Monday, December 29, 2008

ಮಲೀನಗೊಳ್ಳದಿರಲಿ ಭಾವಕೋಶ

ಯುಗಾದಿಯನ್ನು ವರ್ಷದ ಆರಂಭ ಎಂದು ನಮ್ಮ ಪರಂಪರೆಯಿಂದ ಒಪ್ಪಿಕೊಂಡು ಬಂದರೂ ಜನವರಿ ಒಂದನ್ನು ಹೊಸ ವರ್ಷದ ಸಂಭ್ರಮಾಚರಣೆಯಾಗಿಸುವುದು ಇತ್ತೀಚೆಗೆ ಜನಪ್ರಿಯವಾಗುತ್ತಲಿದೆ. ಮನುಷ್ಯ ಯಾವಾಗಲೂ ಭವಿಷ್ಯದಲ್ಲಿಯೇ ಬದುಕುತ್ತಿರುತ್ತಾನೆ. ಯಾವತ್ತೂ ಆತ ವರ್ತಮಾನದಲ್ಲಿ ಸುಖಿಯಲ್ಲ. ಮುಂದೆ ಇನ್ನೂ ಒಳ್ಳೆಯ ದಿನಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಬದುಕಿನ ಸವಾಲುಗಳನ್ನು ಎದುರಿಸುತ್ತಾ ಹೋಗುತ್ತಾನೆ. ವರ್ಷದ ಕೊನೆಯಲ್ಲಿ ನಾವೀಗ ನಿಂತಿದ್ದೇವೆ. ಬರಲಿರುವ ವರ್ಷ ಹರ್ಷದಾಯಕವಾಗಿರಬಹುದೆಂಬ ನಿರೀಕ್ಷೆ ಎಲ್ಲರದ್ದು. ಅದಕ್ಕಾಗಿ ಅನೇಕರು ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅವುಗಳಲ್ಲಿ ಬಹಳಷ್ಟು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಅವು ಮುಂದಿನ ವರ್ಷಾಂತ್ಯಕ್ಕೆ ಮತ್ತೆ ಹೊಸ ನಿರ್ಣಯಗಳಾಗಿ ಆವರ್ತನಗೊಳ್ಳುತ್ತವೆ.

 ನನ್ನಲ್ಲೂ ಹೊಸ ನಿರ್ಣಯಗಳಿವೆ. ಅವುಗಳನ್ನಿಲ್ಲಿ ದಾಖಲಿಸುವುದರಲ್ಲಿ ಸ್ವಾರ್ಥವಿದೆ. ಮಾತುಗಳು ಗಾಳಿಯಲ್ಲಿ ಹಾರಿ ಹೋಗುತ್ತವೆ; ಯೋಚನೆಗಳು ಮನಸ್ಸಿನಯೇ ಇಂಗಿ ಹೋಗುತ್ತವೆ. ಅವುಗಳನ್ನು ಬರಹರೂಪಕ್ಕಿಳಿಸಿದರೆ ಅವು ದಾಖಲೆಗಳಾಗುತ್ತವೆ. ಅದಕ್ಕೆ ಬದ್ಧತೆ ಪ್ರಾಪ್ತವಾಗುತ್ತದೆ. ಅವುಗಳನ್ನು ಹೀಗೆ ಸಾರ್ವಜನಿಕಗೊಳಿಸಿದಾಗಲಂತೂ ಅದು ಸಾಮಾಜಿಕ ಜವಾಬ್ದಾರಿಯ ರೂಪ ಪಡೆದುಕೊಳ್ಳುತ್ತದೆ.

 ಬೆಂಗಳೂರಿನಲ್ಲಿ ನನ್ನಂತವಳಿಗೆ ಕನಸುಗಳು ಹುಟ್ಟಿಕೊಳ್ಳುವುದು ಕಷ್ಟ. ಏನು ಮಾಡಬೇಕಾದರೂ ಬೇರೆಯವರನ್ನು ಅವಲಂಬಿಸಬೇಕಾದುದು ಅನಿವಾರ್ಯ. ಹಾಗಾಗಿ ಓದದೆ ಉಳಿಸಿಕೊಂಡ ಪುಸ್ತಕಗಳನ್ನು ಓದಬೇಕೆಂದುಕೊಂಡಿದ್ದೇನೆ. ಅದರ ಪೂರ್ವಭಾವಿಯಾಗಿ ನಿನ್ನೆ ತಾನೆ ಮಾರ್ಕೆಟಿಗೆ ಹೋಗಿ ಆರಡಿ ಎತ್ತರ ಮೂರಡಿ ಅಗಲದ ನಾಲ್ಕು ಬುಕ್ ಶೆಲ್ಪ್ ಗಳನ್ನು ತಂದು ಪುಸ್ತಕಗಳನ್ನು ನೀಟಾಗಿ ಜೋಡಿಸಿ ಇಟ್ಟೆ. ಪುಸ್ತಕದ ರಾಶಿ ಎಷ್ಟಿದೆಯೆಂದರೆ ಇನ್ನೂ ಇಂತಹ ಮೂರು ಶೆಲ್ಪ್ ಗಳಾದರೂ ಬೇಕು.

 ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ, ಕೊನೆಗೆಲ್ಲೋ ನೆಲೆ ಕಂಡುಕೊಳ್ಳುವುದು ಬದುಕಿನ ಸೋಜಿಗಗಳಲ್ಲೊಂದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಹಲವು ಬಾರಿ ನಾವು ವ್ಯವಸ್ಥೆಯೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಾಡಿಕೊಳ್ಳಬೇಕು. ಇಲ್ಲವೇ ವ್ಯವಸ್ಥೆಯೊಳಗಿದ್ದುಕೊಂಡೇ ಅದನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. ವ್ಯವಸ್ಥೆಯ ಲೋಪದೋಶಗಳನ್ನು ಸರಿಪಡಿಸುವ ಪ್ರಯತ್ನಕ್ಕೆ ಸಾಂಘಿಕ ಹೋರಾಟದ ಅಗತ್ಯ ಇದೆ. ಅದು ಒಂಟಿ ದನಿಯಾದರೆ ವ್ಯವಸ್ಥೆ ನಮ್ಮನ್ನು ರಿಜೆಕ್ಟ್ ಮಾಡುತ್ತಾ ಹೋಗುತ್ತದೆ. ಆಗ ನಾವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲೇ ಬೇಕು. ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೆ ಕಾರಣವೂ ಇರುವುದಿಲ್ಲ; ಬೆಲೆಯೂ ಬರುವುದಿಲ್ಲ. ಹಾಗೆ ನಾನು ಕಂಡು ಕೊಂಡ ಹಾದಿ ’ಬ್ಯಾಕ್ ಟು ನೇಚರ್’ ಅಂದರೆ ಕೃಷಿ.

 ನೆಲದೊಡನೆ ಮಾತು. ಗಿಡ-ಮರಗಳ ಒಡನಾಟ, ಖಗ-ಮೃಗಗಳ ಮಿಂಚು, ನದಿಯ ಸಂಗೀತ. ಅಲ್ಲೀಗ ನನ್ನ ಕನಸುಗಳು ಮೊಳಕೆಯೊಡೆಯುತ್ತಿವೆ. ನಾನು ಮಲೆನಾಡಿನ ಸೆರಗಿನಲ್ಲಿ, ಕಪಿಲೆಯ ದಂಡೆಯಲ್ಲಿ ಜಮೀನು ಖರಿದಿಸಿ ಒಂದು ವರ್ಷವಾಯಿತು. ಮೂರು ಎಕ್ರೆ ಫಲ ಬರುವ ಅಡಿಕೆ ತೋಟವಿದೆ. ತೆಂಗು, ಮಾವು, ಹಲಸು, ಹುಣಸೆ, ಬಾಳೆ ಸೇರಿದಂತೆ ಎಲ್ಲಾ ರೀತಿಯ ಹಣ್ಣಿನ ಗಿಡಗಳಿವೆ. ಹದಗೆಟ್ಟ ಸ್ಥಿತಿಯಲ್ಲಿದ್ದ ಅದನ್ನು ಕಳೆ ಕಿತ್ತು ಗೊಬ್ಬರ ಹಾಕಿ ನಳನಳಿಸುವಂತೆ ಮಾಡಿದ್ದಾಯ್ತು. ಜೊತೆಗೆ ಇನ್ನೂರೈವತ್ತು ಕೊಕ್ಕೊ ಗಿಡ ನೆಡಿಸಿದೆ. ಮುಂದಿನ ವರ್ಷ ಇಡೀ ಜಮೀನಿಗೆ ಸೋಲಾರ್ ಬೇಲಿ ಹಾಕಿಸಬೇಕು.ಖಾಲಿ ಇರುವ ಒಂದೆಕ್ರೆ ಜಾಗದಲ್ಲಿ ಉಳ್ಳಾಲ-೩ ಗೇರು ಸಸಿ ಹಾಕಬೇಕೆಂದಿದ್ದೇನೆ. ಅಡಿಕೆ ಗಿಡಗಳು ತುಂಬಾ ಹಳೆಯದಾಗಿ ಮುಗಿಲು ಮುಟ್ಟುತ್ತಿವೆ. ಹಾಗಾಗಿ ಮದ್ದು ಬಿಡಲು, ಅಡಿಕೆ ಕೊಯ್ಯಲು ಕಷ್ಟವಾಗುತ್ತಿದೆ. ಅದಕ್ಕಾಗಿ ರೀಪ್ಲಾಂಟ್ ಮಾಡಲು ನಿರ್ಧರಿಸಿದ್ದೇನೆ. ಕಳೆದ ವರ್ಷವೇ ಎರಡು ಸಾವಿರ ಮಂಗಳ ಗಿಡಗಳ ಬೀಜ ಹಾಕಿಟ್ಟಿದ್ದೇನೆ. ಕಳೆದ ವಾರ ಹೊಂಡ ತೆಗೆಯಲು ಕಾಂಟ್ರಾಕ್ಟ್ ಕೊಟ್ಟು ಬಂದಿದ್ದೇನೆ. ಇಡೀ ತೋಟಕ್ಕೆ ಸ್ಪಿಂಕ್ಲರ್ ಹಾಕುವ ಯೋಚನೆಯೂ ಇದೆ. ಸ್ವಲ್ಪ ನೇಂದ್ರ ಬಾಳೆ ಗಡ್ಡೆ ಹಾಕಬೇಕು. ಇನ್ನೈದು ವರ್ಷಕ್ಕೆ ಅದನ್ನು ನಂದನ ವನವಾಗಿಸುವ ಕನಸು ನನ್ನದು. ಬಳಲಿದ ಮೈ ಮನಸ್ಸುಗಳು ಅಲ್ಲಿ ಬಂದು ಜೀವ ಚೈತನ್ಯ ತುಂಬಿಕೊಳ್ಳಬೇಕು.ಅಲ್ಲಿಗೆ ನನ್ನ ಆಪ್ತರೆಲ್ಲಾ-ನಿಮ್ಮನ್ನೂ ಸೇರಿಸಿ-ಆಗಾಗ ಬರುತ್ತಿರಬೇಕು. ಒಂದು ಧ್ಯಾನ ಮಂದಿರ...ಲೈಬ್ರರಿ...ಮ್ಯೂಸಿಕ್....ಇನ್ನೂ ಏನೇನೆನೋ ಕನಸು ಕನವರಿಕೆಗಳು. ಇದು ನಾನು ಕಂಡ; ಕಾಣುತ್ತಿರುವ ಕನಸು. 

ವೈಯಕ್ತಿಕ ಮಟ್ಟದಲ್ಲಿರುವ ಈ ಕನಸು ನನಸಾಗುವುದು ನನ್ನ ಶ್ರದ್ಧೆ ಮತ್ತು ಪರಿಶ್ರಮದ ಮೇಲೆ ನಿಂತಿದೆ. ಅಂದರೆ ಇಂತಹ ಕೆಲಸ ಕಾರ್ಯಗಳು ವ್ಯಕ್ತಿಯೊಬ್ಬನ ದೈಹಿಕ ಶ್ರಮ ಮತ್ತು ಕ್ರಿಯಾಶೀಲತೆಯನ್ನಷ್ಟೇ ಬೇಡುತ್ತವೆ. ಆದರೆ ಭಾವಕೋಶದ ವಿಚಾರ ಹಾಗಲ್ಲ. ಭಾವಕೋಶಕ್ಕೆ ಸಂಬಂಧಪಟ್ಟಂತೆ ಎರಡು ಸಂಗತಿಗಳನ್ನಿಲ್ಲಿ ಹೇಳುತ್ತಿದ್ದೇನೆ. ನನ್ನ ’ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೆಯಬೇಕು?’ ಎಂಬ ಬರಹಕ್ಕೆ ಕಮೆಂಟ್ ಬರೆಯುತ್ತಾ ಸುಧನ್ವಾ ಹೇಳುತ್ತಾರೆ, ’ನಮ್ಮ ಭಾವ ಪ್ರಪಂಚವನ್ನು ಉಳಿಸಿಕೊಳ್ಳುವುದೇ ಈಗಿನ ದೊಡ್ಡ ಕೆಲಸ’. ಜೋಗಿ ತಮ್ಮ ಇತ್ತಿಚೆಗಿನ ಕಾದಂಬರಿ ’ಯಾಮಿನಿ’ ಯಲ್ಲಿ ತಮ್ಮ ಬಗ್ಗೆ ಬರೆಯುತ್ತಾ,”ಹಳೆಯ ಗೆಳೆಯರು ಧ್ರುವತಾರೆ. ಹೊಸಬರು ನಾಳಿನಾಚೆಯ ಬಾಗಿಲು” ಎನ್ನುತ್ತಾರೆ. ಅಂದರೆ ಏನರ್ಥ? ನಮ್ಮ ಭಾವಕೋಶ ಮಲೀನಗೊಳ್ಳುತ್ತಿದೆ! ಅದನ್ನು ಕಾಯ್ದುಕೊಳ್ಳುವ ಭರದಲ್ಲಿ ನಾವೆಲ್ಲಾ ಒಬ್ಬಂಟಿಗರಾಗುತ್ತಿದ್ದೇವೆ; ದ್ವೀಪವಾಗುತ್ತಿದ್ದೇವೆ.

 ನಿಜ. ನಮಗೊಂದು ಖಾಸಗಿ ಬದುಕಿದೆ. ಅಲ್ಲಿ ಒಳ್ಳೆಯ ಮನಸ್ಸುಗಳು ಮಾತ್ರ ಹರಿದಾಡುತ್ತಿರಲಿ ಎಂದು ಆಶಿಸುವುದು ತಪ್ಪಲ್ಲ. ಆದರೆ ಅಂತವರನ್ನು ಎಲ್ಲಿಂದ ಹುಡುಕಿ ನಮ್ಮವರನ್ನಾಗಿಸಿಕೊಳ್ಳೋಣ? ಅದು ಒಳ್ಳೆಯ ಪುಸ್ತಕಗಳನ್ನು ಹುಡುಕಿ ತಂದು ಶೆಲ್ಪ್ ನಲ್ಲಿಟ್ಟುಕೊಂಡಷ್ಟು ಸುಲಭವಲ್ಲ. ಒಳ್ಳೆಯ ಗೆಳೆಯರನ್ನು ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ಅಂತಹ ಪುಣ್ಯ ಹೊಸ ವರ್ಷದಲ್ಲಿ ಎಲ್ಲರಿಗೂ ಲಭಿಸಲಿ. ಯಾರ ಭಾವಕೋಶವೂ ಛಿದ್ರಗೊಳ್ಳದಿರಲಿ.

Monday, December 15, 2008

’ನನ್ನದಾಗಿದ್ದ ನನ್ನದಲ್ಲದ ಕ್ಷಣಗಳು’




ಕಳೆದ ರಾತ್ರಿ ರಾಧಿಕಾಳ ಫೋನ್ ಬಂದಾಗಿನಿಂದ ರಾಜೀವ, ರಾಜೀವನಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ ರಾಧೆಯ ಬಗ್ಗೆಯೇ ಯೋಚಿಸುತ್ತಿದ್ದ. ”ನನಗೆ ನಿನ್ನೊಡನೆ ತುಂಬಾ ಮಾತಾಡುವುದಿದೆ. ಮಂಗಳೂರಿಗೆ ಬರುತ್ತಿದ್ದೇನೆ. ಗುರುವಾರ ಬೆಳಿಗ್ಗೆ ಬಸ್ ಸ್ಟ್ಯಾಂಡಿನಲ್ಲಿ ನನಗಾಗಿ ಕಾದಿರುತ್ತಿಯಾ...?” ಎಂದು ಕೇಳಿದ್ದಳು.

ಇಪ್ಪತ್ತು ವರ್ಷಗಳ ನಂತರ ಅವಳ ಧ್ವನಿ ಕೇಳಿ ಪುಳಕಿತಗೊಂಡಿದ್ದ ರಾಜೀವ.

ಈಗ ರಾಧೆ ಹೇಗಿರಬಹುದು?. ತನ್ನ ನಂಬರು ಆಕೆಗೆ ಹೇಗೆ ಸಿಕ್ಕಿತು?.... ಎಂದೆಲ್ಲಾ ಪ್ರಶ್ನೆಗಳ ಮಳೆಗೆರೆದಾಗ ’ಅಲ್ಲಿಗೇ ಬರುತ್ತಿದ್ದೇನಲ್ಲಾ.. ಆಗ ಎಲ್ಲವನ್ನೂ ಹೇಳುತ್ತೇನೆ.’ ಎಂದು ಪೋನ್ ಕಟ್ ಮಾಡಿದ್ದಳು.

ಬದುಕು ಎಂದರೆ ಸಂಬಂಧಗಳ ಜೋಡಣೆ ಮತ್ತು ವಿಘಟನೆ. ಹಲವು ಬಾರಿ ಅದು ಬಿಡುಗಡೆಯ ಹಂಬಲವೂ ಆಗಿರುತ್ತದೆ.

ಒಂದು ಕಾಲದಲ್ಲಿ ರಾಧಿಕಾ ರಾಜೀವನ ಬದುಕಿನ ಒಂದು ಭಾಗವಾಗಿದ್ದಳು. ನಾಟಕ, ಯಕ್ಷಗಾನ, ಸೆಮಿನಾರು, ಕ್ಷೇತ್ರಕಾರ್ಯಗಳಲೆಲ್ಲಾ ಅವಳು ಅವನ ಸಂಗಾತಿ. ನಸುಗಪ್ಪು ಬಣ್ಣದ ಆ ಹುಡುಗಿ ರಾಜೀವನ ಜೀವದ ಗೆಳತಿಯಾಗಿದ್ದಳು. ಅವಳ ಗೈರು ಹಾಜರಿ ಅವನಲ್ಲಿ ಬ್ರಹ್ಮಾಂಡದಷ್ಟು ಶೂನ್ಯತೆಯನ್ನು ಉಂಟುಮಾಡುತ್ತಿತ್ತು. ರಜೆ ಬಂದಾಗಲೆಲ್ಲಾ ಕಂಬೈನ್ಡ್ ಸ್ಟಡಿಯ ನೆಪದಲ್ಲಿ ಅವಳನ್ನು ತನ್ನ ಮನೆಗೆ ಆಮಂತ್ರಿಸುತ್ತಿದ್ದ. ನಿಷ್ಕಪಟ ಮನಸ್ಸಿನ ರಾಧಿಕಳನ್ನು ಕಂಡರೆ ರಾಜೀವನ ತಾಯಿ ಅನುಸೂಯರಿಗೂ ವಿಶೇಷ ಮಮತೆ. ತಂಗಿ ಕುಸುಮ ತನಗೊಬ್ಬಳು ಜೊತೆಗಾತಿ ಸಿಕ್ಕಿದಳೆಂದು ಹಿರಿಹಿರಿ ಹಿಗ್ಗುತ್ತಿದ್ದಳು.

ರಾಜೀವನಿಗೆ ಯಕ್ಷಗಾನದ ಶೋಕಿ ಜಾಸ್ತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ವಾರ್ಷಿಕೋತ್ಸವದಂದು ಹಳೆ ವಿದ್ಯಾರ್ಥಿಗಳವತಿಯಿಂದ ಸಾಮಾನ್ಯವಾಗಿ ಯಕ್ಷಗಾನ ಇದ್ದೇ ಇರುತ್ತಿತ್ತು. ರಾಜೀವನಿಗೆ ಪುಂಡು ವೇಷ ಕಟ್ಟಿಟ್ಟ ಬುತ್ತಿ. ರಾಧಿಕಾಳಿಗೂ ಅಷ್ಟಿಷ್ಟು ಕುಣಿತ ಬರುತಿತ್ತು. ಭಾಗವತಿಕೆಯ ಮೇಲೆ ಆಕೆಗೆ ವಿಶೇಷ ಆಸಕ್ತಿ. ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇಲ್ಲದವರು ಅಷ್ಟೊಂದು ಭಾವಪೂರ್ಣವಾಗಿ ಹಾಡುವುದನ್ನು ಕೇಳಿ ಆಕೆ ಅಚ್ಚರಿ ಪಡುತ್ತಿದ್ದಳು; ಮೈಮರೆಯುತ್ತಿದ್ದಳು.

’ತನಗೆ ಎಂಥ ಸಖಿಯಾಗಿದ್ದಳು ರಾಧೆ...!’ ಎಂದು ನಿಟ್ಟುಸಿರು ಬಿಡುತ್ತಾ ಮಗ್ಗುಲು ಬದಲಾಯಿಸಿದ ರಾಜೀವ. ಆಕೆಯನ್ನು ಮದುವೆಯಾಗಬೇಕೆಂದು ಒಂದು ದಿನವೂ ಕನಸು ಕಾಣಲಿಲ್ಲ. ವರ್ತಮಾನವೇ ಅಷ್ಟೊಂದು ಸುಂದರವಾಗಿದ್ದವು. ಭವಿಷ್ಯದ ಬಗ್ಗೆ ಯೋಚಿಸುವ ಪ್ರಮೆಯವೇ ಬರಲಿಲ್ಲ. ಆದರೆ ಆಕೆ ಮುಂದಿನ ತಿಂಗಳು ತನ್ನ ಮದುವೆ ಎಂದಾಗ ತಾನು ಒಳಗೊಳಗೆ ಕುಸಿದು ಹೋಗಿದ್ದು ಸತ್ಯ. ಅಂದು ಜುಲೈ ೧೮. ಆ ದಿನ ಈಗಲೂ ತನ್ನ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದಿದೆ ಅಂದರೆ ಅದಕ್ಕೆ ಏನರ್ಥ?

’ನನ್ನನು ಮದುವೆಯಾಗುತ್ತಿಯಾ?’ ಎಂದು ಕೇಳಿಬಿಡೋಣವೆಂದುಕೊಳ್ಳುತ್ತಿದ್ದ. ಆದರೆ ಇನ್ನೊಂದು ಮನಸ್ಸು ಪ್ರತಿರೋಧ ಒಡ್ಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು. ಅವಳನ್ನು ಮೃದುವಾಗಿ ಬಳಸಿ ಎದೆಗೊರಗಿಸಿಕೊಡು ನೆತ್ತಿಯ ಮೇಲೆ ಗಲ್ಲವೂರುವವರೆಗೆ ಅವನ ಕಲ್ಪನೆಗಳು ಗರಿಗೆದರುತ್ತಿದ್ದವು. ತುಟಿಗೆ ತುಟಿ ಬೆಸೆದು ಮೈಗೆ ಮೈ ಹೊಸೆದು ರತಿಕ್ರೀಡೆಯಾಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅವನಿಂದಾಗುತ್ತಿರಲಿಲ್ಲ. ತನ್ನ ಪುರುಷತ್ವದಲ್ಲೇನಾದರೂ ಕೊರತೆಯಿರಬಹುದೇ, ಎಂದು ಆತ ಯೋಚಿಸಿದ್ದೂ ಇದೆ. ಅದನ್ನು ಪರೀಕ್ಷಿಸಿ ’ಹಾಗೇನೂ ಇಲ್ಲ’ ಎಂಬುದನ್ನು ದೃಢಪಡಿಸಿಕೊಂಡದ್ದೂ ಆಯಿತು.

ತನ್ನ ಬದುಕಿನಲ್ಲಿ ರಾಧೆಯ ಸ್ಥಾನ ಏನು? ಎಂದು ರಾಜೀವ ತೊಳಲಾಡುತ್ತಿರುವಾಗ ಇತ್ತ ರಾಧಿಕ ನಗುನಗುತ್ತಲೇ ಮದುವೆ ಮಾಡಿಕೊಂಡು ಬೆಂಗಳೂರು ಸೇರಿದಳು. ಇವನು ಮಂಗಳೂರಿನಲ್ಲೇ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡ. ಮದುವೆಯೂ ಆಯ್ತು. ಪತ್ನಿ ವಸುಂಧರ ಸುಸಂಸ್ಕೃತ ಮಹಿಳೆ. ಚುರುಕಾದ ಇಬ್ಬರು ಮಕ್ಕಳು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಸಾಮಾನ್ಯರಿಗೆ ಇಷ್ಟೇ ಸಾಕಾಗಿತ್ತೇನೋ, ಆದರೆ ರಾಜೀವನಿಗೆ ಇನ್ನೇನೋ ಬೇಕಾಗಿತ್ತು. ಸಂಜೆಯಾಯಿತೆಂದರೆ ಆವರಿಸಿಕೊಳ್ಳುವ ಶೂನ್ಯ. ಖಾಲಿತನ, ಪರಿಪೂರ್ಣವಾದ ಸಂಬಂಧವೊಂದರ ಹುಡುಕಾಟ. ’ರಾಧೆ ಇದ್ದಿದ್ದರೆ...’ ನಿಟ್ಟುಸಿರು...
"ನಿದ್ದೆ ಬಂದಿಲ್ವಾ?" ಎನ್ನುತ್ತಾ ವಸುಂಧರ ಮಗ್ಗುಲು ಬದಲಾಯಿಸಿ ಗಂಡನನ್ನು ತಬ್ಬಿಕೊಂಡು ಅವನ ಭುಜ ತಟ್ಟುತ್ತಾ ನಿದ್ದೆ ಹೋದಳು.

ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ರೆಯೂ ಅಲ್ಲದ ಸ್ಥಿತಿಯಲ್ಲಿರುವಾಗಲೇ ಅಲಾರಂ ಸದ್ದಾಯಿತು. ಎದ್ದವನೇ ಟೀ ಮಾಡಿಕೊಂಡು ಕುಡಿದು ಕಾರು ತಗೊಂಡು ಬಸ್ ಸ್ಟ್ಯಾಂಡಿಗೆ ಬಂದು ಬೆಂಗಳೂರು ಬಸ್ಸಿಗಾಗಿ ಕಾಯತೊಡಗಿದ. ರಾಧೆ ಈಗ ಹೇಗಾಗಿರಬಹುದು? ತಾಯ್ತನ, ಗೃಹಕೃತ್ಯಗಳು ಹುಡುಗಿಯರಿಗೆ ಸ್ಥೂಲಕಾಯವನ್ನು ತರುತ್ತದೆ ಎಂದುಕೊಳ್ಳುತ್ತಿರುವಾಗಲೇ ಬಸ್ ಬಂತು. ಅರೇ.... ಅದು ರಾಧೆಯಲ್ಲವೇ?

ಜುಬ್ಬ ಪೈಜಾಮ ತೊಟ್ಟ, ಸ್ವಚ್ಚಂದವಾಗಿ ಹಾರುತ್ತಿರುವ ಕೂದಲನ್ನು ಎಡಗೈನಿಂದ ಹಿಂದಕ್ಕೆ ಸರಿಸುತ್ತಾ ತನ್ನೆಡೆಗೆ ಮುಗುಳ್ನಕ್ಕ ಬಳ್ಳಿ ದೇಹದ ಯುವತಿಯನ್ನು ರಾಧಿಕಳೆಂದು ಗುರುತು ಹಿಡಿಯಲು ರಾಜೀವನಿಗೆ ಒಂದು ಕ್ಷಣ ಗಲಿಬಿಲಿಯಾಯಿತು. ಅವಳೇ ಮುಂದೆ ಬಂದು "ಹಾಯ್ ರಾಜಿ" ಎಂದು ಕೈ ಹಿಡಿದುಕೊಂಡಳು. ಅವಳನ್ನೇ ದಿಟ್ಟಿಸಿ ನೋಡುತ್ತಾ, ’ಎಷ್ಟು ಸುಂದರಿಯಾಗಿದ್ದಿಯಾ ನೀನು’ ಎಂದು ಮೆಲ್ಲನೆ ಅವಳ ಭುಜ ತಟ್ಟಿದ ರಾಜೀವ. ’ನೀನೆನೂ ಕಮ್ಮಿ ಇಲ್ಲ.’ ಎಂದು ತೋಳು ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು ಅವನನ್ನೇ ದಿಟ್ಟಿಸಿ ’ಹಿಂದೆ ನೀನು ಹೀಗಿರಲಿಲ್ಲ’ ಎನ್ನುತ್ತಾ ಅವನ ಅಂಗೈಗಳನ್ನು ಮೃದುವಾಗಿ ಹಿಸುಕಿದಳು.

ಇಬ್ಬರೂ ಸ್ವಲ್ಪ ಹೊತ್ತು ಮೌನವಾದರು. ’ನಿನ್ನ ಪ್ರೋಗ್ರಾಂ ಏನೂಂತ ಗೊತ್ತಾಗಿಲ್ಲಾ. ಯಾವುದಾದರೂ ಹೋಟೇಲ್...’ಎಂದು ಅನುಮಾನಿಸುತ್ತಲೇ ಕೇಳಿದ ರಾಜೀವ. ತಕ್ಷಣ ರಾಧಿಕಳ ಮುಖ ಬಾಡಿ ಹೋಯಿತು. ’ನಿನ್ನ ಮನೆಗೆ ನಾ ಬರಬಾರದೇ..ನಿನ್ನ ಹೆಂಡ್ತಿಯೇನಾದರೂ.....?’ ಎಂದು ಅವನ ಮುಖ ನೋಡಿದಳು. ರಾಜೀವ ಮರುಮಾತಾಡದೆ ಅವಳ ಕೈಯಿಂದ ಬ್ಯಾಗ್ ತೆಗೆದುಕೊಂಡು ಎಡಗೈಗೆ ಬದಲಾಯಿಸಿ ಬಲಗೈಯನ್ನು ಅವಳೆಡೆಗೆ ಚಾಚಿದ.

ಕಾರು ಮುಂದಕ್ಕೆ ಚಲಿಸುತ್ತಿತ್ತು. ಮೌನ ಮಾತಾಡುತ್ತಿತ್ತು. ರಾಧಿಕ ಮೆಲ್ಲನೆ ಬಲಕ್ಕೆ ವಾಲಿ ಆತನ ಭುಜದ ಮೇಲೆ ತಲೆಯಿಟ್ಟಳು. ಅವನು ಎಡಗೈನಿಂದ ಅವಳ ಭುಜ ಬಳಸಿದ. ಅವಳು ಹಾಗೆಯೇ ಕಣ್ಮುಚ್ಚಿದಳು.

ಕಾರು ಮನೆಯ ಮುಂದೆ ನಿಂತಾಗ ರಾಧಿಕ ಭಾವಲೋಕದಿಂದ ಹೊರಬಂದಳು. ವಸುಂಧರ ಮನೆಯಿಂದ ಹೊರಬಂದಳು. ಸೇಹಿತ ಬರುತ್ತಾನೆಂದಿದ್ದರು, ಈಗ ನೋಡಿದರೆ ಸೇಹಿತೆ ಬಂದಿದ್ದಾಳೆ. ಯಾರಿರಬಹುದು? ಎಂದುಕೊಳ್ಳುತ್ತಲೇ ಸ್ವಾಗತಿಸಲು ಕಾರಿನ ಹತ್ತಿರ ಬಂದಳು.
’ಇವಳು ನನ್ನ ಬಾಲ್ಯ ಸೇಹಿತೆ ರಾಧಿಕಾ’ ಎಂದು ಪತ್ನಿಗೆ ಪರಿಚಯಸಿದ ರಾಜೀವ ರಾಧಿಕಳತ್ತ ತಿರುಗಿ, ’ಇವಳು ನನ್ನ ಗೃಹಲಕ್ಷ್ಮಿ, ವಸುಂಧರ..’ ಎಂದು ನಾಟಕೀಯವಾಗಿ ಪರಚಯಿಸಿದ.
ವಸುಂಧರ ರಾಧಿಕಳ ಕೈ ಹಿಡಿದು ಬರಮಾಡಿಕೊಂಡಳು.

ರಾಜೀವನ ಮೊದಲ ಮಗಳು ರಂಜಿತಾ ಸುಳ್ಯಕ್ಕೆ ವಾಸ್ತವ್ಯದ ಸಮ್ಮರ್ ಕ್ಯಾಂಪಿಗೆ ಹೋಗಿದ್ದಳು. ಅವಳ ರೂಮಿನಲ್ಲಿ ರಾಧಿಕಳ ಲಗೇಜನಿಟ್ಟು ಅಣಿ ಮಾಡಿದಳು ವಸುಂಧರಾ. ಸ್ನಾನ ತಿಂಡಿಗಳಾದವು. ರಾದಿಕಳಂತೆ ವಸುಂಧರಾ ಕೂಡಾ ಒಳ್ಳೆಯ ಅಭಿರುಚಿಯುಳ್ಳ ಮಾತುಗಾತಿಯಾಗಿದ್ದಳು. ಇಬ್ಬರೂ ಬಹುಕಾಲದ ಗೆಳತಿಯರಂತೆ ಹೊಂದಿಕೊಂಡುಬಿಟ್ಟರು.

ಇಬ್ಬರೂ ಹಂಪನಕಟ್ಟೆಗೆ ಹೋಗಿ ತಾಜ ಮೀನು ತಂದು ರುಚಿಯಾದ ಅಡುಗೆ ಮಾಡಿದರು. ಊಟ ಮುಗಿದ ಒಡನೆಯೇ ರಾಧಿಕಳಿಗೆ ಗಡದ್ದಾದ ನಿದ್ರೆ ಬಂತು. ನಿದ್ದೆಯಿಂದ ಎಚ್ಚೆತ್ತಾಗ ಹಬೆಯಾಡುವ ಚಹ ಜೊತೆಗೆ ಬಾಳೆಕಾಯಿ ಬಜ್ಜಿಯೂ ಬಂತು. ಇನ್ನೊಬ್ಬರ ಕೈನಲ್ಲಿ ಉಪಚಾರ ಹೇಳಿಸಿಕೊಂಡು ತಿಂಡಿ ತಿನ್ನುವುದರಲ್ಲಿ ಎಷ್ಟು ಗಮ್ಮತ್ತಿದೆ ಎಂದುಕೊಳ್ಳುತ್ತಲೇ ರ್‍ಆಧಿಕಾ ತಿಂಡಿ ತಿಂದಳು.

ಸಂಬಂಧಗಳನ್ನು ಸಂಭಾಳಿಸುವುದರಲ್ಲಿ ರಾದಿಕ ಬಹು ಜಾಣೆ. ತನ್ನ ಆತ್ಮೀಯ ವರ್ತುಲದೊಳಗಿನ ಯಾರಾದರೊಬ್ಬ ಗಂಡಸಿನ ಬಗ್ಗೆ ತನಗೇನಾದರು ಅನೂಹ್ಯವಾದ ಸೆಳೆತವೇನಾದರು ಹುಟ್ಟಿಬಿಟ್ಟರೆ ಅದನ್ನು ಅಲ್ಲಿಯೇ ಚಿವುಟಲು ಪ್ರಯತ್ನಿಸುತ್ತಾಳೆ. ಅದು ನಿಸರ್ಗ ಸಹಜವಾದ ಆಕರ್ಷಣೆ ಎಂಬುದು ಆಕೆಗೆ ಗೊತ್ತಿದೆ. ಆದರೆ ಸೆಳೆತದ ಗುಂಗು ಆವರಿಸಿಕೊಂಡರೆ ಅವಳು ಅದೀರ್‍ಅಳಾಗುತ್ತಾಳೆ. ತಕ್ಷಣ ಆಕೆ ಅತನ ಪತ್ನಿಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಒಂದು ಹೆಣ್ಣು ಇನ್ನೊಂದು ಪರಿಚಿತ ಹೆಣ್ಣಿಗೆ ಮೋಸ ಮಾಡಲಾರಳು ಎಂಬುದು ಅವಳ ನಂಬಿಕೆ. ’ತಾಯ್ತನ’ ಹಾಗೆ ಮಾಡಲು ಬಿಡಲಾರದು.

ರಾಜೀವನೆಡೆಗಿನ ಆಕರ್ಷಣೆ ಆ ತೆರನಾದ್ದಲ್ಲ. ಅದು ವ್ಯಾಖ್ಯೆಗೆ ನಿಲುಕದ್ದು. ಬಹುಶಃ ಆತ್ಮವನ್ನು ಹುಡುಕಿ ಬಂದ ಜೀವದ ಆಕರ್ಷಣೆ.

ಪೈಂಟಿಂಗ್ ಕ್ಲಾಸಿಗೆ ಹೋಗಿದ್ದ ಕಾರ್ತಿಕ ಬಂದ ನಂತರ ಎಲ್ಲರೂ ಸೇರಿ ಬೀಚಿಗೆ ಹೋದರು. ಇಪ್ಪತ್ತು ವರ್ಷಗಳ ಹಿಂದೆ ಓಡಾಡಿದ ಜಾಗದಲ್ಲಿ ಈಗ ಮತ್ತೊಮ್ಮೆ ರಾದಿಕಾ, ರಾಜೀವ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಅಂದಿಗೂ ಇಂದಿಗೂ ಅಪಾರ ಅಂತರವಿತ್ತು. ವಸುಂಧರೆಗೂ ಇದು ಗೊತ್ತಾಗುತ್ತಿತ್ತು.ಹಾಗಾಗಿ ಆಕೆ ಕುರುಕು ತಿಂಡಿ ತರುತ್ತೇನೆಂದು ಮಗನೊಡನೆ ಅಂಗಡಿಯತ್ತ ಹೋದಳು.

ರಾಜೀವನಿಗೆ ಆಕೆ ಇಲ್ಲಿಗೆ ಯಾಕೆ ಬಂದಿದ್ದಾಳೆ ಎಂಬ ಚಿಕ್ಕ ಕುತೂಹಲವಿತ್ತು. ಆದರೆ ಕೇಳಲು ಮುಜುಗರ. ಏನಾದರು ಮಾತಾಡಬೇಕಲ್ಲಾ ಎನಿಸಿ
’ಮಕ್ಕಳೇನು ಮಾಡುತ್ತಿದ್ದಾರೆ?’ ಎಂದ.
’ಮೊದಲನೆಯವಳು ಸೆಕೆಂಡ್ ಪಿಯುಸಿ, ಎರಡನೆಯವನು ಎಂಟನೇ ಕ್ಲಾಸ್. ಇಬ್ಬರೂ ತುಂಬಾ ಬುದ್ಧಿವಂತರು. ಆ ಮಟ್ಟಿಗೆ ನಾನು ಪರಮ ಸುಖಿ’.
’ಆ ಮಟ್ಟಿಗೆ’ ಶಬ್ದ ರಾಜೀವನಿಗೆ ಇನ್ನೇನೋ ರವಾನಿಸಿದಂತಾಯಿತು.
’ಯಶವಂತ ಹೇಗಿದ್ದಾರೆ?’
’ಚೆನ್ನಾಗಿದ್ದಾರೆ. ಪೀಲ್ಡ್ ನಲ್ಲಿ ಒಳ್ಳೆ ಹೆಸರಿದೆ. ಪ್ರಾಮಾಣಿಕ. ತನ್ನ ಕೆಲಸದ ಮೇಲಿರುವಷ್ಟು ನಿಷ್ಟೆ, ಶ್ರದ್ಧೆ, ಇನ್ಯಾವುದರ ಮೇಲೂ ಇಲ್ಲ. ಇದೇ ನಮ್ಮಿಬ್ಬರ ನಡುವೆ.....’ ಎಂದವಳೇ ಅರ್ಧಕ್ಕೆ ನಿಲ್ಲಿಸಿದಳು.
ರಾಜೀವನಿಗೆ ಮಾತು ಬದಲಾಯಿಸಬೇಕೆನಿಸಿತು.
’ನೀನು ಇಲ್ಲಿಗೆ ಬಂದ ಕಾರಣ....’ಮುಜುಗರದಿಂದಲೇ ತಡೆ ತಡೆದು ಕೇಳಿದ.
ನಡೆಯುತ್ತಿದ್ದವಳು ತಟ್ಟನೆ ನಿಂತು ಅವನನ್ನೇ ದಿಟ್ಟಿಸುತ್ತಾ,’ ಯಾಕೋ? ನಿನ್ನನ್ನು ಕಾಣಲು ನಾನು ಬರಬಾರದೇ?’
ರಾಜೀವ ಕಿರುನಗು ನಕ್ಕು ಅವಳ ತಲೆಗೊಂದು ಮೊಟಕಿದ. ಅವಳು ಅವನ ತೋಳು ಚಿವುಟಿದಳು. ಇಬ್ಬರೂ ಏನನ್ನೋ ನೆನಸಿಕೊಂಡು ಜೋರಾಗಿ ನಕ್ಕರು.
’ಏನದು ಅಷ್ಟೊಂದು ನಗು’ ಎನ್ನುತ್ತಾ ಕೈಯಲ್ಲಿ ಬೇಲ್ ಪುರಿ ಹಿಡಿದು ಬಂದ ವಸುಂಧರಾ ಅವರ ಜೊತೆ ಸೇರಿದಳು.
ಎಲ್ಲರೂ ರುದ್ರಪಾದೆ ಹತ್ತಿ ಕಡಲಿಗೆ ಮುಖಮಾಡಿ ಕುಳಿತು ಬೇಲ್ ಪುರಿ ತಿನ್ನುತ್ತಾ ಮುಳುಗುತ್ತಿರುವ ಸೂರ್ಯನ ಕೆಂಬಣ್ಣ ತೆರೆಗಳೊಡನೆ ಚೆಲ್ಲಾಟವಾಡುತ್ತಿರುವುದನ್ನು ನೋಡುವುದರಲ್ಲಿ ಮಗ್ನರಾದರು.
ರಾದಿಕಳಿಗೆ ಕಡಲೆಂದರೆ ಹುಚ್ಚು ಮೋಹ. ಅಬ್ಬರದ ತೆರೆಗಳನ್ನು ದಡಕ್ಕಪ್ಪಳಿಸುವ ಪರಿ ನೋಡಿದರೆ ’ನನ್ನ ಮುಂದೆ ನೀನು ಅಲ್ಪ. ತಾಕತ್ತಿದ್ದರೆ ನನ್ನನ್ನು ಗೆಲ್ಲು ಬಾ’ ಎಂದು ಸವಾಲು ಹಾಕುತ್ತಿರುವಂತೆ ಭಾಸವಾಗುತ್ತಿತ್ತು.

ಕಾಲೇಜು ದಿನಗಳಲ್ಲಿ ಕಡಲಿಗೆ ಬಂದಾಗಲೆಲ್ಲಾ ಮರಳ ಮೇಲೆ ’ ಸಮುದ್ರರಾಜ, ಐ ಲವ್ ಯೂ’ ಎಂದು ಬರೆಯುವುದು, ಅದನ್ನು ಅಲೆಗಳು ಅಳಿಸಿ ಹಾಕುತ್ತವೆಯೇನೋ ಎಂದು ಕಾತರದಿಂದ ನೋಡುವುದು, ಅಳಿಸಿದರೆ ಸಮುದ್ರರಾಜನಿಗೆ ತನ್ನಲ್ಲಿ ಪೇಮವಿದೆ ಎಂದು ಸಂಭ್ರಮವಿಸುವುದು, ಅಳಿಸದಿದ್ದರೆ ತನ್ನ ಬಗ್ಗೆ ಉಪೇಕ್ಷೆಯಿದೆ ಎಂದು ಮನಸ್ಸು ಬಾಡಿಸಿಕೊಳ್ಳುವುದು.
ಅದನ್ನೆಲ್ಲ ನೆನೆಸಿಕೊಂಡು ರಾಧಿಕಳ ಮುಖದಲ್ಲಿನಗು ಲಾಸ್ಯವಾಡಿತು.ಇನ್ನೊಮ್ಮೆ ಬಂದಾಗ ಅಂದಿನ ಎಲ್ಲಾ ಗೆಳೆಯ-ಗೆಳತಿಯರ ವಿಳಾಸ ಪತ್ತೆ ಮಾಡಿ ಸಂಬಂಧಗಳನ್ನು ಪುನರ್ ಜೋಡಿಸಬೇಕು ಎಂದುಕೊಂಡಳು.

ಯಶವಂತನ ಜೊತೆ ಬಂದು ಈ ರುದ್ರಪಾದೆಯ ಮೇಲೆ ಕುಳಿತು ಸಮುದ್ರದ ರುದ್ರ ರಮಣೀಯ ದೃಶ್ಯವನ್ನು ನೋಡಬೇಕೆಂದು ಎಷ್ಟೊಂದು ಹಂಬಲಿಸಿದ್ದಳು. ಮದುವೆಯಾದಂದಿನಿಂದ ತೀರಾ ಇತ್ತೀಚಿನವರೆಗೂ ಕಂಡಂತ ಕನಸದು. ಆದರೆ ಅದು ಕನಸಾಗಿಯೇ ಉಳಿಯಿತು. ಅವಳಿಂದ ನಿಟ್ಟುಸಿರು ಹೊಮ್ಮಿತು.
’ರಾತ್ರಿಯಿಡಿ ಪ್ರಯಾಣ ಮಾಡಿ ನಿನ್ಗೆ ಆಯಾಸ ಆಗಿರ್ಬೇಕು. ನಾಳೆ ಬೇಕಾದ್ರೆ ಬರೋಣ.’ ಎನ್ನುತ್ತಾ ಎದ್ದ ರಾಜೀವ.
’ನಾಳೆ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗ್ಬೇಕು’ ಎನ್ನುತ್ತಾ ಬಟ್ಟೆ ಕೊಡವಿಕೊಂಡಳು.
’ಒಂದೆರಡು ದಿನ ಇದ್ದು ಹೋಗಬಾರದೇ? ನಮ್ಮವರಿಗೆ ನೀವೊಬ್ಬರೇ ಆತ್ಮೀಯರೆಂದು ಅವರು ಆಗಾಗ ಹೇಳುತ್ತಿದ್ರು. ನಿಮ್ಮನ್ನು ನೋಡುವ ಕುತೂಹಲವೂ ನನಗಿತ್ತು. ಈಗ ನನಗೂ ನೀವು ಹತ್ತಿರದವರೆನಿಸುತ್ತಿದೆ’ ಎಂದು ವಸುಂಧರೆಯೂ ಒತ್ತಾಯಿಸಿದಳು.
’ಇನ್ನೊಮ್ಮೆ ಖಂಡಿತವಾಗಿಯೂ ಬರುತ್ತೇನೆ’ ಅವಳ ಧ್ವನಿ ಕಂಪಿಸಿದ್ದು ರಾಜೀವನ ಅನುಭವಕ್ಕೆ ಬಂತು.
ಯಾಕೆ, ನನ್ನ ರಾಧೆ ನೆಮ್ಮದಿಯಾಗಿಲ್ಲವೇ?
ಮರುದಿನ ಬೆಳಿಗ್ಗೆ ಎಷ್ಟೇ ಒತ್ತಾಯ ಮಾಡಿದರೂ ರಾಧಿಕ ನಿಲ್ಲಲಿಲ್ಲ. ಕಳುಹಿಸಿ ಕೊಡಲೆಂದು ಸಿದ್ದನಾದ ರಾಜೀವನನ್ನು ನೋಡಿ, ’ರಂಜಿತಾಳ ಮನೆಗೆ ಹೋಗುತ್ತಿದ್ದೇನೆ. ನೀನೂ ಬಂದರೆ ಚೆನ್ನಾಗಿರುತ್ತಿತ್ತು. ಎಂದಳು.
’ರಂಜಿತಾ ಇಲೆ ಇದ್ದಾಳಾ? ನನಗೆ ಗೊತ್ತೆ ಇರಲಿಲ್ಲಾ..’ಎಂದ ರಾಜೀವ.
’ಅವರೊಬ್ಬರೇ ಹುಡುಕಿಕೊಂಡು ಹೋಗ್ಬೆಕಲ್ಲಾ. ನೀವೂ ಜೋತೆಯಲ್ಲಿ ಹೋಗಿ’ ಎಂದಳು. ವಸುಂಧರಾ.
’ಹೆಂಗಸರ ಕಷ್ಟ ಹೆಂಗಸರಿಗೆ ಮಾತ್ರ ಅರ್ಥ ಆಗುತ್ತೆ, ಅಲ್ವಾ ವಸು.’ ಎಂದು ನಕ್ಕಳು ರಾಧಿಕಾ.
ರಾಧಿಕಾಳನ್ನು ಪ್ರೀತಿಯಿಂದ ವಸುಂಧರಾ ಬೀಳ್ಕೊಟ್ಟಳು.
ಕಾರು ಎಕ್ಕೂರನ್ನು ದಾಟಿ ಪಂಪ್ ವೆಲ್ ಹತ್ತಿರಕ್ಕೆ ಬಂದಾಗ ’ರಂಜಿತಳ ಮನೆ ಯಾವ ಕಡೆಗೆ’ ಎಂದ ರಾಜೀವ.
ರಾಧಿಕಾ ಅವನನ್ನೇ ಆಳವಾಗಿ ದಿಟ್ಟಿಸಿ ನೋಡಿ,’ಹೋಟೇಲ್ ನವರತ್ನಕ್ಕೆ ಹೋಗೋಣ’ ಎಂದಳು.
ಯಾಕೆ ಎಂದು ಪ್ರಶ್ನಿಸಬೇಕೆನಿಸಿದರೂ ಹಿಂದಿನ ದಿನಗಳ ಅವಳ ಹಟಮಾರಿತನ ನೆನಪಾಗಿ ಹೋಟೇಲಿನತ್ತ ಕಾರು ತಿರುಗಿಸಿದ. ಹೋಟೇಲ್ ಮುಂದೆ ಕಾರು ನಿಂತಿತು. ತಾನೇ ರಿಸೆಪ್ಷನ್ ಬಳಿ ಹೋಗಿ ರೂಂ ಪಡೆದು ಲಿಪ್ಟ್ ನತ್ತ ನಡೆದಳು. ರಾಜೀವ ಮೌನವಾಗಿ ಹಿಂಬಾಲಿಸಿದನು.

ರೂಮಿಗೆ ಬಂದವಳೇ ಹಾಸಿಗೆ ಮೇಲೆ ದೊಪ್ಪೆಂದು ಬಿದ್ದಳು. ರಾಜೀವನಿಗೆ ಏನೂ ತೋಚದೆ ಕಿಟಿಕಿಯನ್ನು ತೆರೆಯುತ್ತಾ ದೂರದಲ್ಲಿ ಕಾಣುತ್ತಿರುವ ಸಮುದ್ರವನ್ನೊಮ್ಮೆ ಆಕೆಯನ್ನೊಮ್ಮೆ ದಿಟ್ಟಿಸತೊಡಗಿದನು. ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ರಾಜೀವನ ಹತ್ತಿರ ಬಂದ ರಾಧಿಕ ಅವನ ಕೈ ಹಿಡಿದುಕೊಂಡಳು. ಪವಿತ್ರ ಮುಂಜಾವಿನಲ್ಲಿ ಪಾರಿಜಾತ ಪುಷ್ಪ ಮೆಲ್ಲನೆ ಧರೆಯನ್ನು ಸ್ಪರ್ಶಿಸುವಂತೆ ಮೆಲ್ಲನೆ ಅವನ ಎದೆಗೊರಗಿದಳು. ಅರೆಗಣ್ಣು ಮುಚ್ಚಿದ ಆಕೆ ಈ ಲೋಕದಲ್ಲಿರುವಂತೆ ಕಾಣುತ್ತಿರಲಿಲ್ಲ. ರಾಜೀವ, ಅವಳನ್ನು ಮೃದುವಾಗಿ ತೋಳುಗಳಿಂದ ಬಳಸಿ ಮಂಚದ ಬಳಿ ತಂದು ಹಾಸಿಗೆಯ ಮೇಲೆ ಮಲಗಿಸಿ ಮೇಲೇಳಬೇಕೆನ್ನುವಷ್ಟರಲ್ಲಿ ಆಕೆ ಆತನ ಕೈ ಹಿಡಿದು ಕುಳ್ಳಿರಿಸಿದಳು. ಅವನು ಏನೋ ಹೇಳಲೆಂದು ಬಾಯ್ತೆರೆದಾಗ ಅವಳು ಮಾತಾಡದಂತೆ ತಡೆದಳು.

ಆ ದಿವ್ಯ ಘಳಿಗೆಯನ್ನು ಪೂರ್ತಿಯಾಗಿ ಅನುಭವಿಸುತ್ತಿರುವಂತೆ ಅವನತ್ತ ಸರಿದು ತೊಡೆಯ ಮೇಲೆ ತಲೆಯಿಟ್ಟಳು. ಹೊಟ್ಟೆಯಲ್ಲಿರುವ ಮಗುವಿನಂತೆ ಕಾಲುಗಳನ್ನು ಮಡಿಚಿ, ಗಲ್ಲದ ಮೇಲೆ ಕೈಗಳನ್ನಿಟ್ಟುಕೊಂಡು ಮಗ್ಗುಲಾಗಿ ಮಲಗಿದಳು. ರಾಜೀವನಿಗೆ ಏನೂ ತೋಚದೆ ಸುಮ್ಮನೆ ಅವಳ ಕೂದಲು ಸವರುತ್ತಾ ಕುಳಿತುಕೊಂಡ.

ಸ್ವಲ್ಪ ಹೊತ್ತಿನಲ್ಲಿ ತನ್ನ ಪ್ಯಾಂಟ್ ಒದ್ದೆಯಾದ ಅನುಭವವಯ್ತು. ಬಗ್ಗಿ ನೋಡಿದರೆ ಮುಚ್ಚಿದ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯುತ್ತಿದೆ. ಬಹುಕಾಲದಿಂದ ತಡೆಹಿಡಿದಿದ್ದ ಭಾವನೆಗಳ ಮಹಾಪೂರವಿರಬೇಕು. ಹರಿದುಬಿಡಲಿ. ಸ್ವಾಭಿಮಾನದ ಹೆಣ್ಣು. ಎಲ್ಲಿಯೂ, ಯಾರೆದುರೂ ಇದುವರೆಗೆ ತನ್ನ ಅಂತರಂಗವನ್ನು ಬಿಚ್ಚಿಟ್ಟಿರಲಾಳು ಎಂದುಕೊಳ್ಳುತ್ತಾ, ಬಲಗೈನಿಂದ ಅವಳನ್ನು ಬಾಚಿ ತನ್ನ ಹೊಟ್ಟೆಯೆಡೆಗೆ ಇನ್ನಷ್ಟು ಒತ್ತಿಕೊಂಡ.

ಎಷ್ಟೋ ಹೊತ್ತು ರಾಜೀವ ಹಾಗ್ಯೇ ಕುಳಿತಿದ್ದನು. ಕಾಲುಗಳು ಚೋಮುಗಟ್ಟಿ ನೋಯಲಾರಂಭಿಸಿದಾಗ ಮೆಲ್ಲಗೆ ಅವಳ ಮುಖದೆಡೆಗೆ ಬಾಗಿದ. ಶತಮಾನಗಳಿಂದ ನಿದ್ದೆಯೇ ಮಾಡಿಲ್ಲವೇನೋ ಎಂಬಂತೆ ಶಾಂತಳಾಗಿ ನಿದ್ರಿಸುತ್ತಿದ್ದಳು. ರಾಜೀವನಿಗೆ ಅಕ್ಕರೆ ಉಕ್ಕಿ ಬಂತು. ಮೆಲ್ಲನೆ ಬಾಗಿ ಅವಳ ಹಣೆಯ ಮೇಲೆ ಹೂ ಮುತ್ತನ್ನಿತ್ತ. ಆಕೆ ನಿದ್ದೆಯಲ್ಲಿಯೇ ಹೊರಳಿ ಇನ್ನಷ್ಟು ಹತ್ತಿರಕ್ಕೆ ಸರಿದಳು.

ಇವಳ ಸಂಸಾರದಲ್ಲೇನಾದರು ತೊಡಕಿರಬಹುದೇ? ಎಂದು ಚಿಂತಿಸುತ್ತಲೇ ತುಂಬಾ ಹೊತ್ತು ಸುಮ್ಮನೆ ಕುಳಿತ ರಾಜೀವ. ನೀರು ಕುಡಿಯಬೇಕೆನಿಸಿತು. ಮೆಲ್ಲನೆ ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಗಂಟಲಿಗೆ ನೀರು ಸುರಿದುಕೊಂಡ. ಪ್ಯಾನ್ ಹಾಕಿ ಕುರ್ಚಿಯಲ್ಲಿ ಒರಗಿಕೊಂಡ.

ಎಚ್ಚರ ಆದಾಗ ಮದ್ಯಾಹ್ನವಾಗಿತ್ತು. ’ಎನೋ ಕುಂಭಕರ್ಣ, ಬೇಗ ಎದ್ದು ರೆಡಿಯಾಗು. ಸಂಜೆ ಮರವಂತೆಗೆ ಹೋಗ್ಬೇಕು’ ಎಂದಳು ರಾಧಿಕ. ರಾಜೀವನಿಗೆ ಆಶ್ಚರ್ಯವಯ್ತು; ಸ್ವಲ್ಪ ಹೊತ್ತಿನ ಹಿಂದಿನ ರಾಧಿಕ ಇವಳೆನಾ...?

ಮರವಂತೆಗೆ ಮಂಗಳೂರಿನಿಂದ ಎರಡೂವರೆ ಘಂಟೆಗಳ ಪಯಣ. ದಾರಿಯುದ್ದಕ್ಕೂ ತಮ್ಮ ಕಾಲೇಜು ದಿನಗಳನ್ನು ಆ ಕಾಲದ ಸೇಹಿತರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಹಾದಿ ಸವೆದದ್ದೇ ಗೊತ್ತಾಗಲಿಲ್ಲ.

ಸೂರ್ಯ ಮುಳುಗುವ ವೇಳೆಗೆ ಅವರು ಮರವಂತೆ ಬೀಚಿನಲ್ಲಿದ್ದರು. ಕಡಲಂಚಿನಲ್ಲಿ ಮರೆಯಾಗುತ್ತಿದ್ದ ರಕ್ತವರ್ಣದ ದಿನಕರನನ್ನು ಕಣ್ತುಂಬಿಸಿಕೊಂಡರು. ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಏಕಕಾಲದಲ್ಲಿ ನೋಡಬಹುದಾದ ಅಪರೂಪದ ಸ್ಥಳ ಇದು. ತಾವು ಒಂದಷ್ಟು ಜನ ಪ್ರೆಂಡ್ಸ್ ಹುಣ್ಣಿಮೆಯ ರಾತ್ರಿಯಲ್ಲಿ ಇಡೀ ದಿನ ಇಲ್ಲಿ ಕಳೆದ ರಸಘಳಿಗೆಗಳನ್ನು ಅವರು ನೆನಪಿಸಿಕೊಂಡರು.

ಒಂದು ಬದಿಯಲ್ಲಿ ಶಾಂತವಾಗಿ ಹರಿಯುವ ಸೌಪರ್ಣೀಕಾ ನದಿ. ಇನ್ನೊಂದು ಬದಿಯಲ್ಲಿ ಬೊರ್ಗೆರೆಯುತ್ತಿರುವ ಕಡಲು. ಸುತ್ತೆಲ್ಲಾ ಹಾಲು ಚೆಲ್ಲಿದಂತ ಬೆಳದಿಂಗಳು. ಕಡಲ ಕೊರೆತ ತಡೆಯಲು ಹಾಕಿದ ಬಂಡೆಗಲ್ಲುಗಳ ಮೇಲೆ ಕುಳಿತ ಆ ಜೋಡಿ. ಬಹುಶಃ ಅವರು ಶಾಪಗ್ರಸ್ತ ಕಿನ್ನರ ದಂಪತಿಗಳೇ ಇರಬೇಕು!
[ಆರು ವರ್ಷಗಳ ಹಿಂದೆ ಕಥೆ ಬರೆಯುವ ಪ್ರಯತ್ನದಲ್ಲಿ ಮೂಡಿ ಬಂದ ಬರಹ ಇದು. ]

Monday, December 1, 2008

”ರಾಜಕಾರಣಿಗಳೇ ನೀವೀಗ ಅಸ್ಪ್ರ್ರಶ್ಯರು”




’ನಮ್ಮ ಮನೆಗೆ ರಾಜಕಾರಣಿಗಳು ಬರುವ ಅಗತ್ಯ ಇಲ್ಲ. ನಿಮ್ಮ ಸಾಂತ್ವನ ನಮಗೆ ಬೇಕಿಲ್ಲ. ಹಾಗೇನಾದ್ರು ಬಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’

ಹೀಗೆಂದು ಗುಡುಗಿದವರು ಉನ್ನಿಕೃಷ್ಣನ್. ಉನ್ನಿಕೃಷ್ಣನ್, ಮೊನ್ನೆ ಮುಂಬಯಿಯಲ್ಲಿ ನಡೆದ ಉಗ್ರಗಾಮಿ ವಿರುದ್ಧದ ಹೋರಾಟದಲ್ಲಿ ವೀರ ಮರಣವನಪ್ಪಿದ ಎನ್.ಎಸ್.ಜಿ ಪಡೆಯ ಮೇಜರ್ ಸಂದಿಪ್ ತಂದೆ.

ಕೇರಳದ ಮುಖ್ಯಮಂತ್ರಿ ಅಚ್ಯುತಾನಂದ ಮತ್ತು ಗೃಹ ಸಚಿವರಾದ ಕೋಡಿಹಾಳ್ ಬಾಲಕೃಷ್ಣ ಅವರು ನಿನ್ನೆ ಅಂದರೆ ಭಾನುವಾರದಂದು ಉನ್ನಿಕೃಷ್ಣ ಮನೆಗೆ ಬಂದಿದ್ದರು. ಇದು ಅವರಿಗೆ ಇಷ್ಟವಿರಲಿಲ್ಲ.

ಸಂದೀಪ್ ಉಗ್ರರೊಡನೆ ಸೆಣಸಾಡುತ್ತಾ ಹುತಾತ್ಮರಾದರು ಎಂದು ಗೊತ್ತಾದೊಡನೆ ಮಾದ್ಯಮದವರು ಸಹಜವಾಗಿಯೇ ಬೆಂಗಳೂರ್‍ಇನ ಇಸ್ರೋಲೇಔಟ್ ನಲ್ಲಿರುವ ಅವರ ನಿವಾಸಕ್ಕೆ ತೆರಳಿ ತಂದೆ ಉನ್ನಿಕೃಷ್ಣ ನಾಯರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಅವರ ಮುಂದೆ ಮೈಕ್ ಹಿಡಿದಿದ್ದಾರೆ. ಅಂಥ ನೋವಿನ ಸಂದರ್ಭದಲ್ಲೂ ಆ ತಂದೆ ಹೇಳಿದ್ದೇನು ಗೊತ್ತೆ? ” ನನ್ನ ಮಗ ದೇಶಕ್ಕೆ ತನ್ನ ಕೈಲಾದ ಸೇವೆಯನ್ನಷ್ಟೇ ಮಾಡಿದ. ಆ ಬಗ್ಗೆ ನನಗೆ ಹಿಮ್ಮೆಯಿದೆ, ಇದನ್ನು ಮಾರ್ಕೆಟೈಸ್ ಮಾಡುವುದು ನನಗಿಷ್ಟವಿಲ್ಲ”. ಎಂದು ಅಚ್ಚಕನ್ನಡದಲ್ಲಿ ಹೇಳಿದರು, ವೀರಯೋದನ ಸ್ವಾಭಿಮಾನಿ ತಂದೆ.

ಕೇರಳದ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಯಾಕೆ ಸಾಂತ್ವನ ಹೇಳಬೇಕಾಗಿತ್ತು?

ಉನ್ನಿಕೃಷ್ಣನ್ ಕೇರಳದ ಕಲ್ಲಿಕೋಟೆ ಮೂಲದವರು. ಬೆಂಗಳೂರಿನ ಇಸ್ರೋದಲ್ಲಿ ಉದ್ಯೋಗಿಯಾಗಿದ್ದವರು. ಸಂದಿಪ್ ಮರಣ ಸಂಭವಿಸಿದಾಗ ಅವರ ಕುಟುಂಬಕ್ಕೆ ಕೇರಳ ಮುಖ್ಯಮಂತ್ರಿ ಸಾಂತ್ವನ ಹೇಳಲಿಲ್ಲ ಎಂಬ ಆಕ್ಷೇಪ ಕೇರಳದಲ್ಲಿ ವ್ಯಕ್ತವಾಗಿತ್ತು. ಅದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಚ್ಯುತಾನಂದನ್ ಉನ್ನಿಕೃಷ್ಣನ್ ಕುಟುಂಬಕ್ಕೆ ಸಂತಾಪಸೂಚಕ ಸಂದೇಶವೊಂದನ್ನು ಕಳುಹಿಸಿದ್ದರು. ಆ ಸಂದೇಶದಲ್ಲಿ ಸಂದಿಪನ ಹೆಸರು ತಪ್ಪಾಗಿ ಮುದ್ರಿತವಾಗಿತ್ತು.

ರಾಜಕಾರಣಿಗಳಿಗೆ ಎಲ್ಲವೂ ಯಾಂತ್ರಿಕ ಮತ್ತು ರಾಜಕೀಯ ಪ್ರೇರಿತ

ಮೊನ್ನೆಯ ಮುಂಬೈ ದುರ್ಘಟನೆಗೆ ಮಹಾರಾಸ್ಟ್ರದ ಗೃಹಸಚಿವರಾದ ಅರ್ ಅರ್ ಪಾಟೀಲ್ ನೀಡಿದ ಹೇಳಿಕೆಯನ್ನೇ ನೋಡಿ; ’ಮಹಾನಗರದಲ್ಲಿ ಇಂಥ ಸಣ್ಣ ಪುಟ್ಟ ಘಟನೆಗಳು ನಡೆಯುವುದು ಸಾಮಾನ್ಯ’ ಇಂದು ಈ ಸಾಮಾನ್ಯ ಘಟನೆ ಅವರ ಉಪಮುಖ್ಯ ಮಂತ್ರಿ ಮತ್ತು ಗೃಹಮಂತ್ರಿ ಗಾದಿಗಳನ್ನು ಕಿತ್ತುಕೊಂಡಿದೆ.

ಇನ್ನೊಬ್ಬರಿದ್ದಾರೆ ಗುಜರಾತಿನ ಮುಖ್ಯಮಂತ್ರಿ, ನರೇಂದ್ರ ಮೋದಿ. ಕಮಾಂಡೋಗಳುಗಳು ಉಗ್ರಗಾಮಿಗಳ ವಿರುದ್ದ ಸೆಣಸಾಟ ನಡೆಸುತ್ತಿರುವ ಸ್ಥಳಕ್ಕೆ ಬಂದ ಮೊದಲ ರಾಜಕಾರಣಿ. ಇದೇನೋ ಮೆಚ್ಚತಕ್ಕ ಅಂಶ. ಬಂದವರು ನಮ್ಮ ವೀರ ಯೋದರಿಗೆ ಸ್ಫೂರ್ತಿಯ ಎರಡು ಮಾತಾಡಿ ನೈತಿಕ ಬೆಂಬಲವಿತ್ತು ತೆರಳಬಹುದಾಗಿತ್ತು ಅಲ್ಲೂರಾಜಕೀಯ ತುರುಕಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ಘಟನಾ ಸ್ಥಳಕ್ಕೆ ಭೇಟಿ ನೀಡದ್ದಕ್ಕೆ ಆಕ್ಷೇಪಿಸಿದರು. ಮತ್ತೂ ಮುಂದುವರಿದು ಕರ್ಕೆರ ಕುಟುಂಬಕ್ಕೆ ೧ ಕೋಟಿ ರೂಪಾಯಿ ಪರಿಹಾರವನ್ನು ಘೋಶಿಸಿಬಿಟ್ಟರು ಆ ದಾನಶೂರ ಕರ್ಣ!. ನಾಚಿಕೆಯಾಗಬೇಕು ರಾಜಕಾರಣಿಗಳಿಗೆ. ಬಸಿದ ಬಿಸಿ ನೆತ್ತರು ಆರುವ ಮೋದಲೇ ಅದಕ್ಕೆ ಬೆಲೆ ಕಟ್ಟುವ ಅಮಾನವಿಯತೆಗೆ ನಮ್ಮದೊಂದು ಧಿಕ್ಕಾರ.

ಒಂದು ಕೋಟಿ ರೂಪಾಯಿ ಸರಕಾರಿ ನೌಕರನೊಬ್ಬನ ಕುಟುಂಬಕ್ಕೆ ಬಹು ದೊಡ್ಡ ಮೊತ್ತ. ಅದರೂ ಅದನ್ನು ಕರ್ಕೆರ ಪತ್ನಿ ತಿರಸ್ಕರಿಸಿದರು. ಈದೇಶದಲ್ಲಿ ಇನ್ನೂ ದೇಶ ಪ್ರೇಮ, ಸ್ವಾಬಿಮಾನ ಎಂಬುದು ಇಂತವರಿಂದಲೇ ಉಳಿದಿದೆ.

ಇನ್ನು, ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ನಿಜವಾದ ಅರ್ಥದಲ್ಲಿ ವಿಲಾಸಿಯೇ!. ಬುದವಾರ ರಾತ್ರಿಯಿಂದಲೇ ಉಗ್ರಗಾಮಿಗಳು ತಮ್ಮ ಪೈಶಾಚಿಕ ಕೃತ್ಯ ತೋರಿಸುತ್ತಿದ್ದಾರೆ. ಮನೆಯಲ್ಲಿ ಬೆಚ್ಚಗೆ ಕುಳಿತಿದ್ದ ದೇಶ್ ಮುಖ್, ಎಲ್ಲವೂ ಮುಗಿದ ಮೇಲೆ ಭಾನುವಾರದಂದು ತಮ್ಮ ಪಡೆಯೊಂದಿಗೆ ತಾಜ್ ಹೋಟೇಲ್ ಗೆ ಆಗಮಿಸಿದ್ದಾರೆ. ”ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ”

ದೇಶ್ ಮುಖ್ ಪಡೆಯಲಿದ್ದ ಪ್ರಮುಖರು ಯಾರು ಗೊತ್ತೆ? ಅವರ ಪುತ್ರನಾಗಿರುವ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮ. ಅಂದರೆ ದೇಶ್ ಮುಖ್ ತಲೆಯಲ್ಲಿ ಸುಳಿಯುತ್ತಿದ್ದುದೇನು?. ಮುಂಬೈ ಘಟನೆ ಸಿನಿಮಾಕ್ಕೊಂದು ಪ್ಲಾಟ್. ಎಲ್ಲಿಗೆ ಬಂದು ನಿಂತಿದ್ದಾರೆ, ನಮ್ಮ ರಾಜಕಾರಣಿಗಳು. ಧಿಕ್ಕಾರವಿರಲಿ ಅವರ ಬಾಳಿಗೆ.

ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಗೃಹಮಂತ್ರಿ ಅರ್.ಅರ್. ಪಾಟೀಲ್ ತಲೆ ದಂಡ ಆಗಿ ಹೋಗಿದೆ. ಕೆಲವೇ ಘಂಟೆಗಳಲ್ಲಿ ದೇಶ್ ಮುಖ್ ಗಾದಿಯೂ ಉರುಳಲಿದೆ. ಅಂತೂ ಕಾಂಗ್ರೇಸ್ ಎಚ್ಚೆತ್ತುಕೊಳ್ಳುತ್ತಲಿದೆ.

ಇವತ್ತು ಕರ್ನಾಟಕದ ಕಾಂಗ್ರೇಸಿನ ಕಾರ್ಯಕಾರಿ ಸಮಿತಿಯ ಸಭೆ ನಡೆದಿತ್ತು. ಅದರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ ತಂಡದ ಮುಖ್ಯಸ್ಥ ಅಪ್ಝಲ್ ಗುರುವಿನ ಗಲ್ಲು ಶಿಕ್ಷೆಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ. ಇದು ನಿಜಕ್ಕೂ ಬದಲಾವಣೆಯ ಮುನ್ಸೂಚನೆಯಾಗಿದ್ದರೆ ಚೆನ್ನ. ಆದರೆ ಇದರಲ್ಲೂ ರಾಜಕೀಯ ದುರುದ್ದೇಶಗಳಿದ್ದರೆ..? ಯಾಕೆಂದರೆ ಸಧ್ಯದಲ್ಲೆ ಉಪಚುನಾವಣೆಯಿದೆ ಅದರ ಹಿಂದೆಯೇ ಲೋಕಸಭಾ ಚುನಾವಣೆ ಬರುತ್ತಲಿದೆ.

ಅಂತೂ ಅಫ್ಝಲ್ ಗುರುವನ್ನು ಗಲ್ಲಿಗೇರಿಸುವುದು ಈಗ ಕಾಂಗೇಸ್ಸಿಗೂ ಬೇಕು. ಅದು ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಏನೆಲ್ಲಾ ಕಸರತ್ತು ಮಾಡಬೇಕಾಗಿದೆ. ಬಿಜೆಪಿಗೂ ಮುಸ್ಲಿಂ ಭಯೋತ್ಪಾದಕರಿಗೊಂದು ಛಡಿಯೇಟು ನೀಡಬೇಕಾಗಿದೆ.
ರಾಜಕೀಯ ಪಕ್ಷಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಲೇಬೇಕಾದ ಕಾಲಘಟ್ಟವಿದು.

ಬೇಕಾದರೆ ಕೋಮುಸೌಹಾರ್ದ ವೇದಿಕೆಯ ಮುಖಂಡರು ತಮ್ಮ ’ಬ್ರದರ್’ನ್ನು ರಕ್ಷಿಸಿಕೊಳ್ಳಲಿ.
ಇನ್ನೊಂದು ಮಾತನ್ನು ಹೇಳಲೇಬೇಕು; ಪೇಜಾವರ ಮಠಾದೀಶರಂತ ಸ್ವಾಮೀಜಿಗಳು ತಮ್ಮ ಮಿತಿಯಲ್ಲಿ ಕೆಲವೊಂದು ಸಮಾಜ ಪರಿವರ್ತನೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾದೆ. ಅದನ್ಯಾಕೆ ಮುಸ್ಲಿಂ ಧರ್ಮ ಗುರುಗಳು ಮಾಡಬಾರದು? ದೆಹಲಿಯ ಜಾಮ ಮಸೀದಿಯಲ್ಲಿ ಇಂಥ ದಿನ ಚಂದ್ರ ದರ್ಶನವೆಂದರೆ ಅದನ್ನು ಭಾರತದ ಸಮಸ್ತ ಮುಸ್ಲಿಮರೂ ಅನುಸರಿಸುತ್ತಾರೆ. ಧಾರ್ಮಿಕ ಮುಖಂಡರು ಹೊರಡಿಸುವ ’ಪತ್ವಾ’ ವನ್ನು ಎಲ್ಲರೂ ಅನುಕರಿಸುತ್ತಾರೆ. ಭಯೋತ್ಪಾದನೆಯಂತ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೋಡಿರುವ ಯುವಕರನ್ನು ಇವರೇಕೆ ನಿರ್ಭಂದಿಸಬಾರದು?

ಇಸ್ರೇಲಿನಂತ ಪುಟ್ಟ ಸ್ವಾಭಿಮಾನಿ ರಾಷ್ಟ್ರ ನಮ್ಮ ಬದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಜಗತ್ತಿನೆದುರು ಇಷ್ಟು ದೊಡ್ಡ ರಾಷ್ಟ್ರ ಬೆತ್ತಲಾಗಿ ನಿಲ್ಲಬೇಕೆ..?

Tuesday, November 25, 2008

ವಾಟಾಳ್ ನಾಗರಾಜ್ ಉಚ್ಚೆ ಹೊಯ್ತಾರಂತೆ !

ವಾಟಾಳ್ ನಾಗರಾಜರ ಹೊಸ ಸಾಹಸದ ಬಗ್ಗೆ ಯಾರಾದರೂ ಬರೆದಿರಬಹುದೇ ಎಂದು ಗೊತ್ತಿರುವ ಬ್ಲಾಗ್ ಗಳನ್ನೆಲ್ಲಾ ಜಾಲಾಡಿದೆ. ಕಾಣಿಸಲಿಲ್ಲ. ’ಬೊಗಳೆ-ರಗಳೆ’ಯಲ್ಲಾದರೂ ಕಾಣಿಸಿಕೊಳ್ಳಬಹುದೆಂದು ಭಾವಿಸಿದ್ದೆ. ಅಲ್ಲೂ ಇರಲಿಲ್ಲ. ಹಾಗಾಗಿ ಈ ಕಾಯಕಕ್ಕೆ ಕೈ ಹಾಕುತ್ತಿದ್ದೇನೆ.

ವಿಷಯ ಏನಪ್ಪಾ ಅಂದ್ರೆ, ನಿನ್ನೆ ಇದ್ದಕ್ಕಿದ್ದಂತೆ ನಮ್ಮ ಕನ್ನಡದ ಉಟ್ಟು ಓರಾಟಗಾರ, ಪ್ರತಿಭಟನೆಗಳ ಸರದಾರ ವಾಟಾಳ್ ನಾಗರಾಜ್ ಪತ್ರಿಕಾ ಗೋಷ್ಟಿ ಕರೆದಿದ್ದರು. ಅಲ್ಲಿ ಅವರು ಹೇಳಿದ್ದು; ಸರಕಾರವು ರಾಜ್ಯಾದ್ಯಂತ ಸರ್ವಾಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಡಿಸೆ.ಬರ ಅಂತ್ಯದೊಳಗಾಗಿ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ತಾವು ರಾಜಭವನದ ಎದುರು ’ಉಚ್ಚೆ ಹೊಯ್ಯುವ ಚಳುವಳಿ’ ನಡೆಸುವುದಾಗಿ ಹೇಳಿದರು. ಮುಂದೆ ಈ ಚಳುವಳಿಯನ್ನು ಹಂತ ಹಂತವಾಗಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಹಾಗು ಐಎ ಎಸ್ ಅಧಿಕಾರಿಗಳ ನಿವಸಕ್ಕೂ ವಿಸ್ತರಿಸುವುದಾಗಿಯೂ ಸ್ಪಷ್ಟಪಡಿಸಿದರು

ಶೌಚಾಲಯಗಳ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ ೨೯ರಂದು ಹಿರಿಯರ ಸಭೆ ಕರೆದಿರುವುದಾಗಿಯೂ ತಿಳಿಸಿದರು. ಇವರಿಗೆ ಹಿರಿಯರೇ ಯಾಕೆ ಬೇಕಿತ್ತು? ಅವರಲ್ಲಿ ಬಹಳಷ್ಟು ಜನರು ಡಯಾಬಿಟಿಕ್ ಇರಬಹುದು; ಅವರಿಗೆ ಮೂತ್ರ ಹಿಡಿದಿಟ್ಟುಕೊಳ್ಳುವುದು ಕಷ್ಟವೆಂದೇ? ಆದ ಕಾರಣ ಇವರ ಚಳುವಳಿಗೆ ಅವರ ಸಾಥ್ ಸಿಗಬಹುದೆಂಬ ಆಶಾ ಭಾವನೆಯಿರಬಹುದೇ?


ಪತ್ರಕರ್ತರ ಬುದ್ಧಿಯನ್ನು ಶತಶತಮಾನಗಳಿಂದ ಬಲ್ಲವರು ಈ ವಾಟಾಳ್. ಹಾಗಾಗಿಯೇ ಅವರು ಪತ್ರಕರ್ತರಿಗೆ ಅಲ್ಲಿಯೇ ತಾಕೀತು ಮಾಡಿದರು; ’ನೀವು ಬರೆಯುವಾಗ ಉಚ್ಚೆ ಹೊಯ್ಯುವ ಚಳುವಳಿ ಎಂದೇ ಬರೆಯಬೇಕು, ಬದಲಾಗಿ ಮೂತ್ರ ವಿಸರ್ಜನೆ ಚಳುವಳಿ ಎಂದು ಬರೆಯಬಾರದು’ ಪಾಪ ಸಜ್ಜನ ಪತ್ರಕರ್ತರು ಮುಸಿಮುಸಿ ನಗುತ್ತಾ ತಲೆಯಲ್ಲಾಡಿಸಿದರು.

ದೃಶ್ಯ ಮಾದ್ಯಮದವರು ಅವರು ಹೇಳಿದ್ದೆಲ್ಲವನ್ನೂ ಅಪ್ಪಣೆ ಸಮೇತ ಪ್ರಸಾರಮಾಡಿದರು. ಮುದ್ರಣ ಮಾದ್ಯಮದವರು ಪಾಪ ಮಾನವಂತರು, ಮೂತ್ರವಿಸರ್ಜನೆ ಚಳುವಳಿ ಎಂದೇ ಪ್ರಕಟಿಸಿದವು. ಪ್ರಜಾವಾಣಿ ಇವರ ಸಹವಾಸವೇ ಬೇಡ ಎಂದು ದಿವ್ಯ ನಿರ್ಲಕ್ಷ್ಯ ವಹಿಸಿತು. ಅಥವಾ ನಾಳೆ ಪ್ರಕಟಿಸುತ್ತೋ ಏನೋ, ಯಾಕೆಂದರೆ ಅದು ಪ್ರಜಾವಾಣಿ!

ಈಗ ನನ್ನಲ್ಲಿ ಕುತೂಹಲವಿದೆ; ಹಲವಾರು ಅನುಮಾನಗಳಿವೆ. ಅವರು ಹಿರಿಯರ ಸಭೆ ಕರಿದಿದ್ದಾರೆ. ಅದರಲ್ಲಿ ಮಹಿಳೆಯರು ಸೇರಿದ್ದಾರೆಯೇ? ಯಾಕೆಂದರೆ ಶೌಚಾಲಯದ ಸಮಸ್ಯೆಗಳು ಇದುವರೆಗೆ ಮಹಿಳೆಯರನ್ನು ಮಾತ್ರ ಕಾಡಿವೆ. ಪುರುಷರು ಮೋಟು ಗೋಡೆಯ ಮುಂದೆ ಬೇಕಾದರೂ ಪ್ಯಾಂಟ್ ಬಿಚ್ಚಿ ನಿಲ್ಲುತ್ತಾರೆ.

ಇವತ್ತು ವಿಜಯ ಕರ್ನಾಟಕ ಮೂತ್ರ ವಿಸರ್ಜನೆ ಎಂದೇ ಬರೆದಿದೆ. ಈಗ ವಾಟಾಳರು ವಿಜಯ ಕರ್ನಾಟಕದೆದುರು ಮೂತ್ರ ವಿಸರ್ಜಿಸಿ ಇದನ್ನು ಪ್ರತಿಭಟಿಸುತ್ತಾರೆಯೇ?

ನನ್ನ ಅಲ್ಪ ತಿಳುವಳಿಕೆಯ ಪ್ರಕಾರ ವಾಟಾಳ್ ಪಡೆಯಲ್ಲಿ ಮಹಿಳೆಯರಿಲ್ಲ. ಒಂದು ವೇಳೆ ಇದ್ದಲ್ಲಿ ಅವರೂ ಕೂಡ ಈ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಾರೆಯೇ?

ಇನ್ನೊಂದು ಅನುಮಾನವಿದೆ; ಅಲ್ಲಾ,ಅದು ಕುತೂಹಲ ಶೋಭಾ ಕರಂದ್ಲಾಜೆ ಮನೆಯೆದುರು.... ಮಹಿಳಾ ಪೋಲಿಸರೆದುರು...

ದೊಂಬರಾಟಕ್ಕೂ ಒಂದು ಮಿತಿಯಿರಬೇಕಲ್ಲವೇ?
’ ಏನಕೇನಾ ಪ್ರಕರಣಂ ಪ್ರಸಿದ್ಧ ಪುರುಷಂ’

Friday, November 21, 2008

ಪುಸ್ತಕಗಳೊಂದಿಗೆ ನೆನಪುಗಳ ಮೆರವಣಿಗೆ





ಪುಸ್ತಕಗಳನ್ನು ಕೊಳ್ಳುವುದು ನನ್ನ ಹುಚ್ಚುಗಳಲ್ಲೊಂದು. ಎಲಿಮೆಂಟರಿ ಶಾಲೆಯಲ್ಲಿದ್ದಾಗ ಗೆಳತಿಯರ ಮನೆಯಿಂದ ಕಾಡಿ, ಬೇಡಿ ಚಂದಮಾಮ, ಬಾಲಮಿತ್ರಗಳನ್ನು ತರಿಸಿಕೊಂಡು ಓದುತ್ತಿದ್ದೆ. ಅವರಿವರ ಮನೆಯಿಂದ ಕಸ್ತೂರಿ, ಪ್ರಜಾಮತ, ಮಯೂರ, ತುಷಾರ ಮುಂತಾದವುಗಳನ್ನು ಬೇಡಿ ಪಡೆದು ಊಟ ತಿಂಡಿ ಬಿಟ್ಟು ಓದುತ್ತಿದ್ದೆ.

ಕ್ರಮೇಣ ಎನ್ ನರಸಿಂಹಯ್ಯನವರ ಪತ್ತೇದಾರಿ ಜಗತ್ತಿಗೆ ಹೊರಳಿಕೊಂಡೆ. ಆಮೇಲೆ ತ್ರಿವೇಣಿ, ಉಷಾನವರತ್ನರಾಮ್, ಕಾರಂತ, ಬೈರಪ್ಪ, ನಿರಂಜನ ಕುವೆಂಪು, ಬೇಂದ್ರೆ, ಅಡಿಗ, ಚಿತ್ತಾಲ,ಶರ್ಮ, ರಾಮಾನುಜನ್, ಶೆಲ್ಲಿ, ಕೀಟ್ಸ್, ಮ್ಯಾಥ್ಯು ಅರ್ನಾಲ್ಡ್, ಎಲಿಯೇಟ್, ಐ ಎ ರಿಚರ್ಡ್ಸ್ ......ವಿಶಾಲ ಜಗತ್ತು ತೆರೆದುಕೊಳ್ಳತೊಡಗಿತು.

ನನ್ನೂರಿನಲ್ಲಿ ಹೈಸ್ಕೂಲ್ ಇಲ್ಲ. ಸುತ್ತಮುತ್ತಲಿನ ಹಳ್ಳಿಗಳಲ್ಲೂ ಆಗ ಹೈಸ್ಕೂಲ್ ಇರಲಿಲ್ಲ. ಹಾಗಾಗಿ ಅವರಿವರ ಮನೆಯಲ್ಲಿದ್ದುಕೊಂಡು ಓದಿದವಳು ನಾನು. ರಜೆಯಲ್ಲಿ ಮನೆಗೆ ಹೋದಾಗ ಇಲ್ಲವೇ ಮನೆಯವರು ನಾನಿರುವಲ್ಲಿಗೆ ಬಂದಾಗ ’ಏನಾದರು ತಗೋ’ ಎಂದು ನನ್ನ ಕೈಲಿ ಒಂಚೂರು ದುಡ್ಡಿಡುತ್ತಿದ್ದರು. ಏನಾದರು ಎಂದರೆ ಅವರ ದೃಷ್ಟಿಯಲ್ಲಿ ತಿಂಡಿ. ನಾನದರಲ್ಲಿ ನಂಗೆ ಇಷ್ಟವಾದ ಪುಸ್ತಕ ಕೊಳ್ಳುತ್ತಿದ್ದೆ.

ಕಾಲೇಜು ಮೆಟ್ಟಲು ಹತ್ತಿದ ಮೇಲೆ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹಣ ನನ್ನ ಕೈಸೇರುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಸರಿಕರ ಎದುರು ತಮ್ಮ ಮಗಳು ಒಳ್ಳೊಳ್ಳೆಯ ಬಟ್ಟೆ ಹಾಕಿಕೊಂಡು ಓಡಾಡಲಿ ಎಂಬುದೇ ಆಗಿತ್ತು. ಹಾಗಂತ ಆಗಾಗ ನನ್ನ ಹೆತ್ತವರು ಹೇಳುತ್ತಿದ್ದರು. ಆದರೆ ನಾನು ಬಹುಪಾಲು ದುಡ್ಡನ್ನು ಪುಸ್ತಕ, ನಿಯತಕಾಲಿಕಗಳನ್ನು ಕೊಳ್ಳಲು ಉಪಯೋಗಿಸುತ್ತಿದ್ದೆ.

ಎಂ.ಎ ಮಾಡುವಾಗ ನನಗೆ ಜೊತೆಯಾದವನು ಶರು. ಒಂದೇ ಅಭಿರುಚಿಯ ನಾವು ಬಹು ಬೇಗ ಆತ್ಮೀಯ ಸ್ನೇಹಿತರಾದೆವು. ಕಮ್ಮಟಗಳು, ವಿಚಾರ ಸಂಕಿರಣಗಳು, ನಾಟಕ, ಸಿನೇಮಾ... ಎಲ್ಲೆಲ್ಲೂ ನಾವೇ. ಮುಂಜಾವಿನ ದಿವ್ಯ ಮೌನದಲ್ಲಿ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ಜಾಗಿಂಗ್. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚನೆಯ ಚಹ ಹೀರಿದರೆ ಅದೇ ಆ ದಿನಕ್ಕೆ ಸುಂದರ ಮುನ್ನುಡಿ.

ಒಂದು ಒಳ್ಳೆಯ ಪುಸ್ತಕ ಓದಿದರೆ ಅದನ್ನು ಓದುವಂತೆ ಆತ ನನಗೆ ಸಲಹೆ ನೀಡುತ್ತಿದ್ದ. ತನಗೊಂದು ಪುಸ್ತಕ ಇಷ್ಟವಾದರೆ ತನ್ನ ಜೊತೆ ನನಗೂ ಒಂದು ಪ್ರತಿ ಖರೀದಿಸುತ್ತಿದ್ದ. ನಾನೂ ಕೂಡ ಅಷ್ಟೇ; ಯ್ಯಾವ್ಯಾವುದೋ ನೆಪ ಮಾಡಿಕೊಂಡು ಅವನಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ.

ಬಿಸಿ ರಕ್ತದ ಆ ದಿನಗಳಲ್ಲಿ ಎಲ್ಲವನ್ನೂ ಪ್ರಶ್ನಿಸುವ, ಉಲ್ಲಂಘಿಸುವ ಮನೋಭಾವ. ಅದಕ್ಕೆ ಸಾಹಿತ್ಯದ ಹಿಮ್ಮೇಳ. ಆದರ್ಶಗಳ ಗುಂಗು. ಸಮಾಜ ಪರಿವರ್ತನೆಯ ಕನಸು. ಅದನ್ನವನು ಬದುಕಿನ ಭಾಗವಾಗಿಸಿಕೊಂಡ. ಪಶ್ಚಿಮ ಘಟ್ಟ ಶ್ರೇಣಿಯಲೆಲ್ಲೋ ಕರಗಿ ಹೋದ. ಆಮೇಲೆ ಅಂಥ ಗೆಳೆಯನನ್ನು ನನಗೆ ಪಡೆದುಕೊಳ್ಳಲಾಗಲಿಲ್ಲ.

ಇಂದು ನಾನು ಬೆಂಗಳೂರಲ್ಲಿದ್ದೇನೆ. ನನ್ನ ಮನೆಯಲ್ಲಿ ಒಳ್ಳೆಯ ಲೈಬ್ರರಿಯಿದೆ. ಅದರೆಡೆಗೆ ಕಣ್ಣು ಹಾಯಿಸಿದಾಗ ಮನಸ್ಸು ಮ್ಲಾನಗೊಳ್ಳುತ್ತದೆ. ಯಾಕೆಂದರೆ ಅದರಲ್ಲಿರುವ ಬಹಳಷ್ಟು ವೈಚಾರಿಕ ಪುಸ್ತಕಗಳು ಶರು ನನಗೆ ಉಡುಗೊರೆಯಾಗಿ ನೀಡಿದ್ದು. ಅದನ್ನು ಮತ್ತೆ ಓದುವುದಕ್ಕೆ ನನಗೆ ಒಂಥರ ಹಿಂಸೆ. ಅದರಲ್ಲಿ ಅತನ ಹಸ್ತಾಕ್ಷರವಿರುತ್ತದೆ. ನಲ್ಮೆಯ ಮಾತಿರುತ್ತದೆ. ಭರವಸೆಯ ನುಡಿಗಳಿರುತ್ತವೆ.

ಇಂದಿಗೂ ನಾನು ನನ್ನ ಆತ್ಮೀಯರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತೇನೆ. ಮದುವೆ, ಹುಟ್ಟುಹಬ್ಬ, ಉಪನಯನ ಮುಂತಾದ ಶುಭ ಸಂದರ್ಭಗಳಲ್ಲಂತೂ ಪುಸ್ತಕಗಳಿಗೇ ಆದ್ಯತೆ. ಓಶೋನ ’ಸ್ತ್ರೀ ಮುಕ್ತಿ-ಆಧುನಿಕ ದೃಷ್ಟಿಕೋನ’ ನಾನು ಮದುಮಗಳಿಗೆ ಖಾಯಂ ಆಗಿ ಕೊಡುವ ಪುಸ್ತಕ. ನೀನು ಹರಸುವುದಕ್ಕಾಗಿ ಕೊಡುತ್ತಿಲ್ಲ, ಸಂಸಾರ ಒಡೆಯುವುದಕ್ಕಾಗಿ ಆ ಪುಸ್ತಕ ಕೊಡುತ್ತಿ ಎಂದು ನನ್ನ ಪತಿ ದೇವರು ಆಗಾಗ ತಮಾಷೆ ಮಾಡುತ್ತಿರುತ್ತಾರೆ.

ಅರಮನೆ ಮೈದಾನದಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ನಾನು ಪ್ರತಿ ವರ್ಷ ಹೋಗುತ್ತೇನೆ. ಒಂದಷ್ಟು ಪುಸ್ತಕಗಳನ್ನು ಖರೀದಿ ಮಾಡುತ್ತೇನೆ. ಅದರಲ್ಲಿ ಒಂದೆರಡು ಪುಸ್ತಕಗಳು ನನ್ನ ಆತ್ಮೀಯರಿಗೆ. ಈ ಮಹಾನಗರದಲ್ಲಿ ಶರುವನ್ನು ಹೋಲುವ ವ್ಯಕ್ತಿಯೊಬ್ಬ ಹಲವು ವರ್ಷಗಳ ಹಿಂದೆ ನನಗೆ ಪರಿಚಯವಾಗಿದ್ದ. ಅವನಿಗೂ ಯ್ಯಾವ್ಯಾವುದೋ ನೆಪವಿಟ್ಟುಕೊಂಡು ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ. ನನ್ನ ಕಾಟ ತಡೆಯಲಾರದೆ ಏನೋ ಇತ್ತೀಚೆಗೆ ಆತನೂ ದೂರ್‍ಅವಾದ.

ಪುಸ್ತಕಗಳ ಜೋತೆಯೇ ಒಡನಾಡಿದ, ಅವುಗಳ ಜೊತೆಯೇ ಸಹಚರ್ಯ ಬೆಳೆಸಿಕೊಂಡ ನನಗೆ ಬೆಂಗಳೂರಿನಲ್ಲಿ ಪುಸ್ತಕಗಳೇ ಇಲ್ಲದ ಮನೆಗಳನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ಅಲ್ಲಿ ವಾಸಿಸುವ ಜನರು ತಮ್ಮ ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ? ಅವರು ತಮ್ಮೊಳಗಿನ ಆನಂದವನ್ನು ಹೇಗೆ ಕಂಡು ಕೊಳ್ಳುತ್ತಾರೆ?

ನಾವೇನೋ ಪುಸ್ತಕಗಳನ್ನು ಖರೀದಿಸುತ್ತೇವೆ. ಓದುತ್ತೇವೆ. ಉಡುಗೋರೆ ಕೊಡುತ್ತೇವೆ. ಆದರೆ ನಮ್ಮ ಮಕ್ಕಳು......?ಅವರಿಗೆ ಓದಿನ ಅಭಿರುಚಿಯನ್ನು ಚಿಕ್ಕಂದಿನಲ್ಲಿಯೇ ಕಲಿಸಬೇಕು.ಮಾಲ್ ಗಳಿಗೆ ಭೇಟಿ ಕೊಟ್ಟಂತೆಯೇ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಡುತ್ತಿರಬೇಕು. ನಮ್ಮಲ್ಲಿ ಓದುವ ಹವ್ಯಾಸವಿದ್ದರೆ ನಮ್ಮ ಮಕ್ಕಳಲ್ಲಿಯೂ ಅದು ಮುಂದುವರಿಯುತ್ತದೆ. ಪುಸ್ತಕಗಳನ್ನು ಸಂಗಾತಿಯಾಗಿ ಒಪ್ಪಿಕೊಂಡವರು ಎಂದೂ ಒಂಟಿಯಲ್ಲ.

Tuesday, November 11, 2008

’ಬಿಂಬ’ದಿಂದ ’ಬಿಂಬ’ಕ್ಕೆ




ಅವನನ್ನು ನೋಡಿದ ಮೊದಲ ದಿನವೇ ಅವಳಿಗನ್ನಿಸಿತ್ತು ’ಇವನು, ಅವನನ್ನು ಹೋಲುತ್ತಾನಲ್ಲಾ..!’
ಅವಳು ನೋಡಿಯೇ ನೋಡಿದಳು... ಮತ್ತೆ ಮತ್ತೆ ನೋಡಿದಳು. ನೋಡುತ್ತಾ ಹೋದಳು.


ಒಂದು ದಿನ ಅವನು ತುಟಿಯಂಚಿನಲ್ಲಿ ನಕ್ಕ. ಇಲ್ಲಾ... ಅವನ ಕಣ್ಣು ನಕ್ಕಿತು. ಇವಳಲ್ಲಿ ಸಣ್ಣ ಕಂಪನ. ಅವನು ಬರುತ್ತಾನೆಂಬ ನಂಬಿಕೆಯಿಂದಲೇ ಕಲಾಕ್ಷೇತ್ರದಲ್ಲಿ ನಡೆಯುವ ಪ್ರತಿ ನಾಟಕಕ್ಕೂ ಅವಳು ಹಾಜರಾಗುತ್ತಿದ್ದಳು. ಅವನ ನಿರೀಕ್ಷೆಯೂ ಅದೇ ಆಗಿತ್ತು.

ಮನಸ್ಸಿನ ಮಾತು ಕಣ್ಣಲ್ಲಿ ಪ್ರತಿಪಲಿಸಲು ಕ್ಷಣಾರ್ಧ ಸಾಕು. ಆದರೆ ಬಾಯಿಗೆ ಬರಲು ವರ್ಷಗಳೇ ಹಿಡಿಯುತ್ತವೆ. ಬರದೆಯೂ ಹೋಗಬಹುದು. ಹಾಗೆ ಬಂದ ದಿನ ಇರುವ ಸಂಬಂಧ ಮತ್ತಷ್ಟು ಗಟ್ಟಿಯಾಗಬಹುದು, ಇಲ್ಲವೇ ಸಡಿಲವಾಗಲೂ ಬಹುದು. ಈ ಅರಿವೂ ಇಬ್ಬರಲ್ಲಿಯೂ ಇತ್ತು. ಹಾಗಾಗಿ ಆ ನವಿರು ಸಂಬಂಧ ಮೌನವಾಗಿ ಮುಂದುವರಿದಿತ್ತು.

ಆತನ ನಡವಳಿಕೆಯಲ್ಲಿ ಅವಳಿಗೆ ನಂಬಿಕೆ ಬೆಳೆಯುತ್ತಾ ಹೋಯಿತು. ಒಂದು ದಿನ ಆತ ’ಟೀ ಕುಡಿಯೋಣ ಬನ್ನಿ’ ಅಂದ. ಅವಳು ಸಮ್ಮತಿಸಿದಳು. ಇಬ್ಬರಿಗೂ ಲಿಂಬು ಟೀ ಇಷ್ಟ. ತಮ್ಮ ಅಭಿರುಚಿ ಒಂದೇ ಆಗಿರುವುದರ ಬಗ್ಗೆ ಪರಸ್ಪರ ಅಚ್ಚರಿ ವ್ಯಕ್ತಪಡಿಸಿಕೊಂಡರು.

ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ ಮಹತ್ವ ಕೊಡಲಿಲ್ಲ. ಈ ಮಹಾನಗರದಲ್ಲಿ ಎಲ್ಲರೂ ಇಂಥಹದೊಂದು ಸಾಂಗತ್ಯಕ್ಕಾಗಿ ಹಾತೊರೆಯುವವರೇ ಆಗಿರುತ್ತಾರೆ. ಒಂದಷ್ಟು ಜನ ಅವರ ಭಾಗ್ಯಕ್ಕೆ ಕರುಬಿದರು.

ಅವನ ಪೀತಿಯ ಕಂಪನ ಅವಳ ಅನುಭವಕ್ಕೆ ಬರುತಿತ್ತು. ಭಾವನಾತ್ಮಕವಾಗಿ ಅವಳು ಅವನಲ್ಲಿ ಐಕ್ಯವಾಗುತ್ತಾ ಹೋದಳು. ನಂಬಿಕೆಯ ಶಿಖರದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಳ್ಳತೊಡಗಿದಳು.

ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡ ಹಾಗೆ ಆಕೆ ಬಯಲಾಗುತ್ತಾ ಬಂದಳು. ಆತ ನಿರಂತರ ಆಲಿಸುತ್ತಲೇ ಹೋದ. ಅವಳ ಅವಲಂಬನೆ ಅತನಿಗೆ ಹಿತವೆನಿಸುತಿತ್ತು; ಹೆಮ್ಮೆಯಾಗುತಿತ್ತು.

ಈಗ ವೈಯಕ್ತಿಕ ಸಂಘರ್ಷವೊಂದರ ಸಂದರ್ಭದಲ್ಲಿ ತನ್ನ ಜೊತೆಯಾಗು ಎನ್ನುತಿದ್ದಾನೆ. ಅದವಳ ಜಾಯಮಾನಕ್ಕೆ ಒಗ್ಗಿದ್ದಲ್ಲ. ನಿರಾಕರಿಸಿದಳು.

ಅವನು ಸಿಡಿದು ನಿಂತ. ಅವನ ಹೊಸ ರೂಪ ಕಂಡು ಅವಳು ದಂಗಾದಳು. ’ನೀನು ನನ್ನಲ್ಲಿ ಎನೆಲ್ಲಾ ಹೇಳಿಕೊಂಡಿದ್ದಿ ಗೊತ್ತಾ...? ಅದನ್ನ ನಾನು ಇದುವರೆಗೂ ಯಾರಿಗೂ ಹೇಳಿಲ್ಲ...’ ಮೌನ ಮೊಗ್ಗೆಯನೊಡೆದು ಮಾತಾಗಿ ಹೊರಬರುತಿತ್ತು!

ಅವಳು ಜರ್ರನೆ ಇಳಿದು ಹೋದಳು. ಅವಳು ಪ್ರಾಕ್ಟಿಕಲ್ ಕಿಟಿಸಿಸಂ ವಿದ್ಯಾರ್ಥಿ. ಒಂದು ಶಬ್ದ ಕೊಡುವ ಹತ್ತಾರು ಅರ್ಥ, ಯಾವ ಕಾಂಟ್ಕ್ಸೆಟ್ ಒಳಗಡೆ ಯಾವ ಅರ್ಥ ಸ್ಫುರಿಸಬಲ್ಲುದು ಎಂಬುದೆಲ್ಲಾ ಅವಳಿಗೆ ಗೊತ್ತು. ಕ್ಷಣಾರ್ಧದಲ್ಲಿ ಅವಳು ನಿರ್ಧರಿಸಿಬಿಟ್ಟಳು; ಇಂದು ಈಸಂಬಂಧದ ಎಕ್ಸ್ ಪಯರಿ ಡೇಟ್. ಮುಗಿಯಿತು; ಎಲ್ಲವೂ ಮುಗಿಯಿತು.

ಆಯ್ಕೆಗಳು ಇಲ್ಲದಿದ್ದಾಗ್ಯೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದವಳ ಶಕ್ತಿ.ಚಿಕ್ಕಂದಿನಿಂದಲೇ ಅದವಳಿಗೆ ಸಿದ್ಧಿಸಿತ್ತು. ಅಳು ಅವಳ ಪಾಲಿಗಂತೂ ಅಸಹಾಯಕತೆಯ ಲಕ್ಷಣ ಅಲ್ಲ. ಆಪ್ತರ ವಿಷಯಕ್ಕೆ ಬಂದಾಗ ಭಾವನೆಗಳೇ ಅವಳನ್ನಾಳುತ್ತವೆ.. ಇಷ್ಟರವರೆಗೆ ಅವನ ವಿಷಯಕ್ಕೆ ಭಾವನೆಗಳೇ ಮುನ್ನೆಲೆಗೆ ಬರುತ್ತಿದ್ದವು, ಈಗ..

ತಟ್ಟನೆ ಅವಳಿಗೆ ಹೊಳೆಯಿತು; ಅವನ ಇರವಿನ ಬಗ್ಗೆ ತನ್ನಲ್ಲಿ ಯಾವುದೇ ಆಧಾರ ಇಲ್ಲ, ಅವನ ಸಂಪರ್ಕದ ಕೊಂಡಿ ಕೇವಲ ಮೊಬೈಲ್ ಮಾತ್ರ, ಸಿಮ್ ಬದಲಾಯಿಸಿದರೆ ಅವನನ್ನು ಈ ಮಹಾನಗರದಲ್ಲಿ ಪತ್ತೆ ಮಾಡುವುದು ಸಾಧ್ಯವೇ ಇಲ್ಲ, ಆದರೆ ಅವನಿಗೆ ತನ್ನ ಮನೆ ಗೊತ್ತು, ಆಪೀಸು ಗೊತ್ತು, ಬಂಧು- ಬಾಂಧವರು ಗೊತ್ತು. ಪ್ರೆಂಡ್ಸ್ ಗೊತ್ತು. ಮನಸ್ಸು ಎಚ್ಚರಿಸಿತು ’ನೀನು ರೂಪಕಗಳಲ್ಲೇ ಉಳಿದು ಬಿಟ್ಟೆ. ವಾಸ್ತವಕ್ಕೆ ಬಾ’

ಅವನು ಯಾರಲ್ಲಿ ಹೇಳಬಹುದೆಂಬ ಸ್ಪಷ್ಟ ಕಲ್ಪನೆ ಅವಳಿಗಿತ್ತು. ಅಂದರೆ ಆತ ’ಅಲ್ಲಿಗೆ’ ತಲುಪಲು ತನ್ನನ್ನು ಏಣಿಯಾಗಿ ಬಳಸಿಕೊಂಡುಬಿಟ್ಟನೇ..?

ಅವಳಿಗೆ ತಡೆದುಕೊಳ್ಳಲಾಗಲಿಲ್ಲ. ಕುರ್ಚಿಯಲ್ಲಿ ಕುಳಿತಿದ್ದವಳು ತಟ್ಟನೆ ನೆಲಕ್ಕೆ ಕುಸಿದಳು. ಗೋಡೆಗೊರಗಿ ಮಂಡಿ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು. ತಲೆ ಭಾರವಾಯಿತು. ಗಂಟಲ ಪಸೆ ಆರಿ ಹೋಯಿತು. ನೀರು ಬೇಕೇ ಬೇಕು ಅನಿಸಿತು. ಗೋಡೆ ಹಿಡಿದುಕೊಂಡು ತಡವರಿಸುತ್ತಲೇ ಅಡುಗೆ ಕೋಣೆಗೆ ಹೋಗಿ ಜಗ್ಗಿನಿಂದ ನೀರು ಬಗ್ಗಿಸಿಕೊಂಡಳು. ಕೈ ನಡುಗಿ ನೀರು ಗ್ಲಾಸಿನ ಸುತ್ತೆಲ್ಲಾ ಹರಿದಾಡಿತು. ಜಗ್ಗಿಗೇ ಬಾಯಿಟ್ಟು ನೀರು ಹೀರತೋಡಗಿದಳು. ಧರಿಸಿದ್ದ ಟಾಪ್ ಒದ್ದೆಯಾಯಿತು,

ಹಾಸಿಗೆಯಲ್ಲಿ ಬಂದು ಬಿದ್ದುಕೊಂಡಳು. ದಿಂಬನ್ನು ಕೆನ್ನೆಗೆ ಒತ್ತಿಕೊಂಡು ಕವುಚಿ ಮಲಗಿದಳು. ತಲೆ ನೋಯಲು ಆರಂಭವಾಯಿತು. ಯಾರದಾದರು ಕೈಯನ್ನು ಬದ್ರವಾಗಿ ಹಿಡಿದುಕೊಳ್ಳಬೇಕು, ತೋಳನ್ನು ಅವುಚಿಕೊಳ್ಳಬೇಕೆನಿಸಿತು. ಆದರೆ ಇಹ ಲೋಕದ ಯಾರೂ ನೆನಪಾಗಲಿಲ್ಲ. ಡ್ರಾವರ್ ಎಳೆದು ಒಂದು ನಿದ್ರೆ ಮಾತ್ರೆ ನುಂಗಿ ಕಣ್ಮುಚ್ಚಿದಳು.

ಎಳೆ ಬಿಸಿಲು ಮುಖದ ಮೇಲೆ ಬಿದ್ದಾಗ ಎಚ್ಚರಾಯಿತು. ಕೈ ಅನಾಯಸವಾಗಿ ಮೊಬೈಲಿನತ್ತ ಹೋಯಿತು. ಮೊದಲ ಬಾರಿಗೆ ಅವನ ಮೆಸೇಜ್ ಮಿಸ್ ಆಗಿತ್ತು.

ಆಮೇಲೆಯೂ ಬರಲಿಲ್ಲ.

ಕೆಲವು ತಿಂಗಳು ಕಳೆಯಿತು. ಒಂದು ದಿನ ಅವಳು ಕೆನೆಟಿಕ್ ನಲ್ಲಿ ಹೋಗುತ್ತಿದ್ದಳು. ಪಕ್ಕದಲ್ಲೇ ಒಂದು ಪಲ್ಸರ್ ಪಾಸಾಯ್ತು ಅವಳು ತನ್ನಲ್ಲೇ ಅಂದುಕೊಂಡಳು ’ಇವನು ಅವನನ್ನು ಹೋಲುತ್ತಾನಲ್ಲಾ....’

ಅವಳು ಅಕ್ಸಿಲೇಟರ್ ತಿರುಗಿಸಿದಳು.

Saturday, October 25, 2008

ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೀಬೇಕು?


ಕೆಲವು ಜನ ಮೆಸೇಜ್ ಮಾಡಿ ’ಸುರಗಿ ನಿಮ್ಮ ನಿಜವಾದ ಹೆಸರಾ॥?’ ಎಂದು ಕೇಳಿದ್ದಾರೆ। ಹೆಸರಿನಲ್ಲೇನಿದೆ ಮಹಾ ಎಂದುಕೊಂಡರೂ, ಎಲ್ಲಾ ಇರುವುದು ಹೆಸರಲ್ಲೇ ಎಂಬುದು ನನಗೆ ಗೊತ್ತಿದೆ.

ಸಾರ್ವಜನಿಕ ಬದುಕಿನಲ್ಲಿ, ಸಮಾಜದಲ್ಲಿ ನಾವು ’ಎನೋ’ ಆಗಿರುತ್ತೇವೆ। ನಾವು ಆಡುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ’ನಮ್ಮವರ’ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಹಾಗಾಗಿ ಅಳೆದು, ತೂಗಿ ಮಾತಾಡುತ್ತೇವೆ. ಆದರೆ ಹೇಳಲಾರದ ದುಃಖ-ದುಮ್ಮಾನಗಳು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು ಮನಸ್ಸಿನೊಳಗೆ ಹಾಗೇ ಉಳಿದು ಬಿಡುತ್ತಲ್ಲ, ಅದಕ್ಕೇನು ಮಾಡೋಣ?

’ಡೈರಿ ಬರೆದು ಬಿಡಿ’ ಅಂದು ಬಿಡಬಹುದು। ಆದರೆ, ಅದು ಖಾಸಗಿ ಹಂತದಲ್ಲೇ ಉಳಿದು ಬಿಡುತ್ತದೆ. ತನ್ನ ಕ್ರಿಯೆಗಳನ್ನು ಬೇರೆಯವರು ಗಮನಿಸಬೇಕು ಎಂಬುದು ಮನುಷ್ಯ ಸಹಜ ಗುಣ. ಹಾಗಾಗಿ ಬ್ಲಾಗ್ ಬರೆಯಲು ಆರಂಭಿಸಿದೆ. ಇದು ’ನನ್ನೊಡನೆ ನಾನು’ ಮಾತಾಡಿಕೊಂಡಂತೆ. ಇದನ್ನೇ ನಾನು ನನ್ನ ಬ್ಲಾಗ್ ಬರವಣಿಗೆಯ ಆರಂಭದಲ್ಲಿ ಹೇಳಿಕೊಂಡಿದ್ದೇನೆ.

’ಮನಸ್ಸಿಗೆ ತೋಚಿದಂತೆ ಬರೆಯಲು ಬ್ಲಾಗೇನು ಪರ್ಸನಲ್ ಡೈರಿಯಾ?’ ಎಂದು ವಿಜಯ ಕರ್ನಾಟಕದಲ್ಲಿ ಲೇಖಕರೊಬ್ಬರು ಪ್ರಶ್ಣಿಸಿದ್ದಾರೆ। ಹೌದು, ಒಂದು ರೀತಿಯಲ್ಲಿ ಅದು ಪರ್ಸನಲ್ ಡೈರಿಯೇ. ಯಾರೂ ಓದುಗರಿಲ್ಲದಿದ್ದರೂ ನಾನು ಮನಸ್ಸು ಬಂದಾಗಲೆಲ್ಲಾ ಬರಿತಾನೇ ಇರ್ತಿನಿ. ಇಷ್ಟಕ್ಕೂ ಬರವಣಿಗೆ ಅನ್ನೊದು ಬಿಡುಗಡೆ. ಅದು ಲೇಖಕನ ಮಡುಗಟ್ಟಿದ ಭಾವನೆಗಳ ಅಭಿವ್ಯಕ್ತಿ.

ಇಂತಹ ಬರವಣಿಗೆಯಲ್ಲಿ ಆತ್ಮಚರಿತ್ರೆಯ ಛಾಯೆಯಿರಬಹುದು। ಹೆಂಗಸರಲ್ಲಿ ಸ್ವಂತ ಐಡೆಂಟಿಟಿ ಇರುವವರು ಕಡಿಮೆ. ’ಇಂತಹವರ’ ಪತ್ನಿ, ಮಗಳು, ತಂಗಿ, ತಾಯಿ ಅಥವಾ ಗೆಳತಿ ಎಂದೇ ಗುರುತಿಸುತ್ತಾರೆ. ಅದರಲ್ಲೂ ಗಣ್ಯ ವ್ಯಕ್ತಿಯ ಪತ್ನಿಯಾಗಿದ್ದು, ಗಂಡನ ಕ್ಷೇತ್ರದಲ್ಲೇ ಚೂರು ಪಾರು ಹೆಸರು ಮಾಡಿದ್ದರೆ ಅವಳನ್ನು ಸಂಶಯದಿಂದಲೇ ನೋಡಲಾಗುತ್ತದೆ. ಪತಿಯ ನೆರಳಲ್ಲೆ ಪತ್ನಿಯ ಪ್ರತಿಭೆಯನ್ನು ಗುರುತಿಸಲಾಗುತ್ತದೆ.

ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ। ನನ್ನ ಬರಹ ಮಾತ್ರ ನಿಮ್ಮ ಮುಂದಿರುತ್ತದೆ. ಅದು ಮಾತ್ರ ನಿಮ್ಮನ್ನು ತಲುಪುತ್ತದೆ. ಸಮಾಜವನ್ನು ತಿದ್ದುವ, ಬದಲಿಸುವ ದೊಡ್ಡ ದೊಡ್ಡ ಹೊಣೆಗಾರಿಕೆಗಳು ಖ್ಯಾತ ನಾಮರಿಗೇ ಇರಲಿ.

ಕನ್ನಡದ ಕೆಲವು ಪತ್ರಿಕೆಗಳು ಮತ್ತು ನಿಯತಕಾಲಿಕಗಳು ನನ್ನ ಲೇಖನಗಳನ್ನು ಪ್ರಕಟಿಸಲಿಲ್ಲ। ಹಿಂದೆ ಪ್ರಕಟಿಸುತ್ತಿದ್ದವು. ಯಾಕಿರಬಹುದೆಂದು ಕೆದಕಿದಾಗ ಗೊತ್ತಾಗಿದ್ದು; ನಾನು ’ಇಂತವರ’ ಪತ್ನಿಯೆಂದು, ಮತ್ತೊಂದು ಕಾರಣ ಆ ಪತ್ರಿಕೆಯ ದ್ಯೇಯಧೋರಣೆಗಳಿಗೆ ವ್ಯತಿರಿಕ್ತವಾಗಿ ನನ್ನ ಬರಹ ಇದ್ದದ್ದು. ’ನಿಮ್ಮ ಬರಹದಲ್ಲಿ ಸತ್ವ ಇದ್ದಿರಲಾರದು ಬಿಡಿ’ ಎಂದು ನೀವನ್ನಬಹುದು. ಆದರೆ ಅದೇ ಬರಹಗಳನ್ನು ಪ್ರಜಾವಾಣಿ ಸಮೂಹ ಪ್ರಕಟಿಸಿತು.’ ಓ॥ಗೊತ್ತಾಯ್ತು ಬಿಡಿ ನೀವು ಎಲ್ಲಿ ಗುರುತಿಸಲ್ಪಡುತ್ತೀರಿ ’ ಅಂತ ರಾಗ ಎಳೆದ್ರಾ.. ಇದೇ ಸ್ವಾಮಿ, ಪೂರ್ವಗ್ರಹ ಅಂದ್ರೆ.

ಮೊನ್ನೆ ’ಕೆಂಡ ಸಂಪಿಗೆ’ಯಲ್ಲಿ ಜೋಗಿ ಬರೆದ ಬೈರಪ್ಪನವರ ಬರಹಕ್ಕೆ ಕಮೆಂಟ್ ಬರೆಯೋಣವೆಂದುಕೊಂಡೆ। ಯಾಕೆಂದರೆ ಬೈರಪ್ಪನವರ ಸ್ತ್ರೀ ಪಾತ್ರಗಳು ಜೋಗಿಗೆ ಕಾಡದಿರಬಹುದು.ಆದರೆ ನನಗಂತೂ ಕಾಡಿವೆ. ಅವರ ಸ್ತ್ರೀ ಪಾತ್ರಗಳು ಕಾದಂಬರಿಕಾರರನ್ನು ಮೀರಿ ಬೆಳೆಯಲು ಪ್ರಯತ್ನಿಸುತ್ತವೆ. ಕಾದಂಬರಿಕಾರ ಅವರನ್ನು ಉಸಿರುಗಟ್ಟಿಸಿದರೂ ನನ್ನಂಥ ಓದುಗಳಲ್ಲಿ ಅದು ಮರು ಜೀವ ಪಡೆದು ಚಿಗುರಿಕೊಳ್ಳುತ್ತದೆ.

ಆದರೆ ಬರೆಯಲಿಲ್ಲ। ಅಲ್ಲಿರುವ ಕಮೆಂಟ್ ರಾಶಿ ನೋಡಿ ಬೆರಗಾಗಿ ಹೋದೆ. ನಮ್ಮ ಪರಿಸರ ನಮ್ಮ ವ್ಯಕ್ತಿತ್ವವನು ರೂಪಿಸುತ್ತದೆ. ಓದು ಮತ್ತು ಅನುಭವ ಅದಕ್ಕೆ ಇನ್ನೊಂದು ಆಯಾಮ ನೀಡಬಹುದು. ಆದರೆ ನಮ್ಮದಲ್ಲದ ವ್ಯಕ್ತಿತ್ವವನ್ನು ಅರೋಪಿಸಿ ಜಗ್ಗಾಡಿದರೆ ನೋವಾಗುವುದಿಲ್ಲವೇ? ಜೋಗಿಯ ಬರವಣಿಗೆ ಹಿನ್ನೆಲೆಗೆ ಸರಿದು ಜೋಗಿ ’ಇಂಥವರು’, ಕಮೆಂಟ್ ಮಾಡಿದವರು ’ಇಂತವರಿಗೆ ಸಂಬಂದಿಸಿದವರು’ ಎಂಬುದರ ಮೇಲೆ ಚರ್ಚೆ ಮುಂದುವರಿಯುತ್ತಿತ್ತು. ಸೂಕ್ಷ ಮನಸ್ಸಿನವರಿಗೆ ಇದನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.

ಯಾವುದೋ ಒಂದು ಸಮುದಾಯದ ಅಥವಾ ಸಿದ್ಧಾಂತದ ಚೌಕಟ್ಟಿನೊಳಗೆ ನನ್ನನ್ನು ನನಗೆ ಗುರುತಿಸಿಕೊಳ್ಳಲು ಸಾಧ್ಯವಾಗದು। ಆದರೆ ಪ್ರಭಾವಕ್ಕೊಳಗಾಗಬಹುದು. ಗುರುತಿಸಿಕೊಳ್ಳುವುದೇ ಅನಿವಾರ್ಯವಾದರೆ ಸ್ತ್ರೀವಾದಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ. ಹಾಗಾಗಿ ’ ಇಂಥವರ’ ನೆರಳಲ್ಲಿ ಗುರುತಿಸಿಕೊಂಡರೆ ನಮ್ಮ ಐಡೆಂಟಿಟಿ ಮಸುಕಾಗುತ್ತದೆ. ಇಲ್ಲವೇ ಸಂಶಯಕ್ಕೊಳಗಾಗುತ್ತದೆ.

ಡಾರ್ಕ್ ರೂಂನಿಂದ ಬರೆದಾಗಲೂ ಕಿರಿಕಿರಿಯಾಗುವುದುಂಟು। ಸುಮಾರು ಒಂದು ತಿಂಗಳಿಗೂ ಹಿಂದೆ ನಾನು ಕೆಲವು ಪರಿಚಿತರಿಗೆ ಮೆಸೇಜ್ ಮಾಡಿ ನನ್ನ ಬ್ಲಾಗ್ ನೋಡುವಂತೆ ಮನವಿ ಮಾಡಿದ್ದೆ. ಇಮೇಲ್ ಗಿಂತಲೂ ಮೆಸೇಜ್ ಸುಲಭ ಅಂದುಕೊಂಡು ಮೊಬೈಲ್ ನಂಬರ್ ಪ್ರೋಪೈಲ್ ನಲ್ಲಿ ನೀಡಿದ್ದೆ. ಇಂಗ್ಲೀಷ್ ಪತ್ರಕರ್ತನೊಬ್ಬ ’ಲೀವಿಂಗ್ ಟುಗೆದರ್’ ಲೇಖನ ಬರೆದಾಗ ಎಚ್ಚೆತ್ತುಕೊಂಡ. ಬೆನ್ನು ಬಿಡದ ಬೇತಾಳದಂತೆ ಕಾಡತೊಡಗಿದ. ಅವನು ಇನ್ನಾರೋ ಪತ್ರಕರ್ತೆ ತಾನೆಂದು ಭಾವಿಸಿದನಂತೆ!

ಈ ಬ್ಲಾಗ್ ಮನುಷ್ಯ ಸ್ವಭಾವದ ಕೆಲವು ಮುಖಗಳನ್ನು ಪರಿಚಯ ಮಾಡಿಕೊಟ್ಟಿದೆ। ಅದಕ್ಕಾಗಿ ಕೃತಜ್ನತೆಯಿದೆ. ನಿಜದ ಬದುಕಿನಲ್ಲಿ ಎಲ್ಲವನ್ನೂ ಬಿಚ್ಚಿಟ್ಟು ಬದುಕಲಾಗದು. ಇಲ್ಲಾದರೆ ಅಡ್ಡಗೊಡೆಯಲ್ಲಿಟ್ಟ ದೀಪದಂತೆ ಹೇಳಿಕೊಳ್ಳಬಹುದು. ಹೇಳಿ ಹಗುರಾಗಬಹುದು. ಕೆಲವೊಮ್ಮೆ ಪ್ರತಿಕ್ರಿಯೆಯೂ ಸಿಗಬಹುದು. ಭಾವನೆಗಳ ವಿನಿಮಯಕ್ಕೆ ಇಲ್ಲಿ ಮುಕ್ತ ಅವಕಾಶವಿದೆ. ಓದುಗರ ಜೋತೆ ನೇರ ಸಂಪರ್ಕವಿರುವುದರಿಂದ ಬ್ಲಾಗ್ ಒಮ್ಮೊಮ್ಮೆ ಆಪ್ತ ಸಲಹಾ ಕೇಂದ್ರದಂತೆಯೂ ಕೆಲಸ ಮಾಡುತ್ತದೆ.

ನನ್ನದೊಂದು ಪುಟ್ಟ ಭಾವ ಪ್ರಪಂಚ. ಅಲ್ಲಿರುವುದು ನಾನು ಮತ್ತು ನನ್ನ ಭಾವನೆಗಳು ಮಾತ್ರ. ಅಲ್ಲಿಗೆ ಆಕ್ರಮಣವಾಗದಂತೆ ನಾನು ಎಚ್ಚರ ವಹಿಸುತ್ತೇನೆ. ’ನಿನಗೆ ನೀನೇ ಗೆಳೆಯ’ ಎಂಬ ಮಾತಿನಲ್ಲಿ ನನಗೆ ಸಂಪೂರ್ಣ ವಿಸ್ವಾಸವಿದೆ.

Sunday, October 12, 2008

’ಲಿವಿಂಗ್ ಟುಗೆದರ್’ ಯಾಕೀ ರಗಳೆ?



ಶಾಸ್ತೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿ ಯಾವುದೇ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘಕಾಲ ಒಟ್ಟಿಗೇ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿ ಎಂದೇ ಮಾನ್ಯ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಸರಕಾರ ಯಾಕೆ ಈ ನಿರ್ಧಾರಕ್ಕೆ ಬಂತು?
ಯಾಕೆಂದರೆ, ಆನೇಕ ವರ್ಷಗಳ ಕಾಲ ಸಹಜೀವನ ನಡೆಸಿದ ಪುರುಷ ಸಂಗಾತಿ ಒಂದು ದಿನ ಇದ್ದಕ್ಕಿದ್ದಂತೆ ’ನಿನಗೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದು ಎದ್ದು ಹೊರಟುಬಿಡುತ್ತಿದ್ದ. ಬಹುತೇಕ ಸಂದರ್ಭಗಳಲ್ಲಿ ಆತನ ಮುಂದೆ ಎರಡು ಆಯ್ಕೆಗಳಿರುತ್ತಿದ್ದವು. ಮೊದಲನೆಯದಾಗಿ ಆತ ಇನ್ನೊಂದು ಹೆಣ್ಣಿನತ್ತ ಈ ಮೊದಲೇ ಆಕರ್ಷಿತನಾಗಿರುತ್ತಿದ್ದ ಹಾಗಾಗಿ ಇಲ್ಲಿ ಸಂಬಂದ ಹರಿದುಕೊಂಡು ಅಲ್ಲಿ ಮುಂದುವರಿಸುತ್ತಿದ್ದ. ಎರಡನೆಯದಾಗಿ ಮನೆಯವರ ಒತ್ತಡಕ್ಕೆ ಮಣಿದು ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದ. ಇಲ್ಲಿ ಈ ಹುಡುಗಿ ಭಾವನಾತ್ಮಕವಾಗಿ ಕುಸಿದು ಹೋಗುತ್ತಿದ್ದಳು.
ಇಂತಹ ಸಂದರ್ಭಗಳಲ್ಲಿ ಕೆಲವು ಮಹಿಳೆಯರು ತಮಗಾಗಿರುವ ಅನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ಹಿಂದು ವಿವಾಹ ಕಾಯ್ದೆಯ ಪ್ರಕಾರ ಒಟ್ಟಿಗೆ ಬದುಕುವುದು ಮದುವೆ ಅನ್ನಿಸಿಕೊಳ್ಳುವುದಿಲ್ಲ. ಹಾಗಾಗಿ ಪುರುಷರು ’ಮದುವೆ’ ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು. ಆಕೆಗೆ ಯಾವುದೇ ಪರಿಹಾರವನ್ನು ಕೊಡುತ್ತಿರಲಿಲ್ಲ.
ಒಬ್ಬ ಮಹಿಳೆಯ ಗುಣಮಟ್ಟದ ಕ್ರಿಯಾಶೀಲ ಬದುಕು ನಲ್ವತ್ತನೇ ವಯಸ್ಸಿಗೆ ಮುಗಿದು ಹೊಗುತ್ತದೆ. ಅಥವಾ ಮಸುಕಾಗುತ್ತಾ ಬರುತ್ತದೆ. ಅದರಲ್ಲೂ ಭಾರತಿಯ ಸಮಾಜದಲ್ಲಿ ಮತ್ತೊಮ್ಮೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರಕ ವಾತಾವರಣವಿಲ್ಲ. ಪರಂಪರೆಯ, ಸಂಪ್ರದಾಯದ ಚೌಕಟ್ಟುಗಳನ್ನು ಮೀರಿದವರನ್ನು ಬಂಧುಬಾಂಧವರು ಅಷ್ಟು ಸುಲಭವಾಗಿ ತಮ್ಮೊಡನೆ ಸೇರಿಸಿಕೊಳ್ಳುವುದಿಲ್ಲ. ಹಾಗಾಗಿ ಅವರು ಒಂಟಿಯಾಗಿಬಿಡುತ್ತಾರೆ. ಇಳಿ ವಯಸ್ಸಿನಲ್ಲಿ ಒಂಟಿತನ ಸಹಿಸುವುದು ಕಷ್ಟ.
ಇದನ್ನೆಲ್ಲಾ ಮನಗಂಡ ಸರಕಾರ ’ಲೀವಿಂಗ್ ಟುಗೆದರ್’ಗೆ ಕಾನೂನಿನ ಮಾನ್ಯತೆ ನೀಡಲು ನಿರ್ಧರಿಸಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಏನೇಂದರೆ, ಎಷ್ಟು ಪರ್ಸೆಂಟ್ ಜನ ಲಿವಿಂಗ್ ಟುಗೆದರ್ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂತಹ ಮನಸ್ಥಿತಿಯ ಜನ ಆಯ್ಕೆ ಮಾಡಿಕೊಳ್ಳುತ್ತಾರೆ?
ಇದು ನಗರ ಸಂಸ್ಕ್ರ್‍ಅತಿಯ ಬಳುವಳಿ. ಇದಕ್ಕೆ ಬದಲಾದ ಕೌಟುಂಬಿಕ ಮೌಲ್ಯಗಳೇ ಕಾರಣ. ಮೌಲ್ಯ ಬದಲಾವಣೆಗೆ ಜಾಗತೀಕರಣವೂ ಒಂದು ಕಾರಣ. ಹಾಗಾಗಿ ಸಮಾಜಮುಖಿಯಾದ ಸಮೂಹ ಕೇಂದ್ರಿತ ಬದುಕು ಈಗಿಲ್ಲ. ಈಗ ಏನಿದ್ದರೂ ವ್ಯಕ್ತಿ ಕೇಂದ್ರಿತ ಬದುಕು. ’ನಾವು, ನಮ್ಮದು’ ಇಲ್ಲ; ’ನಾನು, ನನ್ನದು’ ಎಲ್ಲಾ. ಹಾಗಾಗಿ ಜನರು, ಮುಖ್ಯವಾಗಿ ಯುವ ಜನಾಂಗ ಸ್ವಾರ್ಥಿಗಳೂ, ಅಂತರ್ಮುಖಿಗಳೂ, ಭಾವರಹಿತರೂ ಆಗುತ್ತಿದ್ದಾರೆ. ಅವರ ಕೈಯಲ್ಲೊಂದು ಮೊಬೈಲ್, ಎದುರುಗಡೆ ಕಂಪ್ಯೂಟರ್, ಓಡಾಡಲೊಂದು ವೆಹಿಕಲ್ ಇದ್ದುಬಿಟ್ಟರೆ ಪ್ರಪಂಚ ತಮ್ಮ ಮುಷ್ಟಿಯಲ್ಲಿರುತ್ತೆ ಎಂಬ ನಂಬಿಕೆ ಅವರಲ್ಲಿರುತ್ತೆ.
ಇಂತಹ ಯುವ ಮನಸ್ಸುಗಳೇ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ನೈತಿಕ ಕಟ್ಟುಪಾಡು ಇಲ್ಲದವರು, ಮುಕ್ತ ಲೈಂಗಿಕತೆಯ ಪ್ರತಿಪಾದಕರು.. ಎಂಬೆಲ್ಲಾ ಅಭಿಪ್ರಾಯಗಳಿವೆ. ಆದರೆ ಅದು ಸರಿಯಲ್ಲ. ಇವರಲ್ಲಿ ಹೆಚ್ಚಿನವರು ಭಾವನಾತ್ಮಕ ಆಸರೆಗಾಗಿ ಹಾತೊರೆಯುತ್ತಾ ಇಂಥಹ ಬಂಧದಲ್ಲಿ ಒಂದಾಗುತ್ತಾರೆ. ಇನ್ನು ಕೆಲವರು ಮದುವೆಯ ಬಂಧ ಹೊರಿಸುವ ಹೊಣೆಗಾರಿಕೆಯನ್ನು ನಿಭಾಯಿಸಲಾರೆವೆನ್ನುವ ಭಯದಿಂದ ಇಂಥ ಸಂಬಂಧದಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲವರು ಭಾವಿಸುವಂತೆ ಸೆಕ್ಸೇ ಮುಖ್ಯವಾಗುವುದಾದರೆ ಈಗೆಲ್ಲಾ ’ಟೈಂಪಾಸ್ ಸೆಕ್ಸ್’ ಎನ್ನುವುದು ಅತಿ ಸುಲಭವಾಗಿ ಸಿಗುವ ಮನೋರಂಜನೆ.
ಆರ್ಥಿಕವಾಗಿ ಸ್ವತಂತ್ರಳಿದ್ದು ಎಂತಹ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ, ಒಂಟಿಯಾಗಿ ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸದ, ಭಾವುಕವಾಗಿದ್ದರೂ- ನಿರ್ಣಾಯಕ ಘಟ್ಟಗಳಲ್ಲಿ ನಿರ್ಧಾಕ್ಷಣ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಹುಡುಗಿಯೊಬ್ಬಳು ’ಲಿವಿಂಗ್ ಟುಗೆದರ್’ನತ್ತ ವಾಲಿದರೆ ಅದವಳ ಅತ್ಯುತ್ತಮ ಆಯ್ಕೆಯಾಗಬಲ್ಲುದು.
ಯಾಕೆಂದರೆ ಒಬ್ಬ ಗೆಳೆಯ ಕೊಡುವ ಸಾಂಗತ್ಯವನ್ನು ಒಬ್ಬ ’ಗಂಡ’ ಕೊಡಲಾರ. ಹಿಂದೆ ಬದ್ರತೆಯನ್ನು ನೀಡುತ್ತಿದ್ದ ಕುಟುಂಭ ಈಗ ಹೊಣೆಗಾರಿಕೆಯನ್ನು ಮಾತ್ರ ನೀಡುತ್ತಿದೆ. ಆಕೆ ಗೃಹಿಣಿಯಾಗಿದ್ದಾಗ ಗೃಹಸ್ಥನಾಗಿ ಆತ ಹೊಣೆಗಾರಿಕೆಯಲ್ಲಿ ಪಾಲುದಾರನಾಗುತ್ತಿದ್ದ. ಆದರೆ ಈಗ ಆಕೆ ಉದ್ಯೋಗಸ್ಥ ಮಹಿಳೆ. ಆತನ ಪಾಲುದಾರಿಕೆ ಶೂನ್ಯ. ’ಅಲೆಮಾರಿತನ’ ಎಂಬುದು ಗಂಡಸಿನ ಸ್ಥಾಯಿ ಭಾವ. ಬೇಜವಾಬ್ದಾರಿತನ, ಉಡಾಫೆ, ಸೋಮಾರಿತನ...ಇತ್ಯಾದಿ ಸಂಚಾರಿ ಭಾವಗಳು.
ಇಷ್ಟೆಲ್ಲ ಹೇಳಿದರೂ ’ಲೀವಿಂಗ್ ಟುಗೆದರ್’ನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಶೇ.೧ನ್ನೂ ದಾಟಿಲ್ಲ. ಹಾಗಾಗಿ ಇಷ್ಟು ಬೇಗನೇ ಸರಕಾರ ಇದನ್ನು ಕಾನೂನಿನ ವ್ಯಾಪ್ತಿಗೆ ತರಬೇಕಾದ ಅವಶ್ಯಕತೆ ಇದ್ದಂತಿಲ್ಲ. ಈಗ ಬದಲಾಗಬೇಕಾದ್ದು ಪುರುಷ ಮನಸ್ಥಿತಿ. ಗಂಡ ಹೆಂಡತಿಯಲ್ಲಿ ಭರವಸೆಯನ್ನು ತುಂಬಬೇಕು. ಬದುಕಿನ ಬದ್ರತೆಯನ್ನು ಮೂಡಿಸಬೇಕು. ಇಲ್ಲವಾದರೆ..... ಇಂದು ’ಲೀವಿಂಗ್ ಟುಗೆದರ್’ -ನಾಳೆ ಮದುವೆಯ ನಿರಾಕರಣೆ.

Thursday, October 2, 2008

ನಿಮ್ಮ ಇಷ್ಟ ದೈವ ಯಾವುದು?


ರಾಜಸ್ತಾನದ ಜೋದ್ ಪುರದ ಚಾಮುಂಡಾ ದೇವಿಯ ಸನಿಧಿಯಲ್ಲಿ ಸಂಭವಿಸಿದ ದುರಂತವನ್ನು ಟೀವಿಯಲ್ಲಿ ನೋಡುತ್ತಲಿದ್ದೆ. ಅದಕ್ಕೆ ಕಾರಣಗಳನ್ನು ಮತ್ತು ಭಕ್ತರ ನಂಬಿಕೆಯ ಜಗತ್ತನ್ನು ಭೂತಕನ್ನಡಿಯಲ್ಲಿಟ್ಟು ವಿಮರ್ಶಿಸುವುದು ನನಗಿಷ್ಟವಿಲ್ಲ. ನನಗೆ ಅನ್ನಿಸಿದ್ದೇ ಬೇರೆ...!
ನಮ್ಮಲ್ಲಿ ಅಂದ್ರೆ ಹಿಂದುಗಳಲ್ಲಿ [ಬೇರೆ ದರ್ಮದ ದೇವರ ವಿಚಾರ ಇಲ್ಲಿ ತರುವುದು ಬೇಡ ಅಲ್ವಾ.. ನಮ್ಮದು, ನಮ್ಮವರು ಅಂದ್ರೆ ಸಲಿಗೆ ಜಾಸ್ತಿ ಎನೆಂದ್ರೂ ಸಹಿಸ್ಕೋತಾರೆ!.] ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ. ಸಾಯಿಬಾಬಾ, ಚಿಕೂನುಗುನ್ಯಾದ ಕೀಲಮ್ಮ, ಈಗ ನಡೆದಾಡುವ; ಮುಂದೆ ದೇವರಾಗಬಹುದಾದ ದೇವಮಾನವರುಗಳು, ಹೀಗೆ ಅಯಾಯ ಕಾಲಕ್ಕೆ ಈ ಪಟ್ಟಿ ಪರಿಷ್ಕರಣೆಯಗುತ್ತಲೇ ಇರುತ್ತದೆ. ವಿರೋಧವನ್ನು ಕೂಡ ತನ್ನಲ್ಲಿ ಐಕ್ಯವಾಗಿಸಿಕೊಳ್ಳುವ ಅಥವಾ ಅಫೋಶನ ತೆಗೆದುಕೊಳ್ಳುವ ಇಲ್ಲವೇ ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳುವ ಆಗಾಧ ಶಕ್ತಿ ಹಿಂದು ಧರ್ಮಕ್ಕಿದೆ. ಹಿಂದು ಧರ್ಮದ ಕಟ್ಟಾ ವಿರೋಧಿಗಳಾದ ಚರ್ವಾಕರು,ಬೌದ್ಧರು, ಲಿಂಗಾಯಿತರು ಮತ್ತು ತಾಂತ್ರಿಕರನ್ನು ಇಂದು ಹಿಂದು ದರ್ಮದ ಭಾಗವೆಂಬಂತೆ ಚಿತ್ರಿಸಲಾಗುತ್ತದೆ.ಹಿಂದು ಧರ್ಮಕ್ಕೆ ಸಮಾನಂತರವಾಗಿ ಅಷ್ಟೇ ಪ್ರಭಲವಾಗಿದ್ದ ಮೌಖಿಕ ಸಾಹಿತ್ಯ ಹಾಗು ಜಾನಪದ ಪರಂಪರೆಯನ್ನೊಳಗೊಂಡ ಭಾರತಿಯ ಸಂಸ್ಕ್ರ್‍ಅತಿ ಅಕ್ಷರ ಬಲ್ಲವರಿಂದ ಮೂಲೆಗುಂಪಾಯಿತು. ಒಹ್, ವಿಷಯಾಂತರವಾಯಿತು ಅಲ್ವಾ, ಕ್ಷಮಿಸಿ.
ಮುವತ್ತಮೂರು ಕೋಟಿ ದೇವತೆಗಳು ಅನ್ತಿದ್ದೆ ಅಲ್ವಾ, ಇವರಲ್ಲಿ ಹೆಣ್ಣೆಷ್ಟು? ಗಂಡೆಷ್ಟು? ನನಗೆ ಗೊತ್ತಿಲ್ಲ. ಯಾರಿಗೆ ಯಾವ ದೇವರು/ದೇವತೆ ಯಾಕೆ ಇಷ್ಟವಾಗುತ್ತಾನೆ/ಳೆ ಅದೂ ಕೂಡ ಗೊತ್ತಿಲ್ಲ. ನಾನೇನೂ ಆಸ್ತಿಕಳಲ್ಲ. ಹಾಗಂತ ನಾಸ್ತಿಕಳೂ ಅಲ್ಲ. ಒಂದು ಕಾಲದಲ್ಲಿ ನೀಲಮೇಘಶ್ಯಾಮನಾದ ಕೃಷ್ಣ ನನ್ನ ಇಷ್ಟದೈವವಾಗಿದ್ದ. ರಾಧ-ಮಾಧವರ ಪ್ರೇಮ ನನ್ನ ಆದರ್ಶವಾಗಿತ್ತು. ಮುಂದೆ ದ್ರೌಪಧಿಯ ಸಖ, ದ್ವಾರಕೆಯ ಕೃಷ್ಣ ನನ್ನ ಆತ್ಮಬಂಧುವಾದ. ಆತನ ಕಿರುಬೆರಳು ಹಿಡಿದು ಅನೇಕ ಸಂಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಈಗ ಆತನೂ ನನ್ನ ಜತೆಯಲಿಲ್ಲ. ಈಗ ನನ್ನನ್ನು ಸಂಪೂರ್ಣ ಆವರಿಸಿಕೊಂಡಿರುವವನು ಶಿವ.
ಅಬ್ಬಾ! ಎಂತಹ ಪರಿಪೂರ್ಣ ವ್ಯಕ್ತಿತ್ವ ಶಿವನದು!! ತನ್ನ ದೇಹದ ಅರ್ಧ ಭಾಗವನ್ನೇ ಮಡದಿಗೆ ನೀಡಿ ಅರ್ಧನಾರೀಶ್ವರನಾದ ಪ್ರೇಮಿ ಆತ. ಆತನ ಕೌಟುಂಬಿಕ ಬದುಕು ಎಷ್ಟೊಂದು ವೈರುಧ್ಯತೆಗಳಿಂದ ಕೂಡಿದೆ.. ಆದರೂ ಅಲ್ಲಿ ಸಾಮರಸ್ಯವಿದೆ. ಪಾರ್ವತಿಯ ವಾಹನಹುಲಿ. ಹುಲಿಯ ಆಹಾರ ಶಿವನ ವಾಹನವಾದ ನಂದಿ. ಶಿವನ ಕೊರಳನ್ನಲಂಕರಿಸಿರುವ ಹಾವಿನ ಕಣ್ಣು ಗಣಪನ ವಾಹನವಾದ ಇಲಿಯ ಮೇಲಿರುತ್ತದೆ. ಸುಬ್ರಹ್ಮಣ್ಯನ ವಾಹನ ನವಿಲಿನ ಆಹಾರ ಶಿವನ ಕೊರಳಲ್ಲಿರುವ ಹಾವು. ಶಿವನ ಹಣೆಯಲ್ಲಿ ಸದಾ ಪ್ರಜ್ವಲಿಸುವ ಬೆಂಕಿಕಣ್ಣಿದೆ. ಆದರೆ ತಲೆಯಲ್ಲಿ ಬೆಂಕಿ ನಂದಿಸುವ ಗಂಗೆಯಿದ್ದಾಳೆ. ಸ್ವತ ಶಿವ ಬೂದಿಬಡುಕನಾದ ಶ್ಮಶಾನವಾಸಿ ತಿರುಕ ಆದರೆ ಪಾರ್ವತಿ ಸುರಸುಂದರಿಯಾದ ರಾಜಕುಮಾರಿ.ಆದರೂ ಶಿವನನ್ನು ಮೆಚ್ಚಿ ಮದುವೆಯಾದವಳು. ಡೊಳ್ಳು ಹೊಟ್ಟೆಯ ಆನೆ ಮುಖದ ಗಣೇಶ ಇಲಿ ಮೇಲೆ ಕೂತು ಸವಾರಿ ಮಾಡುವುದು ನೆನೆಸಿದರೇ ನಗು ಬರುತ್ತದೆ. ಇನ್ನು ಅವರ ಪರಿವಾರವೋ ಭೂತ ಪ್ರೇತಾದಿ ಗಣಗಳು.
ಸಂಸಾರದಲ್ಲಿ ಸಾಮರಸ್ಯ ಸಾಧಿಸುವುದು ಹೇಗೆ ಎಂಬುದನ್ನು ಶಿವ-ಶಿವೆಯರನ್ನು ನೋಡಿಯೇ ಕಲಿತುಕೊಳ್ಳಬೇಕು. ಆತನ ಪರಿವಾರ ನೋಡಿದರೇ ಗೊತ್ತಾಗುತ್ತದೆ. ಅತನೊಬ್ಬ ಕೃಷಿಕ. ಪಶುಪತಿನಾಥ ಎಂಬ ಹೆಸರು ಆತನಿಗೆ ಅನ್ವರ್ಥನಾಮ. ಇಂತಪ್ಪ ಪಶುಪತಿನಾಥನನ್ನು ಹುಡುಕಿಕೊಂಡು ನಾನು ಯಾವುದೋ ಟ್ರಾವಲ್ಸ್ ಹತ್ತಿ ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದೆ. ಆದರೆ ಅಲ್ಲಿ ಪಶುಪತಿನಾಥನ ಪಕ್ಕದ ಗುಡಿಯಲ್ಲಿದ್ದ ಉನ್ಮತ್ತ ಬೈರವನನ್ನು ನೋಡಿ ದಿಗ್ಮೂಢಳಾಗಿ ನಿಂತಿದ್ದೆ. ಈಗ ಎಷ್ಟು ನೆನಪಿಸಿಕೊಂಡರೂ ಪಂಚಮುಖಿ ಪಶುಪತಿನಾಥನ ಮುಖ ಸ್ಪಷ್ಟವಾಗಿ ಗೊಚರಿಸದು. ಉನ್ಮತ್ತ ಬೈರವ ಮಾತ್ರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದೆ. ಇನ್ನೊಮ್ಮೆ ನೇಪಾಳಕ್ಕೆ ಹೋಗಿ ಪಶುಪತಿನಾಥ ಮತ್ತು ಶಕ್ತಿಪೀಠವನ್ನು ಒಟ್ಟಾಗಿ ನೋಡಬೇಕೆಂಬ ಬಯಕೆಯಿದೆ.
ಸ್ಥೀಯ ಧೀಃಶಕ್ತಿಯ ಬಗ್ಗೆ ನನಗೆ ಅಪಾರ ಭರವಸೆಯಿದೆ. ಅವಳು ಆಧಿಶಕ್ತಿ. ಸೃಷ್ಟಿಸುವ, ಪಾಲಿಸುವ ಮತ್ತು ಪೊರೆಯುವ ಸಾಮರ್ಥ್ಯ ಅವಳಿಗೆ ಮಾತ್ರ ಇದೆ. ಪುರುಷನಲ್ಲಿ ಅದು ಇಲ್ಲ. ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾದ ಕಾಶಿ ವಿಶ್ವನಾಥ, ಅಷ್ಟೈಶ್ವರ್ಯವನ್ನು ಬಯಸುವವರಿಗಾಗಿ ತಿರುಪತಿ ತಿಮ್ಮಪ್ಪ, ಹಾಗು ಸ್ತ್ರೀದ್ವೇಷಿ ಅಯ್ಯಪ್ಪ ಬಿಟ್ಟರೆ ಬೇರೆ ಪುರುಷ ದೇವರುಗಳು ಅಷ್ಟು ಜನಪ್ರಿಯರಾಗಿದ್ದು ನನಗೆ ಗೊತ್ತಿಲ್ಲ.ಹಾಗೆಯೇ ಅಲ್ಲಿ ಭಕ್ತರ ನೂಕು ನುಗ್ಗಾಟದಲ್ಲಿ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ
ಕುಂಬಮೇಳಕ್ಕೆ ಲಕ್ಷಾಂತರ ಜನಸೇರುತ್ತಾರೆ. ಅದು ಕೂಡ ಶಕ್ತಿ ಸ್ಥಳವೇ. ಗಂಗಾ, ಯಮುನಾ, ಸರಸ್ವತಿಯರ ಸಂಗಮ ಸ್ಥಳ ಅದು. ಅಲ್ಲಿ ಪ್ರತಿ ಬಾರಿಯೂ ಸಾವು ನೋವುಗಳಾಗುವುದು ಸಾಮಾನ್ಯ. ಇತ್ತೀಚೆಗೆ ಹಿಮಾಚಲಪ್ರದೇಶದ ನೈನಾದೇವಿ ಮಂದಿರದಲ್ಲಿ, ಅದಕ್ಕೂ ಹಿಂದೆ ಮಹಾರಾಷ್ಟ್ರದ ಮಾಂದ್ರಾದೇವಿ ದೇಗುಲದಲ್ಲಿ ಭಕ್ತರ ನೂಕುನುಗ್ಗಾಟದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.
ಈಗ ನನಗೊಂದು ಕುತೂಹಲವಿದೆ; ಮಾತೃ ದೇವತೆಗಳಿಗೆ ಹೆಚ್ಚು ಭಕ್ತರಿರುತ್ತಾರೋ ಅಥವಾ ಗಂಡು ದೇವರುಗಳಿಗೋ...! ನನಗೆ ಶಿವ ಇಷ್ಟ. ಅದಕ್ಕೆ ನಾನು ಸ್ತ್ರೀಯಾಗಿರುವುದು ಕಾರಣವಾಗಿರಬಹುದು; ನನಗೆ ಗೊತ್ತಿಲ್ಲ. ನಿಮಗೆ ಯಾರು ಇಷ್ಟ? ಲೇಖನದ ಬಲ ಬದಿಯಲ್ಲಿರುವ ಕಾಲಂನಲ್ಲಿ ಓಟು ಮಾಡ್ತೀರಲ್ಲಾ.....?

Wednesday, September 24, 2008

ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು

ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೋದವಳು ಇಂದು ತಿರುಗಿ ಬಂದೆ.

ಕಳೆದ ಸರ್ತಿ ರಾಸಾಯನಿಕ ಗೊಬ್ಬರ ಅಂದ್ರೆ, ಯೂರಿಯ, ಪೊಟಾಶ್, ರಾಕ್ ಫಾಸ್ಪೇಟ್ ಗಳನ್ನು ೧;೨;೩ರ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಹಾಕಿದ್ದೆ. ನಾನು ಸಾವಯವಕೃಷಿಯ ಪರವಾಗಿದ್ದರೂ ಕಳೆದ ಬಾರಿ ರಾಸಾಯನಿಕ ಹಾಕುವುದು ಅನಿವಾರ್ಯವಾಗಿತ್ತು. ಯಾಕೆಂದರೆ, ನಾನು ಖರೀದಿಸಿದ ಆ ತೋಟಕ್ಕೆ ಕಳೆದ ಹತ್ತು ವರ್ಷಗಳಿಂದ ಗೊಬ್ಬರ ಹಾಕಿರಲಿಲ್ಲವಂತೆ. ಹಾಗಾಗಿ ಮರಗಳಿಗೆ ಒಮ್ಮೆ ಚೈತನ್ಯ ತುಂಬಲು ರಾಸಾಯನಿಕ ಗೊಬ್ಬರ ಕೊಡಲೇ ಬೇಕಾಗಿತ್ತು.

ಭಾನುವಾರ ಬೆಳಿಗ್ಗೆ ತೋಟದ ಮನೆ ತಲುಪಿ, ತೋಟವೆಲ್ಲಾ ಸುತ್ತಾಡಿ, ಗಿಡಮರಗಳ ಮೈದಡವಿ, ತುಂಬಿ ಹರಿಯುವ ಕಪಿಲೆಯ ಭೊರ್ಗೆರೆತಕ್ಕೆ ಬೆರಗಾಗುತ್ತ ಮನೆ ತಲುಪಿದಾಗ ಶಿವಾನಂದ ಹಂಡೆ ತುಂಬ ಬಿಸಿ ನೀರು ಕಾಯಿಸಿ ಇಟ್ಟಿದ್ದ. ಸ್ನಾನ ಮಾಡಿ ಬರುವುದರೊಳಗೆ ಅವನ ಹೆಂಡ್ತಿ ರೇಖಾ ಮನೆಯನ್ನು ಚೊಕ್ಕಟ ಮಾಡಿ ಟೀಗೆ ನೀರಿಡುತ್ತಿದ್ದಳು

ಟೀ ಕುಡಿದು ಲೋಕಸಂಚಾರಕ್ಕಾಗಿ ಟಿ.ವಿ ಅನ್ ಮಾಡಿದಾಗ ಲಾರಿ ಹಾರ್ನ್ ಕೇಳಿಸಿತು. ದೂರದಲ್ಲಿ ಮಮ್ಮದೆಬ್ಯಾರಿಯ ಲಾರಿ ಕಾಣಿಸುತ್ತಾ ಗೇಟಿನೊಳಗೆ ನುಸುಳಿ ಅಂಗಳದೊಳಗೆ ಬಂದೇಬಿಟ್ಟಿತು. ೮೦ ಚೀಲ ಅಂದರೆ ೪ಟನ್ ಗೊಬ್ಬರವನ್ನು ಅವರದೇ ಜನ ಕೊಟ್ಟಿಗೆಯಲ್ಲಿ ನೀಟಾಗಿ ಜೋಡಿಸಿಟ್ಟರು. ಟೀ ಮಾಡಿ ಕೊಟ್ಟರೆ ’ರಂಜಾನ್ ತಿಂಗಳಲ್ವಾ.. ಹಾಗಾಗಿ ಉಪವಾಸದಲ್ಲಿದ್ದೇವೆ’ ಎಂದು ನಗುತ್ತಲೇ ನಿರಾಕರಿಸಿದರು.

ಮೀನು, ಬೇವಿನ ಹಿಂಡಿ ಮತ್ತು ಎಲುಬಿನ ಪುಡಿಯ ಈ ಸಾವಯವ ಗೊಬ್ಬರ ಅಡಿಕೆ,ಕೊಕ್ಕೊ ಮತ್ತು ತೆಂಗಿನ ಮರಕ್ಕೆ ಅತ್ಯುತ್ತಮ ಗೊಬ್ಬರ .ಭೂಮಿಯಲ್ಲಿ ಸಮೃದ್ಧವಾಗಿ ಎರೆಹುಳು ಉತ್ಪತ್ತಿಯಾಗುತ್ತದೆ. ಇಂಥ ಗೊಬ್ಬರವನ್ನು ಇದೇ ಮಮ್ಮದೆಬ್ಯಾರಿ ಆ ಊರಿನ ಹಲವಾರು ಮನೆಗಳಿಗೆ ಹಲವಾರು ವರ್ಷಗಳಿಂದ ಪೂರೈಸುತ್ತಿದ್ದರು.

ಗೊಬ್ಬರದ ಬೆಲೆ ೩೦ ಸಾವಿರ ರೂಪಾಯಿಗಳಲ್ಲಿ ೧೦ ಸಾವಿರ ರೂಪಾಯಿಗಳನ್ನು ಮೊದಲ ಅಡಿಕೆ ಕೊಯ್ಲಿನ ನಂತರ ಕೊಡುವುದಾಗಿ ಹೇಳಿದಾಗ ಮಮ್ಮದೆಬ್ಯಾರಿ ’ಆಯ್ತು ಅಕ್ಕಾ.ದುಡ್ಡು ಎಲ್ಲಿ ಹೊಗುತ್ತೆ ಬಿಡಿ. ನೀವು ಚೆನ್ನಾಗಿ ಕೃಷಿ ಮಾಡಿ’ ಎಂದು ಶುಭ ಹಾರೈಸಿ ಲಾರಿ ಸ್ಟಾರ್ಟ್ ಮಾಡಿದರು.

ಈ ಘಟನೆಯನ್ನು ಯಾಕೆ ಹೇಳುತ್ತಿದ್ದೇನೆಂದರೆ ಈ ಬ್ಯಾರಿಗಳು ನಮ್ಮ ಕರಾವಳಿ ಜಿಲ್ಲೆಯ ಆರ್ಥಿಕ ಸುಧಾರಣೆಯ ಕೊಂಡಿಗಳು. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮಳೆಗಾಲದಲ್ಲಿ ನೆರವು ನೀಡಿ ಫಸಲು ಬಂದ ಮೇಲೆ ಅದನ್ನು ಪಡೆದು ತಮ್ಮ ಸಾಲಕ್ಕೆ ವಜಾ ಮಾಡಿಕೊಳ್ಳುತ್ತಾರೆ. ನಮ್ಮ ಕರಾವಳಿಯ ಜನರು ಲೇವಾದೇವಿಗಾರರ ಬಡ್ಡಿಯ ವಿಷವರ್ತುಲದೊಳಗೆ ಸಿಕ್ಕಿ ಬೀಳದಿರಲು ಇದೂ ಒಂದು ಕಾರಣವಿರಬಹುದು.

ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು. ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ. ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ ಬೆಲ್ಲದ ರುಚಿ ಇಂದು ಕೂಡ ನನ್ನ ನಾಲಗೆಯಲ್ಲಿದೆ. ನಮ್ಮೂರಿನಲ್ಲಿ ಈಗಲೂ ವ್ಯಾಪಾರಕ್ಕಾಗಿ ಬಂದ ಬ್ಯಾರಿಗಳಿದ್ದಾರೆ. ನಮ್ಮ ಅವರ ನಡುವಿನ ಸಂಬಂಧ,ವಿಸ್ವಾಸದಲ್ಲಿ ಬಹಳ ಬದಲಾವಣೆಯೇನು ಆದಂತಿಲ್ಲ.

ಎರಡ್ಮೂರು ದಶಕಗಳ ಹಿಂದಿನ ಘಟನಾವಳಿಗಳು ಇವು; ಪುತ್ತೂರಿಗೆ ವಯಾ ಪಂಜದ ಹಾದಿಯಲ್ಲಿ ಹೋದರೆ ಬೈತಡ್ಕ ಎಂಬ ಊರು ಸಿಗುತ್ತದೆ. ಅಲ್ಲಿನ ಸೇತುವೆ ದಾಟಿ, ಮೊದಲ ತಿರ್ಗಾಸಿನ ಬಲ ಬದಿಯಲ್ಲೊಂದು ಪಳ್ಳಿ[ಮಸೀದಿ] ಸಿಗುತ್ತದೆ. ’ಬೈತಡ್ಕ ಪಳ್ಳಿ’ ಎಂದೇ ಖ್ಯಾತಿಯನ್ನು ಪಡೆದಿರುವ ಆ ಮಸೀದಿ ತುಂಬಾ ಕಾರಣಿಕವಾದುದು ಎಂದುಸುತ್ತಮುತ್ತಲ ತಾಲೂಕಿನವರು ಹೇಳುತ್ತಿದ್ದರು. ಪುತ್ತೂರಿಗೆ ಹೋಗಿ ಬರುವ ಪ್ರತಿ ಬಸ್ಸು ಅಲ್ಲಿ ಒಂದರೆಗಳಿಗೆ ನಿಂತು ಅಥವಾ ನಿಧಾನಿಸಿ ಮುಂದಕ್ಕೆ ಸಾಗುತ್ತಿತ್ತು. ಜಾತಿ-ಮತ ಭೇದವಿಲ್ಲದೆ ಜನರು ಆ ಪಳ್ಳಿಯೆಡೆಗೆ ದುಡ್ಡನ್ನು ಕಿಟಿಕಿಯಿಂದ ಹಾಕಿ ಹರಕೆ ತೀರಿಸುತ್ತಿದ್ದರು.

ನನ್ನ ಅಜ್ಜಿಗೆ ಈ ಪಳ್ಳಿಯ ಮೇಲೆ ವಿಶೇಷ ನಂಬಿಕೆಯಿತ್ತು. ಆಕೆ ತುಂಬಾ ಕೋಳಿ ಸಾಕುತ್ತಿದ್ದಳು. ಚಳಿಗಾಲದಲ್ಲಿ ಸಹಜವಾಗಿ ಕೋಳಿಹೇನುಗಳಾಗುತ್ತಿದ್ದವು. ಬೈತಡ್ಕ ಪಳ್ಳಿಗೆ ಹರಕೆ ಹೇಳಿಕೊಂಡರೆ ಹೇನುಗಳೆಲ್ಲಾ ಮಂಗಮಾಯ ಎಂಬುದು ಭಕ್ತರ ನಂಬಿಕೆ.ನಾನು ಹತ್ತಾರು ವರ್ಷಗಳಿಂದ ಆ ದಾರಿಯಲ್ಲಿ ಹೊಗಿಲ್ಲ. ಬಹುಶಃ ಈಗ ಅಲ್ಲಿ ಬಸ್ಸು ನಿಲ್ಲಲಾರದು

ಹಾಗೆ ಭಾವಿಸಲು ಕಾರಣವಿದೆ. ಹುಟ್ಟಿದೂರಿನಿಂದ ದೂರವಿರುವ ನಾನು ಅಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ಕಾರಣದಿಂದ ’ಸುದ್ದಿ ಬಿಡುಗಡೆ’ ಎಂಬ ಪತ್ರಿಕೆಯನ್ನು ತರಿಸುತ್ತೇನೆ. ಅದರಲ್ಲಿ ನಾಲ್ಕೈದಾದರು ಭಜರಂಗಿಗಳ ದರ್ಭಾರ್ ಇದ್ದೇ ಇರುತ್ತದೆ ಹೆಚ್ಚಾಗಿ ಅವರು ಮಾಡುವುದು ಪತ್ತೆದಾರಿಕೆ ಕೆಲಸವನ್ನು. ಒಂದು ಹಿಂದು ಯುವತಿ ಒಬ್ಬ ಯುವಕನೊಡನೆ ಆತ್ಮೀಯವಾಗಿ ಮಾತಾಡುವುದು ಕಂಡು ಬಂದರೆ ಆ ಯುವಕ ಯಾವ ಕೋಮಿನವನೆಂದು ಪತ್ತೆ ಹಚ್ಚುವುದು. ಅನ್ಯ ಕೋಮಿನವನೆಂದು ಗೊತ್ತಾದರೆ ಅವನಿಗೆ ಚೆನ್ನಾಗಿ ತದಕುವುದು. ತಾನೇನು ತಪ್ಪು ಮಾಡಿದೆನೆಂದು ಅವನು ಕಕ್ಕಾಬಿಕ್ಕಿಯಾಗುತ್ತಿರುವಾಗಲೇ ಅವನ ಶರ್ಟ್ ಹರಿದು ಕೆನ್ನೆ ಊದಿಕೊಂಡಿರುತ್ತದೆ.ದೂರದ ಊರಿನವರಾಗಿದ್ದರೆ ಅಲ್ಲಿಗೆ ಮೇಸೇಜ್ ಮುಟ್ಟಿಸುತ್ತಾರೆ. ಅಲ್ಲಿ ಅವರಿಗೆ ತಕ್ಕ ಪೂಜೆ ಅಲ್ಲಿಯ ಭಜರಂಗಿಗಳಿಂದ ಆಗುತ್ತದೆ. ಭಜರಂಗಿಗಳ ಇನ್ನೊಂದು ಕೆಲಸ; ದನ ಕಾಯುವುದು. ಎಲ್ಲಿಯಾದರು ಟ್ರಕ್ ಗಳಲ್ಲಿ ದನ ಕೊಂಡೊಯ್ಯುತ್ತಿರುವ ಸುದ್ದಿ ಸಿಕ್ಕಿದರೆ ಅಲ್ಲಿಗೆ ಹಾಜರು. ಬಡ ಸಾಬರು ಹಣ್ಣುಗಾಯಿ-ನೀರುಗಾಯಿ. ಈ ಸಣ್ಣ ಕಿಡಿ ಮುಂದೆ ಕೋಮುದಳ್ಳುರಿಯಾಗುತ್ತದೆ.

ಭಜರಂಗಿಗಳಿಗೆ ಗೊತ್ತಿಲ್ಲದಿರಬಹುದು; ಸಾಮೂಹಿಕವಾಗಿ ದನದ ಮಾಂಸ ತಿನ್ನುವುದನ್ನೇ ಒಂದು ಸಂಭ್ರಮವನ್ನಾಗಿಸಿ ಆಚರಿಸಿಕೊಳ್ಳುವ ವೈಚಾರಿಕ ಹಿಂದುಗಳು ನಮ್ಮ ನಡುವೆಯೇ ಇದ್ದಾರೆ. ಅವರನ್ನು ಯಾವ ಕೋಮಿಗೆ ಸೇರಿಸುತ್ತಿರಿ?

ಯಾವ ಧರ್ಮದಲ್ಲಿ ತನಗೆ ನೆಮ್ಮದಿ ಸಿಗುತ್ತದೆ; ಯಾವ ಆಹಾರವನ್ನು ತಿಂದರೆ ತನಗೆ ಹಿತ ಅನ್ನಿಸುತ್ತದೆ ಎಂಬುದು ವ್ಯಕ್ತಿಯ ವೆಯ್ಯಕ್ತಿಕ ಆಯ್ಕೆ. ಅದು ವೆಯ್ಯಕ್ತಿಕ ಮಟ್ಟದಲ್ಲೇ ಇದ್ದರೆ ಅದರಿಂದ ಯಾರಿಗೂ ಹಾನಿಯಿಲ್ಲ. ಅದು ಬಹಿರಂಗಗೊಂಡು ಸಾರ್ವತ್ರಿಕಗೊಂಡಾಗ ಘರ್ಷಣೆಗಳುಂಟಾಗುತ್ತವೆ. ಸಾಮಾಜಿಕ ನೆಮ್ಮದಿ ಕದಡುತ್ತದೆ.

Saturday, September 20, 2008

ಬರೆಯಬಾರದೆಂದಿದ್ದರೂ....ಬರೆದೆ

ನನ್ನ ಬ್ಲಾಗ್ ಬರಹಕ್ಕೆ ಪ್ರತಿಕ್ರಿಯಿಸುತ್ತ ರಾಮರವರು ’ಬಜರಂಗಿಗಳ ಪುಂಡಾಟದ ಬಗ್ಗೆ ಬರೆಯಿರಿ’ ಎಂದಿದ್ದರು. ಆ ಪುಂಡುಪೋಕರಿಗಳ ಪಡೆಯನ್ನು ನಿಯಂತ್ರಿಸಬೇಕಾದ ಸರಕಾರವೇ ತೆರೆಮರೆಯಲ್ಲಿ ಅದನ್ನು ಮುನ್ನಡೆಸುತ್ತಿರುವಾಗ ನಾವೇನು ಮಾಡಲು ಸಾಧ್ಯ? ಎಂದು ಅಸಹಾಯಕತೆಯಿಂದ ಮನಸ್ಸು ಕಂದು ಹೊಗಿತ್ತು. ಆದರೆ ಇಂದು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಾಪಸಿಂಹ ಎಂಬ ಪತ್ರಕರ್ತರು ಬರೆದ ಅಂಕಣ ಬರಹವನ್ನು ಒದಿದಾಗ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.
ಅವರ ಉವಾಚ ಇದು; ’ಅದು ಬಜರಂಗದಳವಿರಬಹುದು ಅಥವಾ ಇನ್ನಾವುದೇ ಸಂಘಟನೆ ಇರಬಹುದು. ಧರ್ಮದ ಅವಹೇಳನ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ.....’
’ಅವರು ಹಂಚುವ ಅವಹೇಳನಕಾರಿ ಪುಸ್ತಕಗಳನ್ನು ಮೊದಲು ಪಡೆದುಕೊಂಡು, ಅನಂತರ ಮೈಗೆ ಬಿಸಿ ಮುಟ್ಟಿಸಿ. ಆಧಾರ ಸಮೇತ ಪೋಲಿಸರಿಗೊಪ್ಪಿಸಿ.’
ಹೀಗೆ ಅಪ್ಪಣೆ ಕೊಡಿಸುವ ಪತ್ರಕರ್ತನ ಮನಸ್ಥಿತಿಯನ್ನು ಬಿಡಿಸಿ ಹೇಳುವ ಅವಸ್ಯಕತೆಯಿಲ್ಲ.
ಕ್ರಿಯೆಗೊಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ. ಆದರೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸುವುದಕ್ಕೂ, ಸಂಘಟನೆಯೊಂದು ಪ್ರತಿಕ್ರಿಯಿಸುವುದಕ್ಕೂ, ಸರಕಾರವೊಂದು ಪ್ರತಿಕ್ರಿಯಿಸುವುದಕ್ಕೂ ವ್ಯತ್ಯಾಸವಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಚರ್ಚ್ ಗಳ ಮೇಲೆ ನಡೆದ ಸೀರಿಯಲ್ ದಾಳಿಗಳ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ವರ್ತಿಸಲಿಲ್ಲ. ಬಿಜೆಪಿ ಪಕ್ಷದ ವಕ್ತಾರರಂತೆ ವರ್ತಿಸಿದ್ದರು.
ಕುಮಾರಸ್ವಾಮಿಯಿಂದ ’ನಪುಂಸಕ’ ಎಂದು ಕರೆಯಿಸಿಕೊಂಡು, ಕೇಂದ್ರದಿಂದ ಒತ್ತಡ ಬಂದ ಮೇಲೆ ಈಗ ಕರ್ನಾಟಕದ ಮುಖ್ಯಮಂತ್ರಿಯಾಗಲು ಮನಸ್ಸು ಮಾಡಿದಂತಿದೆ. ಚರ್ಚ ಮೇಲೆ ದಾಳಿ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಬಂದನಕ್ಕೆ ವಾರಂಟ್ ಹೊರಡಿಸಲಾಗಿದೆ. ಚರ್ಚ್ ಗಳಿಗೆ ಬಿಗಿ ಬಂದೋಬಸ್ತು ನಿಡುವಂತೆ ಆದೇಶಿಸಲಾಗಿದೆ.
ಇವತ್ತು ಬೆಳಗಾವಿಯಲಿದ್ದ ಮುಖ್ಯಮಂತ್ರಿಗಳ ಮುಖ ಸುಟ್ಟ ಬದನೆಕಾಯಿಯಂತಿತ್ತು. ಸಿಡ ಸಿಡ ಎನ್ನುತ್ತಿದ್ದರು. ’ಬಿಜೆಪಿ ಶರವೇಗದಲ್ಲಿ ಬೆಳೆಯುತ್ತಿದೆ. ಅದನ್ನು ಸಹಿಸದ ಕಾಂಗ್ರೇಸ್ ಅಪಪ್ರಚಾರ ಮಾಡುತ್ತಿದೆ....ಕುಮಾರಸ್ವಾಮಿ ಸಂಯಮ ಕಳೆದುಕೊಂಡಿದ್ದಾರೆ...’ಎಂದೆಲ್ಲಾ ಹತಾಶರಾಗಿ ನುಡಿದರು.
ಅದು ನಿಜವಿದ್ದರೂ ಇರಬಹುದು. ಅದರೆ ಒಬ್ಬ ರಾಜಕೀಯ ಮುತ್ಸುದ್ಧಿಗೆ ಇತಿಹಾಸದ ಅರಿವಿರಬೇಕು. ಮುಖ್ಯಮಂತ್ರಿ ವಿರೇಂದ್ರಪಾಟೀಲರನ್ನು ಕೆಳಗಿಳಿಸಲು ಅವರದೇ ಪಕ್ಷದ ಜಾಫರ್ ಷರೀಫ್ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಕೊಮುಗಲಭೆಯನ್ನು ಹುಟ್ಟುಹಾಕಿದ್ದು ಈಗ ಇತಿಹಾಸ. ಹಾಗಾಗಿ ಎರಡು ಅಲಗಿನ ಮೇಲಿನ ನಡಿಗೆಯಂತಿರಬೇಕು ಅಧಿಕಾರದ ಗದ್ದುಗೆ.
ಗೃಹಮಂತ್ರಿ ವಿಎಸ್ ಆಚಾರ್ಯರಂತೂ ನಿಜವಾದ ಅರ್ಥದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ನಿಷ್ಣಾತರು!
ಗೇಳೆಯರೇ, ನಾನು ನನ್ನ ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೊರಟಿದ್ದೇನೆ. ಹಾಗಾಗಿ ಉಳಿದ ವಿಚಾರಗಳನ್ನು ಊರಿಂದ ಬಂದ ನಂತರ ಮಾತಡೋಣಾ ಆಗದೇ?

Wednesday, September 3, 2008

ಚೌತಿ ಎಂದರೆ.... ಬರಹ ಹಿಡಿಸುವುದು

ನಾನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯವಳು. ನಮ್ಮ ತಾಲೂಕಿನಲ್ಲಿ ಬ್ರಾಹ್ಮಣರ ಮನೆಯಲ್ಲಿ, ಅದು ಕೂಡ ಉಳ್ಳವರ ಮನೆಯಲ್ಲಿ ಮಾತ್ರಾ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಿದ್ದರು. ಅದು ಖಾಸಗಿ ಮಟ್ಟದಲ್ಲಿ ಮಾತ್ರ. ಹಾಗಾಗಿ ಗಣೇಶ ನನಗೇನೂ ಇಷ್ಟದೈವವಲ್ಲ.ಆದರೂ ಗಣಪ ನನ್ನ ಭಾವಕೋಶದಲ್ಲಿನ ಒಂದು ಪ್ರಮುಖ ದೇವರು. ಚೌತಿ ಅಂದ್ರೆ ಗಣೇಶ ಚತುರ್ಥಿಯಂದು ನನಗೆ ನೆನಪಾಗುವುದು ನನ್ನ ಬಾಲ್ಯ.ಶಾಲೆಯಲ್ಲಿ ಆನೇಕ ರಾಷ್ಟೀಯ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಸಾಂಸ್ಕ್ರತಿಕವಾಗಿ ಆಚರಿಸುವ ಹಬ್ಬವೆಂದರೆ ಬಹುಶಃ ಗಣೇಶ ಚತುರ್ಥಿ ಒಂದೇ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಶಾಲೆಗಳಲ್ಲಿ ಚೌತಿಯನ್ನು ಆಚರಿಸುವುದನ್ನು ನಾನು ನೋಡಿಲ್ಲ. ಕೇಳಿಲ್ಲ. ಚೌತಿ ನೆನಪಿರುವುದು ನನಗೆ ಎರಡು ಕಾರಣಗಳಿಗಾಗಿ. ಒಂದು; ಅಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಅಥವ ಬರಹ ಹಿಡಿಸುತ್ತಾರೆ. ಇನ್ನೊಂದು; ಮಕ್ಕಳಿಗೆಲ್ಲಾ ಅವಲಕ್ಕಿ ಪಂಚಕಜ್ಜಾಯವನ್ನು ಯಥೇಚ್ಚವಾಗಿ ಹಂಚುತ್ತಾರೆ. ಇದರಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳನಿಲ್ಲಿ ಹಂಚಿಕೊಳ್ಳುವುದು ನನ್ನ ಉದ್ದೆಶ. ದ.ಕ. ಸೆಖೆನಾಡದ್ದರಿಂದ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲ ಸಂಜೆ ಸ್ನಾನ ಮಾಡುವುದು ರೂಢಿ. ಆದರೆ ಚೌತಿಯಂದು ಶಾಲಾಮಕ್ಕಳೆಲ್ಲ ಮುಂಜಾನೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಶಾಲೆಗೆ ಬರುತ್ತಾರೆ. ಪ್ರತಿ ವಿದ್ಯಾರ್ಥಿಯೂ ಮೂರರಿಂದ ಐದು ಸೇರಿನಷ್ಟು ಅರಳನ್ನು ತರಬೇಕು. ಅನುಕೂಲವಿದ್ದವರು ಒಂದು ಬಾಳೆಗೋನೆಯನ್ನು ತರಬಹುದು. ಪಂಚಕಜ್ಜಾಯಕ್ಕೆ ಬೇಕಾದ ಬೆಲ್ಲವನ್ನು ಶಾಲಾವತಿಯಿಂದಲೇ ಖರೀದಿಸಲಾಗುತ್ತಿತ್ತು. ನಮ್ಮೂರಿನಲ್ಲಿ ಕಬ್ಬು ಬೆಳೆಯುವುದಿಲ್ಲ. ಹಾಗಾಗಿ ಪಂಚಕಜ್ಜಾಯಕ್ಕೆ ಅತ್ಯಗತ್ಯವಾಗಿ ಬೇಕಾದ ಕಬ್ಬು ಎಲ್ಲಿ ಸಿಗುತ್ತದೆಯೆಂದು ತಿಂಗಳುಗಳ ಮೊದಲೇ ಹೆಡ್ಮಾಸ್ತರರು ಹೊಂಚಿ ಇಟ್ಟಿರುತ್ತಿದ್ದರು. ಶಿಷ್ಟ ಭಾಷೆಯಲ್ಲಿ ವಿದ್ಯಾರಂಭವೆಂಬ ’ಬರಹ ಹಿಡಿಸುವ’ ಈ ವಿಶಿಷ್ಟ ಪದ್ಧತಿ ಈಗ ಮರೆಯಾಗಿದೆ. ಈಗ ಮಗು ಅಂಬೆಗಾಲಿಡಲು ಆರಂಭಿಸಿದಾಗಲೇ ಅದರ ಕೈಗೆ ಮೌಸ್ ಹಿಡಿಸುತ್ತಾರೆ. ಹಿಂದೆಲ್ಲಾ ಮಗುವನ್ನು ಶಾಲೆಗೆ ಸೇರಿಸಲು ಐದು ವರ್ಷ ಹತ್ತು ತಿಂಗಳು ತುಂಬಬೇಕಾಗಿತ್ತು. ಇದಕ್ಕೆ ಒಂದೆರಡು ವರ್ಷ ಮೊದಲು ಅದಕ್ಕೆ ಬರಹ ಹಿಡಿಸುತ್ತಿದ್ದರು. ಅದಕ್ಕಾಗಿ ಚೌತಿಯಂದು ಒಂದು ಸೇರು ಬೆಳ್ತಿಗೆ ಅಕ್ಕಿ-ಇಲ್ಲಿ ಒಂದು ವಿಷಯ ಹೇಳಬೇಕು, ಅಲ್ಲಿಯ ಜನಸಾಮನ್ಯರು ಊಟ ಮಾಡುವುದು ಕುಚ್ಚಲಕ್ಕಿ. ದೇವರು ಇದಕ್ಕಿಂತ ಸ್ವಲ್ಪ ಭಿನ್ನವಾಗಿರಬೇಕಲ್ಲ ಅದಕ್ಕಾಗಿ ದೇವರಿಗೆ ಬೆಳ್ತಿಗೆ ಅಕ್ಕಿ- ಇದರ ಜೊತೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಮಗುವಿನ ಜೊತೆ ಶಾಲೆಗೆ ಬರಬೇಕು. ಊರ ಜನರು, ಉಪಾಧ್ಯಾಯರುಗಳು, ವಿದ್ಯಾರ್ಥಿವೃಂದ ಎಲ್ಲರೂ ಸೇರಿ ವಿಜೃಂಭಣೆಯಿಂದ ಆದಿ ದೈವವನ್ನು ಪೂಜಿಸುತ್ತಾರೆ. ನಂತರ ಮುಖ್ಯೋಪಧ್ಯಾಯರು ’ಬರಹ ಹಿಡಿಸುವವರು ಯಾರಾದರು ಇದ್ದರೆ ಬನ್ನಿ.’ ಎಂದು ಹೇಳುತ್ತಾ ಗಣೇಶನ ಮುಂದೆ ಚಕ್ಕಲ ಮಕ್ಕಲ ಹಾಕಿ ಕುಳಿತುಕೊಳ್ಳುತ್ತಾರೆ. ಮಗುವಿನ ಹಿರಿಯರು ತಂದ ಅಕ್ಕಿಯನ್ನು ದೇವರ ಮುಂದೆ ಒಂದಿಂಚು ದಪ್ಪದಲ್ಲಿ ಹರಡುತ್ತಾರೆ. ಮಗುವನ್ನು ಎತ್ತಿ ತಮ್ಮ ಎಡತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಾರೆ. ಅದನ್ನು ಎಡಗೈಯಿಂದ ಬಳಸಿ ಮಗುವಿನ ತೋರುಬೆರಳನ್ನು ಅಕ್ಕಿಯ ಮೇಲಿಟ್ಟು ಓಂ ಎಂದು ಬರೆದು, ನಂತರ ಅದನ್ನು ಅಳಿಸಿ ಓಂ ಗಣೇಶಾಯ ನಮಃ ಎಂದು ಬರೆಯಿಸುತ್ತಾರೆ. ನಂತರ ಮಗು ತೊಡೆಯಿಂದಿಳಿದು ಗುರುಗಳಿಗೆ ನಮಸ್ಕರಿಸಿ ಗಣೇಶನಿಗೂ ವಂದಿಸಿ ಪ್ರಸಾಧ ಸ್ವೀಕರಿಸಲು ಸಾಲಿನಲ್ಲಿ ಅಪ್ಪನ ಜೋತೆ ಕುಳಿತುಕೊಳ್ಳುತ್ತದೆ. ನಮ್ಮ ಶಾಲೆಯ ಉಪಾಧ್ಯಾಯರುಗಳು ಜಾಣರು!. ಒಂದು ದೊಡ್ಡ ಅಂಡೆಯಲ್ಲಿ ಪಂಚಕಜ್ಜಾಯವನ್ನು ಯಾರಿಗೂ ಗೊತ್ತಾಗದಂತೆ ಎತ್ತಿಡುತ್ತಿದ್ದರು. ಮರುದಿನ ನಮಗೆಲ್ಲಾ ಅದನ್ನು ಹಂಚುತ್ತಿದ್ದರು. ಅದು ಎಷ್ಟಿರುತ್ತಿರುತ್ತೆಂದರೆ ನಮಗೆಲ್ಲ ಹೊಟ್ಟೆ ತುಂಬಿ ಮನೆಗೂ ಕೊಂಡೊಯ್ಯುತ್ತಿದ್ದೆವು. ನನಗೆ ಈಗಲೂ ನೆನಪಿದೆ; ನನಗೆ ಬರಹ ಹಿಡಿಸುವಾಗ ದೇವರಿಗೆ ದೊಡ್ಡ ತೆಂಗಿನಕಾಯಿಯನ್ನು ನಾನು ಇಟ್ಟಿದ್ದೆ. ಪೂಜೆ ಭಟ್ರಿಗೇಕೆ ದೊಡ್ಡ ಕಾಯಿ ಎಂದು ನಮ್ಮಪ್ಪ ಅದನ್ನು ಬದಲಾಯಿಸಿ ಸಣ್ಣ ಕಾಯಿ ಇಟ್ಟರು. ಪೂಜೆಯ ಅಕ್ಕಿ ಮತ್ತು ಕಾಯಿಯನ್ನು ಪೂಜೆ ಭಟ್ರೇ ಕೊಂಡೊಯ್ಯುತ್ತಿದ್ದರು. ಅದವರ ಹಕ್ಕು. ಅದೇ ಅವರ ಜೀವನಾಧಾರ. ನಾನು ಮತ್ತೆ ದೊಡ್ಡ ಕಾಯಿ ಇಡುತ್ತಿದ್ದೆ. ಭಟ್ರ ಕಾಯಿ ಅಂದ್ರೆ ಸಣ್ಣ ಕಾಯಿ ಇಡಲು ಬಿಡುತ್ತಿರಲಿಲ್ಲ. ಎಲ್ಲಾ ಮಕ್ಕಳು ಹೀಗೆ ಮಾಡುತ್ತಿದ್ದರಂತೆ. ನಾವು ಗೆಳೆಯರೆಲ್ಲ ಒಟ್ಟು ಸೇರಿ ಬಾಲ್ಯದ ಮೆಲುಕು ಹಾಕಿದಾಗ ಇಂತಹ ಹತ್ತಾರು ಘಟನೆಗಳು ನೆನಪಾಗುತ್ತಾವೆ. ಕೆಲವು ವಿಷಾಧಕ್ಕೆ, ಪಶ್ಚತ್ತಾಪಕ್ಕೆ ಕಾರಣವಾದರೆ ಇನ್ನು ಕೆಲವು ತುಟಿಯಂಚಿನಲ್ಲಿ ನಗು ಮೂಡಿಸುತ್ತವೆ.

Wednesday, August 27, 2008

ಬದುಕಬೇಕು....ಬದುಕಲೇಬೇಕು

ಬಹಳ ಹಿಂದೆ, ತಮ್ಮ ಅತ್ಯಂತ ಸಂಕಟದ ಘಳಿಗೆಯಲ್ಲಿ ಕೆ ರಾಮಯ್ಯ ಒಂದು ಮಾತು ಹೇಳಿದ್ದರು "ಅತ್ಮಹತ್ಯೆ’ಗೆ ನಾನು ಕೊಟ್ಟುಕೊಳ್ಳುವ ಕಾರಣಗಳು ’ಕಾರಣ’ಗಳೇ ಅಲ್ಲವೇನೋ ಎಂಬ ಗುಮಾನಿ ನನ್ನನ್ನು ಬದುಕುವಂತೆ ಮಾಡಿದೆ"ನನ್ನ ಅತ್ಯಂತ ದುಃಖದ, ಯಾತನೆಯ ಕ್ಷಣಗಳಲ್ಲಿ ಇದು ನನ್ನನ್ನು ಆತ್ಮವಿಮರ್ಶೆಗೆ ದೂಡುತ್ತದೆ. ನನ್ನನ್ನು ಮತ್ತೆ ಜೀವನ್ಮುಖಿಯಾಗುವಂತೆ ಪ್ರೇರ್‍ಎಪಿಸುತ್ತದೆ. ಮುಖ್ಯವಾಗಿ ನಾನು ಭೂತಕಾಲದೊಳಗೆ ಜಾರಿಬಿಡುತ್ತೇನೆ. ಗದ್ದೆ, ತೋಟ, ನದಿ, ಕಾಡುಗಳಲ್ಲಿ ಅಲೆದಾಡಿ ಅರಬ್ಬಿ ಸಮುದ್ರದ ನದಿಗುಂಟ ಹೆಜ್ಜೆ ಹಾಕುತ್ತೇನೆ. ಸೋಮೇಶ್ವರದ ರುದ್ರಪಾದೆಯ ಮೇಲೆ ಗಲ್ಲಕ್ಕೆ ಕೈಯೂರಿ ಕುಳಿತು ಅನಂತ ನೀಲಿ ಕಡಲನ್ನು ದಿಟ್ಟಿಸುತ್ತೇನೆ. ಬಂಡೆಗೆ ಅಪ್ಪಳಿಸುವ ದಡೂತಿ ತೆರೆಗಳು ತುಂತುರು ಹನಿಗಳಾಗಿ ಮುಖಕ್ಕೆ ಮುತ್ತಿಕ್ಕುತ್ತವೆ. ಹಾಗೆಯೇ ಕಣ್ಮುಚ್ಚಿ ಕಡಲ ಭೊರ್ಗೆರೆತಕ್ಕೆ ಕಿವಿಯಾಗುತ್ತೇನೆ. ಅದರ ಪಂಥಾಹ್ವಾನ ನನ್ನೊಳಗಿನ ಹೋರಾಟದ ಕೆಚ್ಚನ್ನು ಕೆರಳಿಸುತ್ತದೆ. ಕಣ್ತೆರೆದರೆ ನಿಜವಾಗಿಯೂ ನನ್ನಲೆನೋ ತುಂಬಿಕೊಂಡಂತೆ ಭಾಸವಾಗುತ್ತದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಹುರುಪು ಕಾಣಿಸಿಕೊಳ್ಳುತ್ತದೆ. ನಿಜಕ್ಕೂ ಬದುಕೆಷ್ಟು ಸರಳ ಮತ್ತು ಸುಂದರ! ಆದರೂ ಆಳದಲ್ಲೊಂದು ಶೂನ್ಯ ಇದ್ದೇ ಇದೆ. ಬಹಳ ಭಾರಿ ನನಗೆ ಅನ್ನಿಸುವುದಿದೆ; ಎಲ್ಲರಿಗೂ ಅವರದೇ ಆದ ಗೆಳೆಯರ ಬಳಗವಿದೆ. ಆತ್ಮೀಯ ವರ್ತುಲವಿದೆ. ನನಗೇಕೆ ಆ ಭಾಗ್ಯವಿಲ್ಲ?ನಾನು ಅಂತರ್ಜಾತೀಯ ಮದುವೆ ಮಾಡಿಕೊಂಡಿದ್ದೇನೆ. ಗಂಡನ ಮನೆಯವರಿದ್ದಾರೆ ಕಷ್ಟಸುಖಕ್ಕೆ; ಆದರೆ ಆಪ್ತರಲ್ಲ. ನನ್ನ ತವರಿದೆ; ಆದರೆ ಮನ ಬಿಚ್ಚಿ ಎಲ್ಲವನ್ನೂ ಹೇಳಿಕೊಳ್ಳಲಾರೆ. ಯಾಕೆಂದರೆ ಇದು ನಾನು ಆಯ್ಕೆ ಮಾಡಿಕೊಂಡ ಬದುಕು. ಇದರ ಸೋಲು ಗೆಲುವುಗಳೆರಡೂ ನನ್ನದೇ. ಹಾಗಾಗಿ ಗೆಳೆತನಕ್ಕಾಗಿ ನಾನು ಹಪಹಪಿಸುತ್ತೇನೆ. ಈ ಹಪಹಪಿಕೆ ಎಲ್ಲರಲ್ಲೂ ಇರುತ್ತದೆ. ಆದರೂ ಯಾರಿಗೂ ಯಾರೂ ಸಿಗುವುದಿಲ್ಲ. ಯಾಕೆ ಹೀಗೆ? ಯಾವ ತರಂಗಾಂತರದಲ್ಲಿ ಟ್ಯೂನ್ ಮಾಡಿದರೆ ನಮಗೆ ಬೇಕಾದ ಗೆಳೆಯರು ಸಿಗಬಹುದು?. ಗೊತ್ತಿಲ್ಲ. ಹಾಗಾಗಿ ಸದ್ಯಕ್ಕೆ ತರಂಗಾಂತರಗಳು ಬ್ಲಾಗ್ ಗಳಲ್ಲಿ ಹರಿದಾಡುತ್ತಿವೆ. ಮೊದಲೆಲ್ಲ ನನ್ನ ಗೆಳೆಯರು, ಅವನ ಗೆಳೆಯರು ಎಂದು ಒಂದಷ್ಟು ಬಳಗ ನಮ್ಮ ಸುತ್ತಲಿತ್ತು. ಆದರೆ ಅವರು ಯಾರೂ ’ನಮ್ಮ’ ಗೆಳೆಯರಾಗಲಿಲ್ಲ. ತಪ್ಪು ನಮ್ಮಲ್ಲಿಯೇ ಇತ್ತು. ನಮ್ಮ ನಮ್ಮ ಪರಿಧಿಯೊಳಗೆ ಇದ್ದುಕೊಂಡೇ ವ್ಯವಹರಿಸಿದೆವು. ಇಲ್ಲೊಂದು ಸೂಕ್ಷವನ್ನು ಗಮನಿಸಬೇಕು; ಗಂಡನ ಗೆಳೆಯರು ಎಂದಿಗೂ ಪತ್ನಿಗೆ ಹತ್ತಿರದವರಾಗುವುದಿಲ್ಲ. ಒಂದುವೇಳೆ ಹತ್ತಿರದವರಾದರೆ ಗಂಡನ ’ಅಹಂ’ಗೆ ಪೆಟ್ಟು ಬೀಳುತ್ತದೆ. ಅವನಲ್ಲಿ ಸಂಶಯ, ಅಸಹನೆ ಹುಟ್ಟಿಕೊಳ್ಳುತ್ತದೆ. ದಾಂಪತ್ಯ ಬಿರುಕಿಗೆ ಇದುವೇ ಬೀಜವಾಗುತ್ತದೆ. ಇನ್ನು ಪತ್ನಿಯ ಗೆಳತಿಯರು ಅವನ ಭೌದ್ಧಿಕತೆಗೆ ಎಂದಿದ್ದರೂ ಕಡಿಮೆಯೇ ಎಂಬ ಭಾವನೆ ಗಂಡಂದಿರಲ್ಲಿದೆ. ಒಂಟಿಯಾಗಿಯೇ ಬದುಕುವುದು ನನಗೀಗ ರೂಢಿಯಾಗಿದೆ. ಅದು ನನ್ನ ಶಕ್ತಿ ಎಂಬುದು ನನಗೀಗ ಅರಿವಾಗಿದೆ. ಆ ಶಕ್ತಿ ಹೊರಚಿಮ್ಮುವುದಕ್ಕೂ ಒಂದು ಪ್ರೇರಣೆಯಿದೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ಸಂಪೂರ್ಣ ನೆಲ ಕಚ್ಚಿ ಹೋದೆ, ಉಸಿರಾಡುವುದೂ ಕಷ್ಟವಾಗುತ್ತಿದೆ ’ಸತ್ತುಹೋಗೋಣ’ ಎನಿಸಿದಾಗ ಕೆ. ರಾಮಯ್ಯರ ಮಾತುಗಳು ನೆನಪಾಗುತ್ತವೆ. ಮೈ ಕೊಡವಿ ಹೊಸ ಸವಾಲುಗಳನ್ನು ಎದುರಿಸಲು ಮನಸ್ಸು ಸಜ್ಜಾಗುತ್ತದೆ. ಒಂದು ದಾರಿ ಮುಚ್ಚಿದಾಗ ಹತ್ತು ದಾರಿಗಳು ತೆರೆದುಕೊಳ್ಳುತ್ತವೆ. ಒಂದನ್ನು ಆಯ್ಕೆ ಮಾಡಿಕೊಂಡು ನುಗ್ಗಿಬಿಡಬೇಕು; ದುಮ್ಮಿಕ್ಕಿ ಬಿಡಬೇಕು. ಸೋಲಾದರೂ ನಮ್ಮದೇ. ಗೆಲುವಾದರೂ ನಮ್ಮದೇ. ಸೋಲಿಗೆ ಬೇರೆಯವರತ್ತ ಬೊಟ್ಟು ತೋರಿಸಬಾರದು. ಅದು ನಮ್ಮ ಪ್ರಯತ್ನದಲ್ಲಿನ ವೈಪಲ್ಯ ಎಂದು ಭಾವಿಸಬೇಕು. ಗೆಲುವನ್ನು ಹೆಮ್ಮೆಯಿಂದ ಸ್ವೀಕರಿಸಬೇಕು. ಅದು ನಮ್ಮ ಸಾಧನೆ. ಒಮ್ಮೆ ಗೆಲುವಿನ ರುಚಿ ಅನುಭವಿಸಿ. ಅದು ನಿಮ್ಮ ಹಿಂದಿನ ಹತ್ತಾರು ಸೋಲುಗಳನ್ನು ಮರೆಸಿಬಿಡುತ್ತದೆ. ಆತ್ಮವಿಸ್ವಾಸವನ್ನು ಹೆಚ್ಚಿಸುತ್ತದೆ. ರಿಸ್ಕ್ ಗಳನ್ನು ತೆಗೆದುಕೊಳ್ಳುವಂತೆ ಹುರಿದುಂಬಿಸುತ್ತದೆ. ಅಪಾಯವನ್ನು ಎದುರಿಸುವುದರಲ್ಲೇ ಜೀವಚೈತನ್ಯ ಆಡಗಿದೆ. ಅದು ನಿಸರ್ಗಕ್ಕೂ ಪ್ರಿಯ. ಬರಹಕ್ಕೆ ಉಪದೇಶದ ಛಾಯೆ ಬಂದುಬಿಟ್ಟಿತೇ?. ಇಲ್ಲ ಗೆಳೆಯಾ, ಇದು ನನ್ನ ಅನುಭವ. ನನಗೆ ಅನ್ನಿಸಿದ್ದು ನಿಮಗೂ ಅನ್ನಿಸಬಹುದಲ್ಲವೇ? ಅನ್ನಿಸಬೇಕು; ಅದು ಸುರಗಿಗೆ ಇಷ್ಟ.

Saturday, August 9, 2008

ಬೇಡದ ತಾಯ್ತನ... ಬೇಡ

ಅಂಗವೈಕಲ್ಯದಿಂದ ಜನಿಸಲಿರುವ ಮಗು ತನಗೆ ಬೇಡ ಎಂಬ ಕಾರಣ ನೀಡಿ, ವೈದ್ಯಕೀಯ ಪುರಾವೆಗಳನ್ನು ಒದಗಿಸಿ, ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಲೇರಿದ ನಿಖಿತಾ ಮತ್ತು ಆಕೆಯ ಗಂಡ ಹರ್ಷಮೆಹತಾರ ಕೋರಿಕೆಯನ್ನು ಮುಂಬೈ ಹೈಕೋರ್ಟ್ ಆಗಸ್ಟ್ ೪ರ ಸೋಮವಾರ ತಳ್ಳಿ ಹಾಕಿದೆ।ನ್ಯಾಯಮೂರ್ತಿಗಳಾದ ಅರ್ ಎಮ್ ಎಸ್ ಖಾಂಡೆಪರ್ಕರ್ ಮತ್ತು ಅಮ್ಜದ್ ಸಯಿದ್ ರನ್ನೊಳಗೊಂಡ ವಿಭಾಗಿಯ ಪೀಠ ಈ ತೀರ್ಪು ನೀಡಿದೆ।

 ೧೯೭೧ರಲ್ಲಿ ಜಾರಿಗೆ ಬಂದಿದ್ದ ಮೆಡಿಕಲ್ ಟರ್ಮಿನೇಶನ್ ಅಫ್ ಪ್ರೆಗ್ನೆನ್ಸಿ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನ್ ತೀರ್ಪಿಗೆ ತಳಹದಿಯಾಗಿತ್ತು। ೧೯೭೧ರ ಕಾನೂನಿನ ಪ್ರಕಾರ ಗರ್ಭ ಧರಿಸಿದ ೨೦ ವಾರಗಳ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ಆದರೆ ವಿಶೇಷ ಪರಿಸ್ಥಿತಿಯಲ್ಲಿ ೨೦ವಾರಗಳ ನಂತರವೂ ಗರ್ಭಪಾತ ಮಾಡಿಸಿಕೊಳ್ಳಲು ಈ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನಿನಲ್ಲಿ ಅವಕಾಶವಿದೆ. ಸೆಕ್ಷನ್ ೩ರಲ್ಲಿ ಮಗು ಅಂಗ ವೈಕಲ್ಯದಿಂದ ಹುಟ್ಟುವ ಸಂದರ್ಭವಿದ್ದರೆ, ಆ ಬಗ್ಗೆ ವೈಧ್ಯಕೀಯ ಪುರಾವೆಯಿದ್ದರೆ ಗರ್ಭಪಾತ ಮಾಡಿಸಬಹುದು. ಹಾಗೆಯೇ ಸೆಕ್ಷನ್ ೫ರ ಪ್ರಕಾರ ಬ್ರೂಣದ ಬೆಳವಣಿಗೆಯ ವೇಳೆ ಅಥವಾ ಹೆರಿಗೆಯ ಸಂದರ್ಭದಲ್ಲಿ ತಾಯಿ ಜೀವಕ್ಕೆ ಅಪಾಯವಿದ್ದು, ಅದಕ್ಕೆ ವೈಧ್ಯಕೀಯ ಪುರಾವೆಗಳಿದ್ದರೆ ಗರ್ಭಪಾತಕ್ಕೆ ಅನುಮತಿ ಇದೆ.
ನಿಖಿತಾ ೨೬ ವಾರಗಳ ಗರ್ಭವತಿ.ಆಕೆಗೆ ಎಮ್ ಟಿ ಪಿ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನ್ ಗಳು ಅನ್ವಯವಾಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಹಾಗೆ ಹೇಳುವ ಮೊದಲು ಕೋರ್ಟ್, ಮುಂಬೈನ ಜೆ.ಜೆ ಹಾಸ್ಪಿಟಲ್ ನ ಪರಿಣಿತ ವೈದ್ಯ ತಂಡವೊಂದರಿಂದ ಬ್ರೂಣದ ಪರೀಕ್ಷೆ ನಡೆಸಿ ರಿಪೋರ್ಟ್ ತರಿಸಿಕೊಂಡಿತು. ಅದರಲ್ಲಿ ಮಗುವಿಗೆ ಹೃದಯ ತೊಂದರೆ ಇರುವುದು ನಿಜ,ಆದರೆ ಅಂಗವಿಕಲತೆಯ ಚಾನ್ಸ್ ಕಡಿಮೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದೆ. ಆದರೆ ಅಂಗವೈಕಲ್ಯ ಖಂಡಿತಾ ಉಂಟಾಗುತ್ತದೆ ಎಂದು ನಿಖಿತಾನ ಡಾಕ್ಟರ್ ನಿಖಿಲ್ ದಾತಾರ್ ಪುರಾವೆ ಒದಗಿಸಿದ್ದರು.
 ಸೆಕ್ಷನ್೫ರ ಪ್ರಕಾರ ಗರ್ಭ ಮುಂದುವರಿಯುವುದರಿಂದ ತಾಯಿ ಜೀವಕ್ಕೆ ಅಪಾಯವಿಲ್ಲ. ಹಾಗಾಗಿ ಗರ್ಭಪಾತಕ್ಕೆ ಅವಕಾಶವಿಲ್ಲ. ಒಂದು ವೇಳೆ ಅನುಮತಿ ಕೊಟ್ಟರೆ ಅದು ದಯಾಮರಣದ ರೂಪ ಪಡೆಯುತ್ತದೆ. ದಯಾಮರಣಕ್ಕೆ ನಮ್ಮ ದೇಶದಲ್ಲಿ ಅನುಮತಿಯಿಲ್ಲ.ಇತಿಹಾಸ ಸೃಷ್ಠಿಸಬಹುದಾಗಿದ್ದ ಈ ತೀರ್ಪಿನ ಬಗ್ಗೆ ಜನರಲ್ಲಿ ಮುಖ್ಯವಾಗಿ ಮಧ್ಯಮವರ್ಗದ ಮಹಿಳೆಯರಲ್ಲಿ ಕುತೂಹಲವಿತ್ತು. ತನ್ನ ಹಾಗೆ ಸಂದಿಗ್ಧ ಸ್ಥಿತಿಯಲ್ಲಿರುವ ಅನೇಕ ಮಹಿಳೆಯರಿಗೆ ಸಹಾಯವಾಗಬಹುದೆಂಬ ಉದ್ಧೇಶದಿಂದ ನಿಖಿತಾ, ೩೭ ವರ್ಷದ ಹಿಂದಿನ ಎಮ್.ಟಿ.ಪಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ನ್ಯಾಯಾಲಯವನ್ನು ಕೋರಿಕೊಂಡಿದ್ದಳು. ಆದರೆ ಕಾನೂನಿಗೆ ತಿದ್ದುಪಡಿ ತರಬೇಕಾದ್ದು ಸಂಸತ್ತು ಎಂದು ನ್ಯಾಯಾಲಯ ನೆನಪಿಸಿದೆ. ನಿಖಿತಾಳ ಒಂದು ಕೇಸಿನ ಹಿನ್ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿ ತರುವ ಆಲೋಚನೆಯಿಲ್ಲ, ಎಂದು ಕೇಂದ್ರ ಆರೋಗ್ಯ ಸಚಿವರಾದ ಅನ್ಬುಮಣಿ ರಾಮದಾಸ್ ಹೇಳಿದ್ದಾರ್‍ಎ. ಆದರೂ ಆ ಬಗ್ಗೆ ಎಲ್ಲಾ ಆಯಾಮಗಳಿಂದಲೂ ವಿಸ್ತ್ರತ ಚರ್ಚೆಯಾಗಲಿ ಎಂದಿದ್ದಾರೆ. ಕೋರ್ಟ್ ಮಾನವೀಯವಾಗಿ ವರ್ತಿಸಿತು. ತನ್ನ ಕೆಲಸವನ್ನು ಅತ್ಯಂತ ಸಮರ್ಪಕವಾಗಿ, ಜವಾಬ್ದಾರಿಯಿಂದ ನಿರ್ವಹಿಸಿತು.

 ಈಗ ಕೋರ್ಟಿನಾಚೆಗಿನ ಸಂಗತಿಗಳನ್ನು ನಾವು ಗಮನಿಸಬೇಕಾಗಿದೆ. ಒಬ್ಬ ತಾಯಿಯ ತಳಮಳವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ತೀರ್ಪು ಹೊರಬಿದ್ದೊಡನೆ ಸುದ್ದಿವಾಹಿನಿಗಳು ಇದನ್ನು ಬಿತ್ತರಿಸಿದವು. ಜನರ ಸಿಂಪತಿ ಪೂರ್ತಿಯಾಗಿ ನಿಖಿತಾ ಕಡೆಗಿತ್ತು. ಗರ್ಭವನ್ನು ಉಳಿಸಿಕೊಳ್ಳುವುದು, ಬಿಡುವುದು ದಂಪತಿಗಳಿಗೆ ಬಿಟ್ಟ ವಿಚಾರವೆಂದು ಬಹುತೇಕ ಎಲ್ಲರೂ ಅಭಿಪ್ರಾಯ ಪಟ್ಟರು. ಕೊಚ್ಚಿಯಿಂದ ಅನುರಾಧ ಎಂಬ ಮಹಿಳೆ ಪೋನ್ ಮಾಡಿ, ತಾನು ೭ನೇ ತಿಂಗಳಿನಲ್ಲಿ ಅಂದರೆ ೨೮ನೇ ವಾರದಲ್ಲಿ ಗರ್ಭಪಾತ ಮಾಡಿಸಿಕೊಂಡು ಈಗ ಅರೋಗ್ಯವಂತ ಮಗುವನ್ನು ಪಡೆದಿರುವುದಾಗಿ ಹೇಳಿಕೊಂಡಳು. ಸುದ್ದಿ ಚಾನಲ್ಲೊಂದು ಎಸ್ಸೆಮ್ಮೆಸ್ ಪೋಲ್ ನಡೆಸಿತು; ಶೇ೯೧ರಷ್ಟು ವಿಕ್ಷಕರು ನಿಖಿತಾ ಅಬಾರ್ಷನ್ ಮಾಡಿಸಿಕೊಳ್ಳಲಿ ಎಂದು ಅಭಿಪ್ರಾಯ ಪಟ್ಟರು. ಆದರೆ ಇಂಡಿಯನ್ ಮೆಡಿಕಲ್ ಅಸೋಷಿಯೆಷನ್ ಅಧ್ಯಕ್ಷರಾದ ಡಾ. ಅಜಯಕುಮಾರ್ ’ತಾಯಿಯೆಂದರೆ ತ್ಯಾಗದ ಸಿಂಬಲ್. ಹೀಗಾದರೆ ಒಬ್ಬ ತಾಯಿಗೂ ಇತರರಿಗೂ ಏನು ವ್ಯತ್ಯಾಸ ಬಂತು? ತಾಯಿ ಎಂದಿಗೂ ತಾಯಿಯೇ’ ಎಂದು ಟಿಪಿಕಲ್ ಗಂಡಸಿನಂತೆ ನುಡಿದರು.

 ನಿಜ, ತಾಯಿ ಎಂದೆಂದಿಗೂ ’ತಾಯಿ’ಯೇ. ಆಕಸ್ಮಿಕವಾಗಿ ತನಗೊಂದು ಅಂಗವೈಕಲ್ಯವುಳ್ಳ ಮಗು ಜನಿಸಿಬಿಟ್ಟರೆ ಅದನ್ನವಳು ನಿರಾಕರಿಸುವುದಿಲ್ಲ. ಅದನ್ನವಳು ವಿಷೇಶ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ತನ್ನ ಜೀವ ತೇದಾದರೂ ಆ ಮಗು ಸ್ವಾವಲಂಬಿಯಾಗಿ ಮಾಡಲು ಶ್ರಮಪಡುತ್ತಾಳೆ. ಆದರೆ ತನಗೆ ಹುಟ್ಟಲಿರುವ ಮಗು ಅಂಗವೈಕಲ್ಯದಿಂದ ಕೂಡಿದೆ, ಎಂದು ಗೊತ್ತಾದಗಲೂ ಅವಳ್ಯಾಕೆ ಮಗುವನ್ನು ಉಳಿಸಿಕೊಳ್ಳಬೇಕು? ಮಗುವನ್ನು ಉಳಿಸಿಕೊಳ್ಳಿ ಎಂದು ಬೇರೆಯವರಿಗೆ ಹೇಳುವುದು ಸುಲಭ. ಅದರೆ ವಾಸ್ತವವನ್ನು ಎದುರಿಸುವುದು ಕಷ್ಟ. ಆಶಾವಾದಿಯಾಗಿರಬೇಕು, ನಿಜ. ಆದರೆ ನಾಳೆ ಒಳ್ಳೆಯಾದಾಗಲೂ ಬಹುದು ಎಂದು ಇವತ್ತು ರಿಸ್ಕ್ ತೆಗೆದುಕೊಳ್ಳುವುದು ಬುದ್ಧಿವಂತರ ಲಕ್ಷಣವಲ್ಲ. ತಾಯಿಯಾಗುವುದಕ್ಕೆ ಪೂರ್ವ ಸಿದ್ಧತೆ ಬೇಕು. ಅಧುನಿಕ ಮಹಿಳೆ ಆ ಬಗ್ಗೆ ಮುತುವರ್ಜಿ ವಹಿಸುತ್ತಾಳೆ. ಆಕೆಗೆ ತನ್ನ ತಾಯ್ತನವನ್ನು ಸಾರ್ಥಕಪಡಿಸಿಕೊಳ್ಳುವ ಕನಸಿದೆ. ಅರೋಗ್ಯವಂತ ಮಗುವನ್ನು ಪಡೆಯುವ ಬಯಕೆ ಇದೆ. ಇನ್ನೊಂದು ಚಾನ್ಸ್ ನೋಡಿಬಿಡೋಣ ಎಂದುಕೊಳ್ಳಲು ಹಿಂದಿನಂತೆ ಎರಡ್ಮೂರು ಹೆರಲು ಇಂದಿನ ಮಹಿಳೆ ಸಿದ್ದಳಿಲ್ಲ.

ಈಗ ವೈದಕಿಯ ಸವಲತ್ತುಗಳು ಹೆಚ್ಚಾಗಿವೆ. ಹಾಗಾಗಿ ಆರ್ಥಿಕವಾಗಿ ಸಬಲರಾಗಿದ್ದರೆ ಬ್ರೂಣದಲ್ಲಿನ ಕೆಲವು ನ್ಯೂನತೆಗಳನ್ನು ಗರ್ಬದಲ್ಲಿರುವಗಲೇ ಸರಿಪಡಿಸಿಕೊಳ್ಳಬಹುದು. ಸರಿಪಡಿಸಲಾಗದ ತೊಂದರೆಗಳಾದರೆ ಎಮ್.ಟಿ.ಪಿ ಮಾಡಿಸಿಕೊಳ್ಳುವುದು ತಪ್ಪೇನೂ ಅಲ್ಲ. ಬ್ರಿಟನಿನಲ್ಲಿ ಇದಕ್ಕೆ ೯ ತಿಂಗಳು ತುಂಬುವ ತನಕವೂ ಅವಕಾಶ್ ಇದೆ. ಚೀನಾದಲ್ಲಿ ೨೮ ವಾರಗಳ ತನಕ ಜಪಾನಿನಲ್ಲಿ ೨೪ ವಾರಗಳ ತನಕ ಎಮ್.ಟಿ.ಪಿ ಮಾಡಿಸಿಕೊಳ್ಳಲು ಅವಕಾಶ ಇದೆ. ಪ್ರತಿಯೊಂದು ವಿಷಯಕ್ಕೂ ಸಂಬಂಧಪಟ್ಟಂತೆ ಸಮಾಜದಲ್ಲೊಂದು ಒಳ ಪ್ರವಾಹ[ಅಂಡರ್ ಕರೆಂಟ್] ಇರುತ್ತದೆ. ಅದು ಬಹಳ ಸ್ಟ್ರಾಂಗಾದ ಸಮಾಜದ ವಿಲ್ ಪವರ್. ಅದು ಸಕಾರಾತ್ಮಕವಾಗಿರಬಹುದು ಇಲ್ಲವೇ ನಕಾರಾತ್ಮಕವಾಗಿರಬಹುದು. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಈ ಒಳಪ್ರವಾಹವೇ ಕಾನೂನು ಬಾಹಿರವಾಗಿ ಲಕ್ಷ ಲಕ್ಷ ಹೆಣ್ಣು ಬ್ರೂಣಗಳನ್ನು ಕೊಲೆ ಮಾಡಿದೆ. ಕೋಮು ಗಲಭೆಗಳ ದಳ್ಳುರಿಯಲ್ಲೂ ಮಾನವೀಯತೆ ಮೆರೆದಿದೆ. ಚುನಾವಣೆಯಲ್ಲಿ ರಾಜಕೀಯ ಲೆಖ್ಖಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆ. ಆ ವಿಲ್ ಪವರ್ ಈಗ ನಿಖಿತಾ ಪರವಾಗಿದೆ.ನಿಖಿತಾ ವಯಸ್ಸು ಈಗ ೩೧. ಅವಳ ಮುಂದೆ ನಿಡಿದಾದ ಬದುಕಿದೆ.ಅಂಗವಿಕಲತೆಯುಳ್ಳ ಮಗುವನ್ನು ಹೆತ್ತು ಅದನ್ನು ಪೋಶಿಸುವುದರಲ್ಲೆ ಬದುಕು ಕಳೆದು ಹೋಗಬೇಕಾಗಿಲ್ಲ.
ನಿಜ, ಹುಟ್ಟಲಿರುವ ಮಗುವಿನ ಚಿಕಿತ್ಸಾವೆಚ್ಚವನ್ನು ಭರಿಸಲು ಆಸ್ಪತ್ರೆಗಳು, ಸೇವಾಸಂಸ್ಥೆಗಳು ಮುಂದೆ ಬಂದಿವೆ. ಇಲ್ಲಿ ಗಮನಿಸಬೇಕಾದ್ದು; ಸಮಾಜಕ್ಕೊಂದು ಪ್ರದರ್ಶಕ ಗುಣವಿದೆ. ಈ ವಿಶಿಷ್ಟ ಗುಣ ಗಂಡಿನಲ್ಲಿಯೂ ಇರುತ್ತದೆ. ಹಾಗಾಗಿ ಆತ ಕೋರ್ಟಿಗೆ ಬರಬಲ್ಲ. ಆಸ್ಪತ್ರೆಗೆ ಬರಬಲ್ಲ.ಹೆರಿಗೆ ಕೋಣೆವರೆಗೂ ಬರಬಲ್ಲ. ಆದರೆ ದೇಹದ ಭಾಗವಾಗಿ ಮಗುವನ್ನು ಪೋಷಿಸಲಾರ, ತಾಯಿಯಂತೆ ಭಾವಕೋಶದ ಭಾಗವಾಗಿಸಿಕೊಳ್ಳಲಾರ. ಹಾಗಾಗಿ ಮಗುವನ್ನು ಬೆಳೆಸುವಲ್ಲಿ ಆಕೆ ಏಕಾಂಗಿ.

ಸಮಾಜ ಗುರುತಿಸಿದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ನನ್ನ ಸುತ್ತಮುತ್ತಲಿರುವ ತಾಯಂದಿರನ್ನು ಗಮನಿಸಿದ್ದೇನೆ. ಮಗುವನ್ನು ಬೆಳೆಸುವಲ್ಲಿ ಆಕೆ ಏಕಾಂಗಿ. ಕೆಲವು ಸಂದರ್ಭಗಳಲ್ಲಿ ಆಕೆ ಭಾವನಾತ್ಮಕವಾಗಿ ಕುಸಿದು ಹೋಗುವುದನ್ನು ನಾನು ಕಂಡಿದ್ದೇನೆ. ಅದೇ ಮಹಿಳೆ ದೃಢತೆಯಿಂದ ತಲೆಯೆತ್ತಿ ಬೀಗಿ ನಡೆಯುವುದನ್ನು ಕೂಡ ಗಮನಿಸಿದ್ದೇನೆ. ಮನಸ್ಸು ಮಾಡಿದರೆ ಆಕೆಗೆ ಯಾವುದೂ ಅಸಾಧ್ಯವಲ್ಲ. ಆದರೆ ವೈದ್ಯಕೀಯ ಅನುಕೂಲತೆಗಳಿದ್ದಾಗ ಯಾಕೆ ಸಂಕಷ್ಟಕ್ಕೆ ಸಿಲುಕಬೇಕು ಎಂಬುದು ಪ್ರಶ್ನೆ. ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಬೆಳೆದ ಮಗ ಸತ್ತದ್ದನ್ನೂ, ದಾಂಪತ್ಯಕ್ಕೆ ಕಾಲಿಡುವಾಗಲೇ ವೈದವ್ಯ ಪ್ರಾಪ್ತಿಯಾದದ್ದನ್ನೂ, ಆಪ್ತರ ಅಗಲಿಕೆಯನ್ನೂ ಕಾಲ ಕ್ರಮೇಣ ವಿಸ್ಮ್ರತಿಗೆ ತಳ್ಳಿ ಬಿಡಬಹುದು. ಆದರೆ ಎದುರಿಗಿರುವ ಕರುಳಬಳ್ಳಿ ಯಾತನೆಪಡುವುದನ್ನು ನೋಡುತ್ತಾ ಬದುಕುವುದು ಘೋರ ಶಿಕ್ಷೆಯೇ ಸರಿ. ಈ ಜಗತ್ತಿಗೆ ಕಣ್ಣು ಬಿಟ್ಟ ಪ್ರತಿಯೊಂದು ಪ್ರಾಣಿ ಪಕ್ಷಿ, ಗಿಡ ಮರ ಎಲ್ಲದರ ಬಗ್ಗೆಯೂ ನಮಗೆ ಅಕ್ಕರೆ ಇದೆ. ಮತ್ತು ಅದು ನಮಗಾಗಿಯೇ ಇದೆ ಎಂಬ ಸ್ವಾರ್ಥವೂ ಇದೆ. ಆದರೆ ಅಮೂರ್ತವಾದುದರ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಕೂತುಹಲ ಇರುತ್ತದೆ. ಭ್ರೂಣವೊಂದು ಮಗುವಾಗಿ ಈ ಧರೆಗೆ ಬರುವುದು ಒಂದು ಸುಂದರ ಕಲ್ಪನೆ. ಅದು ಹಚ್ಚಿನ ಸಂದರ್ಭದಲ್ಲಿ ನಿಜವಾಗುತ್ತದೆ. ’ನಿಜ’ವಾಗುವ ಮೊದಲು ಅದೊಂದು ಕಲ್ಪನೆ ಅಷ್ಟೇ.

Saturday, August 2, 2008

ದಂತಗೋಪುರದಲ್ಲಿ ಸಾಹಿತ್ಯವೇ?

ಸಾಹಿತ್ಯದ ಉದ್ದೇಶವೇನು? ತನ್ನ ಹುಟ್ಟಿನಲ್ಲೇ ಅಂತರ್ಗತ ಮಾಡಿಕೊಂಡಿರುವ ಪ್ರಶ್ನೆ ಇದು.ಕಾಲಕ್ಕನುಗುಣವಾಗಿ ಇದಕ್ಕೆ ತಮಗೆ ಸರಿ ಕಂಡ ಉತ್ತರ ಕಂಡುಕೊಳ್ಳುತ್ತಲೇ ಇದ್ದಾರೆ.ಸಾಹಿತ್ಯ ಎನ್ನುವುದು ಯಾವಾಗಲೂ ಜನಸಾಮಾನ್ಯರ ಮಧ್ಯೆಯೇ ಹುಟ್ಟುತ್ತದೆ. ಮತ್ತು ಅದು ಅಲ್ಲಿಯೇ ಪ್ರಸರಣಗೊಳ್ಳುತ್ತದೆ. ಒಮ್ಮೊಮ್ಮೆ ಅದು, ಪಂಪ, ರನ್ನರಂತೆ ಪ್ರಭುಸಮ್ಮುಖದಲ್ಲಿ ಪ್ರಕಟಗೊಂಡರೂ ಅದರ ಗುಣವಿಶೇಶ ಕಾಂತ ಸಂಮಿತವೇ. ಈಗ ನನ್ನಲ್ಲಿ ಈ ಪ್ರಶ್ನೆ ಹುಟ್ಟಿಕೊಳ್ಳುದಕ್ಕೆ ಕಾರಣವಾದ ಘನ ಉದ್ಧೇಶ ಎನೆಂದರೆ, ಇತ್ತೇಚೆಗೆ ಪುಸ್ತಕ ಬಿಡುಗಡೆಗಳು ಪ್ರಭುಸಮ್ಮುಖವಾಗುತ್ತಿವೆ. ಲೇಖಕರು ಅಧಿಕಾರ ಗದ್ದುಗೆ ಹಿಡಿದವರ ಕೈಯಿಂದ ತಮ್ಮ ಪುಸ್ತಕ ಬಿಡುಗಡೆಗೊಳಿಸಲು ಹಾತೊರೆಯುತ್ತಾರೆ. ಇದರಿಂದ ಲೇಖಕರಿಗಾಗುವ ಲಾಭವೇನು? ಇವರೇನು ಆಸ್ಥಾನ ಸಾಹಿತಿಗಳೇ? ನಿನ್ನೆಯ ಉದಾಹರಣೆಯನ್ನೇ ನೋಡಿ; ನಿನ್ನೆ ಮುಖ್ಯಮಂತ್ರಿಗಳ ಗೃಹಕಛೇರಿ ’ಕೃಷ್ಣಾ’ದಲ್ಲಿ ಪತ್ರಕರ್ತರೊಬ್ಬರು ಬರೆದ ’ಬದಲಾದ ಭಾರತ’ಎಂಬ ಪುಸ್ತಕ ಬಿಡುಗಡೆಯಾಯ್ತು. ಬಿಡುಗಡೆ ಮಾಡಿದವರು ಮುಖ್ಯಮಂತ್ರಿ ಯೆಡಿಯೂರಪ್ಪನವರು. ಅತಿಥಿ, ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿ. ಇವರಿಬ್ಬರಿಗೆ ಸಾಹಿತ್ಯ ಅರ್ಥವಾಗುತ್ತದೆಯೇ? ಹೀಗೆ ಕನ್ನಡದ ಗಂಧಗಾಳಿ ತಿಳಿಯದ ರಾಜ್ಯಪಾಲರಿಂದ, ರಾಜಭವನದಲ್ಲಿಯೇ ಪುಸ್ತಕ ಬಿಡುಗಡೆ ಮಾಡಿಸುವ ಉದ್ಧಾಮ ಸಾಹಿತಿಗಳು ನಮ್ಮಲ್ಲಿದ್ದಾರೆ. ಕಲಾಕ್ಷೇತ್ರಕ್ಕೆ,ಎಡಿಎ ರಂಗಮಂದಿರಕ್ಕೆ,ಯವನಿಕಕ್ಕೆ ಹೋದಷ್ಟೇ ಸಲೀಸಾಗಿ ರಾಜಭವನಕ್ಕೆ, ಕೃಷ್ಣಾಕ್ಕೆ, ವಿಧಾನಸೌಧದ ಬಾಂಕ್ವಟ್ ಹಾಲ್ ಗೆ ಸಾಮಾನ್ಯ ಮನುಷ್ಯರು ಹೋಗಲು ಸಾಧ್ಯವೇ? ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಆಸ್ಥಾನ ಸಾಹಿತಿಗಳಿಗೆ ಮಾನ ಸನ್ಮಾನಗಳ ಮೇಲೆಯೇ ಕಣ್ಣು. ಇನ್ನು ಕೆಲವರಿರುತ್ತಾರೆ; ಅವರು ಒಂದಕ್ಷರ ಬರೆದವರಲ್ಲ. ಆದರೆ ಯಾರೋ ಮಹನೀಯರ ಬಗ್ಗೆ ಅಥವಾ ಅವರು ಬರೆದ ಗ್ರಂಥಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸುತ್ತಾರೆ. ನಂತರ ತಾವು ಸಂಪಾದಕರೆಂದು ಹೆಸರು ಹಾಕಿಸಿಕೊಂಡು ಪ್ರಕಟಿಸಿಬಿಡುತ್ತಾರೆ. ನಂತರ ಪ್ರಭುಗಳ ಕೈಯಲ್ಲಿ ಬಿಡುಗಡೆ ಮಾಡಿಸುತ್ತಾರೆ! ಕರ್ನಾಟಕದ ಲೈಬ್ರರಿಗಳನ್ನೊಮ್ಮೆ ಸುಮ್ಮನೆ ಹೊಕ್ಕು ಬನ್ನಿ. ರ್‍ಯಾಕ್ ಗಳಲ್ಲಿ ಸುಂದರವಾಗಿ ಜೋಡಿಸಿಟ್ಟ ಇಂತಹ ಪುಸ್ತಕಗಳೇ ಕಾಣಸಿಗುತ್ತದೆ. ಪುಸ್ತಕ ಪ್ರಕಾಶನ ಕೂಡ ಈಗ ಒಂದು ದಂದೆಯಾಗಿಬಿಟ್ಟಿಯಾಗಿದೆ. ಇಂತಹ ಅಸಂಖ್ಯ ಪುಸ್ತಕಗಳ ನಡುವೆ ಒಳ್ಳೆ ಪುಸ್ತಕ ಯಾವುದೆಂದು ಹುಡುಕುವುದೇ ಕಸ್ಟವಾಗಿಬಿಟ್ಟಿದೆ. ವಿಮರ್ಶೆ ನೋಡಿ ಪುಸ್ತಕ ಕೊಂಡರೆ ಸಿನೆಮಾ ವಿಮರ್ಶೆ ನೋಡಿ ಥಿಯೇಟರಿಗೆ ಹೋದಂತಾಗುತ್ತದೆ! ಲೇಖಕ ಹತ್ತಿರದವನಾಗಿದ್ದರೆ ವಿಮರ್ಶಕನಿಗೆ ಆ ಪುಸ್ತಕದಲ್ಲಿ ಅನೇಕ ಆಯಾಮಗಳು ಗೋಚರಿಸಿಬಿಡುತ್ತದೆ. ಸಿನೇಮಾ ಪತ್ರಕರ್ತನನ್ನು ’ಚೆನ್ನಾಗಿ’ ನೋಡಿಕೊಂಡರೆ ಸಿನೇಮಾ ಸೂಪರ್ ಆಗಿಬಿಡುತ್ತದೆ. ಇದು ಥಳುಕು ಬಳುಕಿನ ಪ್ರಪಂಚ. ಪ್ರದರ್ಶಕ ಗುಣ ಇದ್ದರೆ ಮಾತ್ರ ಮನ್ನಣೆ!

Thursday, July 17, 2008

ಪ್ರತ್ಯೇಕ ಕೃಷಿ ಬಜೇಟ್ ಬೇಕು

ರೈತರ ಆತ್ಮಹತ್ಯೆ ಸಮೂಹ ಸನ್ನಿಯ ರೂಪ ಪಡೆಯುತ್ತಲಿದೆ. ಹಿಂದೆಲ್ಲ ಮೊದಲ ಪುಟದಲ್ಲಿ ವರದಿಯಾಗುತ್ತಿದ್ದ, ಹೆಡ್ ಲೈನ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ರೈತರ ಅತ್ಮಹತ್ಯೆಗಳು ಈಗ ಒಳಪುಟಗಳತ್ತ ಸರಿಯುತ್ತಲಿವೆ. ಮುಂದೊಂದು ದಿನ ಪೇಜ್ ತ್ರಿಯಲ್ಲೂ ಬರಬಹುದು. ಅಂದರೆ ರೈತರ ಆತ್ಮಹತ್ಯೆ ಪ್ರಯತ್ನಗಳು ಸಾಮಾನ್ಯ ಘಟನೆಗಳಾಗುತ್ತಿವೆ. ಅದು ಜನತೆಯಲ್ಲಿ ಯಾವ ತಲ್ಲಣವನ್ನೂ ಉಂಟು ಮಾಡುತ್ತಿಲ್ಲ. ಅವರು ಸಂವೇದನಾಶೂನ್ಯರಾಗುತ್ತಿದ್ದಾರೆ.ಜೂನ್ ೧೯ರಂದು ನಮ್ಮ ಕೃಷಿ ಸಚಿವ ರವೀಂದ್ರನಾಥ ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರವನ್ನೇ ನೋಡಿ: ’ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’ಒಬ್ಬ ಜವಬ್ದಾರಿಯುತ ಜನಪ್ರತಿನಿಧಿ ನೀಡುವ ಉತ್ತರವೇ ಇದು? ನಿನ್ನೆ ಸತ್ತವ ರೈತನಲ್ಲ ಎಂದು ಅವರು ಹೇಗೆ ನಿರ್ಧರಿಸಿದರು? ಅವರ ಸುತ್ತಮುತ್ತಲು ಇರುವ ಅಧಿಕಾರವ್ರ್‍ಅಂದ ಅವರಿಗೆ ಈಮಾಹಿತಿಯನ್ನು ನೀಡಿರಬೇಕು ಆಧಿಕಾರಶಾಹಿ ಎಂದೂ ರ್‍ಐತಪರವಾಗಿರಲಾರದು. ಆದರೆ ಜನಪ್ರತಿನಿಧಿಯೊಬ್ಬ ರೈತಪರವಾಗಿರಲೇ ಬೇಕು. ನಿನ್ನೆ ಸತ್ತ ಆ ರೈತ, ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ಅಜ್ಜಪ್ಪ[೪೩]. ನಿಜ. ಆತ ಸರ್ಕಾರಿ ದಾಖಲೆಗಳ ಪ್ರಕಾರ ರೈತನಲ್ಲ. ಯಾಕೆಂದರೆ ಆತ ಬೇರೊಬ್ಬರ ಹೊಲವನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದ.. ಅಂದರೆ ಬಗರ್ ಹುಕುಂ ಸಾಗುವಳಿ ಮಾಡುವವರು, ಗೇಣಿದಾರರು, ಕುಮ್ಕಿ, ಜಮ್ಮಬಾಣೆಗಳಲ್ಲಿ ವ್ಯವಸಾಯ ಮಾಡುವವರು ರೈತರಲ್ಲವೇ? ತಮ್ಮದೇ ಜಿಲ್ಲೆಯ, ತಮ್ಮ ಪಕ್ಕದ ಕ್ಷೇತ್ರದ ರೈತನೊಬ್ಬನ ಬಗ್ಗೆ ಕೃಷಿ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಹುದೇ? ಇವರು ಹೇಳಿಕೆ ನೀಡಿದ ಒಂದು ವಾರದ ಹಿಂದೆಯಷ್ಟೇ ಹಾವೇರಿ ಗೋಲಿಬಾರ್ ನಡೆದಿದೆ. ತನ್ನ ಖಾತೆಯ ಬಗ್ಗೆ ಬದ್ದತೆ ಇರುವ ಮಂತ್ರಿಯೊಬ್ಬರಿಗೆ ಮಾಹಿತಿಯನ್ನು ಪಡೆದುಕೊಳ್ಳಲು, ಪರಿಸ್ಥಿತಿಯನ್ನು ಅವಲೋಕಿಸಲು ಇಷ್ಟು ಕಾಲವಕಾಶ ಸಾಕು.ಇಂತಹದ್ದೊಂದು ಸಂದಿಗ್ಧಸ್ಥಿತಿಯಲ್ಲೇ ನಮಗೆ ಅರಿವಾಗುವುದು: ಕೃಷಿಕ್ಷೇತ್ರದ ಸಮಸ್ಯೆಗಳ ಆಳ-ಅರಿವು ಹೊಂದಿರುವ ವ್ಯಕ್ತಿಯೇ ಕೃಷಿ ಮಂತ್ರಿಯಾಗಿರಬೇಕೆಂದು. ಆದರೆ ನಮ್ಮ ದೇಶದ ಇತಿಹಾಸದಲ್ಲೇ ಶರದ್ ಪವಾರ್ ಒಬ್ಬರನ್ನು ಬಿಟ್ಟರೆ ಕೃಷಿ ಖಾತೆ ತನಗೇ ಬೇಕೆಂದು ಕೇಳಿ ಪಡೆದುಕೊಂಡ ಉದಾಹರಣೆ ಇಲ್ಲ. ಯಾಕೆಂದರೆ ಅದರಲ್ಲಿ ಯಾವುದೇ ಪಾಯಿದೆ ಇಲ್ಲ. ರೈತರ ಸಮಸ್ಯೆಗಳನ್ನೇ ಓಟು ಬ್ಯಾಂಕ್ ಗಳನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಮಣ್ಣಿನ ಮಕ್ಕಳಿಗೆ ಕಂದಾಯ, ಗಣಿ, ಕೈಗರಿಕೆ, ಲೋಕೋಪಯೋಗಿ,, ಬೆಂಗಳೂರು ನಗರಾಭಿವದ್ಧಿ ಖಾತೆಗಳೇ ಬೇಕು. ಜನಸೇವೆಗೆ ಇದುವೇ ಮೋಕ್ಷಪಥ!ನಮಗೆ ಗೊತ್ತಿದೆ, ಮುಕ್ತ ಅರ್ಥಿಕ ನೀತಿಯಿಂದಾಗಿ ನಮ್ಮ ರೈತ ಅಭಿವ್ರದ್ಧಿಶಿಲ ದೇಶಗಳ ರೈತರೊಡನೆ ನೇರ ಸ್ಪರ್ದೆಯನ್ನು ಎದುರಿಸಬೇಕಾಗಿದೆ. ಅಂದರೆ ಮಾರುಕಟ್ಟೆಯಲ್ಲಿ ಅಸ್ಟೇಲಿಯದ ಸೇಬು, ಅಮೇರಿಕದ ಗೋದಿ, ಚೀನಾದ ರೇಶ್ಮೆ ಇತ್ಯಾದಿಗಳ ಜೊತೆ ನಮ್ಮ ರೈತ ಪೈಪೋಟಿ ಎದುರಿಸಬೇಕಾಗಿದೆ. ಅಲ್ಲಿ ಕೃಷಿಗೆ ಕೈಗಾರಿಕೆಯ ಸ್ಥಾನಮಾನ ಸಿಕ್ಕಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ.ಹಾಗಾಗಿ ವಿದೇಶಿ ಉತ್ಪನ್ನಗಳು ನಮ್ಮ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಜನ ಅದಕ್ಕೆ ಮುಗಿಬೀಳುತ್ತಾರೆ. ನಮ್ಮ ರೈತ ಏನು ಮಾಡಬೇಕು? ಇಲ್ಲಿ ಸರಕಾರ ’ತಾಯಿ’ಯ ಹಾಗೆ ವರ್ತಿಸಬೇಕು. ದುರ್ಬಲರಿಗೆ ವಿಶೇಶ ಕಾಳಜಿ ಅಗತ್ಯ. ವಿಶ್ವಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ: ರೈತರಿಗೆ ಯಾವುದೇ ತೆರನಾದ ಸಬ್ಸಿಡಿ ನಿಡಬಾರದು. ಇದು ಸರಕಾರಕ್ಕೂ ಗೊತ್ತಿದೆ ಹಾಗಗಿಯೇ ಒಬ್ಬೊಬ್ಬ ಸಚಿವರು ಬಿನ್ನ ಭಿನ್ನ ಹೇಳಿಕೆ ನಿಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಜಾರಿಯಲ್ಲಿ ತರುವುದು ಕಷ್ಟವೆಂದು ಅವರಿಗೂ ಗೊತ್ತಿದೆ. ನಮ್ಮದು ಕೃಷಿಪ್ರಧಾನ ದೇಶ. ಇಲ್ಲಿಯ ಶೇ. ೭೦ರಷ್ಟು ಜನ ಕೃಷಿಕರು. ಹಾಗಾಗಿ ಕ್ರಷಿಕ್ಷೇತ್ರವನ್ನು ಗಂಬೀರ್‍ಅವಾಗಿ ಪರಿಗಣಿಸಬೇಕಾಗಿದೆ. ಈ ದೇಶಕ್ಕೊಂದು ಬಜೆಟ್ ಇದೆ.ಸಂಪರ್ಕಾಕ್ರಾಂತಿಯ ಹೆಸರಿನಲ್ಲಿ ಬ್ರಿಟೀಶರ ಕುರುಹಾಗಿ ಉಳಿದುಕೊಂಡಿರುವ ಪ್ರತ್ಯೇಕ ರೈಲ್ವೆ ಬಜೆಟ್ ಇದೆ. ಆದರೆ ಬಹುಸಂಖ್ಯಾತ ಜನರನ್ನು ಪ್ರತಿನಿಧಿಸುವ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ [ಲ್ಲ. ಅದು ಇಂದಿನ ಅವಸ್ಯಕತೆಯಾಗಿದೆ. ಹಣಕಾಸು ಸಚಿವರು, ರೈಲ್ವೆ ಸಚಿವರು ಬ್ರ್‍ಈಫ್ ಕೇಸ್ ಹಿಡಿದು ಸಂಶತ್ ಪ್ರವೇಶಿಸಿ ಬಜೆಟ್ ಮಂಡಿಸುವುದನ್ನೇ ಜನ ಕಾತರದಿಂದ ಕಾಯುತ್ತಾರೆ. ಆ ಯೋಗ್ಯತೆ ಕೃಷಿ ಸಚಿವರಿಗೆ ಬರಬೇಕಾಗಿದೆ.ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಿಂದ ಏನಾಗುತ್ತದೆ? ’ನಿಮ್ಮೊಡನೆ ನಾವಿದ್ದೇವೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ’ ಎಂಬ ಸ್ಪಷ್ಟ ಸಂದೇಶವನ್ನು ಸರಕಾರ ರವಾನಿಸಿದಂತಾಗುತ್ತದೆ. ಮುಖ್ಯವಾಗಿ ಆಖಾತೆಗೊಂದು ಗೌರವ ಬರುತ್ತದೆ.ಅದರ ತೂಕ ಹೆಚ್ಚುತ್ತದೆ. ತಮ್ಮನ್ನು ಗಂಭೀರವಾಗಿ ಪರಿಗಣಿಸಿದ್ದಾರೆ,ಆಡಳಿತ ಯಂತ್ರದಲ್ಲಿ ತಾವೂ ಕೂಡ ಪಾಲುದಾರರು ಎಂದು ಕೃಷಿಕ ಹೆಮ್ಮೆ ಪಡುತ್ತನೆ.ಅವನ ಆತ್ಮವಿಶ್ವಾಸ ಹೆಚ್ಚುತ್ತದೆ. ಕೃಷಿ ಬಜೆಟ್ ಇಂದಿನ ತುರ್ತು ಅವಸ್ಯಕತೆ. ದೊಡ್ಡ ಸಮುಹದ ದೊಡ್ಡ ಜವಾಬ್ದಾರಿ ಕೃಷಿ ಸಚಿವರ ಹೆಗಲ ಮೇಲಿದೆ. ಅವರು ಅನಿರ್ವಾಯವಾಗಿ ಬುದ್ಧಿ ಮತ್ತು ಹ್ರದಯದ ಮಧ್ಯೆ ಸಮನ್ವಯ ಸಾಧಿಸಲೇಬೇಕಾಗುತ್ತದೆ. ಕೆಲಸ ಮಡಲೇಬೇಕಾಗುತ್ತದೆ.ಪರಿಣಿತರ ಜೊತೆ ಚರ್ಚೆ,ಸಂವಾದ,ಅಧ್ಯಯನ ನಡೆಸಲೇ ಬೇಕು ಕೃಷಿ ಬಜೆಟ್ ಎರಡು ಹಂತಗಳಲ್ಲಿ ಜೊತೆ ಜೊತೆಯಾಗಿ ಜಾರಿಗೆ ಬರಬೇಕು ಮೊದಲನೆಯದಾಗಿ ರೈತರನ್ನು ಎಜ್ಯುಕೇಟ್ ಮಾಡುವುದು.ಅಂದರೆ ಅವರನ್ನು ವ್ರತ್ತಿಪರ ಬ್ಯುಸಿನೆಸ್ ಮೆನ್ ಆಗಿ ಪರಿವರ್ತಿಸುವುದು. ಪರಂಪರಾಗತವಾಗಿ ಆತನನ್ನು ಅನ್ನದಾತ,ನೇಗಿಲಯೋಗಿ, ದೇಶದ ಬೆನ್ನೆಲುಬು ಎಂದೆಲ್ಲ ಕರೆಯಲಾಗುತ್ತಿತ್ತು.ಆಗ ಅದು ಆತನ ತ್ಯಾಗ,ಸೇವೆ, ಸಹನೆಗೆ ಸಂದ ಮನ್ನಣೆಯಾಗಿತ್ತು. ಆದರೆ ಈಗ ಅದರಲ್ಲಿ ವ್ಯಂಗ್ಯ ಧ್ವನಿಸುತ್ತದೆ. ಹಿಂದಿನಿಂದಲೂ ನಮ್ಮ ರೈತ ಸ್ವಾವಲಂಬಿ.ಆತ ಬೀಜ, ಗೊಬ್ಬರ, ಕೀಟನಾಶಕಔಷಧಿ, ನೀರು, ದುಡ್ಡು ಯಾವುದಕ್ಕೂ ಯಾರನ್ನೂ ಅವಲಂಬಿಸಿದವನಲ್ಲ ಪ್ರತಿ ರೈತ ಒಬ್ಬ ಕೃಷಿ ವಿಜ್ನಾನಿಯೇ. ಆತನಿಗೆ ತನ್ನ ಜಮಿನೇ ಪ್ರಯೋಗಶಾಲೆ. ಹಾಗಾಗಿ ಅಕ್ಕ ಪಕ್ಕದ ಮನೆಗಳಲ್ಲೂ ಭಿನ್ನ ಭಿನ್ನವಾದ ಕೃಷಿ ಪದ್ದತಿಯಿತ್ತು. ರೈತ ಪ್ರಯೋಗಗಳಿಗೆ ಮುಕ್ತಮನಸ್ಸುಳ್ಳವನಾಗಿದ್ದನೆ ಎಂಬುದಕ್ಕೆ ಪಾಳೇಕರ್ ಮಾದರಿ ಕೃಷಿ ವಿಧಾನಕ್ಕೆ ಜನ ಮುಗಿಬೀಳುತ್ತಿರುವುದೇ ಸಾಕ್ಷಿಯಾಗಿದೆ. ಎರಡು ನಾಟಿದನವಿದ್ದರೆ ಸಾಕು, ಕೃಷಿ ತ್ಯಾಜ್ಯವನ್ನೇ ಬಳಸಿ ಅತ್ಯುತ್ತಮ ಫಸಲು ತೆಗೆಯಬಹುದು.ಇಂತಹ ಸಾವಯವ ಕೃಷಿ ಉತ್ಪನ್ನಗಳನ್ನು ಕೊಳ್ಳುವಂತೆ ’ಗ್ರಾಹಕ ಜಾಗ್ರತಿ’ ಆಂದೋಲನವನ್ನು ಹಮ್ಮಿಕೊಳ್ಳಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೆಳೆದ ಉತ್ಪನ್ನಗಳಿಗೂ ಇರುವ ವ್ಯತ್ಯಾಸವನ್ನು ಜನರಿಗೆ ತಿಳಿಸಿಕೊಡಬೇಕು. ಕಾರ್ಗಿಲ್,ಕೆಂಟಕಿ,ರಿಲೆಯನ್ಸ್ ಜೊತೆಗೆ ಸ್ಪರ್ದೆ ನೀಡುವಂತೆ ನಮ್ಮ ರೈತರನ್ನು ತಯಾರು ಮಾಡಬೇಕು. ಆರೋಗ್ಯ ಕಾಳಜಿ ಎನ್ನುವುದು ನಗರಸಂಸ್ಕ್ರತಿಯ ಇತ್ತೀಚೆಗಿನ ಗೀಳು. ಹಾಗಾಗಿ ಸಾವಯವ ಉತ್ಪನಗಳಿಗೆ ಭವಿಷ್ಯ ಇದ್ದೇಇದೆ. ಎರಡನೆಯದಾಗಿ ಮಾರುಕಟ್ಟೆ ವಿಭಾಗ. ಮೊತ್ತಮೊದಲನೆಯದಾಗಿ ದಲ್ಲಾಳಿಗಳನ್ನು,ಮಧ್ಯವರ್ತಿಗಳನ್ನು ದೂರವಿಡಬೇಕು ಎ.ಪಿ.ಎಮ್.ಸಿಯಲ್ಲಾದ ವೈಪಲ್ಯಗಳು ಇಲ್ಲಿ ಮರುಕಳಿಸಬಾರದು. ಸರಕಾರವೇ ಮಧ್ಯೆ ಪ್ರವೇಶಿಸಿ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಅದಕ್ಕಾಗಿ ಬಹಳ ವ್ಯವಸ್ಥಿತವಾದ ಮಾರುಕಟ್ಟೆ ಜಾಲವನ್ನು ನೇಯಬೇಕಾಗುತ್ತದೆ. ಅದು ಬಹಳ ದೊಡ್ಡಮಟ್ಟದ ಉದ್ಯೋಗಸ್ರಷ್ಟಿಗೂಕಾರಣವಾಗುತ್ತದೆ. ಕೃಷಿ ಪಧವಿದರರನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದು. ರೈತರ ಬಗ್ಗೆ ನಿಜವಾದ ಕಾಳಜಿ ಇರುವ ಚಿಂತಕರು, ಸಮಾಜ ಸೇವಕರು,ರೈತಮುಖಂಡರ ದೊಡ್ಡ ಪಡೆಯೇ ಇದೆ. ಅವರನ್ನು ಇದರ ಗೌರವ ಕಣ್ಗಾವಲು ಪಡೆಯನ್ನಾಗಿ ನೇಮಿಸಿಕೊಳ್ಳಬಹುದು. ಇದರ ಜೊತೆಗೆ ಮೌಲ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ [ನಂದಿನಿ ಉತ್ಪನ್ನಗಳಂತೆ] ಸರಕಾರವೇ ನೇರವಾಗಿ ಭಾಗಿಯಾಗಬೇಕು. ಟೊಮೇಟವನ್ನು ರಸ್ತೆಗೆ ಸುರಿಯುವುದರ ಬದಲು ಕೆಚಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿ. ಕೊಲ್ಡ್ ಸ್ಟೊರೇಜ್ ಗಳನ್ನು ಹೆಚ್ಚಿಸಲಿ. ಇದರ ಜೊತೆಗೆ ರೈತರಿಗೆ ಕೆಲವು ಸೇವೆಗಳನ್ನು ಸರಕಾರ ಒದಗಿಸಬೇಕು. ರಾಜಕಾರಣಿಗಳಿಗೆ ವಿಧಾನಸೌಧ ಇದೆ,ಶಾಸಕರ ಭವನ ಇದೆ. ಅಧಿಕಾರಶಾಹಿಗಳಿಗೆ ವಿಕಾಸಸೌಧ ಇದೆ. ಬಹುಮಹಡಿ ಕಟ್ಟಡ ಇದೆ. ರೈತರಿಗೆ ಏನಿದೆ? ಬೆಂಗಳೂರಿನಲ್ಲಿ ಒಂದು ರೈತಭವನದ ಅವಸ್ಯಕತೆ ಇದೆ. ಎಲ್ಲಾ ಜಿಲ್ಲೆಗಳ ರೈತರೂ ಇಲ್ಲಿ ಬಂದು ನಿರ್ಧಿಷ್ಟ ಅವಧಿಗೆ ತಂಗುವ ವ್ಯವಸ್ಥೆಯಿರಲಿ. ಪ್ರತಿ ಜಿಲ್ಲೆಯ ಬೆಳೆ ವೈವಿದ್ಯತೆಯನ್ನು ತೋರಿಸುವ ಎಕ್ಸ್ ಭಿಷನ್ , ಭಿತ್ತಿಚಿತ್ರಗಳ ಡಿಸ್ ಪ್ಲೇ ಇರಲಿ. ಗುಲ್ಬರ್ಗ ಜಿಲ್ಲೆಯ ಕೃಷಿ ಅನುಭವವನ್ನು ಮೈಸುರು ಜಿಲ್ಲೆಯ ರೈತ ಹಂಚಿಕೊಳ್ಳಲಿ. ಹಾಗೆ ಮಾಡುವುದರಿಂದ ಬಾಂಧವ್ಯ ಬೆಳೆಯುತ್ತದೆ. ಕಾವೇರಿ-ಕ್ರಷ್ಣೆಯರು ಒಂದಾಗುತ್ತಾರೆ. ಅದರಲ್ಲೊಂದು ಸೆಮಿನಾರ್ ಹಾಲ್ ಇರಲಿ. ನಿರಂತರ ಚರ್ಚಗೋಷ್ಟಿಗಳು, ಸಂವಾದಗಳು ಅಲ್ಲಿ ನಡೆಯುತ್ತಿರಲಿ. ದೇಶದ ಎಲ್ಲಾ ಭಾಗದ ರೈತರು ಅಲ್ಲಿ ಒಟ್ಟು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲಿ. ಕೆ.ಎ.ಎಸ್ ಗ್ರೇಡಿನ ಅಧಿಕಾರಿಯೊಬ್ಬರು ಅದರ ಉಸ್ತುವಾರಿ ನೋಡಿಕೊಳ್ಳಲಿ. ಇಷ್ಟನ್ನು ಮಾಡಿಕೊಟ್ಟರೂ ಸಾಕು ರೈತ ಖುಷಿ ಪಡುತ್ತಾನೆ. ’ರೈತಭವನ’ ತನ್ನದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅರುವತ್ತು ವರ್ಷ ಮೆಲ್ಪಟ್ಟ ರೈತನಿಗೆ ಮಾಶಾಸನ ಕೊಡುತ್ತದೆಯೆಂದು ಸರಕಾರ ಪ್ರಕಟಿಸಿದೆ. ಅದರ ಜೊತೆಗೆ ಎಲ್.ಟಿಸಿ ಸೌಲಭ್ಯ ದೊರಕಲಿ. ಇತ್ತೀಚೆಗೆ ಕೃಷಿಭೂಮಿಯಲ್ಲಿ ಉತ್ಪಾದನೆ ಕುಂಟಿತಗೊಂಡಿದೆ. ಮುಂದಿನ ದಿನಗಳಲ್ಲಿ ;ಆಹಾರ ಬಧ್ರತೆ’ ಎಂಬುದು ದೊಡ್ಡ ಸವಲಾಗಿ ಕಾಡಲಿದೆ. ಹಾಗಾಗಿ ಕೃಷಿಕ್ಶೇತ್ರವನ್ನು ’ಇಂಡಸ್ಟ್ರಿ’ ಎಂದು ಪರಿಗಣಿಸಿ, ಕೈಗಾರಿಕೆಗೆ ಕೊಡುವಎಲ್ಲ ಸವಲತ್ತುಗಳನ್ನು ನೀಡಿ ಕುಟುಂಬವನ್ನು ಕೈಗಾರಿಕೆಯ ಕನಿಷ್ಟ ಘಟಕ ಎಂದು ಘೋಷಿಸಬೇಕು,ಕ್ರಷಿಯಲ್ಲಿ ಮಾತ್ರ ಆಹಾರ ಬಧ್ರತೆ ಮತ್ತು ಉದ್ಯೋಗ ಬಧ್ರತೆ ಎರಡೂ ಇದೆ. ಈ ಸ್ವಾವಲಂಬಿ ಕ್ಷೇತ್ರವನ್ನು ಸ್ವಲ್ಪ ಒತ್ತು ಕೊಟ್ಟು ಮೇಲೆತ್ತಿದರೆ ನಮ್ಮ ರೈತರ ಹಸಿರು ಶಾಲು ಕುತ್ತಿಗೆಗೆ ಕುಣಿಕೆಯಾಗುವುದರ ಬದಲು ಯಶಸ್ಸಿನ ಪತಾಕೆಯಗುತ್ತದೆ ಎಂದು ರೈತ ಮುಖಂಡರಾದ ಕೆ.ಟಿ.ಗಂಗಾಧರ್ ಹೇಳುತ್ತಾರೆ. ಪ್ರೋ.ನಂಜುಂಡಸ್ವಾಮಿಯವರು ರೈತ ನಾಯಕರು ವಿದಾನಸಭೆಯೊಳಗೆ ಕುಳಿತುಕೊಳ್ಳುವ ಕನಸು ಕಂಡಿದ್ದರು . ನಾವು ಕೃಷಿಗೆ ಸ್ವಾಯತ್ತತೆ ಬರುವ ಕನಸನ್ನು ಕಾಣುತ್ತಿದ್ದೇವೆ. ನಮ್ಮ ಕೃಷಿ ಸಚಿವರು ಕೃಷಿ ಬಜೇಟ್ ನ ಬ್ರೀಫ್ ಕೇಸ್ ಹಿಡಿದು ವಿದಾನಸೌಧದ ಮೆಟ್ಟಲುಗಳನ್ನೆರುವ ಕನಸು ಕಾಣುತ್ತಿದ್ದೇವೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಅದನ್ನು ನನಸು ಮಾಡಲಿ.
{ಪ್ರಮುಖ ದಿನಪತ್ರಿಕೆಗಳು ಈ ಲೀಖನವನ್ನು ಪ್ರಕಟಿಸಲಿಲ್ಲ. ಹಾಗಾಗಿ ಇಲ್ಲಿ ಪ್ರಕಟವಾಗಿದೆ.}

Friday, July 11, 2008

..........ಮತ್ತೆ ಜಾರಿದಳು

ಪದ್ಮಪ್ರಿಯಳ ಆತ್ಮಹತ್ಯೆಕೊಲೆ ಇರಬಹುದೆ? ಹಾಗೆ ಗುಮಾನಿ ಪಡಲು ಸಾಕಷ್ಟು ಕಾರಣಗಳಿವೆ. ಒಂದು ವೇಳೆ ಅದು ಆತ್ಮಹತ್ಯೆಯೇ ಆದರೂ ಅದು ವ್ಯವಸ್ಥಿತವಾಗಿ ನಡೆಸಿದ ಕೊಲೆ!

 ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ, ಮಾಧ್ಯಮ ಎಲ್ಲವೂ ಕೂಡ ಪುರುಷಪ್ರಧಾನ ಮೌಲ್ಯಗಳನ್ನು ಎತ್ತಿ ಹಿಡಿಯಲು ಟೊಂಕ ಕಟ್ಟಿ ನಿಂತಿವೆ. ಸ್ಸುಧಾ, ವಿಕ್ರಾಂತ ಕರ್ನಾಟಕದಂತ ಕೆಲವೇ ನಿಯತಕಾಲಿಕಗಳು ಮಾತ್ರ ಆದಷ್ಟು ಗಂಭೀರವಾದ ಲೇಖನಗಳನ್ನು ಪ್ರಕಟಿಸಿವೆ. ಡೆಕ್ಕನ್ ಹೆರಾಲ್ಡ್ ಹಿಂದು,ಪ್ರಜಾವಾಣಿ ದಿನಪತ್ರಿಕೆಗಳು ವ್ರತ್ತಿಪರತೆ ತೋರಿಸಿವೆ. ಟ್ಯಾಬ್ಲಾಯ್ಡ್ ಗಳೆಲ್ಲ ಗೋಸುಂಬೆಗಳು. ಅನುಕೂಲಕ್ಕೆ ತಕ್ಕಂತೆ ಯಾವ ಬಣ್ಣ ಬೇಕಾದರೂ ತಳೆಯಬಲ್ಲವು.

 ನನ್ನನ್ನು ತುಂಬಾ ಕಾಡಿದ್ದು, ಕನ್ನಡಪ್ರಭದ ’ಸಖಿ’ ಪುರವಣಿಯಲ್ಲಿ ಗಿರಿಶ್ ರಾವ್ ಬರೆದ ’ಮತ್ತೆ ಜಾರಿದಳು ಅಮ್ರತಮತಿ’ ಲೇಖನ ನನ್ನ ಹಾಗೆ ಹಲವಾರು ಮಂದಿಯನ್ನು ಈ ಲೇಖನ ಡಿಸ್ಟರ್ಬ್ ಮಾಡಿದೆ. ಲೇಖನದ ಆಶಯದ ಬಗ್ಗೆ ಅಂತಹ ತಕರಾರು ಇಲ್ಲ. ಒಬ್ಬ ಪುರುಷ ಯೋಚಿಸುವ ಧಾಟಿಯಲ್ಲೇ ಇದೆ ಅದು. ಆದರೆ ಶಿರ್ಷೀಕೆ.....? ’ಮತ್ತೆ ಜಾರಿದಳು’ ಅಂದ್ರೆ ಏನರ್ಥ? ಈಗಿರುವ ಸ್ಥಿತಿಯಿಂದ ಹೀನ ಸ್ಥಿತಿ ತಲುಪುವುದು. ಔನತ್ಯದಿಂದ ಪತನದೆಡೆಗೆ ಜಾರುವುದು.
ಪದ್ಮಪ್ರಿಯ ’ಗ್ರಹಸ್ವಾಮಿನಿ’ಯ ಪಟ್ಟದಿಂದ ಜಾರತ್ವದ ಕಡೆಗೆ ಜಾರಿ ಜಾರಿಣಿಯಾದಳೆ? ಆಕೆ ಜಾರಿಣೆಯಾದಳು ಎಂದು ಹೇಗೆ ಹೇಳುತ್ತಿರಿ? ಯಾವ ಆಧಾರ ಇದೆ? ’ನಾ ಮುಡಿದ ಮಲ್ಲಿಗೆ ಅವಳೊಂದು ಘಳಿಗೆ ಮುಡಿಯಲಿ’ ಎಂದು ಹಾರೈಸಿದರೆ ಆಕೆ ಸತೀಮಣಿ ಆತ ರಸಿಕ. ಪೌರುಷವಂತ. ಆಕೆಯ ಮನಸ್ಸು ಸ್ವಲ್ಪ ಚಂಚಲಗೊಂಡರೂ ಅವಳು ಕಳಂಕಿನಿ! ಸಿತಾಮಾತೆಯನ್ನು ಕೂಡ ’ಕಳಂಕಿನಿ’ ಎಂದು ಕರೆದವರಿದ್ರು. ಗರ್ಬಿಣಿಯನ್ನು ಕಾಡಿಗೆ ಅಟ್ಟಿ ಅಲ್ಲಿ ಮಕ್ಕಳನ್ನು ಹಡೆದು ಮತ್ತೆ ನಾಡಿಗೆ ಹಿಂದಿರುವಾಗಲೂ ಮತ್ತೊಮ್ಮೆ ಅಗ್ನಿಪರೀಕ್ಷೆ. ಅವಮಾನದಿಂದ ಬೆಂದು ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಉತ್ತರಪ್ರದೇಶದಲ್ಲಿರುವ ’ಸೀತಾಮಡಿ’ ಎಂಬ ಈ ಜಾಗವನ್ನು ನಾನು ನೋಡಿದ್ದೇನೆ. ಅದು ಹಿಂದೆ ವಿಶಾಲವಾದ ಕೆರೆಯಾಗಿದ್ದಿರಬೇಕು. ಕೆರೆಯ ಮಧ್ಯೆ ಸೀತೆಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಇಳಿದು ಹೋಗಬೇಕು. ಜನವಸತಿಯಿಲ್ಲದ ಆ ಭಾಗದಲ್ಲಿ ಅಪಾರ ಸಂಖ್ಯೆಯ ನವಿಲುಗಳಿವೆ. ಆ ಜಾಗ ನೋಡಿದರೆ ಸೀತೆಕೆರೆಗೆ ಹಾರಿ ಆತ್ಮಹತ್ಯೆಮಾದಿಕೊಂಡಿರಬೇಕು ಆನ್ನಿಸುತ್ತದೆ. ಮಾನಕ್ಕೆ ಅಂಜುವವರು ಮಾನಿನಿಯರು ತಾನೆ? ಭಯವಾಗುತ್ತಿದೆ ಗಂಡಂದಿರ ಬಗ್ಗೆ.

ಗಂಡಸರಿಗೆ ಹೆಂಗಸರ ಬಗ್ಗೆ ಆಕರ್ಷಣೆ ಇದೆ; ಕುತೂಹಲ ಇದೆ; ಮೋಹ ಇದೆ. ಆದರೆ ಕಾಳಜಿ ಇಲ್ಲ. ಅದು ಅವರ ಜೀನ್ಸ್ ನಲ್ಲಿ ಪ್ರೋಗ್ರಾಮ್ ಅಗಿಲ್ಲ. ಆಕರ್ಷಣೆ, ಕುತೂಹಲ’ ಮೋಹ ತಗ್ಗಿದ ಮೇಲೆ ಉಳಿಯುವುದೇನು? ಏನೂ ಇಲ್ಲ. ಎಲ್ಲಾ ಉಪಭೋಗ ವಸ್ತುಗಳಂತೆ ಆಕೆಯೂ ಒಂದು. ಅದು ಒಂದು ದಿನ ಹಳೆಯದಾಗುತ್ತದೆ. ಮೂಲೆ ಸೇರುತ್ತದೆ.

 ಬಹುತೇಕ ಎಲ್ಲಾ ಹೆಂಡತಿಯರಿಗೆ ಗಂಡನ ಬಗ್ಗೆ ಅಸಮಾಧಾನ ಇದ್ದೇ ಇರುತ್ತದೆ. ಯಾಕೆಂದರೆ ಪುರುಷರು ಕುಟುಂಬದ ವಿಚಾರದಲ್ಲಿ ಮೂಲತ: ಆಲಸಿಗರೂ. ಬೇಜವಾಬ್ದಾರಿಗಳೂ ಆಗಿರುತ್ತಾರೆ. ಅದರೆ ಅದಕ್ಕೊಂದು ಮಿತಿ ಅನ್ನುವುದು ಇರಬೇಕಲ್ಲ. ಆ ಮಿತಿ ದಾಟಿದಾಗ ಆಕೆ ಪ್ಯಾರಲಲ್ ಐಡೆಂಟಿಟಿಯನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. ಗಂಡನ ಯಶಸ್ಸಿನ ಆರಮನೆಗೆ ಎಷ್ಟು ದಿನ ಮೆಟ್ಟಲಾಗಿರಲು ಸಾಧ್ಯ? ನಿಮ್ಮ ’ಅಹಂ’ ತಣಿಸಿಕೊಳ್ಳುವುದಕ್ಕಾಗಿ ದುಡಿಯುತ್ತೀರಿ...ದುಡ್ಡು ಗುಡ್ಡೆ ಹಾಕಿಕೊಳ್ಳುತ್ತೀರಿ....ಸ್ಥಾನ ಮಾನ ಪಡೆಯುತ್ತೀರಿ. ಅದನ್ನೆಲ್ಲ ಕಾಪಾಡುವ, ಕಾವಲುಗಾರಳೇ ಮಡದಿ ? ಇತ್ತೀಚೆಗಿನ ವಿದ್ಯಮಾನಗಳನ್ನು ನೋಡುತ್ತಿದ್ದರೆ ಮದುವೆಯೆಂಬ ಕಾನ್ಸೆಪ್ಟ್ ಬಗ್ಗೆಯೇ ಭಯವಾಗುತ್ತಿದೆ.

 ಹೌದು ಸ್ವಾಮಿ, ನಾವು ಅಮ್ರತಮತಿಯ ಹಾದಿಯಲ್ಲಿದ್ದೇವೆ. ನೀವ್ಯಾಕೆ ಯಶೋಧರರಾಗಬಾರದು? ಮಾರಿದತ್ತರಾಗುತ್ತೀರೇಕೆ? ಯಶೋಧರ ಚರಿತೆ’ ಯಲ್ಲಿ ಆತನೂ ಬದಲಾಗುತ್ತಾನೆ. ನೀವ್ಯಾಕೆ ಬದಲಾಗಬಾರದು? ;ತನಗೆ ಸಿಗಲಾರದ್ದು ಯರಿಗೂ ಸಿಗಬಾರದು’ ಎಂದು ಯಾಕೆ ಕೊಲೆ ಮಾಡುತ್ತೀರಿ? ಅಸಿಡ್ ಹಾಕುತ್ತೀರಿ?ಪ್ರತಿ ಪುರುಷನ ಅಂತರಂಗದಲ್ಲಿ ಒಬ್ಬ ’ಜಾರ ಕ್ರ್‍ಅಷ್ಣ’ನಿರುತ್ತಾನೆ ಹಾಗೆಯೇ ಪ್ರತಿ ಸ್ತ್ರಿಯ ಅಂತರಂಗದಲ್ಲಿ ’ಅಮ್ರತಮತಿ’ ಇರುತ್ತಾಳೆ. ಅದು ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತ. ಆದರೆ ’ಸಂಯಮ’ ಎಂಬುದು ಎಲ್ಲರನ್ನೂ ಹದ್ದುಬಸ್ತಿನಲ್ಲಿಡುತ್ತದೆ; ಕಾಪಾಡುತ್ತದೆ: ಕಾಪಾಡಬೇಕು. ಅದು ನಾಗರಿಕ ಸಮಾಜದ ಲಕ್ಷಣ.

Saturday, March 22, 2008

’ಹೋಗು ದಕ್ಷನ ಮಗಳೇ’

ಅವಳ ಹೆಸರು ದಾಕ್ಷಾಯಿಣಿ.ತನ್ನ ಹೆಸರಿನ ಬಗ್ಗೆ ಅವಳಿಗೆ ವಿಪರಿತ ಮೋಹ ತನ್ನನು ಪರಿಚಯಿಸಿಕೊಳ್ಳುವಾಗಲೆಲ್ಲ ಹೆಚ್.ಎಸ್.ಶಿವಪ್ರಕಾಶ್ ಅವರ

’ಹೋಗು ದಕ್ಷನ ಮಗಳೇ
ನೀನು ತಿರುಗಿ ಬರುವೆ ಅಂತ
ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ
ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ
ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆ
ಹೋಗು ದಕ್ಷನ ಮಗಳೆ...ಕೈಯ ಕೊಳ್ಳಿ ಮಾಡಿ
 ಜೀವದೆಣ್ಣೆ ಬತ್ತಿ ದೀಪಗಳ
ಉರಿಸುತ್ತ ಕಣ್ಣಲ್ಲಿ ಸುತ್ತ
ನಿನ್ನ ಬರವಿನ ಹಗಲು ಇರುಳಿನ
 ಗೆಜ್ಜೆಯುಲಿವಿಗೆ ಹೆಜ್ಜೆಗಳನಿಕ್ಕುತ್ತ......
ಹೊಟ್ಟೆ ಎದೆಗಳ ಡೊಳ್ಳು ಬಾರಿಸುತ
ಪಾತಾಳ ಮೆಟ್ಟಿ, ಗೌರಿಶಂಕರ ನೆತ್ತಿ ನಡುಗುವ ಹಾಗೆ....’

ಎಂದು ಏರು ಧ್ವನಿಯಲ್ಲಿ ಅಭಿನಯಿಸಿ ಹೇಳುತ್ತಿದ್ದಳು. ಎದುರಿಗಿದ್ದವರು ಒಂಥರ ಖುಶಿಯಾಗಿ ಬಹುಬೇಗನೆ ಆಪ್ತರಾಗಿಬಿಡುತ್ತಿದ್ದರು. ಸದಾ ಜೀವಂತಿಕೆಯ ಖನಿ ಅವಳು.

ರಾತ್ರಿ ಎಷ್ಟೇ ಹೊತ್ತಿಗೆ ಮಲಗಿದರೂ ಬೆಳಿಗ್ಗೆ ಕರಾರುವಕ್ಕಾಗಿ ಐದು ಗಂಟೆಗೆ ಎದ್ದುಬಿಡುತ್ತಾಳೆ. ಐದೂವರೆಗೆ ಶೂ ಹಾಕಿ ಬ್ರಿಕ್ ವಾಕ್ ಹೊದ್ರೆ ಐದುಮುಕ್ಕಲಿಗೆ ಯೋಗ ಕ್ಲಾಸ್ ಬಾಗಿಲಲ್ಲಿ ಹಾಜರು. ಮುಕ್ಕಾಲು ಘಂಟೆ ಪ್ರಾಣಾಯಾಮ, ಸೂರ್ಯನಮಸ್ಕಾರ, ಗುರುವಂದನೆ. ಇನ್ನು ಮುಕ್ಕಾಲು ಘಂಟೆ ಯೋಗ. ಏಳುಮುಕ್ಕಾಲು ಘಂಟೆಗೆ ಹಾಲು ತರಕಾರಿ ಹಿಡಿದು ಮನೆ ಮೆಟ್ಟಿಲು ಹತ್ತಿ ಸೀದಾ ಅಡುಗೆ ಮನೆಗೆ. ೮ ಘಂಟೆಗೆ ಬಲಗೈಯಲೊಂದು ಶುಗರ್ ಲೆಸ್ ಟೀ ಕಪ್, ಎಡಗೈಯಲೊಂದು ವಿದ್ ಶುಗರ್ ಟೀ ಕಪ್ ಹಿಡಿದು ಹಾಲ್ ಪ್ರವೇಶ. ಶುಗರ್ ಲೆಸ್ ಅವನಿಗೆ ದಾಟಿಸಿ ಐದು ನಿಮಿಶದಲ್ಲಿ ಪೇಪರ್ ಗಳ ಮೇಲೆ ಕಣ್ಣಾಡಿಸಿ ಅಡುಗೆಮನೆಗೆ ರೀ ಎಂಟ್ರಿ.ಮೂರು ಒಲೆಯ ಗ್ಯಾಸ್ ಸ್ಟೌನಲ್ಲಿ ಕೊತ ಕೊತ ಕುದಿತ. ತರಕಾರಿಗಳ ಮಾರಣ ಹೋಮ. ಕಾಲಲ್ಲಿ ಚಕ್ರ. ಮಗನ ಹಾಸುಗೆಯೆಡೆಗೊಮ್ಮೆ; ’ಪುಟ್ಟಾ ಏಳು’ ಉಲಿತ. ಬಾತ್ ರೂಮಿಗೆ ಚುಕ್ ಬುಕ್ ರೈಲ್. ಯುನಿಫಾರ್ಮ್ ಗೆ ಇಸ್ತ್ರಿ ಪೆಟ್ಟಿಗೆಯ ಜಾರುಗುಪ್ಪೆ. ಬ್ಯಾಗ್ ಹುಡುಕಾಟ. ಡಬ್ಬ ತಯಾರಿ. ಗದರಿಕೆಯ ಕೈತುತ್ತು.ಒಂಬತ್ತಕ್ಕೆ ಸ್ಕೂಲ್ ವ್ಯಾನ್ ಗೆ ಟಾಟಾ ಹೇಳಿ ಸೋಫಾದಲ್ಲೊಮ್ಮೆ ಕುಕ್ಕುರು ಬಡಿದು ಇನ್ನೊಮ್ಮೆ ಪೇಪರಿನೆಡೆಗೆ ಸ್ಥೂಲ ನೋಟ.ರಿಂಗುಣಿಸುವ ಪೋನುಗಳಿಗೆ ಚುಟುಕು ಉತ್ತರ.ಅವನಾಗ ವಾಕ್ ಮುಗಿಸಿ ಬಂದ. ’ಮಗ ಭೂಪ ಶಾಲೆಗೆ ಹೋದ್ನಾ’ ಟವಲ್ ಹೆಗಲ ಮೇಲೆ ಹಾಕ್ಕೊಂಡು ಬಚ್ಹಲು ಮನೆಗೆ ನಡೆದ.

’ಆಮೇಲೆ ’ಈ ಲೇಖನ ಓದಬೇಕು’ ಎನ್ನುತ್ತಲೆ ಅಡಿಗೆ ಮನೆಗೆ ಒಂದೇ ನೆಗೆತ. ಕಾಲಿಗೆ ಮತ್ತೆ ಚಕ್ರ. ’ತಿಂಡಿ ರೆಡಿ ಮಾಡಿ ಇಡು’ ಆಜ್ನಾಪಿಸುತ್ತಲೇ ದೇವರ ಕೋಣೆ ಹೊಕ್ಕವನ ಮೆಡಿಟೇಷನ್ ಆರಂಭ. ಇನ್ನು ಅರ್ದ ಘಂಟೆ ಜೀವಚ್ಛವ. ತಿಂಡಿ ಟೀ ಚಡ್ಡಿ,ಬನೀನು ಕರ್ಚಿಫ್ ಶರ್ಟ್ ಪ್ಯಾಂಟ್...ಸೇವೆ ಮುಂದುವರಿಕೆ....ಹೊರಗಿನಿಂದಲೇ ಸ್ವರ ತೂರಿ ಬಂತು ’ಚೆಕ್ಕ್ ಗೆ ಸಹಿ ಹಾಕಿದ್ದೇನೆ ದುಡ್ಡು ಬೇಕಿದ್ರೆ ತಗೋ’ ಆರ್ಥಿಕ ಸುಭದ್ರತೆಗೆ ಇದಕ್ಕಿಂತಹ ಉದಾಹರಣೆ ಬೇಕೆ?!ಒಂಬತ್ತುವರೆಯಾಯ್ತು; ಆತ ಭುರ್ರನೆ ಹಾರಿ ಹೋದ.

  ಮನೆ ಗೊಬ್ಬರದ ಗುಂಡಿ ಯಾರಾದ್ರು ಬಂದ್ರೆ...ಯಾರೂ ಬರುವುದಿಲ್ಲ ಆದ್ರೂ...ಬಂದ್ರೆ ಏನಾದ್ರು ಅಂದ್ಕೊಂಡ್ರೆ..ಅಂತ ಒಂಚೂರು ಆಚೀಚೆ ಸರಿಸಿ ಜೋಡಿಸಿಡುವುದರಲ್ಲಿ ಮಗ್ನ. ಕೆಲಸದಾಕೆ ಬಂದ ಸದ್ದು ಅಡುಗೆ ಮನೆಯ ಸಪ್ಪಳದಿಂದಲೇ ಕೇಳಿಬರುತ್ತಿತ್ತು. ಸಧ್ಯ ಬಂದ್ಲಲ್ಲ ಎನ್ನುತ್ತ ಹರಿಪ್ರಸಾದ್ ಚೌರಸಿಯ ಸಿದಿ ಹಾಕಿ ಟೀಪಾಯಿ ಮೇಲೆ ಕಾಲಿಟ್ಟು ಸೋಫಾಕ್ಕೆ ಒರಗಿ ಮೋಹನಮುರಳಿಯಲ್ಲಿ ಕರಗಿ ಹೋದಳು. ಹನ್ನೊಂದಕ್ಕೆ ನ್ಯೂಸ್ ಚಾನಲ್ ಅನ್ ಮಾಡಿದಳು...ಸ್ವಲ್ಪ ಹೊತ್ತದ ಮೇಲೆ ಚಾನಲ್ ಬದಲಾಯಿಸ್ತಾ ಹೋಗಿ ಮತ್ತೆ ತನ್ನ ಸುತ್ತ ಪೇಪರು ಹರವಿಕೊಂಡು ಅದರಲ್ಲೆ ಲೀನವಾದಳು.

ಹನ್ನೆರಡು ಕಳೆಯುತ್ತಿದ್ದಂತೆ ಅದೆಂತಹದೋ ಚಡಪಡಿಕೆ.ಜಗತ್ತಿಗೂ ತನಗೂ ಕೊಂಡಿ ತಪ್ಪಿದಂತೆ. ತನ್ನದಲ್ಲದ ಯಾರದೋ ಬದುಕನ್ನು ತಾನು ಬದುಕಿದಂತೆ. ನಿನ್ನೆಯ ಅನ್ನ ಸಾರು ತಿಂದು ಮತ್ತೆ ಚಾನಲ್ ಬದಲಾಯಿಸಿದಂತೆಲ್ಲ, ಬದುಕು ಇಷ್ಟಕ್ಕೇ ಮುಗಿದು ಹೋಗುತ್ತಿದೆಯೇನೋ ಎಂಬ ಭಾವ. ಕಣ್ಣಂಚಿನಲ್ಲಿ ನೀರಿನ ಕಟ್ಟೆ.
ನಾಲ್ಕೂವರೆಗೆ ಸ್ಕೂಲ್ ವ್ಯಾನ್ ಮನೆಯೆದುರು ನಿಂತಾಗ ಜೀವ ಚೈತನ್ಯವೇ ಉಕ್ಕಿ ಹರಿದ ಭಾವ.ತಲೆ ಮುಟ್ಟಿ ಕೆನ್ನೆ ತಟ್ಟಿ ’ಸ್ಕೂಲಲ್ಲಿ ಏನೇನ್ ಮಾಡಿದ್ಯೋ’. ಮತ್ತೆ ಮಗುತನ. ಕಾಲಿಗೆ ಚಕ್ರ. ಹಗಲು ರಾತ್ರಿ ಸಂಗಮಿಸುವ ಹೊತ್ತು. ಮಸುಕು ಕತ್ತಲೆ. ಜಗತ್ತೆಲ್ಲ ಅಳುತ್ತಿದೆ; ತಾನು ಒಂಟಿ ಎನ್ನುವ ಭಾವ. ಕೈ ರಿಮೋಟ್ ಒತ್ತುತ್ತಲೇ ಹೋಗುತ್ತದೆ. ಒಂಬತ್ತಕ್ಕೆ ಮತ್ತೆ ಕಾಲಿಗೆ ಚಕ್ರ.ಜೀವದುಸಿರಿನ ತಲೆ ಮೊಟಕಿ, ಕೆನ್ನೆ ತಟ್ಟಿ, ಸುಮ್ ಸುಮ್ನೆ ತಬ್ಬಿ, ಕಚಗುಳಿ ಇಟ್ಟು ’ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...ನಿದ್ದೆ ಬರುವಳು ಹೊದ್ದು ಮಲಗು ಮಗುವೆ...ಜೋ..ಜೋ...’

ಹನ್ನೊಂದಕ್ಕೆ ಪುಸ್ತಕದ ರ್‍ಯಾಕಿನಲ್ಲಿ ಕವಿತೆ, ವಿಮರ್ಶೆ, ಪ್ರಬಂದಸಂಕಲನ,ಜೀವನಚರಿತ್ರೆಗಳ ಹುದುಕಾಟ ರೀಡಿಯೋದಲ್ಲಿ ಅರ್ ಜೆಗಳ ಮಾತಿನಬ್ಬರದ ನಡುವೆ ಕಿಶೋರಕುಮಾರನ ವಿಷಾಧಗೀತೆ. ಮೆಲ್ಲನೆ ಅವಳಾಳಕ್ಕೂ ಪ್ರಸರಣ.
ಹನ್ನೆರಡಕ್ಕೆ ಆತನ ಆಗಮನ. ಕಾಲಿಗೆ ಚಕ್ರವಿಲ್ಲ.ತಳ್ಳುಗಾಡಿಯ ಭಾವ. ಮಾಡಿದ್ದನ್ನು ಬಡಿಸುವಾಗ ಆತ ಆಪೀಸಿನ ಬಗ್ಗೆ ಏನೇನೊ ಹೇಳುತ್ತಿದ್ದಾನೆ;ಇವಳು ಹಾಸಿಗೆಗೆ ಬಂದು ಮೈ ಚೆಲ್ಲುತ್ತಾಳೆ. ಇನ್ನೊಂದು ದಿನ ಕಳೆಯಿತು.ಇನ್ನೆಷ್ಟು ನಾಳೆಗಳು ಉಳಿದಿವೆಯೋ ಎಂಬ ಚಿಂತೆಯಲ್ಲಿ ಅವಳ ಕಣ್ಣುಗಳು ಮತ್ತೆ ಜೋಡಿ ಕೊಳ. ದಿಂಬಿಗೆ ಕೆನ್ನೆಯೊತ್ತಿ ಸದ್ದಿಲ್ಲದ ಬಿಕ್ಕಳಿಕೆ.
ಕೌಟುಂಬಿಕ ಸಹಚರ್‍ಯ ಇಲ್ಲ.ಭಾವನಾತ್ಮಕ ಒಡನಾಟವಿಲ್ಲ. ದೈಹಿಕ ಸಾಂಗತ್ಯವಿಲ್ಲ. ಭಾವಸ್ಪಂದನವಿಲ್ಲ. ಮನುಸ್ಯ ಸಂಬಂಧಗಳ ಬಿಸುಪು ಇಲ್ಲ.ಇನ್ಯಾವ ಸಂಬಂಧ ಇವರನ್ನು ಒಟ್ಟಿಗೆ ಬಂಧಿಸಿದೆ? ಮಗುವಾ...? ಆರ್ಥಿಕ ಅವಲಂಬನೆಯಾ...?

ಈಗ ನನ್ನೆದುರು ಕುಳಿತಿದ್ದಾಳೆ. ಅವಳದು ಒಂದೇ ಪ್ರಶ್ನೆ- ’ನನಗೆ ಅವನು ಬೇಕಾ...?’
 ನನಗೆ ಗೊತ್ತಿಲ್ಲ. ಗೊತ್ತಿದ್ದ ಸಮಚಾರವೆಂದರೆ;ಅವರಿಬ್ಬರು ಗಂಡ ಹೆಂಡತಿ,ಪ್ರೀತಿಸಿ ಮದುವೆಯಾದವರು,ಜಗತ್ತನ್ನೆ ಗೆದ್ದಂತೆ ಹತ್ತು ವರ್ಷ ಜೊತೆಯಾಗಿ ಬದುಕಿದವರು. ಈಗ ಹೀಗೆ....ಯಾಕೆ ಹೀಗಾಯ್ತು?.... ಗೊತ್ತಿಲ್ಲ.
ನಿಮಗೆ ಗೊತ್ತಿದ್ದರೆ ತಿಳಿಸಿ...
ಅವಳೆಡೆಗೆಗೊಮ್ಮೆ ನೋಡಿ ಅವಳ ಇಷ್ಟದ ಕವನದ ಮುಂದಿನ ಸಾಲುಗಳನ್ನು ನಾನು ಮುಂದುವರಿಸಿದೆ

 ’ಹೋಗು ದಕ್ಷನ ಮಗಳೇ ದೇವಪುತ್ರಿಗೂ ಆಜೀವ ತಿರುಕನಿಗೂ
 ಯಾವ ಯಾತರ ನಂಟು?
 ಹೊತ್ತಾಯಿತು ಹೊರಡು ಕಟ್ಟಿಕೋ ನೆನಪಿನ ಗಂಟು
ಮುತ್ತುಗಳ ಸರನತ್ತು ಬೆಂಡೋಲೆ
ಅಪ್ಪುಗೆ ಸೋಕುಗಳ ಜರತಾರಿ ಸೀರೆ
ಕಟ್ಟಿಕೋ ಕಟ್ಟಿಕೋ ನೆನಪಿನ ಗಂಟು......’

ಆ ದಾಕ್ಷಾಯಣಿ ಯಜ್ನಕುಂಡದಲ್ಲಿ ದುಮುಕಿ ಪಾರ್ವತಿಯಾಗಿ ಮರುಹುಟ್ಟು ಪಡೆದು ಅದೇ ಶಿವನನ್ನು ಮದುವೆಯಾದಳು.ಈಕೆ ಶಿವೆಯಾಗಬೇಕೆ..? ಅವನು ಶಿವನಾಗದಿದ್ದರೂ.........ಹೇ.. ಅರ್ಧನಾರೀಶ್ವರ !

Tuesday, February 5, 2008

ನನ್ನೊಳಗೆ ’ನಾನು’

ನನ್ನ ಬಗ್ಗೆ ಹೇಳೀಕೊಳ್ಳುವಂತಹ ಮಹತ್ವವಾದದ್ದು ಏನೂ ಇದ್ದಂತಿಲ್ಲ. ಒ೦ಚೂರು ಬದುಕು ಕಂಡಿದ್ದೇನೆ.ಇನ್ನೊಂದ್ಚೂರು ಓದಿಕೊಂಡಿದ್ದೇನೆ.ಪ್ರವಾಸ ಮಾಡುವುದು ನಂಗಿಷ್ಟ.ಅದು ನನ್ನ ದೌರ್ಬಲ್ಯ ಕೂಡ.

ಪ್ರತಿ ಕ್ಸಣವನ್ನೂ ಅನುಭವಿಸಿ ನನ್ನೊಳಗೆ ಹಿಡಿದಿಟ್ಟುಕೊಳ್ಳುವ ಬಯಕೆ.ಹಾಗಾಗಿ ನಾನು ಸದಾ ಹಸನ್ಮುಖಿ.ಖುಶಿ ಖುಶಿ ಇಬ್ಬನಿ ! ಯೋಗ,ಪ್ರಾಣಯಾಮ ನನ್ನ ದಿನಚರಿಯ ಭಾಗ.

ಹೊರ ಜಗತ್ತಿಗೆ ತೆರೆದುಕೊಳ್ಳಲು ಭಯ.ಸುತ್ತಲಿನ ಜನರ ತೋರಿಕೆಯ ಬದುಕನ್ನು ನೋಡಿ ನೋಡಿ ಸಾಕಾಗಿದೆ.ಎಲ್ಲಾ ಕಡೆ ಮುಖವಾಡಗಳೇ ಮುಖವಾಡಗಳು.ಅತಿರಂಜಿತ ದ್ರಶ್ಯಮಾದ್ಯಮಗಳು,ಶ್ರವ್ಯಮಾದ್ಯಮದ ಶಬ್ದಮಾಲಿನ್ಯ,ಅಕ್ಷರ ಹಾದರದ ಮುದ್ರಣಮಾಲಿನ್ಯ-ಇದೆಲ್ಲದರ ನಡುವೆ ಗಂಭೀರವಾದ ವೀಕ್ಷಕರು,ಶೋತ್ರುಗಳು, ಪ್ರೇಕ್ಶಕರು ಯಾವ ಕಡೆ ಮುಖ ಮಾಡಬೇಕು? ಹಾಸ್ಯೊತ್ಸವಗಳೇ ಬದುಕನ್ನು ನಿರ್ದೇಶಿಸುವುದಿಲ್ಲ ಅಲ್ಲವೇ?

ತೋರಿಕೆಯ ಜಗತ್ತು ಸಾಕಾಗಿದೆ.ಅಂತರಂಗದ ಒಳಜಗತ್ತಿಗೆ ಸರಿದು ಹೊಗಲಿದು ಸಕಾಲ. ಒಂಟಿತನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ; ಅದು ಶಿಕ್ಶೆ ಎಂದು ಭಾವಿಸುವವರಿದ್ದಾರೆ. ಆದರೆ ’ಒಂಟಿತನ’ವನ್ನು ’ಏಕಾಂತ’ವಾಗಿಸಿಕೊಳ್ಳಲು ಸಾದ್ಯವಾಗುವುದಾದರೆ ಅದರಲ್ಲಿನ ಸುಖಕ್ಕೆ ಸರಿಸಾಟಿಯಿಲ್ಲ.ಆದರೆ ವ್ಯಕ್ತಿಯೊಬ್ಬ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಇದಾಗಿರಬಹುದೇ? ಗೊತ್ತಿಲ್ಲ... ಇದ್ದರೂ ಇರಬಹುದು..!
ಈ ಸಮಯದಲ್ಲಿ ಡಿ.ವಿ.ಜಿ ನೆನಪಾಗುತ್ತರೆ.

’ಓರ್ವನೇ ನಿಲುವೆ ನೀನುತ್ಕಟಕ್ಷಣಗಳಲ್ಲಿ/
 ಧರ್ಮಸಂಕಟಗಳಲ್ಲಿ,ಜೀವಸಮರದಲ್ಲಿ
/ ನಿರ್ವಾಣದೀಕ್ಷೆಯಲ್ಲಿ,ನಿರ್ಯಾಣುಘಟ್ಟದಲ್ಲಿ
/ನಿರ್ಮಿತ್ರನಿರಲು ಕಲಿ-ಮಂಕುತಿಮ್ಮ

ಒಬ್ಬಳೇ ನಿಂತಿದ್ದೇನೆ; ಈ ವಿಶಾಲ ಜಗತ್ತಿನಲ್ಲಿ....
 ನೋಟ ಹೊರಗಿದೆ. ಮನಸ್ಸು ಒಳಗಡೆ ಇಳಿಯುತ್ತಿದೆ.
 ಆದರೂ ಹೊರ ಜಗತ್ತಿಗೊಂದು ರಹದಾರಿ ಬೇಕು. ಅದು ಇದಾಗಿರಬಹುದೇ? ಗೊತ್ತಿಲ್ಲ.
 ಗೊತ್ತಿದ್ದರೆ ನೀವು ಹೇಳ್ತಿರಲ್ಲಾ...?
 ಬನ್ನಿ ನನ್ನ ’ಮೌನಕಣಿವೆ’ಗೆ ಹೀಗೆ ಸುಮ್ಮನೆ.