Monday, August 27, 2012

ಅಂತಃಪುರ; ಇಲ್ಲಿ ನಾವು ನಾವೇ..!


                                                    
                                               [ ಈ ಚಿತ್ರ ಅಂತಃಪುರದ ಸಖಿ ಸೌಮ್ಯಾ ಕಲ್ಯಾಣ್ಕರ್ ಅವರದ್ದು ]


ಒಬ್ಬ ಮನುಷ್ಯನೊಳಗೆ ಬಯಲಾಗುವ ಮತ್ತು ಆಲಯವಾಗುವ ಎರಡೂ ಬಯಕೆಗಳು  ಅಂತರ್ಗತವಾಗಿರುತ್ತದೆ. ಆದರೆ ಎಲ್ಲಿ ಬಯಲಾಗಬೇಕು ಎಲ್ಲಿ ಆಲಯವನ್ನು ಕಟ್ಟಿಕೊಳ್ಳಬೇಕು ಎಂಬುದು ಅವನ ವಿವೇಚನೆಗೆ ಸಂಬಂಧಿಸಿದ್ದು. ಅದು ಹೇಗಿರಬೇಕೆಂಬುದನ್ನು ಡಿ.ವಿ.ಜಿಯವರು ತಮ್ಮ”ಮಂಕುತಿಮ್ಮನ ಕಗ್ಗ’ದಲ್ಲಿ ಬಹಳ ಸೊಗಸಾಗಿ ಹೀಗೆ ಹೇಳಿದ್ದಾರೆ…

’ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ”

ಜಾಗತೀಕರಣಕ್ಕೆ ತೆರೆದುಕೊಂಡವರು ನಾವು..ತಂತ್ರಜ್ನಾನ ಇಡೀ ಜಗತ್ತನ್ನು ಒಂದು ಪುಟ್ಟ ಹಳ್ಳಿಯನ್ನಾಗಿಸಿದೆ.  ಟೀವಿ..ತೆರೆದಿಟ್ಟರೆ.ನಮ್ಮ ಕಲ್ಪನೆಯ  ಜಗತ್ತು ಕಣ್ಣೆದುರು ಸಾಕಾರಗೊಳ್ಳುತ್ತದೆ.ಇಂಟರ್ ನೆಟ್ ಮಾಹಿತಿ ಕಣಜವನ್ನೇ  ನಮ್ಮೆದುರು ತಂದು ಸುರಿಯುತ್ತದೆ. ನಮಗೀಗ ಆಯ್ಕೆಯ ಗೊಂದಲ..
ಕ್ಷಣಾರ್ಧದಲ್ಲಿ ನಾವೀಗ ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬಹುದು. ಅಂತಹ ಸಾಧ್ಯತೆಗಳಲ್ಲಿ”ಪೇಸ್ ಬುಕ್’ ಕೂಡಾ ಒಂದು. ಇದೊಂದು ಸಂಪರ್ಕ ಜಾಲ ತಾಣ. ಇಲ್ಲಿ ನಿಮ್ಮ ಸ್ವವಿವರವನ್ನು ಕೊಟ್ಟು ಅದಕ್ಕೊಂದು ಭಾವಚಿತ್ರವನ್ನು ಅಂಟಿಸಿ ಒಂದು ಅಕೌಂಟ್ ಪ್ರಾರಂಭ ಮಾಡಿದರೆ ಮುಗಿಯಿತು. ನಿಮ್ಮನ್ನು ಗೆಳೆತನದ ಕೊಂಡಿ ಜಗತ್ತಿನಾದ್ಯಂತ ಬೆಸೆದು ಬಿಡುತ್ತದೆ. ನಿಮ್ಮ ಅಕೌಂಟಿನ ವಾಲ್ ನಲ್ಲಿ ನಿಮ್ಮ ಬಗ್ಗೆ, ನಿಮ್ಮ ಕನಸು- ಕನವರಿಕೆಗಳ ಬಗ್ಗೆ, ದುಃಖ-ದುಮ್ಮಾನಗಳ ಬಗ್ಗೆ ಬರೆದುಕೊಂಡರೆ ಕ್ಷಣಾರ್ಧದಲ್ಲಿ ಅದಕ್ಕೆ ಜಗತ್ತಿನಾದ್ಯಂತ ಹರಡಿಕೊಂಡಿರುವ ನಿಮ್ಮ ಗೆಳೆಯರ ಬಳಗ ಪ್ರತಿಕ್ರಿಯಿಸುತ್ತದೆ. ನಿಮ್ಮ ನೋವು-ನಲಿವುಗಳಲ್ಲಿ ಅವರು ಭಾಗಿಯಾಗುತ್ತಾರೆ. ನಿಮ್ಮ ಪಂಚೇಂದ್ರಿಯಗಳಿಗೆ ಸಿಗದ ಆ ಗೆಳೆಯ-ಗೆಳತಿಯರು ಮತ್ತು ನಿಮ್ಮ ನಡುವೆ ನಿಮಗರಿವಿಲ್ಲದಂತೆ ಅನೂಹ್ಯವಾದ ಬಂಧುತ್ವವೊಂದು ಬೆಳೆದುಬಿಡುತ್ತದೆ.

ನಮಗೆ ಕ್ರಮೇಣ ಅರಿವಿಗೆ ಬರುತ್ತದೆ ಇದೊಂದು ಮುಖವಾಡದ ಜಗತ್ತು; ಹೊರಕೋಣೆ..ಆಗ ಒಳ ಕೋಣೆಗಾಗಿ ಹುಡುಕಾಟ ಆರಂಬವಾಗುತ್ತದೆ.. ಹಾಗೆ ಹೊರಟವರು ತಮ್ಮ ಅಭಿರುಚಿಗನುಗುಣವಾಗಿ ಸಮಾನ ಮನಸ್ಕರ ಗ್ರೂಫ್ ಗಳನ್ನು ರಚಿಸಿಕೊಳ್ಳುತ್ತಾರೆ, ಇಲ್ಲವೇ ಈಗಾಗಲೇ ಇರುವ ಗ್ರೂಪ್ ಗಳನ್ನು ಸೇರಿಕೊಳ್ಳುತ್ತಾರೆ.. ಅದಕ್ಕೆ ಮುಕ್ತ ಪ್ರವೇಶವಿರುವುದಿಲ್ಲ. ಅಂತಹ ಸಾವಿರಾರು ಗ್ರೂಪ್ ಗಳು ಕನ್ನಡ ಭಾಷೆ ಒಂದರಲ್ಲೇ ಇದೆ ಅಂದರೆ ಪೇಸ್ ಬುಕ್ ನ ಜನಪ್ರಿಯತೆಯನ್ನು ನಾವು ಊಹಿಸಿಕೊಳ್ಳಬಹುದು.

ಆದರೂ ಪೇಸ್ ಬುಕ್ ಎನ್ನುವುದು ಬಯಲು. ವಾಚ್ಯವಾಗಿ ಹೇಳಬೇಕೆಂದರೆ ಅದು ಲೌಡ್ ಸ್ಪೀಕರ್ ಇದ್ದಂತೆ ಅಲ್ಲಿ ಪಿಸುಮಾತುಗಳಿಗೆ ಮಾನ್ಯತೆ ಕಡಿಮೆ. ಇಲ್ಲಿರುವ ಮಹಿಳೆಯರಿಗೆ ಅದರ ಅನುಭವ ಹೆಚ್ಚು. ಅವರು ತಮ್ಮ ವಾಲ್ ಗಳಲ್ಲಿ ಬರೆದುಕೊಳ್ಳುವ ಅಂತರಂಗದ ಮಾತುಗಳಿಗೆ ಗೆಳೆಯರಿಂದ ಕೊಂಕು-ಕೊಳಕಿನ ಕಾಮೆಂಟ್ಗಳು ಬಂದಾಗ ಅವರು ಸಹಜವಾಗಿ ಮುದುಡಿ ಹೋಗುತ್ತಾರೆ.
ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಂಗಭೂಮಿ ಮತ್ತು ಕಿರುತೆರೆಯ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಯೋಚಿಸಿದ್ದು ’ನಾವು ನಾವಾಗಿ ಇರುವಂತ ಒಂದು ನಿರಮ್ಮಳ ಜಾಗ ಬೇಕು’ ಹಾಗೆ ಹುಟ್ಟಿಕೊಂಡದ್ದೇ  ’ಅಂತಃಪುರ’ ವೆಂಬ ಸಿಕ್ರೇಟ್ ಗುಂಪು.  ಜಯಲಕ್ಮಿಯವರು ಇದರ ಅಡ್ಮಿನ್ ಆದರೂ.ಇಲ್ಲಿ ಎಲ್ಲರೂ ಸರ್ವತಂತ್ರ ಸ್ವತಂತ್ರರು.ಹಾಗೆಂದು ಅವರೇ ಅನೌನ್ಸ್ ಮಾಡಿದ್ದಾರೆ! ಅಷ್ಟು ನಂಬಿಕೆ ಅವರಿಗೆ ಈ ಗ್ರೂಪ್ ಬಗ್ಗೆ. ಆದರೂ ಇಲ್ಲಿಯ ಚಟುವಟಿಕೆಗಳ ಬಗ್ಗೆ ಇನ್ಯಾರಿಗೋ ಮುಖ್ಯವಾಗಿ ಹೆಣ್ಮಕ್ಕಳ ಬಗ್ಗೆ ಅಸಡ್ಡೆಯಾಗಿ  ಮಾತಾಡುವವರಿಗೆ ಸತತವಾಗಿ ಸುದ್ದಿಗಳನ್ನು ರವಾನಿಸುತ್ತಿದ್ದರೆ ಅಂತವರನ್ನು ಈ ಗ್ರೂಪಿಗೆ ನಿರ್ಭಂದಿಸುವ ಅಧಿಕಾರವನ್ನು ಅಡ್ಮಿನ್ ಹೊಂದಿದ್ದಾರೆ.
ಹೇಳಿ ಕೇಳಿ ಇದು ಅಂತಃಪುರ. ಹಾಗಾಗಿ ಮಹಾರಾಣಿಯವರು ಹಲವಾರು. ಅಂದಮೇಲೆ ರಾಜಕುಮಾರಿಯವರಿರುವುದು ಸಹಜ. ಇವರನ್ನೆಲ್ಲಾ ಪ್ರೀತಿ, ಕಾಳಜಿಗಳಿಂದ ನೋಡಿಕೊಳ್ಳಲು ಒಬ್ಬ ರಾಜಮಾತೆ ಇರಲೇಬೇಕಲ್ಲಾ..ಹೂಂ.. ಇಲ್ಲೊಬ್ಬ ರಾಜಮಾತೆಯಿದ್ದಾರೆ ಅವರೇ ಅನುರಾಧ ಬಿ.ರಾವ್. ಇವರು ಯಾರು ಗೊತ್ತಾ? ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ದೊಡ್ಡೇರಿ ವೆಂಕಟಗಿರಿರಾವ್ ಅವರ ಮಗಳು. ಇನ್ನು ತಾನು ಪಾಯಿಝನ್ ವರ್ಜಿನ್ ಅಂದರೆ ವಿಷಕನ್ಯೆ ಎಂದು ಪರಿಚಯಿಸಿಕೊಂಡು ಇಲ್ಲಿಯ ಪಹರೆಗಾರಳಾಗಿ ಇಲ್ಲಿನ ಚಟುವಟಿಗಳ ಬಗ್ಗೆ ಒಂದು ಕಣ್ಣಿಟ್ಟಿರುವ ಲಾಯರ್ ಅಂಜಲಿ ರಾಮಣ್ಣ ಇದ್ದಾರೆ….ಹೀಗೆ ಪಟ್ಟಿ ಮಾಡುತ್ತಾ ಹೋದರೆ ಈ ಲೇಖನವನ್ನು ಮುಗಿಸುವುದಕ್ಕಾಗುವುದಿಲ್ಲ..ಯಾಕೆಂದರೆ…..

ಅಂತಃಪುರದಲ್ಲಿ ಎಂತೆಂತ ಘಟಾನುಘಟಿ ಹೆಣ್ಣುಮಕ್ಕಳಿದ್ದಾರೆ ಎಂದರೆ ಅವರನ್ನೆಲ್ಲಾ ನಾನು ಪರಿಚಯಿಸುತ್ತಾ ಹೋದರೆ ನೀವು ನೀವು ಮೂಗಿನ ಮೇಲೆ ಬೆರಳಿಟ್ಟು ’ಹೆಣ್ಮಕ್ಕಳೇ ಸ್ತ್ರಾಂಗ್ ಗುರು’ ಎಂದು ಹಾಡುವುದರಲ್ಲಿ ಅನುಮಾನವೇ ಇಲ್ಲ. ನಾನ್ನೂರಕ್ಕಿಂತಲೂ ಜಾಸ್ತಿ ಸಂಖೆಯಲ್ಲಿರುವ ನಾವೆಲ್ಲಾ ಪರಸ್ಪರ ಸಖೀಭಾವದಲ್ಲಿ ಬಂದಿತರಾಗಿದ್ದೇವೆ. ಇಲ್ಲಿರುವ ಹೆಣ್ಮಕ್ಕಳು ಎಷ್ಟು ಸೂಕ್ಮಜ್ನರೂ, ದೂರದರ್ಶಿತ್ವವುಳ್ಳವರೂ, ಸಮಾಜಮುಖಿಯರೂ, ವರ್ತಮಾನಕ್ಕೆ ಸ್ಪಂದಿಸುವವರೂ ಆಗಿದ್ದಾರೆ ಎಂಬುದು ಅವರು ತಮ್ಮೊಳಗೆ ಮಾತಾಡಿಕೊಂಡಂತೆ ಬರೆಯುತ್ತಿರುವ ಬ್ಲಾಗ್ ಗಳಲ್ಲಿ ವ್ಯಕ್ತವಾಗುತ್ತದೆ. ಕೆಲವು ಬ್ಲಾಗ್ ಹೆಸರುಗಳು ಹೀಗಿವೆ ನೋಡಿ ;
ಹೀಗೆ ಸುಮ್ಮನೆ, ತುಳಸಿವನ, ದೀವಿಗೆ, ತಂಬೂರಿ, ಭೂರಮೆ,  ಭಾವನಾಲೋಕ, ಭಾವದರ್ಪಣ, ತೆರೆದ ಮನ, ಮಾನಸ, ಮೃದುಮನಸು, ಓ ಮನಸೇ ನೀನೇಕೆ ಹೀಗೆ?, ಓ ನನ್ನ ಚೇತನಾ, ಆಡದ ಮಾತುಗಳು, ನೆನಪು ನೇವರಿಕೆ, ಹೇಳಬೇಕೆನಿಸುತ್ತದೆ, ಹೇಳದೆ..ಕೇಳದೆ, ಚುಕ್ಕಿ ಚಿತ್ತಾರ, ಮಾಲಾಲಹರಿ, ತೇಲಿ ಬಂದ ಪುಟಗಳು, ಮಿಂಚುಳ್ಳಿ, ಮುಗಿಲ ಹಕ್ಕಿ,  ಮ ಹ ತಿ, ತದ್ಭವ, ಬೆಂದಕಾಳೂರು…ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಅಂತಹ ನಲ್ವತ್ತು ಬ್ಲಾಗ್ ಒಡತಿಯರ ಪಟ್ಟಿ ನನ್ನಲ್ಲಿದೆ ಇವರೆಲ್ಲಾ ತಮ್ಮ ಬ್ಲಾಗ್ ಗಳಿಗೆ ಕೊಟ್ಟ ಟ್ಯಾಗ್ ಲೈನ್ ಗಳ ಸೊಗಸಿನ ಬಗ್ಗೆ ಬರೆಯಲು ಹೊರಟರೆ ಇನ್ನೊಂದು ಲೇಖನವನ್ನೇ ಬರೆಯಬೇಕಾದೀತು..!

ನಮ್ಮ ಈ ಗ್ರೂಪ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದವು. ಆಗ ಪೇಸ್ ಬುಕ್ ನಲ್ಲಿರುವ ನಮ್ಮ ಹಲವು ಗೆಳೆಯರು ’ನೀವೆಲ್ಲಾ ಅಲ್ಲಿ ಸೇರಿ ಏನ್ ಮಾತಾಡ್ತೀರಿ?’ ಎಂದು ಕುತೂಹಲ ವ್ಯಕ್ತ ಪಡಿಸಿದ್ದರು. ಅದನ್ನೆಲ್ಲಾ ನಾನು ನಿಮಗೆ ಹೇಗೆ ವಿವರಿಸಲಿ? ಅಣುವಿನಿಂದ ಅಂತರಿಕ್ಷದ ತನಕ..ಹೆಣ್ಮಕ್ಕಳ ಮುಟ್ಟಿನ ತೊಂದರೆಯಿಂದ ಗಂಡನ ಲೈಂಗಿಕ ಲಾಲಸೆಯ ತನಕ ಅಂತಃಪುರದ ಪಡಸಾಲೆಯ ಗೋಡೆಗೊರಗಿ ನಾವು ಮಾತಾಡುತ್ತೇವೆ. ಸುಖ-ದುಃಖಗಳನ್ನು ಹಂಚಿಕೊಳ್ಳುತ್ತೇವೆ. ಅಗತ್ಯ ಬಿದ್ದಾಗ ಪರಸ್ಪರ ಹೆಗಲಾಗುತ್ತೇವೆ. ವರ್ತಮಾನದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ.. ಮಾತ್ರವಲ್ಲಾ ಕ್ರಿಯಾಮುಖಿಯಾಗುತ್ತೇವೆ. ಯಾಕೆಂದರೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರಭಾವಿ ಮಹಿಳೆಯರು ಅಂತಃಪುರದಲ್ಲಿದ್ದಾರೆ.

ಅಂತಃಪುರದಲ್ಲಿ ನಾವು ಏನು ಮಾತಾಡಿಕೊಳ್ತೀವಿ ಎಂಬುದನ್ನು ಉದಾಹರಣೆ ಸಮೇತವಾಗಿ ಹೇಳದಿದ್ದರೆ ನಿಮಗೆ ಸಮಾಧಾನವಾಗದು ನನಗೆ ಗೊತ್ತಿದೆ ಅದಕ್ಕಾಗಿ ಇಲ್ಲೊಮ್ಮೆ ಇಣುಕಿ ನೋಡಿ;
ಇಲ್ಲಿ ಪಡಸಾಲೆಯ ಗೋಡೆಗೊರಗಿ ಕೂತು ಸಂಯಮದಿಂದ ಮಾತಾಡುವವರಿದ್ದಾರೆ..ಹಾಗೆಯ ಬಂಡಾಯದ ಬಾವುಟ ಹಾರಿಸುವವರಿದ್ದಾರೆ..ಮಹಿಳಾ ಮಣಿಗಳನ್ನು ಒಟ್ಟು ಸೇರಿಸಿ ಸುಧಾರಣೆಯ ಮಾತಾಡುವವರಿದ್ದಾರೆ. ಯಾವುದೋ ಒಂದು ಒಳ್ಳೆಯ ಕೆಲಸಕ್ಕಾಗಿ ಅವರನ್ನೆಲ್ಲಾ ಹುರಿದುಂಬಿಸುವ ನಾಯಕಿಯರಿದ್ದಾರ್. ಹಾಗೆಯೇ ತಮ್ಮೊಳಗೆ ಮಾತಾಡಿದಂತೆ ಅಂತರಂಗ ಪಿಸುನುಡಿಗಳನ್ನು ಮೆಲ್ಲಗೆ ಉಲಿಯುವವರಿದ್ದಾರೆ.
ವಿಷಯ ಯಾವುದೇ ಇರಲಿ, ತಮ್ಮ ಮಾತುಗಳನ್ನು ಪೂರ್ವಾಗ್ರಹಗಳಿಲ್ಲದೆ ಆಲಿಸುವ, ಸಂತೈಸುವ ಒಂದಷ್ಟು ಜನ ಇಲ್ಲಿದ್ದಾರೆ ಎಂಬ ನಂಬಿಕೆ ಇಲ್ಲಿಯ ಸಖಿಯರಲ್ಲಿದೆ. ಹಾಗಾಗಿ ದಿನಕ್ಕೆ ಕನಿಷ್ಟ ಹತ್ತಾದರೂ ಪೋಸ್ಟ್ ಗಳು ಅಂತಃಪುರದ ಗೋಡೆಯನ್ನು ಅಲಂಕರಿಸುತ್ತವೆ.

 ಪತ್ರಕರ್ತೆಯೊಬ್ಬಳು.. ಇಲ್ಲಿನ ಗೋಡೆಗಂಟಿಸಿದ ಬರಹ ಹೀಗಿತ್ತು.
ಇಂದೇಕೋ ತುಸು ಬೇಸರ... ತಿದಿಯೊತ್ತಿದ ನೋವು.. ಧುಮುಕಲು ತಯಾರಾಗಿದ್ದ ಕಣ್ಣೀರು... ಆದರೂ ಅರ್ಧಕ್ಕೆ ನಿಂತ ಕೆಲಸ... ಅಳಲು ಪುರಸೊತ್ತಿರಲಿಲ್ಲ... ಹಾಗಾಗಿ ನೋವಿಗೆ ಒಂದರೆಗಳಿಗೆ ನಿಲ್ಲಲು ಹೇಳಿದೆ... ಆಗ ನೆನಪಾದದ್ದು ನನ್ನೆದೆಗೆ ಹತ್ತಿರವಾದ ಎಮಿಲಿ ಡಿಕಿನ್ಸನ್‌ಳ ಕವನ... “Because I Could Not Stop for Death” ಆಕೆಗೂ ಹೀಗೆ ಅನ್ನಿಸಿರಬೇಕೇನೋ... ಅದನ್ನು ಕನ್ನಡಕ್ಕಿಳಿಸಿದ್ದೇನೆ... ಅದೇಕೋ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.. 
ಸಾವಿಗಾಗಿ ನಾ... ನಿಲ್ಲುವವಳಲ್ಲ...ಎಂಬ ಶೀರ್ಷಿಕೆಯನ್ನು ಕೊಟ್ಟು ಅನುವಾದಿಸಿದ ಈ ಕವಿತೆಯನ್ನು ಅಂತಃಪುರದ ಸೂಕ್ಷ್ಮ ಮನಸ್ಸುಗಳು ಕೊಂಡಾದಿದವು ಜೊತೆಗೆ ಆಕೆಯ ನೋವಿಗೆ ಸ್ಪಂದಿಸಿದವು. 
ರೂಪಾ ರಾವ್ ಕೇಳುತ್ತಾರೆ;
’ಕಾನ್ಫಿಡೆನ್ಸ್ ನಿಂದ ಸೌಂದರ್ಯನಾ..ಸೌಂದರ್ಯದಿಂದ ಕಾನ್ಫಿಡೆನ್ಸಾ.?’
ಸುದೀರ್ಘ ಚರ್ಚೆ ನಡೆದು ಹೆಚ್ಚಿನವರು ಒಪ್ಪಿಕೊಂಡದ್ದು ಆತ್ಮ ವಿಶ್ವಾಸಕ್ಕೂ ಸೌಂದರ್ಯಕ್ಕೂ ಸಂಬಂಧವಿಲ್ಲ.ಆತ್ಮ ವಿಶ್ವಾಸ ಇದ್ದವರಿಗೆ ಸೌಂದರ್ಯ ಬೇಕು ಅಂತ ಕೂಡಾ ಇಲ್ಲ. ತಮ್ಮೊಳಗಿನ ಸೌಂದರ್ಯ ಅವರಿಗೆ ತಿಳಿದಿರುತ್ತದೆ.
ತೇಜಸ್ವೀನಿ ಹೆಗ್ಡೆ ಎಂಬ ತಾಯಿಯ ಕಾಳಜಿಯಿದು;
ಮಕ್ಕಳಿಗೆ ಕೆಮ್ಮು, ನೆಗಡಿ, ಕಫ ಇದ್ದಾಗ ಹಣ್ಣುಗಳನ್ನು ಕೊಡಬಹುದೇ? ಯಾವ್ಯಾವ ಹಣ್ಣುಗಳನ್ನು ಕೊಡಬಹುದು?
ಆಕೆಗೆ ಎಷ್ಟೊಂದು ಸಲಹೆಗಳು ಬಂದುವೆಂದರೆ ನಮ್ಮ ಅಂತಃಪುರದಲ್ಲಿರುವ ಎಲ್ಲಾ ತಾಯಂದಿರು, ಮೊಮ್ಮಕ್ಕಳಿರುವ ಅಜ್ಜಿಯಂದಿರು ಈ ಸಲಹೆಗಳನ್ನು ಆಸಕ್ತಿಯಿಂದ ಹಿಂಬಾಲಿಸುತ್ತಿದ್ದರು.
ನಿವೇದಿತಾ ಒಂದು ಬೆಳಿಗ್ಗೆ ಬಂದವರೇ ಸಖಿಯರನ್ನೆಲ್ಲಾ ತರಾಟೆಗೆ ತಗೊಂಡಿದ್ದು ಹೀಗೆ;
ಇಂದು ಬೆಳಗು ಪೇಪರ್ ಓದಲು ಕೈಗೆತ್ತಿ ಕೊಂಡ್ರೆ ಒಂದು ಪೂರ್ತಿ ಹಾಳೆ "ಫಾರೆವರ್ ೧೮" ಜಾಹೀರಾತು ಕಾಣುವುದೇ?!, ಹಾಗಾದ್ರೆ ಇದನ್ನ ಯಾರು ಅಂಗಡಿಯಲ್ಲಿ ಕೊಳ್ಳುವುದು, ಹೆಂಗಸರಂತು ಬರಿ ಸ್ಯಾನಿಟರೀ ಪ್ಯಾಡ್ ಕೇಳುವುದಕ್ಕೆ ಹಿಂದೇಟು ಹಾಕ್ತಾರೆ, ನಮಗೆ ಇದರಲ್ಲೂ ಕೂಡ "ಒಪ್ಪಿಗೆ" ಅಥವಾ "ಚಾಯ್ಸ್" ಇಲ್ಲ, ಇದನ್ನೂ ಗಂಡಸೆ ಕೊಂಡು ಹುಡುಗಿಯರಿಗೆ "ತಗೋ ಬಿಗಿ ಮಾಡು" ಅಂತ ತಂದು ಕೊಡುತ್ತಾನೇನು? ಎಷ್ಟು ಅವಮಾನತರುವ ವಿಷಯ, ನೀವೆಲ್ಲ ಸುಮ್ಮನೇಕೆ ಇದೀರಾವ್ವಾ’
 ತಡವಾಗಲಿಲ್ಲ. ಅಲ್ಲಿ ಸಿಡಿಮದ್ದುಗಳು ಸಿಡಿದವು.ನೀರು ಹಾಕುವವರು ಜತೆಯಲ್ಲಿ ಬಂದರು ಎನ್ನಿ. ಲೈಂಗಿಕ ದೃಷ್ಟಿಕೋನಕ್ಕೆ ಸಂಬಂಧಪಟ್ಟ ಈ ಪೋಸ್ಟ್ ಅನ್ನು ಗೀತಾ ಬಿ.ಯು ಎಷ್ಟು ಚೆನ್ನಾಗಿ ನಿಭಾಯಿಸಿದರೆಂದರೆ ಸಖಿಯರೆಲ್ಲಾ ಮುಕ್ತವಾಗಿ ಈ ಚರ್ಚೆಯಲ್ಲಿ ಭಾಗವಹಿಸಿದರು.
ವಿದೇಶದಲ್ಲಿರುವ ಇನ್ನೊಬ್ಬ ಸಖಿ ತಾನಲ್ಲಿ ಕಂಡ ಲೆಸ್ಬಿಯನ್ನರ ಬಗ್ಗೆ ಬರೆದರೆ ಹಲವಾರು ಸಖಿಯರು ಅಕೆಯ ಪಜೀತಿಯನ್ನು ಛೇಡಿಸುತ್ತಾ ಆ ಬಗ್ಗೆ ಮೌಲಿಕವಾದ, ಸುದೀರ್ಘವಾದ ಚರ್ಚೆಯೊಂದನ್ನು ನಡೆಸಿದರು.
ಹೀಗೆ… ಒಬ್ಬ ಸಖಿ ಒಂದು ರುಚಿಯಾದ ಅಡುಗೆಯನ್ನು ಹೇಳಿಕೊಟ್ಟರೆ, ಇನ್ನೊಬ್ಬಾಕೆ ಕುಂಡದಲ್ಲಿ ಗಿಡ ಬೆಳೆಸುವುದರ ಬಗ್ಗೆ ಆಸಕ್ತ ಸಖಿಯರಿಗೆ ಕಲಿಸಿಕೊಡುತ್ತಾರೆ. ಇನ್ನೊಬ್ಬಾಕೆ ತಾನು ತುಂಬು ಸಂಸಾರದ ನಡುವೆ ನಲುಗಿ ಹೋಗುತ್ತಿರುವುದರ ಬಗ್ಗೆ ಹೇಳಿಕೊಂಡರೆ ’ನಿನ್ನದೇ ಆದ ಸ್ಪೇಸ್ ಅನ್ನು ಕಂಡುಕೊಳ್ಳುವುದು ಹೇಗೆ?’ ಎಂಬುದರ ಬಗ್ಗೆ ಹಲವಾರು ಟಿಪ್ಸ್ ಗಳು ಹರಿದು ಬರುತ್ತವೆ.

ಗೆಳತಿಯರೇ, ಅಂತಃಪುರ ಸ್ವಚ್ಛಗೊಳ್ಳಬೇಕಿದೆಯಲ್ಲ... ಇನ್ನು ಮೂರು ಜನ ಸೇರಿದರೆ ಇಲ್ಲಿ ನಾವು ಒಟ್ಟು ನಾನ್ನೂರು ಜನ! ಇಷ್ಟೊಂದು ಜನ ಅಂತಃಪುರದಲ್ಲಿ ಓಡಾಡ್ತೀವಿ, ಕಸ ಹುಟ್ಟೋದು ಸೂರ್ಯ ಹುಟ್ಟುವಷ್ಟೇ ಸತ್ಯ ಹಾಗೂ ಸಹಜ. ಅದು ತಪ್ಪಲ್ಲವೇ ಅಲ್ಲ ಹಾಗಂತ ಒಪ್ಪಂತೂ ಅಲ್ಲವೇ ಅಲ್ಲ!!! ನಮ್ಮವರಿಂದಲೇ, ನಮ್ಮಿಂದಲೇ ಅಂತಃಪುರ ತಿಪ್ಪೆಗುಂಡಿ ಅನ್ನಿಸಿಕೊಳ್ಳುವ ಮುಂಚೆ ಇದನ್ನು ಸ್ವಚ್ಛವಾಗಿಸೋಣ. ನಾನಂತೂ ಈಗಲೇ ನಾನು ಹಾಕಿದ ಕಸವನ್ನು (ಆಪ್ತವಲ್ಲದ ಮತ್ತು ಮೌಲಿಕವಲ್ಲದ), ಎತ್ತಿ ಡಸ್ಟ್ ಬಿನ್ನಿಗೆ ಹಾಕೊ ಕೆಲಸ ಶುರು ಮಾಡಿದೀನಿ. ನೀವು….?

ಮೊನ್ನೆ ಮೊನ್ನೆ ನಮ್ಮ ಅಡ್ಮಿನ್ ಹೀಗೊಂದು ಪೋಸ್ಟ್ ಹಾಕಿದ್ದೆ ತಡ, ಎಲ್ಲಾ ಸಖಿಯರು ಸೊಂಟಕ್ಕೆ ಸೆರಗು ಸಿಕ್ಕಿಸಿ..ಅಲ್ಲಲ್ಲಾ ಚೂಡಿದಾರದ ವೇಲ್ ಸಿಕ್ಕಿಸಿ…ಅದೂ ಅಲ್ಲಾ.. ಜೀನ್ಸ್ ಮೇಲೆ ಮಡಿಚಿ ಕಸ ಗುಡಿಸಲು ಹೊರಟೇ ಬಿಡೊದೇ..! ಹಾಗಾಗಿ ನನಗೆ ಎಲ್ಲಾ ಪೋಸ್ಟ್ ಗಳನ್ನು ನೋಡಲಾಗಲೇ ಇಲ್ಲಾ..ಇದ್ದುದರಲ್ಲಿ ಒಂದಷ್ಟನ್ನು ಆಯ್ದು ಕೊಟ್ಟಿದ್ದೇನೆ..

ಆಂತಃಪುರದೊಳಗೇ ಕಳೆದ ತಿಂಗಳು ಇನ್ನೊಂದು ಕಿರುಕೋಣೆ ಸೃಷ್ಟಿಯಾಯ್ತು. ಅದಕ್ಕೊಂದು ಹಿನ್ನೆಲೆಯಿದೆ.ನಮ್ಮ ಸಖಿಯೊಬ್ಬರು ತಮ್ಮ ಕವನವೊಂದನ್ನು ದೂರದ ನಾರ್ವೆಯಲ್ಲಿರುವ ಅಮಿತಾ ರವಿಕಿರಣ್ ಗೆ ಮೇಲ್ ಮಾಡಿದರು.ಜಾನಪದದಲ್ಲಿ ವಿಶೇಷ ಆಸಕ್ತಿಯಿರುವ ಸಂಗೀತಗಾರ್ತಿ ಅಮಿತಾ. ಅವರು ಅಲ್ಲಿಂದಲೇ ಅದಕ್ಕೆ ರಾಗ ಸಂಯೋಜಿಸಿ ಹಾಡಿ ಅಂತಃಪುರಕ್ಕೆ ಅಪ್ಲೋಡ್ ಮಾದಿದರು. ಆ ಹಾಡಿನಲ್ಲಿದ್ದ ರಂಗಲಯವನ್ನು ಗುರುತಿಸಿದ ನಮ್ಮ ಸಖಿಯರ ಮಾತುಕತೆಗಳು ರಂಗಭೂಮಿಯ ಸುತ್ತಲೇ ಗಿರಕಿ ಹೊಡೆಯುತ್ತಾ ’ಅಂತಃಪುರ ನಾಟಕ ಮಂಡಳಿ’ ಎಂಬ ಒಳಕೋಣೆಯೊಂದರ ಜನ್ಮಕ್ಕೆ ಕಾರಣವಾಯ್ತು.

ಎಂಟು ತಿಂಗಳ ಹಿಂದೆ ಆರಂಭವಾದ ಈ ಗ್ರೂಪಿನ ಹಲವು ಸದಸ್ಯರಿಗೆ ಪರಸ್ಪರ ಮುಖಾಮುಖಿಯಾಗುವ ಹುಕ್ಕಿ ಬಂದ್ಬಿಡ್ತು..ತಡವೇಕೆ ಎಂದುಕೊಂಡ ನಮ್ಮ ಸಖಿಯರು ಅಂತರಾಷ್ಟ್ರೀಯ ಗೆಳೆತನದ ದಿನವಾದ ಅಗಸ್ಟ್ ೫ರ ಮುನ್ನಾದಿನದಂದು ಬೆಂಗಳೂರಿನಲ್ಲಿ ಒಂದು ಗೆಟ್-ಟುಗೆದರ್ ಪಾರ್ಟಿಯನ್ನು ಏರ್ಪಡಿಸಿದರು. ಅದರ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡವರು ಪೂರ್ಣಿಮಾ ಗಿರೀಶ್. ಆದರೆ ಗೃಹಕೃತ್ಯದ ಜವಾಬ್ದಾರಿಯಿಂದಾಗಿ ಆಕ್ಗೇ ಆ ಪಾರ್ಟಿಗೆ ಬರಲಾಗಲಿಲ್ಲ!  ಮಂಗಳೂರಿನ ಹೋಂ ಸ್ಟೇ ದಾಳಿಯ ಕಾವಿನ ದಿನಗಳವು. ಆದರಲ್ಲಿ ಪಾಲೊಳ್ಳಲಾಗದಿದ್ದ ವಿದೇಶಗಳಲ್ಲಿರುವ ಮತ್ತು ದೂರದೂರುಗಳಲ್ಲಿದ್ದ ನಮ್ಮ ಸಖಿಯರು’ ಜಾಗೃತೆ ಕಣ್ರವ್ವಾ..ಸಂಸ್ಕೃತಿ ರಕ್ಷಕರು ಅಲ್ಲಿಗೂ ಧಾಳಿಯಿಟ್ಟಾರು” ಎಂದು ನಮ್ಮನ್ನು ಎಚ್ಚರಿಸಿದ್ದರು.

ನಿಜ, ಹೊರಜಗತ್ತು ನಮ್ಮನ್ನು ಆತಂಕಕ್ಕೀಡು ಮಾಡಿದಾಗ ನಾವು ಒಳಜಗತ್ತಿಗೆ ಸರಿಯುತ್ತೇವೆ.ಪೇಸ್ ಬುಕ್ ನಲ್ಲಿ ಅದಕ್ಕಾಗಿ ನಾವು ಆರಿಸಿಕೊಂಡಿರುವ ಜಾಗವೇ ’ಅಂತಃಪುರ.’
ಅಂತಃಪುರವೆಂಬುದು ಅನಾದಿಯಿಂದಲೂ ಹೊರಜಗತ್ತಿಗೆ ಕುತೂಹಲದ ಕೇಂದ್ರವಾಗಿಯೇ ಇತ್ತು…ಈ ನಮ್ಮ ಅಂತಃಪುರವೂ ಅಷ್ಟೆ..ತೆರೆದಿಡಬೇಕಾದ್ದನ್ನು ಸೂಚ್ಯವಾಗಿ ತೆರೆದಿಟ್ಟಿದೆ. ಹಾಗೆಯೇ ಬಚ್ಚಿಡಬೇಕಾದ್ದನ್ನು ಬಚ್ಚಿಟ್ಟಿದೆ. ಒಟ್ಟಾಗಿ ನಾನು ಹೇಳಬೇಕೆಂದದ್ದು ಇಷ್ಟೇ. ಇಲ್ಲಿನ ಸಖಿಯರು ಹೊರಜಗತ್ತಿನಲ್ಲಿ ”ಏನೋ’ ಆಗಿರಬಹುದು. ಆದರೆ ಇಲ್ಲಿ ಎಲ್ಲರೂ ಸಮಾನರು…ಹೆಣ್ಣಿನ ಅಂತಃಕರಣವೊಂದೇ ಇಲ್ಲಿ ಸಕ್ರೀಯವಾಗಿರುತ್ತದೆ.. ಅಂದರೆ ಮನುಷ್ಯ ಸಹಜವಾದ ’ಅಹಂ’ ಇಲ್ಲಿ ಎಂದೂ ಮುನ್ನೆಲೆಗೆ ಬಂದಿಲ್ಲ; ಬರುವುದೂ ಇಲ್ಲ. ಅದು ಈ ಗ್ರೂಪಿನ ಹೆಗ್ಗಳಿಕೆ.


[ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

Tuesday, August 7, 2012

ಸಂಸ್ಕೃತಿ ಕಳಶವನ್ನು ಹೊತ್ತ ದೇವದಾಸಿಯರಲ್ಲ ನಾವು..!




ಇದನ್ನು ಬರೆಯುತ್ತಿರುವಾಗ ನನ್ನಲ್ಲೊಂದು ವಿಷಣ್ಣ ಭಾವವಿದೆ.
ನಾನಿದನ್ನು ಬರೆಯುತ್ತೇನೆ..ಆದರೆ ಓದುವವರು ಯಾರು? ನಮ್ಮ ಹಾಗೆ ಯೊಚಿಸುವ ನೀವು.
ಅಂದರೆ ಯಾರಿಗಿದು ತಲುಪಬೇಕೆಂದು ನಾವು ಬರೆಯುತ್ತೇವೆಯೋ ಅವರಿದನ್ನು ಓದುವುದಿಲ್ಲ. ಹಾಗೆಂದುಕೊಂಡು ಬರೆಯದೇ ಇರಲಾದೀತೆ?

ಮಂಗಳೂರಿನ ”ಮಾರ್ನಿಂಗ್ ಮಿಸ್ಟ್’ ಹೋಂ ಸ್ಟೇ ಯ ಮೇಲೆ ಹಿಂದೂ ಜಾಗರಣ ಸಮಿತಿಯೆಂಬ ಖೂಳ ಪಡೆ ಧಾಳಿ ನಡೆಸಿ ಅಲ್ಲಿದ್ದ ಹುಡುಗ-ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೊಡೆದ ಪೈಶಾಚಿಕ  ದೃಶ್ಯಗಳನ್ನು ನೀವೆಲ್ಲಾ ಟೀವಿಯಲ್ಲಿ ನೋಡಿದ್ದೀರಿ. ಆದರೆ ಆ ಖೂಳ ಪಡೆಯನ್ನು ಕೂಳು ಸಾಕಿ ವಿಧ್ವಂಸಕ ಕೃತ್ಯಗಳಿಗೆ ಹುಚ್ಚೆಬ್ಬಿಸಿ ಕಳುಹಿಸುವ ಸೂತ್ರದಾರರು ಯಾರು?ಅದು ಯೋಚಿಸಬೇಕಾದ ವಿಷಯ.

ಇದೇ ವರ್ಷ ಜನವರಿಯಲ್ಲಿ ದ.ಕ.ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಿತು.  ಅಗ ಅದರ ನೇತೃತ್ವ ವಹಿಸಿಕೊಂಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಉಗ್ರವಾದ, ಪ್ರಚೋಧನಾತ್ಮಕವಾದ ಭಾಷಣ ಮಾಡಿದರು.  ಹಿಂದೂ ಸಂಸ್ಕೃತಿ ಮತ್ತು ಧರ್ಮದ ಉದ್ಧಾರ ಮಹಿಳೆಯರಿಂದ ಮಾತ್ರ. ಹಾಗಾಗಿ ಅವರು ಹರಿದ್ರಾ ಕುಂಕುಮ ಶೋಭಿತೆಯರಾಗಿ ಮೈತುಂಬಾ ಸೆರಗನ್ನು ಹೊದ್ದು ಇರುವಂತೆಯೂ, ಅವರು ಹಾಗಿಲ್ಲದೆ ಅನ್ಯ ಕೋಮಿನ ಯುವಕರೊಡನೆ ಒಡನಾಟವಿಟ್ಟುಕೊಂಡರೆ ಅವರನ್ನು ಸದೆ ಬಡಿಯಿರಿ ಎಂದು ಕರೆನೀಡಿದ್ದರು. ಬಹುಶಃ ಅವರು ನೀಡಿದ ಕರೆ ಆರು ತಿಂಗಳ ನಂತರ ತನ್ನ ವಿರಾಟ್ ಸ್ವರೂಪವನ್ನು ಮೊನ್ನೆನ ಧಾಳಿಯಲ್ಲಿ ಮೆರೆದಿದೆ. ’ಅನ್ಯ ಕೋಮು’ ಎಂಬ ಕಲ್ಪನೆ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮೊನ್ನೆನ ಧಾಳಿಯ ಹಿಂದಿನ ಹುನ್ನಾರಗಳನ್ನು ನಾವು ಚರ್ಚಿಸುವುದೇ ಬೇಡ..ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಮಗೂ ಕೂಡಾ ಒಂದಷ್ಟು ವಿವರಗಳ ಅವಶ್ಯಕತೆಯಿದೆ. ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡ ಘಟನೆಗಳನ್ನಷ್ಟೆ ನೋಡೋಣ…ಅದು ಅನಕ್ಷರಸ್ತರಿಗೂ ಅರ್ಥವಾಗುತ್ತೆ….

 ಪುಂಡರೆಂದು ಮೇಲ್ನೋಟಕ್ಕೆ ಕಂಡುಬರುವ ಒಂದಷ್ಟು ಹುಡುಗರು ಏಕಾಏಕಿ ಒಂದು ಹೋಂ ಸ್ಟೇ ಒಳಗೆ ನುಗ್ಗಿ ಅಲ್ಲಿದ್ದ ಇನ್ನೂ ಎಳಸುತನ ಮಾಸದ, ಪ್ರಬುದ್ಧತೆಯ ಹಂತಕ್ಕೆ ಏರದಂತೆ ಕಾಣುತ್ತಿರುವ ಹುಡುಗ-ಹುಡುಗಿಯರ ಮೇಲೆ ಮುಗಿಬಿದ್ದು ಎಲ್ಲೆಂದರಲ್ಲಿ ಚಚ್ಚಿದ್ದಾರೆ. ಆಗ ಆ ಹುಡುಗ-ಹುಡುಗಿಯರು ಅರೆಬೆತ್ತಲೆಯಲ್ಲಿದ್ದರು; ಪಾನಮ್ಮತ್ತರಾಗಿದ್ದರು ಎಂಬುದು ದಾಳಿಕೋರರ ದೃಢನಂಬಿಕೆ. ಹಾಗಾಗಿ ಅದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು. ದಾರಿ ತಪ್ಪಿ ನಡೆಯುತ್ತಿರುವ ಅವರಿಗೆ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರುವುದು ತಮ್ಮ ಘನ ಉದ್ದೇಶ ಎಂಬುದು ಅವರ ಉವಾಚ…

ಅಲ್ಲಿದ್ದ ಹುಡುಗ-ಹುಡುಗಿಯರನ್ನು ಕ್ಯಾಮಾರ ಮುಂದೆ ತೋರಿಸುವ ಮೊದಲು ಆ ಕಿರಾತಕರು ಮಾಡಿದ್ದ ಘನಕಾರ್ಯ ಏನೆಂದರೆ ಸ್ವತಹ ತಾವೇ ಪಾನಮತ್ತರಾಗಿ, ಆ ಹೋಂ ಸ್ಟೇಯಲ್ಲಿ ಅಲ್ಲಲ್ಲಿ ತಮ್ಮಷ್ಟಕ್ಕೆ ಹರಟುತ್ತಿದ್ದ ಆ ಹುಡುಗ ಹುಡುಗಿಯರನ್ನೆಲ್ಲಾ ದರದರನೆ ಎಳೆದೊಯ್ದು ಒಂದೇ ರೂಮಿನಲ್ಲಿ ಕೂಡಿ ಹಾಕಿ ಅವರನ್ನು ಅರೆಬೆತ್ತಲೆಯಾಗಿಸಿ [ ಒಬ್ಬನಂತೂ ಹುಡುಗಿಯೊಬ್ಬಳ ಕೆಂಪು ಜಾಕೇಟನ್ನು ಅರೆಸ್ಟ್ ಆಗುವ ತನಕ ಹಾಕಿಕೊಂಡೇ ಇದ್ದ] ಅವರ ಬೆಲೆಬಾಳುವ ಮೊಬೈಲ್, ವಾಚ್, ಬಂಗಾರದ ಚೈನ್, ಹಣ ಮುಂತಾದುವುಗಳನ್ನು ಲಪಾಟಯಿಸಿದರು. ಇದೆಲ್ಲಾ ಆದ ಮೇಲೆ ಅವರನ್ನು ಕ್ಯಾಮಾರ ಮುಂದೆ ತಳ್ಳಿದರು. ಆಮೇಲಿನದೆಲ್ಲಾ ಪೈಶಾಚಿಕ ವಿಜೃಂಬಣೆ.

ಟೀವಿ ಕ್ಯಾಮಾರಾ ಯಾರ ಮೇಲೆ ಪೋಕಸ್ ಆಗಿತ್ತು? ಪೇಪರ್ ಗಳು ಯಾರ ಪೋಟೊವನ್ನು ಟ್ಯಾಗ್ ಲೈನ್ ತರ ಉಪಯೋಗಿಕೊಂಡವು ಎಂಬುದನ್ನು ನಾನು ಹೇಳಲು ಹೋಗುವುದಿಲ್ಲ. ಅದು ಸೂಕ್ಷ ಮನಸ್ಸಿನವರಿಗೆ ಅರ್ಥವಾಗುತ್ತದೆ. ಆದರೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ? ಇಡೀ ವ್ಯವಸ್ಥೆಯೇ ಸರಕಾರದ ಕೈಯಿಂದ ಹೇಗೆ ಜಾರಿ ಹೋಗಿದೆ? ನೈತಿಕ ಪೋಲಿಸರ ಹೇಗೆ ವಿಜೃಂಭಿಸುತ್ತಿದ್ದಾರೆ? ಅಲ್ಲಲ್ಲಿ, ಆಗಾಗ ಕೇಳಿ ಬರುತ್ತಿದ್ದ ಪ್ರತಿಭಟನೆಯ ಸಣ್ಣ ಸಣ್ಣ ಧ್ವನಿಗಳು ಈಗ ಸಂಪೂರ್ಣವಾಗಿ ಉಡುಗಿ ಹೋಗಲು ಕಾರಣವೇನಿರಬಹುದು ಎಂಬುದನ್ನು ದ.ಕನ್ನಡದಿಂದ ಹೊರಗಿರುವವರು ಈಗ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು..

ಇದೆಲ್ಲಾ ಹೋಗಲಿ, ನಮ್ಮರಾಜ್ಯದಲ್ಲೊಂದು ಮಹಿಳಾ ಆಯೋಗವಿದೆ. ಅದಕ್ಕೊಂದು ಅಧ್ಯಕ್ಷರಿದ್ದಾರೆ. ಮಹಿಳೆಯರ ಘನತೆಗೆ ಧಕ್ಕೆ ಆದಾಗ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅದು ಧಾವಿಸಿ ಬರಬೇಕು.  ಆದರೆ ಅಧ್ಯಕ್ಷೆಗೆ  ಶೋಭಾಕ್ಕನ ಜೊತೆ ನಂಜನಗೂಡಿಗೆ ತೆರಳಿ ಎಡಿಯೂರಪ್ಪನವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಲು ಪುರುಸೋತ್ತಿದೆ. ಆದರೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಒಳಹುನ್ನಾರಗಳನ್ನು ಅರ್ಥೈಸಿಕೊಂಡು ಅದಕ್ಕೆ ಸ್ಪಂದಿಸುವ ಸಹನೆಯಿಲ್ಲ. ಆಕೆ ಮೊನ್ನೆ ಮಂಗಳೂರಿನಲ್ಲಿ ಹೇಳಿದ್ದಾದರೂ ಏನು? ಹೋಂ ಸ್ಟೇಯಲ್ಲಿದ್ದ ವಿದ್ಯಾರ್ಥಿಗಳ ಚಾರಿತ್ರ್ಯದ ಬಗ್ಗೆಯೇ ಆಕೆ ಸಂಶಯವಂತೆ..ಆಕೆ ಮತ್ತೂ ಮುಂದುವರಿದು ಹೇಳುತ್ತಾರೆ. ಒಬ್ಬ ವಿದ್ಯಾರ್ಥಿಯ ತಾಯಿಯ ಮೇಲೆ ಕೂಡಾ ಕಳಂಕದ ಆರೋಪವಿದೆಯಂತೆ. ಆರೋಪಕ್ಕೇನು ಸ್ವಾಮಿ? ಪೋಲಿಸ್ ವ್ಯವಸ್ಥೆ ಮತ್ತು ಲೋಕಲ್ ಪೇಪರಿನವರು ಸೇರಿಕೊಂಡರೆ ಏನು ಬೇಕಾದರೂ ಮಾಡಬಹುದು.. ಇದೇ ಪೋಲಿಸರು ತಾನೇ  ತಾವೇ ಕಾಂಡೋಮ್ ಅನ್ನು ಬ್ಯೂಟಿ ಪಾಲರ್ ಒಂದರಲ್ಲಿ ಇಟ್ಟು ಅಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆಯೆಂದು ಬಿಂಬಿಸಲು ಪ್ರಯತ್ನಿಸಿದ್ದು..?!  
ಅಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಹುಡುಗ-ಹುಡುಗಿಯರನ್ನು ಹಿಗ್ಗಾ ಮುಗ್ಗಾ ಥಳಿಸಿ.ಅವರ ಸ್ವಾಭಿಮಾನಕ್ಕೆ, ಸಂವಿಧಾನದತ್ತವಾದ ಘನತಯ ಬಾಳ್ವೆಗೆ ಧಕ್ಕೆ ತಂದದ್ದು ನಿಜ ತಾನೇ? ಅದನ್ನು ನಾವೆಲ್ಲಾ ಪ್ರತ್ಯಕ್ಷ ಕಂಡಿದ್ದೇವಲ್ಲವೇ? ಅದು ಆ ಅಧ್ಯಕ್ಷರ ಅರಿವಿಗೆ ಬರಲಿಲ್ಲವೇ? ’ಅರಸನ ಅಂಕೆಯಿಲ್ಲದಿದ್ದರೆ ಹೀಗೆಯೇ ಆಗುತ್ತದೆ. ಆಳುವ ಪ್ರಭುಗಳು ಮೊದಲು ತಮ್ಮ ಜೀವನದಲ್ಲಿ ಕನಿಷ್ಟ ನೈತಿಕತೆಯನ್ನಾದರೂ ಉಳಿಕೊಳ್ಳಬೇಕು.ಆಗ ಪ್ರಜೆಗಳೂ ನೀತಿವಂತರಾಗುತ್ತಾರೆ.

ಈ ಸಂಸ್ಕೃತಿ ರಕ್ಷಕರಲ್ಲಿ ನನ್ನದೊಂದು ಪ್ರಶ್ನೆಯಿದೆ. ವೇಶ್ಯಾವಾಟಿಕೆಯನ್ನೇ ನಮ್ಮ ಸಂಸ್ಕೃತಿಯ ಒಂದು ಭಾಗವನ್ನಾಗಿ ಒಪ್ಪಿಕೊಂಡ ಉದಾತ್ತ ಸಂಸ್ಕೃತಿ ನಮ್ಮದು..ನಮ್ಮ ಪುರಾಣ ಕಾವ್ಯ ಪರಂಪರೆಯನ್ನೇ ನೋಡಿ.ಅಷ್ಟಾದಶಾವರ್ಣನೆಗಳಲ್ಲಿ ವೇಶ್ಯಾವಾಟಿಕೆಯ ವರ್ಣನೆಯೂ ಒಂದು. ಗಂಡಸರೇ, ನೀವಿಲ್ಲದಿದ್ದರೆ, ನಿಮ್ಮ ತೆವಲುಗಳಿಲ್ಲದಿದ್ದರೆ ಆ ಪುರಾತನ ವೃತ್ತಿ ಇಂದು ಹಲವು ಬಣ್ಣಗಳಲ್ಲಿ ಹೇಗೆ ವಿಜೃಂಭಿಸಲು ಸಾಧ್ಯವಿತ್ತು?

ಯುವಜನಾಂಗ ಬದುಕನ್ನು ಒಂದು ಉತ್ಸವ [ಸೆಲೆಬ್ರೇಷನ್] ವನ್ನಾಗಿ ನೋಡಲು,ಅನುಭವಿಸಲು ಬಯಸುತ್ತದೆ. ಅನುಭವಿಸಲಿ ಬಿಡಿ. ನಿಮಗ್ಯಾಕೆ ಹೊಟ್ಟೆಕಿಚ್ಚು? ಅಷ್ಟಕ್ಕೂ ಉತ್ಸವ ಎನ್ನುವುದು ಒಂದೆರಡು ದಿನದ ಮೋಜು ತಾನೇ? ಅನಂತರ ಇದ್ದೇ ಇದೆಯಲ್ಲಾ ಬದುಕಿನ ಗೋಳು. ಯಾರಿಗ್ಗೊತ್ತು.ಅದನ್ನು ಎದುರಿಸಲು ಅವರಿಲ್ಲಿ ತಾಲೀಮ್ ನಡೆಸುತ್ತಿರಬಹುದು..ಅವರು ನಿಜದ ರಂಗಕ್ಕೆ ಬರಲಿ, ಅಲ್ಲಿ ಅವರನ್ನು ಎದುರಿಸಿ ಗೆಲ್ಲಿ. ಹಾಗೆ ಗೆಲ್ಲಬೇಕಾದರೆ ನೀವು ಅವರಿಗಿಂತಲೂ ನೈತಿಕವಾಗಿ ಎತ್ತರದಲ್ಲಿರಿ ಎಂಬುದನ್ನು ಸಾಧಿಸಿ ತೋರಿಸಿ. ಅದು ನಿಮ್ಮಲ್ಲಿ ಇಲ್ಲದೆ ಹೋದರೆ ಈ ಕಳ್ಳದಾರಿಗಳೆಲ್ಲ ಯಾಕೆ? ನೀವು ನಿಮ್ಮನ್ನು, ನಿಮ್ಮ ಪುರುಷಾಧಿಪತ್ಯವನ್ನು ರಕ್ಷಿಸಿಕೊಳ್ಳಲು ನೀವೇ ನಮ್ಮ ರಕ್ತದಲ್ಲಿ ಬೆರೆಸಿದ  ಪೊಳ್ಳು ಮೌಲ್ಯಗಳನ್ನು ಈಗಿನ ಯುವ ಜನಾಂಗ ಪ್ರಶ್ನಿಸಿದರೆ ಅವರ ನಾಲಗೆಯನ್ನೇ ಬಲಿ ಪಡೆಯವ ಹುನ್ನಾರವೇಕೆ ಸ್ವಾಮಿ?

 ಜನಪ್ರಿಯ ಸಾಮಾಜಿಕ ಸಂಪರ್ಕ ತಾಣವಾದ ’ಪೇಸ್ ಬುಕ್’ ನಲ್ಲಿ ನಾವು ಮಹಿಳೆಯರೇ ಸೇರಿಕೊಂಡು ರಚಿಸಿಕೊಂಡ ವೇದಿಕೆ;ಗ್ರೂಪ್ ಒಂದಿದೆ. ಅದು ”ಅಂತಃಪುರ’. ಅಲ್ಲಿ ಸಖಿಯರಿಗೆ ಮಾತ್ರ ಪ್ರವೇಶ. ಅಲ್ಲಿ ನಾವು ನಿರ್ಭಯದಿಂದ ನಾವು ನಮ್ಮ ವ್ಯಯ್ಯಕ್ತಿಕ ಸಮಸ್ಯೆಯಿಂದ ಹಿಡಿದು ಅಂತರಾಷ್ಟ್ರೀಯ ಸಮಸ್ಯೆಗಳ ತನಕ ಚರ್ಚಿಸುತ್ತೇವೆ. ಅಲ್ಲಿ ಹಾಸ್ಯವಿದೆ; ನೋವಿದೆ, ನಲಿವಿದೆ., ವಿಮರ್ಶೆಯಿದೆ,ಪರಸ್ಪರ ಹೆಗಲಿದೆ. ಆದರೆ ನಾವೆಲ್ಲಾ ಮೌಖಿಕವಾಗಿ ಪರಿಚಿತರಲ್ಲ. ಹಾಗಾಗಿ  ಮೊನ್ನೆ ಆಗಸ್ಟ್ ೪ರ ಶನಿವಾರದಂದು ಬೆಂಗಳೂರಿನ ಜಯನಗರದ ಹೋಟೇಲ್ ಒಂದರಲ್ಲಿ  ನಾವು ಸುಮಾರು ಮೂವತ್ತು ಮಹಿಳೆಯರು ಒಟ್ಟು ಸೇರಿದೆವು. ನಾವಲ್ಲಿ ಸೇರುವುದೆಂದು ನಿರ್ಧರಿಸಿದ್ದಾಗ ಅಲ್ಲಿ ಭಾಗವಹಿಸಲು ಸಾಧ್ಯವಾಗದ ದೂರದಲ್ಲಿರುವ, ವಿದೇಶಗಳಲ್ಲಿರುವ ನಮ್ಮ ಸಖಿಯರು ನಮಗೆ ಎಚ್ಚರಿಕೆಯನ್ನೂ ನೀಡಿದ್ದರು ’ ಜಾಗ್ರತೆ ಕಣ್ರಮ್ಮಾ..ಅಲ್ಲಿಗೇನಾದರೂ ಸಂಸ್ಕೃತಿ ರಕ್ಷಕರು ದಾಳಿ-ಗೀಳಿ ಮಾಡಿಬಿಟ್ಟಾರು..!’
ಇದು ಎಷ್ಟು ನಿಜ ಅಲ್ವಾ? ನಿಜವಾಗಿಯೂ ನಮಗೆ ಭಯವಾಗುತ್ತಿದೆ. ನಮ್ಮ ಚಟುವಟಿಕೆಗಳನ್ನು ಯಾರೋ ಹದ್ದಿನ ಕಣ್ಣುಗಳಿಂದ ಗಮನಿಸುತ್ತಿದ್ದಾರೆ; ನಮ್ಮನ್ನು ನಿಯಂತ್ರಿಸುತ್ತಿದ್ದಾರೆ ಅಂದರೆ ನಾವು ಸಂಕೋಚ, ಭಯದಿಂದ ಮುದುಡಿ ಹೋಗುವುದಿಲ್ಲವೇ? ಅಲ್ಲಿ ಊಟ ಮಾಡುತ್ತಿದ್ದಾಗ ಮಂಗಳೂರಿನ ಸುದ್ದಿ ಚಾನಲ್ ಒಂದರ ವರದಿಗಾರರೊಬ್ಬರಿಂದ ನನಗೊಂದು ಪೋನ್ ಬಂತು. ಅವರು ಹೇಳುತ್ತಿದ್ದರು.’ಮೇಡಂ, ಇಲ್ಲಿ ದಾಳಿಯಲ್ಲಿ ಸಿಲುಕಿದ ಯಾವ ಹುಡುಗಿಯೂ ನಮಗೆ ಮಾತಾಡಿಸಲು ಸಿಗುತ್ತಿಲ್ಲ. ನೀವೇನಾದರೂ ಈಕಡೆ ಬರುವುದಿದೆಯಾ?’.

ಹೌದು ಸ್ವಾಮಿ. ಅವರು ನಿಮಗೇಕೆ ಸಿಗಬೇಕು? ಎಲ್ಲರೂ ಸೇರಿ ನಮ್ಮ ಚಾರಿತ್ರ್ಯ ವಧೆ ಮಾಡುತ್ತೀರಿಲ್ಲಾ.... ’ನೀವೆಲ್ಲಾ ನಮ್ಮ ಅಕ್ಕ-ತಂಗಿಯರು; ತಾಯಂದಿರು” ಎನ್ನುತ್ತಾ  ನಮ್ಮನ್ನು ಮಾರಾಟದ ಸರಕುಗಳಂತೆಯೋ, ಶೋಕೇಸಿನಲ್ಲಿರುವ ಬೊಂಬೆಗಳಂತೆಯೋ,ಸಂಸ್ಕೃತಿ ಕಲಶವನ್ನು ಹೊರುವ ದೇವದಾಸಿಯಂತೆಯೋ ಚಿತ್ರಿಸಿದರೆ..? ನಾವು ಯಾರಿಗಾದರೂ ಯಾಕೆ ಸಿಗಬೇಕು?
 ನಾವು ನಮ್ಮನ್ನು ತಮ್ಮ  ಸಹಜೀವಿಗಳು ಎಂಬಂತೆ ಕಾಣುವವರಿಗಾಗಿ ಕಾಯುತ್ತಿದ್ದೇವೆ.
 [ಮಂಗಳೂರಿನಿಂದ ಪ್ರಕಟವಾಗುವ ’ಸಂವೇದಿ’ ಎಂಬ ನಿಯತಕಾಲಿಕಕ್ಕಾಗಿ ಬರೆದಿರುವ ಲೇಖನ ]

Thursday, August 2, 2012

’ಕಡಲ ತಡಿಯ ತಲ್ಲಣ’ -ನಾವು ಹೀಗಿದ್ದೆವು, ಹೇಗಾಗಿ ಹೋದೆವು…?




   ಅದು ೨೦೦೯ರ ಜನವರಿ೨೪ರ ಶನಿವಾರದ ಇಳಿಸಂಜೆ.

ಮಂಗಳೂರಿನ ಬಲ್ಮಠದ ಸಮೀಪವಿರುವ ”ಅಮ್ನೇಷಿಯ’ ಪಬ್ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರು ಹಠಾತ್ತಾನೆ ದಾಳಿ ಮಾಡಿದರುಅಲ್ಲಿದ್ದ ಹುಡುಗಿಯರ ಮೇಲೆ ದೈಹಿಕ ಹಲ್ಲೆ ನಡೆಸಿ ಅವರನ್ನು ಅಕ್ಷರಶಃ ಅಟ್ಟಾಡಿಸಿಕೊಂಡು ಹೊಡೆದರುತಮ್ಮ ದಾಳಿಗೆ ಅವರು ಕೊಟ್ಟ ಕಾರಣ ಏನೆಂದರೆಪಬ್ ಸಂಸ್ಕೃತಿ ನಮ್ಮದಲ್ಲಅಲ್ಲಿ ಅಶ್ಲೀಲ ನೃತ್ಯ ನಡೆಯುತ್ತಿತ್ತುಹುಡುಗಿಯರು ಮಧ್ಯ ಸೇವಿಸುತ್ತಿದ್ದರು.; ಅರೆಬೆತ್ತಲೆ ನೃತ್ಯ ನಡೆಯುತ್ತಿತ್ತು ಎಂಬುದಾಗಿತ್ತುಆದರೆ ಕ್ಯಾಮಾರದೃಶ್ಯಗಳಲ್ಲಿ ದಾಖಲಾದಂತೆ  ಹೆಣ್ಣುಮಕ್ಕಳು ಮೈತುಂಬಾ ಬಟ್ಟೆ ಧರಿಸಿದ್ದರು.
ಅನಂತರದ ಬೆಳವಣಿಗೆಯಲ್ಲಿ ಸುದ್ದಿವಾಹಿನಿಗಳು ಇದನ್ನು ಮತ್ತೆ ಮತ್ತೆ ಪ್ರಸಾರ ಮಾಡಿ ರಾಷ್ಟ್ರಮಟ್ಟದ ಸುದ್ದಿಯಾಗಿಸಿದವು….

ಆಗ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ರೇಣುಕಅ ಚೌಧರಿಯವರು  ಘಟನೆಯನ್ನು ಉಲ್ಲೇಖಿಸಿ ’ಮಂಗಳೂರು ತಾಲೀಬಾನ್ ಗೊಳ್ಳುತ್ತಿದೆ’ ಎಂದು ಹೇಳಿಕೆ ನೀಡಿದರುಅದು ನನಗೆ ನೋವನ್ನುಂಟುಮಾಡಿತುಯಾಕೆಂದರೆ  ಅದು ನನ್ನ ಜಿಲ್ಲೆಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ.

 . ಹಿಂದೆ ಹೀಗಿರಲಿಲ್ಲಅದಕ್ಕಿರುವ ಸಮೃದ್ಧ ಜಾನಪದ ಪರಂಪರೆಯೇ ಅದಕ್ಕೆ ಸಾಕ್ಷಿಯಾಗಿತ್ತು.
 ಎಲ್ಲರಿಗೂ ಇರುವಂತೆ ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹವಿದೆಪಶ್ಚಿಮದಲ್ಲಿ ಸದಾ ಬೋರ್ಗರೆಯುವ ಕಡಲುಪೂರ್ವದಲ್ಲಿ ನಿತ್ಯ ಹರಿಧ್ವರ್ಣದ ಪಶ್ಚಿಮ ಘಟ್ಟಶ್ರೇಣಿಇವುಗಳನ್ನು ಬೆಸೆಯುವ ಜೀವ ನದಿಗಳುಸದಾ ಕ್ರಿಯಾಶೀಲವಾಗಿರುವ ಜನನಮ್ಮೇಲ್ಲರ ನಡೆ-ನುಡಿಯಲ್ಲಿ ಯಕ್ಷಗಾನದ ಲಯವಿದೆಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು.

ತುಳುನಾಡು ಎಂದು ಕರೆಯಲ್ಪಡುವ  ಜಿಲ್ಲೆಯಲ್ಲಿ ನಾಗಾರಾಧಾನೆ ಭೂತಾರಾಧನೆಯಂತಹ ಆರಾಧನಾ ಪದ್ಧತಿಯಿದೆಕಂಬಳಚೆನ್ನೆಮಣೆ ಕಾಯಿ ಕುಟ್ಟುವುದುಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ. ಆಟಿಕಳಂಜಚೆನ್ನುನಲಿಕೆಯಂತ ಜಾನಪದ ಕುಣಿತವಿದೆ. ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿಬಬ್ಬರ್ಯ ಭೂತವಿದೆ [ ಮುಸ್ಲಿಂ ಕಾರಣಿಕ ದೈವಗಳು ]. ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ. ಜೈನ-ಶೈವ ಸಂಗಮದ ಧರ್ಮಸ್ಥಳವಿದೆ. ಉಳ್ಳಾಲದ ದರ್ಗವಿದೆ. ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ  ದುರ್ಗಪರಮೇಶ್ವರಿ ದೇವಸ್ಥಾನವಿದೆ.

ಹಾಗಿದ್ದರೂ ನನ್ನ ಜಿಲ್ಲೆ ಸತತ ಕೋಮು ಗಲಭೆಗಳಿಂದ ತತ್ತರಿಸುತ್ತಿತ್ತುಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ  ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆಜನ ಭಯ ಭೀತರಾಗಿದ್ದಾರೆಇದರ ವಿರುದ್ಧ ಧ್ವನಿಯೆತ್ತುವವರ ಧ್ವನಿಯನ್ನು ಅಡಗಿಸಲಾಗುತ್ತಿತ್ತುಈಗ ಕೇಂದ್ರ ಸಚಿವೆಯೊಬ್ಬರು ಟೀವಿ ವರದಿಗಳನ್ನು ನೋಡಿ ನಮ್ಮನ್ನು ತಾಲೀಬಾನಿಗಳು ಎಂದು ಕರೆಯುತ್ತಿದ್ದಾರೆ….ಹಾಗಾಗಿ ನಾನು ’ನಾವು ಹಾಗಿಲ್ಲ’ ಎಂಬ ಲೇಖನವೊಂದನ್ನು ಬರೆದು ಕನ್ನಡಪ್ರಭಾ ಸಾಪ್ತಾಹಿಕ ಪುರವಣಿಗೆ ಕಳುಹಿಸಿಕೊಟ್ಟೆಅದು ಅಲ್ಲಿ ಪ್ರಕಟವಾಯ್ತುಅದನ್ನು ಓದಿದ ದೆಹಲಿಯಲ್ಲಿರುವ ಜಾನಪದ ವಿಧ್ವಾಂಸಅಮೇರಿಕನ್ ಇನ್ಸ್ ಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ ಉದೋಗಸ್ಥರಾಗಿರುವ ಪುರುಷೋತ್ತಮ ಬಿಳಿಮಲೆ ನನ್ನನ್ನು ಸಂಪರ್ಕಿಸಿನಮ್ಮ ಜಿಲ್ಲೆ ಹಾಗಿರಲಿಲ್ಲ ಎಂಬುದನ್ನು ನಾವು ಬೇರೆಯವರಿಗೆ ಹೇಳಬೇಕಲ್ಲಅದಕ್ಕಾಗಿ ಏನು ಮಾಡಬಹುದುಎಂದು ಪರಸ್ಪರ ಸಮಾಲೋಚನೆಯಲ್ಲಿ ತೊಡಗಿದೆವು

ಆಗ ಇನ್ನೊಂದು ಘಟನೆ ನಡೆಯಿತುಪೆ೧೩ರಂದು ಮಂಗಳೂರು ನಗರಪಾಲಿಕೆ ರೇಣುಕಾ ಚೌಧರಿಗೆ ನೋಟಿಸ್ ಜಾರಿ ಮಾಡಿತುಸಚಿವೆಯ ಬೇಜಾವಾಬ್ದಾರಿ ಹೇಳಿಕೆಯನ್ನು ಆಕ್ಷೇಪಿಸಿ ಆಕೆ ಮಂಗಳೂರು ಜನರ ಕ್ಷಮೆ ಕೇಳಬೇಕು ಎಂದು ತಾಖೀತು ಮಾಡಿದರಲ್ಲದೆ ಅದಕ್ಕಾಗಿ ಮೂರು ದಿನ ಗಡುವು ನೀಡಿಹಾಗೆ ಮಾಡದಿದ್ದರೆ ಕ್ರಿಮಿನಲ್ ಮೊಕ್ಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿತ್ತುಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಆಗ ತಾನೇ ಮೊತ್ತ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತುಹಾಗ್ಯೇ ಮಂಗಳೂರು ಮಹಾನಗರಪಾಲಿಕೆ ಬಿಜೆಪಿ ಆಡಳಿತದಲ್ಲಿತ್ತುಹಾಗಾಗಿಯೇ ಮೇಯರ್ ಗಣೇಶ್ ಕೇಂದ್ರದಲ್ಲಿರುವ ಕಾಂಗ್ರೇಸ್ ನೇತೃತ್ವದ ಸಚಿವರೊಬ್ಬರಿಗೆ ನೋಟಿಸ್ ಕೊಡುವ ದಾರ್ಷ್ಟ್ಯವನ್ನು ತೋರಿದ್ದರು.
ಇದೇ ತಿಂಗಳಿನಲ್ಲಿ ಇನ್ನೊಂದು ಘಟನೆ ನಡೆಯಿತುಕರಾವಳಿ ಅಲೆ ಸಂಪಾದಕ ಬಿ.ವಿ ಸೀತಾರಾಂ ಅವರನ್ನು ಬಂದಿಸಿದ ಪರಿ ಮತ್ತು ಅವರನ್ನು ನಡೆಸಿಕೊಂಡ ರೀತಿಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರಕಾರಕ್ಕೆ ಹತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿತು.

ಇದೆಲ್ಲಾ ಅಂದಿನ ವರ್ತಮಾನದ ವಿಷಯಗಳಾದವು..
ಆದರೆ ಒಳಗೊಳಗೇ ಕುದಿಯುತ್ತಿದ್ದ ನನ್ನ ಜಿಲ್ಲೆಯ ಒಳಗುದಿ ನನಗೆ ಅಲ್ಲಿಯ ಸ್ಥಳೀಯ ಪತ್ರಿಕೆಗಳಿಂದ ತಿಳಿಯುತ್ತಿತ್ತು.ಬೆಂಗಳೂರಿನಲ್ಲಿ ಕುಳಿತು ಅವುಗಳನ್ನು ಓದುತ್ತಿದ್ದರೆ ಊರಿಗೆ ಹೋಗಿ ಬಂದ ಅನುಭವಾಗುತ್ತಿತ್ತುಬಿಟುವಿನ್ ದಿ ಲೈನ್ಸ್ ಓದುವವರಿಗೆ ಅಲ್ಲಿ ಹಲವಾರು ವಿಷಯಗಳು ಗೋಚರಿಸುತ್ತಿದ್ದವುಆದರೆ ಬರಬರುತ್ತಾ ನನ್ನ ಗಮನ ಸೆಳೆಯುತ್ತಿದ್ದ ವಿಷಯ ಅಂದ್ರೆ ಅಲ್ಲಿ ಹಿಂದು-ಮುಸ್ಲಿಂ ಸಾಮರಸ್ಯವನ್ನು ಕದಡುವುದಕ್ಕೆ ಕಾರಣವಾಗುತ್ತಿದ್ದ ಕ್ಷುಲಕವೆನಿಸುವ ವಿಷಯಗಳು.
.ಕನ್ನಡದಲ್ಲಿ ಕೋಮು ಭಾವನೆಯ ಪತ್ತೇದಾರಿ ಕೆಲಸ ಭಾರಿ ದೊಡ್ಡ ಪ್ರಮಾಣ್ದಲ್ಲಿದೆಒಂದು ಹುಡುಗ ಹುಡುಗಿ ಪರಸ್ಪರ ಮಾತಾಡುತ್ತಿದ್ದರೆಅವರ ಜಾತಿ ಪತ್ತೆ.ಮಾಡುವದನ ಸಾಗಾಟ ನಡೆಯುತ್ತಿದ್ದರೆಅದು ಕಸಾಯಿಖಾನೆಗೇ ತೆದುಕೊಂಡು ಹೋಗಲಾಗುತ್ತಿದೆ ಎಂದು ಬಿಂಬಿಸುವ ಮತ್ತು ಅದಕ್ಕೆ ತಕ್ಕ ಶಾಸಿಯನ್ನು ಮಾಡುವ ಕೆಲಸ ಇವರದ್ದುಇದರ ಮುಂದುವರಿಕೆಯೇ ’ನೈತಿಕ ಪೋಲಿಸ್’ ಜಾಲಇದು ಹಿಂದುಗಳಲ್ಲೂ ಇದೆಮುಸ್ಲಿಂರಲ್ಲೂ ಇದೆಹಾಗಾಗಿಯೇ ಕೋಮು ಪ್ರಜ್ನೆ ಎಂಬುದು ಈಗ ಬಾಲ್ಯದಿಂದಲೇ ಮಕ್ಕಳ ಮನಸ್ಸಿನಲ್ಲಿ ಬೇರೂರುತ್ತಲಿದೆ.

ನನ್ನ ಅಥವಾ ದೆಹಲಿಯಲ್ಲಿರುವ ಬಿಳಿಮಲೆಯ ಬಾಲ್ಯದಲ್ಲಿ ಹೀಗಿರಲಿಲ್ಲಸಾಮನ್ಯವಾಗಿ ನಾವು ಒಂಟೊಂಟಿ ಮನೆಗಳಲ್ಲಿ ಬೆಳೆದವರುಅಡಿಕೆ ಅಲ್ಲಿಯ ಮುಖ್ಯ ವಾಣಿಜ್ಯ ಬೆಳೆಅದನ್ನು ಖರೀದಿ ಮಾಡಲು ನಮ್ಮ ಮನೆಗೆ ಬ್ಯಾರಿಗಳು ಬರುತ್ತಿದ್ದರುಮಳೆಗಾಲದಲ್ಲಿ ನಮಗೆ ಅಗತ್ಯವಾಗಿದ್ದ ದುಡ್ಡಿನ ಸಹಾಯ ಮಾಡಿ ದೀಪಾವಳಿಯ ಸಮಯದಲ್ಲಿ ಅಡಿಕೆಯನ್ನು ಕೊಂಡೊಯ್ಯುತ್ತಿದ್ದರುಎಲ್ಲವೂ ಬಾಯಿಮಾತಿನ ಮೇಲೆ ನಡೆಯುವ ಸೌಹಾರ್ಧ ಸಂಬಂಧ ಅದಾಗಿತ್ತು.. ಮಧ್ಯೆ ನಮಗೆ ಬೇಕಾದ ಕೆಲವು ವಸ್ತುಗಳನ್ನು ಅವರು ಮಂಗಳೂರಿನಿಂದ ತಂದುಕೊಡುತ್ತಿದ್ದರುಸೇಕುಂಝಿ ಬ್ಯಾರಿ ಎಂಬುವರು ನನಗೆ ನನ್ನ ಮೊದಲ ವಾಚ್ ತಂದುಕೊಟ್ಟವರುಅವರೇ ನಮಗೆ ಮಂಗಳೂರಿನಿಂದ ರುಚಿಯಾದ ಓಲೆ ಬೆಲ್ಲವನ್ನು ತಂದುಕೊಡುತ್ತಿದ್ದರುಅಂಟುವಾಳ ಕಾಯಿ ಕೊಟ್ಟರೆ ವರ್ಷಕ್ಕಾಗುವಷ್ಟು ಸೋಪುಗಳನ್ನು ತಂದು ಕೊಡುತ್ತಿದ್ದರುಇಂತಹ  ಬಳೆಗಾರ ಚೆನ್ನಯ್ಯನಂತಹ’ ಆರೇಳು ಬ್ಯಾರಿಗಳು ನಮ್ಮೂರಲ್ಲಿದ್ದರುನನ್ನಪ್ಪನ ಆಪ್ತ ಸೇಹಿತರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು.

 ಕೋಮುಸಂಘರ್ಷ ಮತ್ತು ಅದರಿಂದಾಚೆ ವಿಸ್ತರಿದ ಸ್ತ್ರೀ ದೌರ್ಜನ್ಯ..ಇವೆಲ್ಲವೂ ನನ್ನ ಮತ್ತು ಬಿಳಿಮಲೆಯ ನಿರಂತರ ಮಾತುಕತೆಯಲ್ಲಿ ಒಂದು ನಿರ್ದಿಷ್ಟ ರೂಪವನ್ನು ಪಡೆಯುತ್ತಾ.ಕನ್ನಡದ ಬಹುಮುಖಿ ಸಂಸ್ಕೃತಿ ಏಕಮುಖಿ ಸಂಸ್ಕೃತಿಯೆಂಬಂತೆ ಬಿಂಬಿತವಾಗುತ್ತಿರುವ  ಹೊತ್ತಿನಲ್ಲಿ ನಮ್ಮ ಜಿಲ್ಲೆಯ ಬಹುಮುಖ ಸಂಸ್ಕೃತಿಯನ್ನು ಪರಿಚಯಿಸುವ ಪುಸ್ತಕವನ್ನು ಹೊರತರುವ ಆಲೋಚನೆಯೊಂದು ನಮ್ಮಲ್ಲಿ ಮೂಡಿತುಅದರ ಫಲವಾಗಿ ಮೂಡಿ ಬಂದ ಪುಸ್ತಕವೇ ’ಕಡಲ ತಡಿಯ ತಲ್ಲಣ’
ಪುಸ್ತಕ ತರುವುದರ ಬಗ್ಗೆ ನಿರ್ಧರಿಸಿಯಾಗಿತ್ತುಆದರೆ ಲೇಖನಗಳನ್ನು ಯಾರಿಂದ ಬರೆಸಬೇಕುಯಾವ ಹಿನ್ನೆಲೆಯಿಂದ ಅವರಲ್ಲಿ ಲೇಖನಗಳನ್ನು ಕೇಳಬೇಕು ಎಂದು ಯೋಚಿಸಿದಾಗ ನಮಗೆ ಅನ್ನಿಸಿದ್ದುಪಾರ್ಲಿಮೆಂಟ್ ಚುನಾವಣೆ ಹತ್ತಿರದಲ್ಲಿದೆನಮ್ಮಲ್ಲಿ ಹೆಚ್ಚು ಸಮಯವಿಲ್ಲಹಾಗಾಗಿ ತುಳುನಾಡಿನ ಬಹುಮುಖ ಸಂಸ್ಕೃತಿಯನ್ನು ಪ್ರೀತಿಸಿದ ಮತ್ತು ಇಲ್ಲಿಯ ಕೋಮು ಸೌಹಾರ್ಧತೆಗೆ ಸಂಬಂಧಪಟ್ಟಂತೆ ಕರಾವಳಿಯ ಸೃಜನಶೀಲ ಸಾಹಿತಿ-ಕಲಾವಿದರ ಮನಸು ಹೇಗೆ ಮಿಡಿದಿದೆಪ್ರತಿಕ್ರಿಸಿದೆ ಎಂಬುದನ್ನು ಒಂದೆಡೆಗೆ ತರುವದಾಖಲಿಸುವ ಪ್ರಯತ್ನ ಮಾಡುವುದೆಂದು ಉದ್ದೇಶದಿಂದ ನಾವು ಲೇಖನಗಳನ್ನು ಹುಡುಕತೊಡಗಿದೆವುಆಗ ನಮಗೆ ಗೊತ್ತಾಗಿದ್ದು ಒಂದು ವೇಳೆ ಯಾರಾದರೂ ತುಳುನಾಡನ್ನು ವರ್ತಮಾನದ ನೆಲೆಯಲ್ಲಿ ನಿಂತು ಅಭ್ಯಾಸಅಧ್ಯಯನ ಮಾಡುವುದಾದರೆ ಸರಿಯಾದ ಆಕರ ಗ್ರಂಥಗಳೇ ಇಲ್ಲವೆಂದುಬಿಡಿ ಬಿಡಿ ಬರಹಗಳು ಸಿಗುತ್ತವೆಆದರೆ ಸಮಗ್ರಹ ಚಿತ್ರಣ ಸಿಗುವುದಿಲ್ಲಹಾಗಾಗಿ ನಾವು ತರಲಿರುವ ನಮ್ಮ ಪುಸ್ತಕಕ್ಕೆ ಸ್ಪಷ್ಟವಾದ ಉದ್ದೇಶ ನಮಗೆ ಸಿಕ್ಕಂತಾಯಿತುತುಳುನಾಡನ್ನು ಸಾಮಾಜಿಕಆರ್ಥಿಕ ಮತ್ತು ಸಾಂಸ್ಕೃತಿಕ ನೆಲೆಯಿಂದ ಅಧ್ಯಯನ ಮಾಡುತ್ತಾವರ್ತಮಾನದ ಜೊತೆ ಮುಖಾಮುಖಿಯಾಗಿಸುವ ಪ್ರಯತ್ನ ನಮ್ಮದಾಗಿತ್ತು ಹಿನ್ನೆಲೆಯಲ್ಲಿ ನಾವು ಮೂವತ್ತಾರು ಬರಹಗಳನ್ನು ಆಯ್ಕೆ ಮಾಡಿಕೊಂಡೆವು.

ನಮ್ಮ ತುಳುನಾಡು ಹೇಗೆ ಬಹುಮುಖಿ ಸಂಸ್ಕೃತಿಯನ್ನು ಹೊಂದಿತ್ತೋ ಹಾಗೆಯೇ ಹಾಗೆಯೇ ನಮ್ಮ ಪುಸ್ತಕವೂ ಇರಲಿ ಎಂಬ ಉದ್ದೇಶದಿಂದ ನಾವು ಇದರಲ್ಲಿ ಲೇಖನಕಥೆಕವನಮುನ್ನುಡಿಪತ್ರಬ್ಲಾಗ್ ಬರಹಅನುಭವ ಕಥನವರದಿ ಎಲ್ಲವನ್ನೂ ಬಳಸಿಕೊಂಡಿದ್ದೇವೆಕೇವಲ ಒಂದು ವಾರದ ಅವಧಿಯಲ್ಲಿ ಇದನ್ನೆಲ್ಲಾ ಸಂಗ್ರಹಿಸಿ ಲೇಖಕರ ಒಪ್ಪಿಗೆಯನ್ನು ಪಡೆದುಕೊಂಡೆವುಕೇವಲ ನಮ್ಮವರಷ್ಟೆ ಯಾಕೆ ? ಕೆಲವು ನೆಂಟರ ಅಭಿಪ್ರಾಯವನ್ನೂ ಕೇಳೋಣ ಎಂದುಕೊಂಡು.’ಘಟ್ಟದ ಮೇಲಿನಿಂದ ನಿಂತು ಕೆಳಗಿರುವ  ಕರಾವಳಿಯನ್ನು ನೋಡಿದಾಗ ನಿಮಗೇನನ್ನಿಸುತ್ತಿದೆ? ಎಂದು ಕೇಳಿ ಲೇಖನವನ್ನು ಪಡೆದುಕೊಂಡು ಎಲ್ಲವನ್ನೂ ಪೆ.೨೮ಕ್ಕೆ ಪ್ರಕಾಶಕರ ಕಯ್ಯಲ್ಲಿ ಕೊಟ್ಟು ಮಾರ್ಚ್ ೨೮ಕ್ಕೆ ಪುಸ್ತಕ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆವು.
  ’ಬ್ಯಾರಿ ಸಮಾಜ ಮತ್ತು ಶಿಕ್ಷಣ’ ಎಂಬ ಗಂಭೀರ ಬರಹದಿಂದ ’ಭಯೋತ್ಪಾದನೆ ಏನೆಂಬುದು ತಿಳಿಯಬೇಕೆಬನ್ನಿ ಮಂಗಳೂರಿಗೆ’ ಎಂಬ ಪ್ರತ್ಯಕ್ಷ ವರದಿಯತನಕ  ಪುಸ್ತಕದಲ್ಲಿ ಒಟ್ಟು ೩೬ ಬರಹಗಳಿವೆಪುಸ್ತಕದ ಮುಖಪುಟವನ್ನು ತುಂಬಾ ಅರ್ಥಪೂರ್ಣವಾಗಿ ರಚಿಸಿಕೊಟ್ಟವರು ನಮ್ಮ ಜಿಲ್ಲೆಯವರೇ ಆದ ಸುಧಾಕರ ದರ್ಭೆ.

ನಮ್ಮ ಗೌರವಾನ್ವಿತ ಲೇಖಕರು ಮತ್ತು ಅವರು ಬರೆದ ಲೇಖನ ಹೀಗಿದೆ;
೧. ’ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆಯೇ?”-ಡಾ.ಪುರುಷೋತ್ತಮ ಬಿಳಿಮಲೆ.
೨.ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು-ದಿನೇಶ್ ಅಮೀನ್ ಮಟ್ಟು.
೩.ಬುದ್ಧಿವಂತರ ಜಿಲ್ಲೆಯಲ್ಲಿ ಮೂಕಜ್ಜಿಗೆ ಕನಸುಗಳಿಲ್ಲ-ಡಾ. ಮುಜಾಫರ್ ಅಸ್ಸಾದಿ.
೪.ನಗಣ್ಯವಾಗುತ್ತಿರುವ ದ.ಕ.ಜಿಲ್ಲೆ-ವಡ್ಡರ್ಸೆ ರಘುರಾಮ ಶೆಟ್ಟಿ.
೫.ನಾವು ಹಾಗಿಲ್ಲ ಮಾರಾಯ್ರೇ!-ಉಷಾಕಟ್ಟೆಮನೆ.
೬.ಭಯೋತ್ಪಾದನೆ ಏನೆಂದು ತಿಳಿಯಬೇಕೆ? ಬನ್ನಿ ಮಂಗಳೂರಿಗೆ-ಗುಲಾಬಿ ಬಿಳಿಮಲೆ.
೭. ಮಂಗಳೂರು ಎಂಬ ಭಾವನೆ-ಬಾಲಕೃಷ್ಣ ನಾಯಕ್.
೮. ಬಹು ಭಾಷೆಗಳ ಆಡುಂಬೊಲ-ಎಂ. ಮರಿಯಪ್ಪ ಭಟ್ಟ.
೯.ತುಳುನಾಡು ಬಹುಧರ್ಮಗಳ ಬೀಡು.-ಎಸ್.ಡಿ.ಶೆಟ್ಟಿ.
೧೦.ಸಾಂಸ್ಲೃತಿಕ ಚಹರೆ;ಕೆಲವು ಟಿಪ್ಪಣಿಗಳು-ಅಮೃತ ಸೋಮೇಶ್ವರ.
೧೧. ನನ್ನ ಬಾಲ್ಯದ ದೀಪಾವಳಿ-ಫಕೀರ್ ಮಹಮ್ಮದ್ ಕಟ್ಪಾಡಿ.
೧೨. ತುಳುನಾಡಿನ ಶಕ್ತಿಶಾಲಿ ಮಹಿಳೆಯರು-ಡಾ.ಗಾಯತ್ರಿ ನಾವಡ.
೧೩.ಕೊಂಕಣಿಯೊಬ್ಬನ ಸ್ವಜನ ಪ್ರೇಮ-ಗುರು ಬಾಳಿಗ.
೧೪.ಗೇಣಿದಾರನ ಏಣಿಯಾಟ-ಡಾ.ಎಚ್.ನಾಗವೇಣಿ.
೧೫.ಪಡ್ನೂರಿನ ಪಾಠಗಳು-ಎಸ್.ಆರ್. ವಿಜಯಶಂಕರ್.
೧೬.ಸಂಸ್ಕೃತಿ ಮತ್ತು ವಿಕೃತಿ-ಕೆ.ವಿ.ತಿರುಮಲೇಶ್.
೧೭.ಅಸ್ಪೃಶ್ಯ ಬಣ್ಣಗಳು-ಶ್ರೀನಿವಾಸ ಕಾರ್ಕಳ.
೧೮. ಮತ್ತೆ ಪಡೆದ ಶಕುಂತಲೆ ಮತ್ತು ತೋಡಿದ ಬಾವಿಗಳು.
೧೯.ಸಮುದ್ರದ ಅಲೆ ನಿಲ್ಲಬಾರದು-ಭಾಸ್ಕರ ಹೆಗಡೆ.
೨೦.ನೆಂಟನೊಬ್ಬನ ಬಿಕ್ಕಳಿಕೆ- ಜಿ.ಎನ್. ಮೋಹನ್
೨೧ ಓಟಿಗೋ? ಒಗ್ಗಟ್ಟಿಗೋ?- ಯು.ಆರ್.ಅನಂತಮೂರ್ತಿ.
೨೨.ಪ್ರವಾದಿಯ ಕನಸು-ಬಿ.ಎಂ.ಬಶೀರ್.
೨೩.ಒಂದು ತುಂಡು ಗೋಡೆ-ಬೊಳುವಾರು ಮಹಮ್ಮದ್ ಕುಂಝಿ.
೨೪.ಅಂಬೆಡ್ಕರ್ ಮತ್ತು ನನ್ನೂರ ಕೊರಗನ ಆನೆಕಾಲು-ಆರ್ಕೆ ಮಣಿಪಾಲ.
೨೫.ಒಂದು ಸುಖಕ್ಕೆ ಹತ್ತು ದುಃಖ-ಶಿವರಾಮ ಕಾರಂತ.
೨೬.ಶ್ರೀ ಮುಖ-ಕಯ್ಯಾರ ಕಿಝಂಣ ರೈ.
೨೭.ಅರ್ಘ್ಯ-ಎಂ.ವ್ಯಾಸ.
೨೮.ನಿರಂಜನರ ಪತ್ರಗಳು.
೨೯.ಮುಸ್ಲಿಂ ಬುದ್ಧಿಜೀವಿಗಳೇ ಎಚ್ಚೆತ್ತುಕೊಳ್ಳಿ!-ಡಿ.ಎಸ್. ನಾಗಭೂಷಣ್.
೩೦.ಮುಸ್ಲಿಂ ಸಂವೇದನೆ ಮತ್ತು ನಾನು-ಸಾರಾ ಅಬೂಬಕ್ಕರ್.
೩೧. ಬ್ಯಾರಿ ಸಮಾಜ ಮತ್ತು ಶಿಕ್ಷಣ- ಬಿ.ಎಮ್.ಇಚ್ಲಂಗೋಡು.
೩೨.ಎಣ್ಣೆ ಹೊಯ್ಯಮ್ಮ ದೀಪಕ್ಕೆ!-ಸೇಡಿಯಾಫ್ ಕೃಷ್ಣಭಟ್.
೩೩.ಕೋಮು ಸಂಘರ್ಷವಾದ ಆರ್ಥಿಕ ಸಂಘರ್ಷ…!-ಶಶಿಧರ್ ಭಟ್
೩೪.ಕರಾವಳಿ ಕೋಮು ಸಂಘರ್ಷದ ಸುತ್ತ- ಡಾ.ವಿ.ಲಕ್ಷ್ಮೀನಾರಾಯಣ.
೩೫.ಮತಧರ್ಮ ಮತ್ತು ರಾಜಕೀಯ-ಜಿ.ರಾಮಕೃಷ್ಣ.
೩೬. ಅಬ್ದುಲ್ಲನ ಕೈಲಾಸ-ಸುದೇಶ್ ಮಹಾನ್.

’ಕಡಲ ತಡಿಯ ತಲ್ಲಣಕ್ಕೆ ನಾವು ಬರೆದ ಮುನ್ನುಡಿ ಹೀಗಿತ್ತು ;
”ಕರಾವಳಿ ಕರ್ನಾಟಕದ ಕೆಲವು ಭಾಗಗಳು ಈಗ ಹೊತ್ತಿ ಉರಿಯುತ್ತಿವೆದೇಶದ ಎಲ್ಲಾ ಕಡೆಯ ಜನರ ಆದರಕ್ಕೆ ಒಳಗಾಗಿದ್ದ  ಭಾಗ ಈಗ ಕ್ಷುಲಕ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆಅನೇಕ ಭಾಷೆಸಂಸ್ಕೃತಿಗಳ ನೆಲೆವೀಡಾದ ಕಡಲಕರೆಯ ನೆಲ ಈಗ ಕೆಲವು ನಿರ್ಧಿಷ್ಟ ಶಕ್ತಿಗಳ ಕೈಯ್ಯಲ್ಲಿ ಏಕರೂಪತೆಯನ್ನು ಪಡೆಯುವತ್ತ ಹೆಜ್ಜೆ ಹಾಕುತ್ತಿದೆದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುರೂಪತೆಯನ್ನು ನಾಶ ಮಾಡುವುದೆಂದರೆ ಅಲ್ಲಿನ ಸಂಸ್ಕ್ಲೃತಿಯನ್ನು ಸಾಯಿಸುವುದೆಂದೇ ಅರ್ಥಈಗ ನಡೆಯುತ್ತಿರುವುದನ್ನು ನೋಡಿದರೆ ಮನಸ್ಸು ಮುದುಡಿಕೊಳ್ಳುತ್ತದೆ.. ಖೇದವೆನಿಸುತ್ತದೆ….’ನಾವು ಹಾಗಿಲ್ಲವಲ್ಲ’ ಎಂದು ಯೋಚಿಸುತ್ತೇವೆಇಂತಹ ಬಿಕ್ಕಟ್ಟಿನ ಕ್ಷಣಗಳಲ್ಲಿ ಏನಾದರೂ ಮಾಡಬೇಕಲ್ಲ ಎಂದು ಯೋಚಿಸುತ್ತಿದ್ದಾಗ ಹೊಳೆದದ್ದೇ”ಕಡಲ ತಡಿಯ ತಲ್ಲಣ’ ಇದು ಕರಾವಳಿಯ ಬಹು ಸಂಸ್ಕೃತಿಯ ಲೇಖನಗಳ ಸಂಕಲನ….ತುಳುನಾಡಿನ ಕ್ರಿಯಾಶೀಲ ಮನಸ್ಸುಗಳು ಇತ್ತೀಚೆಗೆ ಸಂಭವಿಸುತ್ತಿರುವ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಿವೆ.ಮತ್ತು ಇಲ್ಲಿ ಬಹುಸಂಸ್ಕೃತಿಯ ನೆಲೆಗಳು ಹೇಗೆ ವಿಸ್ತಾರವಾಗಿ ಮತ್ತು ಆಳವಾಗಿ ನೆಲೆಯೂರಿವೆ ಎಂಬುದನ್ನು ದಾಖಲಿಸುವ ಪ್ರಯತ್ನ ನಮ್ಮದುಇದು ತುಳುನಾಡನ್ನು ತಿಳಿಯ ಬಯಸುವವರಿಗೆ ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಗೆ ಕೈಪಿಡಿಯಾಗಬಹುದೆಂಬುದು ನಮ್ಮ ನಂಬಿಕೆ.
ಉಳಿದಂತೆ ನಾವು ನಿಮಗೆ ಏನನ್ನು ದಾಟಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂಬುದನ್ನು  ಸಂಕಲನವೇ ಹೇಳುತ್ತದೆ.

 ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿಗಳಲ್ಲಿ ಏಕಕಾಲದಲ್ಲಿ ಪುಸ್ತಕ ಬಿಡುಗಡೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದ್ದರೂ ಬೆಂಗಳೂರಿನಲ್ಲಿ ಮತ್ತು ದೆಹಲಿಯಲ್ಲಿ ಮಾತ್ರ ಬಿಡುಗಡೆ ಮಾಡಲು ಸಾಧ್ಯವಾಯಿತು. ಬೆಂಗಳೂರಿನಲ್ಲಿ ಸಂಸ ಬಯಲು ರಂಗಮಂದಿರದಲ್ಲಿ ನಡೆದ ಈ ಬಿಡುಗಡೆ ಸಮಾರಂಭವನ್ನು ಭಾರತ ಯಾತ್ರ ಕೇಂದ್ರದ ಸಂಚಾಲಕರಾದ ನಾಗರಾಜ ಮೂರ್ತಿಯವರು ’ಸಾಹಿತಿ ಕಲಾವಿದರ ಬಳಗ’ದ ನೆರವಿನೊಡನೆ ಅರ್ಥಪೂರ್ಣಾವಾಗಿ ನಡೆಸಿಕೊಟ್ಟರು. ಆಗ ಅಲ್ಲಿಗೆ ಬಂದ ಸಹೃದಯಿಗಳ ಸಮೂಹವನ್ನು ನೋಡಿ ನಿಜಕ್ಕೂ ನನಗೆ ಆಶ್ಚರ್ಯ ಮತ್ತು ಆನಂದ ಉಂಟಾಗಿತ್ತು. ದೆಹಲಿಯಲ್ಲಿರುವ ಬಿಳಿಮಲೆಯ ಮಾರ್ಗದರ್ಶನದಲ್ಲಿ ಬರಹಗಳ ಆಯ್ಕೆ ಮಾಡಿ ಪ್ರಕಾಶಕರಿಗೆ ಅದನ್ನು ತಲುಪಿಸುವಲ್ಲಿಯವರೆಗೆ ಎಲ್ಲವನ್ನೂ ಒಂದೇ ಉಸಿರಿನಲ್ಲೆಂಬಂತೆ ಮಾಡಿ ಮುಗಿಸಿದರೂ ಅನಂತರದ ನನ್ನ ಅನುಬವಗಳು  ಸಂತಸವಾದುದಲ್ಲಹಾಗಾಗಿ ಪುಸ್ತಕವನ್ನು ಎಲ್ಲರಿಗೂ ತಲುಪಿಸಲಾಗಲಿಲ್ಲ. ಅದಕ್ಕೆ ನಮಗೆ ಸಿಕ್ಕಿದ ಪ್ರಕಾಶಕರು ಕಾರಣಆದರೂ ಕೆಲವು ಸಂಶೋಧನಾ ವಿದ್ಯಾರ್ಥಿಗಳುಗಂಭೀರ ಓದುಗರು ಅದನ್ನು ಮೆಚ್ಚಿ ಮಾತಾಡುವಾಗ ನಮ್ಮಲ್ಲಿ ಸಾರ್ಥಕ್ಯದ ಭಾವನೆ ಮೂಡುತ್ತದೆ.

ಇನ್ನು ವರ್ತಮಾನಕ್ಕೆ ಬರುವುದಾದರೆ….
ಮೊನ್ನೆ ಜುಲೈ ೨೮ ಶನಿವಾರಸಂಜೆಮಂಗಳೂರಿನ ’ಮಾರ್ನಿಂಗ್ ಮಿಸ್ಟ್’ ಹೋಂ ಸ್ಟೇ.
 ಒಂದಷ್ಟು ಹುಡುಗ-ಹುಡುಗಿಯರು ಬರ್ತ್ ಡೇ ಪಾರ್ಟಿ ಮಾಡುತ್ತಿದ್ದರುಆಗ ಅಲ್ಲಿಗೆ ಏಕಾಏಕಿ ನುಗ್ಗಿದ ಒಂದಷ್ಟು ಪಾನಮತ್ತ ಹುಡುಗರು ಹುಡುಗಿಯರ ಮೇಲೆ ದೈಹಿಕ ಹಲ್ಲೆ ನಡೆಸಿಬಟ್ಟೆಗಳನ್ನು ಕಿತ್ತೆಸೆದುಬ್ಲೇಡಿನಿಂದ ಗಾಯಮಾಡಿ ಮನಬಂದಂತೆ ಅವರನ್ನು ಥಳಿಸತೊಡಗಿದರು.
ಹಿಂದೂ ಜಾಗರಣ ವೇದಿಕೆಯೆಂದು ತಮ್ಮನ್ನು ಕರೆದುಕೊಂಡ  ಪುಂಡರ ಗುಂಪಿನಲ್ಲಿ ಸ್ಥಳೀಯ ಬಿಜೆಪಿ ಪಕ್ಷದ ಜನಪ್ರತಿನಿಧಿಯೊಬ್ಬರಿದ್ದುದ್ದು ಗಮನಾರ್ಹ.

ಶಿಷ್ಟ ಪರಂಪರೆಯಲ್ಲಿ ದ್ರೌಪದಿಯನ್ನು ಸ್ವಾಭಿಮಾನಿ ಹೆಣ್ಣಾಗಿ ಚಿತ್ರಿಸಲಾಗಿದೆಆದರೆ ತುಳು ಜಾನಪದದಲ್ಲಿ ಅವಳನ್ನು ಮೀರಿಸುವ ಹೆಣ್ಣೊಬ್ಬಳಿದ್ದಾಳೆ ಅವಳೇ ಸಿರಿಬಹುಶಃ ಗಂಡನ ನೈತಿಕತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿತಾನಾಗಿಯೇ ವಿಛ್ಚೇದನ ನೀಡಿ ಮತ್ತೆ ಮರು ಮದುವೆಯಾದ ಮೊದಲ ಹೆಣ್ಣು ಈಕೆಪ್ರತಿ ವರ್ಷ ನಡೆಯುವ ಸಿರಿ ಜಾತ್ರೆಯಲ್ಲಿ ಇಂದಿಗೂ ಹತ್ತಾರು ಸಾವಿರ ಮಹಿಳೆಯರ ಮೈ ಮೇಲೆ ಏಕಕಾಲದಲ್ಲಿ ಅವಾಹನೆಗೊಳ್ಳುವ ಸ್ತ್ರೀ ಶಕ್ತಿ ಆಕೆಇಂಥ ಮಣ್ಣಿನಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮೊನ್ನೆ ಪುರುಷ ದೌರ್ಜನ್ಯಕ್ಕೆ ತುತ್ತಾಗಿ ಅಸಾಹಾಯಕರಾಗಿದೇಹವನ್ನು ಹಿಡಿ ಮಾಡಿಕೊಳ್ಳುತ್ತಿರುವುದನ್ನು ಕಂಡಾಗ ಎಂತವರ ಮನಸ್ಸಾದರೂ ಕರಗುತ್ತಿತ್ತುಪಾರ್ಟಿ ಕೊಟ್ಟ ಹುಡುಗನಾದರೋ ಆರ್ತನಾಗಿ ತುಳುವಿನಲ್ಲಿ..’ಇದು ನನ್ನ ಬರ್ತ್ ಡೇ ಪಾರ್ಟಿ..ಏನೂ ಮಾಡ್ಬೇಡಿ’ ಎಂದು ಕರುಳು ಕಿವುಚುವಂತೆ ಅಂಗಲಾಚುತ್ತಿದ್ದರೂ  ನರರೂಪದ ಕಿರಾತಕರು ಅವನ ಶರ್ಟ್ ಕಿತ್ತೆಸೆದು ಸಿಕ್ಕ ಸಿಕ್ಕಲ್ಲಿ ಹೊಡೆದು ತಮ್ಮ ಪೈಶಾಚಿಕ ಪ್ರವೃತ್ತಿಯನ್ನು ಮೆರೆದಿದ್ದರು.
 ಮಕ್ಕಳ ಮತ್ತು ಅವರ ಹೆತ್ತವರ ಮೇಲಾದ ಮಾನಸಿಕ ಅಘಾತವನ್ನು ಮೂರನೆಯವರಾದ ನಾವು ಕಲ್ಪಿಸಿಕೊಳ್ಳಲು ಸಾಧ್ಯವೇ?

ಇದನ್ನೆಲ್ಲಾ ನೋಡುತ್ತಿರುವಾಗ ನನ್ನ ಒಳ ಮನಸ್ಸು ಹೇಳುತ್ತಿದೆ.’ನಾವು ಹಾಗಿರಲಿಲ್ಲ. ಖಂಡಿತವಾಗಿಯೂನಾವು ಹಾಗಿರಲಿಲ್ಲಎಂದುಆದರೆ ನಾವು ಹೇಗಾಗಿ ಹೋಗಿದ್ದೇವೆ..ಎಂಬುದನ್ನು ಹೊರ ಜಗತ್ತು ತೋರಿಸುತ್ತಿದೆಅದಕ್ಕೆ ಕಾರಣರಾದವರು ಯಾರುಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು?

ಉತ್ತರಕ್ಕಾಗಿ ಹುಡುಕಾಡುತ್ತಿದ್ದೇನೆ

[ ಈ ವಾರದ ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]