Saturday, July 11, 2015

’ಸಣ್ಣ ಸಂಗತಿ’ ಹಾಗೆನ್ನಬಹುದೆ?


ನಾನೊಬ್ಬಳು ಸಹೃದಯಳು ಮಾತ್ರ; ಗುಣಗ್ರಾಹಿ.

ಇದನ್ನು ಬರೆದ ಕವಿ, ಸಾಹಿತ್ಯಲೋಕದಲ್ಲಿ ಈ ಕವಿಗಿರುವ ಸ್ಥಾನ-ಮಾನ ಮುಂತಾದ ಯಾವ ವಿವರಗಳೂ ಕೂಡಾ ನನಗೆ ಮುಖ್ಯವಲ್ಲ. ನನ್ನೆದುರಿಗಿರುವುದು ಕವನ ಮಾತ್ರ.
 ಅದ್ಭುತವಾದ ಚಿತ್ರಕ ಶಕ್ತಿಯುಳ್ಳ ಕವನವಿದು. 

ಕವನದ ಶೀರ್ಷಿಕೆಯನ್ನು ನೋಡಿ; ’ಸಣ್ಣ ಸಂಗತಿ.’ ಆದರೆ ಅದು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವುದು, ಹೇಳಲೆತ್ನಿಸುತ್ತಿರುವುದು ಸಣ್ಣಸಂಗತಿಯೇ? 

ಈ ಪ್ರಶ್ನೆಯನ್ನು ನಮ್ಮೊಳಗೆ ಕೇಳಿಕೊಳ್ಳುತ್ತಾ ಈ ಕವನದ ಒಳಗೆ ಹೋಗುವ ಪ್ರಯತ್ನವನ್ನು ನಾವು ಮಾಡೋಣ.
ಕವನ ತೆರೆದುಕೊಳ್ಳುವುದು ಹೀಗೆ;

’ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ
ಹುಣ್ಣಿಮೆಯ ಕಣ್ಣು ತೆರೆದಿದೆ. ತಾರೆ ಬಂದಿವೆ
ಬಾನ ಬೀದಿಗೆ’

ನಟ್ಟಿರುಳು, ಕರಿಮುಗಿಲು, ನೀರ್-ತುಂಬಿ, ಹುಣ್ಣಿಮೆಯ ಕಣ್ಣು, ತಾರೆ, ಬಾನಬೀದಿ- ಅನುಮಾನವೇ ಬೇಡ ಇದು ರಾತ್ರಿ ಸಮಯದ ಪ್ರಕೃತಿ ವರ್ಣನೆ. ಬಹುಶಃ ಈಗ ತಾನೇ ಮಳೆ ಬಂದು ನಿಂತಿರಬೇಕು. ಇಲ್ಲಿ ನೀರ್- ತುಂಬಿ ಅಂದರೆ ಮಳೆ ಮೋಡ ಎಂಬ ಶಬ್ದ ಬಳಸಿದರೆ ಮುಂದಿನ ಸಾಲಿನಲ್ಲಿ” ಸೋನೆ’ ಎಂಬ ಶಬ್ದವನ್ನು ಬಳಸಿದ್ದಾರೆ.ಕವಿಯ ಶಬ್ದಗಳ ಆಯ್ಕೆಗೆ ನೀವು ಮೋಹಗೊಳ್ಳುತ್ತೀರಿ; ಪರವಶರಾಗುತ್ತೀರಿ.

 ಆಕಾಶ ಶುಭ್ರವಾಗಿದೆ.ಚಂದ್ರ ಬಂದಿದ್ದಾನೆ. ತಾರೆಗಳು ಉದಿಸಿವೆ
ಆದರೆ ತಕ್ಷಣ ಕವಿ ನಿಮ್ಮ ತನ್ಮಯತೆಯನ್ನು ಬೇರೆಡೆಗೆ ಸೆಳೆಯುತ್ತಾರೆ. ಮುಂದಿನ ಸಾಲುಗಳನ್ನು ಓದಿ;
’ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತ್ತದೆ’.
ಜೋರು ಮಳೆ ನಿಂತು ಸೋನೆ ಮಳೆ ಸುರಿಯುತ್ತಿರಬೇಕು; ಕುಳಿರ್ಗಾಳಿ ನಿಮ್ಮ ಮೈ ಮನಸ್ಸನ್ನು ಬೆಚ್ಚಗಾಗಿಸುತ್ತಿರಬೇಕು. ಆ ಶ್ರುತಿಯಲ್ಲಿ ಮೈಮರೆಯಲು ಕವಿ ಅವಕಾಶವನ್ನೇ ಕೊಡದೆ ವಾಸ್ತವಕ್ಕೆ ಎಳೆದು ತರುವುದು ಹೀಗೆ ನೋಡಿ;

’ ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ
ಕಣ್ಣರ್ಧಮುಚ್ಚಿ ಮಲಗಿದೆ, ಅದೂ ಬರಿಮೈಲಿ!’
ನಿದ್ದೆಗಣ್ಣಿನಲೆ ಪಕ್ಕದ ತಾಯಿ ಕೈ ನೀಡಿ
ಮತ್ತೆ ಹೊದಿಕೆಯನು ಸರಿಪಡಿಸುವಳು. ಮಗು ತಿರುಗಿ
ಹೊದಿಕೆಯನೆ ಕಿತ್ತೆಸೆದು ಮಲಗುವದು ಬರಿ ಮೈಲಿ;
ಸಣ್ಣಗಿದೆ ದೀಪ ಎಲ್ಲೋ ಒಂದು ಮೂಲೆಯಲಿ.

 ಕೋಣೆಯಲ್ಲಿ ಮಂಚದ ಮೇಲೆ ಹೆಣ್ಣೊಬ್ಬಳು ಮಲಗಿದ್ದಾಳೆ. ಮಂಚದ ಪಕ್ಕದಲ್ಲೇ ತೊಟ್ಟಿಲಿದೆ. ಅಲ್ಲಿ ಬರಿ ಮೈಯ್ಯಲ್ಲಿ ಮಲಗಿದ ಮಗುವಿದೆ. ಎಲ್ಲೋ ಮೂಲೆಯಲ್ಲಿ ಸಣ್ಣಗೆ ಉರಿಯುವ ದೀಪವೊಂದಿದೆ. ಇಷ್ಟೇ ಚಿತ್ರಣ ಸಾಕು. ಅದು ಬಾಣಂತಿ ಕೋಣೆಯೆಂಬುದನ್ನು ಹೇಳಲು. ಮಳೆ ಬಂದು ಇಳೆ ತಂಪಾದ ಪರಿಸರದಲ್ಲಿ ಜೀವಸೃಷ್ಟಿಯೊಂದು ಮೊಳಕೆಯೊಡೆದಿದೆ. ಮುಂದಿನ ಪ್ಯಾರದಲ್ಲಿ ಬರುವ ’ ನಿದ್ದೆ ಎಚ್ಚರಗಳಲ್ಲಿ ಪೊರೆವ ಕೈ ದುಡಿಯುತಿದೆ’ ಎಂಬ ಸಾಲು ಭುವಿಗೂ ಭಾನಿಗೂ ಅಥವಾ ಲೌಕಿಕಕ್ಕೂ ಅಲೌಕಿಕಕ್ಕೂ ಸೇತುವೆ ಕಟ್ಟಿದೆ. ಇದೇ  ಕವನದ ಕೇಂದ್ರ ಪ್ರಜ್ನೆ; ಅಂತರಾತ್ಮ.
 ಕವನದ ಮೇಲಿನ ಹತ್ತು ಸಾಲುಗಳು ಒಂದೇ ಸ್ಟಾಂಜ ಅಥವಾ ಪ್ಯಾರದಲ್ಲಿ ಬರುತ್ತದೆ.
ಒಟ್ಟು ಹದಿನಾಲ್ಕು ಸಾಲುಗಳ ಈ ಕವನದಲ್ಲಿ ಉಳಿದ ನಾಲ್ಕು ಸಾಲುಗಳು ಹೀಗಿವೆ.

’ಇದು ಸರಿಯೇ? ತಪ್ಪೇ?-ಉತ್ತರವಿಲ್ಲ. ದೆಸೆದೆಸೆಗೆ
ಎಲ್ಲ ಮಲಗಿಹರು ಮಾತಾಡದೆಯೆ, ನೋಡದೆಯೆ.
ನಿದ್ದೆ ಎಚ್ಚರಗಳಲಿ ಪೊರೆವ ಕೈ ದುಡಿಯುತಿದೆ;
ಅವನು ಲೆಕ್ಕಿಸದೆ ಮಗು ಹೊದಿಕೆಯನು ಒದೆಯುತಿದೆ..’

ನೀರವತೆಯಿದೆ. ಆದರೆ ಇಲ್ಲೊಂದು ಕ್ರಿಯೆ ನಡೆಯುತಿದೆ, ಅದು ಸೃಷ್ಟಿ, ಪಾಲನೆ, ಮತ್ತು ಪೊರೆಯುವ ಮೌಲ್ಯಗಳಿಗೆ ಸಂಬಂಧಿಸಿದ್ದು. ತಾಯಿ-ಮಗು ಇಬ್ಬರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಆದರೂ ತಾಯಿಗೆ ಮಗುವಿನ ಮೈಯ್ಯಲ್ಲಿ ಹೊದಿಕೆಯಿರಲಾರದು ಅನ್ನಿಸಿ ಆಕೆ ಹೊದಿಕೆಯನ್ನು ಹೊದಿಸುತ್ತಾಳೆ. ಇನ್ನೂ ಈಗ ತಾನೇ ಬೆತ್ತಲಾಗಿ ಈ ಪ್ರಪಂಚಕ್ಕೆ ಬಂದ ಮಗು ತನ್ನ ಮೈಮೇಲಿರುವ ಈಗೀಗ ಪರಿಚಿತವಾಗುತ್ತಿರುವ ಅಪರಿಚಿತ ವಸ್ತುವಾದ ಹೊದಿಕೆಯನ್ನು ಅಪ್ರಯತ್ನಪೂರವಕವಾಗಿ ಕಿತ್ತೆಸೆಯುತ್ತಿದೆ. ತಾಯಿ ಮತ್ತೆ ಮತ್ತೆ ಹೊದಿಸುತ್ತಾಳೆ. ಮಗು ಮತ್ತೆ ಕಿತ್ತೆಸೆಯುತ್ತದೆ. ಇಬ್ಬರಲ್ಲೂ ಅಪ್ರಜ್ನಾಪೂರ್ವಕವಾಗಿ ರಾತ್ರಿಯಿಡೀ ಈ ಕ್ರಿಯೆ ನಡೆಯುತ್ತಿರುತ್ತದೆ. ಇದೆ ಮನುಷ್ಯ ಮತ್ತು ಪ್ರಕೃತಿಗಿರುವ ಸಂಬಂಧವಿರಬಹುದೇ?  ಇದು ಇಡೀ ಜೀವಸಂಕುಲವನ್ನು ಕಾಪಿಡುವ ತಾಯಿ ಪ್ರಜ್ನೆಯಿರಬಹುದೇ? ಅದನ್ನು ಸಣ್ಣ ಸಂಗತಿಯೆನ್ನಬಹುದೆ? ಅಲ್ಲ ಎಂಬುದನ್ನು ಕವಿ ಸೂಚ್ಯವಾಗಿ ಹೇಳಿದ್ದಾರೆ.

ಈ ಕೋಣೆಯಲ್ಲಿ ಏನು ನಡೆಯುತ್ತಿದೆಯೆಂಬ ಅರಿವಿಲ್ಲದೆ ಹೊರಜಗತ್ತಿನಲ್ಲಿ ಎಲ್ಲರೂ ನಿಶ್ಚಿಂತೆಯಿಂದ ಮಲಗಿದ್ದಾರೆ. ಹಾಗೆ ಹೇಳುತ್ತಿರುವಾಗ ಕವಿ ’ದೆಸೆದೆಸೆಗೆ’ ಎಂಬ ಪದ ಪ್ರಯೋಗ ಮಾಡುತ್ತಾರೆ ಆ ಮೂಲಕ ಬಾಣಂತಿ ಕೋಣೆಯ ಕ್ರಿಯೆಗೆ ಸಾರ್ವತ್ರಿಕತೆಯನ್ನು ಕೊಡುತ್ತಾ ಅದನ್ನು ಮನೆಯಿಂದಾಚೆಗೂ ವಿಸ್ತರಿಸುತ್ತಾರೆ. ’ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಇನ್ನೊಂದು ಕವಿವಾಣಿಯ ಜೊತೆ ಈ ಸಂದರ್ಭವನ್ನು ಹೋಲಿಸಬಹುದು. ಜಗತ್ತು ತನ್ನ ಧೈನಂದಿನ ಕ್ಷುದ್ರತೆಗಳಲ್ಲಿ ಮುಳುಗಿದೆ.ಆ ಉದಾಸೀನತೆಯನ್ನು ’ ’ಮಾತಾಡದೆಯೆ, ನೋಡದೆಯೇ’ ಎಂಬ ಪದಗಳಲ್ಲಿ ತಂದಿದ್ದಾರೆ.
ಈ ಕ್ರಿಯೆಗಳು ತಪ್ಪೇ? ಸರಿಯೇ? ಮನುಕುಲದ ಮೂಲ ಪ್ರತಿಮೆ [ಆರ್ಕಿಟೈಪ್] ತಾಯಿಯ ಕ್ರಿಯೆಯನ್ನು ಹೇಗೆ ವ್ಯಾಖ್ಯಾನಿಸುವುದು?!

ಮೊದಲ ಓದಿಗೆ ಈ ಕವನ ಒಂದು ಬಾಣಂತಿ ಕೋಣೆಯ ಚಿತ್ರಣವನ್ನು ಕೊಡುತ್ತದೆಯೆಂದು ಹಿಂದೆಯೇ ಹೇಳಿದ್ದೇನೆ..ತುಂಬಾ ಸರಳವಾದ ಕವನ. ಕವಿಯೇ ಹೇಳುವಂತೆ ಸಣ್ಣ ಸಂಗತಿ. ಆದರೆ ಮೊದಲ ಮೂರುವರೆ ಸಾಲುಗಳು ಮತ್ತು ಕೊನೆಯ ನಾಲ್ಕು ಸಾಲುಗಳು ಈ ಚೌಕಟ್ಟನು ಮೀರಿ ಬೆಳೆಯುತ್ತದೆ ಮತ್ತು ಉಳಿದ ಸಾಲುಗಳಲಿ ನಡೆಯುವ ಕ್ರಿಯೆಯೊಡನೆ ಅಂತರ್ ಸಂಬಂಧ ಹೊಂದುತ್ತದೆ. 

ಅದು ಇರುಳು ಮಾತ್ರವಲ್ಲ, ನಟ್ಟಿರುಳು. ಕಪ್ಪಾದ ಮೋಡ. ಕಪ್ಪದ ಮೋಡವೆಂದರೆ ಮಳೆ ಮೋಡ. ಅದು ಮಳೆಯನ್ನು ಹೊತ್ತುಕೊಂಡಿರುವ ನೀರು ಮೋಡ. ಇಂತಹ ಮೋಡದ ಮಧ್ಯೆ ಹುಣ್ಣಿಮೆಯ ಚಂದಿರ ಬಂದಿದ್ದಾನೆ..
ಆ ಬಾನಿನ ಸೌಂದರ್ಯವನ್ನು ಇಲ್ಲಿ ಮಲಗಿರುವ ಮಗುವಿನೊಡನೆ ಹೋಲಿಸಿ ನೋಡಿ;
ಹಾಗೆ ಹೋಲಿಸುವಾಗ ಎಲ್ಲೋ ಮೂಲೆಯಲ್ಲಿರುವ ಸಣ್ಣನೆಯ ದೀಪದ ಬೆಳಕಿನಲ್ಲಿ ಆ ಮಗುವನ್ನು ನೋಡುತ್ತಿರುವ ಕವಿಯನ್ನು ಕಲ್ಪಿಸಿಕೊಳ್ಳಿ. ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣು ತೆರೆದಿರುವುದನ್ನು ಕವಿ ಈ ಮಗುವಿನಲ್ಲಿ ಕಾಣುತ್ತಿದ್ದಾರೆ. ಬಹುಶಃ ಅದನ್ನು  ನಾವು ಹೀಗೆ ಹೇಳಬಹುದು,  ಹಾಗೆ ನಮಗೆ ಹೇಳಲು ಸಾಧ್ಯವಾಗುವುದು ನೀರ್-ತುಂಬಿ ಎಂಬ ಶಬ್ದ. ಈ ಶಬ್ದ ಹಲವು ಅರ್ಥ ಸಾಧ್ಯತೆಗಳನ್ನು ಹೊಂದಿದೆ. ಅಲ್ಲಿ ನೀರ್-ತುಂಬಿ ಅಂದರೆ ಮೋಡ. ಇಲ್ಲಿ ಮಗುವಿನ ಕಣ್ಣು. ಅದು ತುಂಬಿಯಂತ ಚಂಚಲವಾದ ಕಣ್ಣುಗಳು. ಪುಟ್ಟ ಮಕ್ಕಳ ಕಣ್ಣು ಯಾವಾಗಲೂ ನೀರು ತುಂಬಿಕೊಂಡಂತೆ, ಶುಭ್ರ ಕೊಳಗಳ ಹಾಗೆ ಕಾಣುತ್ತದೆ.ಅದು ತಾರೆಯ ಹಾಗೆ ಹೊಳೆಯುತ್ತಿರುತದೆ. ಮೋಡದಂತಹ ಕಪ್ಪಾದ ಕೂದಲ ಮರೆಯಲ್ಲಿ ಹೊಳೆಯುವ ಕಣ್ಣುಗಳು. ಅದು ಬರಿಮೈಲಿ ಮಲಗಿದೆ ನೀಲ ಆಕಾಶದ ನಡುವೆ ಹೊಳೆಯುವ ತಾರೆ ಕಂಗಳ ಚಂದ್ರನ ಹಾಗೆ.
ಮಗುವಿನ ಪಕ್ಕ ತಾಯಿಯಿದ್ದಾಳೆ. ಆಕೆ ಮಲಗಿದ್ದಾಳೆ; ನಿದ್ದೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿದ್ದಾಳೆ ಬೆಳದಿಂಗಳಿನಂತೆ.   ಮಧ್ಯಂತರ ಸ್ಥಿತಿ, ಅಯೋಮಯ ಸ್ಥಿತಿ.   

ಇಷ್ಟೆಲ್ಲಾ ಅರ್ಥ ಸಾಧ್ಯತೆಗಳುಳ್ಳ ಈ ಕವನ ’ಸಣ್ಣ ಸಂಗತಿ’ಯೇ? ಅಲ್ಲಾಂತ ನಮಗೆ ಗೊತ್ತು, ನಿಮಗೂ ಗೊತ್ತು!


[ ಜನವರಿ ೨೫ರಂದು ಮಂದ್ಯದಲ್ಲಿ ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ನೂರನೇ ಹುಟ್ಟುಹಬ್ಬದ ಪ್ರಯುಕ್ತ ’ಅನೇಕ’ದ ಗೆಳೆಯರು ’ನೂರರ ಸಂಭ್ರಮ’ ಎಂಬ ಒಂದು ದಿನದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಆ ಸಂದರ್ಭದಲ್ಲಿ ಒಲವಿನ ಕವಿಯ ಕವನಗಳ ಮುರುಓದಿನ ಪುಸ್ತಕವೊಂದನ್ನು ತಂದಿದ್ದರು. ಆ ಪುಸ್ತಕ ’ಹೂಬುಟ್ಟಿ’ ಗಾಗಿ ಬರೆದ ಪುಟ್ಟ ಲೇಖನವಿದು.
ಕವನ ಓದಲು ಆರಂಭಿಸುತ್ತಿರುವ ಹೊಸ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಬರೆದಿದ್ದೇನೆ.. ಕವನದ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ನಾನು ಮಾಡಿಲ್ಲ!]