Monday, July 19, 2010

ಬೈರಪ್ಪನವರ ಕವಲು; ಸ್ತ್ರೀ ವಿರೋಧಿ ವಕಾಲತ್ತು
ಎಸ್.ಎಲ್ ಬೈರಪ್ಪನವರ ಹೊಸ ಕಾದಂಬರಿ ’ಕವಲು’ವಿನ ೧೪ನೇ ಪುಟದಲ್ಲಿ ಒಂದು ಸಂಭಾಷಣೆ ಬರುತ್ತದೆ; ”ಓದಿದ ಗಂಡಸರೆಲ್ಲ ಎಂಗಸರಾಗ್ತಾರೆ. ಓದಿದ ಎಂಗಸರೆಲ್ಲಾ ಗಂಡಸರಾಗ್ತಾರೆ. ಗಂಡಸರು ಗಂಡಸರಾಗಿ ಎಂಗಸರು ಎಂಗಸರಾಗಿ ಇರಬೇಕಾದರೆ ಯಾರೂ ಓದಕೂಡದು” ಇದನ್ನು ಹೇಳುವಾತ ಒಬ್ಬ ಪೋಲಿಸ್ ಕಾನ್ಸ್ಟೇಬಲ್.
ಕಥಾನಾಯಕ ಜಯಕುಮಾರ್ ವಾರ್ಷಿಕ ೧೨೦ ಕೋಟಿ ವ್ಯವಹಾರ ನಡೆಸುವ ’ಜಯಂತಿ ಹೈಪ್ರಿಸಿಶನ್’ ಪ್ಯಾಕ್ಟರಿಯ ಮಾಲೀಕ. ಈಗ ಎರಡನೇ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಹಿಳಾ ಠಾಣೆಯೊಂದರಲ್ಲಿ ಬಂದಿತನಾಗಿದ್ದಾನೆ. ಅವನನ್ನು ನೋಡಿ ಕಾನ್ಸ್ಟೇಬಲ್ ಅನುಕಂಪದಿಂದ ನುಡಿಯುವ ಮಾತುಗಳಿವು. ಈ ಸಂಭಾಷಣೆಯೇ ಇಡೀ ಕಾದಂಬರಿಯ ತಿರುಳೂ ಆಗಿದೆ.

ಬೈರಪ್ಪನವರಿಗೆ ಅಧುನಿಕ ಮನೋಭಾವದ, ಸ್ವತಂತ್ರ ವ್ಯಕ್ತಿತ್ವದ ಮಹಿಳೆಯರ ಬಗ್ಗೆ ಅಪಾರ ಅಸಹನೆಯಿದೆ; ತಿರಸ್ಕಾರವಿದೆ. ಅದರ ಜೊತೆಗೆ ಶಿಥಿಲಗೊಳ್ಳುತ್ತಿರುವ ಕುಟುಂಬ ವ್ಯವಸ್ಥೆಯ ಬಗ್ಗೆ ವ್ಯಥೆಯಿದೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಮಹಿಳೆಯೇ ಕಾರಣ ಎಂಬುದು ಅವರ ಬಲವಾದ ನಂಬಿಕೆ. ಇದನ್ನವರು ಕಾದಂಬರಿಯುದ್ದಕ್ಕೂ ಬರುವ ಸ್ತ್ರೀ ಪಾತ್ರಗಳ ಮುಖಾಂತರ ಬಿಂಬಿಸಲೆತ್ನಿಸಿದ್ದಾರೆ. ಕಥಾನಾಯಕನ ದಿವಂಗತ ಮೊದಲ ಪತ್ನಿ ವೈಜಯಂತಿ,ಅವರ ಮನೆಗೆಲಸದ ಸಹಾಯಕಿ ದ್ಯಾವಕ್ಕ ಮತ್ತು ಆತನ ತಮ್ಮನ ಪತ್ನಿ ಪಾರ್ವತಿಯನ್ನು ಬಿಟ್ಟು ಉಳಿದ ಎಲ್ಲಾ ಮಹಿಳೆಯರನ್ನು ಉಗ್ರ ವಿಮೋಚನವಾದಿಗಳನ್ನಾಗಿ ಇಲ್ಲವೇ ಜಾರಿಣಿಯರನ್ನಾಗಿ, ವಂಚಕರನ್ನಾಗಿ, ಮನೆಮುರುಕರನ್ನಾಗಿ ಚಿತ್ರಿಸಿದ್ದಾರೆ. ಅವರ ಬಳೆಯಿಲ್ಲದ ಕೈ, ಕುಂಕುಮವಿಲ್ಲದ ಹಣೆ,ಸರವಿಲ್ಲದ ಕತ್ತು ಸೂತಕದ ಕಳೆಯೆಂದು ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇವರು ಹೀಗಾಗಲು ಉನ್ನತ ವಿದ್ಯಾಭಾಸ ಪಡೆದುದೇ ಕಾರಣವೆಂದು ಬಿಂಬಿಸಲಾಗಿದೆ. ಈ ವಿದ್ಯಾವಂತೆಯರೆಲ್ಲಾ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನನ್ನು ಪುರುಷರ ಶೋಷಣೆಗೆ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬುದು ಬೈರಪ್ಪನವರ ವಾದ.

ವಿವಾಹ ಬಾಹಿರ ಸಂಬಂಧಗಳು ಬೈರಪ್ಪನವರ ಹಿಂದಿನ ಕಾದಂಬರಿಗಳಲ್ಲಿ ಸಾಮಾನ್ಯ. ಆದರೆ ಅಲ್ಲೆಲ್ಲ ಅದಕ್ಕೊಂದು ತಾರ್ಕಿಕ ಹಿನ್ನೆಲೆಯಿರುತ್ತಿತ್ತು. ಆದರೆ ಇಲ್ಲಿ ಅದು ಗಂಡಸರ ಹಕ್ಕು, ಮಹಿಳೆ ಮಾಡಿದರೆ ಅಪರಾಧ ಎನ್ನುವಂತೆ ಪ್ರತಿಪಾದಿಸಲಾಗಿದೆ. ಹೆಂಗಸರ ಲೈಂಗಿಕ ಸ್ವಾತಂತ್ರ್ಯವನ್ನು ಘೋರ ಅಪರಾಧವೆಂದು ಚಿತ್ರಿತವಾಗಿದೆ. ಮಾತ್ರವಲ್ಲ ಮಹಿಳಾ ವಿಮೋಚನವಾದಿಗಳನ್ನು ಸಲಿಂಗಕಾಮಿಗಳೆಂದು ಬಿಂಬಿಸಲು ಸರಾಪ ಎಂಬ ಪಾತ್ರವನ್ನು ತರಲಾಗಿದೆ. ಡಾಕ್ಟರ್ಸ್, ಲಾಯರುಗಳು, ವಿಶ್ವವಿದ್ಯಾಲಯಗಳ ಪ್ರೋಪೆಸರುಗಳು ಸೇರಿದ ಕ್ರಿಮಿನಲ್ ಗಳ ದೊಡ್ಡ ಜಾಲವೆಂದು ಮಹಿಳಾವಾದಿಗಳನ್ನು ತೋರಿಸಲಾಗಿದೆ.

ಕಾದಂಬರಿಯಲ್ಲಿ ಬೈರಪ್ಪನವರು ಎತ್ತಿಕೊಳ್ಳುವ ಇನ್ನೊಂದು ಬಹು ದೊಡ್ಡ ಜಿಜ್ನಾಸೆ ಎಂದರೆ; ಪತ್ನಿಯಾದವಳು ಪತಿಯನ್ನು ಏಕವಚನದಲ್ಲಿ ಕರೆಯುವುದು ಸರಿಯೇ ಎಂಬುದು. ಮದುವೆಗೆ ಮೊದಲು ಮಂಗಳೆ ಏಕವಚನದಲ್ಲಿ ಕರೆದರೂ ಹಾಸುಗೆಯಲ್ಲಿ ರಸಭಂಗವಾಗದ ಕಥಾನಾಯಕ ಮದುವೆಯ ನಂತರ ಏಕವಚನದಲ್ಲಿ ಕರೆದಾಗ ನಿಷ್ಖ್ರ್‍ಇಯನಾಗುತ್ತಾನೆ. ದೊರೆರಾಜು ಎಂಬ ರಾಜಕಾರಣಿ ಮತ್ತು ಇಳಾ ಮೇಡಂ ನಡುವೆಯೂ ಏಕವಚನದ ಜಿಜ್ನಾಸೆಯಿದೆ. ಇದೇ ರೀತಿಯಲ್ಲಿ ಕಾದಂಬರಿಯುದ್ದಕ್ಕೂ ’ಮೇಲ್ ಇಗೋ’ ವಿಜೃಂಬಿಸಿದೆ.

ಸಾಮಾನ್ಯವಾಗಿ ಬೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಅಧ್ಯಯನಶೀಲತೆ ಕಾದಂಬರಿಗೆ ಆಳವನ್ನು ತಂದುಕೊಡುತ್ತದೆ; ಶೈಲಿ ಓದುಗರನ್ನು ಸೆರೆಹಿಡಿಯುತ್ತದೆ. ಆದರೆ ಕವಲಿನಲ್ಲಿ ಇವೆರಡೂ ಇಲ್ಲ. ಮೇಲ್ಮಟ್ಟದ ಸ್ತ್ರೀ ವಿರೋಧಿ ವಕಾಲತ್ತು ಇದೆ ಅಷ್ಟೆ.

ಮಹಿಳೆ ತನ್ನ ಕರ್ತವ್ಯಗಳನ್ನು ಮರೆತು ವ್ಯಯಕ್ತಿಕ ಬದುಕಿಗೆ ಮಾತ್ರ ಗಮನ ಕೊಡುತ್ತಿದ್ದಾಳೆ ಎಂಬುದು ಕಾದಂಬರಿಕಾರರ ಗ್ರಹಿಕೆ.ಆದರೆ ಭಾರತೀಯ ಸಮಾಜದಲ್ಲಿ ಗೃಹಿಣಿ ಧರ್ಮ ಇರುವಂತೆಯೇ ಗೃಹಸ್ಥ ಧರ್ಮ ಎಂಬುದಿದೆ. ಅದನ್ನು ಸ್ವಲ್ಪ ಮಟ್ಟಿಗಾದರೂ ಪಾಲಿಸಿದರೆ ಮಾತ್ರ ಕುಟುಂಬ ವ್ಯವಸ್ಥೆ ಉಳಿದುಕೊಳ್ಳಲು ಸಾಧ್ಯ. ಸ್ವಸ್ಥ ಸಮಾಜ ರೂಪುಗೊಳ್ಳಲು ಸಾಧ್ಯ. ಆ ಹೊಣೆಗಾರಿಕೆಯನ್ನು ಇವತ್ತಿನ ದಂಪತಿಗಳು ನಿಭಾಯಿಸುತ್ತಿದ್ದಾರೆಯೇ ಎಂಬುದನ್ನು ಬೈರಪ್ಪನಂಥ ಜನಪ್ರಿಯ ಕಾದಂಬರಿಕಾರರು ಶೋಧಿಸಬೇಕಾಗಿದೆ. ಒಬ್ಬ ಗಂಡಸು ಮಗನಾಗಿ, ಗಂಡನಾಗಿ, ಅಪ್ಪನಾಗಿ, ಕುಟುಂಬದ ಯಜಮಾನನಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆಯೇ? ಮಗಳಾಗಿ, ಪತ್ನಿಯಾಗಿ, ಅಮ್ಮನಾಗಿ, ಗೃಹಿಣಿಯಾಗಿ ಒಬ್ಬ ಮಹಿಳೆ ನಿರ್ವಹಿಸಿದಷ್ಟು ಹೊಣೆಗಾರಿಕೆಯನ್ನು ಒಬ್ಬ ಗಂಡಸು ನಿರ್ವಹಿಸುತ್ತಿಲ್ಲವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದನ್ನು ಕಾದಂಬರಿಕಾರನೊಬ್ಬ ಸಮಾಜಶಾಸ್ತ್ರಜ್ನನ ರೀತಿಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಬೈರಪ್ಪನವರು ಮಾಡುವುದಿಲ್ಲ ಯಾಕೆಂದರೆ ಅವರು ಅಧುನಿಕತೆಯನ್ನು ಒಪ್ಪಿಕೊಳ್ಳಲಾರರು. ಅವರ ಬದಲಾವಣೆಯೆನಿದ್ದರೂ ಸಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯೊಳಗಡೆಯೇ ಆಗಬೇಕು. ಹಾಗಾಗಿಯೇ ಜಯಕುಮಾರನ ಬುದ್ದಿಮಾಂದ್ಯ ಮಗಳನ್ನು ಅವನ ಅಕ್ಕನ ಮಗ, ವಿದೇಶದಲ್ಲಿ ಎರಡು ಹೆಂಗಸರ ಜೊತೆ ಸಂಬಂಧವಿದ್ದು ಈಗ ಭಾರತಕ್ಕೆ ಬಂದು ನೆಲೆಸಿರುವ ನಚಿಕೇತನ ಜೊತೆ ಮದುವೆ ಮಾಡಿಸಿ ಸುಖ ದಾಂಪತ್ಯದ ಮಾದರಿಯನ್ನು ಕೊಡುತ್ತಾರೆ. ಮಂಗಳೆಯನ್ನು ಶಿಕ್ಷಿಸುವ ಭರದಲ್ಲಿ ಅವಳನ್ನು ಜೀವವಿರೋಧಿಯಾಗಿ, ಭಾವನಾರಹಿತಳಾಗಿ ಚಿತ್ರಿಸಲಾಗಿದೆ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಇಂಗೀಷ್ ಪ್ರೋಪೆಸರ್ ಇಳಾಮೇಡಂ ಅನ್ನು ವ್ಯಕ್ತಿತ್ವ ಮಾರಿಕೊಂಡಂತೆ ಚಿತ್ರಿಸಿ ರಾಜಕಾರಣಿಯೊಬ್ಬನ ’ಕೀಪ್’ ಮಾಡಿದ್ದಾರೆ.

ಸ್ತ್ರಿ ಸಂವೇದನೆಗಳನ್ನು ಗೌರವಿಸುವ, ಆಕೆಯ ಅನನ್ಯತೆಯನ್ನು ಒಪ್ಪಿಕೊಳ್ಳುವ, ಸಮಾನತೆಗಾಗಿ ತುಡಿಯುವ ಎಲ್ಲರೂ ಉಪೇಕ್ಷಿಸಬೇಕಾದ ಕಾದಂಬರಿಯಿದು.

[ಜುಲೈ ೧೯ರಂದು ಕನ್ನಡ ಪ್ರಭದಲ್ಲಿ ಪ್ರಕಟವಾದ ಬರಹ]

Monday, July 5, 2010

ಮಾಧ್ಯಮಗಳಲ್ಲಿ ಮಹಾ ಕಾವ್ಯಗಳ ಮರು ಓದು
ಮಹಾ ಕಾವ್ಯಗಳು ಸೃಜನಶೀಲ ಮನಸ್ಸುಗಳನ್ನು ಮತ್ತೆ ಮತ್ತೆ ಕಾಡುತ್ತವೆ; ಕೆಣಕುತ್ತವೆ; ಅವರ ಕಲ್ಪನೆಯ ಮೂಸೆಯಲ್ಲಿ ರೂಪಾಂತರ ಹೊಂದುತ್ತವೆ. ಭಾರತೀಯ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು ಅಂಥ ಬತ್ತದ ಕಣಜಗಳು. ಪ್ರಕಾಶ ಝಾ ಮತ್ತು ಮಣಿರತ್ನರು ಆ ಕಣಜಕ್ಕೆ ಕೈ ಹಾಕಿ ’ರಾಜನೀತಿ’ ಮತ್ತು ’ರಾವಣ’ ಎಂಬ ಸಿನೇಮಾಗಳನ್ನು ತಯಾರಿಸಿದ್ದಾರೆ.ಅದ್ದೂರಿ ಪ್ರಚಾರದೊಂದಿಗೆ ತೆರೆ ಕಂಡ ಈ ಚಿತ್ರಗಳು ನಿರೀಕ್ಷೆಯ ಯಶಸ್ಸನ್ನು ಕಾಣಲಿಲ್ಲ. ಮಹಾಕಾವ್ಯದ ಹರಹನ್ನು ಹೊಂದಿರುವ ಕುವೆಂಪುರವರ ಕಾದಂಬರಿ ’ಮಲೆಗಳಲ್ಲಿ ಮದುಮಗಳು’ ಕೂಡಾ ರಂಗ ಪ್ರಯೋಗವಾಗಿ ದಾಖಲೆಯಾಯಿತೇ ಹೊರತು ಯಶಸ್ಸನ್ನು ಕಾಣಲಿಲ್ಲ ಎಂದು ನಾಟಕ ನೋಡಿದವರ ಬಾಯಿಂದ ಕೇಳಿದ್ದೇನೆ.

ಯಾಕೆ ಹೀಗೆ? ಜನ ಮಾನಸದಲ್ಲಿ ನೆಲೆ ನಿಂತಿರುವ ಕಥೆ/ಕೃತಿಯೊಂದನ್ನು ಇನ್ನೊಂದು ಮಾಧ್ಯಮಕ್ಕೆ ಅಳವಡಿಸಿದಾಗ ಪ್ರೇಕ್ಷಕ ಪೂರ್ವನಿರ್ಧಾರಿತ ಮನಸ್ಸಿನೊಂದಿಗೆ ಅದನ್ನು ನೋಡಲು ಬರುತ್ತಾನೆ. ಆತ ಮೂಲ ಕೃತಿಯೊಡನೆ ಇದನ್ನು ಹೊಲಿಸಿ ನೋಡುತ್ತಾನೆ. ನಿರ್ದೇಶಕ ಹೊಸತೇನನ್ನು ಕೊಟ್ಟಿದ್ದಾನೆ ಎಂದು ಹುಡುಕಾಡುತ್ತಾನೆ. ಪ್ರೇಕ್ಷಕನಿಗೆ ಗೊತ್ತಿದೆ; ’ಅದು’ ಇದಾಗದು. ಎಷ್ಟೆಂದರೂ ಇದು ಅದರ ರೀಮೆಕ್. ಇದೇ ಅದಾಗಲು ಪ್ರಯತ್ನಿಸಿದರೆ ಪ್ರೇಕ್ಷಕನನ್ನು ಗೆಲ್ಲಲು ಸಾಧ್ಯವಾಗದು. ಮಣಿರತ್ನಂರವರ ’ರಾವಣ’ ಅದೇ ಆಗಲು ಪ್ರಯತ್ನಿಸಿದೆ. ಸೋತಿದೆ.

ರಾವಣದಲ್ಲಿ ಕಥೆಯೇ ಇಲ್ಲ.ಕೇವಲ ದೃಶ್ಯ ವೈಭವಗಳಷ್ಟೆ ಒಂದು ಸಿನೆಮಾವನ್ನು ಗೆಲ್ಲಿಸಲು ಸಾಧ್ಯವಾಗದು. ನಿರ್ದೇಶಕನಿಗೆ ಕಥನ ಕಲೆ ಗೊತ್ತಿರಬೇಕು. ಭಾರತೀಯ ಪ್ರೇಕ್ಷಕನಿಗಂತೂ ಕಥೆಯೇ ಮುಖ್ಯ.
ರಾಜನೀತಿಯಲ್ಲಿ ಕಥೆ ಇದೆ. ಅದ್ದೂರಿ ತಾರಾ ಸಮೂಹವಿದೆ. ಆದರೆ ಹೀರೊ ಇಲ್ಲ. ಎಲ್ಲಾ ಪಾತ್ರಗಳೂ ವಿಲನ್ ಗಳೇ. ಪ್ರತಿ ಪ್ರೇಮಿನಲ್ಲಿಯೂ ನಮಗೆ ಮಹಾಭಾರತ ನೆನಪಾಗುತ್ತದೆ. ಹಾಗಾಗಿ ಸಿನೇಮಾ ವಾಚ್ಯವಾಗಿದೆ.
ಸಿನೇಮಾವೊಂದು ಬಿಡುಗಡೆಗೆ ಪೂರ್ವದಲ್ಲಿಯೇ ಇದು ಇಂತಹ ಕಾವ್ಯದ ಆಧಾರವೆಂದು ಅದ್ದೂರಿ ಪ್ರಚಾರ ನೀಡಬಾರದು. ಸಿನೇಮಾ ನೋಡಿದ ಪ್ರೇಕ್ಷಕನಿಗೆ ಮಹಾಭಾರತ ಇಲ್ಲವೆ ರಾಮಾಯಣದ ಪಾತ್ರಗಳು, ಘಟನೆಗಳು ನೆನಪಾಗಬೇಕು.

ಕುವೆಂಪುರವರ ’ಮಲೆಗಳಲ್ಲಿ ಮದುಮಗಳು’ ಮಹಾಕಾವ್ಯದ ವಿಸ್ತಾರವನ್ನು ಹೊಂದಿರುವ, ಮಲೆನಾಡಿನ ಸಮಗ್ರ ಚಿತ್ರಣವನ್ನು ಸರಳವಾಗಿ ಕಟ್ಟಿಕೊಡುವ ಬೃಹತ್ ಕಾದಂಬರಿ.ಇಂತಹ ಕಾದಂಬರಿ ರಂಗಪ್ರಯೋಗಕ್ಕೆ ಒಳಪಡುತ್ತಿದೆ ಎಂಬುದನ್ನು ಕೇಳಿದಾಗಲೇ ಅಚ್ಚರಿಯಾಗಿತ್ತು. ಕೆಲವರಿಗೆ ಅದಕ್ಕಿಂತಲೂ ಅಚ್ಚರಿಯಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದಕ್ಕೆ ಮಂಜೂರು ಮಾಡಿದ ಹಣದ ಮೊತ್ತ. ಬಹುಶಃ ಆ ಹಣದಲ್ಲಿ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ನಾಟಕೋತ್ಸವವನ್ನು ಏರ್ಪಡಿಸಬಹುದಿತ್ತು ಎಂಬುದು ಅವರ ತಕರಾರು.

ಇದೆಲ್ಲಾ ನಿಜವೇ. ಆದರೆ ಕೇಂದ್ರ ಪಾತ್ರವಿಲ್ಲದ, ಅತ್ಯಲ್ಪ ನಾಟಕೀಯ ಘಟನೆಗಳಿರುವ, ಕೇವಲ ವಿವರಣೆಗಳಲ್ಲೇ ಮಲೆನಾಡಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ೭೧೮ ಪುಟಗಳ ಮಹಾ ಕಾದಂಬರಿ’ ಮಲೆಗಳಲ್ಲಿ ಮದುಮಗಳು’ ನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸುವುದಕ್ಕೆ ಧೈರ್ಯ, ಪ್ರತಿಭೆ ಮತ್ತು ಆರ್ಥಿಕ ಸಾಮರ್ಥ್ಯ ಎಲ್ಲವೂ ಬೇಕು.

ಬಸವಲಿಂಗಯ್ಯನವರಿಗೆ ದೈರ್ಯ ಇತ್ತು. ಅವರು ನಾಟಕಕ್ಕೆ ಆಯ್ಕೆ ಮಾಡಿಕೊಳ್ಳುವ ವಸ್ತುಗಳೇ ಅದನ್ನು ಪ್ರತಿಫಲಿಸುತ್ತಿದ್ದವು. ಈ ಮೊದಲೇ ಅವರು ಕುವೆಂಪುರವರ ’ಶೂದ್ರ ತಪಸ್ವಿ’ ಕಾರ್ನಾಡರ ’ಅಗ್ನಿ ಮತ್ತು ಮಳೆ’ ದೇವನೂರು ಮಹಾದೇವರ ’ಕುಸುಮ ಬಾಲೆ’ ’ದ್ಯಾವನೂರು’ಗಳನ್ನು ರಂಗರೂಪಕ್ಕೆ ಅಳವಡಿಸಿದ್ದರು. ಇನ್ನು ಪ್ರತಿಭೆಯೂ ಇತ್ತು. ಯಾಕೆಂದರೆ ಅವರು ಎನ್ ಎಸ್ ಡಿ ಪಧವಿದರರು. ಆರ್ಥಿಕ ಸಹಾಯಕ್ಕಾಗಿ ಅವರು ಸರಕಾರದೆಡೆ ನೋಡಲೇಬೇಕಾಗಿತ್ತು. ಮೈಸೂರಿನಲ್ಲಿರುವ ’ರಂಗಾಯಣ’ ರೆಪರ್ಟರಿ ಸರಕಾರದ ಅಂಗ ಸಂಸ್ಥೆ. ಅಲ್ಲಿಯ ಕಲಾವಿದರೆಲ್ಲಾ ಸರಕಾರಿ ನೌಕರರು. ಬಸವಲಿಂಗಯ್ಯನವರಿಗೆ ಅವಕಾಶ ಒದಗಿ ಬಂತು. ಮದುಮಗಳು ರಂಗಕ್ಕೆ ಬಂದಳು.

ಮಾಧ್ಯಮಗಳಲ್ಲಿ ಮದುಮಗಳ ರಂಗಪ್ರಯೋಗದ ಬಗ್ಗೆ ಹಲವು ಅಭಿಪ್ರಾಯಗಳು ಬಂದವು. ಬೆಂಗಳೂರಿನಲ್ಲಿರುವ ನನಗೆ ಮೈಸೂರಿನಲ್ಲಿ ನಡೆದ ಪ್ರಯೋಗವನ್ನು ನೋಡಲಾಗಲಿಲ್ಲ. ಆದರೆ ಅದು ಒಂಬತ್ತು ಘಂಟೆಗಳ ಸುದೀರ್ಘ ಅವಧಿಯ ಪ್ರಯೋಗವೆಂದು ಕೇಳಿ ಮತ್ತೊಮ್ಮೆ ಅಚ್ಚರಿಯಾಯಿತು. ನಾವು ಕರಾವಳಿಯ ಜನ. ರಾತ್ರಿಯಿಡಿ, ಒಂಬತ್ತು ಘಂಟೆಗಳ ಯಕ್ಷಗಾನವನ್ನು ನೋಡುತ್ತ ಬೆಳೆದು ಬಂದವರು. ಅಂಥ ನನ್ನೂರ ಜನರೇ ಇಂದು ಮೂರು ಘಂಟೆಗಳ ಯಕ್ಷಗಾನಕ್ಕೆ ಒಗ್ಗಿಕೊಂಡಿದ್ದಾರೆ. ಯಕ್ಷಗಾನದ ಯಕ್ಷ, ಕಿನ್ನರ, ಗಂದರ್ವ ಲೋಕವೇ ಕಾಲನ ತೆಕ್ಕೆಯಲ್ಲಿ ಮಸುಕಾಗಿದೆ. ಇನ್ನು ಜೀವಂತ ರಂಗಭೂಮಿಯಾದ ನಾಟಕ ಪ್ರೇಕ್ಷಕನ ಏಕಾಗ್ರತೆಯನ್ನು ಬಯಸುತ್ತೆ. ೧೫೦ ಪಾತ್ರಗಳು,೫೮ ದೃಶ್ಯ, ೪೮ ಹಾಡು, ೬೭ ನಟರು ನಾಲ್ಕು ವಿರಾಮವಿರುವ ಈ ನಾಟಕಕ್ಕೆ ಆರು ತಿಂಗಳ ತಯಾರಿ ನಡೆಸಲಾಗಿತ್ತು.

ಖಂಡಿತವಾಗಿಯೂ ರಂಗಾಯಣ ಮಾತ್ರ ಇಂತಹ ಪ್ರಯೋಗಗಳನ್ನು ಮಾಡಲು ಸಾಧ್ಯ. ಆದರೆ ಅದನ್ನು ರಾಜ್ಯದ ಎಲ್ಲಾ ರಂಗಪ್ರೇಮಿಗಳು ನೋಡುವಂತಾಗಬೇಕು ಯಾಕೆಂದರೆ ಅದಕ್ಕೆ ವ್ಯಯವಾಗಿರೋದು ಪ್ರಜೆಗಳ ತೆರಿಗೆ ಹಣ. ಅದಕ್ಕಾಗಿ ನಾಟಕದ ಅವಧಿಯನ್ನು ಕಡಿಮೆಗೊಳಿಸಿ ಅದನ್ನು ರಾಜ್ಯಾದ್ಯಂತ ತಿರುಗಾಟಕ್ಕೆ ಅಣಿಗೊಳಿಸಬೇಕು.

ಈ ಸಂದರ್ಭದಲ್ಲಿ ಪೀಟರ್ ಬ್ರೂಕ್ ರ ’ಮಹಾಭಾರತ’ ನೆನಪಾಗುತ್ತದೆ. ಒಂಬತ್ತು ಘಂಟೆಗಳ ಈ ನಾಟಕದ ಸ್ಕ್ರೀನ್ ಪ್ಲೆಗಾಗಿ ಅವರು ಎಂಟು ವರ್ಷ ಕೆಲಸ ಮಾಡಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು ನಲ್ವತ್ತೆರಡು ಕಲಾವಿದರಲ್ಲಿ ದ್ರೌಪದಿ ಪಾತ್ರ ಮಾಡಿದ್ದು ಭಾರತದ ಮಲ್ಲಿಕಾ ಸಾರಾಭಾಯಿ. ೫ ಮಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಾದ ಈ ನಾಟಕದಲ್ಲಿ ಆಪ್ರಿಕಾದ ಕಪ್ಪು ವರ್ಣದವರೇ ಜಾಸ್ತಿಯಿದ್ದರು. ಜೊತೆಗೆ ರವೀಂದ್ರನಾಥ ಠಾಕೂರರ ಸಂಗೀತವಿತ್ತು.ಅದರ ಕಾಸ್ಟ್ಯೂಮ್ ವಾಸ್ತವಕ್ಕೆ ಹತ್ತಿರವಿತ್ತು. ಚಕ್ರವ್ಯೂಹದ ರಚನೆ ನಿರ್ದೇಶಕರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿತ್ತು. ಬಹುರಾಷ್ಟ್ರೀಯ, ಬಹುಜನಾಂಗೀಯ ಕಲಾವಿದರಿದ್ದ ಈ ತಂಡ ನಾಲ್ಕು ವರ್ಷಗಳ ಕಾಲ ಪ್ರಪಂಚದಾದ್ಯಂತ ತಿರುಗಾಟ ನಡೆಸಿತ್ತು. ಅನಂತರ ಅದು ಆರು ಘಂಟೆಗಳ ಟೀವಿ ಧಾರಾವಾಯಿಯಾಗಿ ಚಿತ್ರಿಕರಿಸಲಾಯಿತು.ಅದು ದೂರದರ್ಶನದಲ್ಲಿಯೂ ಬಿತ್ತರಗೊಂಡಿತು. ಕೊನೆಗೆ ಮೂರು ಘಂಟೆಗಳ ನಾಟಕವಾಗಿಸಿ ಅದರ ಡಿವಿಡಿ ರಿಲೀಸ್ ಮಾಡಲಾಯ್ತು.

ನಾಟಕ, ಸಿನೇಮಾದಂತಹ ಪ್ರಭಾವಿ ಮಾಧ್ಯಮಕ್ಕೆ ಸಮೂಹವನ್ನು ಸಮ್ಮೋಹನಗೊಳಿಸುವ ಶಕ್ತಿ ಇದೆ. ಅದು ನಮಗೆ ಮನರಂಜನೆಯನ್ನು ನೀಡಬೇಕು.ಇಲ್ಲವೇ ಅದು ಪ್ರದರ್ಶನದಾಚೆಯೂ ಕೆಲಕಾಲ ನಮ್ಮನ್ನು ಕಾಡಬೇಕು. ಅಥವಾ ಇನ್ಯಾವುದಕ್ಕೊ ನಮ್ಮನ್ನು ಸಕಾರಾತ್ಮಕವಾಗಿ ಪ್ರೆರೇಪಿಸಬೇಕು. ಅದ್ಯಾವುದನ್ನು ರಾವಣ ಮತ್ತು ರಾಜನೀತಿ ಮಾಡುವುದಿಲ್ಲ.
ಮಲೆಗಳಲ್ಲಿ ಮದುಮಗಳು ಏನು ಮಾಡಿದೆಯೆಂಬುದು ಮೈಸೂರಿನ ರಂಗಾಸಕ್ತರು ಮತ್ತು ಅಲ್ಲಿಗೆ ಹೋಗಿ ನಾಟಕ ನೋಡಲು ವ್ಯವಧಾನ ಮತ್ತು ಸಾಮರ್ಥ್ಯವಿದ್ದ ಕೆಲವರಿಗಷ್ಟೆ ಗೊತ್ತಾಗಿದೆ!
[ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]