Tuesday, November 23, 2010

ರಾಜಕಾರಣಿಗಳೂ, ಪತ್ರಕರ್ತರೂ ಮತ್ತು ಮಠಾಧೀಶರು.

ಇವತ್ತು ಕೆಂಡಸಂಪಿಗೆ ವೆಬ್ ಸೈಟ್ ನೋಡುತ್ತಲಿದ್ದೆ. ಬಸವರಾಜು ಅವರು ’ರಾಜಕಾರಣಿಗಳೂ, ಪತ್ರಕರ್ತರೂ’ ಎಂಬ ಲೇಖನ ಬರೆದಿದ್ದರು. ಅದನ್ನು ಓದಿ ಮುಗಿಸುತ್ತಿರುವಾಗಲೇ ಸುದ್ದಿವಾಹಿನಿಗಳಲ್ಲಿ ತುಮಕೂರಿನ ಸಿದ್ದಗಂಗಾಸ್ವಾಮಿಗಳ ಬೈಟ್ ಪ್ರಸಾರವಾಗುತ್ತಿತ್ತು. ಅವರು ಹೇಳುತ್ತಿದ್ದರು; ಯಡಿಯೂರಪ್ಪ ಶ್ರಮಜೀವಿ. ಗಾಮೀಣ ಭಾಗದಲ್ಲಿ ಅವರು ಜನಪ್ರಿಯರಾಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ..... ಹೀಗೆ ಅವರ ಮಾತು ಮುಂದುವರಿದಿತ್ತು.

ಹಾಗೆ ನೋಡಿದರೆ ಇವತ್ತಿನ ದಿನವೇ ಲಿಂಗಾಯಿತ ಸ್ವಾಮಿಗಳ ಪ್ರತಿಭಟನಾ ದಿನ. ಎಲ್ಲಾ ಲಿಂಗಾಯಿತ ಸ್ವಾಮಿಗಳು, ಅರ್ಥಾತ್ ಜಗದ್ಗುರುಗಳು ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಬೀದಿಗಿಳಿದ ದಿನ. ಹಾಗೆ ಅವರು ಬೀದಿಗಿಳಿದದ್ದು ನ್ಯಾಯಯುತವಾದುದೇ!. ಮಠ ಮಾನ್ಯಗಳಿಗೆ ರಾಜ್ಯದ ಬೊಕ್ಕಸದಿಂದ ಕೋಟಿ ಕೋಟಿ ಹಣವನ್ನು ಬಾಚಿ ಕೊಟ್ಟ ಪ್ರಭುಗಳ ಋಣ ಸಂದಾಯ ಮಾಡಬೇಡವೇ?

ಸಿದ್ದಗಂಗಾ ಸ್ವಾಮಿಗಳನ್ನು ಇಡೀ ನಾಡು ಗೌರವಿಸುತ್ತದೆ. ಅವರು ಮಠವನ್ನು ಕಟ್ಟಿಕೊಂಡರೂ ಯಾವುದೇ ಒಂದು ಜಾತಿಗೆ ಸೀಮಿತವಾಗಿ ನಡೆದುಕೊಂಡವರಲ್ಲ. ಆದರೆ ಶತಾಯುಷಿ ಅನ್ನಿಸಿಕೊಂಡ ಮೇಲೆ ಅವರು ಬದಲಾದಂತೆ ಕಾಣುತ್ತಿದೆ. ಅವರು ಲಿಂಗಾಯಿತ ಸಮುದಾಯಕ್ಕೆ ಮಾತ್ರ ಸೇರಿದ ಸ್ವಾಮೀಜಿಯೇನೋ ಎಂದು ಭಾಸವಾಗುತ್ತಿದೆ.

ಎರಡು ವರ್ಷಗಳ ಹಿಂದಿನ ಘಟನೆ;
ನಾಡ ಹಬ್ಬವಾದ ಮೈಸೂರು ದಸರಾದ ಉದ್ಘಾಟನೆಗಾಗಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾಸ್ವಾಮಿಗಳನ್ನು ಗೌರವದಿಂದ ಕರೆದಿದ್ದರು. ಅವರು ಕೂಡಾ ಸಂತೋಷದಿಂದ ಒಪ್ಪಿಕೊಂಡಿದ್ದರು.
ಆದರೆ ಅವರು ಉದ್ಘಾಟನೆ ಮಾಡಲಿಲ್ಲ. ಕಾರಣ ಕುಮಾರಸ್ವಾಮಿ ವಚನ ಭ್ರಷ್ಟರಾದದ್ದು ಸ್ವಾಮಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಗೆ ಕೊಟ್ಟ ಮಾತಿನಂತೆ ೨೦ ತಿಂಗಳ ಆಢಳಿತದ ನಂತರ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟುಕೊಡಬೇಕಾಗಿತ್ತು. ಯಡಿಯೂರಪ್ಪ ಅದನ್ನು ಅಲಂಕರಿಸಬೇಕಾಗಿತ್ತು. ಆದರೆ ಹಾಗಾಗಲಿಲ್ಲ.
ಈಗ ಕರ್ನಾಟಕದ ಬಹುತೇಕ ಎಲ್ಲಾ ವೀರಶೈವ ಮಠಾದೀಶರು ಬಹಿರಂಗವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ನಿಂತಿದ್ದಾರೆ. ಕೊಳದ ಮಠದ ಸ್ವಾಮೀಜಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಧಾನ ಪರಿಷತ್ತಿನಲ್ಲಿ ಮಠಾದೀಶರಿಗೂ ಪ್ರಾತಿನಿಧ್ಯವಿರಬೇಕು ಎಂದು ಆಗ್ರಹಿಸಿದರು.

ಸ್ವಜನಪಕ್ಷಪಾತವೆಂಬುದು ಕೇವಲ ರಾಜಕಾರಣಿಗಳಿಗೆ ಸ್ವತ್ತಲ್ಲ!

ಮಠಾದೀಶರನ್ನು ಪಕ್ಕದಲ್ಲಿಟ್ಟುಕೊಂಡು, ಕಂಡ ಕಂಡ ದೇವಸ್ಥಾನಗಳಿಗೆ ಬೇಟಿಕೊಡುತ್ತಾ, ಹೋಮ ಹವನಗಳಲ್ಲಿ ಭಾಗವಹಿಸುತ್ತಾ ಕುರ್ಚಿಯನ್ನು ಉಳಿಸುಕೊಳ್ಳುವುದನ್ನೇ ಕಾಯಕವನ್ನಾಗಿಸಿಕೊಂಡ ಮುಖ್ಯಮಂತ್ರಿಗಳಿಗೆ ದೂರದರ್ಶಿತ್ವವಿಲ್ಲದ ಜನಪ್ರಿಯ ಕಾರ್ಯಕ್ರಮಗಳೇ ಅಭಿವೃದ್ಧಿ ಯೋಜನೆಗಳಾಗಿ ಭಾಸವಾಗುತ್ತಿದೆ. ಹಾಗಾಗಿಯೇ ಅವರಿಗೆ ಕಳೆದ ವರ್ಷ ನೆರೆಹಾವಳಿಯಿಂದ ತತ್ತರಿಸಿದ ಉತ್ತರ ಕರ್ನಾಟಕದ ಜನತೆಗೆ ಸೂರು ಕಟ್ಟಿಕೊಡುವುದಕ್ಕಿಂತ ಮುಖ್ಯವಾಗಿ ಭಾಗ್ಯಲಕ್ಷ್ಮಿ ಕಾರ್ಯಕ್ರಮದಲ್ಲಿ ಸೀರೆ ಹಂಚುವುದೇ ಮುಖ್ಯವಾಗುತ್ತದೆ.
ತಮ್ಮ ಜನಪ್ರಿಯ ಕಾರ್ಯಕ್ರಮಗಳ ಯಥೇಚ್ಛ ಜಾಹೀರಾತುಗಳನ್ನು ಮಾಧ್ಯಮಗಳಿಗೆ ನೀಡಿ ಅವರನ್ನು ಸಂತುಷ್ಟಗೊಳಿಸಿದರು. ಆದರೂ ಮಾಧ್ಯಮಗಳು ಅವರ ವಿರುದ್ಧ ತಿರುಗಿಬಿದ್ದವು. ಯಡಿಯೂರಪ್ಪ ಅವರಿಗೆ ಸಹಜವಾಗಿ ಸಿಟ್ಟು ಬಂದಿದೆ. ಪತ್ರಕರ್ತರಿಗೆ ಸ್ವಲ್ಪವಾದರೂ ಕೃತಜ್ನತೆ ಬೇಡವೇ?
ಯಡಿಯೂರಪ್ಪನವರಿಗೆ ತಾನು ಈ ಸ್ಥಿತಿಯಲ್ಲಿ, ಬೆತ್ತಲಾಗಿ ನಿಲ್ಲಲು ದೇವೆಗೌಡ ಮತ್ತು ಅವರ ಮಗ ಕುಮಾರಸ್ವಾಮಿಯೇ ಕಾರಣ ಎಂದು ನಂಬಿಕೊಂಡಿದ್ದಾರೆ. ಹಾಗಾಗಿ ಆ ’ಅಪ್ಪ ಮಕ್ಕಳನ್ನು ಬಿಡುವುದಿಲ್ಲ’ ಎಂದು ಹಲ್ಲು ಮಸೆಯುತ್ತಿದ್ದಾರೆ. ಚಿಕ್ಕ ಪುಟ್ಟ ವಿಷಯಗಳನ್ನೆಲ್ಲಾ ವಿಜೃಂಬಿಸಿ ತನ್ನನ್ನು ಖಳನಾಯಕನನ್ನಾಗಿ ಬಿಂಬಿಸಿದ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಸಧ್ಯಕ್ಕೆ ಇವೆರಡೂ ಅವರ ವೈರಿ ಸ್ಥಾನದಲ್ಲಿದೆ.
ಅವರ ಸಿಟ್ಟು ಸಹಜವಾದುದೇ. ಕುಮಾರಸ್ವಾಮಿ ಮಾಡಲಾರದ್ದೇನನ್ನೂ ಇವರು ಮಾಡಿಲ್ಲ. ಇವರು ಅಧಿಕಾರಕ್ಕೆ ಹೊಸಬರು. ಎನೋ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಕುಮಾರಸ್ವಾಮಿ ನಾಜೂಕಯ್ಯ. ಅವರ ಮೈಗೆ ಅವರಪ್ಪ ಚೆನ್ನಾಗಿ ಎಣ್ಣೆಹಚ್ಚಿದ್ದಾರೆ!
ಇನ್ನು ಮಾಧ್ಯಮದವರಿಗೆ ಎನು ಬೇಕೋ ಅದನ್ನು ಹೇಗೆ ಕೊಡಬೇಕೆಂಬುದು ಅಧಿಕಾರಸ್ಥ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ. ಹಿಂದೆಲ್ಲಾ ದೀಪಾವಳಿ ಬೋನಸ್ಸು ಕೊಡುತ್ತಿದ್ದರು. ಅದು ತಿಂಗಳ ಪೇಮೆಂಟ್ ಗೆ ಇಳಿದು ಈಗ ದಿನಗೂಲಿಗೆ ಇಳಿದಿದೆಯಂತೆ. ಯವುದಕ್ಕೂ ಇರಲಿ ಎಂದುಕೊಂಡು ರಾಜಕಾರಣಿಗಳೇ ಈಗ ಸುದ್ದಿಚಾನಲ್ ಗಳ ಒಡೆಯರಾಗುತ್ತಿದ್ದಾರೆ. ಪತ್ರಕರ್ತರ ಹಿಂಡನ್ನೇ ಖರೀದಿ ಮಾಡುವುದು ಹೆಚ್ಚು ಲಾಭದಾಯಕ.

ಎರಡು ದಿನಗಳ ಹಿಂದಿನ ಘಟನೆಯೊಂದರ ಉದಾಹರಣೆ ಕೊಡುವುದಾರೆ, ಮುಖ್ಯಮಂತ್ರಿಗಳ ಆಪ್ತವಲಯದಿಂದ ಸಿಡಿಯೊಂದನ್ನು ಕನ್ನಡದ ಮೂರು ಪ್ರಮುಖ ಸುದ್ದಿವಾಹಿನಿಗಳಿಗೆ ಕಳುಹಿಸಿಕೊಡಲಾಗಿತ್ತು. ಜನಾರ್ಧನ ರೆಡ್ಡಿ ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತರ ರೂಪಿಸುತ್ತಿರುವ ಚಿತ್ರಣ ಅದರಲ್ಲಿತ್ತು. ಒಂದು ಚಾನಲ್ ಅದನ್ನು ತಡವಾಗಿ ಪ್ರಸಾರ ಮಾಡಿತು. ಇನ್ನೆರಡು ಚಾನಲ್ ಅದನ್ನು ಏನು ಮಾಡಿತೋ ಗೊತ್ತಾಗಲೇ ಇಲ್ಲ!

ನೈತಿಕತೆಯ ವಿಚಾರಕ್ಕೆ ಬಂದರೆ ಈಗ ಮಠಾದೀಶರು, ರಾಜಕಾರಣಿಗಳು, ಪತ್ರಕರ್ತರು ಒಂದೇ ಸಾಲಿನಲ್ಲಿ ನಿಲ್ಲುತ್ತಾರೆ.
ಆದರೂ ಕಳವಳಪಡಬೇಕಾಗಿಲ್ಲ. ನಮ್ಮದು ವೈವಿಧ್ಯಮಯ ದೇಶ. ಪ್ರತಿವ್ಯವಸ್ಥೆಗೂ ಪರ್ಯಾಯ ವ್ಯವಸ್ಥೆಯೊಂದು ಇದ್ದೇ ಇರುತ್ತದೆ. ಶಿಷ್ಟ ಸಾಹಿತ್ಯದಷ್ಟೆ ಪ್ರಭಲವಾದ ಜನಪದ ಸಾಹಿತ್ಯ ಇಲ್ಲಿ ಅನಾಚೂನವಾಗಿ ಹರಿದು ಬಂದಿದೆ. ಪತ್ರಿಕೆ, ಟಿವಿಗಳು ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದರೂ ಚೌಕಟ್ಟುಗಳಿಲ್ಲದ ಬ್ಲಾಗ್, ಪೇಸ್ ಬುಕ್, ಟ್ವೀಟ್ಟರ್ ನಂಥ ಸಾಮಾಜಿಕ ಜಾಲ ತಾಣಗಳಿವೆ. ಕೈಯಲ್ಲಿ ಜಂಗಮವಾಣಿಯಿದೆ. ಸುದ್ದಿಯಾಚೆಗಿನ ಸುದ್ದಿಯನ್ನು ತಿಳಿದುಕೊಳ್ಳುವ ಕುತೂಹಲ ನಮಗಿರಬೇಕು. ಸಮಾಜಮುಖಿ ಚಿಂತನೆ ಇರಬೇಕು ಅಷ್ಟೆ.

Sunday, November 14, 2010

’ಪುಟಾಣಿ ಪಾರ್ಟಿ’- ಕನ್ನಡ ವಾಹಿನಿಗಳ ನಿರ್ಲಕ್ಷ್ಯ


ಇಂದು ಮಕ್ಕಳ ದಿನಾಚರಣೆ. ನಾನೊಂದು ಮಕ್ಕಳ ಮಕ್ಕಳ ಸಿನಿಮಾ ನೋಡಿದೆ; ಅದು ಪಿ.ಎನ್.ರಾಮಚಂದ್ರ ಅವರ ’ಪುಟಾಣಿ ಪಾರ್ಟಿ’. ಮಕ್ಕಳ ಸಿನಿಮಾ ಅಂದರೆ ಹೀಗೆಯೇ ಇರಬೇಕು ಎಂಬ ಸಿದ್ಧ ಸಿದ್ಧಾಂತಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿ ತನ್ನದೇ ದಾರಿಯನ್ನು ಕಂಡುಕೊಂಡ ಚಿತ್ರ ಇದು.

ಮಕ್ಕಳ ಚಿತ್ರ ಅಂದ ಕೂಡಲೇ ನಮ್ಮ ನೆನಪಿಗೆ ಬರುವುದು; ಪುಟಾಣಿ ಏಜಂಟ್ ೧.೨.೩, ಸಿಂಹದ ಮರಿ ಸೈನ್ಯ, ಸೂಪರ್ ನೋವಾ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಬಂದ ಬೆಟ್ಟದ ಹೂವು, ಚಿನ್ನಾರಿ ಮುತ್ತ ಇತ್ಯಾದಿ... ಆದರೆ ಇವೆಲ್ಲ ಸ್ವಲ್ಪ ಮಟ್ಟಿಗೆ ದೊಡ್ಡವರ ದೃಷ್ಟಿಕೋನದಿಂದ ನೋಡಿದ ಮಕ್ಕಳ ಚಿತ್ರಗಳು.ಆದರೆ ಪುಟಾಣಿ ಪಾರ್ಟಿ ಹಾಗಿಲ್ಲ.

ಗ್ರಾಮ ಸ್ವರಾಜ್ಯದ ಕನಸು ಕಂಡವರು ಗಾಂಧೀಜಿ. ಅದೇ ಕಲ್ಪನೆಯಲ್ಲಿ ಮೂಡಿದ್ದು ಪಂಚಾಯ್ತು ರಾಜ್ ಮಸೂದೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಅದನ್ನು ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟದಲ್ಲಿ ಜಾರಿಗೆ ತಂದಿದ್ದರು. ಪುಟಾಣಿ ಪಾರ್ಟಿಯಲ್ಲಿ ಇದೇ ಅಧಿಕಾರ ವಿಕೇಂದ್ರಿಕರಣ ತತ್ವದ ಎಳೆಯಿದೆ.
ಗ್ರಾಮ ಪಂಚಾಯ್ತಿಯಂಥ ಸ್ಥಳಿಯ ಆಡಳಿತದಲ್ಲಿ ಮಕ್ಕಳ ಸಮಿತಿಯೊಂದು- ’ಪುಟಾಣಿ ಪಾರ್ಟಿ’-ಮಹತ್ವದ ಪಾತ್ರ ವಹಿಸುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗುತ್ತದೆ. ಸಾಮಾಜಿಕ ಕಳಕಳಿಯುಳ್ಳ ಉಪಾಧ್ಯಾಯಿನಿಯೊಬ್ಬರು ಮಕ್ಕಳ ಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುತ್ತಾರೆ.
ಸಿನಿಮಾದಲ್ಲಿ ನಾಟಕೀಯತೆ ಇಲ್ಲ. ಸೇಟ್ ಮೆಂಟ್ ಗಳಿಲ್ಲ. ಸಿನಿಮಾದ ಆಶಯ ಸಿನಿಮಾದ ಭಾಗವಾಗಿ ಬರುತ್ತದೆ. ಸಂಯಮದ ನಿರೂಪಣೆಯಿದೆ. ಧಾರವಾಡದ ಆಡುಮಾತಿನ ಸೊಗಡಿದೆ. ಅಲ್ಲಿನ ಸ್ಥಳೀಯ ಮಕ್ಕಳ ಸಹಜಾಭಿನಯವಿದೆ. ಎಲ್ಲಕ್ಕಿಂತಲೂ ಮುಖ್ಯವಾಗುವುದು ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಾಗ ಮಕ್ಕಳ ಮೂಲಕ ಆಶಾವಾದವನ್ನು ಬಿತ್ತುವುದಿದೆಯಲ್ಲಾ ಅದು ನಿಜಕ್ಕೂ ಗ್ರೇಟ್.

ಕನ್ನಡದ ಪ್ರತಿಭೆಯೊಂದು ಹೊಸ ಪ್ರಯತ್ನಗಳಿಗೆ ಮುಂದಾದಾಗ ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕು. ಅದರಲ್ಲೂ ತಾಯ್ನಾಡಿನಿಂದ ದೂರವಾಗಿ ಬದುಕುತ್ತಾ ಕನ್ನಡದ ಕೈಂಕರ್ಯದಲ್ಲಿ ತೊಡಗಿಕೊಂಡಿರುವವರ ಬಗ್ಗೆ ನಮಗೆ ಪ್ರೀತಿ, ಗೌರವಗಳಿರಬೇಕು.

ಪುಟಾಣಿ ಪಾರ್ಟಿ ನಿರ್ದೇಶಕರಾದ ಪಿ.ಎನ್.ರಾಮಚಂದ್ರ ಅವರು ಉಡುಪಿಯವರಾದರೂ ಬದುಕು ಕಟ್ಟಿಕೊಂಡಿರುವುದು ದೂರದ ಮುಂಬಯಿಯಲ್ಲಿ. ಪುಣೆಯ ಪಿಲಂ ಇನ್ ಸ್ಟಿಟ್ಯೂಟ್ ಪದವಿಧರರು. ಇವರ ತುಳು ಚಲನಚಿತ್ರ ’ಸುದ್ದ’ ೨೦೦೭ರಲ್ಲಿ ನವದೆಹಲಿಯಲ್ಲಿ ನಡೆದ ಒಷಿಯನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಸುದ್ದ ಎಂದರೆ ಶುದ್ಧಿಕಾರ್ಯ; ಪಾವಿತ್ರ್ಯತೆಯನ್ನು ಪುನರ್ ಸ್ಥಾಪಿಸುವುದು.ಇದು ತುಳುನಾಡಿನಲ್ಲಿ ಆಚರಿಸುವ ಒಂದು ಧಾರ್ಮಿಕ ವಿಧಿ.
ಪುಟಾಣಿ ಪಾರ್ಟಿ ರಾಮಚಂದ್ರರ ಎರಡನೆ ಚಿತ್ರ. ಕಡಿಮೆ ವೆಚ್ಚದಲ್ಲಿ ತಯಾರಾದ ಈಚಿತ್ರ ಉತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಪಡೆಯಿತು. ಕೈರೋದಲ್ಲಿ ನಡೆದ ೨೦ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇಂಥ ಚಿತ್ರವನ್ನು ಮಕ್ಕಳದಿನಾಚರಣೆಯಂದು ತಮ್ಮ ತಾಯ್ನಾಡಿನ ಬಂಧುಗಳು ನೋಡಿ ಆನಂಧಿಸಲಿ; ಪ್ರೋತ್ಸಾಹಿಸಲಿ ಎಂಬ ಉದ್ದೇಶದಿಂದ ಅವರು ಕನ್ನಡದ ಟಿವಿ ಚಾನಲ್ ಗಳನ್ನು ಸಂಪರ್ಕಿಸಿದ್ದರು. ಮಾಧ್ಯಮದ ಗೆಳೆಯರ ನೆರವನ್ನು ಕೋರಿದ್ದರು ಯಾವುದೂ ಫಲ ನೀಡಲಿಲ್ಲ.

ರಾಮಚಂದ್ರರಿಗೆ ಗೊತ್ತಿಲ್ಲದಿರಬಹುದು ಸುದ್ದಿ ಚಾನಲ್ ಗಳು ರಾಜಕಾರಣಿಗಳ ಮಂಗಾಟವನ್ನು ಕವರ್ ಮಾಡುವುದರಲ್ಲಿ ಬಿಜಿ. ಮನೋರಂಜನಾ ಚಾನಲ್ ಗಳು ಟಿಅರ್ ಪಿ ಮೇಲಾಟದಲ್ಲಿ ರಿಯಾಲಿಟಿ ಶೋಗಳ ಹಿಂದೆ ಬಿದ್ದಿವೆ. ಸಂಬಂಧಪಟ್ಟವರು ಮನಸ್ಸು ಮಾಡಿದ್ದರೆ ಒಂದೂಕಾಲು ಘಂಟೆಯ ಈ ಚಿತ್ರವನ್ನು ಯಾರು ಬೇಕಾದರೂ ಪ್ರಸಾರ ಮಾಡಬಹುದಿತ್ತು. ಥಿಯೇಟರ್ ಗಳಂತೂ ಪ್ರಯೋಗಾತ್ಮ ಚಿತ್ರಗಳಿಂದ ಮಾರು ದೂರ.

ಇಂದು ಪುಟಾಣಿ ಪಾರ್ಟಿ ಲೋಕಸಭಾ ಚಾನಲ್ ನಲ್ಲಿ ಪ್ರಸಾರದ ಭಾಗ್ಯ ಕಂಡಿತು.ಈ ಹಿಂದೆ ಸಾಂಗತ್ಯದ ಗೆಳೆಯರ ಪ್ರಯತ್ನದಿಂದ ಕೆಲವು ಜನ ಪುಟಾಣಿ ಪಾರ್ಟಿಯನ್ನು ನೋಡಿದ್ದರು. ಎಲ್ಲಾ ಬಾಗಿಲುಗಳು ಮುಚ್ಚಿದಾಗಲೂ ಯಾವುದೋ ಒಂದು ಬಾಗಿಲು ನಮಗಾಗಿ ತೆರೆದಿರುತ್ತದೆ.ಅದು ಪುಟಾಣಿ ಪಾರ್ಟಿಯ ಆಶಯವೂ ಹೌದು.

Thursday, November 11, 2010

ಜಯಮಾಲಳಿಗೇಕೆ ಅಯ್ಯಪ್ಪನ ಮೋಹ?
ನಾಲ್ಕು ವರ್ಷಗಳ ಹಿಂದೆ ಅಂದರೆ ೨೦೦೬ರ ಆಗಸ್ಟ್೫ರಂದು ನಟಿ ಜಯಮಾಲಾ ಅವರು ತಾನು ತನ್ನ ೨೭ನೇ ವಯಸ್ಸಿನಲ್ಲಿ ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದು ಆತನ ಪಾದಗಳನ್ನು ಸ್ಪರ್ಶಿಸಿದ್ದೇನೆ ಎಂದು ಮಾಧ್ಯಮಗಳೆದುರು ಹೇಳಿಕೊಂಡರು. ಅನಾರೋಗ್ಯಪೀಡಿತರಾದ ತಮ್ಮ ಪತಿಯ ಶ್ರೆಯೋಭಿಲಾಷೆಗಾಗಿ ಅವರು ಈ ಯಾತ್ರೆ ಕೈಗೊಂಡಿದ್ದರು.

ಅವರ ಹೇಳಿಕೆ ದೇಶಾದಾದ್ಯಂತ ಸಂಚಲನವನ್ನುಂಟು ಮಾಡಿತು. ಧಾರ್ಮಿಕ ಮನೋಭಾವದ ಜನರು ಛೇ ಆಕೆ ಹಾಗೆ ಮಾಡಬಾರದಿತ್ತು ಎಂದು ನೊಂದುಕೊಂಡರು.
ಜಯಮಾಲಾ ಹೇಳಿಕೆ ನೀಡಿದ ಬೆನ್ನಲ್ಲೆ ಇನ್ನೊಬ್ಬ ನಟಿ ಗಿರಿಜಾ ಲೋಕೆಶ್ ಕೂಡಾ ತಾವು ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡರು.
ಕಾಕತಾಳಿಯವೆಂದರೆ ಇಬ್ಬರೂ ಒಂದೇ ವರ್ಷ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಅದು ೧೯೮೭ರಲ್ಲಿ.

ಅವತ್ತಿನ ಜಯಮಾಲರ ಹೇಳಿಕೆ ಈಗ ನಾಲ್ಕು ವರ್ಷಗಳ ನಂತರ ಮತ್ತೆ ಮರುಜೀವ ಪಡೆದುಕೊಂಡಿದೆ. ಆಕೆಯ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕೇರಳ ಪೋಲಿಸರು ಮುಂದಾಗಿದ್ದಾರೆ. ಭಾರತೀಯ ದಂಡ ಸಂಹಿತೆಯ ೨೯೫ ಎ [ಇದು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದನ್ನು ವಿವರಿಸುತ್ತದೆ.] ಕಲಮಿನಡಿ ದೋಷರೋಪಣಾ ಪಟ್ಟಿ ಸಲ್ಲಿಸಲು ನಿರ್ಧರಿಸಲಾಗಿದೆ.

ಜಯಮಾಲಾಗೆ ಇದೆಲ್ಲಾ ಬೇಕಿತ್ತೇ?

ಜಯಮಾಲಾ ತುಳುನಾಡಿನ ಹೆಣ್ಣುಮಗಳು. ಅದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಒಪ್ಪಿಕೊಂಡಿರುವ ನಾಡು. ಇಂದಿಗೂ ಅಲ್ಲಿನ ಮಹಿಳೆಯರು ಸ್ವಾಭಿಮಾನಿಗಳೂ, ಛಲವಂತರೂ, ಧೈರ್ಯಶಾಲಿಗಳೂ, ಆಧುನಿಕ ಮನೋಧರ್ಮದವರೂ ಆಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ಸ್ತ್ರೀವಾದಿಗಳು. ಆದರೂ ಧಾರ್ಮಿಕ ವಿಧಿವಿಧಾನಗಳಲ್ಲಿ, ಆಚರಣೆಯಲ್ಲಿ ಅವರನ್ನು ಅಲ್ಲಿನ ಪುರುಷ ಸಮಾಜ ತಮ್ಮ ಸರಿಸಮಾನರಂತೆ ಕಾಣುವುದಿಲ್ಲ.

ಕೇರಳದ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣಕನ್ನಡವನ್ನು ತುಳುನಾಡೆಂದು ಕರೆಯಲಾಗುತ್ತದೆ. ಇಲ್ಲಿ ದೇವರಿಗಿಂತಲೂ ದೈವಗಳು ಹೆಚ್ಚು ಪ್ರಭಾವಶಾಲಿ. ದೈವಗಳೆಂದರೆ ಭೂತಗಳು. ಹಿಂದೆ ಇದೇ ನೆಲದಲ್ಲಿ ಬದುಕಿ ಬಾಳಿದ್ದ ವ್ಯಕ್ತಿಗಳು ಸಹವ್ಯಕ್ತಿಗಳ ಕುತಂತ್ರದಿಂದಾಗಿ ದುರಂತಮರಣಕ್ಕಿಡಾಗಿ ಕಾಲಾಂತರದಲ್ಲಿ ದೈವಗಳಾಗಿ ಜನ- ಜಾನುವಾರುಗಳನ್ನು ರಕ್ಷಿಸುವ ರಕ್ಷಕ ದೈವಗಳಾಗಿ ಪೂಜನೀಯರಾಗುತ್ತಾರೆ.

ಇಂತಹ ದೈವಗಳಿರುವ ಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ.ನಮಗೂ ಅಲ್ಲಿಗೆ ಪ್ರವೇಶ ಬೇಕು ಎಂದು ತುಳುನಾಡಿನ ಯಾವ ಮಹಿಳೆಯೂ ಧ್ವನಿಯೆತ್ತಿದ ಉದಾಹರಣೆ ನನಗೆ ಗೊತ್ತಿಲ್ಲ.


ಇಂದಿಗೂ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಪಂಜುರ್ಲಿಯ ಬೆಟ್ಟಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ. ತೀರ ಇತ್ತೀಚಿನವರೆಗೂ ಕುಕ್ಕೆಸುಬ್ರಹ್ಮಣ್ಯದಲ್ಲಿರುವ ಕುಮಾರಪರ್ವತವನ್ನು ಮಹಿಳೆಯರು ಏರುವಂತಿರಲಿಲ್ಲ. ಈಗ ಮಹಿಳೆಯರು ಅಲ್ಲಿಗೆ ಟ್ರೆಕ್ಕಿಂಗ್ ಬರುತ್ತಾರೆ.

ಇಂತಹ ತುಳುನಾಡಿನ ಹೆಣ್ಣುಮಗಳು ಜಯಮಾಲಾ, ಹರಿಹರರ ಸಂಯೋಗದಿಂದ ಜನಿಸಿದ ಸ್ತೀ ದ್ವೇಷಿಯಾದ ಅಯ್ಯಪ್ಪನ ಪಾದವನ್ನು ಟಚ್ ಮಾಡಲು ಯಾಕಾದರೂ ಹೋದರೋ! ಹಾಗೊಂದು ವೇಳೆ ಪ್ರಾರ್ಥಿಸಲೇಬೇಕೆಂದಿದ್ದರೆ ಕರಾವಳಿಗೇ ವಿಶಿಷ್ಟ ದೇವರಾದ ಅವನಪ್ಪ ಮಹಾಲಿಂಗೇಶ್ವರನಿರಲಿಲ್ಲವೇ? ಸರ್ವಶಕ್ತೆಯಾದ ಭಗವತಿಯಿರಲಿಲ್ಲವೇ?

ದೈವ ನಂಬಿಕೆ ಎನ್ನುವುದು ತೀರಾ ವೈಯಕ್ತಿಕವಾದುದು. ಅನ್ಯಥಾ ಶರಣಂ ನಾಸ್ತಿ’ ಎಂದು ಮೊರೆಯಿಟ್ಟದ್ದನ್ನು ಜಗಜ್ಜಾಹೀರುಗೊಳಿಸಬಾರದು.

ಕಳೆದ ವಾರ ನಮ್ಮ ರಿಯಾಲಿಟಿ ಶೋ ಒಂದರ ಶೂಟಿಂಗ್ ಗಾಗಿ ಉಳ್ಳಾಲ್ತಿ ಭೂತದ ಸ್ಥಾನಕ್ಕೆ ನಾನು ಹೋಗಿದ್ದೆ. ನಮ್ಮ ಕ್ಯಾಮರಮ್ಯಾನ್ ಗೆ ನಮಗೆ ಎಂತಹ ಶಾಟ್ಸ್ ಬೇಕೆಂದು ಸೂಚನೆ ಕೊಟ್ಟು ನಾನು ದೂರದಲ್ಲಿ ನಿಂತಿದ್ದೆ. ಆದರೂ ಉತ್ಸಾಹ, ಕುತೂಹಲ. ’ನಾನಲ್ಲಿಗೆ ಬರಬಹುದೇ’ ಎಂದು ಕೇಳಿದೆ. ’ನಮ್ಮ ಪೂಜಾರಿಯವರು ಮಹಿಳೆಯರೂ ಇಲ್ಲಿಗೆ ಬರಬಹುದು ಎಂದಿದ್ದಾರೆ’ ಎಂದರು.ನಾನು ದೈರ್ಯದಿಂದ ಮುಂದಡಿಯಿಟ್ಟೆ. ಆದರೆ ಶೂಟಿಂಗ್ ಮುಗಿಸಿ ಬರುತ್ತಿರುವಾಗ ಮಧ್ಯರಾತ್ರಿ, ಕಾಡಿನ ಮದ್ಯೆ ನಮ್ಮ ಕಾರು ಕೆಟ್ಟು ನಿಂತಿತು. ಹೇಗೋ ವಿಷಯ ತಿಳಿದ ಉಳ್ಳಾಲ್ತಿಯ ಪೂಜಾರಿ ಪೋನ್ ಮಾಡಿ ’ನಮ್ಮ ದೈವಕ್ಕೆ ನಿಮ್ಮಿಂದ ಎನೋ ಸೇವೆ ಆಗಬೇಕಾಗಿದೆ.ಒಂದು ಹರಕೆ ಹೇಳಿಕೊಳ್ಳಿ’ಎಂದರು. ಆದರೂ ಎರಡು ದಿನ ನಾವು ಅಲ್ಲಿಯೇ ಇರಬೇಕಾಯಿತು. ಅದೊಂದು ರೋಚಕ ಅನುಭವ .ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಅಹಂಕಾರಕ್ಕೆ ಉದಾಸೀನ ಮದ್ದಾಗಬೇಕು ಎಂಬುದು ಹಿಂದಿನಿಂದಲೂ ಬಂದ ನಾಣ್ಡುಡಿ. ನಾವು ಅವರಿಗೆ ಬೇಡವಾದರೆ ಅವರೂ ನಮಗೆ ಬೇಡ. ಅಷ್ಟೇ.ಅಯ್ಯಪ್ಪನ ವಿಷಯಕ್ಕೂ ಇದು ಅನ್ವಯಿಸುತ್ತದೆ.