Sunday, April 24, 2016

ಉನಕೋಟಿ-ಮಲಗಿರುವ ದೇವತೆಗಳು, ಎಚ್ಚರವಾಗಿದ್ದ ಶಿವ.




ಭಾರತದ ಭೂಪಟಕ್ಕೆ ಬಾವಲಿಯ ಹಾಗೆ ನೇತು ಬಿದ್ದಿರುವ ಈಶಾನ್ಯದ ಪುಟ್ಟ  ರಾಜ್ಯವೇ ತ್ರಿಪುರ. ಗಾತ್ರದಲ್ಲಿ ಎರಡನೆಯ ಅತೀ ಚಿಕ್ಕ ರಾಜ್ಯ ಮೊದನೆಯದು ಗೋವಾ.  ಉತ್ತರ, ದಕ್ಷಿಣ ಮತ್ತು ಪಶ್ಚಿಮದ ದಿಕ್ಕುಗಳಲ್ಲಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿದೆ. ಬಾಂಗ್ಲಾದೊಂದಿಗೆ ತ್ರಿಪುರಾ ೮೫೬ ಕಿ.ಮೀ ಉದ್ದದ ಗಡಿಯನ್ನು ಹೊಂದಿದೆ. ಇದು ತನ್ನ ರಾಜ್ಯದ ಒಟ್ಟು ಗಡಿಯ ೮೪% ಆಗುತ್ತದೆ. ಪೂರ್ವದಲ್ಲಿ ಅಸ್ಶಾಂ ಮತ್ತು ಮಿಜೋರಾಂ ರಾಜ್ಯಗಳಿವೆ . ಭಾರತದ ಇತರ ರಾಜ್ಯಗಳೊಡನೆ ಸಂಪರ್ಕ ಸಾಧಿಸಲು ಇವೆರಡರ ಮುಖಾಂತರವೇ ಹಾದು ಹೋಗಬೇಕು.ನಾವು ಕೂಡಾ ಅಸ್ಸಾಂ ನ ಸಿಲ್ಚಾರ್ ನಿಂದ ರಾಷ್ಟ್ರೀಯ ಹೆದ್ದಾರಿ ೪೪ರ ಮುಖಾಂತರ ಕರಿಂಗಂಜ್ ನ್ನು ಹಾದು ತ್ರಿಪುರದ ರಾಜಧಾನಿ ಅಗರ್ತಲಾ ತಲುಪಿದ್ದೆವು. ಇದಲ್ಲದೆ ರೈಲಿನಲ್ಲಿಯೂ ತ್ರಿಪುರಕ್ಕೆ ತಲುಪಬಹುದು. ಹತ್ತಿರದ ರೈಲು ನಿಲ್ದಾಣ ಕುಮಾರ್ ಘಾಟ್.      ಕಲ್ಕತ್ತಾದಿಂದ ಹೊರಡುವ ರೈಲು ಗೌಹಾಟಿ ಮುಖಾಂತರ ೧೪೭೫ ಕಿ.ಮೀ ಹಾದು ಕುಮಾರರ್ ಘಾಟ್ ತಲುಪುತ್ತದೆ . ಕುಮಾರಘಾಟ್ ನಿಂದ ಅಗರ್ತಲಾ ೧೪೦ ಕಿಮೀ ದೂರದಲ್ಲಿದೆ. ಕಲ್ಕತ್ತಾ ಮತ್ತು ಗೌಹಾಟಿಯಿಂದ ವಿಮಾನದ ಮುಖಾಂತರವೂ ತ್ರಿಪುರಾ ತಲುಪಬಹುದು. ತ್ರಿಪುರಾದಲ್ಲಿ ಮೂರು ವಿಮಾನ ನಿಲ್ಡಾಣ್ಗಳಿವೆ.
 ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡುವ ಪ್ರವಾಸಿಗರು ಬಹುಮುಖ್ಯವಾಗಿ ಗಮನಿಸಬೇಕಾದ ವಿಷಯ ಅಂದರೆ ಅದು ಮಿಲಿಟರಿ ಕಣ್ಗಾವಲಿನಲ್ಲಿರುವ ರಾಜ್ಯಗಳು. ಅದರಲಿಯೂ ಸೆವೆನ್ ಸಿಸ್ಟರ್ಸ್ [ಸಪ್ತ ಸೋದರಿಯರು] ರೆಂದು ಪ್ರಖ್ಯಾತವಾಗಿರುವ ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಪ್ರವೇಶಕ್ಕೆ ಕಟ್ಟುನಿಟ್ಟಾದ ನಿಯಮಗಳಿವೆ. ಪ್ರವಾಸಿಗರು ಎಂಟ್ರಿ ಪಾರಂ  ಕಡ್ಡಯವಾಗಿ ತುಂಬಿಸಲೇ ಬೇಕು. ಜೊತೆಗೆ ಅದಕ್ಕೆ ತಮ್ಮ ಭಾವಚಿತ್ರ ಮತ್ತು ಗುರುತಿನ ಕಾರ್ಡಿನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿರಬೇಕು. ಮಿಲಿಟರಿ ಪೋಲಿಸರು ಅದನ್ನು ಪರಿಶೀಲಿಸಿ ರಾಜ್ಯದೊಳಗೆ ಬಿಟ್ಟುಕೊಳ್ಳುತ್ತಾರೆ. ಈ ರಾಜ್ಯಗಳು ಚೀನಾ [ಟಿಬೇಟ್], ಪಾಕಿಸ್ತಾನ, ಮಯನ್ಮಾರು [ಬರ್ಮಾ], ಬಾಂಗ್ಲಾ, ನೇಪಾಳ ಮುಂತಾದ ದೇಶಗಳೊಡನೆ ಗಡಿರೇಖೆಯನ್ನು ಹೊಂದಿವೆ. ಮಾತ್ರವಲ್ಲ ಆಂತರಿಕವಾಗಿ ಹಲವಾರು ಬಂಡುಕೋರ ಸಂಘಟನೆಗಳು ಕ್ರಿಯಾಶೀಲವಾಗಿವೆ. ಒಮ್ಮೊಮ್ಮೆ ಅವು ಉಗ್ರಗಾಮಿ ಚಟುವಟಿಕೆಗಳಲ್ಲೂ ನಿರತವಾಗುತ್ತವೆ, ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುತ್ತವೆ, ಕೆಲವೊಮ್ಮೆ ಹತ್ಯೆಗೂ ಮುಂದಾಗುತ್ತವೆ, ಇದಕ್ಕೆ ನೆರೆಯ ರಾಷ್ಟ್ರಗಳು ಉತ್ತೇಜನ ನೀಡುತ್ತವೆ. ಅಲ್ಲದೆ ಇಲ್ಲಿನ ಕೆಲ ರಾಜ್ಯಗಳಲ್ಲಿ ಬಾಂಗ್ಲಾ ನಿರಾಶ್ರಿತರು ಮತ್ತು ನುಸುಳುಕೋರರದ್ದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾಗಿ ಇಲ್ಲಿ ಮಿಲಿಟರಿ ಸದಾ ಸರ್ವ ಸನ್ನದ್ಧರಾಗಿ ಇರಬೇಕಾಗುತ್ತದೆ. ಮಿಜೋರಾಂ ಗೆ ಹೋಗುವಾಗಲಂತೂ ಬಾಂಬ್ ನಿಷ್ಖ್ರ‍ಿಯದಳದವರು ಕೂಡಾ ಬಂದು ನಮ್ಮನ್ನು ಚೆಕ್ ಮಾಡಿದ್ರು. ಮಣಿಪುರದ ಸೇನಾಪತಿ ಎಂಬ ಊರಲ್ಲಿ ನಮ್ಮನ್ನು ಹಿಂಬಾಲಿಸಿಕೊಂಡೇ ಬಂದ ಮಿಲಿಟರಿ ಜೀಪ್ ಅಲ್ಲಿ ರಾತ್ರಿ ತಂಗಲು ನಮ್ಮ ವಾಹನ ನಿಂತೊಡನೆ ನಮ್ಮನ್ನೆಲ್ಲಾ ಸೂಕ್ಷವಾಗಿ ಪರಿಶೀಲಿಸಿತ್ತು.
Add caption

ಪ್ರತಿವರ್ಷ ಹಿಮಾಲಯವನ್ನು ಟ್ರಕ್ಕಿಂಗ್ ನೆಪದಲ್ಲಿ ಸುತ್ತುವ ನಾವು ಈ ಬಾರಿ ಸಪ್ತ ಸೋದರಿಯರ ಮೈದಡವಿ ಬರಲು ಹೊರಟಿದ್ದೆವು. ಆದರೆ ಶಿವನನ್ನು ಬೇಟಿಯಾಗದೆ ಅಲ್ಲಿಂದ ಮರಳಲು ಸಾಧ್ಯವೇ? ಹಾಗಾಗಿ ಹುನಕೋಟಿಯ ಮೇಲೆ ದ್ರುಷ್ಟಿ ನೆಟ್ಟಿದ್ದೆವು. ಇದಲ್ಲದೆ  ಮಾಣಿಕ್ ಸರಕಾರ್ ಎಂಬ ರಾಜಕೀಯ ಸಂತ ಮುಖ್ಯಮಂತ್ರಿಯಾಗಿರುವ ತ್ರಿಪುರಾ ಹೇಗಿರಬಹುದು ಎಂಬ ಕುತೂಹಲವೂ ಇತ್ತು. ಎರಡೂ ನಿರೀಕ್ಷೆಗಳೂ ಹುಸಿಯಾಗಲಿಲ್ಲ. ನಮ್ಮ ಕರುನಾಡಿನ ಕರಾವಳಿಯಲ್ಲಿ ಒಂದು ಮಾತಿದೆ. ನಾವು ವಾಹನದಲ್ಲಿ  ಕೇರಳದಿಂದ ಕರ್ನಾಟಕದಿಂದ ಪಯಣಿಸುತ್ತಾ ನಿದ್ರಾವಶವಾಗಿದ್ದರೆ ಎಲ್ಲಿ ನಮಗೆ ನಿದ್ರಾಭಂಗವಾಯೋ ಅಲ್ಲಿ ನಾವು ಕರ್ನಾಟಕವನ್ನು ಪ್ರವೇಶಿಸಿದೆವು ಎಂದು ಅರ್ಥ ಮಾಡಿಕೊಳ್ಳಬೇಕು, ಹಾಗಿರುತ್ತವೆ ನಮ್ಮ ರೋಡುಗಳು. ಅದೇ ಅನುಭವವನ್ನು ತ್ರಿಪುರಾ ಮತ್ತು ಅಸ್ಸಾಂ ರಸ್ತೆಗಳಲ್ಲಿ ನಾವು ಅನುಭವಿಸಿದೆವು.
  ಉನಕೋಟಿ ಎಂಬುದು ತ್ರಿಪುರದ ಒಂದು ಜಿಲ್ಲೆ.  ಉನಕೋಟಿಯ ಜಿಲ್ಲಾ ಕೇಂದ್ರದ ಹೆಸರು ಕೈಲಾಸ್ ಹಾರ್. ಕಾಡಿನ ಮಧ್ಯೆ ಇರುವ ಜನವಸತಿ ರಹಿತ ಉನಕೋಟಿ ಎಂಬ ಪುಟ್ಟ ಸ್ಥಳದ ವಿಶೇಷತೆಯ ಕಾರಣಗಳಿಂದಾಗಿ ಒಂದು ಜಿಲ್ಲೆಗೆ ಆ ಹೆಸರಿನ್ನಡಲಾಗಿದೆಯೆಂದರೆ ಅದು ಬಹುಮುಖ್ಯವಾಗಿದ್ದೇ ಇರಬೇಕಲ್ಲವೇ? ಹೌದು. ಅಲ್ಲಿ ಏಳರಿಂದ ಒಂಬತ್ತನೆಯ ಶತಮಾನದ ನಡುವೆ ರಚನೆಯಾಗಿತ್ತೆನ್ನಲಾದ ಬಂಡೆಯ ಮೇಲೆ ಕೆತ್ತಲಾದ ಅಸಂಖ್ಯ ದೇವಾನು ದೇವತೆಗಳ ಚಿತ್ರಗಳಿವೆ. ಅಲ್ಲಿ ಆ ನಿರ್ಜನ ಕಾಡಿನಲ್ಲಿ  ಬಂಡೆಗಳ ಮೇಲೆ ಆ ಚಿತ್ರಗಳು ಹೇಗೆ, ಯಾರಿಂದ ಕೆತ್ತಲ್ಪಟ್ಟವು? ಅದರ ಹಿಂದೊಂದು ಕಥೆಯಿದೆ.
ಒಮ್ಮೆ ಪರಶಿವನು ಒಂದು ಕೋಟಿ ದೇವತಾಗಣಗಳೊಡನೆ ಕಾಶಿಯತ್ತ ಪಯಣ ಬೆಳೆಸಿದ್ದನು. ಈಗಿನ ಉನಕೋಟಿ- ಆಗ ಅದಕ್ಕೆ ಏನು ಹೆಸರಿತ್ತೋ ಗೊತ್ತಿಲ್ಲ- ಹತ್ತಿರ ಬಂದಾಗ ಕತ್ತಲಾಯಿತು. ದಟ್ಟ ಕಾಡು ಬೇರೆ. ಶಿವ ತನ್ನ ಪರಿವಾರದೊಡನೆ ಅಲ್ಲೇ ತಂಗಲು ನಿರ್ಧರಿಸಿದ. ರಾತ್ರಿ ಮಲಗುವ ಮೊದಲು ಎಲ್ಲರಿಗೂ ತಾಕೀತು ಮಾಡಿದ; ನಾಳೆ ಮುಂಜಾನೆ ಎದ್ದು ಸೂರ್ಯೋದಯಕ್ಕೂ ಮುನ್ನ ತಮ್ಮ ಪಯಣ ಮತ್ತೆ ಮುಂದುವರಿಸಬೇಕೆಂದು. ಬೆಳಿಗ್ಗೆ ಬೇಗನೇ ಎದ್ದ ಶಿವ ಪಯಣಕ್ಕೆ ಸಿದ್ಧನಾದ. ಆದರೆ ಮಲಗಿದವರಲ್ಲಿ ಯಾರೊಬ್ಬರೂ ಎದ್ದಿರಲಿಲ್ಲ. ಶಿವನಿಗೆ ಕೋಪ ಬಂತು. ’ನೀವೇಲ್ಲಾ ಶಿಲಾರೂಪಿಗಳಾಗಿ ಬಿದ್ದಿರಿ’ ಎಂದು ಶಾಪವಿತ್ತು ತಾನು ಮುಂದಡಿಯಿಟ್ಟ. ಹಾಗೇ  ಪರಶಿವನಿಂದ ಶಪಿಸಲ್ಪಟ್ಟ ದೇವತೆಗಳೇ ಉನಕೋಟಿಯಲ್ಲಿರುವ ಶಿಲಾರಚನೆಗಳು.
ಉನಕೋಟಿ ಎಂಬುದು ಬಂಗಾಲಿ ಪದ.ಇದರ ಅರ್ಥ ಕೋಟಿಗೆ ಒಂದು ಕಮ್ಮಿ ಅಂತ. ನಮ್ಮಲ್ಲಿ ಹೇಳುವುದಿಲ್ಲವೇ ಕೋಟಿಗೊಬ್ಬ ಅಂತ. ಹಾಗೆ ಕರೆಸಿಕೊಳ್ಳುವವನನ್ನು ಬಿಟ್ಟು ಲೆಕ್ಕ ಹಾಕಿದರೆ ಉಳಿಯುವವರು ೯೯ ಲಕ್ಷದ ೯೯ ಸಾವಿರದ ೯೯೯ ಜನರು ಎಂದಂತಾಗುತ್ತದೆಯಲ್ಲವೇ? ಕೋಟಿಗೆ ಒಂದು ಕಮ್ಮಿ ಉನಕೋಟಿ. ಈ ತರ್ಕದ ಮೂಲಕವೇ ನೋಡಿದರೆ ಇಲ್ಲಿ ಶಿವನ ಚಿತ್ರ ಇರಬಾರದಲ್ಲವೇ? ಆದರೆ ಇಲ್ಲಿರುವ ಶಿಲ್ಪಗಳಲ್ಲಿ ಅತೀ ದೊಡ್ಡದಾಗಿರುವ ರಚನೆಯೇ ಶಿವನ ಮುಖದ್ದು. ಹತ್ತು ಅಡಿ ಎತ್ತರದ್ದು, ನಂತರ ಆತನ ಪತ್ನಿಯಾದ ದುರ್ಗೆಯದು ಮತ್ತು ಮಗನಾದ ಗಣೇಶನದು.
ದೇವರನ್ನು ನೋಡಲು ಅದರಲ್ಲೂ ಪರಶಿವನನ್ನು ನೋಡಲು ಭಕ್ತರು ಬಹು ಪ್ರಯಾಸಪಡಬೇಕಂತೆ. ಹಿಮಾಲಯವೇ ಅವನ ಆಲಯವಲ್ಲವೇ? ಅಲ್ಲಿಗೆ ಎಲ್ಲರೂ ಹೋಗಲು ಸಾಧ್ಯವೇ? ಸಾಧ್ಯವಿಲ್ಲ. ಇಷ್ಟಪಟ್ಟವರು ಕಷ್ಟಪಡಲೇಬೇಕು.  ಇಲ್ಲಿ ಆತ ಹಿಮಾಲಯದಿಂದ ಇಳಿದು  ಸಮತಟ್ಟು ಭೂಮಿಯಾದ ಕಾಶಿಗೆ ಹೊರಟವನು ಒಂದು ರಾತ್ರಿ ಭಾರತದ ಈಶಾನ್ಯ ರಾಜ್ಯವಾದ ತ್ರಿಪುರದಲ್ಲಿ ತಂಗಿ ಆ ಜಾಗಕ್ಕೆ ಉನಕೋಟಿಯೆಂದು ಹೆಸರು ನೀಡಿದವನು. ಇಲ್ಲಿಯೂ ಅವನನ್ನು ನೋಡಲು ರಸ್ತೆಯಿಂದಿಳಿದು ಸ್ವಲ್ಪ ದೂರ ನಡೆದು ಕಾಡಿನ ನಡುವೆ ಬೆಟ್ಟ ಗುಡ್ಡವನ್ನು ಹತ್ತಿಳಿಯಬೇಕು..
ನಾವು  ಹಿಮಾಲಯದ ಕೆಲವು ಭಾಗಗಳನ್ನು ಹತ್ತಿಳಿದು ಅಸ್ಸಾಂ ರಾಜ್ಯದ ಸಿಲ್ಚಾರ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಿ ಮುಂಜಾನೆಯೇ ತ್ರಿಪುರಾದ ಕುಮಾರ್ ಘಾಟ್ ನತ್ತ ಹೊರಟಿದ್ದೆವು.  ಬೇಗ ಕುಮಾರ್ ಘಾಟ್ ತಲುಪಿದರೆ ಅಲ್ಲಿಗೆ ಹತ್ತಿರವೇ ಇರುವ [ ೨೯ ಕಿಮೀ] ಉನಕೋಟಿಯನ್ನು ಅಂದೇ ನೋಡುವುದು ನಮ್ಮ ಇರಾದೆಯಾಗಿತ್ತು. ಸಿಲ್ಚಾರ್ ನಿಂದ  ಕುಮಾರಘಾಟ್ ಗೆ ಇರುವ ದೂರ ೩೭೪ ಕಿ.ಮೀ. ಅದು ನ್ಯಾಷನಲ್ ಹೈವೆ ೪೪ ಆದ ಕಾರಣ ಪ್ರಯಾಣ ಆರಾಮದಾಯಕವಾಗಿರಬಹುದೆಂದು ನಮ್ಮ ಎಣಿಕೆಯಾಗಿತ್ತು. ಆದರೆ ಆ ರಸ್ತೆಯನ್ನು ನೋಡಿ ನಮ್ಮ ಎಲ್ಲಾ ಯೋಜನೆಗಳು ತಲೆಕೆಳಗಾಗುವ ಲಕ್ಷಣಗಳು ಕಾಣಿಸಿಕೊಂಡವು. ನನ್ನ ಜೀವಮಾನದಲ್ಲೇ ಅಂತ ಹೊಂಡಗುಂಡಿಗಳಿರುವ, ಧೂಳುಮಯ ರಸ್ತೆಯನ್ನು ನಾನು ನೋಡಿರಲಿಲ್ಲ. ಡಾಮರ್ ಕಾಣದೆ ಶತಮಾನಗಳೇ ಕಂಡಿರಬಹುದು. ಈ ಪ್ರಯಾಸದ ಪಯಣವನ್ನು ಅನುಭವಿಸುತ್ತಿರುವಾಗಲೇ ನನ್ನ ಸಹಪ್ರಯಾಣಿಕರಲ್ಲಿ ಹೇಳಿಬಿಟ್ಟೆ, ಇನ್ನೆಂದೂ ನಾನು ಶಿರಾಡಿ ಘಾಟಿಯ ಹೊಂಡಗಳ ಬಗ್ಗೆ ಮಾತಾಡಲಾರೆ!

ಆಗಾಗ ಕೋಮುಗಲಭೆಗೆ ಈಡಾಗುವ ಕರೀಂಗಂಜ್ ಈ ಹಾದಿಯಲ್ಲೇ ಸಿಗುತ್ತದೆ. ನಾವು ಹೋದಾಗ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಡಿಕ್ಲೆರ್ ಆಗಿತ್ತು. ಧೂಳು, ಬಿಸಿಲಿನ ಜೊತೆ ಚುನಾವಣೆಯ ಕಾವೂ ಸೇರಿತ್ತು .ಹಾಗಾಗಿ ನಮ್ಮನ್ನು ಚೆಕ್ ಪೋಸ್ಟ್ ಗಳಲ್ಲಿ ತಡೆದು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು.
ಹಿಂದಿನ ವೈಜಯಂತ ಅರಮನೆ. ಈಗ ರಾಜ್ಯ ಮ್ಯೂಸಿಯಂ
ನೀವು ನಂಬಬೇಕು, ಕುಮಾರ್ ಘಾಟ್ ಗೆ, ೩೭೪ ಕಿ.ಮೀ ಕ್ರಮಿಸಲು ನಾವು  ತೆಗೆದುಕೊಂಡದ್ದು ಬರೋಬ್ಬರಿ ಹನ್ನೊಂದು ಘಂಟೆ. ಅದು ಇನ್ನೆಂತ ರಾಷ್ಟ್ರೀಯ ಹೆದ್ದಾರಿಯಿರಬಹುದು? ಅಸ್ಸಾಂ ಸರಕಾರ ತನ್ನ ರಸ್ತೆ ಕಾಮಗಾರಿಕೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದೆ. ಹಾಗಾಗಿ ಉನಕೋಟಿಯನ್ನು ಹಿಂತಿರುಗಿ ಬರುವಾಗ ನೋಡುವುದೆಂದು ಅಗರ್ತಲಾದತ್ತ ಪಯಣ ಬೆಳೆಸಿದೆವು.
ಪ್ರಯಾಣದ ಎಲ್ಲಾ ಬೇಸರಿಕೆಗಳನ್ನು ತೀರಿಸಿಕೊಂಡದ್ದು ತ್ರಿಪುರಾ ಎಂಬ ಪುಟ್ಟ ರಾಜ್ಯವನ್ನು ಹೊಕ್ಕ ಮೇಲೆ. ಆಲ್ಲಿಯ ನುಣುಪಾದ ರಸ್ತೆಗಳಲ್ಲಿ ನಮ್ಮ ವಾಹನ ಹುರುಪಿನಿಂದ ತನ್ನ ವೇಗವನ್ನು ಹೆಚ್ಚಿಸಿಕೊಂಡಿತು. ದಶಕಗಳಿಂದ ಕಮ್ಯೂನಿಸ್ಟ್ ಸರಕಾರದ ಚುಕ್ಕಾಣಿಯನ್ನು ಹಿಡಿದಿರುವ ಮಾಣಿಕ್ ಸರಕಾರ್ ಎಂಬ  ಮುಖ್ಯಮಂತ್ರಿಯ ಶುದ್ಧ ಚಾರಿತ್ರ್ಯ ಮತ್ತು ಅಚ್ಚುಕಟ್ಟುತನ ಅದರ ರಾಜಧಾನಿ ಅಗರ್ತದಲ್ಲೂ ಕಂಡು ಬಂದಿತು. ಮುಖ್ಯಮಂತ್ರಿ ಹುದ್ದೆಗೆ ಸರಕಾರ ನೀಡುವ ಸಂಬಳ- ಸಾರಿಗೆ, ಭತ್ಯೆ ಎಲ್ಲವನ್ನು ಪಾರ್ಟಿಗೆ ನೀಡಿ, ಅದು ಕೊಡುವ ಮಾಸಿಕ ಐದು ಸಾವಿರ ರೂಪಾಯಿಗಳಲ್ಲೇ ಜೀವನ ನಿರ್ವಹಣೆ ಮಾಡುವ ಮಾಣಿಕ್ ಸರಕಾರ್ ಭಾರತದ ಪರಿಶುದ್ಧ ಮತ್ತು ಅತೀ ಬಡ ಮುಖ್ಯಮಂತ್ರಿಯೆಂದೇ ಖ್ಯಾತರಾಗಿದ್ದಾರೆ. ಮುನ್ನೋಟವುಳ್ಳ ಈ ರಾಜಕಾರಣಿಯಿಂದಾಗಿಯೇ ಅಲ್ಲಿಯ ಸಾಕ್ಷರತೆಯ ಪ್ರಮಾಣ ೯೬%  ಇದೆ.
ಬಾಂಗ್ಲಾ ಗಡಿ.
ಉತ್ತರಾಖಂಡ ಸೇರಿದಂತೆ ಸೆವೆನ್ ಸಿಸ್ಟರ್ಸ್ ರಾಜ್ಯಗಳಲ್ಲಿ ನಿಮಗೆ ಅಟೋರಿಕ್ಷಾಗಳು ಕಾಣಸಿಗುವುದಿಲ್ಲ. ಹಾಗೆಯೇ ಬಸ್ಸಿನಂತಹ ದೊಡ್ಡ ಸಾರಿಗೆ ವಾಹನಗಳು ಕಾಣುವುದಿಲ್ಲ.. ಕೆಲವು ರಾಜ್ಯಗಳಲ್ಲಿ ರಾಜಧಾನಿ ಪ್ರವೇಶಕ್ಕೆ ನಿರ್ಧಿಷ್ಟ ವೇಳೆ ನಿಗದಿಪಡಿಸಿವೆ. ಅದನ್ನು ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ. ಅಗರ್ತದಲ್ಲೂ ನಮಗೆ ಅಟೋರಿಕ್ಷಾಗಳು ಕಾಣಲಿಲ್ಲ. ಮಾರುಕಟ್ಟೆ ವಿಂಗಡಣೆಯಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಹೂವಿನ ಮಾರುಕಟ್ಟೆ, ಹಣ್ಣಿನ ಮಾರುಕಟ್ಟೆ, ಬಟ್ಟೆ ಬರೆ, ಇಲೆಕ್ಟ್ರಾನಿಕ್ಸ್ ವಸ್ತುಗಳು ಹೀಗೆ ಪ್ರತಿಯೊಂದು ವಸ್ತುಗಳಿಗೂ ನಿರ್ದಿಷ್ಟ ಜಾಗಗಳಿದ್ದವು. ನಮ್ಮಂತೆ ಎಲ್ಲವೂ ಒಂದೇ ಕಡೆ ಮಿಳಿತವಾಗಿರಲಿಲ್ಲ.  
ಅಗರ್ತಲಾಕ್ಕೆ ಹೊಂದಿಕೊಂಡಂತಿರುವ ಬಾಂಗ್ಲಾ ಭಾರತ ಗಡಿಯಲ್ಲಿ ಪಾಕಿಸ್ತಾನ ಭಾರತ ಗಡಿಯಾದ ವಾಘ ಬಾರ್ಡರ್ ನಂತೆಯೇ ಧ್ವಜಾವರೋಹಣ ಕಾರ್ಯಕ್ರಮವೂ ಸಂಜೆ ನಡೆಯುತ್ತೆ .ಇಲ್ಲಿ ರಾಯಚೂರಿನ ಸತೀಶ್ ನಾಯ್ಕ್ ಎಂಬ ಯೋದನ ಪರಿಚಯವೂ ಆಯಿತು. ಆತ ಅಂದಿನ ಧ್ವಜಾವರೋಹಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮಾಣಿಕ್ ಸಜಾರ್.
ತ್ರಿಪುರಾ ನಾಡಿನ ರಕ್ಷಕ ದೇವತೆಯಾಗಿರುವ ತ್ರಿಪುರಾಂಬಿಕೆ, ಬಹುಶಃ ಇವಳೇ ಈ ರಾಜ್ಯಕ್ಕೆ ಆ ಹೆಸರು ಬರಲು ಕಾರಣವಾಗಿದ್ದಿರಬಹುದು. ಆಕೆಯ ಇನ್ನೊಂದು ಹೆಸರು ಮಾತಾವರಿ. ನಮಗೆ ಚಾಮುಂಡೇಶ್ವರಿ ಹೇಗೆ ನಾಡ ದೇವತೆಯೋ ಹಾಗೆಯೇ ತ್ರಿಪುರಾಕ್ಕೆ ತಾಯಿ ತ್ರಿಪುರ ಸುಂದರಿ. ಈಕೆಯ ಇನ್ನೊಂದು ಹೆಸರು ಮಾತಾಬರಿ. ಇದೊಂದು ಶಕ್ತಿಪೀಠ. ಸತಿಯ ಬಲಗಾಲು ಬಿದ್ದ ಜಾಗವಿದು. ಈ ಕಥೆ ಎಲ್ಲರಿಗೂ ಗೊತ್ತಿರುವಂತಹದ್ದೇ. ದಕ್ಷರಾಜ ತಾನು ಮಾಡುತ್ತಿದ್ದ ಯಾಗಕ್ಕೆ ದೇವತೆಗಳನ್ನೆಲ್ಲಾ ಅಹ್ವಾನಿಸಿದರೂ ತನ್ನಳಿಯ ಶಿವನನ್ನು ಆಮಂತ್ರಿಸುವುದಿಲ್ಲ. ವಿಷಯ ತಿಳಿದ ಸತಿ ಅಪ್ಪ ಮರೆತಿರಬಹುದೆಂದು ತಾನು ಹೊರಟು ನಿಲ್ಲುತ್ತಾಳೆ. ಶಿವ ತಡೆದರೂ ತಾನು ಒಬ್ಬಳೇ ತವರುಮನೆಗೆ ಬರುತ್ತಾಳೆ. ಅಲ್ಲಿ ಅವಮಾನಿತಳಾಗಿ ಯಜ್ನಕುಂಡಕ್ಕೆ ಹಾರಿ ಸಾವನ್ನಪ್ಪುತ್ತಾಳೆ. ವಿಷಯ ತಿಳಿದ ಶಿವ ಧಾವಿಸಿ ಬಂದು ಪ್ರಿಯ ಪತ್ನಿಯ ಕಳೇಬರವನ್ನು ಹೊತ್ತು ತಾಂಡವ ನಾಟ್ಯ ಮಾಡಲಾರಂಭಿಸುತ್ತಾನೆ. ವರ್ಷಗಳುರುಳಿದರೂ ಅವನ ದುಃಖ ಶಮನವಾಗುವುದಿಲ್ಲ. ಹೀಗಾದರೆ ಲೋಕದ ಗತಿಯೇನು ಎಂದು ಚಿಂತಿಸಿದ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಛಿದ್ರ ಛಿದ್ರ ಮಾಡುತ್ತಾನೆ. ಸತಿಯ ದೇಹದ ೫೧ ತುಂಡುಗಳು ಬಿದ್ದ ಜಾಗಗಳು ಶಕ್ತಿಪೀಠಗಳೆನಿಸಿಕೊಂಡವು. ಸತಿಯ ಕಾಲು ಬಿದ್ದ ಜಾಗವೇ ಅಗರ್ತಲಾದಿಂದ ೫೫ಕಿ.ಮೀ ದೂರದಲ್ಲಿರುವ ಉದಯಪುರದ ಈ ತ್ರಿಪುರಸುಂದರಿ ದೇವಾಲಯ. ೧೫೧೦ರಲ್ಲಿ ಮಹಾರಾಜ ಧನ್ಯ ಮಾಣಿಕ್ಯ ಇದನ್ನು ಕಟ್ಟಿಸಿದ. ಇದರ ವಾಸ್ತು ಆಮೆಯ ಆಕಾರದಲ್ಲಿರುವುದರಿಂದ ಇದಕ್ಕೆ ಕೂರ್ಮಪೀಠವೆಂದು ಕರೆಯುತ್ತಾರೆ. ಬಂಗಾಳ ಶೈಲಿಯ ಈ ದೇವಾಲಯದಲ್ಲಿ ಚೌಕಾಕ್ರುತಿಯ ಗರ್ಭಗುಡಿಯಿದೆ.ಗೋಪುರ ಶಂಖದ ಆಕಾರದಲ್ಲಿದೆ.
ಗಡಿಯಾಚೆ ಬಾಂಗ್ಲಾ ನಿವಾಸಿಗಳು.
ಗರ್ಭ ಗುಡಿಯಲ್ಲಿ ಎರಡು ವಿಗ್ರಹಗಳಿವೆ.ಒಂದು ಚೋಟಿ ಮಾ, ಇನ್ನೊಂದು ತ್ರಿಪುರ ಸುಂದರಿ. ತ್ರಿಪುರದ ಮಾಹಾರಾಜರುಗಳು, ಬೇಟೆಗೆ, ಯುದ್ಧ ಮುಂತಾದ ಕಾರಣಗಳಿಗಾಗಿ ದೂರ ಹೋಗಬೇಕಾಗಿ ಬಂದಾಗ ಈ ಚಿಕ್ಕ ಮೂರ್ತಿಯನ್ನು ತಮ್ಮೊಡನೆ ಒಯ್ಯುತ್ತಿದ್ದರಂತೆ.
ಸಾಮಾನ್ಯವಾಗಿ ಶಕ್ತಿಪೀಠವೆನಿಸಿಕೊಂಡ ಸ್ಥಳಗಳಲ್ಲಿ ಪ್ರಾಣಿಬಲಿಯೂ ನಡೆಯುತ್ತದೆ. ನಾವು ಆ ಜಾಗಕ್ಕೆ ಹೋದಾಗ ಆಗ ತಾನೇ ದೇವರೆದುರಿನಲ್ಲಿ ಪ್ರಾಣಿ ಬಲಿ ನಡೆದಿತ್ತು. ದೇವರೆದುರುಗಡೆ ವಿಶಾಲವಾದ ಮಂಟಪವಿದೆ.ಅಲ್ಲಿ ಭಕ್ತರು ಕುಳಿತುಕೊಂಡು ಭಜನೆ ಮಾಡುತ್ತಿದ್ದರು. ಮಂಟಪದ ಅಂಚಿನಲ್ಲಿ, ಸುಮಾರು ಹತ್ತುಮಾರು ದೂರದಲ್ಲಿ ಬಲಿಕಂಬವಿತ್ತು. ಅಲ್ಲಿನ ಕಂಬಗಳಲ್ಲಿ ಹಸಿ ನೆತ್ತರಿನ ಓಕಳಿಯಿತ್ತು. ಅಲ್ಲೆಲ್ಲಾ ನಡೆದಾಡುವಾಗ ನೆತ್ತರಿನ ಕಮಟು ವಾಸನೆ ಮೂಗಿಗೆ ಬಡಿದು ಹೊಟ್ಟೆ ತೊಳಸಿದಂತಾಗುತ್ತಿತ್ತು. ಮಂಟಪದ ಬಲಬಾಗದಲ್ಲಿ ಜನರು ಗುಂಪಾಗಿ ನಿಂತು, ಕೂತು ಬಲಿಕೊಟ್ಟ ಪ್ರಾಣಿಗಳ ಮಾಂಸವನ್ನು ಕೊಚ್ಚಿ ಹಸನು ಮಾಡುತ್ತಿದ್ದರು.
ದೇವಸ್ಥಾನದ ಎದುರುಗಡೆ ಎಕರೆಗಟ್ಟಲೆ ಹರಡಿಕೊಂಡಿರುವ ವಿಶಾಲವಾದ ಕಲ್ಯಾಣ ಸಾಗರ್ ಎಂಬ ಕೆರೆಯಿದೆ. ಅದರಲ್ಲಿ ದೊಡ್ಡದಾದ ಬಣ್ಣ ಬಣ್ಣದ ಮೀನುಗಳಿವೆ. ಜೊತೆಗೆ ಅನೇಕ ಜಾತೀಯ ಜಲಚರಗಳು ವಾಸಿಸುತ್ತವೆ.
ತ್ರಿಪುರಾವನ್ನು ಹಿಂದೆ ಮಾಣಿಕ್ಯ ರಾಜಮನೆತನ ಆಳುತ್ತಿತ್ತು. ಆ ವಂಶಜರ ವೈಜಯಂತ ಅರಮನೆ ಇಂದು ರಾಜ್ಯದ ವಸ್ತು ಸಂಗ್ರಹಾಲಯವಾಗಿದೆ. ಎರಡು ಅಂತಸ್ತಿನ ಈ ಕಟ್ಟಡ ಅತ್ಯಂತ ಶೋಭಾಯಮಾನವಾಗಿದೆ.

ತ್ರಿಪುರಾಂಬಿಕೆ
ತ್ರಿಪುರಾ ಎಂಬ ಈ ಪುಟ್ಟ ರಾಜ್ಯದಲ್ಲಿ ನಮಗೆ ಅನೀರಿಕ್ಷಿತವಾಗಿ ತುಂಬಾ ಅಪರೂಪವಾದ ಪ್ರಾಣಿಯೊಂದನ್ನು ನೋಡುವ ಅವಕಾಶ ಇಲ್ಲಿನ ಪ್ರಾಣಿ ಸಂಗ್ರಾಲಯದಲ್ಲಿ ಸಿಕ್ಕಿತು. ಅದೇ ’ಹೂ ಲಾಕ್ ಗಿಬ್ಬನ್ [Hoolock Gibbon]” ಎಂಬ ಬಾಲವಿಲ್ಲದ ಕೋತಿ. ಇದು ತ್ರಿಪುರಾದ ರಾಜ್ಯಪ್ರಾಣಿಯಂತೆ. ಅದು ಪಂಜರದೊಳಗೇ ಅತ್ತಿಂದತ್ತ ಓಡಾಡುತ್ತಾ ಬಹಳ ಆಕರ್ಷಕವಾಗಿ ಕೂಗುತ್ತಿತ್ತು. ಅದರ ಕೂಗು ಕನ್ನಡದ ’ಹೋಗೋ..ಹೋಗೋ’ ಎಂಬಂತೆ ಕೇಳುತ್ತಿತ್ತು. ಅದನ್ನು ನೋಡಲು ಬಂದ ಸಂದರ್ಶಕರು ಕೂಡಾ ಅದರ ಸ್ವರವನ್ನು ಅನುಕರಿಸುತ್ತಿದ್ದುದರಿಂದ ಅಲ್ಲಿ ಕನ್ನಡದ ವಾತಾವರಣ ಇದ್ದಂತೆ ನಮಗೆ ಭಾಸವಾಗುತ್ತಿತ್ತು. ಹೂ ಲಾಕ್ ಗಿಬ್ಬನ್ಸ್ ಈಶಾನ್ಯ ರಾಜ್ಯಗಳಲ್ಲಿ ಬಿಟ್ಟು ಪ್ರಪಂಚದ ಇನ್ಯಾವ ಭಾಗದಲ್ಲಿಯೂ ಕಾಣಸಿಗುವುದಿಲ್ಲವಂತೆ. ಬ್ರಹ್ಮಪುತ್ರಾ ನದಿ ಕಣಿವೆಯ ವಿಶೇಷ ಪ್ರಭೇಧದ ಪ್ರಾಣಿಯಿದು.                   

ಬೌಗೋಳಿಕ ಮತ್ತು ಪಾಕ್ರುತಿಕ ದ್ರುಷ್ಟಿಯಿಂದ ನೋಡಿದರೂ ನಮ್ಮ ಕೇರಳ ಮತ್ತು ಮಲೆನಾಡನಲ್ಲಿ ತಿರುಗಾಡಿದ ಅನುಭವ ಕೊಟ್ಟ ನಾಡು ತ್ರಿಪುರಾ.ಪುಟ್ಟ ಪುಟ್ಟ ರಬ್ಬರ್ ಪ್ಲಾಂಟೇಷನ್ ಗಳು, ಭತ್ತದ ಗದ್ದೆಗಳು, ನದಿಗಳು, ದಟ್ಟ ಕಾಡು, ತೆಂಗು, ಬಾಳೆ, ಗೇರು ಮರಗಳು, ನಮ್ಮದೇ ನಾಡಿನ ಪಶು ಪಕ್ಷಿಗಳು. ಬೆಂಗಳೂರಿನಿಂದ ೩೫೫೭ ಕಿ.ಮೀ ದೂರದಲ್ಲಿರುವ ಈ ಪುಟ್ಟ ರಾಜ್ಯ ಭಾವನಾತ್ಮಕವಾಗಿ ನಮ್ಮನ್ನು ತನ್ನೊಳಗೆ ಸೇರಿಸಿಕೊಂಡಿತು.

ಪ್ರಾಣಿ ಬಲಿ ಕೊಡುವ ಜಾಗ.
 ಇಂತಹ ರಾಜ್ಯದಲ್ಲಿರುವ ಉನಕೋಟಿಯೆಂಬ ಪುರಾತನ ಶೈವ ಕ್ಷೇತ್ರದ ಶಿಲಾರಚನೆಯನ್ನು ನೋಡುತ್ತಿದ್ದಾಗ ಅನ್ನಿಸಿದ್ದು; ಈ ರಚನೆಗಳನ್ನು ಇಲ್ಲಿಯ ಬುಡಕಟ್ಟು ಜನಾಂಗದ ಯಾರೋ ಒಬ್ಬ ಪ್ರತಿಭಾವಂತ ನಿರ್ಮಿಸಿರಬಹುದು. ಎಳೆದ ಗೆರೆಗಳು, ಅಭರಣದ ವಿನ್ಯಾಸ, ಶಿವನ ತಲೆಯ ಮೇಲಿನ ಕಿರೀಟ, ಹಿಡಿದ ಆಯುಧಗಳು, ಬೆಟ್ಟ, ಗುಡ್ಡ, ಕಣಿವೆಗಳಿಂದ ಕೂಡಿದ ಆ ಪರಿಸರ ಎಲ್ಲವೂ ಆದಿವಾಸಿಗಳ ಅಸ್ತಿತ್ವವನ್ನು ಸಾರುವಂತಿವೆ.  ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿ ಅದಿವಾಸಿಗಳೇ ಅತ್ಯಧಿಕ ಸಂಖ್ಯೆಯಲ್ಲಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇದು ಅಧ್ಯಯನಯೋಗ್ಯ ಜಾಗ.