Wednesday, October 19, 2011

ಕಟಕಟೆಯಲ್ಲಿ ಯಡ್ಡಿ- ನೋಡಿದ್ದು, ಕಾಡಿದ್ದು


ನಿನ್ನೆ ಇಡೀ ದಿವಸ ನಮ್ಮ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ದೊಂಬರಾಟ ನಡೆಯಿತು. ಆ ದೊಂಬರಾಟ ನಿನ್ನೆ ಆರಂಭವಾಗಿದ್ದೇನಲ್ಲ. ಎಂದೋ ಆರಂಭವಾಗಿದ್ದು ನಿನ್ನೆ ಉತ್ತುಂಗಕ್ಕೇರಿತ್ತು. ಇಂದೂ ದೊಂಬರಾಟ ಮುಂದುವರಿದಿದೆ….

ನಿನ್ನೆಯ ಪ್ರಹಸನದಲ್ಲಿ ಮೂರು ಘಟನೆಗಳು ನನ್ನ ಗಮನ ಸೆಳೆದವು. ಒಂದು ತುಮಕೂರಿನ ಸಿದ್ಧಗಂಗಾ ಮಠದ ಸ್ವಾಮಿಗಳು ಯಡಿಯೂರಪ್ಪನವರ ಆರೋಗ್ಯ ವಿಚಾರಿಸಲು ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿದ್ದು. ಎರಡು, ಹಿರಿಯ ರಾಜಕಾರಣಿ,ಸಮಾಜವಾದಿ ಚಿಂತಕ ಕೆ.ಎಚ್.ರಂಗನಾಥ್ ವಿಧಿವಶರಾದದ್ದು. ಇನ್ನೊಂದು, ನ್ಯಾಯಾಲಯದ ಆಣತಿಯನ್ನೇ ಅಣಕಿಸುವಂತೆ ಜಯದೇವದಿಂದ ವಿಕ್ಟೋರಿಯಾ ಆಸ್ಪತ್ರೆಗೆ ಪೇಷೆಂಟ್ ಯಡಿಯೂರಪ್ಪನವರು ಜಾರಿಕೊಂಡದ್ದು ಮತ್ತು ಅದನ್ನು ಲೈವ್ ಕಾಮೆಂಟ್ರಿಯಂತೆ ದೃಶ್ಯ ಮಾಧ್ಯಮದವರು ಬಿತ್ತರಿಸಿದ್ದು.

ಕೆ.ಎಚ್.ರಂಗನಾಥ ತೀರಿಕೊಂಡರು ಎಂದಾಗ ಅವರ ಬಗ್ಗೆ ಹಿಂದೆ ಹಿರಿಯ ಪತ್ರಕರ್ತರೊಬ್ಬರು ಹೇಳಿದ ಘಟನೆಯೊಂದು ನೆನಪಾಯಿತು..ಅದು ಅವರು ವಿಧಾನ ಸಬಾ ಅಧ್ಯಕ್ಷರಾಗಿದ್ದ ಸಮಯ. ಅವರ ಛೇಂಬರಿನಲ್ಲಿ ಇವರು ಮಾತಾಡುತ್ತಾ ಕುಳಿತ್ತಿದ್ದರಂತೆ. ಬಿಳ್ಕೊಡಲೆಂದು ಎದ್ದು ನಿಂತಾಗ ಏನೋ ತಗುಲಿ ಅವರ ಚಪ್ಪಲಿ ಕಿತ್ತು ಹೋಯಿತಂತೆ. ಹೊರಗೆಲ್ಲೋ ಹೋಗಬೇಕಾದ ಕಾರ್ಯಕ್ರಮವಿದ್ದುದರಿಂದ ಅನಿವಾರ್ಯವಾಗಿ ತಮ್ಮ ಪಿ.ಎ ಯನ್ನು ಕರೆದು ತಮಗೊಂದು ಚಪ್ಪಲಿ ತರುವಂತೆ ಹೇಳಿ ಆ ಪತ್ರಕರ್ತರನ್ನು ಇನ್ನೂ ಸ್ವಲ್ಪ ಹೊತ್ತು ತಮ್ಮಲ್ಲೇ ಉಳಿಸಿಕೊಂಡರಂತೆ. ಪಿ.ಎ ಸುಮಾರು ಎಂಟುನೂರು ರೂಪಾಯಿ ಬೆಲೆಬಾಳುವ ಚಪ್ಪಲಿಯನ್ನು ತಂದು ಅವರ ಮುಂದಿಟ್ಟಾಗ ಅವರು, ಇಂತಹ ದುಬಾರಿ ಬೆಲೆಯ ಚಪ್ಪಲಿಯನ್ಯಾಕೆ ತಂದೆಯೆಂದು ಅವನಿಗೆ ಸಿಕ್ಕಾಪಟ್ಟೆ ಬೈದರಂತೆ.ಬೈದದ್ದು ಮಾತ್ರವಲ್ಲಾ ಶಿವಾಜಿನಗರಕ್ಕೆ ಕಳುಹಿಸಿ ೭೦ ರೂಪಾಯಿಯ ಚಪ್ಪಲಿಯನ್ನು ತರಿಸಿಕೊಂಡರಂತೆ. ಅಂತಹ ಸರಳ ಜೀವಿಯನ್ನು ನಾಳೆ ಆಕ್ರಮ ಸಂಪತ್ತು ಗಳಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣೆಯನ್ನೆದುರಿಸಲು ಕರ್ನಾಟಕಕ್ಕೆ ಆಗಮಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಳ ಸಂಗ್ರಹದಲ್ಲಿದ್ದ ೭೫೦ ಜೊತೆ ಚಪ್ಪಲಿಯನ್ನೊಮ್ಮೆ ಹೋಲಿಸಿ ನೋಡಿಕೊಳ್ಳಿ!

ಸಮಾಜವಾದಿ ಚಿಂತನೆಯ ಹಿನ್ನೆಲೆಯಿದ್ದ, ದಲಿತರ ಗಟ್ಟಿ ಧ್ವನಿಯ, ನಿಷ್ಠುರವಾದಿ ಕೆ.ಎಚ್. ಕೊನೆಯ ತನಕ ತೀರಾ ಸರಳವಾಗಿಯೇ ಬದುಕಿದರು. ಬೆಂಗಳೂರಿನ ನವರಂಗ್ ಪಕ್ಕದ ಪ್ರಕಾಶ್ ನಗರದಲ್ಲಿ ಪುಟ್ಟ ಮನೆಯೊಂದರಲ್ಲಿ ಬಾಳಿ ಬದುಕಿದ ಈ ಹಿರಿಯ ರಾಜಕಾರಣಿಯ ಅಂತಿಮ ದರ್ಶನಕ್ಕೆ ಯಾವ ಸ್ವಾಮೀಜಿಯೂ ಬರಲಿಲ್ಲ. ಆದರೆ ಅದೇ ಸಮಯಕ್ಕೆ ಜಯದೇವ ಆಸ್ಪತೆಯಲ್ಲಿ ಪವಡಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನೋಡಲು ತುಮಕೂರಿನ ಸಿದ್ಧಗಂಗಾ ಮಠಾದೀಶ ಶಿವಕುಮಾರ ಸ್ವಾಮೀಜಿ ಆಗಮಿಸಿದ್ದರು!

ಇದೇ ಸಂದರ್ಭದಲ್ಲಿ ಪತ್ರಕರ್ತರೊಭ್ಭರು ಹೇಳಿದ ಮಾತೊಂದು ನೆನಪಾಗುತ್ತಿದೆ; ’ಬೀದರಿನಲ್ಲಿ ಲಿಂಗ ಸ್ವಲ್ಪ ಅಲ್ಲಾಡಿದರೂ ಸಾಕು ಚಾಮರಾಜ ನಗರದಲ್ಲಿನ ಪಾಣಿಪೇಠ ಅದಕ್ಕೆ ಪ್ರತಿಕ್ರಿಯಿಸುತ್ತೆ’ ಇದನ್ನು ವಿವರಿಸಿ ಹೇಳಬೇಕಿಲ್ಲ ಅನ್ನುತ್ತೆ. ಹೇಳಲೇ ಬೇಕಾದರೆ ಮೂರು ವರ್ಷದ ಹಿಂದೆ ಮೈಸೂರು ದಸರಾ ಉದ್ಘಾಟನೆಗೆ ಆಗ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಸಿದ್ದಗಂಗಾ ಶ್ರೀಗಳನ್ನು ಕೇಳಿಕೊಂಡಿದ್ದರು. ಅವರು ಕೂಡಾ ಒಪ್ಪಿಕೊಂಡಿದ್ದರು. ಆದರೆ ಯಡಿಯೂರಪ್ಪನವರಿಗೆ ಮಾತು ಕೊಟ್ಟಂತೆ ಕುಮಾರ ಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ. ಸಿಟ್ಟುಗೊಂಡ ಸ್ವಾಮಿಗಳು ಉದ್ಗಾಟನೆಗೆ ಬರಲಿಲ್ಲ!

ಈಗಲೂ ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಜೈಲಿನಿಂದ ಹೊರತರಲು ಲಿಂಗಾಯಿತ ಸಮುದಾಯ, ಮಠಮಾನ್ಯರು,ಪತ್ರಕರ್ತರಾದಿಯಾಗಿ ಎಲ್ಲರೂ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಇನ್ನು ನಿನ್ನೆ ದೃಶ್ಯ ಮಾಧ್ಯಮದವರ ವರದಿಗಾರಿಕೆ ಹೇಗಿತ್ತೆಂದರೆ ಅವರೆಲ್ಲಾ ಕ್ರಿಕೆಟ್ ಕಾಮೆಂಟ್ರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆನೋ ಎಂದು ಭಾಸವಾಗುತ್ತಿತ್ತು. ಆದರೆ ತಮ್ಮ ವೃತ್ತಿ ಭಾಂದವರಲ್ಲೇ ಹಲವರ ಹೆಸರುಗಳು ಲೋಕಾಯುಕ್ತ ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ನಾಳೆ ಅವರನೇನಾದರೂ ವಿಚಾರಣೆಗೆ ಒಳಪಡಿಸಿದರೆ ಇದೇ ಉತ್ಸಾಹದಿಂದ ಇವರು ವರದಿ ಮಾಡಬಲ್ಲರೇ?

ಬ್ರಷ್ಟಾಚಾರ. ಸ್ವಜನ ಪಕ್ಷಪಾತವೆಂಬುದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ.

ನಿನ್ನೆಯವರೆಗೆ ಯಡ್ಡಿಯ ವಿರುದ್ಧ ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದ ಕುಮಾರಸ್ವಾಮಿ ನಿನ್ನೆ ಮದ್ಯರಾತ್ರಿ ಕಳ್ಳರಂತೆ ಯಡ್ಡಿಯನ್ನು ಬೇಟಿ ಮಾಡಿದ್ದಾರೆ. ಅಲ್ಲಿ ಅವರು ಯಾವ ತಂತ್ರ ಹಣೆದರೋ ಗೊತ್ತಿಲ್ಲ. ರಾಜಕೀಯದಲ್ಲಿ ಯಾರೂ ವಿರೋಧಿಗಳಲ್ಲ!

ಇಂದಿನ ಕಥೆ ಕೇಳಿ, ಅದು ಇನ್ನೂ ಸ್ವಾರಸ್ಯಕರವಾಗಿದೆ. ಕುಮಾರ ಸ್ವಾಮಿಯ ಮೇಲೆ ಐ.ಪಿ.ಸಿ ೪೯೪ರ ಅಡಿಯಲ್ಲಿ ದಿಪತ್ನಿತ್ವದ ಆರೋಪದಡಿಯಲ್ಲಿ ಕೇಸ್ ದಾಖಲಾಗಿದೆ. ನಗರದ ಲಾಯರ್ ಒಬ್ಬರು, ಮೊದಲನೇ ಹೆಂಡತಿಯಿರುವಾಗಲೇ ಇನ್ನೊಂದು ಮದುವೆಯಾಗಿರುವ ಅಪರಾಧಕ್ಕಾಗಿ ಕುಮಾರಸ್ವಾಮಿಯವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಕೇಸ್ ದಾಖಲಿಸಿದ್ದಾರೆ.

ನಮ್ಮ ಗೃಹ ಸಚಿವ ಸಾಮ್ರಟ್ ಅಶೋಕ್ ಮೇಲೆ ಡಿನೋಟಿಫಿಕೇಶನ್ ಕೇಸ್ ದಾಖಲಾಗಿದೆ.

ಅಂತೂ ಬಿ.ಜೆ.ಪಿಯ ನಾಯಕರೆಲ್ಲಾ ನ್ಯಾಯಾಂಗದ ಮುಂದೆ ಕೈಕಟ್ಟಿ ನಿಲ್ಲುವ ಪ್ರಸಂಗ ಬಂದೊದಗುತ್ತಿದೆ.

ಅಂತೂ ನ್ಯಾಯಾಂಗ ಹಿಂದೆಂದೂ ಇಲ್ಲದಷ್ಟು ಕ್ರಿಯಾಶೀಲವಾಗಿದೆ. ಜನತೆ ಕಾರ್ಯಾಂಗ, ಶಾಸಕಾಂಗ,ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಪತ್ರಿಕಾರಂಗದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದರು. ಸಿನಿಕರಾಗಿದ್ದರು. ಆದರೆ ಈಗ ಅವರಲ್ಲಿ ಮತ್ತೆ ಭರವಸೆ ಮೂಡುತ್ತಿದೆ. ಅದು ಸಮೂಹ ಪ್ರಜ್ನೆಯಾಗಿ ಹೊರಹೊಮ್ಮಬೇಕು. ಅದು ಮುಂಬರುವ ಚುನಾವಣೆಯಲ್ಲಿ ಮತಗಳಾಗಿ ಹೊರಹೊಮ್ಮಬೇಕು ಹಾಗಾಗಲು ಸಾಧ್ಯವೇ? ನಮ್ಮ ಜಾತಿ ವ್ಯವಸ್ಥೆಯನ್ನು ನೋಡಿದರೆ ಆ ಬಗ್ಗೆ ಸಂಶಯಗಳಿವೆ.

ಪ್ರಗತಿಪರ ಚಳುವಳಿಗಳಿಲ್ಲ; ಹೋರಾಟಗಳಿಲ್ಲ, ಚಿಂತಕರಿಲ್ಲ, ಆದರ್ಶ ವ್ಯಕ್ತಿತ್ವಗಳಿಲ್ಲ ಒಟ್ಟಿನಲ್ಲಿ ಹೇಳಬೇಕೆಂದರೆ ಮುಂದೆ ಗುರಿಯಿಲ್ಲ, ಹಿಂದೆ ಗುರುವಿಲ್ಲ. ಅಡಿಗರು ಹೇಳಿದಂತೆ, ’ಹೆಳವನ ಹೆಗಲ ಮೇಲೆ ಕುರುಡ ಕುಳಿತ್ತಿದ್ದಾನೆ. ದಾರಿ ಸಾಗುವುದೆಂತೋ ನೋಡಬೇಕು’

Monday, October 10, 2011

ಪ್ರೀತಿಯೆಂಬ ಮಾಯಾಮೃಗ


ಅವರು ಕನ್ನಡದ ಖ್ಯಾತ ಪತ್ರ್ಕರ್ತರು.ಅವರಿಗೊಬ್ಬ ಮಗನಿದ್ದ. ಆತನಿಗೆ ಆಗ ಖ್ಯಾತಿಯಲ್ಲಿದ್ದ ಚಿತ್ರನಟಿ ಮೀನಾಕ್ಷಿ ಶೇಷಾದ್ರಿಯೆಂದರೆ ಹುಚ್ಚು ಮೋಹ. ಆತ ಎಲ್ಲರೆದುರು ’ಮೀನಾಕ್ಷಿ ನನ್ನನ್ನು ಪ್ರೀತಿಸುತ್ತಿದ್ದಾಳೆ’ ಎಂದು ಹೇಳಿಕೊಳ್ಳುತ್ತಿದ್ದ. ಈಗ ತಾನೇ ಅವಳಿಗೆ ಪೋನ್ ಮಾಡಿದೆ, ಅವಳು ತನ್ನನ್ನು ಬಾಂಬೆಗೆ ಬರಹೇಳಿದ್ದಾಳೆ. ಅಂತೆಲ್ಲಾ ತನ್ನ ಸೇಹಿತರೆದುರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ.

ಸ್ವಲ್ಪಮಟ್ಟಿಗೆ ಆತ ಅವನು ಮಾನಸಿಕ ಅಸ್ವಸ್ಥ. ಹಾಗಾಗಿ ಬೇರೆಯವರಿಗೆ ಆತ ಲೇವಡಿಯ ವಸ್ತುವಾಗಿದ್ದ. ಆತನ ಭ್ರಮಾ ಲೋಕದಲ್ಲಿ ಆತ ಮತ್ತು ಮೀನಾಕ್ಷಿ ಶೇಷಾದ್ರಿ ಪರಸ್ಪರ ಪ್ರೇಮಿಸುತ್ತಿದ್ದರು. ಆದರದು ನಿಜವಾಗುವ ಸಾಧ್ಯತೆಯೇ ಇರಲಿಲ್ಲ. ಇದನ್ನು ಆತನಿಗೆ ತಿಳಿಸಿ ಹೇಳಿದರೂ ನಂಬುವ ಸ್ಥಿತಿಯಲ್ಲಿ ಆತನಿರಲಿಲ್ಲ. ಅದು ಅವನೇ ಸೃಷ್ಟಿಸಿಕೊಂಡಿರುವ ಜಗತ್ತು.

ನನ್ನ ಗೆಳತಿಯೊಬ್ಬಳು ಒಂದು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ತರುಣನೊಬ್ಬ ಆಕೆಯಲ್ಲಿ ಅನುರಕ್ತನಾದ. ಆದರೆ ಅದನ್ನಾತ ಅವಳಲ್ಲಿ ಹೇಳಿಕೊಳ್ಳಲಿಲ್ಲ. ಆಕೆ ಇನ್ನ್ಯಾರನ್ನೋ ಇಷ್ಟಪಟ್ಟಳು; ಪ್ರೀತಿಸಿದಳು. ಅವರಿಬ್ಬರೂ ಜೊತೆಯಲ್ಲಿ ಓಡಾಡಲು ಶುರುಮಾಡಿದರು. ಇವನಿಗೆ ಅದನ್ನು ಸಹಿಸಲಾಗಲಿಲ್ಲ. ಆತ ಕೆಲಸ ಬಿಟ್ಟು ಇನ್ನೆಲ್ಲಿಗೋ ಹೊರಟು ಹೋದ. ಇಲ್ಲಿ ಆ ಹುಡುಗಿ ಮದುವೆಯಾದಳು. ಮಕ್ಕಳನ್ನು ಪಡೆದಳು. ಅನ್ಯೋನ್ಯ ದಾಂಪತ್ಯ ನಡೆಸುತ್ತಿದ್ದಳು.

ಒಂದು ದಿನ ಆ ಹುಡುಗನ ಬಗ್ಗೆ ಇವಳಿಗೆ ವಿವರಗಳು ದೊರಕಿದವು. ಮಧ್ಯವಯಸ್ಸನ್ನು ದಾಟುತ್ತಿರುವ ಆತ ಇನ್ನೂ ವಿವಾಹವಾಗದೇ ಕೇವಲ ಇವಳ ಆರಾಧನೆಯಲ್ಲೇ ಬದುಕು ನಡೆಸುತ್ತಿದ್ದಾನೆ ಎನ್ನುವುದು ತಿಳಿಯಿತು. ತನ್ನಿಂದಾಗಿ ಒಬ್ಬ ಒಳ್ಳೆಯ ಮನಸಿನ, ಪ್ರತಿಭಾವಂತ ಹುಡುಗನ ಬದುಕು ಹೀಗಾಯ್ತಲ್ಲಾ ಎಂದು ಆಕೆ ಈಗ ಕೊರಗುತ್ತಿದ್ದಾಳೆ ಆಕೆ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ.

ಇದಕ್ಕೆಲ್ಲಾ ಯಾರು ಹೊಣೆ?

ಏಕಮುಖವಾದ ಪ್ರೀತಿಯೇ ಹಾಗೆ. ಅದು ಒಬ್ಬರ ಮನಸ್ಸಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದು ಹೆಮ್ಮರವಾಗುತ್ತದೆ. ಅವರದೇ ಭಾವನೆಯ ಜಗತ್ತಿನಲ್ಲಿ ಅವರೇ ಚಕ್ರವರ್ತಿಗಳು.

ಭೂಮಿಯ ಒಡಲಲ್ಲಿ ನೀರಿನ ಸೆಲೆ ಹೇಗೆ ಅತ್ಯಂತ ಸಹಜವಾಗಿ ಇದೆಯೋ ಹಾಗೆಯೇ ಪ್ರತಿಯೊಬ್ಬ ಮನುಷ್ಯನ ಹೃದಯಾಂತರಾಳದಲ್ಲೂ ಪ್ರೀತಿಯ ಒರತೆ ಇದ್ದೇ ಇರುತ್ತದೆ. ಅನುಕೂಲ ಪರಿಸ್ಥಿತಿಯಲ್ಲಿ ಅದು ಉಕ್ಕಿ ಹರಿಯಲಾರಂಭಿಸುತ್ತದೆ. ಹದಿಹರೆಯದ ದಿನಗಳಲ್ಲಿ ಈ ಒರತೆ ಒಸರಲು ಆರಂಭಗೊಳ್ಳುತ್ತದೆ. ಯಾರೋ ತನ್ನನ್ನು ಗಮನಿಸುತ್ತಿದ್ದಾರೆ, ಇನ್ಯಾರಿಗೋ ತಾನು ಇಷ್ಟವಾಗುತ್ತಿದ್ದೇನೆ, ಹಾಗಾಗಿ ತಾನು ಇನ್ನಷ್ಟು ಆಕರ್ಷಕವಾಗಿ ಕಾಣಬೇಕು, ತನ್ನ ನಡೆ-ನುಡಿ-ಅಭಿರುಚಿಗಳಲ್ಲಿ ಬದಲಾವಣೆಯಾಗಬೇಕು-ಎಂದೆಲ್ಲಾ ಹುಡುಗ, ಹುಡುಗಿಯರು ಭಾವಿಸಿಕೊಳ್ಳುತ್ತಾರೆ. ಕನ್ನಡಿಯ ಮುಂದೆ ದಿನದರ್ಧ ಭಾಗವನ್ನು ಕಳೆಯುವ ಕಾಲ ಇದು.

ಸಾಹಿತ್ಯದ ಪರಿಭಾಷೆಯಲ್ಲಿ ನಾರ್ಸಿಸಂ ಅಥವಾ ಆತ್ಮರತಿ ಎಂದು ಕರೆಯಿಸಿಕೊಳ್ಳುವ ಸ್ವಮೋಹಿತ ಸ್ಥಿತಿ ಇದು. ಅಂದರೆ ತನ್ನನ್ನೇ ತಾನು ಅತಿಯಾಗಿ ಪ್ರೀತಿಸಿಕೊಳ್ಳುವ ಅವಧಿ. ನಮ್ಮ ಹೆಚ್ಚಿನ ಹುಡುಗ-ಹುಡುಗಿಯರು ಏಕಮುಖವಾದ ಪ್ರೀತಿಗೆ ಬೀಳುವುದೇ ಈ ಕಾಲದಲ್ಲಿ.

ಹುಡುಗನೆದುರು ಹುಡುಗಿ ಸಮೀಪದಲ್ಲಿ ಸುಳಿದರೂ ಸಾಕು, ಅವನ ಮೈ-ಮನಸು ಆಳಿಬಿಡುತ್ತದೆ. ಕಾರಣವಿಲ್ಲದೆ ಮನಸ್ಸು ಒಮ್ಮೊಮ್ಮೆ ಖುಷಿಯಿಂದ ನಲಿದಾಡುತ್ತಿದ್ದರೆ, ಇನ್ನೊಮ್ಮೆ ಯಾವುದೋ ಸಂಕಟದಿಂದ ವಿಲವಿಲನೆ ಒದ್ದಾಡುತ್ತಿರುತ್ತದೆ. ಯಾರೋ ಒಬ್ಬರು ಪ್ರೀತಿಯಿಂದ ಮಾತಾಡಿಸಿದರೆ, ಒಂಚೂರು ನಕ್ಕು ಬಿಟ್ಟರೆ ಅವರಿಗೆ ತನ್ನಲ್ಲಿ ಆಸಕ್ತಿಯಿದೆ, ಅದು ಪ್ರೀತಿಯೇ ಇರಬೇಕು ಎಂದು ಹುಡುಗ-ಹುಡುಗಿಯರು ಭ್ರಮಿಸಿಬಿಡುತ್ತಾರೆ. ಪ್ರಪೋಸ್ ಮಾಡಿದರೆ ಹೇಗೆ ಎಂದು ಆ ಬಗ್ಗೆ ತಾಲೀಮ್ ನಡೆಸುತ್ತಾರೆ. ಕೆಲವು ಭೂಪರು ಪ್ರಪೋಸ್ ಮಾಡಿಯೂ ಬಿಡುತ್ತಾರೆ. ’ಭೂಪರು’ ಅಂತ ಹುಡುಗರ ಬಗ್ಗೆಯೇ ಯಾಕೆ ಹೇಳುತ್ತಿದ್ದೇನೆ ಎಂದರೆ, ಅವರಲ್ಲೊಂದು ಭಂಡ ಧೈರ್ಯ ಇರುತ್ತದೆ. ಆದರೆ ಹುಡುಗಿಯರಲ್ಲಿ ಇಂಥ ದಿಟ್ಟತನ ಇರುವುದಿಲ್ಲ. ಅವರದು ಹಿಂಜರಿಕೆಯ ಸ್ವಭಾವ. ಪ್ರೀತಿ, ಪ್ರೇಮದ ವಿಷಯದಲ್ಲಿ, ಅದೂ ಹದಿಹರೆಯದ ಸಂದರ್ಭದಲ್ಲಿ ಅವರು ತಾವಾಗಿಯೇ ಮುಂದುವರಿಯುವುದು ಕಡಿಮೆ.

ಹುಡುಗನೊಬ್ಬ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಂಡರೆ ಸರಿ. ಹೋಟೇಲ್,ಸಿನೇಮಾ, ಪಾರ್ಕ್, ಪಿಕ್ ನಿಕ್ ಎಂದು ಹುಡುಗನ ಒಂದಷ್ಟು ದುಡ್ಡು ಖರ್ಚೂ ಆಗುತ್ತೆ; ಒಂದಷ್ಟು ಪೆಟ್ರೋಲ್ ಉರಿಯುತ್ತೆ. ಕಾಲೇಜು ಹಂತ ಮುಗಿದು ಗಂಭೀರ ಓದು ಅಥವಾ ಬದುಕಿಗೆ ತಿರುಗಿಕೊಂಡಾಗ ಈ ಪ್ರೀತಿಯು ಸವಕಲಾಗಿರುತ್ತೆ. ಇಂಥ ಹದಿಹರೆಯದ ಪ್ರೀಮ ಪ್ರಕರಣಗಳು ಬಾಳುವುದುದು ಕಡಿಮೆ.

ಒಂದು ವೇಳೆ ಹುಡುಗನೊಬ್ಬ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಳ್ಳದಿದ್ದರೆ, ಕೆಲವು ಸಂದರ್ಭಗಳಲ್ಲಿ ಅದು ಅತಿರೇಕಕ್ಕೆ ತಿರುಗಿದ್ದು ಇದೆ. ಮಂಗಳೂರಿನ ಶ್ರೀಮಂತ ಕುಟುಂಬದ ಹುಡುಗನೊಬ್ಬ ತನ್ನ ಸಹಪಾಠಿಯೊಬ್ಬಳೆಡೆಗೆ ಆಕರ್ಷಿತನಾದ. ಆಕೆ ಮುಗ್ಧ ಸ್ವಭಾವದ, ಚೆಲುವೆಯಾದ ಬಡಹುಡುಗಿ. ಆತ.ಸಿನೇಮಾ ಮಂದಿರದ ಮಾಲೀಕನೊಬ್ಬನ ಮಗ. ಯಾವ ಕೊರತೆಯೂ ಇಲ್ಲದ ಹುಡುಗ. ಇವಳು ಖಂಡಿತಾ ಒಪ್ಪಿಕೊಳ್ಳುತ್ತಾಳೆ ಎಂದು ಪ್ರಪೋಸ್ ಮಾಡಿದ. ಅವಳು ನಿರಾಕರಿಸಿದಳು. ಇವನಿಗೆ ಅದನ್ನು ತಡೆದುಕೊಳ್ಳಲಾಗಲಿಲ್ಲ. ಅವನ ’ಅಹಂ’ಗೆ ಬಿದ್ದ ಹೊಡೆತ ಅದು. ಅಂಗಲಾಚಿದ, ಬೇಡಿದ ಹುಡುಗಿ ಮನಸ್ಸು ಬದಲಾಯಿಸಲಿಲ್ಲ. ಹುಡುಗ ಮಾದಕ ವ್ಯಸನಗಳಿಗೆ ಬಿದ್ದ, ದುಶ್ಚಟಗಳಿಗೆ ದಾಸನಾದ. ಎಂಜಿನಿಯರಿಂಗ್ ಓದನ್ನು ಅರ್ಧದಲ್ಲಿ ಕೈಬಿಟ್ಟ. ಇಂದು ಆತ ಯಾವುದೋ ಚಿಕ್ಕ ಕಂಪೆನಿಯೊಂದರಲ್ಲಿ ಕೇವಲ ಮೂರು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದಾನೆ. ಒಂದು ಏಕಮುಖವಾದ ಪ್ರೀತಿ ಅವನನ್ನು ಪ್ರಪಾತಕ್ಕೆ ತಳ್ಳಿಬಿಟ್ಟಿತ್ತು.

ಏಕಮುಖವಾದ ಪ್ರೀತಿ ಒಮೊಮ್ಮೆ ಏನೇನೋ ತಿರುವುಗಳನ್ನು ಪಡೆದುಬಿಡುತ್ತದೆ. ಸಾಮಾನ್ಯ ಮನುಷ್ಯನೂ ಅಬ್ ನಾರ್ಮಲ್ ಆಗಿ ವರ್ತಿಸಿಬಿಡುತ್ತಾನೆ. ಇದಕ್ಕೆ ಕಾರಣಗಳೇನಿರಬಹುದು? ಹಾಗೆ ನೋಡಿದರೆ ಅಕ್ಕ ಮಹಾದೇವಿ, ಮೀರಾಬಾಯಿಯವರದೂ ಏಕಮುಖವಾದ ಪ್ರೀತಿ ತಾನೇ? ಅವರ ಪ್ರೇಮದ ಆರಾಧನೆಯಲ್ಲಿ ಪ್ರತಿಸ್ಪಂದನ ಇರಲಿಲ್ಲ. ಆದರೂ ಅವರು ಪ್ರೀತಿಸುತ್ತಲೇ ಹೋದರು.

ಏಕಮುಖ ಪ್ರೀತಿಯ ಲಕ್ಷಣವೇ ಅದು. ಅಲ್ಲಿರುವುದು ಕೇವಲ ಅರ್ಪಣಾಭಾವ. ಪ್ರೀತಿಸುವ ವ್ಯಕ್ತಿ ಪ್ರೀತಿಸಲ್ಪಡುವ ವ್ಯಕ್ತಿಯಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಸರ್ವಸಮರ್ಪಣಾ ಭಾವ ಅದು. ಕರ್ಪೂರದ ಹಾಗೆ ಕರಗಿ ಹೋಗುವ ಆರಾಧನೆ. ಇದನ್ನು ನಾನು ಹದಿಹರೆಯದ ಕಾಮ ಮಿಶ್ರಿತವಾದ ಪ್ರೇಮಕ್ಕೆ ಸಂಬಂಧಿಸಿದಂತೆ ಹೇಳುತ್ತಿಲ್ಲ. ಪ್ರಭುದ್ದ ಮನಸ್ಸೊಂದು ವಿನಾ ಕಾರಣವಾಗಿ ಪ್ರೀತಿಯ ಅನುಭೂತಿಗೆ ಒಳಗಾಗುವ ಸನ್ನಿವೇಶವನ್ನು ಹೇಳುತ್ತಿದ್ದೇನೆ. ಇದು ಕೇವಲ ಮಾನಸಿಕವಾದ ಪ್ರೀತಿ ಎಂದು ಹೇಳುತ್ತಿಲ್ಲ. ಪ್ರೀತಿಯ ಅತ್ಯುನ್ನತ ಸ್ಥಿತಿಯಲ್ಲಿ ದೇಹ ಮತ್ತು ಮನಸ್ಸು ಎಂಬುದು ಬೇರೆ ಬೇರೆಯಾಗಿರುವುದಿಲ್ಲ. ಅವೆರಡೂ ಅವಿನಾಭಾವವಾದುದು.

ಕರ್ಪೂರದ ಹಾಗೆ ಕರಗಿ ಹೋಗುವ, ದೇಹ ಮತ್ತು ಆತ್ಮದ ಹಾಗೆ ಒಂದಾಗಿ ಬೆಸೆಯುವ ತುಡಿತದ ಈ ಪ್ರೇಮಿಯ ಮನಸ್ಸನ್ನು ಪ್ರೇಮಿಸಲ್ಪಡುವ ವ್ಯಕ್ತಿ ಅರಿಯದೆ ಹೋದರೆ, ಅಥವಾ ಅದನ್ನು ಅರಿಯಗೊಡುವ ಪ್ರಯತ್ನವನ್ನು ಈ ಪ್ರೇಮಿ ಮಾಡದೆ ಹೋದರೆ ಅದು ಒಂದು ಆರಾಧನೆಯಾಗಿಯೇ ಉಳಿದುಬಿಡುತ್ತದೆ; ಲೇಖನದ ಆರಂಭದಲ್ಲಿ ನಾನು ಹೇಳಿದ ನನ್ನ ಗುಪ್ತ ಪ್ರೇಮಿಯ ಹಾಗೆ. ಬಹುಶಃ ಆತ ತನ್ನ ಪ್ರೇಮವನ್ನು ತನ್ನಲ್ಲೇ ಬಚ್ಚಿಟ್ಟುಕೊಂಡ ಕಾರಣದಿಂದಾಗಿ ಆತ ಅಮರ ಪ್ರೇಮಿಯಾಗಿ ನಮ್ಮೆದುರು ಬಿಂಬಿತವಾಗಿದ್ದಾನೆ.

ಒಂದು ವೇಳೆ ಆತ ಬಾಯಿಬಿಟ್ಟು ಹೇಳಿದ್ದರೆ ಮಂಗಳೂರಿನ ಪ್ರೇಮಿಯ ಹಾಗೆ ತಿರಸ್ಕೃತನಾಗುವ ಸಂದರ್ಭವವೂ ಇದ್ದಿರಬಹುದು.

ಏಕಮುಖ ಪ್ರೀತಿಯ ತೊಡಕೇ ಅದು. ಮನುಷ್ಯನಿಗೆ ಯಾವಾಗಲೂ ಸುಲಭವಾಗಿ ಸಿಕ್ಕುವುದರ ಬಗ್ಗೆ ಒಂದು ರೀತಿಯ ಅಸಡ್ಡೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಆತ ತಿರಸ್ಕರಿಸಿ ಬಿಡುತ್ತಾನೆ. ಸಿಗಲಾರದಕ್ಕೆ ಬೆನ್ನು ಹತ್ತುತ್ತಾನೆ. ಅರ್ಪಿಸಿಕೊಳ್ಳಲು ಬಂದವರು ತಿರಸ್ಕೃತಗೊಂಡು ಜರ್ಜರಿತರಾಗುತ್ತಾರೆ.

ಏಕಮುಖವಾದ ಪ್ರೀತಿ ಒಮ್ಮೊಮ್ಮೆ ಮನುಷ್ಯನನ್ನು ರಾಕ್ಷಸತ್ವಕ್ಕೂ ಇಳಿಸಿಬಿಡುತ್ತದೆ. ಪ್ರೇಮಪ್ರಕರಣಗಳಿಗೆ ಸಂಬಂಧಿಸಿದ ಬೆದರಿಕೆ, ಹಲ್ಲೆ, ಕೊಲೆಗಳೆಲ್ಲಾ ಸಾಮಾನ್ಯವಾಗಿ ಏಕಮುಖ ಪ್ರೀತಿಯ ಪರಿಣಾಮಗಳೇ. ಒಬ್ಬರ ನಿರಾಕರಣೆ ಇನ್ನೊಬ್ಬರ ’ಅಹಂ’ ಅನ್ನು ಕೆರಳಿಸಿಬಿಡುತ್ತೆ. ತನಗೆ ಸಿಕ್ಕಲಾರದವಳು ಇನ್ನಾರಿಗೂ ದಕ್ಕಬಾರದು ಎಂಬ ಪೈಶಾಚಿಕ ಆಲೋಚನೆಯೇ ಇಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತದೆ. ಹುಡುಗಿಯರ ಮುಖಕ್ಕೆ ಆಸಿಡ್ ಎರಚಿದ ಪ್ರಕರಣಗಳಲ್ಲಂತೂ ಇಂತಹ ಸ್ಯಾಡಿಸ್ಟ್ ಮನಸ್ಸೇ ಮೃಗದಂತೆ ವರ್ತಿಸಿರುತ್ತದೆ.

ಒಂದು ಏಕಮುಖವಾದ ಪ್ರೀತಿ ಬಹಿರಂಗಗೊಂಡರೆ ಏನೇನೋ ಆಗಬಹುದು. ಸಂಬಂಧಪಟ್ಟ ಹೆಣ್ಣು-ಗಂಡುಗಳಲ್ಲಿ, ಹಿಂದೆಯೇ ಹೇಳಿದಂತೆ ಕೆಲವರು ಜೀವನ ಪ್ರೀತಿಯನ್ನು ಕಳೆದುಕೊಂಡು ದುಶ್ಚಟಗಳ ದಾಸನಾಗಬಹುದು. ಇಲ್ಲವೇ ಜೀವವಿರೋಧಿಯಾಗಿ ಸಮಾಜ ಕಂಟಕನಾಗಬಹುದು. ಇದೆಲ್ಲಾ ಋಣಾತ್ಮಕ ಅಂಶಗಳಾದವು. ಹಾಗಾದರೆ ಏಕಮುಖವಾದ ಪ್ರೀತಿಯೊಂದು ಪಾಸಿಟೀವ್ ಆಗಿ ಕೆಲಸ ಮಾಡಲಾರದೇ? ಯಾಕಿಲ್ಲ? ನಮ್ಮ ಸಾಹಿತಿ-ಕಲಾವಿದರ ಶ್ರೇಷ್ಟ ಸಾಧನೆಗಳತ್ತ ನೋಡಿ; ಬಹಳಷ್ಟು ಸಂದರ್ಭಗಳಲ್ಲಿ ಅವರೆಲ್ಲರ ಸಾಧನೆಯ ಹಿಂದೆಯೂ ಒಂದು ವಿಫಲ ಪ್ರೇಮ ಕಥೆಯಿರುತ್ತದೆ.

ಏಕಮುಖವಾದ ಪ್ರೀತಿ ಎನ್ನುವುದು ಕೇವಲ ಹದಿಹರೆಯದವರನ್ನು ಮಾತ್ರ ಆವರಿಸಿಕೊಳ್ಳುವ ಭಾವನೆಯೇ? ಖಂಡಿತಾ ಅಲ್ಲ. ಅದು ಎಲ್ಲಾ ವಯೋಮಾನದವರ ಮನಸ್ಸಿನಲ್ಲಿಯೂ ಹುಟ್ಟಿಕೊಳ್ಳುವ ಸಾಮಾನ್ಯ ಭಾವನೆ. ಅದಕ್ಕೆ ವಿವಾಹಿತರೂ ಕೂಡಾ ಹೊರತಲ್ಲ. ಯಾಕೆಂದರೆ ಪ್ರೀತಿ ಎನ್ನುವ ಅನೂಹ್ಯ ಭಾವನೆ ನಮ್ಮ ಉಸಿರಾಟದಷ್ಟೇ ಸಹಜವಾದುದು. ದೇಹಕ್ಕೆ ವಯಸ್ಸಾಯಿತು ಅಂದಮಾತ್ರಕ್ಕೆ ಉಸಿರಾಟದಲ್ಲಿ ವ್ಯತ್ಯಾಸವಾಗುತ್ತದೆಯೇ?

ವ್ಯಯಕ್ತಿಕ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ವ್ಯಕ್ತಿಯೊಬ್ಬ ಮದುವೆಯಾಗುತ್ತಾನೆ. ಮದುವೆಗೊಂದು ಚೌಕಟ್ಟಿದೆ. ಬಂಧ ಇದೆ-ಬಂಧನಗಳಿವೆ. ರೀತಿ ನೀತಿಯಿದೆ. ಆದರೆ ಮನಸ್ಸಿಗೆ ಯಾವುದೇ ಚೌಕಟ್ಟುಗಳಿಲ್ಲ. ಅದು ಹೇಗೆ ಬೇಕಾದರೂ ವಿಹರಿಸಬಹುದು. ಹಾಗಾಗಿ ಮದುವೆಯಾದ ವ್ಯಕ್ತಿ ಕೂಡಾ ಯಾರದೋ ಸೆಳೆತಕ್ಕೆ ಒಳಗಾಗಬಹುದು. ಮಾನಸಿಕವಾಗಿ ಅವರನ್ನು ಅವಲಂಬಿಸಿಬಿಡಬಹುದು.ಈ ಅವಲಂಬನೆ ಅವರ ದೈನಂದಿನ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ಆದರೆ, ಅದನ್ನು ಬಹಿರಂಗಗೊಳಿಸಿದರೆ ತಾನು ಸಾಮಾಜಿಕವಾಗಿ ಬಹಿಷ್ಕೃತಗೊಳ್ಳುವ, ಕುಟುಂಬದ ಅನಾದರಣೆಗೆ ಒಳಗಾಗುವ ಸಂಭವವಿರುವುದರಿಂದ ಆತ ಅದನ್ನು ತನ್ನಲ್ಲಿಯೇ ಅದುಮಿಟ್ಟುಕೊಳ್ಳಬಹುದು. ಒಮ್ಮೊಮ್ಮೆ ಅದು ಅಬ್ಸೆಷನ್ ಆಗಿಯೂ ಕಾಡಬಹುದು.

ಕನ್ನಡದ ಕಿರುತೆರೆಯ ಹಿರಿಯ ನಟರೊಬ್ಬರು ತಮ್ಮ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯೊಬ್ಬಳಲ್ಲಿ ಏಕಮುಖ ಪ್ರೀತಿಯೆನ್ನಬಹುದಾದ ಮಾನಸಿಕ ಅವಲಂಬನೆ ಹೊಂದಿರುವುದನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಇದೆಲ್ಲಾ ಮಾನವ ಸಹಜ ಭಾವನೆಗಳು. ಅದನ್ನು ನೈತಿಕತೆಯ ಪ್ರಶ್ನೆ ಮುಂದು ಮಾಡಿ ಸಂಬಂಧಪಟ್ಟವರನ್ನು ಅವಮಾನಿಸಬಾರದು..ಕೀಳಾಗಿ ಕಾಣಬಾರದು.

ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವವರ ಮನಸ್ಸಿನಲ್ಲಿ ಇಂತಹದೊಂದು ಭಾವನೆ ಮೊಳಕೆಯೊಡೆದಾಗ ಅವರು ಕಿಳರಿಮೆಯಿಂದ ನರಳುವುದನ್ನು ನಾನು ನೋಡಿದ್ದೇನೆ. ತಮ್ಮ ಪತ್ನಿಗೆ ಮೋಸ ಮಾಡುತ್ತಿದ್ದೇನೇನೋ ಎಂಬ ಭಾವನೆ ಅವರ ಕರ್ತೃತ್ವ ಶಕ್ತಿಯನ್ನೇ ಕಸಿದುಕೊಂಡುಬಿಟ್ಟರೆ…? ಹಾಗಾಗುವ ಸಂದರ್ಭವನ್ನು ವಿವಾಹಿತರು ಸೃಷ್ಟಿಸಿಕೊಳ್ಳಬಾರದು. ಏಕಮುಖವಾದ ಪ್ರೀತಿಯನ್ನು ಹೊಂದಿರುವ ಎಳೆಯರಿಗಿಂತ-ಯುವಕರಿಗಿಂತ ಇವರಿಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ವಿವಾಹಪೂರ್ವದಲ್ಲಿ ಒಂದು ಹುಡುಗ-ಹುಡುಗಿ ಸಲುಗೆಯಿಂದ ಮಾತಾಡುತ್ತಿದ್ದರೆ, ಪದೇ ಪದೇ ಭೇಟಿಯಾಗುತ್ತಿದ್ದರೆ ಸಮಾಜ ಅವರನ್ನು ವಕ್ರ ದೃಷ್ಟಿಯಿಂದ ನೋಡುತ್ತದೆ. ಅವರಲ್ಲಿ ಪರಸ್ಪರ ಯಾವುದೇ ನಿರ್ದಿಷ್ಟ ಭಾವನೆಗಳಿರದಿದ್ದರೂ ಒಮ್ಮೊಮ್ಮೆ ಪ್ರೇಮಿಗಳೆಂದೇ ಆರೋಪಿಸಿಬಿಡುತ್ತದೆ. ಆಗ ಅವರು ಅನಿವಾರ್ಯವಾಗಿ ಪ್ರೇಮಿಗಳಾಗಬೇಕಾಗುತ್ತದೆ. ಅಮೇಲೆ ಮದುವೆಯೂ ಆಗಬೇಕಾಗುತ್ತದೆ.

ವಿವಾಹಿತರಾದರೆ ಇನ್ನೊಬ್ಬ ಮಹಿಳೆ\ಪುರುಷನ ಜೊತೆ ಒಡನಾಟ ಇಟ್ಟುಕೊಂಡರೂ ಸಮಾಜ ಅವರತ್ತ ವಿಶೇಷ ಲಕ್ಷ್ಯ ಕೊಡುವುದಿಲ್ಲ. ಸಮಾನ ಚಿಂತನೆಯ ಸೇಹಿತರಿರಬಹುದು ಎಂದು ಅಂದುಕೊಳ್ಳುತ್ತದೆ. ಹಾಗಾಗಿ ಇಂತವರಲ್ಲಿ ಏಕಮುಖವಾದ ಪ್ರೀತಿಯೊಂದು ಮೊಳಕೆಯೊಡೆದರೆ ಅದನ್ನು ಪ್ರೀತಿಸಲ್ಪಡುವ ವ್ಯಕ್ತಿಯಲ್ಲಿ ಹೇಳಿಕೊಳ್ಳಬಹುದು; ಆದರೆ ಹೇಳಿಕೊಳ್ಳುವ ಮೊದಲು ಆ ವ್ಯಕ್ತಿಯ ಗುಣ ಸ್ವಭಾವಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರಬೇಕು. ಈಕೆಯ\ಈತನ ಭಾವನೆಗಳನ್ನು ಲೇವಡಿ ಮಾಡುವ, ಉಪೇಕ್ಷೆ ಮಾಡುವ, ಹಗುರವಾಗಿ ಕಾಣುವ ವ್ಯಕ್ತಿಗಳೊಡನೆ ಅಂತರಂಗವನ್ನು ಬಿಚ್ಚಿಡಬಾರದು. ಹೇಗೆ ಹೇಳುವುದು, ನೀವು ಭಾಗ್ಯಶಾಲಿಗಳಾಗಿದ್ದರೆ, ನಿಮ್ಮ ಮನದ ಇಂಗಿತವನ್ನು ಎದುರಿನ ವ್ಯಕ್ತಿ ಅರಿತುಕೊಂಡು ಸಹಕರಿಸಲೂಬಹುದು! ನಿಮ್ಮ ಯಾಂತ್ರಿಕವಾದ ಬದುಕಿನಲ್ಲಿ ಅವರು ಹೊಸ ಚೈತನ್ಯ ತುಂಬಬಹುದು. ಹಿಂದೆ ಯಾವ್ಯವುದೋ ಕಾರಣಗಳಿಗಾಗಿ ಮದುವೆಯಾದ ನೀವು ಈಗ ನವಪ್ರೀಮಿಯಂತೆ ಮತ್ತೆ ಪ್ರೇಮದ ನವಿರು ಭಾವನೆಗಳನ್ನು ಅನುಭವಿಸಬಹುದು.

ಪ್ರೇಮವೇ ಯಾಕಾಗಬೇಕು? ಗಂಡು-ಹೆಣ್ಣು ತಾವು ಜತೆಯಾಗಿರಬೇಕು ಎಂದು ಬಯಸುವುದಕ್ಕೆ ಹತ್ತಾರು ಕಾರಣಗಳಿರಬಹುದು. ’ಡ್ರೈವರ್ ಜೊತೆ ಓಡಿ ಹೋದಳು’ ’ಪಕ್ಕದ ಮನೆಯವನ ಜೊತೆ ಸಂಬಂಧ ಇಟ್ಟುಕೊಂಡಳು’ ’ಕೆಲಸದವಳನ್ನು ಹಾಸಿಗೆಗೆ ಕರೆದುಕೊಂಡ’…ಎಂದೆಲ್ಲಾ ಹೇಳುತ್ತೇವಲ್ಲಾ, ಇವೆಲ್ಲಾ ಹೇಳಿದಷ್ಟು ಸರಳವಾದ ವಿಷಯಗಳಲ್ಲ. ಈ ಕ್ರಿಯೆಗಳ ಹಿಂದೆ ಸೆಕ್ಸ್ ಒಂದೇ ಕೆಲಸ ಮಾಡಿರುವುದಿಲ್ಲ. ಆದಕ್ಕೆ ನಾನಾ ಆಯಾಮಗಳಿರುತ್ತವೆ.

ಯಾರಿಗ್ಗೊತ್ತು, ಒಂದು ಏಕಮುಖವಾದ ಪ್ರೀತಿ ಒಳ್ಳೆಯ ಗೆಳೆತನವಾಗಿ ಮುಂದುವರಿಯಬಹುದು. ಯಾಕೆಂದರೆ ಅನೇಕ ಸಂದರ್ಭಗಳಲ್ಲಿ ಗಂಡು-ಹೆಣ್ಣಿಗೆ ಮುಕ್ತವಾಗಿ ಮಾತಾಡಲು ಅವಕಾಶಗಳೇ ಇರುವುದಿಲ್ಲ. ಹಾಗಾಗಿ ಆರಾಧನೆ ಕೇವಲ ಆರಾಧನೆಯಾಗಿಯೇ ಉಳಿದುಬಿಡುತ್ತದೆ. ಒಮ್ಮೆ ಮನಸ್ಸನ್ನು ಮುಕ್ತವಾಗಿ ಹರಿಯಬಿಟ್ಟರೆ ಎಲ್ಲವೂ ಮುಗಿಯಿತು.ಆಮೇಲೆ ಏನೂ ಇರುವುದಿಲ್ಲ. ಎಲ್ಲವೂ ಶಾಂತ; ಒತ್ತಡಮುಕ್ತ ಮನಸ್ಸು. ಆದರೆ ಯಾರೆದುರಿಗೆ ಹರಿಯಬಿಡುತ್ತಿದ್ದೇನೆ ಎಂಬ ಎಚ್ಚರವಿರಬೇಕು ಎರಡು ಪ್ರಬುದ್ಧ ಮನಸ್ಸುಗಳು; ಅವು ವಿವಾಹಿತರಿರಲಿ, ಅವಿವಾಹಿತರಿರಲಿ ಪರಸ್ಪರ ನಂಬಿಕೊಂಡು ಒಪ್ಪಿ ನಡೆಸುವ ಯಾವುದೇ ಚಟುವಟಿಕೆಗಳು ಅನೀತಿಯೆನಿಸುವುದಿಲ್ಲ. ಅದವರ ಅಂತರಂಗದ ವಿಷಯ.

ಪ್ರೀತಿ ಎನ್ನುವುದು ಒಂದು ಅನುಭೂತಿ. ಅದು ದೈವಿಕವಾದುದು. ಪಂಚೇಂದ್ರಿಯಗಳ ಅನುಭವವನ್ನು ಮೀರಿದ್ದು. ಅದು ಮನುಷ್ಯನ ಮಟ್ಟಕ್ಕೆ ಇಳಿದರೆ ಮನುಷ್ಯ-ಮನುಷ್ಯರ ನಡುವೆ ಇರಬೇಕಾದ ಗೌರವ, ನಂಬಿಕೆ, ಕರುಣೆ, ದಯೆಗಳಾಗುತ್ತದೆ. ಗಂಡು ಹೆಣ್ಣಿನ ಸಂಬಂಧಕ್ಕೆ ಬಂದರೆ ಅದು ಎರಡು ಮನಸ್ಸು ಮತ್ತು ಎರಡು ದೇಹ ಐಕ್ಯಗೊಳ್ಳುವ ವಿಸ್ಮಯ. ಅದು ಏಕತೆಯನ್ನು ಕೊಡುವ ಸಂತೋಷ. ದೈವತ್ವಕ್ಕೆ ಏರಬಹುದಾದ ಇಂತಹ ಒಂದು ಪ್ರೇಮ ಸುಲಭದಲ್ಲಿ ಘಟಿಸುವಂತಹದ್ದಲ್ಲ. ಅದು ಕಳೆದುಕೊಳ್ಳುವ ಭಯ, ಆತಂಕ, ತುಡಿತ, ತಲ್ಲಣಗಳನ್ನು ಅನುಭವಿಸುತ್ತಾ ಕಾಲದ ನಿಕಷದಲ್ಲಿ ಮಿಂದೆದ್ದು ಬರಬೇಕು.

[ ೨೦೦೫ರಲ್ಲಿ ’ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]