Monday, December 26, 2016

”ಮೋಹನಸ್ವಾಮಿ’; ಕೇವಲ ಚಪ್ಪಾಳೆಗಾಗಿ ಅಲ್ಲ. .

.
’ ನಾಟಕ ಬೆಂಗಳೂರು’ ಏರ್ಪಡಿಸಿದ ನಾಟಕೋತ್ಸವದಲ್ಲಿ ’ ಮೋಹನಸ್ವಾಮಿ’ ನಾಟಕ ಪ್ರದರ್ಶನಗೊಂಡಿತು. ಕನ್ನಡದ ಜನಪ್ರಿಯ ಬರಹಗಾರರಾಗಿರುವ ವಸುಧೇಂದ್ರ ಅವರ ’ಮೋಹನಸ್ವಾಮಿ’ ಕಾದಂಬರಿಯನ್ನು ರಂಗಪಠ್ಯವಾಗಿಸಿದವರು ಬಸವರಾಜ ಸೂಳೇರಿಪಾಳ್ಯ. ’ವಯಸ್ಕರಿಗಾಗಿ’ ಎಂಬ ಟ್ಯಾಗ್ ಲೈನ್ ಹೊತ್ತ ಈ ನಾಟಕವನ್ನು ರೂಪಾಂತರ ತಂಡಕ್ಕಾಗಿ  ನಿರ್ದೇಶಿಸಿದವರು ಕೆ.ಎಸ್.ಡಿ.ಎಲ್ ಚಂದ್ರು.

ಮೊದಲಿಗೆ ಹೇಳಿಬಿಡುತ್ತೇನೆ. ಇದು ನಾಟಕದ ವಿಮರ್ಶೆಯಲ್ಲ. ಇದು ನನ್ನ ಅನ್ನಿಸಿಕೆ ಮಾತ್ರ ..ವೈಯಕ್ತಿಕವಾಗಿ ನನ್ನಲ್ಲಿ ಬಹುನಿರೀಕ್ಷೆಯನ್ನು ಹುಟ್ಟಿಸಿದ ನಾಟಕ ಇದಾಗಿತ್ತು. ನಾಟ್ಕ ಮುಗಿದೊಡನೆ ನನ್ನ ಅಭಿಪ್ರಾಯವನ್ನು ಬರೆಯಬೇಕೆಂದುಕೊಂಡಿದ್ದೆ. ಆದರೆ ಹೊರಊರಿಗೆ ಹೋಗಬೇಕಾದ ಅನಿವಾರ್ಯತೆ ಬಂದಕಾರಣ ಬರೆಯಲಾಗಲಿಲ್ಲ. ಬಂದೊಡನೆ ಪೇಪರ್ ಗಳನ್ನೆಲ್ಲಾ ಮಗುಚಿ ನೋಡಿದೆ. ಯಾರೂ ಇದರ ಬಗ್ಗೆ ಬರೆದಿರುವುದು ಕಣ್ಣಿಗೆ ಬೀಳದ ಕಾರಣ ನನಗನ್ನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳೋಣವೆಂದುಕೊಂಡು ಕಂಪ್ಯೂಟರ್ ಮುಂದೆ ಕೂತಿದ್ದೇನೆ. ಯಾಕೆಂದರೆ ನಿರ್ಲಕ್ಷಿಬಿಡಬಹುದಾದ ಕಾದಂಬರಿ ’ಮೋಹನಸ್ವಾಮಿ’ ಅಲ್ಲ.

ಸಾಹಿತ್ಯಾಸಕ್ತರಿಗೆ ಗೊತ್ತಿದೆ. ಮೋಹನಸ್ವಾಮಿ ಹೋಮೋಸೆಕ್ಛುವಲ್ ಬಗ್ಗೆ ಕನ್ನಡದಲ್ಲಿ ಬಂದ ಮೊತ್ತ ಮೊದಲ ಕಾದಂಬರಿ. ಇದು ಪ್ರಕಟನೆಯಾಗಿ ಓದುಗರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿತು.ಅನಂತರದಲ್ಲಿ ಇದರ ಲೇಖಕ ವಸುಧೆಂದ್ರ, ತಾನೊಬ್ಬ ಗೇ ಎಂಬುದನ್ನು ಸಮಾಜದ ಎದುರು  ನಿರ್ಭಯವಾಗಿ ಘೋಷಿಸಿಕೊಂಡರು.ಹಾಗಾಗಿ ಆ ಕಾದಂಬರಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಶಾಶ್ವತ ಸ್ಥಾನವೊಂದು ದೊರಕಿದೆ. ಅಂತಹ ಕಾದಂಬರಿಯೊಂದನ್ನು ನಾಟಕಕ್ಕೆ ಅಳವಡಿಸಲು ಮುಂದಾದ ಚಂದ್ರು ಅವರು ಅಭಿನಂಧನೆಗೆ ಅರ್ಹರು. ಕಾದಂಬರಿಯೆಂಬ ಜನಪ್ರಿಯ ಮಾಧ್ಯಮದಿಂದ ನಾಟಕವೆಂಬ ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿಕೊಂಡಾಗ ಮಾಡಿಕೊಂಡ ಬದಲಾವಣೆಗಳೇನು? ಅಲ್ಲಿನ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸಿದರು ಎಂಬುದು ನನ್ನಂಥ ನಾಟಕಾಸ್ತರ ಕುತೂಹಲಕರ ಸಂಗತಿಯಾಗಿತ್ತು.

ಒಬ್ಬ ಓದುಗ ತನಗೆ ತಾನೇ ಸ್ವಯಂಭೂ. ಬರಹವೊಂದನ್ನು ಓದುತ್ತಾ..ಓದುತ್ತಾ ತನಗೆ ತಾನೇ ಕಲ್ಪನಾಲೋಕದಲ್ಲಿ ವಿಹರಿಸಬಲ್ಲ. ಕಾಲದೇಶಗಳನ್ನು ಮೀರಿ ತನಗೆನುಬೇಕೋ ಅದನ್ನು ಪಡೆದುಕೊಳ್ಳಬಲ್ಲ. ಆದರೆ ನಾಟ್ಕ ಹಾಗಲ್ಲ. ಅದು ದ್ರುಶ್ಯಕಲೆ. ಅಲ್ಲಿ ಜೀವಂತ ಪ್ರೇಕ್ಷಕರಿರುತ್ತಾರೆ. ಹಾಗಾಗಿ ರಂಗಮಂದಿರದಿಂದ ಪ್ರೇಕ್ಷಾಗಂಣಕ್ಕೆ ಹರಿದು ಬರಬೇಕಾದ ಅಂಶಗಳು ಯಾವುದು? ಔಚಿತ್ಯಪ್ರಜ್ನೆ ಮೀರದಂತೆ ಯಾವುದನ್ನು ಹೇಗೆ ಕೊಡಬೇಕು ಎಂಬುದನ್ನು ನಾಟ್ಕ ಕಟ್ಟುವವರು ನಿಶ್ಚಯಿಸುವುದು ಅತೀ ಮುಖ್ಯ. ’ಓದುವಿಕೆ’ ಮತ್ತು ’ನೋಡುವಿಕೆ’ ಎರಡೂ ಭಿನ್ನ ಆಯಾಮಗಳೇ.

.ಕೆಲವು ಆದಿಗಳಿಗೆ ಮುನ್ನುಡಿಯಾಗಿದ್ದ ಕಾದಂಬರಿಯೊಂದು ಇನ್ನೊಂದು ಮಾಧ್ಯಮಕ್ಕೆ ರೂಪಾಂತರಗೊಂಡಾಗ ಅದು ಕೂಡಾ ಇನ್ನೊಂದು ಆದಿಗೆ ನಾಂದಿಯಾಗಬಹುದಾಗಿದ್ದ ಸಂದರ್ಭವಿದು. ಅದ್ದರಿಂದ ಇಂತಹ ಹೊತ್ತಿನಲ್ಲಿ ಆ ನಾಟಕವನ್ನು ಭೂತ,ವರ್ತಮಾನ,ಭವಿಷ್ಯತ್ತಿನ ಕ್ಷಕಿರಣದಡಿಯಲ್ಲಿ ನೋಡುವ ಪ್ರಯತ್ನದ ಎಳೆಯೆಂದು ಭಾವಿಸಬಹುದಾದಲ್ಲಿ...

ನಿಮಗೆ ನೆನಪಿರಬಹುದು ೧೯೯೬ರಲ್ಲಿ ಹಿಂದಿಯಲ್ಲಿ ದೀಪಾ ಮೆಹ್ತಾ ’ ಫೈರ್’ ಎನ್ನುವ ಸಿನೇಮಾ ಮಾಡಿದ್ದರು ಅದು ಇಬ್ಬರು ಮಹಿಳೆಯರ ನಡುವಿನ ಲೈಂಗಿಕ ಚಟುವಟಿಕೆಯ ವಸ್ತುವನ್ನು ಒಳಗೊಂಡಿತ್ತು. ಶಬನಾ ಅಜ್ಮಿ ಮತ್ತು ನಂದಿತಾದಾಸ್ ಮುಖ್ಯಭೂಮಿಕೆಯಲ್ಲಿದ್ದರು. ಇದು ಭಾರತೀಯ ಸಿನಿಮಾ ರಂಗದಲ್ಲಿ ಹೋಮೋಸೆಕ್ಚುವಲ್ ಬಗ್ಗೆ  ಬಂದ ಮೊತ್ತ ಮೊದಲ ಸಿನೇಮಾವಾಗಿತ್ತು. ಆಗ ಸಂಪ್ರದಾಯಸ್ಥರು ಈ ಸಿನೇಮಾದ ವಿರುದ್ಧ ದೇಶದ ಹಲವಾರು ಕಡೆ ಪ್ರತಿಭಟನೆಗಳನ್ನು ನಡೆಸಿದ್ದರು.

ಪೈರ್, ಲೆಸ್ಬಿಯನ್ ಗಳ ಬಗ್ಗೆ ಬಂದ ಸಿನೇಮಾವಾದರೆ , ಹನ್ಸಾಲ್ ಮೆಹತಾ ಅನ್ನುವವರು ೨೦೧೬ರಲ್ಲಿ ಅಲಿಗಡ್ [ Aligrah] ಎಂಬ ಸಿನೇಮಾ ಮಾಡಿದ್ದರು. ಅದು ಗೇ ಯಾಗಿ ಬದುಕಿದ ವ್ಯಕ್ತಿಯೊಬ್ಬನ ಜೀವನಚರಿತ್ರೆಯನ್ನಾಧರಿಸಿದ್ದ ಸಿನೇಮಾವಾಗಿತ್ತು. ಅಲಿಗಡ್ ವಿಶ್ವವಿದ್ಯಾಲಯದಲ್ಲಿ ಲಿಂಗ್ವೆಸ್ಟಿಕ್ ಪ್ರೋಪೆಸರ್ ಆಗಿದ್ದ ಶ್ರೀನಿವಾಸ್ ರಾಮಚಂದ್ರ ಎಂಬವರು ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂಬ ಕಾರಣದಿಂದಾಗಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ವಿಚಾರಣೆಗೊಳಪಡಿಸಲಾಗಿತ್ತು. ಅನಂತರ ಅವರನ್ನು ಪುನರ್ ನೇಮಕಗೊಳಿಸಿದರೂ ಕೊನೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಮನೋಜ್ ಬಾಜ್ಪೈ ಪ್ರೋಪೆಸರ್ ಪಾತ್ರದಲ್ಲಿಯೂ ರಾಜಕುಮಾರ್ ರಾವ್ ಪತ್ರಕರ್ತನ ಪಾತ್ರದಲ್ಲಿಯೂ ನಟಿಸಿದ್ದರು.   ಒಬ್ಬ ಜರ್ನಲಿಸ್ಟ್ ದೃಷ್ಟಿಕೋನದಿಂದ ಆ ಸಿನೇಮಾವನ್ನು ನಿರೂಪಣೆ ಮಾಡಲಾಗಿತ್ತು.  ಅದೊಂದು ಟೆಕ್ನಿಕ್ ,ಅದು ನಿರ್ದೇಶಕನ ಸ್ವಾತಂತ್ರ್ಯ. ಅಂತಹದೊಂದು ತಂತ್ರದ ಮೂಲಕವೇ ಮೋಹನಸ್ವಾಮಿಯ ಎದೆಯ ತಳಮಳ, ಒಳಗಿನ ವಿಪ್ಲವ ಪ್ರೇಕ್ಷರೆದೆಗೆ ಹರಿದು ಬರಲು ಸಾಧ್ಯತೆಯಿತ್ತು..

ಗಂಭೀರವಾದ ವಸ್ತುವೊಂದನ್ನು ದೃಶ್ಯಮಾಧ್ಯಮಕ್ಕೆ ತಂದಾಗ ಅದನ್ನು ಅಷ್ಟೇ ಗಂಭೀರವಾಗಿ ತೆರೆಯ ಮೇಲೆ ಅಥ್ವಾ ರಂಗದ ಮೇಲೆ ಅನಾವರಣಗೊಳಿಸುವುದು ಅಷ್ಟೇ ಮುಖ್ಯ. ಈ ದೃಷ್ಟಿಯಿಂದ ನೋಡಿದಾಗ ’ಮೋಹನಸ್ವಾಮಿ’ ಎಂಬ ನಾಟಕ ಒಂದು ಪ್ರಯತ್ನದ ಮಟ್ಟಕ್ಕಷ್ಟೇ ಸೀಮಿತವಾಯ್ತು.

ನಾಟಕದ ಬಗ್ಗೆ, ರಂಗ ತಂತ್ರದ ಬಗ್ಗೆ ಏನನ್ನೂ ನಾನು ಹೇಳುವುದಿಲ್ಲ. ನಟ-ನಟಿಯರು, ಬ್ಲಾಕಿಂಗ್, ಸ್ವರಭಾರ, ರಂಗಸಜ್ಜಿಕೆ, ರಂಗಪರಿಕರ, ಸಂಗೀತ, ದ್ವನಿ, ಲೈಟ್-ಎಲ್ಲವೂ ಕೂಡಾ ಪರಿಣಾಮ ಬೀರುವುದು ಪ್ರೇಕ್ಷಕರ ಮೇಲೆ. ಆ ದೃಷ್ಟಿಯಿಂದ ನೋಡುವುದಾದರೆ.... ಜನರು ಆಗಾಗ ಚಪ್ಪಾಳೆ ಹೊಡೆಯುತ್ತಿದ್ದರು. ಶಿಳ್ಳೆ ಹಾಕುತ್ತಿದ್ದರು. ಕನ್ನಡ ಸಿನೇಮಾ ಪ್ರೇಕ್ಷಕರು ಹಿಜಿಡಾಗಳನ್ನು ನೋಡುವ ರೀತಿಯಲ್ಲೇ ಈ ನಾಟಕದ ಕೆಲ ಪ್ರೇಕ್ಷಕರು ಕೂಡಾ ಅದೇ ರೀತಿಯಲ್ಲಿ ಎಂಜಾಯ್ ಮಾಡಿದರು..
ಚಪ್ಪಾಳೆ ಹೊಡೆಸಿಕೊಳ್ಳುವ, ರಂಜನೆಯ ನಾಟಕವೇ ಮೋಹನಸ್ವಾಮಿ? ಅದು  ಪ್ರೇಕ್ಷಕರ ಎದೆಗಿಳಿದು ಅತ್ಮವಲೋಕನಕ್ಕೆ ಎಡೆಮಾಡಿಕೊಡಬೇಕಾಗಿತ್ತಲ್ಲವೇ?

ದೃಶ್ಯಕಲೆಗಳಲ್ಲಿ ಮೌನ ಮಾತಾಡುತ್ತದೆ. ಸಂಗೀತ ಅದಕ್ಕೆ ಪೂರಕವಾಗಿರುತ್ತದೆ. ಆದರೆ ಇಲ್ಲಿ ’ಟೊಂಯ್ ಟೊಂಯ್’ ಅನ್ನುವ ಸಂಗೀತ ನಾಟಕವನ್ನು ವಾಚ್ಯದೆಡೆಗೆ ತಳ್ಳುತ್ತಿತ್ತು. ಬಿಗಿ ಬಂಧದಲ್ಲಿ ಒಂದೂವರೆ ಘಂಟೆಯಲ್ಲಿ ಕಟ್ಟಿಕೊಡಬಹುದಾದ ನಾಟ್ಕವನ್ನು ಎರಡೂವರೆ ಘಂಟೆಗೆ ಲಂಬಿಸಿ ಮೇಲ್ಪದರಿನಲ್ಲಿ ರಂಜಿಸುವಂತೆ ಮಾಡಲಾಗಿತ್ತು.


ಚಂದ್ರು ನನ್ನ ರಂಗ ಗೆಳೆಯರು, ಒಳ್ಳೆಯ ನಿರ್ದೇಶಕರು. ಅವರ ಹಲವಾರು ನಾಟ್ಕಗಳನ್ನು ನೋಡಿದ್ದೇನೆ. ಈ ಬಾರಿ ಯಾಕೆ ಹೀಗಾಯ್ತೋ ಗೊತ್ತಿಲ್ಲ. ಬಹುಶಃ ಮುಂದಿನ ಪ್ರಯೋಗದಲ್ಲಿ ಇಲ್ಲಾದ ನ್ಯೂನತೆಗಳನ್ನು ತುಂಬಬಲ್ಲರು ಅಂತ ವಿಶ್ವಾಸವಿದೆ. ಅದಕ್ಕೆ ತಾನೇ ನಾಟಕವನ್ನು ”ಪ್ರಯೋಗ’ ಎಂದು ಕರೆಯುವುದು. ಪ್ರತಿ ಪ್ರದರ್ಶನವೂ ಒಂದು ಹೊಸ ಪ್ರಯೋಗವೇ. ಮುಂದಿನ ಬಾರಿ ಮೋಹನಸ್ವಾಮಿ ಪ್ರದರ್ಶನಗೊಂಡಾಗ ಇನ್ನೊಮ್ಮೆ ಅದನ್ನು ತಪ್ಪದೆ ನೋಡುವ ಆಸೆಯಿದೆ ನನಗೆ.. 

Sunday, October 30, 2016

ಬಲಿಚಕ್ರವರ್ತಿ ಮತ್ತೆ ಬೇರೆ ರಾಜ್ಯ ಕಟ್ಟಿದನೇ?



ದೀಪಾವಳಿಯನ್ನು ವಾಮನ ಜಯಂತಿಯನ್ನಾಗಿ ಆಚರಿಸಬೇಕೆಂದು ಕೆಲವು ವಾರಗಳ ಹಿಂದೆ ಬಿಜೆಪಿಯ ಅಧ್ಯಕ್ಷ ಅಮಿತಾ ಶಾ ಅಪ್ಪಣೆ ಕೊಡಿಸಿದಾಗ ನನಗೆ ನಗುವುಕ್ಕಿ ಬಂದದ್ದನ್ನು ಬಿಟ್ಟರೆ ಇನ್ನೇನೂ ಪ್ರತಿಕ್ರಿಯೆ ಇರಲಿಲ್ಲ. ನಮ್ಮ ಜನಪದರ ಬದುಕಿನಲ್ಲಿ ಬಲಿ ಚಕ್ರವರ್ತಿ ಎಷ್ಟು ಹಾಸುಹೊಕ್ಕಾಗಿದ್ದಾನೆ ಎಂದರೆ ಇಂತಹ ಹತ್ತು ಅಮಿತ್ ಶಾಗಳು ಉರುಳಾಡುತ್ತಾ ಬಂದು ತಿಪ್ಪರಲಾಗ ಹಾಕಿದರೂ ಅವರ ನಂಬುಗೆಯ ಜಗತ್ತನ್ನು ಕಿಂಚಿತ್ತು ಅಲ್ಲಾಡಿಸಲಾರರು.

ದೀಪಾವಳಿಯೆಂದರೆ ಬೆಳಕಿನ ಹಬ್ಬ. ಕತ್ತಲನ್ನು ದೂರ ಓಡಿಸುವ ಹಣತೆ ಹಬ್ಬ.
ಪುರಾಣದ ಪ್ರಕಾರ ವಿಷ್ಣುವಿನ ಅವತಾರನಾದ ವಾಮನ ಅಸುರ ಚಕ್ರವರ್ತಿ ಬಲಿಯ ಅಸ್ಥಾನಕ್ಕೆ ಬಂದು ಮೂರಡಿ ಭೂಮಿಯನ್ನು ಬಿಕ್ಷೆಯಾಗಿ ಕೇಳುತ್ತಾನೆ. ಬಲಿ ’ತಥಾಸ್ತು ಅನ್ನುತಾನೆ. ವಾಮನ ಆಕಾಶದೆತ್ತರಕ್ಕೆ ಬೆಳೆದು ನಿಂತು ಒಂದು ಪಾದದಿಂದ ಭೂಮಿಯನ್ನೂ ಇನ್ನೊಂದು ಪಾದದಿಂದ ಆಕಾಶವನ್ನೂ ಅಳೆದು ಇನ್ನೊಂದು ಪಾದವನ್ನು ಎಲ್ಲಿಡಲಿ? ಎಂದು ಕೇಳಿದಾಗ ಸತ್ಯಸಂಧನಾದ ಆ ಅಸುರ ದೊರೆ ಮೂರನೆಯ ಪಾದವನ್ನು ತನ್ನ ತಲೆಯ ಮೇಲಿಡುವಂತೆ ಹೇಳುತ್ತಾನೆ. ಅಲ್ಲಿಗೆ ಕಾಲಿಟ್ಟ ವಾಮನ ಅವನನ್ನು ಪಾತಾಳಕ್ಕೆ ತಳ್ಳಿಬಿಡುತ್ತಾನೆ.

 ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಇನ್ನೆಂದೂ ತನ್ನ ದೇಶವನ್ನು, ತನ್ನ ಪ್ರೀತಿಪಾತ್ರ ಪ್ರಜೆಗಳನ್ನು ಕಾಣಲು ಸಾಧ್ಯವಿಲ್ಲವೆಂಬುದು ಅರಿವಾದಾಗ ಆತ ತೀವ್ರ ಸಂಕಟಗೊಳಗಾಗುತ್ತಾನೆ. ಅದಕ್ಕಾಗಿ ವರ್ಷದಲ್ಲಿ ಮೂರು ದಿನಗಳ ಮಟ್ಟಿಗೆ ತನ್ನ ರಾಜ್ಯಕ್ಕೆ ಬೇಟಿ ಕೊಡಲು ಅನುಮತಿಯನ್ನು ನೀಡುವಂತೆ ತನ್ನ ಶತ್ರುವಾದ ವಾಮನನನ್ನೇ ಕೇಳಿಕೊಳ್ಳುತ್ತಾನೆ. ವಾಮನ ಅವನ ಕೋರಿಕೆಯನ್ನು ಮನ್ನಿಸುತ್ತಾನೆ. ಆ ಮೂರು ದಿನಗಳೇ ದೀಪಾವಳಿ. ತಮ್ಮ ಪ್ರಿಯ ಪ್ರಜೆಗಳು ಹೇಗಿದ್ದಾರೆಂದು ನೋಡಲು ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕಕ್ಕೆ ಬರುತ್ತಾನೆ. ತಮ್ಮ ಪ್ರೀತಿಯ ರಾಜನ ಬರವನ್ನು ಸ್ವಾಗತಿಸಲು ಜನರು ನಡೆಸುವ ತಯಾರಿಯೇ ದೀಪಾವಳಿ.

ನನಗೆ ದೀಪಾವಳಿಯೆಂದರೆ ನೆನಪಾಗುವುದು ನನ್ನ ಬಾಲ್ಯದ ದೀಪಾವಳಿ. ಮುಖ್ಯವಾಗಿ ನಾವು ಸಂಗ್ರಹಿಸುತ್ತಿದ್ದ ವಿವಿಧ ಜಾತಿಯ ಹೂಗಳು. ಅದರಲ್ಲಿಯೂ ಕುರುಡಿ ಹೂ ಎಂಬ ವಿಶೇಷ ಪರಿಮಳವುಳ್ಳ ಬಳ್ಳಿ ಜಾತಿಯ ಹೂ. ಇದರ ಪರಿಮಳ ಪರ್ಲಾಂಗ್ ಗಟ್ಟಲೆ ದೂರ ಪಸರಿಸುತ್ತಿರುತ್ತದೆ. ಆ ಹೂವನ್ನು ಹುಡುಕಿಕೊಂಡು ನಾವು, ಮಕ್ಕಳು ಅಡ್ಕ. ಕಾಡುಗಳಲ್ಲಿ ಮೈಲಿಗಟ್ಟಲೆ ಅಲೆದಾಡುತ್ತಿದ್ದೆವು. ಹಬ್ಬ ಇನ್ನೇನು ಒಂದುವಾರ ಇದೆಯೆನ್ನುವಾಗಲೇ ಅಲೆದಾಡಿ ಅದಿರುವ ಜಾಗವನ್ನು ಗುರುತು ಮಾಡಿ ಇಡುತ್ತಿದ್ದೆವು. ದೀಪಾವಳಿಯಂದು ಬೆಳಿಗ್ಗೆಯೇ ಹೋಗಿ ಅದನ್ನು ಕಿತ್ತು ತರುತ್ತಿದ್ದೆವು.

ಇನ್ನೊಂದು ವಿಶೇಷತೆಯೆಂದರೆ ಬಲಿಯೇಂದ್ರ ಕಲ್ಲಿನ ಮುಂದೆ ಮರ ಹಾಕುವುದು. ಮರ ಅಂದರೆ ಅದು ಹಾಲೆ ಮರ. ಈ ಹಾಲೇ ಮರಕ್ಕೆ ಗಡಿ ಹಾಕಿದಾಗ ಅಂದರೆ ಗಾಯ ಮಾಡಿದಾಗ ಅದರಿಂದ ಹಾಲಿನಂತ ದ್ರವ ಒಸರುತ್ತದೆ. ಆಟಿ ತಿಂಗಳಲ್ಲಿ- ಆಷಾಡಮಾಸದಲ್ಲಿ- ತುಳುನಾಡಿನಲ್ಲಿ ಆಚರಿಸುವ ಆಟಿ ಅಮವಾಸ್ಯೆಯೆಂಬ ಕಹಿ ಮದ್ದು ಕುಡಿಯುವ ಆಚರಣೆಯಲ್ಲೂ ಇದೇ ಮರದ ಹಾಲನ್ನೇ ಮದ್ದಿಗೆ ಬೆರೆಸುವ ಪದ್ದತಿಯಿದೆ. ದೀಪಾವಳಿಯಲ್ಲಿ ಈ ಮರದ ಮೂರು ಕವಲುಗಳುಳ್ಳ ಎರಡು ಗೆಲ್ಲುಗಳು ಬೇಕೇ ಬೇಕು.  ಇದನ್ನು ಕೂಡಾ ವಾರಕ್ಕಿಂತ ಮೊದಲೇ ಕಾಡು-ಕುಮೇರಿಯಲೆಲ್ಲ ಅಲೆದಾಡಿ ಗುರುತಿಟ್ಟುಕೊಳ್ಳುತ್ತಿದ್ದೆವು. ಅದರ ತೊಗಟೆಯನ್ನು ಪೂರ್ತಿ ಕೆತ್ತಿದರೆ ಗಂಡು. ಉದ್ದಕ್ಕೆ ಸ್ವಲ್ಪ ಸ್ವಲ್ಪ ತೊಗಟೆ ಉಳಿಸಿದರೆ ಹೆಣ್ಣು. ಇನ್ನುಳಿದಂತೆ ಅಂಬಳೆಕಾಯಿ, ಲಂಬಾಸು , ಅಡಿಕೆಹಣ್ಣಿನ ಮಾಲೆಗಳನ್ನು ವಾರಕ್ಕೆ ಮೊದಲೇ ಸಿದ್ದಮಾಡಿಕೊಳ್ಳುತ್ತಿದ್ದೆವು..

ಉಗ್ರಸ್ತಂಭ- ಹಿರಣ್ಯಕಸಿಪನ ಅರಮನೆಯ ಕಂಬವಿದಂತೆ.
ದೀಪಾವಳಿಯೆಂಬುದು ಕೃಷಿಕರ ಹಬ್ಬ. ಗೋವುಗಳಿಗೂ ರೈತಾಪಿ ಜನರಿಗೂ ಭಾವನಾತ್ಮಕವಾದ ನೆಂಟಿದೆ.
ವರ್ಷವಿಡೀ ತನ್ನ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳಿಗೆ,ದನ-ಕರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ. ಇನ್ನೂ ಕೆಂಪಗೆ ತಿರುಗದ ಕಾಯಿ ಅಡಿಕೆಯನ್ನು ಮಧ್ಯದಲ್ಲಿ ಭಾಗ ಮಾಡಿ ಒಳಗಿನ ತಿರುಳನ್ನು ತೆಗೆದು ಅದಕ್ಕೆ ಎಣ್ಣೆ ಹಾಕಿ ಬತ್ತಿಯಿಟ್ಟರೆ ನಮ್ಮ ಹಣತೆಗಳು ಸಿದ್ದಗೊಳ್ಳುತ್ತಿದ್ದವು. ಅದನ್ನು ಮನೆಯ ಸುತ್ತಲೂ ಹಚ್ಚಿಡುತ್ತಿದ್ದೆವು.
 ನನ್ನ ಅಜ್ಜಿ ದನಗಳಿಗೆ ಬೆಳಕು ತೋರಿಸುವ ದಿನಚಿತ್ರಣ ನನಗೀಗಲೂ ನೆನಪಿದೆ.

ಅಜ್ಜಿಯ ಎಡಗೈಯಲ್ಲಿ ಒಂದು ಬುಟ್ಟಿ. ಅದರೊಳಗೆ ಬಾಳೆಹಣ್ಣು, ಅವಲಕ್ಕಿ ಮತ್ತು.ಅಪ್ಪ [ಗುಳಿಹಿಟ್ಟು] ಬಲಗೈಯಲ್ಲಿ ಊರುಗೋಲು.. ನಮ್ಮಕೈಯ್ಯಲಿ ದೊಡ್ಡ ದೊಂದಿ ಮತ್ತು ದನಗಳ ಕೊರಳಿಗೆ ಹಾಕುವ ಹೂವಿನ ಹಾರಗಳು. ಆ ಹೂಗಳನ್ನು ನಾವು ಸಂಗ್ರಹಿಸುವ ಪರಿಯನ್ನು ಹೇಳಹೊರಟರೆ ಅದೇ ಒಂದು ದೊಡ್ಡ ಪ್ರಬಂಧವಾದೀತು. ಇದರೊಂದಿಗೆ ಹಟ್ಟಿಗೆ ನಮ್ಮ ಪಯಣ. ಅಲ್ಲಿಗೆ ಹೋದ ಒಡನೆಯೇ ನಮ್ಮವ್ವ [ಅಜ್ಜಿಯನ್ನು ನಾವೆಲ್ಲಾ ಕರೆಯೋದು ಅವ್ವಾ ಅಂತ] ಬುಟ್ಟಿಯನ್ನು ಬೈಪಾಣೆ ಮೇಲಿರಿಸಿ ನಮ್ಮ ಕೈಯ್ಯಿಂದ ದೊಂದಿಯನ್ನು ತಗೊಂಡು ಸೊಂಟವನ್ನು ನೆಟ್ಟಗೆ ಮಾಡಿಕೊಂಡು ಎಲ್ಲಾ ದನಗಳ ಮುಖವನ್ನೂ ಆ ಬೆಳಕಲ್ಲಿ ನೋಡಿ..ವರ್ಷಕ್ಕೊಂದು ಹಬ್ಬ ಬೆಳಕು ನೋಡಿ ಮಕ್ಕಳೇಅಂತ ಗಟ್ಟಿಯಾಗಿ ಹೇಳುತ್ತಿದ್ದರು. ಅನಂತರ ಎಲ್ಲಾ ದನಗಳ ಕುತ್ತಿಗೆಗೂ ನನ್ನ ಕೈಯ್ಯಲ್ಲಿ ಹಾರ ಹಾಕಿಸುತ್ತಿದ್ದರು. ನನ್ನ ಕೈಯ್ಯಲ್ಲೆ ಯಾಕೆ ಗೊತ್ತಾ? ನಾನು ಅಜ್ಜಿ ಸಾಕಿದ ಪುಳ್ಳಿ. ಅಜ್ಜಿ ಸಾಕಿದ ಪುಳ್ಳಿ ಬೊಜ್ಜಕ್ಕೂ ಬಾರಅಂತ ನಮ್ಮಕಡೆ ಲೇವಡಿ ಮಾಡಿಕೊಂಡು ಆಡುವುದುಂಟು. ನಾನು ಹಾಗೇನೂ ಇಲ್ಲ ಬಿಡಿ..ಸಖತ್ ಬುದ್ಧಿವಂತಳು. ಇದು ನಿಮಗೂ ಗೊತ್ತಲ್ಲ!


 ಅಜ್ಜಿ ಹಟ್ಟಿಯಲ್ಲಿ ನಿಂತು ಹೇಳುತ್ತಿದ್ದ ಹಾಡೊಂದು ಮೂರು ದಶಕಗಳು ಕಳೆದರೂ ಇನ್ನೂ ನನಗೆ ನೆನಪಿದೆ...

ಹುಲ್ಲು ಕಂಡಲ್ಲಿ ಹುಲ್ಲು ಮೇದ್ಕೊಂಡು
ನೀರ್ ಕಂಡಲ್ಲಿ ನೀರ್ ಕುಡ್ಕೊಂಡು
ಕಾಲಲ್ಲಿ ಹೋಗಿ ಕೋಲಲ್ಲಿ ಬನ್ನಿ
ಬಾಳ್ ಮಗನೇ..ಬಾಳ್

ಇದಾದ ಮೇಲೆ ಗೊಬ್ಬರಗುಂಡಿಗೆ, ಗದ್ದೆಗೆ ಎಡೆ ಇಟ್ಟು ಕೊಲ್ತಿರಿ ಚುಚ್ಚಿ ಕೈಮುಗಿಯಬೇಕು..ಅನಂತರದಲ್ಲಿ
ಅಂಗಾರ ಕಲ್ಲಿನ ಹತ್ತಿರದಲ್ಲಿ ಹಾಕಿರುವ ಹಣ್ಣಡಿಕೆ, ಹೂ,ಪಿಂಗಾರಗಳಿಂದ ಶೃಂಗರಿಸಿದ ಬಲೀಂದ್ರ ಕಂಬದಲ್ಲಿ ಬಲೀಂದ್ರನನ್ನು ಕರೆಯುವ ಬಲೀಂದ್ರ ಪೂಜೆ. ದೀಪವಿಟ್ಟು, ಕಾಯಿ ಒಡೆದು ಪೂಜೆ ಸಲ್ಲಿಸಿ ಎಡೆಯಿಟ್ಟು  ಕೈಮುಗಿಯುತ್ತಾ ;’ ಬಲಿಯೇಂದ್ರಾ ಬಾ ಕೂ .....ಕೂ..ಕೂ..’ ಎಂದು ಕೂಗುತ್ತಾ ಬೆನ್ನು ಹಾಕಿ ಹಿಂತಿರುಗಿ ನಿಲ್ಲುವುದು
ಆಮೇಲೆ ಮನೆಗೆ ಬಂದು ಎಲ್ಲರೂ ಒಟ್ಟಾಗಿ ಕೂತು ಊಟ ಮಾಡುವುದು..ಇದೆಲ್ಲಾ ಇವತ್ತಿಗೂ ನಡೆದುಕೊಂಡು ಬರುತ್ತಿದೆ..

ನನ್ನ ತವರು ಮನೆಯಲ್ಲಿ ಹಟ್ಟಿ ತುಂಬಾ ನಾಟಿ ದನಗಳಿವೆ..ಆದರೆ ಗದ್ದೆ ಅಡಿಕೆತೋಟವಾಗಿದೆ..ಗೊಬ್ಬರ ಗುಂಡಿಯಿಲ್ಲ. ಇನ್ನು ದನಗಳನ್ನೂ ಮಾರಿಬಿಟ್ಟರೆ ದೀಪಾವಳಿ ಹಬ್ಬವೆಂಬುದು ನಗರಗಳಲ್ಲಾಗುತ್ತಿದ್ದಂತೆಯೇ ರೈತಾಪಿ ಜನರಲ್ಲಿ ಕೂಡಾ ಹೊಸ ವ್ಯಾಖ್ಯೆಯನ್ನು ಪಡೆದುಕೊಳ್ಳಬಹುದು..


ರಕ್ತಕೊಳ- ಹಿರಣ್ಯಕಶಿಪನನ್ನು ಕೊಂದಾದ ಮೇಲೆ ನರಸಿಂಹನು ಕೈತೊಳೆದುಕೊಂಡ ಕೊಳ.
ಈ ನೀರನ್ನು ತಲೆಗೆ ಪ್ರೋಕ್ಷಿಸಿಕೊಳ್ಳುವುದಿಲ್ಲ.
ಬಲಿ ಚಕ್ರವರ್ತಿಯ ಅಪ್ಪ ವಿರೋಚನ. ವಿರೋಚನನ ಅಪ್ಪ ಪ್ರಹ್ಲಾದ. ಪ್ರಹ್ಲಾದನನ ಅಪ್ಪ. ಹಿರಣ್ಯಕಶಿಪ್.  ಹಿರಣ್ಯಕಶಿಪ್ ನನ್ನು ಕೊಂದವನೇ ಅವನ ಮರಿಮಗನಾದ ಬಲಿಯ ಬದುಕನ್ನೂ ಬಲಿ ತೆಗೆದುಕೊಳ್ಳುತ್ತಾನೆ. ಅವನೇ ವಿಷ್ಣು. ಅಂದರೆ ಇದು ಶೈವ ಮತ್ತು ವೈಷ್ಣವ ಪಂಥಗಳ ನಡುವಿನ ತಿಕ್ಕಾಟವಾಗಿರಬಹುದೇ? ಗೊತ್ತಿಲ್ಲ. ಆದರೆ ತುಳುನಾಡಿನಲ್ಲಿ ಬಲಿಯೇಂದ್ರನನ್ನು ಬರಮಾಡಿಕೊಳ್ಳುತ್ತಿರುವ ಆಚರಣೆಗಳೆಲ್ಲವೂ ಮೂಲತಃ ನಿಸರ್ಗಕ್ಕೆ ಹತ್ತಿರವಾದ ಪರಿಶಿಷ್ಟ ಆಚರಣೆಗಳೇ ಆಗಿವೆ.

ಹಿರಣ್ಯಕಶಿಪ್ ರಾಜ್ಯಭಾರ ಮಾಡಿದನೆಂದು ನಂಬಲಾದ ಜಾಗವೊಂದು ಈ ಭೂಮಿಯ ಮೇಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆ ಅಂದ್ರಪ್ರದೇಶದ ನಲ್ಲಮಲ ಕಾಡಿಗೆ ಚಾರಣಕ್ಕೆಂದು ಹೋದಾಗ ದಂತಕಥೆಯಾಗಿರುವ ಆ  ಜಾಗಗಳನ್ನು ನೋಡಿ ಬಂದೆ. ಆಗ ನನಗೆ ಅನ್ನಿಸಿದ್ದು, ಹಿರಣ್ಯಕಶಿಪು ಅಂಧ್ರದ ನಲ್ಲಮಲ ಅರಣ್ಯಪ್ರದೇಶದಲ್ಲಿ ರಾಜ್ಯಭಾರ ಮಾಡಿದ್ದರೆ ಅವನ ಮರಿಮಗ ಬಲಿ ಚಕ್ರವರ್ತಿಯೂ ಇಲ್ಲೇ ರಾಜ್ಯಭಾರ ಮಾಡಿರಬೇಕು. ಅವನನ್ನು ವಾಮನ ಪಾತಾಳಲೋಕಕ್ಕೆ ತಳ್ಳಿದ ಎನ್ನುತ್ತದೆ ಪುರಾಣ. ಅಂದರೆ ಕೊಂದಿರಬಹುದೇ? ಹಾಗಿಲ್ಲದೆ ಅಲ್ಲಿಂದ ಓಡಿಸಿದ್ದರೆ ಅವನು ಓಡಿ ಹೋದ ಜಾಗ ಪಾತಾಳಲೋಕವೆಂದು ಕರೆಯುತ್ತಿದ್ದ ಇಂದಿನ ಕೇರಳವಾಗಿರಬಹುದೇ? ನಲ್ಲಮಲ ಅರಣ್ಯಕ್ಕಿಂತಲೂ ದಟ್ಟವಾದ ಸೈಲೆಂಟ್ ವ್ಯಾಲಿಯಲ್ಲಿ ಆತ ಮತ್ತೆ ತನ್ನ ರಾಜ್ಯ ಕಟ್ಟಿರಬಹುದೇ? ಇಂದಿಗೂ ಕರಾವಳಿಯ ಜನ ಬಲಿಯೇಂದ್ರನನ್ನು ಬಲು ಆದರದಿಂದ ಬರಮಾಡಿಕೊಳ್ಳುತ್ತಾರೆ. ದೂರದ ನಲ್ಲಮಲದ ಅಸುರ ರಾಜ ಇಲ್ಲಿ ಹೇಗೆ ವಂದಿತನಾದ?

ಇಂತಹದೊಂದು ಪ್ರಶ್ನೆಯನ್ನು ನಾನು ನನ್ನ ಪೇಸ್ಬುಕ್ ನಲ್ಲಿ ಕೇಳಿದ್ದೆ. ಅದಕ್ಕೆ ನನ್ನ ಪತ್ರಕರ್ತ ಮಿತ್ರರೊಬ್ಬರು ಹೇಳಿದ್ದರು; ಪಾತಾಳಕ್ಕೆ ತಳ್ಳಿದ್ದು ಅಂದರೆ ದಕ್ಷೀಣದಂಚಿಗೆ ಓಡಿಸಿದ್ದು. ಬಲಿ ಮತ್ತೆ ಕೇರಳದಲ್ಲಿ ರಾಜ್ಯ ಕಟ್ಟುತ್ತಾನೆ. ಅದನ್ನು ಅಂಧ್ರ ತನಕ ವಿಸ್ತರಿಸುತ್ತಾನೆ. ಮತ್ತೆ ಬಲಾಢ್ಯನಾದ ಬಲಿಯನ್ನು ತಿರುಮಲ ಬೆಟ್ಟದಲ್ಲಿ ಮೋಸದಿಂದ ಹತ್ಯ ಮಾಡಲಾಯ್ತು. ಅಲ್ಲಿ ವೆಂಕಟೇಶನ ಸನ್ನಿಧಿಯಲ್ಲಿ ಆತನ ಸಮಾಧಿ ಇದೆಯಂತೆ. ಆತನಿಂದ ಬದುಕು ಕಟ್ಟಿಕೊಂಡಿದ್ದೇವೆ ಎಂದು ನಂಬಲಾದ ಭಕ್ತರು ಇಂದಿಗೂ ಅಲ್ಲಿಗೆ ತೆರಳಿ ತಮ್ಮ ಕಾಣಿಕೆಗಳನ್ನು ಅರ್ಪಿಸುತ್ತಾರಂತೆ. ಅವರಲ್ಲಿ ಕೇರಳಿಗರೇ ಹೆಚ್ಚಂತೆ. ಹಾಗೆ ಭಕ್ತರಿಂದ ಕಾಣಿಕೆಗಳನ್ನು ಪಡೆಯುತ್ತಿದ್ದ ಬಲಿ ಚಕ್ರವರ್ತಿಯ ಸಮಾಧಿ ಸ್ಥಳ ವೈಷ್ಣವರ ಆಕ್ರಮಕ್ಕೊಳಗಾಗಿ ನಂತರ ದೇವಾಲಯವಾಗಿ ಪರಿವರ್ತನೆಯಾಯಿತಂತೆ
ಇದು ದಂತಕಥೆಯೋ ಐತಿಹ್ಯವೋ ನನಗೆ ಗೊತ್ತಿಲ್ಲ. ನಾನು ಇದುವರೆಗೂ ತಿರುಪತಿಗೆ ಹೋಗಿಲ್ಲ. ಆ ಏಳು ಬೆಟ್ಟವನ್ನು ಒಮ್ಮೆ ಕಾಲ್ನಡಿಗೆಯಲ್ಲಿ ಹತ್ತಬೇಕೆಂದು ಆಸೆಯಿತ್ತು. ಇದುವರೆಗೂ ಆಗಿಲ್ಲ. ಇನ್ನು ಮುಂದೆ ಆಗುತ್ತೋ ಗೊತ್ತಿಲ್ಲ. ಒಂದು ವೇಳೆ ಹೋದರೆ  ಬಿನ್ನ ನೋಟವನ್ನು ಹೊತ್ತು ಬೆಟ್ಟವೇರುತ್ತೇನೆ.





Thursday, October 20, 2016

ಭಾರತ-ಪಾಕ್ ನಡುವಣ ಸ್ನೇಹ ’ಸಿಂಧು’



ಪಂಪನ ಆಧಿಪುರಾಣದಲ್ಲಿ ಒಂದು ಪ್ರಸಂಗ ಬರುತ್ತದೆ. ಭರತ ಬಾಹುಬಲಿಯವರು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿದ್ದಾರೆ. ಅವರ ಹಿಂದೆ ಅಪಾರ ಸೈನ್ಯವಿದೆ. ಇನ್ನೇನು ಅಣ್ಣ ತಮ್ಮಂದಿರ ನಡುವೆ ಯುದ್ಧ ಆರಂಭವಾಗಬೇಕು. ಆಗ  ಚಾಣಕ್ಷ್ಯರಾದ ಮಂತ್ರಿಗಳು, ಇವರಿಬ್ಬರೂ ವಜ್ರದೇಹಿಗಳಾದ ಕಾರಣ ಯುದ್ಧ ನಡೆದರೆ ಸೋಲು ಗೆಲುವುಗಳು ನಿಶ್ಚಯವಾಗದು, ಬದಲಾಗಿ ಎರಡೂ ಕಡೆಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಬಹುದೆಂದು ಮನಗಂಡು ಇಬ್ಬರ ಮಧ್ಯೆ ಮಾತ್ರ ಯುದ್ಧ ನಡೆಯುವಂತೆ ಏರ್ಪಾಟು ಮಾಡುತ್ತಾರೆ. ಅದರಂತೆ ದ್ರುಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ದ ನಡೆಯುತ್ತದೆ. ಇದರಲ್ಲಿ ಆಜಾನುಬಾಹುವಾದ ತಮ್ಮ ಬಾಹುಬಲಿ ಅಣ್ಣನಾದ ಭರತನನ್ನು ಸೋಲಿಸುತ್ತಾನೆ.

ಈಗ ವರ್ತಮಾನದಲ್ಲಿ ಇಂತಹದೇ ಸನ್ನಿವೇಶವೊಂದು ಎದುರಾಗಿದೆ. ನೆರೆಯ ಪುಟ್ಟ ದೇಶ ಪಾಕಿಸ್ತಾನ ಬಾಹುಬಲಿಯಂತಹ ಬಲಿಷ್ಟ ಭಾರತದೆದುರು ಮಲೆತು ನಿಂತು ಪರೋಕ್ಷ ಯುದ್ಧದಲ್ಲಿ ತೊಡಗಿಕೊಂಡಿದೆ. ಮಾತಿನಲ್ಲೇ ಪಂಥಾಹ್ವಾನ ನೀಡುತ್ತಿದೆ. ಭಾರತ ಇದನ್ನು ಸಂಯಮದಿಂದ ಎದುರಿಸುತ್ತಿದೆ. .

ಇದು ಖಂಡಾಂತರ ಕ್ಷಿಪಣಿಗಳ ಕಾಲ; ಅಣುಯುಗ. ಕೇವಲ ಒಂದು ಗುಂಡಿ ಅದುಮುವ ಮೂಲಕ ಜಗತ್ತಿನ ಯಾವುದೋ ತುದಿಯಲ್ಲಿರುವ ನಿರ್ಧಿಷ್ಟ ಜಾಗವನ್ನು ಕುಳಿತಲ್ಲೇ ಬೂದಿ ಮಾಡಬಲ್ಲ ತಾಂತ್ರಿಕತೆಯೀಗ ಮನುಷ್ಯನ ಬತ್ತಳಿಕೆಯಲ್ಲಿದೆ. ಹಾಗಾಗಿ ಈಗ ಸಂಯಮದ ಬಗ್ಗೆಯೇ ಹೆಚ್ಚೆಚ್ಚು ಮಾತಾಡಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯ ಟಂಕಶಾಲೆಯಂತಿರುವ ಪಾಕಿಸ್ತಾನದ ವಿರುದ್ಧದ ಪ್ರತಿ ನಡೆಯೂ ಹಗ್ಗದ ಮೇಲಿನ ನಡಿಗೆಯೇ..ಭಾರತವೀಗ ಪಂಚತಂತ್ರದ ಜಾಣ್ಮೆಯಡಿ ಜಲಯುದ್ಧಕ್ಕೆ ಮುಂದಾಗಿದೆ.

ಬಾರತವೀಗ ತನ್ನ ನೆಲದಲ್ಲಿ ಹರಿಯುವ ಸಿಂಧು ನದಿಯ ತನ್ನ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳುವ ಬಗ್ಗೆ ತಜ್ನರ ಸಲಹೆ ಪಡೆಯುತ್ತಿದೆ.. ೧೯೬೦ ರಲ್ಲಿ ಆಗಿನ ನಮ್ಮ ಪ್ರಾಧಾನಿ ಜವಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ನಡುವೆ ನಡೆದ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಾದ ’ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ ವನ್ನು ಉಲ್ಲಂಘಿಸುತ್ತಿಲ್ಲ. ಬದಲಾಗಿ ತನ್ನ ಪಾಲಿನ ನೀರಿನ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳುವ ನಿರ್ಧಾರ ಮಾಡುತ್ತಿದೆ. ಭಾರತವೇನಾದರೂ ಈ ಕಠಿಣ ನಿರ್ಧಾರ ತೆಗೆದುಕೊಂಡರೆ ಪಾಕಿಸ್ತಾನ ಸಂಪೂರ್ಣ ಬರಡಾಗಲಿದೆ. ಯಾಕೇಂದರೆ ಪಾಕಿಸ್ತಾನಕ್ಕೆ ತನ್ನ ದೇಶದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿಗಳಿಲ್ಲ.. ಭಾರತದಲ್ಲಿ ಹುಟ್ಟಿ, ಅಥವಾ ಭಾರತದ ನೆಲದ ಮುಖಾಂತರ ಹರಿದು ಬರುವ ನದಿಗಳೇ ಆ ದೇಶದ ಜೀವದಾಯಿನಿಗಳು. ಅಲ್ಲಿಯ ಕ್ರುಷಿ, ಕೈಗಾರಿಕೆ, ಮೀನುಗಾರಿಕೆ, ಜಲವಿದ್ಯುತ್ ಯೋಜನೆಗಳು, ಕುಡಿಯುವ ನೀರಿನ ಮೂಲ ಎಲ್ಲವೂ ಭಾರತದಿಂದ ಹರಿದು ಬರುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ. ಈ ನದಿಗಳೇ ಅವರ ಅರ್ಥಿಕತೆಯ ಬೆನ್ನೆಲುಬು. ಭಾರತವೀಗ ಪಾಕಿಸ್ತಾನದೊಡನೆ ನೇರ ಯುದ್ದದಲ್ಲಿ ತೊಡಗದೆ ಅದರ ಬೆನ್ನುಲುಬಿಗೆ ಚಿಕ್ಕ ಪ್ರಹಾರ ಕೊಡಲು ತೀರ್ಮಾನಿಸಿದೆ.

ಪಾಕಿಸ್ತಾನಕ್ಕೆ ಭಾರತದ ಮೂಲಕ ಹರಿದು ಹೋಗುವ ಪ್ರಮುಖ ನದಿಗಳು ಆರು. ಇದನ್ನು ಪೂರ್ವದ ನದಿಗಳು ಮತ್ತು ಪಶ್ಚಿಮದ ನದಿಗಳು ಎಂದು ವಿಂಗಡಣೆ ಮಾಡಲಾಗಿದೆ  ಬಿಯಾಸ್. ರಾವಿ ಮತ್ತು ಸಟ್ಲೇಝ್ ಪೂರ್ವದ ನದಿಗಳು. ಇವು ನಮ್ಮ ಪಂಜಾಬ್ ರಾಜ್ಯದ ಮುಖಾಂತರ ಹಾದು ಪಾಕಿಸ್ತಾನವನ್ನು ಪ್ರವೇಶಿಸುತ್ತದೆ. ನೀವು ಮನಾಲಿಗೆ ಹೋಗಿದ್ದರೆ ಅಲ್ಲಿ ನಗರದಂಚಿನಲ್ಲೇ ಹರಿಯುವ  ಬಿಯಾಸ್ ನದಿಯನ್ನು ನೋಡೇ ನೋಡಿರುತ್ತಿರುತ್ತೀರಿ ಅದರ ದಂಡೆಯುದ್ದಕ್ಕೂ ನಳನಳಿಸುತ್ತಿರುವ ಸೇಬು ತೋಟಗಳು ನಿಮ್ಮ ಮನವನ್ನು ಸೂರೆಗೊಳ್ಳುತ್ತವೆ.. ಚಂಡಿಗಡದಲ್ಲೂ ಈ ನದಿ ನಿಮಗೆ ನೋಡಲು ಸಿಗುತ್ತದೆ. ಈ ಮೂರೂ ನದಿಗಳ ಮೇಲಿನ ಸಂಪೂರ್ಣ ಹಕ್ಕು ಭಾರತದ್ದು. ಅದನ್ನು ಹೇಗೆ ಬೇಕಾದರೂ ಭಾರತ ಬಳಸಿಕೊಳ್ಳಬಹುದು.

  ಸಿಂಧು,ಚಿನಾಬ್ ಮತ್ತು ಝೇಲಂ ನದಿಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಸೇರುತ್ತವೆ. ಇವು ಪಶ್ಚಿಮದ ನದಿಗಳು. ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಪ್ರಕಾರ ಇದರ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಇದರ ಮೇಲೆ ಭಾರತಕ್ಕೆ ಸಿಂಹ ಪಾಲಿದೆ. ಹಾಗಿದ್ದರೂ ತನ್ನ ಹಕ್ಕಿನ ನೀರನ್ನು ಭಾರತ ಇದುವರೆಗೂ ಸಂಪೂರ್ಣ ಬಳಕೆ ಮಾಡಿಕೊಂಡಿರಲಿಲ್ಲ. ಅದು ಯಾವುದೇ ನಿಯಂತ್ರಣವಿಲ್ಲದೆ ಪಾಕ್ ನೆಡೆಗೆ ಹರಿದು ಹೋಗುತ್ತಿತ್ತು. ಈ ಆರೂ ನದಿಗಳು ಮತ್ತದರ ಉಪನದಿಗಳು ಸೇರಿ ಸಿಂಧು ಎಂಬ ಮಹಾನದಿಯಾಗಿ ಪಾಕಿಸ್ತಾನದ ಜೀವ ನದಿಯಾಗಿ ಅಲ್ಲಿನ ಜನತೆಯ ಬಾಳನ್ನು ಸಮ್ರುದ್ಧಗೊಳಿಸುತ್ತಾಳೆ. ತನ್ನ ಪಾಲಿನ ನೀರನ್ನೂ ಭಾರತ  ತನ್ನ ನೆರೆಯ ರಾಷ್ಟ್ರಕ್ಕೆ ಉದಾರತೆಯಿಂದ ಬಿಟ್ಟು ಕೊಟ್ಟಿದ್ದು ಆ ದೇಶಕ್ಕೆ  ತೋರಿದ ಔದಾರ್ಯವಾಗಿತ್ತು. ಆದರೆ ಪಾಕಿಸ್ತಾನ ಈ ಉದಾರತೆಗೆ ಎಂದೂ ಕೊಡಬೇಕಾದ ಗೌರವವನ್ನು ಕೊಟ್ಟಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ ಭಾರತವೀಗ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಅದು ಈಗ ಚರ್ಚೆಯಲ್ಲಿರುವ ಸಂಗತಿ.

೧೯೬೦ರಲ್ಲಿ ಆಗಿನ ಭಾರತದ ಪ್ರಧಾನಿ ಜವಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿಗಳಾದ ಅಯೂಬ್ ಖಾನ್ ಅವರ ನಡುವೆ ವಿಶ್ವಸಂಸ್ಥೆಯ ನೇತ್ರುತ್ವದಲ್ಲಿ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದಕ್ಕೆ ಪರಸ್ಪರ ಸಹಿ ಮಾಡಿದ್ದವು. ಪ್ರಮುಖ ನದಿಗಳಿಲ್ಲದ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಾಗಬಾರದೆಂಬ ದೂರದರ್ಶಿತ್ವದಲ್ಲಿ ಮಾಡಿಕೊಂಡ ಒಪ್ಪಂದವಾಗಿತ್ತದು.ಇದರ ಪ್ರಕಾರ ಭಾರತಕ್ಕೆ ೯.೧೨ ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಹಕ್ಕಿದೆ. ಆ ಹಕ್ಕನ್ನು ಮತ್ತೆ ೪.೨ ಲಕ್ಷಕ್ಕೆ ವಿಸ್ತರಿಸಲೂ ಬಹುದು. ಆದರೆ ಭಾರತ ಕೇವಲ ೮ಲಕ್ಷ ಎಕರೆಗೆ ಮಾತ್ರ ನೀರಾವರಿ ಸೌಕರ್ಯವನ್ನು ಮಾಡಿಕೊಂಡಿದೆ. ಹಾಗೆಯೇ ಈ ಮೂರು ನದಿ ನೀರನ್ನು ಬಳಸಿಕೊಂಡು ೧೮,೬೦೦ ಮೆಗಾವಾಟ್ ವಿದ್ಯುತ್ತನ್ನು ಉತ್ಪಾದಿಸಿಕೊಳ್ಳಬಹುದು. ಆದರೆ ಈಗ ಕೇವಲ ೩,೦೩೪ ಮೆಗಾವಾತ್ ವಿದ್ಯುತ್ ಮಾತ್ರ ಉತ್ಪಾದಿಸುತ್ತಿದೆ.
ಯಾಕೆ ಹೀಗಾಯ್ತು?

ನಮಗೆ ಗೊತ್ತಿದೆ; ಹೆಹಲಿಯಲ್ಲಿ ರಾಜಕಾರಣ ಮಾಡಿದ ಎಲ್ಲಾ ಸರಕಾರಗಳು ’ಕಾಶ್ಮೀರ ಅಖಂಡ ಭಾರತದ ಅವಿಭಾಜ್ಯ ಅಂಗ’ ಎನ್ನುತ್ತಲೇ ಬಂದವು, ಹೊರತಾಗಿ ಅಲ್ಲಿಯ ಜನರ ಆಶೋತ್ತರಗಳೇನು ಎಂಬುದರ ಬಗ್ಗೆ ಹೆಚ್ಚಿನ ಮಹತ್ವ ಕೊಡಲಿಲ್ಲ. ಕಾಸ್ಮೀರ ಎಂಬ ಭೂಭಾಗದ ಬಗ್ಗೆ ಏರಿದ ದನಿಯಲ್ಲಿ ಮಾತಾಡುತ್ತಲೇ ಅಲ್ಲಿನ ಜನರನ್ನು. ಅಲ್ಲಿಯ ಶ್ರೀಮಂತ ಸಂಸಕೃತಿಯನ್ನು ಮರೆತೇಬಿಟ್ಟವು. ಶಸ್ತ್ರಾಸ್ಥದ ಬಲ ತೋರಿಸಿ ಅಲ್ಲಿಯ ಭೂಮಿಯನ್ನು ವಶಪಡಿಸಿಕೊಂಡರೆ ಜನರೇ ಇಲ್ಲದ  ಭೂಪ್ರದೇಶವಷ್ಟೇ ನಮ್ಮದಾಗುತ್ತದೆ. ಜನರಿಂದ, ಜನಜೀವನದಿಂದ ದೇಶದ ಕಲ್ಪನೆ ಹುಟ್ಟಿಕೊಳ್ಳುತ್ತದೆ. ವೈವಿದ್ಯಮಯವಾದ ಜೀವಂತ ಸಮಾಜವಿಲ್ಲದಿದ್ದರೆ ಅದು ಸ್ಮಶಾನದಲ್ಲಿರುವ ಹೂದೋಟವಷ್ಟೆ. ಮನಸು ಅರಳದು, ಪೂಜೆಗೆ ಸಲ್ಲದು.
  ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವ್ರುದ್ದಿಗೆ ಯಾವ ಸರಕಾರಗಳು ಒತ್ತನ್ನು ಕೊಟ್ಟಿಲ್ಲ. ಕನಿಷ್ಟ ಮೂಲಭೂತ ಅವಶ್ಯಕತೆಯಾದ ನೀರು ಮತ್ತು ರಸ್ತೆಯ ವ್ಯವಸ್ಥೆಯನ್ನೂ ಮಾಡಿಲ್ಲ.ಕ್ರುಷಿಗೆ ಉತ್ತೇಜನ ನೀಡಿಲ್ಲ. ಕರ ಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡಿಲ್ಲ. ಹಾಗಾಗಿ ಸಾಂಸ್ಕ್ರುತಿಕ ಅನನ್ಯತೆಯನ್ನು ಉಳಿಸಿಕೊಂಡಿರುವ ಅಲ್ಲಿಯ ಜನರಲ್ಲಿ ಪರಕೀಯತೆಯ ಭಾವನೆಯಿದೆ. ಆ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಅವರನ್ನು ದೇಶದ ಮುಖ್ಯ ಧಾರೆಯಲ್ಲಿ ಸೇರಿಸಿಕೊಳ್ಳಲು ಅಲ್ಲಿ ಅಭಿವ್ರುದ್ಧಿ ಕಾರ್ಯಗಳನ್ನು ಕೈಗೊಂಡು, ಅಲ್ಲಿನ ಯುವಕರಿಗೆ ಉದ್ಯೋಗಗಳನ್ನು ಕಲ್ಪಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದೇ ಏಕೈಕ ಮಾರ್ಗ.  ಈಗ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸದ್ವಿನಿಯೋಗ ಮಾಡಿಕೊಂಡರೆ ಬಹುಶಃ ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳು ಭಾರತದ ಮುಖ್ಯ ಧಾರೆಯೊಳಗೆ ತಮ್ಮನ್ನು ತಾವು ಗುರುತಿಸಿಸಿಕೊಳ್ಳಬಲ್ಲರು ಅನ್ನಿಸುತ್ತಿದೆ.

ಆದರೆ ಹಿಮಾಲಯ ವಲಯದಲ್ಲಿ ಅಬಿವ್ರುದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಒಂದು ಎಚ್ಚರಿಕೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಹಿಮಲಯ ಪರ್ವತವಿನ್ನೂ ತನ್ನ ಬಾಲ್ಯವಾಸ್ಥೆಯಲ್ಲಿದೆ. ಭಾರತದ ಇತರೆಡೆಗಳಲ್ಲಿನ ಪರ್ವತಗಳಿಗೆ ಅದರಲ್ಲೂ ಪಶ್ಚಿಮಘಟ್ಟಗಳಿಗೆ ಹೋಲಿಸಿದರೆ ಅದಿನ್ನೂ ಎಳಸು. ಅದರ ಧಾರಣಾಶಕ್ತಿ ಅತ್ಯಂತ ದುರ್ಭಲವಾದುದು. ೨೦೧೩ರಲ್ಲಿ ಉತ್ತರಾಖಂಡದಲ್ಲಾದ ಮೇಘಸ್ಪೋಟ ಮತ್ತು ಭೂಕುಸಿತಕ್ಕೆ ಅಲ್ಲಿ ಎಗ್ಗಿಲ್ಲದೆ ಕಟ್ಟಿದ ಅಣೆಕಟ್ಟುಗಳು ಮತ್ತು ಜಲ ವಿದ್ಯುತ್ ಯೋಜನೆಗಳೇ ಕಾರಣ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.ಹಾಗಾಗಿ  ಅಭಿವ್ರುದ್ಧಿ ಯೋಜನೆಗಳನ್ನು ಕೈಗೊಳ್ಳುವಾಗ ಯಾವ ರೀತಿಯ ಅಭಿವ್ರುದ್ಧಿ ನಮಗೆ ಬೇಕು?ಪರಿಸರಕ್ಕೆ, ಜೀವಜಾಲಕ್ಕೆ ತೊಂದರೆಯಾಗದಂತೆ ಮನುಷ್ಯ, ಮನುಷ್ಯನಾಗಿ ಬದುಕಲು ಬೇಕಾದ ಅನುಕೂಲತೆಗಳೇನು ಎಂದು ಪ್ರಶ್ನಿಸಿಕೊಂಡರೆ ಬಹುಶಃ ನಮ್ಮ ಅಭಿವ್ರುದ್ಧಿಯ ಮಾನದಂಡ ಅರ್ಥವಾಗಬಹುದು.

ಭಾರತವೀಗ ಜಲಯುದ್ಧಕ್ಕೆ ಸನ್ನದ್ದವಾಗಿ ನಿಂತಿದೆ. ಈ ನೆಪದಲ್ಲಾದರೂ ಕಾಶ್ಮೀರದಲ್ಲಿ ಅಬಿವ್ರುದ್ಧಿ ಕಾರ್ಯಗಳು ನಡೆಯಲಿ. ಕಾಶ್ಮೀರಿಗಳು ಭಾರತತನುಜಾತೆಯಾಗಲಿ ಎಂಬುದು ಎಲ್ಲರ ಆಶಯ.
..



[ಹಾರ್ನ್ಬಿಲ್ ಉತ್ಸವದಿಂದ ಸಿಂಧು ಉತ್ಸವತನಕ...]

ಐದು ಸಾವಿರ ವರ್ಷಗಳಷ್ಟು ಪುರಾತನವಾದ ಸಿಂಧು ಕೊಳ್ಳ್ದ ನಾಗರೀಕತೆ, ಸಿಂಧು ನದಿಯ ತಟದಲ್ಲಿ ಅರಳಿತ್ತು ಮತ್ತು ಹಿಂದು ಸ್ತಾನಕ್ಕೆ ಆ ಹೆಸರು ಬರಲು ಕಾರಣ್ವಾಗಿತ್ತು ಎಂಬುದನ್ನು ಚರಿತ್ರೆಯಲ್ಲಿ ಓದಿದ್ದೇವೆ. ಆದರೆ ಆ ನದಿ ಮತ್ತು ನಾಗರೀಕತೆಯ ಪಳೆಯುಳಿಕೆಗಳು ಇಂದು ಪಾಕಿಸ್ತಾನದ ಆಸ್ತಿ.

’ಗಂಗೇಚಾ ಯಮುನೇ ಚೈವಾ ಗೋಧಾವರಿ ಸರಸ್ವತಿ, ನರ್ಮದೇ, ಸಿಂಧು, ಕಾವೇರಿ ಜಲಸ್ಮಿನ್ ಸನ್ನಿಧಿಂಕರ
ಹೀಗೆ ಭಾರತೀಯರು ಪರಮ ಪವಿತ್ರವಾದುದೆಂದು ಪೂಜಿಸುವ, ನಮ್ಮ  ಭಾವಕೋಶದಲ್ಲಿ ಸೇರಿ ಹೋಗಿರುವ,  ನಮ್ಮ ರಾಷ್ಟ್ರಗೀತೆಯಲ್ಲಿ ಉಲ್ಲೇಖಿತವಾಗಿ ನಮ್ಮವಳಾಗಿದ್ದ ಸಿಂಧು  ಭಾರತದಲ್ಲಿಯೂ ಸ್ವಲ್ಪ ದೂರ ಹರಿಯುತ್ತಾಳೆಂದು ನನಗೆ ಬಹುಕಾಲದವರೆಗೂ ಗೊತ್ತಿರಲೇ ಇಲ್ಲ. ನನ್ನ ಹಾಗೇ ಯೋಚಿಸುವವರು ತುಂಬಾ ಮಂದಿ ಇದ್ದಾರೆಂದು ಕೋರಾ ಎಂಬ ಪ್ರಶ್ನೋತ್ತರ ವಬ್ ಸೈಟ್ ನಲ್ಲಿ ಮಾಹಿತಿ ದೊರೆಯಿತು. ಕುತೂಹಲಕ್ಕಾಗಿ ಸಿಂಧುವಿನ ಬಗ್ಗೆ ಒಂದಷ್ಟು ವಿಷಯ ಸಂಗ್ರಹಿಸುತ್ತಿದ್ದಂತೆ ಆಕೆಯನ್ನೊಮ್ಮೆ ನೋಡಬೇಕು.  ಬೊಗಸೆಯಲ್ಲಿ ತುಂಬಿಕೊಳ್ಳಬೇಕು ಎಂಬ ಆಸೆ ಹೆಚ್ಚಾಗತೊಡಗಿತು. ಅದಕ್ಕಾಗಿಯೇ ಕಾಶ್ಮೀರ ಪ್ರವಾಸ ಕೈಗೊಂಡಾಗ ’ಸಿಂಧು ಉತ್ಸವ’ ನಡೆಯುವ ಸಮಯವನ್ನೇ ಆಯ್ದುಕೊಂಡು ಆಕೆಯ ದಂಡೆಯ ಮೇಲೆಲ್ಲಾ ಅಡ್ಡಾಡಿ ನನ್ನ ಬಯಕೆಯನ್ನು ತೀರಿಸಿಕೊಂಡೆ.

ಹಿಮಾಲಯದ ತಪ್ಪಲಿನ ರಾಜ್ಯಗಳ ಎರಡು ಬ್ರಹತ್ ನದಿಗಳಾದ ಸಿಂಧು ಮತ್ತು ಬ್ರಹ್ಮಪುತ್ರಾ ನದಿಗಳ ಉಗಮ ಸ್ಥಾನ ಈಗ ಚೀನಾದಲ್ಲಿರುವ ಭಾರತೀಯ ಶ್ರದ್ಧಾಕೆಂದ್ರವಾದ ಮಾನಸ ಸರೋವರ. ಸಟ್ಲೇಜ್ ನದಿ ಕೂಡಾ ಇಲ್ಲಿಯೇ ಹುಟ್ಟುತ್ತದೆ. ಬ್ರಹ್ಮಪುತ್ರಾ ನದಿ ಟಿಬೇಟ್ ನಲ್ಲಿ ಅರುಣಾಚಲ. ಅಸ್ಸಾಂ ಮೂಲಕ ಹರಿಯುತ್ತಾ ಬಾಂಗ್ಲಾದೇಶವನ್ನು ಹಸನುಗೊಳಿಸುತ್ತಾ ಬಂಗಾಲಕೊಲ್ಲಿಯನ್ನು ಸೇರುತ್ತಾಳೆ. ಸಿಂಧು ಕಾರಕೋರಂ ಹಿಮ ಪರ್ವತಗಳೆದೆಯಲ್ಲಿ ಬಾಗಿ ಬಳುಕುತ್ತಾ ಜಮ್ಮು ಕಾಶ್ಮೀರದ ಲೇಹ್ ಮೂಲಕ ಭಾರತವನ್ನು ಪ್ರವೇಶಿಸಿ ಅನಂತರ ಪಾಕಿಸ್ತಾನವನ್ನು ಸಮ್ರುದ್ಧಗೊಳಿಸುತ್ತಾ ಅರಬ್ಬಿ ಸಮುದ್ರವನ್ನು ಸೇರುತ್ತಾಳೆ. ವೇದದಲ್ಲಿ ಉಲ್ಲೇಖಿತವಾದ ಇನ್ನೆರಡು ದಿನಗಳಾದ ಗಂಗೆ ಯಮುನೆಯರು ಭಾರತದ್ಲ್ಲೇ ಹುಟ್ಟಿ, ಇಲ್ಲಿಯೇ ಹರಿಯುತ್ತಾ ಬಂಗಾಳಕೊಲ್ಲಿಯನ್ನು ಸೇರಿಕೊಳ್ಳುತ್ತಾರೆ. ಕಾವೇರಿಯ ಕಥೆ ನಮಗೆಲ್ಲಾ ಗೊತ್ತಿದೆ. ಆದರೆ ಭಾರತದ ಏಕೈಕ ಗಂಡು ನದಿಯೆಂದು ಕರೆಯಲಾಗುವ ಬ್ರಹ್ಮಪುತ್ರಾ ನದಿಯನ್ನು ವೇದಗಳಲ್ಲಿ ಯಾಕೆ ಉಲ್ಲೇಖಿಸಿಲ್ಲ? ಅಂದರೆ ನಿಜಾರ್ಥದಲ್ಲಿ ಸ್ತ್ರೀತ್ವಕ್ಕೆ ಮನ್ನಣೆಯಿದ್ದ ಕಾಲ ಅದಾಗಿರಬಹುದೆ? ಗೊತ್ತಿಲ್ಲ. ಇದ್ದಿರಲೂ ಬಹುದು.

ಈಗ ಸುದ್ದಿಯಲ್ಲಿರುವ ಸಿಂಧು, ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಮುಖ್ಯವಾದುದು. ಇದರ ಉದ್ದ ೩೨೦೦ ಕಿಮೀ. ಇದರ ಉಗಮ ಸ್ಥಳ ಸಮುದ್ರ ಮಟ್ಟದಿಂದ ಹದಿನೆಂಟು ಸಾವಿರ ಎತ್ತರದಲ್ಲಿದೆ. ಭಾರತದಲ್ಲಿ ಮುನ್ನೂರು ಕಿ.ಮೀ ಹರಿದು  ಪಾಕಿಸ್ತಾನಕ್ಕೆ ಅಡಿಯಿಡುತ್ತಾಳೆ.  ಅದು ಚೀನಾದಿಂದ ಹರಿದು ಬಂದು ಭರತ ಭೂಮಿಗೆ ಮೊದಲ ಅಡಿಯಿಡುವುದೇ ಹನ್ನೊಂದವರೆ ಸಾವಿರ ಎತ್ತರದಲ್ಲಿರುವ ಜಮ್ಮು ಕಾಶ್ಮೀರದ ಲೇಹ್ ನಲ್ಲಿ. ಚಿಕ್ಕ ತೊರೆಯಂತೆ ಹರಿಯುವ ಆಕೆ ಬಹುಕಾಲ ಅನಾಮಿಕಳಂತೆ ಉಳಿದು ನನ್ನಂತವರಿಗೆಲ್ಲಾ ’ಸಿಂಧು ಬಾರತದಲ್ಲಿ ಹರಿಯುತ್ತಿದ್ದಾಳೆಯೇ? ಎಂದು ಪ್ರಶ್ನಿಸುವ ಹಾಗಾಗಿತ್ತು. ಆದರೆ ಲಾಲ್ ಕ್ರುಷ್ಣ ಅಡ್ವಾಣಿ ಎಂಬ ರಾಜಕಾರಣಿ ಮತ್ತು ತರುಣ್ ವಿಜಯ್ ಎಂಬ ಪತ್ರಕರ್ತನ ಕನಸಿನ ಫಲವಾಗಿ ಲೇಹ್ ನಲ್ಲಿ ’ಸಿಂಧು ಉತ್ಸವ ’ ಎಂಬ ಮೂರು ದಿನಗಳ ಅದ್ದೂರಿ ಕಾರ್ಯಕ್ರಮವನ್ನು ೧೯೯೭ರಿಂದ ಆಯೋಜನೆಗೊಳ್ಳುತ್ತಿದೆ. ಈ ಮೂಲಕ ಸಿಂಧು ನಮ್ಮವಳು, ನಮ್ಮ ಹೆಮ್ಮೆಯ ಪ್ರತೀಕ, ಭಾರತದ ಭಾವೈಕತೆಯ ಸಂಕೇತ ಎಂಬ ನಿಟ್ಟಿನಲ್ಲಿ ದೇಶದಾದ್ಯಂತ ಬಂದ ಜನರು ಈ ಉತ್ಸವದಲ್ಲಿ ಪಾಲುಗೊಳ್ಳುತ್ತಿದ್ದಾರೆ.

ಸಿಂಧು ಉತ್ಸವದಲ್ಲಿ ಜಮ್ಮು ಕಾಶ್ಮೀರ ಬಹುತೇಕ ಜಾನಪದ ನ್ರುತ್ಯಗಳು ಪ್ರದರ್ಶಿಸಲ್ಪಟ್ಟವು. ಭಾವುಕರು ಸಿಂಧು ಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಪುನೀತರಾಗುತ್ತಿದ್ದರು. ಮಹಿಳೆಯರು ಆಕೆಯ ಮಡಿಲಿಗೆ ಬಾಗಿನಗಳನ್ನು ಅರ್ಪಿಸಿದರು ಆಸ್ತಿಕರು ಆ ನದಿ ದಂಡೆಯಲ್ಲೇ ಕುಳಿತು ಹೋಮ ಹವನಗಳನ್ನು ನಡೆಸುತ್ತಿದ್ದರು. ಪವಿತ್ರ ಜಲವನ್ನು ಬಾಟಲುಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಆದರೆ ಇವೆಲ್ಲವೂ ಸೈನ್ಯದ ಸರ್ಪಗಾವಲಿನಲ್ಲಿ ನಡೆಯುತ್ತಿದ್ದವು ಎಂಬುದು ಗಮನಿಸತಕ್ಕ ಅಂಶ. ಆ ಉತ್ಸವದಲ್ಲಿ ಕರ್ನಾಟಕದಿಂದ ಬಂದ ೧೭೫ ಪ್ರತಿನಿಧಿಗಳನ್ನು ಕಂಡು ನನಗೆ ತುಂಬಾ ಖುಷಿಯಾಯ್ತು.

ಲೇಹ್ ನಿಂದ ಮೂವತ್ತೈದು ಕಿಮೀ ದೂರದಲ್ಲಿ ಕಾರ್ಗಿಲ್ ಗಿಂತ ಸ್ವಲ್ಪ ಹಿಂದೆ ನಿಮ್ಮು ಎಂಬ ಚಿಕ್ಕ ಊರು ಸಿಗುತ್ತದೆ. ಅಲ್ಲಿ ಮ್ಯಾಗ್ನಟಿಕ್ ಹಿಲ್ ಪಕ್ಕ ಸಿಂಧುಕೊಳ್ಳವನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಅಲೌಕಿಕ ಅನುಭವ.. ಅಪ್ಘಾನಿಸ್ತಾನದಲ್ಲಿರುವ ಹಿಂದು ಕುಶ್ ಪರ್ವತವನ್ನು ನೋಡಬೇಕೆನ್ನುವುದು ನನ್ನ ಹೆಬ್ಬಯಕೆಗಳಲ್ಲೊಂದು. ಅದರ ಮಿನಿಯೇಚರನ್ನು ಇಲ್ಲಿ ಕಂಡಂತೆ ಭಾಸವಾಯ್ತು. ಅಲ್ಲಿಯೇ ಸ್ವಲ್ಪ ಮುಂದಕ್ಕೆ ಝೆನ್ಸಂಕಾರ್ ಮತ್ತು ಸಿಂಧು ನದಿಗಳ ಸಂಗಮವಾಗುತ್ತದೆ. ಅಚ್ಚ ನೀಲಿ ಬಣ್ಣದ ಸಿಂಧು ಮತ್ತು ಬೂದಿ ಬಣ್ಣದ ಝೆನ್ಸಂಕಾರ್ ಸಂಗಮದ ದ್ರುಶ್ಯವನ್ನು ಪದಗಳಲ್ಲಿ ವರ್ಣಿಸಲು ಬಾರದು. ಅದನ್ನು ಅನುಭವವೇದ್ಯವಾದುದು. ಆದರೆ ಇಲ್ಲೊಂದು ಅಚ್ಚರಿಯ ವಿಷಯವಿದೆ. ನಾವು ನದಿಯನ್ನು ಸ್ತ್ರೀಯಾಗಿ ಕಲ್ಪ್ಸಿಕೊಳ್ಳುತ್ತೇವೆ. ದೇವತೆಯಾಗಿ ಆರಾಧಿಸುತ್ತೇವೆ. ಎಲ್ಲಾ ನದಿಗಳಿಗೂ ನಾವು ಮಂದಿರವನ್ನು ಕಟ್ಟಿದ್ದೇವೆ. ಗಂಗೆ-ಯಮುನೆ, ನಂದಾದೇವಿ ಪರ್ವತ ಮಾತೆಯ ಗುಡಿಯನ್ನೂ ನೋಡಿದ್ದೇನೆ. ಆದರೆ ಸಿಂಧು ನದಿಗೆ ಎಲ್ಲಿಯೂ ಗುಡಿಯಿದ್ದದ್ದನ್ನು ನಾನು ನೋಡಿಲ್ಲ, ಕೇಳಿಲ್ಲ. ಯಾಕಿರಬಹುದು? ಇದು ಅಧ್ಯಯನ ಯೋಗ್ಯ ವಿಚಾರ.

ಕಾಶ್ಮೀರದ ಲೇಹ್ ನಲ್ಲಿ ನಡೆಯುವ ಸಿಂಧು ಉತ್ಸವ, ನಾಗಲ್ಯಾಂಡ್ ನಲ್ಲಿ ನಡೆಯುವ ಈಶಾನ್ಯ ರಾಜ್ಯಗಳ ಸಾಂಸ್ಕ್ರುತಿಕ ಮೇಳ ’ಹಾರ್ನ್ ಬಿಲ್ ಉತ್ಸವ’ ಸಾಂಸ್ಕ್ರುತಿಕವಾಗಿ ಅಲ್ಲಿನ ಜನತೆಯನ್ನು ಭಾರತದ ಇನ್ನಿತರ ಭಾಗದೊಡನೆ ಬೆಸೆಯುತ್ತದೆ. ಬಲಿಷ್ಟ ಭಾರತದ ಬಗ್ಗೆ ಮಾತಾಡುವ ನಾವು ಇಂತಹ ಉತ್ಸವಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವುದರ ಮುಖಾಂತರ ನಾವದನ್ನು ಸಾಧ್ಯ ಮಾಡಬೇಕು.  ನಮ್ಮ ಮಿಳಿತ ಅವರಲ್ಲಿರುವ ಪರಕೀಯತೆಯ ಭಾವನೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು.



[ ಪ್ರಜಾವಾಣಿಯ ಭಾನುವಾರದ ಪುರವಣಿ ’ಮುಕ್ತಛಂದ’ ದಲ್ಲಿ ಪ್ರಕಟವಾಗಿರುವ ಲೇಖನ ]




Wednesday, July 27, 2016

ಪ್ರಭುತ್ವದಡಿ ನಲುಗುತ್ತಿರುವ ಮಣಿಪುರದರಸಿಯರು!


ಯಕ್ಷಗಾನದಲ್ಲಿ ’ಸಲಾಂ ತಕ್ಕೋ ಮಣಿಪುರ ದೊರೆಯೇ...’ ಎಂಬ ಹಾಡು ಬಲು ಜನಪ್ರಿಯ. ಹೀಗೆ ಹಾಸ್ಯಗಾರನಿಂದ ಬಾಗಿ ನಮಿಸಿಕೊಳ್ಳುವಾತ ಮಣಿಪುರದರಸು ಬಬ್ರುವಾಹನ. ಆದರೆ ಅಂತಹ ವೀರಾಧಿವೀರ ಬಬ್ರುವಾಹನನ್ನು ರೂಪಿಸಿದ ಮಣಿಪುರದ ಅರಸಿ ಚಿತ್ರಾಂಗದೆಯ ಸ್ಥಾನ ಯಾವುದು.? ಪುರಾಣದ ಪಾತ್ರವನ್ನು ಈ ಆಧುನಿಕ ಕಾಲಘಟ್ಟದಲ್ಲಿ ನಿಂತು ನೋಡುವುದರ ಔಚಿತ್ಯವೇನು ಎಂದು ಪ್ರಶ್ನಿಸುವುದಾದರೆ...ಅದಕ್ಕೆ ಕಾರಣವಿದೆ.
ಅದು.  ೧೯೪೪ ನೇ ಇಸವಿ, ಏಪ್ರಿಲ್ ೧೪ನೇ ತಾರೀಖು. ಮಣಿಪುರದ ರಾಜಧಾನಿ ಇಂಪಾಲದಿಂದ ೫೨ ಕಿಮೀ ದೂರದ ಮೊಯಿರಂಗ್ ನಲ್ಲಿ ಅಜಾದ್ ಹಿಂದ್ ಪೌಜ್ ನ [INA] ಸಂಸ್ಥಾಪಕ ಸುಭಾಸ್ ಚಂದ್ರ ಭೋಸ್ ರವರು ಭಾರತೀಯ ನೆಲದಲ್ಲಿ ಮೊತ್ತ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ಮುಂದಿನ ಘಟನೆಗಳಿಗೆ ಪೂರಕವಾಗಿ ಒಂಚೂರು ಮಾಹಿತಿ;  ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಪರಮಾಧಿಕಾರವಿದೆ. ಅದಕ್ಕೆ ಯಾರ ಮೇಲಾದರೂ ದೇಶದ್ರೋಹಿಗಳು, ಸಮಾಜ ಘಾತುಕರು, ಉಗ್ರಗಾಮಿಗಳೆಂದು ಶಂಕೆ ಉಂಟಾದಲ್ಲಿ ಎಲ್ಲಿಗೆ ಬೇಕಾದರೂ ನುಗ್ಗಿ  ವಾರಂಟ್ ಇಲ್ಲದೆ ಅವರನ್ನು ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದುಕೊಳ್ಳಬಲ್ಲುದು. ಶಂಕಿತರನ್ನು ಗುಂಡು ಹೊಡೆದು ಕೊಂದರೂ ಅದನ್ನು ಯಾರೂ ಪ್ರಶ್ನಿಸಲಾರರು.
ಇನ್ನೊಂದು ಘಟನೆ; ೨೦೦೦ನೇ ಇಸವಿಯ ನವೆಂಬರ್ ೨ನೇ ತಾರೀಖು. ಇಂಪಾಲದಿಂದ ೧೫ ಕಿ.ಮೀ ದೂರದಲ್ಲಿರುವ ಮಾಲೋಮ್ ಎಂಬ ಊರಿನ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಜನರ ಮೇಲೆ ಭಾರತೀಯ ಸೇನೆ ಗುಂಡಿನ ಧಾಳಿ ನಡೆಸಿತು. ಹತ್ತು ಜನ ನಾಗರಿಕರು ಸತ್ತರು. ಇದರಲ್ಲಿ ಅರುವತ್ತು ವರ್ಷದ ಮಹಿಳೆಯೊಬ್ಬಳ ಜೊತೆ ೧೯೯೮ರಲ್ಲಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಹದಿನೆಂಟು ವರ್ಷದ ಸಿಮನ್ ಚಂದ್ರಮಣಿ ಎಂಬಾಕೆಯೂ ಶವವಾಗಿ ಬಿದ್ದಳು..

ಮಾಲೋಮ್ ಘಟನೆ ೨೮ ವರ್ಷದ ಐರೋಮ್ ಶರ್ಮಿಳಾ ಎಂಬ ಯುವತಿಯನ್ನು ಅಲ್ಲಾಡಿಸಿಬಿಟ್ಟಿತು. ಆಕೆ ಸ್ಥಳಿಯ ಮಟ್ಟದ ಮಾನವ ಹಕ್ಕುಗಳ ಶಾಂತಿ ಅಂದೋಲನದಲ್ಲಿ ಸಕ್ರಿಯಳಾಗಿದ್ದಳು. ಭಾರತೀಯ ಸೇನೆ ನಾಗರೀಕರ ಅದರಲ್ಲೂ ಮಹಿಳೆಯರ ಮೇಲೆ ನಡೆಸುತ್ತಿದ್ದ ಲೈಂಗಿಕ ಅತ್ಯಾಚಾರವನ್ನು ಗಮನಿಸುತ್ತಲೇ ಬಂದಿದ್ದಳು. ಆಕೆ ಮೈಮೇಲೆ ಭೂತ ಸಂಚಾರವಾದಂತೆ ತಟ್ಟನೆ ಎದ್ದು ನಿಂತವಳೇ ತನ್ನ ತಾಯಿಗೆ ನಮಸ್ಕರಿಸಿ ’ಅಮ್ಮಾ ಮನುಷ್ಯತ್ವವನ್ನು ಉಳಿಸುವ ಕಾರ್ಯಕ್ಕೆ ಹೊರಡುತ್ತಿದ್ದೇನೆ’ ಎಂದವಳೇ ಮಾಲೋಮ್ ಗೆ ಬಂದು  ಸೇನೆ ಹತ್ತು ಜನ ನಾಗರಿಕರನ್ನು ಬಲಿ ತೆಗೆದುಕೊಂಡ  ಅದೇ ಜಾಗದಲ್ಲಿ ಅಮರಣಾಂತ ಉಪವಾಸ ಕುಳಿತಳು. ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಕೊಡಮಾಡಿರುವ ಶಸಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ[ Armed forces  Special power Act-   1952] ಯನ್ನು ಹಿಂಪಡೆಯಬೇಕೆಂಬುದು ಆಕೆಯ ಬೇಡಿಕೆಯಾಗಿತ್ತು.   ಇದಾಗಿ ಹದಿನಾರು ವರ್ಷಗಳು ಉರುಳಿವೆ. ಉಪವಾಸ ಇಂದಿಗೂ ಮುಂದುವರಿದಿದೆ.ಅಲ್ಲಿಂದೀಚೆಗೆ ಆಕೆ ಕನ್ನಡಿ ನೋಡಿಲ್ಲ. ತಲೆ ಬಾಚಿಲ್ಲ, ತನ್ನದೇ ಕೈಗಳಿಂದ ಊಟ ಮಾಡಿಲ್ಲ. ಆಕೆಯ ಆಹಾರ ನಿರಾಕರಣೆಯನ್ನು ಸರಕಾರವು ಆತ್ಮಹತ್ಯೆಯ ಪ್ರಯತ್ನ ಎಂದು ಕೇಸು ಜಡಿದು ಜೈಲಿನಲ್ಲಿಟ್ಟು ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡುತ್ತಿದೆ. ಆ ಅಪರಾಧಕ್ಕೆ ಒಂದುವರ್ಷ ಸಜೆಯಿದೆ. ಹಾಗಾಗಿ ಆಕೆಯನ್ನು ಮೊನ್ನೆ ಮಾರ್ಚ್ ೨೮ಕ್ಕೆ ಬಿಡುಗಡೆ ಮಾಡಿದರೂ ಮತ್ತೆ ಕೇಸು ಹಾಕಿ ಆಸ್ಪತ್ರೆಗೆ ತಳ್ಳಿದೆ.

ಮೂರನೆಯ ಘಟನೆ; ೨೦೦೪ರ ಜುಲೈ ೧೦.  ಭಾರತೀಯ ಭೂ ಸೇನೆಯ ಭಾಗವಾಗಿರುವ ಅಸ್ಸಾಂ ರೈಪಲ್ಸ್ ನ ಯೋಧರು ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ ೩೨ ವಯಸ್ಸಿನ ತಂಗ್ ಜಮ್ ಮನೋರಮಾ ದೇವಿ ಎಂಬ ಮಹಿಳೆಯನ್ನು ಆಕೆಯ ತಾಯಿ ಮತ್ತು ತಮ್ಮನನ್ನು ಬೆದರಿಸಿ ತಮ್ಮೊಡನೆ ಕರೆದುಕೊಂಡು ಹೋದರು. ಆಕೆ ಬಂಡುಕೋರರ ಜೊತೆ ನಂಟು ಹೊಂದಿದ್ದಾಳೆಯೆಂಬುದು ಅವರ ಆಪಾದನೆಯಾಗಿತ್ತು. ಆಕೆ ಮತ್ತೆ ಕಂಡದ್ದು ಮರುದಿನ ಬೆಳಿಗ್ಗೆ ಹೆಣವಾಗಿ. ಆಕೆಯ ಮೇಲೆ ಗುಂಡಿನ ಮಳೆಗೆರೆಯಲಾಗಿತ್ತು. ದೇಹವನ್ನು ಚಾಕುವಿನಿಂದ ಇರಿಯಲಾಗಿತ್ತು, ಗುಪ್ತಾಂಗಕ್ಕೆ ಗುಂಡು ಹೊಡೆದು ಛಿದ್ರಗೊಳಿಸಲಾಗಿತ್ತು.
ಮನೋರಮಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೆಂದು ಮೇಲ್ನೋಟಕ್ಕೆ ಗೊತ್ತಾದ ಅಂಶ. ಮುಂದೆ, ಕೇಂದ್ರೀಯ ವಿಧಿ ವಿಜ್ನಾನ ಸಂಸ್ಥೆ ಆಕೆಯ ಪೆಟ್ಟಿಕೋಟಿನ ಮೇಲಿದ್ದ ವೀರ್ಯದ ಕಲೆ, ಡಿ.ಎನ್.ಎ ಪರೀಕ್ಷೆ ನಡೆಸಿ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಡಿಸಿತು.. ಈ ಭೀಕರ ಹತ್ಯೆ ಮಣಿಪುರದ ಜನತೆಯನ್ನು ಬೆಚ್ಚಿಬೀಳಿಸಿತು. ತಾಯಂದಿರು ಆತಂಕಗೊಂಡರು.

ಈ ಘಟನೆ ನಡೆದ ಐದೇ ದಿನದಲ್ಲಿ ಅಂದರೆ ಜುಲೈ ೧೫ರಂದು ಒಂದು ಡಜನ್ನಿಗಿಂತಲೂ ಜಾಸ್ತಿ ಮಹಿಳೆಯರು ಸಂಪೂರ್ಣ ಬೆತ್ತಲಾಗಿ ಅಸ್ಸಾಂ ರೈಫಲ್ಸ್ ನ ೧೭ನೇ ಬೆಟಲಿಯನ್ ನ ಕೇಂದ್ರ ಸ್ಥಾನದೆದುರು ಪ್ರತಿಭಟನೆ ನಡೆಸಿದರು. ತಂತಮ್ಮ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಆ ತಾಯಂದಿರು ಆತಂಕಿತರಾಗಿದ್ದರು. ’ಭಾರತೀಯ ಸೈನಿಕರೇ, ಬನ್ನಿ ನಮ್ಮನ್ನು ರೇಪ್ ಮಾಡಿ [ ’ ಇಂಡಿಯನ್ ಆರ್ಮಿ ರೇಪ್ ಅಸ್” ”ಇಂಡಿಯನ್ ಆರ್ಮಿ ಟೇಕ್ ಅವರ್ ಪ್ಲೆಶ್’] ಎಂಬ ಬ್ಯಾನರ್ ಗಳು ಅವರ ಕೈಗಳಲ್ಲಿದ್ದುವು. ಸೈನಿಕರ ಬಂದೂಕಿನ ನಳಿಗೆಯೆದುರಲ್ಲಿ ಅವರ ಬೆತ್ತಲೇ ದೇಹವೇ ಆಯುಧವಾದಾಗ ಸಮಸ್ತ ಬಾರತವೇ ಈಶಾನ್ಯ ರಾಜ್ಯಗಳೆಡೆಗೆ ತಲ್ಲಣದ ನೋಟ ಬೀರಿತು. ಮಾತ್ರವಲ್ಲ. ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸುದ್ದಿಯನ್ನು ಮಾಡಿತು.

ಮೇಲಿನ ಮೂರೂ ಘಟನೆಗಳಿಗೆ ರಾಜಕೀಯ ಆಯಾಮಗಳಿವೆ. ಕೊನೆಯ ಎರಡೂ ಘಟನೆಗಳು ಯುದ್ಧದಾಹಿ ಪುರುಷನ ಮಹಾತ್ವಾಂಕ್ಷೆಗಳು ಸ್ರೀ ಸಂವೇಧನೆಗಳ ಮೇಲೆ ನಡೆಸಿದ, ನಡೆಸುತ್ತಿರುವ ಧಾಳಿಯಾಗಿತ್ತು. ಅ ಧಾಳಿಯನ್ನು ಮಹಿಳೆಯರು ತಾಯ್ತನದ ಅಂತಃಕರಣದಿಂದಲೇ ಎದುರಿಸಿದರು.
ಪರಿಣಾಮ ಏನಾಯ್ತು?
ಕೇಂದ್ರ ಸರಕಾರವು ತಾಯಂದಿರ ಪ್ರತಿಭಟನೆಯ ಕಾರಣದಿಂದಾಗಿ ಅಸ್ಸಾಂ ರೈಪಲ್ಸ್ ನ ೧೭ನೇ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಸಶಸ್ತ್ರಪಡೆಗಳ ವಿಶೇಷಾಧಿಕಾರಗಳ ಕಾಯ್ದೆಯ ಮರು ಪರಿಶೀಲನೆಗಾಗಿ ಜೀವನ ರೆಡ್ಡಿ ಆಯೋಗವನ್ನು ನೇ
ಮಿಸಿತು.

ಜಮ್ಮು-ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ. ತ್ರಿಪುರ ಮತ್ತು ನಾಗಲ್ಯಾಂಡ್, ಮಿಜೋರಾಂ [ಸೆವೆನ್ ಸಿಸ್ಟರ್ಸ್]ಗಳಲ್ಲಿ ಸೇನಾ ಪಾರಮ್ಯವಿದೆ. ನಾವೆಲ್ಲಾ ಒಂದೇ ದೇಶಕ್ಕೆ ಸೇರಿದವರಾಗಿದ್ದರೂ ಆ ರಾಜ್ಯಗಳಿಗೆ ಪ್ರವೇಶಿಸಬೇಕಾದರೆ ಅಲ್ಲಿನ ರಾಜ್ಯಗಳ ಅನುಮತಿಯನ್ನು ಮುಂಚಿತವಾಗಿ ಪಡೆಯಬೇಕು.ಆ ರಾಜ್ಯಗಳಲ್ಲಿ ಸದಾ ಕಂಕುಳಲ್ಲಿ ಮೆಷಿನ್ ಗನ್ನ್ ಗಳನ್ನಿಟ್ಟುಕೊಂಡೇ ತಿರುಗುವ ಸೇನಾ ಸಿಬ್ಬಂದಿ ಅಲ್ಲಲ್ಲಿ ಕಾಣಸಿಗುತ್ತಾರೆ. ಯಾಕೆ ಹೀಗೆ?

ಈ ರಾಜ್ಯಗಳಲ್ಲಿ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರೇ ಅತೀ ಹೆಚ್ಚಾಗಿದ್ದಾರೆ. ಇವರಲ್ಲಿ ಬಹುತೇಕರನ್ನು ಬ್ರಿಟಿಶರು  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.ಹಾಗಿದ್ದರೂ ಅವರು ತಮ್ಮ  ಶ್ರೀಮಂತ ಸಂಸ್ಕ್ರುತಿಯನ್ನು ಉಳಿಸಿ ಬೆಳಸಿಕೊಂಡು ಬಂದಿದ್ದಾರೆ. ಭಾರತೀಯ ಮುಖ್ಯವಾಹಿನಿಯ ಸಂಸ್ಕ್ರುತಿಗೂ ಇವರ ಸಂಸ್ಕ್ರುತಿಗೂ ಅಪಾರ ವ್ಯತ್ಯಾಸಗಳಿವೆ. ಇದಲ್ಲದೆ ಇವರಲ್ಲಿ ಹೆಚ್ಚಿನವರು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾದ ಕಾರಣ ದೈಹಿಕವಾಗಿ ಭಾರತಿಯರಿಗಿಂತ ಬಿನ್ನರಾಗಿ ಕಾಣುತ್ತಾರೆ.  ಭಾರತದ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡಾಗ ಇವರು ನಮ್ಮ ದೇಶಕ್ಕೆ ಸೇರಿದವರೇ ಅಥವಾ ವಿದೇಶಿಯರೇ ಎಂಬ ಸಂಶಯ ಮೂಡುತ್ತದೆ. ಈ ಭಾವನೆ ಈಶಾನ್ಯೇತರ ರಾಜ್ಯಗಳಲ್ಲಿರುವುದು ಅವರಿಗೂ ಗೊತ್ತಿದೆ. ಹಾಗಾಗಿಯೇ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಇಲ್ಲಿಯ ಜನರು ಪ್ರತ್ಯೇಕತೆಯ ಕೂಗು ಹಾಕಿದರು. ಈ ನಿಟ್ಟಿನಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿಕೊಂಡರು. ಅದರಲ್ಲಿ ಬಹುಮುಖ್ಯವಾದದ್ದು ೧೯೬೪ರಲ್ಲಿ ಸಮರೇಂದ್ರ ಸಿಂಗ್ ಹುಟ್ಟು ಹಾಕಿದ ಯೂನೈಟೆಡ್ ನ್ಯಾಷನಲ್ ಲಿಬರೇಷನ್ ಪ್ರಂಟ್. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಲ್ಯಾಂಡ್ ಒಳಗೊಂಡಂತೆ ”ಗ್ರೇಟರ್ ನಾಗಲ್ಯಾಂಡ್’ [ UNLF ] ಎಂಬ ಪ್ರತ್ಯೇಕ ರಾಷ್ಟ್ರದ ಕನಸ್ಸನ್ನು ಕಟ್ಟಿಕೊಂಡು ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಳನ್ನು ಹೂಡುತ್ತಿದ್ದಾರೆ.  ನೆರೆಯ ಪಾಕಿಸ್ತಾನ, ಚೀನಾ [ಹಿಂದಿನ ತಿಬೇಟ್] ಬಾಂಗ್ಲಾ, ಮಯನ್ಮಾರು [ಹಿಂದಿನ ಬರ್ಮಾ] ನೇಪಾಳ ಮತ್ತು ಭೂತಾನ್ ದೇಶಗಳು ಈ ರಾಜ್ಯಗಳೊಡನೆ ಗಡಿಯನ್ನು ಹಂಚಿಕೊಂಡಿವೆ.  ಇದರಲ್ಲಿ ಕೆಲವು ರಾಷ್ಟ್ರಗಳು ಈ ಬಂಡುಕೋರ ಸಂಘಟನಗಳಿಗೆ ಕುಮ್ಮಕ್ಕು ನೀಡುತ್ತಿವೆ. ಶಸ್ತಾಸ್ತ್ರಗಳನ್ನು ಪೂರೈಸುತ್ತಿವೆ. ಇವುಗಳು ನಮ್ಮ ರಾಷ್ಟ್ರದ ಅಖಂಡತೆ ಮತ್ತು ಸಾರ್ವಬೌಮತೆಗೆ ಧಕ್ಕೆ ತರುತ್ತಿವೆ.

ಇದನ್ನೆಲ್ಲಾ ಮನಗಂಡ ಭಾರತ ಸರಕಾರವು ೧೯೫೮ರಲ್ಲಿ ’ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಿಗಳ ಕಾಯ್ದೆ [ AFSPA ] ವನ್ನು ಜಾರಿಗೆ ತಂದಿತು. ಇದರ ಬಲದಿಂದ ಸೇನೆ ಈ ರಾಜ್ಯಗಳಲ್ಲಿ ಬಂಡುಕೋರರ ದಮನಕ್ಕೆ ಕಂಕಣ ಬದ್ಧವಾಗಿದೆ. ಆದರೆ ಸೇನೆ ಕೆಲವೊಮ್ಮೆ ತನಗಿಷ್ಟ ಬಂದಂತೆ ವರ್ತಿಸುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ  ಕೇವಲ ಮಹಿಳೆಯರೇ ನಡೆಸುವ ಬೃಹತ್  ಮಾರುಕಟ್ಟೆಯೊಂದು ಇಂಪಾಲದಲ್ಲಿದೆ. ಅದುವೇ ಖೈರಾಮ್ ಬಂದ್ ಬಜಾರ್ ಅಥವಾ ಇಮಾ ಮಾರುಕಟ್ಟೆ. ’ಇಮಾ’ ಅಂದರೆ ಮಣಿಪುರಿ ಭಾಷೆಯಲ್ಲಿ ತಾಯಿ ಎಂದರ್ಥ. ಇದು ತಾಯಂದಿರ ಮಾರುಕಟ್ಟೆ. ಇಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರು ನೆಮ್ಮದಿಯಿಂದ ತಂತಮ್ಮ ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಿದ್ದಾರೆ. ಇದು ಸಂಪೂರ್ಣ ಸ್ತ್ರೀ ಜಗತ್ತು. ಮಣಿಪುರಕ್ಕೆ ಹೋಗುವಾಗ ಆ ಮಾರುಕಟ್ಟೆಯನ್ನೊಮ್ಮೆ ನೋಡಬೇಕು, ಅಲ್ಲಿಯ ಮಹಿಳೆಯರನ್ನು ಮಾತಾಡಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು.
 ನಾವು ಇಂಪಾಲ ತಲುಪಿದಾಗ ರಾತ್ರಿ ಆರು ಘಂಟೆಯಾಗಿತ್ತು. ಈಶಾನ್ಯ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವವರು ನೆನಪಿನಲ್ಲಿಡಬೇಕಾದ ಮತ್ತೊಂದು ಸಂಗತಿ ಏನೆಂದರೆ ಅಲ್ಲಿ ಬಹುಬೇಗನೇ ಅಂಗಡಿಗಳನ್ನು ಮುಚ್ಚುತ್ತಾರೆ. ರಾತ್ರಿ ಏಳು ಘಂಟೆ ಸುಮಾರಿಗೆ ಇಮಾ ಮಾರುಕಟ್ಟೆಗೆ ನಾ ತಲುಪಿದೆ. ಒಂದೆರಡು ಅಂಗಡಿಗಳು ಮುಚ್ಚುವ ಸಿದ್ಧತೆಯಲ್ಲಿದ್ದುದನ್ನು ಬಿಟ್ಟರೆ ಇಡೀ ಮಾರುಕಟ್ಟೆ ಮುಚ್ಚಿತ್ತು. ಆದರೆ ಮಾರುಕಟ್ಟೆಯ ಪಕ್ಕದ ಮುಖ್ಯ ರಸ್ತೆಯಲ್ಲಿ ಲಾಟೀನು ಮತ್ತು ಮೊಂಬತ್ತಿಯ ಬೆಳಕಿನಲ್ಲಿ ನೂರಾರು ಹೆಂಗಸರು ಸೊಪ್ಪು ತರಕಾರಿ ಮತ್ತು ತಾಜಾ ಮೀನುಗಳನ್ನು ಮಾರಾಟ ಮಾಡುತ್ತಿದ್ದರು. ಅವರಲ್ಲೇ ಹತ್ತಾರು ಮಹಿಳೆಯರನ್ನು ಮಾತಾಡಿಸಿದೆ. ಆದರೆ ಅವರಿಗೆ ಮಣಿಪುರಿ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಹಿಂದಿ ಅರ್ಥವಾಗುತ್ತೆ. ಮಾತಾಡಲು ಬಾರದು. ಕೊನೆಗೆ ಕೈ ಬಾಯಿ ಅಲ್ಲಾಡಿಸುತ್ತಾ ನ ನಗುತ್ತಾ ಮಾತಾಡಿದೆ. ಅವರೂ ಅದನ್ನೇ ಮಾಡಿದರು. ಕೊನೆಗೊಮ್ಮೆ ಒಬ್ಬಳು ತಾಯಿ ಎಷ್ಟು ಚೆನ್ನಾಗಿ ನಕ್ಕು ನನ್ನನ್ನು ಅಪ್ಪಿಕೊಂಡಳೆಂದರೆ ಅವರ ಎಲ್ಲಾ ಭಾವನೆಗಳು ನನ್ನೊಳಗೆ ಹರಿದು ನಾವಿಬ್ಬರೂ ಒಂದೇ ಅನ್ನಿಸಿಬಿಟ್ಟಿತು.

ಮರುದಿನ ಮುಂಜಾನೆಯೇ-ಅಲ್ಲಿ ಐದು ಘಂಟೆಗೆಲ್ಲಾ ಸೂರ್ಯ ಮೇಲೆ ಬಂದಿರುತ್ತಾನೆ- ಇಮಾ ಮಾರುಕಟ್ಟೆಗೆ ಸೈಕಲ್ ರಿಕ್ಷಾದಲ್ಲಿ ಒಬ್ಬಳೇ ಹೋದೆ.  ಮಣಿಪುರದ ರಾಣಿ ಸ್ಥಳೀಯ ಮಾಹಿಳೆಯರಿಗಾಗಿ ಈ ಮಾರುಕಟ್ಟೆನ್ನು ಪ್ರಾರಂಭಿಸಿದ್ದಳು. ತಾವು ಬೆಳೆದ ತರಕಾರಿ ಹಣ್ಣು ಹಂಪಲು, ಕರಕುಶಲ ವಸ್ತುಗಳನ್ನು ಇಲ್ಲಿ ತಂದು ಮಾರಾಟ ಮಾಡಿ ಅಲ್ಪ ಸ್ವಲ್ಪ ದುಡ್ಡು ಗಳಿಸಿಕೊಳ್ಳುತ್ತಿದ್ದರು. ಅಂದು ರಾಣಿಯೊಬ್ಬಳು ಈ ಮಹಿಳೆಯರಿಗೆ ಹಾಕಿಕೊಟ್ಟ ಸ್ವಾವಲಂಬನೆಯ ಹಾದಿ ಇಂದು ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಬದುಕಿನ ಹಾದಿಯನ್ನು ತೆರೆದಿದೆ. ಈ ಮಾರುಕಟ್ಟೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಪ್ರಖ್ಯಾತಿ ಗಳಿಸಿದೆ. ಯಾಕೆಂದರೆ ಇಷ್ಟು ದೊಡ್ಡ ಸಂಕ್ಯೆಯಲ್ಲಿ ಮಹಿಳಾ ವ್ಯಾಪಾರಿಗಳಿರುವ ಇನ್ನೊಂದು ಮಾರುಕಟ್ಟೆ ಜಗತ್ತಿನಲ್ಲಿಲ್ಲ. ಇಲ್ಲಿ ನಿಮಗೆ ದೈನಂದಿನ ಬದುಕಿಗೆ ಏನು ಬೇಕೋ ಅದೆಲ್ಲವೂ ದೊರಕುತ್ತದೆ.

ಈ ಮಾರುಕಟ್ಟೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಪದಾಧಿಕಾರಿಗಳಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ಅಧ್ಯಕ್ಷರು ಮತ್ತು ಸೆಕ್ರೇಟರಿಯನ್ನು ಆಯ್ದುಕೊಳ್ಳುತ್ತಾರೆ.ಜಗಳ ಜಂಜಾಟವಿಲ್ಲ. ಇಲ್ಲಿನ ಮಹಿಳೆಯರು ಎದೆ ತಟ್ಟಿಕೊಂಡು ಹೇಳುತ್ತಾರೆ  ’ಇಲ್ಲಿ ನಾವು ನಾವೇ ಆಗಿದ್ದೇವೆ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ.’ ಹಾಗಿದ್ದರೂ ಅಲ್ಲಿ ಐದಾರು ಜನ  ಜನ ಪುರುಷ ಪೋರ್ಟರ್ ಗಳಿದ್ದಾರೆ. ಅಲ್ಲಿ ತಾಯಂದಿರೇ ಅಂದರೆ ನಲ್ವತ್ತು ಮೀರಿದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಅವರ ಸಾಮಾನು ಸರಂಜಾಮ್ ಗಳನ್ನು ಹತ್ತಿಳಿಸಲು ಅವರಿಗೆ ಈ ಪೋರ್ಟರ್ ಗಳು ನೆರವಾಗುತ್ತಾರೆ. ಯಾಕೆ ಪುರುಷರಿಗೆ ಪ್ರವೇಶ ಬೇಡ ಅಂತ ಪ್ರಶ್ನಿಸಿದರೆ. ಅವರು ತಮ್ಮ ಅಂಗಡಿಯ ಚಿಕ್ಕ ಜಾಗವನ್ನು ತೋರಿಸಿ, ಇಲ್ಲಿ ಪಕ್ಕದಲ್ಲಿ ಮಹಿಳೆಯರೇ ಕೂತು ಅಂಗಡಿ ನಡೆಸಿದರೆ ನಮಗೇನೂ ಅನ್ನಿಸುವುದಿಲ್ಲ. ಆ ಜಾಗಕ್ಕೆ ಪುರುಷ ಬಂದಾಗ ಮುಜುಗರವಾಗುತ್ತದೆ ಎನ್ನುತ್ತಾರೆ. ನಾವು ಇದಕ್ಕೆ ಕಂಪರ್ಟೇಬಲ್ ಅನ್ನುವ ಪದ ಬಳಸುತ್ತೇವೆ ಅಲ್ಲವೇ?

 ಮಣಿಪುರ ನಮ್ಮ ಬೆಂಗಳೂರಿನಿಂದ  3416 ಕಿ.ಮೀ ದೂರದಲ್ಲಿದೆ. ಸುತ್ತ ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದ ಸುತ್ತುವರಿದ ರಮಣೀಯ ಪ್ರದೇಶವಿದು. ನೆಹರು ಈ ರಾಜ್ಯದ ಪಕೃತಿ ಸೌಂದರ್ಯಕ್ಕೆ ಮಾಋ ಹೋಗಿ ಇದನ್ನು ’ಭಾರತದ ಆಭರಣ’ ಎಂದು ಕರೆದಿದ್ದರು.  ಸರಿ ಸುಮಾರು ಇಷ್ಟೇ ದೂರದಲ್ಲಿರುವ ಇನ್ನುಳಿದ ಏಳು ಈಶಾನ್ಯ ರಾಜ್ಯಗಳನ್ನು ಸುತ್ತಿ ಬಂದಿದ್ದೇನೆ. ವಿದ್ಯಾಭ್ಯಾಸಕ್ಕಾಗಿ. ಹೊಟ್ಟೆಪಾಡಿಗಾಗಿ ಅಥವಾ ಅಲ್ಲಿನ ಜಂಜಾಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೋ ಅಲ್ಲಿನ ಜನರು ಗಣನೀಯ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ.ಅವರನ್ನು ಕೆಲವರು ’ಚಿಂಕಿ’ಗಳೆಂದು ಕರೆದು ಜನಾಂಗೀಯ [ರೇಸಿಸ್ಟ್] ಅವಹೇಳನ ಮಾಡುವುದನ್ನು ಕಂಡಿದ್ದೇನೆ. ಇಲ್ಲಿದ್ದು ತಾಯ್ನಾಡಿಗೆ ಹಿಂದಿರುಗಿದ್ದ ಹಲವರನ್ನು ನಾನಲ್ಲಿ ಬೇಟಿಯಾಗಿದ್ದೇನೆ. ಅವರು ಬೆಂಗಳೂರನ್ನು ಕೃತಜ್ನತೆಯಿಂದ ಸ್ಮರಿಸುತ್ತಾರೆ. ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಾವಿಳಿದುಕೊಂಡಿದ್ದ ಹೋಟೇಲ್ ನ ಮಾಲೀಕರು ಬೆಂಗಳೂರಿನಲ್ಲಿ ಇಂಜಿನೀಯರ್ ಆಗಿದ್ದರಂತೆ. ಅವರ ಮಗ ಇಲ್ಲಿಯೇ. ವಿದ್ಯಾಭ್ಯಾಸವನ್ನು ಮಾಡಿದವನು. ಇಬ್ಬರೂ ನಮ್ಮನ್ನು ಆದರದಿಂದ ಸ್ವಾಗತಿಸಿ ಕನ್ನಡದಲ್ಲಿಯೇ ವ್ಯವಹರಿಸಿದ್ದರು. ಇಂಪಾಲದಲ್ಲಿ ಸಿಕ್ಕಿದ್ದಾತನೊಬ್ಬ ೨೦೦೮ರ ಬಿಎಂಟಿಸಿ ಬಸ್ ಪಾಸ್ ಅನ್ನು ಇನ್ನೂ ಜತನವಾಗಿಟ್ಟುಕೊಂಡದ್ದನ್ನು ತೋರಿಸಿ ಕನ್ನಡದಲ್ಲಿಯೇ ಬೆಂಗಳೂರಿನ ಬಗ್ಗೆ ಅಭಿಮಾನದಿಂದ ಮಾತಾಡಿದ.

ಒಂದು ರಾಜ್ಯವೆಂದರೆ ಅಲ್ಲಿ ಹಲವಾರು ಸಮಸ್ಯೆಗಳು, ತಿಕ್ಕಾಟಗಳು ಇರುತ್ತವೆ. ಚಲನಶೀಲವಾದ ಸಮಾಜವೊಂದು ಅಂತರಿಕವಾಗಿ ಒಳಗೊಳಗೆ ಬೇಯುತ್ತಲೂ ಅರಳುತ್ತಲೂ ಇರುತ್ತದೆ. ಕೇವಲ ಇಪ್ಪತ್ತೇಳು ಲಕ್ಷ ಜನಸಂಖ್ಯೆಯಿರುವ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಈ ಪುಟ್ಟ ರಾಜ್ಯ ತನ್ನೊಳಗೆ ಎಷ್ಟೊಂದು ಬೇಗುಧಿಯನ್ನಿಟ್ಟುಕೊಂಡಿದೆ!.
ಮಣಿಪುರ ಮಾತ್ರವಲ್ಲ ಈಶಾನ್ಯ ರಾಜ್ಯಗಳೆಲ್ಲಿ ಎಲ್ಲಿ ಬೇಕಾದರೂ ತಿರುಗಾಡಿ ಅಲ್ಲೆಲ್ಲಾ ಅತ್ಯಂತ ಕ್ರಿಯಾಶೀಲರಾದ, ಲವಲವಿಕೆಯ ಮಹಿಳೆಯರೇ ಕಾಣಸಿಗುತ್ತಾರೆ. ಅವರ ಬೆನ್ನಮೇಲೆ ಹೊರೆಯಿದೆ,ಅದು ತಪ್ಪಿದರೆ ಕೂಸಿದೆ .ಸಂಸಾರದ ಭಾರಕ್ಕೆ ಅವರ ನಗು ಮಂಕಾಗಿಲ್ಲ  ಸ್ತ್ರೀತನಕ್ಕೆ ದಕ್ಕೆ ಬಂದಾಗ ಇದೇ ಮಹಿಳೆ ಬೀದಿಗಿಳಿದು ಹೋರಾಡುತ್ತಾಳೆ. ನಿಮ್ಮ ಮನೆಯ ಗಂಡಸರು ಎಲ್ಲಿ ಎಂದು ಪ್ರಶ್ನಿಸಿದರೆ, ಅವರು ಸೈನದಲ್ಲಿರುತ್ತಾರೆ ಅಥವಾ ದೂರದ ನಾಡಿನಲ್ಲೆಲ್ಲೋ ಸೆಕ್ಯೂರಿಟಿ ಗಾರ್ಡ್ ಗಳಾಗಿರುತ್ತಾರೆ. ಇಲ್ಲವಾದರೆ ದೂರದೂರುಗಳಲ್ಲಿ ಟ್ಯಾಕ್ಸಿ ಓ ಡಿಸುತ್ತಿರುತ್ತಾರೆ. ಮೂರೂ ಅಲ್ಲವಾದವರು ಸೋಮಾರಿಗಳಾಗಿರುತ್ತಾರೆ; ಕುಡುಕರಾಗಿರುತ್ತಾರೆ ಎಂದು ಈಶಾನ್ಯ ರಾಜ್ಯಗಳ ಅಪರೂಪದ ಹೂಗಳಂತೆ ಅಲ್ಲಿನ ಮಹಿಳೆಯರು  ಮುಗ್ದವಾಗಿ ನಗುತ್ತಾರೆ.
ಮಣಿಪುರದ ಮಹಿಳೆ ಸಮತೂಕದ ಮಹಿಳೆ,  ವ್ಯಕ್ತಿಯಾಗಿ ಲಂಡನ್ ಒಲಂಪಿಕ್ಸ್ ನಲ್ಲಿ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದುಕೊಟ್ಟ ಮೇರಿ ಕೋಮ್ ಇದ್ದಾಳೆ. ಶಕ್ತಿಯಾಗಿ ಹದಿನಾರು ವರ್ಷಗಳಿಂದ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಇದ್ದಾಳೆ.ಇವರಿಬ್ಬರೂ ನಮ್ಮ ನಾಡಿನ ಹೆಮ್ಮೆಯ ಪುತ್ರಿಯರು.

[ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ’ಮುಕ್ತಛಂಧ’ ದಲ್ಲಿ ಪ್ರಕಟವಾದ ಲೇಖನ ]




Sunday, July 3, 2016

ಏಕಾಂಗಿ ಸಮರವೀರ; ಜಸ್ವಂತಸಿಂಗ್ ರಾವತ್





ತಾನು ಸತ್ತ ಮೇಲೂ ತನ್ನ ಹುದ್ದೆಯನ್ನು ಯಥಾಸ್ಥಿತಿ ಉಳಿಸಿಕೊಂಡು ಕಾಲಕಾಲಕ್ಕೆ ಭಡ್ತಿಯನ್ನು ಪಡೆಯುತ್ತಾ ಜೀವಂತವಿದ್ದಾಗ ಯಾವ್ಯಾವ ರೀತಿಯ ಸವಲತ್ತುಗಳನ್ನು ಪಡೆಯಬಹುದಿತ್ತೋ ಅವೆಲ್ಲವನ್ನು ಪಡೆಯುತ್ತಾ ತನ್ನ ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶಕನಾಗಿ, ಅವರಲ್ಲಿ ಸ್ಪೂರ್ತಿಯನ್ನು ತುಂಬುತ್ತಲಿರುವ ವ್ಯಕ್ತಿಯೊಬ್ಬನ ಬಗ್ಗೆ ನೀವೆಂದಾದರೂ ಕೇಳಿದ್ದೀರಾ?

ಇಲ್ಲವೆಂದಾದ್ರೆ ಅರುಣಾಚಲಪ್ರದೇಶದ ತವಾಂಗಿಗೆ ಬನ್ನಿ. ಜನಮಾನಸದಲ್ಲಿ ಬೇರುಬಿಟ್ಟು, ದಂತಕಥೆಯಾಗಿ ದೈವತ್ವಕ್ಕೇರಿರುವ ವೀರಯೋಧನೊಬ್ಬನನ್ನು ನೀವಿಲ್ಲಿ ಕಾಣಬಹುದು..

ಅದು  ೧೯೬೨ನೇ ಇಸವಿ. ಭಾರತದ ಮೇಲೆ ಚೀನಾ ಹಟತ್ತಾಗಿ ಧಾಳಿ ನಡೆಸಿತ್ತು. ಇದನ್ನು ಭಾರತ ನಿರೀಕ್ಷಿಸಿರಲಿಲ್ಲ. ಪ್ರಧಾನ ಮಂತ್ರಿ ಜವಹರಲಾಲ್ ನೆಹರುರವರು ಪಂಚಶೀಲ ತತ್ವಗಳ ಗುಂಗಿನಲ್ಲಿ, ’ಹಿಂದಿ ಚೀನಿ ಬಾಯಿ ಬಾಯಿ’ ಘೋಷಣೆಯಲ್ಲಿ ವಾಸ್ತವವನ್ನು ಮರೆತಿದ್ದರು. ಅನಿರೀಕ್ಷಿತ ಆಘಾತಕ್ಕೆ ನಮ್ಮ ಸೇನೆ ತತ್ತರಿಸಿ ಹೋಗಿತ್ತು. ಚೀನಿಯರ ಅತ್ಯಾಧುನಿಕ ಶಸ್ತ್ರಾಸ್ತ್ರಗಳೆದುರು ನಮ್ಮ ಬಂದೂಕಿನ ಗುಂಡುಗಳು ಮೊಂಡಾಗಿದ್ದವು. ನಮ್ಮ ಸೇನೆ ಸೋತು ಸುಣ್ಣವಾಗುತ್ತಿತ್ತು. ಚೀನಾ ಗಡಿರೇಖೆಯನ್ನು ದಾಟಿ ತವಾಂಗ್ ಅನ್ನು ಹಿಂದಿಕ್ಕಿ ಸೆಲ್ಲಾ ಪಾಸ್ ದಾಟಿ ಅಸ್ಸಾಂನ ತೇಜ್ ಪುರ ದವರೆಗೂ ಮುಂದೊತ್ತಿ ಬಂದಿತ್ತು. ಈ ಯುದ್ಧದಲ್ಲಿ ಸೇನಾಧಿಕಾರಿಗಳು ಸೇರಿದಂತೆ ಮೂರು ಸಾವಿರ ಭಾರತೀಯರ ಬಲಿಧಾನವಾಯ್ತು. ಆಗ ಭಾರತ ಅರುಣಾಚಲಪ್ರದೇಶದ ತವಾಂಗ್ ನಲ್ಲಿರುವ ತನ್ನ ಸೇನಾನೆಲೆಯಲ್ಲಿ ಅಳಿದುಳಿದಿದ್ದ ಸೈನಿಕರನ್ನು ಹಿಂದಕ್ಕೆ ಬರಲು ಆಜ್ನೆ ನೀಡಿತು. ಅರ್ಥಾತ್ ಭಾರತ ಚೀನಾದೆದುರು ಸೋಲನ್ನು ಒಪ್ಪಿಕೊಂಡಿತ್ತು.
ಆದರೆ ಮೂವರು ಕೆಚ್ಚೆದೆಯ ಸೈನಿಕರು ಸೇನಾ ಮುಖ್ಯಸ್ಥರ ಆಜ್ನೆಯನ್ನು ಧಿಕ್ಕರಿಸಿ ಯುದ್ಧವನ್ನು ಮುಂದುವರಿಸಲು ನಿರ್ಧರಿಸಿಬಿಟ್ಟರು.

ಆರಾಧನಾ ಸ್ಥಳವಾದ ಜಸ್ವಂತ್ ಗಡ್
 ಗಮನಿಸಿ; ಅದು ನವೆಂಬರ್ ತಿಂಗಳು. ಕಡು ಚಳಿಗಾಲ. ತವಾಂಗ್, ಸಮುದ್ರಮಟ್ಟದಿಂದ ಹತ್ತು ಸಾವಿರ ಅಡಿ ಎತ್ತರದಲ್ಲಿರುವ ಹಿಮಾವೃತ ಪರ್ವತ ಶ್ರೇಣಿಯಲ್ಲಿ ಹುದುಗಿರುವ ಪುಟ್ಟ ಊರು. [ಈಗ ಪಟ್ಟಣವಾಗಿದೆ, ಇದು  ಅರುವತ್ತನಾಲ್ಕು ವರ್ಷಗಳ ಹಿಂದಿನ ಮಾತು.] ಸದಾ ಮಳೆ ಮತ್ತು ಹಿಮಸುರಿಯುವ ಶೀತಲ ವಾತಾವರಣ.  ಇಂತಹದ್ದರಲ್ಲಿ ಅತ್ಯಾಸೆಯಿಂದ ಸೇನೆಗೆ ಸೇರಿದ್ದ ಉತ್ತರಾಖಂಡ ರಾಜ್ಯದ ಘಡ್ವಾಲ್ ರೀಜನ್ನಿಗೆ ಸೇರಿದ ಇಪ್ಪತ್ತೆರಡರ ಹರೆಯದ ರೈಪಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್, ಲ್ಯಾನ್ಸ್ ನಾಯಕ್ ತ್ರಿಲೋಕ್ ಸಿಂಗ್ ನೇಗಿ ಮತ್ತು ರೈಪಲ್ ಮ್ಯಾನ್ ಗೋಪಾಲ್ ಸಿಂಗ್ ಗುಸೈನ್ ಸೇನಾ ಆಜ್ನೆಯನ್ನು ಧಿಕ್ಕರಿಸಿ ಸಾವಿಗೆ ಮುಖಾಮುಖಿಯಾಗಲು ಸೆಲ್ಲಾ ಪಾಸ್ ನ ಬಂಕರ್ ಗೆ ಬಂದರು. ಸೆಲ್ಲಾ ಪಾಸ್ ಸಮುದ್ರಮಟ್ಟದಿಂದ ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿದೆ. ಸುತ್ತ ಹಿಮಪರ್ವತಗಳು. ಅವರ ಕೈಯ್ಯಲ್ಲಿ ರೈಪಲ್ ಬಿಟ್ಟರೆ ಇನ್ನೇನೂ ಶಸ್ತಾಸ್ರ್ತಗಳಿರಲಿಲ್ಲ..  ಬಂಕರ್ಗಳಲ್ಲಿ ಕೂತು ಚೀನಿಯರತ್ತ ಗುಂಡು ಹಾರಿಸತೊಡಗಿದರು. ಮದ್ದುಗುಂಡುಗಳು ಮುಗಿದಾಗ ತೆವಳುತ್ತಾ ಹೋಗಿ ಸತ್ತ ಚೀನಿಯರ ಕೈಗಳಲ್ಲಿದ್ದ ಅತ್ಯಾಧುನಿಕ ಬಂದೂಕುಗಳನ್ನು ತಂದರು. ಹಾಗೆ ತರುವ ಪ್ರಯತ್ನದಲ್ಲಿ ತ್ರಿಲೋಕ್ ಸಿಂಗ್ ಮತ್ತು ಗೋಪಾಲ್ ಸಿಂಗ್ ನೆಲಕ್ಕೊರಗಿದರು.

ಅದು ೧೯೬೨ರ ನವೆಂಬರ್ ೧೭.  ಒಂಟಿಯಾಗುಳಿದ ಜಸ್ವಂತ್ ಸಿಂಗ್ ವೀರ ಅಭಿಮನ್ಯುವಿನ ರೀತಿಯಲ್ಲಿ ಹೋರಾಟಕ್ಕಿಳಿದ. ಬಂಕರ್ನಿಂದ ಬಂಕರ್ ಗೆ ಜಿಗಿಯುತ್ತಾ ಅವರದೇ ಬಂದೂಕುಗಳಿಂದ ಚೀನಿಯರತ್ತ ಗುಂಡು ಹಾರಿಸತೊಡಗಿದ ಹೀಗೆ ಸತತ ಮೂರು ದಿನ ಹೋರಾಡಿ ಮೂನ್ನೂರಕ್ಕೂ ಹೆಚ್ಚು ಚೀನಿಯರನ್ನು ಆಹುತಿ ತಗೊಂಡ. ಆತಂಕಕ್ಕೀಡಾದ ಚೀನಿಯರಿಗೆ ಭಾರತದ ಬಂಕರುಗಳಲ್ಲಿ ಎಷ್ಟು ಜನ ಸೈನಿಕರಿದ್ದರೆಂಬುದರ ಅಂದಾಜು ಸಿಕ್ಕಿರಲಿಲ್ಲ. ಬಂದೂಕಿನ ಹೊಡೆತ ನೋಡಿ ಒಂದು ಬೆಟಾಲಿಯನ್ ಸೈನಿಕರಿರಬಹುದೆಂದು ಅಂದಾಜಿಸಲಾಗಿತ್ತು. ಅವರು ಆತನೆಡೆಗೆ ಹದ್ದಿನ ಕಣ್ಣಿಟ್ಟಾಗ ಅವನಿಗೆ ಆಹಾರವನ್ನು ಸರಬರಾಜು ಮಾಡುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬನನ್ನು ಹಿಡಿದು ಚಿತ್ರಹಿಂಸೆ ಕೊಟ್ಟಾಗ ಅಲ್ಲಿರುವುದು ಕೇವಲ ಒಬ್ಬ ವ್ಯಕ್ತಿ ಎಂಬುದು ಗೊತ್ತಾಗಿ ಬೆಕ್ಕಸ ಬೆರಗಾದರು.ಅಲ್ಲದೆ ಅವನಿಗೆ ಪೋರ್ಟರ್ ಗಳಾಗಿ ಕೆಲಸಮಾಡುತ್ತಿದ್ದವರು ಸೆಲ್ಲಾ ಮತ್ತು ನೂರಾ ಎಂಬ ಹುಡುಗಿಯರೆಂದು ತಿಳಿದು ಇನ್ನೂ ಅಚ್ಚರಿಗೊಂಡರು.

ಆಮೇಲೆ ಅವರಿಗೆಲ್ಲವೂ ಸಲೀಸಾಯ್ತು. ಸೆಲ್ಲಾ ಗ್ರೆನೇಡ್ ಧಾಳಿಯಲ್ಲಿ ಸತ್ತಳು. ನೂರಾ ಬಂದಿಯಾದಳು. ಇವರೆಲ್ಲರ ಅಂತ್ಯದ ಬಗ್ಗೆ ಹಲವಾರು ಕಥೆಗಳಿವೆ ಸ್ಥಳೀಯ ಮೂಲದ ಪ್ರಕಾರ ಚಿತ್ರಹಿಂಸೆ ಕೊಟ್ಟು ಜಸ್ವಂತ್ ಇರುವ ಜಾಗವನ್ನು ತೋರಿಸೆಂದು ಚೀನಿ ಬ್ರಿಗೇಡಿಯರ್ ಆಕೆಯನ್ನು ಕರೆದೊಯ್ಯುತ್ತಿರುವಾಗ ಕಣಿವೆಯೊಂದಕ್ಕೆ ಆತನನ್ನು ದೂಡಿ ತಾನೂ ಬಿದ್ದು ಸತ್ತು ಹೋದಳಂತೆ. ಹಾಗೆಯೇ ತಾನು ಬಂದಿಯಾಗುತ್ತಿದ್ದೇನೆ ಎಂಬುದು ಗೊತ್ತಾದ ಒಡನೆಯೇ ತಾನೇ ಬಂದೂಕು ಹಾರಿಸಿಕೊಂಡು ಜಸ್ವಂತ್ ಆತ್ಮಾರ್ಪಣೆ ಮಾಡಿಕೊಂಡ ಎನ್ನಲಾಗುತ್ತದೆ. ಇಂತಹ ವೀರಾಧಿವೀರ ಭಾರತೀಯರ ಸೈನಿಕರ ಮನಸ್ಸಿನಲ್ಲಿ ಹೇಗೆ ಮನೆ ಮಾಡಿದ್ದಾನೆ; ಮನೆ ಮಾಡುತ್ತಿದ್ದಾನೆ ಗೊತ್ತೆ?

ಸೆಲ್ಲಾ ಪಾಸ್.
 ಮಿಲ್ಕಾಸಿಂಗ್ ನನ್ನು ತೆರೆಗೆ ತಂದ ರಾಕೇಶ್ ಓಂ ಪ್ರಕಾಶ್ ಮೇಹ್ರಾ ಅವರು ಜಸ್ವಂತ ಸಿಂಗ್ ನ ಜೀವನಗಾಥೆಯನ್ನು ಆಧಾರಿಸಿ ಸಿನೇಮಾ ತೆಗೆಯಲು ಮುಂದಾಗಿದ್ದರೆ. ಆ ಹಿನ್ನೆಲೆಯಲ್ಲಿ ಅವರು ಜಸ್ವಂತನ ಮನೆಯವರನ್ನು ಸಂಪರ್ಕಿಸಿ ಅವರ ತಾಯಿ ಮತ್ತು ತಮ್ಮಂದಿರ ಜೊತೆ ಮಾತುಕಥೆಯಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ತಮ್ಮ ಆಡಿದ ಮಾತುಗಳನ್ನು ಕೇಳುವಾಗ ಸೋಜಿಗವಾಗುತ್ತದೆ. ಅವರ ಪ್ರಕಾರ, ಜಸ್ವಂತಸಿಂಗ್ ನ ತಲೆಯನ್ನು ಚೀನಿ ಸೈನಿಕರು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಾರೆ. ಅಲ್ಲಿನ ಸೇನಾಧಿಕಾರಿಗಳು ಈ ಏಕಾಂಗಿ ವೀರನ ಸಾಹಸಗಾಥೆಯನ್ನು ಕೇಳಿ ದಿಗ್ಮೂಢರಾಗುತ್ತಾರೆ. ಆತನ ಶೌರ್ಯವನ್ನು ಕೊಂಡಾಡುತ್ತಾರೆ. ಮಾತ್ರವಲ್ಲ ಬಿನ್ನವತ್ತಳೆಯೊಂದಿಗೆ ಆತನ ಶಿರದ [ಎದೆಯಿಂದ ಮೇಲ್ಭಾಗದ] ಕಂಚಿನ ಮೂರ್ತಿಯನ್ನು ಮಾಡಿ ಗೌರವದೊಂದಿಗೆ ಭಾರತಕ್ಕೆ ಕಳುಹಿಸಿಕೊಡುತ್ತಾರೆ. ನೂರಾನಂಗ್ ನಲ್ಲಿರುವ ಜಸ್ವಂತ್ ಗುಡಿಯಲ್ಲಿ ಇಂದು ಪೂಜೆಗೊಳ್ಳುತ್ತಿರುವ ಕಂಚಿನ ಪ್ರತಿಮೆ ಇದೇ ಚೀನಿಯರು ಮಾಡಿಸಿಕೊಟ್ಟ ಪ್ರತಿಮೆಯಂತೆ. ಅಲ್ಲಿ ಶತ್ರುನೆಲದಲ್ಲಿ ಜಸ್ವಂತನ ಗುಣಗಾನ ನಡೆಯುತ್ತಿದ್ದರೆ, ಇಲ್ಲಿ ತಾಯ್ನೆಲದಲ್ಲಿ ಮೇಲಾಧಿಕಾರಿಗಳ ಆಜ್ನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಆತನ ಕೋರ್ಟ್ ಮಾರ್ಷಲ್ ಗೆ ಸಿದ್ಧತೆಗಳು ನಡೆಯ್ತುತ್ತವೆ.
ಅನಂತರದಲ್ಲಿ ಆತನ ಬಲಿದಾನವನ್ನು ಗುರುತಿಸಿದ ಭಾರತ, ರೈಪಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್ ಗೆ ಮರಣೋತ್ತರ ಪರಮವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಿತ್ತು.

ಸೆಲ್ಲಾ ಪಾಸ್ ನಿಂದ ೨೧ ಕಿಮೀ ದೂರದಲ್ಲಿ ತವಾಂಗ್ ಹಾದಿಯಲ್ಲಿ ಜಸ್ವಂತ್ ಘರ್ ಇದೆ. ಇದು  ಇದು ಜಸ್ವಂತ್ ಸಿಂಗ್ ರಾವತ್ ಹೆಸರಿನಲ್ಲಿರುವ ಯುದ್ಧಸ್ಮಾರಕ. ಈ ಸ್ಥಳದ ಹೆಸರು ನೂರಾನಂಗ್. ಸ್ಥಳೀಯರು ಹೇಳುವ ಪ್ರಕಾರ ಸೆಲ್ಲಾ ಪಾಸ್ ಮತ್ತು ನೂರಾನಂಗ್, ಜಸ್ವಂತ್ ಸಿಂಗ್ ನ ಏಕಾಂಗಿ ಹೋರಾಟಕ್ಕೆ ಸಾಥ್ ನೀಡಿ ವೀರಮರಣವನ್ನಪ್ಪಿದ ಅಕ್ಕ ತಂಗಿಯರ ಹೆಸರಿನಲ್ಲಿರುವ ಜಾಗಗಳಿವು. ಆದರೆ ಜಸ್ವಂತ್ ಘರ್ ನಲ್ಲಿ ಆ ಹುಡುಗಿಯರ ತ್ಯಾಗವನ್ನು ಶಾಶ್ವತಗೊಳಿಸಿದ್ದರ ಕುರುಹು ನನಗೆ ಕಾಣಿಸಲಿಲ್ಲ.

 ಜಸ್ವಂತ್ ಘರ್ ಈಗ ಕೇವಲ ಯುದ್ಧ ಸ್ಮಾರಕವಾಗಿ ಉಳಿದಿಲ್ಲ. ಅದೊಂದು ದೇವಸ್ಥಾನವಾಗಿದೆ. ಜಸ್ವಂತ್ ಬಾಬಾ ಆಗಿದ್ದಾರೆ. ಇಲ್ಲಿಯ ಸೈನಿಕರಿಗೆ ಆತ ಸತ್ತಿಲ್ಲ. ಆತನಿಗಾಗಿ ಹೊತ್ತು ಹೊತ್ತಿಗೆ ಇಲ್ಲಿ ಊಟ ತಯಾರಾಗುತ್ತೆ. ಆತನ ಬಟ್ಟೆಗೆ ಪ್ರತಿದಿನ ಇಸ್ತ್ರೀ ಮಾಡಲಾಗುತ್ತೆ, ಶೂಗೆ ಪಾಲೀಸ್ ಹಾಕಲಾಗುತ್ತೆ, ರಾತ್ರಿ ಮಲಗಲು ಬೆಡ್ ಸಿದ್ಧಪಡಿಸಲಾಗುತ್ತೆ. ಮತ್ತು ಅದನ್ನು ಅವರು ಉಪಯೋಗಿಸಿದ್ದಾರೆ ಎಂಬುದು ಮರುದಿನ ತಮ್ಗೆ ತಿಳಿಯುತ್ತೆ ಅಂತ ಅವರ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿರುವ ನಾಲ್ವರು ಯೋದರು ಹೇಳುತ್ತಾರೆ.  ’ಬಾಬಾ ಅವರ ಶೂಗೆ ಪಾಲೀಸ್ ಮಾಡುವ ಭಾಗ್ಯ ನನಗೊದಗಿ ಬರಲಿ’ ಅಂತ ಇಲ್ಲಿಗೆ ಬರುವ ಪ್ರತಿ ಸೈನಿಕನೂ ಹಂಬಲಿಸುತ್ತಾನೆ. ೧೧೨೬ ಕಿಮೀ ಉದ್ದದ ಚೀನಾ-ಭಾರತ ಗಡಿಯನ್ನು ಕಾಯುವ ದೇವರು ಜಸ್ವಂತ್ ಬಾಬಾ ಎಂಬುದನ್ನು ಸೈನಿಕರು ನಂಬುತ್ತಾರೆ.

ಜಸ್ವಂತ್ ಗೆ ಕಾಲಕಾಲಕ್ಕೆ ಸೇವಾಭಡ್ತಿ ನೀಡಲಾಗುತ್ತೆ. ಸಂಬಳ ಬರುತ್ತೆ, ಪ್ರತಿ ವರ್ಷ ಸಮವಸ್ತ್ರ ನೀಡಲಾಗುತ್ತೆ. ವಾರ್ಷಿಕ ರಜೆ ಮಂಜೂರಾಗುತ್ತೆ, ಆತನ ಮನೆಯಿಂದ ಕಾಗದ ಬರುತ್ತೆ.ಮತ್ತು ಇದೆಲ್ಲವೂ ಸೇನಾ ರಿಜಿಸ್ಟರ್ ನಲ್ಲಿ ದಾಖಲಾಗುತ್ತದೆ. ಜಸ್ವಂತ್ ಸತ್ತು ನಲ್ವತ್ತು ವರ್ಷಗಳಾದ ನಂತರ ೨೦೦೨ರ ನವೆಂಬರ್ ೭ರಂದು ಆತ ಮೇಜರ್ ಜನರಲ್ ಹುದ್ದೆಗೇರಿದರು. ಆತ ಸೈನಿಕರ ಕನಸಿನಲ್ಲಿ ಬಂದು ನಿರ್ದೇಶನಗಳನ್ನು ನೀಡುತ್ತಾರೆಂದು ಸೈನಿಕರು ನಂಬುತ್ತಾರೆ. ಅಲ್ಲಿಯ ಚಟುವಟಿಕೆಗಳನ್ನು ನೋಡಿದರೆ ಆ ನಂಬಿಕೆಯ ಪ್ರಮಾಣ ತಿಳಿಯುತ್ತಿತ್ತು. ನಾವು ಹೋದಾಗಲೂ ಅಲ್ಲಿ ಸೈನಿಕರ ಜಂಗುಳಿಯಿತ್ತು. ಅಲ್ಲಿಗೆ ಬಂದ ಅವರೆಲ್ಲರೂ ದೇವಸ್ಥಾನಕ್ಕೆ ಪ್ರವೇಸುವಷ್ಟೇ ಭಕ್ತಿಭಾವದಿಂದ ಜಸ್ವಂತ್ ಗುಡಿಯ ಮೆಟ್ಟಲುಗಳಿಗೆ ನಮಿಸಿ ಕಣ್ಣಿಗೊತ್ತಿಕೊಳ್ಳುವುದು ಸಾಮಾನ್ಯ ದ್ರುಶ್ಯವಾಗಿತ್ತು. ಒಂದು ಟ್ರಕ್ಕಿನಲ್ಲಿ ಬಂದಳಿದ ಸೈನಿಕರಲ್ಲಿ ಹಲವಾರು ಕನ್ನಡಿಗೆ ಯೋದರಿದ್ದರು. ಜಸ್ವಂತ್ ಸಮಾಧಿಗೆ ನಮಿಸಲೆಂದೇ ಅವರ ವೆಹಿಕಲ್ ನಿಲ್ಲಿಸಿದ್ದರು. ತಮ್ಮ ಸಂಗಾತಿ ಜಸ್ವಂತ್ ಹೆಸರಿನಲ್ಲಿ ಯೋಧರು ಅಲ್ಲೊಂದು ಕ್ಯಾಂಟೀನ್ ನಡೆಸುತ್ತಾರೆ. ಅಲ್ಲಿ ಒಂದು ಡ್ರಮ್ಮಿನಲ್ಲಿ ಸದಾ ಬೆಚ್ಚನೆಯ ಚಹಾ ಇಟ್ಟಿರುತ್ತಾರೆ. ಪ್ರಯಾಣಿಕರು ಎಷ್ಟು ಲೋಟ ಬೇಕಾದರೂ ಚಹಾ ಕುಡಿಯಬಹುದು. ಅಲ್ಲಿಯ ಶೀತಲ ವಾತಾವರಣದಲ್ಲಿ ಬೆಚ್ಚನೆಯ ಚಹಾ ಪ್ರಯಾಣಿಕರಿಗೆ ಬಲು ಮುದನೀಡುತ್ತೆ. ಹತ್ತು ರೂಪಾಯಿ ಕೊಟ್ಟರೆ ರುಚಿಯಾದ ಎರಡು ಸಮೋಸ ಕೊಡುತ್ತಾರೆ. ಆ ನಿರ್ಜನ ಪ್ರದೇಶದಲ್ಲಿ ಅದು ನಮಗೆ ಅಮೃತ ಸಮಾನವೆನಿಸಿತ್ತು.

ತವಾಂಗ್ ಗೆ ಪೋಸ್ಟಿಂಗ್ ಆಗುವ ಪ್ರತಿ ಸೇನಾ ಸಿಬ್ಬಂದಿಯೂ,ಉನ್ನತ ರ್ಯಾಂಕಿನವರಾಗಿದ್ದರೂ ಜಸ್ವಂತ್ ಘರ್ ಗೆ ಹೋಗಿ ಬಾಬನಿಗೆ ನಮಸ್ಕರಿಸಿಯೇ ಮುಂದೆ ಹೋಗುತ್ತಾನೆ. ಹಾಗೆ ಮಾಡದೆ ಹೋದರೆ ದಾರಿ ಮಧ್ಯೆ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಸ್ಥಳಿಯರು ಉಧಾರಣೆಗಳ ಸಮೇತ ವಿವರಿಸುತ್ತಾರೆ.

ಚೀನಾ-ಭಾರತ ಯುದ್ಧದಲ್ಲಿ ಬಲಿಧಾನಗೈದ ಯೋಧರ ನೆನಪಿನಲ್ಲಿ ತವಾಂಗ್ ನಲ್ಲಿ ಇನ್ನೊಂದು ಯುದ್ಧ ಸ್ಮಾರಕವಿದೆ. ಇದು ಬೌದ್ಧಸ್ತೂಪದ ಮಾದರಿಯಲ್ಲಿದೆ. ಇದನ್ನು ಮ್ಯೂಸಿಯಂ ಮಾದರಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಆ ಕಾಲದಲ್ಲಿ ಯೋಧರು ಉಪಯೋಗಿಸುತ್ತಿದ್ದ ಸಲಕರಣೆಗಳು, ಮದ್ದುಗುಂಡುಗಳು, ಸಮವಸ್ತ್ರಗಳು ಇವೆಲ್ಲವನ್ನು ನೋಡುತ್ತಿದ್ದರೆ ಅವೆಲ್ಲಾ ಎಷ್ಟು ಕಳಪೆ ಗುಣಮಟ್ಟದವಾಗಿರುತ್ತಿದ್ದವು ಅಂತ ನಮ್ಮ ಯೋದರನ್ನು ನೆನೆದು ಸಂಕಟವಾಗುತ್ತದೆ..

[BOX] ನಮ್ಮಲ್ಲಿ ಬಹಳ ಜನರಿಗೆ ಈಶಾನ್ಯ ರಾಜ್ಯಗಳ ಬಗ್ಗೆ ಅಷ್ಟಾಗಿ ಮಾಹಿತಿ ಇದ್ದಂತಿಲ್ಲ, ಹಾಗಾಗಿ ಅದೆಲ್ಲಿದೆ ಎಂಬುದನ್ನು ನೋಡೋಣ. ಚೀನಾ [ಹಿಂದಿನ ಟಿಬೇಟ್] ಮತ್ತು ಭೂತಾನ್ ನೊಡನೆ ಗಡಿಯನ್ನು ಹೊಂದಿರುವ ಅರುಣಾಚಲಪ್ರದೇಶ ಭಾರತದ ಸೂರ್ಯ ಉದಯಿಸುವ ನಾಡು. ನಮ್ಮ ರಾಜಧಾನಿ ದೆಹಲಿಯಿಂದ 2314 ಕಿಮೀ ದೂರದಲ್ಲಿದೆ. ನಾವು ತವಾಂಗ್ ಪ್ರವಾಸವನ್ನು ಆರಂಭಿಸಿದ್ದು ಅಸ್ಸಾಂನ ರಾಜಧಾನಿ ಗೌಹಾಟಿಯಿಂದ. ಗೌಹಾಟಿಯಿಂದ ತವಾಂಗ್ ಗೆ ಇರುವ ದೂರ 518ಕಿಮೀ. ಮುಂಜಾನೆ ಗೌಹಾಟಿಯನ್ನು ಬಿಟ್ಟವರು ಅರುಣಾಚಲಪ್ರದೇಶದ ಬೊಂಬ್ಡಿಲಾವನ್ನು ತಲುಪಿದಾಗ ರಾತ್ರಿ ಒಂಬತ್ತು ಘಂಟೆ. ಬೊಂಬ್ಡಿಲಾದಲ್ಲಿ ಅಂದು ತಂಗಿ ಮರುದಿನ ತವಾಂಗ್ ನತ್ತ ಹೊರಟಿದ್ದೆವು. ಇಲ್ಲಿಂದ ತವಾಂಗ್ ಗೆ ಇರುವ ದೂರ ಕೇವಲ 181 ಕಿಮೀ. ಆದರೆ ಮುಂಜಾನೆ ಹೊರಟವರು ಅಲ್ಲಿಗೆ ತಲುಪಿದ್ದು ರಾತ್ರಿ ಒಂಬತ್ತೂವರೆಗೆ..

ನಮಗೆಲ್ಲಾ ಗೊತ್ತಿದೆ. ಅಸ್ಸಾಂ ನಮ್ಮ ಮಲೆನಾಡಿನ ಹಾಗೇ ಮೇಲ್ಮೈಲಕ್ಷಣವನ್ನು ಹೊಂದಿರುವ ನಾಡು. ತಂಪಾದ ವಾತಾವರಣವಿಲ್ಲ. ಆ ರಾಜ್ಯದ ಸರಹದ್ದನ್ನು ದಾಟಿ ಅರುಣಾಚಲಪ್ರದೇಶದ ಬೊಂಬ್ಡಿಲ್ಲಾವನ್ನು ಪ್ರವೇಶಿಸಿದೊಡನೆಯೇ ಎಲುಬು ಕೊರೆಯುವ ಚಳಿ ಆರಂಭವಾಗುತ್ತದೆ. ಅಲ್ಲಿಂದ ತವಾಂಗಿನ ಏರು ಹಾದಿಯನ್ನು ಸುತ್ತಿಬಳಸುತ್ತಾ ಹೋದಂತೆಲ್ಲಾ ನಾಲ್ಕೈದು ಪದರಿನಲ್ಲಿ ಹಾಕಿದ ಬಟ್ಟೆಯನ್ನು ಅದರ ಒಳಗಿನ ಥರ್ಮಲ್ ಅನ್ನು ಬೆದಿಸಿ ಒಳನುಗ್ಗುವ ಚಳಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ತವಾಂಗ್ ಗೆ ಹೋಗಲು ಇರುವುದು ಇದೊಂದೇ ಹಾದಿ. ಬೊಂಬ್ಡಿಲ್ಲಾದಿಂದ ಸೆಲ್ಲಾಪಾಸ್ ಗೆ ಇರುವ ದೂರ ೧೦೩ಕಿಮೀ.  ಸೆಲ್ಲಾ ಪಾಸ್ ನಿಂದ ಜಸ್ವಂತ್ ಘರ್ ಗೆ ಇರುವ ದೂರ ೨೧ ಕಿ.ಮೀ.ಬೊಂಬ್ಡಿಲ್ಲಾದಿಂದ ಇಲ್ಲಿಯವರೆಗೆ ನಾವು ಸುತ್ತಿ ಸುತ್ತಿ ಏರು ಹಾದಿಯಲ್ಲಿ ಹೋಗುತ್ತಿದ್ದರೆ, ಇಲ್ಲಿಂದ ತವಾಂಗಿನತ್ತ ಮತ್ತೆ ಇಳಿಜಾರು ಹಾದಿಯಲ್ಲಿ ಹೋಗುತ್ತಾ ಮತ್ತೆ ಮೇಲೇರಿ ಹೋಗಬೇಕು. ಜ್ಸ್ವಂತ್ ಘರ್ ನಿಂದ ತವಾಂಗ್ ಗೆ ಇರುವ ದೂರ ೪೬ ಕಿ.ಮೀ. ತವಾಂಗ್ ನಿಂದ ಚೀನಾ ಗಡಿಗೆ ಹೋಗುವ ಬೊಮ್ಲಾಪಾಸ್ ಗೆ ಇರುವ ದೂರ ೩೫ ಕಿ.ಮೀ. ಬೊಮ್ಲಾ ಪಾಸ್ ಸಮುದ್ರ ಮಟ್ಟದಿಂದ ಹದಿನಾರು ಸಾವಿರ ಅಡಿ ಎತ್ತರದಲ್ಲಿದೆ.  ಸೆಲ್ಲಾ ಪಾಸ್ ಸಮುದ್ರಮಟ್ಟದಿಂದ ಹದಿನಾಲ್ಕು ಅಡಿಗಳಷ್ಟು ಎತ್ತರದಲ್ಲಿ ಇರುವ ಕಾರಣ ಇಲ್ಲಿ ಕೊರೆಯುವ ಚಳಿಯಿರುತ್ತದೆ.ಇಲ್ಲಿ ತುಂಬಾ ಹೊತ್ತು ಉಳಿದರೆ ಉಸಿರಾಟದ ತೊಂದರೆಯೂ ಉಂಟಾಗುತ್ತದೆ. ಇಲ್ಲಿಯ ಸೆಲ್ಲಾ ಸರೋವರ ನಾವು ಹೋದಾಗ ಸಂಪೂರ್ಣ ಹೆಪ್ಪುಗಟ್ಟಿತ್ತು.  
ಬೊಮ್ಲಾ ಪಾಸ್ ಗೆ ಹೋಗುವ ಹಾದಿಯಲ್ಲಿ ನಮ್ಮ ವಾಹನ ಹಿಮದಲ್ಲಿ ಹೂತು ಹೋಗಿದ್ದು

ನಾವು ತವಾಂಗ್ ಹೋದಾಗ [ಮಾರ್ಚ್ ಮೊದಲನೇ ವಾರದಲ್ಲಿ] ಅಲ್ಲಿ ಮಳೆ ಸುರಿಯುತ್ತಿತ್ತು. ಬೊಮ್ಲಾ ಪಾಸ್ ಗೆ ಹೋಗುವ ದಾರಿಯಲ್ಲಿ ಹತ್ತಡಿ ಹೀಮ ಇರುವ ಕಾರದಿಂದಾಗಿ ಅಲ್ಲಿಗೆ ಹೋಗಲು ಸೇನೆ ಅನುಮತಿ ಕೊಡಲಿಲ್ಲ. ಆದರೆ ನಾವು ಪರ್ಮಿಷನ್ ಕೊಡುವ ಗೇಟಿನಲ್ಲಿ ಗಂಟೆಗಟ್ಟಲೆ ಕಾದು ಸೇನಾಧಿಕಾರಿಗಳ ಮನವೊಲಿಸಿ ಒಂದಷ್ಟು ದೂರ ಒಳಗೆ ಹೋಗಲು ಅನುಮತಿಯನ್ನು ಪಡೆದುಕೊಂಡಿದ್ದೆವು.  ಇದೇ ಬೊಮ್ಲಾ ಪಾಸ್ ಮೂಲಕ ದಲೈಲಾಮ ಚೀನಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ನಾವು ಈದಾರಿಯಲ್ಲಿ ಸುಮಾರು ಹತ್ತು ಹನ್ನೆರಡು ಕಿ.ಮೀ ದೂರ ಬಂದಿದ್ದೆವು. ರಸ್ತೆಯ ಮೇಲೆಲ್ಲಾ ಹಿಮಚಾದರವಿತ್ತು..ಅದು ಹೆಚ್ಚುತ್ತಲೇ ಹೋಗಿ ಒಂದೆಡೆ. ನಮ್ಮ ವಾಹನದ ಚಕ್ರಗಳು ಹಿಮದಲ್ಲಿ ಹೂತುಬಿಟ್ಟಿತು. ನಮ್ಮ ಡ್ರೈವರ್ ಚಕ್ರ ಮೇಲೆತ್ತಲು ಬಹಳ ಪ್ರಯತ್ನಪಟ್ಟ. ಆದರೆ ಸಾಧ್ಯವಾಗಲಿಲ್ಲ. ಕೊನೆಗೆ ಸೇನಾ ವಾಹನಗಳು ಹಿಮದ ಮೇಲೆ ಚಲಿಸಲು ಮಾಡುವಂತೆ ಹಗ್ಗವನ್ನು ಚಕ್ರಕ್ಕೆ ಒತ್ತೊತ್ತಾಗಿ ಸುತ್ತಿದ [ಸೇನಾವಾಹನಗಳಲ್ಲಿ ಚಕ್ರಕ್ಕೆ ಕಬ್ಬಿಣದ ಸರಪಳಿಯಿರುತ್ತದೆ] ಆದರೆ ವಾಹನ ಸ್ಟಾರ್ಟ್ ಮಾಡಿದ ಒಡನೆಯೇ ಅದು ತುಂಡಾಗಿ ಬಿತ್ತು. ಆಗ ಅಲ್ಲಿ ಸಂಚರಿಸುತ್ತಿದ್ದ ಮಿಲಿಟರಿ ವಾಹನವೊಂದು ನಮ್ಮ ವಾಹನವನ್ನು ಹಿಮದಿಂದ ಮೇಲೆತ್ತಿ ಹಿಂತಿರುಗಿ ಹೋಗಲು ಆದೇಶಿಸಿತ್ತು. 
ಬೊಮ್ಲಾ ಪಾಸ್ ಹಾದಿ.

ಅಸ್ಸಾಮ್ನಿಂದ ಬೊಂಮ್ಡಿಲ್ಲಾ ಮಾರ್ಗವಾಗಿ ಸೆಲ್ಲಾ ಪಾಸ್, ಜಸ್ವಂತ್ ಘರ್ ಮಾರ್ಗವಾಗಿಯೇ ತವಾಂಗ್ ತಲುಪಬೇಕು. ಅಲ್ಲಿಗೆ ಸೇರಲು ಇರುವುದು ಇದೊಂದೇ ಮಾರ್ಗ.  ಆದರೆ ದಾರಿಯುದ್ದಕ್ಕೂ ಹಿಮದ ಕಿರೀಟ ಹೊದ್ದ ಪರ್ವತಗಳ ಸಾಲು. ಹಿಮ ಪದರಗಳನ್ನು ಹೊದ್ದು ನಿಂತಿರುವ ಪೈನ್ ಮರಗಳು. ಅವುಗಳ ಅಡಿಯಲ್ಲಿ ಕಣ್ಮನ ತಣಿಸುವ ಹಿಮ ಹಾಸುಗಳು. ತವಾಂಗಿನತ್ತ ಹೋಗುವ ಬರುವ ಮಿಲಿಟರಿ ಟ್ರಕ್ಕ್ ಗಳು.ನಿರ್ಜನ ಹಾದಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಸೇನಾ ನೆಲೆಗಳು ಇವೆಲ್ಲವೂ ಪ್ರಯಾಣಿಕರನ್ನು ವಾಸ್ತವ ಲೋಕದಿಂದಾಚೆ ಬಲು ದೂರಕ್ಕೆ ಒಯ್ಯುತ್ತವೆ. 

 ಇಷ್ಟೆಲ್ಲಾ ವಿವರಣೆ ಯಾಕೆ ಎಂದರೆ ಈದಾರಿ ಅಷ್ಟೊಂದು ಕಡಿದಾಗಿದೆ ಮತ್ತು ತಿರುವುಮುರುವುಗಳಿಂದ ಕೂಡಿದೆ. ನುರಿತ ಚಾಲಕ ಮಾತ್ರ ಇಲ್ಲಿ ವಾಹನ ಚಲಾಯಿಸಬಲ್ಲ. ಜೊತೆಗೆ ಆಗಾಗ ಉಂಟಾಗುವ ಹಿಮಪಾತ. ಒಂದಡಿಯಿಂದಾಚೆ ದಾರಿಯೇ ಕಾಣಿಸದು. ಹೆಡ್ಲೈಟ್ ಆನ್ ಮಾಡಿಯೇ ನಿಧಾನವಾಗಿ ಚಲಿಸಬೇಕು. ಇಂತಹ ದಾರಿಯಲ್ಲಿ ಅರುವತ್ತನಾಲ್ಕು ವರ್ಷಗಳ ಹಿಂದೆ ಜಸ್ವಂತಸಿಂಗ್ ನಂತಹ ಯೋದರು ಈ ದಾರಿಯನ್ನು ಕ್ರಮಿಸಲು ತೆಗೆದುಕೊಳ್ಳುತ್ತಿದ್ದ ಸಮಯವೆಷ್ಟು ಗೊತ್ತೆ? ಬರೋಬ್ಬರಿ ಇಪ್ಪತ್ತೊಂದು ದಿನಗಳು. ಆಗ ಈಗಿನಂತೆ ಸುಸಜ್ಜಿತವಾದ ರಸ್ತೆಯಿದ್ದಿರಲಿಕ್ಕಿಲ್ಲ. ಇದ್ದ ಹಾದಿಯಲ್ಲೇ ಅವರು ಸಾಮಾನು ಸರಂಜಾಮುಗಳನ್ನು ಬೆನ್ನ ಮೇಲೆ ಹೊತ್ತು ತರಬೇಕಾಗಿತ್ತು.]

ತವಾಂಗಿಗೆ ಹೋಗುವಾಗ ನಮ್ಮಲ್ಲಿ ಇದ್ದ ಮನಸ್ಥಿತಿಗೂ ಅಲ್ಲಿಂದ ಹಿಂತಿರುವಾಗ ಇದ್ದ ಮನಸ್ಥಿತಿಗೂ ಅಪಾರ ವ್ಯತ್ಯಾಸವಿತ್ತು. ಆಗ ಸೆಲ್ಲಾ ಪಾಸ್, ತವಾಂಗ್, ಬೊಮ್ಲಾಪಾಸ್, ಹಿಮಪರ್ವತಗಳು ತುಂಬಿದ್ದರೆ ಬರುವಾಗ ಜಸ್ವಂತ್ ಸಿಂಗ್ ರಾವತ್ ಮತ್ತು ನಮ್ಮ ಸಾವಿರಾರು ಯೋದರಿದ್ದರು. ಮನಸ್ಸು ಮ್ಲಾನವಾಗಿತ್ತು.

[ ಕನ್ನಡಪ್ರಭದ FRONTLINE ಮಾಲಿಕೆಯಲ್ಲಿ ಪ್ರಕಟವಾದ ಲೇಖನ ]