Showing posts with label ಒಲವಾಗ್ನಿ. Show all posts
Showing posts with label ಒಲವಾಗ್ನಿ. Show all posts

Tuesday, March 26, 2019

ಆಟಿ ಹುಣ್ಣೆಮೆಯ ಹೆಣ್ಣು ನಾನು!

ಚಿತ್ರ; Internaet



ಮೊನ್ನೆ..

ಮುಂಜಾವಿನಲ್ಲಿ ಬಸ್ಸಿನಿಂದಿಳಿದು
ಪೇಟೆಯ ಕಲ್ಲುಬೆಂಚಿನಲ್ಲಿ ಕುಳಿತಿದ್ದೆ.
ಪಕ್ಕದ ಗೂಡಂಗಡಿಯ ಕಾಕ
ತಟ್ಟೆಯಲ್ಲಿ ತಂದ ಬಿಸಿ ಉಪ್ಪಿಟ್ಟನ್ನು ರಸ್ತೆಬದಿಯಲ್ಲಿ ಚೆಲ್ಲಿದ
ಲೋಟ ತುಂಬಿದ ಬಿಸಿ ಬಿಸಿ ಚಾಹವನ್ನು ಅಲ್ಲೇ ಸುರಿದ.
ತಲೆಯೆತ್ತಿ ಅವನನ್ನೇ ದಿಟ್ಟಿಸಿದೆ.
‘ಲಾಗಾಯ್ತಿನಿಂದ ಬಂದದ್ದು’ ಎಂದು ನಗು ಚಿಲ್ಲಿದ.
ಮೂಡಣಕ್ಕೆ ಕೈಮುಗಿದು ಒಳಗಡೆಗೆ ಹೋದ.

ಇಬ್ಬನಿಯ ಮುಂಜಾವಿನಲ್ಲಿ ನನ್ನಜ್ಜಿ
ನೆಟ್ಟಿಗದ್ದೆಗೆ ಹೋಗಿ ಎಳೆಸಸಿಗಳ ಸವರಿ,
ಬಳ್ಳಿಗಳ ಚಪ್ಪರಕ್ಕೆ ಹಬ್ಬಿಸಿ.
‘ಕಾಯಿಗಟ್ಟಿದೆ ನೆಟ್ಯಜ್ಜಿಗೆ ಎಡೆ ಹಾಕಬೇಕು’
 ಗೊಣಗುತ್ತಾ ಬಂದು
ಇನ್ನೂ ಮಲಗಿಯೇ ಇದ್ದ ನನ್ನ ಕುಂಡೆಗೊಂದು ಒದ್ದು.
ಕೇಪಳೆ ಹೂ ಕೊಯ್ದುಕೊಂಡು ಬಾ ಎಂದು ಅಟ್ಟಿದಳು.
ಕುಂಜ್ಞ್ ಕತ್ತಿ ಹಿಡಿದು  ಎಲ್ಲಿಗೋ ನಡೆದಳು.

ನಟ್ಯಜ್ಜಿಗೆ ರಾಗಿಗಂಜಿ ಏಡಿ ಸಾರು ಬಡಿಸಿದಳು.
ಚಾಮುಂಡಿಯೆಂಬ ಕಲ್ಲುಗುಂಡಿಗೆ ಹಂದಿರಕ್ತದ ಅಭಿಶೇಕ ಮಾಡಿದಳು.
ಕೆಂಪಿ ಹಸುವಿನ ಮೊದಲ ಹಾಲನ್ನು ನದಿಗೆ ಎರೆದಳು.
ಮೀಸಲು ಮೀನನ್ನು ಕಾಡಿಗೆಸೆದು ಬುಟ್ಟಿ ತುಂಬಿಸಿಕೊಂಡಳು.
ಇದೆಲ್ಲವನ್ನೂ ಕೊಟ್ಟ ಭೂಮಿ ತಾಯಿಗೆ
ವರ್ಷದಲ್ಲಿ ಮೂರುದಿನ ಕಳಶಕನ್ನಡಿಯಿಟ್ಟು
ಸೀಗೆಕೊಂಬನ್ನು ನೆಟ್ಟು
ನೆತ್ತಿಗೆ ಎಣ್ಣೆಯೆರೆದಳು.

ನನ್ನ ಬೈತಲೆಯಲ್ಲಿ ಸಿಂಧೂರವಿಲ್ಲ.
ಹಣೆಯಲ್ಲಿ ಗಂಧಚಂದನ.
ಕೊರಳಲ್ಲಿ ತಾಳಿಯಿಲ್ಲ.
ನಾನು ನಿಮ್ಮವಳಲ್ಲ.
ನಿಮ್ಮ ದೇವರು ನನ್ನ ದೇವರಲ್ಲ.
ಆಟಿ ಹುಣ್ಣಿಮೆಯ ಹೆಣ್ಣು ನಾನು
ಬೀಮನ ಅಮಾವಾಸ್ಯೆಯ ಹದಿಬದೆಯಲ್ಲ


ನಿಮ್ಮ ದೇವರುಗಳ ಕೈಯ್ಯಲ್ಲಿ ಮಾರಕ ಆಯುಧಗಳಿವೆ
ಕತ್ತರಿಸಿದ ರುಂಡವಿದೆ.
ನಿಮ್ಮ ಹಾಗೆಯೇ ನಿಮ್ಮ ದೇವರು.
ನಿಮ್ಮ ಭಾರತ ಮಾತೆ ರಕ್ತದಾಹಿ.!

ನನಗೀಗ ಕಾಶ್ಮೀರಿಗಳು ಹೆಚ್ಚು ಅರ್ಥವಾಗುತ್ತಾರೆ.
ಮುಸ್ಲೀಮರು ಹೆಚ್ಚು ಅರ್ಥವಾಗುತ್ತಾರೆ.
ದಲಿತರು ಹೆಚ್ಚು ಅರ್ಥವಾಗುತ್ತಾರೆ.

ಆಟಿ ಹುಣ್ಣಿಮೆಯ ಹೆಣ್ಣು ನಾನು!
ಅಂತಃರಿಕ್ಷದಿಂದ ಉದುರಿದವರು ನೀವು.
ತ್ರಿಶಂಕುವಿಗೆ ಸ್ವರ್ಗವಿಲ್ಲ.!
·         


Sunday, December 13, 2015

ಆತ್ಮಕ್ಕಂಟಿದ ದೂಳು.






ಅನುಮಾನಿಸಿದೆ; ಅವಮಾನಿಸಿದೆ.
ಪ್ರೀತಿಯೋ ಪ್ರೇಮವೋ ವಾಂಛೆಯೋ
ಗೊತ್ತಿಲ್ಲದ ಏನೋ ಒಂದು.
ಆವರಿಸಿ ಅಪ್ಪಳಿಸಿದ ರಬಸಕ್ಕೆ
ಆಕಾರವಿಲ್ಲದೆ ನರಳಿದ್ದೇನೆ.

ಆಕಾಶಕ್ಕೆ
ಸಹಸ್ರ ಸಹಸ್ರ ಬಾಹುಗಳ ಚಾಚಿ ಬೋರಿಟ್ಟು
ಅಳುತ್ತಿರುವಾಗ
ಮೋಟು ಬೀಡಿಗೆ ಬೆಂಕಿ ಹಚ್ಚಿ ಸುಖಿಸುತ್ತಿದ್ದೆ.
ನೀನು, ನನ್ನ ಆತ್ಮಕ್ಕಂತಿದ ದೂಳು.

ಪಾತಾಳಗಂಗೆಯಲ್ಲಿ ಈಜುತ್ತಿರುವವನಿಗೆ ಸುರಗಂಗೆಯ ಕನವರಿಕೆ.
ವೈತರಣಿಯಲ್ಲೂ ಜೀವ ಮೊಳಕೆಯೊಡೆದೀತೆ?
ಇದು ಕಾಲವಲ್ಲ; ಮಿಲನದ ಭೂಮಿಕೆಯಲ್ಲ.

ಆಳವಿದ್ದಲ್ಲೇ ತೆರೆಗಳೇಳುವುದು;
ನಾನೊಂದು ಶರಧಿ.
ಆಗಸದೆದೆಯಲ್ಲಿ ಬಚ್ಚಿಟ್ಟುಕೊಳ್ಳಬಲ್ಲೆ..
ನೀನು ಆಗಸವಾಗು.
ಅಣು ಅಣುವನ್ನೂ ಹೀರಿ ಜೀವಕೋಶವನ್ನೆಲ್ಲಾ ಬರಿದು ಮಾಡು.
ಆವರ್ತನದ ಕಂಪನಕ್ಕೆ
ಇಳೆ ಬಸಿರಾಗುತ್ತದೆ.
ಆತ್ಮ ಶುಭ್ರವಾಗುತ್ತದೆ.





Saturday, November 28, 2015

ನಿನ್ನದೀ..ಒಲವಾಗ್ನಿ....!


                         

  ೧


ನಾನು... ಮಹಾಶ್ವೇತೆ;
ದೇವಲೋಕದ ಗಂಧರ್ವಕನ್ಯೆ.
ಮಾನುಷ ಪ್ರೀತಿಗಾಗಿ ಹಂಬಲಿಸಿದವಳು.
ಅಚ್ಛೋದ ಸರೋವರಕ್ಕೆ ಸ್ನಾನಕ್ಕೆಂದು ಬಂದಿದ್ದೇನೆ.
ಪುಂಡರೀಕಾ...
ನಿನ್ನನ್ನಿಲ್ಲಿ ಕಂಡೆ...ಮನಸೋತೆ.
ದೇವಲೋಕ ನರಕಲೋಕವಾಯ್ತು.
ನಿನ್ನೊಲವಿಗಾಗಿ ಜನ್ಮಜನ್ಮಾಂತರಗಳಲ್ಲೂ ಕಾಯಬಲ್ಲೆ.
ಈ ಒಂದು ಜನ್ಮದ ತಪಸ್ಸೇನು ಮಹಾ...! 


 ೨


 ಸಾಗರವನ್ನು ಎಂದೂ ನೋಡದವರ ಮುಂದೆ
ಅದರ ಅಗಾಧ ಜಲರಾಶಿಯನ್ನು ವರ್ಣಿಸಬಾರದು.

ಮನೆ ಮುಂದಿನ ಗುಡ್ಡವನ್ನೇ ಹತ್ತಲು ಮನಸ್ಸಿಲ್ಲದವರಿಗೆ
ಹಿಮಾಲಯದ ಔನತ್ಯದ ಬಗ್ಗೆ ಹೇಳಬಾರದು.

ಕಣ್ಣೀರಿಗೂ ಉಪ್ಪು ನೀರಿಗೂ ವ್ಯತ್ಯಾಸ ಅರಿಯದವರ ಮುಂದೆ
ಭಾವನೆಗಳ ಕಟ್ಟೆ ಹರಿಯಗೊಡಬಾರದು.

ನಾನೊಬ್ಬಳು ಹುಚ್ಚಿ; ಇಬ್ಬನಿಯಲ್ಲಿ ಕಾಮನಬಿಲ್ಲು ಕಾಣುತ್ತೇನೆ.

 


                       














 ೩


ಬಂದೆ.. ಎಂದೆ, ಮುಟ್ಟಿದೆ.. ಎಂದೆ.
ಮೈ ಝುಮ್ಮೆನ್ನಲಿಲ್ಲ;ಜೀವ ತಲ್ಲಣಿಸಲಿಲ್ಲ.
ಕವಿಸೃಷ್ಟಿಯ ನಾಯಕನಲ್ಲಿ ಮೈಮರೆತೆ. ಜೀವ ತಾಳಲಿಲ್ಲ.
ಮೇಘ ಸಂದೇಶಗಳೆಲ್ಲಾ ಭ್ರಮಾಸೃಷ್ಟಿಗಳು; ನೆರಳಿಲ್ಲ.ಉಸಿರಿಲ್ಲ
ಅನುಭಾವದ ಸುಖಕ್ಕೆ ಪಂಚೇಂದ್ರಿಯದ ಹಂಗಿಲ್ಲವಂತೆ.
ಸುಡಲಿ ಆ ಅನುಭಾವ; ನನ್ನ ಸ್ಪರ್ಷಕ್ಕೊಮ್ಮೆ ದಕ್ಕಿಬಿಡು.
ನನ್ನ ದಾಸಾನುದಾಸ ನೀನಾಗದಿದ್ದರೆ...
ನಾನೇ ನಿನ್ನ ತೋಳಿನ ಮಗುವಾಗಿಬಿಡುವೆ..
ಮುಟ್ಟಿದರೂ ಮುಟ್ಟದಂತಿರುವುದನ್ನು ನಾವಿಬ್ಬರೂ ಕೂಡಿ ಕಲಿಯೋಣ



   ೪

ಸುಮ್ಮನೆ 
ಜೊತೆ ಹೆಜ್ಜೆಗಳು, ಗುರಿಯಿರಲಿಲ್ಲ.
ವಾದ-ವಿವಾದ ನಡೆಯುತ್ತಿದ್ದವು, ಎಂದಿನಂತೆ
ಬೀದಿಯಲ್ಲಿದ್ದವರಿಗೆ ಕಾಡು, ಕಡಲು, ಬೆಳದಿಂಗಳ ಮೋಹ.
ಎದೆಯಲ್ಲೊಂದು ಪ್ರಶ್ನೆ ಕುದಿಯುತ್ತಿತ್ತು,
ಕೇಳಿದೆ.
ಕೈಮುಗಿದು ನುಡಿದ;
’ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡು’
ಎತ್ತರಕ್ಕೆ ಎಸೆಯಲ್ಪಟ್ಟೆ, 
ಅವನು ಕೆಳಗುಳಿದ.
ಈಗವನು ಪಂಚೇಂದ್ರಿಯಗಳಾಚೆಗಿನ ಇನಿಯ
ನೆನಪಾದೊಡನೆ ಅದೇ ಕೈಮುಗಿದ ಚಿತ್ರ.
ನನ್ನ ಚಿತ್ರಕ ಶಕ್ತಿಗೆ ನನಗೇ ಬೆರಗು;

ದೈನ್ಯಕ್ಕೆ ಪ್ರೀತಿ ಕೊಲ್ಲುವ ಶಕ್ತಿಯಿದೆ


                   














  ೫



ತುಂಬಾ ಹಿಂದೆ ಆ ಕಾಗದ ಬಂದಿತ್ತು.
ಸುಮ್ಮನೆ ಅದನ್ನೇ ತಿರುಗಿಸಿ ಮರುಗಿಸಿ ನೋಡಿದ್ದೆ.
ವಿಳಾಸವಿರಲಿಲ್ಲ.
ಬರೆದವರಾರೆಂದು ಗೊತ್ತಿತ್ತು.

ಒಳಗೇನಿರಬಹುದು?
ಎದೆಹಿಡಿದುಕೊಂಡೆ; ಹಣೆಯಲ್ಲಿ ಬೆವರೊಡೆದಿತ್ತು.
ಹಗುರಾಗಿ ತುಟಿ ತಾಗಿಸಿದೆ, ಎದೆಗೊತ್ತಿಕೊಂಡೆ.
ಸುಗಂಧವೊಂದು ತೇಲಿಬಂತು.
’....................................’
ಉಯಿಲು ಪತ್ರದೊಳಗೆ ಮೆಲ್ಲನೆ ಅದ ಹುದುಗಿಸಿ
ಸ್ಮೃತಿಸಂಪುಟದಲ್ಲಿಟ್ಟು ಕೀಲಿಕೈಯನು ಆಳ ಸಮುದ್ರಕ್ಕೆಸೆದೆ.
ಉರವಣಿಸಿ ಬರುತ್ತಿರುವ ಕಾಲತೆರೆಗಳನು ನೋಡುತ್ತಿದ್ದೇನೆ;
ಲೆಕ್ಕ ತಪ್ಪುತ್ತಿದೆ!





Friday, October 24, 2014

ಎರಡಲುಗಿನ ಕತ್ತಿ!



ಬೋಳು ಮರದಡಿಯಲ್ಲಿ ನಿಂತಿದ್ದೆವು.
ಮಾತಿನ ಸೇತುವೆ ಶಿಥಿಲಗೊಳ್ಳುತ್ತಿತ್ತು.
ಅವನಂದ; ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಕಣ್ಣು ಮಂಜಾಯಿತು, ತಲೆ ತಗ್ಗಿಸಿದೆ.
ಮರು ಮಾತಾಡಲಿಲ್ಲ.
ಓಡಿ ಹೋಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಮಕ್ಕಳನ್ನು ಕೂಗಿ ಕರೆದೆ.
ಹಿಂತಿರುಗಿದವು, ಎರಡು ಹೆಜ್ಜೆ ಹಿಂದೆ ಬಂದು ”ಏನಮ್ಮಾ?’ ಅಂದವು
ಏನಿಲ್ಲಾ.. ಅಂದು ಸ್ವಲ್ಪ ಹೊತ್ತು ಅಲ್ಲೇ ನಿಂತೆ.
ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಾ ನಡಿಗೆ ಮುಂದುವರಿಸಿದವು.
ಅಂಗೈ ನೋಡಿಕೊಂಡೆ; ಒದ್ದೆಯಾಗಿತ್ತು..

ಸಿರಿವಂತರ ನಾಲಗೆಯೆಂಬುದು ಎರಡಲುಗಿನ ಕತ್ತಿ.
ಕತ್ತರಿಸಲು ನಿಂತವರಿಗೆ ನಾನದರೇನು..ನೀನಾದರೇನು?
ಹಿಂದೊಬ್ಬ ರಸ್ತೆಯಲ್ಲೇ ಕಾಲಪ್ಪಳ್ಳಿಸಿದ್ದ.
ಮತ್ತೆ ಮನದಂಗಳಕ್ಕೆ ಬಂದು ಹೇಳಿದ್ದ ’ನೀನೆಷ್ಟು ಒಳ್ಳೆಯವಳು!’
ಹಾಗನ್ನುತ್ತಲೇ ಕಾಲನ ತೆಕ್ಕೆಯಲಿ ಕರಗಿಹೋದ.
ಈಗ ಇವನು ಹೇಳುತ್ತಿದ್ದಾನೆ., ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಇಬ್ಬರೂ ಅಕ್ಷರ ಸ್ನೇಹಿತರು; ಕಂಡಿಲ್ಲ ಮಾತಾಡಿಲ್ಲ.
ಯಾರ ಮಾತನ್ನು ನಂಬುವುದು?

ಎದೆ ಮೇಲೆ ಕೈಯಿಟ್ಟು ಕ್ಷಣಕಾಲ ಕಣ್ಮುಚ್ಚಿದೆ. 
ಒಳಗಿನ ಆಕಾಶಕ್ಕೆ ಯಾವ ಅಳತೆಗೋಲಿನ ಹಂಗು?  
ಆದರೂ ಒಂದು ಸಣ್ಣ ಚಲನೆ ನನ್ನನ್ನೀಗ ಆಳುತ್ತಿದೆ!


Monday, August 12, 2013

ನೀನೆನಗೆ ಪರಮ ಗುರು..



ಧ್ಯಾನ ಕೇಂದ್ರಕ್ಕೆ ಹೊರಟು ನಿಂತಿದ್ದೇನೆ.
ಗುರುಕಾಣಿಕೆಯೊಂದನ್ನು ಅರ್ಪಿಸಬೇಕಾಗಿದೆ.
’ವರ್ಣ ಮಾತ್ರಂ ಕಲಿಸಿದಾತಂ ಗುರು’
ನೀ ಬದುಕ ಪಥ ಬದಲಿಸಿದ ಮಹಾಗುರು !


ಚಿತ್ರಕೃಪೆ; ಅಂತರ್ಜಾಲ
ಹಗ್ಗದ ಮೇಲಿನ ನಡಿಗೆ...
 ’ಹಾಳಾಗಿ ಹೋಗು’ ಕಿರುಚಿದ ಬುದ್ದನಂತಿದ್ದ ನಿಯಂತ್ರಕ.
ಕೈಯ್ಯಲ್ಲಿದ್ದ ಕೋಲು ಜಾರಿತು.
ಆಯುಧಶಾಲೆಯಲ್ಲಿ ಉದಿಸಿದ ಚಕ್ರರತ್ನ ಗಾಳಿಯಲ್ಲಿ ತೇಲಿ ಬಂದು
ಅನಾಹತವನ್ನು ಬೇಧಿಸಿ
ಕಿವಿಗೆ ಕಾದ ಸೀಸವಾಗಿ, ಎದೆಗೆ ಚೂರಿಯ ಅಲಗಾಗಿ ಇರಿಯುತ್ತಿದ್ದಂತೆ
ಚಿತ್ತಬಿತ್ತಿಯಲ್ಲಿ ತಕ ತಕನೆ ಕುಣಿಯುತ್ತಿದ್ದ ನೀಲಾಂಜನೆ
’ಬೋಂಕನೆ’ ಮಾಯವಾಗಿ ಈ ಗೆಳೆತನವೇ ನಶ್ವರವೆನಿಸಿ
ಮೋಹದ ಕನ್ನಡಕವನ್ನು ಬಿಸುಟು ಪುಸ್ತಕದ ಕಪಾಟಿನತ್ತ ನಡೆದೆ.
ಭ್ರಮೆಯ ಪ್ರಪಂಚದಿಂದ ರಕ್ತ ಮಾಂಸದ ವಾಸ್ತವ ಜಗತ್ತಿಗೆ.


’ಹಾಳಾಗಿ ಹೋಗು’ ಎಂದೂ ಹೇಳಿದವಳಲ್ಲ; ಹೇಳಿಸಿಕೊಂಡವಳಲ್ಲ.
ತೂಕ ತಪ್ಪಿದ ನನ್ನ ನಡೆಗೆ ಲಜ್ಜೆಯೆನಿಸಿ ಭೂಮಿಗಿಳಿದು ಬೀಜವಾದೆ.
ಸೂರ್ಯರಶ್ನಿಗಾಗಿ ಹಂಬಲಿಸಿ, ಪಂಚಾಗ್ನಿಯಲ್ಲಿ ಬೆಂದೆ.
ಮಿತ್ರನಿಗೆ ವಂದಿಸಿ, ಆಲಂಗಿಸಿ, ಇಳೆಗೆ ಹಣೆ ಹಚ್ಚಿ
ಪೂರಕ, ಕುಂಭಕ, ರೇಚಕಗಳಲ್ಲಿ ಪ್ರಾಣಶಕ್ತಿಯನ್ನು ನಾಡಿಗಳಲ್ಲಿ ಹರಿಸಿ
ತಲೆಯೆತ್ತಿದಾಗ ಕಂಡದ್ದು ವರ್ಷಗಳ ಹಿಂದೆ ಮರೆತಿದ್ದ ಧ್ಯಾನ ಕೇಂದ್ರ.
ಹೊರಟಿದ್ದೇನೆ.....
ಚಿತ್ರಕೃಪೆ; ಅಂತರ್ಜಾಲ


ಗೆಳೆಯಾ, ಕಳವಳಿಸಬೇಡ. ನೀನೆಗೆ  ಪರಮಗುರುವಾದೆ .
ಪೋಲಾಗುತ್ತಿದ್ದ ಶಕ್ತಿಯನ್ನು ಮತ್ತೆ ಸಂಚಯಿಸಲು ದಾರಿ ದೀಪವಾದೆ.
ಮೊಣಕಾಲೂರಿದ್ದೇನೆ; ನಿನಗೆ ನಮೋ ನಮಃ.!