನದಲ್ಲಿ ಈ ದ್ವೀಪ ಅಸ್ತಿತ್ವದಲ್ಲಿತ್ತು] ಈಗಲೂ ಅಲ್ಲಿ ೨೨ ಸತ್ರಗಳಿವೆ. ಇವುಗಳು ಪುರಾತನ ಸಾಹಿತ್ಯ, ಸಂಸ್ಕ್ರುತಿ, ಆಚಾರ ವಿಚಾರಗಳನ್ನು ಪೋಷಿಸುತ್ತವೆ ಮಾತ್ರವಲ್ಲ ದ್ವೀಪದ ಪರಂಪರೆಯ ಗುರುತುಗಳಾದ ಕಲಾಕ್ರುತಿಗಳು, ಆಯುಧಗಳನ್ನು ಸಂರಕ್ಷಿಸಿ ಇಡುವ ತಾಣಗಳಾಗಿವೆ. ನನ್ನನ್ನು ಹೆಚ್ಚು ಆಕರ್ಷಿಸಿದ್ದು ಔನಿಯಟಿ [Auniati ] ಸತ್ರ. ನಾವು ಹೋದಾಗ ಪುಟ್ಟ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಸ್ಥಳೀಯ ಜಾನಪದ ಶೈಲಿಯ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಗೀತದ ಆಲಾಪನೆ ಮತ್ತು ದೀಪದ ಪರಿಕರಗಳು ತುಂಬಾ ಆಸಕ್ತಿದಾಯಕವಾಗಿದ್ದವು. ಇದೆಲ್ಲಕ್ಕಿಂತಲೂ ನನಗೆ ಅತೀ ಅಚ್ಚರಿಯನ್ನು ಉಂಟು ಮಾಡಿದ್ದು ಅಲ್ಲಿನ ಮುಖ್ಯ ಪುಜಾರಿ\ ಮೇಲ್ವಿಚಾರಕರು ಪರಿಚಯಿಸಿದ್ದ  ತುಳಸಿ ಮರದ ದಿಮ್ಮಿಗಳು. ನನ್ನ ಜೀವಮಾನದಲ್ಲೇ ಮೂರಡಿಗಿಂತ ಎತ್ತರದ ತುಳಸಿ ಗಿಡವನ್ನು ನೋಡಿರಲಿಲ್ಲ. ಹಾಗಿರುವಾಗ ಅಷ್ಟು ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ತೋರಿಸಿ ಇವು ತುಳಸಿ ಮರಗಳೆಂದು ತೋರಿಸಿದರೆ ನನಗೆ ಹೇಗಾಗಬೇಡ!.. ಸಮಯ ಕಮ್ಮಿ ಇತ್ತು. ಆದರೂ ಅದರ ಪೋಟೋ ಮತ್ತು ವಿಡಿಯೋ ತಗೊಂಡೆ. ಅಲ್ಲಿಂದ ಇನ್ನೊಂದು ಸತ್ರಕ್ಕೆ ಹೋದೆ ಅಲ್ಲಿಯ ಕಟ್ಟಡವನ್ನು ತುಳಸಿ ಮರದ ದಿಮ್ಮಿಗಳಿಂದಲೇ ಕಟ್ಟಲಾಗಿತ್ತು!.’

ಅಲ್ಲಿಯ ಮೂಲನಿವಾಸಿಗಳು ಸರಳಾತಿ ಸರಳರು.  ಸ್ಥಳೀಯವಾಗಿ ಹೇರಳವಾಗಿ ಸಿಗುವ ಬಿದಿರಿನಿಂದ ಕಟ್ಟಿರುವ ತಟ್ಟಿ ಮನೆಗಳು. ಅವು ನೆಲದಿಂದಲೇ ಗೋಡೆಯೆಬ್ಬಿಸಿ ಕಟ್ಟಿದ ಮನೆಗಳಲ್ಲ ; ಸದಾ ನೀರಲ್ಲಿ ಮುಳುಗುವ ಪ್ರದೇಶವಾದ ಕಾರಣ ಎತ್ತರದ ಕಂಬಗಳ ಮೇಲೆ ಮನೆ ಕಟ್ಟಿಕೊಂಡಿರುತ್ತಾರೆ. ಕಳೆದ ವರ್ಷದಿಂದ ಇದು ಜಿಲ್ಲೆಯಾಗಿ ಪರಿವರ್ತನೆಗೊಂಡಿರುವುದರಿಂದ ಇಲ್ಲಿ ಪೋಲಿಸ್, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಯೂ ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳು, ಸ್ಕೂಲ್ ಕಾಲೇಜುಗಳೂ ಇವೆ. ಚಿಕ್ಕದಾದ ಮೂರ್ನಾಲ್ಕು ಪೇಟೆಗಳಿವೆ. ಈಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಈ ಜಿಲ್ಲೆಗೆ ಸೇರಿದವರು.

 ಕೇಂದ್ರ ಸರಕಾರವು ಪ್ರೆಂಚ್ ಸರಕಾರದ ಸಹಯೋಗದಲ್ಲಿ ಇದನ್ನು ಕಾರ್ಬನ್ ಮುಕ್ತ ಜಿಲ್ಲೆಯಾಗಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಹಾಗಾದಲ್ಲಿ ಅದು ನಮ್ಮ ದೇಶದ ಮೊದಲ ಕಾರ್ಬನ್ ಮುಕ್ತ ಜಿಲ್ಲೆಯೆನಿಸಲಿದೆ..
ಮಾಜೂಲಿ ಜನರಿಗೆ ವ್ಯವಸಾಯವೇ ಮುಖ್ಯ ವ್ರುತ್ತಿ. ಭತ್ತ ಬಹುಮುಖ್ಯ ಬೆಳೆ. ಇಲ್ಲಿ ನೂರಕ್ಕೂ ಹೆಚ್ಚಿನ ಭತ್ತದ ತಳಿಗಳಿವೆ. ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ. ಡೈರಿ, ಕುಂಬಾರಿಕೆ, ಕೈಮಗ್ಗ ನೇಕಾರಿಕೆ ಇತರ ಉಪಉದ್ಯೋಗಗಳು. ಸಾಲ್ಮರ ವಿಲೇಜ್ ನಲ್ಲಿ ಕೈಗಳಿಂದಲೇ ಮಡಕೆ ಮತ್ತು ಮುಖವಾಡಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಈ ಕಲೆಗಾರಿಕೆಯ ಬಗ್ಗೆ ಅರ್ಕ್ಯಾಲಾಜಿಸ್ಟ್ ಗಳು ಆಳವಾದ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಇದು ಹರಪ್ಪಾ ಮೊಹೆಂಜದಾರೋ ನಾಗರಿಕತೆಯ ನಡುವಿನ ಮಿಸ್ಸಿಂಗ್ ಲಿಂಕ್ ಎನ್ನುತ್ತಾರೆ.
ಮಜೂಲಿ ವೈಷ್ಣವಪಂಥದ ಆರಾಧನ ಭೂಮಿಯಾಗಿರುವ ಕಾರಣದಿಂದಾಗಿ ಹೋಳಿ\ ರಾಸಲೀಲಾ ಈ ದ್ವೀಪದ ಸಂಭ್ರಮದ ಹಬ್ಬ. ಇಲ್ಲಿಗೆ ಹಲವು ಜಾತೀಯ ಅಪರೂಪದ ಪಕ್ಷಿಗಳು ಬರುತ್ತವೆ. ಈ ಕಾರಣದಿಂದ ಪಕ್ಷಿಪ್ರಿಯರಿಗೂ ಇದು ಆಕರ್ಷಕ ಜಾಗ. ಇಲ್ಲಿ ಅಪರೂಪದ ಔಷಧಿಯ ಸಸ್ಯಗಳೂ ಇವೆ.

ನಮ್ಮಲ್ಲಿ ಸಮಯ ಬಹಳ ಕಮ್ಮಿ ಇತ್ತು. ಹಾಗಾಗಿ ಮಜೂಲಿಯಲ್ಲಿ ನಡೆಯುತ್ತಿದ್ದ ನಮಾಮಿ ಬ್ರಹ್ಮಪುತ್ರಾ ಉತ್ಸವನ್ನು ಕಾರಿನಲ್ಲೇ ನೋಡುತ್ತಾ ಪೆರ್ರಿ ನಿಲ್ಲುವ ಜಾಗಕ್ಕೆ ಬಂದೆವು. ಹಾಗೆ ಬರುತ್ತಿರುವಾಗ ಗೊತ್ತಾಯ್ತು, ಬ್ರಹ್ಮಪುತ್ರಾದ ಹರವು ಎಷ್ಟು ದೊಡ್ಡದೆಂದು. ನದಿ ಬೀಚ್ ಮೇಲೆಯೇ ನಾವು ಆರು ಕಿಮೀ ಬಂದೆವು. ಪೆರ್ರಿ ನಿಲ್ಲುವ ಜಾಗದಲ್ಲಿ ಟೀ ಸ್ಟಾಲ್, ಪ್ಯಾನ್ಸಿ ಸ್ಟೋರ್ ಸೇರಿದಂತೆ ಹಲವಾರು ಅಂಗಡಿಗಳಿದ್ದವು. ಪೆರ್ರಿಯಲ್ಲಿ ಬಂದ ಜನರನ್ನು ಕರೆದೊಯ್ಯಲ್ಲು ಹತ್ತರು ವಾಹನಗಳು ನಿಂತಿದ್ದವು.
ಮಜೂಲಿಗೆ ಬರುವಾಗ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಬಂದಿದ್ದೆವು. ಹೋಗುವಾಗ ಬ್ರಹ್ಮಪುತ್ರನ ಒಡಲಲ್ಲಿ ಓಲಾಡುತ್ತಾ ತೇಲಾಡುತ್ತಾ ಮೌನವಾಗಿ ಸಾಗುತ್ತಿದ್ದೆವು. ನಿಮಿಟಿ ಘಾಟ್ ಎಂಬ ನದಿ ಬಂದರು ತಲುಪಲು ಎರಡುವರೆ ಘಂಟೆಯ ನದಿ ಪಯಣ. ಆಗಾಗ ನೀಲ ಆಗಸದತ್ತ  ನೋಟ ಬೀರುತ್ತಾ ದಿಗದಂಚಿನಲ್ಲಿ ಎಲ್ಲಾದರೂ ಭೂಮಾತೆ ಬ್ರಹ್ಮಪುತನನ್ನು ಆಲಂಗಿಸುತ್ತಿರುವ ದ್ರುಶ್ಯ ಕಾಣಸಿಗಬಹುದೇ ಅಂತ ಕ್ಯಾಮಾರದಲ್ಲಿ ಕಣ್ಣಿಟ್ಟು ಕೂತೆ. ನಿರಾಶೆಯಾಯ್ತು.. ನೀರು ಎಲ್ಲೆಲ್ಲೂ ನೀರು.. ಹಿಂದೆ ತಿರುಗಿದರೆ ಮಜೂಲಿ ಬರಬರುತ್ತಾ ಚುಕ್ಕೆಯಾಗಿ ನೀರಿನಲ್ಲಿ ಲೀನವಾಯ್ತು.

[ ಪ್ರಜಾವಾಣಿಯ ಸಾಪ್ತಾಹಿಕ ’ಮುಕ್ತಛಂಧದಲ್ಲಿ ಪ್ರಕಟವಾದ ಬರಹ ]
Tuesday, November 7, 2017

ನ್ಯಾನೋ ರೈಮೋ-ನಾವೂ ಕಾದಂಬರಿ ಬರೆಯೋಣವೇ?

 
ನ್ಯಾನೋ ರೈಮೋ ಲಾಂಛನ

 
ನಮಗೆಲ್ಲಾ ಗೊತ್ತಿದೆ; ನವೆಂಬರ್ ತಿಂಗಳೆಂದರೆ ಕರ್ನಾಟಕ ರಾಜ್ಯೋತ್ಸವದ ಮಾಸವೆಂದು. ಅದರೆ ಈ ತಿಂಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಒಂದು ವಿಶೇಷವಿದೆ. ಅದುವೇನ್ಯಾಷನಲ್ ನಾವೆಲ್ ರೈಟಿಂಗ್ ಮಂತ್’. ಇದು ಕಾದಂಬರಿ ಬರೆಯುವ ತಿಂಗಳಂತೆ !

ಏನು ಹಾಗಂದರೆ ಅಂತ ಪ್ರಶ್ನಿಸುತ್ತಿದ್ದೀರಾ?

ಇದು ಅಂತರ್ಜಾಲದಲ್ಲಿ ಸ್ರುಜನಶೀಲ ಬರವಣಿಗಾಗಿ ಹುಟ್ಟಿಕೊಂಡ ಒಂದು ವೇದಿಕೆ.  ಅದರ ಹೆಸರು ’ನ್ಯಾನೋ ರೈಮೋ’ ಅಂದರೆ National writing month”  ಈ ಅಂತರ್ಜಾಲ ವೇದಿಕೆಯನ್ನು charis Baty ಎಂಬ ಹವ್ಯಾಸಿ ಪತ್ರಕರ್ತನೊಬ್ಬ ೧೯೯೯ರ ಜುಲೈ ೨೧ರಂದು ಸನ್ ಪ್ರಾನ್ಸಿಸ್ಕೊದಲ್ಲಿ ಆರಂಭಿಸಿದ. ಆ ವರ್ಷ ಈ ಅನ್ಲೈನ್ ವೇದಿಕೆಯಲ್ಲಿ ೨೧ ಕಾದಂಬರಿ ಬರಹಕಾಂಕ್ಷಿಗಳು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಹವಾಮಾನ ಏರುಪೇರು ಕಾರಣಗಳಿಂದಾಗಿ  ಮರುವರ್ಷ ಈ ಕಾರ್ಯಗಾರವನ್ನು ನವೆಂಬರ್ ತಿಂಗಳಿಗೆ ಬದಲಾಯಿಸಲಾಯ್ತು. ಮತ್ತು ನ್ಯಾನೋ ರೈಮ್ ಚಟುವಟಿಕೆಗಳಿಗಾಗಿ ಸ್ವಂತ ವೆಬ್ಸೈಟ್ ಅನ್ನು ಲಾಂಚ್ ಮಾಡಿತು. ಮರುವರ್ಷ ಈ ಕಾರ್ಯಗಾರದಲ್ಲಿ ಎರಡು ಲಕ್ಷ ಜನ ಭಾಗವಹಿಸಿದ್ದರೆಂದರೆ ಜನರಲ್ಲಿ ಬರೆಯುವ ಹಸಿವು ಎಷ್ಟಿದೆಯೆಂಬುದರ ಅರಿವಾಗಬಹುದು. ನಾವಿಲ್ಲಿ ಗಮನಿಸಬೇಕಾಗಿರುವುದು ಇವರೆಲ್ಲಾ ಸಣ್ಣಪುಟ್ಟ ಕಥೆ ಲೇಖನ ಬರೆಯಲು ಹೊರಟವರಲ್ಲ, ಕಾದಂಬರಿ ಬರೆಯಲು ಮುಂದಾದವರೆಂಬುದು ಮುಖ್ಯ.

ಪ್ರತಿಯೊಬ್ಬರ ಬದುಕಿನಲ್ಲಿಯೂ ಹಲವಾರು ಕಥೆಗಳಿರುತ್ತವೆ. ಹೆಪ್ಪುಗಟ್ಟಿದ ಕಾವ್ಯವಿರುತ್ತದೆ. ಅದನ್ನೆಲ್ಲಾ ಜಗತ್ತಿನೆದುರು ಅಕ್ಷರಗಳಲ್ಲಿ ತೆರೆದಿಡುವ ಸಾಮರ್ಥ್ಯ ಎಲ್ಲರಿಗೂ ದಕ್ಕಿರುವುದಿಲ್ಲ. ಅಂತವರು ಇಲ್ಲಿ ತಮ್ಮ ಸಾಮರ್ಥ್ಯವನ್ನು ಅಳೆದು ತೂಗಿ ನೋಡಲು ಒಂದು ಅವಕಾಶವಿದೆ. ನಾನು ಕೂಡಾ ಅಂತ ಪ್ರಯತ್ನವೊಂದನ್ನು ಮಾಡಲು ಮುಂದಾಗಿ ನನ್ನ ಹೆಸರನ್ನು ನೊಂದಾಯಿಸಿಕೊಂಡೆ. ಮತ್ತು ಮೊದಲ ದಿನದ ಒಂದು ಸಾವಿರ ಪದಗಳನ್ನು ಇದಕ್ಕಾಗಿಯೇ ನಾನು ರಚಿಸಿಕೊಂಡ ಬ್ಲಾಗ್ ನಲ್ಲಿ ಅಪ್ಡೇಟ್ ಮಾಡಿ ಬಂದು ಈ ಲೇಖನವನ್ನು ಬರೆಯಲು ಮುಂದಾದೆ. ಭಯಂಕರ ಸೋಮಾರಿಯಾದ ನಾನು ಇದನ್ನು ಯಾಕೆ ಬರೆಯಲು ಹೊರಟೆ ಅಂದರೆ ಕನ್ನಡದವಳಾದ ನನಗೆ ನವೆಂಬರ್ ಅನ್ನೋದು ಕನ್ನಡದ ತಿಂಗಳು. ಸಾವಿರಾರು ಮೈಲಿ ದೂರದಲ್ಲಿರೋ ಅವರ್ಯಾರೋ ನವೆಂಬರ್ ಅನ್ನು ’ಕಾದಂಬರಿ ತಿಂಗಳು’ ಅಂತ ಮಾಡಬೇಕಾದ್ರೆ ನಾವ್ಯಾಕೆ ನವೆಂಬರ್ ತಿಂಗಳನ್ನು ”ಕನ್ನಡ ಕಾದಂಬರಿ ತಿಂಗಳು’  ಅಂತ ಮಾಡಬಾರದು? ಆ ಮೂಲಕ ನವೆಂಬರ್ ತಿಂಗಳಿನಲ್ಲಿ ಅಂತರ್ಜಾಲದಲ್ಲಿ ಕನ್ನಡ ಮನಸ್ಸುಗಳೆಲ್ಲವನ್ನೂ ಒಟ್ಟು ಮಾಡಿಕೊಂಡು ಸ್ರುಜನಶೀಲ ಬರವಣಿಗಳನ್ನು ಆರಂಭಿಸಬಾರದು ಎನ್ನುತ್ತಾ ನ್ಯಾನೋರೈಮಿನ ವೆಬ್ ಸೈಟನ್ನು ಸಂಪರ್ಕಿಸಿ. ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದೇ ಎಂದು ಮಿಂಚಂಚೆಯನ್ನು ರವಾನಿಸಿದೆ. ಅದಕ್ಕೆ ಮರು ಉತ್ತರ ಬರುವ ಮೊದಲೇ  ಆಂತರ್ಜಾಲವನ್ನು ಜಾಲಾಡಿ ಪ್ರಾದೇಶಿಕ ಭಾಷೇಯಲ್ಲಿಯೂ ಬರೆಯಬಹುದೆಂಬುದನ್ನು ಮಾಹಿತಿಯನ್ನು ಪಡೆದುಕೊಂಡು ರೈಮೋದ ವೆಬ್ ಸೈಟಿನ ಮಾರ್ಗದರ್ಶನದಲ್ಲಿ ವರ್ಡ್ ಪ್ರೆಸ್ಸ್ ನಲ್ಲಿ ಬ್ಲಾಗ ರಚಿಸಿದೆ. ಮೊದಲ ಪೋಸ್ಟ್ ಆಗಿ ’ಅವಳು ಯಾರು’ ಎಂಬ ಪೋಸ್ಟ್ ಅಪ್ಡೇಟ್ ಮಾಡಿದೆ. ಇನ್ನೂ ನಿರಂತರವಾಗಿ ಮೂವತ್ತು ದಿನ ದಿನಕ್ಕೊಂದರಂತೆ ಮೂವತ್ತು ಪೋಸ್ಟ್ ಗಳನ್ನು ಅಪ್ಡೇಟ್ ಮಾಡಬೇಕು.

ನ್ಯಾನೋ ರೈಮ್ ಗೆ ಬರೆಯಲು ಒಂಚೂರು ನಿಯಮಾವಳಿಗಳಿವೆ. ಮೊದಲನೆಯಾದಾಗಿ ರೈಮೋದ ವೆಬ್ಸೈಟಿಗೆ ಲಾಗಿನ್ ಆಗಬೇಕು. ಅಲ್ಲಿ ತಮ್ಮ ಬಗೆಗಿನ ಮತ್ತು ತಾವು ಬರೆಯಲಿರುವ ಕಾದಂಬರಿಯ ವಸ್ತುವಿನ ಬಗ್ಗೆ ಪುಟ್ಟ ಟಿಪ್ಪಣಿಯೊಂದನ್ನು ದಾಖಲಿಸಬೇಕು..ಅನಂತರದಲ್ಲಿ ವಬ್ ಸೈಟ್ ನಿಮಗೆ ಬ್ಲಾಗ್ ರಚಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತದೆ. ಮಿಂಚಂಚೆಯ ಮೂಲಕ ನಿಮ್ಮ ಸಂಶಯಗಳಿಗೆ ಉತ್ತರಿಸುತ್ತದೆ.

ಕಾದಂಬರಿಗೆ ಯಾವುದೇ ಸಬ್ಜೆಕ್ಟ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು, ಪ್ಯಾಂಟಸಿ, ಕೈಮ್, ವೈನೋದಿಕ, ಪ್ರವಾಸ. ಇತಿಹಾಸ, ವೈಜ್ನಾನಿಕ ಯಾವುದರ ಸುತ್ತ ಬೇಕಾದರೂ ಕಥೆ ಹೆಣೆಯಬಹುದು. ಬರಹದ ಮೊದಲ ಪದ ನವೆಂಬರ್ ಒಂದರ ಮಧ್ಯರಾತ್ರಿ ಬ್ಲಾಗಿನಲ್ಲಿ ದಾಖಲಾಗಿರಬೇಕು ಕೊನೆಯ ಪದ ನವೆಂಬರ್ ೩೦ರ ಮಧ್ಯರಾತ್ರಿ ೧೧.೫೯.೫೯ಕ್ಕೆ ಮುಕ್ತಾಯವಾಗಿರಬೇಕು. ಸಮಯ ಮೀರಿ ಹೋಯ್ತು ಅಂದುಕೊಂಡಿರಾ? ಪರ್ವಾಗಿಲ್ಲ. ಮುಂದಿನ ವರ್ಷ ಪ್ರಯತ್ನಿಸಬಹುದು. ಅಲ್ಲಿ ಭಾಗವಹಿಸಿದ ಕೆಲವರು ತಮ್ಮ ಬರವಣಿಗೆಯ ಬಗ್ಗೆ ಹೇಳುತ್ತಾ, ಮೊದಲ ಒಂದೆರಡು ವರ್ಷಗಳಲ್ಲಿ ಅವರ ಪ್ರಯತ್ನ ಸಫಲವಾಗಲಿಲ್ಲವಂತೆ. ಆಮೇಲೆ ತಾವು ಕಾದಂಬರಿಯನ್ನು ಕ್ಲುಪ್ತ ಸಮಯಕ್ಕೆ ಮುಗಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ತಮಲ್ಲಿ ಅಗಾಧ ಅನುಭವ ಮತ್ತು ವಿಷಯಗಳಿದ್ದರೂ ಬರವಣಿಗೆಗೆ ತರಲು ಹಿಂಜರಿಕೆ ಇತ್ತು. ಈಗ ತಾನು ಇದನ್ನು ಸಾಧಿಸಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿದ್ದಾರೆ. ಇಂತಹ ಹಿಂಜರಿಕೆಯ ವ್ಯಕ್ತಿತ್ವದವರಿಗಾಗಿಯೇ ಈಗಾಗಲೇ ಹೆಸರು ಪಡೆದ ಕಾದಂಬರಿಕಾರರಿಂದ ತಾವು ತಮ್ಮ ಮೊದಲ ಕಾದಂಬರಿಯನ್ನು ಹೇಗೆ ಬರೆದೆ? ವಸ್ತುವನ್ನು ಹೇಗೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತಾಗಿ ಅನ್ಲೈನ್ ಉಪನ್ಯಾಸಗಳನ್ನು ರಿಮೋ ಏರ್ಪಡಿಸುತ್ತದೆ.

ಭಾರತದಲ್ಲಿಯೂ ರೈನೋ ಗೆ ಬರೆಯುವುದರ ಬಗ್ಗೆ ದೆಹಲಿ, ಮುಂಬೈಗಳಲ್ಲಿ ನೊಂದಾಯಿತರ ನಡುವೆ ಆಗಾಗ ಸಂವಾದಗಳು ಏರ್ಪಾಡಾಗುತ್ತಿವೆ. ಅಲ್ಲಿ ಪರಸ್ಪರ ಅನ್ನಿಸಿಕೆ, ಸಂದೇಹ, ಸಲಹೆ. ಸೂಚನೆಗಳ ವಿನಿಮಯವಾಗುತ್ತವೆ. ಹಿಂಜರಿಕೆಯಿರುವವರಿಗೆ ಪ್ರೋತ್ಸಾಹವನ್ನು ತುಂಬಲಾಗುತ್ತದೆ.

 ಯಶಸ್ವಿ ೧೬ ವರ್ಷಗಳನ್ನು ಪೂರೈಸಿದ ನ್ಯಾನೋ ರೈಮೋ ಪ್ರಸ್ತುತ ೧೭ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವರ್ಷದಲ್ಲಿ ಎರಡು ಲಕ್ಷದ ಹದಿನೆಂಟು ಸಾವಿರದ ಎಂಟನೂರ ತೊಂಬತ್ತೇಳು ಜನ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈ ಅಂತರ್ಜಾಲ ವೇದಿಕೆ ತನ್ನನ್ನು ತಾನು ನ್ನ್ಯಾಷನಲ್ ರೈಟಿಂಗ್ ಮಂತ್ ಎಂದು ಹೇಳಿಕೊಂಡರೂ ಅದು ನಿಜಾರ್ಥದಲ್ಲಿ ಇಂತರ್ನ್ಯಾಷನಲ್ ಆಗಿದೆ.  ಭಾರತದಿಂದಲೂ ಕಳೆದ ವರ್ಷ ೪,೫೦೦ ಜನರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು.  ಸ್ರುಜನಶೀಲ ಬರವಣಿಗೆಯಲ್ಲಿ ನ್ಯಾನೋ ರೈಮೋ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ವೇದಿಕೆ. ಇದರಲ್ಲಿ ಭಾಗವಹಿಸಿದ ಬರಹಗಾರರು ತಮ್ಮನ್ನು ತಾವು ರೈಮೋಸ್ [’Wrimos] ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ.

ನಾವು ಕನ್ನಡಿಗರಿಗೆ ನವಂಬರ್ ತಿಂಗಳೆಂದರೆ ಕನ್ನಡದ ತಿಂಗಳು. ಕನ್ನಡದ ಘನತೆಯನ್ನು ಎತ್ತರಿಸುವ ಕೆಲಸಕಾರ್ಯಗಳನ್ನು ಮಾಡಲು ನಾವು ಹವಣಿಸುತ್ತೇವೆ. ಆದರೆ ವಾಸ್ತವದಲ್ಲಿ ನಾವು ಕನ್ನಡದ ಹಬ್ಬವನ್ನು ಮಾತ್ರ ಆಚರಿಸುತ್ತೇವೆ. ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ. ದೂರದರ್ಶಿತ್ವವುಳ್ಳ ಯೋಜನೆಗಳನ್ನು ರೂಪಿಸುವುದೇ ಇಲ್ಲ. ನಾವು ನ್ಯಾನೋ ರೈಮೋ ದಂತಹ ಅನ್ಲೈನ್ ಚಟುವಟಿಕೆಗಳನ್ನು ಹಾಕಿಕೊಳ್ಳುವುದರ ಮುಖಾಂತರ ಕನ್ನಡದ ಯುವ ಮನಸ್ಸುಗಳನ್ನು ಒಂದಾಗಿಸುವ ಪ್ರಯತ್ನ ಮಾಡಬಹುದು. ಇದು ನವೆಂಬರ್ ತಿಂಗಳಿನಲ್ಲಿ ನಡೆಯುವ ಕನ್ನಡ ಕಟ್ಟುವ ನಿಜವಾದ ಕೆಲಸವಾಗಬಹುದು. ಯಾಕೆಂದರೆ ಮುಂಬರುವ ದಿನಮಾನಗಳು ಖಂಡಿತವಾಗಿಯೂ ಅಂತರ್ಜಾಲದ ದಿನಗಳೇ ಆಗಿರುತ್ತವೆ.
ಕಥೆ ಎಂದರೆ ಎಲ್ಲರಿಗೂ ಇಷ್ಟ.  ಪುಟ್ಟ ಮಕ್ಕಳು ಕಥೆ ಎಂದೊಡನೆ ಕಣ್ಣರಳಿಸಿ ಗಲ್ಲಕ್ಕೆ ಕೈಯಿಟ್ಟು ಅಜ್ಜಿ ಕಥೆಗಳನ್ನು ಕೇಳುತ್ತಿರುವುದನ್ನು ನೀವೆಲ್ಲಾ ಗಮನಿಸಿಯೇ ಇರುತ್ತೀರಿ. ದೊಡ್ಡವರಾದಂತೆಲ್ಲಾ ನಾವು ಕಲ್ಪನಾ ಜಗತ್ತಿನಿಂದ ಮೆಲ್ಲ ಮೆಲ್ಲನೆ ಕಟು ವಾಸ್ತವದ ಜಗತ್ತಿಗೆ ಬಂದು ಬೀಳುತ್ತೇವೆ. ಆದರೆ ಕಥೆ ಎಂಬುದು ಮತ್ತೆ ಬಾಲ್ಯಕ್ಕೆ ಸೇತುವೆ ಕಟ್ಟುತ್ತದೆ; ಮತ್ತೆ ಯೌವನಕ್ಕೆ ರೆಕ್ಕೆ ಮೂಡುತ್ತದೆ.

ನಾನಂತೂ ಬರೆಯಲು ಆರಂಬಿಸಿದ್ದೇನೆ. ಪ್ರವಾಸದ ಹಿನ್ನೆಲೆಯಲ್ಲಿ ಸಧ್ಯಕ್ಕೆ ಬ್ಲಾಗ್ ಆರಂಭಿಸಿದ್ದೇನೆ. ಮುಂದೆ ಯಾವ್ಯವ ತಿರುವುಗಳನ್ನು ಪಡೆಯುತ್ತದೋ ನನಗೇ ಗೊತ್ತಿಲ್ಲ. ಅಂತೂ ಕಳೆದು ಹೋಗುವುದಕ್ಕೆ ಸಿದ್ಧಳಾಗಿದ್ದೇನೆ. ಎಲ್ಲವೂ ಸರಿಯಾದರೆ ದಶಂಬರ ಮೊದಲ ವಾರದಲ್ಲಿ ?’ ಎಂಬ ಕಾದಂಬರಿ ಓದುಗರ ಕೈಸೇರಲೂ ಬಹುದು!


Wednesday, November 1, 2017

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ
ಮನುಷ್ಯನಾದವನಿಗೆ ತನ್ನ ನೆಲ, ಜಲ, ನುಡಿಯ ಬಗ್ಗೆ ಅಭಿಮಾನವಿದ್ದೇ ಇರುತ್ತದೆ. ಇಂತಹ ಚೌಕಟ್ಟುಗಳನ್ನು ತಾನು ಮೀರಿದವನು\ಳು, ನಾನು ವಿಶ್ವಪ್ರೇಮಿ ಎಂದುಕೊಂಡವರು ಕೂಡಾ ತನ್ನ ಹೆತ್ತ ತಾಯಿಯನ್ನು ಪ್ರೀತಿಸದೇ ಇರಲಾರರು. ಹಾಗೆ ಪ್ರೀತಿಸಿದ್ದು ನಿಜವಾಗಿದ್ದಲ್ಲಿ ಅವರಿಗೂ ನಾಡು ನುಡಿಯ ಬಗ್ಗೆ ಅಭಿಮಾನವಿದ್ದಿರಲೇ ಬೇಕು.
ನಾನು ತುಳುನಾಡಿನವಳು. ಈಗ ರಾಜಧಾನಿಯಲ್ಲಿದ್ದೇನೆ. ನಾನಿರುವ ಪರಿಸರದಲ್ಲಿ ಎಲ್ಲಿಯಾದರು ತುಳು ಮಾತುಗಳು ನನ್ನ ಕಿವಿಗೆ ಬಿದ್ದರೆ ತಕ್ಷಣ ಕಿವಿ ಚುರುಕಾಗುತ್ತದೆ. ಒಂದು ಕ್ಷಣ ಕತ್ತು ಆ ಕಡೆಗೆ ಹೊರಳುತ್ತದೆ. ಅದುವೇ ತಾಯ್ನುಡಿಯೆಡೆಗಿನ ಸೆಳೆತ, ಮೋಹ, ಅಭಿಮಾನ.
ವಿಶ್ವಪ್ರಜ್ನೆ, ಅನಿಕೇತನ, ಗ್ಲೋಬಲ್ ವಿಲೇಜ್ ಎಂದೆಲ್ಲಾ ಮಾತಾಡುವ ನಮ್ಮ ಭಾವಕೋಶದಲ್ಲಿ ನಮಗೇ ಗೊತ್ತಿಲ್ಲದ ಹಲವಾರು ವಿಷಯಗಳು ಅಡಗಿ ಕುಳಿತಿರುತ್ತವೆ. ಅವು ಯಾವ್ಯಾವ ಸಂದರ್ಭಗಳಲ್ಲಿ ತಮ್ಮ ಇರವನ್ನು ಪ್ರಕಟಿಸಿ ಹೊರಚಿಮ್ಮುತ್ತವೆ ಎಂಬುದರ ಬಗ್ಗೆ ಕಿಂಚಿತ್ ಅರಿವೂ ನಮಗಿರುವುದಿಲ್ಲ.
 ಇಂದು ನಮ್ಮ ಕನ್ನಡ ನಾಡಿನ ಹುಟ್ಟುಹಬ್ಬ; ಕರ್ನಾಟಕ ರಾಜ್ಯ ಉದಯವಾದ ದಿನ,. ’ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಮ್ಮ ಹಿರಿಯರಿಂದಾಗಿ ೧೯೫೬ರ ನವೆಂಬರ್ ಒಂದರಂದು ಭಾಷಾವಾರು ಪ್ರಾಂತ್ಯದಡಿ ಮೈಸೂರು ರಾಜ್ಯ  ಉದಯವಾಯ್ತು. ಅಲ್ಲಿಯವರೆಗೆ ಮದರಾಸು, ಮುಂಬೈ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ನಮ್ಮ ನಾಡು ಹಂಚಿ ಹರಿದುಹೋಗಿದ್ದವು, ೧೯೭೧ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಯ್ತು.
ಇಂದಿಗದು ಇತಿಹಾಸ,
ಈಗ ನಾವು ಅನ್ನವನ್ನರಸಿಕೊಂಡು ಪ್ರಪಂಚದಾದ್ಯಂತ ವಲಸೆ ಹೋಗುತ್ತಿದ್ದೇವೆ. ಹಾಗೆ ಹೋದ ಹೊರನಾಡಿನ ಕನ್ನಡಿಗರನ್ನು ನಮ್ಮ ಸಂಸ್ಕೃತಿಯ ಭಾಗವಾದ ತಾಯ್ನುಡಿ ಒಂದಾಗಿ ಬೆಸೆಯುತ್ತದೆ. ಆಯಾಯ ದೇಶಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ತಮ್ಮ ತಾಯ್ನಾಡಿನ ಜೊತೆ ಭಾವಾನಾತ್ಮಕವಾದ ನಂಟನ್ನು ಹಸಿರಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
 ನನ್ನಂತವರು ಆಗಾಗ ಪ್ರವಾಸಕ್ಕೆಂದು ತಾಯ್ನಾಡನ್ನು ಅಲ್ಪಕಾಲದ ಮಟ್ಟಿಗೆ ತೊರೆದು ಹೋಗುತ್ತೇವೆ. ಹಾಗೆ ಹೋದಾಗ ಅಲ್ಲೆಲ್ಲೋ ಕನ್ನಡದ ಮಾತುಗಳು ಕಿವಿಗೆ ಬಿದ್ದಾಗ, ಕಣ್ಣಿಗೆ ಕನ್ನಡದ ಬರಹ ಕಂಡಾಗ ಅವರ್ಣನೀಯವಾದ ಆನಂದವುಂಟಾಗುತ್ತದೆ.
ಹಿಮಾಲಯದ ಬಹುತೇಕ ಪುಣ್ಯಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡ ರಾಜ್ಯವನ್ನು ’ದೇವಭೂಮಿ’ಯೆಂದು ಕರೆಯುತ್ತಿರುತ್ತಾರೆ.ಇತ್ತೀಚೆಗೆ ಚಾರ್ ಧಾಮಗಳಲ್ಲಿ ಒಂದಾದ ಬದರಿನಾಥಗೆ ಹೋಗಿದ್ದೆ. ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ದೊಡ್ಡದಾದ ಬೋರ್ಡ್ ನಲ್ಲಿದ್ದ ಕನ್ನಡದ ಸ್ವಾಗತ ಫಲಕವನ್ನು ಕಂಡು ಪುಳಕಗೊಂಡಿದ್ದೆ. ಅದರಲ್ಲಿ ಹೀಗೆ ಬರೆದಿತ್ತು. ’ದೇವಭೂಮಿಗೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ’ ಎಂಬ ಬೋರ್ಡನ್ನು ನೋಡಿ ಪುಳಕಗೊಂಡೆ. ಹಾಗೆಯೇ ಇದೇ ರಾಜ್ಯದಲ್ಲಿರುವ ಭಾರತ ಕೊನೆಯ ಗ್ರಾಮವಾದ ಮಾನ ವಿಲೇಜ್ ನಲ್ಲಿ ’ಭಾರತದ ಕೊನೆಯ ಚಾ ಅಂಗಡಿ’ ಎಂಬ ಫಲಕ ಕಂದೆ. ಅಲ್ಲೇ ಕೆಳಗೆ ಹರಿಯುತ್ತಿದ್ದ ಪರಮ ಪವಿತ್ರ ಸರಸ್ವತಿ ನದಿಯ ಬೋರ್ಗೆರೆತವನ್ನು ಆಲಿಸುತ್ತಾ ಚಹಾ ಕುಡಿದು ವ್ಯಾಸಗುಹೆಯ ಪಕ್ಕದಲ್ಲಿರುವ ಈ ಅಂಗಡಿಯ ಪೋಟೋಗಳನ್ನು ವಿವಿಧ ಆಯಾಮಗಳ ಪೋಟೋಗಳಲ್ಲಿ ಸೆರೆಹಿಡೆದೆ.
ನಾಲ್ಕೈದು ವರ್ಷಗಳ ಹಿಂದೆ ಇಲ್ಲೇ ಅಂಧ್ರಪ್ರದೇಶದ ಶ್ರೀಶೈಲಕ್ಕೆ ಹೋಗಿದ್ದೆ. ಅದು ನಮ್ಮ ಅಕ್ಕಮಹಾದೇವಿ ಶಿವನಲ್ಲಿ ಐಕ್ಯಗೊಂಡ ಕದಳಿಯ ಪಕ್ಕದಲ್ಲಿರುವ ಶೈವಸ್ಥಳ. ಅಕ್ಕನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನ ಮಂದಿರದಲ್ಲಿ ಚಪ್ಪಲಿಯನ್ನು ಕಳಚುತ್ತಿರುವಾಗ ಅಲ್ಲಿರುವ ಕನ್ನಡ ಬೋರ್ಡ್ ನೋಡಿ  ನಗುವುಕ್ಕಿ ಬಂದಿತ್ತು ಅಲ್ಲಿ ಹೀಗೆ ಬರೆದಿತ್ತು; ’ಪಾದರಕ್ಷೆ ಭದ್ರ ಪರಚುವ ಸ್ಥಳ’ ಅಲ್ಲಿಗೆ ಭೇಟಿಕೊಡುವವರಲ್ಲಿ ಬಹುತೇಕರು ಕನ್ನಡಿಗರು ಹಾಗಾಗಿ ಅದು ಸಹ್ಯ ಎನಿಸಿತ್ತು.
ಇದೆಲ್ಲಕ್ಕಿಂತಲೂ ಒಬ್ಬ ಅಪ್ಪಟ್ಟ ಕನ್ನಡಾಭಿಮಾನಿಯನ್ನು ನಾನು ಮಣಿಪುರದ ರಾಜಧಾನಿ ಇಂಪಾಲದಲ್ಲಿ ಕಂಡಿದ್ದೆ. ಅವನ ಹೆಸರು ನನಗಿನ್ನೂ ನೆನಪಿದೆ; ಜ್ನಾನೇಶ. ೨೦೦೯ರಲ್ಲಿ ಅವನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಸಮಯದಲ್ಲಿ ಓಡಾಡಲೆಂದು ಮಾಡಿಸಿದ್ದ ಬಿ.ಎಂ.ಟಿ ಬಸ್ಸ್ ಪಾಸನ್ನು ಈಗಲೂ ಸದಾ ತನ್ನ ಕಿಸೆಯಲ್ಲಿಟ್ಟುಕೊಂಡಿದ್ದನ್ನು ಕಂಡು ಅಚ್ಚರಿಗೊಂಡಿದ್ದೆ. ಅತ್ಯಂತ ಸ್ಫುಟವಾದ ಕನ್ನಡದಲ್ಲಿ ಮಾತಾಡಿದ್ದಲ್ಲದೆ ಕನ್ನಡ ಚಲಚಿತ್ರಗೀತೆಯೊಂದನ್ನು ಹಾಡಿಯೂ ತೋರಿಸಿದ್ದನ್ನು ನಾನೆಂದೂ ಮರೆಯಲಾರೆ.
ಮೇಘಾಲಯದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ನಂದಿನಿ ಐಸ್ಕ್ರೀಮಿನ ಜಾಹೀರಾತು ಫಲಕವೊಂದನ್ನು ಕಂಡು ವಾಹನ ನಿಲ್ಲಿಸಿ ಐಸ್ಕ್ರೀಮ್ ಖರೀದಿಸಿ ತಿಂದಿದ್ದೆ.
ಪೂರಣಗಿರಿ ಬೆಟ್ಟವನ್ನು ಹತ್ತುತ್ತಿರುವಾಗ ಇಳಿದು ಬರುತ್ತಿದ್ದ ಒಬ್ಬ ಮಾರ್ವಾಡಿ ನಮ್ಮನ್ನು ನೋಡಿ ಕರ್ನಾಟಕದವರೆಂದು ತಿಳಿದು ಅಭಿಮಾನದಿಂದ ಮಾತಾಡಿಸಿದ್ದ. ಅರುಣಾಚಲಪ್ರದೇಶದ ತವಾಂಗ್ ನಲ್ಲಿ ನಾವು ಉಳಿದುಕೊಂಡಿದ್ದ ವಸತಿನಿಲಯದ ಮಾಲೀಕ ಕನ್ನಡದಲ್ಲೇ ಮಾತಾಡಿ ಅಚ್ಚರಿ ಹುಟ್ಟಿಸಿದ್ದ. ವಿಚಾರಿಸಿದಾಗ, ಅವರೊಬ್ಬ ಇಂಜಿನಿಯರ್. ಬೆಂಗಳೂರಿನಲ್ಲೇ ಕುಟುಂಬದೊಂದಿಗೆ ದಶಕಗಳ ಕಾಲ ವಾಸ್ತವ್ಯ ಹೂಡಿದ್ದರು. ಮಗ ಇಲ್ಲಿಯೇ ಇಂಜಿನಿಯರಿಂಗ್ ಮಾಡಿದ್ದ. ಆತನೂ ಸ್ವಚ್ಚವಾದ ಕನ್ನಡದಲ್ಲಿಯೇ ಕಕ್ಕುಲಾತಿಯಿಂದ ನಮ್ಮ ಬೇಕು-ಬೇಡಗಳನ್ನು ವಿಚಾರಿಸಿಕೊಂಡಿದ್ದ.
ಕಾರ್ಗಿಲ್ ನಲ್ಲಿ ಕೂಡಾ ಒಬ್ಬ ಒಂಜಿನಿಯರ್ ಸಿಕ್ಕಿದ್ದ. ಆತ ಕೂಡಾ ಬೆಂಗಳೂರಿನ ತನ್ನ ಸ್ಟೂಡೆಂಟ್ ಅನುಭವಗಳನ್ನು ಹೇಳುತ್ತಾ ತನ್ನ ತಾಯ್ನಾಡಿನ ಸೇವೆಗಾಗಿ ತಾನು ಕಾರ್ಗಿಲ್ ನಲ್ಲೇ ನೆಲೆಸಿರುವುದಾಗಿ ಹೇಳಿಕೊಂಡಿದ್ದ.

ಈಶಾನ್ಯ ರಾಜ್ಯಗಳ ಪ್ರವಾಸದ ಅನುಭವದಲ್ಲಿ ನನ್ನ ಅನುಭವಕ್ಕೆ ಬಂದಿದ್ದು; ಇವರೆಲ್ಲಾ ಬೆಂಗಳೂರನ್ನು ಕ್ರುತಜ್ನತೆಯಿಂದ ನೆನಪಿಸಿಕೊಳ್ಳುತ್ತಾರೆ; ಪ್ರೀತಿಸುತ್ತಾರೆ ಯಾಕೆಂದರೆ ಇವರಿಗೆಲ್ಲಾ ಬೆಂಗಳೂರು ಅನ್ನ ಕೊಟ್ಟಿದೆ. ಈ ನಾಡು ಅವರಿಗೆಲ್ಲಾ ಅನ್ನಪೂರ್ಣೇಶ್ವರಿಯ ಹಾಗೆ ಕಾಣುತ್ತದೆ.
ನನ್ನ ಪ್ರವಾಸಕಾಲದಲ್ಲಿ ಬಹಳ ಜನ ನನ್ನನ್ನು ’ನೀವು ಬೆಂಗಲಿಯಾ’ ಎಂದು ಮಾತಾಡಿಸುತ್ತಾರೆ. ಯಾಕೆ ಹೀಗೆ ಎಂದು ಯೋಚಿಸುತ್ತಿದ್ದೆ. ಕ್ರಮೇಣ ನನ್ನ ಅನುಭವಕ್ಕೆ ಬಂತು; ಬೆಂಗಾಲಿಗಳು ಮತ್ತು ಕನ್ನಡಿಗರು ಪ್ರವಾಸ ಪ್ರೀಯರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿಕೊಂಡಿರುತಾರೆ ಅಂತ. ಚಾರ್ ಧಾಮಗಳಾದ ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿಗಳಲ್ಲಂತೂ ಎಲ್ಲಿ ನೋಡಿದರೂ ಕನ್ನಡಿಗರೇ ಕಾಣಸಿಗುತ್ತಾರೆ, ಕನ್ನಡನುಡಿಯೇ ಕಿವಿಗೆ ಬೀಳುತ್ತದೆ.!

[ ’ಚಲಿತ ಚಿತ್ತ’ ಕಾಲಂಗಾಗಿ ಬರೆದ ಲೇಖನ ]Sunday, July 9, 2017

ಮಾಳವಿಕಾ ಹೇಳಿಕೆಯ ಹಿನ್ನೆಲೆಯಲ್ಲಿ,,,,


ಸೋಷಿಯಲ್ ಮೀಡಿಯಾಗಳಲ್ಲಿ ಹೆಣ್ಣು-ಗಂಡು ಬೇದವಿಲ್ಲದ ಬಹಳಷ್ಟು ಜನರು ಮಾಳವಿಕಾ ಅವಿನಾಶ್ ಮೇಲೆ ಜರಿದುಬಿದ್ದುದ್ದನ್ನು ನೋಡಿ ಆಕೆ ಏನು ಹೇಳಿರಬಹುದೆಂದು ಅಲ್ಲೆಲ್ಲಾ ಹರಿದಾಡುತ್ತಿದ್ದ ಪೇಪರ್ ಕಟ್ಟಿಂಘ್ ಅನ್ನು ಓದಿದೆ. ಅಂತಹ ಪ್ರಮಾದವೇನೂ ಕಾಣಿಸಲಿಲ್ಲ. ಎರಡು ವಾರದಿಂದ ಜ್ವರದಿಂದ ಮಲಗಿ,ಎದ್ದು ಸ್ವಕೆಲಸಗಳನ್ನು ಮಾಡುತ್ತಿದ್ದ ಕಾರಣದಿಂದಾಗಿ ಪೇಪರುಗಳನ್ನು ಸರಿಯಾಗಿ ಓದಲಾಗುತ್ತಿರಲಿಲ್ಲ. ಟೀವಿ ಕೂಡಾ ಹೆಡ್ಲೈನ್ ಗಳನ್ನು ನೋಡಿ ಹಾಗೇ ಬಿದ್ದುಕೊಳ್ಳುತ್ತಿದ್ದೆ.

ಅಂತರ್ಜಾಲ ಮ್ಯಾಗಝೀನ್ ಒಂದು ಮಾಳವಿಕಾ ಹೇಳಿಕೆಯನ್ನೇ ಮುಖ್ಯವಾಗಿಟ್ಟುಕೊಂಡು ವಿಶೇಶ ಪುರವಣಿಯೊಂದನ್ನು ತಂದಾಗ ಮಾಳವಿಕಾ ಹೇಳಿಕೆ ನೀಡಿದ ಪೇಪರನ್ನು ಹುಡುಕಿ ತೆಗೆಯಲೇಬೇಕಾಯ್ತು.
ಅದು ನಿನ್ನೆ ಶನಿವಾರ ಪ್ರಜಾವಾಣಿಯ ’ ಭೂಮಿಕಾ’ ಮಹಿಳಾ ಪುರವಣಿಯಲ್ಲಿ ಕೋಡಿಬೆಟ್ಟು ರಾಜಲಕ್ಮೀಯವರು ಬರೆದ  ’ರಕ್ತದ ಮೇಲೆ ತೆರಿಗೆ’ ಎಂಬ ಪ್ರಧಾನ ಲೇಖನಕ್ಕೆ ಪೂರಕವಾಗಿ ಐದು ಮಹಿಳೆಯರಿಂದ ತೆಗೆದುಕೊಂಡ ಅಭಿಪ್ರಾಯ ಸಂಗ್ರಹಣೆಯಲ್ಲಿ ಮಾಳವಿಕಾ ಅವರದೂ ಒಂದಾಗಿತ್ತು.

ಓದಿದೆ. 
ಸ್ವಲ್ಪ ವಿವರವಾದ ಅಭಿಪ್ರಾಯ ಅವರದು. ಹಾಗಾಗಿ ಮತ್ತೊಮ್ಮೆ ಓದಿದೆ.  ಅಂತಹ ಹೀಯಾಳಿಕೆಗೆ ಕಾರಣವಾದ ಅಂಶಗಳು ಗೊತ್ತಾಗಲಿಲ್ಲ. ನಾನು ದಡ್ಡಿ ಇದ್ದೀರಲೂಬಹುದು. ಅನಂತರ ಹೆಡ್ಡಿಂಗ್ ನೋಡಿದೆ; ’ಸ್ಯಾನಿಟರಿ ಪ್ಯಾಡ್ ಗಳು ಬೇಕಿಲ್ಲ!” ಅಲ್ಲೊಂದು ಅಶ್ಚರ್ಯಜನಕ ಚಿನ್ನೆ ಇತ್ತು. ಸಾಮಾನ್ಯವಾಗಿ ಇಂತಹ ಅಭಿಪ್ರಾಯಗಳನ್ನು ಪತ್ರಿಕೆಯವರು ಬರಹದ ಮೂಲಕ ತೆಗೆದುಕೊಳ್ಳುವುದಿಲ್ಲ. ಪೋನಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಇವರು ಹೇಳಿದುದನ್ನು ಅವರು ಬರೆದುಕೊಳ್ಳುತ್ತಾರೆ. ಆಮೇಲೆ ಅವರೇ ತಮಗೆ ಬೇಕಾದ ಹೆಡ್ಡಿಂಗ್ ಕೊಟ್ಟ್ಕೊಳ್ಳುತ್ತಾರೆ. ಗಮನಿಸಿ: ಒಂದು ಲೇಖನಕ್ಕೆ ನೀವು ಕೊಡುವ ಹೆಡ್ಡಿಂಗ್ ಗಳಿಗೆ, ಲೇಖನದಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನದ ಆಶಯವನ್ನೇ ಬದಲಿಸುವ ಶಕ್ತಿಯಿರುತ್ತದೆ. ಇಲ್ಲಿ ಮಾಳವಿಕಾ ಅವರ ಅಭಿಪ್ರಾಯದ ಹೆಡ್ಡಿಂಗ್ ಕೇವಲ ಒಂದು ಸ್ಟೇಟ್ಮೆಂಟ್ ಆಗಿದೆ. ಮತ್ತು ಅದಕ್ಕೊಂದು ಅಶ್ಚ್ರ್ಯಜನಕ ಚಿಹ್ನೆಯನ್ನು ತಗುಲಿಸಲಾಗಿದೆ. ಹಾಗೆಯೇ ಅವರ ಹೇಳಿಕೆಯ ಕೊನೆಯಲ್ಲಿಯೂ ಮತ್ತೊಂದು ಆಶ್ಚರ್ಯಜನಕ ಚಿಹ್ನೆಯನ್ನು ಲಗತ್ತಿಸಲಾಗಿದೆ. ಅದು ಯಾಕೆ ಅಲ್ಲಿ ನೇತಾಡಿಕೊಂಡಿದೆ ಎಂದು ನನಗರ್ಥವಾಗಲಿಲ್ಲ.

ಮಾಳವಿಕ ಹೇಳಿರುವುದನ್ನು ಒಂದೇ ಫ್ಯಾರ ಮಾಡಲಾಗಿದೆ. ಆದರೆ ಅವರು ಒಂದೇ ವಿಷ್ಯ ಹೇಳಿಲ್ಲ. ಅಲ್ಲಿ ಮೂರು ಅಭಿಪ್ರಾಯಗಳನ್ನು ಹೇಳಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳ ಸ್ಯಾನಿಟರಿ ಪ್ಯಾಡ್ಗಳ ಡಂಪಿಂಗ್ ಯಾರ್ಡ್ ಭಾರತ ಆಗುತ್ತಿರುವುದರ ಬಗ್ಗೆ ಹೇಳಿದ್ದಾರೆ. ಎರಡನೆಯದಾಗಿ ಅವರು ಪರಂಪರೆಯಿಂದ ನಮ್ಮ ತಾಯಂದಿರು ಬಳಸುತ್ತಾ ಬಟ್ಟೆ ಹೆಚ್ಚು ಹೈಜನಿಕ್ ಆಗಿರುತ್ತದೆ ಎಂದವರು ಮುಂದುವರಿದು ಪ್ರಾಯೋಗಿಕ ಕಾರಣಗಳಿಂದಾಗಿ ಅದನ್ನು ಬಳಸುವುದು ಕಷ್ಟ ಎಂದು ಮುಂದುವರಿದ ರಾಷ್ಟ್ರಗಳಂತೆ ನಾವು ಕ್ರಮೇಣ ಟ್ಯಾಂಪೂನ್ ಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ. ಮೂರನೆಯದಾಗಿ ಭಾರತದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುತ್ತಿರುವವರ ಅಂಕಿಅಂಶಗಳನ್ನು ನೀಡಿದ್ದಾರೆ. ನಾಲ್ಕನೆಯದಾಗಿ ಬಹುಮುಖ್ಯವಾದ ಅಂಶವನ್ನೊಂದು ಹೇಳಿದ್ದಾರೆ . ಅದು; ಶೇ೧೨ ಜಿಎಸ್ ಟಿಯಿಂದ ಡಿಮಾಂಡ್ –ಸಪ್ಲೈ ಆಧಾರಿತವಾದ ಪ್ಯಾಡ್ ಬಳಕೆ ಕಡಿಮೆಯಾಗುತ್ತದೆಯೆಂಬುದು ಸರಿಯಲ್ಲ. ಹಾಗೆ ಒಂದು ವೇಳೆಯಿದ್ದರೂ ಬೇರೆ ಪರಿಸರಸ್ನೇಹಿ ಪರ್ಯಾಯಗಳಿಗದು ಅನುವು ಮಾಡಿಕೊಡಲಿ. ಇದಿಷ್ಟು ಮಾಳವಿಕಾ ಹೇಳಿದ್ದು.

ಮುಟ್ಟಿನ ಸಂಕಟಗಳ ಬಗ್ಗೆ ಹೇಳ ಹೊರಟರೆ ಪ್ರತಿಯೊಬ್ಬ ಮಹಿಳೆಯೂ ಒಂದೊಂದು ಕಾದಂಬರಿ ಬರೆಯಬಹುದು. ಅಷ್ಟು ಸರಕು ಆಕೆಯಲ್ಲಿದೆ. ಅದೂ ಮನೆಯಿಂದ ಏಳು ಗಂಟೆಗೆ ಹೊರಟು ಮತ್ತೆ ಏಳುಘಂಟೆಗೆ ಮನೆ ಸೇರುವ, ದಿನಾ ಹದಿನಾರು ಮೈಲಿ ನಡೆಯಬೇಕಾದ ಅವಸ್ಥೆಯಲ್ಲಿ ನಾವು ನಮ್ಮ ಕೌಮಾರ್ಯವನ್ನು ದಾಟಿ ಬಂದುದು ಒಂದು ಸಾಹಸವೇ ಸರಿ. ಅದೂ ಮಳೆಗಾಲದ ದಿನಗಳಲ್ಲಿ ನಮ್ಮ ಅವಸ್ಥೆ ಹೇಳುವುದೇ ಬೇಡ. ನಮ್ಮ ಶಾಲೆಯಲ್ಲಿ ಶೌಚಾಲಯವೂ ಇರಲಿಲ್ಲ- ಪಿಯೂಸಿ ತನಕ- ಗಿಡ, ಪೊದೆ ಮರೆಗಳಲ್ಲಿ ನಮ್ಮ ಖಾಸಗಿತನವನ್ನು ನಾವು ಕಾಪಾಡಿಕೊಳ್ಳಬೇಕಾಗಿತ್ತು. ನಮ್ಮ ಕ್ಲಾಸಿನ ಒಂದು ಹುಡುಗಿಯ ಹತ್ತಿರ ’ಆ ದಿನಗಳಲ್ಲಿ’ ನಾವು ಎಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಿದ್ದೆವು ಅಂದರೆ ಐದು ಜನ ಕೂತುಕೊಳ್ಳುವ ಬೆಂಚಿನ ಮೂರೇ ಜನ ಕೂತುಕೊಳ್ಳುತ್ತಿದ್ದೆವು. ಅವಳೊಂದು ತುದಿ..ಉಳಿದಿಬ್ಬರು ಇನ್ನೊಂದು ತುದಿ. ಸಹಿಸಲಸಾಧ್ಯವಾದ ವಾಸನೆ. ಆದರೆಒಂದು ದಿನವೂ ಆಕೆಯ ಮನನೋಯಿಸಿ ಮಾತಾಡಿದವರಲ್ಲ. ಉಳಿದ ದಿನಗಳಲ್ಲಿ ನಾವೆಲ್ಲಾ ಒಂದು.
ಸ್ಯಾನಿಟರಿ ನ್ಯಾಪಕಿನ್ ಗಳು ಬಂದ ಮೇಲೆ ಹುಡುಗಿಯರಿಗೆ ಬಂದ ಆತ್ಮವಿಶ್ವಾಸ ಇದೆಯಲ್ಲಾ, ಅದು ಮೇರುಪರ್ವತದಷ್ಟು. ಶಾಲೆಗಳಲ್ಲಿ ತುರ್ತುಸಂದರ್ಭಗಳಲ್ಲಿ ಮೇಡಂಗಳು ಅದನ್ನು ವಿದ್ಯಾರ್ಥಿನಿಯರಿಗೆ ವಿತರಿಸಲು ಶುರು ಮಾಡಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಮ್ಮಂದಿರಲ್ಲಿ ನಾನೂ ಒಬ್ಬಳು.

ನನ್ನ ಆರಂಭದ ದಿನಗಳಲ್ಲಿ, ಮತ್ತು ನನ್ನ ಹಿಂದಿನ ತಲೆಮಾರಿನ ಮಹಿಳೆಯರು ಉಪಯೋಗಿಸುತ್ತಿದ್ದು ಬಟ್ಟೆಗಳನ್ನು. ಆಗ ಕಾಟನ್ ಬಟ್ಟೆಗಳು ಯಥೇಚ್ಚವಾಗಿ ಸಿಗುತ್ತಿದ್ದ ಕಾಲ. ಆದರೆ ಮೈಮನಗಳನ್ನು ಮುದುರಿಸಿಕೊಂಡು ಮನೆಯಿಂದ ಆಚೆಕಡೆ ’ ಕಾಗೆ ಮುಟ್ಟಿಸಿಕೊಂಡು’ ಅಸ್ಪರ್ಶ್ಯಳಾಗಿ ಮೂರು ದಿನ ಹೊರಗೆ ಕೂರುತ್ತಿದ್ದ ಕಾಲ. ಮೊದಲ ಬಾರಿ-ಋತುಮತಿಯಾದಾಗ ಫಲಭರಿತ ಮರದಡಿಯಲ್ಲಿ ಕುಳ್ಳಿರಿಸಿ ಊರವರನ್ನೆಲ್ಲಾ ಕರೆದು ಆರತಿ ಮಾಡಿಸಿಕೊಂಡು ಸೋದರಮಾವನ ಮನೆ ಸೇರುತ್ತಿದ್ದ ಕಾಲ. ಬಟ್ಟೆಗಳ ಕಾಲದ ನಂತರ ಬಂದಿದ್ದೇ ಸ್ಯಾನಿಟರಿ ಪ್ಯಾಡಿನ ಕಾಲ . ಅದೀಗ ಹೆಣ್ಣುಮಕ್ಕಳ ’ ಆ ದಿನಗಳನ್ನು’ ಆಳುತ್ತಿರುವ ವಸ್ತು. ಆದರೆ ಅದರಲ್ಲಿರುವ ಹಾನಿಕಾರಕ ಗುಣ್ಗಳನ್ನು ಕಂಡುಕೊಂಡ ಪರಿಸರತಜ್ನರು, ಎನ್ಜಿಓಗಳು ಬಟ್ಟೆಯ ಪ್ಯಾಡ್ ಗಳ ಬಗ್ಗೆ ಮಾತಾಡುತ್ತಿದ್ದಾರೆ.

 ಸ್ಯಾನಿಟರಿ ನ್ಯಾಪ್ಕೀನ್ ಗಳ ಬದಲಿಗೆ ಇನ್ನೇನಾದರೂ ಪರಿಣಾಮಕಾರಿಯಾದ ವಸ್ತು ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸಿದವಳಲ್ಲಿ ನಾನೂ ಒಬ್ಬಳು. ಅದಕ್ಕೆ ಮುಖ್ಯ ಕಾರಣವಾಗಿದ್ದು, ನಮಗೆ ಅದನ್ನು ಹೇಗೆ ಉಪಯೋಗಿಸುವುದು ಎಂಬುದು ಗೊತ್ತು? ಆದರೆ ಅದನ್ನು ಹೇಗೆ  ವಿಸರ್ಜಿಸುವುದು ಎಂಬುದರ ಬಗ್ಗೆ ಸಾಕಷ್ಟು ಜ್ನಾನವಿದ್ದ ಹಾಗಿಲ್ಲ. ನಾವು ನಡೆದಾಡುವ ಹಾದಿಗಳಲ್ಲಿ, ರಸ್ತೆಗಳಲ್ಲಿ ಅಲ್ಲಲ್ಲಿ ಉಪಯೋಗಿಸಿದ ನ್ಯಾಪಕ್ನಿನ್ ಗಳು ನಿಮಗೆ ಒಂದಲ್ಲ ಒಂದು ಬಾರಿಯಾದರೂ ಕಂಡಿರಲೇಬೇಕು. ಕೆಲವೊಮ್ಮೆ ನಾಯಿಗಳು ಅದನ್ನು ಕಚ್ಚಿ ಹರಿದು ತಿನ್ನುತ್ತಿರುವುದನ್ನು ಗಮನಿಸಿರಲೂ ಸಾಕು. ಅಗೆಲ್ಲಾ ಒಂಥರಾ ಕಸಿವಿಸ್ಗೊಂಡಿದ್ದೇನೆ. ನ್ಯಾಪ್ಕಿನ್ ಗಳಲ್ಲಿ ಪ್ಲಾಸ್ಟಿಕ್ ಅಂಶಗಳಿರುವುದರಿಂದ ಅವುಗಳನ್ನು ಭೂಮಿಯಲ್ಲಿ ಹುಗಿದರೂ ಅದು ಮಣ್ಣಿನಲ್ಲಿ ಮಿಳಿತಗೊಳ್ಳುವುದಿಲ್ಲ. ಸುಟ್ಟರೆ ಪರಿಸರಕ್ಕೆ ಹಾನಿಕಾರಕ ಅಂಶಗಳು ಸೇರಿಕೊಳ್ಳುತ್ತವೆ ಎಂದು ವರದಿಗಳು ಹೇಳುತ್ತವೆ.

ನಾನು ಆಗಾಗ ಪ್ರವಾಸ ಹೋಗುತ್ತೇನೆ. ಹಾಗಾಗಿ ಸಾರ್ವಜನಿಕ ಶೌಚಾಲಯಗಳನ್ನೂ ಬಳಸುತ್ತೇನೆ. ಅಲ್ಲಿ ಎಲ್ಲೆಂದರಲ್ಲಿ ಬಳಸಿದ ನ್ಯಾಪಕಿನ್ ಗಳು ಕಾಣಸಿಗುವುದು ಸಾಮಾನ್ಯ, ಅಲ್ಲಿ ದಕ್ಕೆಂದೇ ಪ್ರತ್ಯೇಕ ಬಕೇಟ್ ಇಟ್ಟಿದ್ದರೂ ಅದರಲ್ಲಿ ಹಾಕದೇ ಶೌಚಾಲಯದ ಮೂಲೆಯಲ್ಲೇ ಹಾಕಿರುತ್ತಾರೆ. ಕೆಲವೊಮ್ಮೆ ಶೌಚಾಲಯದ ಗುಂಡಿಗೇ ಹಾಕಿ ಅದು ಕಟ್ಟಿಕೊಳ್ಳುವಂತೆ ಮಾಡಿಬಿಡುತ್ತಾರೆ. ನಿಮಗೆ ಗೊತ್ತಾ? ಪ್ರಪಂಚದ ಅತ್ಯಂತ ಎತ್ತರದ- 18380 ಅಡಿ- ಮೋಟಾರು ರಸ್ತೆಯಾದ ಕಾರ್ದುಂಗಲ ಪಾಸ್ ನಲ್ಲಿಯೂ ಒಂದು ಮಹಿಳಾ ಶೌಚಾಲಯವಿದೆ. ಅಲ್ಲಿಯೂ ಉಪಯೋಗಿಸಿದ ನ್ಯಾಪ್ಕೀನ್ ಎಲ್ಲೆಂದರಲ್ಲಿ ಬಿಸಾಕಿಹಾಕಿದ್ದನ್ನು ನಾನು ನೋಡಿದ್ದೇನೆ. ಅದನ್ನೆಲ್ಲಾ ಎಂದಾದರೂ ನಮ್ಮ ಪುರುಷ ಜವಾನರೇ ಶುಚಿಗೊಳಿಸಬೇಕಷ್ಟೇ. ಇಂತಹ ಬೇಜವಬ್ದಾರಿತನದಿಂದಲೇ ಇರಬೇಕು ಮನಾಲಿ ರಸ್ತೆಯಲ್ಲಿ ಬರುವ ಜೋಜಿಲ ಪಾಸ್ ಹತ್ತಿರ ಸಿಕ್ಕುವ ಪುಟ್ಟ ಊರಿನಲ್ಲಿ ಸಿಗುವ ಮಹಿಳಾ ಶೌಚಾಲಯಕ್ಕೆ ಅಲ್ಲಿನ ಅಂಗಡಿಯವರು ಬೀಗ ಜಡಿದಿದ್ದರು. ನಾವು ಮನವಿ ಮಾಡಿಕೊಂಡರೂ ಬೀಗ ಕೊಡಲೇ ಇಲ್ಲ.

ನಿಜ, ನಾನು ನನ್ನ ಮಗಳಿಗೆ ಮೊದಲ ’ ಆ ದಿನದಲ್ಲಿ’ ಸ್ಯಾನಿಟರಿ ನ್ಯಾಪಕಿನ್ ಅನ್ನೇ ಪರಿಚಯಿಸಿದ್ದೆ. ಆದರೆ ಅವಳು ಪರಿಸರ ಕಾಳಜಿ ಗುಣ ಹೊಂದಿದವಳಾದ ಕಾರಣ ನ್ಯಾಪ್ಕಿನ್ ಬದಲಿಗೆ ಇನ್ನೇನಾದರೂ ಬಳಸಲು ಸಾಧ್ಯವೇ ಅಂತ ’ಶೀ ಕಪ” ತರಿ’ಸಿಕೊಂಡಳು. ಆದರೆ ಅದರ ಬಳಕೆ ಆಕೆಗೆ ಇರಿಸುಮುರಿಸು ಉಂಟಾದ ಕಾರಣದಿಂದಾಗಿ  ಲೈಪ್ ಲಾಂಗ್ ಇನ್ವೆಸ್ಟ್ ಮೆಂಟ್ ಅಂತ Eco Femme ಬಟ್ಟೆಯ ಪ್ಯಾಡ್ ತರಿಸಿಕೊಂಡಳು. ಅದನ್ನು ಪರ್ಸ್ ತರಹ ಮಡಿಚಿಟ್ಟುಕೊಳ್ಳಬಹುದಾಗಿತ್ತು. ಅದಕ್ಕೊಂದು ಪರ್ತ್ಯೇಕವಾದ ಹ್ಯಾಂಡ್ ಬ್ಯಾಗ್ ತರಹದ ಟ್ರಾವಲ್ ಪೌಚ್ ಇದೆ. ಸ್ರಾವದ ಅನುಕೂಲಕ್ಕೆತಕ್ಕಂತೆ ದೊಡ್ಡ ಮತ್ತು ಚಿಕ್ಕ ಸೈಜ್ ನ ನಾಲ್ಕು ಜೊತೆ ಪ್ಯಾಡ್ಗಳು. ಆದರೆ ತುಂಬಾ ಸ್ರಾವವಿರುವವರು, ದೀರ್ಘಕಾಲ ಮನೆಯಿಂದ ಹೊರಗಿರಬೇಕಾದವರು ಮಧ್ಯದ ಎರಡು ದಿನಗಳಲ್ಲಿ ಅಧಿಕ ಹೀರಿಕೊಳ್ಳುವ ಸಾಮರ್ತ್ಯಕ್ಕಾಗಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನೇ ಆಯ್ದುಕೊಳ್ಳುವುದು ಅನಿವಾರ್ಯ.

ಆ ದಿನಗಳ ವಿಷ್ಯಕ್ಕೆ ಬಂದರೆ ನಾವೆಲ್ಲಾ ಮಹಿಳೆಯರೂ ಒಂದೇ..ಹಿಂದೆ ಕಲೆ ಆದಾಗ ಅಪರಿಚಿತ ಮಹಿಳೆಯರು ಪಕ್ಕದಲ್ಲಿ ಬಂದು ಪಿಸುಗುಟ್ಟಿ ಎಚ್ಚರಿಸಿದ್ದಾರೆ. ರೈಲು, ಬಸ್ಸುಗಳಲ್ಲಿ ಅಪತ್ಕಾಲದ ಬಂಧುಗಳಂತೆ ತಮ್ಮಲ್ಲಿದ್ದ ನ್ಯಾಪ್ಕಿನ್ ಕೊಟ್ಟವರಿದ್ದಾರೆ. ಕಾಲೇಜಿನಲ್ಲಿ ಗೆಳತಿಯರೆಲ್ಲಾ ಹಿಂದೆಮುಂದೆ ಕವರ್ ಮಾಡಿಕೊಂಡು ಲೇಡಿಸ್ ರೂಂ ತನಕ ಬಿಟ್ಟವರಿದ್ದಾರೆ. ಕಷ್ಟಕಾಲದಲ್ಲಿ ಅಂಗಡಿಗೆ ಹೋಗಿ ನ್ಯಾಪ್ಕಿನ್ ತಂದು ಕೊಟ್ಟ ಗೆಳೆಯರಿದ್ದಾರೆ. ಈ ಲೇಖನ ಬರೆಯಲು ನೆಪವಾದ ಮಾಳವಿಕರೂ ನನ್ನ ಸ್ನೇಹವಲಯದವರಲ್ಲ. ಅವರನ್ನು ನಾನು ಒಮ್ಮೆಯೂ ಮಾತಾಡಿಸಿಲ್ಲ. ಆದರೆ ಆಕೆಯೂ ಒಬ್ಬ ಮಹಿಳೆ ನಾನೂ ಒಬ್ಬಮಹಿಳೆ ಹಾಗಾಗಿ ಅವರ ಹೇಳಿಕೆಯನ್ನು ಪ್ರಾಕ್ಟಿಕಲ್ ಕ್ರಿಟಿಟಿಸಿಸಂಗೆ ಒಳಪಡಿಸೋಣ ಅನ್ನಿಸಿತ್ತು. ಆಕೆ ಬಿಜೆಪಿಯ ವಕ್ತಾರೆ ಆಗಿರದೆ ಒಬ್ಬ ಸೆಲೆಬ್ರಿಟಿ ಅವರ ಹೇಳಿಕೆಗೆ ಇಷ್ಟು ಮಹತ್ವ ಬರುತ್ತಲೇ ಇರಲಿಲ್ಲವೆನಿಸುತ್ತದೆ.

ಆದೇನೆ ಇರಲಿ ಈಗ, ಭೂಮಿಗೂ ಹಿತ, ದೇಹಕ್ಕೂ ಹಿತ ಎಂಬ ಉದ್ದೇಶದಡಿ ಕೆಲವು ಎನ್ಜಿಓಗಳು ಬಟ್ಟೆಯ ಪ್ಯಾಡ್ ಗಳನ್ನು ಮಾಡುವುದನ್ನು ಆರಂಭಿಸಿದ್ದಾರೆ; ವಿತರಿಸುತ್ತಿದ್ದಾರೆ. ಅಂತದ್ದನ್ನು ಜಿಎಸ್ಟಿಯಿಂದ ಮುಕ್ತಗೊಳಿಸಿ ಸರಕಾರವೇ ಅದರಿಂದ ನೇರವಾಗಿ ಖರೀದಿ, ಶಾಲಾಬಾಲಕಿಯರಿಗೆ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅತೀ ಕನಿಷ್ಟ ದರದಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕು. ಆಗ ಮಹಿಳೆಯರು ಆತ್ಮವಿಶ್ವಾಸದಿಂದ ತಲೆಯೆತ್ತಿ ನಡೆಯುತ್ತಾ

Friday, April 28, 2017

ನಮಾಮಿ ಬ್ರಹ್ಮಪುತ್ರ- ಎಲ್ಲಿ ನೋಡಿದರೂ ನೀರೇ ನೀರು!ಭಾರತದ ಏಕೈಕ ಗಂಡು ನದಿ ಬ್ರಹ್ಮಪುತ್ರ.

ಹೀಗೆಂದು ಭಾರತಿಯರೆಲ್ಲರೂ ಭಾವಿಸಿಕೊಂಡಿದ್ದಾರೆ. ಆದರೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ನೇತ್ರಾವತಿಯಲ್ಲಿ ಐಕ್ಯಗೊಳ್ಳುವ ಕುಮಾರಧಾರ ನದಿ ದಂಡೆಯಲ್ಲಿ ಹುಟ್ಟಿ ಬೆಳೆದ ನನ್ನಂತವರುರು ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ? ಇಲ್ಲವಲ್ಲ. ಯಾಕೆಂದರೆ ಕುಮಾರಧಾರ ಗಂಡು ನದಿ, ಇದರ ದೊಡ್ಡಣ್ಣನಂತಿರುವ ಬ್ರಹ್ಮಪುತ್ರ ನದಿಗೆ ಗೌರವ ಸಮರ್ಪಿಸುವ ’ನಮಾಮಿ ಬ್ರಹ್ಮಪುತ್ರ’ ಎಂಬ ಉತ್ಸವವೊಂದು ಕಳೆದ ಮಾರ್ಚ್ ೩೧ರಿಂದ ಏಪ್ರಿಲ್ ೪ರ ತನಕ ಐದು ದಿನಗಳ ತನಕ ಅಸ್ಸಾಂನ ವಿವಿದೆಡೆಗಳಲ್ಲಿ ಬ್ರಹ್ಮಪುತ್ರದ ನದಿ ದಂಡೆಗಳಲ್ಲಿ ನಡೆಯಿತು..
 ಅಸ್ಸಾಂನ ರಾಜಧಾನಿ ಗೌಹಾಟಿ. ಪುರಾಣ್ದ ಹಿನ್ನೆಲೆಯಿಂದ ನೋಡಿದರೆ ಮಹಾಭಾರತದಲ್ಲಿ ಕಾಮರೂಪವೆಂಬ ರಾಜ್ಯದ ಉಲ್ಲೇಖವಿದೆ. ಅದರ ರಾಜಧಾನಿ ಪ್ರಾಗ್ಜ್ಯೋತಿಷ್ಯಪುರ. ಅಂದಿನ ಪ್ರಾಗ್ಜೋತಿಷ್ಯಪುರವೇ ಇಂದಿನ ಗೌಹಾಟಿ.
ಯಾಕೋ ಗೊತ್ತಿಲ್ಲ. ನದಿಗಳೆಂದರೆ ನನಗೆ ವಿಪರೀತ ಆಕರ್ಷಣೆ. ನದಿ ದಂದೆಯಲ್ಲಿ ಹುಟ್ಟಿ, ಐದಾರು ನದಿಗಳನ್ನು ದಾಟಿ ಶಾಲೆಗೆ ಹೋಗುತ್ತಾ ಕೌಮಾರ್ಯವನ್ನು ಕಳೆದದ್ದಕ್ಕಿರಬಹುದೆನೋ! ಒಟ್ಟಿನಲ್ಲಿ ನದಿಯೆಂಬುದು ರಮ್ಯಗೆಳೆಯನಂತೆ ನನ್ನ ಬದುಕಿನುದ್ದಕ್ಕೂ  ಪ್ರವಹಿಸುತ್ತಲೇ ಇದೆ.

ಬ್ರಹ್ಮಪುತ್ರ ಹಲವು ವೈಶಿಷ್ಟಗಳನ್ನೊಳಗೊಂಡ ಮಹಾನದಿ. ಅದು ಈಗ ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿ ಸಮುದ್ರ ಮಟ್ಟದಿಂದ ೧೭೦೯೩ ಅಡಿ ಎತ್ತರದಲ್ಲಿ ಹುಟ್ಟುತ್ತದೆ. ಅಲ್ಲಿ ಅದಕ್ಕಿರುವ ಹೆಸರು ಯಾರ್ಲುಂಗ್ ಟಾಂಗ್ಪೋ. ಇಲ್ಲಿಂದ ಆರಂಭವಾಗುವ ಅದರ ಪಯಣ ಭಾರತವನ್ನು ದಾಟಿ ಬಾಂಗ್ಲಾ ದೇಶದತ್ತ ಮುನ್ನುಗ್ಗಿ ಬಂಗಾಳಕೊಲ್ಲಿಯನ್ನು ಸೇರುವಲ್ಲಿಯವರೆಗಿನ ಅದರ ಉದ್ದ ೨೯೦೦ ಕಿಮೀ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಅದರ ಉದ್ದ ೩೩೫೦ ಕಿಮೀ. ಇದರಲ್ಲಿ ೧೭೦೦ ಕಿಮೀ ತಿಬೇಟ್ ನಲ್ಲಿ ಹರಿಯುತ್ತದೆ. ಬಾರತದಲ್ಲಿ  ೯೧೬ ಕಿಮೀ ಮತ್ತು ಬಾಂಗ್ಲಾದಲ್ಲಿ ೨೮೪ ಕಿಮೀ ದೂರ ಕ್ರಮಿಸುತ್ತದೆ. ಬಾಂಗ್ಲದಲ್ಲಿ ಅದಕ್ಕಿರುವ ಹೆಸರು ಜಮುನಾ. ಟಿಬೇಟ್ ನಲ್ಲಿ ಇದು ಹತ್ತುಸಾವಿರ ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಹರಿಯುತ್ತಿರುತ್ತದೆ.. ಇಷ್ಟು ಎತ್ತರದಲ್ಲಿ ಹರಿಯುತ್ತಿರುವ ಜಗತ್ತಿನ ಮೊದಲ ನದಿಯಿದು. 

ಅರುಣಾಚಲಪ್ರದೇಶದ ಮುಖಾಂತರ ಭಾರತವನ್ನು ಪ್ರವೇಶಿಸುತ್ತದೆ. ಹಿಮಾಚಲ ಪ್ರದೇಶ  ಕೂಡಾ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಕಾರಣದಿಂದಾಗಿ ಅಲ್ಲಿಯೂ ಬ್ರಹ್ಮಪುತ್ರ ಉಪ್ಪರಿಗೆಯ ಮೇಲಿನ ನದಿಯೇ. ಅಲ್ಲಿ ಅದಕ್ಕಿರುವ ಹೆಸರು ಸಿಯಾಂಗ್. ಸಿಯಾಂಗ್ ನದಿಗೆ ಡಿಬಾಂಗ್ ಮತ್ತು ಲೋಹಿತ್ ನದಿಗಳು ಸೇರಿಕೊಳ್ಳುತ್ತವೆ. ಅಸ್ಸಾಂಗೆ ಇಳಿದ ಮೇಲೆ ಅದು ಸ್ವಲ್ಪ ಮಟ್ಟಿಗೆ ನೆಲದ ನದಿಯಾಗುತ್ತದೆ. ಇಲ್ಲಿ ಹಲವಾರು ಉಪನದಿಗಳು ಇದರೊಡನೆ ಸೇರಿಕೊಂಡು ಅದಕ್ಕೆ ಬ್ರಹ್ಮಪುತ್ರ ಎಂಬ ಅಭಿಧಾನ ದೊರೆಯುತ್ತದೆ.

ಬ್ರಹ್ಮದೇವನ ಪುತ್ರನಾದ ಕಾರಣ ಇದು ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವು. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ. ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ಈ ನದಿ ಅಸ್ಸಾಂ ರಾಜ್ಯವನ್ನು ಸದಾ ಹಚ್ಚ ಹಸಿರನ್ನಾಗಿ ನೋಡಿಕೊಳ್ಳುತ್ತದೆ, ಸುತ್ತ ನೀಲಾಚಲ ಪರ್ವತ. ಎಲ್ಲಿ ನೋಡಿದರೂ ಹಸಿರಾದ ಬಯಲು, ಈತ ರೊಚ್ಚಿಗೆದ್ದರೆ ಮಾರಣಹೋಮ ನಡೆಯುತ್ತದೆ.  ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು. ಇಲ್ಲಿಯೇ ಅಳಿವಿನಂಚಿನಲ್ಲಿರುವ ಘೆಂಡಾಮ್ರುಗಳಿರುವುದು. ಹಾಗಾಗಿ ಕಾಜಿರಂಗ ವರ್ಲ್ಡ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿದೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರದ ಆಳ ವಿಸ್ತಾರಗಳು ಎಷ್ಟಿದೆಯೆಂದರೆ ಕೆಲವೆಡೆ ಇದರ ಅಗಲ ಹತ್ತು ಕಿಮೀ ಗಳಿಗಿಂತಲೂ ಹೆಚ್ಚು. ಆಳ  ಸರಾಸರಿ ೧೨೪ ಅಡಿ. ಕೆಲವೆಡೆ ಇದು ೩೬೦ ಅಡಿ ತಲುಪುತ್ತದೆ. ಆಳ ಮತ್ತು ವಿಸ್ತಾರದಲ್ಲಿ ಇದಕ್ಕೆ ದಕ್ಷಿಣ ಅಮೇರಿಕಾದ ಅಮೇಜಾನ್ ನದಿಯ ನಂತರದ ಸ್ಥಾನ ದೊರೆಯುತ್ತದೆ.

ಬ್ರಹ್ಮಪುತ್ರ ಎಗ್ಗಿಲ್ಲದ ಹರಿಯುವ ನದಿ. ಇದು ತನ್ನ ಬಾಹುಗಳನ್ನು ಎಲ್ಲಿ ಬೇಕಾದರೂ ಚಾಚಿಕೊಳ್ಳಬಹುದು. ತನ್ನ ದೇಹವನ್ನೇ ಸೀಳಿಕೊಳ್ಳಬಹುದು, ಹಾಗೆ ಎರಡು ಕವಲಾಗಿ ಹರಿದು ನಡುವೆ ಮಾಜುಲಿ ಎಂಬ ೧೨೨೫ ಚದರ ಕಿಮೀ ದ್ವೀಪವೊಂದನ್ನು ಸ್ರುಷ್ಟಿಸಿದೆ, ಇದು ಪ್ರಪಂಚದಲ್ಲಿಯೇ ನದಿಯೊಂದು ಸ್ರುಜಿಸಿದ ಅತ್ಯಂತ ದೊಡ್ಡ ದ್ವೀಪವಾಗಿದೆ. ಕಳೆದ ವರ್ಷ ಅದನ್ನೊಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಅಸ್ಸಾಂನ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಮಾಜುಲಿ ದ್ವೀಪಕ್ಕೆ ಸೇರಿದವರು.

ಇಂತಹ ಉನ್ಮತ್ತ  ನದಿಯ ಉತ್ಸವವನ್ನು ನೋಡುವ ಬಯಕೆ ಹುಟ್ಟಿದರೆ ಅದನ್ನು ಹತ್ತಿಕ್ಕಲು ಸಾಧ್ಯವೇ? ಈ ಹಿಂದೆ ಲಡಾಕ್ ನಲ್ಲಿ ನಡೆದ ’ಸಿಂಧು ಉತ್ಸವ’ದಲ್ಲಿ ಭಾಗಿಯಾಗಿದ್ದೆ. ಅದೇ ಗುಂಗಿನಲ್ಲಿ ಗೌಹಾಟಿಗೆ ವಿಮಾನ ಹತ್ತಿದ್ದೆ.  ಆದರೆ ನಾನಲ್ಲಿ ಇಳಿಯುತ್ತಿರುವಾಗಲೇ ಮಳೆರಾಯ ಅದ್ದೂರಿಯ ಸ್ವಾಗತ ನೀಡಿದ್ದ. ಮಳೆ ಹೊಯ್ದರೆ  ಗೌಹಾಟಿ ನಗರದ ಹೊರವಲಯವೆಲ್ಲಾ ಕೊಚ್ಚೆಗುಂಡಿಯಂತಾಗುತ್ತದೆ. ಅಲ್ಲಿ ಹಲವಾರು ಕಡೆ ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿದ್ದಂತಿರಲಿಲ್ಲ.ಗೌಹಾಟಿ ವಿಮಾನ ನಿಲ್ದಾಣದಿಂದ ಗೌಹಾಟಿಯ ಹೊರವಲಯದಲ್ಲಿರುವ ಬ್ರಹ್ಮಪುತ್ರ ದಂಡೆಯಲ್ಲಿರುವ ಸುಕ್ರೇಶ್ವರ ಘಾಟ್ ಗೆ ೨೨ ಕಿ.ಮೀ ದೂರವಿದೆ. ಇಲ್ಲೆಯೇ ನಮಾಮಿ ಬ್ರಹ್ಮಪುತ್ರದ ಮುಖ್ಯ ಉತ್ಸವ ನಡೆಯುತ್ತಿರುವುದು.

ನಮಾಮಿ ಬ್ರಹ್ಮಪುತ್ರ ಉತ್ಸವದ ಆಚರಣೆಗೆ ಅಸ್ಸಾಮಿನ ಎಲ್ಲಾ ೨೧ ಜಿಲ್ಲೆಗಳೂ ಸಜ್ಜುಗೊಂಡಿದ್ದವು. ಹದಿನಾಲ್ಕು ಕೋಟಿ ರೂಪಯಿಗಳ ವೆಚ್ಚದಲ್ಲಿ ಬ್ರಹ್ಮಪುತ್ರ ನದಿ ದಂಡೆಗಳು ಮದುವೆ ಮಂಟಪದಂತೆ ಸಿಂಗಾರಗೊಂಡಿದ್ದವು. ಬಗೆ ಬಗೆಯ ಭಕ್ಷಬೋಜ್ಯದ ಶಾಖಾಹಾರಿ ಮತ್ತು ಮಾಂಸಹಾರಿ ಸ್ಟಾಲ್ ಗಳು ತಲೆಯೆತ್ತಿ ನಿಂತಿದ್ದವು. ಆದರೆ ಮಳೆರಾಯ ಇದೆಲ್ಲವನ್ನೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಮಾಡಿಬಿಟ್ಟ.

ನಮ್ಮಲ್ಲಿ ಅಂದರೆ ಕರ್ನಾಟ್ಕದಲ್ಲಿ ಜೂನ್ ಮೊದಲ ಅಥವಾ ಎರಡನೆ ವಾರದಲ್ಲಿ ಮಳೆಗಾಲ ಆರಂಭವಾಗುತ್ತದೆ. ಅದಕ್ಕೂ ಒಂದು ವಾರಕ್ಕಿಂತ ಮೊದಲು ನೈರುತ್ಯ ಮಾರುತ ಕೇರಳವನ್ನು ಪ್ರವೇಶಿಸಿಸುತ್ತದೆ. ಬೌಗೋಳಿಕವಾಗಿ ನಮ್ಮ ದೇಶ ಬಹು ವಿಸ್ತಾರವನ್ನು ಹೊಂದಿದೆ. ಕರ್ನಾಟಕದಿಂದ ಮೂರು ಸಾವಿರ ಕಿ.ಮೀ ದೂರದಲ್ಲಿರುವ ಅಸ್ಸಾಂಗೆ ವಾಡಿಕೆಯ ಪ್ರಕಾರ ಮಳೆಗಾಲ ಆರಂಭವಾಗುವುದು ಬಿಹು ಹಬ್ಬದ ನಂತರವೇ.ಅಂದರೆ ಏಪ್ರಿಲ್ ೧೪ರ ನಂತರ. ಅದೇ ದಿನವನ್ನು ತುಳುನಾಡಿಗರೂ ಬಿಸು ಎಂದು ಆಚರಿಸುತ್ತಾರೆ, ಅಂದು ಸೂರ್ಯಮಾನ ಯುಗಾದಿ. ಅಂದರೆ ಹೊಸ ವರ್ಷದ ಆರಂಭ. ರೈತಾಪಿ ಜನರು ಬಿತ್ತನೆಗೆ ಭೂಮಿ ಹದಗೊಳಿಸಿ ವಸಂತಋತುವನ್ನು ಬರಮಾಡಿಕೊಳ್ಳುವ ಕಾಲ.

ಇದೆಲ್ಲಾ ಲೆಕ್ಕಾಚಾರವನ್ನು ಹಾಕಿಯೇ ನಮಾಮಿ ಬ್ರಹ್ಮಪುತ್ರ ಉತ್ಸವನ್ನು ಆಯೋಜಕರು ಹಮ್ಮಿಕೊಂಡಿದ್ದರು. ಆಯೋಜಕರಿಗೆ ಮಧ್ಯ ಪ್ರದೇಶ ಸರಕಾರವು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ’ನಮಾಮಿ ನರ್ಮದಾ’ ಉತ್ಸವ ಫ್ರ‍ೇರಣೆಯಾಗಿತ್ತು. ಪ್ರವಾಸೋಧ್ಯಮ, ಅರ್ಥಿಕ , ಮತ್ತು ಸಾಂಸ್ಕ್ರುತಿಕ ಆಯಾಮಗಳ ಬೆಸುಗೆಯನ್ನು ನಮಾಮಿ ಬ್ರಹ್ಮಪುತ್ರದ ಈ ಮೊದಲ ಉತ್ಸವದಲ್ಲಿ ಜಗತ್ತಿನೆದುರು ತೋರಿಸಲು ಅವರು ಉತ್ಸುಕರಾಗಿದ್ದರು. ಆದರೆ ಈ ಬಾರಿ ಏಪ್ರಿಲ್ ಆರಂಭಕ್ಕೆ ಮುನ್ನವೇ ಮಳೆರಾಯ ಧಾಂಗುಡಿಯಿಟ್ಟಿದ್ದ.

ಅಸ್ಸಾಂ ಮೂಲತಃ ಬೋಡೋ ಎಂಬ ಬುಡಕಟ್ಟು ಜನಾಂಗದವರ ನಾಡು. ಅವರು ಇದನ್ನು ’ಬುಲ್ಲಮ್ ಬುಧೂರ್’ ಎಂದು ಕರೆಯುತ್ತಾರೆ. ಅವರ ಹಾಡು, ಕವಿತೆಗಳಲ್ಲಿ ಈ ನದಿಗೆ ವಿಶೇಶವಾದ ಮನ್ನಣೆಯಿದೆ. ಬೋಡೋ ಸೇರಿದಂತೆ ಇನ್ನಿತರ ಹಲವು ಬುಡಕಟ್ಟು ಜನರನ್ನು, ಮುಸ್ಲಿಮರನ್ನು, ಕ್ರಿಶ್ಚಿಯನರನ್ನು ಸರಕಾರವು ನವಾಮಿ ಬ್ರಹ್ಮೋತ್ಸವದಿಂದ ದೂರವಿಡಲಾಗಿತ್ತು ಎಂಬ ಮಾತುಗಳು ಉತ್ಸವದಲ್ಲಿ ಅಲ್ಲಲ್ಲಿ ಕೇಳಿಬಂದವು. ಗಂಗಾ ಆರತಿಯ ಮಾದರಿಯಲ್ಲೇ ಉದ್ಘಾಟನೆಯಂದು ಬ್ರಹ್ಮಪುತ್ರನಿಗೆ ದಶಾಸ್ವಮೇದ ಘಾಟ್ ನಲ್ಲಿ ದೀಪದಾರತಿಯನ್ನು ಮಾಡಲಾಗಿತ್ತು. ಅದಕ್ಕೆಂದೇ ನಿಯೋ ವೈಷ್ಣವ ಪೂಜಾರಿಗಳನ್ನು ಹರಿದ್ವಾರದಿಂದ ಕರೆಸಲಾಗಿತ್ತು. ಆದರೆ ಗೌಹಾಟಿಯ ರಕ್ಷಕ ದೇವತೆಯಂತೆ ಎತ್ತರದ ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಕ್ಯ ದೇವಾಲಯದ ಮುಖ್ಯ ಅರ್ಚಕರಿಗೆ ಉತ್ಸವಕ್ಕೆ ಅಹ್ವಾನ ಕೊಟ್ಟಿರಲಿಲ್ಲ, ಇದು ಅಸ್ಸಾಮಿನ ಸತ್ರಿಯಾ [Sattriya] ಕಲ್ಚರ್ ಗೆ ಮಾಡಿದ ಅವಮಾನ ಎಂಬ ಮಾತುಗಳೂ ಕೇಳಿ ಬಂದವು.

ರಾಷ್ಟ್ರಪತಿ ಪ್ರಣವ ಮುಖರ್ಜಿಯವರು ಉತ್ಸವನ್ನು ಉದ್ಘಾಟನೆಯನ್ನು ಮಾಡಿದಾಗ ಮಳೆರಾಯ ಅತ್ತ ಸುಳಿದಾಡದೆ ಮಾನ ಕಾಪಾಡಿದ್ದ. ಆದರೆ ಮರುದಿನ ಏಪ್ರಿಲ್ ಒಂದರಿಂದ ಸತತ ನಾಲ್ಕು ದಿನ ಹನಿ ತುಂಡಾಗಲೇ ಇಲ್ಲ. ಹಾಗಾಗಿ ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರಗಲಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಕಲಾತಂಡಗಳು, ಕ್ಲಾವಿದರು, ಹಾಡುಗಾರರು, ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲೆಂದು ಉತ್ಸಾಹದಿಂದ ಬಂದಿದ್ದರು. ಅವರೆಲ್ಲಾ ನಿರಾಶೆಯಿಂದ ಹಿಂದಿರುಗಬೇಕಾಯ್ತು.

 ಕೊನೆಯ ದಿನ ಸಮಾರೋಪವನ್ನು ಕೂಡಾ ದೂರದ ಒಂದು ಸಭಾಂಗಣದಲ್ಲಿ ಮಾಡಬೇಕಾಯ್ತು. ಮಳೆ ಎಕ್ಕಸಕ್ಕ ಸುರಿಯುತ್ತಿದ್ದ ಕಾರಣ ನಾನೂ ಸೇರಿದಂತೆ ಬಹುತೇಕ ಪ್ರವಾಸಿಗರಿಗೆ ಅಲ್ಲಿಗೆ ಹೋಗಲಾಗಲಿಲ್ಲ. ಕೊನೆಯ ದಿನ ಸಂಜೆಯಾಗುತ್ತಿದ್ದಂತೆ ಬ್ರಹ್ಮಪುತ್ರಾ ಉಕ್ಕೇರಿ ವೇದಿಕೆಯತ್ತ ಮುನ್ನುಗ್ಗಲು ಪ್ರಯತ್ನಿಸುತ್ತಿತ್ತು. ಮೆಲ್ಲ ಮೆಲ್ಲನೆ ಅಂಗಡಿ ಮುಂಗಟ್ಟುಗಳತ್ತ ತೋಳು ಚಾಚತೊಡಗಿತು. ದಂಡೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಾ ಅವು ಪುಟ್ಟ ಪುಟ್ಟ ಕಣಿವೆಗಳಾಗುತ್ತಾ ದೊಡ್ಡದಾಗತೊಡಗಿತು. ಅಲ್ಲೇ ಇದ್ದ ಸೇನೆಯ ವಿಪತ್ತು ನಿರ್ವಹಣ ತಂಡದ ಸೈನಿಕರು ಅತ್ತಿತ್ತ ಓಡಾಡುವುದು ಹೆಚ್ಚಾಗತೊಡಗಿತು. ಅದನ್ನೆಲ್ಲಾ ನೋಡುತ್ತಾ ನಾನು ಮನಸ್ಸಿನಲ್ಲೇ ಅಂದುಕೊಂಡೆ; ''ಉದ್ಘಾಟನೆಯನ್ನು ಮನುಷ್ಯರು ತಮಗೆ ಬೇಕಾದಂತೆ ಮಾಡಿಕೊಂಡರು. ಸಮಾರೋಪವನ್ನು ನನಗೆ ಬೇಕಾದಂತೆ ನಾನೇ ಮಾಡಿಕೊಂಡೆ''  ಎಂದು ಬ್ರಹ್ಮಪುತ್ರ ಹೇಳಿಕೊಳ್ಳುತ್ತಿರಬಹುದೇ? ಅಂತ. ಆಶ್ಚರ್ಯವೆಂಬಂತೆ ಮರುದಿನ ಮಧ್ಯಾಹ್ನ ನಾನು ಏರ್ಪೋರ್ಟಿಗೆ ಬರುವ ತನಕ ಮಳೆಯಾಗಲಿಲ್ಲ!

ಇದೆಲ್ಲಾ ಏನೇ ಇರಲಿ. ದೂರದೇಶಗಳಿಂದ, ದೇಶದ ಇನ್ನಿತರ ರಾಜ್ಯಗಳಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ಜನರು ಉತ್ಸಾಹದಿಂದ ಆಗಮಿಸಿದ್ದರು. ಕೈಯ್ಯಲ್ಲಿ ಬಣ್ಣಬಣ್ಣದ ಕೊಡೆ ಹಿಡಿದುಕೊಂಡೋ, ಇಲ್ಲವೇ ಮಳೆಯಲ್ಲಿ ನೆಂದುಕೊಂಡೋ ಉತ್ಸವಕ್ಕೆಂದು ನಿಗದಿಯಾದ ಜಾಗದಲ್ಲಿ ಓಡಾಡುತ್ತಾ, ಸ್ಟಾಲ್ ಗಳಲ್ಲಿ ತಮಗೆ ಬೇಕಾದ ಬಟ್ಟೆ ಬರೆ, ವಸ್ತುಗಳನ್ನು ಖರೀದಿಸುತ್ತಾ. ಬ್ರಹ್ಮಪುತ್ರನೊಡನೆ ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು. ಸುರಿಯುವ ಮಳೆಯಲ್ಲೇ ಬ್ರಹ್ಮಪುತ್ರದ ನಡುಗಡ್ಡೆಯಲ್ಲಿರುವ ಉಮಾನಂದ ಮತ್ತು ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಾಕ್ಯದ ದರ್ಶನಕ್ಕೆ ಹೋಗಿ-ಬರುತ್ತಿದ್ದರು.
’ನಮಾಮಿ ಬ್ರಹ್ಮಪುತ್ರ’ ಆಯೋಜಕರ ದ್ರುಷ್ಟಿಯಲ್ಲಿ ಮಳೆಯಿಂದಾಗಿ ಉತ್ಸವ ಅಸ್ತವ್ಯಸ್ತಗೊಂಡಿರಬಹುದು. ಆದರೆ ಪ್ರವಾಸಿಗರ, ಜನಸಾಮಾನ್ಯರ ದ್ರುಷ್ಟಿಯಲ್ಲಿ ಗೆದ್ದಿದೆ. ಮುಂದಿನ ವರ್ಷ ಈ ಸಲ ಈ ಬಾರಿ ಆದ ಲೋಪ ದೋಶಗಳನ್ನು ಸರಿಪಡಿಸಿಕೊಂಡರೆ ದೇಶದ ಅತೀ ದೊಡ್ಡ ನದಿ ಉತ್ಸವ ಇನ್ನೂ ಹಲವು ನದಿ ಉತ್ಸವಗಳಿಗೆ ಮುನ್ನುಡಿಯಾಗಬಹುದು, ಯಾಕೆಂದರೆ ಕರ್ನಾಟಕದಲ್ಲಿಯೂ  ಪ್ರವಾಸೋಧ್ಯಮವನ್ನು ಬಲಪಡಿಸುವ ಉದ್ದೇಶದಿಂದ ’ಕಾವೇರಿ ದರ್ಶನ ಉತ್ಸವ’ಕ್ಕೆ ಕೊಡಗು ಜಿಲ್ಲಾ ಪಂಚಾಯತ್ ಮುಂದಾಗಿದೆ. ಇದಕ್ಕಾಗಿ ಅದು ಕೇಂದ್ರಕ್ಕೆ ೯೪ ಲಕ್ಷ ರೂಪಾಯಿಗಳ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.

ನೆಲ ಜಲ ಭಾಷೆಗಳು ಮನುಷ್ಯರನ್ನು ಭಾವನಾತ್ಮಕವಾಗಿ ಬೆಸೆಯುತ್ತವೆ. ಚೀನಾ ಈಗಾಗಲೇ  ಬ್ರಹ್ಮಪುತ್ರ ನದಿಗೆ ಬಲು ದೊಡ್ಡದಾದ ಅಣೆಕಟ್ಟನ್ನು ಕಟ್ಟಿದೆ. ಈ ನದಿಯ ಇನ್ನಷ್ಟು ನೀರನ್ನು ಕಬಳಿಸಿಕೊಳ್ಳಲು ಅದು ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇದೆ , ಇಂತಹ ಸಂದರ್ಭಗಳಲ್ಲಿ ಈ ನದಿ ನಮ್ಮದು ಎಂಬ ಭಾವನೆ ಮತ್ತಷ್ಟು ಬಲಗೊಳ್ಳಲು ಆ ನದಿ ದಡದಲ್ಲಿ ಹುಟ್ಟಿದ ಕಲೆ, ಸಂಸ್ಕ್ರುತಿಯನ್ನು ಪ್ರಚುರಪಡಿಸುವ ಇಂತಹ ಉತ್ಸವಗಳು ಇನ್ನಷ್ಟು ನಡಿಯುತ್ತಿರಬೇಕು. ಆದರೆ ಇಂತಹ ಉತ್ಸವಗಳು ವೈದಿಕ ಸಂಸ್ಕ್ರುತಿಯ ಮೆರೆಸುವಿಕೆ ಆಗದೆ ನೆಲಮೂಲ ಸಂಸ್ಕ್ರುತಿಯನ್ನೂ ಒಳಗೊಂಡಿರಬೇಕು.

·         [ ಉದಯವಾಣಿ ಪತ್ರಿಕೆಯ ಭಾನುವಾರದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

Sunday, February 5, 2017

ಶೇಕ್ಸ್ ಪಿಯರನ ಜನ್ಮಭೂಮಿಯಲ್ಲಿ ಅಡ್ಡಾಡುತ್ತಾ....
ಇಂಗ್ಲೆಂಡಿಗೆ ಹೋಗುವ ನಿರ್ಧಾರ ತೆಗೆದುಕೊಂಡದ್ದು ತೀರಾ ಆಕಸ್ಮಿಕವಾಗಿ. ನಮ್ಮ ಮಗಳು ಅಲ್ಲಿಯ ಗೋಲ್ಡ್ ಸ್ಮಿತ್ ಕಾಲೇಜಿನಲ್ಲಿ ’ಕಲ್ಚರಲ್ ಸ್ಟಡಿ’ ಯಲ್ಲಿ ಸ್ನತಕೋತ್ತರ ಪದವಿ ಓದುತ್ತಿದ್ದಳು. ಹಾಗಾಗಿ ಅವಳ ಗ್ರಾಜುವೇಶನ್ ಡೇ ಸಮಾರಂಭಕ್ಕೆ ನನ್ನನ್ನು ಅಹ್ವಾನಿಸಿದ್ದಳು. ಯುರೋಪ್ ಟೂರ್ ಮಾಡುವ ಬಗ್ಗೆ ನಾನು ಯೋಚಿಸಿದ್ದುಂಟು. ಆದರೆ ಯುರೋಪ್ ಟೂರ್ ಆಯೋಜಕರು ಸಾಮಾನ್ಯವಾಗಿ ಇಂಗ್ಲೆಂಡ್ ನ್ನು ತಮ್ಮ ಲಿಸ್ಟ್ ನಲ್ಲಿ ಸೇರಿಸುವುದಿಲ್ಲ. ಹಾಗಾಗಿ ಮಗಳ ಗ್ರಾಜುವೇಶನ್ ನೆಪದಲ್ಲಿ ಇಂಗ್ಲೆಂಡ್ ಸುತ್ತಿ ಬರುವುದು ಎಂದು ತೀರ್ಮಾನಿಸಿ ಅಲ್ಲಿಗೆ ಹಾರಿದೆ. ಇದು ನನ್ನ ಮೊದಲ ವಿದೇಶ ಪ್ರವಾಸವಾಗಿತ್ತು.

ಶೇಕ್ಸ್ಪಿಯರ್ ಬಾಳಿ ಬದುಕಿದ್ದ ಮನೆ
ಯಾವಾಗಲೂ ಹಾಗೆಯೇ. ನಮ್ಮ ಮೊದಲ ಅನುಭವಗಳೆಲ್ಲವೂ ಭರ್ಜರಿಯಾಗಿರಬೇಕು. ಮತ್ತು ಅದು ಚಿರಕಾಲ ನೆನಪಲ್ಲಿ ಉಳಿಯಬೇಕು ಎಂದು ಎಲ್ಲರೂ ಬಯಸುವುದು ಸಹಜ.. ನನ್ನ ಮೊದಲ ವಿಮಾನಯಾನ ನನಗೆ ಈಗಲೂ ನೆನಪಿದೆ. ದೆಹಲಿಯಿಂದ ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ ಹೋಗಿದ್ದೆ. ಆಕಾಶಮಾರ್ಗದಲ್ಲಿ ಮಂಜಿನಿಂದಾವ್ರುತವಾದ ಹಿಮಾಲಯದ ಉನ್ನತವಾದ ಗಿರಿ ಶ್ರುಂಗಗಳನ್ನು ನೋಡಿ ರೋಮಾಂಚಗೊಂಡಿದ್ದೆ. ಇದೇ ರೋಮಾಂಚನ ನನ್ನ ಮೊದಲ ವಿದೇಶಯಾನದಲ್ಲೂ ಆಗುವ ಸಾಧ್ಯತೆಯಿತ್ತು. ಯಾಕೆಂದರೆ ನಾನು ಅಲ್ಲಿಗೆ ಹೊರಟಿದ್ದು ಜನವರಿ ಮೊದಲವಾರದಲ್ಲಿ, ಅದು ಕಡು ಚಳಿಗಾಲದ ತಿಂಗಳು.

ಇಂಗ್ಲೆಂಡ್, ಸದಾ ಮಳೆ ಸುರಿಯುವ ಶೀತ ಪ್ರದೇಶ. ಜೂನ್ ಜುಲೈ ಹೊರತು ಪಡಿಸಿ ವರ್ಷದ ಎಲ್ಲಾ ತಿಂಗಳುಗಳಲ್ಲಿ ಮೈ ತುಂಬಾ ಬೆಚ್ಚನೆಯ ಉಣ್ಣೆ ಬಟ್ಟೆಗಳನ್ನು ಹೊದ್ದುಕೊಂಡು ಓಡಾಡುವ ಜನರು. ಇಂತಹ ದೇಶಕ್ಕೆ ಕಡು ಚಳಿಗಾಲದಲ್ಲಿ ಹೊರಡುವುದೆಂದಾಗ ಇದ್ದ ಅಲ್ಪ ಸಮಯದಲ್ಲೇ  ಸಾಕಷ್ಟು ಪೂರ್ವ ತಯಾರಿ ನಡೆಸಿದ್ದೆ. ಇದಕ್ಕೆ ನನ್ನ ಹಿಮಾಲಯ ಪ್ರವಾಸದ ಅನುಭವ ನೆರವಿಗೆ ಬಂದಿತ್ತು. ಅರುಣಾಚಲ ಪ್ರದೇಶದ ತವಾಂಗ್ ಮಿಲಿಟರಿ ಕ್ಯಾಂಪಿನಲ್ಲಿ ಖರೀದಿಸಿದ್ದ ಬೆಚ್ಚನೆಯ ಥರ್ಮಲ್ ಒಳಉಪಡುಗಳು ನನ್ನ ಟ್ರಾವಲ್ ಬ್ಯಾಗ್ ಸೇರಿದವು.

ಅರಬ್ ಎಮಿರೇಟ್ಸ್ ವಿಮಾನ ಲಂಡನ್ನಿನ ಗ್ಯಾಟಿವಿಕ್ ವಿಮಾನ ನಿಲ್ದಾಣದಲ್ಲಿ ಅಲ್ಲಿಯ ಕಾಲಮಾನದ ಪ್ರಕಾರ ಬೆಳಿಗ್ಗೆ ಆರೂವರೆಗೆ ಇಳಿಯುತ್ತಿರುವಾಗ ವಿಮಾನದ ಕ್ಯಾಪ್ಟನ್ ಹೇಳುತ್ತಿದ್ದ, ಇಲ್ಲೀಗ ಮೈನಸ್ ಎರಡು ಡಿಗ್ರಿ ತಾಪಮಾನ ಇದೆಯೆಂದು. ಸಣ್ಣಗೆ ನಡುಗುತ್ತಲೇ ಅಲ್ಲಿಳಿದು ಸ್ವಲ್ಪ ದೂರ ನಡೆದು ಅಲ್ಲಿನ ಇಂಟರ್ಲಿಂಕ್ ರೈಲಿನಲ್ಲಿ ಹತ್ತಿರ ಕ್ಯೂಬ್ ಸ್ಟೇಷನ್ [ ಕ್ಯೂಬ್ ಅಂದ್ರೆ ನಮ್ಮ ಮೆಟ್ರೋ ರೈಲಿನಂತೆ ನಗರ ಸಂಪರ್ಕಸಾರಿಗೆಗಳು] ಹಿಡಿದು ನಾವು ಅನಲೈನ್ ಬುಕ್ ಮಾಡಿದ್ದ ಹೋಟೀಲ್ ಇರುವ ಜಾನ ಕೆನ್ಸಿಂಗ್ಟನ್ ಗೆ ಬಂದೆವು.


ಇಲ್ಲಿ ಒಂದು ಮಾತು ಹೇಳಬೇಕು. ಸಾಮಾನ್ಯವಾಗಿ ಲಂಡನ್ ಪ್ರವಾಸ ಎಂದರೆ ಲಂಡನ್ ನಗರದ ಪ್ರವಾಸವೇ ಆಗಿಬಿಡುತ್ತದೆ. ತಿಂಗಳಿಡೀ ಸುತ್ತಾಡಿದರೂ ಹಲಾವರು ಪ್ರಮುಖ ಸ್ಥಳಗಳು ನೋಡಲಾಗದೆ ಉಳಿದುಬಿಡುತ್ತವೆ. ಅಷ್ಟೊಂದು ಪ್ರವಾಸಿ ತಾಣಗಳು  ಇಲ್ಲಿವೆ. ಯಾಕೆಂದರೆ ಇದೊಂದು ಐತಿಹಾಸಿಕ ನಗರ. ಆದರೆ ನನ್ನ ದ್ರುಷ್ಟಿ ಲಂಡನ್ನಿಂದಾಚೆಯೂ ಇತ್ತು. ಪ್ರಮುಖವಾಗಿ ವಿಶ್ವವಿಖ್ಯಾತ ನಾಟ್ಕಕಾರ ಶೇಕ್ಸಿಪಿಯರನ ಜನ್ಮಭೂಮಿಯನ್ನು ನೋಡಬೇಕೆಂಬ ಹೆಬ್ಬಯಕೆಯಿತ್ತು. ಎದೆಲ್ಲವೂ ಕೇವಲ ಹನ್ನೆರಡು ದಿನಗಳೊಳಗೆ ಪೂರೈಸಿಕೊಳ್ಳಬೇಕಾಗಿತ್ತು. ಹಾಗಾಗಿ ಶೇಕ್ಸ್ ಪಿಯರನ ಕಾರ್ಯಕ್ಷೇತ್ರವಾಗಿದ್ದ ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲಿನ ಶೇಕ್ಸ್ಪಿಯರ್ ಗ್ಲೋಬ್ ಅನ್ನು ಮೊದಲನೆ ದಿನವೇ ನೋಡಿ ಮುಗಿಸಿದೆ.

ಶೇಕ್ಸ್ಪಿಯರ್ ಹುಟ್ಟಿದ್ದು ಲಂಡನ್ನಿನಿಂದ ೧೩೩ ಕಿ.ಮೀ ದೂರದಲ್ಲಿರುವ ಸ್ಟ್ಯಾಟ್ ಫರ್ಡ್ ಅಪೊನ್ ಎವನ್ ಎಂಬ ಪುಟ್ಟ ನಗರದಲ್ಲಿ. ಇಂಗ್ಲೆಂಡಿನ ನೆಲದಲ್ಲಿ ನಿಂತು ನೋಡಿದರೆ ಅದೊಂದು ಚಿಕ್ಕ ಪೇಟೆ. ಇದು ಎವನ್ [Avon] ಎಂಬ ನದಿ ದಂಡೆಯ ಮೇಲಿದೆ. ಸ್ಟ್ಯಾಟ್ ಫರ್ಡ್ ಅವನ್ ಗೆ ಹೋಗುವ ದಾರಿಯಲ್ಲಿಯೇ ಆಕ್ಸ್ಪರ್ಡ್ ಯೂನಿವರ್ಸಿಟಿ ಸಿಗುತ್ತದೆ. ಲಂಡನ್ನಿನಿಂದ ಅಲ್ಲಿಗೆ ಹೋಗುವ ದೂರ ೮೩ ಕಿ.ಮೀ. ಹೀಗಿರುವಾಗ ಜಗತ್ತಿನ ಎಲ್ಲಾ ಶಿಕ್ಷಣಾರ್ಥಿಗಳ ಹಂಬಲದ ಗಮ್ಯಸ್ಥಳವಾದ ಅಕ್ಸ್ಪರ್ಡ್ ಗೆ ಬೇಟಿ ಕೊಡದಿದ್ದರೆ ಹೇಗೆ? ಹಾಗಾಗಿ ಅಲ್ಲಿಗೂ ಹೋದೆ.. ಇಲ್ಲಿ ನಿಮಗೆ ಮತ್ತೊಂದು ಮಾಹಿತಿಯನ್ನು ನೀಡಬೇಕು.ಲಂಡನ್ ಸೇರಿದಂತೆ ಇಂಗ್ಲೆಂಡಿನ ಎಲ್ಲಾ ಪ್ರಮುಖ ನಗರಗಳಲ್ಲಿ ಪ್ರವಾಸಿಗಳಿಗೆಂದೇ Hop-on Hop –off ಎಂಬ  ಬಸ್ ಪ್ರದಕ್ಷಿಣೆಯ ವ್ಯವಸ್ಥೆಯಿದೆ. ಮಹಡಿ ಬಸ್ ಇದು. ಇಂಗ್ಲೆಂಡಿನ ವಿಶಿಷ್ಠತೆಗಳಲ್ಲಿ ಮಹಡಿ ಬಸ್ ಕೂಡಾ ಒಂದು. ಹದಿನೆಂಟು ಪೌಂಡ್ ಅಂದರೆ ಸರಿಸುಮಾರು ಸಾವಿರದ ಏಳನೂರು ರೂಪಾಯಿ ಪಾವತಿಸಿದರೆ ನಗರದ ಪ್ರಮುಖ ಪ್ರೇಕ್ಷಣೆಯ ಸ್ಥಳಗಳನ್ನು ಆಡಿಯೋ ವಿವರಣೆಯ ಸಹಿತ ನಿಮ್ಮನ್ನು ಹೊತ್ತು ಇದು ರೌಂಡ್ ಹೊಡೆಯುತ್ತದೆ. ಪ್ರವಾಸಿಗರು ತಮಗೆ ಬೇಕಾದಲ್ಲಿ ಇಳಿದು ಅಲ್ಲಿಯ ಜಾಗಗಳನ್ನು ನೋಡಿ ಇನ್ನೊಂದು ಹಾಫ್ ಅನ್ ಬಸ್ಸು ಹತ್ತಿಕೊಳ್ಳಬಹುದು.

ಇಡೀ ಅಕ್ಸ್ಪರ್ಡ್ ಅನ್ನು ಹಾಫ್ ಆನ್ ಬಸ್ಸಿನಲ್ಲಿ ತಿರುಗಾಡಿ ಮಧ್ಯಾಹ್ನ ರೈಲಿನಲ್ಲಿ ಸ್ಟ್ಯಾಟ್ ಫರ್ಡ್ ಅಪೊನ್ ಗೆ ಬಂದಾಗ ಘಂಟೆ ಏಳುಮುಕ್ಕಾಲು ಆಗಿತ್ತು. ಆಕ್ಸ್ಪರ್ಡ್ ನಲ್ಲಿ  ಅನಲೈನ್ ನಲ್ಲಿ ಲಾಡ್ಜ್ ಗಾಗಿ ಹುಡುಕಾಡಿದಾಗ ನಮ್ಮ ಬಜೇಟ್ ಗೆ ಹೊಂದಿಕೆಯಾಗಿದ್ದು ಟ್ರಾವಲ್ ಲಾಡ್ಜ್ ಒಂದೇ. ಅಲ್ಲಿ ಒಂದು ದಿನಕ್ಕೆ ಏಳು ಸಾವಿರ ರೂಪ್ಯಾಗಳಷ್ಟು ಬಾಡಿಗೆಯಿತ್ತು.. ಆದರೆ ಮೊದಲೇ ಬುಕ್ ಮಾಡಿದ್ದರೂ ರಾತ್ರಿ ಏಳು ಘಂಟೆಯ ಒಳಗೆ ಬಾರದಿದ್ದರೆ ಬಾಗಿಲು ತೆರೆಯುವುದಿಲ್ಲ ಮತ್ತು ದುಡ್ಡು ವಾಪಾಸು ಕೊಡುವುದಿಲ್ಲ ಎಂದು ನಮೂದಾಗಿತ್ತು. ಹಾಗಾಗಿ ಮುಂಗಡ ಬುಕ್ ಮಾಡಿರಲಿಲ್ಲ. ಹಾಗಿದ್ದರೂ ಖಾಸಗಿ ಮನೆಯಂತಿದ್ದ ಆ ಲಾಡ್ಜನ ಕರೆಘಂಟೆ ಒತ್ತಿದೆವು. ’ಕ್ಷಮಿಸಿ. ನಾವು ಬಾಗಿಲು ತೆಗೆಯುವುದಿಲ್ಲ....’ಎನ್ನುವ ಧ್ವನಿಮುದ್ರಿತ ವಿವರಣೆ ಕೇಳಿಸಿತು.  ಹಾಗಾಗಿ ಚಾನ್ಸ್ ತೆಗೆದುಕೊಂಡು ಬಂದು ನಾವು ಮಂಗ ಆಗಿದ್ದೆವು.  ಅದು ಪುಟ್ಟ ಪಟ್ಟಣ.  ವಸತಿಗಾಗಿ ಅಲ್ಲಿ ಇಲ್ಲಿ ಅಲೆದಾಡಿ ಸುಸ್ತಾಗಿ ಕೊನೆಗೆ ಒಂದು ಮಹಿಳೆ ನಡೆಸುತ್ತಿರುವ ಹೋಂ ಸ್ಟೇಯಂತಹ ಗೆಸ್ಟ್ ಹೌಸ್ ನಲ್ಲಿ ದುಬಾರಿ ಬೆಲೆ ತೆತ್ತು ಬೆಚ್ಚನೆಯ ಆಶ್ರಯ ಪಡೆದೆವು. ಮೈನಸ್ ೪-೫ ಡಿಗ್ರಿ ತಾಪಮಾನದಲ್ಲಿ ಬೀದಿ ಬೀದಿ ಅಲೆದ ನಮ್ಮನ್ನು ನೀವೊಮ್ಮೆ ಕಲ್ಸಿಕೊಳ್ಳಿ.  

ಅವನ್ ನದಿ
ಬೆಳಿಗ್ಗೆ ಎದ್ದು ಹೊರಗಿಣುಕಿ ಪಾರ್ಕ್ ಮಾಡಲಾಗಿದ್ದ ಕಾರುಗಳನ್ನು ಕಂಡಾಗಲೇ ಗೊತ್ತಾಗಿದ್ದು ರಾತ್ರಿಯಿಡೀ ಹಿಮ ಸುರಿದೆದೆಯೆಂದು.  ಬೆಳಿಗ್ಗೆ ಮನೆಯೊಡತಿ ನಗುಮೊಗದಿಂದಲೇ ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅಪ್ಪಟ ಇಂಗ್ಲೀಶ್ ಉಪಾಹಾರವನ್ನು ನೀಡಿದಾಗ ನಿಜಕ್ಕೂ ಆ ನಗುಮೊಗದೊಡತಿಯ ಸೌಜನ್ಯಕ್ಕೆ ಮನಸು ತುಂಬಿ ಬಂತು.. 

ಹೊರಗೆ ಕೊರೆಯುವ ಚಳಿಯಿದ್ದರೂ ಅಲ್ಲಿಯ ನಿಯಮದಂತೆ ಹತ್ತು ಘಂಟೆಗೆ ಚೆಕ್ ಔಟ್ ಆಗಿ ಶೇಕ್ಸ್ಪಿಯರ್ ಅಂಬೆಗಾಲಿಟ್ಟ ಜಾಗಕ್ಕೆ ಬಂದೆವು. ಅಲ್ಲಿ ನಿಜವಾದ ಅರ್ಥದಲ್ಲಿ ಶೇಕ್ಸ್ ಪಿಯರ್ ಜೀವಂತವಾಗಿದ್ದಾನೆ. ಎಲ್ಲೆಲ್ಲೂ ಅವನದೇ ಹೆಸರಿನ ಉದ್ಯಾನವನಗಳು, ಕಾಫಿಶಾಪ್ ಗಳು, ಹೋಟೇಲುಗಳು, ಪುಸ್ತಕದಂಗಡಿಗಳು . ಒಟ್ಟಿನಲ್ಲಿ ಶೇಕ್ಸ್ಪಿಯರನ ಸ್ಪರ್ಶವಿಲ್ಲದ ಯಾವುದೇ ಜಾಗ ಅಲ್ಲಿರಲಿಲ್ಲ. ಅದರಲ್ಲೂ ಅವನು ಹುಟ್ಟಿದ ಮನೆಯೆದುರಿನ Henley Street ಅಂತೂ, ಸರ್ವಂ ಶೇಕ್ಸಿಪಿಯರ್ ಮಯಂ. ಜಗತ್ತಿನಾದ್ಯಂತದಿಂದ ಬರುವ ಪ್ರವಾಸಿಗರು ಒಂದೂವರೆ ಸಾವಿರದಷ್ಟು ಪ್ರವೇಶ ಶುಲ್ಕವನ್ನು ನೀಡಿ ಮಹಾನ್ ನಾಟಕಕಾರನ ಜನ್ಮ ಸ್ಥಳವನ್ನು ಕಂಡು ಸಾರ್ಥಕ್ಯ ಭಾವವನ್ನು ಪಡೆಯುತ್ತಿದ್ದರು..  ಹದಿನಾರನೇ ಶತಮಾನದಲ್ಲಿ ಬಾಳಿ ಬದುಕಿದ ಜಗಮಾನ್ಯನಾದ ಆ ನಾಟಕಾರನ ಬಗ್ಗೆ ಇಂಗ್ಲೀಶರಿಗೆ ಬಲು ಹೆಮ್ಮೆ, ಅವನು ಅವರ ರಾಷ್ಟ್ರೀಯ ಕವಿ.

ಶೇಕ್ಸ್ ಪಿಯರನ ಜನ್ಮಸ್ಥಳದ ಉಸ್ತುವಾರಿಯನ್ನು ಶೇಕ್ಸ್ ಪಿರಿಯನ್ ಬರ್ತ್ ಪ್ಲೇಸ್ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಮನೆ ಆಯಾತಾಕರದಲ್ಲಿದ್ದು ಎರಡು ಮಹಡಿಗಳನ್ನು ಹೊಂದಿದೆ, ಹಲವು ಕೋಣೆಗಳಿವೆ. ಮರದ ಹಲಗೆಗಳ ಒಳಾವರಣವಿದ್ದು ಅಲ್ಲಿಯ ಹವಾಮಾನಕ್ಕೆ ತಕ್ಕಂತೆ ಅಗ್ಗಿಷ್ಟಿಕೆಯೊಂದಿಗೆ ಬೆಚ್ಚಗಿನ ವಾತಾವರಣವಿದೆ. ನಾನು ಒಳಗೆ ಹೋದಾಹ ಪ್ರತಿಕೋಣೆಯಲ್ಲೂ ಇಬ್ಬರು ಶಾಲಾ ಹುಡುಗಿ ಮತ್ತು ಹುಡುಗ ಆ ರೂಮಿನ ಮಹತ್ವದ ಬಗ್ಗೆ ಪ್ರವಾಸಿಗರಿಗೆ ಟಿಪ್ಪಣಿಯನ್ನು ನೀಡುತ್ತಿದ್ದರು. ಅವನು ಹುಟ್ಟಿದ ಕೋಣೆ, ಮಲಗಿದ ಹಾಸಿಗೆ. ತೊಟ್ಟಿಲು, ತರುಣನಾಗಿದ್ದಾಗ ಮಲಗಿದ್ದ ಜಾಗ, ಡೈನಿಂಗ್ ಹಾಲ್. ಅಡುಗೆ ಮನೆ ಎಲ್ಲವನ್ನೂ ಆ ಪುಟ್ಟ ಮಕ್ಕಳು ಬಾಯಿಪಾಠ ಮಾಡಿಕೊಂಡು ತಪ್ಪಿದಾಗ ಕೈಯ್ಯಲ್ಲಿದ್ದ ಟಿಪ್ಪಣಿ ನೋಡಿಕೊಂಡು ಹೇಳುತ್ತಿದ್ದುದ್ದನ್ನು ಕಂಡು ಖುಷಿಗೊಂಡು ಇಂಗ್ಲೀಷಿನ ಶಿಷ್ಟಾಚಾರದಂತೆ ನಾನೂ ಕೂಡಾ ’ಥ್ಯಾಂಕ್ಯೂ’ ಅಂದಾಗ ಅವರು ಕೂಡಾ ಹೂವಿನಂತೆ ನಗುತ್ತಿದ್ದರು.ಶೇಕ್ಸ್ ಪಿಯರ್ ತಂದೆ ಮಾಡುತ್ತಿದ್ದ ಚರ್ಮದ ಉದ್ಯೋಗದ ಬಗ್ಗೆ ವಯಸ್ಸಾದ ವ್ಯಕ್ತಿಯೊಬ್ಬರು ಸ್ವತಃ ತಂದೆಯ ವೇಶ ಧರಿಸಿ ಪ್ರಾತ್ಯಕ್ಷಿತೆ ನೀಡುತ್ತಿದ್ದರು. ವ್ಯಾಪಾರಿ ಉದ್ದೇಶದ ಕಾರಣಕ್ಕಾಗಿಯೇ ಇರಬಹುದು ನಿರ್ಗಮನ ಶೇಕ್ಪ್ಪಿಯರನ ಗಿಪ್ಟ್ ಸೆಂಟರಿನ ಮೂಕವೇ ಇತ್ತು  ಹಾಗಾಗಿ ನಾನೂ ಒಂದೆರಡು ವಸ್ತುಗಳನ್ನು ಖರೀದಿ ಮಾಡಿದೆ.

ಅಲ್ಲಿಂದ ಒಂದರ್ಧ ಕಿ.ಮೀ ದೂರದಲ್ಲಿ ಆತ ಮದುವೆಯಾಗಿ ಸಂಸಾರ ಹೂಡಿದ್ದ ಜಾಗವೂ ಇದೆ. ಬರ್ತ್ ಪ್ಲೇಸ್ ಟಿಕೇಟಿನಲ್ಲಿ ಅಲ್ಲಿಗೂ ಹೋಗಬಹುದಾಗಿತ್ತು. ಅಲ್ಲಿ ಶೇಕ್ಸ್ ಪಿಯರನ ನಾಟ್ಕಗಳ ಒಂದೆರಡು ವಾಕ್ಯಗಳನ್ನು ಕೆತ್ತಿದ ಫಲಕಗಳು, ಪಾತ್ರಗಳ ಶಿಲ್ಪಗಳನ್ನೊಳಗೊಂಡ ಆಕರ್ಷಕ ಉದ್ಯಾನವಿತ್ತು. ಪಕ್ಕದಲ್ಲಿ ಒಂದು ಚಿಕ್ಕ ಮ್ಯೂಸಿಯಂ ಇತ್ತು. ಇದನ್ನು ಬಿಟ್ಟರೆ ಅಲ್ಲಿ ಆಕರ್ಷಕವಂತಹದ್ದೇನೂ ಕಾಣಿಸಲಿಲ್ಲ. ಆದರೆ ಅಲ್ಲಿಯೇ ಪಕ್ಕದಲ್ಲಿ ಪುರಾತನವಾದ ಚರ್ಚ್ ಒಂದು ಇತ್ತು.   ಇದರ ಬಗ್ಗೆ ಆತ ತನ್ನ ಬರಹಗಳಲ್ಲಿ ಉಲ್ಲೇಖಿಸಿದ ಹಾಗೆ ನೆನಪು. ಅಲ್ಲಿಂದ ಮುಂದೆ ನಡೆಯುತ್ತಾ ಹೋದಂತೆಲ್ಲಾ ಆತ ಬಾಲ್ಯದದಲ್ಲಿ ಓದಿದ ಶಾಲೆ ಸಿಕ್ಕಿತು. ಅಲ್ಲಿಗೂ ಪ್ರವೇಶ ಶುಲ್ಕವಿತ್ತು.

ಇಲ್ಲಿ ಚಿರನಿದ್ರೆಯಲ್ಲಿ ಮಲಗಿದ್ದಾನೆ,ಶೇಕ್ಸ್ ಪಿಯರ್
ರಸ್ತೆಯ ಅಕ್ಕಪಕ್ಕದಲ್ಲಿರುವ ಸುಂದರ ಕಲಾಕ್ರುತಿಯಂತಿರುವ ಕಟ್ಟಡಗಳನ್ನು ನೋಡುತ್ತಾ ಹೋದ ಹಾಗೆ  ಶೇಕ್ಸ್ ಪಿಯರ್ ಚಿರನಿದ್ರೆಯಲ್ಲಿ ಮಲಗಿರುವ ಅವನ್ ನದಿಯ ದಂಡೆಯ ಮೇಲಿರುವ ಚರ್ಚ್ ಗೋಚರಿಸಿತು. ಅದರ ಒಳಹೊಕ್ಕೆ. ಚರ್ಚ ಪ್ರವೇಶಕ್ಕೆ ಶುಲ್ಕವಿಲ್ಲ. ಆದರೆ ಶೇಕ್ಸ್ ಪಿಯರನ ಸಮಾದಿ ದರ್ಶನಕ್ಕೆ ಶುಲ್ಕವಿತ್ತು. ಅದನ್ನು ಕೊಟ್ಟು ಆ ಮಹಾನ್ ಪ್ರತಿಭೆಯ ಸಮಾಧಿಯ ಮುಂದೆ ಮೌನವಾಗಿ ಒಂದರೆಗಳಿಗೆ ಕಣ್ಮುಚ್ಚಿ ನಿಂತೆ. ಆತನ ಪಕ್ಕದಲ್ಲೇ ಅವನ ಪತ್ನಿ ಮತ್ತು ಮಕ್ಕಳು ಪವಡಿಸಿದ್ದರು. ಪ್ರವಾಸಿಗರು ಅದರ ಪಕ್ಕದಲ್ಲಿ ಕುಳಿತು ಪೋಟೋ ತೆಗೆಸಿಕೊಳ್ಳುತ್ತಿದ್ದರು; ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಅವನ್ ನದಿಯ ದಂಡೆಯುದ್ದಕ್ಕೂ ಶೇಕ್ಸ್ ಪಿಯರನ ಹೆಸರಿನ ಉದ್ಯಾನ ಹರಡಿಕೊಂಡಿತ್ತು. ಅಲ್ಲೊಂದು ಪುಟ್ಟ ಥಿಯೇಟರ್ ಇದೆ. ಹೋಟೇಲ್ ನ ಹಾಗೆ ಕಾಣುವ ಎರಡು ದೊಡ್ಡ ಕಟ್ಟಡಗಳಿವೆ. ಜನ ತಮ್ಮ ಪ್ರೀತಿಯ ನಾಯಿ ಹಿಡಿದುಕೊಂಡು ವಾಕಿಂಗ್ ಹೋಗುತ್ತಿದ್ದರು.  ನದಿಯಲ್ಲಿ ಹಂಸಗಳ ಜೊತೆ ವಿವಿಧ ರೀತಿಯ ಹಕ್ಕಿಗಳು ವಿಹರಿಸುತ್ತಿದ್ದವು. ನನ್ನನ್ನು ನೋಡಿ ತೇಲುತ್ತಾ ಬಂದು ತಿನ್ನಲು ಕೊಡು ಎಂಬತೆ ಜೋರಾಗಿ ಕ್ಕೆ ಕ್ಕೆ ಎಂದು ಗಲಾಟೆ ಮಾಡತೊಡಗಿದವು. ದೊಡ್ಡ ದೊಡ್ಡ ಹಕ್ಕಿಗಳ ಕಾಲಿಗೆ ಗುರುತುಪಟ್ಟಿಯನ್ನು ಕಟ್ಟಲಾಗಿತ್ತು. 

ಉದ್ಯಾನವನದ ಇನ್ನೊಂದು ಬದಿಯಲ್ಲಿ ಕೊಳವಿತ್ತು ಅದರ ಮೇಲ್ಪದರ ಹೆಪ್ಪುಗಟ್ಟಿತ್ತು. ಎಳೆಬಿಸಿಲಿಗೆ ಮೈಯ್ಯೊಡ್ಡಿ ಅದರ ಮೇಲೆ ಕುಳಿತ್ತಿದ್ದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾಗೊಮ್ಮೆ ಈಗೊಮ್ಮೆ ಜಾರುವಾಟ ಆಡುತ್ತಿದ್ದವು. ಇದರಿಂದ ಸ್ಪೂರ್ತಿಗೊಂಡ ನಾನು ಪಕ್ಕದಲ್ಲಿದ್ದ ಕಲ್ಲೊಂದನೆತ್ತಿ ನೀರಿನತ್ತ ಒಗೆದೆ. ಅದು ಟಣ್ ಅಂತ ಶಬ್ದ ಮಾಡುತ್ತಾ ಬೆಳ್ಳನೆಯ ಟಿಸಿಲುಗಳಾದವು.  ತಲೆಯೆತ್ತಿ ಸುತ್ತಮುತ್ತ ನೋಡಿದರೆ ಸ್ವಲ್ಪ ದೂರದಲ್ಲಿ ವ್ರುತ್ತಾಕಾರದಲ್ಲಿ ನಿಲ್ಲಿಸಲಾಗಿದ್ದ . ಹ್ಯಾಮ್ಲೆಟ್, ಲೇಡಿ ಮ್ಯಾಕ್ಬ್ಯಾತ್, ಕಿಂಗ್ ಲಿಯರ್. ಮ್ಯಾಕ್ ಬೆತ್...ಮುಂತಾದವರ ಪ್ರತಿಮೆಗಳೆಲ್ಲಾ ಕಾಣಿಸುತ್ತಿದ್ದವು. ಎಡಕ್ಕೆ ತಿರುಗಿದರೆ ನಸು ಬಾಗಿದ ಮುಖದ ತರುಣ ಶೇಕ್ಸ್ಪಿಯರ್ ಎಡಗೈನಲ್ಲಿ ಸುರುಳಿ ಸುತ್ತಿರುವ ಎಂತಹದ್ದನ್ನೋ ಎದೆಗವಚಿಕೊಡು ಬಲಗೈಯನ್ನು ನನ್ನೆಡೆಗೆ ಚಾಚಿ ಮುಗುಳ್ನಗುತ್ತಿರುವಂತೆ ಕಾಣಿಸುತ್ತಿತ್ತು. ಸುರುಳಿ ಸುತ್ತಿದ್ದು ಅವನ ಬರೆದ ಹಾಳೆಗಳೋ ಅಥವಾ ಪ್ರಶಸ್ತಿಫಲಕಗಳೋ ಸ್ಪಷ್ಟವಾಗಿ ಕಾಣಿಸಲಿಲ್ಲ!


[ ಇವತ್ತಿನ [ ಪೆಭ್ರವರಿ ೫ .೨೦೧೭] ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬರಹ ]