Sunday, December 30, 2018

ರಾಘವೇಶ್ವರನ ಬೆಂಬಲಿಗರೂ 'ನಾತಿಚರಾಮಿ'ಯ ನಿಂದಕರೂ..






ಒಬ್ಬಳೇ ಸಿನೇಮಾಕ್ಕೆ ಹೋಗುವುದು ನನಗೆ ಅನಿವಾರ್ಯ. ಮತ್ತು ನಾನದನ್ನು ಇಷ್ಟಪಡುತ್ತೇನೆ ಕೂಡಾ.  ಇಂದು ಕೂಡಾ  ವಂದಿವಾಗದರನ್ನು ಸೇರಿಸಿಕೊಳ್ಳದೆ ಒಬ್ಬಳೇ ನಾತಿಚರಾಮಿ ಸಿನೇಮಾಕ್ಕೆ ಹೋದೆ. ಸಿನೇಮಾದ  ಸಬ್ಜೆಕ್ಟ್ ಹಾಗಿತ್ತು. ಮೊದಲನೆಯದಾಗಿ ಹೇಳಿಬಿಡುತ್ತೇನೆ. ಈ ಸಿನೇಮಾದಲ್ಲಿ ತೊಡಗಿಸಿಕೊಂಡ ಯಾರೂ ನನ್ನ ಸ್ನೇಹದ ವಲಯದಲ್ಲಿರುವವರಲ್ಲ.
ಹೆಡ್ಡಿಂಗ್ ನಲ್ಲೇ ಸ್ವಾಮೀಜಿಯೊಬ್ಬರ ಹೆಸರನ್ನು ಉಲ್ಲೇಖಿಸಿದ ಕಾರಣದಿಂದಲೂ ಹೇಳಿಬಿಡುತ್ತೇನೆ, ರಾಘವೇಶ್ವರರನ್ನು ಪೂಜಿಸುವ ಸಮುದಾಯಕ್ಕೆ ಸೇರಿದವಳೂ ನಾನಲ್ಲ.. ಆದರೆ ನಾನೊಬ್ಬಳು ಹೆಣ್ಣು. ಅದೇ  ಈ ಲೇಖನವನ್ನು ಬರೆಯಲು ನನಗಿರುವ ಅರ್ಹತೆ.

‘ನಾತಿಚರಾಮಿ’ ಸಿನೇಮಾದಲ್ಲಿ ಮೈಮನಗಳ ನಡುವೆ ಸಂಘರ್ಷವಿದೆ ಎಂಬುದನ್ನು ಚಿತ್ರತಂಡ ಮೊದಲೇ ಜಾಹೀರು ಮಾಡಿತ್ತು. ಆಗಲೇ ಈ ಸಿನೇಮಾದ ನನಗೊಂದು ಚೂರು ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸಿತ್ತು. ಯಾಕೆಂದರೆ ಶಿವರಾಮಕಾರಂತರ ‘ಮೈಮನಗಳ ಸುಳಿಯಲ್ಲಿ’ ಕಾದಂಬರಿಯನ್ನು ನಾನು ಹತ್ತಾರು ಸಲ ಓದಿದ್ದೇನೆ., ಅದು ನನಗೆ ಸ್ನಾತಕೋತ್ತರ ಪದವಿಯಲ್ಲಿ ಪಠ್ಯವಾಗಿತ್ತು. ಮೇಸ್ಟ್ರರಾದ ಕೇಶವ ಶರ್ಮರು ಅದನ್ನು ನಮಗೆ ಅರೆದು ಕುಡಿಸಿದ್ದರು!

ನಾತಿಚರಾಮಿ, ಈ ಹೆಸರೇ ಸಾಮಾನ್ಯರಿಗೆ ಅಪರಿಚಿತ. ತನ್ನ ಹೆಸರಿನಿಂದಲೇ ಈ ಸಿನೇಮಾಕ್ಕೊಂದು ಸೀಮಿತ ಚೌಕಟ್ಟು ಬಂತು, ಅಂದರೆ ಇದರ ವೀಕ್ಷಕರು ಯಾರು ಎಂಬುದು ಮೊದಲೇ ನಿರ್ಧಾರವಾದಂತಿತ್ತು.. ಅಷ್ಟರಮಟ್ಟಿಗೆ ಅದು ಸಾಮಾನ್ಯ ಪ್ರೇಕ್ಷಕರಿಂದ ಅಂತರವನ್ನು ಕಾಯ್ದುಕೊಂಡಿತು. ಸಿನೇಮಾದ ಭಾಷೆಯಲ್ಲಿ ಹೇಳುವುದಾದರೆ ಸಿ ಸೆಂಟರಿಗೆ ಇದು ಹೋಗಲು ಸಾಧ್ಯವೇ ಇಲ್ಲ. ಸಿನೇಮಾ ನೋಡಿದ ಮೇಲೆ ನನಗನ್ನಿಸಿದ್ದು. ಇದು ಬಿ ಸೆಂಟರಿಗೂ ಹೋಗಲಾರದು. ಆದರೆ ಎ ಸೆಂಟರಿನಲ್ಲಿ ಕನಿಷ್ಟ ಇಪ್ಪತೈದು ದಿನವದರೂ ಓಡಬಹುದಾಗಿದ್ದ  ಸದಭಿರುಚಿಯ ಸಿನೇಮಾ. ಆದರೆ ಈಗ ಇದು ಒಂದೇ ವಾರದಲ್ಲಿ ಎತ್ತಂಗಡಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಯಾಕೆ?

ಇದಕ್ಕೆ ಕಾರಣ ಪೇಸ್ಬುಕ್ ಮದ್ಭಕ್ತರ ಪಡೆ. ಇವರು ಕಂಪ್ಯೂಟರ್ ಕೀಲಿಮಣೆಯ ಮೇಲೆ ಕೈಯಿಟ್ಟರೆ ಎಲ್ಲಿಯೋ ಒಂದು ಕಡೆ ಸರ್ವನಾಶವಾಗುವುದು ಖಚಿತ!
[ಸಿನೇಮಾದ ಬಗ್ಗೆ ನಾನು ಹೆಚ್ಚು ಬರೆಯಲು ಹೋಗುವುದಿಲ್ಲ. ಅ ಬಗ್ಗೆ ಪೇಸ್ಬುಕ್ ನಲ್ಲಿ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ]

ನಿಮಗೆ ನೆನಪಿರಬಹುದು, ಇಂದಿಗೆ ನಾಲ್ಕು ವರ್ಷಗಳ ಹಿಂದೆ ರಾಘವೇಶ್ವರ ಸ್ವಾಮೀಜಿಯಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪ್ರೇಮಲತಾ ಎಂಬ ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಲು ಸಿದ್ಧಳಾಗಿದ್ದರು. ಆದರೆ ಎದರಾಳಿಯಾಗಿದ್ದುದು ಶಂಕರಪರಂಪರೆಯ ಪೀಠಸ್ಥ ಬಲಾಡ್ಯ ಸ್ವಾಮೀಜಿ.  ಮಠದ ಕುತಂತ್ರದ ಕಾರಣವಾಗಿ ಪ್ರೇಮಲತಾ ಮತ್ತು ಆಕೆಯ ಗಂಡನೇ ಇಪ್ಪತ್ತಾರು ದಿನಗಳನ್ನು ಜೈಲಿನಲ್ಲಿ ಕಳೆಯುವಂತಾಯ್ತು. ಆ ಘಟನೆಯನ್ನು ಯಾವ ಮಾಧ್ಯಮವೂ ವರದಿ ಮಾಡಬಾರದು ಎಂದು ಮಠ ನ್ಯಾಯಲಯದಿಂದ ತಡೆಯಾಜ್ನೆ ತಂದಿತ್ತು. ಅವರ ಸಮಾಜಬಾಂಧವರೂ ಅಂದಿನ ದಿನಗಳಲ್ಲಿ ಆ ದಂಪತಿಗಳ ಪರ ವಹಿಸಲಿಲ್ಲ. ಆ ಸಂದರ್ಭದಲ್ಲಿ ‘ಒಪ್ಪಿಸಲ್ಪಡುವ ಸೆಕ್ಸ್ ಎಂಬುದೊಂದು ಇದೆಯಾ?’ ಅಂತ ಲೇಖನವೊಂದನ್ನು ಬರೆದಿದ್ದೆ ಮತ್ತು ಕೆಲವೊಂದು ಸ್ಟೇಟಸ್ ಗಳನ್ನು ಪೇಶ್ಬುಕ್ ಗೆ ಅಪ್ಲೋಡ್ ಮಾಡಿದ್ದೆ.. ಅದನ್ನು ಓದಿ ಕೆರಳಿದ ಗೋಸ್ವಾಮಿ ಭಕ್ತರು ನನ್ನನ್ನು ಟ್ರೋಲ್ ಮಾಡಿ, ಹ್ಯಾಸ್ಟ್ಯಾಗ್ ಸೃಷ್ಟಿಸಿ ಲೇವಡಿ ಮಾಡತೊಡಗಿದರು, ತಲೆಯಲ್ಲಿ ಸೆಗಣಿ ತುಂಬಿಕೊಂಡ ಆ ಭಕ್ತರನ್ನು ನಾನು ನಿರ್ಲಕ್ಷಿಸುತ್ತಾ ಬಂದೆ.

ಈಗ ಕಾಲ ಬದಲಾಗಿದೆ. ಹವ್ಯಕ ಸಮಾಜ ಎರಡು ಬಣಗಳಾಗಿ ಒಡೆದಿದೆ. ಒಂದು ಬಣ ಸ್ವಾಮೀಜಿಯ ಅನೈತಿಕ ಚಟುವಟಿಕೆಗಳನ್ನೆಲ್ಲಾ ಬಯಲು ಮಾಡುತ್ತಾ ಬಂತು. ಇನ್ನೊಂದು ಬಣ ಸ್ವಾಮೀಜಿಗೆ ಬೆನ್ನೆಲುಬಾಗಿ ನಿಂತಿತು.  ಈಗ ಆ ಸ್ವಾಮೀಜಿಯ  ಮೇಲೆ ಮೂರು ಪ್ರಕರಣ್ಗಳಲ್ಲಿ ಚಾರ್ಜ್ ಶೀಟ್ ಪೈಲ್ ಆಗಿದೆ. ಆ ಮಹಿಳೆಯೊಡನೆ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಬಂಧ ಇತ್ತು ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೆರಡು ಪ್ರಕರಣ್ಗಳಲ್ಲಿ ಕೋರ್ಟ್ ಸಮನ್ಸ್ ಇದ್ದರೂ ಆ ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗದೆ , ನ್ಯಾಯಾಲಯದ ಕಣ್ಣಿಗೆ ಮಣ್ಣೇರಚಿ ಆಡಂಬರದಿಂದ ತಿರುಗಾಡುತ್ತಿದ್ದಾರೆ. ಶಂಕರಪರಂಪರೆಯ ಪೀಠಾಧಿಪತಿಯಾಗಿಯೇ ಮುಂದುವರೆದಿದ್ದಾರೆ. ಅವರ ಕಳಂಕಿತ ಕೈಯಿಂದಲೇ ಭಕ್ತರು ಮಂತ್ರಾಕ್ಷತೆಯನ್ನು ಸ್ವೀಕರಿಸುತ್ತಿದ್ದಾರೆ.




ಹವ್ಯಕರ ಸ್ವಾಮೀಜಿ ಪರ ಬಣವು ಶುಕ್ರವಾರದಿಂದ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಿದೆ, ಲಂಪಟ ಸ್ವಾಮೀಯ ಭಕ್ತರು ಗಣನೀಯ ಸಂಖ್ಯೆಯಲ್ಲಿ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಇವತ್ತು ಪೇಸ್ಬುಕ್ ಗೆ ಬಂದಾಗ ಯು.ಬಿ.ಪವನಜ ಎಂಬ ಮದ್ಭಕ್ತರೊಬ್ಬರು ಈ ಸಮ್ಮೇಳನದ ಬಗ್ಗೆ ಹಾಕಿದ ಸ್ಟೇಟಸ್ ಒಂದು ನನ್ನ ವಾಲ್ ನಲ್ಲಿ ಉರುಳುತ್ತಾ ಬಂತು. ಅದರಲ್ಲಿ ಆತ ನನ್ನನ್ನು ಟ್ರೋಲ್ ಮಾಡಿದ್ದ. ಮಾತ್ರವಲ್ಲ ತನ್ನ ಪರಾಕ್ರಮವನ್ನು ತೋರ್ಪಡಿಸಿಕೊಳ್ಳಲು ನನಗೆ  ಹ್ಯಾಸ್ಟ್ಯಾಗ್ ಸೃಷ್ಟಿಸಿದ ರಾಘವೇಂದ್ರ ಸುಬ್ರಹ್ಮಣ್ಯ ಎಂಬಾತನಿಗೂ ಟ್ಯಾಗ್ ಮಾಡಿದ್ದರು. ಅಷ್ಟರಲ್ಲೇ  ‘ಅಕ್ಕಾ ನಿಮ್ಮನ್ನು ಮತ್ತೆ ಕೆಣಕಲು ನೋಡುತ್ತಿದ್ದಾರೆ’ ಅಂತ ಇನ್ನೊಬ್ಬ ಮದ್ಭಕ್ತನ  ಸ್ಕ್ರೀನ್ ಶಾಟ್ ನನ್ನ ಇನ್ಬಾಕ್ಸ್ ಗೆ ಬಂದು ಬಿತ್ತು. ಇದು ಕೂಡಾ ಈ ಲೇಖನವನ್ನು ಬರೆಯಲು ಪರೋಕ್ಷ ಕಾರಣವಾಯ್ತು.

ರಾಘವೇಶನ ಭಕ್ತರ ಪಡೆ ಸತತ ನಾಲ್ಕು ವರ್ಷಗಳ ಕಾಲ ಯಾಕೆ ನನ್ನನ್ನು ಲೇವಡಿ ಮಾಡುತ್ತಿದೆ? ಅವರೇ ಕೊಡುವ ಕಾರಣ ನಾನು ಗಂಜಿ ಗಿರಾಕಿ!

ಈ ಪೇಸ್ಬುಕ್ ನಲ್ಲಿ ಭಕ್ತರ ಬಹುದೊಡ್ಡ ಪಡೆಯೇ ಇದೆ. ಅವರು ಮೋದಿ ಭಕ್ತರಾಗಬಹುದು, ರಾಘವೇಶನ ಭಕ್ತರಾಗಿರಬಹು, ಅರ್ಜುನ ಸರ್ಜರಂತಹ ನಟರ ಭಕ್ತರಾಗಿರಬಹುದು. ಸಿದ್ಧರಾಮಯನಂತ ಅಹಿಂದ ಭಕ್ತರಾಗಿರಬಹುದು. ಒಟ್ಟಿನಲ್ಲಿ ಅವರು ಭಕ್ತರು ಅಷ್ಟೇ. ಅವರ ತಲೆಯಲ್ಲಿ ಮಿದುಳಿರಬೇಕಾದ ಜಾಗದಲ್ಲಿ ಇನ್ನೆನೋ ಇರುತ್ತದೆ! ಅಂತಹ ಚರಂಡಿಹುಳಗಳ ಬಳಗ ಪ್ರೇಮಲತಾ ಬಗ್ಗೆ ಅತ್ಯಂತ ಅಸಹ್ಯವಾಗಿ ಮಾತಾಡುತ್ತಾರೆಯೇ ವಿನಃ ತಮ್ಮ ಗುರುಗಳ ಮೇಲಾದ ಚಾರ್ಜ್ ಶೀಟ್ ಬಗ್ಗೆ ತುಟಿ ಪಿಟಕ್ ಎನ್ನುವುದಿಲ್ಲ. ಚಾರ್ಜ್ ಶೀಟಿನಲ್ಲಿ ಆ ಸ್ವಾಮೀಜಿ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ಇಪ್ಪತ್ತಾರು ಮಹಿಳೆಯರ ಹೆಸರು , ವಿಳಾಸ ಸಮೇತ ಉಲ್ಲೇಖವಾಗಿದೆ. ಆದರೂ ಭಕ್ತರ ಕಣ್ಣಿನ ಪೊರೆ ಕಳೆದಿಲ್ಲ.

 ಶ್ರುತಿಹರಿಹರನ್ ಎದುರು ಹಾಕಿಕೊಂಡದ್ದು ಬಹುತೇಕ ಇಡೀ ಕನ್ನಡ ಚಿತ್ರರಂಗವನ್ನು. ಸ್ಟಾರ್ ನಟನ ಅಭಿಮಾನಿ ಪಡೆಯನ್ನು. ಚರಂಡಿ ಯಾವುದಾದರೇನು? ಹುಳುಗಳೆಲ್ಲಾ ಒಂದೇ ಪ್ರಭೇದಕ್ಕೆ ಸೇರಿದವುಗಳು! ಮೀಟೂ ಪ್ರಕರಣದ ಜ್ವಾಲೆ ಇನ್ನೂ ಜೀವಂತವಾಗಿರುವಾಗಲೇ ಅವಳ ಸಿನೇಮಾ ಗೆಲ್ಲಲು ಬಿಡುವರೇ? ಅಡ್ಡಗಾಲು ಹಾಕಿಯೇ ಹಾಕುತ್ತಾರೆ. ಉಳಿದವರು ಬಿಡಿ, ನಾತಿಚರಾಮಿ ಚಿತ್ರತಂಡವೇ ಅವಳ ಬೆನ್ನಿಗೆ ನಿಂತ ಹಾಗೆ ಕಾಣುತ್ತಿಲ್ಲ.  ಅಡಿಯೋ ರಿಲೀಸ್, ಟೀವಿ ಡಿಸ್ಕಷನ್ ಸೇರಿದಂತೆ ಸಿನೇಮಾ ಬಿಡುಗಡೆಗೆ ಸಂಬಂಧಪಟ್ಟ ಯಾವ ಚಟುವಟಿಕೆಗಳಲ್ಲೂ ಶ್ರುತಿ ಕಾಣಿಸಿಕೊಂಡದ್ದು ನನಗಂತೂ ಕಾಣಿಸಲಿಲ್ಲ. ಪ್ರೇಮಲತಾ ಪ್ರಕರಣದಲ್ಲಿ ಮೊದಲಿಗೆ ಆಕೆಯ ಇಡೀ ಕುಟುಂಬ ಏಕಾಂಗಿಯಾಗಿ ಹೋರಾಡಿತು, ಶ್ರುತಿ ಕೂಡಾ ಈಗ ಏಕಾಂಗಿಯಾಗಿ ಉಳಿದಿದ್ದಾರೆ ಅನ್ನಿಸುತ್ತಿದೆ. 

ಕೇವಲ ಸಿನೇಮಾ ಪ್ರಚಾರಕ್ಕಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲುತ್ತಿರುವ ಈ ಹೊತ್ತಿನಲ್ಲಿ ನಾತಿಚರಾಮಿ ತಂಡ ಪ್ರಚಾರವನ್ನು ತೀರಾ ಕಡೆಗಣಿಸಿದೆ. ಕೇವಲ ಸೋಷಿಯಲ್ ಮೀಡಿಯಾವನ್ನು ಮಾತ್ರ ನೆಚ್ಚಿಕೊಂಡಿದೆ. ಆದರೆ ಸೋಷಿಯಲ್ ಮೀಡಿಯಾ ಅನ್ನುವುದು ಭಕ್ತರ ಅಡುಂಬೊಲ. ಅವು ಗುಂಪುಕಾಗೆಗಳು. ಮೊನ್ನೆ ಜನಪ್ರಿಯ ಟೀವಿಯ ಧಾರವಾಹಿಯ ನಿರ್ದೇಶಕರೊಬ್ಬರು ಚಿತ್ರಕ್ಕೆ ಶುಭ ಹಾರೈಸಿ ಪೋಸ್ಟ್ ಹಾಕಿದರು. ತಕ್ಷಣವೇ ಕಾಗೆಯೊಂದು ಹಾರಿ ಬಂದು ಶ್ರುತಿ ಹರಿಹರನ್ ಅಭಿನಯಿಸಿದ ಚಿತ್ರವನ್ನು ನಾನು ನೋಡುವುದಿಲ್ಲ ಎಂದು ಹಿಕ್ಕೆ ಹಾಕಿತು. ಪಾಪ, ಅವರು ಆ ಪೋಸ್ಟ್ ಅಳಿಸಿಯೇಬಿಟ್ಟರು! ಆಮೇಲೆ ಕಾಗೆಗಳ ಗುಂಪು ಎಲ್ಲೆಲ್ಲೋ ಹಿಕ್ಕೆ ಮಾಡುತ್ತಾ ಸಂಚರಿಸುತ್ತಿದ್ದುದನ್ನು ನೋಡಿದೆ. ಅಂದು ಈ ಗುಂಪು ಸ್ವಾಮೀಜಿಯ ಪರವಾಗಿ ನಿಂತಿತು. ಇಂದು ಈ ಗುಂಪು ಶ್ರುತಿ ವಿರುದ್ಧವಾಗಿ ನಿಂತಿದೆ.ಸಂಪ್ರದಾಯಿಕ ಸಿನೇಮಾ ಪ್ರಮೋಟರ್ಸ್ ಮೌನದ ಮೊರೆ ಹೋಗಿದ್ದಾರೆ. ಮೌನ ಯಾವಗಲೂ ವ್ಯವಸ್ಥೆಯನ್ನು ಪೋಷಿಸುತ್ತಿರುತ್ತದೆ. ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭವಲ್ಲ. ಇದೆಲ್ಲದರ ನಡುವೆಯೂ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಮೆಲ್ಲ ಮೆಲ್ಲನೆ ಪ್ರಸಾರಿಸುತ್ತಿದೆ. ಅದೊಂದು ಆಶಾದಾಯಕ ಬೆಳವಣಿಗೆ

ಈ ಕಾಗೆಗಳ ಗುಂಪು ಬಿಡಿ. ಕಂಪರ್ಟ್ ಝೋನ್ ನಲ್ಲಿರುವ ಕೆಲ ಮಹಿಳೆಯರು ಕೂಡಾ ‘ಅವಳು ನ್ಯಾಯಾಲಯದ ಅಗ್ನಿದಿವ್ಯದಲ್ಲಿ ಗೆದ್ದು ಬರಲಿ, ಅಲ್ಲಿಯವರೆಗೆ ನನ್ನದು ತಟಸ್ಥ ನಿಲುವು’ ಎನ್ನುತ್ತಾರೆ. ಇವರು ಪ್ರೇಮಲತಾ ಪರವಾಗಿಯೂ ನಿಲ್ಲುವುದಿಲ್ಲ, ಶ್ರುತಿ ಹರಿಹರನ್ ಪರವಾಗಿಯೂ ನಿಲ್ಲುವುದಿಲ್ಲ. 

ಪರ ವಹಿಸಲೇಬೇಕಾದ ಸಂದರ್ಭಗಳಲ್ಲಿ ಕೂಡಾ ತಟಸ್ಥ ನಿಲುವು ತಾಳುವುದು  ವ್ಯವಸ್ಥೆಯನ್ನು ಸಮರ್ಥಿಸಿಕೊಂಡತೆಯೇ ಆಗುತ್ತದೆ. ಲಿಂಗಸಮಾನತೆಯ ಹೋರಾಟದ ಸಂದರ್ಭಗಳಲಂತೂ ಅದು  ಮಹಿಳಾ ವಿರೋಧಿ ನಿಲುವೇ ಆಗಿರುತ್ತದೆ..ಇಂತವರಿಗೆ ಹೇಗೆ ತಿಳಿಸಿಹೇಳುವುದು,?

ನಾತಿಚರಾಮಿ ಎಂಬ ಸಿನೇಮಾವನ್ನು ನೋಡಿದಾಗ ನನಗೆ ನೆನಪಾಗಿದ್ದು ಭವಭೂತಿಯ ‘ಕಟ್ಟಿಯುಮೆನೋ ಮಾಲೆಗಾರನ ಪೊಸ  ಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ?’ ಎಂಬ ಭವಭೂತಿಯ ನಿರಿಕ್ಷೆಯಿಂದ ಕೂಡಿದ  ನೋವಿನ ಉದ್ಘಾರ. ನಿರ್ಧೇಶಕ ಮುಂಸೋರೆಯವರು ಅಷ್ಟು ಸೊಗಸಾದ ಹೂಮಾಲೆಯನ್ನು ಪೋಣಿಸಿದ್ದಾರೆ. ಆದರೆ ಅದನ್ನು ಅಘ್ರಾಣಿಸಿ, ಮುಡಿಗೇರಿಸಿಕೊಳ್ಳುವ ರಸಿಕರು ಇಲ್ಲದೆ ಹೋದರೆ ಏನು ಪ್ರಯೋಜನ? ನಾತಿಚಾರಮಿ ಗೆಲ್ಲಬೇಕು, ಅದು ಗೆದ್ದರೆ ಶ್ರುತಿಹರಹರನ್ ಗೆದ್ದಂತೆ. ಅದಕ್ಕಾಗಿ ಚಿತ್ರತಂಡ ಪ್ರಚಾರಕ್ಕಾಗಿ ನಟಿಯನ್ನೇ ಮುನ್ನಲೆಗೆ ತರಬೇಕಾಗಿತ್ತು. ಅದರೆ ಅವರು ಹಿನ್ನೆಲೆಯಲ್ಲೇ ಉಳಿದುಬಿಟ್ಟರು. ಸುಮ್ಮನಾಗಿಬಿಟ್ಟರು


ಒಂದು ವೇಳೆ ಚಿತ್ರದಂಡ ಬಾಕ್ಸ್ ಆಪೀಸ್ ಬಗ್ಗೆ ತಲೆಕೆಡಿಸಿಕೊಳ್ಳದೆ, ಕೇವಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದರೆ ಅವರಿಗೆ ನಿರಾಶೆಯಾಗಲಾರದು. ಪ್ರಶಸ್ತಿಗಳ ಸುರಿಮಳೆಯೇ ಆಗಬಹುದು!.

·         ಉಷಾಕಟ್ಟೆಮನೆ.