Thursday, December 29, 2011

ಪ್ರೀತಿಸಿದರೆ…ರಾಕ್ಷಸರಂತೆ ಪ್ರೀತಿಸಬೇಕು!!



ಆಧ್ಯಾತ್ಮ ಸಾಧನೆಗೆ ಸಂಬಂಧಪಟ್ಟಂತೆ ಭಾರತೀಯರು ಏರಿದ ಎತ್ತರಕ್ಕೆ ಎತ್ತರಕ್ಕೆ ಸರಿಸಾಟಿಯಿಲ್ಲ. ಅವರ ಸಾಧನೆಯ ಫಲಶ್ರುತಿಯಲ್ಲಿ ಸದಾ ಆನಂದದ ಪ್ರೇಮರಸ. ಆದರೆ ಗಂಡು-ಹೆಣ್ಣಿನ ಪ್ರೇಮಕ್ಕೆ ಸಂಬಂಧಪಟ್ಟಂತೆ ಭಾರತೀಯರ ದೃಷ್ಟಿಕೋನ ವಿಶಾಲವಾಗಿಲ್ಲ.. ನಮಗೆ ಪ್ರೇಮದ ಉತ್ಕಟತೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲವೇನೋ ಎಂಬ ಗುಮಾನಿ ಬಹಳ ಹಿಂದಿನಿಂದಲೂ ನನಗಿದೆ. ಇಲ್ಲಿ ಪ್ರೇಮವೆಂಬುದು ದಾಸ್ಯದ ಹೊದಿಕೆಯಡಿ ಅಡಗಿ ಕುಳಿತಿದೆ.

ಪ್ರೇಮದ ಉತ್ಕಟತೆ ಎಂದರೆ ಎರಡು ದೇಹಗಳು, ಎರಡು ಮನಸುಗಳು ಒಂದಾಗಿ ಕರಗಿ ಹೋಗುವುದು; ಐಕ್ಯವಾಗುವುದು; ತನ್ನತನವನ್ನು ಕಳೆದುಕೊಳ್ಳುವುದು; ಶೂನ್ಯ ಸ್ಥಿತಿಯನ್ನು ತಲುಪುವುದು. ಅಂದರೆ ವರ್ತಮಾನವನ್ನು ಸಂಪೂರ್ಣವಾಗಿ ಮರೆಯುವುದು.

ಇಂತಹ ಮರೆಯುವಿಕೆ ನಮ್ಮ ಪುರಾಣ, ಇತಿಹಾಸಗಳಲ್ಲಿ ಎಲ್ಲಿಯಾದರೂ ದಾಖಲಾಗಿದೆಯೇ? ಹಾಗೆ, ಪ್ರೇಮದ ದಾಖಲಾತಿಯೆಂದು ನಮಗೆ ಅಲ್ಲಿ ಇಲ್ಲಿ ಸಿಗುವ ಒಂದೆರಡು ಉದಾಹರಣೆಗಳು ಪ್ರೇಮದ ಗಾಢವಾದ ಅನುಭವವನ್ನು ನೀಡಬಲ್ಲಷ್ಟು ಶಕ್ತವಾದುದೇ?

ದುಶ್ಯಂತ-ಶಕುಂತಲೆಯರದ್ದು ಪ್ರೇಮ ವಿವಾಹ. ಅವರದ್ದು ಮೊದಲ ನೋಟದ ಪ್ರೇಮ ಎಂದೆಲ್ಲಾ ಬಣ್ಣಿಸುವುದುಂಟು. ಆದರೆ ಅದು ನಿಜವೇ? ನಿಜವಿದ್ದಿದ್ದರೆ ಶಕುಂತಲೆಯ ದೈಹಿಕ ಸಂಪರ್ಕ ಮಾಡಿ ಅವಳನ್ನು ದುಶ್ಯಂತ ಮರೆತುಬಿಡುತ್ತಿರಲಿಲ್ಲ. ಕಾಮ ವಿಜೃಂಭಿಸಿದ ಕ್ಷಣಗಳಲ್ಲಿ ಅವರಿಬ್ಬರು ಒಂದಾಗಿದ್ದರು. ಅನಂತರ ಪುರುಷ ಸಹಜ ಗುಣದಂತೆ ಆತ ಅವಳನ್ನು ಮರೆತುಬಿಟ್ಟಿದ್ದ.

ನಳ-ದಮಯಂತಿಯನ್ನು ಅನುರೂಪ ಜೋಡಿಯೆಂದು ಹೇಳುವುದುಂಟು. ಆದರೆ ದಮಯಂತಿಗೆ ನಳ ಮಾಡಿದ್ದೇನು? ತನ್ನ ಕಷ್ಟ ಸುಖಗಳಲ್ಲಿ ನೆರಳಿನಂತೆ ಹಿಂಬಾಲಿಸಿದ್ದ ಸತಿಯನ್ನು ದಟ್ಟಡವಿಯಲ್ಲಿ ಒಂಟಿಯಾಗಿ ಬಿಟ್ಟು ಓಡಿಹೋಗಿಬಿಟ್ಟ. ಸಾಲದೆಂಬಂತೆ, ಹೋಗುವಾಗ ಅವಳುಟ್ಟ ಸೀರೆಯಲ್ಲಿ ಅರ್ಧ ಭಾಗವನ್ನೇ ಹರಿದುಕೊಂಡು ಹೋದದ್ದು ಬೇರೆ!!. ಇಂಥವನನ್ನು ದಮಯಂತಿ ಮತ್ತೆ ಹುಡುಕಿ ಯಾಕೆ ಮರು ಮದುವೆಯಾದಳೋ!

ಯಾಕೋ. ಪ್ರೇಮದ ಉತ್ಕಟತೆಯ ಬಗ್ಗೆ ಮಾತಾಡುವಾಗಲೆಲ್ಲಾ ನನಗೆ ನಮ್ಮ ಪುರಾಣಗಳ ಸಾತ್ವಿಕ ಹಿರೋಗಳು, ಆದರ್ಶಪುರುಷರು ಕಣ್ಣ ಮುಂದೆ ಬರುವುದೇ ಇಲ್ಲ. ನಮ್ಮ ಪುರಾಣಗಳ ಕಥಾ ನಾಯಕರಿಗೆ, ಪ್ರೇಮ ಎಂಬುದು ತುಂಬಾ ಕೋಮಲವಾದುದು, ಅದು ಭಾವಕೋಶಕ್ಕೆ ಸಂಬಂಧಪಟ್ಟದ್ದು ಎಂಬ ಅರಿವೇ ಇದ್ದಂತಿರಲಿಲ್ಲ.

ಹೆಣ್ಣೆಂಬುದು ಪಣಕ್ಕಿಟ್ಟ ವಸ್ತು. ಯಾರು ಬೇಕಾದರೂ ಅದಕ್ಕೆ ಆಸೆ ಪಡಬಹುದು, ಅದನ್ನು ಗೆದ್ದು ತರುವುದೇ ನ್ಯಾಯೋಚಿತವಾದುದು ಎಂಬುದು ಪ್ರಚಲಿತದಲ್ಲಿದ್ದಂತಿತ್ತು. ನಮ್ಮ ಗಂಡಸರಿಗೆ ಪ್ರೇಮ ಮತ್ತು ಯುದ್ಧದಲ್ಲಿ ಅಂತಹ ವ್ಯತ್ಯಾಸವೇನೂ ಇದ್ದಂತಿರಲಿಲ್ಲ. ಇಲ್ಲಿ ಗೆಲುವೇ ಮುಖ್ಯ. ಅದನ್ನು ಪಡೆಯುವ ದಾರಿ ಮುಖ್ಯವಾಗಿರಲಿಲ್ಲ.

ಅದರೆ ಪ್ರೇಮದಲ್ಲಿ ಸೋಲೇ ಗೆಲುವು. ಅದನ್ನು ಚೆನ್ನಾಗಿ ಅರಿತುಕೊಂಡವರು ನಮ್ಮ ಪುರಾಣಗಳಲ್ಲಿ ರಾಕ್ಷಸರೆಂದು ಬಿಂಬಿತರಾದ ರಾವಣ, ಭಸ್ಮಾಸುರ, ಕೀಚಕ, ಶರ್ಮಿಸ್ಠೆ, ಶೂರ್ಪನಖಿ,ಹಿಡಿಂಬೆ…ಮುಂತಾದವರು. ಪ್ರೇಮಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಇಂತವರ ಮುಂದೆ ರಾಮ, ದುಷ್ಯಂತರದ್ದು ಪೇಲವ ವ್ಯಕ್ತಿತ್ವವೇ.

ರಾಕ್ಷಸರೆಲ್ಲಾ ಹಾಗೆಯೇ. ಅವರು ಅತ್ಯಂತ ಮೋಹಿತರು. ಅವರು ಮೆಚ್ಚಿದವರನ್ನು ಜೀವದುಂಬಿ ಪ್ರೀತಿಸಬಲ್ಲರು. ಹಾಗೆಯೇ ಪೋಷಿಸಬಲ್ಲರು ಕೂಡಾ. ಅವರಿಗೆ ನಗರ ಸಂಸ್ಕೃತಿಯ ನಯ -ನಾಜೂಕು, ಕಪಟ-ಮೋಸಗಳು ತಿಳಿಯುತ್ತಿರಲಿಲ್ಲ. ರಾಕ್ಷಸರ ಪ್ರೇಮದ ತೀವ್ರತೆಯನ್ನು, ಆ ಉತ್ಕಟತೆಯನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಅಕ್ಕ ಮಹಾದೇವಿಯ ’ಅಪ್ಪಿದರೆ ಅಸ್ತಿಗಳು ನುಗ್ಗಿ ನುರಿಯಾಗಬೇಕು…ಮಚ್ಚು ಅಚ್ಚುಗವಾಗಿ ಗರಿದೊರದಂತಿರಬೇಕು’ ಎಂಬ ವಚನವೇ ನೆನಪಿಗೆ ಬರುತ್ತದೆ.. ಆ ಕ್ಷಣದ ಬದುಕನ್ನು ಅನುಭವಿಸುವಲ್ಲಿ ರಾಕ್ಷಸರೇ ಮುಂದು.

ಪುರಾಣಗಳಲ್ಲಿ ಚಿತ್ರಿತರಾದ ರಾಕ್ಷಸರೆಲ್ಲಾ ಈ ನೆಲದ ಮೂಲನಿವಾಸಿಗಳಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು. ಕಾಡಿನಲ್ಲಿ ವಾಸಿಸುತ್ತಿದ್ದ ಅವರ ಮೇಲೆ ನಗರ ಸಂಸ್ಕೃತಿಯ ಜನತೆ ಆಗಾಗ ದಾಳಿ ನಡೆಸುತ್ತಿದ್ದಿರಬಹುದು. ಅದಕ್ಕಾಗಿ ರಾಕ್ಷಸರು ಕೂಡಾ ಪ್ರತಿ ದಾಳಿ ಕೈಗೊಂಡಿರಬಹುದು. ಆದರೆ ಅಕ್ಷರ ಒಡೆತನ ಹೊಂದಿದ ಪುರಾಣಗಳ ಸೃಷ್ಟಿಕರ್ತರು, ತಮ್ಮ ಕೃತಿಗಳಲ್ಲಿ ಅವರನ್ನು ರಾಕ್ಷಸರೆಂದು ಅಮಾನುಷವಾಗಿ ಚಿತ್ರಿಸಿರಬಹುದು.

ನಮ್ಮ ಪುರಾಣ ಪ್ರಪಂಚದಲ್ಲಿ ರಾವಣನಿಗಿಂತ ಮಿಗಿಲಾದ ಪ್ರತಿ ನಾಯಕರಿಲ್ಲ. ಯಾರನ್ನಾದರೂ ಅತ್ಯಂತ ಹೀನಾಯವಾಗಿ, ನಿಕೃಷ್ಟವಾಗಿ ಕಾಣಬೇಕೆಂದರೆ ’ ಅವನೊಬ್ಬ ರಾವಣ’ ಎಂದುಬಿಡುತ್ತೇವೆ. ಆದರೆ, ನೀವೇ ಹೇಳಿ; ಅಂತಹ ದುಷ್ಟಕಾರ್ಯವನ್ನು ಅವನೇನು ಮಾಡಿದ್ದಾನೆ?

ಶ್ರೀರಾಮನ ಮಡದಿಯಾದ ಸೀತೆಯನ್ನು ಅಪಹರಿಸಿದ್ದು ರಾವಣನ ಮೇಲಿರುವ ಬಹುದೊಡ್ಡ ಆರೋಪ. ಸೀತೆಯನ್ನು ದೈಹಿಕವಾಗಿ ಹೊಂದಲೇ ಬೇಕೆಂಬ ಅಭೀಪ್ಸೆಯಿಂದ ಅಪಹರಿಸಿದ್ದರೆ ಅವಳನ್ನು ಬಲತ್ಕಾರ ಮಾಡಬಹುದಿತ್ತಲ್ಲವೇ? ಯಾಕೆಂದರೆ ಅವನಿಗೆ ಆ ಇತಿಹಾಸ ಇದೆ. ಹಿಂದೆ ಕುಶಧ್ವಜನ ಪುತ್ರಿಯಾದ ವೇದವತಿಯನ್ನು ಹಾಗೂ ದೇವಲೋಕದ ನರ್ತಕಿ ರಂಭೆಯನ್ನು ಆತ ಬಲತ್ಕಾರದಿಂದ ಭೋಗಿಸಿದ್ದ. ಆತ ಮಹಾ ಪರಾಕ್ರಮಿಯಾಗಿದ್ದ; ದಶಕಂಠನಾಗಿದ್ದ,ಅಂದರೆ ಸಾಮಾನ್ಯ ಮನುಷ್ಯನಿಗಿಂತ ಬುದ್ಧಿವಂತನಾಗಿದ್ದ.-ಎಂಟೆದೆಯ ಬಂಟನಂತೆ. ತೀವ್ರ ವ್ಯಾಮೋಹಿಯಾಗಿದ್ದ.

ರಾವಣನಲ್ಲಿ ಸಾತ್ವಿಕ, ರಜೋ ಮತ್ತು ತಮೋ ಗುಣಗಳು ಮೇಳೈಸಿದ್ದವು. ಅದಕ್ಕೆ ಕಾರಣವೂ ಇತ್ತು. ಆತನ ತಂದೆ ವಿಶ್ವವಸು-ಆತನ ಇನ್ನೊಂದು ಹೆಸರು ಪುಲಸ್ತ್ಯ-ಬ್ರಹ್ಮನ ಮಾನಸ ಪುತ್ರ. ತಾಯಿ ಕೈಕಸಿ. ಆಕೆ ಸುಮಾಲಿ ಎಂಬ ರಾಕ್ಷಸನ ಮಗಳು. ಇನ್ನು ರಾವಣನ ಪಟ್ಟದರಸಿ ಮಂಡೋದರಿ ರಾಕ್ಷಸರ ಶಿಲ್ಪಿಯಾದ ಮಯನ ಮಗಳು. ಆಕೆಯ ತಾಯಿ ಹೇಮೆ ಎಂಬ ಅಪ್ಸರೆ. ಇಂತಹ ಹೈಬ್ರೀಡ್ ತಳಿಯ, ವಿಭಿನ್ನ ಹಿನ್ನೆಲೆಯ ರಾವಣ ಸಹಜವಾಗಿಯೇ ಧೀರೋದಾತ್ತ ನಾಯಕನಾಗಿದ್ದ.

ರಾವಣನಿಗೆ ಸೀತೆಯಲ್ಲಿ ನಿಜವಾದ ಪ್ರೀತಿ ಹುಟ್ಟಿರಬೇಕು. ಹಾಗಾಗಿ ಅವಳನ್ನು ಅಪಹರಿಸಿ ತಂದು ಅತ್ಯಂತ ಸುಂದರ ಉದ್ಯಾನವನವಾದ ಆಶೋಕ ವನದಲ್ಲಿರಿಸಿದ. ಅವಳಿಗೆ ಇಷ್ಟವಾಗುವ ರೀತಿಯಲ್ಲಿ ತಾನು ಬದಲಾಗಲು ಯತ್ನಿಸಿದ. ತನ್ನ ನಡೆ-ನುಡಿ, ವೇಷ-ಭೂಷಣಗಳನ್ನು ಬದಲಾಯಿಸಿಕೊಂಡ. ಈ ರೀತಿಯಲ್ಲಿ ಬದಲಾದ ರಾವಣನಿಗೆ’ ಶೃಂಗಾರ ರಾವಣ’ ವೆಂಬ ಪ್ರತ್ಯೇಕ ಅಭಿದಾನವೇ ಯಕ್ಷಗಾನ ಪ್ರಸಂಗಗಳಲ್ಲಿದೆ. ಈ ಶೃಂಗಾರ ರಾವಣ ಅಪ್ಪಟ ಪ್ರೇಮಿ. ಪ್ರೇಮಿಸುತ್ತಲೇ ಕೊನೆಗೆ ಅವಳಿಗಾಗಿ ಪ್ರಾಣವನ್ನು ಕೂಡಾ ತೆರುತ್ತಾನೆ.

ಈ ರಾಕ್ಷಸರು ಛದ್ಮವೇಷಧಾರಿಗಳು. ಮೋಹಕ್ಕೆ ಒಳಗಾದಾಗ, ಪ್ರೀತಿಗೆ ಬಿದ್ದಾಗ ತಾವು ಮೆಚ್ಚಿದವರ ಕಣ್ಮನಗಳಿಗೆ ಹಿತವಾಗುವಂತೆ ಬೇಕಾದಂಥಹ ರೂಪವನ್ನು ಹೊಂದುತ್ತಿದ್ದರು. ಶೂರ್ಪನಖಿಯ ಉದಾಹರಣೆಯೇ ಸಾಕಲ್ಲ? ಅವಳದ್ದು ಪ್ರಥಮ ನೋಟದ ಪ್ರೇಮ. ಶ್ರೀರಾಮನ ರೂಪಕ್ಕೆ ಮನಸೋತಳು. ಮದುವೆಯಾಗೆಂದು ಪೀಡಿಸಿದಳು. ಪ್ರೇಮದ ಕೋಮಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಶ್ರೀರಾಮ ಅವಳೋಡನೆ ಕ್ರೂರವಾಗಿ ವರ್ತಿಸಿದ. ಅವಳ ಕಿವಿ ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸಿದ. ಹೆಣ್ತನದ ದ್ಯೋತಕವಾದ ಸ್ತನಗಳನ್ನು ಕತ್ತರಿಸಿ ಸ್ತ್ರೀತ್ವಕ್ಕೆ ಅವಮಾನ ಮಾಡಿದ ಸ್ಯಾಡಿಸ್ಟ್ ಅವನು. ಅವಮಾನಿತಳಾಗಿ, ಅಂಗಭಂಗಿತಳಾದ ಆಕೆ ತನ್ನಣ್ಣ ರಾವಣನಲ್ಲಿಗೆ ಬಂದು ರಾಮನ ಬಗ್ಗೆ ಚಾಡಿ ಹೇಳಿದಳು. ಒಬ್ಬ ಗಂಡಸನ್ನು ಕೆಣಕಬೇಕಾದರೆ, ಅವಮಾನಿಸಬೇಕಾದರೆ ಅವನ ಬಳಗಕ್ಕೆ ಸೇರಿದ ಸ್ತ್ರೀಯನ್ನು ಅಪಹರಿಸುವುದು, ಅತ್ಯಾಚಾರ ಮಾಡುವುದು, ಬೆತ್ತಲೆ ಮೆರವಣಿಗೆ ಮಾಡುವುದು ಈ ಮಣ್ಣಿನಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ರೀತಿಯಲ್ಲವೇ? ರಾವಣನೂ ಅದನ್ನೇ ಮಾಡಿದ್ದಾನೆ.

ಒಬ್ಬ ಶಿವ ಮತ್ತು ಒಬ್ಬ ಕೃಷ್ಣನ ಹೊರತಾಗಿ ಪುರಾಣದ ಯಾವ ನಾಯಕ ತಾನೆ ಸ್ತ್ರೀಯನ್ನು ಸಮಾನ ಗೌರವದಿಂದ ಕಂಡಿದ್ದಾರೆ? ರಾಮನಂತೂ ಅಲ್ಲ. ಅವನು ವಿಶ್ವಾಮಿತ್ರ ಹೇಳಿದನೆಂದು ಸ್ವಯಂವರದಲ್ಲಿ ಶೌರ್ಯ ಪ್ರದರ್ಶನ ಮಾಡಿ ಸೀತೆಯನ್ನು ಗೆದ್ದು ತಂದ. ಜೀವನದುದ್ದಕ್ಕೂ ಆ ಸುಕೋಮಲೆಯನ್ನು ಕಷ್ಟ ಕೋಟಲೆಗಳಿಗೆ ಈಡು ಮಾಡಿದ. ಕೊನೆಗೆ ಆಕೆ ಆತ್ಮಹತ್ಯೆಗೆ ಶರಣಾಗುವಷ್ಟು ಅವಮಾನಿಸಿದ. ಪಾಂಡವರು ಕೂಡಾ ಆಕಸ್ಮಿಕವಾಗಿ ದ್ರೌಪದಿಯನ್ನು ಸ್ವಯಂವರದಲ್ಲಿ ಗೆದ್ದು ತಂದವರು. ಮಾಹಾವಿಷ್ಣುವಿಗೆ ಲಕ್ಷ್ಮಿ ಸಮುದ್ರ ಮಥನದಲ್ಲಿ ಅನಾಯಸವಾಗಿ ದೊರೆತವಳು.

ಸೀತೆ, ದ್ರೌಪದಿ,ಅಹಲ್ಯೆ, ದಮಯಂತಿ ಮಂಡೋದರಿ ಸೇರಿದಂತೆ ನಮ್ಮ ಪುರಾಣದ ಯಾವ ಮಹಿಳೆಯ ಬದುಕೂ ಪ್ರೇಮಮಯ ಆಗಿರಲಿಲ್ಲ.ವಿಷಾಧದ ಎಳೆಯೊಂದು ಸದಾ ಅವರ ಬದುಕಿನಲ್ಲಿತ್ತು. ಅಂಬೆಯಂತೂ ಪುರುಷ ಸಮಾಜದಲ್ಲಿ ಪುಟ್ ಬಾಲಿನಂತೆ ಅಲ್ಲಿಂದಿಲ್ಲಿಗೆ ಒದೆಯಲ್ಪಟ್ಟವಳು. ಪ್ರತಿಭಟನೆಯ ಕುಂಡದಂತಿದ್ದರೂ ನಿಷ್ಕಾರಣವಾಗಿ ಉರಿದು ಹೋದವಳು.

ನಮ್ಮ ಪುರಾಣಗಳಲ್ಲಿ ,ಪ್ರೇಮ-ಪ್ರೀತಿಗಳನ್ನು ಹುಡುಕೋಣವೆಂದು ಹೊರಟರೆ ನಮಗೆ ಸಿಗುವುದು ಒಂದೋ, ಅನೈತಿಕ ಸಂಬಂಧಗಳು. ಇಲ್ಲವೇ, ಪುರುಷಸಿಂಹನ ಘರ್ಜನೆಗಳು. ಸ್ತೀಯರ ಕೋಮಲ ಭಾವನೆಗಳು ಎಲ್ಲೂ ದಾಖಲಾಗುವುದೇ ಇಲ್ಲ. ಹೆಣ್ಣು ಗಂಡಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾಳೆ; ಒಪ್ಪಿಸಿಕೊಳ್ಳುತ್ತಾಳೆ, ಗಂಡು ಅವಳನ್ನು ಸ್ವೀಕರಿಸುತ್ತಾನೆ. ಅರ್ಪಣೆಯ ಹಂತದಲ್ಲಿ ಆಕೆ ಆತನ ಪಾದ ಮೂಲದಲ್ಲಿ ಕುಸಿಯುತ್ತಾಳೆ. ಗಂಡು ಉದಾರತೆಯಿಂದ ಆಕೆಯನ್ನು ಮೇಲೆತ್ತುತ್ತಾನೆ. ಈ ಚಿತ್ರಣವೇ ಭಾರತೀಯರ ಚಿತ್ತ ಭಿತ್ತಿಯಲ್ಲಿ ಮೂಲ ಪ್ರತಿಮೆಯಾಗಿ ಉಳಿದುಕೊಂಡು ಬಂದಿದೆ. ಎಲ್ಲೋ ಒಂದು ಕಡೆ ಭೀಮ-ಹಿಡಿಂಬೆಯಂತ ಅಪರೂಪದ ಪ್ರೇಮ ಪ್ರಕರಣ ಇದಕ್ಕೆ ಅಪವಾದವಾಗಿ ಕಾಣುತ್ತದೆ. ಪಂಚಪಾಂಡವರಲ್ಲಿ ಮೊದಲು ಮದುವೆಯಾದವನು ಈ ಭೀಮ. ತನ್ನ ಅಣ್ಣ ಕಿಮ್ಮೀರನನ್ನು ಭೀಮ ಕೊಂದರೂ ಅವನ ಶೌರ್ಯಕ್ಕೆ ಒಲಿದು ಬಂದವಳು ಹಿಡಿಂಬೆ.

ಇನ್ನು ಕೃಷ್ಣನನ್ನು ಈ ಲೋಕದ ಯಾವ ಗಂಡಸಿಗೂ ಹೋಲಿಸುವಂತಿಲ್ಲ.ಅವನೊಬ್ಬ ಪರಿಪೂರ್ಣ ಮನುಷ್ಯ. ’ನಾನು ನಿನಗೆ ಒಲಿದಿದ್ದೇನೆ’ ಎಂದು ಬಯಸಿ ಬಂದ ರುಕ್ಮಿಣಿಯನ್ನು ಹೃದಯದರಸಿಯನ್ನಾಗಿ ಮಾಡಿಕೊಂಡರೂ ಸಮಾನತೆಯ ತುಡಿತವಿದ್ದ ಅಹಂಕಾರಿ ಸತ್ಯಭಾಮೆಯನ್ನು ಪ್ರೇಮದರಸಿಯಾಗಿ ಕಂಡ. ಸತ್ಯಭಾಮೆಯ ಸಹಚರ್ಯದಲ್ಲಿಯೇ ನರಕಾಸುರನನ್ನು ಕೊಂದು ಅವನು ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧವಿಮುಕ್ತಗೊಳಿಸಿ, ಅವರೆಲ್ಲರನ್ನೂ ತಾನೇ ಮದುವೆಯಾಗಿ ಅವರೆಲ್ಲರನ್ನೂ ಪ್ರೀತಿ ಜಲದಲ್ಲಿ ಮುಳುಗಿಸಿದ್ದ ಎನ್ನುತ್ತದೆ ಪುರಾಣ!

ರುಕ್ಮಿಣಿ-ಸತ್ಯಭಾಮೆಯರ ನಡುವೆ ಕಣ್ಣುಮುಚ್ಚಾಲೆಯಾಡುವ ಕೃಷ್ಣ ಎಳೆಯ ದಂಪತಿಗಳಿಗೆ ಮಾದರಿಯಾದರೆ ಶಿವ ಮತ್ತು ಪಾರ್ವತಿ ಪ್ರಬುದ್ಧ ದಂಪತಿಗಳಿಗೆ ಮಾದರಿಯಾಗಿ ಕಾಣುತ್ತಾರೆ. ಅವರಲ್ಲಿ ಪರಸ್ಪರ ಗೌರವ ಇದೆ; ಪ್ರೇಮ ಇದೆ. ಅದ್ಯಾವನೋ ಋಷಿ ಸ್ತ್ರೀಯರಿಗೆ ಪೂಜೆ ಸಲ್ಲಿಸುವುದಿಲ್ಲ ಎಂದಾಗ ಪಾರ್ವತಿಗೆ ತನ್ನ ಎಡಪಾರ್ಶ್ವವನ್ನೇ ಬಿಟ್ಟುಕೊಟ್ಟು ಅರ್ಧನಾರೀಶ್ವರನಾದವನು ಶಿವ.

ರಾವಣ,ಭಸ್ಮಾಸುರರಂತಹ ರಾಕ್ಷಸರನ್ನು ಹೊರತು ಪಡಿಸಿದರೆ ತೀವ್ರ ಮೋಹಿತರಾಗಿ ಬದುಕಿದವರೆಂದರೆ ಕೃಷ್ಣ ಮತ್ತು ಶಿವ ಮಾತ್ರ. ಇವರನ್ನು ಬಿಟ್ಟರೆ ನಮ್ಮ ಪುರಾಣಗಳಲ್ಲಿ ಪ್ರೇಮವೇ ಇಲ್ಲ. ಇರುವುದೆಲ್ಲಾ ಕಾಮ ಮತ್ತು ಅಹಂ ಮಾತ್ರ.

ಮೋಹವಿಲ್ಲದ ಬದುಕೊಂದು ಬದುಕೇ? ಅದರಲ್ಲೂ ಗಂಡು ಹೆಣ್ಣಿನ ಪ್ರೇಮದ ವಿಷಯಕ್ಕೆ ಬಂದಾಗ ಒಂದು ಮಿತಿಯ ಒಳಗೆ ಪೊಸೆಸಿವ್ ನೆಸ್ ಇರಲೇಬೇಕು. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ ನನಗೆ ನನ್ನ ಗಂಡ, ನನ್ನ ಗೆಳೆಯ ನನಗೆ ಸಂಪೂರ್ಣ ಬೇಕು. ಅವರನ್ನು ಶೇಖಡವಾರು ಲೆಕ್ಕದಲ್ಲಿ ಹಂಚಿಕೊಳ್ಳುವುದು ನನಗಂತೂ ಸಾಧ್ಯವಿಲ್ಲ. ತುಂಬಾ ಸಂಕುಚಿತವಾಗಿ ಯೋಚಿಸುತ್ತಿದ್ದೇನೆಂದು ಬೇರೆಯವರಿಗನಿಸಬಹುದು. ಆದರೆ ಗಮನಿಸಿ ನೋಡಿ; ನಮ್ಮ ಖಾಸಗಿ ಪ್ರಪಂಚ ತುಂಬಾ ಚಿಕ್ಕದಾಗುತ್ತಿದೆ. ನಮ್ಮನ್ನು ನಾವೇ ನಂಬದಿರುವಂಥ ಸ್ಥಿತಿಗೆ ತಲುಪಿದ್ದೇವೆ. ಹಾಗಿರುವಾಗ ನಮ್ಮವರೆಂದು ನಾವು ಒಪ್ಪಿಕೊಂಡ ಒಂದೆರಡು ಮಂದಿಯಾದರೂ ನಮ್ಮವರಾಗಿಯೇ ಉಳಿಯಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ?

[ ’ಓ ಮನಸೇ’ ಯಲ್ಲಿ ಪ್ರಕಟವಾದ ಲೇಖನ

Saturday, December 10, 2011

ಸ್ಲಟ್ ವಾಕ್; ಸಾಂಸ್ಕೃತಿಕ ಧಾಳಿ



ಸ್ಲಟ್ ವಾಕ್ [slutwalk]- ಈ ಪದವೇ ನಮಗೆ ಅಂದರೆ ಭಾರತಿಯರಿಗೆ ಅಪರಿಚಿತವಾದುದು. ಯಾಕೆಂದರೆ ಈ ಪದ ನಮಗೆ ಪರಿಚಯವಾದುದೇ ಇತ್ತೀಚಗೆ. ಇದಕ್ಕೊಂದು ಹಿನ್ನೆಲೆಯಿದೆ;

ಇದೇ ವರ್ಷ ಜನವರಿ ೨೪ರಂದು ಕೆನಡಾದ ರಾಜಧಾನಿ ಟೊರಾಂಟೊದ yark ಯೂನಿವರ್ಸಿಟಿಯಯಲ್ಲಿ ಜರುಗಿದ ‘safety form’ ಎಂಬ ಸಭೆಯಲ್ಲಿ ವಿದ್ಯಾರ್ಥಿಗಳ್ನುದ್ದೇಶಿಸಿ ಮಾತಾಡಿದ michail sanguinetti ಎಂಬ ಪೋಲಿಸ್ ಅಧಿಕಾರಿಯೊಬ್ಬರು ಭಾಷಣದ ಮಧ್ಯೆ, ’women should avoid dressing like sluts in order not to be victimized’ ಎಂದು ಹೇಳಿದರು. ಅದು ಅಲ್ಲಿದ್ದ ಮಹಿಳೆಯರನ್ನು ಕೆರಳಿಸಿತು.”

’ಸ್ಲಟ್’ ಎಂಬ ಪದಕ್ಕೆ ಕನ್ನಡದಲ್ಲಿ ಸಂವಾದಿ ಪದವನ್ನು ಹುಡುಕುವುದಾದರೆ ಅದು ’ಸೂಳೆ’ ಯೇ ಸೂಕ್ತ ಪದ.”ಮಹಿಳೆಯರು ಅಶ್ಲೀಲವಾಗಿ ಡ್ರೆಸ್ ಮಾಡಿಕೊಳ್ಳುವುದನ್ನು ಬಿಟ್ಟರೆ ಲೈಂಗಿಕ ದೌರ್ಜನ್ಯದಿಂದ ಪಾರಾಗಬಹುದು’ ಎಂಬುದು ಆ ಪೋಲಿಸ್ ಅಧಿಕಾರಿಯ ಮಾತಿನ ಭಾವಾರ್ಥ. ಆತ ಆ ಪರಿಸರದಲ್ಲಿ ಹಾಗೆ ಮಾತಾಡಿದ್ದು ಸರಿಯಾಗಿಯೇ ಇತ್ತು. ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಆತ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳುವುದು ಆತನ ಕರ್ತವ್ಯವಾಗಿತ್ತು.

ಆದರೆ ವಿದ್ಯಾರ್ಥಿಗಳು ವಿರುದ್ಧ ಸಿಡಿದೆದ್ದರು. ಅನೇಕ ಮಹಿಳಾ ಸಂಘಟನೆಗಳು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು.ಏಪ್ರೀಲ್ ೩ ರಂದು ಇವರೆಲ್ಲಾ ಸೇರಿ ಟೊರೆಂಟೊದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆ ಮೆರವಣಿಗೆಯಲ್ಲಿ ಅವರೆಲ್ಲಾ”ಸ್ಲಟ್’ ತರಹ ಡ್ರಸ್ ಮಾಡಿಕೊಂಡಿದ್ದರು. ’ನಾವು ಧರಿಸುವ ಬಟ್ಟೆ ಬದಲಾಗಬೇಕಿಲ್ಲ, ನಿಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳಿ’ ಎಂಬುದು ಮೆರವಣಿಗೆಯ ಆಶಯವಾಗಿತ್ತು.

ಅಂದರೆ ಮಹಿಳೆಯರು ತೊಡುವ ಬಟ್ಟೆ-ಬರೆ ಪುರುಷರ ಲೈಂಗಿಕ ಕಾಮನೆಗಳನ್ನು ಕೆರಳಿಸುತ್ತದೆಯೇ? ಕೆನಡಾದಂಥ ಪಾಶ್ಚಾತ್ಯ ರಾಷ್ಟ್ರವೊಂದರ ಸಾಮಾಜಿಕ ಪರಿಸರದಲ್ಲಿ ಹುಟ್ಟಿದ ಪ್ರತಿಭಟನೆಯೊಂದು ಭಾರತದಂಥ ದೇಶದಲ್ಲಿ ಪ್ರಸ್ತುತವಾಗುತ್ತದೆಯೇ? ಇದು ಈಗಿರುವ ಪ್ರಶ್ನೆ. ಇಲ್ಲಿ ಒಂದು ಸ್ಪಷ್ಟಿಕರಣವುಂಟು; ಇದು ಕೇವಲ ಪ್ರತಿಭಟನೆ ಮಾತ್ರ, ಇದನ್ನು ಕೆಲವರು ಚಳುವಳಿ ಎಂದು ತಪ್ಪಾಗಿ ಕರೆದದ್ದುಂಟು. ಪ್ರತಿಭಟನೆಗೂ ಚಳುವಳಿಗೂ ವ್ಯತ್ಯಾಸವಿದೆ.

ದೂರದ ಟೊರಾಂಟದ ಅನ್ಯ ಪರಿಸರದಲ್ಲಿ ಹುಟ್ಟಿದ ಸ್ಲಟ್ ವಾಕ್ ದೆಹಲಿ, ಭೋಪಾಲ್, ಮುಂಬೈಗಳನ್ನು ಹಾದು ಈಗ ಬೆಂಗಳೂರಿಗೂ ಕಾಲಿಟ್ಟಿದೆ. ದೆಹಲಿಯಲ್ಲಿ ಅದು ’ಬೇಶರ್ಮಿ ಮೋರ್ಚಾ’ ಆಗಿತ್ತು. ಕನ್ನಡದಲ್ಲಿ ’ನಾಚಿಗೆಗೆಟ್ಟ ಮೆರವಣಿಗೆ’ ಎನ್ನಬಹುದೇನೋ ! ಮೊನ್ನೆ ಡಿ.೪ರಂದು ಹೆಜ್ಜೆ ಗೆಜ್ಜೆ ಎಂಬ ಎನ್.ಜಿ.ಓ ಈ ಮೆರವಣಿಗೆಯನ್ನು ಏರ್ಪಡಿಸಿತ್ತು. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯು ಇದಕ್ಕೆ ಅನುಮತಿಯನ್ನು ನಿರಾಕರಿತ್ತು. ಆದರೆ ಇದರ ಆಯೋಜಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮುಂದೆ ಸ್ಲಟ್ ವಾಕ್ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಜನವರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

”ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಚೆನ್ನ’ ಎಂಬ ಭಾರತೀಯ ಪರಿಸರದಲ್ಲಿ ರೂಪಿತಗೊಂಡದ್ದು ನಮ್ಮ ಮನಸು. ಹಾಗೆಯೇ ಬಿಚ್ಚಿಟ್ಟದ್ದನ್ನು ಕೂಡಾ ಪೂಜನೀಯವಾಗಿ ಕಂಡಿದೆ ಭಾರತೀಯ ಸಂಸ್ಕೃತಿ. ಇಲ್ಲಿ ಅಕ್ಕ ಮಾಹಾದೇವಿಯ ಬೆತ್ತಲೆ ಅಶ್ಲೀಲವಲ್ಲ. ದಿಗಂಬರ ಜೈನ ಯತಿಗಳ ನಗ್ನತೆ ನಮ್ಮ ಕಾಮನೆಗಳನ್ನು ಕೆರಳಿಸುದಿಲ್ಲ; ನಾಗಾ ಸಾಧುಗಳ ನಗ್ನತೆ ಅಸಹ್ಯ ಹುಟ್ಟಿಸುವುದಿಲ್ಲ. ಗೋಮಟೀಶ್ವರನ ಭವ್ಯತೆಯೆದುರು ಮನಸ್ಸು ಬಾಗುತ್ತದೆ. ಇಲ್ಲಿಯ ನಗ್ನತೆಗೆ ಅಧ್ಯಾತ್ಮದ ಆಯಾಮವಿದೆ. ಅದು ದೈವಿಕತೆಯ ಎತ್ತರಕ್ಕೆ ಏರುತ್ತದೆ. ದೈವಿಕವಾದುದು ಆತ್ಮ ನಿಷ್ಟವಾಗಿರುತ್ತದೆ. ಲೌಕಿಕವಾದುದು ದೇಹನಿಷ್ಟವಾಗಿರುತ್ತದೆ. ನಾವು ಲೌಕಿಕರು. ನಮಗೆ ದೇಹದ ಮೇಲೆ ಮೋಹವಿದೆ. ಆಕರ್ಷಣೆಯಿದೆ. ಇಲ್ಲಿ ಕೆಲವನ್ನು ನಾವು ಮುಚ್ಚಬೇಕಾಗುತ್ತದೆ. ಮುಚ್ಚದಿದ್ದರೆ ಅದು ಆಕರ್ಶಣೆಗೆ ಒಳಗಾಗುತ್ತದೆ.ಮನೋರಂಜನೆಯಾಗಿ ಕಾಡುತ್ತದೆ. ಆಗ ಅವಾಂತರಗಳಾಗುತ್ತವೆ.

ಶೀಲ- ಅಶ್ಲೀಲತೆ ಎಂಬುದು ನೋಡುವ ನೋಟದಲ್ಲಿದೆ. ಗ್ರಹಿಸುವ ಮನಸ್ಸಿನಲ್ಲಿದೆ.ವ್ಯವಹರಿಸುವ ನಡವಳಿಕೆಯಲ್ಲಿದೆ. ಟೊರೊಂಟಾದಲ್ಲಿ ಪ್ರತಿಭಟನೆ ನಡೆದಾಗ ಅಲ್ಲಿ ಎಲ್ಲರೂ ಕನಿಷ್ಠ ಉಡುಗೆ ತೊಟ್ಟು ಬಂದಿದ್ದರು. ಅಲ್ಲಿ ಅದು ಕಾಮನ್ ಡ್ರಸ್. ಆದರೆ ಭಾರತದಲ್ಲಿ ಪ್ರತಿಭಟನೆಗಳು ನಡೆದಾಗ ಇಲ್ಲಿನ ಮಹಿಳ್ಯರು ಜೀನ್ಸ್-ಕುರ್ತಾ, ಟೀಶರ್ಟ್ ಗಳಲ್ಲಿ ಭಾಗವಹಿಸಿದ್ದರು ಇಲ್ಲಿಗೆ ಇದು ಸಹ್ಯ. ಮಹಿಳೆ ಧರಿಸುವ ಬಟ್ಟೆ ಬರೆಗಳೇ ಆಕೆಯ ಮೇಲಿನ ಅತ್ಯಾಚಾರಕ್ಕೆ ಕಾರಣವಾಗುವುದಾದರೆ ವೃದ್ದೆಯ ಮೇಲೆ, ಮಕ್ಕಳ ಮೇಲೆ, ಮುಸ್ಲಿಂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಯಾವ ಸಮರ್ಥನೆಯನ್ನು ಕೊಡುತ್ತಿರಿ? ಅದೊಂದು ಮಾನಸಿಕ ಸ್ಥಿತಿ. ಅದು ಗಂಡಸಿನ ಮನಸ್ಥಿತಿ ಅದಕ್ಕೆ ಟೊರಂಟೊದ ಗಂಡಸು ಅಥವಾ ಭಾರತೀಯ ಗಂಡಸು ಎಂಬ ಬೇಧವಿಲ್ಲ. ಅದು ಸಂಸ್ಕೃತಿ ಹೀನ ಮನಸ್ಸು ಅಷ್ಟೇ..

ಸ್ಲಟ್ ವಾಕ್ ಅನ್ನು ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ಐರೋಪ್ಯದ ಸಾಂಸ್ಕೃತಿಕ ಧಾಳಿ ಎನ್ನಬಹುದು. ಮುಕ್ತ ಮಾರುಕಟ್ಟೆಯ ಪ್ರವೇಶದಿಂದಾಗಿ ಈಗ ಎಲ್ಲವೂ ಮಾರುಕಟ್ಟೆಯ ಸರಕುಗಳೇ ಆಗಿವೆ. ಸಾಂಸ್ಕೃತಿಕ ಅನನ್ಯತೆಯೆಂಬುದು ಕೂಡಾ ಕಲಬೆರಕೆಯಾಗತೊಡಗಿದೆ.

ಸ್ಲಟ್ ವಾಕ್ ಎಂಬ ಎರವಲು ಚಿಂತನೆಯ ಪ್ರೋತ್ಸಾಹಕರಿಗೆ ಕೇವಲ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಓಡಾಡುವ ಮಹಿಳೆಯಷ್ಟೇ ಕಾಣುತ್ತಾರೆಯೇ? ನಗರ-ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿರುವ ಮಹಿಳೆಯರು ಕಣ್ಣಿಗೆ ಬೀಳುವುದಿಲ್ಲವೇ? ಅವರ ಕಷ್ಟ-ಕಾರ್ಪಣ್ಯಗಳು ಅವರ ಕಿವಿಯನ್ನು ತಲುಪುವುದಿಲ್ಲವೇ? ಅವರಿಗೆ ಪ್ರತಿಭಟನೆಯೆಂಬುದು ಕೂಡಾ ಒಂದು ಹವ್ಯಾಸವೇ? ಅವರಿಗೆ ನಿಜವಾಗಿಯೂ ಸ್ತ್ರೀಪರ ಕಾಳಜಿಗಳಿದ್ದರೆ ನಮ್ಮ ಸಮಾಜದಲ್ಲಿ ಸ್ಥೀ ಸಮಸ್ಯೆಗಳಿಗೇನು ಬರವೆ? ಸ್ತ್ರೀ ಬ್ರೂಣ ಹತ್ಯೆ,ವರದಕ್ಶಿಣೆ ಸಾವು, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ…ಹೆಣ್ಣಿನ ಬಾಳೇ ಸಂಕಷ್ಟಗಳ ಸರಮಾಲೆ.

ಇದನ್ನೆಲ್ಲಾ ಬಿಟ್ಟು ಕೆಲಸವಿಲ್ಲದ ಬಡಗಿ ಅದೇನೋ ಕೆತ್ತಿದನಂತೆ ಎಂಬ ಗಾದೆಯಂತೆ ಆಗಿದೆ”ಸ್ಲಟ್ ವಾಕ್’ ಎಂಬ ಪರದೇಶಿ ಸರಕಿಗೆ ಇಲ್ಲಿ ಮಾರುಕಟ್ಟೆ ಹುಡುಕುವ ಪ್ರಯತ್ನ!

[ ವಿಜಯ್ಅ ನೆಕ್ಸ್ಟ್ ಪೇಪರಿನಲ್ಲಿ ಪ್ರಕಟವಾದ ಲೇಖನ ]

Monday, December 5, 2011

ಮಡೆ ಮಡೆಸ್ನಾನ- ’ಗ್ರಹಿಕೆ’ ಮತ್ತು ’ಸಂವಹನ”ದ ಸಮಸ್ಯೆ

ಇಂದು ಸುಬ್ರಹ್ಮಣ್ಯದ ರಥ ಬೀದಿಯಲ್ಲಿ ನಡೆದ ಪ್ರತಿಭಟನಾ ಸಭೆ.

”ಮಡೆ ಮಡೆಸ್ನಾನ’ವೆಂಬ ಆಚರಣೆಯ ಮುಖಾಂತರ ಈಗ ಮಾಧ್ಯಮಗಳಲ್ಲಿ ಕುಖ್ಯಾತಿ ಪಡೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ನನ್ನೂರು.ಚಿಕ್ಕಂದಿನಿಂದಲೂ ಆ ಆಚರಣೆಯನ್ನು ನೋಡುತ್ತಾ ಬೆಳೆದು ಬಂದವಳು ನಾನು. ಹಾಗೆಯೇ ಈ ಆಚರಣೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಅಲ್ಲಿಯ ಮೂಲನಿವಾಸಿಗಳು ಹಾಗೂ ಗಿರಿಜನರಾದ ಮಲೆಕುಡಿಯ ಜನಾಂಗದವರನ್ನು ಹತ್ತಿರದಿಂದ ಬಲ್ಲವಳು. ಇದಲ್ಲದೆ ಇಂಥ ನಿಗೂಢ ಆಚರಣೆಗಳ ಬಗ್ಗೆ ಕನ್ನಡದ ಚಾನಲ್ಲೊಂದರಲ್ಲಿ ಟೀವಿ ಸಿರಿಯಲ್ಲನ್ನು ನಿರ್ಮಿಸಿದ ಕಾರಣದಿಂದಾಗಿ ಕರ್ನಾಟಕದಾದ್ಯಂತ ಸುತ್ತಾಡಿದವಳು ನಾನು. ಆ ಹಿನ್ನೆಲೆಯಲ್ಲಿ ಇದನ್ನು ಬರೆಯುತ್ತಿದ್ದೇನೆ.

ಋಣಾತ್ಮಕವಾದ ಕ್ರಿಯೆಯನ್ನು ಮಾಡುವುದರ ಮುಖಾಂತರ ಧನಾತ್ಮಕವಾದ ಶಕ್ತಿಯನ್ನು ಪಡೆಯುವ ಒಂದು ಪರಂಪರೆ ಭಾರತದಲ್ಲಿದೆ. ಅದಕ್ಕೆ ಉದಾಹರಣೆಯಾಗಿ ಅಘೋರಿಗಳ ಆಚರಣೆಗಳನ್ನು ಉಲ್ಲೇಖಿಸಬಹುದು. ಹಾಗೆಯೇ ದೇವರ ಸಾನಿದ್ಯವನ್ನು ಹೊಂದಲು, ಮೋಕ್ಷವನ್ನು ಪಡೆಯಲು ತನ್ನ ದೇಹವನ್ನು ದಂಡಿಸಿಕೊಳ್ಳುವುದೂ ಒಂದು ವಿಧಾನ. ಋಷಿಮುನಿಗಳು ಅದನ್ನು ಮಾಡುತ್ತಿದ್ದರು. ಅದೆಲ್ಲಾ ಸಾಧಕರ ಮಾತಾಯಿತು. ಸಾಮಾನ್ಯ ಸಂಸಾರಿಯೂ ತನ್ನ ತಿಳುವಳಿಕೆಯ ಮಿತಿಯಲ್ಲಿ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ, ಅವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳುವುದಕ್ಕಾಗಿ ಸಮೂಹದೊಂದಿಗೆ ಕೆಲವು ಆಚರಣೆಗಳನ್ನು ಹುಟ್ಟು ಹಾಕಿಕೊಂಡಿದ್ದಾನೆ. ಅದವನ ನಂಬಿಕೆಯ ಜಗತ್ತು; ನೆಮ್ಮದಿಯ ಹುಡುಕಾಟ.

ನಾನು ಮಡೆಸ್ನಾದ ಪರವಾಗಿ ಮಾತಾಡುತ್ತಿಲ್ಲ. ಆದರೆ ’ನಾನು’ ಎಂಬುದರಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ಮನುಷ್ಯ ತನ್ನ ದೇಹದ ಮೇಲಿನ ಮೋಹವನ್ನು ಕಳೆದುಕೊಂಡು ತಾನು ’ಏನೂ ಅಲ್ಲ’ವಾಗಿ ಅನ್ಯರು ಉಂಡು ಬಿಟ್ಟೆದ್ದ ಉಚ್ಛಿಷ್ಟದ ಮೇಲೆ ಉರುಳಾಡುವುದಕ್ಕೆ ಸರ್ವ ಸಮರ್ಪಣಾ ಭಾವ ಬೇಕು.

ಒಂದು ನಂಬಿಕೆ ಒಬ್ಬ ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ತಂದು ಕೊಡುವುದಾದರೆ, ಅದರಿಂದ ಬೇರೆಯವರಿಗೆ ತೊಂದರೆಯಿಲ್ಲವಾದರೆ ’ಅದನ್ನು ಮಾಡಬೇಡ’ ಎಂದು ತಡೆಯಲು ನಾವ್ಯಾರು? ’ಅದು ನಿನ್ನ ಆತ್ಮ ಗೌರವಕ್ಕೆ ಕುಂದು’ ಎಂದು ನಾವು ಹೇಳಬಹುದಷ್ಟೆ. ಆದರೆ ಅವನಿಗೆ ಬೇಕಾದ ಮಾನಸಿಕ ನೆಮ್ಮದಿಯನ್ನು ನಾವು ತುಂಬಿಕೊಡಲಾರೆವು. ನಾನು ಕಂಡಂತೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಭಯ ಭಕ್ತಿಯಿಂದ ಆಚರಿಸುತ್ತಿರುವ ಹಲವು ಆಚರಣೆಗಳು ’ಮಾನಸಿಕ ಚಿಕಿತ್ಸಾ ಕೇಂದ್ರ’ಗಳಂತೆ ಕೆಲಸ ಮಾಡುವುದನ್ನು ನಾನು ಕಂಡಿದ್ದೇನೆ. ವೈದಿಕ ಸಂಸ್ಕೃತಿಕ ತೀರಾ ಭಿನ್ನವಾದ ಜಾನಪದೀಯ ಆಚರಣೆಗಳಿವು.

ಆಚರಣೆ, ಜಾತ್ರೆ, ಉರೂಸ್, ನೇಮ, ಭೂತಕೋಲ, ನಾಗಮಂಡಲ- ಇಂತಹ ಸಾರ್ವಜನಿಕ ಸಮಾರಂಭಗಳು ಒಂದು ಊರನ್ನು ಜಾತಿ ಭೇದವಿಲ್ಲದೆ ಭಾವನಾತ್ಮಕವಾಗಿ ಬೆಸೆಯುವುದಾದರೆ ಅಲ್ಲಿ ಸೇರುವ ಮನಸುಗಳ ಬಗ್ಗೆ ನನಗೆ ಗೌರವವಿದೆ. ಆ ಅಚರಣೆಗಳಿಗೆ ವೈಜ್ನಾನಿಕ ಹಿನ್ನೆಲೆಯಿಲ್ಲದಿರಬಹುದು. ಆದರೆ ನಂಬಿಕೆಯ ಬದ್ರಕೋಟೆಯಿರುತ್ತದೆ. ಸಾಮಾನ್ಯವಾಗಿ ಈ ನಂಬಿಕೆಗಳು ಬಿತ್ತಿದ ಬೆಳೆ, ಜನ, ಜಾನುವಾರುಗಳ ಸಂರಕ್ಷಣೆ ಮತ್ತು ಧೈನಂದಿನ ಕಷ್ಟಕೋಟಲೆಗಳಿಂದ ತನ್ನನ್ನು”ರಕ್ಷೀಸಪ್ಪಾ’ ಎಂದು ಕಾಣದ ಶಕ್ತಿಯಲ್ಲಿ ಮೊರೆಯಿಡುವುದೇ ಆಗಿರುತ್ತದೆ.

ಮೊಸರಲ್ಲೂ ಕಲ್ಲನ್ನು ಹುಡುಕುವ ಸ್ವಭಾವದವರು ಜನರ ನಂಬಿಕೆಯ ಜಗತ್ತನ್ನು ಒಡೆಯುವ ಪ್ರಯತ್ನ ಮಾಡುತ್ತಲೇ ಹೋಗುತ್ತಾರೆ. ಆದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ಕಟ್ಟಿಕೊಡಲು ಇವರಿಂದ ಸಾಧ್ಯವಾಗುತ್ತಿಲ್ಲ. ಅಂದಮೇಲೆ ಆ ’ಭಂಜಕ ಪ್ರವೃತ್ತಿ’ ಸರಿ ಎನ್ನುವುದಾದರೂ ಹೇಗೆ?

ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಆಚರಣೆಯೊಂದನ್ನು ಅಷ್ಟು ಸುಲಭವಾಗಿ ನಿಷೇಧಿಸಲು ಸಾಧ್ಯವಾಗದು. ಅದು ಟೀವಿ ಕ್ಯಾಮಾರಗಳೆದುರು, ವಿಧಾನಸೌಧದ ರಾಜಬೀದಿಯಲ್ಲಿ, ದುಡ್ಡುಕೊಟ್ಟು ತಂದ ಬಾಳೆ ಎಲೆಯನ್ನು, ವಂಧಿವಾಗದರ ಕಯ್ಯಲ್ಲಿ ಹರಡಿಸಿಕೊಂಡು ಅದರ ಮೇಲೆ”ಕೇರೆ ಪೊರಳ್ದಂತೆ ಪೊರಳ್ದು’ ಯೋಗ ನಿದ್ರೆಯ ಭಂಗಿಯನ್ನು ಅಭಿನಯಿಸಿದಷ್ಟು ಸುಲಭವಲ್ಲ.

ಕಳೆದ ವರ್ಷವೇ ಮಡೆಮಡೆಸ್ನಾನ ರಾಜ್ಯಾದ್ಯಾಂತ ಸುದ್ದಿ ಮಾಡಿತ್ತು ನಾಡಿನ ಹೆಸರಾಂತ ಬರಹಗಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಎಂದಿನಂತೆ ಒಂದಷ್ಟು ಜನ ವಿಚಾರವಾದಿಗಳು ಅವರನ್ನು ಜಾತೀಯ ಕನ್ನಡಕದಿಂದ ನೋಡಿ ಅವರ ಬಾಯ್ಮುಚಿಸಿದ್ದರು. ಅದೇ ವಿಚಾರವಾದಿಗಳಿಗೆ ಆ ಆಚರಣೆಯನ್ನು ನಿಲ್ಲಿಸಲೇಬೇಕೆಂಬ ಇರಾದೆಯಿದ್ದಿದ್ದರೆ ಕುಕ್ಕೆಗೆ ಹೋಗಿ ಮಲೆಕುಡಿಯರು ಸೇರಿದಂತೆ ಅಲ್ಲಿ ಕ್ಷೇತ್ರ ಕಾರ್ಯ ನಡೆಸಿ, ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಅದನ್ನು ಸರಕಾರಕ್ಕೆ, ಮಾಧ್ಯಮಗಳಿಗೆ ಒಪ್ಪಿಸಿ ಆ ಕುರಿತು ಜನ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಬದಲಾವಣೆಯೆಂಬುದು ಒಂದು ನಿಧಾನಗತಿಯ ಪ್ರಕ್ರಿಯೆ. ಅದು ಸರಕಾರದ ನಿಷೇಧದಿಂದಾಗಲಿ ನೇರ ಪ್ರತಿಭಟನೆಯಿಂದಾಗಲಿ ಸಾಧ್ಯವಾಗಲಾರದು. ಅದಕ್ಕೆ ಮನಃ ಪರಿವರ್ತನೆ ಆಗಬೇಕು.

ಎಂಜಲೆಲೆಯ ಮೇಲೆ ಹೊರಳಾಡುವುದು ಆ ಆಚರಣೆಯ ಹೊರಗಿನಿಂದ ನಿಂತು ನೋಡುವವರಿಗೆ ಅಸಹ್ಯವಾಗಿ ಕಾಣಬಹುದು ಆದರೆ ಅದರಲ್ಲಿ ಭಾಗವಹಿಸುವವರಿಗೆ ಅಲ್ಲ.

ಮೊನ್ನೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಟಿಯಂದು ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳ ಅಧ್ಯಕ್ಷರಾದ ಶಿವರಾಮ್ ಮೇಲೆ ಹಲ್ಲೆ ನಡೆಯಿತು. ಅವರು ಬಂದಿದ್ದು ಯಾಕೆ? ಸತ್ಯಶೋಧನೆಗಾಗಿ. ಸತ್ಯ ಶೋಧನೆಗಾಗಿ ಬರುವವರು ಬಿರುದು ಬಾವಲಿಗಳ ಸಮೇತ ದಾಂ ದೂಂ ಎಂದು ಬರಬಾರದು. ಹಾಗೆ ಬರಲು ಇದೇನೂ ಪವಾಡ ಬಯಲು ಮಾಡುವ ಕಾರ್ಯಕ್ರಮ ಅಲ್ಲ. ನಮ್ಮ ಕನ್ನಡ ಪಂಡಿತರು ಹೇಳುತ್ತಿದ್ದ ಮಲೆಯಾಳಿ ಗಾದೆಯೊಂದು ನೆನಪಾಗುತ್ತದೆ, ಅವರು ಹೇಳುತ್ತಿದ್ದರು; ’ಕೇರೆ ತಿನ್ನುವ ಊರಿಗೆ ಹೋದಾಗ ಮಧ್ಯಕ್ಕೆ ಕೈ ಹಾಕು’ ಅಂಥ. ಕೇರೆ ಅಂದರೆ ಕೇರೆ ಹಾವು. ಅಂದರೆ ಅಲ್ಲಿ ಸೇರಿರುವ ಬಹುಸಂಖ್ಯಾತರ ಮಧ್ಯೆ ನೀನೊಬ್ಬ ಬಿನ್ನವಾಗಿ ಕಾಣಿಸಿಕೊಂಡರೆ ಅಲ್ಲಿ ಸೇರಿದವರು ನಿಮ್ಮನ್ನು ಅನುಮಾನದಿಂದ ಕಾಣುತ್ತಾರೆ. ನಿಮಗೆ ಬೇಕಾದ್ದು ಸಿಗುವುದಿಲ್ಲ. ನಾವು ಇಂಥ ಆಚರಣೆಗಳ ಚಿತ್ರಿಕರಣಕ್ಕೆ ಹೋದಾಗ ಭಕ್ತರಲ್ಲಿ ಒಬ್ಬಳಾಗಿ ಮಿಳಿತಗೊಂಡಿದ್ದೇನೆ. ಅವುಗಳನ್ನು ಎಂದೂ ಅವಹೇಳನ ಮಾಡುವುದಾಗಲಿ ಅಥವಾ ಪ್ರಶ್ನಿಸುವುದಾಗಲಿ ಮಾಡಿಲ್ಲ. ತುಳುನಾಡಿನಲ್ಲಿ ಭೂತ ಸ್ಥಾನಗಳಿಗೆ ಮಹಿಳೆಯರ ಪ್ರವೇಶವಿಲ್ಲ. ಅಲ್ಲಿ ಚಿತ್ರಿಕರಣ ಮಾಡುವಾಗ ನಾನು ನಮ್ಮ ಕ್ಯಾಮಾರಮ್ಯಾನ್ ಗೆ ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ ಹೊರತು ನಮಗೂ ಅಲ್ಲಿ ಪ್ರವೇಶ ನೀಡಿ ಎನ್ನಲಿಲ್ಲ. ಪಣೋಲಿಯಂತ ಕಲ್ಲುರ್ಟಿ ಭೂತ ಸ್ತಾನದಲ್ಲಿ ನನ್ನ ಕಣ್ಣಳತೆಯಲ್ಲೇ ಸಾವಿರಾರು ಕೋಳಿಗಳನ್ನು ಕತ್ತು ಹಿಸುಕಿ ಕೊಂದು, ಅದನ್ನು ಪದಾರ್ಥ ಮಾಡಿ,ದೈವಕ್ಕೆ ಎಡೆ ಇಟ್ಟು, ಅದನ್ನೇ ಪ್ರಸಾದವೆಂದು ಕೊಟ್ಟಾಗ ಅದನ್ನು ತಿರಸ್ಕರಿಸಿ ಬರಲು ನನಗಾಗಲಿಲ್ಲ

ಕೆಲವು ಸೂಕ್ಷ್ಮ ವಿಷಯಗಳಿಗೆ ನಾವು ಸೂಕ್ಷ್ಮವಾಗಿಯೇ ಸ್ಪಂದಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಇಲ್ಲಿರುವುದು ’ಗ್ರಹಿಕೆ’ ಮತ್ತು ’ಸಂವಹನ’ ದ ಸಮಸ್ಯೆ. ಹೇಳಿಕೆಗಳು ಗ್ರಹಿಕೆಗಳಾಗುವುದಿಲ್ಲ.

ಈಗ ಮಾಡಬಹುದಾದದ್ದು ಇಷ್ಟೇ; ಮುಂದಿನ ವರ್ಷ ದೇವಸ್ಥಾನ ಒಳಪ್ರಾಂಗಣದಲ್ಲಿ ಬ್ರಾಹ್ಮಣರಿಗಾಗಿಯೇ ನಡೆಸುವ ವಿಶೇಷ ಭೋಜನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಅವರು ಊಟ ಮಾಡಿದ ಎಂಜಲೆಲೆಯ ಮೇಲೆ ತಾನೇ ಭಕ್ತರು ಉರುಳುವುದು? ಬ್ರಾಹ್ಮಣರು ಅಲ್ಲಿ ಊಟ ಮಾಡದ ಮೇಲೆ ಭಕ್ತರು ಇನ್ನೆಲ್ಲಿ ಉರುಳುತ್ತಾರೆ?. ಹೇಗಿದ್ದರೂ ಅಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗಾಗಿಯೇ ಸುಸಜ್ಜಿತವಾದ ವಿಶಾಲ ಭೋಜನ ಶಾಲೆ ಇರುವಾಗ ವಿಷೇಶ ಪಂಕ್ತಿಯ ಅವಶ್ಯಕತೆ ಇಲ್ಲ. ಒಂದು ವೇಳೆ ಭಕ್ತರು ಈಗಾಗಲೇ ಹರಕೆ ಹೇಳಿಕೊಂಡಿದ್ದರೆ, ಅವರಿಗೆ ಉರುಳಲೇಬೇಕೆಂದರೆ, ಅವರಿಗೆ ಪಾಪಪ್ರಜ್ನೆ ಕಾಡಿದರೆ ಒಳಪ್ರಾಂಗಣದಲ್ಲಿ ನೆಲದ ಮೇಲೆಯೇ ಉರುಳಿದರಾಯ್ತು. ಕಾಲಕ್ರಮೇಣ ಭಕ್ತರಲ್ಲಿ ತಿಳುವಳಿಕೆ ಮೂಡಿ ಅದು ನಿಂತು ಹೋಗಬಹುದು. ಇಲ್ಲವೇ ರೂಪಾಂತರ ಹೊಂದಬಹುದು.ಶಿರಸಿಯ ಮಾರಿಕಾಂಬ ದೇವಸ್ಥಾನದಲ್ಲಿ ಕೋಣ ಕಡಿಯುವುದರ ಬದಲು ಸಿರಿಂಜ್ ನಲ್ಲಿ ಸ್ವಲ್ಪ ರಕ್ತ ತೆಗೆದು ದೇವಿಗೆ ಅಭಿಶೇಕ ಮಾಡುವುದಿಲ್ಲವೇ?

ಆದರೆ ಜನರನ್ನು ಸರಿ ದಾರಿಯಲ್ಲಿ ಮುನ್ನಡೆಸಬೇಕಾದ ಸರಕಾರವೇ ಇಂಥ ಹೀನ ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಇಳಿಯಬಾರದು. ಡಾ. ವಿ.ಎಸ್. ಆಚಾರ್ಯ ಪ್ರಕಾರ ಮಡೆಸ್ನಾನದಿಂದ ಚರ್ಮ ರೋಗ ವಾಸಿಯಾಗುತ್ತದೆ. ಜನಾರ್ಧನ ಪೂಜಾರಿಯವರ ಹೇಳಿಕೆ ಇನ್ನೂ ಮಜವಾಗಿದೆ. ಅವರ ಪ್ರಕಾರ ಎಂಜಲೆಲೆಯ ಮೇಲೆ ಉರುಳಿದರೆ ಏಡ್ಸ್ ಬರುತ್ತದೆಯಂತೆ!.ಅವರ ಈ ಹೇಳಿಕೆ ಇಂಟರ್ನೆಟ್ ನಲ್ಲಿ ಜೋಕ್ ಆಗಿ ಹರಿದಾಡುತ್ತಿದೆ.

ಇಲ್ಲಿ ಸರಕಾರ ಇನ್ನೊಂದು ಕೆಲಸ ಮಾಡಬಹುದು; ಧಾರ್ಮಿಕ ಧತ್ತಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳಿಗೆ ಹರಿಜನ ಮತ್ತು ಹಿಂದುಳಿದ ವರ್ಗಗಳ ಪೂಜಾರಿಗಳನ್ನೇ ನೇಮಿಸುವುದರ ಬಗ್ಗೆಯೂ ಚಿಂತನೆ ನಡೆಸಬಹುದು. ಇದರ ಜೊತೆಗೆ ದೇವಾಲಯದ ಆಡಳಿತ ಮಂಡಳಿಗಳಿಗೆ ಸರಕಾರವೇ ನಿಗಮ ಮಂಡಳಿಗಳ ಮಾದರಿಯಲ್ಲಿ ಸದಸ್ಯರ ನಾಮನಿರ್ದೇಶನ ಮಾಡಬಹುದು.

ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಬಹುದು. ಅವರ ಮನವೊಲಿಕೆಯ ಪ್ರಯತ್ನ ಈಗಿನಿಂದಲೇ ನಡೆಯಬೇಕು. ವಿಚಾರವಾದಿಗಳು ಟೀವಿ, ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟು, ಪ್ರೀಡಂ ಪಾರ್ಕ್ ನಲ್ಲಿ ಧರಣಿ ಕೂರುವುದಕ್ಕಷ್ಟೇ ತಮ್ಮ ಹೋರಾಟವನ್ನು ಸೀಮಿತಗೊಳಿಸಬಾರದು. ಎಲ್ಲಾ ದಲಿತ ಪರ ಹೋರಾಟಗಾರರು, ಎಡಪಂಥೀಯ ಚಿಂತಕರು ಹೀನ ಆಚರಣೆಗಳಲ್ಲಿ ತೊಡಗಿಕಿಕೊಂಡಿರುವ, ಮೌಡ್ಯದಲ್ಲಿ ಬಿದ್ದಿರುವ ತಮ್ಮ ಬಂಧುಗಳಲ್ಲಿ ಅರಿವನ್ನು ಬಿತ್ತುವ, ಅವರನ್ನು ಎಜ್ಯುಕೇಟ್ ಮಾಡುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಪರಿಸ್ಥಿತಿ ಎಷ್ಟೊಂದು ಸೂಕ್ಷ್ಮವಾಗಿದೆಯೆಂದರೆ ಮೇಲ್ಜಾತಿಯವರೇನಾದರೂ ಈ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರು ಯಾವ ಪಕ್ಷಕ್ಕೆ ಸೇರಿದವರು? ಅವರಿಗೆ ಇದರಿಂದೇನು ಲಾಭ? ಇದು ಕೂಡಾ ಕೆಳಜಾತಿಯವರನ್ನು ಬ್ರೈನ್ ವಾಶ್ ಮಾಡುವ ತಂತ್ರವಿರಬಹುದೇ ಎಂಬ ಗುಮಾನಿಯಿಂದಲೇ ನೋಡುವ ಸನ್ನಿವೇಶ ಈಗ ಎಲ್ಲೆಲ್ಲಿಯೂ ಕಾಣುತ್ತಿದೆ. ಹಾಗಾಗಿ ಸೂಕ್ಷ್ಮ ಸಂವೇದಿ ಮನಸ್ಸಿನವರು ತಮ್ಮ ಅಭಿಪ್ರಾಯವನ್ನು ಹೇಳುವುದಕ್ಕೇ ಹೆದರುವ ಪರಿಸ್ಥಿತಿ ಈಗ ಉಂಟಾಗಿದೆ. ಪರ- ವಿರೋಧದಾಚೆ ಒಂದು ಸಮನ್ವಯದ ದೂರಗಾಮಿ ವಿಚಾರಧಾರೆಯೂ ಇರುತ್ತದೆ ಎಂಬುದನ್ನೇ ಕೆಲವರು ಮರೆತಂತಿದೆ.

ಇಂದು ಬೆಂಗಳೂರಿನಲ್ಲಿ ನಿಡುಮಾಮಿಡಿಸ್ವಾಮೀಜಿ , ಜಿ.ಕೆ ಗೋವಿಂದರಾವ್, ಏ.ಕೆ ಸುಬ್ಬಯ್ಯ, ನಿವೃತ್ತ ನ್ಯಾಯಾದೀಶ ಎಂಎಫ಼್ ಸಾಲ್ದಾನ, ಬಿ.ಟಿ. ಲಲಿತಾನಾಯಕ್, ಬಂಜಗೆರೆ ಜಯಪ್ರಕಾಶ್, ಕೋಡಿಹೊಸಹಳ್ಳಿ ರಾಮಣ್ಣ, ಜಾಣಗೆರೆ ವೆಂಕಟರಾಮಯ್ಯ, ಡಾ.ಹಿ.ಶಿ.ರಾಮಚಂದ್ರಗೌಡ, , ಹಿಂದುಳಿದ ವರ್ಗಗಳ ಜಾಗೃತ ವೇದಿಕೆಗಳ ಅಧ್ಯಕ್ಷ ಶಿವರಾಮ್ ಸೇರಿದಂತೆ ಅನೇಕ ಪ್ರಗತಪರರು ಭಾಗವಹಿಸಿದ್ದರು. ಅನೇಕ ವಿಚಾರವಾದಿಗಳು ಮಡೆಸ್ನಾನದ ವಿರುದ್ದ ಪ್ರೆಡಂ ಪಾರ್ಕಿನಲ್ಲಿ ಧರಣಿ ನಡೆಸಿದರು.ಹಾಗೆಯೇ ಸುಬ್ರಹ್ಮಣ್ಯದಲ್ಲಿಯೂಈ ವಿವಾದದಿಂದ ನೊಂದ ಅಲ್ಲಿಯ ನಾಗರಿಕರು ಮತ್ತು ಭಕ್ತರು ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಇಂದು ಸುಬ್ರಹ್ಮಣ್ಯ ಬಂದ್ ಆಚರಿಸಿದರು. ರಥಬೀದಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುಮಾರು ಐದು ಸಾವಿರ ಜನ ಭಾಗವಹಿಸಿದ್ದರು.

ಇದು ಮುಂದೆ ಯಾವ್ಯಾವ ರೀತಿಯ ಸಂಘರ್ಷಗಳಿಗೆ ಕಾರಣವಾಗಬಹುದೋ ಈಗಲೇ ಹೇಳಲಾಗದು.