Wednesday, March 25, 2009

’ಕಡಲ ತಡಿಯ ತಲ್ಲಣ’-ನಿಮ್ಮ ಮಡಿಲಿಗೆ

ನಿಮಗಿದು ನಮ್ಮ ಪ್ರೀತಿಯ ಆಮಂತ್ರಣ.
ಮಾರ್ಚ್ ೨೮ರ ಇಳಿ ಸಂಜೆ ೬ಘಂಟೆಗೆ ’ಕಡಲ ತಡಿಯ ತಲ್ಲಣ ಪುಸ್ತಕ ಬಿಡುಗಡೆಯಾಗಲಿದೆ.
ಕರಾವಳಿಯ ಬಹುಸಂಸ್ಕೃತಿ ಕುರಿತ ಲೇಖನಗಳ ಸಂಕಲನವಿದು

ಅಧ್ಯಕ್ಷತೆ; ಬರಗೂರು ರಾಮಚಂದ್ರಪ್ಪ [ಸಾಹಿತಿಗಳು]

ಕೃತಿ ಬಿಡುಗಡೆ; ಪ್ರೋ; ಎಸ್. ಶೆಟ್ಟರ್ [ಇತಿಹಾಸ ತಜ್ನರು]

ಮುಖ್ಯ ಅಥಿತಿಗಳು; ವಿಲ್ಲಿ.ಆರ್.ಡಿ’ಸಿಲ್ವಾ [ ಸಮಾಜ ಶಾಸ್ತ್ರಜ್ನರು]
ಎನ್ .ಎ.ಎಮ್ ಇಸ್ಮಾಯಿಲ್ [ಪತ್ರಕರ್ತರು]

ಮಾರ್ಚ್೨೮. ಶನಿವಾರ ಸಂಜೆ ೬ಕ್ಕೆ

ಸ್ಥಳ; ರವೀಂದ್ರ ಕಲಾಕ್ಷೇತ್ರದ ’ಸಂಸ’ ಬಯಲು ರಂಗ ಮಂದಿರ. ಬೆಂಗಳೂರು.

ನೀವೆಲ್ಲಾ ನಿಮ್ಮ ಗೆಳೆಯ-ಗೆಳತಿಯರೊಡನೆ ತಪ್ಪದೆ ಬರಬೇಕು.

’ತಲ್ಲಣ’ದಲ್ಲಿ ಭಾಗಿಯದವರು; ವಡ್ಡರ್ಸೆ ರಘುರಾಮ ಶೆಟ್ಟಿ, ಶಿವರಾಮ ಕಾರಂತ, ದಿನೇಶ್ ಅಮೀನ್ ಮಟ್ಟು, ಯು.ಆರ್. ಅನಂತಮೂರ್ತಿ, ಸಾರಾ ಅಬೂಬಕ್ಕರ್, ವಿವೇಕರೈ, ಕೆ.ವಿ. ತಿರುಮಲೇಶ್, ಜಿ. ರಾಮಕೃಷ್ಣ, ಬೊಳುವಾರು ಮಹಮ್ಮದ್ ಕುಂನ್ಚಿ, ನಿರಂಜನ, ಪ್ರೋ.ಮರಿಯಪ್ಪಭಟ್ಟ.......ಇನ್ನೂ ಅನೇಕರಿದ್ದಾರೆ.

ನೀವೆಲ್ಲಾ ನಿಮ್ಮ ಗೆಳೆಯ-ಗೆಳತಿಯರೊಡನೆ ತಪ್ಪದೆ ಬರಬೇಕು.

ಉಷಾಕಟ್ಟೆಮನೆ
ಪುರುಷೋತ್ತಮ ಬಿಳಿಮಲೆ

Saturday, March 7, 2009

ನಾವು ಹಾಗಿಲ್ಲ


ನಾವು ಹಾಗಿಲ್ಲ
ಅಂದರೆ ತುಳುನಾಡಿನ ಮಹಿಳೆಯರು ಹಾಗಿಲ್ಲ.
’ಹಾಗಿಲ್ಲ’ ಅಂದರೆ ಮತ್ತೆ ಹೇಗೆ?
ಇಷ್ಟಕ್ಕೂ ’ಹಾಗೆ’ ಅಂದ್ರೆ ಏನು?
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇದನ್ನಿಂದು ನಿಮಗೆ ಹೇಳಬೇಕಾಗಿದೆ.
ಹೇಳದೆ ಅನ್ಯ ಮಾರ್ಗವಿಲ್ಲ.
ಯಾಕೆಂದರೆ ಮಂಗಳೂರಿನ ಹುಡುಗಿಯರೆಂದರೆ ದೈರ್ಯಕ್ಕೆ, ಮುನ್ನುಗ್ಗುವ ಸ್ವಭಾವಕ್ಕೆ, ಛಲಕ್ಕೆ, ನೇರ ನಡವಳಿಗೆ ಹೆಸರಾದವರು. ಈಗ ಮಂಗಳೂರಿನ ಹುಡುಗಿಯರನ್ನು ’ಪಬ್ ಕಲ್ಚರ್’ ಎಂಬ ಸ್ಟಿಕ್ಕರ್ ಅಂಟಿಸಿಯೇ ನೋಡುತ್ತಾರೆನೋ ಎಂಬ ಗುಮಾನಿ ನನಗೆ.
ನಾವು ಖಂಡಿತಾ ಹಾಗಿಲ್ಲ ಮಾರಾಯ್ರೆ...
’ಹಾಗಿಲ್ಲ’ ಅಂದ ಮೇಲೆ ’ಹೇಗಿದ್ದೆವು’ ಎಂಬುದನ್ನು ತಿಳಿಸಿಕೊಡಬೇಕಾದ ಜವಾಬ್ದಾರಿ ಕೂಡ ನನ್ನದೇ ಅಲ್ವಾ...?
ನಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವಳು. ನಮ್ಮ ಜಿಲ್ಲೆಯನ್ನು ’ತುಳುನಾಡು’ ಎಂದು ಕರೆಯುತ್ತಾರೆ. ತುಳು ಮಾತಾಡುವ ಜನ ಹೆಚ್ಚಾಗಿರುವ ಕಾರಣಕ್ಕೆ ಈ ಹೆಸರು. ಕನ್ನಡ, ಕೊಂಕಣಿ, ಬ್ಯಾರಿ ಭಾಷೆಗಳನ್ನಾಡುವ ಜನರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಆಡಳಿತಾತ್ಮಕ ಅನುಕೂಲಕ್ಕಾಗಿ ಹನ್ನೊಂದು ವರ್ಷಗಳ ಹಿಂದೆ ಈ ಜಿಲ್ಲೆಯನ್ನು ಉಡುಪಿ ಮತ್ತು ಮಂಗಳೂರು ಎಂಬ ಎರಡು ಜಿಲ್ಲೆಯನ್ನಾಗಿ ವಿಂಗಡಿಸಿದರೂ, ನಾವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇವೆ. ನಮ್ಮ ಜಿಲ್ಲೆಯ ಬಗ್ಗೆ ಅಷ್ಟು ಮೋಹ ನಮಗೆ.
ಅದಕ್ಕೆ ಮುಖ್ಯ ಕಾರಣವಾದದ್ದು ನಮ್ಮ ಸಮೃದ್ಧವಾದ ಪರಂಪರೆ. ನಮ್ಮ ಜಾನಪದ ಸಂಪತ್ತು. ನಮ್ಮ ಚಾರಿತ್ರಿಕ ಹಿನ್ನೆಲೆ. ನಮ್ಮಲ್ಲಿನ ಧಾರ್ಮಿಕ ಸಮನ್ವಯತೆ.
ಅದನ್ನಿಲ್ಲಿ ವಿಸ್ತಾರವಾಗಿ ವಿವರಿಸಲು ಹೋಗುವುದಿಲ್ಲ.
ತುಳುನಾಡಿನ ಸ್ತೀಯರಿಗೆ ಯಾವತ್ತಿಗೂ ಸ್ಫೂರ್ತಿದಾಯಕರಾದ ಎರಡು ಸ್ತ್ರೀರತ್ನಗಳನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಅವರೇ ತುಳು ಮಹಾಕಾವ್ಯವಾದ ’ಸಿರಿ ಪಾಡ್ದನ’ದ ನಾಯಕಿ, ಸಿರಿ ಮತ್ತು ಉಳ್ಳಾಲದ ರಾಣಿ ಅಬ್ಬಕ್ಕ ದೇವಿ.
ಇಬ್ಬರೂ ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಿ, ಅದನ್ನು ಧಿಕ್ಕರಿಸಿ ನಿಂತವರು. ಸಿರಿ ವೈಯಕ್ತಿಕ ಮಟ್ಟದಲ್ಲಿ ಅದನ್ನು ಸಾಧಿಸಿದರೆ ಅಬ್ಬಕ್ಕ ಸಾರ್ವಜನಿಕ ಮಟ್ಟದಲ್ಲಿ ಸಾಧಿಸಿದವಳು.

ರಾಣಿ ಅಬ್ಬಕ್ಕ ದೇವಿ ೧೫ನೇ ಶತಮಾನದ ಮದ್ಯ ಭಾಗದಲ್ಲಿ ಉಳ್ಳಾಲವನ್ನು ಆಳಿದ ರಾಣಿ. ಆ ಕಾಲದಲ್ಲಿ ಉಳ್ಳಾಲ ಮತ್ತು ಬಸರೂರು ತುಳುನಾಡಿನ ಪ್ರಮುಖ ಬಂದರಾಗಿತ್ತು. ಇಲ್ಲಿಂದಲೇ ಸಮುದ್ರ ಮಾರ್ಗವಾಗಿ ಮದ್ಯಪ್ರಾಚ್ಯ ದೇಶಗಳಿಗೆ ಸಂಬಾರು ಪದಾರ್ಥಗಳು ರಪ್ತಾಗುತ್ತಿದ್ದವು. ಸ್ಪೈನ್ ಮತ್ತು ಪೋರ್ಚ್ ಗಲ್ ಸಮುದ್ರ ವ್ಯಪಾರದ ಮೇಲೆ ಹಿಡಿತ ಸಾಧಿಸಿದ್ದವು. ರಪ್ತು ವ್ಯವಹಾರ ಮಾಡುವವರೆಲ್ಲ ಪೋರ್ಚುಗೀಸರಿಗೆ ಕಡ್ಡಾಯವಾಗಿ ಸುಂಕ ಕೊಡಬೇಕಾಗಿತ್ತು.

ಆದರೆ ಅಬ್ಬಕ್ಕ ಸುಂಕ ಕೊಡುವುದನ್ನು ನಿರಾಕರಿಸಿದಳು. ಜೊತೆಗೆ ನೇರವಾಗಿ ಪರ್ಷಿಯ ಮತ್ತು ಅರಬ್ ರಾಷ್ಟ್ರಗಳಿಗೆ ಕಾಳುಮೆಣಸು, ಏಲಕ್ಕಿ, ಅಕ್ಕಿ, ಹತ್ತಿ,ಬೆಲ್ಲ ಮುಂತಾದುಗಳನ್ನು ತುಂಬಿದ ಹಡಗುಗಳನ್ನು ಕಳುಹಿಸತೊಡಗಿದಳು. ಕೋಪಗೊಂಡ ಪೋರ್ಚುಗೀಸರು ಕಮಾಂಡರ್ ಡಾನ್ ಅಲ್ವೇರೊ ಡಿ ಸಿಲ್ವೆರಾ ನೇತೃತ್ವದಲ್ಲಿ ೧೫೫೬ರಲ್ಲಿ ಉಳ್ಳಾಲದ ಮೇಲೆ ದಾಳಿ ಮಾಡಿದರು. ಅಬ್ಬಕ್ಕ ಅವರನ್ನು ಹಿಮ್ಮೆಟ್ಟಿಸಿದಳು. ಮತ್ತೆ ಮತ್ತೆ ಅವರು ಅವಳ ಮೇಲೆ ಯುದ್ದ ಸಾರಿದರು. ಆದರೆ ಅಬ್ಬಕ್ಕ ಅವರನ್ನು ತನ್ನ ಸ್ವಾಮಿನಿಷ್ಟ ಸೈನಿಕರ ಬಲದಿಂದ ಬಗ್ಗು ಬಡಿದಳು.

ಅವಳು ಮಾತೃಮೂಲ ಸಂಸ್ಕೃತಿಯನ್ನು ಅನುಸರಿಸುವ ಜೈನ ಮತದವಳು.ಆದರೆ ಅವಳ ಸೈನದಲ್ಲಿ ಹಿಂದು, ಮುಸ್ಲಿಂ ಮತ್ತು ಮೊಗವೀರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸ್ವತಃ ರಾಣಿಯೇ ಸೈನ್ಯವನ್ನು ಮುನ್ನಡೆಸುತ್ತಿದ್ದಳು.

ಅಬ್ಬಕ್ಕನನ್ನು ನೇರವಾದ ಯುದ್ದದಲ್ಲಿ ತಾವು ಗೆಲ್ಲಲಾರೆವೆಂದು ಮನಗಂಡ ಪೋರ್ಚುಗೀಸರು ಆರಿಸಿಕೊಂಡದ್ದು ವಾಮಮಾರ್ಗವನ್ನು. ಅವರು ಆಕೆಯ ಗಂಡ ಮಂಗಳೂರಿನ ಅರಸ ಲಕ್ಷ್ಮಪ್ಪ ಬಂಗನನ್ನು ತಮ್ಮ ಬಲೆಗೆ ಕೆಡವಿಕೊಂಡರು. ಆತನನ್ನು ಹೆಂಡತಿಯ ವಿರುದ್ದ ಎತ್ತಿಕಟ್ಟಿದರು. ಆತ ಪೋರ್ಚುಗೀಸರೊಡನೆ ಒಪ್ಪಂದ ಮಾಡಿಕೊಂಡು ಅವರಿಗೆ ಸುಂಕ ಕೊಡತೊಡಗಿದ. ಅಬ್ಬಕ್ಕನಿಗೆ ಕೋಪ ಬಂತು. ಪತಿ-ಪತ್ನಿಯರಲ್ಲಿ ವಿರಸ ಮೂಡಿತು. ಕೊನೆಗೆ ಇದೇ ಕಾರಣಕ್ಕಾಗಿ ಅವಳು ಗಂಡನಿಂದ ದೂರವಾದಳು. ಆತ ಇನ್ನೊಂದು ಮದುವೆ ಮಾಡಿಕೊಂಡ.

ಆಕೆಯ ರಾಜತಾಂತ್ರಿಕ ನಡೆಗಳು ವಿದೇಶಿಯರಿಗೂ ಅಚ್ಚರಿ ಮೂಡಿಸಿದ್ದವು. ಯುರೋಪಿನಲ್ಲಿ ಆಕೆ ದಂತಕಥೆಯಾಗಿದ್ದಳು. ಸ್ಪೇನಿನ ಚಕ್ರವರ್ತಿ ಶಾ ಅಬ್ಬಾಸ್ ಅಬ್ಬಕ್ಕಳ ಬಗ್ಗೆ ಕುತೂಹಲಿಯಾಗಿದ್ದ. ಇಟಾಲಿಯನ್ ಪ್ರವಾಸಿ ಪಿಟ್ಟ್ರೋ ಡೆಲ್ಲಾ ವೆಲೆ ತಾನು ಭಾರತ ಪ್ರವಾಸ ಮಾಡುತ್ತೇನೆಂದಾಗ ಆತ ಅಬ್ಬಕ್ಕನನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದ.

ಉಳ್ಳಾಲಕ್ಕೆ ಬಂದ ಪಿಟ್ರೋ ಡೆಲ್ಲಾ ವೆಲೆ ಅಬ್ಬಕ್ಕನನ್ನು ಭೇಟಿಯಾಗಿ ಆಕೆಯ ಆತಿಥ್ಯ ಪಡೆಯುತ್ತಾನೆ. ಆಕೆಯ ಮಾತೃಹೃದಯವನ್ನು ಮನದುಂಬಿ ಹೊಗಳುತ್ತಾನೆ. ಆತ ಅವಳ ಬಗ್ಗೆ ಹೀಗೆ ಬರೆಯುತ್ತಾನೆ, ’ ನಲ್ವತ್ತು ವಯಸ್ಸು ಮೀರದ ಆ ಮಹಿಳೆಯಲ್ಲಿ ಒಬ್ಬ ರಾಣಿಯಲ್ಲಿರಬೇಕಾದ ಆಡಂಬರವಿರಲಿಲ್ಲ. ೮-೧೦ ಸೈನಿಕರ ಬೆಂಗಾವಲಿನಲ್ಲಿ ಆಕೆ ಬೀದಿಯಲ್ಲಿ ನಡೆದು ಬರುತ್ತಿದ್ದಳು. ಬರಿಗಾಲು, ಚಪ್ಪಲಿಗಳಿರಲಿಲ್ಲ. ಬಿಸಿಲಿನ ರಕ್ಷಣೆಗಾಗಿ ತಾಳೆ ಗರಿಯಿಂದ ತಯಾರಿಸಲಾದ ಕೊಡೆ ಹಿಡಿಯಾಲಾಗಿತ್ತು. ಕಪ್ಪು ವರ್ಣದ ಆಕರ್ಷಕ ವ್ಯಕ್ತಿತ್ವದ ಆಕೆ ಸಾಧಾರಣವಾದ ಹತ್ತಿಯ ಬಟ್ಟೆ ತೊಟ್ಟಿದ್ದಳು. ತಲೆಗೆ ಸೆರಗನ್ನು ಹೊದ್ದಿದ್ದಳು. ಅವಳು ಅಡುಗೆಮನೆಯಲ್ಲಿ ಕೆಲಸ ಮಾಡುವ ಒಬ್ಬ ಸಾಮಾನ್ಯ ಹೆಂಗಸಿನಂತೆ ಕಾಣುತ್ತಿದ್ದಳೇ ಹೊರತು ರಾಣಿಯಂತಲ್ಲ’ ಎಂದು ನಿರಾಶೆಯಿಂದ ಬರೆಯುತ್ತಾನೆ

ಇಂದಿಗೆ ಐದು ಶತಮಾನಗಳ ಹಿಂದೆ ತನ್ನ ತಾಯ್ನಾಡನ್ನು ಉಳಿಸಿಕೊಳ್ಳಲು ವಿದೇಶಿಯರೊಡನೆ ಹೋರಾಡಿ, ಜಯಶೀಲಳಾಗಿ ಯುರೊಪಿನಾದ್ಯಂತ ದಂತಕಥೆಯಾಗಿದ್ದ ರಾಣಿ ಅಬ್ಬಕ್ಕಳನ್ನು ಇತಿಹಾಸ ಯಾಕೆ ಮರೆತಿದೆಯೋ ಗೊತ್ತಾಗುತ್ತಿಲ್ಲ. ಕಿತ್ತೂರು ಚೆನ್ನಮ್ಮನಿಗಿಂತ ಮೂರು ಶತಮಾನಕ್ಕಿಂತಲೂ ಹಿಂದೆ ಈಕೆ ವಿದೇಶಿಯರನ್ನು ಏಕಾಂಗಿಯಾಗಿ ಎದುರಿಸಿದ್ದಳು. ಸಿನೇಮಾ, ಪಠ್ಯಪುಸ್ತಕಗಳಿಂದಾಗಿ ಚೆನ್ನಮ್ಮ ಜನಮಾನಸದಲ್ಲಿ ನೆಲೆ ನಿಂತಳೇ? ಅಥವಾ ಜಾತಿ ಲೆಖ್ಖಾಚಾರದಲ್ಲಿ ಚೆನ್ನಮ್ಮ ಮುನ್ನೆಲೆಗೆ ಬಂದಳೇ? ಯೊಚಿಸಬೇಕಾದ ವಿಷಯ.

ಇನ್ನೊಬ್ಬಾಕೆ ಸಿರಿ. ಗಟ್ಟಿಗಿತ್ತಿ ಹೆಣ್ಣುಮಗಳಿಗೆ ನಾವು ಹೋಲಿಸುವುದು ಮಹಾಭಾರತದ ದ್ರೌಪಧಿಯನ್ನು. ಆದರೆ ಸಿರಿ ಸ್ವಾಬಿಮಾನದಲ್ಲಿ ದ್ರೌಪದಿಯನ್ನೂ ಮೀರಿಸುತ್ತಾಳೆ. ಆದರೆ ಇಬ್ಬರಲ್ಲೂ ಒಂದು ಸಾಮ್ಯತೆಯಿದೆ, ಅದೆಂದರೆ ಇಬ್ಬರೂ ಅಯೋನಿಜೆಯರು. ಹುಟ್ಟಿನಲ್ಲಿ ನಿಗೂಡತೆಯನ್ನು ಉಳಿಸಿಕೊಂಡವರು. ಪುರುಷ ದಬ್ಬಾಳಿಕೆಯನ್ನು ಪ್ರಶ್ನಿಸಿದವರು. ಸ್ತ್ರೀಕುಲಕ್ಕೆ ಮಾದರಿಯಾಗಿ ಬದುಕಿದವರು.
ತುಳುನಾಡಿನಲ್ಲಿನ ಶ್ರೀಮಂತ ಬೆರ್ಮ ಆಳ್ವನಿಗೆ ಮಕ್ಕಳಿರಲಿಲ್ಲ. ಇವನ ದುಃಖ ’ಆದಿ ಅಲ್ಲಡೆ’ ಕುಲಬ್ರಹ್ಮ ದೇವರಿಗೆ ಗೊತ್ತಾಗಿ ಅಡಿಕೆ ಹಾಳೆಯಲ್ಲಿ ಪ್ರಸಾಧ ರೂಪವಾಗಿ ಹೆಣ್ಣು ಮಗುವನ್ನು ನೀಡುತ್ತಾನೆ. ಅವಳೇ ಸಿರಿ.
ಬಂಟ ಸಮುದಾಯದವರು ಸಿರಿ ಮತ್ತು ಅವಳ ವಂಶದವರನ್ನು ಕುಲದೈವಗಳಂತೆ ಪೂಜಿಸುತ್ತಾರೆ. ಗಂಡನ ನೈತಿಕತೆಯನ್ನು ಪ್ರಶ್ನಿಸಿ ತಾನಾಗಿಯೇ ವಿಛ್ಚೇದನ ಕೇಳಿದ ಮೊದಲ ಮಹಿಳೆ ಈಕೆ. ಅಷ್ಟು ಮಾತ್ರವಲ್ಲ, ಮರುಮದುವೆಯನ್ನೂ ಮಾಡಿಕೊಳ್ಳುತ್ತಾಳೆ. ಇಂದಿಗೂ ನಂದಳಿಕೆ, ಹಿರಿಯಡ್ಕ, ನಿಡ್ಗಲ್, ಕವತ್ತಾರುಗಳಲ್ಲಿ ನಡೆಯುವ ’ಸಿರಿಜಾತ್ರೆ’ಯಲ್ಲಿ ಹತ್ತಾರು ಸಾವಿರ ಮಹಿಳೆಯರ ಮೈಮೇಲೆ ಸಿರಿ ಏಕಕಾಲದಲ್ಲಿ ಅವಾಹನೆಗೊಳ್ಳುತ್ತಾಳೆ. ಅಲ್ಲೊಂದು ಮದ್ಯಂತರ ಜಗತ್ತು ತೆರೆದುಕೊಳ್ಳುತ್ತದೆ.
ಸಿರಿ ಪಾಡ್ದನದಲ್ಲಿ ೧೫,೬೮೩ ಸಾಲುಗಳಿವೆ. ಹೋಮರನ ’ಇಲಿಯೆಡ್’ ನಲ್ಲಿ ಇದಕ್ಕಿಂತ ಕೇವಲ ೫ ಸಾಲು ಹೆಚ್ಚಿದೆಯಷ್ಟೆ.


ನಮ್ಮ ಜಿಲ್ಲೆಯ ಧರ್ಮಸಮನ್ವಯತೆಗೆ ಪರಂಪರೆಯಿದೆ. ಭೂತಾರಾದನೆ ಇಲ್ಲಿಯ ವಿಶಿಷ್ಟ ಆರಾಧನ ಪದ್ದತಿ. ಇದರ ಸಾಹಿತ್ಯ ’ಪಾಡ್ದನ’ ಗಳು. ಇವು ಮೌಕಿಕವಾಗಿ ಹರಿದು ಬಂದಿರುವ ಹಾಡುಗಳು. ಬಾವ ಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿ ಕಾಲಾಂತರದಲ್ಲಿ ಬಬ್ಬರ್ಯ ಎಂಬ ಭೂತವವಾಗಿ ಸರ್ವ ಮತದವರಿಂದಲೂ ಆರಾಧನೆಗೊಳ್ಳುತ್ತಾನೆ. ಈ ದೈವ ಕರಾವಳಿಯ ಜನರನ್ನು ಸಮುದ್ರ ವಿಪ್ಲವಗಳಿಂದ ರಕ್ಷಿಸುತ್ತದೆಯೆಂದು ಇಲ್ಲಿಯ ಜನರ ನಂಬಿಕೆ. ಹೀಗೆಯೇ ಸರ್ವ ಧರ್ಮಿಯರಿಂದ ಆರಾಧನೆಗೊಳ್ಳುತ್ತಿರುವ ಇನ್ನೊಂದು ಬೂತ ಅಲಿ ಬೂತ. ಈತ ನಿಜ ಬದುಕಿನಲ್ಲಿ ಮುಸ್ಲಿಂ ಮಂತ್ರವಾದಿಯಾಗಿದ್ದನಂತೆ.

ಕುಂದಾಪುರದ ಕರಾವಳಿಯಲ್ಲಿ ಮೀನುಕ್ಷಾಮ ಉಂಟಾದರೆ ಇಲ್ಲಿಯ ಮೀನುಗಾರರು’ಸೀರನಿಪೂಜೆ’ ಎಂಬ ಆರಾಧನೆಯನ್ನು ನಡೆಸುತ್ತಾರೆ. ಅದರ ಪೂಜಾವಿಧಿಗಳನ್ನು ಮುಸ್ಲಿಮ್ ಮೌಲಿಯೊಬ್ಬರು ನಡೆಸುತ್ತಾರೆ.
ಹಿಂದು ಮತ್ತು ಜೈನ ಧರ್ಮಗಳ ಸಮನ್ವಯಕ್ಕೆ ಧರ್ಮಸ್ಥಳಕ್ಕಿಂತ ಬೇರೆ ಉದಾಹರಣೆ ಬೇಕೆ? ಅಣ್ಣಪ್ಪ ಪಂಜುರ್ಲಿ ಇಲ್ಲಿಯ ರಕ್ಷಕ ದೈವ. ಪ್ರಾಣಿಗಳನ್ನು ಕೂಡ ದೈವವಾಗಿ ಕಂಡ ನಾಡಿದು.

ತುಳುನಾಡಿನ ಅನಕ್ಷರಸ್ಥರೂ ಕೂಡ ವಿವೇಕಶಾಲಿಗಳು. ಅದಕ್ಕೆ ಕಾರಣ ಯಕ್ಷಗಾನ. ಅದು ಇಲ್ಲಿಯ ಜನರನ್ನು ವಿದ್ಯಾವಂತರನ್ನಾಗಿ[ಎಜ್ಯುಕೇಟ್] ಮಾಡಿದೆ. ಕಲೆಗೆ ಜಾತಿಧರ್ಮಗಳ ಹಂಗಿಲ್ಲ. ಇಲ್ಲವಾದರೆ ಜಬ್ಬಾರ್ ನಂತಹ ಒಬ್ಬ ತಾಳಮದ್ದಳೆ ಅರ್ಥದಾರಿ, ಕ್ರಿಶ್ಚಿಯನ್ ಬಾಬುವಿನಂತಹ ವೇಶದಾರಿ ಹುಟ್ಟಲು ಸಾಧ್ಯವಿತ್ತೆ?

ಈ ಸಂದರ್ಭದಲ್ಲೊಂದು ಘಟನೆ ನೆನಪಾಗುತ್ತದೆ. ಮಂಗಳೂರಿನ ಕೊಣಾಜೆಯಲ್ಲಿ ಕನ್ನಡ ಎಂ.ಎಗೆ ಸೇರಿದ ಮೊದಲ ದಿನ. ಈಗ ಮೈಸೂರಿನಲ್ಲಿರುವ, ಕನ್ನಡ ಅಂಕೆಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಪಂಡಿತಾರದ್ಯರು ತರಗತಿಗೆ ಬಂದರು. ಬಂದವರೇ ನಮ್ಮನ್ನು ನೋಡಿ ’ಇದೇನ್ರಿ ಒಳ್ಳೆ ಎಲಿಮೆಂಟ್ರಿ ಶಾಲೆ ಮಕ್ಕಳ ಹಾಗೆ ಕೂತಿದ್ದೀರಲ್ಲಾ.. ಮಿಕ್ಸ್ ಆಗಿ ಕೂತ್ಕೊಬಾರ್ದ’ ಎಂದರು. ಆಗ ನನ್ನ ಪಕ್ಕ ಬಂದು ಕೂತವನೇ ಇಸ್ಮಾಯಿಲ್. ಮುಂದೆ ಆತ ನನಗೆ ಒಳ್ಳೆಯ ಗೆಳೆಯನಾದ. ಈಗ ಭಜರಂಗದವರ ಕಣ್ಗಾವಲಿನಲ್ಲಿ ಈ ಸಂಬಂಧ ಯಾವ್ಯಾವ ರೀತಿಯಲ್ಲಿ ವ್ಯಖ್ಯಾನಗೊಳ್ಳಬಹುದು..? ಅದು ನಿಮ್ಮ ಊಹೆಗೆ ಬಿಟ್ಟದ್ದು.
ನಮ್ಮ ಜ್ಯೂನಿಯರ್ಸ್ ನ್ನು ವೆಲ್ ಕಮ್ ಮಾಡುನ ಕಾರ್ಯಕ್ರಮದಲ್ಲಿ ನನ್ನ ಜ್ಯೂನಿಯರ್ ಮ್ಯಾಥ್ಯುವಿಗೆ ಗುಲಾಬಿ ಹೂ ಕೊಟ್ಟು ’ಇದನ್ನು ನಿಮಗಿಷ್ಟವಾದ ಸೀನಿಯರ್ ಲೇಡಿಗೆ ಕೊಡಿ’ ಎಂದಾಗ ಆತ ನಾಚುತ್ತ ಬಂದು ಅದನ್ನು ನನ್ನ ಕೈಲಿಟ್ಟದ್ದನ್ನು ಮರೆಯಲು ಸಾಧ್ಯವೇ?.

ಇದೆಲ್ಲಕ್ಕಿಂತಲೂ ಮುಖ್ಯವಾದದ್ದು ಇಸ್ಮಾಯಿಲ್ ಮತ್ತು ಮ್ಯಾಥ್ಯು ಇಬ್ಬರು ತುಳು ಸಾಹಿತ್ಯದಲ್ಲಿ ಸ್ಪೆಶಲೈಷನ್ ಪಡೆಯುತ್ತಿದ್ದರು. ಈಗ ಮಂಗಳೂರಿನಲ್ಲಿ ಅನ್ಯ ಧರ್ಮಿಯರು ಕನ್ನಡ ಮತ್ತು ತುಳು ಸಾಹಿತ್ಯವನ್ನು ಅಧ್ಯಯನ ಮಾಡಬಲ್ಲಂತಹ ವಾತಾವರಣ ಇದೆಯೇ? ನನಗಂತೂ ಸಂಶಯವಿದೆ.

ನನ್ನ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಾಮಾನಗಳನ್ನೆಲ್ಲಾ ನೋಡುತ್ತಿರುವಾಗ ಆತಂಕವಾಗುತ್ತಿದೆ. ನಮ್ಮ ಸಮಾಜ ಸಾಂಸ್ಕ್ರ್‍ಅತಿಕ ರೂಪಾಂತರದ[ಕಲ್ಚರಲ್ ಟ್ರಾನ್ಸ್ ಪಾರ್ಮೇಶನ್]ದ ಹಾದಿಯಲ್ಲಿದೆ. ಈ ಹಾದಿಯಲ್ಲಿ ಪರವಿರೋಧ ಇದ್ದೇ ಇರುತ್ತದೆ. ಸರಳರೇಖೆಯ ಈ ಹಾದಿಯ ಒಂದು ತುದಿಯಲ್ಲಿ ಧಾರ್ಮಿಕ ಮತಾಂಧರಿದ್ದರೆ ಇನ್ನುಂದು ತುದಿಯಲ್ಲಿ ಜಾಗತೀಕರಣಕ್ಕೆ ತಮ್ಮನ್ನು ತೆರೆದುಕೊಂಡಂತಹ ಯುವಜನತೆಯಿದೆ. ಘರ್ಷಣೆಗಳಾಗುವುದು ಸಾಮಾನ್ಯ.

ಸಾಂಸ್ಕೃತಿಕ ರೂಪಾಂತರ ಭಾರತದಾದ್ಯಂತ ನಡೆಯುತ್ತದೆ. ಇಲ್ಲಿ ಪ್ರಶ್ನೆ ಹುಟ್ಟಿಕೊಳ್ಳುವುದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಪಬ್ ಮೇಲೆ ಯಾಕೆ ದಾಳಿ ನಡೆಸಬೇಕು? ಅದರಲ್ಲಿಯೂ ಮಂಗಳೂರಿನಲ್ಲಿಯೇ ಯಾಕಾಗಬೇಕು? ರಾಜಧಾನಿ ಬೆಂಗಳೂರಿನಲ್ಲಿ ಅಸಂಖ್ಯಾತ ಪಬ್ ಗಳಿವೆ. ಚಿತ್ರಾನ ಸಂಸ್ಕೃತಿಯ ಈ ನಗರದಲ್ಲಿ ಕುಡಿದು, ಕುಣಿದು, ಕುಪ್ಪಳಿಸುವ ಒಂದು ವರ್ಗದ ಜನತೆಯಿದೆ. ಹಾಗಾದರೆ ಇಲ್ಯಾಕೆ ದಾಳಿಗಳಾಗುವುದಿಲ್ಲ? ಮಂಗಳೂರೇ ಯಾಕೆ ಬೇಕಿತ್ತು? ಚರ್ಚ್ ಮೇಲಿನ ದಾಳಿ ಅಲ್ಲೇ ಯಾಕೆ ಆರಂಭವಾಗಿತ್ತು?

ಯಾಕೆಂದರೆ ಅಲ್ಲಿ ರಾಜಕೀಯ ಪ್ರವೇಶವಾಗಿತ್ತು. ತುಳುನಾಡಿನ ಸಾಂಸ್ಕೃತಿಕ ಸಾಮರಸ್ಯವನ್ನು ರಾಜಕಾರಣಿಗಳು ಒಡೆದುಬಿಟ್ಟರು. ನಮ್ಮ ಜಿಲ್ಲೆಯನ್ನು ಸರಕಾರಗಳು ರೂಪಿಸಲಿಲ್ಲ; ಕಟ್ಟಲಿಲ್ಲ. ಕ್ರಿಶ್ಚಿಯನ್ನರು ಶಿಕ್ಷಣ ಕೊಟ್ಟರು. ನಾವು ಕನಸುಕಂಡೆವು; ಹೊರ ರಾಜ್ಯಗಳಿಗೆ,ಹೊರದೇಶಗಳಿಗೆ ಹೋದೆವು. ದುಡಿದೆವು. ತಾಯ್ನಾಡಿಗೆ ದುಡ್ಡು ತಂದೆವು. ನಮ್ಮ ಜಿಲ್ಲೆಯನ್ನು ಖಾಸಗಿಯಾಗಿಯೇ ಕಟ್ಟಿ ಬೆಳೆಸಿದೆವು. ಬುದ್ದಿವಂತರ ನಾಡಿದು ಎಂಬ ಹೆಮ್ಮೆ ನಮಗಿದೆ.

ಈಗ ನಮ್ಮನ್ನು ಒಡೆಯಲು ಬಂದಿದ್ದಾರೆ ಸಂಸ್ಕೃತಿ ರಕ್ಷಕರು; ಅವರನ್ನಾಳುವ ಪ್ರಭುಗಳು.
ಸಂಸ್ಕೃತಿಯನ್ನು ಕಲಿಸಲಾಗುವುದಿಲ್ಲ; ಹೇರಲಾಗುವುದಿಲ್ಲ. ಅದು ಕಾಲಾನುಕ್ರಮದಲ್ಲಿ ರೂಪುಗೊಳ್ಳುವ ಜೀವನ ಪದ್ದತಿ; ನಂಬಿಕೆಯ ಜಗತ್ತು. ಅದೊಂದು ಪ್ರಕ್ರಿಯೆ....

[ಮಾರ್ಚ್ ೮ರಂದು ಅಂದರೆ ಇಂದು ಕನ್ನಡಪ್ರಭದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನವಿದು.
’ಕಡಲ ತಡಿಯ ತಲ್ಲಣ’ದಲ್ಲಿ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಪ್ರಕಟವಾಗಲಿದೆ.]

Thursday, March 5, 2009

ಕಡಲ ತಡಿಯ ತಲ್ಲಣ

ನನ್ನ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.
ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹ.
ಬೋರ್ಗೆರೆವ ಕಡಲು, ಪಶ್ಚಿಮ ಘಟ್ಟ ಶ್ರೇಣಿ, ಝುಳು ಝುಳು ಹರಿಯುವ ನದಿ, ಹಚ್ಚ ಹಸಿರಿನ ವನಸಿರಿ, ಸದಾ ಕ್ರಿಯಾಶೀಲರಾಗಿರುವ ಜನ- ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.
’ತುಳುನಾಡು’ ಎಂದು ಕರೆಯಲ್ಪಡುವ ಈ ಕರಾವಳಿ ಸಮೃದ್ದವಾದ ಕಲಾ ಪರಂಪರೆಯನ್ನು ಹೊಂದಿದೆ. ಇಲ್ಲಿ ನಾಗಾರಾಧನೆ, ಭೂತಾರಾಧನೆಯಂತ ಆರಾಧನ ಪದ್ದತಿಯಿದೆ. ಕಂಬಳ, ಚೆನ್ನೆಮಣೆ, ಕಾಯಿ ಕುಟ್ಟುವುದು, ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜ, ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ, ಬಬ್ಬರ್ಯ ಭೂತವಿದೆ. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ಮುಲ್ಕಿಯ ಕಾರ್ನಾಡ್ ದುರ್ಗಪರಮೇಶ್ವರಿ ದೇವಸ್ಥಾನವಿದೆ.

ಹಾಗಿದ್ದರೂ ನನ್ನ ಜಿಲ್ಲೆಯಿಂದು ಕೋಮು ಗಲಭೆಗಳಿಂದ ತತ್ತರಿಸಿದೆ. ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ. ಜನ ಭಯಭೀತರಾಗಿದ್ದಾರೆ. ದನಿಯೆತ್ತಿದವರ ಧ್ವನಿಯನ್ನು ಅಡಗಿಸಲಾಗುತ್ತಿದೆ.

ಏನಾದರೂ ಮಾಡಬೇಕಲ್ಲಾ....... ಎಂದಾಗ ಹುಟ್ಟಿಕೊಂಡದ್ದೇ ಈ ಆಲೋಚನೆ.

ನಾನು ಮತ್ತು ಪುರುಷೋತ್ತಮ ಬಿಳಿಮಲೆ ಸೇರಿ ’ಕಡಲ ತಡಿಯ ತಲ್ಲಣ’ ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ. ನಮ್ಮ ಗೆಳೆಯರ ಬಳಗ ಒತ್ತಾಸೆಯಾಗಿ ನಿಂತಿದೆ.

ತುಳುನಾಡನ್ನು ಕೇಂದ್ರಿಕರಿಸಿರುವ ಈ ಪುಸ್ತಕದಲ್ಲಿ ಕಡಲ ಕಿನಾರೆಯ ಬಹಳಷ್ಟು ಲೇಖಕರ ಬರಹಗಳಿರುತ್ತವೆ. ಅವುಗಳು ಈಗ ತಾನೆ ಅಚ್ಚಿನ ಮನೆ ಪ್ರವೇಶಿಸುತ್ತಲಿದೆ.
ಇನ್ನು ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈ ಸೇರಲಿದೆ. ಅದಕ್ಕೆ ಮೊದಲು ನಿಮ್ಮನ್ನೊಂದು ಸಲಹೆ ಕೇಳೋಣ ಅನಿಸಿತು.
’ಕಡಲ ತಡಿಯ ತಲ್ಲಣ’ ಕುರಿತಂತೆ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ನಾವು ಮುನ್ನಡೆಯುವಲ್ಲಿ ಅದು ಸಹಾಯಕವಾಗಬಹುದೆಂಬ ನಂಬಿಕೆ ನಮ್ಮದು.