Monday, June 4, 2012

”ಲ್ಯಾಂಡ್ ಬ್ಯಾಂಕ್” ಯೋಜನೆ; ರೈತರ ಬದುಕಿಗೇ ಚಪ್ಪಡಿ ಕಲ್ಲು


 

ನಾಳಿದ್ದು ಬೆಂಗಳೂರಿನಲ್ಲಿ ’ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ’ ನಡೆಯಲಿದೆ.  ನಮ್ಮ ಕರ್ನಾಟಕ ಸರಕಾರವು ದುಡ್ಡಿರುವ ದೊಡ್ಡಪ್ಪರ ಮುಂದೆ ನಿಂತು ’ ನಮ್ಮಲ್ಲಿ ಯಥೇಚ್ಛವಾಗಿ    ಭೂಮಿ, ನೀರು, ವಿದ್ಯುತ್ತು ಇದೆ. ಅದನ್ನೆಲ್ಲಾ ನಿಮಗೆ ನಾವು ಉದಾರವಾಗಿ ನೀಡುತ್ತೇವೆ. ಇದನ್ನೆಲ್ಲಾ ಬಳಸಿಕೊಂಡು ನೀವಿಲ್ಲಿ ನಿಮಗಿಷ್ಟ ಬಂದ ಕೈಗಾರಿಕೆಗಳನ್ನು ಸ್ಥಾಪಿಸಿ. ನಿಮ್ಮ ದುಡ್ಡಿನ ಚೀಲವನ್ನು ತುಂಬಿಸಿಕೊಳ್ಳಿ’ ಎಂದು ಡಂಗುರ ಸಾರುವ ಪ್ರದರ್ಶನ ಸಮಾವೇಶವಿದು.

 ”ನಮ್ಮಲ್ಲಿ ಭೂಮಿಯಿದೆ. ನೀರನ್ನು ಹೇಗಾದರೂ ಹೊಂದಿಸಿಕೊಳ್ಳುತ್ತೇವೆ. ನಮಗೆ ವಿದ್ಯುತ್ತು ನೀಡಿ. ನಾವು ನಿಮಗೆ ಆಹಾರ ಭದ್ರತೆಯನ್ನು ನೀಡುತ್ತೇವೆ’ ಇದು ನಮ್ಮ ರೈತರು ನಮ್ಮ ಸರಕಾರವನ್ನು ಅಂಗಲಾಚುತ್ತಿರುವ ಪರಿ.

ಮಾನವನ ಮೂಲಭೂತ ಅವಶ್ಯಕತೆಗಳೇನು? ನೀರು, ಆಹಾರ,ವಸತಿ. ಇದು ವರ್ತಮಾನದ ಅವಶ್ಯಕತೆ. ಪ್ರತಿಯೊಂದು ಜೀವಿಗೂ ನೀರು, ಆಹಾರ ಬೇಕೇ ಬೇಕು. ಇದನ್ನು ಈ ನಾಡಿನಲ್ಲಿ ದುಡ್ಡು ಹಾಕಿ ದುಡ್ಡನ್ನು ಬೆಳೆಯಬೇಕೆಂದು ಆಶಿಸುವ ಬಂಡವಾಳಗಾರನಿಂದ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ನಮ್ಮ ಸರಕಾರ ಅಬಿವೃದ್ದಿಯ ಜಪ ಮಾಡುತ್ತಿದೆ. ಆದರೆ ನಮಗೆಂಥಾ ಅಭಿವೃದ್ದಿ ಬೇಕು? ಇದು ಈಗ ನಾವು ಕೇಳಿಕೊಳ್ಳಬೇಕಾದ ಅತಿ ಮುಖ್ಯ ಪ್ರಶ್ನೆ. ಪರಿಸರಕ್ಕೆ ಧಕ್ಕೆಯನ್ನುಂಟುಮಾಡಿ ಕೈಗೆತ್ತಿಕೊಳ್ಳುವ ಯೋಜನೆಗಳು ಖಂಡಿತವಾಗಿಯೂ ನಮ್ಮ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ದೂಡುತ್ತವೆ.

ರೈತನೊಬ್ಬನಿಗೆ ಭೂಮಿಯೆಂದರೆ ಕೇವಲ ಮಣ್ಣಲ್ಲ. ಅದವನ ಜೀವಧಾತು. ಒಂದು ಉದಾಹರಣೆಯನ್ನು ನೀಡುತ್ತೇನೆ. ನನ್ನಜ್ಜ ತೀರಿಕೊಂಡ ನಂತರ ನಮ್ಮ ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮಗೆ ಬಂತು. ಯಾಕೆಂದರೆ ಅವರಿಗೆ ಗಂಡು ಸಂತತಿಯಿರಲಿಲ್ಲ. ಹತ್ತಿರದ ಬಂಧುಗಳಿರಲಿಲ್ಲ. ಇದ್ದ ಒಂದಿಬ್ಬರು ಅಜ್ಜಿ ಅವರಿಗೆ ಆಸ್ತಿ ನೀಡಲಿಲ್ಲ ಎಂಬ ಕಾರಣದಿಂದ ಅವರತ್ತ ತಿರುಗಿಯೂ ನೋಡಲಿಲ್ಲ. ತುಂಬಾ ಸ್ವಾಭಿಮಾನಿಯಾದ ನಮ್ಮಜ್ಜಿ ಅಳಿಯನ ಮನೆಯಲ್ಲಿ ಬಂದಿರಲಾರರು ಎಂಬುದು ನಮಗೆ ಗೊತ್ತಿತ್ತು. ನಾವು, ಮೊಮ್ಮಕ್ಕಳು ಅಲ್ಲಿ ಶಾಲೆಗೆ ಹೋಗಲು ಇದ್ದುಕೊಂಡು ಒಂದಷ್ಟು ವರ್ಷ ಕಳೆದೆವು. ನಮ್ಮ ಮನೆ ಹತ್ತಿರವೇ ಆಸ್ತಿಯೊಂದು ಮಾರಾಟಕ್ಕೆ ಬಂದಿತು. ನಾವು ನಮ್ಮಜ್ಜಿಯನ್ನು ಹತ್ತಿರದಲ್ಲಿಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳಬಹುದೆಂದು ಅಲ್ಲಿಯ ಆಸ್ತಿಯನ್ನು ಮಾರಿ, ಈ ಜಮೀನನ್ನು ಖರೀದಿಸಿ ಅಲ್ಲೊಂದು ಪುಟ್ಟ ಮನೆ ಕಟ್ಟಿ ಅಜ್ಜಿಯನ್ನು ಇಲ್ಲಿಗೆ ಕರೆ ತಂದೆವು. ಆದರೆ ಅಜ್ಜಿ ಮಂಕಾಗಿ ಒಂದು ತಿಂಗಳಾಗುವಷ್ಟರಲ್ಲಿ ತೀರಿಕೊಂಡರು…ಆ ಗಿಲ್ಟ್ ನಮ್ಮನ್ನಿಂದಿಗೂ ಕಾಡುತ್ತಿದೆ.
ಬೇರುಗಳನ್ನು ಬಿಟ್ಟು ಬದುಕುವುದು ಕಷ್ಟ! ಈಗ ಸರಕಾರ ಬೇರುಗಳನ್ನು ಕೀಳುವ ಕೆಲಸ ಮಾಡುತ್ತಿದೆ.
 ಎಂದೋ ಬರಬಹುದಾದ ಕೈಗಾರಿಕೆಗಳಿಗಾಗಿ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸುವ ದೃಷ್ಟಿಯಿಂದ ಸ್ಥಾಪಿಸಲಾಗಿರುವ ಯೋಜನೆಯೇ  ’ಲ್ಯಾಂಡ್ ಬ್ಯಾಂಕ್’ ಯೋಜನೆ. ಈ ಯೋಜನೆಯಡಿ ಸರಕಾರವು ರೈತರಿಂದ ಈಗಾಗಲೇ ಲಕ್ಷಾಂತರ ಎಕ್ರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಆದರೆ ಅಲ್ಲಿ ಉದ್ದೇಶಿತ ಯೋಜನೆಗಳು ಅನುಷ್ಠಾನಗೊಳ್ಳದೆ. ಅವೆಲ್ಲಾ ಭೂಗಳ್ಳರ. ದಳ್ಳಾಳ್ಳಿಗರ, ರಿಯಲ್ ಎಸ್ಟೇಟ್ ಏಜೆಂಟರ ಪಾಲಾಗುತ್ತಿದೆ. ಈ ಅವ್ಯವಹಾರ ನ್ಯಾಯಾಲಯದ ಕೆಂಗೆಣ್ಣಿಗೂ ಗುರಿಯಾಗಿದೆ.  
ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ತನ್ನ ಕೃಷಿ ಜಮೀನು ಕಳೆದುಕೊಂಡ ಮುನಿಯಮ್ಮ ಎಂಬ ರೈತ ಮಹಿಳೆಯೊಬ್ಬರು ಪರಿಹಾರವನ್ನು ಕೋರಿ ಹಾಕಿಕೊಂಡ  ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರ ಕುಮಾರ್ ಕಳೆದ ಜೂನ್ ನಲ್ಲಿ ಸರಕಾರವನ್ನು ಪ್ರಶ್ನಿಸಿದ್ದು ಹೀಗೆ; ಸಾಧು ಸಂತರು, ಮಠಾದೀಶರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಡನೆ ಕರ್ನಾಟಕ ಕೈಗಾರೀಕಾ ಪ್ರದೇಶ ಅಬಿವೃದ್ಧಿ ನಿಗಮ [KIADB ] ಸಾರ್ವಜನಿಕರ ಹಣ ನುಂಗಿ ಹಾಕುವ ಕೆಲಸ ಮಾಡುತ್ತಿದೆ. ಕೆಐಎಡಿಬಿ ರಿಯಲ್ ಎಸ್ಟೇಟ್ ಆಗಿ ಪರಿವರ್ತನೆ ಹೊಂದಿದೆ. ಅದು ಕೈಗಾರಿಕಾ ಅಬಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ತನ್ನಲ್ಲಿ ಇರಿಸಿಕೊಳ್ಳುತ್ತಿದೆ. ನಂತರ ಅದನ್ನು ಕೇಳಿದವರಿಗೆಲ್ಲಾ ಬೇಕಾಬಿಟ್ಟಿ ಹಂಚುತ್ತದೆ. ಹೀಗೆ ವಶಪಡಿಸಿಕೊಂಡ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ನಾಲ್ಕು ಕೈಗಾರಿಕಾ ಪ್ರದೇಶಗಳನ್ನಾದರೂ ಹೆಸರಿಸಿ? ಎಂದು ಪ್ರಶ್ನಿಸಿದ್ದಲ್ಲದೆ, ಅಭಿವೃದ್ಧಿಮಾಡಲಾಗಿದೆ ಎನ್ನುವ ಕೈಗಾರಿಕಾ ಪ್ರದೇಶದಲ್ಲಿ ಕೇವಲ ಕಲ್ಯಾಣ ಮಂಟಪಗಳೇ ತುಂಬಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ೫.೨೫ ಲಕ್ಷ ಕೋಟಿ ರೂ. ಹೂಡಿಕೆಯ ೯೧೩ ಒಪ್ಪಂದಗಳಿಗೆ ಸಹಿ ಮಾಡಿದೆ. ಸರಕಾರವೇ ಕೊಡುತ್ತಿರುವ ಮಾಹಿತಿಗಳ ಪ್ರಕಾರ ಈಗ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ೧೮. ಅವುಗಳಿಗೆ ಬೇಕಾಗುವ ಜಮೀನು ೪೮೦೫ ಎಕ್ರೆ ಮಾತ್ರ. ಆದರೆ ಸರಕಾರವು ಭೂ ಬ್ಯಾಂಕ್ ಹೆಸರಿನಲ್ಲಿ ಕೈಗಾರಿಕೆಗಳಿಗೆ ೧.೧೯ ಲಕ್ಷ ಎಕ್ರೆ ಮತ್ತು ವಿವಿಧ ಯೋಜನೆಗಳ ಹೆಸರಿನಲ್ಲಿ ೯ ಲಕ್ಷ ಎಕ್ರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳುತ್ತಿದೆ. ಈಗಾಗಲೇ ಬಳ್ಳಾರಿಯಲ್ಲಿ ಮಿತ್ತಲ್ ಮತ್ತು ರೆಡ್ಡಿಗಳ ಬ್ರಹ್ಮಿಣಿ ಕಂಪೆನಿಗಳಿಗೆ ತಲಾ ಮೂರುಸಾವಿರ ಎಕ್ರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಆ ಎರಡೂ ಯೋಜನೆಗಳು ಹಳ್ಳ ಹಿಡಿಯುವ ಹಂತದಲ್ಲಿದೆ. ಅಂದರೆ ಹೈಕೋರ್ಟ್ ಅನುಮಾನಪಟ್ಟಂತೆ ರಿಯಲ್ ಎಸ್ಟೇಟ್ ದಂಧೆ ಗರಿಗೆದರುತ್ತಿದೆಯಲ್ಲವೇ? ಅಲ್ಲೇ ಪಕ್ಕದಲ್ಲಿರುವ ಚಾಗನೂರು ಸಿರಿವಾರದ ರೈತರಿಂದ ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಂಡ ನೀರಾವರಿ ಜಮೀನಿನ ಕಥೆಯೂ ಇದೇ ಅಲ್ಲವೇ?

ನಾನೊಬ್ಬಳು ಗೃಹಿಣಿ. ನನ್ನ ಪತಿಯೊಬ್ಬ ಪತ್ರಕರ್ತ. ಆತನ ವೃತ್ತಿ ಬದುಕು ಎಷ್ಟು ಅಭದ್ರತೆಯಿಂದ ಕೂಡಿದೆಯೆಂದರೆ ಅತ ಆಗಾಗ ಕೆಲಸ ಬದಲಿಸುತ್ತಾನೆ.. ಹೀಗಾದರೆ ನಮಗೆ ಬೀದಿಯೇ ಗತಿ ಎಂದುಕೊಂಡ ನಾನು ನಾಲ್ಕು ವರ್ಷಗಳ ಹಿಂದೆ ಕೃಷಿ ಭೂಮಿಯೊಂದನ್ನು ಖರೀದಿಸಿದೆ. ಇಂದು ಅದು ನನ್ನ ಬದುಕು; ಕನಸು; ಭವಿಷ್ಯ. ಅದಿಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಅನ್ನುವಷ್ಟರಮಟ್ಟಿಗೆ ಅದು ನನ್ನನ್ನು ಆವರಿಸಿಕೊಂಡಿದೆ. ನನಗೇ ಹೀಗೆ ಅನ್ನಿಸಬೇಕಾದರೆ ತಲೆಮಾರುಗಳಿಂದ ಬಳುವಳಿಯಾಗಿ ಬಂದಿರುವ ರೈತರಿಗೆ ಆ ಭೂಮಿ ಮೇಲಿನ ಮೋಹ ಎಷ್ಟಿರಬೇಡ? ಇಂತಹ ಭೂಮಿಯನ್ನು ರೈತ ದುಡ್ಡಿಗಾಗಿ ಮಾರಬೇಕಾದ ಅನಿವಾರ್ಯತೆ ಬಂದಿರಬೇಕಾದರೆ ಆತನ ಬದುಕು ಎಂತಹ ಹೀನಾಯ ಸ್ಥಿತಿಗಿಳಿದಿರಬಹುದು?

ರೈತರಿಗೆ ಭೂಮಿಯೆಂದರೆ ಕೇವಲ ಮಣ್ಣಲ್ಲ. ಅದವರ ಜೀವದ್ರವ್ಯ. ಅವರು ಮಳೆರಾಯನ ಕೈ ಹಿಡಿದಿರಬಹುದು. ಆತ ಆಗಾಗ ಕೈ ಕೊಡುತ್ತಿದ್ದಾನೆಂದು ಅವರು ಆತನಿಗೆ ಸೋಡಾಚೀಟಿ ಕೊಡುವುದಿಲ್ಲ. ಬದಲಾಗಿ ಆಗಾಗ ಮನೆಗೆ ಬೀಗ ಹಾಕಿ ಗುಳೆ ಹೋಗುತ್ತಾರೆ. ಅನುಕೂಲವಿದ್ದಲ್ಲಿ ಮೈಮುರಿದು ದುಡಿದು ಮತ್ತೆ ಇಲ್ಲಿಗೇ ಬರುತ್ತಾರೆ. ಭೂಮಿಯೆಂಬುದು ಅವರ ಪಾಲಿಗೆ ಮೂಲಧನ. ಅದರಲ್ಲಿ ತೆಗೆಯುವ ಬೆಳೆ ಬಡ್ಡಿಯಿದ್ದಂತೆ. ಈಗ ಸರಕಾರವೇ ಮೂಲಧನವನ್ನು ಕಸಿದುಕೊಂಡರೆ ಅವರೆಲ್ಲಿ ಹೋಗಬೇಕು?

ಕೈಗಾರಿಕೆಗಳಿಗೆ ಕೊಡುವ ನೀರು, ವಿದ್ಯುತ್ ಇತ್ಯಾದಿ ಮೂಲ ಸೌಕರ್ಯಗಳನ್ನು ರೈತರಿಗೇ ನೀಡಿ ಅವರನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸುವ ಯೋಜನೆಗಳನ್ನು ಸರಕಾರ ಹಾಕಿಕೊಳ್ಳಬೇಕು. ಬದಲಾಗಿ ಅವರಿಗೆ ಯಥೇಚ್ಛ ಸಬ್ಸಿಡಿಗಳನ್ನು ನೀಡಿ  ಅವರನ್ನು ದಾಸ್ಯಕ್ಕೆ ದೂಡಬಾರದು; ಸೋಮಾರಿಗಳನ್ನಾಗಿ ಮಾಡಬಾರದು. ದುರ್ಭಲ ಮಗುವನ್ನು ಪ್ರತ್ಯೇಕವಾಗಿ ವಿಶೇಷ ಕಾಳಜಿ, ಅಕ್ಕರೆಗಳಿಂದ ನೋಡಿಕೊಳ್ಳಬೇಕು;ಸ್ವತಂತ್ರವಾಗಿ ಬದುಕಲು ಅನುವು ಮಾಡಿಕೊಡಬೇಕು. ಉಪೇಕ್ಷಿಸಬಾರದು.
ನಮ್ಮ ರಾಜ್ಯ ಕೈಗಾರಿಕೆಯಲ್ಲಿ ಅಬಿವೃದ್ಧಿ ಹೊಂದಬೇಕು ನಿಜ. ಅದಕ್ಕಾಗಿ ನಮ್ಮ ರಾಜ್ಯದ ಉತ್ಸಾಹಿ ಉದ್ದಿಮೆದಾರರಿಗೇ ಪ್ರೋತ್ಸಾಹ ನೀಡಬೇಕು. ಅವರನ್ನು.ಕೃಷಿಯಾದಾರೀತ ಉದ್ದಿಮೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದರೆ ನಮ್ಮ ರೈತರ ಬದುಕನ್ನು ಎತ್ತರಿಸಬಹುದು. ಹಾಗೆ ಮಾಡಿದರೆ ಆ ಕ್ಷೇತ್ರಕ್ಕೊಂದು ಘನತೆ ಒದಗಿ ಬರಬಹುದು. ಇಲ್ಲವಾದರೆ ಅವನ ಕೃಶ ಶರೀರದಂತೆಯೇ ಅವನ ಬದುಕು ಕೂಡಾ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದು ಬಿಡಬಹುದು!

[ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ನನ್ನ ಕಾಲಂ ’ಅನುರಣನ’ ಕ್ಕಾಗಿ ಬರೆದ ಅಪ್ರಕಟಿತ ಬರಹ ]