Friday, February 22, 2013

ಕಾಡು ಹಾದಿಯ ಹೆಜ್ಜೆ ಗುರುತುಗಳು...

ಚಿತ್ರ ಕೃಪೆ; ಅಂತರ್ಜಾಲ


ಬೆಳಿಗ್ಗೆ ನಾಲ್ಕು ಘಂಟೆಯ ಸಮಯವಿರಬಹುದು. ದೊಡ್ಡ ಮನೆಯ ದೊಡ್ಡಮಂದಿ ಏಳುವ ಸಮಯವದು.
ಹೆಬ್ಬಾಗಿಲಿಗೆ ಯಾರೋ ದಡಾರನೆ ಒದ್ದಾಂತಾಯಿತು. ’ಇಲ್ಲಿನ ಮುಂಡೆಯರೆಲ್ಲಾ ಎಲ್ಲಿ ಸತ್ತು ಹೋಗಿದ್ರಿ’ ಎನ್ನುತ್ತಾ ಬಂದ ಪಟೇಲರು ಮೊಗಸಾಲೆಯ ಅಡ್ಡಗಳಿಗೆ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿದ ತೂಗು ಕಿಂಡಿಯಲ್ಲಿ ಇಟ್ಟ ಜೋಡು ನಳಿಗೆಯ ಬಂದೂಕನ್ನು ಕೈಗೆತ್ತಿಕೊಂಡು ಅಬ್ಬರಿಸುತ್ತಾ ’ಎಲ್ಲಿ ಆ ವನಜಾ? ಬನ್ರೋ ಅವಳ ದಾಸ-ದಾಸಿಯರು..ಒಬ್ಬೊಬ್ಬರನ್ನೂ ಸುಟ್ಟು ಹಾಕಿಬಿಡ್ತೀನಿ’ ಎಂದು ಕಾಲು ಅಪ್ಪಳಿಸುತ್ತಾ ಅಂಗಳಕ್ಕಿಳಿದವರೇ ಆಕಾಶದತ್ತ ಗುರಿ ಇಟ್ಟು ಗುಂಡು ಹಾರಿಸಿಯೇ ಬಿಟ್ಟರು.
ಆಗ ಒಂದು ಅಭಾಸ ಆಗಿ ಹೋಯ್ತು. ನಮ್ಮ ಊರಿನಲ್ಲಿ ಒಂದು ಪದ್ಧತಿಯಿದೆ. ಯಾರಾದದರೂ ಮನೆಯಲ್ಲಿ ಗುಂಡಿನ ಶಬ್ದ ಕೇಳಿದರೆ ಆ ಮನೆಯಲ್ಲಿ ಸಾವು ಸಂಭವಿಸಿದೆ ಎಂದು ಅರ್ಥ. ಆಗ ಆ ಊರು ಮತ್ತು ಸುತ್ತಮುತ್ತಲಿನ ಹಳ್ಳಿಯವರೆಲ್ಲಾ ತಕ್ಷಣ ತಮ್ಮೆಲ್ಲ ಕೆಲಸ ಬಿಟ್ಟು ಪರಸ್ಪರ ವಿಚಾರಿಸಿಕೊಂದು ಆ ಮನೆಗೆ ಧಾವಿಸಿ ಬಂದು ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಿದ್ದರು. ಮಲೆನಾಡಿನಲ್ಲಿ ಹೆಚ್ಚಾಗಿ ಒಂಟಿ ಮನೆಗಳಿರುತ್ತಿದ್ದು ಒಂದು ಮನೆಗೂ ಇನ್ನೊಂದಕ್ಕೂ ಅರ್ಧ-ಮುಕ್ಕಾಲು ಮೈಲಿಗಳ ಅಂತರವಿರುತ್ತಿತ್ತು. ಅದಕ್ಕಾಗಿ ಈ ವ್ಯಸ್ಥೆಯಿತ್ತೋ ಅಥವಾ ತಮ್ಮ ಮನೆಯ ಸದಸ್ಯನೊಬ್ಬ ಸ್ವರ್ಗದತ್ತ ಪಯಣಿಸುತ್ತಿದ್ದಾನೆ. ಅವನನ್ನು ಸ್ವಾಗತಿಸಿ ಎಂದು ಸ್ವರ್ಗಾಧಿಪತಿಗೆ ಸೂಚಿಸಲು ಆಕಾಶಕ್ಕೆ ಕೋವಿಯನ್ನು ಗುರಿ ಹಿಡಿಯುತ್ತಿದ್ದರೋ ಗೊತ್ತಿಲ್ಲ. ಅಂತೂ ಪಟೇಲರು ಆಕಾಶಕ್ಕೆ ಗುಂಡು ಹೊಡೆದದ್ದು ಊರ ಜನರ ಕಿವಿಗಪ್ಪಳಿಸಿತು. ಅವರು ಯಾರನ್ನೋ ಬೀಳ್ಕೊಡಲು ಸಜ್ಜಾಗಿಬಿಟ್ಟರು.
 ’ದೊಡ್ಡ ಮನೆಯ ಅಜ್ಜಿ ಹೋಗಿಬಿಟ್ಟ್ರು ಅಂತ ಕಾಣುತ್ತೆ ’ ಎಂದು ಮಾತಾಡಿಕೊಳ್ಳುತ್ತಾ ಕತ್ತಿ, ಕೊಡಲಿ, ಗರಗಸಗಳನ್ನು ಹಿಡ್ಕೊಂಡು ಪಟೇಲರ ಮನೆ ಕಡೆ ಹೆಜ್ಜೆ ಹಾಕತೊಡಗಿದರು.
ಇತ್ತ ಪಟೇಲರು ಅಂಗಳದಿಂದ ಮನೆಗೆ ಬಂದವರೇ ಭೂತ ಮೈಮೇಲೆ ಬಂದವರಂತೆ ಎದುರು ಸಿಕ್ಕ ಹಲವು ಕೋಣೆಗಳ ಬಾಗಿಲುಗಳನ್ನು ಒದೆಯುತ್ತಾ ಅರಚಾಡತೊಡಗಿದರು. ಒಳಗೆ ಮಲಗಿದ್ದ ಹೆಂಗಸರಿಗೆ ಪಟೇಲರ ಈ ಅರಚಾಟಕ್ಕೆ ಕಾರಣವೇನೆಂದು ಗೊತ್ತಿದ್ದರೂ ಅವರ ಗಂಡಂದಿರಿಗೆ ಏನೊಂದೂ ಅರ್ಥವಾಗದೆ ಏನು ವಿಷಯ ಎಂಬಂತೆ ತಮ್ಮ ತಮ್ಮ ಪತ್ನಿಯರ ಮುಖ ನೋಡತೊಡಗಿದರು.
ಇಷ್ಟಾಗುವಾಗ ಪಟೇಲರ ಮನೆಯ ಪಕ್ಕದಲ್ಲೇ ಇರುವ ಒಕ್ಕಲಿನಾಳು ಮಂಜ ತನ್ನ ಹೆಂಗಸಿನೊಡನೆ ಅಂಗಳಕ್ಕೆ ಕಾಲಿಟ್ಟವನೇ ’ಒಡೆಯರೇ’ ಎಂದು ಕೂಗಿದ. ಅವನ ಕೂಗು ಕೇಳಿ ವಾಸ್ತವಕ್ಕೆ ಬಂದ ಪಟೇಲರು ಹೆಬ್ಬಾಗಿಲಿಗೆ ಬಂದವರೇ ’ಯಾಕೋ ಇಷ್ಟು ಬೇಗ ಬಂದ್ಬಿಟ್ಟೆ? ಏನಾಯ್ತು?’ ಎಂದು ಕೇಳಿದಾಗ ಆ ಆಳು ಮಕ್ಕಳು ಗಲಿಬಿಲಿಯಾಗಿ ದಣಿಗಳ ಮುಖವನ್ನೊಮ್ಮೆ, ಅವರು ಕಯ್ಯಲ್ಲಿ ಹಿಡಿದ ಕೋವಿಯನ್ನೊಮ್ಮೆ ನೋಡುತ್ತಾ ’ಅಜ್ಜಮ್ಮಾ...’ ಎಂದು ರಾಗ ಎಳೆದರು.
ಆಗ ಪಟೇಲರಿಗೆ ಪೂರ್ತಿ ಪ್ರಜ್ನೆ ಬಂದಂತಾಗಿ, ಸಮಯ ಸ್ಫೂರ್ತಿಯಿಂದ ನಗುತ್ತಾ ಕಯ್ಯಲ್ಲಿದ್ದ ಕೋವಿಯನ್ನು ನೋಡುತ್ತಾ ಅದನೆತ್ತಿ ಹೆಗಲಮೇಲಿಟ್ಟುಕೊಳ್ಳುತ್ತಾ ’ಬೆಳಿಗ್ಗೆ ಗದ್ದೆ ಕಡೆ ಹೋಗಿದ್ದೆ. ಒಂದು ಹಿಂಡು ಕಾಡು ಹಂದಿ ಭತ್ತ ತಿನ್ನುತ್ತಿತ್ತು. ಗುಂಡು ಹೊಡೆದೆ. ಅದಕ್ಕೆ ನೀನು ಓಡಿ ಬರೋದೆ? ಹೋಗ್ ಹೋಗ್  ಬಿದ್ದ ತೆಂಗಿನಕಾಯಿಗಳನ್ನೆಲ್ಲಾ ಹೆಕ್ಕಿ ತಂದು ಕೊಟ್ಟಿಗೆಗೆ ಹಾಕು’ ಎನ್ನುತ್ತಾ ಮೊಗಸಾಲೆ ಕಡೆ ತಿರುಗುತ್ತಿದ್ದವರಿಗೆ ತೋಟದ ತಿರುವಿನಲ್ಲಿ ನಡೆದು ಬರುತ್ತಿದ್ದ ಇನ್ನಷ್ಟು ಜನರನ್ನು ಕಂಡು ವಿಚಲಿತರಾದರು. ಆಗ ಅವರಿಗೆ ತಾನು ಎಸಗಿದ ಬುದ್ಧಿಗೇಡಿ ಕೃತ್ಯದ ಅರಿವಾಯ್ತು.
ನೋಡ ನೋಡುತ್ತಿದ್ದಂತೆ ಅಲ್ಲಿ ನೂರಕ್ಕೆ ಕಡಿಮೆಯಿಲ್ಲದಂತೆ ಜನ ಜಮೆಯಾದರು.  ಪಟೇಲರಿಗೆ ಇರುಸು-ಮುರುಸಾಗತೊಡಗಿತು. ಆದರೆ ಅವರು ಎಷ್ಟಾದರೂ ಪಟೇಲರಲ್ಲವೇ? ತಕ್ಷಣ ಒಂದು ನಿರ್ಧಾರಕ್ಕೆ ಬಂದರು. ತಮ್ಮ ತಮ್ಮಲ್ಲೇ ಪಿಸುಗುಡುತ್ತಿದ್ದ ಜನರನ್ನುದ್ದೇಶಿಸಿ ಕೈ ಮುಗಿಯುತ್ತಾ ’ಅಚಾತುರ್ಯವಾಗಿ ಹೋಯ್ತು. ಈಗ ನೀವೆಲ್ಲಾ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ..ಗಂಡಸರೆಲ್ಲಾ ಹಂದಿ ಬೇಟೆಗೆ ಹೋಗಲು ತಯಾರಾಗಿ ಬನ್ನಿ’ ಎಂದವರೇ ಚಿನ್ನಪ್ಪನತ್ತ ತಿರುಗಿ ’ ಬರುವಾಗ ನಿನ್ನ ಕಾಳು ನಾಯಿಯನ್ನು ಕರ್ಕೊಂಡು ಬಾ. ಹಾಗೆ ಕರಿಯನಿಗೆ ಅವನ ಬೊಗ್ಗಿ ನಾಯಿಯನ್ನು ಕರ್ಕೊಂಡು ಬರಲು ಹೇಳು’ ಎಂದು ಸೂಚನೆ ಕೊಟ್ಟು ಕೋವಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಅಡಿಕೆ ತೋಟದೊಳಗೆ ಮರೆಯಾದರು.
ಹೊರಗೆ ನಡೆಯುತ್ತಿರುವ ಸದ್ದಿಗೆ ದೊಡ್ಡಮನೆಯ ಜನರಿಗೆಲ್ಲಾ ಎಚ್ಚರವಾಯಿತು. ಅವರೆಲ್ಲ ಎದ್ದು ಅಡಿಗೆ ಮನೆ, ದನದ ಕೊಟ್ಟಿಗೆಗಳನ್ನು ಸೇರಿಕೊಂಡರು. ಅವರು ಅತ್ತ ಹೊರಟ ಒಡನೆಯೇ ಮನೆಯಲ್ಲಿದ್ದ ಗಂಡಸರು-ಹೆಂಗಸರೆಲ್ಲಾ ಅಲ್ಲಲ್ಲಿ ಗುಂಪು ಸೇರಿಕೊಂಡು ಗುಸು ಗುಸು ಮಾತಾಡತೊಡಗಿದರು. ಕೆಲವರು ’ವನಜಾ ಎಲ್ಲಿ?’ ಎಂಬಂತೆ ಕಣ್ಣು ಹಾಯಿಸತೊಡಗಿದರು. ಆದರೆ ಯಾರೂ ದೇವರ ಕೋಣೆಯತ್ತ ದೃಷ್ಟಿ ಹಾಯಿಸಲಿಲ್ಲ. ಯಾಕೆಂದರೆ ಬೆಳಗಿನ ಪೂಜೆ ಮಾಡುವವರು ಸ್ವತಃ ಪಟೇಲರು. ಅದೂ ಹತ್ತು ಘಂಟೆಯ ಮೇಲೆ. ಹಾಗಾಗಿ ಯಾರೂ ಆ ಕಡೆ ಗಮನವೇ ಕೊಟ್ಟಿರಲಿಲ್ಲ. ಹಾಗೆ ಕೊಟ್ಟಿದ್ದರೆ. ಆಗ ಹೊರಗಿನಿಂದ ಬೀಗ ಹಾಕಿರುವುದು ಅವರ ಗಮನಕ್ಕೆ ಬಂದು ಅದನ್ನು ಯಾರನ್ನಾದರೂ ಪ್ರಶ್ನಿಸುವ ಪ್ರಮೇಯ ಬರುತ್ತಿತ್ತು.
ದೊಡ್ಡಮನೆಯ ದೊಡ್ಡ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮುಳುಗಿರುವಾಗಲೇ ಆ ಮನೆಯ ಸದಸ್ಯನೊಬ್ಬನ ತಲೆಯಲ್ಲಿ ಗೊಬ್ಬರದ ಹುಳುಗಳು ಓಡಾಡುತ್ತಿದ್ದವು. ಆತನಿಗೆ ತನ್ನ ಹೆಂಡತಿಯ ಶೀಲದ ಬಗ್ಗೆ ಸದಾ ಸಂಶಯವಿತ್ತು. ಪಟೇಲರು ತನ್ನ ಪತ್ನಿಯತ್ತ ನೋಡುವ ನೋಟ, ಮಾತಾಡಿಸುವ ರೀತಿ ಅವನಿಗೆ ಹೇಗೆಗೋ ಆಗುತ್ತಿತ್ತು. ಜೊತೆಗೆ ಪಟೇಲರ ಬಗ್ಗೆ ಈಕೆಯೂ ಅಸ್ಥೆ ವಹಿಸುತ್ತಿದ್ದಾಳೆಂಬುದು ಇವನ ಗುಮಾನಿ. ಒಂದು ರಾತ್ರಿ ದೇವರ ಕೋಣೆಯ ಪಕ್ಕದ ರೂಮಿನಿಂದ ಇವಳು ಹೊರಬಂದಿದ್ದನ್ನು ನೋಡಿದ ಮೇಲಂತೂ ಅವನ ತಲೆ ಪೂರ್ತಿ ಕೆಟ್ಟು ಹೋಗಿತ್ತು. ಅನಂತರದಲ್ಲಿ ಆತ ಸ್ವಲ್ಪ ಪತ್ತೆದಾರಿಕೆ ಕೆಲಸವನ್ನೂ ಮಾಡಿದ್ದ. ಆಗ ಅವನಿಗೆ ತಿಳಿದು ಬಂದಿದ್ದು ಏನೆಂದರೆ ಅವರಿಬ್ಬರ ನಡುವೆ ಏನೋ ನಡಿತಿದೆ ಅಂತ. ಆದರೆ ಆತ ಅವಸರದಲ್ಲಿ ಯಾವ ತೀರ್ಮಾನಕ್ಕೂ ಬರುವಂತಿರಲಿಲ್ಲ. ಆ ಮನೆತನದ ಪರಂಪರೆಯಂತೆ ಮುಂದಿನ ಪಟೇಲ್ ಗಿರಿ ಈತನದೇ ಆಗಿತ್ತು. ಅದಕ್ಕೆ ಊರಿನ ಒಪ್ಪಿಗೆಯೂ ಬೇಕಾಗಿತ್ತು. ಹಾಗಾಗಿ ತನ್ನ ಸನ್ನಡತೆಯನ್ನು ಆತ ಕನಿಷ್ಟ ಪಕ್ಷ ಅದು ಸಿಗುವಲ್ಲಿಯವರೆಗೂ ಕಾಪಾಡಿಕೊಳ್ಳಬೇಕಾಗಿತ್ತು.
ರಾತ್ರಿ ನಡೆದ ಪ್ರಹಸನ ಎಲ್ಲರಿಗೂ ಗುಟ್ಟಾಗಿ ಪ್ರಸರಣ ಆಗುತ್ತಿರುವಾಗಲೇ ಬೇಟೆಗೆ ಹೊರಟವರು ತಮ್ಮ ತಮ್ಮ ಕೋವಿ, ಬೇಟೆ ನಾಯಿಗಳ ಸಮೇತ ಅಂಗಳದಲ್ಲಿ ಜಮೆಯಾಗತೊಡಗಿದರು.. ಅಷ್ಟಾಗುವಾಗ ತೋಟಕ್ಕೆ ಹೋಗಿದ್ದ ಪಟೇಲರೂ ಅಂಗಳದಲ್ಲಿ ಹಾಜರಾದರು. ಗೆಲುವಿನಿಂದ ಕೂಡಿದ ಅವರ ಮುಖವೇ ಹೇಳುತ್ತಿತ್ತು. ಅವರು ಯಾವುದೋ ಒಕ್ಕಲಿನವರ ಮನೆಯಲ್ಲಿ ತಿಂಡಿ-ಕಾಪಿ ಮುಗಿಸಿ ಬಂದಿರಬೇಕೆಂದು. ಮನೆಗೆ ಬಂದವರೇ  ಮುಗಸಾಲೆಯ ಪಕ್ಕದ ಹಾಲ್ ನ ಅಟ್ಟದ ತೊಲೆಗೆ ತೂಗು ಹಾಕಿದ ಕೋವಿ ಚೀಲವನ್ನು ತೆಗೆದುಕೊಂಡರು. ಅದರಲ್ಲಿ ಎಷ್ಟು ತೋಟೆಗಳಿವೆ ಎಂದು ಪರಿಶೀಲಿಸಿದರು. ತಲೆಗೆ ಕಟ್ಟುವ ಟಾರ್ಚ್ ತಗೊಂಡು ಅದರ ಹಳೆಯ ಬ್ಯಾಟ್ರಿ ಬದಲಾಯಿಸಿ ಹೊಸದನ್ನು ಹಾಕಿದರು. ನಂತರ ಆ ಚೀಲವನ್ನು ಮಂಜನಿಗೆ ವರ್ಗಾಯಿಸಿ, ಆತನ ಹಿಂದೆ-ಮುಂದೆ ಸುತಾಡುತ್ತಿದ್ದ ಬೇಟೆನಾಯಿಗಳಾದ ಈರುಳ್ಳಿ, ಬೆಳ್ಳುಳ್ಳಿ ನಾಯಿಗಳ ತಲೆ ಸವರಿ, ಕಾಡಿನಲ್ಲಿ ಓಡಾಡಲೆಂದೇ ವಿದೇಶದಿಂದ ತರಿಸಿದ್ದೆನ್ನಲಾದ ಮಂಡಿತನಕ ಬರುವ ಬೂಟನ್ನು ಏರಿಸಿಕೊಂಡು ಹೆಗಲಮೇಲೆ ಕೋವಿಯನ್ನಿಟ್ಟುಕೊಂಡು ನಡೆದೇ ಬಿಟ್ಟರು.
ಶಕುಂತಲಾ ಅತ್ತೆ ಬೆಳಿಗ್ಗೆ ಎದ್ದೊಡನೆ ಹಾಲು ಕರೆಯಲು ದನದ ಕೊಟ್ಟಿಗೆಯತ್ತ ಹೋಗುತ್ತಾರೆ. ಆಕೆ ಹಾಲು ಕರೆದು ಓಲೆ ಮೇಲೆ ಕಾಯಿಸಲು ಇಟ್ಟ ಒಡನೆಯೇ. ಇನ್ನೊಬ್ಬಾಕೆ ಮೊಸರು ಕಡೆಯಲು ಕೂಡುತ್ತಾಳೆ. ಸಾಮಾನ್ಯವಾಗಿ ಆ ಮನೆಯಲ್ಲಿ ಯಾರು ಗರ್ಭಿಣಿ ಮಹಿಳೆ ಇರುತ್ತಾಳೋ ಅವಳು ಮೊಸರು ಕಡೆಯುವ ಸಹಜ ಹಕ್ಕನ್ನು ಪಡೆದುಕೊಂಡಿರುತ್ತಾಳೆ. ಮೊಸರು ಕಡೆಯುವ ಕ್ರಿಯೆ ಆಕೆಯ ಸ್ನಾಯುಗಳಿಗೆ ಬಲವನ್ನು ಕೊಡುತ್ತದೆ ಎಂಬುದು ತಲೆ ತಲಾಂತರದಿಂದ ಬಂದ ಅನುಭವದ ಮಾತು. ಹಾಗೆ ಮೊಸರು ಕಡೆಯುವ ಹಕ್ಕು ಕಳೆದ ಹಲವಾರು ತಿಂಗಳುಗಳಿಂದ ನನ್ನ ಅಮ್ಮನ ಪಾಲಿಗೆ ಬಂದಿತ್ತು. ಇಂದು ಕೂಡಾ ಆಕೆ ಎಂದಿನಂತೆ ಮೊಸರು ಕಡೆದು ದೊಡ್ಡ ಕಂಚಿನ ಲೋಟದಲ್ಲಿ ಸಿಹಿ ಮಜ್ಜಿಗೆಯನ್ನು ಸುರಿದು ಗಂಡನಿಗೆ ಕೊಡಲು ಮೊಗಸಾಲೆಗೆ ಹೊರಟಳು. ಅಡುಗೆ ಮನೆಯಿಂದ ಮೊಗಸಾಲೆಗೆ ಬರಬೇಕಾದರೆ ದಾಸ್ತಾನು ಕೊಟಡಿಯನ್ನು ಬಳಸಿಕೊಂಡು, ತೀರ ಆಪ್ತರಾದವರ ಸಮಾಲೋಚನಾ ಕೊಟಡಿಯನ್ನು ಹಾದು, ಎರಡು ಊಟದ ಕೋಣೆಗಳನ್ನು ದಾಟಿ ಬರಲು ಕನಿಷ್ಟ ಎರಡು ನಿಮಿಷಗಳಾದರೂ ಬೇಕು. ಲೋಟವನ್ನು ಕಯ್ಯಲ್ಲೇ ಹಿಡಿದುಕೊಂಡೇ ಹಿಂದಿನ ರಾತ್ರಿಯ ಘಟನೆಗಳನ್ನು ಮನಃ ಪಟಲದಲ್ಲಿ ತಂದುಕೊಂಡ ಅಮ್ಮ ಅಪ್ಪನನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡೇ ಮೊಗಸಾಲೆಯಲ್ಲಿರುವ ಪಟೇಲರದೇ ಆದ ಪ್ರತ್ಯೇಕ ಕುರ್ಚಿಯನ್ನು ನೋಡುತ್ತಾರೆ. ಅದು ಖಾಲಿಯಾಗಿತ್ತು. ಅಲ್ಲೇ ಅವರ ತಲೆಯ ಮೇಲ್ಬದಿಗೆ ಅಡ್ಡದಿಂದ ಇಳಿಬಿದ್ದ ಕಿಂಡಿಯಲ್ಲಿ ಸದಾ ರಾರಾಜಿಸುತ್ತಿದ್ದ ಕೋವಿ ಸ್ವಸ್ಥಾನದಲ್ಲಿ ಇರಲಿಲ್ಲ. ಲೋಟವನ್ನು ಅಲ್ಲೇ ಇದ್ದ ಟೀಪಾಯಿ ಮೇಲಿಟ್ಟು ಹೆಬ್ಬಾಗಿಲಿಗೆ ಬಂದವರೇ ’ಮಂಜ..ಮಂಜ..’ ಎಂದು ಧ್ವನಿಯೆತ್ತಿ ಕೂಗಿದರು. ಆಗ ಅಲ್ಲೇ ಅಂಗಳ ಗುಡಿಸುತ್ತಿದ್ದ ಅವನ ಹೆಣ್ಣು ಅಯಿತೆ ’ಅವರು ಊರು ಬೇಟೆಗೆ ಹೋದರು ಅಮ್ಮಾ’ ಎಂದಳು.
ಅಮ್ಮಾ ಸ್ವಲ್ಪ ಹೊತ್ತು ಅಂಗಳದಲ್ಲೇ ನಿಂತಿದ್ದವರು ಮೆಲ್ಲನೆ ಒಳಗೆ ಬಂದರು. ಬಂದವರೇ ಹಿಂದಿನ ರಾತ್ರಿ ಮಂಗಲಸೂತ್ರಕ್ಕೆ ಜೋಡಿಸಿದ ಬೀಗದ ಕೈಯಿಂದ ಮುಚ್ಚಿದ್ದ ದೇವರ ಕೋಣೆಯ ಬಾಗಿಲನ್ನು ತೆರೆದರು. ಬಾಗಿಲು ತೆರೆದ ಸದ್ದಿಗೆ ಒಳಗಿದ್ದ ವನಜ ಚಿಕ್ಕಮ್ಮ ಬೆಚ್ಚಿದಂತೆ ಎದ್ದು ಕುಳಿತರು. ಅಮ್ಮ ಒಂದೂ ಮಾತಾಡದೆ ಆಕೆಯನ್ನು ಹೊರಹೋಗುವಂತೆ ಸನ್ನೆ ಮಾಡಿದರು. ಆಕೆ ಹೆದ ಹೆದರುತ್ತಲೇ ಹಿಂತಿರುಗಿ ನೋಡುತ್ತಲೇ ಕೋಣೆ ದಾಟಿ ಹೊರ ಹೋದಳು.
ದೊಡ್ಡಮನೆಯ ಕೆಲಸಗಳೆಲ್ಲ ಸಂಜೆಯತನಕ ಸರ್ವಸಾಧಾರಣ ರೀತಿಯಲ್ಲಿ ನಡೆಯತೊಡಗಿದವು.
 ಹೊತ್ತು ನೆತ್ತಿಯ ಮೇಲೆ ಬಂದಾಗಿತ್ತು.. ಮಂಜ ಆ ದೊಡ್ಡಮನೆಯ ತೋಟದ ಅಂಚಿನಲ್ಲಿ ಏಳುತ್ತಾ, ಬೀಳುತ್ತಾ, ಏದುಸಿರು ಬಿಡುತ್ತಾ ಓಡಿ ಬರುತ್ತಿರುವುದು ಕಾಣಿಸಿತು. ಅವನ ಓಟದ ರೀತಿಯನ್ನು ನೋಡಿದವರಿಗೆ ಯಾವುದೋ ಒಂದು ಬೃಹತ್ ಅವಗಢ ಸಂಭವಿಸಿದೆಯೆಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆತ ಓಡುತ್ತಾ ಬಂದವನೇ ಹೆಬ್ಬಾಗಿಲನ್ನು ಅಂಗಳಕ್ಕೆ ಜೋಡಿಸುವ ಏಳು ಮೆಟ್ಟಲುಗಳನ್ನು ದಡ ದಡನೆ ಹತ್ತಿದವನೇ ಕೊನೆಯ ಮೆಟ್ಟಲಿಗೆ ತಲೆಯಿಟ್ಟು ಬೋರೆಂದು ಅಳತೊಡಗಿದ. ನಿಜವಾಗಿ ಹೇಳಬೇಕೆಂದರೆ ಮಂಜನಂತಹ ಅಸ್ಪೃಶ್ಯರಿಗೆ ಕೆಳಮೆಟ್ಟಲವರೆಗೆ ಮಾತ್ರ ಬರಲು ಅವಕಾಶವಿತ್ತು. ಅಂತಹದ್ದರಲ್ಲಿ ಆತ ಅದನ್ನೆಲ್ಲ ಮರೆತು ಹೆಬ್ಬಾಗಿಲ ತನಕ ಬಂದನೆಂದರೆ....
ಮಂಜನ ರೋದನ ಕೇಳಿದ ಆ ದೊಡ್ಡ ಮನೆಯ ಸಂದು ಗೊಂದಿನಲ್ಲಿದ್ದ ಜೀವ ರಾಶಿಯೆಲ್ಲಾ ಹೆಬ್ಬಾಗಿಲಿಗೆ ಹರಿದು ಬಂತು. ಆತನನ್ನು ಮುಟ್ಟುವಂತಿಲ್ಲ. ಆದರೂ ಅಮ್ಮ ಆತನ ಬೆನ್ನ ಮೇಲೆ ಕೈಯಿಟ್ಟು ’ಏನಾಯ್ತು’ ಅಂದರು. ಆತ ಬಿಕ್ಕಳಿಸುತ್ತಲೇ ತಡೆ ತಡೆದು ಹೇಳಿದ. ’ಪಟೇಲರು..ಗುಂಡು ಹೊಡೆದುಕೊಂಡು ಜೀವ ಬಿಟ್ಟರು.’ ಅಮ್ಮ ತಕ್ಷಣ ಅಲ್ಲೇ ಕುಸಿದು ಬಿದ್ದರು. ಹೆಂಗಸರೆಲ್ಲಾ ಅವರನ್ನು ಹಗುರವಾಗಿ ನಡೆಸಿಕೊಂಡು ಮೊಗಸಾಲೆಯಲ್ಲಿ ಸದಾ ಹರವಿಕೊಂಡಿರುತ್ತಿದ್ದ ಗಾದಿಯ ಮೇಲೆ ಮಲಗಿಸಿ ಬೀಸಣಿಗೆಯಿಂದ ಗಾಳಿ ಬೀಸುತ್ತಲೇ ಹೆಬ್ಬಾಗಿಲಿಗೆ ಕಣ್ಣಿ, ಕಿವಿಗಳನ್ನು ಕೇಂದ್ರಿಕರಿಸಿದರು.
ಇಡೀ ದೊಡ್ಡಮನೆಯೇ ಆ ಕ್ಷಣಗಳಲ್ಲಿ ಸ್ತಬ್ದವಾದಂತಿತ್ತು.. ಆಗ ತಕ್ಷಣ ಎಚ್ಚೆತ್ತುಕೊಂಡವರು ಶಕುಂತಲಾ ಅತ್ತೆ. ಆಕೆ ಒಳಗೆ ಹೋಗಿ ದೊಡ್ಡ ಚೆಂಬಿನಲ್ಲಿ ನೀರು ಮಜ್ಜಿಗೆಯನ್ನು ತಂದು ಮಂಜನ ಕಯ್ಯಲ್ಲಿಟ್ಟು ’ಇದನ್ನು ಕುಡಿ ಎಂದು ಸನ್ನೆ ಮಾಡಿ ಒಳಗೆ ಹೋದರು. ಬರುವಾಗ ಅವರ ಕೈಯ್ಯಲ್ಲಿ ತಾನು ತೋಟಕ್ಕೆ ಹೋಗುವಾಗಲೆಲ್ಲ  ಹಿಡಿದುಕೊಳ್ಳುತ್ತಿದ್ದ ದೊಡ್ಡಕತ್ತಿಯಿತ್ತು. ಅಲ್ಲಿ ಬೇಟೆಗೆ ಹೋಗದೆ ಇರುವ ಮನೆಯ ಗಂಡಸರನ್ನು ಕರೆದು ’ನಡೀರಿ ಕಾಡಿಗೆ ಹೋಗೋಣ’ ಎಂದು ಮಂಜನನ್ನು ಎಬ್ಬಿಸಿ ಹೊರಟೇಬಿಟ್ಟರು. ಉಳಿದ ಹೆಂಗಸು-ಮಕ್ಕಳೆಲ್ಲ ಏನು ಮಾಡುವುದೆಂದು ಗೊತ್ತಾಗದೆ ಅಲ್ಲಲ್ಲೇ ಕುಳಿತು ಗುಸುಗುಸು ಮಾತಾಡುತ್ತಾ, ಕಣ್ಣೀರು ಒರೆಸಿಕೊಳ್ಳುತ್ತಾ ತೋಟದ ದಾರಿಯೆಡೆಗೆ ಕಣ್ಣು ನೆಟ್ಟರು.
ಶಕುಂತಲಾ ಅತ್ತೆ ಘಟನಾ ಸ್ಥಳಕ್ಕೆ ಬಂದಾಗ ಅಲ್ಲಾಗಲೇ ಕೆಂಪು ಟೋಪಿಯ ಪೋಲಿಸರು ಹಾಜರಾಗಿ ತಮ್ಮ ಪುಸ್ತಕದಲ್ಲಿ ಏನೇನೋ ಬರೆದುಕೊಳ್ಳುತ್ತಿದ್ದರು. ಅಲ್ಲೇ ದೂರದಲ್ಲಿದ್ದ ದೊಡ್ಡಮನೆಯ ಗಂಡಸೊಬ್ಬರು ಶಕುಂತಲತ್ತೆಯನ್ನು ಮತ್ತು ಅವರ ಜೊತೆ ಬಂದವರನ್ನು ಅಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ ಮರವೊಂದಕ್ಕೆ ಒರಗಿ ಕುಳಿತಂತೆ ಪಟೇಲರು ಕಾಲು ನೀಡಿ ಕುಳಿತಿದ್ದಾರೆ. ಅವರ ಎದುರಿನಲ್ಲಿ ಒಂದು ಗಟ್ಟಿ ಬುಡವಿರುವ ಕುರುಚಲು ಪೊದೆಯಿದೆ. ಅದರ ಮೇಲೆ ಕೋವಿಯನ್ನಿಟ್ಟಿದ್ದಾರೆ. ಕೋವಿಯ ನಳಿಗೆ ಎದೆಯನ್ನು ಒತ್ತಿದೆ. . ಇದನ್ನು ನೋಡಿದ ಯಾರೂ ಬೇಕಾದರೂ ಊಹಿಸಿಕೊಳ್ಳಬಹುದಾಗಿತ್ತು; ಅವರು ಬಲಗಾಲಿನಿಂದ ಕುದುರೆಯನ್ನು [ಟ್ರಿಗರ್] ಮೀಟಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆಂದು.  ಶಕುಂತಲ ಅತ್ತೆ ಉಕ್ಕಿ ಬರುತ್ತಿರುವ ಅಳುವನ್ನು ಹತ್ತಿಕ್ಕುತ್ತಲೇ ನುರಿತ ಪತ್ತೆದಾರಳಂತೆ ಹೆಣದ ಹಿಂದೆ ಮುಂದೆ, ಎಡ ಬಲ ಪರಿಶೀಲಿಸಿದರು. ನಂತರ ಅಲ್ಲಿದ್ದವರೊಡನೆ ಸ್ವಲ್ಪ ಹೊತ್ತು ಮಾತಾಡಿ ಬಂದಷ್ಟೇ ವೇಗದಲ್ಲಿ ಮನೆಗೆ ಹಿಂದಿರುಗಿದರು.
ಚಿತ್ರ ಕೃಪೆ; ಅಂತರ್ಜಾಲ
ಶಕುಂತಲ ಅತ್ತೆ ಬರುವುದನ್ನೇ ಕಾಯುತ್ತಿದ್ದ ದೊಡ್ಡಮನೆಯ ಜನರು ಆಕೆಯನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆಗೆರೆದರು. ಆಕೆ ಹೇಳುತ್ತಿದ್ದುದನ್ನೆಲ್ಲಾ ಕೇಳುತ್ತಿದ್ದಂತೆ ಎಲ್ಲರೂ ದೊಡ್ಡ ಧ್ವನಿ ತೆಗೆದು ಅಳಲು ಪ್ರಾರಂಭಿಸಿದರು. ಮೊಗಸಾಲೆಯಲ್ಲಿ  ಮಲಗಿದ್ದ ಅಮ್ಮನೆಡೆಗೆ ಶಕುಂತಲಾ ಅತ್ತೆ ಬಂದು ಅದೆನೋ ಗುಸುಗುಸು ಮಾತಾಡಿದರು. ಅಮ್ಮ ಒಮ್ಮೆಗೇ ”ನನಗ್ಯಾಕೋ ಭಯವಾಗುತ್ತಿದೆ..ನಾನೇನು ಮಾಡಲಿ?’ ಎಂದು ಬಿಕ್ಕಳಿಸಿದರು. ಸ್ವಲ್ಪ ಹೊತ್ತು ಹಾಗೇ ಇದ್ದವರು ಏನೋ ನಿರ್ಧಾರಕ್ಕೆ ಬಂದವರಂತೆ ಎದ್ದು ನಿಂತರು. ನಿಧಾನವಾಗಿ ತನ್ನ ಕೋಣೆಗೆ ಬಂದವರೇ ಒಂದು ಸೀರೆಯನ್ನು ಎರಡಾಗಿ ಮಡಚಿ ನೆಲದಲ್ಲಿ ಹಾಸಿದರು. ಅದರಲ್ಲಿ ನನ್ನ ಮತ್ತು ಅವರ ಒಂದೆರಡು ಬಟ್ಟೆಗಳನ್ನು ಹಾಕಿದರು. ಅದನ್ನು ಗಂಟು ಕಟ್ಟಿ ಕಂಕುಳಲ್ಲಿಟ್ಟುಕೊಂಡವರೇ ನನ್ನ ಕೈ ಹಿಡಿದು ಎಳೆಯುತ್ತಾ ’ಬಾ ನಿನ್ನ ಅಜ್ಜ ಮನೆಗೆ ಹೋಗೋಣ’ ಎಂದು ಮೊಗಸಾಲೆಯನ್ನು ದಾಟಿ ಬಿಟ್ಟರು. ಅಲ್ಲಿ ನೆರೆದಿದ್ದ ಜನರೆಲ್ಲಾ ಏನಾಯ್ತು ಎಂದು ಗ್ರಹಿಸುವಷ್ಟರಲ್ಲೇ ಅಮ್ಮ ಅಂಗಳದಲ್ಲಿಳಿದು ತೋಟದ ಎದುರಿನ ಹಾದಿಯನ್ನು ಬಿಟ್ಟು ಹಿತ್ತಿಲ ಹಾದಿಯತ್ತ ನಡೆಯತೊಡಗಿದರು. ’ಎಂಟು ತಿಂಗಳ ಗರ್ಭಿಣಿ ನೀನು. ಈ ಸಂದರ್ಭದಲ್ಲಿ ಹೀಗೆಲ್ಲಾ ಉದ್ವೇಗ ಪಡಬಾರದು’ ಎನ್ನುತಾ ಕೆಲವು ಹೆಂಗಸರು ಅಮ್ಮನ ಹಿಂದೆ ಓಡಿಬಂದರು.. ಆಗ ಅಮ್ಮ ತನ್ನ ಕೈಯ್ಯಲ್ಲಿದ್ದ ಕತ್ತಿ ತೋರಿಸಿ ’ಯಾರಾದರೂ ನನ್ನನ್ನು ತಡೆದರೆ ಈ ಕತ್ತಿಯಿಂದಲೇ ಕುತ್ತಿಗೆ ಕಡಿದುಕೊಂಡು ಸತ್ತು ಬಿಡುತ್ತೇನೆ. ಎಂದವಳೇ ಹಿತ್ತಲಿನ ಏರು ಹತ್ತಿ, ಹಿಂಬದಿಯ ಹರಿಯುವ ಹೊಳೆಯಲ್ಲಿಳಿದಳು. ಆಚೆ ದಡ ತಲುಪಿದವಳೇ. ಬಟ್ಟೆಯ ಗಂಟನ್ನು ದಡದ ಮೇಲೆ ಇಟ್ಟಳು. ನನ್ನ ಕೈ ಹಿಡಿದುಕೊಂಡು ಹೊಳೆಯ ಮಧ್ಯಕ್ಕೆ ಬಂದು ಮೂರು ಮುಳುಗು ಹಾಕಿ ಆಚೆ ದಡಕ್ಕೆ ಹೋಗಿ ಬೇರೆ ಬಟ್ಟೆಯನ್ನುಟ್ಟು ನನ್ನ ಮತ್ತು ಆಕೆಯ ಬಟ್ಟಯನ್ನು ಕಳಚಿ ನದಿಯ ಮಧ್ಯಕ್ಕೆ ಎಸೆದುಬಿಟ್ಟಳು.
ನಡೆದೂ ನಡೆದು, ಗುಡ್ಡ ಬೆಟ್ಟ ಹತ್ತಿಳಿದು ಹೊತ್ತು ಮುಳುಗುವ ವೇಳೆಗೆ ನಾವು ನಾಗೂರಿನ ಶಾಲೆಯ ಹತ್ತಿರದಲ್ಲಿದ್ದೆವು. ಅಮ್ಮ ಅಲ್ಲಲ್ಲಿ ನಿಂತು ದಣಿವಾರಿಸಿಕೊಳ್ಳುತ್ತಿದ್ದಳು. ’ಅಮ್ಮಾ..ಭಗವತಿ..ತಾಯಿ ರಕ್ತೇಶ್ವರಿ..’ ಎಂದೆಲ್ಲಾ ಗೊಣಗಿಕೊಳ್ಳುತ್ತಿದ್ದಳು. ನನಗೆ ಹಸಿವು ಬಾಯಾರಿಕೆಯಲ್ಲಿ ಜೀವ ಹೋದಂತಾಗಿತ್ತು. ಶಾಲೆಯ ಹತ್ತಿರ ಬಂದಾಗ ’ ಅಮ್ಮಾ..ಅಮ್ಮಾ..’ ಎಂದು ನರಳುತ್ತಾ ಒಂದು ಮರದ ಬುಡದಲ್ಲಿ ಹೊಟ್ಟೆ ಹಿಡಿದುಕೊಂಡು ಕುಳಿತು ಬಿಟ್ಟಳು. ನನಗೆ ಏನೂ ತೋಚದೆ ಅವಳ ಪಕ್ಕದಲ್ಲಿ ಕುಳಿತುಬಿಟ್ಟೆ. ಅವಳು ನನ್ನ ಕೈಯ್ಯನ್ನು ಹಿಡಿದುಕೊಂಡು ’ಅಕ್ಕಪಕ್ಕದಲ್ಲಿ ಯಾವುದಾದರೂ ಮನೆಯಿದ್ದರೆ ಅಲ್ಲಿರುವವರನ್ನು ಕರೆದುಕೊಂಡು ಬಾ’ ಎನ್ನುತ್ತಾ ಮರದ ಬೊಡ್ಡೆಗೆ ಒರಗಿಕೊಂಡಳು. ನಾನು ಅಲ್ಲಿಂದ ಓಡಿದೆ.
ಇತ್ತ ಊರವರು ಪಟೇಲರ ಹೆಣವನ್ನು ದೊಡ್ಡಮನೆಗೆ ಹೊತ್ತು ತಂದರು. ’ ಅತ್ತಿಗೆ’ ಎನ್ನುತ್ತಾ ಮೈದುನಂದಿರು ಆಕೆಗಾಗಿ ಹುಡುಕಾಡಿದರೆ ಮನೆಯಲ್ಲಿ ಅಕೆಯಿಲ್ಲ. ವಿಷಯ ತಿಳಿದ ಮೊದಲ ಮೈದುನ ಆಕೆಯನ್ನು ತಾನು ಕರೆತರುವುದಾಗಿ ಉಳಿದ ಕಾರ್ಯಗಳ ಏರ್ಪಾಡು ಮಾಡಲು ಅಲ್ಲಿದ್ದವರಿಗೆ ಸೂಚನೆ ನೀಡಿ ಸೈಕಲ್ ಹತ್ತಿ ಹೊರಟ. ಅವನಿಗೆ ಅತ್ತಿಗೆಯ ತವರಿನ ಹಾದಿ ಗೊತ್ತಿತ್ತು. ಅಲ್ಲಿಂದ ಸುಮಾರು ಎಂಟು ಮೈಲಿನ ಹಾದಿಯದು. ಸುಮಾರು ನಾಲ್ಕು ಮೈಲಿ ಕಳೆದು ನಾಗೂರಿನ ಶಾಲೆಯ ಹತ್ತಿರ ಬಂದಾಗ ಶಾಲೆಯ ಮುಂದೆ ನಾಲ್ಕೈದು ಹೆಂಗಸರು ನಿಂತಿದ್ದು ಆತನ ಕಣ್ಣಿಗೆ ಬಿತ್ತು. ಅವರ ನಡುವೆ ನಿಂತಿದ್ದ ನಾನು ಚಿಕ್ಕಪ್ಪನ ಕಣ್ಣಿಗೆ ಬಿಳಬಾರದೆಂದು ಪ್ರಯತ್ನ ಪಡುತ್ತಿರುವಾಗಲೇ ಅವನು ನನ್ನನ್ನು ನೋಡಿಬಿಟ್ಟ. ನಾನಿದ್ದಲ್ಲಿಗೇ ಬಂದುಬಿಟ್ಟ. ಅಲ್ಲಿದ್ದ ಹೆಂಗಸರ ಹತ್ತಿರ ಮಾತಾಡಿದ. ಶಾಲೆಯ ಒಂದು ಕೋಣೆಯ ಮುಚ್ಚಿನ ಬಾಗಿಲ ಮುಂದೆ ನಿಂತು ’ಅತ್ತಿಗೆ ಹೆದರಬೇಡಿ. ನಿಮ್ಮನ್ನು ತವರು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಸುತ್ತೇನೆ.. ನಾನು ಮನೆಗೆ ಹೋಗುವೆ. ಅಲ್ಲಿ ಮುಂದಿನ ಕಾರ್ಯ ಮಾಡಬೇಕಾಗಿದೆ. ನಾಳೆ ನಾಡಿದ್ದರಲ್ಲಿ ನಾವು ನಿಮ್ಮನ್ನು ಬಂದು ಕಾಣುವೆ’ ಎಂದು ಹೇಳಿದವನೇ ನನ್ನ ನೆತ್ತಿ ಸವರಿ ’ಬಾ ಸೈಕಲ್ಲಿನಲ್ಲಿ ಮನೆಗೆ ಹೋಗುವ’ ಎಂದ. ಆದರೆ ನಾನು ಹೋಗಲು ಒಪ್ಪಲಿಲ್ಲ. ಆಗ ಚಿಕ್ಕಪ್ಪ ಅಲ್ಲೇ ಇದ್ದ ಗಂಡಸೊಬ್ಬನನ್ನು ಕರೆದು ನನ್ನನ್ನು ಅಜ್ಜನ ಮನೆಗೆ ಕರೆದೊಯ್ದು ವಿಷಯ ಮುಟ್ಟಿಸುವಂತೆ ತಿಳಿಸಿ ತಾನು ಸೈಕಲ್ ಹತ್ತಿ ಹೊರಟ.
ಆಗ ಆ ಗಂಡಸು, ನಾನವರನ್ನು ಮಾಮ ಎಂದು ಇವತ್ತಿಗೂ ಕರೆಯುತ್ತೇನೆ. ಒಬ್ಬ ಹೆಂಗಸಿನೊಡನೆ ಮಾತಾಡಿ ನನಗೆ ಹಾಲು, ಬಾಳೆ ಹಣ್ಣು ಮತ್ತು ಎರಡು ದೋಸೆಗಳನ್ನು ತರಿಸಿಕೊಟ್ಟರು. ನಾನದನ್ನು ಗಬಗಬನೆ ತಿಂದೆ. ಆಮೇಲೆ ಅವರು ’ ಬಾ ಅಜ್ಜನ ಮನೆಗೆ ಹೋಗೋಣ’ ಎಂದು ನನ್ನನ್ನೆತ್ತಿ ಬುಜದ ಮೇಲೆ ಕೂರಿಸಿಕೊಂಡರು. ನಾನು ಅವರ ಕೊರಳ ಸುತ್ತ ಎರಡು ಕಾಲುಗಳನ್ನು ಇಳಿಬಿಟ್ಟು ಅವರ ತಲೆಯನ್ನು ಹಿಡಿದುಕೊಂಡು ಆರಾಮದಿಂದ ಕೂತು ಅಲ್ಲಿದ್ದವರನ್ನು ತಿರುಗಿ ನೋಡುತ್ತಾ ಅಜ್ಜನ ಮನೆಯತ್ತ ಹೊರಟೆ.
ಆ ರಾತ್ರಿ ಆ ಶಾಲೆಯಲ್ಲಿ ನನ್ನ ತಮ್ಮ ಹುಟ್ಟಿದ. ಮರುದಿನ ಬೆಳಗಿನ ಜಾವ ಅಜ್ಜ ಡೋಲಿ ತಂದು ಮಗಳು ಮತ್ತು ಮೊಮ್ಮಗನನ್ನು ತನ್ನ ಮನೆಗೆ ಕರೆದುಕೊಂಡು ಹೋದವನು ಮತ್ತೆಂದೂ ದೊಡ್ಡಮನೆಗೆ ಕಳುಹಿಸಿಕೊಡಲಿಲ್ಲ. ಅಮ್ಮ ತಾನು ಬದುಕಿರುವ ತನಕವೂ ಆ ಮನೆಯ ಮೆಟ್ಟಲು ತುಳಿಯಲಿಲ್ಲ ಮತ್ತು ನಾವು ದೊಡ್ಡಮನೆಗೆ ಸೇರಿದವರೆಂಬುದನ್ನೂ ಬಾಯಿತಪ್ಪಿಯೂ ಹೇಳಲಿಲ್ಲ. ಆದರೆ ಅಜ್ಜನ ಕಾಲಾಂತರದಲ್ಲಿ ಅಮ್ಮ ಆ ಮನೆಯಿಂದಲೂ ಹೊರದಬ್ಬಿಸಿಕೊಂಡಳು. ಅದೂ ತಾನು ಹೆತ್ತ ಮಗನಿಂದಲೇ.. ಸಾಯುವ ಕಾಲಕ್ಕೆ ಆಕೆ ಬೀದಿ ಹೆಣವಾದಳು ಎಂಬುದನ್ನು ನೆನಪಿಸಿಕೊಂಡರೇ ನನ್ನ ಕೊರಳುಬ್ಬಿ ಬರುತ್ತದೆ; ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
 ಆಗ ನಾನು ದೂರದೇಶದಲ್ಲಿದ್ದೆ; ಅಸಹಾಯಕಳಾಗಿದ್ದೆ....
[”ಅಲ್ಲೊಂದು ಕತ್ತಲ ಕೋಣೆ’ ಕಥೆಯ ಮುಂದುವರಿದ ಭಾಗವಾಗಿಯೂ ಇದನ್ನು ಓದಬಹುದು...ಈ ಕಥೆ ಮತ್ತೆ ಮುಂದುವರಿಯಲೂ ಬಹುದು.]

Monday, February 11, 2013

ಅಲ್ಲೊಂದು ಕತ್ತಲ ಕೋಣೆ....

ಚಿತ್ರಕೃಪೆ; ಅಂತರ್ಜಾಲಅದೊಂದು ದೊಡ್ಡಮನೆ. ಕೂಡು ಕುಟುಂಬ. ಅಲ್ಲಿ ಎಷ್ಟು ಸಂಸಾರಗಳು ವಾಸ ಮಾಡುತ್ತವೆಯೆಂದು ಪಕ್ಕನೆ ಲೆಖ್ಖ ಸಿಕ್ಕುವುದಿಲ್ಲ. ಆ ಮನೆಗೆ ಸೇರಿದ ಮಕ್ಕಳೆಲ್ಲ ಒಮ್ಮೊಮ್ಮೆ ಕೈ ಬೆರಳು ಮಾಡಚುತ್ತಾ ಆ ಕೊಣೆಗಳನ್ನು ಲೆಖ್ಖ ಹಾಕಲು ಪ್ರಯತ್ನಿಸುತ್ತಿಸುತ್ತಿದ್ದರು. ಆದರೆ ಪ್ರತಿಭಾರಿಯೂ ಲೆಖ್ಖ ತಪ್ಪಿಹೋಗಿ ಎದುರಿಗೆ ಸಿಕ್ಕವರನ್ನು ಕೇಳಿ ಅವರಿಂದಲೂ ಸರಿಯಾದ ಉತ್ತರ ಸಿಕ್ಕದೆ ಪೆಚ್ಚು ಮೋರೆ ಹಾಕಿಕೊಳ್ಳುತ್ತಿದ್ದುದ್ದುಂಟು. ಆದರೆ ಮಕ್ಕಳೆಲ್ಲಾ ಸೇರಿಕೊಂಡು ’ಕಣ್ಣೇ ಮುಚ್ಚೇ ಕಾಡೇಗೂಡೇ’ ಆಡಲು ಇದಕ್ಕಿಂತ ಪ್ರಶಸ್ತ ಜಾಗ ಅವರಿಗೆ ಇನ್ನೆಲ್ಲೂ ಸಿಕ್ಕಿರಲಿಲ್ಲ. ಪ್ರತಿಯೊಂದು ಕೋಣೆಯಲ್ಲೂ ಜೋಡಿ ಮಂಚ ಇರುತ್ತಿತ್ತು. ಮತ್ತು ರಾತ್ರಿಯಲ್ಲಿ ಮಾತ್ರ ಅಲ್ಲಿ ದೀಪ ಉರಿಯುತ್ತಿತ್ತು. ಉಳಿದಂತೆ ಹಗಲಿನಲ್ಲಿ ಅವಕ್ಕೆ ಬೀಗ ಹಾಕಿರದಿದ್ದರೂ ಅವು ಸದಾ ಮುಚ್ಚಿಯೇ ಇರುತ್ತಿದ್ದವು.

ಆ ಮನೆಯ ದೊಡ್ಡ ಮೊಗಸಾಲೆಯಲ್ಲಿ ಅತ್ಯಂತ ಸುಂದರ ಕೆತ್ತನೆಗಳಿಂದ ಕೂಡಿದ, ಎರಡು ಜನ ತಬ್ಬಿ ನಿಲ್ಲಬಹುದಾದ ಚಿತ್ತಾರದ ಎರಡು ಗೋದಿಗಂಭಗಳಿದ್ದವು. ಅದನ್ನು ಗೋದಿಗಂಬಗಳೆಂದು ಯಾಕೆ ಕರೆಯುತ್ತಿದ್ದರೆಂಬುದು ನನಗೆ ಗೊತ್ತಿಲ್ಲ. ಆದರೆ ಆ ಮೊಗಸಾಲೆ ಪ್ರವೇಶ ಮಾಡುವಾಗ ಅದು ರಾಜನೊಬ್ಬನ ಆಸ್ಥಾನಕ್ಕೆ ಪ್ರವೇಶ ಮಾಡುವ ಹಾಗೆ ಅನ್ನಿಸುತ್ತಿತ್ತು. ರಾಜನಿರಬಹುದಾಗಿದ್ದ ಜಾಗದಲ್ಲಿ ದೇವರ ಕೊಣೆಯಿತ್ತು. ಅಲ್ಲಿ ನಂದಾದೀಪದ ಬೆಳಕಿನಲ್ಲಿ ಮಂದಸ್ಮಿತೆಯಾದ ಅಮ್ಮನ ಅಳೆತ್ತರದ ವಿಗ್ರವಿತ್ತು. ಆ ವಿಗ್ರಹದ ಕಾರಣದಿಂದಾಗಿಯೋ ಏನೋ ಆ ಮೊಗಸಾಲೆಗೆ, ಆ ಮೊಗಸಾಲೆಯ ವೈಭವದಿಂದಾಗಿ ಆ ಮನೆಗೆ ಪ್ರವೇಶಿಸುವಾಗ ಭವ್ಯತೆಯ ಅನುಭವ ಆಗುತ್ತಿತ್ತು.

 ಆ ಮನೆಯನ್ನು ಸುತ್ತಲಿನ ಹಳ್ಳಿಯವರೆಲ್ಲಾ ’ದೊಡ್ಡಮನೆ’ ಎಂದೇ ಕರೆಯುತ್ತಿದ್ದರು. ಹಾಗೆ ಕರೆಯಲು ಇನ್ನೂ ಒಂದು ಕಾರಣವಿದ್ದಿರಬಹುದು; ಅಲ್ಲಿ ವಾಸ ಮಾಡುತ್ತಿದ್ದವರು ಆ ಊರಿನ ಪಟೇಲರು ಮತ್ತು ಅವರ ದೊಡ್ಡ ಪರಿವಾರು. ನ್ಯಾಯ ಪಂಚಾಯಿತಿಕೆಯ ಕಟ್ಟೆ ಮೇಲೆ ಕುಳಿತುಕೊಳ್ಳವ ದೊಡ್ಡ ಮನುಷ್ಯರು ಅವರು..
ನಾನು ಹುಟ್ಟಿದ್ದು ಅದೇ ಮನೆಯಲ್ಲಿ. ಆದರೆ ಬೆಳೆದದ್ದು ಪುಟ್ಟ ಗುಡಿಸಲೊಂದರಲ್ಲಿ. ಇಲ್ಲಿ ಈ ದೊಡ್ಡಮನೆಯಲ್ಲಿ ನನ್ನ ಅಪ್ಪ-ಅಮ್ಮ ಯಾವ ರೂಮಿನಲ್ಲಿ ವಾಸ ಮಾಡುತ್ತಿದ್ದರು ಎಂಬುದರ ಸ್ಪಷ್ಟ ನೆನಪು ನನಗಿದೆ..  ಅಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಗೊತ್ತಿರದ ಗುಟ್ಟಿನ ಸಂಗತಿಯೊಂದು ಆ ಮನೆಯ ಬಗ್ಗೆ ನನಗೆ ಗೊತ್ತಿತ್ತು. ಆ ಮನೆಯ ಮೊಗಸಾಲೆಗೆ ಅಂಟಿಕೊಂಡಂತೆ ಅಲ್ಲೊಂದು ಗುಪ್ತ ಕೊಠಡಿಯಿತ್ತು. ಅದಕ್ಕೆ ಕಿಟಿಕಿಯಿರಲಿಲ್ಲ. ಬೆಳಕಿನ ಕಿರಣ ಎಂದೂ ಅಲ್ಲಿಗೆ ಪ್ರವೇಶಿಸಿರಲಿಲ್ಲ. ಆ ಕತ್ತಲ ಕೋಣೆಗೆ ಮೂರಡಿ ಎತ್ತರದ ಒಂದೂವರೆ ಅಗಲದ ಒಂದು ಪುಟ್ಟ ಬಾಗಿಲಿತ್ತು. ಆ ಕೋಣೆಯ ಸುತ್ತ ಮೂರೂ ಬದಿಗೆ ಬೇರೆ ಕೋಣೆಯಿದ್ದ ಕಾರಣ ಈ ಕೋಣೆಯನ್ನು ಯಾರೂ ಗಮನಿಸುತ್ತಿರಲಿಲ್ಲ. ಅಕಸ್ಮತ್ತಾಗಿ ಯಾರಾದರೂ ಅದನ್ನು ಗಮನಿಸಿದರೂ ಅದು ಯಾವುದೋ ಕೋಣೆಯೊಂದರ ಕಿಟಕಿಯಿರಬಹುದೆಂದು ಭಾವಿಸುವ ಹಾಗೆ ಅದನ್ನು ವಿನ್ಯಾಸ ಮಾಡಲಾಗಿತ್ತು.

ಬ್ರಿಟೀಶರ ಕಾಲದಲ್ಲಿ ಅವರ ಕಣ್ಣಳತೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಕ್ಕಿ, ಭತ್ತ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಬಚ್ಚಿಡುವುದಕ್ಕಾಗಿ, ಕೆಲವೊಮ್ಮೆ ದೇಶಭಕ್ತರನ್ನು ಅಡಗಿಸಿಡುವುದಕ್ಕಾಗಿ ಆ ಕೋಣೆಯನ್ನು ಬಳಸಿಕೊಳ್ಳಲಾಗುತ್ತಿತ್ತೆಂದು ನಾನು ದೊಡ್ಡವಳಾದ ಮೇಲೆ ಅವರಿವರಿಂದ ಕೇಳಿ ತಿಳಿದುಕೊಂಡ ಸಂಗತಿಯಾಗಿತ್ತು.
 ನಾನು ಆ ಮನೆ ಹೋದಾಗಲೆಲ್ಲ ಆ ಮನೆಯ ಕತ್ತಲ ಕೋಣೆ ಮತ್ತು ಆ ಕೋಣೆಯಲ್ಲಿ ನಡೆದ ಘಟನೆಯೊಂದು ನನಗೆ ನೆನಪಿಗೆ ಬರುತ್ತದೆ. ಅದನ್ನು ನೆನೆಸುವಾಗಲೆಲ್ಲ ನನ್ನ ಮೈಮನ ನನಗರಿವಿಲ್ಲದೆ  ಕಂಪಿಸುತ್ತದೆ.

ಅಂದು ರಾತ್ರಿ ಸುಮಾರು ಹತ್ತು ಘಂಟೆಯಾಗಿರಬಹುದು. ನಾನಾಗ ಒಂದನೇ ತರಗತಿಯಲ್ಲಿ ಓದುತ್ತಿದ್ದಿರಬೇಕು. ನಾವು ಮಕ್ಕಳೆಲ್ಲಾ ದೊಡ್ಡದಾದ ಊಟದ ಹಾಲ್ ನಲ್ಲಿ ಎಂದಿನಂತೆ ಅಜ್ಜಿಯ ಬಾಯಿಯಿಂದ ಕಥೆ ಕೇಳುತ್ತಾ ಮಲಗಿ ನಿದ್ರಿಸಿದ್ದೆವು. ಮಧ್ಯೆ ನನಗೆ ಎಚ್ಚರವಾದರೆ ಅಪ್ಪ-ಅಮ್ಮ ಮಲಗುತ್ತಿದ್ದ ಕೋಣೆಯಲ್ಲಿ ಮಲಗುವುದು ನನ್ನ ಅಭ್ಯಾಸವಾಗಿತ್ತು. ಆದರೆ ಅಲ್ಲಿ ಅಪ್ಪನನ್ನು ನಾನು ಕಂಡಿದ್ದು ಅಪರೂಪ. ಅಲ್ಲಿರುವ ದೊಡ್ಡದಾದ ಚಿತ್ತಾರದ ಮಂಚದಲ್ಲಿ ಅಮ್ಮನೊಬ್ಬಳೇ ಮಲಗಿರುತ್ತಿದ್ದರು. ನಾನು ಅಲ್ಲಿಗೆ ಹೋಗಿ ಮಲಗುವುದು ಆಕೆಗೂ ಇಷ್ಟವಿದ್ದಂತಿತ್ತು. ನಾನು ಅಲ್ಲಿಗೆ ಹೋದೋಡನೆಯೇ ಆಕೆ ನನ್ನನ್ನು ಬಾಚಿ ತಬ್ಬಿಕೊಳ್ಳುತ್ತಿದ್ದರು. ನಂತರ ಎದೆಗವಚಿಕೊಂಡು ಲಾಲಿ ಹೇಳಿ ಮಲಗಿಸುತ್ತಿದ್ದರು. ಒಮ್ಮೊಮ್ಮೆ ಕಣ್ಣಿರು ಹಾಕುತ್ತಾ ಏನೇನೋ ನನಗರ್ಥವಾಗದ ರೀತಿಯಲ್ಲಿ ಗೊಣಗಿಕೊಳ್ಳುತ್ತಿದ್ದರು.

ಅಂದು ಕೂಡಾ ನನಗೆ ಎಚ್ಚರವಾಗಿತ್ತು. ಅಮ್ಮನನ್ನು ಹುಡುಕಿಕೊಂಡು ನಾನು ರೂಮಿಗೆ ಹೋದರೆ ಅಲ್ಲಿ ಅಮ್ಮನಿರಲಿಲ್ಲ. ಎಲ್ಲಿ ಹೋದರೆಂದು ನಾನು ಹುಡುಕುತ್ತಾ ಬಂದಾಗ ಒಂದು ಕಿಟಕಿಯ ಬಳಿ ಚಿಮಿಣಿ ದೀಪದ ಬೆಳಕು ಕಂಡಿತು. ಜೊತೆಯಲ್ಲಿ ಕುಸು ಕುಸು..ಪಿಸಪಿಸು...ಮಾತುಗಳು ಕೇಳಿ ಬಂದುವು..ನಾನು ಆ ಕಿಟಕಿಯನ್ನು ಮೆಲ್ಲನೆ ದೂಡಿದೆ..ಅದು ತೆರೆದುಕೊಂಡಿತು. ಅಲ್ಲಿ ನನ್ನ ಅತ್ತೆಯಂದಿರು, ಚಿಕ್ಕಮ್ಮ-ದೊಡ್ಡಮ್ಮಂದಿರು ಎಲ್ಲರೂ ಸೇರಿಕೊಂಡು ಯಾರೋ ಒಬ್ಬರಿಗೆ ಬಯ್ಯುತ್ತಿದ್ದರು. ಕೋಣೆಯ ಒಂದು ಮೂಲೆಯಲ್ಲಿ ಯಾರೋ ಒಬ್ಬರು ಮೊಣಕಾಲುಗಳ ಮೇಲೆ ತಲೆಯಿಟ್ಟು ಬಗ್ಗಿ ಕುಳಿದ್ದರು. ’ಇದರಲ್ಲಿ ನನ್ನದೇನೂ ತಪ್ಪಿಲ್ಲ..ಅವರೇ..’ ಎಂದು ಅಳುತ್ತಲೇ ತಲೆಯೆತ್ತಿ ಅಲ್ಲಿದ್ದ ಎಲ್ಲರತ್ರ ಮುಖ್ಯವಾಗಿ ನನ್ನಮ್ಮನತ್ರ ನೋಟ ಬೀರಿದಾಗಲೇ ನನಗೆ ಗೊತ್ತಾಗಿದ್ದು, ಅವರು ನನ್ನ ಪ್ರೀತಿಯ ವನಜ ಚಿಕ್ಕಮ್ಮನೆಂದು. ತುಂಬಾ ಒಳ್ಳೆಯವರು ಅವರು. ಅಂತವರ ಮೇಲೆ ಇವರೆಲ್ಲಾ ಯಾಕೆ ರೇಗಾಡುತ್ತಿದ್ದಾರೆ. ಅವರಿಂದ ಏನು ತಪ್ಪಾಗಿದೆ. ನನಗೆ ಅರ್ಥವಾಗಲಿಲ್ಲ.

’ನೋಡುವುದೇನು..ಅವಳ ಕೈಕಾಲುಗಳನ್ನು ಹಿಡಿದುಕೊಳ್ಳಿ’ ಎಂದು ಶಕುಂತಲಾ ಅತ್ತೆ ಹೇಳಿದಾಗ, ಅಲ್ಲಿದ್ದ ಕೆಲವು ಜನ ವನಜ ಚಿಕ್ಕಮ್ಮನನ್ನು ನೆಲಕ್ಕೆ ದಬ್ಬಿದರು. ’ಇವತ್ತೂ ಅಲ್ಲಿಗೆ ಹೋಗುತ್ತಿಯೇನೇ ಮುಂಡೆ’ ಎಂದು ಒಬ್ಬಾಕೆ ಅವಳ ಜುಟ್ಟು ಹಿಡಿದು ಕೇಳಿದಳು. ಅವಳು ’ ಹೌದು....’ ಎಂದು ಬಿಕ್ಕಳಿಸುತ್ತಲೇ  ’ಹೋಗದೆ ಇದ್ದರೆ ನನ್ನನ್ನು ಈ ಮನೆಯಿಂದ  ಹೊರಗೆ ಹಾಕುತ್ತಾರಂತೆ..ನಾನು ಎಲ್ಲಿಗೆ ಹೋಗಲಿ?’ ಎಂದು ಅಸಹಾಯಕಳಾಗಿ ಎಲ್ಲರ ಮುಖ ನೋಡಿದಳು. ’ಎಷ್ಟು ಹೊತ್ತಿಗೆ?’ ಶಕುಂತಲಾ ಅತ್ತೆ ಅಬ್ಬರಿಸಿದರು. ಆಕೆ ನಡುಗುತ್ತಾ ’ಈಗಲೇ ಹೋಗಬೇಕಂತೆ..ಸೂಚನೆ ನೀಡಿ ಹೋಗಿದ್ದಾರೆ...  ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎನ್ನುತ್ತಾ ಆಕೆ ತೆವಳುತ್ತಲೇ ಬಂದು ಅಮ್ಮನ ಕಾಲ ಮೇಲೆ ತಲೆಯಿಟ್ಟಳು. ಅಮ್ಮ ಸೆರಗನ್ನು ಬಾಯಿಗೆ ಅಡ್ಡ ಇಟ್ಟುಕೊಂಡು ಜೋರಾಗಿ ಅಳುತ್ತಾ ಕಂಬದಂತೆ ನಿಂತು ಬಿಟ್ಟರು. ಅಲ್ಲಿದ್ದ ಎಲ್ಲರೂ ರಣೋತ್ಸಾಹದಲ್ಲಿದ್ದರು.ಅವಳ ದೀನ ನುಡಿ ಅವರ ಕಿವಿಗೇ ಬಿದ್ದಂತಿರಲಿಲ್ಲ. ಅವರಲ್ಲಿ ಒಬ್ಬಾಕೆ ಅವಳ ಸೀರೆಯನ್ನು ಸೊಂಟದ ತನಕ ಎತ್ತಿದಳು. ’ಹೋಗಲಿ ಬಿಟ್ಟು ಬಿಡಿ..ಅದೊಂದು ಹೆಣ್ಣು ಜೀವ ತಾನೆ? ಎಲ್ಲಾ ನನ್ನ ಹಣೆಬರಹ’ ಎನ್ನುತ್ತಾ ಅಮ್ಮ ಕೋಣೆಯಿಂದ ಹೊರಹೋಗಿಬಿಟ್ಟರು.

’ಅದನ್ನು ತಾ’ ಎಂದು ಶಕುಂತಲಾ ಅತ್ತೆ ಹೇಳಿದಾಗ ಪಾರ್ವತಿ ಚಿಕ್ಕಮ್ಮ ಒಂದು ತಾಮ್ರದ ಗಿಂಡಿಯನ್ನು ಆಕೆಯ ಮುಂದೆ ಒಡ್ಡಿದರು. ಆಕೆ ಅದರಲ್ಲಿ ಕೈ ಅದ್ದಿ ಮುಷ್ಟಿಯಲ್ಲಿ ಏನನ್ನೋ ತೆಗೆದುಕೊಂಡು ಅವಳ ತೊಡೆಗಳ ಮಧ್ಯೆ ಸವರಿಬಿಟ್ಟರು. ವನಜ ಅತ್ತೆಯ ಬಾಯಿಯಿಂದ ಹೊರಟ ಚಿತ್ಕಾರ ಶಕುಂತಲಾ ಅತ್ತೆಯ ಎಡಗೈಯ ಅಡ್ಡದಲ್ಲಿ ಕೇವಲ ನರಳಿಕೆಯಾಗಿ ಹೊಮ್ಮಿತು. ’ತಕ್ಷಣ... ಈ ಕೂಡಲೇ ಆ ಕೋಣೆಗೆ ತೆರಳು ಅವರಿಗೆ ಒಂಚೂರು ಅನುಮಾನ ಬರಬಾರದು..ನಿನ್ನ ಕಣ್ಣಿಂದ ನೀರು ಬಂದರೆ...ಬಾಯಿಯಿಂದ ಅಳುವಿನ ಧ್ವನಿ ಹೊರಟರೆ..ನಾವೆಲ್ಲಾ ಸೇರಿ ಈ ಮನೆಯಿಂದಲೇ ನಿನ್ನನ್ನು ಅಟ್ಟಿಬಿಡುತ್ತೇವೆ.’ ಎಂದು ಆಕೆಯನ್ನು ದಬ್ಬಿಕೊಂಡೇ ದೇವರ ಕೋಣೆಯ ಪಕ್ಕದ ಕೋಣೆಯ ಮುಂದೆ ತಂದು ನಿಲ್ಲಿಸಿದರು. ವನಜ ಅತ್ತೆ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತಾ, ಕೆಳತುಟಿಯನ್ನು ಮೇಲಿನ ಹಲ್ಲುಗಳಿಂದ ಕಚ್ಚಿ ಹಿಡಿದು, ತನ್ನೆಲ್ಲಾ ಧೀಶಕ್ತಿಯನ್ನ ಎಡಗೈಗೆ ವರ್ಗಾಯಿಸಿದಂತೆ ಅದನ್ನು ಸೊಂಟದ ಮೇಲೆ ಒತ್ತಿ ಹಿಡಿದು ಬಸವಳಿದ ಬಲಗೈಯಿಂದ ಮುಚ್ಚಿದ ಬಾಗಿಲನ್ನು ತಟ್ಟಿದಳು. ಬಾಗಿಲು ತೆರೆದುಕೊಂಡಿತು.

ಇತ್ತ ಶಕುಂತಲಾ ಅತ್ತೆ ’ಎಲ್ಲರೂ ನಿಮ್ಮ ನಿಮ್ಮ ಕೋಣೆಗಳಿಗೆ ಹೋಗ್ರೇ..ಅಲ್ಲಿ ನಿಮ್ಮ ಗಂಡಂದಿರು ಕಾಯ್ತಿರಬಹುದು.ಇಲ್ಲೇನಾದ್ರೂ ಆದ್ರೆ ನಾನು ನೋಡಿಕೊಳ್ತೇನೆ’ ಎಂದು ಅವರನ್ನೆಲ್ಲಾ ಸಾಗ ಹಾಕಿದಳು. ಆಗ ಅವಳ ನೋಟ ಗೋದಿ ಕಂಬಕ್ಕೆ ಒರಗಿ ಕೂತ ನನ್ನೆಡೆಗೆ ಹರಿಯಿತು. ’ ಇಲ್ಲೇನು ಮಾಡ್ತಿದ್ದೀಯಾ ನನ್ನ ಕಂದಾ’ ಎನ್ನುತ್ತಾ ಓಡಿ ಬಂದು ನನ್ನ ಮುಂದೆ ಮೊಣಕಾಲೂರಿ ನನ್ನ ಗಲ್ಲ ಹಿಡಿದೆತ್ತಿ ’ನಿದ್ದೆ ಬರಲಿಲ್ವಾ?’ ಎನ್ನುತ್ತಾ ಎದೆಗೊತ್ತಿಕೊಂಡಳು. ನನಗೆ ಸ್ವಲ್ಪ ಹಿಂದೆ ಕಂಡ ಅವಳ ರುದ್ರ ರೂಪ ನೋಡಿ ಭಯವಾಗಿತ್ತು. ಅವಳಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಅವಳು ನನ್ನನ್ನು ತಬ್ಬಿಕೊಂಡೇ ಅಮ್ಮನ ರೂಮಿಗೆ ಕರೆತಂದಳು..’ಈ ಕೂಸು ನೋಡು ಅಲ್ಲಿ ಗೋದಿಕಂಬಕ್ಕೆ ಒರಗಿ ಕೂತ್ಕೊಂಡಿತ್ತು. ನಿದ್ದೆ ಮಂಪರಲ್ಲಿದೆ.’ ಎಂದು ಹಾಸಿಗೆ ಮೇಲೆ ಮಲಗಿಸಿ ಚಾದರ ಹೊದೆಸುತ್ತಿರುವಾಗಲೇ ದಡಕ್ಕನೆ ಬಾಗಿಲು ತೆರೆದ ಸದ್ದಾಯಿತು. ಜೊತೆಗೆ ಎದುಸಿರು ಬಿಡುತ್ತಾ ಹೆಬ್ಬಾಗಿಲಿಲು ತೆರೆದು ಅಂಗಳದಲ್ಲಿ ನರಳುತ್ತಾ ಓಡಿದ ಸದ್ದು. ಅಮ್ಮ ಮತ್ತು ಶಕುಂತಲ ಅತ್ತೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕೋಣೆಯಿಂದ ಹೊರ ನಡೆದರು. ಅವರು ನೋಡುತ್ತಿರುವಂತೆಯೇ ಆ ವ್ಯಕ್ತಿ ಎದುರಿನ ತೋಟದಲ್ಲಿರುವ ಕೆರೆಗೆ ಇಳಿದು ದಬಕ್ಕನೆ ಅಲ್ಲಿಯೇ ಕುಳಿತುಕೊಂಡಿತು.

’ಕೋಣ ಪಳ್ಳ ಬಿದ್ದಿದೆ. ಮೈ ನೊಚ್ಚಗಾದ ಮೇಲೆ ಎದ್ದು ಬರುತ್ತೆ. ನೀವು ಹೋಗಿ ಮಲಗಿಕೊಳ್ಳಿ ಅಕ್ಕಾ’ ಎಂದು ವ್ಯಂಗ್ಯದ ನಗುವೊಂದನ್ನು ನಕ್ಕು ಶಕುಂತಲಾ ಅತ್ತೆ ತನ್ನ ಕೋಣೆಗೆ ಹೊರಟರು.’ ಅಲ್ಲೇ..ಆ ವನಜ.. ಪಾಪದು..ಅವಳು ಏನಾದಳೋ..’ ಎಂದು ಅಮ್ಮ ಹೇಳಿದರೆ...’ಎಲ್ಲಾದರೂ ಬಿದ್ದುಕೊಂಡಿರ್ತಾಳೆ ಬಿಡಿ’ ಎಂದು ಉಢಾಪೆಯ ಉತ್ತರ ಕೊಟ್ಟು ಅವರು ಕಣ್ಮರೆಯಾದರು.

 ಅಮ್ಮ ಆ ಕೋಣೆಯಲ್ಲೊಮ್ಮೆ ಇಣುಕಿ ನೋಡಿ ಅಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ರೂಮಿಗೆ ಬಂದು ಮಲಗಿಕೊಂಡರು. ಆದರೆ ಅವರಿಗೆ ನಿದ್ದೆ ಬರಲಿಲ್ಲವೆಂಬುದು ಅವರ ಹೊರಳಾಟದಿಂದ ಗೊತ್ತಾಗುತ್ತಿತ್ತು. ಅವರು ಇದ್ದಕ್ಕಿದ್ದಂತೆ ಒಮ್ಮೆಲೇ ಎದ್ದು ಕುಳಿತವರೇ ’ಕೋಣ ಪಳ್ಳ ಬಿದ್ದಿದೆ’ ಎಂಬುದನ್ನು ಗಟ್ಟಿಯಾಗಿ ಹೇಳಿಕೊಂಡವರೇ ಕಯ್ಯಲಿ ಟಾರ್ಚ್ ಹಿಡಿದುಕೊಂಡು ದನದ ಕೊಟ್ಟಿಗೆಗೆ ಹೋದರು. ಅಲ್ಲಿ ದನಗಳಿಗೆ ಕಲಗಚ್ಚು ಕೊಡುವ ದೊಡ್ಡ ಬಾನೆಯೆಡೆಗೆ ಟಾರ್ಚ್ ಬಿಟ್ಟಾಗ ಕಂಡ ದ್ರುಶ್ಯವನ್ನು ನೋಡಿ ಅವರ ಕರುಳು ಬೆಂದು ಹೋದಂತಾಯ್ತು. ಅಲ್ಲಿ ನೀರು ತುಂಬಿದ ಬಾನೆಯಲ್ಲಿ ಬೆತ್ತಲೆಯಾಗಿ ವನಜ ಕುಳಿತಿದ್ದಾಳೆ. ಅವಳ ಕಣ್ಣುಗಳು ಅತ್ತು ಅತ್ತು ಕೆಂಡದುಂಡೆಗಳಾಗಿವೆ. ಅಮ್ಮನನ್ನು ಕಂಡ ಒಡನೆ ಅವಳ ಬಿಕ್ಕಳಿಕೆ ಮರುಕಳಿಸಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ರೋದಿಸಲಾರಂಭಿಸಿದಳು.

ಅಮ್ಮ ಆಕೆಯ ಬಳಿ ಸಾರಿದವಳೇ ಅವಳ ನೆತ್ತಿಯ ಮೇಲೆ ಕೈಯಾಡಿಸುತ್ತಾ. ’ಹೆದರಬೇಡ ನಾನಿದ್ದೇನೆ. ಸ್ವಲ್ಪ ಹೊತ್ತು ಇಲ್ಲಿಯೇ ಕೂತಿರು ನಾನು ಈಗ ಬರುತ್ತೇನೆ.’ ಎಂದವಳೇ ಸೀದಾ ಅಡುಗೆ ಮನೆಯತ್ತ ಧಾವಿದಳು. ಅಲ್ಲಿ ನೆಲುವಿನಲ್ಲಿ ತೂಗಾಡುತ್ತಿದ್ದ ದೊಡ್ಡ ಬೆಣ್ಣೆಯ ಚೆಟ್ಟಿಯನ್ನು ಕೆಳಗಿಳಿಸಿ ರಟ್ಟೆ ಗಾತ್ರದ ಬೆಣ್ಣೆಯನ್ನು ಗಿಂಡಿಯೊಂದಕ್ಕೆ ಹಾಕಿಕೊಂಡು ಇನ್ನೊಂದು ಕೈಯ್ಯಲ್ಲಿ ಕತ್ತಿಯನ್ನು ಹಿಡಿದು  ಹಿತ್ತಿಲಿಗೆ ಬಂದವಳೇ ಅರಶಿನದ ಗಿಡವನ್ನು ಎಳ್ಳಿ ದಪ್ಪನೆಯ ಹತ್ತಾರು ಕೊಂಬುಗಳನ್ನು ಹಾಗೂ ಮುರ್ನಾಲ್ಕು ಬಗೆಯ ಸೊಪ್ಪುಗಳನ್ನು  ತೆಗೆದುಕೊಂಡು  ಬಚ್ಚಲು ಮನೆಗೆ ಬಂದು ಅವೆಲ್ಲವನ್ನೂ ಅಲ್ಲೇ ಇರುವ ಒರಳು ಕಲ್ಲಿನಲ್ಲಿ ಹಾಕಿ ಜಜ್ಜತೊಡಗಿದಳು. ಅವು ಪುಡಿ ಪುಡಿಯಾಗುತ್ತಿದ್ದಂತೆಯೇ ಅದಕ್ಕೆ ಬೆಣ್ಣೆಯನ್ನು ಸೇರಿಸಿ ನಯವಾಗಿ ಅರೆಯತೊಡಗಿದಳು. ಅದು ಬೆಣ್ಣೆಯಷ್ಟು ಮರುದುವಾದ ಮೇಲೆ ಅದಕ್ಕೆ ಇನ್ನಷ್ಟು ಬೆಣ್ಣೆಯನ್ನು ಸೇರಿಸಿ, ಅದೆಲ್ಲವನ್ನೂ ಗಿಂಡಿಯಲ್ಲಿ ಹಾಕಿ ವನಜಳ ಮುಂದೆ ನಿಂತರು.

ವನಜ ಕಣ್ಣುಚ್ಚಿ ನೀರಿನಲ್ಲಿ ಹಾಗೆಯೇ ಕುಳಿತ್ತಿದ್ದಳು. ಅಮ್ಮ ಅವಳನ್ನು ಮೈಮುಟ್ಟಿ ಎಬ್ಬಿಸಿದರು. ಜೊತೆಯಲ್ಲಿ ತಂದಿದ್ದ ಸೀರೆಯನ್ನು ಅವಳ ಮೈಗೆ ಹೊದೆಸಿದರು. ನಂತರ ಆಕೆಯನ್ನು ಮೆಲ್ಲನೆ ನಡೆಸುತ್ತಾ ದೇವರ ಕೋಣೆಯೆಡೆಗೆ ಕರೆತಂದರು. ಅವಳನ್ನು ಸುತ್ತಿದ್ದ ಸೀರೆಯನ್ನು ಕೆಳಗೆ ಸರಿಸಿದರು. ಅಷ್ಟು ಹೊತ್ತು ನೀರಲ್ಲಿ ಕುಳಿತ ಕಾರಣದಿಂದಲೋ ಅಥವಾ ಜೀವಕ್ಕಂಟಿದ ಭಯದ ನೆರಳಿನಿಂದಲೋ ನಂದಾದೀಪದ ಬೆಳಕಿನಲ್ಲಿ ವನಜಳ ಮೈ ಬೂದಿ ಬಳಿದುಕೊಂಡಂತೆ ಬೆಳ್ಳಗಾಗಿತ್ತು. ಅಮ್ಮ ಗಿಂಡಿಯನ್ನು ದೇವರ ಮುಂದಿಟ್ಟು, ಅಲ್ಲಿ ಹಿತ್ತಾಳೆ ಚೊಂಬಿನಲ್ಲಿದ್ದ ನೀರನ್ನು ವನಜತ್ತೆಯ ಕೈಯ್ಯಲಿಟ್ಟರು. ಆಕೆ ಅದೆಲ್ಲವನ್ನೂ ಒಂದೇ ಉಸಿರಿನಲ್ಲಿ ಶತಮಾನಗಳ ನೀರಡಿಕೆಯಿದೆಯೇನೋ ಎಂಬ ರೀತಿಯಲ್ಲಿ ಗಟಗಟನೆ ಕುಡಿದಳು.

ಚಿತ್ರಕೃಪೆ; ಅಂತರ್ಜಾಲ
. ತಮ್ಮ ಕೈನಲ್ಲಿದ್ದ ಗಿಂಡಿಯನ್ನು ಅವಳೆಡೆಗೆ ಚಾಚಿ ’ ಇದರಲ್ಲಿ ಎಂತಹ ಕಿಚ್ಚನ್ನಾದರೂ ತಣಿಸಬಲ್ಲ ಔಷಧವಿದೆ. ಎಲ್ಲೆಲ್ಲಿ ನಿನಗೆ ಉರಿಯೆನಿಸುತ್ತದೆಯೋ ಅಲ್ಲಿಗೆಲ್ಲಾ ಇದನ್ನು ಲೇಪಿಸಿಕೋ. ನಿನಗರಿವಿಲ್ಲದಂತೆ ನಿದ್ದೆ ನಿನ್ನನ್ನು ಆವರಿಸಿಬಿಡುತ್ತೆ. ಇಂದು ಈ ಕೋಣೆಯಲ್ಲಿಯೇ, ಅಮ್ಮನ ಮಡಿಲಲ್ಲಿ ಮಲಗಿದಂತೆ ಮಲಗಿಬಿಡು. ಹಸಿವಾದರೆ ದೇವರ ಮುಂದಿರುವ ಹಾಲು ಕುಡಿ, ಹಣ್ಣು ತಿನ್ನು. ನಾಳೆ ಬೆಳಿಗ್ಗೆ ನಿನ್ನನ್ನು ನಾನೇ ಬಂದು ಎಚ್ಚರಿಸುತ್ತೇನೆ.’ ಎಂದು ಆಕೆಯ ನೆತ್ತಿ ಸವರಿ, ಹಣೆಯ ಮೇಲೊಂದು ಮುತ್ತನ್ನಿಟ್ಟು ಬಾಗಿಲನ್ನು ಎಳೆದುಕೊಂಡು, ಅಲ್ಲೇ ಬಾಗಿಲಿನ ಎಡಮೂಲೆಯಲ್ಲಿರುವ ಮೊಳೆಗೆ ನೇತು ಹಾಕಿರುವ ಕೀಲಿ ಕೈಯನ್ನು ತೆಗೆದುಕೊಂಡು ಬೀಗ ಜಡಿದು, ಕೀಯನ್ನು ತನ್ನ ಮಂಗಳ ಸೂತ್ರಕ್ಕೆ ಸಿಕ್ಕಿಸಿಕೊಂಡು, ಪಡಸಾಲೆಯನ್ನು ದಾಟಿ, ತೋಟದಂಚಿನಲ್ಲಿರುವ ಕೆರೆಯತ್ತ ಒಮ್ಮೆ ದಿಟ್ಟಿಸಿ ನೋಡಿ, ಯಾವುದೋ ಆಕ್ರುತಿಯೊಂದು ನೀರಿನಲ್ಲಿ ಕುಳಿತಿರುವುದು ಕಂಡಂತಾಗಿ ನಿಟ್ಟುಸಿರು ಬಿಡುತ್ತಾ, ಹೆಬ್ಬಾಗಿಲನ್ನು ಅಡ್ಡಮಾಡಿ, ಸೆರಗಿನಿಂದ ಕಣ್ಣಿರನ್ನು ಒರೆಸಿಕೊಳ್ಳುತ್ತಾ, ಆ ನಡುರಾತ್ರಿಯಲ್ಲಿ ಅತ್ರುಪ್ತ ಆತ್ಮದಂತೆ ಕಾಲೆಳೆಯುತ್ತಾ ತನ್ನ ಕೋಣೆಯತ್ತ ಸಾಗಿದಳು

[”ಪದ ಪಾರಿಜಾತ’ ಕಾಲಂನಲ್ಲಿ ಪ್ರಕಟವಾದ ಕಥೆ]

Monday, February 4, 2013

ಪಾರಿಜಾತದ ಬಿಕ್ಕಳಿಕೆ…
ಮಧ್ಯರಾತ್ರಿ..ನಾನು ಪಾರಿಜಾತದ ಕಂಪಿನಲ್ಲಿದ್ದೆ.
ನನ್ನ ಬೆಡ್ ರೂಮಿನ ಕಿಟಕಿಯತ್ತ ಬಾಗಿದ ಆ ದೇವಲೋಕದ ವೃಕ್ಷದಲ್ಲಿ ಬಿರಿಯುತ್ತಿದ್ದ ದೇವಪುಷ್ಪದ ಸುಂಗಂಧಲ್ಲಿ ಮೈಮರೆತು ನಿದ್ರೆಯಾಳಕ್ಕೆ ಜಾರುತ್ತಲಿದ್ದೆ..
ಆಗ ನನ್ನ ಮೊಬೈಲ್ ಪೋನ್ ರಿಂಗುಣಿಸಿತು…
ಆತ ರಣರಂಗದಲ್ಲಿದ್ದ.. ನನ್ನ ಹೆಸರನ್ನು ಹೇಳುತ್ತಾ ತಡೆ ತಡೆದು ಬಿಕ್ಕಳಿಸುತ್ತಿದ್ದ..
’ಏನಾಯ್ತು?’ ಎನ್ನುತ್ತಲೇ ತಟ್ಟನೆದ್ದು ಕುಳಿತವಳು, ನನ್ನ ಮಾತಿನಿಂದ ಮನೆಯಲ್ಲಿದ್ದವರಿಗೆ ತೊಂದರೆಯಾಗಬಾರದೆಂದು ಟೆರೇಸ್ ಮೇಲೆ ಹೋದೆ. ಪಾರಿಜಾತದ ಗೆಲ್ಲಿನ ನೆರಳಲ್ಲಿ ಹಾಕಿದ ಕುರ್ಚಿಯಲ್ಲಿ ದೊಪ್ಪನೆ ಕುಳಿತೆ..ಅಲ್ಲಿಗೆ ಬರುವ ತನಕ ’ಹೆದರಬೇಡಿ ನಾನಿದ್ದೇನೆ’ ಎಂದು ಸಮಾಧಾನಿಸುತ್ತಲೇ ಬಂದಿದ್ದೆ.
ಅಂದೇ ಮೊದಲ ಬಾರಿ ಗಂಡಸೊಬ್ಬ..ಅದರಲ್ಲೂ ಬಹಳಷ್ಟು ಜೀವನವನ್ನು ಕಂಡಿದ್ದ, ಮಧ್ಯವಯಸ್ಸನ್ನು ಸಮೀಸುತ್ತಿರುವ ವ್ಯಕ್ತಿಯೊಬ್ಬ ಮಗುವಿನಂತೆ,ಅಸಹಾಯಕನಾಗಿ ಅತ್ತದ್ದನ್ನು ನಾನು ನನ್ನ ಕಿವಿಯಾರೆ ಕೇಳುತ್ತಲಿದ್ದೆ..

ಆತ ನಡುಗಿ, ಜರ್ಜರಿತನಾಗುವುದಕ್ಕೆ ಕಾರಣವಿತ್ತು..ಆತನ ಸಹೋದ್ಯೋಗಿಯಾಗಿದ್ದ, ಆತನ ಜೀವದ ಗೆಳೆಯ ಅವನ ಕಣ್ಣೆದುರಿನಲ್ಲೇ ಬಾಂಬ್ ಸ್ಪೋಟದಿಂದಾಗಿ ಛೀದ್ರ ಛೀದ್ರವಾಗಿ ಸತ್ತು ಬಿದ್ದಿದ್ದ. ನನ್ನನ್ನೂ ಸೇರಿದಂತೆ ಜಗತ್ತಿನಾದ್ಯಂತ ಬಹಳಷ್ಟು ಜನರು ಆ ಸುದ್ದಿಯನ್ನು ಟೆಲಿವಿಶನ್ ನಲ್ಲಿ ವೀಕ್ಷಿಸಿದ್ದರು..…ಆ ಕ್ಷಣದಲ್ಲಿ ಆತನಿಗೆ ನನ್ನ ನೆನಪಾಗಿದೆ..ಪೋನ್ ಮಾಡಿದ್ದಾನೆ..ಅದು ಅಂತರಾಷ್ಟ್ರೀಯ ಕರೆ..ಆದರೂ ಒಂದು ಘಂಟೆಗೂ ಮಿಗಿಲಾಗಿ ಆತ ನನ್ನೊಡನೆ ಮಾತಾಡಿದ..ಆತ ರಣರಂಗದ ಮಾತಾಡುತ್ತಲಿದ್ದರೆ..ನಾನು ಪಾರಿಜಾತದ ಕಂಪಿನೊಡನೆ ಅಲೌಕಿಕತೆಯ ಗಂಧವನ್ನು ಬೆರೆಸಿ ಅವನಿಗೆ ರವಾನಿಸುತ್ತಿದ್ದೆ…

ನಿಮಗೀಗ ಅನ್ನಿಸಬಹುದು..ಆತ ನಿಮ್ಮ ಆತ್ಮೀಯ ಗೆಳೆಯನಾಗಿರಬೇಕೆಂದು. ಖಂಡಿತಾ ಅಲ್ಲ. ಅದೊಂದು ಪೇಸ್ ಬುಕ್ ಗೆಳೆತನ ಅಷ್ಟೇ.. ಅದನ್ನೇ ಆತ ಮಾತಿನ ಮಧ್ಯೆ ಹೇಳಿದ..’ಇಷ್ಟೊಂದು ಗೆಳೆಯ-ಗೆಳತಿಯರಿದ್ದಾರೆ ನನಗೆ.. ಆದರೆ ಈ ಹೊತ್ತಿನಲ್ಲಿ ನನಗೆ ನೀವು ಮಾತ್ರ ಯಾಕೆ ನೆನಪಾದಿರೋ ಗೊತ್ತಿಲ್ಲ’
ಹೌದು…ಆತ ನನಗೆ ಪೇಸ್ ಬುಕ್ ನಲ್ಲಿ ಪರಿಚಿತನಾದವನು..ಯಾವುದೋ ಒಂದು ಮಾಹಿತಿಗಾಗಿ ನನ್ನ ಪತಿಯ ಸಲಹೆಯಂತೆ ನಾನವನನ್ನು ಸಂಪರ್ಕಿಸಿದ್ದೆ. ಹಾಗಾಗಿ ಆತನ ಬಳಿ ನನ್ನ ದೂರವಾಣಿ ನಂಬರ್ ಇತ್ತು..ಮುಂದೆ ಅದು ಒಂದು ಸೌಹಾರ್ಧ ಗೆಳೆತನವಾಗಿ ಮುಂದುವರಿದಿತ್ತು…ಆದರೆ ನಡುವೆ ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದಾಗಿ ನಮ್ಮಿಬ್ಬರ ನಡುವಿನ ಸಂಪರ್ಕ ಕೊಂಡಿಗೆ ತುಕ್ಕು ಹಿಡಿದಿತ್ತು..ನಾನವನನ್ನು ಪೇಸ್ ಬುಕ್ ನಲ್ಲಿ ಅನ್ಪ್ರೆಂಡ್ ಮಾಡಿದ್ದೆ.

ಹೀಗಿರುವಾಗಲೇ ಆ ಪೋನ್..ಅದೂ ಮಧ್ಯರಾತ್ರಿಯಲ್ಲಿ ಬಂದಿತ್ತು.
 
ಅಂದು ಹುಣ್ಣಿಮೆಯಾಗಿರಬೇಕು. ಸುತ್ತ ಬೆಳದಿಂಗಳು ಚೆಲ್ಲಿತ್ತು. ಆ ಹಾಲ್ಬೆಳಕಲ್ಲಿ ಮಾಯಾನಗರಿ ಬೆಂಗಳುರು ಹೇಗೆ ನಿಶಬ್ದವಾಗಿ ಮಲಗಿ ನಿಟ್ಟುಸಿರು ಬಿಡುತ್ತಿದೆಯೆಂದು ನಾನವನಿಗೆ ವಿವರಿಸುತ್ತಾ, ತಲೆಯೆತ್ತಿ ಆಕಾಶವನ್ನು ನೋಡುವಂತೆ ಹೇಳಿದೆ. ಆ ಚಂದಿರನ್ನು ನೋಡು..ಅಲ್ಲಿ ನಿನ್ನ ಗೆಳೆಯನಿರಬಹುದು..ಅವನು ಅಲ್ಲಿಂದ ನಿನ್ನನ್ನು ನೋಡುತ್ತಿರಬಹುದು..ನಾನು  ನಿನ್ನ ಮಾತುಗಳಿಂದ ಅವನನ್ನು ಅಲ್ಲಿ ಕಾಣುತ್ತಿದ್ದೇನೆ. ಜಗತ್ತಿಗೆ ತಂಪನ್ನು ತರಲು ಅವನು ಚಂದಿರನಲ್ಲಿ ಸೇರಿ ಹೋಗಿದ್ದಾನೆ…ನಾವಿಬ್ಬರೂ ಏಕಕಾಲದಲ್ಲಿ ಅವನನ್ನು ನೋಡುತ್ತಲಿದ್ದರೆ ಅವನು ನಗದೆ ಇರಲು ಸಾಧ್ಯವೇ?’...

ನಾನು ಅವನೊಡನೆ ಮಾತಾಡುತ್ತಲೇ ಹೋದೆ..ಅವನು ಚಿಕ್ಕ ಮಗುವಿನಂತೆ ಕೇಳುತ್ತಲೇ ಹೋದ.
ಅವನು ಸಹಜಸ್ಥಿತಿಗೆ ಬರುವುದು ನನ್ನ ಅರಿವಿಗೆ ಬರುತ್ತಿತ್ತು. ಹಾಗಾಗಿ ಅವನಿಂದ ಕಳಚಿಕೊಳ್ಳುವುದರ ಬಗ್ಗೆ ಆಲೋಚಿಸುತ್ತಲೇ ಮತ್ತಷ್ಟು ಮಾತು ಮುಂದುವರಿಸುತ್ತಾ ಹೇಳಿದೆ ”ಎರಡು ಪೆಗ್ ವಿಸ್ಕಿ ಕುಡಿದು ಚಂದಿರನ ಜೊತೆ ಸೇರಿರುವ ನಿನ್ನ ಗೆಳೆಯನನ್ನು ನೆನೆಯುತ್ತಾ ಮಲಗು. ನಾಳೆ ಬೆಳಿಗ್ಗೆ ಏಳುವಾಗ ನೀನು ಹೊಸ ಮನುಷ್ಯರಾಗಿರುತ್ತಿ’ ಎಂದು ಅಮ್ಮನಂತೆ ರಮಿಸಿ ನಾನು ಪೋನ್ ದಿಸ್ಕನೆಕ್ಟ್ ಮಾಡಿದೆ.
ನನ್ನನ್ನು ಅತ್ಯಂತ ಕೀಳಾಗಿ ಕಂಡ ಈ ವ್ಯಕ್ತಿಯೊಡನೆ ಇಂತಹ ಅಪರಾತ್ರಿಯಲ್ಲಿ ನಾನು ಯಾಕಾಗಿ ಇಷ್ಟೊಂದು ಮಾರ್ಧವತೆಯಿಂದ ನಡೆದುಕೊಂಡೆ? ಎಂದು ನನ್ನ ಬಗ್ಗೆ ನಾನೇ ಅಚ್ಚರಿಗೊಳ್ಳುತ್ತಾ, ಪಾರಿಜಾತದ ಒಂದೆರಡು ಹೂಗಳನ್ನು ಬಿಡಿಸಿಕೊಂಡು, ಬೊಗಸೆಯಲ್ಲಿ ಹಿಡಿದು ಅದನ್ನು ಅಘ್ರಾಣಿಸುತ್ತಾ ಮೆಟ್ಟಲಿಳಿದು ಮನೆಗೆ ಬಂದೆ.  ರಾತ್ರಿ ಓದಿ ಮಡಚಿಟ್ಟ ಪುಸ್ತಕದ ಮೇಲೆ ಹೂಗಳನ್ನಿಟ್ಟೆ. ಹಾಸಿಗೆಯ ಮೇಲೆ ಒಂದೆರಡು ನಿಮಿಷ ವಜ್ರಾಸನದಲ್ಲಿ ಕಣ್ಮುಚ್ಚಿ ಕುಳಿತೆ. ಆಮೇಲೆ ಸಮಾಧಾನ ಚಿತ್ತದಿಂದ ಮಲಗಿಕೊಂಡೆ.

ಬೆಳಗ್ಗಿನ ಜಾವವಿರಬೇಕು. ಎಚ್ಚರವೂ ಅಲ್ಲದ ಕನಸೂ ಅಲ್ಲದ ಸ್ಥಿತಿ. ನನ್ನ ಕೆನ್ನೆಯ ಮೇಲೆ ಸುಕೋಮಲ ಸ್ಪರ್ಶ. ’ನನ್ನ ಮೇಲೆ ನಿನಗೇಕೆ ಇಷ್ಟು ಮೋಹ’ ಕಿವಿಯ ಬಳಿ ಉಲಿದ ಪಿಸುನುಡಿ. ನಾನು ಗಲಿಬಿಲಿಗೊಳ್ಳುತ್ತಿರುವಾಗಲೇ..ಮತ್ತೆ ಅದೇ ಇನಿದನಿ...
 ’ನೀನು ಯಾಕೆ ನನ್ನ ಹಾಗೆ ಆದೆ?
ನಿನ್ನ ಹಾಗೆಯೇ...ಹಾಗೆಂದರೇನು?
ಲಜ್ಜಾಭರಣೆ..!.ನಿನ್ನ ಹಾಗೆ ನನಗೂ ಒಂದು ಕಥೆಯಿದೆ..ಹೇಳಲೇ?
ಕಥೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಕ್ಕಳ-ಪಕ್ಕಳ ಕೂತು ಗಲ್ಲಕ್ಕೆ ಕೈನೆಟ್ಟೆ.
ನಾನೊಬ್ಬಳು ರಾಜಕುಮಾರಿಯಾಗಿದ್ದೆ. ದಿನಾ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಸ್ತ್ರಾಭ್ಯಾಸ ಮಾಡುತ್ತಿದ್ದೆ..ಪ್ರತಿಧಿನ ಸೂರ್ಯ ನಮಸ್ಕಾರ ಮಾಡುತ್ತಿದ್ದಾಗ ಅವನನ್ನು ನೋಡುತ್ತಿದ್ದೆ..ಕೆಂಪನೆಯ ಕೆಂಡದುಂಡೆಯಂತಿದ್ದ ಆತ ಬರಬರುತ್ತಾ ಹೊಂಬಣ್ಣದ ರೂಪ ಪಡೆಯುತ್ತದ್ದ; ನನ್ನ ಯೌವನಂತೆಯೇ! ನನ್ನ ಹೆಣ್ತನ ಅರಳುವುದನ್ನು ನೋಡುತ್ತಲೇ ಅವನೂ ಬಣ್ಣಗಾರನಾಗುತ್ತಿದ್ದ. ಅವನು ನನ್ನ ಮೋಹಿಸಿದ. ನಾನವನನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಪ್ರತಿದಿನ ಸೂರ್ಯ ನಮಸ್ಕಾರಕ್ಕಾಗಿ ಕೈಯೆತ್ತಿದಾಗಲೆಲ್ಲ ಅವನು ನನ್ನ ಬೆರಳುಗಳನ್ನು ಹಿಡಿದೇ ನನ್ನೊಳಗೆ ಇಳಿಯುತ್ತಿದ್ದ.ನಾನವನನ್ನು ಪ್ರೀತಿಸಿಬಿಟ್ಟೆ. ಮುಂಜಾನೆಯಲ್ಲಿ ಪ್ರತಿದಿನ ಅವನೊಡನೆ ಅವನ ಪ್ರಿಯ ಮಡದಿ ಉಷೆಯಿರುತ್ತಿದ್ದಳು ಆದರೂ ಆತ ಜಾರತನದಲ್ಲಿ ನನ್ನೆಡೆಗೆ ಬಾಗಿದ..ನಾವು ಭೂಮ್ಯಾಕಾಶಗಳಲ್ಲಿ ಒಂದಾಗಿ ಬೆರೆಯುತ್ತಿದ್ದೆವು.

ಆದರೆ ಒಂದು ದಿನ ಅವನು ನನ್ನ ನನ್ನ ಬೆರಳುಗಳಿಗೆ ತನ್ನ ಬೆರಳನ್ನು ಜೋಡಿಸಲಿಲ್ಲ. ಮರುದಿನವೂ ಇಲ್ಲ..ಮತ್ತೆಂದೂ ಬರಲಿಲ್ಲ. ನಾನು ಕಾದೇ ಕಾದೆ..ಸೊರಗಿದೆ.. ಕೈಚಾಚಿದರೆ ಅವನು ನನಗೆಟುಕದಷ್ಟುಎತ್ತರದಲ್ಲಿದ್ದ. ಅವನಿಲ್ಲದೆ ನನ್ನೊಳಗೆ ಬೆಳಕಿರಲಿಲ್ಲ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಸ್ತ್ರಾಭ್ಯಾಸ ಮಾಡುವ ನನ್ನೊಳಗಿನ ರಾಜಕುಮಾರಿ ಕಳೆದುಹೋಗಿದ್ದಳು.ಅದು ಗೊತ್ತಾದ ಒಡನೆ ನನಗೆ ಬದುಕುವುದರಲ್ಲಿ ಅರ್ಥವಿಲ್ಲವೆನಿಸಿತು. ಜಗತ್ತನ್ನೆಲ್ಲಾ ಆ ಸೂರ್ಯದೇವ ಬೆಳಗುತ್ತಾನೆಂದು ನೀವೆಲ್ಲಾ ಅನ್ನುತ್ತೀರಿ. ಆತ ಬೆಳಕಿನೊಡೆಯನಂತೆ. ಆದರೆ ನನ್ನೊಳಗಿನ ಬೆಳಕನ್ನು ಅವನ್ಯಾಕೆ ಕಿತ್ತುಕೊಂಡ? ’ಸಾವಿರಾರು ಕರ ಚಾಚಿ ಕಮಲೆಯರ ಕಣ್ಣ ನೀರ ಒರೆಸುವವನು ಎಂದೆಲ್ಲ ಅನ್ನುತ್ತೀರಿ..ನನ್ನ ಕಣ್ಣೀರು ಅವನಿಗೆ ಕಾಣದಾಯಿತೆ?

 ಮತ್ತೆ ಬದುಕಬೇಕೆನಿಸಲಿಲ್ಲ. ಕಠಾರಿಯಿಂದ ಇರಿದುಕೊಂಡು ಸತ್ತು ಹೋದೆ. ದೇಹವನ್ನು ನಾಶಪಡಿಸಿಕೊಂಡರೇನು ಆತ್ಮ ಅವಿನಾಶಿನಿಯಲ್ಲವೇ? ನನ್ನನ್ನು ಸುಟ್ಟ ಬೂದಿಯೇ ಬೀಜವಾಗಿ ರೂಪುವಡೆದು ಸಸಿಯಾಗಿ ಭೂಮಿಯನ್ನು ಸೀಳಿ ನಿಂತೆ. ಹೂವಾಗಿ ಅರಳಿದೆ. ಯಾರಾದರೂ ಮುಟ್ಟಿದರೆ ಬಾಡಿ ಹೋಗುವ ಭಯ. ಅದಕ್ಕಾಗಿ ಸುತ್ತ ಒರಟು ಎಲೆಯನ್ನು ಹೊದ್ದೆ.  ಅದರ ಆಕಾರವನ್ನು ನೋಡಿದೆಯಾ?.  ಅದು ನನದೇ ಹ್ರುದಯ. ಪೂರ್ವ ಜನ್ಮದ ಸೆಳೆತ. ದೇಹ ನಶ್ವರವಾದರೂ ಪ್ರೀತಿ ಅವಿನಾಶಿಯಲ್ಲವೇ? . ನನ್ನನ್ನು ದೂರದಲ್ಲಿ ನಿಂತು ಜನರು ನೋಡಿ ಆನಂದಿಸಲಿ. ನಾನೆಂದೂ ಅವನನ್ನು ತಲೆಯೆತ್ತಿ ನೋಡಲಾರೆ. ನಾನು ಕತ್ತಲಲ್ಲಿಯೇ ಅರಳುತ್ತೇನೆ. ನೊಂದ ಮನಸ್ಸುಗಳಿಗೆ ತಂಪನ್ನಿಯುತ್ತೇನೆ; ಕಂಪನ್ನು ತುಂಬುತ್ತೇನೆ. ತೊರೆದು ಹೋದವರಿಗಾಗಿ ದುಃಖಿಸುವುದರಲ್ಲಿ ಅರ್ಥವಿಲ್ಲ. ಅವರು ಆಕಾಶದಲ್ಲೇ ಇರಲಿ..ನಾವು ಭೂಮಿಯಲ್ಲೇ ಇರೋಣ..ಅಲ್ಲವೇ ನನ್ನ ಪ್ರಿಯ ಸಖಿ...?


ಇಷ್ಟನ್ನು ಹೇಳಿದವಳೇ...ತನ್ನ ಹವಳದ ಬೆರಳುಗಳಿಂದ ನನ್ನ ಗಲ್ಲವನ್ನು ಹಿಡಿದೆತ್ತಿ ನನ್ನ ಕಣ್ಣುಗಳನ್ನೆ ದಿಟ್ಟಿಸುತ್ತಾ..’ನನ್ನ ಹಾಗೆ ನೀನಾಗಬೇಡ.. ದಿನಾ ನನ್ನನ್ನು ಬೊಗಸೆಯಲ್ಲಿ ತುಂಬಿಕೊಂಡು ನಿನ್ನ ಮನೆಯೊಳಗೆ ಬರಮಾಡಿಕೊಳ್ಳುತ್ತಿಯಲ್ಲಾ... ಆಗ ನಿನ್ನ ನಿಟ್ಟುಸಿರ ಬೇಗೆಗೆ ನಾನು ಬಾಡಿ ಹೋಗುತ್ತೇನೆ. ಅದಕ್ಕೆ ಕಾರಣ ನನಗೆ ಗೊತ್ತು..ನನ್ನವನು ನನಗೆ ಕೈಗೆಟುಕದಷ್ಟು ದೂರದಲ್ಲಿದ್ದ. ಆದರೆ ನಿನಗಾಗಿ ಹಂಬಲಿಸುವವನು ಇಲ್ಲೇ ಹತ್ತಿರದಲ್ಲಿದ್ದಾನೆ..ನಾನು ನಿನ್ನ ಅಂತರಂಗದ ಗೆಳತಿಯಲ್ಲವೇ? ನನಗಾಗಿಯಾದರೂ
ಇವತ್ತಿನ ಒಂದು ದಿನದ ಮಟ್ಟಿಗೆ ನೀ ಅಭಿಸಾರಿಕೆಯಾಗು. ನಿನ್ನ ಜೊತೆಗೆ ನಾನಿರುತ್ತೇನೆ..ಅವನೆದುರಲ್ಲಿ ನೀನೇನೂ ಮಾತೇ ಆಡಬೇಕಿಲ್ಲ. ಅವನ ಕೈಗೆ ನನ್ನನ್ನು ಹಸ್ತಾಂತರಿಸು..ಮತ್ತೆ ಬರುವುದೆಲ್ಲಾ ಮೇಘಸಂದೇಶವೇ...ನೀನು ಕಾಣುವುದೆಲ್ಲಾ ಯಕ್ಷ-ಕಿನ್ನರ ಲೋಕವೇ...!’

ಹಾಗೇ ಹೇಳುತ್ತಲೇ ಆ ದ್ವನಿ ಬಣ್ಣ-ಬಣ್ಣಗಳ ಸುಂದರವಾದ ಬೆಳಕಿನ ರೇಖೆಗಳಾಗಿ, ನೋಡ ನೋಡುತ್ತಲೇ ಬಣ್ಣದ ಗೋಲವಾಗಿ. ನನ್ನನ್ನು ನುಂಗಲೋ ಎಂಬಂತೆ ನನ್ನತ್ತ ಶರವೇಗದಲ್ಲಿ ಬರತೊಡಗಿತು. ನಾನು ಜೋರಾಗಿ ಕಿರುಚಿ, ದಡಕ್ಕನೆ ಎದ್ದು ಕುಳಿತೆ. ಕೆನ್ನೆ ಮುಟ್ಟಿ ನೋಡಿಕೊಂಡೆ. ಒದ್ದೆಯಾಗಿತ್ತು. ಅಚ್ಚರಿಗೊಳ್ಳುತ್ತಾ ಪುಸ್ತಕದತ್ತ ನೋಡಿದೆ. ಪಾರಿಜಾತದ ಹೂಗಳು ನಗುತ್ತಿದ್ದವು. ಎದುರಿಗಿದ್ದ ಕನ್ನಡಿಯತ್ತ ದಿಟ್ಟಿ ಹಾಯಿಸಿದೆ.. ಪಾರಿಜಾತದ ಕಂಪಿನಲ್ಲಿ ನನ್ನ ಬಿಂಬ ಮಸುಕು ಮಸುಕಾಗಿ ಕಂಡಿತು.

[ 'ಪದ ಪಾರಿಜಾತ’ದಲ್ಲಿ ಪ್ರಕಟವಾದ ಕಥೆ ]
.