Tuesday, May 22, 2012

’ಯಾರಿಗೂ ಬೇಡದ ಪ್ರಾಮಾಣಿಕತೆ ನಿಂಗ್ಯಾಕೋ ಬೇಕಿತ್ತು ಮಹಾಂತೀ..?’ಇದು ನಿನ್ನೆ ಸಾವನಪ್ಪಿರುವ ಕೆ.ಎ.ಎಸ್ ಅಧಿಕಾರಿ ಮಹಾಂತೇಶ್ ಅವರ ಆಕ್ಕ ತಮ್ಮನ ಶವದ ಮೇಲೆ ಬಿದ್ದು ರೋಧಿಸುತ್ತಾ ಕೇಳಿದ ಪ್ರಶ್ನೆ.
ಇದೇ ಪ್ರಶ್ನೆಯನ್ನು ಮೊನ್ನೆ ಮೊನ್ನೆ ದುಷ್ಕರ್ಮಿಗಳ ಧಾಳಿಗೆ ತುತ್ತಾಗಿ ಸಾವಿಗೀಡಾಗಿದ್ದ ದಾಂಡೇಲಿಯ ಎಸಿಎಫ಼್ ಮದನನಾಯಕ್ ಅವರ ಕುಟುಂಬದವರೂ ಕೇಳುತ್ತಿರಬಹುದಲ್ಲವೇ?

ಮುದ್ರಣ ಮಾಧ್ಯಮವು ಮಹಂತೇಶ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅದರ ಕುರಿತಾದ ವಿಸ್ತೃತ ವರಧಿಯನ್ನು  ಪ್ರಕಟಿಸಿದವು. ಅದು ಒಂದು ಸಮೂಹ ಮಾಧ್ಯಮಕ್ಕಿರುವ ಸಾಮಾಜಿಕ ಜವಾಭ್ದಾರಿ. ಅವು ನಿನ್ನೆ ಇನ್ನೊಂದು ಸುದ್ದಿಯನ್ನೂ ಪ್ರಕಟಿಸಿದವು. ಅದು ನಮ್ಮ ನಡುವಿನ ಪ್ರಮುಖ ಸಾಹಿತಿಯಾದ ಕುಂ. ವೀರಭದ್ರಪ್ಪ ಹೇಳಿದ ಮಾತುಗಳು-’ಸಮಾಜದಲ್ಲಿ ನಾಚಿಕೆ ಹಾಗೂ ಸಂಕೋಚ ಇಂದು ಸ್ಥಾನ ಪಲ್ಲಟವಾಗಿದೆ. ಕೇವಲ ರಾಜಕಾರಣಿಗಳಲ್ಲಿ ಮಾತ್ರವಲ್ಲ. ಎಲ್ಲಾ ವರ್ಗದ ಜನರಲ್ಲಿಯೂ ಇದು ಎದ್ದು ಕಾಣುತ್ತದೆ.’

 ಮೇಲೆ ಆ ಅಕ್ಕ ನೊಂದು ನುಡಿದ ಮಾತುಗಳು ಮತ್ತು ಸಮಾಜದ ಸಾಕ್ಷಿಪ್ರಜ್ನೆಯಂತಿರುವ ಸಾಹಿತಿಯೊಬ್ಬರು ಹತಾಶೆಯಿಂದ ಹೇಳಿದ ಮಾತುಗಳ ಆವರಣಗಳು ಬೇರೆ ಬೇರೆಯಾಗಿರಬಹುದು. ಆದರೆ ಇವೆರಡೂ ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಸಮಾಜದಲ್ಲಿ ಹಿಂಸೆಯ ವೈಭವೀಕರಣ ಹೆಚ್ಚಾಗುತ್ತಲಿದೆ. ಹಿಂಸೆಯೂ ಒಂದು ಮೌಲ್ಯವೇನೋ ಎಂದು ಭ್ರಮೆ ಹುಟ್ಟುವಷ್ಟರಮಟ್ಟಿಗೆ ಅದರ ಗುಣಗಾನ ನಡೆಯುತ್ತಿದೆ. ಅದರ ಪರಿಣಾಮ ಎಷ್ಟು ಘೋರವಾಗಿದೆಯೆಂದರೆ ಸಮಾಜ ತನ್ನ ಸೂಕ್ಷತೆಯನ್ನೇ ಕಳೆದುಕೊಳ್ಳುತ್ತಲಿದೆ. ನಾವೀಗ ಒಂದು ಕೊಲೆಯನ್ನೋ, ಆತ್ಮಹತ್ಯೆಯನ್ನೋ ಲೈವ್ ಆಗಿ ಯಾವುದೇ ಭಾವನೆಗಳಿಲ್ಲದೆ ನೋಡಬಲ್ಲೆವು; ಸಾಮೂಹಿಕವಾಗಿ ಎಂಜಾಯ್ ಮಾಡಬಲ್ಲೆವು. ಹಿಂದಾದರೆ ಅದಕ್ಕಾಗಿ ನಾವು ಪ್ರಾಣಿಗಳನ್ನು ಬಳಸಿಕೊಳ್ಳುತ್ತಿದ್ದೆವು ಈಗ ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ. ಯಾಕೆ ಹೀಗಾದೆವು? ಮನುಷ್ಯನ ಮನಸ್ಸಿನಾಳದಲ್ಲಿರುವ ಮೃಗತ್ವ ಸೂಕ್ತ ಸಮಯಕ್ಕಾಗಿ ಹೊಂಚು ಹಾಕಿ ಕಾಯುತ್ತಿದೆಯೇ? ನಮ್ಮಲ್ಲೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

ಮಹಂತೇಶ್ ಹತ್ಯೆ ಪ್ರಕರಣ ಅಥವಾ ದಾಂಡೇಲಿಯ ವನ್ಯಜೀವಿ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಮಾಧವ ನಾಯಕ್ ಅವರ ಮೇಲಾದ ಹತ್ಯೆ ಮತ್ತು ಅನಂತರದ ಸಾವಿನ ಘಟನೆಗಳನ್ನೇ ತೆಗೆದುಕೊಳ್ಳಿ. ಅದಕ್ಕೆ ಸಂಬಂಧಪಟ್ಟವರು ಪ್ರತಿಕ್ರಿಯಿಸಿದ, ಪ್ರತಿಕ್ರಿಯಿಸುತ್ತಿರುವ ನಿಧಾನಗತಿಯನ್ನು ನೋಡಿದರೆ ’ನ್ಯಾಯದ ನಿಧಾನವೇ ನ್ಯಾಯದ ನಿರಾಕರಣೆ’ ಎಂಬ ನಾಣ್ನುಡಿಯ ನೆನಪು ಬರುತ್ತದೆಯಲ್ಲವೇ? ಗ್ರಾಮ ಸ್ವರಾಜ್ಯದ ಕನಸು ಕಂಡ ಅಹಿಂಹೆಯ ಹರಿಕಾರ ಗಾಂದೀಜಿ ಹುಟ್ಟಿದ ನಾಡಿನಲ್ಲಿ ಒಬ್ಬ ಒಬ್ಬ ಪ್ರಾಮಾಣಿಕ  ಕೆ.ಎ.ಎಸ್ ಅಧಿಕಾರಿ ಬೀದಿಯಲ್ಲಿ ಹೆಣವಾಗಿ ಬಿದ್ದರೆ ಯಾರಿಗೂ ಏನೂ ಅನ್ನಿಸುವುದಿಲ್ಲವೇ?
 ಅಧಿಕಾರ ಶಕ್ತಿಕೇಂದ್ರವಾದ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿ,  ತುಂಬಾ ಸರಳ ಹಾಗೂ ಪ್ರಮಾಣಿಕ ಅಧಿಕಾರಿಯೆಂದು ಹೆಸರು ಪಡೆದಿದ್ದ ಮಹಂತೇಶ್ ಮೇಲೆ ಕರ್ತವ್ಯದಲ್ಲಿದ್ದಾಗಲೇ ಮಾರಣಾಂತಿಕವಾಗಿ ಹಲ್ಲೆಯಾಗಿತ್ತು.
 ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ರಾಗಿದ್ದ ಅವರ ಮೇಲಿನ ಹಲ್ಲೆಯಲ್ಲಿ ಭೂಮಾಪಿಯದ ಕೈವಾಡ ಇದೆಯೆಂದು ಶಂಕಿಸಲಾಗಿತ್ತು. ಸಹಕಾರಿಸಂಘಗಳ ಅಡಿಟಿಂಗ್ ಜವಾಬ್ದಾರಿ ಹೊತ್ತವರು ಮಹಾಂತೇಶ್. ಬೆಂಗಳೂರಿನಲ್ಲಿ೨೮೨ ಗೃಹನಿರ್ಮಾಣ ಸಂಘಗಳಿವೆ. ಇಲ್ಲಿ ಮೂರುಲಕ್ಷ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಅದನ್ನು ಇತ್ತೀಚೆಗಷ್ಟೇ ಅವರ ಇಲಾಖೆ ಬಯಲಿಗೆಳೆದಿತ್ತು. ಇಂತಹ ಗುರುತರವಾದ ಜವಾಬ್ದಾರಿಯನ್ನು ಹೊತ್ತ ಅಧಿಕಾರಿಯನ್ನು  ಮಾನವೀಯ ನೆಲೆಯಲ್ಲಾದರೂ ಭೇಟಿಮಾಡುವ ಸೌಜನ್ಯವನ್ನು ಈ ನಾಡಿನ ಯಾವ ರಾಜಕಾರಣಿಯೂ ಮಾಡಲಿಲ್ಲ. ಕೊನೆಯ  ಪಕ್ಷ ಪ್ರಮಾಣಿಕ ಅಧಿಕಾರಿಗಳಲ್ಲಿ ದೈರ್ಯ ತುಂಬುವ ಹೇಳಿಕೆಯನ್ನೂ ನೀಡಲಿಲ್ಲ. ಅದೇ ಬ್ರಷ್ಟಾಚಾರದ ಆರೋಪ ಹೊತ್ತ ರಾಜಕಾರಣಿಯನ್ನು ನೋಡಲು ಜೈಲಿಗೇ ಹಿಂಡುಗಟ್ಟಿಕೊಂಡು ಹೋಗುವ ರಾಜಕಾರಣಿಗಳಿದ್ದಾರೆ; ಮಠಾದೀಶರಿದ್ದಾರೆ. ಬ್ರಷ್ಟಾಚಾರ ಸರ್ವವ್ಯಾಪಿಯಾಗಿದೆ.
ನಮ್ಮ ರಾಜ್ಯದ ಗೃಹಮಂತ್ರಿಯವರೇ ಭೂಹಗರಣದಲ್ಲಿ ಸಿಕ್ಕಿಬಿದ್ದಿದ್ದರೆ ಅರಣ್ಯ ಸಚಿವರು ವಂಚನೆಯ ಆರೋಪಕ್ಕೆ ಒಳಗಾಗಿದ್ದವರು. ಇಂತವರಿಂದ ಎಂತಹ ಪ್ರಾಮಾಣಿಕತೆಯನ್ನು ನಿರೀಕ್ಷಿಸಲಾದೀತು? ಸಮಾಜದ ಕೆನೆಪದರದಲ್ಲಿರುವ ವ್ಯಕ್ತಿಗಳೇ ಬ್ರಷ್ಟರಾದರೆ ಅವರ ಕೈಕೆಳಗಿನ ಅಧಿಕಾರಿಗಳು ಅಸಹಾಯಕರಾಗುತ್ತಾರೆ.

ನಾವು ಸತತವಾಗಿ ಏನನ್ನು ಕೇಳುತ್ತೆವೆಯೋ, ನೋಡುತ್ತೆವೆಯೋ ಅದು ನಮ್ಮ ಆಲೋಚನಾಕ್ರಮದ ಮೇಲೆ ಪರೆಣಾಮ ಬೀರುತ್ತದೆ. ಒಂದು ಸಮಾಜವನ್ನು ಅದೋಗತಿಗೆ ತಳ್ಳಲು ಅದರ ಸಾಂಸ್ಕೃತಿಕ ಅನನ್ಯತೆಯನ್ನು ನಾಶಪಡಿಸಿದರೆ ಸಾಕು. ಆ ಕೆಲಸವನ್ನು ರಾಜಕಾರಣ ಮಾಡುತ್ತಲೇ ಬಂದಿದೆ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದಾದ ಮಾಧ್ಯಮ ಅದಕ್ಕೆ ಸಾತ್ ನೀಡುತ್ತಲಿದೆ. ಹಾಗಾಗಿ ಜನರು ಹತಾಶರಾಗುತ್ತಿದ್ದಾರೆ.  ಅವರಲ್ಲಿ ಪ್ರತಿಭಟನೆಯ ಧ್ವನಿ ಹುಟ್ಟುತ್ತಿಲ್ಲ. ರಾಷ್ಟ್ರಪಿತ ಗಾಂಧಿಯಂತೆ ಬಿಂಬಸಲ್ಪಟ್ಟ ಅಣ್ಣಾ ಹಜಾರೆಯವರ ಜನಾಂದೋನವೇ ಮಸುಕಾಗಿರುವುದೇ ಇದಕ್ಕೆ ಸಾಕ್ಷಿ. ಇಡೀ ವ್ಯವಸ್ಥೆಯೇ ಜಡ್ಡುಗಟ್ಟಿ ಹೋಗಿದೆ.

ಮಹಂತೇಶರ ಅಕ್ಕ ವೈಯಕ್ತಿಕ ಮಟ್ಟದಲ್ಲಿ ಕೇಳಿದ ಪ್ರಶ್ನೆಯನ್ನು ಒಂದು ಸಾವಿರ ವರ್ಷಗಳ ಹಿಂದೆ ಪಂಪ ಸಮೂಹದ ನೆಲೆಯಿಂದ ಕೇಳಿದ್ದ ಮತ್ತು ಅದಕ್ಕೆ ಉತ್ತರವನ್ನೂ ನೀಡಿದ್ದ
’ಒತ್ತಿ ತರುಂಬಿ ನಿಂದ ರಿಪುಭೂಜ ಸಮಾಜದ ಬೇರ್ಗಳಂ ನಭಕೆತ್ತದೆ
ಬಂಧು ತನ್ನ ಮರೆವೊಕ್ಕಡೆ ಕಾಯ್ವದೆ, ಚಾಗದ ಒಳ್ಪಿನ ಅಚ್ಚೊತ್ತದೆ,
ಮಾಣ್ದು ಬಾಳವ ಪುಳುವಾನಸನ್, ಅಜಾಂಡಮೆಂಬೊಂದು ಅತ್ತಿಯ
ಪಣ್ಣೊಳಿರ್ಪ ಪುಳುವಲ್ಲದೆ ಮಾನಸನೇ ಮುರಾಂತಕಾ?’

ಅಂತಹ ಹುಳ ಸಮಾನವಾದ ಬದುಕು ನಮಗೆ ಬೇಕೆ? ಬೇಡ ಎಂದು ಧಿಕ್ಕರಿಸಿ ನಿಂತ ಮಹಂತೇಶ್, ಮದನನಾಯಕರಂಥ ಅಧಿಕಾರಿಗಳನ್ನು ಉಳಿಸಿಕೊಳ್ಳಲು ನಾವೇನು ಮಾಡಬೇಕು? ಇದು ನಾಡಿನ ಪ್ರಜ್ನಾವಂತರು ತಮ್ಮೊಳಗೆ ಕೇಳಿಕೊಳ್ಳಬೇಕಾದ ಪ್ರಶ್ನೆ.


[ ವಿಜಯಕರ್ನಾಟಕದ ’ಅನುರಣನ’ ಅಂಕಣದಲ್ಲಿ ಪ್ರಕಟವಾದ ಬರಹ ]

Thursday, May 17, 2012

ಬರಗಾಲದಲ್ಲಿ ನೆನಪಾದ ಸೂಳೆಕೆರೆಗಳು ಮತ್ತು ಬಿದಿರಕ್ಕಿ


ಕಳೆದ ವಾರ ನಾನು ನನ್ನ ತವರೂರಿಗೆ ಹೋಗಿದ್ದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಎಂಬ ಹಳ್ಳಿಯದು.ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟಶ್ರೇಣಿಯ ಸೆರಗಿನೂರು. ನನ್ನ ಮನೆಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾದ ಬಿದಿರುಹಿಂಡಿಲುಗಳಿವೆ. ಪ್ರತಿ ಬಾರಿ ಊರಿಗೆ ಹೋದಾಗಲೂ ಅವು ರಸ್ತೆಗೆ ಬಾಗಿ ನನಗೆ ಸ್ವಾಗತ ಕೋರುವುದು ಸಾಮಾನ್ಯ ಸಂಗತಿ. ಆದರೆ ಈ ಬಾರಿಯ ಸ್ವಾಗತ ಸಾಮಾನ್ಯವಾಗಿರಲಿಲ್ಲ. ಅವು ತೆನೆ ತುಂಬಿ ಭತ್ತದ ಬಾರಕ್ಕೆ ಬಳುಕುತ್ತಿದ್ದವು.
ನನ್ನ ಮನಸ್ಸು ಸುಮಾರು ನಲ್ವತ್ತು ವರ್ಷಗಳ ಹಿಂದಕ್ಕೆ ಓಡಿತು.

ಅಂದು ಮಂಗಳವಾರ.ಇನ್ನೂ ಬೆಳಕು ಹರಿದಿರಲಿಲ್ಲ. ನನ್ನಮ್ಮ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡಳು. ಇನ್ನೊಂದು ಕಯ್ಯಲ್ಲೆ ಒಂದು ದೊಡ್ಡ ಕುಕ್ಕೆ, ಕುಕ್ಕೆಯೊಳಗೊಂದು ಕತ್ತಿ. ತಲೆಯ ಮೇಲೆ ತುಳು ಭಾಷೆಯಲ್ಲಿ  ’ತಡ್ಪೆ’ ಎಂದು ಕರೆಯುವ ತುಳುವೇತರರು ಮೊರ ಎನ್ನುವ ಅಗಲವಾದ ಗೆರಸೆ. ಅದರ ಮೇಲೊಂದು ಪೊರಕೆ. ಬಿರಬಿರನೆ ಹೆಜ್ಜೆ ಹಾಕುತ್ತಾ ಕುಡುಮುಂಡೂರು ಹೊಳೆಯನ್ನು ದಾಟಿ, ಅದರ ಪಕ್ಕದ ಅಡ್ಕದಲ್ಲಿದ್ದ ಬಿದಿರು ಮೆಳೆಯತ್ತ ಸಾಗಿದವಳೇ ನನ್ನನ್ನು ಒಂದೆಡೆ ಕುಳ್ಳಿರಿಸಿದಳು. ಬೆಳ್ಳುಳ್ಳಿ ಮತ್ತು ಈರುಳ್ಳಿ ನಾಯಿಗಳು ನನಗೆ ಕಾವಲಾಗಿ ಅಕ್ಕ-ಪಕ್ಕ ಕುಳಿತವು. ಒಂದು ವಿಶಾಲವಾದ ಬಿದಿರು ಹಿಂಡಲನ್ನು ಆಯ್ಕೆ ಮಾಡಿದವಳೇ ಅಮ್ಮ ಅದರಡಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಬಿದಿರಕ್ಕಿಯನ್ನು ಗುಡಿಸಿ ಗುಡ್ಡೆ ಮಾಡತೊಡಗಿದಳು. ಮಂಗಳವಾರವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವಿತ್ತು. ಅಂದು ಬಿದಿರಕ್ಕಿಯನ್ನು ಯಾರೂ ಸಂಗ್ರಹಿಸುವುದಿಲ್ಲ.. ಕಾಡನ್ನು ರಕ್ಷಿಸುವ ಚಾಮುಂಡಿ ತಾಯಿಗೆ ಆ ದಿನದ ಅಕ್ಕಿ ಮೀಸಲು. ಬಹುಶಃ ನನ್ನಮ್ಮ ದೇವರಿಗೆ ತಪ್ಪು ಕಾಣಿಕೆಯನ್ನು ತೆಗೆದಿಟ್ಟು ಬಿದಿರಕ್ಕಿ ಆರಿಸಲು ಬಂದಿರಬೇಕು. ಇಲ್ಲಿ ಬಿದಿರಕ್ಕಿ ಅಂದರೂ ವಾಸ್ತವದಲ್ಲಿ ಅದು ಭತ್ತವೇ. ಅದನ್ನು ಗುಡ್ಡದಿಂದ ತಂದು ಕಲ್ಲು ಮಣ್ಣನ್ನು ಬೇರ್ಪಡಿಸಿ, ಕುಟ್ಟಿ ಹೊಟ್ಟು ತೆಗೆದು ಅಕ್ಕಿ ಮಾಡಲು ದೀರ್ಘ ಪರಿಶ್ರಮ ಬೇಕು.

ಬರವನ್ನು ಎದುರಿಸಲು ಪ್ರಕೃತಿಮಾತೆ ತನ್ನ ಮಕ್ಕಳಿಗೆ ಹಲವಾರು ಒಳದಾರಿಗಳನ್ನು ಹೇಳಿಕೊಟ್ಟಿದ್ದಾಳೆ. ತನ್ನೊಡಲೊಳಗೇ ಹಲವಾರು ಗೆಡ್ಡೆಗೆಣಸುಗಳನ್ನು ಹುದುಗಿಟ್ಟುಕೊಂಡಿರುತ್ತಾಳೆ. ’ನೊರೆ’ ಎಂದು ಕರೆಯಲ್ಪಡುವ ಬಳ್ಳಿಯ  ಹಿಟ್ಟು ತುಂಬಿದ ಉದ್ದವಾದ ಬೇರಿನ ಗೆಡ್ಡೆಗಳನ್ನು ಕಾಡಿನಿಂದ ಅಗೆದು ತಂದು ಬೇಯಿಸಿ ಬಾಯಿ ಚಪ್ಪರಿಸುತ್ತಾ ತಿಂದ ನೆನಪು ನನಗಿದೆ. ಹಾಗೆಯೇ ಬೈನೆ ಮರದ ಹಿಟ್ಟು ಕೂಡಾ ಬರಗಾಲದಲ್ಲಿ ಹಸಿದ ಹೊಟ್ಟೆಗೆ ಹಿಟ್ಟಾಗುತ್ತಿತ್ತು. ಇದು ನಮ್ಮೂರಿನ ಕಥೆಯಾದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗೋಟಿ ಹಾಗು ಕತ್ತಾಳೆಗಡ್ಡೆಯನ್ನು ಬೇಯಿಸಿಕೊಂಡು ತಿನ್ನುತ್ತಿದ್ದರೆಂದು ಕೇಳಿದ್ದೇನೆ.

ಇದನ್ನೆಲ್ಲಾ ಯೋಚಿಸುತ್ತಾ ಮನೆಗೆ ಬಂದರೆ ಸಂಬಂಧದಲ್ಲಿ ನನಗೆ ಅತ್ತೆಯಾಗಬೇಕಾಗಿದ್ದ, ಅಂದಿನ ಬರಗಾಲದ ದಿನಗಳಲ್ಲಿ ನಮ್ಮ ಗೇಣಿ ಒಕ್ಕಲಾಗಿದ್ದ ಅಜ್ಜಿ ನಮ್ಮ ಮನೆಯಲ್ಲಿ ಕೂತಿದ್ದರು. ನನ್ನನ್ನು ಕಂಡು, ’ಹೇಗೂ ಉಷಾ ಬಂದಿದ್ದಾಳೆ. ಅವಳಿಗೆ ಇದನ್ನು ರೊಟ್ಟಿಮಾಡಿ ಕೊಡು’ ಎಂದು ಕುಕ್ಕೆಯಲ್ಲಿದ್ದ ನುಚ್ಚಿನಂತ ಅಕ್ಕಿಯನ್ನು ಅಮ್ಮನ ಕೈಯ್ಯಲ್ಲಿಟ್ಟು ಹೋದರು.  ಅದು ಬಿದಿರಕ್ಕಿ.  ಈ ಬಾರಿ ಒಂದು ಕೇಜಿ ಅಕ್ಕಿಗೆ ನೂರೈವತ್ತು ರೂಪಾಯಿಯಂತೆ. ದುಡ್ಡು ಕೊಡಲು ಹೋದರೆ ಎಷ್ಟೇ ಒತ್ತಾಯಿಸಿದರೂ ಅತ್ತೆ ತಗೊಳ್ಳಲೇ ಇಲ್ಲ ಎಂದು ಅಮ್ಮ ನನ್ನಲ್ಲಿ ಅವಲತ್ತುಕೊಂಡರು. ಈ ವಯಸ್ಸಿನಲ್ಲೂ ಅವರು ಸುಮಾರು ಐವತ್ತು ಕೇಜಿಯಷ್ಟು ಅಕ್ಕಿಯನ್ನು ಸಂಗ್ರಹಿಸಿದ್ದಾರೆ ಎಂಬುದನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ

ಬಿದಿರು ಹೂ ಹೋದ ವರ್ಷ ಬರಗಾಲ ಬರುತ್ತದೆಯೆಂಬುದು ವಾಡಿಕೆ. ಪ್ರಕೃತಿ ಯಾವಾಗಲೂ ತಾಯಿಯೇ. ಆಕೆ ತನ್ನ ಮಕ್ಕಳನ್ನು ಪೊರೆಯಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ. ಒಂದು ಬಿದಿರ ಹಿಂಡಲಿನಲ್ಲಿ ಕನಿಷ್ಟ ೨೫ ಕೇಜಿ ಭತ್ತ ದೊರೆಯುತ್ತದೆ.  ಬಿದಿರು ಹೂ ಬಿಡುವುದು ಅರುವತ್ತು ವರ್ಷಕ್ಕೊಮ್ಮೆ, ಅದೂ ಸಾವಿರಾರು ಎಕರೆ ವಿಸ್ತಾರದಲ್ಲಿ. ಹಾಗೆ ಹೂ ಬಿಟ್ಟು, ಬೀಜವಾಗಿ ತನ್ನ ಸಂತತಿ ಬೆಳೆಯಲು ಅನುವು ಮಾಡಿಕೊಟ್ಟು ತಾನು ಸತ್ತು ಹೋಗುತ್ತದೆ. ಸಾಮೂಹಿಕ ನಾಶದ ಕಾರಣದಿಂದಾಗಿ ಅದನ್ನು”ಕಟ್ಟೆ ರೋಗ’ ಎಂದೂ ಕರೆಯುತ್ತಾರೆ. ಸ್ಥಳೀಯವಾಗಿ ಅದನ್ನು ’ರಾಜನ್ ಹೋಗುವುದು’ ಎಂದೂ ಕರೆಯುತ್ತಾರೆ. ಹಾಗೆಂದರೆ ಏನು ಎಂಬುದು ನನಗೂ ತಿಳಿದಿಲ್ಲ. ಬಹುಶಃ ’ರಾಜನ್ ದೈವ’ಗಳಿಗೂ ಇದಕ್ಕೂ ಸಂಬಂಧವಿದ್ದರೂ ಇರಬಹುದು; ಯಾಕೆಂದರೆ ಇದು ತುಳುನಾಡು.

ಬರಗಾಲ ಅಂದರೆ ಏನು? ಮಳೆ ಆಗದಿರುವುದು. ಮಳೆ ಆಗದಿದ್ದರೆ ಭೂಮಿ ಬರಡಾಗುತ್ತದೆ. ಬೆಳೆ ಬೆಳೆಯಲಾಗುವುದಿಲ್ಲ. ಪರಿಣಾಮವಾಗಿ ಜನರ ಹೊಟ್ಟೆಗೆ ಹಿಟ್ಟಿಲ್ಲ. ಜನ-ಜಾನುವಾರು ಸೇರಿದಂತೆ ಪ್ರಾಣಿಸಂಕುಲಕ್ಕೆ ಕುಡಿಯಲು ನೀರಿಲ್ಲ. ಚಿಕ್ಕಂದಿನಲ್ಲಿ ನಾವು ಹಾಡಿದ್ದೇವೆ ’ಹುಯ್ಯೋ ಹುಯ್ಯೋ ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ’ ಆದರೆ ನಮ್ಮ ಮಕ್ಕಳು ’rain rain go away’ಎಂದು ಹಾಡುತ್ತಿರುವುದು ವಿಪರ್ಯಾಸ ಅಲ್ಲವೇ? ಬರಗಾಲದ ಭೀಕರತೆಯನ್ನು ಹೇಳುವ ಒಂದು ಜನಪದ ಹಾಡು ಯವಾಗಲೂ ನನಗೆ ನೆನಪಿಗೆ ಬರುತ್ತದೆ. ಅದು ’ಬಣ್ಣಾದ ಗುಬ್ಯಾರು ಮಳೆರಾಯ..ಮಕ್ಕಳಾ ಮಾರ್ಯಾರು ಮಳೆರಾಯ…ರೊಕ್ಕವಾ ಹಿಡಕೊಂಡು ಭತ್ತಂತ ತಿರುಗ್ಯಾರು ಮಳೆರಾಯ..’ ಮಕ್ಕಳನ್ನೇ ಮಾರಿ ಕಯ್ಯಲ್ಲಿ ದುಡ್ಡು ಹಿಡ್ಕೊಂಡು ಅನ್ನಕ್ಕಾಗಿ ಅಲೆದಾಡುವ ಧಾರುಣ ಸ್ಥಿತಿ ಬರಗಾಲದ ಭೀಕರತೆಯ ಸಮರ್ಥ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಪ್ರಕೃತಿ ವಿಕೋಪಗಳು ಸಂಭವಿಸುವುದು ಅತ್ಯಂತ ಸಹಜ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ಸಮರ್ಥವಾಗಿ ಎದುರಿಸಲು ಬುದ್ಧಿವಂತನಾದ ಮಾನವ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾನೆ. ಹಿಂದೆ ಜನಾನುರಾಗಿ ನಾಯಕನೊಬ್ಬ ಹೇಗೆ ರೂಪುಗೊಳ್ಳುತ್ತಿದ್ದ ಎಂದರೆ ಆತ, ಕೆರೆಗಳನ್ನು ಕಟ್ಟಿಸುತ್ತಿದ್ದ, ಬಾವಿಯನ್ನು ತೋಡಿಸುತ್ತಿದ್ದ, ಅರವಟ್ಟಿಗೆ [ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ] ಗಳನ್ನು ನಿರ್ಮಿಸುತ್ತಿದ್ದ. ಅನ್ನ ಛತ್ರಗಳನ್ನು ಕಟ್ಟಿಸುತ್ತಿದ್ದ, ಸಾಲುಮರಗಳನ್ನು ನೆಡಿಸುತ್ತಿದ್ದ.

ಇದನ್ನು ಒಬ್ಬ ಸೂಳೆಯೂ ಮಾಡುತ್ತಿದ್ದಳು. ನಮ್ಮ ನಾಡಿನುದ್ದಕ್ಕೂ ಹರಡಿಕೊಂಡಿರುವ ಅಸಂಖ್ಯಾತ ಬೃಹತ್ ’ಸೂಳೆ ಕೆರೆ’ಗಳನ್ನು ನೆನಪಿಸಿಕೊಳ್ಳಿ. ಸಮಾಜದಿಂದ ಗಳಿಸಿದ ಹಣವನ್ನು ಪಶ್ಚಾತ್ತಾಪದ ರೀತಿಯಲ್ಲಿ ಮತ್ತೆ ಅದನ್ನು ಜನೋಪಯೋಗಿ ಕೆಲಸಕ್ಕೆ ಆಕೆ ವಿನಿಯೋಗಿಸುತ್ತಿದ್ದಳು. ಜೀವ ಜಲಕ್ಕಿರುವ ಮಹತ್ವ ಆಕೆಗೂ ಗೊತ್ತಿತ್ತು. ಆ ತಾಯಂದಿರು ಕಟ್ಟಿಸಿದ ವಿಶಾಲ ಕೆರೆಗಳಲ್ಲಿ ಇವತ್ತಿಗೂ ಅಪಾರ ಜಲರಾಸಿಯಿದೆ. ಆಕೆಯ ಜೊತೆ ನಮ್ಮ ರಾಜಕಾರಣಿಗಳನ್ನು, ಮಠಾದೀಶರನ್ನು, ದಿಡೀರ್ ಶ್ರೀಮಂತರಾಗುವುದಕ್ಕೆ ಹೊರಟ ಪ್ರಕೃತಿಭಂಜಕರನ್ನು ಒಮ್ಮೆ ಹೋಲಿಸಿ ನೋಡಿ…
ಈಗ ಕೆರೆಗಳೆಲ್ಲಾ ಸೈಟ್ ಗಳಾಗುತ್ತಿವೆ. ಕಾಡುಗಳೆಲ್ಲಾ ರೆಸಾರ್ಟ್ ಗಳಾಗುತ್ತಿವೆ. ನೀರಿನ ಆಗರಗಳಾಗಿರುವ ಬೆಟ್ಟ ಗುಡ್ಡಗಳು ದುಡ್ಡಿನ ಖಜಾನೆಗಳಂತೆ ಗೋಚರಿಸುತ್ತವೆ.

 ಬರಗಾಲ ಬಂತೆಂದರೆ ಕಂಟ್ರಾಕ್ಟ್ ದಾರರು, ದಲ್ಲಾಳಿಗಳು ಹಬ್ಬವನ್ನಾಚರಿಸುತ್ತಾರೆ. ನಲ್ವತ್ತು ವರ್ಷಗಳ ಹಿಂದೆ ಸಂಭವಿಸಿದ ಬರಗಾಲದಲ್ಲಿ ಅಮೇರಿಕಾದಂತಹ ಕೊಬ್ಬಿದ ರಾಷ್ಟ್ರ ಸಮುದ್ರಕ್ಕೆಸೆಯುವ ಹುಳು ಹಿಡಿದ ರವೆಯನ್ನು ಜೊತೆಗೆ ಪಾಮ್ ಆಯಿಲ್ ನ ಬಿಕ್ಷೆಯನ್ನು ಹಾಕಿ, ಪಾರ್ಥೆನಿಯಮ್ ಅನ್ನು ಉಚಿತವಾಗಿ ನೀಡಿತ್ತು! ಆಗಲೇ ಆರಂಭವಾಗಿದ್ದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟವನ್ನು ನೀಡುವ ಕೇರ್‍ ಪ್ರೋಜೆಕ್ಟ್ ಯೋಜನೆ. ಇದನ್ನು  ಸಮಾಜವಾದಿಗಳು ತೀವ್ರವಾಗಿ ಪ್ರತಿಭಟಿಸಿದ್ದರು. ಆಗ ಹರಡಿದ ಪಾರ್ಥೆನಿಯಮ್ ಅನ್ನು ನಿಯಂತ್ರಿಸಲು ಮೆಕ್ಸಿಕೋದಿಂದ ’ಮೆಕ್ಸಿಕನ್ ಭೀ’ ಯನ್ನು ಆಮದು ಮಾಡಿಕೊಳ್ಳಲಾಗಿತ್ತು!.

ಅಂದು ಕುಡಿಯಲು ನೀರಿತ್ತು; ತಿನ್ನಲು ಆಹಾರವಿರಲಿಲ್ಲ. ಇಂದು ಸರಕಾರದ ಹಲವಾರು ಯೋಜನೆಗಳಿಂದ ಬಡ ಜನರ ಹೊಟ್ಟೆ ಅನಾಯಸವಾಗಿ ತುಂಬುತ್ತಿದೆ. ಹಾಗಾಗಿ ಅವರೀಗ ಹಸಿವೆಯಿಂದ ಸಾಯಲಾರರು. ’ಉದ್ಯೋಗ ಖಾತ್ರಿ’ಯೆಂಬ ದೂರದರ್ಶಿತ್ವವಿಲ್ಲದ ಯೋಜನೆಯಿಂದಾಗಿ ಸುಲಭದಲ್ಲಿ ಒಂದಷ್ಟು ದುಡ್ಡು ಅವರ ಕೈಸೇರುತ್ತಿದೆ. ಹೇಗೂ ಬಿಪಿಎಲ್ ಕಾರ್ಡ್ ನಲ್ಲಿ ಅತೀ ಕಡಿಮೆ ದರದಲ್ಲಿ ಪಡಿತರ ದೊರೆಯುತ್ತದೆ. ಇದರ ನೇರ ಪರಿಣಾಮ ಕೃಷಿಕ್ಷೇತ್ರದ ಮೇಲಾಗಿದೆ. ಅಲ್ಲೀಗ ಕೃಷಿಕಾರ್ಮಿಕರ ಕೊರತೆಯುಂಟಾಗಿ ಕೃಷಿಭೂಮಿಯೆಲ್ಲ ಪ್ಲಾಂಟೇಷನ್ ಬೆಳೆ ಬೆಳೆಯುವ ಜಾಗಗಳಾಗಿ ಪರಿವರ್ತನೆಯಾಗುತ್ತಿದೆ.
ಮುಂದಿನ ದಿನಗಳಲ್ಲಿ ಜನರು  ಸತ್ತರೆ ನೀರಿಲ್ಲದೆ ಸಾಯಬೇಕಷ್ಟೇ.ಮನುಷ್ಯ ಪ್ರಕೃತಿಯ ಮೇಲೆ ಹೀಗೆಯೇ ದೌರ್ಜನ್ಯ ನಡೆಸುತ್ತಾ ಹೋದರೆ ಆ ದಿನಗಳೂ ದೂರವಿಲ್ಲವೆನಿಸುತ್ತಿದೆ

[ ಮೇ ೮ರ ವಿಜಯಕರ್ನಾಟಕದ ನನ್ನ ಅಂಕಣ ’ಅನುರಣನ’ದಲ್ಲಿ ಪ್ರಕಟವಾದ ಬರಹ.]

Monday, May 7, 2012

’ಬೌತಿಕದ ಹಸಿವು ಮತ್ತು ಅಧ್ಯಾತ್ಮದ ಸೆಳೆತ
ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಲಾಯಿತಯ್ಯಾ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಅಲ್ಲಮನ ಈ ವಚನವನ್ನು ಮತ್ತೆ ಮತ್ತೆ ಗುನುಗುಣಿಸಲು ಕಾರಣವಾಗಿದ್ದು ಇತ್ತೀಚೆಗೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ನಡೆದ ’ಜನಪರ ಸಂಸ್ಕೃತಿ ಉತ್ಸವ’ ಎಂಬ ನಾಟಕೋತ್ಸವ.
ರಂಗಚೇತನ ಕಲಾವಿದರು ಆಯೋಜಿಸಿದ ಈ ನಾಟಕೋತ್ಸವದಲ್ಲಿ ಒಟ್ಟು ನಾಲ್ಕು ನಾಟಕಗಳು ಪ್ರದರ್ಶನಗೊಂಡವು. ಜೊತೆಗೊಂದು ಬೀದಿ ನಾಟಕವೂ ಇತ್ತು. ಎಲ್ಲಾ ನಾಟಕೋತ್ಸವದಂತೆ ಇಲ್ಲಿಯೂ ವಿಚಾರಸಂಕಿರಣ, ಕವಿಗೋಷ್ಠಿ, ಜಾನಪದ ಮೇಳ, ಪ್ರಶಸ್ತಿ ವಿತರಣೆಗಳಿದ್ದವು.

ನಾಟಕೋತ್ಸವದ ಆರಂಭದ ದಿನ ಪ್ರದರ್ಶಿತಗೊಂಡ ನಾಟಕ ’ಅರಿವಿನಮನೆ. ಈ ನಾಟಕೋತ್ಸವದ ಆಯೋಜಕರಾದ ನಂಜುಂಡಸ್ವಾಮಿ ರಚಿಸಿ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶಿಸಿದ ಈ ನಾಟಕವನ್ನು ರಂಗಚೇತನ ತಂಡದ ಕಲಾವಿದರು ಅಭಿನಯಿಸಿದ್ದರು.

ಮಾದಾರ ಚೆನ್ನಯ್ಯ ಕೀಳು ಜಾತಿಯವನು ವೃತ್ತಿಯಿಂದ ಚಪ್ಪಲಿ ಹೊಲಿಯುವವನು. ಆದರೆ ಕರಸ್ಥಳದಲ್ಲಿ ಲಿಂಗವನ್ನಿಟ್ಟು ಭಕ್ತಿ ನೈವೇಧ್ಯವನ್ನು ಅರ್ಪಿಸುವಾತ.  ಆ ರಾಜ್ಯದ ಒಡೆಯ ಚೋಳ ಮಹಾರಾಜ ಭಕ್ಷ್ಯಬೋಜ್ಯಗಳನ್ನಿತ್ತು ನೈವೇದ್ಯ ಮಾಡಿದರೂ ಸ್ವೀಕರಿಸದ ಶರಣವೇಷದಾರಿ ಶಿವ. ಚೆನ್ನಯ್ಯನ ಮನೆಯ ಅಂಬಲಿಯನ್ನು ಅಕ್ಕರೆಯಿಂದ ಉಣ್ಣುತ್ತಾನೆ. ಇದನ್ನು ತಿಳಿದ ರಾಜ ’ನನ್ನ ಶಿವನಿಗೆ ಅಂಬಲಿ ಕುಡಿಸಿದನೇ’ ಎಂದು ಚೆನ್ನಯ್ಯನ ಮೇಲೆ ಮೊದಲು ಕುಪಿತಗೊಂಡರೂ ಅಮೇಲೆ ಚೆನ್ನಯ್ಯನ ಮನೆಗೆ ಬಂದು ಅವನ ಭಕ್ತಿ ಪಾರಮ್ಯವನ್ನು ಕಂಡು ಮನಪರಿವರ್ತನೆಗೊಂಡು ಅವನನ್ನು ಆಸ್ಥಾನಕ್ಕೆ ಅಹ್ವಾನಿಸುತ್ತಾನೆ.
 ಚೆನ್ನಯ್ಯ ಆ ರಾಜ್ಯವನ್ನು ಬಿಟ್ಟು ಬಸವಣ್ಣನಿರುವ ಕಲ್ಯಾಣಕ್ಕೆ ತಪ್ಪಿಸಿಕೊಂಡು ಬರುತ್ತಾನೆ. ಅಲ್ಲಿ ಬಸವಣ್ಣನ ಜೊತೆಗೂಡಿ ಅರಿವಿನ ಮನೆಯನ್ನು ಹುಟ್ಟು ಹಾಕುತ್ತಾನೆ. ಅಕ್ಷರ ಕ್ರಾಂತಿಯ ಕನಸು ಕಾಣುತ್ತಾನೆ. ಅರಿವಿನ ಮನೆಗೆ ರಾಜಾಶ್ರಯವನ್ನು ನಯವಾಗಿ ತಿರಸ್ಕರಿಸುವ ಮಾದಾರ ಚೆನ್ನಯ್ಯ, ಮುಂದೆ ಬಿಜ್ಜಳನೇ ಅರಿವಿನ ಮನೆಯನ್ನು ಉದ್ಘಾಟಿಸುವ ಕ್ಷಣಕ್ಕೆ ಸಾಕ್ಷಿಯಾಗಬೇಕಾಗುತ್ತದೆ.  ಆ ಐತಿಹಾಸಿಕ ಕ್ಷಣದಲ್ಲಿಯೇ ಚೆನ್ನಯ್ಯ ಬ್ರಮ ನಿರಸನಗೊಂಡು ಅಲ್ಲಿಂದ ಕಣ್ಮರೆಯಾಗುತ್ತಾನೆ.

ಬಯಲು ಎನ್ನುವುದು ಅಧ್ಯಾತ್ಮಿಕತೆಯ ಅತ್ಯುನ್ನತ ಸಂಕೇತ; ಶೂನ್ಯ ಸ್ಥಿತಿ. ಅದನ್ನೇ ಅಲ್ಲಮ ’ಬಯಲು’ ಎನ್ನುತ್ತಾನೆ. ಅದಕ್ಕೆ ಆದಿಯಿಲ್ಲ ಅಂತ್ಯವಿಲ್ಲ.ಅದು ಅನಂತ.  ಈ ನಾಟಕದಲ್ಲಿ ಚೆನ್ನಯ್ಯ ಅಲ್ಲಮನಿಗೆ ಆಪ್ತನಾಗುತ್ತಾನೆ.
ಒಂದುಮುಕ್ಕಾಲು ಘಂಟೆಯ ಈನಾಟಕವನ್ನು ನಿರ್ದೇಶಕರು ಎಪ್ಪತ್ತು ನಿಮಿಷಗಳಿಗೆ ಇಳಿಸಿಕೊಂಡರೂ ನಾಟಕದ ಆಶಯಕ್ಕೆ ಧಕ್ಕೆಯಾಗಲಿಲ್ಲ. ನಾಟಕದುದ್ದಕ್ಕೂ ಬಳಸಿಕೊಂಡ ಅಲ್ಲಮ, ಬಸವಣ್ಣ ಮತ್ತು ಮಾದಾರ ಚೆನ್ನಯ್ಯನ ವಚನಗಳು ನಾಟಕದ ಸರಾಗ ಚಲನೆಗೆ ಕಾರಣವಾಗಿದ್ದವು.
ನಾಟಕೋತ್ಸವದ ಎರಡನೆಯ ನಾಟಕವಾಗಿ ಪ್ರದರ್ಶನಗೊಂಡದ್ದು ಅಮರೇಶ ನಿಡುಗೋಣಿಯವರ  ಸಣ್ಣ ಕಥೆಯಾಧಾರಿತ ನಾಟಕ ’ನೀರು ತಂದವರು’.ಶಶಿಧರ್ ಭಾರೀಘಾಟ್ ರಂಗರೂಪಕ್ಕೆ ಅಳವಡಿಸಿದ ಈ ನಾಟಕವನ್ನು ರಂಗನಿರಂತರ ತಂಡಕ್ಕಾಗಿ ನಿರ್ದೇಶಿಸಿದವರು ಎಂ. ರವಿ.
ಮೂರನೆಯ ದಿನ ದಾಕ್ಷಾಯಣಿ ಭಟ್ ನಿರ್ದೇಶನದ ’ಮರುಗಡಲು ನಾಟಕ ಪ್ರದರ್ಶನವಾಯಿತು.ಗ.ಸು.ಭಟ್ ರಚಿಸಿದ ಈ ನಾಟಕವನ್ನು ದೃಶ್ಯ ತಂಡದವರು ಅಭಿನಯಿಸಿದ್ದರು.

ಸಮಾರೋಪದಂದು ಪೂರ್ವನಿಗಧಿತವಾದ ನಾಟಕ ’ಕರ್ವಾಲೋ’ ಪ್ರದರ್ಶಿತವಾಗದೇ ಅದೇ ತಂದದವರಿಂದ ’ರಾಮಧಾನ್ಯ’ ನಾಟಕ ಪ್ರದರ್ಶಿತಗೊಂಡಿತು.ನಿರ್ದೇಶನ ಕೆ.ಎಸ್.ಡಿ.ಎಲ್ ಚಂದ್ರು ಅವರದೇ. ಹಾಗಾಗಿ ಒಂದೇ ನಾಟಕೋತ್ಸವದಲ್ಲಿ ಒಬ್ಬರೇ ನಿರ್ದೇಶಕರ, ಒಂದೇ ತಂಡದ ಎರಡು ನಾಟಕಗಳನ್ನು ನೋಡುವಂತಾದುದು ವಿಶೇಷ !
ರಾಮಧಾನ್ಯದ ಕಥೆ ಎಲ್ಲರಿಗೂ ಗೊತ್ತಿರುವಂತಹದೇ. ಇದು ಕನಕದಾಸರ ಕೃತಿ. ಆಕ್ಕಿ ಮತ್ತು ರಾಗಿ ಮಧ್ಯೆ ಯಾರು ಶ್ರೇಷ್ಟರೆಂಬ ವಾಗ್ವಾದ ಶುರುವಾಗಿ ನ್ಯಾಯ ತೀರ್ಮಾನಕ್ಕಾಗಿ ರಾಮನ ಬಳಿ ಬರುತ್ತಾರೆ. ರಾಮ ಅವರಿಬ್ಬರ ವಾದವನ್ನು ಆಲಿಸಿ ರಾಗಿಯೇ ಶ್ರೇಷ್ಟವೆಂದು ತೀರ್ಪು ಕೊಡುತ್ತಾನೆ.
ಈ ನಾಟಕದ ರಾಮ ಕ್ಯಾಲೆಂಡರಿನ ರಾಮನಲ್ಲ. ಕಾಲಿಗೆ ಸ್ಕೆಟಿಂಗ್ ಕಟ್ಟಿಕೊಂಡು ರಂಗದಲೆಲ್ಲಾ ಕರಾರುವಕ್ಕಾಗಿ ಹರಿದಾಡುತ್ತಾನೆ.
ನಾಟಕೋತ್ಸವದ ಆರಂಭ ಮತ್ತು ಅಂತ್ಯದ ನಾಟಕಗಳೆರಡರ ನಿರ್ದೇಶಕ ಮತ್ತು ತಂಡ ಒಂದೇ ಆದ ಕಾರಣದಿಂದಾಗಿಯೋ ಏನೋ ಪರಿಣಾಮದ ದೃಷ್ಟಿಯಿಂದ ಉತ್ತಮ ಪ್ರಯೋಗವೆಂದೇ ಹೇಳಬಹುದು. ಮೊದಲನೆಯದು ಹೊಸ ನಾಟಕ. ಕೊನೆಯದು ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ನಾಟಕ. ಎರಡರಲ್ಲು ಉತ್ತಮ ಲೈವ್ ಸಂಗೀತವಿತ್ತು. ಆರಂಭದಿಂದ ಅಂತ್ಯದ ತನಕ ಬಿಗಿಯಾದ ನಿರೂಪಣೆಯಿತ್ತು.ಒಂದೇ ಲಯವಿತ್ತು. ಕೆಲವು ಕಡೆ ಅದ್ದ್ಭುತವೆನಿಸುವಂತ ಬೆಳಕಿನ ವಿನ್ಯಾಸವಿತ್ತು.ಏಕಾತನತೆಯನ್ನು ಭಂಗಗೊಳಿಸಲು ಸಂಗೀತ ಮತ್ತು ನೃತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು.

 ’ಅರಿವಿನ ಮನೆ’ ನಾಟಕದುದ್ದಕ್ಕೂ ನಾಟಕದ ಆಶಯಕ್ಕೆ ಪೂರಕವಾಗಿ ರಿಂಗುಣಿಸಿದ ’ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು”ಎಂಬ ಅಲ್ಲಮನ ವಚನದ ಧ್ವನಿ ಸಮಾರೋಪದ ನಾಟಕವಾದ ’ರಾಮಧಾನ್ಯ’ದಲ್ಲೂ ಮುಂದುವರಿದಿತ್ತು. ವ್ಯ್ತತ್ಯಾಸ ಇಷ್ಟೆ.ಅಲ್ಲಿ ಇದ್ದುದು ಅಧ್ಯಾತ್ಮದ ಹಸಿವು. ಇಲ್ಲಿ ಇದ್ದುದು ಬೌತಿಕ ಹಸಿವು. ಅಲ್ಲಿಯ ಎಳೆ ಇಲ್ಲಿಯವರೆಗೂ ಹರಿದಿತ್ತು ಅದು ಈ ನಾಟಕೋತ್ಸವದ ಯಶಸ್ಸು.

[ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]