Friday, April 22, 2011

ಹೊತ್ತ ಶಿಲುಬೆಗೆ ಏಳು ಮಲ್ಲಿಗೆಯ ತೂಕ !




ನನ್ನ ನಿನ್ನ ಸಂಬಂಧ ಕಡಿಯಿತು ಎಂದಳಾಕೆ
ಆ ಕ್ಷಣಕ್ಕಾಗಿಯೇ ಹಸಿದವನಂತೆ ’ತಥಾಸ್ತು’ ಎಂದವನು
ಬೆನ್ನು ತಿರುಗಿಸಿ ಹೋಗಿಯೇಬಿಟ್ಟ
ಅವಳು ಶಿಲೆಯಾಗಿ ನಿಂತಳು

ಎಂಥವನಿಗೊಲಿದೆನಯ್ಯಾ...ಎನ್ನಬೇಕಾದವಳು
ಇಂಥವನಿಗೊಲಿದೆಯಲ್ಲಾ...!
ಅವನತಮುಖಿ,
ಹೆಬ್ಬೆರಳ ತುದಿಯಲ್ಲಿ ಕೊಂಚ ಕೆಂಪು

ಎಲ್ಲವನ್ನೂ ಹೇಳಿಬಿಟ್ಟಾಗಿದೆ, ನೀರವ ನಿರಾಳತೆ.
ಕೋಟೆ ಕಟ್ಟುವುದಿದೆ,
ತನ್ನ ಶಿಲುಬೆಯ ತಾನೇ ಹೊತ್ತು.
ಹಂಬಲಗಳಿಗೋ ಆಯುಸ್ಸಿದೆ; ದಿನಗಳು ಮುಗಿದವು.

ಜಂಗಮಕ್ಕಳಿವುಂಟು; ಸ್ಥಾವರಕ್ಕಳಿವಿಲ್ಲ.
ಒಳಗೊಳಗೇ ಇಳಿದಳು, ಮೇಲೇರಿದಳು
ಚಂದಮಾಮನ ಮುಟ್ಟಲು ಐದೇ ಮೆಟ್ಟಲು.

ಕೋಟೆ ಕಟ್ಟಬೇಕು, ಅಲ್ಲಲ್ಲಿ ಕಳ್ಳಗಿಂಡಿಗಳನ್ನಿಟ್ಟು ಕಾಯಬೇಕು;
ಖಂಡಾಂತರ ಕ್ಷಿಪಣಿಗಳ ಯುಗ, ಎದೆಯೊಳಗೂ ಇಳಿದು ಬಿಟ್ಟಾವು!
ಸ್ವಚ್ಛಂದ ಆಕಾಶ, ಮಾಯಾಕಂಬಳಿಯಲ್ಲಿ ಕುಳಿತ ರಾಜಕುಮಾರಿ.
ಬಿಂಬಗಳೆಲ್ಲಾ ಜೀವತಳೆದು ನಕ್ಷತ್ರ ಮಾಲೆಯನು ಹಿಡಿದು ನಿಂತವು
ಬದುಕು ಕಾಮನಬಿಲ್ಲು.

ದಶದಿಕ್ಕಿನ ಹಾದಿ, ಒಬ್ಬಂಟಿ ಪಯಣ
ನನ್ನ ಶಿಲುಬೆಯ ನಾನೇ ಹೊರಬೇಕು.

ಎಲ್ಲವನ್ನೂ ಮುರಿಯಬೇಕು, ಮುರಿದು ಕಟ್ಟಬೇಕು
ಮಾತಿನಲ್ಲಿ ಜಾರಿದ್ದು ಮೌನದಲ್ಲಿ ಆಪ್ಪಿದೆ
ಹೊತ್ತ ಶಿಲುಬೆಗೆ ಏಳೇ ಮಲ್ಲಿಗೆಯ ತೂಕ!

Wednesday, April 13, 2011

ಪ್ರಕೃತಿ ಮಾತೆಗೆ ನಮಿಸುವ ’ವಿಷು ಹಬ್ಬ’





ನಮ್ಮ ದೃಶ್ಯ ಮಾದ್ಯಮಗಳು ಚಾಂದ್ರಮಾನ ಯುಗಾದಿಗೆ ಕೊಡುವ ಸಂಬ್ರಮದ ಪ್ರಚಾರವನ್ನು ನೋಡುವಾಗ ನನಗೆ ಪ್ರತಿಭಾ ನಂದಕುಮಾರ್ ಬರೆದ ಮಾತೊಂದು ನೆನಪಿಗೆ ಬರುತ್ತದೆ, ಅವರು ಒಂದೆಡೆ ಹೇಳುತ್ತಾರೆ; ಈ ಪಂಜಾಬಿಗಳು ಇಡೀ ದೇಶಕ್ಕೇ ಸೆಲ್ವಾರ್ ಕಮೀಜ್ ತೋಡಿಸಿಬಿಟ್ಟರು. ಹಾಗೆಯೇ ಯುಗಾದಿ ಆಚರಣೆಯಲ್ಲಿಯೂ ಮಾಧ್ಯಮಗಳು ಏಕತಾನತೆಯನ್ನು ತಂದುಬಿಟ್ಟವು. ಅಂದರೆ ಚಾಂದ್ರಮಾನ ಯುಗಾದಿಯನ್ನೆ ಸಮಸ್ತ ಕನ್ನಡಿಗರ ಯುಗಾದಿ ಹಬ್ಬವೆಂದು ಮಾಧ್ಯಮಗಳು ಪ್ರತಿವರ್ಷ ಹೇಳುತ್ತಲೇ ಬಂದವು.

ಆದರೆ ಇದಕ್ಕಿಂತ ಭಿನ್ನವಾದ ಇನ್ನೊಂದು ಯುಗಾದಿ ಆಚರಣೆಯೂ ನಮ್ಮ ದೇಶದ ಕೆಲವು ಭಾಗಳಲ್ಲಿವೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಕೂಡಾ ಭಿನ್ನವಾದ ಯುಗಾದಿಯಿದೆ. ಅದನ್ನು ವಿಷು ಹಬ್ಬವೆಂದು ಕರೆಯಲಾಗುತ್ತದೆ.

ಸೂರ್ಯನ ಚಲನೆಯನ್ನು ಆಧಾರಿಸಿದ್ದು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧಾರಿಸಿದ್ದು ಚಂದ್ರಮಾನ ಯುಗಾದಿ. ಅಂದರೆ ಇದು ಖಗೋಳ ವಿಜ್ನಾನಕ್ಕೆ, ಗಣಿತಶಾಸ್ತ್ರವನ್ನು ಆಧರಿಸಿದ ಹಬ್ಬ.

ಸೌರಮಾನ ಯುಗಾದಿ ಆಚರಿಸುವುದು ಮೇಷ ಮಾಸದ ಮೊದಲದಿನ. ಅಂದು ಸೂರ್ಯ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಚಾಂದ್ರಮಾನ ಯುಗಾದಿ ಬರುವುದು ಚೈತ್ರಮಾಸದ ಮೊದಲ ದಿನ. ಚೈತ್ರ ವೈಶಾಖ ವಸಂತಋತು ಅಂತ ನಾವು ಬಾಲ್ಯದಲ್ಲಿ ಕಲಿತದ್ದು ನೆನಪಗಿರಬೇಕಲ್ಲಾ...ಬೇಸಗೆಯ ರಜೆ, ಮಾವು, ಹಲಸು,ಗೇರು, ಅಜ್ಜನ ಮನೆ...ನೆನಪುಗಳ ಮೆರವಣಿಗೆ ಸಾಗಿ ಬಂದಿರಲೇಬೇಕು.

ನಾನು ತುಳುನಾಡಿನವಳು. ನಮ್ಮದು ಸೌರಮಾನ ಯುಗಾದಿ ಆಚರಣೆ. ಅಂದರೆ ನಮಗೆ ನಾಳೆ ಹೊಸ ವರ್ಷ . ಅದನ್ನು ನಾವು ’ವಿಷು ಹಬ್ಬ’ ಎಂದು ಆಚರಿಸುತ್ತೇವೆ. ಪ್ರತಿ ವರ್ಷ ಏಪ್ರಿಲ್ ೧೪ ರಂದು ಇದು ಸಂಭವಿಸುತ್ತದೆ.

ತುಳುನಾಡು ಮಾತ್ರ ಅಲ್ಲ, ತಮಿಳು ನಾಡು, ಕೇರಳ, ಪಂಜಾಬ್, ಬಂಗಾಳ, ಅಸ್ಸಾಂ ರಾಜ್ಯಗಳಲ್ಲೂ ಇಂದಿನ ದಿನವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.
ತುಳುವರಿಗೆ-ಬಿಸುಪರ್ಬ, ಮಲೆಯಾಳಿಗಳಿಗೆ-ವಿಷು, ತಮಿಳರಿಗೆ-ಪುತ್ತಾಂಡ್, ಪಂಜಾಬಿಗಳಿಗೆ-ಬೈಸಾಕಿ, ಅಸ್ಸಾಮಿಗಳಿಗೆ-ಬಿಹು. ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ.

ನಾವು ಸಮೃದ್ಧವಾಗಿ ಬದುಕಲು ಬೇಕಾದ್ದನ್ನೆಲ್ಲವನ್ನು ಕೊಟ್ಟ ಭೂತಾಯಿಗೆ ಕೃತಜ್ನತೆಗಳನ್ನು ಅರ್ಪಿಸುವ ದಿನವೇ ’ಬಿಸು ಪರ್ಬ’. ಈಹಬ್ಬದಲ್ಲಿ ’ಬಿಸುಕಣಿ’ಗೆ ತುಂಬಾ ಮಹತ್ವ. ಬಿಸುಕಣಿ ಅಂದರೆ ಹೊಸವರ್ಷದ ಸ್ವಾಗತಕ್ಕೆ ಇಡುವ ಕಳಶ. ಬಿಸುವಿನ ಹಿಂದಿನ ದಿನ ರಾತ್ರಿಯೇ ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ.
[ಕಣಿಹೇಳುವುದು, ಅಂದರೆ ಭವಿಷ್ಯ ಹೇಳುವುದು ಎಂಬ ಪದ ನಮ್ಮ ಆಡುಮಾತಿನಲ್ಲಿ ಚಾಲ್ತಿಯಲ್ಲಿದೆ. ಅದಕ್ಕೂ ಇದಕ್ಕೂ ಸಂಬಂಧವಿದೆಯೇನೋ ನನಗೆ ಗೊತ್ತಿಲ್ಲ,]

ದೇವರ ಮುಂದೆ ದೊಡ್ಡ ಹರಿವಾಣದಲ್ಲಿಒಂದು ಸೇರು ಅಕ್ಕಿಯನ್ನು ಹಾಕಿ ಅದರ ಮಧ್ಯೆ ಸುಲಿಯದ ತೆಂಗಿನಕಾಯಿಯನ್ನು ಇಡುತ್ತಾರೆ. ಅದರ ಸುತ್ತ ಆ ವರ್ಷ ತಮ್ಮ ಜಮೀನಿನಲ್ಲಿ ಬೆಳೆದ ಹೊಸ ಫಲ ವಸ್ತುಗಳನ್ನು ಜೋಡಿಸಬೇಕು. ಮುಖ್ಯವಾಗಿ ಮುಳ್ಳುಸೌತೆ, ಮಾವು, ಗೇರು, ಹಲಸು, ಸಿಹಿಕುಂಬಳಕಾಯಿ, ಒಡ್ಡುಸೌತೆ[ಮಂಗಳೂರು ಸೌತೆ], ಬೆಂಡೆ, ತೊಂಡೆ, ಅಲಸಂಡೆ ಮುಂತಾದವುಗಳನ್ನಿಟ್ಟು ನಡುವೆ ಒಂದು ಕನ್ನಡಿಯನ್ನಿಡಬೇಕು. ಕೆಲವೆಡೆ ಇವುಗಳ ಜೊತೆ ಬಂಗಾರದ ಆಭರಣಗಳು ಹಾಗು ಹೊಸಬಟ್ಟೆಗಳನ್ನೂ ಕಣಿಯ ಮುಂದಿಡುತ್ತಾರೆ.

ಬಿಸು ಹಬ್ಬದಲ್ಲಿ ಕಣಿಯ ದರ್ಶನ ಪಡೆಯುವುದು ಬಹಳ ಮುಖ್ಯವಾದುದು. ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಕಣ್ಣು ತೆರೆಯದೆ ಹಾಗೆಯೇ ಕಣ್ಣ್ಮುಚ್ಚಿಕೊಂಡೇ ದೇವರ ಮುಂದೆ ಬಂದು ವಿಷುಕಣಿಯ ದರ್ಶನ ಪಡೆಯಬೇಕು. ಅನಂತರವೇ ಎಣ್ಣೆ ಅಭ್ಯಂಜನ ಮಾಡಿ ಹೊಸಬಟ್ಟೆ ತೊಟ್ಟು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಅಲ್ಲಿಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಮಧ್ಯಾಹ್ನ ಹಬ್ಬದೂಟ ಉಂಡು ಸಂಜೆ ಸಮೀಪದ ದೇವಸ್ಥಾನ ಅಥವಾ ಭೂತಸ್ಥಾನಕ್ಕೆ ಹೋಗಿ ದೇವರ ಅಥವಾ ದೈವದ ದರ್ಶನ ಪಡೆಯಬೇಕು.

ನನಗೆ ಈಗಲೂ ನೆನಪಿದೆ; ನಾನು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಾಗ ದುಡಿಯುವ ಮಹಿಳೆಯರ ಹಾಸೇಲ್ ನಲ್ಲಿದ್ದೆ. ನನ್ನ ರೂಂಮೇಟ್ ಒಬ್ಬಳು ಮಲೆಯಾಳಿಯಾಗಿದ್ದಳು. ಅವಳ ಅಪೇಕ್ಷೆಯಂತೆ ಪ್ರತಿವರ್ಷ ವಿಷು ಹಬ್ಬದಂದು ಬೆಳಿಗ್ಗೆ ಅವಳು ಕಣ್ತೆರೆಯುವ ಮೊದಲೇ ಅವಳ ಚಾಚಿದ ಕೈಗಳಿಗೆ ಒಂದು ರೂಪಾಯಿಯ ಪಾವಲಿಯನ್ನಿಡುತ್ತಿದ್ದೆ. ಅದನ್ನವಳು ಭಕ್ತಿಯಿಂದ ಕಣ್ಣಿಗೊತ್ತಿಕೊಳ್ಳುತ್ತಿದ್ದಳು. ವಿಷು ಹಬ್ಬದಂದು ಸಂತೋಷವಾಗಿದ್ದರೆ ವರ್ಷವಿಡೀ ಸಂತೋಷವಾಗಿರುತ್ತಾರೆ ಎಂಬುದು ನಂಬಿಕೆ.

ವಿಷು ಹಬ್ಬದ ವಿಶೇಷ ಅಡುಗೆ ಏನಿರುತ್ತದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಒಬ್ಬಟ್ಟು ಇರುವುದಿಲ್ಲ ಅಂತ ಗೊತ್ತಿದೆ. ಹೆಸರು ಬೇಳೆ ಪಾಯಸ, ಎಳೆ ಗೋಡಂಬಿ ಹಾಕಿ ಮಾಡಿದ ತೊಂಡೆಕಾಯಿ ಪಲ್ಯ. ಮತ್ತು ಎಲ್ಲಾ ತರಕಾರಿ ಹಾಕಿ ಮಾಡಿದ ಅವಿಲು ಅಂದರೆ ಹುಳಿ ಇವಿಷ್ಟು ಇದ್ದೇ ಇರುತ್ತದೆ. ಜೊತೆಗೆ ಹಪ್ಪಳ. ಮೊಸರು, ಉಪ್ಪಿನಕಾಯಿ ಇದ್ದೇ ಇರುತ್ತದೆ.

ನಮ್ಮ ಮನೆಯಲ್ಲಿ ಮಾತ್ರ ಹಲಸಿನಹಣ್ಣಿನಿಂದ ’ಮುಳ್ಕ’ ಎಂಬ ಕರಿದ ತಿಂಡಿಯನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ನಮ್ಮ ಕುಟುಂಬದ ದೇವರಗದ್ದೆ ನಮ್ಮ ಪಾಲಿಗೆ ಬಂದಿತ್ತು. ಅದಕ್ಕೆ ಪರಂಪರೆಯಿಂದಲೂ ವಿಷು ಹಬ್ಬದಂದು ಪೂಜೆ ಮಾಡುವ ಪದ್ದತಿ ಇತ್ತು. ಕಂಬಳ ನಡೆಯುವ ಆ ಗದ್ದೆಯನ್ನು ನಾವು ದೊಡ್ಡಗದ್ದೆ ಎಂದು ಕರೆಯುತ್ತೇವೆ. ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಹಲಸಿನಹಣ್ಣಿನೊಂದಿಗೆ ರುಬ್ಬಿ ಅದಕ್ಕೆ ಎಳ್ಳನ್ನು ಸೇರಿಸಿ ಪಕೋಡದಂತೆ ಕರೆದರೆ ಅದೇ ಮುಳ್ಕ. ನಮ್ಮ ಮನೆಯಲ್ಲಿ ಕೆಲವು ವರ್ಷ ಏಪ್ರೀಲ್ ತಿಂಗಳಲ್ಲಿ ಹಲಸು ಹಣ್ಣಾಗುತ್ತಿರಲಿಲ್ಲ. ಅದು ಯಾರಿಗಾದರೂ ಗೊತ್ತಾದರೆ, ಅವರಲ್ಲಿ ಹಲಸಿನ ಹಣ್ಣಿದ್ದರೆ ನಮ್ಮ ಮನೆಗೆ ತಂದು ಕೊಡುತ್ತಿದ್ದರು.

ಪ್ರಸಕ್ತ ವರ್ಷದಿಂದ ನಮ್ಮ ಮನೆಯಲ್ಲಿ ಮುಳ್ಕ ಮಾಡಲಾರರು ಯಾಕೆಂದರೆ ಈಗ ಕಂಬಳ ನಡೆಯುವ ಆ ದೇವರ ಗದ್ದೆ ಕೊಕ್ಕೊ ತೋಟವಾಗಿ ಬದಲಾಗಿದೆ. ಕೃಷಿಕರ ಬದುಕು ಬದಲಾಗಿದೆ. ಹಾಗಾಗಿ ಆಚರಣೆಗಳೂ ಬದಲಾಗಿವೆ. ನಮ್ಮ ಹಳ್ಳಿಗಳು ಬದಲಾಗಿವೆ. ನಮ್ಮ ನಗರದ ಬದುಕು ಕೂಡ.

ನಾನು ಮನೆಯಲ್ಲಿ ಹಬ್ಬದಡುಗೆ ಮಾಡುವುದಿಲ್ಲ.ಅದಕ್ಕೆ ಹಲವಾರು ಕಾರಣಗಳಿವೆ. ಮಕ್ಕಳಿಗೆ ಸಿಹಿ ಇಷ್ಟವಾಗುವುದಿಲ್ಲ. ಗಂಡ ಡಯಾಬಿಟಿಕ್ ಅಲ್ಲವಾದರೂ ಆ ಭ್ರಮೆಯಲ್ಲಿ ಸಿಹಿ ತಿನ್ನುವುದಿಲ್ಲ. ಸಿಹಿ ಇಲ್ಲದಿದ್ದರೆ ಅದೆಂಥ ಹಬ್ಬ ಅಲ್ಲವೇ? ಅದಲ್ಲದೆ ಆತ ಸುದ್ದಿ ಚಾನಲ್ಲೊಂದರಲ್ಲಿ ಕೆಲಸ ಮಾಡುತ್ತಾನೆ. ಹಾಗಾಗಿ ಇಪ್ಪತ್ತನಾಲ್ಕು ಘಂಟೆಯೂ ಜರ್ನಲಿಸ್ಟೇ. ಹಾಗಾಗಿ ನಾನು ಮಾಡಿದ್ದನ್ನು ನಾನೊಬ್ಬಳೇ ಭೂತದಂತೆ ತಿನ್ನಬೇಕು. ಆದರೂ ’ಹಳ್ಳಿ ಮನೆ’ಯಿಂದ ಹಬ್ಬದೂಟ ತರಿಸುತ್ತೇನೆ. ಆಯ್ಕೆ ಮಾಡಿಕೊಂಡು ಇಷ್ಟವಾದದ್ದನ್ನು ತಿನ್ನುತ್ತೇವೆ ಉಳಿದದ್ದು ತಿಪ್ಪೆ ಸೇರುತ್ತದೆ.

ನಿಮಗ್ಯಾರಿಗಾದರೂ ’ವಿಷು ಕಣಿ’ ನೋಡಬೇಕೆನಿಸಿದರೆ ಅಕ್ಕ ಪಕ್ಕ ಎಲ್ಲಿಯಾದರೂ ತೆಂಗಿನ ಮರ ಇದ್ದರೆ ಅದನ್ನೇ ಕಣ್ಣು ತೆರೆದಾಗ ನೋಡಿಬಿಡಿ. ಯಾಕೆಂದರೆ ಅದು ಬೇಡಿದ್ದನ್ನು ಕೊಡುವ ಕಲ್ಪವೃಕ್ಷ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಹಬ್ಬದಡುಗೆ ಮಾಡದಿದ್ದರೂ ಬಾಗಿಲಿಗೆ ಮಾವಿನ ತೋರಣ ಕಟ್ಟುವುದನ್ನು ಮರೆಯುವುದಿಲ್ಲ. ಯಾಕೆಂದರೆ ಅದು ಚೈತ್ರದ ಚಿಗುರು; ವಸಂತ ಋತುವಿಗೆ ಮುನ್ನುಡಿ.
ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು. ವಸಂತ ಋತು ನಿಮ್ಮೆಲ್ಲರ ಬಾಳಿನಲ್ಲಿಯೂ ಸದಾ ಕಾಲ ನಳನಳಿಸುತ್ತಿರಲಿ.

Friday, April 8, 2011

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು




ಹಿರಿಯ ಗಾಂಧೀವಾದಿ ಹಾಗು ಸಮಾಜಸೇವಕ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಉಪಾವಾಸ ಸತ್ಯಾಗ್ರಹ ಅಂದೋಲನದ ರೂಪ ಪಡೆಯುತ್ತಿದೆ.

ಯುವಕರು ಅಂದೋಲನಕ್ಕೆ ದುಮುಕ್ಕುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಹಿಂದಿ ಚಿತ್ರರಂಗದ ಸದಭಿರುಚಿಯ ನಿರ್ದೇಶಕರು, ನಟರು ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ. ಮುಖ್ಯವಾಗಿ ಯುವ ನಟ ಅಮಿರ್ ಖಾನ್ ಎಲ್ಲರಿಗಿಂತಲೂ ಮೊದಲು ತನ್ನ ಬೆಂಬಲ ವ್ಯಕ್ತಪಡಿದ್ದಾನೆ. ಆತ ’ಲಗಾನ್’ ಚಿತ್ರದ ಮೂಲಕ ಯುವಕರ ಹೃದಯದಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿದವನು. ರೈತರ ಆತ್ಮಹತ್ಯೆ ಸಮಸ್ಯೆಗಳನ್ನೆತ್ತಿಕೊಂದು, ದೃಶ್ಯ ಮಾಧ್ಯಮದ ಕ್ರೌರ್ಯವು ಸೇರಿದಂತೆ ಅಧಿಕಾರಿಶಾಯಿಯ ದಬ್ಬಾಳಿಕೆಯನ್ನು ’ಪಿಪ್ಲಿ ಲೈವ್..’ ಸಿನೇಮಾದಲ್ಲಿ ತೋರಿಸಿದ್ದಾನೆ. ಆತನ ಬೆಂಬಲ ಈ ಆಂದೋಲನಕ್ಕೆ ಅಥೆಂಟಿಸಿಟಿಯನ್ನು ತಂದು ಕೊಟ್ಟಿದೆ.

ನಮಗೆ ಭರವಸೆಯಿರಲಿಲ್ಲ, ನಾವು ಅಸಹಾಯಕರಾಗಿದ್ದೆವು; ಗ್ರಾಮ ಲೆಕ್ಕಿಗನಿಂದ ಹಿಡಿದು ಎಲ್ಲಾ ಅಧಿಕಾರಶಾಹಿಗಳು, ಜನಪ್ರತಿನಿಧಿಗಳು ಭ್ರಷ್ಟಾಚಾರದ ಪೋಷಕರಾಗಿದ್ದರು. ಭ್ರಷ್ಟಾಚಾರ ನಮ್ಮ ಜೀವನಕ್ರಮದ ಭಾಗವೇ ಆಗಿಹೋಗಿದೆ. ಅದನ್ನು ನಾವು ಒಪ್ಪಿಕೊಂಡಿದ್ದೇವೆ.

ನೀತಿನಿರೂಪಕರ ಸ್ಥಾನದಲ್ಲಿರುವ ಮಠಾದೀಶರು, ಅಧಿಕಾರಿಶಾಹಿವರ್ಗ
ಜನಪ್ರತಿನಿಧಿಗಳು ಮತ್ತು ಪತ್ರಿಕಾವಲಯ ಎಲ್ಲವೂ ಬ್ರಷ್ಟಾಚಾರದಲ್ಲಿ ಮುಳುಗಿ ಹೋಗಿ ನೈತಿಕ ಅದಃಪತನದತ್ತ ಜಾರಿ ಹೋಗಿದ್ದಾರೆ. ಇವರೇ ಇಂದು ಅಣ್ಣಾ ಹಜಾರೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದೆ ಬಂದಿದ್ದಾರೆ. ಆದರೆ ಹೋರಾಟಗಾರರು ಅವರನ್ನೆಲ್ಲಾ ದೂರವಿಟ್ಟಿದ್ದಾರೆ. ಮಂಗಳವಾರ, ಹಜಾರೆ ಸತ್ಯಾಗ್ರಹ ಅರಂಭಿಸಿದ ದಿನದಂದೇ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಂದ ಉಮಾಭಾರತಿ ಮತ್ತು ಓಂಪ್ರಕಾಶ್ ಚೌತಾಲ ಅವರನ್ನು ಹೋರಾಟಗಾರರು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಬ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬ್ರಷ್ಟಾಚಾರದ ಮೂಟೆಗಳಂತಿರುವ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸುವುದು ವ್ಯಂಗ್ಯವಲ್ಲವೇ?

ಈ ವ್ಯಂಗ್ಯ ಕನ್ನಡದ ಪತ್ರಿಕಾ ರಂಗಕ್ಕೂ ಅನ್ವಯವಾಗುತ್ತದೆ. ಕೆಲವು ಪತ್ರಕರ್ತರು ದುಡ್ಡು-ಆಸ್ತಿ ಸಂಪಾದನೆಯಲ್ಲಿ, ಗುಂಪುಗಾರಿಕೆಯಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಿದ್ದಾರೆ. ಅಣ್ಣಾ ಹಜಾರೆಯ ಜನಾಂದೋಲನವನ್ನು ಬೆಂಬಲಿಸಿ ಪ್ಲಾಪ್ ಅಪ್ ಹಾಕುತ್ತಿರುವ ಕೆಲವು ಚಾನಲ್ ಗಳು ರಾಜಕಾರಣಿಗಳ ಹಿಡಿತದಲ್ಲಿವೆ. ’ಭ್ರಷ್ಟರ ಬೆನ್ನತ್ತಿ ಸುವರ್ಣ ನ್ಯೂಸ್’ ಎನ್ನುವ ಸುವರ್ಣ ಚಾನಲ್ ಮೊದಲು ಬೆಂಬೆತ್ತಬೇಕಾದದ್ದು ಅದರ ಮಾಲೀಕ ರಾಜೀವ ಚಂದ್ರಶೇಖರ್ ಅವರನ್ನು. ಯಾಕೆಂದರೆ ದುಡ್ಡುಕೊಟ್ಟು ಎಂಪಿ ಸೀಟ್ ಖರೀದಿಸಿದವರು ಅವರು. ಅದರಲ್ಲೂ ಜನಶ್ರೀ ಚಾನಲ್ ಒಡೆಯರು ಪತ್ರಕರ್ತರನ್ನೂ ಬ್ರಷ್ಟಾಚಾರದ ತೆಕ್ಕೆಯೊಳಗೆ ತೆಗೆದುಕೊಂಡ ಮಹಾನುಭಾವರು. ಪಾಳೆಗಾರಿಕೆ ಪದ್ದತಿಯ ಪಳೆಯುಳಿಕೆಯಂತಿರುವ ಇವರು ತಮ್ಮದೇ ಹೆಸರಿನಲ್ಲಿ ಚಾನಲ್ ತೆರೆದು ವ್ಯಕ್ತಿಪೂಜೆ ಮಾಡಿಸಿಕೊಂಡವರು. ಅಂತಹ ಚಾನಲ್ ’ಭ್ರಷ್ಟಾಚಾರದ ವಿರುದ್ಧ ಜನಶ್ರೀ ಅಭಿಯಾನ’ ಎಂದು ಹಾಕಿಕೊಂಡರೆ ಅದಕ್ಕಿಂತ ದೊಡ್ಡ ವ್ಯಂಗ್ಯ ಇನ್ನೊಂದಿರಬಹುದೇ? ಇಂದು ಪ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿರುವ ಜ್ನಾನಪೀಠ ಪ್ರಶಸ್ತಿ ವಿಜೇತರಾದ ಯು.ಆರ್. ಅನಂತಮೂರ್ತಿಯವರು, ’ಗಣಿ ಧಣಿಗಳ ಚಾನಲ್ ಒಂದಿದೆ. ಅದಕ್ಕೆ ನಾನು ಮಾತಾಡುವುದಿಲ್ಲ’ ಎಂದು ಲೈವ್ ಟೆಲಿಕಾಸ್ಟ್ ನಲ್ಲಿ ಹೇಳಿದರು. ಅಂತಹ ಧಿಕ್ಕಾರದ ಧ್ವನಿ ಜನಸಾಮಾನ್ಯರಿಂದಲೂ ಬರಬೇಕಾಗಿದೆ.

ಕನ್ನಡ ಪತ್ರಿಕೋಧ್ಯಮ ನಮಗೆ ಸುದ್ದಿಗಳನ್ನಷ್ಟೇ ನೀಡಲಿ. ಅದರ ವ್ಯಾಖ್ಯಾನ ಬೇಡ. ಸುದ್ದಿಯ ಹಿಂದಿನ ಸುದ್ದಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತವೆ. ನಿಜ, ದೃಶ್ಯ ಮತ್ತು ಪ್ರಿಂಟ್ ಮೀಡಿಯಾಗಳು ಬ್ರಷ್ಟಾಚಾರ ವಿರುದ್ಧ ಆಂದೋಲನಕ್ಕೆ ವ್ಯಾಪಕ ಪ್ರಚಾರ ನೀಡುತ್ತಿವೆ. ಆದರೆ ಅದು ಅವರ ಉದ್ಯೋಗದ ಒಂದು ಭಾಗ ಎಂಬುದನ್ನು ನಾವು ಮರೆಯಬಾರದು. ನಾಳೆ ಇದಕ್ಕಿಂತ ರೋಚಕವಾದ ಘಟನೆಯೊಂದು ದೊರೆತರೆ ಮೀಡಿಯಾದ ಗಮನ ಅತ್ತ ಹೋಗುತ್ತದೆ. ಆದರೆ ಆಂದೋಲನ ಮುಂದುವರೆಯುತ್ತದೆ.

ನಮ್ಮ ಯುವಕರಿಗೆ ಕನಸುಗಳಿವೆ; ಆದರ್ಶಗಳಿವೆ; ಬ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಹುಮ್ಮಸಿದೆ ಎಂಬುದು ಜಂತರ್ ಮಂತರ್ ನತ್ತ ಹರಿದು ಬರುತ್ತಿರುವ ವಿದ್ಯಾರ್ಥಿ ವೃಂದವನ್ನು ನೋಡಿದರೆ ಗೊತ್ತಾಗುತ್ತದೆ. ದೇಶದಾದ್ಯಂತ ಮತ್ತು ಹೊರದೇಶಗಳಲ್ಲಿರುವ ಯುವವೃಂದ ಈ ಆಂದೋಲನಕ್ಕೆ ಪೂರಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿರುವ ರೀತಿ ನೋಡಿದರೆ ರೋಮಾಂಚನವಾಗುತ್ತಿದೆ. ನಮ್ಮ ಯುವ ಜನಾಂಗ ಸ್ವಕೇಂದ್ರಿತ ವ್ಯಕ್ತಿತ್ವನ್ ಹೊಂದಿದ್ದಾರೆ.ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಇಲ್ಲಾ ಎನ್ನುತ್ತಿದ್ದವರಿಗೆಲಾ ಅವರೀಗ ತಮ್ಮ ನಡವಳಿಕೆಗಳಿಂದಲೇ ಸೂಕ್ತ ಉತ್ತರ ಕೊಡುತ್ತಿದ್ದಾರೆ. ಅವರಿಗೆ ನಾಯಕತ್ವದ ಕೊರತೆಯಿತ್ತು; ಮಾರ್ಗದರ್ಶಕರು ಬೇಕಾಗಿತ್ತು. ಅವರಿಗೆ ಸಮರ್ಥ ಗುರು ಸಿಕ್ಕಿದ.

ಸಮಾಜದ ಕೆಳಸ್ತರದಲ್ಲಿ. ಮಧ್ಯಮವರ್ಗದಲ್ಲಿ ಕುದಿಯುವ ಅಸಹನೆಯಿತ್ತು. ಅದು ಅಂಡರ್ ಕರೆಂಟ್ ನಂತೆ ಒಳಗೊಳಗೆ ಪ್ರವಾಹಿಸುತ್ತಿತ್ತು. ಅದಕ್ಕೆ ಹಜಾರೆ ಕಿಡಿ ತಾಗಿಸಿದರು. ಅದೀಗ ಮೆಲ್ಪದರಕ್ಕೆ ಬಂದಿದೆ. ಸ್ಫೋಟಗೊಳ್ಳುವ ಹಂತ ತಲುಪಿದೆ. ಅದನ್ನು ತಣಿಸದಿದ್ದರೆ ಖಂಡಿತವಾಗಿಯೂ ಅದು ಕಾಡ್ಗಿಚ್ಚಿನಂತೆ ಹಬ್ಬಿ ಸಿಕ್ಕಿದ್ದೆಲ್ಲವನ್ನೂ ಆಪೋಶನ ತೆಗೆದುಕೊಳ್ಳಬಹುದು. ನಮ್ಮ ಕಣ್ಣ ಮುಂದೆ ಈಜಿಪ್ಟ್, ಲಿಬಿಯಾಗಳ ಉದಾಹರಣೆಯಿದೆ.

ತುರ್ತುಪರಿಸ್ಥಿತಿಯ ನಂತರ ಇಡೀ ದೇಶವನ್ನು ಒಂದಾಗಿ ಬೆಸೆಯುವ ಯಾವ ಆಂದೋಲನವೂ ನಡೆದಿರಲಿಲ್ಲ. ಜಾಗತೀಕರಣದ ಮುಕ್ತ ಆರ್ಥಿಕತೆಗೆ ತೆರೆದುಕೊಂಡ ನಂತರವಂತೂ ಎಲ್ಲರೂ ಹಣದ ಹಿಂದೆ ಓಡತೋಡಗಿದರು. ಹೇಗಾದರೂ ಸೇರಿ ಆಸ್ತಿ ಸಂಪಾದಿಸುವುದು, ದುಡ್ಡು ಮಾಡುವುದೇ ಮುಖ್ಯವೆನಿಸತೊಡಗಿತು.ಇಂಥ ಸ್ಥಿತಿಯಲ್ಲಿ ಜನಾಂದೋಲನ ಸಾಧ್ಯವೇ? ಸಾಮಾಜಿಕ ಸಮಸ್ಯೆಯೊಂದು ಭಾರತವನ್ನು ಮತ್ತೆ ಒಂದಾಗಿ ಬೆಸೆದು ಹೋರಾಟಕ್ಕೆ ಅಣಿಗೊಳಿಸಲಲು ಸಾಧ್ಯವೇ? ಎಂದು ಅಂದುಕೊಳ್ಳುವ ಹೊತ್ತಿನಲ್ಲೇ ಗಾಂಧೀವಾದಿ ಅಣ್ಣಾಹಜಾರೆ ದೇವದೂತನಂತೆ ಅವತರಿಸಿದ್ದಾರೆ.

ಇಂದು ಇಡೀ ದೇಶ ಅವರತ್ತ ನೋಡುತ್ತಿದೆ. ಯುವ ಜನಾಂಗ ಅವರೆಡೆಗೆ ಸ್ವಯಂ ಪ್ರೇರಿತರಾಗಿ ಹರಿದು ಬರುತ್ತಿದೆ. ಜನಾಂದೋಲನಕ್ಕೆ ಚಾಲನೆ ದೊರೆತಿದೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಜನ ಒಟ್ಟಾಗುತ್ತಿದ್ದಾರೆ. ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ.

ಪ್ರಜ್ನಾವಂತ ನಾಗರಿಕ ಸಮೂಹ, ಸಾಹಿತಿ-ಕಲಾವಿದರು, ಸಂಸ್ಕೃತಿ ಚಿಂತಕರು, ನಾಟಕ ರಂಗ, ಸಿನೇಮಾಕ್ಷೇತ್ರ, ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿ ಸಮೂಹ, ಐಟಿ-ಬಿಟಿ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡವರೆಲ್ಲಾ ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರೋಧಿ ಅಂದೋಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಅದು ತೋರಿಕೆಯ ಬೆಂಬಲ ಅಲ್ಲ ಎಂಬುದು ಸತ್ಯಾಗ್ರಹದ ನಾಲ್ಕನೆಯ ದಿನವಾದ ಇಂದು ನಿಚ್ಚಳವಾಗಿ ಗೊತ್ತಾಗುತ್ತಲಿದೆ.

ಈ ಆಂದೋಲನ ತಾರ್ಕಿಕ ಅಂತ್ಯವನ್ನು ಕಾಣುವಂತಾಗಲಿ

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.