Friday, July 20, 2012

ಅಂತರ್ಜಾತೀಯ ಮದುವೆ; ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯೆಡೆಗೆ ನಿರಂತರ ಪಯಣ




ಅಂತರ್ಜಾತೀಯ ಮದುವೆಗೆ ಸಂಬಂಧಪಟ್ಟಂತೆ ಈ ಬರಹ ಇರಬಹುದಾದರೂ ಕೇವಲ ಜಾತೀಯ ನೆಲೆಯಿಂದಲೇ ನನ್ನ ಮದುವೆಯನ್ನು ನಾನು ನೋಡಲಿಚ್ಛಿಸುವುದಿಲ್ಲ. ಯಾಕೆಂದರೆ ನನ್ನನ್ನು ಒಂದು ಹುಡುಗ ಮೆಚ್ಚಿದ. ನಾನವನನ್ನು ಒಪ್ಪಿಕೊಂಡೆ. ಆಗ ನನಗೆ ಅವನ ಜಾತಿ, ಅಂತಸ್ತು, ಮನೆತನ, ಅರ್ಥಿಕ ಸ್ಥಿತಿ-ಗತಿ, ವಿದ್ಯಾಭ್ಯಾಸ ಯಾವುದೂ ಗೊತ್ತಿರಲಿಲ್ಲ.

ಆ ಕಾಲವೇ ಹಾಗಿತ್ತು.ನನ್ನೂರು ಸುಳ್ಯ ತಾಲೂಕಿನ ಒಂದು ಹಳ್ಳಿ. ಆ ಕಾಲದಲ್ಲಿ ಸುಳ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾತೀಯ ಮದುವೆಗಳಾಗುತ್ತಿದ್ದವು. ನನ್ನ ಆತ್ಮೀಯ ವಲಯದಲ್ಲಿದ್ದ ಎಂ.ಜಿ.ಕಜೆ, ಪುರುಷೋತ್ತಮ ಬಿಳಿಮಲೆ, ಪ್ರಭಾಕರ ಶಿಶಿಲ, ಕುಮಾರಸ್ವಾಮಿ…ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಬಂಡಾಯ, ದಲಿತ ಮತ್ತು ರೈತ ಚಳ್ವಳಿಯ ಸಿದ್ದಾಂತ, ಆದರ್ಶಗಳು ನಮ್ಮ ದೈನಂದಿನ ಬದುಕನ್ನು ನಿರ್ದೇಶಿಸುತ್ತಿದ್ದವು. ನಾಟ್ಕ, ವಿಚಾರಸಂಕಿರಣ, ಸಾಹಿತ್ಯಕ ಸಮಾರಂಭಗಳು ಅದಕ್ಕೆ ಪೂರಕವಾಗಿದ್ದವು. ಲಂಕೇಶ್ ಪತ್ರಿಕೆ ನಮ್ಮ ವಿಚಾರ ಶಕ್ತಿಯನ್ನು ಮೊನಚುಗೊಳಿಸುತ್ತಿತ್ತು. ಇದೆಲ್ಲದರ ಪರಿಣಾಮವಾಗಿ ಏನನ್ನಾದರೂ ಎದುರಿಸಿ ಗೆಲ್ಲಬಲ್ಲೆವು; ಸಾಧಿಸಬಲ್ಲೆವು ಎಂಬ ಹುಮ್ಮಸ್ಸು ಎದೆಯಾಳದಿಂದಲೇ ಒದ್ದುಕೊಂಡು ಬರುತ್ತಿತ್ತು. ಸುತ್ತಮುತ್ತ ಇದ್ದ ಗೆಳೆಯರು, ಒಡನಾಡಿಗಳು ನಿಜವಾದ ಅರ್ಥದಲ್ಲಿ ಸಂಗಾತಿಗಳಾಗಿದ್ದರು. ಸಮಾಜವನ್ನು ಎದುರು ಹಾಕಿಕೊಂಡು ಮದುವೆಯಾದವರಿಗೆ ಆಸರೆಯಾಗುತ್ತಿದ್ದರು; ಕಷ್ಟ-ಸುಖದಲ್ಲಿ ಹೆಗಲಾಗುತ್ತಿದ್ದರು.

ಇವರೆಲ್ಲರ ಪ್ರಭಾವಲಯದಲ್ಲಿ ಬೆಳೆದ ಕಾರಣದಿಂದಲೋ ಏನೋ ನಾನು ಜಾತ್ಯಾತೀತ ಮನೋಭವನೆಯನ್ನು ನನಗರಿವಿಲ್ಲದಂತೆ ಮೈಗೂಢಿಸಿಕೊಂಡೆ. ಮುಂದೆ ನಾನು ಅನ್ಯ ಜಾತೀಯ ಹುಡುಗನೊಬ್ಬನನ್ನು ಪ್ರೀತಿಸಿ, ಅದನ್ನು ಮನೆಯಲ್ಲಿ ಹೇಳಬೇಕೆಂದ ಸಂದರ್ಭ ಬಂದಾಗ ಅದನ್ನು ಧೈರ್ಯದಿಂದ ಹೇಳಲು ಸಾಧ್ಯವಾಯಿತು. ಆಗ ನನ್ನ ಮನೆಯಲ್ಲಿ ಹೇಳಿಕೊಳ್ಳಬಹುದಾದ ಪ್ರತಿರೋಧವೇನೂ ವ್ಯಕ್ತವಾಗಲಿಲ್ಲ. ಅವರು ಹೇಳಿದ್ದು ಇಷ್ಟೇ. ’ಅವರನ್ನು ಒಮ್ಮೆ ಮನೆಗೆ ಕರೆದುಕೊಂಡು ಬಾ.’ ನಾನು ಕರೆದುಕೊಂಡು ಹೋದೆ. ಅವರು ಅವನನ್ನು ನೋಡಿದರು. ಮದುವೆಗೆ ಒಪ್ಪಿಗೆ ಕೊಟ್ಟರು.

”ಇದಿಷ್ಟು ಸಲೀಸೇ’ ಎಂದು ನಿಮಗೆ ಅನ್ನಿಸಬಹುದು. ಹೌದು ಸಲೀಸು. ಹಾಗೇ ನಮ್ಮ ನಡೆ-ನುಡಿಯಿರಬೇಕು. ತಮ್ಮ ಮಗ/ಮಗಳು ಎಂತಹ ಸಂದರ್ಭದಲ್ಲೂ ತಪ್ಪು ಹೆಜ್ಜೆ ಇಡಲಾರರು ಎಂಬ ರೀತಿಯಲ್ಲಿ ನಾವು ಅವರಿಗೆ ಬದುಕಿ ತೋರಿಸಿರಬೇಕು..ಹಾಗಾದಾಗ ಅವರಿಗೆ ನೋವು, ಅವಮಾನಗಳಾದರೂ ಅದನ್ನವರು ತೋರಿಸಿಕೊಳ್ಳಲಾರರು  ಹೆಚ್ಚೆಂದರೆ ಮಗ/ಮಗಲೊಂದಿಗಿನ ಸಂಪರ್ಕವನ್ನು ಅವರು ಕಡಿದುಕೊಳ್ಳಬಹುದು. ’ಎಲ್ಲಿದ್ದರೂ ಸುಖವಾಗಿರಲಿ’ ಎಂದು ಮನದಲ್ಲಿಯೇ ಹರಸಬಹುದು. ಆದರೆ    ತಮ್ಮ ಮಕ್ಕಳು ಕಷ್ಟದಲ್ಲಿದ್ದಾರೆಂದು ಅವರಿಗೆ ತಿಳಿದರೆ ಇದೇ ತಂದೆ-ತಾಯಿ ಖಂಡಿತವಾಗಿಯೂ ಧಾವಿಸಿ ಬರುತ್ತಾರೆ. ಇದಕ್ಕೆ ಅಪವಾದಗಳು ಇಲ್ಲವೆಂದಲ್ಲ. ಆದರೆ ಅಂತವರ ಸಂಖ್ಯೆ ಕಡಿಮೆ. ಮಾನವೀಯತೆಯ ಬರ ಇರುವವರು ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತಾರೆ. ಅಂತಹ ಕರ್ಮಠ ಮನದವರು ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ.

ಜಾತಿಯನ್ನು ಮೆಟ್ಟಿನಿಂತು ಮದುವೆಯಾಗುವುದು ದೊಡ್ಡ ಸಮಸ್ಯೆಯೇ ಅಲ್ಲ. ಅದಕ್ಕೆ ಸಹಾಯ ಹಸ್ತ ನೀಡುವವರು ದೊಡ್ಡ ಸಂಖ್ಯೆಯಲ್ಲಿ ನಮ್ಮ ನಡುವೆ ಇದ್ದಾರೆ. ಆದರೆ ಸಂಸಾರ ಮಾಡುವವರು ಆ ಗಂಡು ಹೆಣ್ಣು ತಾನೇ?  ಅದ ಕಾರಣ ಸದಾ ಎಚ್ಚರದಿಂದ ಇರಬೇಕಾದ ಜವಾಬ್ದಾರಿ ಆ ಜೋಡಿಯ ಮೇಲಿರುತ್ತದೆ. ಅದು ಸಾಮಾಜಿಕ ಜವಾಬ್ದಾರಿ ಕೂಡಾ ಆಗಿರುತ್ತದೆ. ಯಾವುದೇ ಮದುವೆ ವರ್ಷಗಳು ಉರುಳಿದಂತೆಲ್ಲಾ ತನ್ನ ಮೊದಲಿನ ಮಾರ್ಧವತೆಯನ್ನು ಕಳೆದುಕೊಳ್ಳುವುದು ಸಹಜ. ಹಾಗಾಗಿ ಒಂದು ಗಂಡು-ಹೆಣ್ಣು ಮದುವೆ ಮಾಡಿಕೊಳ್ಳಬೇಕ್ಂದು ತೀರ್ಮಾನಿಸಿದಾಗ ಅವರು ತಮ್ಮೊಳಗೆ ವಿಮರ್ಶಿಸಿಕೊಳ್ಳಬೇಕಾದ ವಿಚಾರ ಏನೆಂದರೆ, ಇನ್ನು ಹತ್ತು ವರ್ಷಗಳು ಕಳೆದ ಮೇಲೆ ತಾವಿಬ್ಬರೂ ಇದೇ ರೀತಿ ಪರಸ್ಪರ ಎದುರುಬದುರು ಕೂತು ಹಂಚಿಕೊಳ್ಳಬಹುದಾದ ವಿಷಯಗಳು ಇವೆಯೇ ಎಂಬುದನ್ನು… ಇವೆ ಎಂದಾದರೆ ಆ ಮದುವೆ ಅರ್ಧ ಸಕ್ಶಸ್ ಆದ ಹಾಗೆಯೇ.

 ಯೌವನದಲ್ಲಿ ಎಲ್ಲರೂ ಪ್ರೇಮಿಗಳೇ…ಆದರೆ ಬರಬರುತ್ತಾ…..?!
ಯಾವ ಸಂಸಾರವೂ ಸುಖದ ಹಾಸಿಗೆಯಾಗಿರುವುದಿಲ್ಲ. ಕನಸುಗಳೇ ಬೇರೆ ವಾಸ್ತವವೇ ಬೇರೆ. ಅದಲ್ಲದೆ ಪ್ರೀತಿಸಿ ಮದುವೆಯಾದವರ ಮನಸ್ಥಿತಿ ಸಾಮಾನ್ಯ ದಂಪತಿಗಳಿಗಿಂತ ಭಿನ್ನವಾಗಿರುತ್ತೆ.. ಸ್ವತಂತ್ರವಾಗಿ ಯೋಚಿಸಬಲ್ಲ ಎರಡು ವ್ಯಕ್ತಿಗಳು ಅವರು. ಆದ ಕಾರಣದಿಂದಲೇ ಮದುವೆಯ ವಿಚಾರದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಲು ಹೊರಟಿದ್ದಾರೆ. ಆದರೂ ಒಂದೇ ಸೂರಿನಡಿ ಕಷ್ಟ-ಸುಖಗಳಲ್ಲಿ ಪರಸ್ಪರ ಆಸರೆಯಾಗುತ್ತಾ ಬದುಕುತ್ತೇವೆಂದು ನಿರ್ಧರಿಸಿದಾಗ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕಾಗುತ್ತೆ. ಅರೇಂಜ್ಡ್ ಮದುವೆಗಳಲ್ಲಿ ಈ ಹೊಂದಾಣಿಕೆ ಸುಲಭವಾಗುತ್ತೆ. ಯಾಕೆಂದರೆ ಇಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಪುರುಷಪ್ರದಾನ ಸಮಾಜದ ಮೌಲ್ಯಗಳೇ ಇವರ ದಾಂಪತ್ಯದ ಮೌಲ್ಯಗಳನ್ನು ಆಳುತ್ತಿರುತ್ತದೆ. ಅಂದರೆ ಅದು ’ಅತ್ತೆ ಮಾವರಿಗಂಜಿ, ಸುತ್ತೇಳು ನೆರೆಗಂಜಿ, ಮತ್ತೆ ಆಳುವ ದೊರೆಗಂಜಿ ಗಂಡನ ಮನೆಯಲ್ಲಿ ನೀ ಬಾಳು ಮಗಳೇ’ ಎಂಬುದಾಗಿತ್ತು. ಅಂದರೆ ಅಲ್ಲೊಂದು ಪೂರ್ವ ಸಿದ್ಧತೆ ಇರುತ್ತಿತ್ತು.

ಆದರೆ ಅಂತರ್ಜಾತೀಯ ಮತ್ತು ಅಂತರ್ಮತೀಯ ವಿವಾಹದಲ್ಲಿ ಇಬ್ಬರು ಸ್ವತಂತ್ರರು; ಎರಡು ಸರಳ ರೇಖೆಗಳು ಹೇಗೆ ಒಂದನ್ನೊಂದು ಸಂದಿಸುವುದಿಲ್ಲವೋ ಹಾಗೆಯೇ ಇಲ್ಲಿ ಕೂಡಾ ಆಗುವ ಸಾಧ್ಯತೆ ಇದೆ. ಆದರೆ ಪರಸ್ಪರ ಬಾಗುವಿಕೆಯಿಂದ, ಬಳುವಿಕೆಯಿಂದ ಇಬ್ಬರೂ ಕೆಲವು ಬಿಂದುಗಳಲ್ಲಿ ಒಂದಾಗಬೇಕು. ಆ ಬಿಂದುಗಳನ್ನು ಗುರುತಿಸಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ, ಅದನ್ನು ಸ್ಥಾಯಿಯಾಗಿ ಹಿಡಿದಿಟ್ಟುಕೊಳ್ಳುವ ಜಾಣ್ಮೆ ಆ ದಂಪತಿಗಳಲ್ಲಿರಬೇಕು ಅಷ್ಟೇ.

ಪ್ರೇಮ ವಿವಾಹಗಳು ಅಥವಾ ಯಾವುದೇ ದಾಂಪತ್ಯ ಯಶಸ್ಸನ್ನು ಕಾಣಬೇಕಾದರೆ ಇರಬೇಕಾದು ಒಂದೇ ಸೂತ್ರ. ಅದು ಪರಸ್ಪರ ನಂಬಿಕೆ. ಒಮ್ಮೊಮ್ಮೆ ಈ ನಂಬಿಕೆಯ ಕೋಟೆ ಯಾವ್ಯವುದೋ ಕಾರಣಗಳಿಂದಾಗಿ ಕುಸಿಯಬಹುದು. ಆಗ ಇಬ್ಬರು ಒಟ್ಟಾಗಿ ಕೂತು ಸಮಚಿತ್ತದಿಂದ ಚರ್ಚಿಸಿ ಇದಕ್ಕೇನು ಕಾರಣ ಅಂತ ಕಂಡುಕೊಳ್ಳಬಹುದು. ಒಂದು ವೇಳೆ ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗದೇ ಹೋದರೆ ಪರಸ್ಪರ ಗೌರವಗಳಿಂದ ಬೇರೆಯಾಗಬಹುದು. ಆದರೆ ಯಾವ ಕಾರಣಕ್ಕೂ ಅದನ್ನು ಹಾದಿ ರಂಪ ಬೀದಿರಂಪ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಬಾರದು. ಯಾಕೆಂದರೆ ಯಾವಾಗಲೂ ಪ್ರವಾಹದ ವಿರುದ್ಧ ಈಜಲು ಹೊರಟವರನ್ನು ಸಮಾಜ ಹದ್ದಿನ ಕಣ್ಣುಗಳಿಂದ ಗಮನಿಸುತ್ತಿರುತ್ತದೆ; ತಪ್ಪು ಮಾಡುವುದನ್ನೇ ಕಾಯುತ್ತಿರುತ್ತದೆ. ಅದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಅರೆಂಜ್ಡ್ ಮದುವೆಗಳು ಕೊಳೆತು ನಾರುತ್ತಾ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವುದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಎಲ್ಲೋ ಒಂದು ಪ್ರೇಮ ವಿವಾಹ ವಿಫಲವಾದರೆ ಅದನ್ನು ಕುಕ್ಕಿ ಕುಕ್ಕಿ ವ್ರಣವಾಗಿಸಲು ಅದು ಹೊಂಚು ಹಾಕಿ ಕೂತಿರುತ್ತದೆ.

ಅಂತರ್ಜಾತೀಯ ವಿವಾಹವಾದ ಹೆಣ್ಣುಮಕ್ಕಳು ಯಾವಾಗಲೂ ಎಚ್ಚರದಿಂದಿರಬೇಕು. ಯಾವ ಕಾರಣಕ್ಕೂ ತಮ್ಮ ನೌಕರಿಯನ್ನು ಕಳೆದುಕೊಳ್ಳಬಾರದು. ಉಪ ಉದ್ಯೋಗವಾದರೂ ಸರಿ ದುಡ್ಡು ಗಳಿಸಬಹುದಾದ ಯಾವುದೇ ನ್ಯಾಯಯುತ ದಾರಿಗಳದ್ದರೂ ಅದನ್ನು ಮುಚ್ಚಿಕೊಳ್ಳಬಾರದು. ಹೇಗೆ ಹೇಳುವುದು್? ನಾಳೆ ಹೀಗೆಯೇ ಆಗಬಹುದು ಎಂಬುದನ್ನು ಈಗ ಊಹಿಸಲು ಸಾಧ್ಯವಿಲ್ಲ ಅಲ್ಲವೇ..!  ಎಂತಹ ಕಷ್ಟ ಬಂದರೂ ಎದುರಿಸಬಲ್ಲೆ ಎಂಬ  ದೈರ್ಯವನ್ನು ಒಳಗಿಂದೊಳಗೆ ತುಂಬಿಕೊಳ್ಳಬೇಕು.’ ನಿನಗೆ ನೀನೇ ಗೆಳೆಯ’ ಎಂಬ ಮಾತನ್ನು ಆಗಾಗ ಮೆಲುಕು ಹಾಕುತ್ತಿರಬೇಕು. ಏನನ್ನು ನಾವು ಸದಾ ’ಯೋಚಿಸುತ್ತೆವೆಯೋ” ಅದು ವಾಸ್ತವದಲ್ಲಿ”ಆಗುತ್ತದೆ’. ಅರ್ಥಿಕ ಸ್ವಾತಂತ್ರ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಇದ್ದರೆ ಜಗತ್ತನ್ನೇ ಎದುರಿಸುವ  ಎದೆಗಾರಿಕೆ ಒಳಗಿಂದೊಳಗೆ ಪುಟಿದು ಬರುತ್ತದೆ. ಇದರ ಬಗ್ಗೆ ಹುಡುಗಿಯರು ವಿಶೇಷ ಗಮನ ಕೊಡಬೇಕು. ತಮ್ಮದೇ ಆದ ಪುಟ್ಟ ಸ್ಪೇಸ್ [ಖಾಸಾಗಿ ಒಳಜಗತ್ತು] ಅನ್ನು ನಿರ್ಮಿಸಿಕೊಳ್ಳಬೇಕು. ಅದು ಹವ್ಯಾಸದ ರೂಪದಲ್ಲಿದ್ದರೆ ಇನ್ನೂ ಚೆನ್ನ.

ಹೆತ್ತವರ ವಿರೋಧಿಸಿ ಮದುವೆಯಾದವರು ಕುಗ್ಗಿ ಹೋಗುವ ಕೆಲವು ಸಂದರ್ಭಗಳು ಬದುಕಿನಲ್ಲಿ ಬಂದೆ ಬರುತ್ತವೆ. ಅದು ಹುಡುಗಿ ತಾಯಿಯಾಗುವ ಸಂದರ್ಭ ಬಂದಾಗ, ತಮ್ಮ ತಮ್ಮ ಮನೆಗಳಲ್ಲಿ ಶುಭ ಕಾರ್ಯಗಳು ನಡೆದಾಗ ಅಥವಾ ಆಕಸ್ಮಿಕವಾಗಿ ಹತ್ತಿರದ ಬಂಧುಗಳು ತೀರಿಕೊಂಡಾಗ, ತೀವ್ರ ಅರ್ಥಿಕ ಸಂಕಷ್ಟ ಎದುರಾದಾಗ- ಇಂಥ ಸಂದರ್ಭಗಳಲ್ಲಿ ಮಾನಸಿಕವಾಗಿ ಕುಸಿದು ಹೋಗುವ ಸಂದರ್ಭಗಳು ಎದುರಾಗಬಹುದು. ಇಂತಹ ಸಂದರ್ಭಗಳಲೆಲ್ಲಾ- ಧೈರ್ಯಂ ಸರ್ವತ್ರ ಸಾಧನಂ.

ಇಲ್ಲಿ ನನ್ನ ಅನುಭವವೊಂದನ್ನು ನಿಮಗೆ ಹೇಳಲಿಚ್ಛಿಸುತ್ತೇನೆ.  ಹೆರಿಗೆಗೆ ಇನ್ನೇನು ಒಂದು ವಾರವಿದೆ. ಎಂದಿನಂತೆ ಚೆಕ್ ಅಪ್ ಗೆಂದು ಗೌಸಿಯಾ ಆಸ್ಪತ್ರ್ಗೆ ಹೋದೆ. ಅಲ್ಲಿ ನನ್ನ ಡಾಕ್ಟರ್ ಎಚ್.ಗಿರಿಜಮ್ಮ ಇದ್ದರು. ನನ್ನನ್ನು ಚೆಕ್ ಮಾಡಿದವರೇ , ಎಂತಹ ಹುಡುಗಿಯೇ ನೀನು.. ರಕ್ತಸ್ರಾವ ಆರಂಬ ಆಗಿದೆ..  ನಿನಗೆ ಗೊತ್ತೇ ಆಗ್ಲಿಲ್ವಾ? ಹೊಟ್ಟೆನೋವು ಬರ್ತಿಲ್ವಾ..? ಎಂದು ಗದರುತ್ತಾ ಕೈಗಂಟಿದ ರಕ್ತ ತೋರಿಸಿದರು. ನನಗೆ ಗಾಬರಿಯೇನೂ ಆಗಲಿಲ್ಲ. ಒಂದು ಅಟೋ ಮಾಡಿಕೊಂಡು ಮನೆಗೆ ಬಂದೆ. ಒಂದು ತಿಂಗಳ ಹಿಂದೆಯೇ ನನಗೆ ಮತ್ತು ನವಜಾತ ಶಿಶುವಿಗೆ ಬೇಕಾದ ಬಟ್ಟೆ ಇನ್ನಿತರ ವಸ್ತುಗಳನ್ನು ಒಂದು ದೊಡ್ಡ ಬ್ಯಾಗಿನಲ್ಲಿ ತುಂಬಿಸಿ ಇಟ್ಟಿದ್ದೆ. ಅದನ್ನೆಲ್ಲ ಸರಿಯಾಗಿದೆಯೋ ಎಂದು ನೋಡಿ ನಂತರ ನಮ್ಮ ಮನೆ ಪಕ್ಕದ ಪಬ್ಲಿಕ್ ತೆಲಿಪೋನ್ ಬೂತಿನಿಂದ ನನ್ನ ಪತಿಗೆ ಪೋನ್ ಮಾಡಿದೆ. ನನ್ನ ಪತಿ ಆಗ ಕನ್ನಡ ಪ್ರಭಾದಲ್ಲಿ ವರದಿಗಾರಗಿದ್ದರು. ಆಗ ಮೊಬೈಲ್ ಪೋನ್ ಬಂದಿರಲಿಲ್ಲ. ನಮ್ಮನೆಯಲ್ಲಿ ಪೋನ್ ಇರಲಿಲ್ಲ.  ಅವರು ಅವರ ಗೆಳೆಯರೊಬ್ಬರ ಕಾರಿನಲ್ಲಿ ಮನೆಗೆ ಬಂದು ನನ್ನನ್ನು ಆಸ್ಪತ್ರ್ಗೆ ಕರೆದುಕೊಂದು ಹೋದರು. ಆಸ್ಪತ್ರೆಯಲ್ಲಿ ಗಿರಿಜಮ್ಮ ನನ್ನನ್ನು ಸ್ವಂತ ಮಗಳಂತೆ ನೋಡಿಕೊಂಡರು. ಅವರ ಮನೆಯಿಂದಲೇ ಊಟ ತಂದುಕೊಡುತ್ತಿದ್ದರು ಮೂರನೆಯ ದಿನ ಆಸ್ಪತೆಯಿಂದ ಮನೆಗೆ ಬಂದವಳೇ, ನಾನೇ ಅಡುಗೆ ಮಾಡಿದೆ. ಮಗುವಿಗೆ ಮೊದಲ ಸ್ನಾನ ಮಾಡಿಸಿದೆ.  ಅವಳ ಮತ್ತು ನನ್ನ ಬಟ್ಟೆ ತೊಳೆದೆ. ಅನಂತರ ನಾನು ಸ್ನಾನ ಮಾಡಿ ಊಟ ಮಾಡಿ ಮಲಗಿದೆ.
ನನ್ನ ಪತಿಯೊಬ್ಬ ಪತ್ರಕರ್ತ. ಹಾಗಾಗಿ ಅವನಿಂದ ನಾನು ದೈಹಿಕವಾದ ಯಾವ ಸಹಾಯವನ್ನು ನಿರೀಕ್ಷಿಸಿರಲಿಲ್ಲ.. ಆದರೆ ಆತನ ನೈತಿಕ ಬೆಂಬಲವಿಲ್ಲದೆ ನನಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಸ್ಪಟಿಕದಷ್ಟೇ ಸತ್ಯ.  ಒಂದು ಕಠಿಣವಾದ ಪರಿಸ್ಥಿತಿಯನ್ನು ಹೇಗೆ ಸುಲಲಿತವಾಗಿ, ಸಮರ್ಥವಾಗಿ ಎದುರಿಸಬೇಕೆಂಬುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ. ಅದು ನನ್ನ ಮಕ್ಕಳನ್ನು ಬೆಳೆಸುವುದರಲ್ಲಿ ನಾನು ಕಂಡುಕೊಂಡ ಸತ್ಯ. ನನ್ನ ತಾಯ್ತನ ನನ್ನನ್ನು ಮಾಗಿಸಿದೆ. ಬೇರೆಯವರು ಎಷ್ಟೆ ಸಲಹೆ-ಸೂಚನೆ ಕೊಟ್ಟರೂ ಅದು ಹೊರಗಿನಿಂದ ಬಂದುದಾಗಿರುತ್ತದೆ. ಸ್ವಾನುಭವವೇ ಎಲ್ಲಕ್ಕ್ಂತ ಶ್ರೇಷ್ಟವಾದುದು
.
ಜಾತಿಪದ್ಧತಿ ವಿಜೃಂಬಿಸುವುದು ಎರಡು ಸಂದರ್ಭಗಳಲ್ಲಿ ಒಂದು ಧಾರ್ಮಿಕ ಸಮಾರಂಭಗಳಲ್ಲಿ. ಇನ್ನೊಂದು ಹುಟ್ಟು-ಸಾವು, ಮದುವೆ-ಮುಂಜಿ ಮುಂತಾದ ಕೌಟುಂಬಿಕ ಸಮಾರಂಭಗಳಲ್ಲಿ. ಹಗಾಗಿ ಅಂತಹ ಸಂದರ್ಭಗಳಲ್ಲಿ ಭಾಗವಹಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳಬೇಕು.  ಅಲ್ಲದೆ ಇಂತಹ ಸಂದರ್ಭಗಳಲ್ಲೇ ನಮ್ಮ  ದುಡ್ಡು, ಚಿನ್ನ,ಅಂತಸ್ತಿನ ಪ್ರದರ್ಶನ ಆಗುವುದು. ಇಂತಹ ಸಮಾರಂಭಗಳಲ್ಲಿ ಭಾಗವಹಿಸದ ಕಾರಣದಿಂದಾಗಿಯೋ ಏನೋ ನನ್ನಲ್ಲಿ ಬಂಗಾರದ ಒಡವೆಗಳಿಲ್ಲ; ರೇಷ್ಮೆ ಸೀರೆಗಳಿಲ್ಲ. ನನ್ನ ಗಂಡ ಇದೂವರೆಗೂ ನನಗೆ ಒಂದು ಗ್ರಾಂ ಚಿನ್ನವನ್ನೂ ತಂದು ಕೊಟ್ಟಿಲ್ಲ; ನಾನೂ ಖರೀದಿ ಮಾಡಿಲ್ಲ!

ಪ್ರೇಮ ವಿವಾಹವಾಗುವ ಹೆಚ್ಚಿನ ಹುಡುಗ-ಹುಡುಗಿಯರು ಆರ್ತಿಕವಾಗಿಯೂ ಸ್ವತಂತ್ರರಿರುತ್ತಾರೆ.ಹಾಗಾಗಿ  ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲವೆಂದಾದರೆ ದೈವೊರ್ಸ್ ಪಡೆದುಕೊಳ್ಳಬಹುದು. ಅಥವಾ ಒಂದೇ ಮನೆಯಲ್ಲಿದ್ದುಕೊಂಡು ಪ್ಯಾರಲಾಲ್ ಬದುಕನ್ನು ಬದುಕಬಹುದು. ಅಂದರೆ ಎರಡು ಅಪರಿಚಿತ ವ್ಯಕ್ತಿಗಳು ಒಂದೇ ಮನೆಯಲ್ಲಿದ್ದುಕೊಂಡು ಸ್ವತಂತ್ರವಾಗಿ ಬದುಕಿದಂತೆ ಬದುಕಬಹುದು. ಈ ರೀತಿಯ ಬದುಕು ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸಾಮಾನ್ಯ ಅನಿಸಿಕೊಳ್ಳುತ್ತಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿನ ನಡುವೆ ಏರ್ಪಡುವ ಸಂಬಂಧವಲ್ಲ. ಅದು ಎರಡು ಕುಟುಂಬಗಳ ನಡುವೆ ಏರ್ಪಡುವ ಬಾಂಧವ್ಯ..ಹಾಗಾಗಿ ಹೆತ್ತವರನ್ನು ವಿರೋಧಿಸಿ, ಅವರ ಇಚ್ಛೆಗೆ ವಿರೋಧವಾಗಿ ಮದುವೆಯಾದ ದಂಪತಿಗಳು ಕಾಲಾಂತರದಲ್ಲಿ ಸಾಧ್ಯವಾದರೆ ತಮ್ಮ ತಮ್ಮ ಹೆತ್ತವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎರಡೂ ಕುಟುಂಬಗಳ ಮಧ್ಯೆ ಬಂದುತ್ವವನ್ನು ಬೆಸೆಯುವ ಪ್ರಯತ್ನ ಮಾಡಬೇಕು.. ಎಷ್ಟದರೂ ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಪರಸ್ಪರ ಪ್ರೀತಿ, ವಿಶ್ವಾಸ. ನಂಬಿಕೆಗಳು ತಾನೇ? ನಮ್ಮ ಪ್ರಯತ್ನ ಯಾವಾಗಲೂ ಅದರೆಡೆಗೇ ಸಾಗುತ್ತಿರಬೇಕು.

[ ಈ ವಾರದ ’ಅಗ್ನಿ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

Monday, July 2, 2012

’ ಬಳಸಲ್ಪಡುವ’ ಮಹಿಳೆಯರು.



ಜೂನ್ ಮೊದಲವಾರದಲ್ಲಿ ಆರತಿರಾವ್ ಎಂಬ ಮಹಿಳೆ ಕನ್ನಡದ ಸುದ್ದಿವಾಹಿನಿಯೊಂದರ ಮುಂದೆ ಅರ್ಧ ಮುಖ ಮುಚ್ಚಿಕೊಂಡ ಅವಸ್ಥೆಯಲ್ಲಿ ಪ್ರತ್ಯಕ್ಷಳಾಗಿ, ನಿತ್ಯಾನಂದನೆಂಬ ಸ್ವಾಮೀಜಿಯೊಬ್ಬ ತನ್ನಿಚ್ಛಿಗೆ ವಿರುದ್ಧವಾಗಿ ಆರು ವರ್ಷಗಳ ಕಾಲ ಲೈಂಗಿಕ ಅತ್ಯಾಚಾರ ನಡೆಸಿದ್ದಾನೆಂದು ಸುದೀರ್ಘವಾಗಿ ಹೇಳಿಕೊಂಡಳು. ಮುಂದೆ ಅದು ಇಲ್ಲಿಯವರೆಗೆ ಸತತ ಒಂದು ತಿಂಗಳ ಕಾಲ ಸುದ್ದಿವಾಹಿನಿಗಳ ಬಕಾಸುರ ಹೊಟ್ಟೆಗೆ ಗ್ರಾಸವಾಗುತ್ತಲಿದೆ.
ಆಕೆಯ ಆರೋಪಕ್ಕೆ ಸಿಕ್ಕುತ್ತಿದ್ದ ವ್ಯಾಪಕ ಪ್ರಚಾರ ನನಗೆ ಸೋಜಿಗವೆನಿಸಿ ಜೂನ್ ಏಳರಂದು ನನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ನಾನೊಂದು ಸ್ಟೇಟಸ್ ಹಾಕಿದೆ; ಅಂದರೆ ಬರೆದೆ. ಅದು ಹೀಗಿತ್ತು;
‘ನನಗೊಂದು ಅನುಮಾನವಿದೆ;
ಹಕ್ಕಿನಿಂದ ಗಂಡ, ಭಾವಬಂಧನದಿಂದ ಪ್ರೇಮಿ-ಇವರಿಬ್ಬರಿಂದಲ್ಲದೆ ಇನ್ಯಾರಿಂದಲಾದರೂ ಒಬ್ಬ ಪ್ರಬುದ್ಧ ಮಹಿಳೆಯನ್ನು ನಿರಂತರವಾಗಿ ಆರು ವರ್ಷಗಳ ಕಾಲ ಲೈಂಗಿಕ ಶೋಷಣೆಗೆ ಒಳಪಡಿಸಲು ಸಾಧ್ಯವೇ?’
ಇದನ್ನು ಓದಿದ ಐವತ್ತಮೂರು ಜನ ಓದುಗರು ಅಲ್ಲಿ ನನ್ನ ಹೇಳಿಕೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಇಲ್ಲೊಂದು ಚಿಕ್ಕ ಟಿಪ್ಪಣಿಯನ್ನು ನಾನು ನಿಮಗೆ ನೀಡಬೇಕು- ಪೇಸ್ ಬುಕ್ ಎನ್ನುವುದು ಕಂಪ್ಯೂಟರ್ ಎಂಬ ಪೆಟ್ಟಿಗೆಯಲ್ಲಿರುವ ನನ್ನ  ಒಂದು ಇಂಟರ್ ನೆಟ್ ಖಾತೆ. ನೀವು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯಲ್ಲಿ ಹಣ ಹಾಕಿದ ಹಾಗೆ ನನ್ನ ಮನಸ್ಸಿನಲ್ಲಿ ಬಂದ ಭಾವನೆಗಳನ್ನು, ವಿಚಾರಗಳನ್ನು ನಾನೀ ಖಾತೆಗೆ ಹಾಕುತ್ತೇನೆ. ಅಲ್ಲಿ ನನ್ನ ಹಾಗೆ ಲಕ್ಷಾಂತರ ಖಾತೆದಾರಿರುತ್ತಾರೆ. ಅವರು ತಕ್ಷಣ ನಾನು ಬರೆದದ್ದನ್ನು ಓದಿ ಪ್ರತಿಕ್ರಿಯೆ ಹಾಕುತ್ತಾರೆ. ಅದು ನೇರಾನೇರ ಸಂಬಂಧ. ಆದರೆ ಈಗ ಇದನ್ನು ಓದುತ್ತಿರುವ ನಿಮ್ಮ ಪ್ರತಿಕ್ರಿಯೆಗಳು ಏನಿರಬಹುದೆಂದು ನನಗೆ ತಿಳಿಯುವುದಿಲ್ಲ.

ನನ್ನ ಸ್ಟೇಟಸ್ ಗೆ ಬಂದ ಹೆಚ್ಚಿನ ಅಭಿಪ್ರಾಯಗಳು ಒಂದೇ ಆಗಿದ್ದವು. ಅದೇನೆಂದರೆ, ಮಹಿಳೆಯ ಸಹಕಾರವಿಲ್ಲದೆ ಅತ್ಯಾಚಾರ ಅಥವಾ ಲೈಂಗಿಕ ಶೋಷಣೆ ನಡೆಯಲು ಸಾಧ್ಯವಿಲ್ಲ ಎಂದಾಗಿತ್ತು. ಅದರಲ್ಲಿ ತುಂಬಾ ಜನರು ಒಪ್ಪಿಕೊಂಡ ಕಾಮೆಂಟ್ ಎಂದರೆ ರಾಘವೇಂದ್ರ ಜೋಷಿ ಎಂಬವರದ್ದು ಅವರು ಹೀಗೆ ಬರೆದಿದ್ದರು.”ಅದು ಹೇಗೆ ಹೇಳಲು ಸಾಧ್ಯ? ನಾವು ವರ್ತುಲದ ಹೊರಗಿರುವವರು. ಒಳಗಿರುವವರ ಬವಣೆ ನಮ್ಮ ಅರಿವಿಗೂ ನಿಲುಕದು. ಹೀಗಾಗಿ ’ಇದು ಸಾಧ್ಯ’ ಅಥವಾ ’ಸಾಧ್ಯವಿಲ್ಲ’ ಅಂತ ಹೇಳಲಾಗದು. ಅನುಭವಿಸಿದವರ ಕಷ್ಟವನ್ನು ಯಾವ ಪದಗಳೂ ಕಟ್ಟಿಕೊಡಲಾಗದು ಅಲ್ವಾ?’
ವೆಂಕಟೇಶ್ ಲಕ್ಷ್ಮಿ ಎಂಬವರ ಅನುಭವದ ಮಾತುಗಳು ಹೀಗಿದ್ದವು; ’ನನಗೆ ಅನುಭವ ಆಗಿದೆ. ನನ್ನ ಮದುವೆ ಆಗಿ ನಾಲ್ಕೂವರೆ ವರ್ಷ ಆಗಿದೆ. ಈ ಅನುಭವದಿಂದ ಹೇಳುತ್ತಿದ್ದೇನೆ, ಸಾಧ್ಯವಿಲ್ಲ.’


ಕೃಷ್ಣಮೂರ್ತಿ ಎನ್ನುವವರ ಸ್ವಾರಸ್ಯವಾಗಿ ಹೀಗೆ ಹೇಳುತ್ತಾರೆ; ’ ವರ್ಷಕ್ಕೊಂದು ಸಲ ಬಿಯರ್ ಕುಡಿದುಕೊಂಡು ಹೋದ್ರೆ ನನ್ನ ಹೆಂಡತಿ ಉಗಿದು ಉಪ್ಪಿನಕಾಯಿ ಹಾಕಿ, ದೇವರ ಮೇಲೆ ಪ್ರಮಾಣ ಮಾಡ್ಸಿ ಹಾಲಿನಲ್ಲಿ ಮಲಗಿಸ್ತಾಳೆ ಅಂತಾದ್ರಲ್ಲಿ….’
’ಮಹಿಳೆ ಪ್ರಬುದ್ಧಳಾಗಿದ್ದಾಳೆ ದೀರ್ಘಕಾಲದ ಲೈಂಗಿಕ ಶೋಷಣೆ ಸಾಧ್ಯವಿಲ್ಲ’ ಎಂಬುದು ಬಸವರಾಜ್ ಸುಳಿಭಾವಿಯವರ ದೃಢ ನಿಲುವು.
ಶ್ಯಾಮ್ ಶೆಟ್ಟಿ ಸಂಶಯ ವ್ಯಕ್ತ ಪಡಿಸುವುದು ಹೀಗೆ; ’ ಹಣ ಹರಿವಾಗ ಅದು ಶೋಷಣೆ ಆಗಿರದೆ ಕಾಮ ಆಗಿ, ಕಡೆಗೆ ಹಣ ಹರಿಯುವಿಕೆ ನಿಂತಾಗ ಅದು ಸೆಕ್ಷುವಲ್ ಹೆರೆಸ್ ಮೆಂಟ್ ಆಗುವ ಸಾಧ್ಯತೆ ಇದೆ.’ ಜಗದೀಶ್ ಪುಟ್ಟುಸ್ವಾಮಿ ಎನ್ನುವವರು ಶ್ಯಾಮ್ ಸೆಟ್ಟಿಯ ಅನುಮಾನವನ್ನು ಪುಷ್ಟಿಕರೀಸುತ್ತಾ ಹೇಳುವುದು ಹೀಗೆ, ’ಆ ಹುಡುಗಿ ಅಷ್ಟೊಂದು ಹೇಳಿಕೊಳ್ಳುತ್ತಾಳೆ ಅಂದ್ರೆ ಏನೋ ಷಡ್ಯಂತರ ಇದೆ.’
ಕೃಷ್ಣ ಭಟ್ ಈ ಪ್ರಕರಣಕ್ಕೊಂದು ಮನಶಾಸ್ತ್ರೀಯ ಆಯಾಮವನ್ನು ಕೊಡುವುದು ಹೀಗೆ; ’ಸಂಪೂರ್ಣ ಸಮರ್ಪಣೆ ಎಂಬ ಧೈವಿಕತೆಯ ಹೆಸರಿನ ಹೊಸ ಡಂಭಾಚಾರದ ಮೂಲಕ, ನಂಬಿಕೆಯ ಮೂಲಕ ಇದು ಖಂಡಿತವಾಗಿಯೂ ಸಾಧ್ಯವಿದೆ. ಕೆಲವು ಹೆಂಗಸರಿಗೆ ಕೆಲವು ವ್ಯಕ್ತಿ, ವ್ಯಕ್ತಿತ್ವಗಳ ಮೇಲೆ ಅಪಾರವಾದ ನಂಬಿಕೆ ಇರುತ್ತದೆ[ ಹುಟ್ಟಿಸುತ್ತಾರೆ] ಅಂಥವರಿಗೆ ಎಲ್ಲವನ್ನೂ ಸಮರ್ಪಿಸಿಕೊಳ್ಳಲು ಸಿದ್ಧರಿರುತ್ತಾರೆ. ಇದೊಂಥರಾ ಸೈಕಲಾಜಿಕಲ್ ಕೇಸ್. ಕೆಲವರು ನೊಂದು ಇನ್ನು ಕೆಲವರು ಅತ್ಯುತ್ಸಾಹದಿಂದ ಈ ಬಲೆಗೆ ಬೀಳುತ್ತಾರೆ.’

ನಾನು ಎತ್ತಿದ ಸಂಶಯವನ್ನು ಮತ್ತಷ್ಟು ಪುಷ್ಟೀಕರಿಸಿದ್ದು ಉಮೇಶ್ ದೇಸಾಯಿ ಎಂಬವರು ಹಾಕಿದ ಈ ಕಾಮೆಂಟ್; ’ಯಾವುದೇ ವ್ಯಕ್ತಿ ಅದು ಅಪ್ಪ/ ಗಂಡ/ಗೆಳೆಯ ಯಾರೇ ಆಗಿರಲಿ ಒಂದು ಹೆಣ್ಣನ್ನು ಆರು ವರ್ಷಗಳ ಕಾಲ ಹೀಗೆ ಶೋಷಿಸಲಾಗದು….ಅವಳ ಒಪ್ಪಿಗೆ ಇಲ್ಲದೆ…ಇದು ಮಾಡರ್ನ್ ಕಾಲ. ಆರತಿ ಪ್ರಭು ಆ ದೇವಮಾನವನನ್ನು ನಂಬಿದ್ದು…ಇಷ್ಟೆಲ್ಲಾ ದಿನ ಸಹಿಸಿಕೊಂಡಿದ್ದು ಈಗ ಮುಸುಕು ಧರಿಸಿ ಟೀವಿಯ ಮುಂದೆ ಪ್ರತ್ಯಕ್ಷವಾಗುವುದು..ಎಲ್ಲಾ ಗೋಜಲು…ಈ ಚಾನಲ್ ಅದರಲ್ಲೂ ವಿಭಟ್ಟರ ಚಾನಲ್ ಅನ್ನ್ ನಂಬಲಾಗದು..’
ಇಲ್ಲಿ ನನಗೆ ಪುರುಷರ ಅನುಭವ ಮತ್ತು ಯೋಚನೆ ಬೇಕಾದ ಕಾರಣ ಅವರ ಕಾಮೆಂಟ್ಗಳನ್ನಷ್ಟೆ ನಮೂದಿಸಲಾಗಿದೆ.

 ಲೈಂಗಿಕತೆಗೆ ಸಂಬಂಧಪಟ್ಟಂತೆ ವೈದ್ಯಶಾಸ್ತ್ರದಲ್ಲಿ ಎರಡು ಪದಗಳಿವೆ; ಒಂದು Vaginismus ಮತ್ತು Vaginal secretion. ಒಂದು ಹೆಣ್ಣು ಲೈಂಗಿಕ ಕ್ರಿಯೆಗೆ ಸಿದ್ದಳಾಗಬೇಕಾದರೆ ಆಕೆಯ ಜನನೇಂದ್ರಿಯದ ಸುತ್ತ ಇರುವ ಸ್ನಾಯುಗಳು ಸಡಿಲವಾಗಬೇಕು ಮತ್ತು ಜನನೇಂದಿಯ ತೇವಗೊಳ್ಳಬೇಕು. ಆದರೆ ಕೆಲವು ಮಹಿಳೆಯರಲ್ಲಿ ಇದು ಸಾಧ್ಯವಾಗುವುದಿಲ್ಲ.[ ಅದಕ್ಕೆ ಹಲವು ಕಾರಣಗಳಿರುತ್ತವೆ. ಮತ್ತು ಅದಕ್ಕೆ ಪರಿಹಾರವೂ ಇದೆ. ಅದಿಲ್ಲಿ ಬೇಡ.]  ಇವೆರಡೂ ದೈಹಿಕವಾದ ರಾಸಾಯನಿಕ ಬದಲಾವಣೆಗಳಾಗದೆ ಮಿಲನ ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಇದರ ಅರಿಲ್ಲದೆ ಗಂಡಸು ಮುಂದುವರಿದರೆ ಅದು ಬಲವಂತದ ಕ್ರಿಯೆಯಾಗುತ್ತದೆ. ಮತ್ತು ಅದು ಬಾರಿ ಬಾರಿಗೂ ಆಗಲಿ ಸಾಧ್ಯವಿಲ್ಲ.

ಅಂದರೆ ನಾನು ಹೇಳಬೇಕೆಂದಿದ್ದು ಇಷ್ಟೇ. ಸಂಗಾತಿಯ ಸಹಕಾರವಿಲ್ಲದೆ ಲೈಂಗಿಕ ಕ್ರಿಯೆ ಸಾಧ್ಯವಿಲ್ಲ. ಅಂದರೆ ಸಾಮೂಹಿಕ ಅತ್ಯಾಚಾರ ಹೊರತು ಪಡಿಸಿ ಒಬ್ಬ ಗಂಡಸಿನಿಂದ ಒಂದು ಹೆಣ್ಣಿನ ಮೇಲೆ ಹೇಳಿದ ಎರಡು ಸಂದರ್ಭಗಳನ್ನು ಹೊರತು ಪಡಿಸಿ [ಹಕ್ಕಿನಿಂದ ಗಂಡ, ಭಾವಬಂಧನದಿಂದ ಪ್ರೇಮಿ] ಲೈಂಗಿಕ ಅತ್ಯಾಚಾರವಾಗಲು ಸಾಧ್ಯವಿಲ್ಲ. ಯಾಕೆಂದರೆ ಆಕೆ ಈ ಕ್ರಿಯೆಯನ್ನು ತಡೆಯಲೇ ಬೇಕೆಂದು  ಮಾನಸಿಕವಾಗಿ ಸಿದ್ಧಳಾಗಿದ್ದೇ ಹೌದಾದರೆ, ಅದಕ್ಕೆ ಬೇಕಾದ ದೈಹಿಕ ಸಾಮರ್ತ್ಯವೂ ಆಕೆಯಲ್ಲಿಯೇ ಇದೆ. ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಆ ವಿವೇಚನಾರಹಿತ ಮನುಷ್ಯನ ಬಯಕೆಯ ಜ್ವರವನ್ನು ಇಳಿಸುವುದು ಹೇಗೆಂದು ಆ ಕ್ಷಣದಲ್ಲಿ ಆಕೆ ತೆಗೆದುಕೊಳ್ಳಬೇಕಾದ ನಿರ್ಧಾರವೇ ಹೊರತು ಅದಕ್ಕೆ ಪೂರ್ವ ಸಿದ್ಧತೆಯ ಅಗತ್ಯವಿಲ್ಲ. ಆದರೆ ಲೈಂಗಿಕ ಸುಖವನ್ನು ಬ್ರಹ್ಮಾನಂದಕ್ಕೆ ಹೋಲಿಸುತ್ತಾರೆ. ಹಾಗಾಗಿಯೇ ಒಂದು ಹಂತದಲ್ಲಿ ಪ್ರತಿಭಟಿಸುವ ಹೆಣ್ಣೂ ಕೂಡಾ ಆ ದಿವ್ಯ ಸುಖಕ್ಕೆ ಶರಣಾಗುತ್ತಾಳೆ ಎಂದು ಲೈಂಗಿಕ ತಜ್ನರು ಹೇಳುತ್ತಾರೆ. ಹಾಗಾಗಿಯೇ ಅತ್ಯಾಚಾರ ಪ್ರಕರಣಗಳ ವಿಚಾರಣೆ ಸಂದರ್ಭಗಳಲ್ಲಿ ನ್ಯಾಯಾಲಯಗಳು ಒಪ್ಪಿಗೆಯ ಸೆಕ್ಸ್ ಮತ್ತು ಅತ್ಯಾಚಾರಗಳ ನಡುವಿನ ಗೆರೆಯನ್ನು ಗುರುತಿಸುವಲ್ಲಿ ತಿಣುಕಾಡಬೇಕಾಗುತ್ತದೆ. ಆರತಿರಾವ್ ಪ್ರಕರಣದಲ್ಲಿ  ನಿತ್ಯಾನಂದ ಆಕೆಯ ಗಂಡನಲ್ಲ. ಪ್ರೇಮಿಯಾಗಿರಬಹುದೇ ? ಅದನ್ನು ಆಕೆಯೇ ಹೇಳಬೇಕು.  ಆಕೆ ತಾನು ಹಿಡನ್ ಕ್ಯಾಮರಾ ಇಟ್ಟು ಆತ ಇನ್ನೊಬ್ಬ ಮಹಿಳೆಯೊಂದಿಗಿರುವ ದೃಶ್ಯಗಳನ್ನು ಚಿತ್ರಿಕರಿಸಿಕೊಂಡಿದ್ದೆ ಎಂದು ಹೇಳಿಕೆ ನೀಡಿದಳಲ್ಲಾ, ಇಲ್ಲಿ  ಸ್ತ್ರೀಸಹಜವಾದ ಸವತಿ ಮಾತ್ಸರ್ಯ ಕೆಲಸ ಮಾಡಿರಬಹುದೇ? ಯೋಚಿಸಬೇಕಾದ ವಿಷಯ.

ಇದೆಲ್ಲವನ್ನೂ ಒತ್ತಟ್ಟಿಗಿಟ್ಟು, ಆರತಿರಾವ್ ಎಂಬ ವಿದ್ಯಾವಂತ ಮಹಿಳೆಯ ಒಂದು ತಿಂಗಳ ಪ್ರಹಸನವನ್ನು ನೋಡಿದಾಗ ನಾನು ಯೋಚಿಸಿದ್ದು;ರಾಜಾಕಾರಣದಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯಕ್ತಿಯೊಬ್ಬರನ್ನು ಹಣೆಯಲು ಮಹಿಳೆಯರನ್ನು ಹೇಗೆಲ್ಲಾ ’ಬಳಸಿಕೊಳ್ಳು’ತ್ತಿದ್ದಾರೆ ಎಂಬುದನ್ನು…... ಸ್ತ್ರೀಯರನ್ನು ಸದಾ ತಾಯಿಯೆಂದು ಕರೆಯುತ್ತಾ ಅವಳನ್ನು ಭೂದೇವಿಯೊಡನೆ ಸಮೀಕರಿಸುತ್ತಾ, ಆ ಮೌಲ್ಯವನ್ನೇ ಮುಂದಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲೆತ್ನಿಸುವ ಭಾರತೀಯ ಜನತಾ ಪಾರ್ಟಿ… ಪಕ್ಷ ವಿರೋಧಿಗಳ ಚಾರಿತ್ರ್ಯವಧೆಗೆ ಆಕೆಯನ್ನೇ ದಾಳವಾಗಿ ಉಪಯೋಗಿಸುತ್ತ್ತಿರುವ ಪರಿಗೆ ಹೇಸಿಗೆಯಾಗುತ್ತಿದೆ.

ನಮ್ಮ ಕರ್ನಾಟಕದಲ್ಲಿ ನಡೆದ ಹಾಲಪ್ಪ ಪ್ರಕರಣವನ್ನೇ ನೋಡಿ. ಅಲ್ಲಿ ಲೈಂಗಿಕ ಅತ್ಯಾಚಾರ ನಡೆದಿತ್ತೇ ಇಲ್ಲವೇ ಎಂಬುದನ್ನು ಹ್ಯಾಗೆ ಹೇಳಲು ಸಾಧ್ಯ? ಆದರೆ ಹಾಲಪ್ಪನ ಚಾರಿತ್ರ್ಯ ವಧೆಯಾದದ್ದು ಸತ್ಯ. ಮತ್ತು ಅವರು ಸಚಿವ ಪದವಿ ಕಳೆದುಕೊಂಡದ್ದೂ ಸತ್ಯ. ಅದನ್ನು ’ರಾಸಲೀಲೆ’ ಎಂದು ವೈಭವಿಕರಿಸಿದ್ದು ಎಷ್ಟು ಸರಿ? ಕೃಷ್ಣ ಹಲವು ಗೋಪಿಕೆಯರೊಡನೆ ಕಣ್ಣುಮುಚ್ಚಾಲೆಯಾಡಿದರೆ ಅದು ರಾಸಲೀಲೆ. ಅಲ್ಲಿದ್ದುದು ಒಬ್ಬಳೇ ಮಹಿಳೆ!.
ರಾಜಸ್ತಾನದಲ್ಲಿ ನಡೆದ ನರ್ಸ್ ಭಂವರಿ ದೇವಿ ಹತ್ಯೆ ಪ್ರಕರಣವನ್ನು ಗಮನಿಸಿ. ಈ ಪ್ರಕರಣದಲ್ಲಿ ಸಚಿವ ಮಹಿಪಾಲ್ ಮದೇರಣ ತನ್ನ ಸಚಿವ ಸ್ಥಾನವನ್ನು ಕಳೆದುಕೊಂಡರಲ್ಲದೆ ಸಿಬಿಐಯವರಿಂದ ಬಂಧನಕ್ಕೊಳಗಾದರು. ಇದಕ್ಕೆಲ್ಲಾ ಕಾರಣವಾಗಿದ್ದು ಸಚಿವರು ಆ ಮಹಿಳೆಯರೊಂದಿಗೆ ಇದ್ದರೆನ್ನಲಾದ ಅಶ್ಲೀಲ ಸೀಡಿ ಬಹಿರಂಗಗೊಂಡದ್ದು.
ಮಹಂತೇಶ್ ಕೊಲೆಪ್ರಕರಣದಲ್ಲಿ ಆ ಸಾವಿನ ಗಂಭೀರತೆಯನ್ನು ಮರೆ ಮಾಚುವ ಪ್ರಯತ್ನದಲ್ಲಿ ಅವರಿಗೆ ವೇಶ್ಯೆಯರ ಸಂಪರ್ಕವಿತ್ತೆಂದು ಮಾಧ್ಯಮಗಳಲ್ಲಿ ಸತತ ಪ್ರಚಾರ ಮಾಡಲಾಗಿತ್ತು. ಪ್ರಾಮಾಣಿಕತೆಯನ್ನೇ ಉಸಿರಾಗಿಟ್ಟುಕೊಂಡ ಆಧಿಕಾರಿಯ ಕುಟುಂಬಕ್ಕೆ ಮತ್ತು ಅವರ ಆಪ್ತ ವರ್ಗಕ್ಕೆ ಈ ಚಾರಿತ್ರ್ಯ ವಧೆಯಿಂದ ಎಷ್ಟು ನೋವಾಗಿರಬೇಡ?

ಮೊನ್ನೆ ಮೊನ್ನೆ ಬಿಜೆಪಿಯಿಂದ ಹೊರ ನಡೆದ ಅರೆಸ್ಸಸ್ ನಾಯಕ ಸಂಜಯ್ ಜೋಷಿಯ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿ ಕೂಡಾ ಅವರ ಚಾರಿತ್ರ್ಯ ವಧೆಗೆ ಬಳಸಿಕೊಂಡದ್ದು ಅವರು ಮಹಿಳೆಯೊಬ್ಬರೊಂದಿಗೆ ಹೊಂದಿದ್ದರೆನ್ನಾಲಾದ ಅಶ್ಲೀಲ ಸೀಡಿ ಬಹಿರಂಗಗೊಂಡದ್ದು. ದಿನೇ ದಿನೇ ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದ ತನ್ನ ರಾಜಕೀಯ ಎದುರಾಳಿಯನ್ನು ಹಣೆಯಲು ಬಿಜೆಪಿಯಿಂದ ಭಾವಿ ಪ್ರಧಾನಿಯೆಂದು ಬಿಂಬಿತವಾಗುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಿಂಬಾಲಕರೇ ಈ ಷಡ್ಯಂತರ ರಚಿಸಿರಬಹುದೇ? ಅನುಮಾನಗಳಿವೆ.
ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಮಾಧ್ಯಮಗಳು ಸಾಕ್ಷಿಪ್ರಜೆಯಿಂದ ಕೆಲಸ ಮಾಡದೆ ಪೂರ್ವಾಗ್ರಹ ಪೀಡಿತರಾಗಿದ್ದ್ ಸತ್ಯ.

ಮಹಿಳೆಯರನ್ನು ಯಾವುದೋ ಕಾರ್ಯಸಾಧನೆಗಾಗಿ, ನಿರ್ಧಿಷ್ಟ ಉದ್ದೇಶಗಳಿಗಾಗಿ ಬಳಸಲ್ಪಡುವುದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ. ’ವಿಷಕನ್ಯೆ’ಯರ ಬಳಕೆಯನ್ನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಚಾಣಕ್ಯ ಬಹಳ ಪರಿಣಾಮಕಾರಿಯಾಗಿ ಬಳಸಿದ್ದ ಎಂದು ಇತಿಹಾಸ ಹೇಳುತ್ತದೆ.
ನಿತ್ಯಾನಂದ ಅರತಿರಾವ್ ಅನ್ನು ಲೈಂಗಿಕವಾಗಿ ಬಳಸಿಕೊಂಡನೇ? ನಮಗೆ ಗೊತ್ತಿಲ್ಲ. ನಾವು ಘಟನೆಯ ಹೊರ ಆವರಣದಲ್ಲಿ ನಿಂತು ಹೀಗೆ ನಡೆದಿರಬಹುದೇನೋ ಎಂದು ತರ್ಕಿಸಬಹುದಷ್ಟೇ. ಆದರೆ..
ಕರ್ನಾಟಕದಲ್ಲಿ ನಿತ್ಯಾನಂದ ಪ್ರಕರಣ ಬಿಟ್ಟರೆ ಜನರನ್ನು ಕಾಡುವ ಇನ್ಯಾವ ಸಮಸ್ಯೆಗಳೂ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಲಂಬಿಸಲ್ಪಟ್ಟ, ಇನ್ನೂ ಲಂಬನವಾಗುತ್ತಲೇ ಇರುವ ಈ ಪ್ರಕರಣವನ್ನು ಗಮನಿಸಿದಾಗ ಇಲ್ಲಿಯೂ ಅರತಿರಾವ್ ಎಂಬ ಮಹಿಳೆ ’ಬಳಸಲ್ಪಡುತ್ತಿದ್ದಾಳೆ’ ಎಂಬ ಅನುಮಾನ ಜನಸಾಮಾನ್ಯರನ್ನು ಕಾಡದಿರದು.
ನಿತ್ಯಾನಂದ ಆಶ್ರಮ ವಿವಾದ ಸತತವಾಗಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿರುವಾಗ ನನಗೆ ಆಪ್ತರಾದ ಪ್ರಸಿದ್ದ ಆಪ್ತ ಸಮಾಲೋಚಕರು ನನ್ನಲ್ಲಿ ಹೀಗೆ ಹೇಳಿಕೊಂಡಿದ್ದರು.”ನಾವು ಬೇರೆಯವರ ಸಮಸ್ಯೆಗಳನ್ನೆಲ್ಲಾ ಪರಿಹರಿಸಲು ಪ್ರಯತ್ನ ಪಡುತ್ತೇವೆ. ಆದರೆ ನಮ್ಮ ಮಾನಸಿಕ ತೊಳಲಾಟವನ್ನು ಯಾರಲ್ಲಿ ಹೇಳಿಕೊಳ್ಳೋಣ ಹೇಳಿ…? ಹಾಗಾಗಿ ನಾನು ನಿತ್ಯಾನಂದನ ಮೆಡಿಟೇಷನ್ ಕ್ಲಾಸ್ ಗಳನ್ನು ಅಟೆಂಡ್ ಮಾಡ್ತೇನೆ.”

ಕೊನೆಯಾದಾಗಿ ಹೇಳುವುದಿಷ್ಟೇ; ಕೆಲವು ಅನುಭವಗಳು ವ್ಯಯಕ್ತಿಕವಾದುವು;ಅನುಭವಜನ್ಯವಾದುವು. ಅದನ್ನು ಸಾರ್ವತ್ರಿಕಗೊಳಿಸಲಾಗದು. ಒಂದು ವೇಳೆ ಅಂಥ ಸಂದರ್ಭ ಒದಗಿದರೆ ಅದು ಸಮಾಜದ ಮೇಲೆ, ಬೆಳೆಯುತ್ತಿರುವ ಮಕ್ಕಳು ಮತ್ತು ಯುವ ಜನಾಂಗದ ಮೇಲೆ ಯಾವ ರೀತಿಯ ಪರಿಣಾಮವನ್ನುಂಟುಮಾಡುತ್ತದೆ. ಎಂಬುದನ್ನು ಯೋಚಿಸಿ ಮುಂದುವರಿಯಬೇಕು.

[ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ ]