Saturday, October 20, 2012

ಮಲಾಲ; ಸ್ವಾತ್ ಕಣಿವೆಯ ಮೇರು ದನಿ




 ಸ್ವಾತ್ ಕಣಿವೆ ಪ್ರದೇಶ..!

ಹಿಂದು ಕುಶ್ ಪರ್ವತಶ್ರೇಣಿಯಿಂದ ಸುತ್ತುವರಿದಿರುವ ಸುಂದರ ನಾಡು, ಅದು ಪಾಕಿಸ್ತಾನದ ಸ್ವಿಝರ್ ಲ್ಯಾಂಡ್.
ಹಾಗೆಂದರೆ ಬಹುಜನರಿಗೆ ಪಕ್ಕನೆ ಅರ್ಥವಾಗಲಾರದು. ಆದರೆ ಅದು ಗಾಂಧಾರ ನಾಡು.  ನಮ್ಮ ಮಹಾಭಾರತದ ಗಾಂಧಾರಿ ಆ ದೇಶಕ್ಕೆ ಸೇರಿದವಳು ಎಂದರೆ ಹೆಚ್ಚು ಅರ್ಥವಾದೀತು.ಅದು ಆರ್ಯಾವರ್ತದ ಒಂದು ಭಾಗವಾಗಿತ್ತು. ಬಾರತದ ಮೇಲೆ ಧಾಳಿ ಮಾಡಿದ ಎಲ್ಲಾ ಆಕ್ರಮಣಕಾರರು ಇದೇ ಸ್ವಾತ್ ಕಣಿವೆಯನ್ನು ಹಾದು ಬಂದವರೇ ಆಗಿದ್ದರು. ಒಂದು ರೀತಿಯಲ್ಲಿ ಇದ ಭಾರತ ಪ್ರವೇಶದ ಹೆದ್ದಾರಿ.  ವಜ್ರಯಾನ ಬುದ್ಧಿಸಂ ಇಲ್ಲೇ ಹುಟ್ಟಿತೆಂದು ಹೇಳಲಾಗುತ್ತಿದೆ.  ಒಂದು ಕಾಲದಲ್ಲಿ ಅದು ಭೂಲೋಕದ ಸ್ವರ್ಗ. ಈಗ ಅದು ತಾಲಿಬಾನಿಗಳ ಅಡೊಂಬೊಲ.

ಅಂತಹ ಸ್ವಾತ್ ಕಣಿವೆ ಜಗತ್ತಿನಾದ್ಯಂತ ಈಗ ಸುದ್ದಿಯಲ್ಲಿದೆ. ಅದಕ್ಕೆ ಕಾರಣವಾಗಿದ್ದು ಮಲಾಲ ಯೂಸಫ್ ಝಾಯಿ ಎಂಬ ಹದಿನಾಲ್ಕು ವರ್ಷದ ಬಾಲೆ. ನಮ್ಮ ಗಾಂಧಾರಿಯದ್ದು ಮೌನ ಪ್ರತಿಭಟನೆಯಾಗಿತ್ತು.ಅದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದಾಗಿತ್ತು. ಆದರೆ ಮಲಾಲ ಎಂಬ ಈ ಬಾಲೆಯದು ಎತ್ತರದ ಧ್ವನಿ. ಅದು ರಕ್ತ ಪಿಪಾಸು ತಾಲಿಬಾನಿಗಳ ವಿರುದ್ಧ ಎತ್ತಿದ ಧ್ವನಿ. ಆ ದ್ವ್ಹನಿಯೀಗ ಹಿಂದೂ ಕುಶ್ ಪರ್ವತಗಳನ್ನಪ್ಪಳಿಸಿ ಜಗತ್ತಿನಾದ್ಯಂತ ಮೊಳಗುತ್ತಿದೆ.
ಅದು ಅಕ್ಟೋಬರ್ ೯ನೇ ತಾರೀಖ್. ಆಕೆ ಎಂದಿನಂತೆ ಭಯಪಡುತ್ತಲೇ ಶಾಲೆಗೆ ಹೋಗಿದ್ದಳು. ಮತ್ತೇ ಅದೇ ಭಯದಿಂದಲೇ ಮನೆತಲುಪಿಕೊಳ್ಳುವ ಧಾವಂತದಲ್ಲಿ ಶಾಲಾ ವಾಹನವೇರಿದ್ದಳು. ಆದರೆ ಅವಳನ್ನು ಕೊಲ್ಲಲು ಹೊಂಚು ಹಾಕುತ್ತಿದ್ದ ತಾಲಿಬಾನಿ ಉಗ್ರಗಾಮಿಗಳು ಆ ವಾಹನವನ್ನು ಅಡ್ಡಗಟ್ಟಿ ಆಕೆಯನ್ನು ಹುಡುಕಿ ಅವಳ ಮೇಲೆ ಗುಂಡಿನ ಮಳೆಗೆರೆದರು. ಆಕೆಯ ಕತ್ತು, ತಲೆಗೆ ಹೊಕ್ಕ ಗುಂಡು ಅವಳನ್ನು ಪ್ರಜ್ನೆ ತಪ್ಪಿಸಿ ಧರೆಗುರುಳಿಸಿತು. ಅವಳ ಜೊತೆಗಿದ್ದ ಇಬ್ಬರು ಬಾಲಕಿಯರೂ ಮರಣಾಂತಿಕವಾಗಿ ಗಾಯಗೊಂಡರು.

 ಆಕೆಯನ್ನು ಉಳಿಸಿಕೊಳ್ಳಲು ಒಂದು ವಾರಗಳ ಕಾಲ ಪರಿಶ್ರಮ ಪಟ್ಟ ಪಾಕಿಸ್ತಾನ ಸರಕಾರ ಅ. ೧೫ರ ಸೋಮವಾರದಂದು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ನಿಗೆ ಕಳುಹಿಸಿದೆ. ಅಲ್ಲಿಯ ಕ್ವೀನ್ ಎಲಿಜಬೆತ್  ಆಸ್ಪತ್ರೆಯಲ್ಲಿ ದಾಖಲಾಗಿರುವ ಆಕೆಯ ಚೇತರಿಕೆಯ ಬಗ್ಗೆ ಅವಳನ್ನು ನೋಡಿಕೊಳ್ಳುತ್ತಿರುವ ಡಾಕ್ಟರ್ ಡೇವ್ ರೋಸರ್ ಭರವಸೆಯ ಹೇಳಿಕೆಯನ್ನು ನೀಡಿದ್ದಾರೆ. ಅವರು ಬ್ರಿಟೀಷ್ ಸರಕಾರದಲ್ಲಿ ಹತ್ತು ವರ್ಷಗಳ ಕಾಲ ಮಿಲಿಟಿರಿಯ ಕ್ಯಾಷವಲ್ಟಿಯಲ್ಲಿ ಸೇವೆ ಸಲ್ಲಿಸಿದ ಅನುಭವಿರುವವರು.
ತಾಲಿಬಾನಿಗಳಂತಹ... ತಾಲಿಬಾನಿ ಉಗ್ರರು ಇನ್ನೂ ಹಾಲುಗಲ್ಲ ಮಾಸದ ಆ ಪುಟ್ಟ ಹುಡುಗಿಯ ಮೇಲೆ ಯಾಕೆ ಗುಂಡಿನ ಮಳೆಗೆರೆದರು? ಅದಕ್ಕೆ ಅವಳ ಜೀವನಗಾಥೆಯನ್ನು ನಾವು ಓದಬೇಕು.

ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದು ಹಳೆಯ ಮಾತು. ಮತ್ತು ಅದು ಸತ್ಯಕ್ಕೆ ಹತ್ತಿರವಾದ ಮಾತು.
ಮಲಾಲ ಹುಟ್ಟಿದ್ದು ೧೯೯೭ರ ಜುಲೈ ೧೧ರಂದು. ಸ್ವಾತ್ ಜಿಲ್ಲೆಯ ಮಿಂಗೋರಾ ಎಂಬ ಸಣ್ಣ ಪಟ್ಟಣ ಅವಳ ಹುಟ್ಟೂರು. ತಾಲಿಬಾನಿಗಳ ಹುಟ್ಟೂರಾದ ಅಫಘಾನಿಸ್ತಾನಕ್ಕೆ ಹೊಂಡಿಕೊಂಡತಿರುವ ಪ್ರದೇಶವದು. ಪಾಕಿಸ್ತಾನದ ರಾಜಧಾನಿ ಇಸ್ಲಾಂಬಾದಿನಿಂದ ಅಪ್ಘಾನಿಸ್ತಾನಕ್ಕಿರುವ ದೂರ ೨೪೯ಕಿ.ಮೀ. ಇದರ ಮಧ್ಯೆ ಸಿಗುತ್ತದೆ ಸ್ವಾತ್ ಕಣಿವೆ. 
ಮಲಾಲ ಹುಟ್ಟುವುದಕ್ಕೆ ಒಂದು ವರ್ಷದ ಮೊದಲು ಅಂದರೆ ೧೯೯೬ರಲ್ಲಿ ತಾಲಿಬಾನಿಗಳು ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡು ಇಸ್ಲಾಮಿಕ್ ಎಮಿರೆಟ್ಸ್ ಅಫ್ ಅಫ್ಘಾನಿಸ್ತಾನ್ ಎಂಬ ಹೆಸರಿನಲ್ಲಿ ಸರಕಾರ ರಚಿಸಿಕೊಂಡರು. ಆದರೆ ಪಾಕಿಸ್ತಾನ, ಸೌದಿ ಅರೇಭಿಯಾ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ ಹೊರತುಪಡಿಸಿ ಜಗತ್ತಿನ ಉಳಿದ ಯಾವ ರಾಷ್ಟ್ರಗಳೂ ಅದಕ್ಕೆ ಮಾನ್ಯತೆ ನೀಡಲಿಲ್ಲ.

ತಾಲಿಬಾನಿಗಳು ಹೊರಗಿನಿಂದ ಬಂದವರೇನೂ ಅಲ್ಲ. ಅವರು ಅಫಘನಿಸ್ತಾನದ ಮೂಲನಿವಾಸಿಗಳಾದ ಪುಸ್ತೂನ್ ಬುಡಕಟ್ಟಿಗೆ ಸೇರಿದವರು. ಮುಜಾಯಿದ್ ಎಂಬ ಸಂಘಟನೆಯಡಿ ಅವರು ಒಗ್ಗಟ್ಟಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅಖಂಡ ರಷ್ಯಾ ಅವರ ಪಕ್ಕದ ದೇಶವಾಗಿತ್ತು. ಈ ಸಂಘಟನೆ ಅವರ ಜೊತೆ ಆಗಾಗ ಗೇರಿಲ್ಲಾ ಯುದ್ಧ ಮಾಡುತ್ತಿತ್ತು. ೧೯೭೮ರಲ್ಲಿ ರಷ್ಯಾ ಇವರ ಮೇಲೆ ಯುದ್ಧ ಸಾರಿತು. ನಿರಂತರ ಒಂಬತ್ತು ವರ್ಷಗಳ ಕಾಲ ಶೀತಲ ಯುದ್ಧ ನಡೆಯಿತು.. ಆಫ್ಘಾನ್ ನಲುಗಲು ಆರಂಭವಾಗಿದ್ದು ಆಗಲೇ. ಆಗ ರಷ್ಯದ ಸಂಪ್ರದಾಯಿಕ ಎದುರಾಳಿ ಅಮೇರಿಕಾ  ಮುಜಾಹಿದ್ದಿನರಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ರಷ್ಯನ್ನರ ವಿರುದ್ಧ ಹೊರಾಡಲು ಹುರಿದಿಂಬಿಸಿತು.. ಅದೇ ಶಸ್ತ್ರಾಸ್ತ್ರ ಮತ್ತೆ ತಿರುಗಿ ಪ್ರಯೋಗವಾಗಿದ್ದು ಅಮೇರಿಕಾದ ವಿರುದ್ಧವೇ.  ಅದು ಪರಾಕಾಸ್ಟೆಯನ್ನು ತಲುಪಿದ್ದು ೨೦೦೧ ರಲ್ಲಿ.ಅಮೇರಿಕಾದ ಅವಳಿ ಕಟ್ಟಡವನ್ನು ಒಸಮಾ ಬಿನ್ ಲಾಡೆನ್ ಉರುಳಿಸಿದಾಗ. ಆತ ”ಅಲ್ ಖೈದಾ’ ಎಂಬ ಮುಸ್ಲೀಂ ಉಗ್ರಗಾಮಿ ಸಂಘಟನೆಯ ನೇತಾರ. ಜಗತ್ತಿನ ಎಲ್ಲಾ ಮುಸ್ಲೀಂ ಉಗ್ರಗಾಮಿ ಸಂಘಟನೆಗಳು ’ತಾಲಿಬಾನಿ’ ಗಳೆಂಬ ಏಕನಾಮದಲ್ಲಿ ಜಗತ್ತಿಗೇ ಭಯೋತ್ಪದಾನೆ ಮಾಡತೊಡಗಿತು. ಅಪ್ಘಾನಿಸ್ತಾನ ಅವರಿಗೆ ಆಶ್ರಯ ತಾಣವಾಯ್ತು. ಪಾಕಿಸ್ತಾನ ಅವರಿಗೆ ಕುಮ್ಮಕ್ಕು ನೀಡಲಾರಂಬಿಸಿತು. ಎಲ್ಲಾ ಉಗ್ರಗಾಮಿಗಳ ಅನಭಿಷಿಕ್ತ ನಾಯಕ  ಒಸಾಮಾಬಿನ್ ಲಾಡೆನ್ ನನ್ನು ಇದೇ ಪಾಕಿಸ್ತಾನದ ಅಬೊಟಾಬಾದಿನಲ್ಲಿ ಅಮೇರಿಕಾದ ಸೇನೆ ಹೊಡೆದುರುಳಿಸಿತ್ತು.

ತನ್ನ ಪಕ್ಕದ ದೇಶದಲ್ಲಿ ಹುಟ್ಟಿದ ತಾಲಿಬಾನಿಗಳ ಕೈ ಪಾಕಿಸ್ತಾನದೆಡೆಗೂ ಚಾಚಿ ಇಲ್ಲಿಯ ಅಮಾಯಾಕರ ಜನರ ಕತ್ತು ಹಿಸುಕುತ್ತಿದ್ದುದ್ದನ್ನು ಅ ಪುಟ್ಟ ಪೋರಿ ಮಲಾಲ ಹುಟ್ಟಿನಿಂದಲೂ ಗಮನಿಸುತ್ತಲೇ ಬಂದಿದ್ದಳು. ಬೀದಿ ಬೀದಿಯಲ್ಲಿ ಉರುಳಾಡುತ್ತಿದ್ದ ರುಂಡ-ಮುಂಡವಿಲ್ಲದ ಹೆಣಗಳನ್ನು ಕಣ್ಣಾರೆ ಕಾಣುತ್ತಿದ್ದಳು. ತಾಲಿಬಾನಿಗಳು ಒತ್ತಾಯಪೂರ್ವಕವಾಗಿ ಹೇರುತ್ತಿದ್ದ ಶೇರಿಯತ್ ಕಾನೂನುಗಳ ಅವಾಂತರಗಳು, ಅದು ಮಹಿಳೆಯರ ಮೇಲಾಗುತ್ತಿದ್ದ ಪರಿಣಾಮಗಳು ಆ ಎಳೆಯ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತಿದ್ದವು.

ಅದು ಆಕೆಯ ಹೊರಜಗತ್ತು ಆಗಿದ್ದರೆ ಅವಳ ಮನೆಯ ಪರಿಸರ ಹೀಗಿತ್ತು; ತಂದೆ-ತಾಯಿ ಮತ್ತು ಇಬ್ಬರು ತಮ್ಮಂದಿರ ಪುಟ್ಟ ಪ್ರಪಂಚವದು. ತಂದೆ ಜಿಯಾಯುದ್ದಿನ್ ಕವಿಯಾಗಿದ್ದ. ಜೊತೆಗೆ ಶಿಕ್ಷಕ. ಆತ ತನ್ನದೇ ಆದ ’ಖುಷಾಲ್ ಪಬ್ಲಿಕ್ ಸ್ಕೂಲ್’ ಎಂಬ ಹೆಣ್ಣುಮಕ್ಕಳ ಶಾಲೆ ನಡೆಸುತ್ತಿದ್ದ. ಶೈಕ್ಷಣಿಕ ಹೊರಾಟಗಾರ ಎಂದು ಸುತ್ತಮುತ್ತಲಲ್ಲಿ ಪರಿಚಿತನಾಗಿದ್ದ. ಇಂತಹ ತಂದೆಯೊಬ್ಬ ಮಾತ್ರ ತನ್ನ ಮಗುವಿಗೆ ’ಮಲಾಲ’’ ಎಂದು ಹೆಸರಿಡಲು ಸಾಧ್ಯ. ಆ ಹೆಸರಿನ ಅರ್ಥ.ದುಃಖವನ್ನು ಹುದುಗಿಟ್ಟುಕೊಂಡವಳು. ಅದು ಸ್ಫುರಿಸುವ ಹಲವು ಅರ್ಥಗಳಲ್ಲಿ ’ದೇವರ ಸ್ವತ್ತು’ ಗಟ್ಟಿಗಿತ್ತಿ,ಧೈರ್ಯವಂತೆಯೂ ಸೇರಿತ್ತು ಆ ಹೆಸರು ಆಕೆಗೂ ಇಷ್ಟವಾಗಿತ್ತು. ಆಕೆ ಅದನ್ನು  ಬಿಬಿಸಿಯಲ್ಲಿ ಬರೆಯುತ್ತಿದ್ದ ತನ್ನ ಡೈರಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆಗೆ ಡಾಕ್ಟರ್ ಆಗುವ ಬಯಕೆಯಿತ್ತು. ಆದರೆ ಆಕೆಯ ತಂದೆ ಅವಳಲ್ಲಿ ಭವಿಷ್ಯದ ರಾಜಕಾರಣಿಯನ್ನು ಕಾಣುತ್ತಿದ್ದರು. ಡಾಕ್ಟರ್ ಯಾರೂ ಬೇಕಾದರೂ ಆಗಬಹುದು ಆದರೆ ನನ್ನ ದೇಶಕ್ಕೆ ದೂರದರ್ಶಿತ್ವವುಳ್ಳ ರಾಜಕಾರಣಿಗಳ ಅವಶ್ಯಕತೆಯಿದೆಯೆಂದು ಅವರ ನಂಬಿಕೆ. ಮಲಾಲ ಅವರ ಕನಸನ್ನು ನನಸು ಮಾಡುವ ಹಾದಿಯಲ್ಲಿದ್ದಳು.

ಆಕೆಗೆ ಬಿಬಿಸಿಯಲ್ಲಿ ಡೈರಿ ಬರೆಯಲು ಅವಕಾಶ ಸಿಕ್ಕಿದ್ದು ಹೇಗೆ? ಅದಕ್ಕೂ ಒಂದು ಹಿನ್ನೆಲೆಯಿದೆ.
ಹೊರಜಗತ್ತಿನ ಕ್ರೌರ್ಯ, ಮನೆಯೊಳಗಿನ ಮಮತೆ, ಅವಳ ಒಳಜಗತ್ತನ್ನು ವಿಸ್ತಾರಗೊಳಿಸುತ್ತಿತ್ತು.
ಅದು ೨೦೦೮ ರ ಸಪ್ಟಂಬರ್. ಪೇಶಾವರದ ಪ್ರೆಸ್ಸ್ ಕ್ಲಬ್ ನಲ್ಲಿ ಆಕೆ ಮೊದಲ ಬಹಿರಂಗ ಭಾಷಣ ಮಾಡಿದಳು. ವಿಷಯ; ’ನನ್ನ ಮೂಲಭೂತ ಶಿಕ್ಷಣದ ಹಕ್ಕುಗಳನ್ನು ಕಸಿಯಲು ತಾಲಿಬಾನಿಗಳಿಗೆಷ್ಟು ಧೈರ್ಯ?’.ಆಗ ಅವಳ ವಯಸ್ಸು ಕೇವಲ ಹನ್ನೊಂದು. ಆ ಬಾಲಕಿಯ ಅಸ್ಖಲಿತ ಭಾಷಣವನ್ನು ಎಲ್ಲಾ ಪತ್ರಿಕೆಗಳು ಪ್ರಮುಖವಾಗಿ ಬರೆದವು, ಟೀವಿ ಚಾನಲ್ ಗಳು ನಾಡಿನಾದ್ಯಂತ ಪ್ರಸಾರ ಮಾಡಿದವು. ಆ ತಂದೆ-ಮಗಳನ್ನು ಜನ ಗುರುತಿಸತೊಡಗಿದರು.

೨೦೦೯ರಲ್ಲಿ ಮಲಾಲಳಿಗೆ ಬಿಬಿಸಿಯ ಉರ್ದು ಪತ್ರಿಕೆಗೆ ಡೈರಿ ಬರೆಯುವ ಅವಕಾಶ ಸಿಕ್ಕಿತ್ತು. ಅದಕ್ಕೂ ಒಂದು ಕಾರಣವಿತ್ತು.  ಸ್ವಾತ್ ಕಣಿವೆಯಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಹಿಂಸೆಯ ಬಗ್ಗೆ ಬಿಬಿಸಿ ಸವಿವರವಾಗಿ ಬರೆಯುತ್ತಿತ್ತು. ಆದರೆ ಅಲ್ಲಿನ ಜನಸಾಮಾನ್ಯರ ಬದುಕು-ಬವಣೆಯ ಬಗ್ಗೆ ಬರೆಯಲಾಗುತ್ತಿರಲಿಲ್ಲ. ಅದನ್ನು ಬರೆಯುವವರಿಗಾಗಿ ಅದು ಹುಡುಕಾಟ ನಡೆಸಿತ್ತು. ಅದು ಮಲಾಳ ಅಪ್ಪನನ್ನು ಸಂಪರ್ಕಿಸಿ ಅವರ ಸ್ಕೂಲಿನ ಹೆಣ್ಣು ಮಕ್ಕಳ್ಯಾರಾದರೂ ಬರೆಯಲು ಸಾಧ್ಯವೇ? ಎಂದು ಕೇಳಿತ್ತು. ಆಗ ಆಯೇಷಾ ಎಂಬಾಕೆ ಬರೆಯಲು ಒಪ್ಪಿಕೊಂಡಳು . ಆದರೆ ಆಕೆಯ ಹೆತ್ತವರು ತಾಲಿಬಾನಿಗಳ ಭಯಕ್ಕೆ ಅನಂತರದಲ್ಲಿ ನಿರಾಕರಿಸಿದಳು. ಆಗ ಅದನ್ನು ದೈರ್ಯದಿಂದ ಒಪ್ಪಿಕೊಂಡವಳು ಮಲಾಲ. ಆದರೆ ಆಗ ಬಿಬಿಸಿಯ ಸಂಪಾದಕರಾಗಿದ್ದ ಮಿರ್ಜಾ ವಾಹಿದ್ ಆಕೆಯ ಸುರಕ್ಷತೆಯ ದೃಷ್ಟಿಯಿಂದ ಅವಳಿಗೆ ’ಗುಲ್ ಮಕಾಯಿ’ ಎಂಬ ಗುಪ್ತನಾಮವನ್ನು ನೀಡಿದರು. ಅದರ ಅರ್ಥ ಮೆಕ್ಕೆ ಜೋಳದ ಹೂ.

೨೦೦೯ರ ಜನವರಿ ೩ರಿಂದ ಗುಲ್ ಮಕಾಯಿಯ ಡೈರಿ ಬಿಬಿಸಿಯಲ್ಲಿ ಪ್ರಕಟವಾಗತೊಡಗಿತು. ಇದೇ ಸಮಯದಲ್ಲಿ ಸ್ವಾತ್ ಕಣಿವೆಯ ಹೆಣ್ಣುಮಕ್ಕಳಿಗೆ ಬರಸಿಡಿಲಿನಂತೆ ಬಂದೆರಗಿತು ಒಂದು ಸುದ್ದಿ, ಅದು, ಜನವರಿ ೧೫ರಿಂದ ಸ್ವಾತ್ ಕಣಿವೆಯಲ್ಲಿರುವ ಯಾವ ಹೆಣ್ಣುಮಕ್ಕಳೂ ಶಾಲೆಗಳಿಗೆ ಹೋಗಬಾರದೆಂದು ತಾಲಿಬಾನಿಗಳು ಕಟ್ಟಪ್ಪಣೆ ಹೊರಡಿಸಿದ್ದು. ಅವರು ಹೇಗೆ ಅಪ್ಪಣೆ ಕೊಡುತ್ತಾರೆಂದು ನಿಮಗನ್ನಿಸಬಹುದು? ಸ್ವಾತ್ ಕಣಿವೆ ಪಾಕಿಸ್ತಾನದಲ್ಲೇ ಇದೆಯಾದರೂ ಅಲ್ಲಿ ನಡೆಯುತ್ತಿರುವುದೆಲ್ಲಾ ತಾಲಿಬಾನಿಗಳ ಆಡಳಿತವೇ. ಒಂದು ರೇಡಿಯೋ ಸ್ಟೇಶನ್ ಇಟ್ಟುಕೊಂಡೇ ಅವರು ಇಡೀ ಸ್ವಾತ್ ಕಣಿವೆಯನ್ನು ನಿಯಂತ್ರಿಸುತ್ತಿದ್ದರು. ಜನ ರಾತ್ರಿಯಾಗುವುದನ್ನೇ ಕಾಯುತ್ತಿದ್ದರು. ರಾತ್ರಿ ತಾಲಿಬಾನಿಗಳು ರೇಡಿಯೋದ ಮುಖಾಂತರ ತಮ್ಮ ಹುಕುಂ ನೀಡುತ್ತಿದ್ದರು. ಜನ ಅದನ್ನು ಪಾಲಿಸಲೇ ಬೇಕಾಗುತ್ತಿತ್ತು.

ಸ್ವಾತ್  ಕಣಿವೆಯಲ್ಲಿ ದೀಪಾವಳಿಯ ಪಟಾಕಿಗಳಂತೆ ಬಂದೂಕುಗಳು ಗರ್ಜಿಸುತ್ತಿದ್ದವು. ಹಕ್ಕಿಗಳ ಗುಂಪಿನಂತೆ ಯುದ್ದ ವಿಮಾನಗಳು, ಹೆಲಿಕಾಪ್ಟರಗಳು ಆಕಾಶದಲ್ಲಿ ಹಾರಾಡುತ್ತಿದ್ದವು. ರುಂಡ-ಮುಂಡವಿಲ್ಲದ ಹೆಣಗಳು ರಸ್ತೆಗಳಲ್ಲಿ ಅನಾಥವಾಗಿ ಬಿದ್ದಿರುತ್ತಿದ್ದವು. ಜನಗಳು ನರಿ-ನಾಯಿಗಳ ಹೆಣಗಳಂತೆ ಬಿದ್ದಿರುವ ಇವುಗಳನ್ನು ದಾಟಿಕೊಂಡು ಮುನ್ನಡೆಯಬೇಕಾಗಿತ್ತು. ಶರಿಯತ್ ನಿಯಮಗಳನ್ನು ಉಲ್ಲಂಘಿಸಿದವರನ್ನು ಬೀದಿಯಲ್ಲಿ ಸಾರ್ವಜನಿಕರ ಎದುರಲ್ಲೇ ಅಮಾನುಷವಾಗಿ ಹಿಂಸಿಸಿ ಕೊಲ್ಲುತ್ತಿದ್ದರು. ಹೆಣ್ಣುಮಕ್ಕಳ ಬದುಕಂತೂ ನರಕ ಸದೃಶ್ಯವಾಗಿತ್ತು. ಇದೆಲ್ಲಾ ಮಲಾಳ್ ಡೈರಿಯಲ್ಲಿ ದಾಖಲಾಗುತ್ತಾ ಜಗತ್ತಿನೆದುರು ಬಯಲಾಗುತ್ತಾ ಬಂತು.

ಮಲಾಲ ಶಾಂತಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಕುರಿತಾಗಿ ಪ್ರೆಸ್ ಕಾನ್ಪೆರ್ನ್ಸಗಳಲ್ಲಿ ದಿಟ್ಟತನದಿಂದ ಮಾತಾಡುತ್ತಿದ್ದಳು. ಜಗತ್ತಿನ ಎಲ್ಲಾ ಮಕ್ಕಳು ಖುಷಿಯಿಂದ ನಿರ್ಭಯವಾಗಿ ಶಾಲೆಗೆ ಹೋಗುತ್ತಾರೆ ಆದರೆ ನಾವು..? ತಾಲಿಬಾನಿಗಳು ನಮ್ಮನ್ನು ಕೊಲ್ಲುತ್ತಾರೆ ಎಂಬ ಭಯದಲ್ಲಿ ಸದಾ ಬದುಕುತ್ತಿರುತ್ತೇವೆ. ಯಾಕೆ ಹೀಗೆ ಎಂದು ಪ್ರಶ್ನಿಸುತ್ತಿದ್ದಳು. ಆಕೆ ವಿದೇಶಿ ರಾಜತಾಂತ್ರಿಕರನ್ನು ಬೇಟಿಯಾಗುತ್ತಿದ್ದಳು. ಆಕೆಯಲ್ಲಿ ವಯಸ್ಸಿಗೆ ಮೀರಿದ ಪ್ರಭುದ್ಧತೆ ಎದ್ದು ಕಾಣುತ್ತಿತ್ತು. ಪರಿಣಾಮ ತಾಲಿಬಾನಿನ ಬಂದೂಕಿನ ನಳಿಗೆ ಮಲಾಲಳತ್ತ ತಿರುಗಿತು.
ಗುಂಡಿಗೆ ಎದೆಯೊಡ್ಡಿ ನಿಂತ ಈ ಬಾಲಕಿಯ ತಲೆಗೆ ಮೊನ್ನೆ ಗುಂಡೇಟು ಬಿದ್ದೇ ಬಿಟ್ಟಿತ್ತು.

ಆಕೆ ಡೈರಿ ಬರೆಯುತ್ತಿದ್ದ ಕಾಲದಲ್ಲೇ ಆಕೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ’ನ್ಯೂಯಾರ್ಕ್ ಟೈಮ್ಸ್’ ಮಾಡಿತು. ಅದು ಆಕೆಯ ಬಗ್ಗೆ ಅರ್ಧ ಘಂಟೆಯ ಒಂದು ವಿಡಿಯೋ ಡಾಕ್ಯುಮೆಂಟರಿಯನ್ನು ತಯಾರಿಸಿತು. ಅದರಲ್ಲಿ ಆಕೆ ತನ್ನ ಕನಸು, ಗುರಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾಳೆ. ಇದು ಅವಳನ್ನು ಮತ್ತಷ್ಟು ಜನಪ್ರಿಯಗೊಳಿಸಿತು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಪ್ರಚಾರ ಆಕೆಯನ್ನು ಸ್ವಾತ್ ಜಿಲ್ಲೆಯ ಮಕ್ಕಳ ಅಸೆಂಬ್ಲಿಯ ಅಧ್ಯಕ್ಷ ಗಿರಿಗೆ ಏರಿಸಿತು. ಇದಲ್ಲದೆ ಪಾಕಿಸ್ತಾನದ ಪ್ರಥಮ ನ್ಯಾಷನಲ್ ಯೂತ್ ಶಾಂತಿ ಪ್ರಶಸ್ತಿ ಇವಳ ಮಡಿಲಿಗೇ ಬಂತು.ದ ಅಪ್ರಿಕಾದ ಸಾಮಾಜಿಕ ಹೋರಾಟಗಾರ ಡೆಸ್ಮಂಡ್ ಟೂಟೋ ಹೆಸರಿನಲ್ಲಿ ಕೊಡುವ ಇಂಟರ್ ನ್ಯಾಷನಲ್ ಚಿಲ್ಡ್ರನ್ ಶಾಂತಿ ಪ್ರಶಸ್ತಿಗೂ ಆಕೆಯ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.
ಬ್ರಿಟನಿನ ಮಾಜಿ ಪ್ರಧಾನಿ ಗೋಲ್ಡನ್ ಬ್ರೌನ್ ಮಲಾಲ ಹೆಸರಿನಲ್ಲಿ ’ನಾನು ಮಲಾಲ’ ಎಂಬ ಘೋಷಣೆಯೊಂದನ್ನು ವಿಶ್ವ ಸಂಸ್ಥೆಯ ಮುಂದಿಟ್ಟಿದ್ದಾರೆ.  ೨೦೦೧೫ನೇ ಇಸವಿಗೆ ಜಗತ್ತಿನಾದ್ಯಂತ ಎಲ್ಲಾ ಮಕಳಿಗೂ ಶಿಕ್ಷಣ ದೊರಕಬೇಕೆಂಬುದು ಇದರ ಅಶಯವಾಗಿದೆ.
ಪ್ರಖ್ಯಾತ ಪಾಪ್ ತಾರೆ ಮಡೊನ್ನಾ ಕಳೆದ ವಾರ ತುಂಬಿದ ಸಭೆಯಲ್ಲಿ ತನ್ನ ಅಭಿಮಾನಿಗಳ ಮಧ್ಯೆ ಗದ್ಗದಿತಳಾಗಿ ತನ್ನ ಬಹುಜನಪ್ರಿಯ ಹಾಡು ’ಹ್ಯೂಮನ್ ನೇಚರ್’ ಅನ್ನು ಮಲಾಳಿಗೆ ಅರ್ಪಿಸಿದ್ದಾಳೆ.

ನ್ಯೂಯರ್ಕ್ ಟೈಮ್ಸ್ ಗೆ ಮಲಾಲ ಇಂಟರ್ವ್ಯು ಕೊಡುತ್ತಿರುವಾಗ ಆಕೆ ಒಂಚೂರು ತಡವರಿಸಿದ್ದಳು. ಆಗ ಆಕೆಯ ಅಪ್ಪನ ಕೈಯಿ ಅವಳ ನೆತ್ತಿಯನ್ನು ಸವರಿ ಉತ್ತೇಜನವನ್ನು ನೀಡಿತ್ತು. ಅದೇ ಸಮಯಕ್ಕೆ ಅವಳ ತೊಡೆಯ ಮೇಲಿದ್ದ ಪುಸ್ತಕದ ಮೇಲೆ ಕ್ಯಾಮಾರ ಪೋಕಸ್ ಆಗಿತ್ತು, ಅಲ್ಲಿತ್ತು, ಗಾಂದೀಜಿಯವರ ಬಾಯಿಯಿಂದ ’ಗುರುದೇವ್’ ಎಂದು ಕರೆಸಿಕೊಂಡಿದ್ದ  ಭಾರತಕ್ಕೆ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕವಿ ರವೀಂದ್ರನಾಥ್ ಠಾಕೂರ್ ಅವರ ಪುಸ್ತಕ. ಭಾರತದ ರಾಷ್ಟ್ರೀಯ ಆಂದೋಲನದಲ್ಲಿ ಧುಮುಕಿ ಹೋರಾಟಕ್ಕೆ ಸ್ಫೂರ್ತಿ ನೀಡುವಂತ ಕವನಗಳನ್ನು ಬರೆದ ಇವರು ಆಗ ತಮ್ಮನ್ನಾಳುತ್ತಿದ್ದ ಬ್ರಿಟೀಶ್ ಸರಕಾರ ಪಂಜಾಬ್ ಗಲಭೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದಾಗ ತಮಗೆ ಈ ಹಿಂದೆ ಅದೇ ಸರಕಾರ ಕೊಟ್ಟಿದ್ದ ’ನೈಟ್” ಪದವಿಯನ್ನು ಹಿಂದುರುಗಿಸಿದ ದೇಶಾಭಿಮಾನಿ ಅವರು. ಅವಳಿಗೆ ಸ್ಫೂರ್ತಿ ಕೊಟ್ಟಿರಬಹುದಾಗಿದ್ದ ಮತ್ತು ಸ್ವಾತಂತ್ರ್ಯವನ್ನು ಬಯಸುವ, ಗೌರವಿಸುವ ಎಲ್ಲರೂ ಪ್ರೀತಿಸುವ ’ಗಿತಾಂಜಲಿ’ಯ ಸಾಲುಗಳಿವು;

” ಎಲ್ಲಿ ಮನ ಭಯರಹಿತ, ಎಲ್ಲಿ ತಲೆಯೆತ್ತಿ ನಿಲ್ಲಲು ಸಾಧ್ಯ, ಎಲ್ಲಿ ವಿಧ್ಯೆಗೆ ಮುಕ್ತ ಅವಕಾಶವೋ
ಎಲ್ಲಿ ಸಣ್ಣ ಸಣ್ಣ ಗೋಡೆಗಳಿಂದ ಜಗತ್ತು ಸಣ್ಣ ಸಣ್ಣ ತುಂಡುಗಳಾಗಿ ಒಡೆದಿಲ್ಲವೋ
ಎಲ್ಲಿ ಮಾತುಗಳು ಸತ್ಯದಾಳದಿಂದ ಎದ್ದು ಬರಬಲ್ಲವೋ
ಎಲ್ಲಿ ದಣಿವಿರದ ಹೋರಾಟ ಪರಿಪೂರ್ಣತೆಯ ಕಡೆ ತನ್ನ ತೋಳುಗಳನ್ನು ಚಾಚುತ್ತಿರುವುದೋ
ಎಲ್ಲಿ ವಿವೇಕದ ಅಚ್ಚ ತೊರೆ ಸಂಪ್ರದಾಯದ ಹಾಳು ಮರುಭೂಮಿ ಮರಳಲ್ಲಿ ಲುಪ್ತವಾಗುವುದಿಲ್ಲವೋ
ಎಲ್ಲಿ ನೀನು ಮನಸ್ಸನ್ನು ಸತತ ನಡೆಸುತ್ತಿಯೋ ನಿರಂತರವಾಗಿ ವಿಸ್ತರಿಸುತ್ತಲೇ ಇರುವ ವಿಚಾರಗಳಾಚಾರಗಳ ಕಡೆ-
ಆ ಅಂಥ ಸ್ವಾತಂತ್ರ್ಯ ಸ್ವರ್ಗಕ್ಕೆ, ಓ ತಂದೆ, ಎದ್ದೇಳಲಯ್ಯ ಈ ನನ್ನ ದೇಶ!” [ಗೋಪಾಲಕೃಷ್ಣ ಅಡಿಗರ ಅನುವಾದ]

ಇದರ ಜೊತೆ ಆಕೆ ಜಗತ್ತಿನೆದುರು ಮಾಡಿಕೊಂಡ ಮನವಿಯನ್ನು ಹೋಲಿಸಿ ನೋಡಿ; 
ಸ್ವಾತ್ ಕಣಿವೆ ಒಂದು ಕಾಲದಲ್ಲಿ ಭೂಲೋಕದ ಸ್ವರ್ಗವಾಗಿತ್ತು. ಈಗ ಅದು ಹೊತ್ತಿ ಉರಿಯುತ್ತಿದೆ. ನಾವು ಮುಗ್ಧರು; ಶಾಂತಿಪ್ರಿಯರು. ನನ್ನ  ಸ್ವರ್ಗ ಕಳೆದು ಹೋಗಿದೆ.
ಜಗತ್ತಿನೆದುರು ನನ್ನ ಮನವಿಯಿದು;
ನನ್ನ ಶಾಲೆಯನ್ನು ಉಳಿಸಿ, ನನ್ನ ಸ್ವಾತ್ ಕಣಿವೆಯನ್ನು ಉಳಿಸಿ, ನನ್ನ ದೇಶವನ್ನು ಉಳಿಸಿ

ಸಮಸ್ತ ಭಾರತ ನವರಾತ್ರಿಯನ್ನು ಆಚರಿಸುತ್ತಿದೆ. ತಾಯಿ ದುರ್ಗಾಮಾತೆಯನ್ನು ಪೂಜಿಸುತ್ತಿದೆ. ಪಾಕಿಸ್ತಾನದ ಆ ಪುಟ್ಟ ದುರ್ಗೆ ಬಹು ಬೇಗನೆ ಗುಣ ಮುಖಳಾಗಿ ಶಿಷ್ಟ ಸಂರಕ್ಷಕಿಯಾಗಿ, ದುಷ್ಟ ಸಂಹಾರಕ್ಕೆ ಮುಂದಾಗಲಿ ಎಂದು ಇಡೀ ಭಾರತ ಹಾರೈಸುತ್ತಿದೆ..

[ಉದಯವಾಣಿ ಸಾಪ್ತಾಹಿಕದಲ್ಲಿ ಇಂದು ಪ್ರಕಟವಾದ ಲೇಖನ]


Saturday, October 6, 2012

ಪ್ರತೀಕ್ಷೆ

                

ಬಂದು ಬಿಡು ಗೆಳೆಯಾ...ನಾನಿಲ್ಲಿ ಒಬ್ಬಂಟಿ.
ಭಯ ಬೀಳಿಸುವ ಕಾರಿರುಳು; ಅಲ್ಲಿ ಬೆಳದಿಂಗಳ ಜೊನ್ನ ಮಳೆ. 
ಕೋಳಿ ಕೂಗುವ ಮುನ್ನ ನಾವಲ್ಲಿರಬೇಕು. 
ಸುಮ್ಮನೆ ಬಂದು ನನ್ನೆದುರು ನಿಂತುಬಿಡು.

ನಿನ್ನ ಕಿರುಬೆರಳಿನಲ್ಲಿದೆ ಗೋವರ್ಧನಗಿರಿಯನೆತ್ತುವ ಸ್ಫೂರ್ತಿ
ಅಂಗ ಭಂಗಿತಳು ನಾನು, ಬಾಳಹಾದಿಗೆ ಬೇಕೆನಗೆ ಕಿರುಬೆರಳ ಕೊಂಡಿ.


ಕಾಡು ಹಾದಿಯ ಕಳೆದು, ಬೆಟ್ಟಗುಡ್ಡವನೇರಿಳಿದು
ಕೊಂಚ ದೂರ ನಡೆದರೆ ಅಲ್ಲೊಂದು ಮಡಿಲು.
ಅಂಚಿಲ್ಲದ ನೀಲ ಬಾನಿನ ಕೆಳಗೆ, ಅಂಚಿರುವ ಕಡಲು
ರುದ್ರಪಾದೆಯ ಅಂಚು; ನಾವಲ್ಲಿ ಜೋಡಿ ಮಿಂಚು

ನಿನ್ನ ಹೆಗಲಿಗೊರಗಿ ನಾ ಕಣ್ಮುಚ್ಚಿದ ಹೊತ್ತು,ನೀ ತುಟಿ ಬಿಚ್ಚದಿರು.
ಕಾಡುವ ಕಡಲಿನ ಮುಂದೆ ಕಣ್ಣೀರ ಕಡಲಿಡಬೇಕು.
ನಾ ಬರಿದಾಗಬೇಕು, ನಿನ್ನ ಒಲವಲ್ಲಿ ಅಕ್ಷಯ ಪಾತ್ರೆ.

ನಾ ಕಣ್ತೆರೆದಾಗ, ನಿನ್ನ ಕೈಯ್ಯಲ್ಲಿ ಕಪ್ಪೆಚಿಪ್ಪಿನ ಮಾಲೆ.
ನನ್ನೆದೆಯ ಕಂಪನಕ್ಕೆ ಶರಧಿ ನಾಚಿ ಹಿಂದೋಡಬೇಕು.
ಆ ರಸಘಳಿಗೆ ಸ್ಥಾಯಿಯಾಗಿ ಕಾಲ ಸ್ತಬ್ದಗೊಳ್ಳಲಿ.

ಬಣ್ಣ ಬಣ್ಣದ ಏಡಿಗಳೆಲ್ಲಾ ಸರಸರನೆ ಮರಳೆದೆಗೆ ಇಳಿಯುವ ಹೊತ್ತು
ಮತ್ತೊಮ್ಮೆ ಮಗುತನದಲ್ಲಿ ಮರಳಮನೆ ಕಟ್ಟಬೇಕು
ಮತ್ತೆ ಮತ್ತೆ ಸೇರುವ ಹಂಬಲಕ್ಕೆ ಜಗಳದ ಆವರ್ತನ..!
ಚಿರಂತನ ಹಂಬಲವಿದು; ಚಿರಾಯುವಾಗಲಿ ಗೆಳೆಯನೇ

ನನ್ನ ಪಂಚೇಂದ್ರಿಯಗಳ ಹಸಿವು ತಣಿಯಬೇಕು
ಪಡುವಣದ ಸೂರ್ಯನಂತೆ ಬಣ್ಣದೋಕುಳಿಯಾಡಬೇಕು.
ಎಲ್ಲಾ ಬಂಧನಗಳ ಕಿತ್ತೊಗೆದು..
ಕ್ಷಣಕಾಲ ಮಿಂಚಾಗಿ ನನ್ನೊಳಗೆ ಹರಿದುಬಿಡು ಗೆಳೆಯಾ...!