Friday, July 31, 2009

ನಿಮ್ಮೊಳಗಿನ ’ಬಿಂಬ’ ಯಾರದು?





ಕಳೆದ ವಾರ ನಾನು ಬೆಂಗಳೂರಿನಲ್ಲಿ ಬೆನಕ ತಂಡದ ’ಗೋಕುಲ ನಿರ್ಗಮನ’ ನೋಡಿದೆ. ಪು.ತಿ.ನರ ಈ ಗೀತ ನಾಟಕದ ಹಿಂದಿನ ಭಾವವನ್ನು ಮನಸ್ಸು ಹಿಡಿಯಲೆತ್ನಿಸುತ್ತಿತ್ತು.

ನನ್ನಂತವರ ಮನಸ್ಸಿನಲ್ಲಿ ಯಾವಾಗಲೂ ಕೃಷ್ಣ-ರಾಧೆಯರು ಆದರ್ಶ ಪ್ರೇಮಿಗಳಾಗಿಯೇ ಮೂಡಿಬರುತ್ತಾರೆ. ಅವರ ವಿರಹ ಮತ್ತು ಮಿಲನದ ಹಂಬಲ ಮನುಕುಲದ ಹೆಣ್ಣು ಗಂಡಿನ ಸಂಬಂಧದ ನಿರಂತತೆಗೆ ಸಾಕ್ಷಿಯೆನಿಸುತ್ತದೆ.

ಸಂಸಾರದ ತಿರುಗಣೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಗೋಪಿಕೆಯರಿಗೆ ಕೃಷ್ಣನ ಕೊಳಲಗಾನ ಬಿಡುಗಡೆಯ ಬೆಳಕಾಗಿತ್ತು. ಅದು ಅವರು ಕಂಡುಕೊಂಡ ಸುಖದ ಒಳಹಾದಿ. ಆ ಹಾದಿ ಒಂದು ದಿನ ಶಾಶ್ವತವಾಗಿ ಮುಚ್ಚಿ ಹೋಗುತ್ತದೆ. ಆಗ ಅವರು ಅನುಭವಿಸಿದ ನೋವು, ಸಂಕಟ, ಆಕ್ರಂದನ ಪ್ರೇಕ್ಷಕರ ಎದೆಯೊಳಕ್ಕೂ ಇಳಿಯುತ್ತಿತ್ತು.

ಯಾಕೋ ಗೊತ್ತಿಲ್ಲ; ಕೃಷ್ಣ ಎಂದೊಡನೆ ನಾನು ಅಂತರ್ಮುಖಿಯಾಗುತ್ತೇನೆ. ಇಂದ್ರಿಯಗಮ್ಯವಾದುದಕ್ಕಿಂತ ಹೆಚ್ಚಿನದೇನನ್ನೋ ಈ ಹೆಸರಿನಲ್ಲಿ ಕಾಣಲೆತ್ನಿಸುತ್ತೇನೆ.

ಬಿಡುಗಡೆಯ ಹಂಬಲ ಮತ್ತು ಅನನ್ಯತೆಯ ತುಡಿತ ಪ್ರತಿ ಮನಷ್ಯನಲ್ಲೂ ಇರುತ್ತದೆ. ಬಹಳ ಕಾಲದಿಂದ ನನಗೂ ಸ್ವಲ್ಪ ಕಾಲ ಒಂಟಿಯಾಗಿ ಇರಬೇಕೆನಿಸುತ್ತಿತ್ತು. ಅಲ್ಲಿ ಟೀವಿ ಇರಬಾರದು. ಮೊಬೈಲ್ ಪೋನ್ ರಿಂಗಣಿಸಬಾರದು. ಅತಿ ಪರಿಚಿತ ಮುಖಗಳಿರಬಾರದು. ಬಾಲ್ಯಕ್ಕೆ ಮರಳಿದ ಹಾಗಿರಬೇಕು. ಹಾಗಾಗಿಯೋ ಏನೋ ನಾನು ಹೆಗ್ಗೋಡಿನಲ್ಲಿರುವ ನೀನಾಸಂನ ಸಂಸ್ಕೃತಿ ಶಿಬಿರಕ್ಕೆ ಬಂದುಬಿಟ್ಟೆ.

ನಮ್ಮ ಸುಪ್ತ ಮನಸ್ಸಿನಲ್ಲಿ ಪಡಿಮೂಡಿದ ಘಟನೆಗಳು, ಭಾವಕೋಶದಲ್ಲಿ ಸೇರಿಹೋದ ವ್ಯಕ್ತಿಗಳು, ಮಧುರ ನೆನಪುಗಳು ಕನಸಿಗೆ ಬಂದು ಕಾಡಬಹುದು; ಅಥವಾ ವರ್ತಮಾನದಲ್ಲಿ ಎದುರಿನಲ್ಲಿ ಘಟಿಸಿದಂತೆ, ಪ್ರತ್ಯಕ್ಷವಾದಂತೆ ಭಾಸವಾಗಬಹುದು. ಹೆಗ್ಗೋಡಿನಲ್ಲಿಯೂ ಹಾಗೆ ಆಯ್ತು. ಇಲ್ಲಿನ ಸಂಘಟಕರೊಬ್ಬರನ್ನು ಕಂಡಾಗ ನನಗೆ ನನ್ನ ಬಾಲ್ಯದ ಒಡನಾಡಿ ಶರಧಿಯನ್ನೇ ಕಂಡಂತಾಯ್ತು.

ಬೇಕಾದರೆ ಸ್ವಲ್ಪ ಹಿಂದಕ್ಕೆ ಹೋಗಿ ನೋಡಿ; ನಿಮಗೆ ಆತ್ಮೀಯರಾದವರ, ನಿಮ್ಮ ಮೇಲೆ ಪ್ರಭಾವ ಬೀರಿದವರ ಮುಖಗಳನ್ನು ಕಣ್ಣಮುಂದೆ ತಂದುಕೊಳ್ಳಿ. ಅವುಗಳಲ್ಲೊಂದು ಸಾಮ್ಯತೆ ಕಂಡುಬರುತ್ತದೆ. ಕೆಲವರ ಸಾನಿಧ್ಯದಲ್ಲಿ ನೀವು ತುಂಬಾ ಕಂಫರ್ಟಬಲ್ ಆಗಿ ಇರಬಲ್ಲಿರಿ. ಈ ಸುರಕ್ಷತೆಯ ಭಾವನೆ ಸುಮ್ಮನೆ ಬರುವುದಿಲ್ಲ. ನಿಮ್ಮ ಮನಸ್ಸು ಇಂದ್ರಿಯಾತೀತವಾದ ಯವುದೋ ಒಂದನ್ನು ಇಲ್ಲಿ ಅನುಭವಿಸುತ್ತಿರುತ್ತದೆ. ಆಧುನಿಕ ಪರಿಭಾಷೆಯಲ್ಲಿ ಇದನ್ನು ವೇವ್ ಲೆಂಗ್ತ್ ಅಂತ ಬೇಕಾದರೆ ಕರೆಯಬಹುದು.

ನೀನಾಸಂಗೆ ಬಂದೆ ಎಂದು ಹೇಳಿದೆನಲ್ಲಾ... ಅಲ್ಲಿ ತಂಗಿದ ಮೊದಲ ರಾತ್ರಿಯೇ ನನಗೆ ಕನಸಿನಲ್ಲಿ ಶರಧಿ ಕಾಣಿಸಿಕೊಂಡ. ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಅವಧಿಯ ನಂತರ ಮೊತ್ತ ಮೊದಲ ಬಾರಿಗೆ ನನ್ನ ಕನಸಿನಲ್ಲಿ ಶರಧಿ ಬರುವುದೆಂದರೆ ಅದರ ಅರ್ಥ ಏನಿದ್ದೀತು? ನನ್ನ ಜಾಗೃತ ಮನಸ್ಸಿನ ಅರಿವಿಗೆ ಬಾರದಂತೆ ಸುಪ್ತ ಮನಸ್ಸಿನಲ್ಲಿ ಆತ ಮನೆ ಮಾಡಿಕೊಂಡಿದ್ದನೇ? ನನಗೇ ಅಚ್ಚರಿಯೆನಿಸತೊಡಗಿತು.

ಶರಧಿ ಕಾಣಿಸಿಕೊಂಡಿದ್ದಾದರೂ ಹೇಗೆ? ಆತ ಒಂದು ಕುರ್ಚಿಯ ಮೇಲೆ ಕುಳಿತಿದ್ದಾನೆ. ಎದುರುಗಡೆ ಸ್ಟ್ಯಾಂಡ್ ಮೇಲೆ ಒಂದು ಕ್ಯಾನ್ವಾಸಿದೆ. ಕುಂಚದಿಂದ ಅದರ ಮೇಲೆ ಎನೋ ಮೂಡಿಸುತ್ತಿದ್ದಾನೆ. ಸ್ವಲ್ಪ ಹಿಂದೆ ನಿಂತಿದ್ದ ನಾನು ಅವನನ್ನು ಹಾದು ಹೋಗುವಾಗ ಬಲಗೈಯಿಂದ ಅವನ ತಲೆಗೂದಲನ್ನು ಕೆದರಿ ಮುಂದಡಿಯಿಟ್ಟೆ. ತಟ್ಟನೆ ಅವನು ನನ್ನ ಕೈ ಹಿಡಿದೆಳೆದ. ನಾನು ಅಚ್ಚರಿಯಿಂದ ಅವನತ್ತ ನೋಡಿದೆ. ಅಷ್ಟೇ, ಎಚ್ಚರಾಯಿತು.

ನಿಜದ ಬದುಕಿನಲ್ಲಿ ಒಮ್ಮೆಯೂ ನನ್ನ ಬೆರಳನ್ನು ಕೂಡ ಸೋಕಿರದ ಆತ ನನ್ನ ಕೈ ಹಿಡಿದೆಳೆಯುವುದೆಂದರೆ.....! ಅಥವಾ ನಾನವನ ಕೂದಲನ್ನು ಕೆದರುವುದೆಂದರೆ..... ಬಹುಶಃ ನನ್ನ ಮನಸ್ಸಿನಾಳದ ಬಯಕೆ ಈ ರೀತಿ ಕನಸಿನಲ್ಲಿ ಹೊರಹೊಮ್ಮಿರಬಹುದೇ?

ನಿಜ. ನನಗೆ ತುಂಬಾ ಇಷ್ಟವಾದವರನ್ನ ನಾನು ತುಂಬಾ ಕೀಟಲೆ ಮಾಡುತ್ತೇನೆ. ಸುಮ್ಮ ಸುಮ್ಮನೆ ರೇಗಿಸಿ ಖುಷಿ ಪಡುತ್ತೇನೆ. ಒಮ್ಮೊಮ್ಮೆ ಅದು ಕ್ರೌರ್ಯ ಅನ್ನಿಸಿ ಸಂಕಟಪಡುತ್ತೇನೆ. ಆದರೆ ಅವರು ನನ್ನವರು. ಹಾಗಾಗಿ ಅಂತರಾಳದಿಂದ ಕ್ಷಮೆ ಬೇಡುತ್ತೇನೆ. ಅವರು ಕೂಡ ಮನ್ನಿಸಿಬಿಡುತ್ತಾರೆ.

ಇಂಥವರು ಬೆರಳೆಣಿಕೆಯ ಸಂಖ್ಯೆಯಲ್ಲಿ ವ್ಯಕ್ತಿಯೊಬ್ಬರ ಬದುಕಿನಲ್ಲಿರುತ್ತಾರೆ. ಅಂಥವರಲ್ಲಿ ಸಹಜವಾಗಿ ಪರಸ್ಪರ ಸಲಿಗೆಯಿರುತ್ತದೆ. ಭುಜ ಮುಟ್ಟಿ, ಕೂದಲು ಕೆದರಿ,ಕೈ ಬೆರಳುಗಳಲ್ಲಿ ಆಟವಾಡುತ್ತಾ ಮಾತಾಡಬಹುದು.

ಶರಧಿ ನನ್ನ ಕಣ್ಣೆದುರಿನಲ್ಲಿ ಚಿಕ್ಕಂದಿನಿಂದಲೂ ಇದ್ದರೂ ಆತ ಮನಸ್ಸಿಗೆ ಬಿದ್ದದ್ದು ಏಳನೇ ತರಗತಿಯಲ್ಲಿದ್ದಾಗ. ಅದು ನಾನು ಹದಿಹರೆಯಕ್ಕೆ ಕಾಲಿಡುತ್ತಿರುವ ಸಮಯ. ಆಗ ಆತನ ವಯಸ್ಸು ನನಗಿಂತ ಎರಡು ಪಟ್ಟಿಗಿಂತಲೂ ಜಾಸ್ತಿ. ಆಗಲೇ ಆತ ನೌಕರಿ ಹಿಡಿದು ಹತ್ತಾರು ವರ್ಷ ಕಳೆದಿತ್ತು. ಆತ ನನ್ನ ಕನಸುಗಳಿಗೆ ಮಾದರಿಯಾಗಿದ್ದ.

ನಾನು ಚಿಕ್ಕವಳಿದ್ದೆ. ಹಾಗಾಗಿ ಆತ ನನ್ನ ಮನಸ್ಸಿನ ಆಳಕ್ಕಿಳಿದ. ಆದರೆ ಅವನ ಅಂತರಂಗಕ್ಕೆ ನಾನು ಇಳಿಯಲೇ ಇಲ್ಲ. ಅವನ ಬಾಹ್ಯರೂಪವಷ್ಟೇ ನನ್ನ ಆರಾಧನೆಗೆ ಒಳಗಾಯಿತು. ಆ ಬಿಂಬ ಇಂದಿನ ತನಕ ನನ್ನನ್ನು ಹಿಂಬಾಲಿಸುತ್ತಲೇ ಬಂದಿದೆ.

ಯಾವುದೋ ಬಿಡುಗಡೆಯ ಭಾವಕ್ಕಾಗಿ ಅಥವಾ ಇನ್ನಾವುದನ್ನೋ ತುಂಬಿಕೊಳ್ಳುವ ಹಪಹಪಿಕೆಯಲ್ಲಿ ನಾನು ನಿನಾಸಂಗೆ ಬಂದಿದ್ದೆ. ಹೂ, ಕಾಡು, ಗಾಳಿ, ಸ್ವಚ್ಛನೀರು, ದೇಸಿಪರಿಸರ, ಸುತ್ತಲಿನ ಜನರ ಆದರಾತಿಥ್ಯ ಇವೆಲ್ಲವೂ ನನ್ನನ್ನು ಬಾಲ್ಯಕ್ಕೆ ಹಿಂದುರಿಗಿಸಿತು. ಅಲ್ಲಿ ಶರಧಿ ಇದ್ದ.

ಪ್ರತಿಯೊಬ್ಬರ ಮನಸ್ಸಿನಾಳದಲ್ಲಿಯೂ ಇಂತಹದೊಂದು ಬಿಂಬ ಇರುತ್ತದೆ. ಅದು ಸ್ಥಾಯಿಭಾವ. ಬದುಕಿನುದ್ದಕ್ಕೂ ಈ ಬಿಂಬದ ಮೇಲೆ ಬೇರೆ ಬೇರೆ ಬಿಂಬಗಳು ಸೂಪರ್ ಇಂಪೋಸ್ ಆಗುತ್ತಲೇ ಇರುತ್ತದೆ. ಹೆಚ್ಚೆಚ್ಚು ಬಿಂಬಗಳು ಆ ಮೂಲ ಬಿಂಬದ ಮೇಲೆ ಬಿದ್ದಂತೆಲ್ಲಾ ಅಲ್ಲೊಂದು ಕೊಲಾಜ್ ಸೃಷ್ಟಿಯಾಗುತ್ತದೆ. ಹಾಗಾಗಿ ಮೂಲಬಿಂಬ ಜಾಗೃತ ಮನಸ್ಸಿನಿಂದ ವಿಸ್ಮೃತಿಗೆ ಜಾರಿದಂತೆ ಭಾಸವಾದರೂ ಸುಪ್ತ ಮನಸ್ಸಿನಲ್ಲಿ ಅದೇ ಡಾಮಿನೇಟಿಂಗ್ ಆಗಿರುತ್ತದೆ.

ನಾನು ಮೆಚ್ಚಿ ಮದುವೆಯಾದ ಹುಡುಗನ ಚಹರೆ ಕೂಡ ಶರಧಿಯದೇ. ನನಗೊಬ್ಬ ಗೆಳೆಯನಿದ್ದಾನೆ. ಅವನು ಕೂಡ ಸ್ವಲ್ಪ ಮಟ್ಟಿಗೆ ಶರಧಿಯನ್ನೇ ಹೋಲುತ್ತಾನೆ. ಇಂದಿಗೂ ಶರಧಿಯನ್ನು ಹೋಲುವ ಯಾವನೇ ವ್ಯಕ್ತಿ ಕಾರಣವಿಲ್ಲದೆ ನನಗೆ ಇಷ್ಟವಾಗುತ್ತಾನೆ. ಅವನಲ್ಲಿ ನಾನು ಇಷ್ಟಪಡದಿರುವ ಕೆಲವು ಗುಣಗಳಿದ್ದಾಗ್ಯೂ ಅವನ ಬಾಹ್ಯರೂಪ ನನ್ನನ್ನು ಆಕರ್ಷಿಸುತ್ತದೆ.

ನನಗನ್ನಿಸುತ್ತೆ; ನಮ್ಮ ಹದಿಹರೆಯದ ಹುಡುಗ-ಹುಡುಗಿಯರು ಕೆಲವೊಮ್ಮೆ ಬಲವಾದ ಆಕರ್ಷಣೆಗಳೇನೂ ಇರದೆ ಪರಸ್ಪರ ಪ್ರೇಮದಲ್ಲಿ ಬೀಳುತ್ತಾರೆ. ಅದು ತಮ್ಮನ್ನೇ ಪ್ರೇಮಿಸಿಕೊಳ್ಳುವ ಕಾಲಘಟ್ಟ. ಹಾಗಾಗಿ ಪ್ರೇಮಿಯ ಗುಣ ಅಷ್ಟಾಗಿ ಮುಖ್ಯವಾಗುವುದಿಲ್ಲ. ಪ್ರೇಮಿಸಬೇಕೆಂಬ ಉತ್ಕಟ ಭಾವವೇ ಕ್ರಿಯಾಶೀಲವಾಗಿಬಿಡುತ್ತದೆ. ದೋಷಗಳು ಕೂಡಾ ಗುಣಗಳಾಗಿ ಕಾಣಿಸುತ್ತವೆ. ತಪ್ಪುಗಳನ್ನು ಒಪ್ಪಿಕೊಳ್ಳುತ್ತಲೇ ಆ ಎಳೆಯ ಮನಸ್ಸಿನಲ್ಲಿ ಪ್ರೇಮಿಯ ಬಿಂಬ ಅಚ್ಚೊತ್ತಿಬಿಡುತ್ತದೆ. ಮನಸ್ಸು ಪಕ್ವಗೊಂಡಂತೆಲ್ಲಾ ಪ್ರೇಮಿಯ ಗುಣಕ್ಕಿಂತಲೂ ದೋಷವೇ ದೊಡ್ಡದಾಗಿ ಕಾಣತೊಡಗಿದರೆ ಸಂಬಂಧ ಮುರಿದು ಬೀಳುತ್ತದೆ. ಆದರೆ ಬಿಂಬ ಮರೆಯಾಗುವುದಿಲ್ಲ.

ಮುಂದೆ ಈ ಬಿಂಬದ ಮೇಲೆ ಗಂಡನ ಬಿಂಬ ಸೂಪರ್ ಇಂಫೋಸ್ ಆಗುತ್ತದೆ. ಮತ್ತೆ ಇನ್ಯಾರ್ದೋ ಬಿಂಬ ಬೀಳುತ್ತದೆ. ಕೊಲಾಜ್ ಸೃಷ್ಟಿಯಾಗುತ್ತದೆ. ಅಂತಿಮವಾಗಿ ಬಿಂಬಗಳ ಹೋಲಿಕೆ ಪ್ರಾರಂಭವಾಗುತ್ತದೆ. ಹೊಯ್ದಾಟ ಆರಂಭವಾಗುತ್ತದೆ. ಮಾನಸಿಕ ನೆಮ್ಮದಿ ಹಾಳಗುತ್ತದೆ. ಇದು ಈಗಿನ ಬಹುತೇಕ ಭಗ್ನ ಪ್ರೇಮಿಗಳ ಸಾಮಾನ್ಯ ಸಮಸ್ಯೆ.

ಮನಶಾಸ್ತ್ರಜ್ನರ ಪ್ರಕಾರ ಹುಡುಗಿಯೊಬ್ಬಳ ಮನಸ್ಸಿನಲ್ಲಿ ಬೀಳುವ ಮೊದಲ ಬಿಂಬ ಅಪ್ಪನದು. ಹುಡುಗನಾದರೆ ಅಮ್ಮನದು. ಇದ್ದರೂ ಇರಬಹುದೇನೋ. ನನಗೆ ಹಾಗಾಗಲಿಲ್ಲ.ಯಾಕೆಂದರೆ ನನ್ನ ಮನಸ್ಸಿಗೆ ಬಿದ್ದ ಮೊದಲ ಬಿಂಬ ಅಣ್ಣನದು. ನನ್ನ ಅಣ್ಣ, ನನ್ನ ಶರಧಿ, ನನ್ನ ಗಂಡ, ನನ್ನ ಗೆಳೆಯ ಈ ನಾಲ್ವರಲ್ಲಿ ತುಂಬಾ ಸಾಮ್ಯತೆಯಿದೆ. ಇವು ನಾಲ್ಕು ನನ್ನ ಭಾವಲೋಕದ ಕಂಫರ್ಟ್ ವಲಯಗಳು.

ಪ್ರತಿಯೊಬ್ಬರಿಗೂ ಇಂತಹುದೊಂದು ಕಂಫರ್ಟ್ ವಲಯ ಬೇಕು. ಅದು ನಾವು ಬೆಂಗಾಡಿನಲ್ಲಿದ್ದರೂ ನಮ್ಮನ್ನು ಕಾಪಾಡುತ್ತದೆ. ಜೀವನ ಪ್ರೀತಿಯನ್ನು ಹುಟ್ಟಿಸುತ್ತದೆ. ಗೋಪಿಕೆಯರಿಗೆ ಕೃಷ್ಣನ ಕೊಳಲು ಇದ್ದ ಹಾಗೆ. ನನಗೆ ನನ್ನ ಶರಧಿ ಇದ್ದ ಹಾಗೆ. ನಿಮಗೆ ಯಾರಿದ್ದಾರೆ? ನಿಮ್ಮೊಳಗೆ ಇಳಿದು ನೋಡಿ!

[ ’ಓ ಮನಸೇ’ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಲೇಖನ ]

Saturday, July 25, 2009

’ಕಡಲ ತಡಿಯ ತಲ್ಲಣ’ ಈಗ ಮಾರುಕಟ್ಟೆಯಲ್ಲಿದೆ.




’ಕಡಲ ತಡಿಯ ತಲ್ಲಣ’ದ ಪುನರ್ ಮುದ್ರಣ ಪ್ರತಿ ಈಗ ನನ್ನ ಕೈಯಲ್ಲಿದೆ. ಚತುರೋಪಾಯಗಳಿಂದ ಪುಸ್ತಕವನ್ನು ಮುದ್ರಿಸಿಕೊಂಡಿದ್ದೇನೆ. ನಾಲ್ಕು ತಿಂಗಳ ಹಿಂದೆ ಪ್ರಕಟವಾದ ಈ ಪುಸ್ತಕವನ್ನು ಓದುಗರ ಕೈಗೆ ಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಆ ಬಗ್ಗೆ ಹಲವಾರು ಓದುಗರು, ಆತ್ಮೀಯರು ನನಗೆ ಮೇಲ್ ಮಾಡಿ, ಕಾಗದ ಬರೆದು,ಪೋನ್ ಮಾಡಿ ವಿಚಾರಿಸಿಕೊಂಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಅವರೆಲ್ಲರಿಗೂ ಪ್ರತ್ಯೇಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮೂರು ತಿಂಗಳ ಹಿಂದೆ ಕಡಲ ತಡಿಯ ತಲ್ಲಣದ ಪ್ರಕಾಶರಿಗೆ ಮೇಲ್ ಮಾಡಿದ ಪತ್ರವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇನೆ-

ಸೃಷ್ಟಿ ಪ್ರಕಾಶನದ ಮಾಲೀಕರಾದ ನಾಗೇಶರವರಿಗೆ ’ಕಡಲ ತಡಿಯ ತಲ್ಲಣ’ದ ಸಂಪಾದಕಿಯಾದ ಉಷಾಕಟ್ಟೆಮನೆಯ ನಮಸ್ಕಾರಗಳು.
ಎಲ್ಲಾ ಸಂಪರ್ಕ ಮಾಧ್ಯಮಗಳಿಂದಲೂ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲಳಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ.

ನನ್ನ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಅಲ್ಲಿ ಇತ್ತೀಚೆಗಿನ ತಿಂಗಳುಗಳಲ್ಲಿ ನಡೆಯುತ್ತಿರುವ ಘಟನೆಗಳು ನನ್ನ ಮನಸ್ಸನ್ನು ಘಾಸಿಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿಯ ಬಹುಸಂಸ್ಕೃತಿಯ ಕುರಿತು ಪುಸ್ತಕವೊಂದನ್ನು ತರಲು ಬೆಂಗಳೂರಿನಲ್ಲಿರುವ ನಾನು ಮತ್ತು ದೆಹಲಿಯಲ್ಲಿ ವಾಸವಾಗಿರುವ ಪುರುಷೋತ್ತಮ ಬಿಳಿಮಲೆ ನಿರ್ಧರಿಸಿದೆವು. ಬಿಳಿಮಲೆಯ ಸಲಹೆಯ ಮೇರೆಗೆ ಇದನ್ನು ಪ್ರಕಟಿಸಲು ಪ್ರಕಾಶಕರಾದ ತಮ್ಮನ್ನು ನಾನು ಸಂಪರ್ಕಿಸಿದೆ. ಅಲ್ಲಿ ತನಕ ನನಗೆ ತಮ್ಮ ಪರಿಚಯವಿರಲಿಲ್ಲ.

ತಮಗೆ ಫೆಬ್ರವರಿ ೨೮ರಂದು ನಾನು ಮೂಲ ಲೇಖನಗಳನ್ನು ಒದಗಿಸಿದ್ದೆ. ಚುನಾವಣೆ ಹತ್ತಿರದಲ್ಲಿರುವ ಕಾರಣದಿಂದಾಗಿ ಬೇಗ ಪುಸ್ತಕ ತರುವುದು ನಮ್ಮ ಉದ್ದೇಶವಾಗಿತ್ತು. ನೀವು ಮತ್ತು ನಾವು ಕೂಡಿಯೇ ಮಾರ್ಚ್ ೨೪ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮಾಡುವುದೆಂದು ತೀರ್ಮಾನಿಸಿದೆವು.

ಆದರೆ ನೀವು ’ಕಡಲ ತಡಿಯ ತಲ್ಲಣ’ ಪುಸ್ತಕ ಪ್ರಕಟನೆಯ ಬಗ್ಗೆ ವೃತ್ತಿಪರತೆ ತೋರಲಿಲ್ಲ. ಉಢಾಪೆಯಿಂದ ನಡೆದುಕೊಂಡಿರಿ. ನಾನು ಪದೇ ಪದೇ ಪೋನ್ ಮಾಡಿದಾಗಲೂ ನೀವು ಪುಸ್ತಕ ಪ್ರಕಟನೆಯ ಕುರಿತು ಗಂಭೀರವಾಗಿ ನಡೆದುಕೊಳ್ಳಲೇ ಇಲ್ಲ. ನಿಮ್ಮ ಈ ಉದಾಸೀನ ಪ್ರವೃತ್ತಿಯನ್ನು ಮನಗಂಡು ಪುಸ್ತಕ ಬಿಡುಗಡೆಗೆ ನಿಗಧಿ ಪಡಿಸಲಾದ ದಿನಾಂಕವಾದ ಮಾರ್ಚ್ ೨೪ನ್ನು ೨೮ಕ್ಕೆ ಮುಂದೂಡಿದೆವು.

ಬಿಡುಗಡೆ ಕಾರ್ಯಕ್ರಮದ ಬಗ್ಗೆಯೂ ನೀವು ನನ್ನೊಡನೆ ಚರ್ಚಿಸಲಿಲ್ಲ. ಹಾಗಾಗಿ ನಾನು ’ಭಾರತ ಯಾತ್ರ ಕೇಂದ್ರದ’ ಸಂಚಾಲಕರಾದ ನಾಗರಾಜ ಮೂರ್ತಿಯವರನ್ನು ಸಂಪರ್ಕಿಸಿದೆ. ಅವರು ’ಸಾಹಿತಿ ಕಲಾವಿದರ ಬಳಗ’ದವರ ಸಹಕಾರದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

’ಕಡಲ ತಡಿಯ ತಲ್ಲಣ’ ಪುಸ್ತಕವನ್ನು ನಮ್ಮ ನಿರೀಕ್ಷೆಯಂತೆ ನೀವು ಪ್ರಕಟಿಸಲಿಲ್ಲ. ಅದರಲ್ಲಿ ಮುದ್ರಣ ದೋಷದ ಸರಮಾಲೆಯೇ ಇದೆ.ನಾನು ಮೊದಲ ಫ್ರೂಫ್ ನಲ್ಲಿ ಹಾಕಿದ ತಿದ್ದುಪಡಿಯನ್ನು ನೀವು ಸರಿಪಡಿಸಲಿಲ್ಲ. ಸೆಕೆಂಡ್ ಪ್ರೂಫ್ ನೀವು ಕೊಡಲೇ ಇಲ್ಲ. ನಾವು ಕೊಟ್ಟ ’ಪರಿವಿಡಿ’ಯ ಪ್ರಕಾರ ನೀವು ಲೇಖನಗಳನ್ನು ಅನುಕ್ರಮಗೊಳಿಸದೆ ನಿಮಗೆ ಇಷ್ಟಬಂದಂತೆ ಜೋಡಿಸಿದಿರಿ. ಅಲ್ಲದೆ ನಮ್ಮ ಗೌರವಾನ್ವಿತ ಲೇಖಕರ ಹೆಸರುಗಳನ್ನೇ ತಪ್ಪುತಪ್ಪಾಗಿ ಮುದ್ರಿಸಿದಿರಿ.. ಒಬ್ಬ ಲೇಖಕರ ಲೇಖನವನ್ನೇ ಪ್ರಕಟಿಸದೆ ಉಡಾಫೆ ತೋರಿದಿರಿ.

ಪುಸ್ತಕ ಅಚ್ಚಿಗೆ ಹೋಗುವ ಮೊದಲು ಪ್ರೆಸ್ಸ್ ನಲ್ಲಿ ಅಂತಿಮ ಪ್ರತಿಯನ್ನು ತೋರಿಸುವುದಾಗಿ ಹೇಳಿದ ನೀವು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರಿ. ಬಿಡುಗಡೆಯ ದಿನ ಪುಸ್ತಕವನ್ನು ನನಗೆ ನೀವು ತಂದುಕೊಟ್ಟಿರಿ. ಅದರಲ್ಲಿನ ತಪ್ಪುಗಳನ್ನು ನೋಡಿ ನಾನು ದಂಗಾದೆ. ನಾನು ಈ ಬಗ್ಗೆ ಪ್ರಶ್ಣಿಸಿದಾಗ, ನೂರು ಪ್ರತಿಗಳನ್ನು ಮಾತ್ರ ಪ್ರಕಟಿಸಿದ್ದೇನೆ. ತಪ್ಪುಗಳನ್ನು ತಿದ್ದಿ ಪುನರ್ ಪ್ರಕಟಿಸುವುದಾಗಿ ಹೇಳಿದಿರಿ. ನಾನು ಉದಾರತೆಯಿಂದ ಆಗಲಿ ಎಂದೆ.

ಸಂಸ ಬಯಲು ರಂಗಮಂದಿರದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರೋ.ಎಸ್. ಶೆಟ್ಟರ್ ’ಈ ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗುವುದಿಲ್ಲ. ತಪ್ಪುಗಳನ್ನು ಸರಿಪಡಿಸಿ ಪ್ರಕಟವಾದ ಮೇಲೆ ಓದುಗರಿಗೆ ದೊರೆಯುತ್ತದೆ.’ ಎಂದಿದ್ದರು. ಆದರೆ ನೀವು ಅದಾಗಲೇ ೧೦೦೦ ಪ್ರತಿಗಳನ್ನು ಮುದ್ರಿಸಿದ್ದಿರಿ. ಇದು ನಂಬಿಕೆ ದ್ರೋಹ. ಆದರೂ ನೀವದನ್ನು ಲೈಬ್ರರಿಗೆ ಕೊಟ್ಟು ನಮ್ಮ ಲೇಖಕರಿಗೆ ಮತ್ತು ಪುಸ್ತಕದಂಗಡಿಗಳಿಗೆ ತಪ್ಪಿಲ್ಲದ ಪ್ರತಿಗಳನ್ನು ಮುದ್ರಿಸಿಕೊಡುವುದಾಗಿ ಮಾತು ಕೊಟ್ಟಿರಿ. ಆದರೆ ಆಮೇಲೆ ನೀವು ನನಗೆ ಮುಖತಃ ಬೇಟಿಯಾಗಲೇ ಇಲ್ಲ. ಪೋನಿಗೂ ಸಿಗಲಿಲ್ಲ. ಮೆಸೇಜ್ ಗೂ ರಿಪ್ಲೈ ಮಾಡಲಿಲ್ಲ. ನಿಮ್ಮನ್ನು ಮುಖತಃ ಬೇಟಿಯಾಗಲು ಎಂಸಿ ಬಡಾವಣೆಯಲ್ಲಿರುವ ನಿಮ್ಮ ಮನೆಗೆ ಸತತ ನಾಲ್ಕು ದಿನ ಬಂದಿದ್ದೆ. ನೀವು ಸಿಗಲಿಲ್ಲ. ಆದರೆ ಕೆಲವು ಪುಸ್ತಕದಂಗಡಿಗಳಿಗೆ ನೀವು ಪುಸ್ತಕ ಮಾರಾಟ ಮಾಡಿದ್ದೀರೆಂದು ನನಗೆ ಗೊತ್ತಾಗಿದೆ. ಅದಕ್ಕೆ ಈ ಪತ್ರವನ್ನು ಬರೆಯುತ್ತಿದ್ದೇನೆ.

ನಾನು ನನ್ನ ೩೬ ಜನ ಗೌರವಾನ್ವಿತ ಲೇಖಕರಿಗೆ ಗೌರವ ಪ್ರತಿಗಳನ್ನು ನೀಡಬೇಕಾಗಿದೆ. ಮಾದ್ಯಮದವರಿಗೆ ಪ್ರತಿಗಳನ್ನು ನೀಡಬೇಕಾಗಿದೆ. ಪುಸ್ತಕ ಬಿಡುಗಡೆಯಾಗಿ ಇಂದಿಗೆ ಇಪ್ಪತ್ತು ದಿನಗಳು ಕಳೆದು ಹೋಗಿವೆ. ನಿಮ್ಮಿಂದ ಯಾವ ಸುದ್ದಿಯೂ ಇಲ್ಲ. ಹಾಗಾಗಿ ನಾನು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ನಾಗೇಶ್, ನೀವು ಈಗಾಲೇ ಮುದ್ರಿಸಿದ’ಕಡಲ ತಡಿಯ ತಲ್ಲಣ’ದ ೧೦೦೦ ಪ್ರತಿಗಳನ್ನು ಸರಕಾರಿ ಗ್ರಂಥಾಲಯಗಳಿಗೆ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾವುದೇ ಪುಸ್ತಕದಂಗಡಿಗಳಿಗೆ ಸರಬರಾಜು ಮಾಡಬಾರದು. ಹಾಗೆಯೇ ಸಮ್ಮೇಳನಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಾರಾಟಕ್ಕೆ ಇಡಬಾರದು. ಹಾಗೆ ಮಾಡಿದರೆ ಅದು ನಮ್ಮ ಗೌರವಾನ್ವಿತ ಲೇಖಕರು ಮತ್ತು ಸಂಪಾದಕರಿಗೆ ಮಾಡಿದ ಅಪಮಾನವಾಗುತ್ತದೆ. ಅದಕ್ಕೆ ಸೂಕ್ತ ಕ್ರಮವನ್ನು ನಾವು ಕೈಗೊಳ್ಳುತ್ತೇವೆ.

Friday, July 10, 2009

ಸಲಿಂಗಕಾಮ; ತಪ್ಪು ಹುಡುಕಲು ನಾವ್ಯಾರು?





ಭಾರತೀಯ ದಂಡಸಂಹಿತೆಯ ೩೭೭ರ ಕಲಮಿನ ಪ್ರಕಾರ ಸಲಿಂಗಕಾಮ ಅಪರಾಧ. ಗಂಡಸು ಗಂಡಸಿನೊಡನೆ ಮತ್ತು ಗಂಡಸು ಹಿಜಿಡದೊಂದಿಗೆ ಹಾಗು ಹೆಂಗಸು ಹೆಂಗಸಿನೊಂದಿಗೆ,ಹಾಗು ಪ್ರಾಣಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಶಿಕ್ಷಾರ್ಹ ಅಪರಾಧ.
ಈಗ ದೆಹಲಿ ಹೈಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಇದರ ಪ್ರಕಾರ ಪರಸ್ಪರ ಸಮ್ಮತಿ ಇರುವ ಇಬ್ಬರು ವಯಸ್ಕರು ಸಲಿಂಗಕಾಮದಲ್ಲಿ ತೊಡಗುವುದು ಕಾನೂನು ಬದ್ಧ. ಈಗ ಇದರ ಬಗ್ಗೆ ಪರ-ವಿರೋಧ ಹೇಳಿಕೆಗಳು, ಅಭಿಪ್ರಾಯಗಳು ಹರಿದು ಬರುತ್ತಿವೆ.

ನಮ್ಮ ದೇಶದ ಜನಸಂಖ್ಯೆ ನೂರುಕೋಟಿಗೂ ಹೆಚ್ಚು. ಇದರಲ್ಲಿ ಸಲಿಂಗಕಾಮಿಗಳ ಸಂಖ್ಯೆ ಇಪ್ಪತೈದು ಲಕ್ಷಗಳು ಎಂದು ಅಂದಾಜಿಸಲಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತುಕೊಂಡು ಲೈಂಗಿಕತೆಯನ್ನು ಹೊರತುಪಡಿಸಿ ಸಹಜ ಬದುಕನ್ನು ಬದುಕುತ್ತಿರುವ ಇವರನ್ನು ಬೆಟ್ಟು ಮಾಡಿ ತೋರಿಸುವುದು ಕಷ್ಟ. ನಮ್ಮ ನಡುವೆಯೇ ಇದ್ದು ನಮಗೆ ಅರಿವಿಲ್ಲದಂತೆ ಸಲಿಂಗಕಾಮಿಗಳಾಗಿ ಅವರು ಬದುಕುತ್ತಿರುತ್ತಾರೆ. ಒಬ್ಬ ವ್ಯಕ್ತಿಗೆ ತನಗೆ ವಿರುದ್ಧಲಿಂಗಿಯಲ್ಲಿ ಆಕರ್ಷಣೆಯಿಲ್ಲ ಬದಲಾಗಿ ಸ್ವಲಿಂಗಿಯಲ್ಲಿ ಅನುರಕ್ತನಾಗುತ್ತಿದ್ದೇನೆ ಎಂದು ಅನ್ನಿಸಿದರೆ ಅದರಲ್ಲಿ ಆಕೆಯ ಅಥವಾ ಆತನದೇನು ತಪ್ಪಿದೆ? ಅದು ನಿಸರ್ಗ ಮಾಡಿದ ಎಡವಟ್ಟು!

ಸಲಿಂಗಕಾಮವನ್ನು ನಮ್ಮ ಪುರಾಣವಂತೂ ಒಪ್ಪಿಕೊಂಡಿದೆ. ಬಸ್ಮಾಸುರನನ್ನು ಕೊಂದ ಮೋಹಿನಿ ವೇಷಧಾರಿಯಾದ ವಿಷ್ಣುವನ್ನು ಶಿವ ಮೋಹಿಸುತ್ತಾನೆ. ಅವಳನ್ನು ಕಾಡಿ ಕೂಡುತ್ತಾನೆ. ಅದರ ಫಲವಾಗಿ ಹುಟ್ಟಿದವನೇ ಅಯ್ಯಪ್ಪ. ಬಹಳ ಅಪರೂಪಕ್ಕೆ ಪುರುಷರಲ್ಲಿ ಗರ್ಭಕೋಶವಿದ್ದ ಉದಾಹರಣೆಗಳಿವೆ. ಇದೂ ಕೂಡಾ ನಿಸರ್ಗದ ವೈಚಿತ್ರಗಳಲ್ಲೊಂದು. ವಿಷ್ಣುವಿನಲ್ಲಿ ಹೆಣ್ತನದ ಲಕ್ಷಣಗಳು ಸ್ವಲ್ಪ ಹೆಚ್ಚೇ ಎದ್ದು ಕಾಣುತ್ತದೆ. ಹಾಗಾದರೆ ಆತನಿಗೆ ಗರ್ಭಕೋಶವಿದ್ದಿರಬಹುದೇ? ಅಲ್ಲಿಗೆ ಅಂಡಾಣು ಮತ್ತು ವೀರ್ಯಾಣುವನ್ನು ಸಂಯೋಗೊಳಿಸಿ ಇಟ್ಟವರಾರು? ಗೊತ್ತಿಲ್ಲ. ಆದರೆ ಇಬ್ಬರು ಗಂಡು ದೇವರ ಸಂಯೋಗದಿಂದ ಜನಿಸಿದ ಅಯ್ಯಪ್ಪ ಇಂದು ಆಸ್ತಿಕರಿಂದ ಆರಾಧನೆಗೊಳ್ಳುತ್ತಿದ್ದಾನೆ. ಅಂದರೆ ನಮ್ಮಲ್ಲಿ ಸಲಿಂಗಕಾಮ ಹಿಂದೆ ಇತ್ತು. ಅಥಾವ ಆ ಕಲ್ಪನೆಯಾದರೂ ಇತ್ತು.

ಅನುಕೂಲಕರ ಸಂದರ್ಭಗಳಲ್ಲಿ ಸಲಿಂಗಕಾಮವನ್ನು ಕುತೂಹಲಕ್ಕಾಗಿ ಆರಂಭಿಸಿ ಅನಂತರದಲ್ಲಿ ಅದನ್ನು ಚಟವಾಗಿ ಬೆಳೆಸಿಕೊಳ್ಳುವವರಿದ್ದಾರೆ. ಜೈಲು, ಹಾಸ್ಟೇಲ್, ಸೈನ್ಯ ಹಾಗು ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರ[ಮಠಗಳ ಹಾಗಿರುವ]ಗಳಲ್ಲಿ ಸಲಿಂಗಕಾಮದ ಆಕರ್ಷಣೆ ಹೆಚ್ಚು. ಅದಕ್ಕೆ ಪೂರಕ ವಾತಾವರಣವು ಅಲ್ಲಿರುತ್ತದೆ. ಕ್ರಮೇಣ ಇದರಿಂದ ಹೊರಬಂದು ವಿರುದ್ಧಲಿಂಗಿಯನ್ನು ಮದುವೆಯಾಗಿ ಸಹಜ ಲೈಂಗಿಕ ಬದುಕನ್ನು ಬದುಕುವವರಿದ್ದಾರೆ. ಆದರೆ ಹುಟ್ಟಿನಿಂದಲೇ ಸಲಿಂಗಕಾಮಿಯಾಗಿದ್ದರೆ? ಹಿಂದೆ ಹೇಳಿದಂತೆ ಅದು ನಿಸರ್ಗದ ವೈಚಿತ್ರ.

ಹಸಿವು, ನಿದ್ರೆ, ಮೈಥುನ ಮನುಷ್ಯನ ಮೂಲಭೂತ ಅವಶ್ಯಕತೆ; ಬೇಸಿಕ್ ಇನ್ ಸ್ಟಿಂಕ್ಟ್. ಸಲಿಂಗಕಾಮಿಗಳಿಗೆ ಮೈಥುನದ ಹಕ್ಕು ಬೇಡವೇ?. ಖಂಡಿತಾ ಬೇಕು. ಆದರೆ ಐ.ಪಿ.ಸಿ ೩೭೭ನೇ ಕಲಂ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಿದೆ. ಹಾಗಾಗಿ ಸಲಿಂಗಿಗಳಿಗೆ ಮೈಥುನ ಸುಖವಿಲ್ಲ! ಸ್ವಲಿಂಗಿಗಳು ಕೂಡ ಮನುಷ್ಯರೇ ತಾನೆ? ಸೃಷ್ಟಿಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಆರೋಗ್ಯವಂತ ಗಂಡು-ಹೆಣ್ಣುಗಳು ಪರಸ್ಪರ ಪಡೆದುಕೊಳ್ಳುವ ಲೈಂಗಿಕ ಸುಖವನ್ನೇ ಅವರೂ ಪಡೆದುಕೊಳ್ಳುತ್ತಾರೆ. ಹಾಗಾಗಿ ವ್ಯಕ್ತಿಯ ಮೂಲಭೂತಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಹಜವೇ.

ಆದರೆ ಈ ಹಕ್ಕು ಇನ್ನೊಬ್ಬರ ಹಕ್ಕುಗಳ ಮೇಲೆ ಧಾಳಿ ನಡೆಸಿದರೆ? ಇದುವರೆಗೆ ಸಲಿಂಗಕಾಮ ಶಿಕ್ಷಾರ್ಹ ಅಪರಾಧವಾಗಿತ್ತು. ಸಮಾಜ ಸಹ ಅಂಥವರನ್ನು ದೂರ ಇಟ್ಟಿತ್ತು. ಅಸಹ್ಯದಿಂದ ಕಾಣುತ್ತಿತ್ತು. ಹಾಗಾಗಿ ಅವರು ತಮ್ಮ ಗೋಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ಬಲವಂತದ ಲೈಂಗಿಕಕ್ರಿಯೆಗೆ ಮುಂದಾಗುತ್ತಿರಲಿಲ್ಲ. ಹಾಗಾಗಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ದಾಖಲಾಗುತ್ತಿದ್ದವು. ಬಹಳ ಅಪರೂಪಕ್ಕೆ ಕೊಲೆಗಳು ನಡೆಯುತ್ತಿದ್ದವು. ಈಗ ಸಲಿಂಗಕಾಮ ಕಾನೂನುಬದ್ಧವಾದರೆ ಗಂಡಸರ ಮೇಲೂ ಅತ್ಯಾಚಾರಗಳಾಗುವ ಸಾಧ್ಯತೆಗಳಿವೆ. ಪ್ರತಿಷ್ಟೆಗಾಗಿ ವಿರುದ್ಧಲಿಂಗಿಯನ್ನು ಮದುವೆಯಾಗಬಹುದು.ಇದು ಅನೇಕ ಸಮಾಜೀಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಬಹುದು.

ಸಲಿಂಗಕಾಮಿಗಳ ಬಗ್ಗೆ ಇರುವ ಬಹುದೊಡ್ಡ ಆಪಾದನೆ ಎಂದರೆ ಅವರು ಎಚ.ಐ.ವಿಯ ಹರಡುವಿಕೆಯ ವಾಹಕರಾಗಿದ್ದಾರೆಂಬುದು. ಅದು ಸ್ವಲ್ಪ ಮಟ್ಟಿಗೆ ನಿಜ. ಸಲಿಂಗಿಗಳಾಗಲಿ ವಿರುದ್ಧಲಿಂಗಿಗಳಾಗಲಿ ಸಂಗಾತಿಯ ಆಯ್ಕೆಯಲ್ಲಿ ವಿವೇಚನೆ ಮುಖ್ಯ. ಏಕಸಂಗಾತಿಗೆ ನಿಷ್ಟರಾಗಿರುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸಲಿಂಗಕಾಮದ ಆಕರ್ಷಣೆಯಂತೆ ದಾಂಪತ್ಯ ಮಾಲಿನ್ಯವೂ ಈಗ ಬಹು ಸಾಮಾನ್ಯ. ಉನ್ಮತ್ತ ಯೌವನಕ್ಕೆ ವಿವೇಚನೆಯೆಂಬುದು ಮೈಲು ದೂರ.

ಇಲ್ಲೊಂದು ಮುಖ್ಯ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಲೈಂಗಿಕ ಅತ್ಯಾಚಾರವನ್ನು ಸಾಬೀತು ಪಡಿಸುವುದುದು ತುಂಬಾ ಕಷ್ಟ. ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆ ನಡೆದು ಅನಂತರದಲ್ಲಿ ಅದನ್ನು ಬಲವಂತದ ರತಿಕ್ರೀಡೆ ಎಂದು ಆಪಾದಿಸಿದರೆ..?ಈಗ ಶೈನಿ ಅಹುಜ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಆತ ಕೆಲಸದವಳೊಂದಿಗೆ ಲೈಂಗಿಕಕ್ರಿಯೆ ನಡೆಸಿದ್ದಾನೆ. ಅದನ್ನು ಆತನೇ ಒಪ್ಪಿಕೊಂಡಿದ್ದಾನೆ.ಆದರೆ ಇದು ಪರಸ್ಪರ ಒಪ್ಪಿಗೆಯಿಂದ ನಡೆದದ್ದು ಎಂಬುದು ಆತನ ವಾದ. ಇದು ನಿಜವಿರುವ ಸಾಧ್ಯತೆ ಇದೆ ಅಲ್ಲವೇ?. ಆಕೆ ಈತನನ್ನು ಬ್ಲಾಕ್ ಮೇಲ್ ಮಾಡಲು ಅವಕಾಶ ಇದೆ. ಮೆಲ್ನೋಟಕ್ಕೆ ಇಲ್ಲಿ ಅನ್ಯಾಯ ಆಗಿರೋದು ಅಹುಜ ಪತ್ನಿಗೆ. ಅಲ್ಲಿ ಆಕೆಗೆ ಗಂಡನಿಂದ ವಿಶ್ವಾಸದ್ರೋಹ ಆಗಿದೆ. ಆಕೆ ಎಲ್ಲಿ ನ್ಯಾಯ ಬೇಡಬೇಕು?.

ಐಪಿಸಿ ೩೭೭ಕ್ಕೆ ತಿದ್ದುಪಡಿ ತರುವುದಕ್ಕೆ ಮೊದಲು ಇದರ ಬಗ್ಗೆ ಕೂಲಂಕೂಷ ಚರ್ಚೆ ನಡೆಯಬೇಕು. ಇದುವರೆಗೆ ಮರೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬಹಿರಂಗವಾಗಿ ನಡೆಯತೊಡಗಿದರೆ ಸಭ್ಯ ಸಮಾಜ ಮುಜುಗರಪಡಬಹುದು. ಪ್ರಖ್ಯಾತ ಟೆನ್ನಿಸ್ ತಾರೆ ಮಾರ್ಟಿನಾ ನವ್ರಾಟಿಲೋನಾ ಸಲಿಂಗಕಾಮಿಯೆಂದು ಎಲ್ಲರಿಗೂ ಗೊತ್ತಿದೆ. ಅಲೆಗ್ಸಾಂಡರ್, ಸಾಕ್ರೆಟಿಸ್, ಅಸ್ಕರ್ ವೈಲ್ಡ್, ಜ್ಯೂಲಿಯ್ಸ್ ಸೀಸರ್, ಲಿಯನಾರ್ಡೊ ಡಾ ವಿಂಚಿ, ಮೈಕೆಲ್ ಏಂಜಿಲೊ...ಸಲಿಂಗಿಗಳಗಿದ್ದರು ಎಂದು ಹೇಳಲಾಗುತ್ತಿದೆ. ಈ ಅಂತೆ ಕಂತೆಗಳ ಸಂತೆಯಲ್ಲಿ ಕನ್ನಡದ ಕೆಲವು ಪತ್ರಕರ್ತರು, ಮಠಾದೀಶರು, ಗುರುಗಳು, ರಾಜಕಾರಣಿಗಳೂ ಇದ್ದಾರೆ. ಇವರೆಲ್ಲ ನಮ್ಮ ಎದುರುಗಡೆ ಬಂದಾಗ ನಮ್ಮ ಮುಖದಲ್ಲಿ ಪರಿಚಯದ, ಸಭ್ಯತೆಯ ನಗುವೊಂದು ಸುಳಿದಾಡುತ್ತದೆ.ಆ ನಗುವಿಗೆ ನಾನಾರ್ಥಗಳನ್ನು ಹುಡುಕುವಂತೆ ಆಗದಿರಲಿ. ಅವರ ಖಾಸಗಿ ಬದುಕು ಅವರದ್ದು, ನಮ್ಮ ಖಾಸಗಿ ಬದುಕು ನಮ್ಮದು. ಕೆಲವು ವಿಷಯಗಳತ್ತ ನಾವು ಔದಾಸಿನ್ಯ ಪ್ರದರ್ಶಿಸಬೇಕು. ಅದರಲ್ಲಿ ಸಲಿಂಗಕಾಮವೂ ಒಂದು.ಸಮಾಜದ ಒಳಪ್ರವಾಹದಲ್ಲೊಂದು ಕಾನೂನು ಇದೆ. ಸರಕಾರ ರೂಪಿಸುವ ಕಾನೂನಿಗಿಂತಲೂ ಇದು ಹೆಚ್ಚು ಶಕ್ತಿಶಾಲಿಯಾದುದು. ಅದು ಸಲಿಂಗಿಗಳನ್ನು ಒಪ್ಪಿಕೊಂಡರೆ, ಆದರಿಸಿದರೆ ಅದು ನಿಜವಾಗಿಯೂ ಸಲಿಂಗಿಗಳ ವಿಜಯೋತ್ಸವ.