Wednesday, July 27, 2016

ಪ್ರಭುತ್ವದಡಿ ನಲುಗುತ್ತಿರುವ ಮಣಿಪುರದರಸಿಯರು!


ಯಕ್ಷಗಾನದಲ್ಲಿ ’ಸಲಾಂ ತಕ್ಕೋ ಮಣಿಪುರ ದೊರೆಯೇ...’ ಎಂಬ ಹಾಡು ಬಲು ಜನಪ್ರಿಯ. ಹೀಗೆ ಹಾಸ್ಯಗಾರನಿಂದ ಬಾಗಿ ನಮಿಸಿಕೊಳ್ಳುವಾತ ಮಣಿಪುರದರಸು ಬಬ್ರುವಾಹನ. ಆದರೆ ಅಂತಹ ವೀರಾಧಿವೀರ ಬಬ್ರುವಾಹನನ್ನು ರೂಪಿಸಿದ ಮಣಿಪುರದ ಅರಸಿ ಚಿತ್ರಾಂಗದೆಯ ಸ್ಥಾನ ಯಾವುದು.? ಪುರಾಣದ ಪಾತ್ರವನ್ನು ಈ ಆಧುನಿಕ ಕಾಲಘಟ್ಟದಲ್ಲಿ ನಿಂತು ನೋಡುವುದರ ಔಚಿತ್ಯವೇನು ಎಂದು ಪ್ರಶ್ನಿಸುವುದಾದರೆ...ಅದಕ್ಕೆ ಕಾರಣವಿದೆ.
ಅದು.  ೧೯೪೪ ನೇ ಇಸವಿ, ಏಪ್ರಿಲ್ ೧೪ನೇ ತಾರೀಖು. ಮಣಿಪುರದ ರಾಜಧಾನಿ ಇಂಪಾಲದಿಂದ ೫೨ ಕಿಮೀ ದೂರದ ಮೊಯಿರಂಗ್ ನಲ್ಲಿ ಅಜಾದ್ ಹಿಂದ್ ಪೌಜ್ ನ [INA] ಸಂಸ್ಥಾಪಕ ಸುಭಾಸ್ ಚಂದ್ರ ಭೋಸ್ ರವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ಮುಂದಿನ ಘಟನೆಗಳಿಗೆ ಪೂರಕವಾಗಿ ಒಂಚೂರು ಮಾಹಿತಿ;  ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಪರಮಾಧಿಕಾರವಿದೆ. ಅದಕ್ಕೆ ಯಾರ ಮೇಲಾದರೂ ದೇಶದ್ರೋಹಿಗಳು, ಸಮಾಜ ಘಾತುಕರು, ಉಗ್ರಗಾಮಿಗಳೆಂದು ಶಂಕೆ ಉಂಟಾದಲ್ಲಿ ಎಲ್ಲಿಗೆ ಬೇಕಾದರೂ ನುಗ್ಗಿ  ವಾರಂಟ್ ಇಲ್ಲದೆ ಅವರನ್ನು ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದುಕೊಳ್ಳಬಲ್ಲುದು. ಶಂಕಿತರನ್ನು ಗುಂಡು ಹೊಡೆದು ಕೊಂದರೂ ಅದನ್ನು ಯಾರೂ ಪ್ರಶ್ನಿಸಲಾರರು.
ಇನ್ನೊಂದು ಘಟನೆ; ೨೦೦೦ನೇ ಇಸವಿಯ ನವೆಂಬರ್ ೨ನೇ ತಾರೀಖು. ಇಂಪಾಲದಿಂದ ೧೫ ಕಿ.ಮೀ ದೂರದಲ್ಲಿರುವ ಮಾಲೋಮ್ ಎಂಬ ಊರಿನ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಜನರ ಮೇಲೆ ಭಾರತೀಯ ಸೇನೆ ಗುಂಡಿನ ಧಾಳಿ ನಡೆಸಿತು. ಹತ್ತು ಜನ ನಾಗರಿಕರು ಸತ್ತರು. ಇದರಲ್ಲಿ ಅರುವತ್ತು ವರ್ಷದ ಮಹಿಳೆಯೊಬ್ಬಳ ಜೊತೆ ೧೯೯೮ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಹದಿನೆಂಟು ವರ್ಷದ ಸಿಮನ್ ಚಂದ್ರಮಣಿ ಎಂಬಾಕೆಯೂ ಶವವಾಗಿ ಬಿದ್ದಳು..

ಮಾಲೋಮ್ ಘಟನೆ ೨೮ ವರ್ಷದ ಐರೋಮ್ ಶರ್ಮಿಳಾ ಎಂಬ ಯುವತಿಯನ್ನು ಅಲ್ಲಾಡಿಸಿಬಿಟ್ಟಿತು. ಆಕೆ ಸ್ಥಳಿಯ ಮಟ್ಟದ ಮಾನವ ಹಕ್ಕುಗಳ ಶಾಂತಿ ಅಂದೋಲನದಲ್ಲಿ ಸಕ್ರಿಯಳಾಗಿದ್ದಳು. ಭಾರತೀಯ ಸೇನೆ ನಾಗರೀಕರ ಅದರಲ್ಲೂ ಮಹಿಳೆಯರ ಮೇಲೆ ನಡೆಸುತ್ತಿದ್ದ ಲೈಂಗಿಕ ಅತ್ಯಾಚಾರವನ್ನು ಗಮನಿಸುತ್ತಲೇ ಬಂದಿದ್ದಳು. ಆಕೆ ಮೈಮೇಲೆ ಭೂತ ಸಂಚಾರವಾದಂತೆ ತಟ್ಟನೆ ಎದ್ದು ನಿಂತವಳೇ ತನ್ನ ತಾಯಿಗೆ ನಮಸ್ಕರಿಸಿ ’ಅಮ್ಮಾ ಮನುಷ್ಯತ್ವವನ್ನು ಉಳಿಸುವ ಕಾರ್ಯಕ್ಕೆ ಹೊರಡುತ್ತಿದ್ದೇನೆ’ ಎಂದವಳೇ ಮಾಲೋಮ್ ಗೆ ಬಂದು  ಸೇನೆ ಹತ್ತು ಜನ ನಾಗರಿಕರನ್ನು ಬಲಿ ತೆಗೆದುಕೊಂಡ  ಅದೇ ಜಾಗದಲ್ಲಿ ಅಮರಣಾಂತ ಉಪವಾಸ ಕುಳಿತಳು. ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಕೊಡಮಾಡಿರುವ ಶಸಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ[ Armed forces  Special power Act-   1952] ಯನ್ನು ಹಿಂಪಡೆಯಬೇಕೆಂಬುದು ಆಕೆಯ ಬೇಡಿಕೆಯಾಗಿತ್ತು.   ಇದಾಗಿ ಹದಿನಾರು ವರ್ಷಗಳು ಉರುಳಿವೆ. ಉಪವಾಸ ಇಂದಿಗೂ ಮುಂದುವರಿದಿದೆ.ಅಲ್ಲಿಂದೀಚೆಗೆ ಆಕೆ ಕನ್ನಡಿ ನೋಡಿಲ್ಲ. ತಲೆ ಬಾಚಿಲ್ಲ, ತನ್ನದೇ ಕೈಗಳಿಂದ ಊಟ ಮಾಡಿಲ್ಲ. ಆಕೆಯ ಆಹಾರ ನಿರಾಕರಣೆಯನ್ನು ಸರಕಾರವು ಆತ್ಮಹತ್ಯೆಯ ಪ್ರಯತ್ನ ಎಂದು ಕೇಸು ಜಡಿದು ಜೈಲಿನಲ್ಲಿಟ್ಟು ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡುತ್ತಿದೆ. ಆ ಅಪರಾಧಕ್ಕೆ ಒಂದುವರ್ಷ ಸಜೆಯಿದೆ. ಹಾಗಾಗಿ ಆಕೆಯನ್ನು ಮೊನ್ನೆ ಮಾರ್ಚ್ ೨೮ಕ್ಕೆ ಬಿಡುಗಡೆ ಮಾಡಿದರೂ ಮತ್ತೆ ಕೇಸು ಹಾಕಿ ಆಸ್ಪತ್ರೆಗೆ ತಳ್ಳಿದೆ.

ಮೂರನೆಯ ಘಟನೆ; ೨೦೦೪ರ ಜುಲೈ ೧೦.  ಭಾರತೀಯ ಭೂ ಸೇನೆಯ ಭಾಗವಾಗಿರುವ ಅಸ್ಸಾಂ ರೈಪಲ್ಸ್ ನ ಯೋಧರು ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ ೩೨ ವಯಸ್ಸಿನ ತಂಗ್ ಜಮ್ ಮನೋರಮಾ ದೇವಿ ಎಂಬ ಮಹಿಳೆಯನ್ನು ಆಕೆಯ ತಾಯಿ ಮತ್ತು ತಮ್ಮನನ್ನು ಬೆದರಿಸಿ ತಮ್ಮೊಡನೆ ಕರೆದುಕೊಂಡು ಹೋದರು. ಆಕೆ ಬಂಡುಕೋರರ ಜೊತೆ ನಂಟು ಹೊಂದಿದ್ದಾಳೆಯೆಂಬುದು ಅವರ ಆಪಾದನೆಯಾಗಿತ್ತು. ಆಕೆ ಮತ್ತೆ ಕಂಡದ್ದು ಮರುದಿನ ಬೆಳಿಗ್ಗೆ ಹೆಣವಾಗಿ. ಆಕೆಯ ಮೇಲೆ ಗುಂಡಿನ ಮಳೆಗೆರೆಯಲಾಗಿತ್ತು. ದೇಹವನ್ನು ಚಾಕುವಿನಿಂದ ಇರಿಯಲಾಗಿತ್ತು, ಗುಪ್ತಾಂಗಕ್ಕೆ ಗುಂಡು ಹೊಡೆದು ಛಿದ್ರಗೊಳಿಸಲಾಗಿತ್ತು.
ಮನೋರಮಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೆಂದು ಮೇಲ್ನೋಟಕ್ಕೆ ಗೊತ್ತಾದ ಅಂಶ. ಮುಂದೆ, ಕೇಂದ್ರೀಯ ವಿಧಿ ವಿಜ್ನಾನ ಸಂಸ್ಥೆ ಆಕೆಯ ಪೆಟ್ಟಿಕೋಟಿನ ಮೇಲಿದ್ದ ವೀರ್ಯದ ಕಲೆ, ಡಿ.ಎನ್.ಎ ಪರೀಕ್ಷೆ ನಡೆಸಿ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಡಿಸಿತು.. ಈ ಭೀಕರ ಹತ್ಯೆ ಮಣಿಪುರದ ಜನತೆಯನ್ನು ಬೆಚ್ಚಿಬೀಳಿಸಿತು. ತಾಯಂದಿರು ಆತಂಕಗೊಂಡರು.

ಈ ಘಟನೆ ನಡೆದ ಐದೇ ದಿನದಲ್ಲಿ ಅಂದರೆ ಜುಲೈ ೧೫ರಂದು ಒಂದು ಡಜನ್ನಿಗಿಂತಲೂ ಜಾಸ್ತಿ ಮಹಿಳೆಯರು ಸಂಪೂರ್ಣ ಬೆತ್ತಲಾಗಿ ಅಸ್ಸಾಂ ರೈಫಲ್ಸ್ ನ ೧೭ನೇ ಬೆಟಲಿಯನ್ ನ ಕೇಂದ್ರ ಸ್ಥಾನದೆದುರು ಪ್ರತಿಭಟನೆ ನಡೆಸಿದರು. ತಂತಮ್ಮ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಆ ತಾಯಂದಿರು ಆತಂಕಿತರಾಗಿದ್ದರು. ’ಭಾರತೀಯ ಸೈನಿಕರೇ, ಬನ್ನಿ ನಮ್ಮನ್ನು ರೇಪ್ ಮಾಡಿ [ ’ ಇಂಡಿಯನ್ ಆರ್ಮಿ ರೇಪ್ ಅಸ್” ”ಇಂಡಿಯನ್ ಆರ್ಮಿ ಟೇಕ್ ಅವರ್ ಪ್ಲೆಶ್’] ಎಂಬ ಬ್ಯಾನರ್ ಗಳು ಅವರ ಕೈಗಳಲ್ಲಿದ್ದುವು. ಸೈನಿಕರ ಬಂದೂಕಿನ ನಳಿಗೆಯೆದುರಲ್ಲಿ ಅವರ ಬೆತ್ತಲೇ ದೇಹವೇ ಆಯುಧವಾದಾಗ ಸಮಸ್ತ ಬಾರತವೇ ಈಶಾನ್ಯ ರಾಜ್ಯಗಳೆಡೆಗೆ ತಲ್ಲಣದ ನೋಟ ಬೀರಿತು. ಮಾತ್ರವಲ್ಲ. ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸುದ್ದಿಯನ್ನು ಮಾಡಿತು.

ಮೇಲಿನ ಮೂರೂ ಘಟನೆಗಳಿಗೆ ರಾಜಕೀಯ ಆಯಾಮಗಳಿವೆ. ಕೊನೆಯ ಎರಡೂ ಘಟನೆಗಳು ಯುದ್ಧದಾಹಿ ಪುರುಷನ ಮಹಾತ್ವಾಂಕ್ಷೆಗಳು ಸ್ರೀ ಸಂವೇಧನೆಗಳ ಮೇಲೆ ನಡೆಸಿದ, ನಡೆಸುತ್ತಿರುವ ಧಾಳಿಯಾಗಿತ್ತು. ಅ ಧಾಳಿಯನ್ನು ಮಹಿಳೆಯರು ತಾಯ್ತನದ ಅಂತಃಕರಣದಿಂದಲೇ ಎದುರಿಸಿದರು.
ಪರಿಣಾಮ ಏನಾಯ್ತು?
ಕೇಂದ್ರ ಸರಕಾರವು ತಾಯಂದಿರ ಪ್ರತಿಭಟನೆಯ ಕಾರಣದಿಂದಾಗಿ ಅಸ್ಸಾಂ ರೈಪಲ್ಸ್ ನ ೧೭ನೇ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಸಶಸ್ತ್ರಪಡೆಗಳ ವಿಶೇಷಾಧಿಕಾರಗಳ ಕಾಯ್ದೆಯ ಮರು ಪರಿಶೀಲನೆಗಾಗಿ ಜೀವನ ರೆಡ್ಡಿ ಆಯೋಗವನ್ನು ನೇ
ಮಿಸಿತು.

ಜಮ್ಮು-ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ. ತ್ರಿಪುರ ಮತ್ತು ನಾಗಲ್ಯಾಂಡ್, ಮಿಜೋರಾಂ [ಸೆವೆನ್ ಸಿಸ್ಟರ್ಸ್]ಗಳಲ್ಲಿ ಸೇನಾ ಪಾರಮ್ಯವಿದೆ. ನಾವೆಲ್ಲಾ ಒಂದೇ ದೇಶಕ್ಕೆ ಸೇರಿದವರಾಗಿದ್ದರೂ ಆ ರಾಜ್ಯಗಳಿಗೆ ಪ್ರವೇಶಿಸಬೇಕಾದರೆ ಅಲ್ಲಿನ ರಾಜ್ಯಗಳ ಅನುಮತಿಯನ್ನು ಮುಂಚಿತವಾಗಿ ಪಡೆಯಬೇಕು.ಆ ರಾಜ್ಯಗಳಲ್ಲಿ ಸದಾ ಕಂಕುಳಲ್ಲಿ ಮೆಷಿನ್ ಗನ್ನ್ ಗಳನ್ನಿಟ್ಟುಕೊಂಡೇ ತಿರುಗುವ ಸೇನಾ ಸಿಬ್ಬಂದಿ ಅಲ್ಲಲ್ಲಿ ಕಾಣಸಿಗುತ್ತಾರೆ. ಯಾಕೆ ಹೀಗೆ?

ಈ ರಾಜ್ಯಗಳಲ್ಲಿ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರೇ ಅತೀ ಹೆಚ್ಚಾಗಿದ್ದಾರೆ. ಇವರಲ್ಲಿ ಬಹುತೇಕರನ್ನು ಬ್ರಿಟಿಶರು  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.ಹಾಗಿದ್ದರೂ ಅವರು ತಮ್ಮ  ಶ್ರೀಮಂತ ಸಂಸ್ಕ್ರುತಿಯನ್ನು ಉಳಿಸಿ ಬೆಳಸಿಕೊಂಡು ಬಂದಿದ್ದಾರೆ. ಭಾರತೀಯ ಮುಖ್ಯವಾಹಿನಿಯ ಸಂಸ್ಕ್ರುತಿಗೂ ಇವರ ಸಂಸ್ಕ್ರುತಿಗೂ ಅಪಾರ ವ್ಯತ್ಯಾಸಗಳಿವೆ. ಇದಲ್ಲದೆ ಇವರಲ್ಲಿ ಹೆಚ್ಚಿನವರು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾದ ಕಾರಣ ದೈಹಿಕವಾಗಿ ಭಾರತಿಯರಿಗಿಂತ ಬಿನ್ನರಾಗಿ ಕಾಣುತ್ತಾರೆ.  ಭಾರತದ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡಾಗ ಇವರು ನಮ್ಮ ದೇಶಕ್ಕೆ ಸೇರಿದವರೇ ಅಥವಾ ವಿದೇಶಿಯರೇ ಎಂಬ ಸಂಶಯ ಮೂಡುತ್ತದೆ. ಈ ಭಾವನೆ ಈಶಾನ್ಯೇತರ ರಾಜ್ಯಗಳಲ್ಲಿರುವುದು ಅವರಿಗೂ ಗೊತ್ತಿದೆ. ಹಾಗಾಗಿಯೇ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಇಲ್ಲಿಯ ಜನರು ಪ್ರತ್ಯೇಕತೆಯ ಕೂಗು ಹಾಕಿದರು. ಈ ನಿಟ್ಟಿನಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿಕೊಂಡರು. ಅದರಲ್ಲಿ ಬಹುಮುಖ್ಯವಾದದ್ದು ೧೯೬೪ರಲ್ಲಿ ಸಮರೇಂದ್ರ ಸಿಂಗ್ ಹುಟ್ಟು ಹಾಕಿದ ಯೂನೈಟೆಡ್ ನ್ಯಾಷನಲ್ ಲಿಬರೇಷನ್ ಪ್ರಂಟ್. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಲ್ಯಾಂಡ್ ಒಳಗೊಂಡಂತೆ ”ಗ್ರೇಟರ್ ನಾಗಲ್ಯಾಂಡ್’ [ UNLF ] ಎಂಬ ಪ್ರತ್ಯೇಕ ರಾಷ್ಟ್ರದ ಕನಸ್ಸನ್ನು ಕಟ್ಟಿಕೊಂಡು ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಳನ್ನು ಹೂಡುತ್ತಿದ್ದಾರೆ.  ನೆರೆಯ ಪಾಕಿಸ್ತಾನ, ಚೀನಾ [ಹಿಂದಿನ ತಿಬೇಟ್] ಬಾಂಗ್ಲಾ, ಮಯನ್ಮಾರು [ಹಿಂದಿನ ಬರ್ಮಾ] ನೇಪಾಳ ಮತ್ತು ಭೂತಾನ್ ದೇಶಗಳು ಈ ರಾಜ್ಯಗಳೊಡನೆ ಗಡಿಯನ್ನು ಹಂಚಿಕೊಂಡಿವೆ.  ಇದರಲ್ಲಿ ಕೆಲವು ರಾಷ್ಟ್ರಗಳು ಈ ಬಂಡುಕೋರ ಸಂಘಟನಗಳಿಗೆ ಕುಮ್ಮಕ್ಕು ನೀಡುತ್ತಿವೆ. ಶಸ್ತಾಸ್ತ್ರಗಳನ್ನು ಪೂರೈಸುತ್ತಿವೆ. ಇವುಗಳು ನಮ್ಮ ರಾಷ್ಟ್ರದ ಅಖಂಡತೆ ಮತ್ತು ಸಾರ್ವಬೌಮತೆಗೆ ಧಕ್ಕೆ ತರುತ್ತಿವೆ.

ಇದನ್ನೆಲ್ಲಾ ಮನಗಂಡ ಭಾರತ ಸರಕಾರವು ೧೯೫೮ರಲ್ಲಿ ’ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಿಗಳ ಕಾಯ್ದೆ [ AFSPA ] ವನ್ನು ಜಾರಿಗೆ ತಂದಿತು. ಇದರ ಬಲದಿಂದ ಸೇನೆ ಈ ರಾಜ್ಯಗಳಲ್ಲಿ ಬಂಡುಕೋರರ ದಮನಕ್ಕೆ ಕಂಕಣ ಬದ್ಧವಾಗಿದೆ. ಆದರೆ ಸೇನೆ ಕೆಲವೊಮ್ಮೆ ತನಗಿಷ್ಟ ಬಂದಂತೆ ವರ್ತಿಸುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ  ಕೇವಲ ಮಹಿಳೆಯರೇ ನಡೆಸುವ ಬೃಹತ್  ಮಾರುಕಟ್ಟೆಯೊಂದು ಇಂಪಾಲದಲ್ಲಿದೆ. ಅದುವೇ ಖೈರಾಮ್ ಬಂದ್ ಬಜಾರ್ ಅಥವಾ ಇಮಾ ಮಾರುಕಟ್ಟೆ. ’ಇಮಾ’ ಅಂದರೆ ಮಣಿಪುರಿ ಭಾಷೆಯಲ್ಲಿ ತಾಯಿ ಎಂದರ್ಥ. ಇದು ತಾಯಂದಿರ ಮಾರುಕಟ್ಟೆ. ಇಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರು ನೆಮ್ಮದಿಯಿಂದ ತಂತಮ್ಮ ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಿದ್ದಾರೆ. ಇದು ಸಂಪೂರ್ಣ ಸ್ತ್ರೀ ಜಗತ್ತು. ಮಣಿಪುರಕ್ಕೆ ಹೋಗುವಾಗ ಆ ಮಾರುಕಟ್ಟೆಯನ್ನೊಮ್ಮೆ ನೋಡಬೇಕು, ಅಲ್ಲಿಯ ಮಹಿಳೆಯರನ್ನು ಮಾತಾಡಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು.
 ನಾವು ಇಂಪಾಲ ತಲುಪಿದಾಗ ರಾತ್ರಿ ಆರು ಘಂಟೆಯಾಗಿತ್ತು. ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವವರು ನೆನಪಿನಲ್ಲಿಡಬೇಕಾದ ಮತ್ತೊಂದು ಸಂಗತಿ ಏನೆಂದರೆ ಅಲ್ಲಿ ಬಹುಬೇಗನೇ ಅಂಗಡಿಗಳನ್ನು ಮುಚ್ಚುತ್ತಾರೆ. ರಾತ್ರಿ ಏಳು ಘಂಟೆ ಸುಮಾರಿಗೆ ಇಮಾ ಮಾರುಕಟ್ಟೆಗೆ ನಾ ತಲುಪಿದೆ. ಒಂದೆರಡು ಅಂಗಡಿಗಳು ಮುಚ್ಚುವ ಸಿದ್ಧತೆಯಲ್ಲಿದ್ದುದನ್ನು ಬಿಟ್ಟರೆ ಇಡೀ ಮಾರುಕಟ್ಟೆ ಮುಚ್ಚಿತ್ತು. ಆದರೆ ಮಾರುಕಟ್ಟೆಯ ಪಕ್ಕದ ಮುಖ್ಯ ರಸ್ತೆಯಲ್ಲಿ ಲಾಟೀನು ಮತ್ತು ಮೊಂಬತ್ತಿಯ ಬೆಳಕಿನಲ್ಲಿ ನೂರಾರು ಹೆಂಗಸರು ಸೊಪ್ಪು ತರಕಾರಿ ಮತ್ತು ತಾಜಾ ಮೀನುಗಳನ್ನು ಮಾರಾಟ ಮಾಡುತ್ತಿದ್ದರು. ಅವರಲ್ಲೇ ಹತ್ತಾರು ಮಹಿಳೆಯರನ್ನು ಮಾತಾಡಿಸಿದೆ. ಆದರೆ ಅವರಿಗೆ ಮಣಿಪುರಿ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಹಿಂದಿ ಅರ್ಥವಾಗುತ್ತೆ. ಮಾತಾಡಲು ಬಾರದು. ಕೊನೆಗೆ ಕೈ ಬಾಯಿ ಅಲ್ಲಾಡಿಸುತ್ತಾ ನ ನಗುತ್ತಾ ಮಾತಾಡಿದೆ. ಅವರೂ ಅದನ್ನೇ ಮಾಡಿದರು. ಕೊನೆಗೊಮ್ಮೆ ಒಬ್ಬಳು ತಾಯಿ ಎಷ್ಟು ಚೆನ್ನಾಗಿ ನಕ್ಕು ನನ್ನನ್ನು ಅಪ್ಪಿಕೊಂಡಳೆಂದರೆ ಅವರ ಎಲ್ಲಾ ಭಾವನೆಗಳು ನನ್ನೊಳಗೆ ಹರಿದು ನಾವಿಬ್ಬರೂ ಒಂದೇ ಅನ್ನಿಸಿಬಿಟ್ಟಿತು.

ಮರುದಿನ ಮುಂಜಾನೆಯೇ-ಅಲ್ಲಿ ಐದು ಘಂಟೆಗೆಲ್ಲಾ ಸೂರ್ಯ ಮೇಲೆ ಬಂದಿರುತ್ತಾನೆ- ಇಮಾ ಮಾರುಕಟ್ಟೆಗೆ ಸೈಕಲ್ ರಿಕ್ಷಾದಲ್ಲಿ ಒಬ್ಬಳೇ ಹೋದೆ.  ಮಣಿಪುರದ ರಾಣಿ ಸ್ಥಳೀಯ ಮಾಹಿಳೆಯರಿಗಾಗಿ ಈ ಮಾರುಕಟ್ಟೆನ್ನು ಪ್ರಾರಂಭಿಸಿದ್ದಳು. ತಾವು ಬೆಳೆದ ತರಕಾರಿ ಹಣ್ಣು ಹಂಪಲು, ಕರಕುಶಲ ವಸ್ತುಗಳನ್ನು ಇಲ್ಲಿ ತಂದು ಮಾರಾಟ ಮಾಡಿ ಅಲ್ಪ ಸ್ವಲ್ಪ ದುಡ್ಡು ಗಳಿಸಿಕೊಳ್ಳುತ್ತಿದ್ದರು. ಅಂದು ರಾಣಿಯೊಬ್ಬಳು ಈ ಮಹಿಳೆಯರಿಗೆ ಹಾಕಿಕೊಟ್ಟ ಸ್ವಾವಲಂಬನೆಯ ಹಾದಿ ಇಂದು ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಬದುಕಿನ ಹಾದಿಯನ್ನು ತೆರೆದಿದೆ. ಈ ಮಾರುಕಟ್ಟೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಪ್ರಖ್ಯಾತಿ ಗಳಿಸಿದೆ. ಯಾಕೆಂದರೆ ಇಷ್ಟು ದೊಡ್ಡ ಸಂಕ್ಯೆಯಲ್ಲಿ ಮಹಿಳಾ ವ್ಯಾಪಾರಿಗಳಿರುವ ಇನ್ನೊಂದು ಮಾರುಕಟ್ಟೆ ಜಗತ್ತಿನಲ್ಲಿಲ್ಲ. ಇಲ್ಲಿ ನಿಮಗೆ ದೈನಂದಿನ ಬದುಕಿಗೆ ಏನು ಬೇಕೋ ಅದೆಲ್ಲವೂ ದೊರಕುತ್ತದೆ.

ಈ ಮಾರುಕಟ್ಟೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಪದಾಧಿಕಾರಿಗಳಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರು ಮತ್ತು ಸೆಕ್ರೇಟರಿಯನ್ನು ಆಯ್ದುಕೊಳ್ಳುತ್ತಾರೆ.ಜಗಳ ಜಂಜಾಟವಿಲ್ಲ. ಇಲ್ಲಿನ ಮಹಿಳೆಯರು ಎದೆ ತಟ್ಟಿಕೊಂಡು ಹೇಳುತ್ತಾರೆ  ’ಇಲ್ಲಿ ನಾವು ನಾವೇ ಆಗಿದ್ದೇವೆ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ.’ ಹಾಗಿದ್ದರೂ ಅಲ್ಲಿ ಐದಾರು ಜನ  ಜನ ಪುರುಷ ಪೋರ್ಟರ್ ಗಳಿದ್ದಾರೆ. ಅಲ್ಲಿ ತಾಯಂದಿರೇ ಅಂದರೆ ನಲ್ವತ್ತು ಮೀರಿದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಅವರ ಸಾಮಾನು ಸರಂಜಾಮ್ ಗಳನ್ನು ಹತ್ತಿಳಿಸಲು ಅವರಿಗೆ ಈ ಪೋರ್ಟರ್ ಗಳು ನೆರವಾಗುತ್ತಾರೆ. ಯಾಕೆ ಪುರುಷರಿಗೆ ಪ್ರವೇಶ ಬೇಡ ಅಂತ ಪ್ರಶ್ನಿಸಿದರೆ. ಅವರು ತಮ್ಮ ಅಂಗಡಿಯ ಚಿಕ್ಕ ಜಾಗವನ್ನು ತೋರಿಸಿ, ಇಲ್ಲಿ ಪಕ್ಕದಲ್ಲಿ ಮಹಿಳೆಯರೇ ಕೂತು ಅಂಗಡಿ ನಡೆಸಿದರೆ ನಮಗೇನೂ ಅನ್ನಿಸುವುದಿಲ್ಲ. ಆ ಜಾಗಕ್ಕೆ ಪುರುಷ ಬಂದಾಗ ಮುಜುಗರವಾಗುತ್ತದೆ ಎನ್ನುತ್ತಾರೆ. ನಾವು ಇದಕ್ಕೆ ಕಂಪರ್ಟೇಬಲ್ ಅನ್ನುವ ಪದ ಬಳಸುತ್ತೇವೆ ಅಲ್ಲವೇ?

 ಮಣಿಪುರ ನಮ್ಮ ಬೆಂಗಳೂರಿನಿಂದ  3416 ಕಿ.ಮೀ ದೂರದಲ್ಲಿದೆ. ಸುತ್ತ ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದ ಸುತ್ತುವರಿದ ರಮಣೀಯ ಪ್ರದೇಶವಿದು. ನೆಹರು ಈ ರಾಜ್ಯದ ಪಕೃತಿ ಸೌಂದರ್ಯಕ್ಕೆ ಮಾಋ ಹೋಗಿ ಇದನ್ನು ’ಭಾರತದ ಆಭರಣ’ ಎಂದು ಕರೆದಿದ್ದರು.  ಸರಿ ಸುಮಾರು ಇಷ್ಟೇ ದೂರದಲ್ಲಿರುವ ಇನ್ನುಳಿದ ಏಳು ಈಶಾನ್ಯ ರಾಜ್ಯಗಳನ್ನು ಸುತ್ತಿ ಬಂದಿದ್ದೇನೆ. ವಿದ್ಯಾಭ್ಯಾಸಕ್ಕಾಗಿ. ಹೊಟ್ಟೆಪಾಡಿಗಾಗಿ ಅಥವಾ ಅಲ್ಲಿನ ಜಂಜಾಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೋ ಅಲ್ಲಿನ ಜನರು ಗಣನೀಯ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ.ಅವರನ್ನು ಕೆಲವರು ’ಚಿಂಕಿ’ಗಳೆಂದು ಕರೆದು ಜನಾಂಗೀಯ [ರೇಸಿಸ್ಟ್] ಅವಹೇಳನ ಮಾಡುವುದನ್ನು ಕಂಡಿದ್ದೇನೆ. ಇಲ್ಲಿದ್ದು ತಾಯ್ನಾಡಿಗೆ ಹಿಂದಿರುಗಿದ್ದ ಹಲವರನ್ನು ನಾನಲ್ಲಿ ಬೇಟಿಯಾಗಿದ್ದೇನೆ. ಅವರು ಬೆಂಗಳೂರನ್ನು ಕೃತಜ್ನತೆಯಿಂದ ಸ್ಮರಿಸುತ್ತಾರೆ. ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಾವಿಳಿದುಕೊಂಡಿದ್ದ ಹೋಟೇಲ್ ನ ಮಾಲೀಕರು ಬೆಂಗಳೂರಿನಲ್ಲಿ ಇಂಜಿನೀಯರ್ ಆಗಿದ್ದರಂತೆ. ಅವರ ಮಗ ಇಲ್ಲಿಯೇ. ವಿದ್ಯಾಭ್ಯಾಸವನ್ನು ಮಾಡಿದವನು. ಇಬ್ಬರೂ ನಮ್ಮನ್ನು ಆದರದಿಂದ ಸ್ವಾಗತಿಸಿ ಕನ್ನಡದಲ್ಲಿಯೇ ವ್ಯವಹರಿಸಿದ್ದರು. ಇಂಪಾಲದಲ್ಲಿ ಸಿಕ್ಕಿದ್ದಾತನೊಬ್ಬ ೨೦೦೮ರ ಬಿಎಂಟಿಸಿ ಬಸ್ ಪಾಸ್ ಅನ್ನು ಇನ್ನೂ ಜತನವಾಗಿಟ್ಟುಕೊಂಡದ್ದನ್ನು ತೋರಿಸಿ ಕನ್ನಡದಲ್ಲಿಯೇ ಬೆಂಗಳೂರಿನ ಬಗ್ಗೆ ಅಭಿಮಾನದಿಂದ ಮಾತಾಡಿದ.

ಒಂದು ರಾಜ್ಯವೆಂದರೆ ಅಲ್ಲಿ ಹಲವಾರು ಸಮಸ್ಯೆಗಳು, ತಿಕ್ಕಾಟಗಳು ಇರುತ್ತವೆ. ಚಲನಶೀಲವಾದ ಸಮಾಜವೊಂದು ಅಂತರಿಕವಾಗಿ ಒಳಗೊಳಗೆ ಬೇಯುತ್ತಲೂ ಅರಳುತ್ತಲೂ ಇರುತ್ತದೆ. ಕೇವಲ ಇಪ್ಪತ್ತೇಳು ಲಕ್ಷ ಜನಸಂಖ್ಯೆಯಿರುವ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಈ ಪುಟ್ಟ ರಾಜ್ಯ ತನ್ನೊಳಗೆ ಎಷ್ಟೊಂದು ಬೇಗುಧಿಯನ್ನಿಟ್ಟುಕೊಂಡಿದೆ!.
ಮಣಿಪುರ ಮಾತ್ರವಲ್ಲ ಈಶಾನ್ಯ ರಾಜ್ಯಗಳೆಲ್ಲಿ ಎಲ್ಲಿ ಬೇಕಾದರೂ ತಿರುಗಾಡಿ ಅಲ್ಲೆಲ್ಲಾ ಅತ್ಯಂತ ಕ್ರಿಯಾಶೀಲರಾದ, ಲವಲವಿಕೆಯ ಮಹಿಳೆಯರೇ ಕಾಣಸಿಗುತ್ತಾರೆ. ಅವರ ಬೆನ್ನಮೇಲೆ ಹೊರೆಯಿದೆ,ಅದು ತಪ್ಪಿದರೆ ಕೂಸಿದೆ .ಸಂಸಾರದ ಭಾರಕ್ಕೆ ಅವರ ನಗು ಮಂಕಾಗಿಲ್ಲ  ಸ್ತ್ರೀತನಕ್ಕೆ ದಕ್ಕೆ ಬಂದಾಗ ಇದೇ ಮಹಿಳೆ ಬೀದಿಗಿಳಿದು ಹೋರಾಡುತ್ತಾಳೆ. ನಿಮ್ಮ ಮನೆಯ ಗಂಡಸರು ಎಲ್ಲಿ ಎಂದು ಪ್ರಶ್ನಿಸಿದರೆ, ಅವರು ಸೈನದಲ್ಲಿರುತ್ತಾರೆ ಅಥವಾ ದೂರದ ನಾಡಿನಲ್ಲೆಲ್ಲೋ ಸೆಕ್ಯೂರಿಟಿ ಗಾರ್ಡ್ ಗಳಾಗಿರುತ್ತಾರೆ. ಇಲ್ಲವಾದರೆ ದೂರದೂರುಗಳಲ್ಲಿ ಟ್ಯಾಕ್ಸಿ ಓ ಡಿಸುತ್ತಿರುತ್ತಾರೆ. ಮೂರೂ ಅಲ್ಲವಾದವರು ಸೋಮಾರಿಗಳಾಗಿರುತ್ತಾರೆ; ಕುಡುಕರಾಗಿರುತ್ತಾರೆ ಎಂದು ಈಶಾನ್ಯ ರಾಜ್ಯಗಳ ಅಪರೂಪದ ಹೂಗಳಂತೆ ಅಲ್ಲಿನ ಮಹಿಳೆಯರು  ಮುಗ್ದವಾಗಿ ನಗುತ್ತಾರೆ.
ಮಣಿಪುರದ ಮಹಿಳೆ ಸಮತೂಕದ ಮಹಿಳೆ,  ವ್ಯಕ್ತಿಯಾಗಿ ಲಂಡನ್ ಒಲಂಪಿಕ್ಸ್ ನಲ್ಲಿ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟ ಮೇರಿ ಕೋಮ್ ಇದ್ದಾಳೆ. ಶಕ್ತಿಯಾಗಿ ಹದಿನಾರು ವರ್ಷಗಳಿಂದ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಇದ್ದಾಳೆ.ಇವರಿಬ್ಬರೂ ನಮ್ಮ ನಾಡಿನ ಹೆಮ್ಮೆಯ ಪುತ್ರಿಯರು.

[ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ’ಮುಕ್ತಛಂಧ’ ದಲ್ಲಿ ಪ್ರಕಟವಾದ ಲೇಖನ ]




Sunday, July 3, 2016

ಏಕಾಂಗಿ ಸಮರವೀರ; ಜಸ್ವಂತಸಿಂಗ್ ರಾವತ್





ತಾನು ಸತ್ತ ಮೇಲೂ ತನ್ನ ಹುದ್ದೆಯನ್ನು ಯಥಾಸ್ಥಿತಿ ಉಳಿಸಿಕೊಂಡು ಕಾಲಕಾಲಕ್ಕೆ ಭಡ್ತಿಯನ್ನು ಪಡೆಯುತ್ತಾ ಜೀವಂತವಿದ್ದಾಗ ಯಾವ್ಯಾವ ರೀತಿಯ ಸವಲತ್ತುಗಳನ್ನು ಪಡೆಯಬಹುದಿತ್ತೋ ಅವೆಲ್ಲವನ್ನು ಪಡೆಯುತ್ತಾ ತನ್ನ ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶಕನಾಗಿ, ಅವರಲ್ಲಿ ಸ್ಪೂರ್ತಿಯನ್ನು ತುಂಬುತ್ತಲಿರುವ ವ್ಯಕ್ತಿಯೊಬ್ಬನ ಬಗ್ಗೆ ನೀವೆಂದಾದರೂ ಕೇಳಿದ್ದೀರಾ?

ಇಲ್ಲವೆಂದಾದ್ರೆ ಅರುಣಾಚಲಪ್ರದೇಶದ ತವಾಂಗಿಗೆ ಬನ್ನಿ. ಜನಮಾನಸದಲ್ಲಿ ಬೇರುಬಿಟ್ಟು, ದಂತಕಥೆಯಾಗಿ ದೈವತ್ವಕ್ಕೇರಿರುವ ವೀರಯೋಧನೊಬ್ಬನನ್ನು ನೀವಿಲ್ಲಿ ಕಾಣಬಹುದು..

ಅದು  ೧೯೬೨ನೇ ಇಸವಿ. ಭಾರತದ ಮೇಲೆ ಚೀನಾ ಹಟತ್ತಾಗಿ ಧಾಳಿ ನಡೆಸಿತ್ತು. ಇದನ್ನು ಭಾರತ ನಿರೀಕ್ಷಿಸಿರಲಿಲ್ಲ. ಪ್ರಧಾನ ಮಂತ್ರಿ ಜವಹರಲಾಲ್ ನೆಹರುರವರು ಪಂಚಶೀಲ ತತ್ವಗಳ ಗುಂಗಿನಲ್ಲಿ, ’ಹಿಂದಿ ಚೀನಿ ಬಾಯಿ ಬಾಯಿ’ ಘೋಷಣೆಯಲ್ಲಿ ವಾಸ್ತವವನ್ನು ಮರೆತಿದ್ದರು. ಅನಿರೀಕ್ಷಿತ ಆಘಾತಕ್ಕೆ ನಮ್ಮ ಸೇನೆ ತತ್ತರಿಸಿ ಹೋಗಿತ್ತು. ಚೀನಿಯರ ಅತ್ಯಾಧುನಿಕ ಶಸ್ತ್ರಾಸ್ತ್ರಗಳೆದುರು ನಮ್ಮ ಬಂದೂಕಿನ ಗುಂಡುಗಳು ಮೊಂಡಾಗಿದ್ದವು. ನಮ್ಮ ಸೇನೆ ಸೋತು ಸುಣ್ಣವಾಗುತ್ತಿತ್ತು. ಚೀನಾ ಗಡಿರೇಖೆಯನ್ನು ದಾಟಿ ತವಾಂಗ್ ಅನ್ನು ಹಿಂದಿಕ್ಕಿ ಸೆಲ್ಲಾ ಪಾಸ್ ದಾಟಿ ಅಸ್ಸಾಂನ ತೇಜ್ ಪುರ ದವರೆಗೂ ಮುಂದೊತ್ತಿ ಬಂದಿತ್ತು. ಈ ಯುದ್ಧದಲ್ಲಿ ಸೇನಾಧಿಕಾರಿಗಳು ಸೇರಿದಂತೆ ಮೂರು ಸಾವಿರ ಭಾರತೀಯರ ಬಲಿಧಾನವಾಯ್ತು. ಆಗ ಭಾರತ ಅರುಣಾಚಲಪ್ರದೇಶದ ತವಾಂಗ್ ನಲ್ಲಿರುವ ತನ್ನ ಸೇನಾನೆಲೆಯಲ್ಲಿ ಅಳಿದುಳಿದಿದ್ದ ಸೈನಿಕರನ್ನು ಹಿಂದಕ್ಕೆ ಬರಲು ಆಜ್ನೆ ನೀಡಿತು. ಅರ್ಥಾತ್ ಭಾರತ ಚೀನಾದೆದುರು ಸೋಲನ್ನು ಒಪ್ಪಿಕೊಂಡಿತ್ತು.
ಆದರೆ ಮೂವರು ಕೆಚ್ಚೆದೆಯ ಸೈನಿಕರು ಸೇನಾ ಮುಖ್ಯಸ್ಥರ ಆಜ್ನೆಯನ್ನು ಧಿಕ್ಕರಿಸಿ ಯುದ್ಧವನ್ನು ಮುಂದುವರಿಸಲು ನಿರ್ಧರಿಸಿಬಿಟ್ಟರು.

ಆರಾಧನಾ ಸ್ಥಳವಾದ ಜಸ್ವಂತ್ ಗಡ್
 ಗಮನಿಸಿ; ಅದು ನವೆಂಬರ್ ತಿಂಗಳು. ಕಡು ಚಳಿಗಾಲ. ತವಾಂಗ್, ಸಮುದ್ರಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದಲ್ಲಿರುವ ಹಿಮಾವೃತ ಪರ್ವತ ಶ್ರೇಣಿಯಲ್ಲಿ ಹುದುಗಿರುವ ಪುಟ್ಟ ಊರು. [ಈಗ ಪಟ್ಟಣವಾಗಿದೆ, ಇದು  ಅರುವತ್ತನಾಲ್ಕು ವರ್ಷಗಳ ಹಿಂದಿನ ಮಾತು.] ಸದಾ ಮಳೆ ಮತ್ತು ಹಿಮಸುರಿಯುವ ಶೀತಲ ವಾತಾವರಣ.  ಇಂತಹದ್ದರಲ್ಲಿ ಅತ್ಯಾಸೆಯಿಂದ ಸೇನೆಗೆ ಸೇರಿದ್ದ ಉತ್ತರಾಖಂಡ ರಾಜ್ಯದ ಘಡ್ವಾಲ್ ರೀಜನ್ನಿಗೆ ಸೇರಿದ ಇಪ್ಪತ್ತೆರಡರ ಹರೆಯದ ರೈಪಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್, ಲ್ಯಾನ್ಸ್ ನಾಯಕ್ ತ್ರಿಲೋಕ್ ಸಿಂಗ್ ನೇಗಿ ಮತ್ತು ರೈಪಲ್ ಮ್ಯಾನ್ ಗೋಪಾಲ್ ಸಿಂಗ್ ಗುಸೈನ್ ಸೇನಾ ಆಜ್ನೆಯನ್ನು ಧಿಕ್ಕರಿಸಿ ಸಾವಿಗೆ ಮುಖಾಮುಖಿಯಾಗಲು ಸೆಲ್ಲಾ ಪಾಸ್ ನ ಬಂಕರ್ ಗೆ ಬಂದರು. ಸೆಲ್ಲಾ ಪಾಸ್ ಸಮುದ್ರಮಟ್ಟದಿಂದ ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿದೆ. ಸುತ್ತ ಹಿಮಪರ್ವತಗಳು. ಅವರ ಕೈಯ್ಯಲ್ಲಿ ರೈಪಲ್ ಬಿಟ್ಟರೆ ಇನ್ನೇನೂ ಶಸ್ತಾಸ್ರ್ತಗಳಿರಲಿಲ್ಲ..  ಬಂಕರ್ಗಳಲ್ಲಿ ಕೂತು ಚೀನಿಯರತ್ತ ಗುಂಡು ಹಾರಿಸತೊಡಗಿದರು. ಮದ್ದುಗುಂಡುಗಳು ಮುಗಿದಾಗ ತೆವಳುತ್ತಾ ಹೋಗಿ ಸತ್ತ ಚೀನಿಯರ ಕೈಗಳಲ್ಲಿದ್ದ ಅತ್ಯಾಧುನಿಕ ಬಂದೂಕುಗಳನ್ನು ತಂದರು. ಹಾಗೆ ತರುವ ಪ್ರಯತ್ನದಲ್ಲಿ ತ್ರಿಲೋಕ್ ಸಿಂಗ್ ಮತ್ತು ಗೋಪಾಲ್ ಸಿಂಗ್ ನೆಲಕ್ಕೊರಗಿದರು.

ಅದು ೧೯೬೨ರ ನವೆಂಬರ್ ೧೭.  ಒಂಟಿಯಾಗುಳಿದ ಜಸ್ವಂತ್ ಸಿಂಗ್ ವೀರ ಅಭಿಮನ್ಯುವಿನ ರೀತಿಯಲ್ಲಿ ಹೋರಾಟಕ್ಕಿಳಿದ. ಬಂಕರ್ನಿಂದ ಬಂಕರ್ ಗೆ ಜಿಗಿಯುತ್ತಾ ಅವರದೇ ಬಂದೂಕುಗಳಿಂದ ಚೀನಿಯರತ್ತ ಗುಂಡು ಹಾರಿಸತೊಡಗಿದ ಹೀಗೆ ಸತತ ಮೂರು ದಿನ ಹೋರಾಡಿ ಮೂನ್ನೂರಕ್ಕೂ ಹೆಚ್ಚು ಚೀನಿಯರನ್ನು ಆಹುತಿ ತಗೊಂಡ. ಆತಂಕಕ್ಕೀಡಾದ ಚೀನಿಯರಿಗೆ ಭಾರತದ ಬಂಕರುಗಳಲ್ಲಿ ಎಷ್ಟು ಜನ ಸೈನಿಕರಿದ್ದರೆಂಬುದರ ಅಂದಾಜು ಸಿಕ್ಕಿರಲಿಲ್ಲ. ಬಂದೂಕಿನ ಹೊಡೆತ ನೋಡಿ ಒಂದು ಬೆಟಾಲಿಯನ್ ಸೈನಿಕರಿರಬಹುದೆಂದು ಅಂದಾಜಿಸಲಾಗಿತ್ತು. ಅವರು ಆತನೆಡೆಗೆ ಹದ್ದಿನ ಕಣ್ಣಿಟ್ಟಾಗ ಅವನಿಗೆ ಆಹಾರವನ್ನು ಸರಬರಾಜು ಮಾಡುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬನನ್ನು ಹಿಡಿದು ಚಿತ್ರಹಿಂಸೆ ಕೊಟ್ಟಾಗ ಅಲ್ಲಿರುವುದು ಕೇವಲ ಒಬ್ಬ ವ್ಯಕ್ತಿ ಎಂಬುದು ಗೊತ್ತಾಗಿ ಬೆಕ್ಕಸ ಬೆರಗಾದರು.ಅಲ್ಲದೆ ಅವನಿಗೆ ಪೋರ್ಟರ್ ಗಳಾಗಿ ಕೆಲಸಮಾಡುತ್ತಿದ್ದವರು ಸೆಲ್ಲಾ ಮತ್ತು ನೂರಾ ಎಂಬ ಹುಡುಗಿಯರೆಂದು ತಿಳಿದು ಇನ್ನೂ ಅಚ್ಚರಿಗೊಂಡರು.

ಆಮೇಲೆ ಅವರಿಗೆಲ್ಲವೂ ಸಲೀಸಾಯ್ತು. ಸೆಲ್ಲಾ ಗ್ರೆನೇಡ್ ಧಾಳಿಯಲ್ಲಿ ಸತ್ತಳು. ನೂರಾ ಬಂದಿಯಾದಳು. ಇವರೆಲ್ಲರ ಅಂತ್ಯದ ಬಗ್ಗೆ ಹಲವಾರು ಕಥೆಗಳಿವೆ ಸ್ಥಳೀಯ ಮೂಲದ ಪ್ರಕಾರ ಚಿತ್ರಹಿಂಸೆ ಕೊಟ್ಟು ಜಸ್ವಂತ್ ಇರುವ ಜಾಗವನ್ನು ತೋರಿಸೆಂದು ಚೀನಿ ಬ್ರಿಗೇಡಿಯರ್ ಆಕೆಯನ್ನು ಕರೆದೊಯ್ಯುತ್ತಿರುವಾಗ ಕಣಿವೆಯೊಂದಕ್ಕೆ ಆತನನ್ನು ದೂಡಿ ತಾನೂ ಬಿದ್ದು ಸತ್ತು ಹೋದಳಂತೆ. ಹಾಗೆಯೇ ತಾನು ಬಂದಿಯಾಗುತ್ತಿದ್ದೇನೆ ಎಂಬುದು ಗೊತ್ತಾದ ಒಡನೆಯೇ ತಾನೇ ಬಂದೂಕು ಹಾರಿಸಿಕೊಂಡು ಜಸ್ವಂತ್ ಆತ್ಮಾರ್ಪಣೆ ಮಾಡಿಕೊಂಡ ಎನ್ನಲಾಗುತ್ತದೆ. ಇಂತಹ ವೀರಾಧಿವೀರ ಭಾರತೀಯರ ಸೈನಿಕರ ಮನಸ್ಸಿನಲ್ಲಿ ಹೇಗೆ ಮನೆ ಮಾಡಿದ್ದಾನೆ; ಮನೆ ಮಾಡುತ್ತಿದ್ದಾನೆ ಗೊತ್ತೆ?

ಸೆಲ್ಲಾ ಪಾಸ್.
 ಮಿಲ್ಕಾಸಿಂಗ್ ನನ್ನು ತೆರೆಗೆ ತಂದ ರಾಕೇಶ್ ಓಂ ಪ್ರಕಾಶ್ ಮೇಹ್ರಾ ಅವರು ಜಸ್ವಂತ ಸಿಂಗ್ ನ ಜೀವನಗಾಥೆಯನ್ನು ಆಧಾರಿಸಿ ಸಿನೇಮಾ ತೆಗೆಯಲು ಮುಂದಾಗಿದ್ದರೆ. ಆ ಹಿನ್ನೆಲೆಯಲ್ಲಿ ಅವರು ಜಸ್ವಂತನ ಮನೆಯವರನ್ನು ಸಂಪರ್ಕಿಸಿ ಅವರ ತಾಯಿ ಮತ್ತು ತಮ್ಮಂದಿರ ಜೊತೆ ಮಾತುಕಥೆಯಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ತಮ್ಮ ಆಡಿದ ಮಾತುಗಳನ್ನು ಕೇಳುವಾಗ ಸೋಜಿಗವಾಗುತ್ತದೆ. ಅವರ ಪ್ರಕಾರ, ಜಸ್ವಂತಸಿಂಗ್ ನ ತಲೆಯನ್ನು ಚೀನಿ ಸೈನಿಕರು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಾರೆ. ಅಲ್ಲಿನ ಸೇನಾಧಿಕಾರಿಗಳು ಈ ಏಕಾಂಗಿ ವೀರನ ಸಾಹಸಗಾಥೆಯನ್ನು ಕೇಳಿ ದಿಗ್ಮೂಢರಾಗುತ್ತಾರೆ. ಆತನ ಶೌರ್ಯವನ್ನು ಕೊಂಡಾಡುತ್ತಾರೆ. ಮಾತ್ರವಲ್ಲ ಬಿನ್ನವತ್ತಳೆಯೊಂದಿಗೆ ಆತನ ಶಿರದ [ಎದೆಯಿಂದ ಮೇಲ್ಭಾಗದ] ಕಂಚಿನ ಮೂರ್ತಿಯನ್ನು ಮಾಡಿ ಗೌರವದೊಂದಿಗೆ ಭಾರತಕ್ಕೆ ಕಳುಹಿಸಿಕೊಡುತ್ತಾರೆ. ನೂರಾನಂಗ್ ನಲ್ಲಿರುವ ಜಸ್ವಂತ್ ಗುಡಿಯಲ್ಲಿ ಇಂದು ಪೂಜೆಗೊಳ್ಳುತ್ತಿರುವ ಕಂಚಿನ ಪ್ರತಿಮೆ ಇದೇ ಚೀನಿಯರು ಮಾಡಿಸಿಕೊಟ್ಟ ಪ್ರತಿಮೆಯಂತೆ. ಅಲ್ಲಿ ಶತ್ರುನೆಲದಲ್ಲಿ ಜಸ್ವಂತನ ಗುಣಗಾನ ನಡೆಯುತ್ತಿದ್ದರೆ, ಇಲ್ಲಿ ತಾಯ್ನೆಲದಲ್ಲಿ ಮೇಲಾಧಿಕಾರಿಗಳ ಆಜ್ನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಆತನ ಕೋರ್ಟ್ ಮಾರ್ಷಲ್ ಗೆ ಸಿದ್ಧತೆಗಳು ನಡೆಯ್ತುತ್ತವೆ.
ಅನಂತರದಲ್ಲಿ ಆತನ ಬಲಿದಾನವನ್ನು ಗುರುತಿಸಿದ ಭಾರತ, ರೈಪಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್ ಗೆ ಮರಣೋತ್ತರ ಪರಮವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಿತ್ತು.

ಸೆಲ್ಲಾ ಪಾಸ್ ನಿಂದ ೨೧ ಕಿಮೀ ದೂರದಲ್ಲಿ ತವಾಂಗ್ ಹಾದಿಯಲ್ಲಿ ಜಸ್ವಂತ್ ಘರ್ ಇದೆ. ಇದು  ಇದು ಜಸ್ವಂತ್ ಸಿಂಗ್ ರಾವತ್ ಹೆಸರಿನಲ್ಲಿರುವ ಯುದ್ಧಸ್ಮಾರಕ. ಈ ಸ್ಥಳದ ಹೆಸರು ನೂರಾನಂಗ್. ಸ್ಥಳೀಯರು ಹೇಳುವ ಪ್ರಕಾರ ಸೆಲ್ಲಾ ಪಾಸ್ ಮತ್ತು ನೂರಾನಂಗ್, ಜಸ್ವಂತ್ ಸಿಂಗ್ ನ ಏಕಾಂಗಿ ಹೋರಾಟಕ್ಕೆ ಸಾಥ್ ನೀಡಿ ವೀರಮರಣವನ್ನಪ್ಪಿದ ಅಕ್ಕ ತಂಗಿಯರ ಹೆಸರಿನಲ್ಲಿರುವ ಜಾಗಗಳಿವು. ಆದರೆ ಜಸ್ವಂತ್ ಘರ್ ನಲ್ಲಿ ಆ ಹುಡುಗಿಯರ ತ್ಯಾಗವನ್ನು ಶಾಶ್ವತಗೊಳಿಸಿದ್ದರ ಕುರುಹು ನನಗೆ ಕಾಣಿಸಲಿಲ್ಲ.

 ಜಸ್ವಂತ್ ಘರ್ ಈಗ ಕೇವಲ ಯುದ್ಧ ಸ್ಮಾರಕವಾಗಿ ಉಳಿದಿಲ್ಲ. ಅದೊಂದು ದೇವಸ್ಥಾನವಾಗಿದೆ. ಜಸ್ವಂತ್ ಬಾಬಾ ಆಗಿದ್ದಾರೆ. ಇಲ್ಲಿಯ ಸೈನಿಕರಿಗೆ ಆತ ಸತ್ತಿಲ್ಲ. ಆತನಿಗಾಗಿ ಹೊತ್ತು ಹೊತ್ತಿಗೆ ಇಲ್ಲಿ ಊಟ ತಯಾರಾಗುತ್ತೆ. ಆತನ ಬಟ್ಟೆಗೆ ಪ್ರತಿದಿನ ಇಸ್ತ್ರೀ ಮಾಡಲಾಗುತ್ತೆ, ಶೂಗೆ ಪಾಲೀಸ್ ಹಾಕಲಾಗುತ್ತೆ, ರಾತ್ರಿ ಮಲಗಲು ಬೆಡ್ ಸಿದ್ಧಪಡಿಸಲಾಗುತ್ತೆ. ಮತ್ತು ಅದನ್ನು ಅವರು ಉಪಯೋಗಿಸಿದ್ದಾರೆ ಎಂಬುದು ಮರುದಿನ ತಮ್ಗೆ ತಿಳಿಯುತ್ತೆ ಅಂತ ಅವರ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿರುವ ನಾಲ್ವರು ಯೋದರು ಹೇಳುತ್ತಾರೆ.  ’ಬಾಬಾ ಅವರ ಶೂಗೆ ಪಾಲೀಸ್ ಮಾಡುವ ಭಾಗ್ಯ ನನಗೊದಗಿ ಬರಲಿ’ ಅಂತ ಇಲ್ಲಿಗೆ ಬರುವ ಪ್ರತಿ ಸೈನಿಕನೂ ಹಂಬಲಿಸುತ್ತಾನೆ. ೧೧೨೬ ಕಿಮೀ ಉದ್ದದ ಚೀನಾ-ಭಾರತ ಗಡಿಯನ್ನು ಕಾಯುವ ದೇವರು ಜಸ್ವಂತ್ ಬಾಬಾ ಎಂಬುದನ್ನು ಸೈನಿಕರು ನಂಬುತ್ತಾರೆ.

ಜಸ್ವಂತ್ ಗೆ ಕಾಲಕಾಲಕ್ಕೆ ಸೇವಾಭಡ್ತಿ ನೀಡಲಾಗುತ್ತೆ. ಸಂಬಳ ಬರುತ್ತೆ, ಪ್ರತಿ ವರ್ಷ ಸಮವಸ್ತ್ರ ನೀಡಲಾಗುತ್ತೆ. ವಾರ್ಷಿಕ ರಜೆ ಮಂಜೂರಾಗುತ್ತೆ, ಆತನ ಮನೆಯಿಂದ ಕಾಗದ ಬರುತ್ತೆ.ಮತ್ತು ಇದೆಲ್ಲವೂ ಸೇನಾ ರಿಜಿಸ್ಟರ್ ನಲ್ಲಿ ದಾಖಲಾಗುತ್ತದೆ. ಜಸ್ವಂತ್ ಸತ್ತು ನಲ್ವತ್ತು ವರ್ಷಗಳಾದ ನಂತರ ೨೦೦೨ರ ನವೆಂಬರ್ ೭ರಂದು ಆತ ಮೇಜರ್ ಜನರಲ್ ಹುದ್ದೆಗೇರಿದರು. ಆತ ಸೈನಿಕರ ಕನಸಿನಲ್ಲಿ ಬಂದು ನಿರ್ದೇಶನಗಳನ್ನು ನೀಡುತ್ತಾರೆಂದು ಸೈನಿಕರು ನಂಬುತ್ತಾರೆ. ಅಲ್ಲಿಯ ಚಟುವಟಿಕೆಗಳನ್ನು ನೋಡಿದರೆ ಆ ನಂಬಿಕೆಯ ಪ್ರಮಾಣ ತಿಳಿಯುತ್ತಿತ್ತು. ನಾವು ಹೋದಾಗಲೂ ಅಲ್ಲಿ ಸೈನಿಕರ ಜಂಗುಳಿಯಿತ್ತು. ಅಲ್ಲಿಗೆ ಬಂದ ಅವರೆಲ್ಲರೂ ದೇವಸ್ಥಾನಕ್ಕೆ ಪ್ರವೇಸುವಷ್ಟೇ ಭಕ್ತಿಭಾವದಿಂದ ಜಸ್ವಂತ್ ಗುಡಿಯ ಮೆಟ್ಟಲುಗಳಿಗೆ ನಮಿಸಿ ಕಣ್ಣಿಗೊತ್ತಿಕೊಳ್ಳುವುದು ಸಾಮಾನ್ಯ ದ್ರುಶ್ಯವಾಗಿತ್ತು. ಒಂದು ಟ್ರಕ್ಕಿನಲ್ಲಿ ಬಂದಳಿದ ಸೈನಿಕರಲ್ಲಿ ಹಲವಾರು ಕನ್ನಡಿಗೆ ಯೋದರಿದ್ದರು. ಜಸ್ವಂತ್ ಸಮಾಧಿಗೆ ನಮಿಸಲೆಂದೇ ಅವರ ವೆಹಿಕಲ್ ನಿಲ್ಲಿಸಿದ್ದರು. ತಮ್ಮ ಸಂಗಾತಿ ಜಸ್ವಂತ್ ಹೆಸರಿನಲ್ಲಿ ಯೋಧರು ಅಲ್ಲೊಂದು ಕ್ಯಾಂಟೀನ್ ನಡೆಸುತ್ತಾರೆ. ಅಲ್ಲಿ ಒಂದು ಡ್ರಮ್ಮಿನಲ್ಲಿ ಸದಾ ಬೆಚ್ಚನೆಯ ಚಹಾ ಇಟ್ಟಿರುತ್ತಾರೆ. ಪ್ರಯಾಣಿಕರು ಎಷ್ಟು ಲೋಟ ಬೇಕಾದರೂ ಚಹಾ ಕುಡಿಯಬಹುದು. ಅಲ್ಲಿಯ ಶೀತಲ ವಾತಾವರಣದಲ್ಲಿ ಬೆಚ್ಚನೆಯ ಚಹಾ ಪ್ರಯಾಣಿಕರಿಗೆ ಬಲು ಮುದನೀಡುತ್ತೆ. ಹತ್ತು ರೂಪಾಯಿ ಕೊಟ್ಟರೆ ರುಚಿಯಾದ ಎರಡು ಸಮೋಸ ಕೊಡುತ್ತಾರೆ. ಆ ನಿರ್ಜನ ಪ್ರದೇಶದಲ್ಲಿ ಅದು ನಮಗೆ ಅಮೃತ ಸಮಾನವೆನಿಸಿತ್ತು.

ತವಾಂಗ್ ಗೆ ಪೋಸ್ಟಿಂಗ್ ಆಗುವ ಪ್ರತಿ ಸೇನಾ ಸಿಬ್ಬಂದಿಯೂ,ಉನ್ನತ ರ್ಯಾಂಕಿನವರಾಗಿದ್ದರೂ ಜಸ್ವಂತ್ ಘರ್ ಗೆ ಹೋಗಿ ಬಾಬನಿಗೆ ನಮಸ್ಕರಿಸಿಯೇ ಮುಂದೆ ಹೋಗುತ್ತಾನೆ. ಹಾಗೆ ಮಾಡದೆ ಹೋದರೆ ದಾರಿ ಮಧ್ಯೆ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಸ್ಥಳಿಯರು ಉಧಾರಣೆಗಳ ಸಮೇತ ವಿವರಿಸುತ್ತಾರೆ.

ಚೀನಾ-ಭಾರತ ಯುದ್ಧದಲ್ಲಿ ಬಲಿಧಾನಗೈದ ಯೋಧರ ನೆನಪಿನಲ್ಲಿ ತವಾಂಗ್ ನಲ್ಲಿ ಇನ್ನೊಂದು ಯುದ್ಧ ಸ್ಮಾರಕವಿದೆ. ಇದು ಬೌದ್ಧಸ್ತೂಪದ ಮಾದರಿಯಲ್ಲಿದೆ. ಇದನ್ನು ಮ್ಯೂಸಿಯಂ ಮಾದರಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಆ ಕಾಲದಲ್ಲಿ ಯೋಧರು ಉಪಯೋಗಿಸುತ್ತಿದ್ದ ಸಲಕರಣೆಗಳು, ಮದ್ದುಗುಂಡುಗಳು, ಸಮವಸ್ತ್ರಗಳು ಇವೆಲ್ಲವನ್ನು ನೋಡುತ್ತಿದ್ದರೆ ಅವೆಲ್ಲಾ ಎಷ್ಟು ಕಳಪೆ ಗುಣಮಟ್ಟದವಾಗಿರುತ್ತಿದ್ದವು ಅಂತ ನಮ್ಮ ಯೋದರನ್ನು ನೆನೆದು ಸಂಕಟವಾಗುತ್ತದೆ..

[BOX] ನಮ್ಮಲ್ಲಿ ಬಹಳ ಜನರಿಗೆ ಈಶಾನ್ಯ ರಾಜ್ಯಗಳ ಬಗ್ಗೆ ಅಷ್ಟಾಗಿ ಮಾಹಿತಿ ಇದ್ದಂತಿಲ್ಲ, ಹಾಗಾಗಿ ಅದೆಲ್ಲಿದೆ ಎಂಬುದನ್ನು ನೋಡೋಣ. ಚೀನಾ [ಹಿಂದಿನ ಟಿಬೇಟ್] ಮತ್ತು ಭೂತಾನ್ ನೊಡನೆ ಗಡಿಯನ್ನು ಹೊಂದಿರುವ ಅರುಣಾಚಲಪ್ರದೇಶ ಭಾರತದ ಸೂರ್ಯ ಉದಯಿಸುವ ನಾಡು. ನಮ್ಮ ರಾಜಧಾನಿ ದೆಹಲಿಯಿಂದ 2314 ಕಿಮೀ ದೂರದಲ್ಲಿದೆ. ನಾವು ತವಾಂಗ್ ಪ್ರವಾಸವನ್ನು ಆರಂಭಿಸಿದ್ದು ಅಸ್ಸಾಂನ ರಾಜಧಾನಿ ಗೌಹಾಟಿಯಿಂದ. ಗೌಹಾಟಿಯಿಂದ ತವಾಂಗ್ ಗೆ ಇರುವ ದೂರ 518ಕಿಮೀ. ಮುಂಜಾನೆ ಗೌಹಾಟಿಯನ್ನು ಬಿಟ್ಟವರು ಅರುಣಾಚಲಪ್ರದೇಶದ ಬೊಂಬ್ಡಿಲಾವನ್ನು ತಲುಪಿದಾಗ ರಾತ್ರಿ ಒಂಬತ್ತು ಘಂಟೆ. ಬೊಂಬ್ಡಿಲಾದಲ್ಲಿ ಅಂದು ತಂಗಿ ಮರುದಿನ ತವಾಂಗ್ ನತ್ತ ಹೊರಟಿದ್ದೆವು. ಇಲ್ಲಿಂದ ತವಾಂಗ್ ಗೆ ಇರುವ ದೂರ ಕೇವಲ 181 ಕಿಮೀ. ಆದರೆ ಮುಂಜಾನೆ ಹೊರಟವರು ಅಲ್ಲಿಗೆ ತಲುಪಿದ್ದು ರಾತ್ರಿ ಒಂಬತ್ತೂವರೆಗೆ..

ನಮಗೆಲ್ಲಾ ಗೊತ್ತಿದೆ. ಅಸ್ಸಾಂ ನಮ್ಮ ಮಲೆನಾಡಿನ ಹಾಗೇ ಮೇಲ್ಮೈಲಕ್ಷಣವನ್ನು ಹೊಂದಿರುವ ನಾಡು. ತಂಪಾದ ವಾತಾವರಣವಿಲ್ಲ. ಆ ರಾಜ್ಯದ ಸರಹದ್ದನ್ನು ದಾಟಿ ಅರುಣಾಚಲಪ್ರದೇಶದ ಬೊಂಬ್ಡಿಲ್ಲಾವನ್ನು ಪ್ರವೇಶಿಸಿದೊಡನೆಯೇ ಎಲುಬು ಕೊರೆಯುವ ಚಳಿ ಆರಂಭವಾಗುತ್ತದೆ. ಅಲ್ಲಿಂದ ತವಾಂಗಿನ ಏರು ಹಾದಿಯನ್ನು ಸುತ್ತಿಬಳಸುತ್ತಾ ಹೋದಂತೆಲ್ಲಾ ನಾಲ್ಕೈದು ಪದರಿನಲ್ಲಿ ಹಾಕಿದ ಬಟ್ಟೆಯನ್ನು ಅದರ ಒಳಗಿನ ಥರ್ಮಲ್ ಅನ್ನು ಬೆದಿಸಿ ಒಳನುಗ್ಗುವ ಚಳಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ತವಾಂಗ್ ಗೆ ಹೋಗಲು ಇರುವುದು ಇದೊಂದೇ ಹಾದಿ. ಬೊಂಬ್ಡಿಲ್ಲಾದಿಂದ ಸೆಲ್ಲಾಪಾಸ್ ಗೆ ಇರುವ ದೂರ ೧೦೩ಕಿಮೀ.  ಸೆಲ್ಲಾ ಪಾಸ್ ನಿಂದ ಜಸ್ವಂತ್ ಘರ್ ಗೆ ಇರುವ ದೂರ ೨೧ ಕಿ.ಮೀ.ಬೊಂಬ್ಡಿಲ್ಲಾದಿಂದ ಇಲ್ಲಿಯವರೆಗೆ ನಾವು ಸುತ್ತಿ ಸುತ್ತಿ ಏರು ಹಾದಿಯಲ್ಲಿ ಹೋಗುತ್ತಿದ್ದರೆ, ಇಲ್ಲಿಂದ ತವಾಂಗಿನತ್ತ ಮತ್ತೆ ಇಳಿಜಾರು ಹಾದಿಯಲ್ಲಿ ಹೋಗುತ್ತಾ ಮತ್ತೆ ಮೇಲೇರಿ ಹೋಗಬೇಕು. ಜ್ಸ್ವಂತ್ ಘರ್ ನಿಂದ ತವಾಂಗ್ ಗೆ ಇರುವ ದೂರ ೪೬ ಕಿ.ಮೀ. ತವಾಂಗ್ ನಿಂದ ಚೀನಾ ಗಡಿಗೆ ಹೋಗುವ ಬೊಮ್ಲಾಪಾಸ್ ಗೆ ಇರುವ ದೂರ ೩೫ ಕಿ.ಮೀ. ಬೊಮ್ಲಾ ಪಾಸ್ ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿ ಎತ್ತರದಲ್ಲಿದೆ.  ಸೆಲ್ಲಾ ಪಾಸ್ ಸಮುದ್ರಮಟ್ಟದಿಂದ ಹದಿನಾಲ್ಕು ಅಡಿಗಳಷ್ಟು ಎತ್ತರದಲ್ಲಿ ಇರುವ ಕಾರಣ ಇಲ್ಲಿ ಕೊರೆಯುವ ಚಳಿಯಿರುತ್ತದೆ.ಇಲ್ಲಿ ತುಂಬಾ ಹೊತ್ತು ಉಳಿದರೆ ಉಸಿರಾಟದ ತೊಂದರೆಯೂ ಉಂಟಾಗುತ್ತದೆ. ಇಲ್ಲಿಯ ಸೆಲ್ಲಾ ಸರೋವರ ನಾವು ಹೋದಾಗ ಸಂಪೂರ್ಣ ಹೆಪ್ಪುಗಟ್ಟಿತ್ತು.  
ಬೊಮ್ಲಾ ಪಾಸ್ ಗೆ ಹೋಗುವ ಹಾದಿಯಲ್ಲಿ ನಮ್ಮ ವಾಹನ ಹಿಮದಲ್ಲಿ ಹೂತು ಹೋಗಿದ್ದು

ನಾವು ತವಾಂಗ್ ಹೋದಾಗ [ಮಾರ್ಚ್ ಮೊದಲನೇ ವಾರದಲ್ಲಿ] ಅಲ್ಲಿ ಮಳೆ ಸುರಿಯುತ್ತಿತ್ತು. ಬೊಮ್ಲಾ ಪಾಸ್ ಗೆ ಹೋಗುವ ದಾರಿಯಲ್ಲಿ ಹತ್ತಡಿ ಹೀಮ ಇರುವ ಕಾರದಿಂದಾಗಿ ಅಲ್ಲಿಗೆ ಹೋಗಲು ಸೇನೆ ಅನುಮತಿ ಕೊಡಲಿಲ್ಲ. ಆದರೆ ನಾವು ಪರ್ಮಿಷನ್ ಕೊಡುವ ಗೇಟಿನಲ್ಲಿ ಗಂಟೆಗಟ್ಟಲೆ ಕಾದು ಸೇನಾಧಿಕಾರಿಗಳ ಮನವೊಲಿಸಿ ಒಂದಷ್ಟು ದೂರ ಒಳಗೆ ಹೋಗಲು ಅನುಮತಿಯನ್ನು ಪಡೆದುಕೊಂಡಿದ್ದೆವು.  ಇದೇ ಬೊಮ್ಲಾ ಪಾಸ್ ಮೂಲಕ ದಲೈಲಾಮ ಚೀನಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ನಾವು ಈದಾರಿಯಲ್ಲಿ ಸುಮಾರು ಹತ್ತು ಹನ್ನೆರಡು ಕಿ.ಮೀ ದೂರ ಬಂದಿದ್ದೆವು. ರಸ್ತೆಯ ಮೇಲೆಲ್ಲಾ ಹಿಮಚಾದರವಿತ್ತು..ಅದು ಹೆಚ್ಚುತ್ತಲೇ ಹೋಗಿ ಒಂದೆಡೆ. ನಮ್ಮ ವಾಹನದ ಚಕ್ರಗಳು ಹಿಮದಲ್ಲಿ ಹೂತುಬಿಟ್ಟಿತು. ನಮ್ಮ ಡ್ರೈವರ್ ಚಕ್ರ ಮೇಲೆತ್ತಲು ಬಹಳ ಪ್ರಯತ್ನಪಟ್ಟ. ಆದರೆ ಸಾಧ್ಯವಾಗಲಿಲ್ಲ. ಕೊನೆಗೆ ಸೇನಾ ವಾಹನಗಳು ಹಿಮದ ಮೇಲೆ ಚಲಿಸಲು ಮಾಡುವಂತೆ ಹಗ್ಗವನ್ನು ಚಕ್ರಕ್ಕೆ ಒತ್ತೊತ್ತಾಗಿ ಸುತ್ತಿದ [ಸೇನಾವಾಹನಗಳಲ್ಲಿ ಚಕ್ರಕ್ಕೆ ಕಬ್ಬಿಣದ ಸರಪಳಿಯಿರುತ್ತದೆ] ಆದರೆ ವಾಹನ ಸ್ಟಾರ್ಟ್ ಮಾಡಿದ ಒಡನೆಯೇ ಅದು ತುಂಡಾಗಿ ಬಿತ್ತು. ಆಗ ಅಲ್ಲಿ ಸಂಚರಿಸುತ್ತಿದ್ದ ಮಿಲಿಟರಿ ವಾಹನವೊಂದು ನಮ್ಮ ವಾಹನವನ್ನು ಹಿಮದಿಂದ ಮೇಲೆತ್ತಿ ಹಿಂತಿರುಗಿ ಹೋಗಲು ಆದೇಶಿಸಿತ್ತು. 
ಬೊಮ್ಲಾ ಪಾಸ್ ಹಾದಿ.

ಅಸ್ಸಾಮ್ನಿಂದ ಬೊಂಮ್ಡಿಲ್ಲಾ ಮಾರ್ಗವಾಗಿ ಸೆಲ್ಲಾ ಪಾಸ್, ಜಸ್ವಂತ್ ಘರ್ ಮಾರ್ಗವಾಗಿಯೇ ತವಾಂಗ್ ತಲುಪಬೇಕು. ಅಲ್ಲಿಗೆ ಸೇರಲು ಇರುವುದು ಇದೊಂದೇ ಮಾರ್ಗ.  ಆದರೆ ದಾರಿಯುದ್ದಕ್ಕೂ ಹಿಮದ ಕಿರೀಟ ಹೊದ್ದ ಪರ್ವತಗಳ ಸಾಲು. ಹಿಮ ಪದರಗಳನ್ನು ಹೊದ್ದು ನಿಂತಿರುವ ಪೈನ್ ಮರಗಳು. ಅವುಗಳ ಅಡಿಯಲ್ಲಿ ಕಣ್ಮನ ತಣಿಸುವ ಹಿಮ ಹಾಸುಗಳು. ತವಾಂಗಿನತ್ತ ಹೋಗುವ ಬರುವ ಮಿಲಿಟರಿ ಟ್ರಕ್ಕ್ ಗಳು.ನಿರ್ಜನ ಹಾದಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಸೇನಾ ನೆಲೆಗಳು ಇವೆಲ್ಲವೂ ಪ್ರಯಾಣಿಕರನ್ನು ವಾಸ್ತವ ಲೋಕದಿಂದಾಚೆ ಬಲು ದೂರಕ್ಕೆ ಒಯ್ಯುತ್ತವೆ. 

 ಇಷ್ಟೆಲ್ಲಾ ವಿವರಣೆ ಯಾಕೆ ಎಂದರೆ ಈದಾರಿ ಅಷ್ಟೊಂದು ಕಡಿದಾಗಿದೆ ಮತ್ತು ತಿರುವುಮುರುವುಗಳಿಂದ ಕೂಡಿದೆ. ನುರಿತ ಚಾಲಕ ಮಾತ್ರ ಇಲ್ಲಿ ವಾಹನ ಚಲಾಯಿಸಬಲ್ಲ. ಜೊತೆಗೆ ಆಗಾಗ ಉಂಟಾಗುವ ಹಿಮಪಾತ. ಒಂದಡಿಯಿಂದಾಚೆ ದಾರಿಯೇ ಕಾಣಿಸದು. ಹೆಡ್ಲೈಟ್ ಆನ್ ಮಾಡಿಯೇ ನಿಧಾನವಾಗಿ ಚಲಿಸಬೇಕು. ಇಂತಹ ದಾರಿಯಲ್ಲಿ ಅರುವತ್ತನಾಲ್ಕು ವರ್ಷಗಳ ಹಿಂದೆ ಜಸ್ವಂತಸಿಂಗ್ ನಂತಹ ಯೋದರು ಈ ದಾರಿಯನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದ ಸಮಯವೆಷ್ಟು ಗೊತ್ತೆ? ಬರೋಬ್ಬರಿ ಇಪ್ಪತ್ತೊಂದು ದಿನಗಳು. ಆಗ ಈಗಿನಂತೆ ಸುಸಜ್ಜಿತವಾದ ರಸ್ತೆಯಿದ್ದಿರಲಿಕ್ಕಿಲ್ಲ. ಇದ್ದ ಹಾದಿಯಲ್ಲೇ ಅವರು ಸಾಮಾನು ಸರಂಜಾಮುಗಳನ್ನು ಬೆನ್ನ ಮೇಲೆ ಹೊತ್ತು ತರಬೇಕಾಗಿತ್ತು.]

ತವಾಂಗಿಗೆ ಹೋಗುವಾಗ ನಮ್ಮಲ್ಲಿ ಇದ್ದ ಮನಸ್ಥಿತಿಗೂ ಅಲ್ಲಿಂದ ಹಿಂತಿರುವಾಗ ಇದ್ದ ಮನಸ್ಥಿತಿಗೂ ಅಪಾರ ವ್ಯತ್ಯಾಸವಿತ್ತು. ಆಗ ಸೆಲ್ಲಾ ಪಾಸ್, ತವಾಂಗ್, ಬೊಮ್ಲಾಪಾಸ್, ಹಿಮಪರ್ವತಗಳು ತುಂಬಿದ್ದರೆ ಬರುವಾಗ ಜಸ್ವಂತ್ ಸಿಂಗ್ ರಾವತ್ ಮತ್ತು ನಮ್ಮ ಸಾವಿರಾರು ಯೋದರಿದ್ದರು. ಮನಸ್ಸು ಮ್ಲಾನವಾಗಿತ್ತು.

[ ಕನ್ನಡಪ್ರಭದ FRONTLINE ಮಾಲಿಕೆಯಲ್ಲಿ ಪ್ರಕಟವಾದ ಲೇಖನ ]