Thursday, December 24, 2009

ರೇಣುಕಾಚಾರ್ಯನಿಗೆ ಪಟ್ಟಾಭೀಷೇಕ- ಮಾನವಂತರಿಗಿದು ಕಾಲವಲ್ಲ.
ಅಂತೂ ಇಂತೂ ಹೊನ್ನಾಳಿಯ ರಸಿಕ ಚಕ್ರವರ್ತಿಗೆ ಕಿರೀಟಧಾರಣೆಯಾಯಿತು.
ಬ್ಲಾಕ್ ಮೈಲ್ ರಾಜಕೀಯ ಮೆಲುಗೈ ಪಡೆಯಿತು. ನನಗೆ ತಕ್ಷಣ ನೆನಪಿಗೆ ಬಂದದ್ದು ಕುಮಾರವ್ಯಾಸನ ಸಾಲುಗಳು;
”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,
ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,
ಬಡವರ ಬಿನ್ನಪವಿನ್ನಾರು ಕೇಳುವರು......’

ಉತ್ತರ ಕರ್ನಾಟಕದ ಜನ ಕಂಡು ಕೇಳರಿಯದ ನೆರೆ ಹಾವಳಿಯಿಂದ ತತ್ತರಿಸಿ, ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಗೆ ಸರಕಾರದ, ಜನಪ್ರತಿನಿಧಿಗಳ ನೆರವಿನ ಹಸ್ತವಿಲ್ಲ. ಸಂತೈಸಬೇಕಾದವರೇ, ಭರವಸೆಯ ಹಸ್ತ ಚಾಚಬೇಕಾದವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ನಗೆ ಪಾಟಲಿಗೆ ಗುರಿಯಾಗುತ್ತಿದ್ದಾರೆ. ಯಡಿಯೂರಪ್ಪ ಮತ್ತವರ ಪರಿವಾರ ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಚಾರಿತ್ರ್ಯ ಹೀನರಾಗುತ್ತಿದ್ದಾರೆ. ಕುದುರೆಗೆ ಕಣ್ಣ ಪಟ್ಟಿ ಕಟ್ಟಿದಂತೆ ದುಡ್ಡು ಬಾಚಿಕೊಳ್ಳುವುದೇ ಎಲ್ಲರ ಗುರಿಯಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ.
’ಬಡವರ ಬಿನ್ನಪವ ಕೇಳುವವರಿಲ್ಲ’

ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ರೇಣುಕಾಚಾರ್ಯ ತಮ್ಮ ಬಳಗವನ್ನುದ್ದೇಶಿಸಿ ಮಾತನಾಡುತ್ತಾ, ತಾನು ಹನುಮಂತ ಮುಖ್ಯಮಂತ್ರಿಗಳ ನಮ್ರ ಸೇವಕ ಎಂದು ಹೇಳಿಕೊಂಡರು. ಹೆಂಡ ಕುಡಿದ ಮಂಗ ಎಂದಿದ್ದರೆ ಅವರ ವ್ಯಕ್ತಿತ್ವಕ್ಕೆ ಸರಿಯಾದ ಹೋಲಿಕೆಯಾಗುತ್ತಿತ್ತು.

ಅವರ ಮಾತುಗಳನ್ನು ದೃಶ್ಯ ಮಾಧ್ಯಮದಲ್ಲಿ ನೋಡಿದಾಗ ರಾಮಾಯಣದ ಘಟನೆಯೊಂದು ನೆನಪಿಗೆ ಬಂತು; ರಾವಣನನ್ನು ಕೊಂದು ಸೀತೆಯನ್ನು ಅಯೋಧ್ಯೆಗೆ ಕರೆ ತಂದ ಮೇಲೆ ಕೃತಜ್ನಾಪೂರ್ವಕವಾಗಿ ರಾಮನ ಅರಮನೆಯಲ್ಲಿ ಕಪಿಸೈನಕ್ಕೆ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಭೂರಿಬೋಜನದಲ್ಲಿ ಉಪ್ಪಿನಕಾಯಿಯೂ ಇತ್ತು. ಒಂದು ಮರಿ ಮಂಗ ಅದನ್ನು ಅಂಗೈನಲ್ಲಿ ತೆಗೆದುಕೊಂಡು ಬೆರಳುಗಳಿಂದ ಮಡಚಿ ಒತ್ತಿ ಹಿಡಿದು ಚೀಪಲು ನೋಡಿದಾಗ ಅದರ ಗೊರಟು ಮೇಲಕ್ಕೆ ಹಾರಿತಂತೆ. ತಕ್ಷಣ ಮರಿಮಂಗ ’ನನಗಿಂತ ಎತ್ತರ ಜಿಗಿತಿಯಾ’ ಎಂದು ಊಟ ಬಿಟ್ಟು ಗೊರಟಿಗಿಂತ ಮೇಲಕ್ಕೆ ಜಿಗಿತಂತೆ. ಪಕ್ಕದಲ್ಲಿ ಕೂತ ಇನ್ನೊಂದು ಮಂಗ ಮರಿಮಂಗನ ಜಿಗಿತ ಕಂಡು, ’ನಿನಗಿಂತ ಎತ್ತರಕ್ಕೆ ನಾ ಜಿಗಿಯಬಲ್ಲೆ’ ಎನ್ನುತ್ತಾ ಮೇಲಕ್ಕೆ ಜಿಗಿಯಿತಂತೆ. ಅದನ್ನು ಕಂಡು ಇನ್ನೊಂದು, ಮಗದೊಂದು ಎನ್ನುತ್ತಾ ಊಟದ ಪಂಕ್ತಿಯಲ್ಲಿದ್ದ ಎಲ್ಲಾ ಮಂಗಗಳೂ ಲಾಗ ಹೊಡೆಯತೊಡಗಿದವಂತೆ. ಕೊನೆಗೆ ಹನುಮಂತನೂ ಇವರಲ್ಲಿ ಸೇರಿಕೊಂಡನಂತೆ.

’ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು.’ ಪಾಳೆಗಾರಿಕೆ ಗುಣಗಳನ್ನು ರಕ್ತಗತವಾಗಿಸಿಕೊಂಡಿರುವ ರೆಡ್ಡಿ ಬಳಗ, ಪುರುಷ ಪ್ರಾಧಾನ್ಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬಿಜೆಪಿ ಸರಕಾರ, ಸಿಕ್ಕಷ್ಟು ಬಾಚಿಕೊಳ್ಳೋಣ ಎನ್ನುವ ಆಸೆಬುರುಕ ಜನಪ್ರತಿನಿಧಿಗಳು- ಮಾನವಂತರಿಗಿದು ಕಾಲವಲ್ಲ.

Sunday, December 13, 2009

ರೈತರಿಗಿನ್ನು ದೇವರೇ ಗತಿ!

ಬಳ್ಳಾರಿಯ ವಿವಾದಿತ, ಉದ್ದೇಶಿತ ವಿಮಾನ ನಿಲ್ದಾಣದ ಸರ್ವೆ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಾಗ, ಕೊನೆಗೂ ರೈತರ ತಾಳ್ಮೆಯ ಕಟ್ಟೆಯೊಡೆಯಿತು; ಅವರ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯೊಂದು ಒದಗಿಬಿಟ್ಟಿತು, ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತದೆಯೆಂದು ಅಂದುಕೊಳ್ಳುತ್ತಿರುವಾಗಲೇ ಎಲ್ಲವೂ ಠುಸ್ಸಾಯಿತು.ರೈತರು ಆತನನ್ನು ಮುಕ್ತಗೊಳಿಸಿದರು.

’ನಾನು ದಾರಿ ತಪ್ಪಿದ್ದೆ. ರೈತರು ನನಗೆ ದಾರಿ ತೋರಿಸಿದರು.ಅವರೇನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ’ ಎಂದು ರೈತರೊಡನಿದ್ದಾಗ ಮಾಧ್ಯಮಕ್ಕೆ ಹೇಳಿದ್ದ ಆತ ತಿರುಗಿಬಿದ್ದು ಪೋಲಿಸ್ ಸ್ಟೇಷನ್ ನಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧವೇ ಅಪಹರಣದ ಕೇಸು ದಾಖಲಿಸಿದ. ಪೋಲಿಸರು ೫೦ ಮಂದಿಯನ್ನು ಬಂದಿಸಿದರು.

ಬಳ್ಳಾರಿಯಲ್ಲಿ ಏನು ಬೇಕಾದರೂ ಆಗಬಹುದು!

ತುಂಗಭದ್ರೆಯ ನೀರುಂಡು ಹಸಿರಿನಿಂದ ಕಂಗೊಳಿಸುತ್ತಿರುವ ಚಾಗನೂರು,ಸಿರಿವಾರ ಗ್ರಾಮಗಳು ಸರಕಾರಿ ಕಡತಗಳಲ್ಲಿ ಖುಷ್ಕಿ ಜಮೀನಾಗಿ ಪರಿವರ್ತನೆಗೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ಖರೀದಿ ಮಾಡಿ ’ರೆಸಾರ್ಟ್ ಅರೆಸ್ಟ್’ ಮಾಡಿ ಇಡಬಹುದು.

’ನಮ್ಮದು ಖುಷ್ಕಿ ಜಮೀನಲ್ಲ; ಅದು ನೀರಾವರಿ ಜಮೀನು; ಫಲವತ್ತಾದ ಕಪ್ಪು ಮಣ್ಣು; ಇಲ್ಲಿ ನಾವು ಹತ್ತಿ. ತೊಗರಿ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಕಡಲೆ,ತರಕಾರಿಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮ ಅನ್ನವನ್ನು ಕಿತ್ತುಕೊಳ್ಳಬೇಡಿ. ನಮ್ಮ ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ.

ಬಳ್ಳಾರಿಜಿಲ್ಲೆಯ ಉಸ್ತುವಾರಿ ಸಚಿವರೂ, ಗಣಿದೊರೆಗಳೂ ಆದ ಜನಾರ್ಧನ ರೆಡ್ಡಿ ಮತ್ತವರ ಬಳಗ ಇದನ್ನೊಂದು ಪ್ರತಿಷ್ಟೆಯ ವಿಷಯವಾಗಿ ಪರಿಗಣಿಸಿದ್ದಾರೆ. ಅವರ ದಾಕ್ಷಿಣ್ಯದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ’ ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ’ ಎನ್ನುತ್ತಿದ್ದಾರೆ.

ದೀನ-ದಲಿತರು, ನೊಂದವರು, ಅಸಹಾಯಕರೆಡೆಗೆ ಪ್ರಭುತ್ವವೇ ನಡೆದು ಬರಬೇಕು. ಆದರೆ ಆಡಳಿತ ಪಕ್ಷ ಯಾವುದು? ವಿರೋಧಪಕ್ಷ ಯಾವುದು? ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಅನುಕಂಪ ಈಗ ಅವರಿಗೇ ಬೇಕಾಗಿದೆ!

ಇನ್ನು ಸದಾ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗ ರಾಜಕಾರಣಿಗಳ, ಉದ್ದಿಮೆದಾರರ ಕೃಪಾಕಟಾಕ್ಷದಲ್ಲಿ ಸಮೃದ್ಧವಾಗಿ ಬೆಳೆಯುತ್ತಲಿದೆ! ರಾಜಧಾನಿಯನ್ನು ಬಿಟ್ಟರೆ ಬೇರೆಡೆ ಅವರ ಅರಿವು ವಿಸ್ತರಿಸುವುದಿಲ್ಲ. ಪತ್ರಕರ್ತರ ಆದ್ಯತೆಗಳೇ ಈಗ ಬೇರೆ. ಸಮಾಜದ ಧ್ವನಿಯಾಗಬೇಕಾಗಿದ್ದ ಸಾಹಿತಿ-ಕಲಾವಿದರು ಸ್ವಕೇಂದ್ರಿತ ಗುಂಪುಗಳನ್ನು ಕಟ್ಟಿಕೊಂಡು ಪರಸ್ಪರ ಹೊಗಳಿಕೊಳ್ಳುತ್ತಾ ಭ್ರಮಾಲೋಕದಲ್ಲಿ ಮುಳುಗಿದ್ದಾರೆ.
ಮಂಗಳವಾರ ಸಿರಿವಾರ, ಚಾಮಲಾಪುರಗಳಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಬುಧವಾರ ಹಾಸನ, ಚಾಮರಾಜನಗರದಲ್ಲಿ ಭೂಸ್ವಾದೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಗುರುವಾರ ದಾವಣಗೆರೆ, ಚಾಮರಾಜ ನಗರಗಳಲ್ಲಿ ಪೋಲಿಸರು ಲಾಠಿ ಬೀಸಿದರು. ಅಕ್ಷರಶಃ ಅಟ್ಟಾಡಿಸಿಕೊಂಡು ರಕ್ತ ಬರುವಂತೆ ಹೊಡೆದರು. ಮಹಿಳೆಯರನ್ನೂ ಬಿಡಲಿಲ್ಲ. ಜಿಲ್ಲಾ ದಂಡಾಧಿಕಾರಿಯೆಂದು ಕರೆಯಲಾಗುವ ಜಿಲ್ಲಾಧಿಕಾರಿಯವರೇ ಸ್ವತಃ ಕೈಯಲ್ಲಿ ಲಾಠಿ ಹಿಡಿದು ರೈತರನ್ನು ನಿಯಂತ್ರಿಸುತ್ತಿದ್ದರು. ಪುಣ್ಯಕ್ಕೆ ’ಚಡ್ಡಿ’ ಹಾಕಿರಲಿಲ್ಲ ಅಷ್ಟೇ!. ಇವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ ಸೇರಿ ೪೦ ಮಂದಿ ರೈತರನ್ನು ನ್ಯಾಯಾಂಗ ಬಂದನಕ್ಕೆ ತಳ್ಳಿದರು.

ಪೋಲಿಸರು ಲಾಠಿ ಚಾರ್ಜ್ ಮಾಡಿದ್ದನ್ನು ಶನಿವಾರ ದಾವಣಗೆರೆಯಲ್ಲಿ ಕೃಷಿ ಸಚಿವ ರವೀಂದ್ರನಾಥ್ ಸಮರ್ಥಿಸಿಕೊಂಡರು. ರೈತರು ಸಂಯಮದಿಂದ ವರ್ತಿಸಬೇಕೆತ್ತಿಂದು ಹೇಳಿದರು. ಕಳೆದ ವರ್ಷ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.ಅದಾದ ಒಂದು ವಾರಕ್ಕೆ ಇದೇ ಸಚಿವರ ಪಕ್ಕದ ಕ್ಶೇತ್ರದ ಇಬ್ಬರು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೇ ಕೃಷಿ ಸಚಿವರು ಹೇಳಿದ್ದೇನು ಗೊತ್ತೇ? ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’. ಇವರು ನಮ್ಮ ಕೃಷಿ ಸಚಿವರು!
ನಾಡಿಗೇ ಅನ್ನ ನೀಡುವ ರೈತ ಅಷ್ಟು ನಿಕೃಷ್ಟನೇ? ಅವರೇನು ಸಮಾಜಘಾತುಕ ಶಕ್ತಿಗಳೇ? ಪೋಲಿಸರ ದೃಷ್ಟಿಯಲ್ಲಿ ಕ್ರಿಮಿನಲ್ಸ್ ಗೂ ರೈತರಿಗೂ ವ್ಯತ್ಯಾಸವೇ ಇಲ್ಲವೇ? ಗೃಹಮಂತ್ರಿಗಳೇ ಉತ್ತರಿಸಬೇಕು. ”ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಔದಾರ್ಯವಾಗಿ ಮಾತನಾಡಿ ಬೀದಿಯಲ್ಲಿ ಹೊಡೆಸ್ತಾರೆ”ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಹೊಸ್ತಿಲಲ್ಲಿರುವಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರು ನಡೆಸಿದರು. ಆ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಲಿದೆ.

ರೈತರು ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆ, ಶೋಷಣೆ, ಮಾರುಕಟ್ಟೆ ತಾರತಮ್ಯ...ಇತ್ಯಾದಿಗಳ ಬಗ್ಗೆ ಆಳುವವರ ಮುಂದೆ, ಆಧಿಕಾರಿಗಳ ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿದ್ದಾರೆ. ಆದರೆ ಅವರಿಗೆ ಪುರುಸೊತ್ತಿಲ್ಲ. ಯಾರನ್ನಾದರೂ ಮಾತುಕತೆಗೆ ಕಳುಹಿಸುವ ವ್ಯವಧಾನವಿಲ್ಲ. ರೈತರ ಮೊರೆ ಅರಣ್ಯ ರೋಧನವಾಗುತ್ತಿದೆ.

ಉಳ್ಳವರಿಗೆ ತಮ್ಮ ಅತ್ಯುನ್ನತಿಗಾಗಿ ರೈತರ ಫಲವತ್ತಾದ ಭೂಮಿಯೇ ಬೇಕಾಗಿದೆ. ವಿಶೇಷ ಅರ್ಥಿಕ ವಲಯವನ್ನೇ ತೆಗೆದುಕೊಳ್ಳಿ; ಅಲ್ಲೆಲ್ಲಾ ವಶಪಡಿಸಿಕೊಂಡ, ವಶಪಡಿಸಿಕೊಳ್ಳುತ್ತಿರುವ ಭೂಮಿಯೆಲ್ಲವೂ ಫಲವತ್ತಾದ ಭೂಮಿಯೇ. ಯಾಕೆ ಇವರಿಗೆ ಒಣಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಗುವುದಿಲ್ಲವೇ? ಹೀಗೆ ಕೃಷಿ ಭೂಮಿಯೆಲ್ಲಾ ಕೈಗಾರಿಕ ವಲಯಗಳಾಗಿ, ವಸತಿನಿಲಯಗಳಾಗಿ ಬದಲಾದರೆ ಭವಿಷ್ಯದಲ್ಲಿ ಆಹಾರ ಭದ್ರತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರ ಜೊತೆಗೆ ಮೂಡುವ ಬಹು ಮುಖ್ಯ ಪ್ರಶ್ನೆ ಎಂದರೆ ನಮಗೆ ಯಾವ ರೀತಿಯ ಅಬಿವೃದ್ಧಿ ಬೇಕು? ಅಬಿವೃದ್ಧಿ ತಂದಿತ್ತ ಸಮಸ್ಯೆಗಳು ಈಗ ಕೊಪೆನ್ ಹೆಗನ್ ನಲ್ಲಿ ನಡೆಯುತ್ತಿರುವ ’ಹವಾಮಾನ ವೈಪರಿತ್ಯ ಶ್ರ‍ಂಗ ಸಭೆ’ಯಲ್ಲಿ ಚರ್ಚಿತವಾಗುತ್ತಲಿದೆ.

ಬಳ್ಳಾರಿಗೆ ಬನ್ನಿ; ಇಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳಿವೆ. ನಗರದ ಕಂಟೋನ್ಮೆಂಟ್ ಬಳಿ ಇರುವ ಐತಿಹಾಸಿಕ ವಿಮಾನ ನಿಲ್ದಾಣ. ಇದು ಎರಡನೇ ಮಹಾಯುದ್ದ ಕಾಲದಲ್ಲಿ ವಾಯುನೆಲೆಯಾಗಿ ಬಳಕೆಯಾಗಿದ್ದ ವಿಮಾನ ನಿಲ್ದಾಣ. ಇನ್ನೊಂದು ನಗರದಿಂದ ೪೦ ಕಿ.ಮೀ ದೂರದಲ್ಲಿರುವ ತೋರಣಗಲ್ಲಿರುವ ಜಿಂದಾಲ್ ಏರ್ ಪೋರ್ಟ್. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆ ಹಾಗು ಬೆಳೆಯುತ್ತಿರುವ ಕೈಗಾರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೆಯ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆಸಿ ನಗರದಿಂದ ೧೨ ಕಿ.ಮೀ ದೂರದಲ್ಲಿರುವ ಪಾಪಿನಾಯಕನಹಳ್ಳಿಯನ್ನು ಸೂಕ್ತ ಪ್ರದೇಶವೆಂದು ೧೯೯೬ರಲ್ಲಿ ಎಂ.ಪಿ.ಪ್ರಕಾಶ್ ಅಧಿಕಾರವಧಿಯಲ್ಲಿ ಗುರುತಿಸಲಾಗಿತ್ತು. ಆದರೆ ಅದಕ್ಕೆ ಚಾಲನೆ ದೊರೆತಿರಲಿಲ್ಲ.

ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಪಿನಾಯಕಹಳ್ಳಿಯ ಒಣಭೂಮಿಯನ್ನು ಬಿಟ್ಟು ಚಾಗನೂರು, ಸಿರಿವಾರದ ನೀರಾವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನಾರ್ಧನ ರೆಡ್ಡಿ ಆದೇಶ ನೀಡಿದರು. ’ವಿಜಯನಗರ ಅರ್ಬನ್ ಡೆವಲಪ್ ಮೆಂಟ್ ಏರಿಯಾ’ ದೊಳಗೆ ಈ ಜಮೀನು ಬರುತ್ತದೆಯೆಂಬುದು ರೆಡ್ಡಿಗಳ ವಾದ. ಇದನ್ನು ವಿರೋಧಿಸಿ ರೈತರು ಕಳೆದ ಪೆ.೨೪ರಂದು ಶಾಂತಿಯುತ ಬೃಹತ್ ಮೆರವಣಿಗೆ ನಡೆಸಿದರು. ಆಗ ಪೋಲಿಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ಅದರೂ ರೈತರು ಧೃತಿಗೆಡದೆ ಪ್ರಭುತ್ವದ ವಿರುದ್ಧ ಹೊರಾಡುತ್ತಲೇ ಬರುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ’ನರ್ಮದಾ ಬಚಾವೋ’ ಆಂದೋಲನದ ರೂವಾರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ನ.೧೦ರಂದು ಚಾಗನೂರು, ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರೊಡನೆ ಆಪ್ತ ಚರ್ಚೆ ನಡೆಸಿದ್ದರು.

ಈಗ ಮತ್ತೆ ರೈತರ ವಿರೋಧದ ನಡುವೆ, ಅವರನ್ನೆಲ್ಲಾ ಊರ ಹೊರಗಿಟ್ಟು, ಪೋಲಿಸ್ ಸರ್ಪಗಾವಲಿನಲ್ಲಿ ಸರಕಾರ ಸರ್ವೆ ಕಾರ್ಯ ಮುಗಿಸಿದೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಲಾಠಿ ಹಿಡಿದು ಹಸಿರು ಶಾಲು ಹಾಕಿದ ರೈತರನ್ನು ಬೆದರಿಸುತ್ತಿದ್ದಾರೆ. ಅಧಿಕಾರ ವರ್ಗ ಎಂದೂ ರೈತ ಪರವಾಗಿರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಓಟು ಹಾಕಿದವರ ಋಣದಲ್ಲಿರಬೇಕಲ್ಲವೇ? ಪಾಪ ಅವರಿಗೆ ಮರೆವಿನ ರೋಗ!

ಮುಂದೇನು? ಈಗ ಅವರ ಬೆಂಬಲಕ್ಕೆ ಜನಪರ ಸಂಘಟನೆಗಳು ಮುಂದಾಗಬೇಕು. ನಾಡು-ನುಡಿ, ನೆಲ-ಜಲ ಸಂರಕ್ಷಣೆಗಾಗಿ ಪಣತೊಟ್ಟಿರುವ ಹಲವು ಸಂಘಟನೆಗಳು ನಮ್ಮಲ್ಲಿವೆ.ಅವು ರೈತರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅವೆಲ್ಲಾ ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ಬರಲು ಸಾಧ್ಯವೇ?. ’ರೈತ ಸಂಘ’ ಮತ್ತೆ ಮೈಕೊಡವಿ ನಿಲ್ಲಬೇಕು. ಒಟ್ಟಾಗಬೇಕು.

ಅಷ್ಟಕ್ಕೂ ರೆಡ್ಡಿಗಳಿಗೆ ಈ ಭೂಮಿಯೇ ಯಾಕೆ ಬೇಕು? ಸ್ಥಳಿಯರು ಹೇಳುವ ಪ್ರಕಾರ ಚಾಗುವಾರ ಮತ್ತುಸಿರಿವಾರದ ಸುತ್ತಮುತ್ತಲಿನ ಸುಮಾರು ೨೮೦ ಎಕ್ರೆ ಜಮೀನನ್ನು ರೆಡ್ಡಿಗಳು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರಂತೆ. ಇಲ್ಲಿ ವಿಮಾನ ನಿಲ್ದಾಣ ಬಂದರೆ ಈ ಜಮೀನಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಬಹುದೆಂಬುದು ಅವರ ದೂರಾಲೋಚನೆ. ಅವರ ದೂರಾಲೋಚನೆ ರೈತರ ಪಾಲಿಗೆ ದುರಾಲೋಚನೆಯಾಗಿದೆ.

ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಎಕ್ರೆಗೆ ೧೨ ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂಬುದು ಸರಕಾರದ ಸಮರ್ಥನೆ. ಆದರೆ ದುಡ್ಡುತಗೊಂಡು ರೈತರೇನು ಮಾಡಬಲ್ಲರು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರೆಲ್ಲಾ ಎಕ್ರೆಗೆ ಕನಿಷ್ಟ ೫೦ ಲಕ್ಷದಿಂದ ಎರಡು ಕೋಟಿ ತನಕ ಪಡೆದುಕೊಂಡಿದ್ದರು. ಅದರಲ್ಲಿ ಬಹಳಷ್ಟು ಮಂದಿ ದುಂದುವೆಚ್ಚ ಮಾಡಿ ಇರುವ ದುಡ್ಡನ್ನೆಲ್ಲಾ ಕಳೆದುಕೊಂಡು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದಾರೆ.

ದುಡ್ಡು ಕರಗುತ್ತದೆ. ಅದರೆ ಭೂಮಿ ಹಾಗಲ್ಲ; ಅದು ಮೂಲಧನ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಲೇ ಹೋಗುತ್ತದೆ. ಅದರ ಬಡ್ಡಿಯಿಂದಲೇ ರೈತ ಜೀವನ ನಿರ್ವಹಣೆ ಮಾಡುತ್ತಾನೆ. ತನಗೆ ಅನ್ನ ನೀಡುವ ಭೂಮಾತೆಯನ್ನು ಆತ ದೇವರೆಂದು ಪೂಜಿಸುತ್ತಾನೆ; ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾನೆ. ಮಣ್ಣು ಮಾರಿ ದುಡ್ಡು ಬಾಚಿಕೊಳ್ಳುವವರಿಗಿದು ಅರ್ಥವಾಗದ ವಿಚಾರ.