Thursday, January 28, 2010

ತುಳು ಭಾಷೆಗೇ ಗಗ್ಗರ ಕಟ್ಟಿದ ’ಗಗ್ಗರ’
ತುಳು ಚಿತ್ರ ’ ಗಗ್ಗರ’ಕ್ಕೆ ೨೦೦೮ರ ಶ್ರೇಷ್ಟ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ದೊರಕಿದೆ. ತುಳು ಭಾಷೆ, ಸಂಸ್ಕೃತಿ, ಪರಂಪರೆ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿತು.

’ಗಗ್ಗರ’ ಚಿತ್ರತಂಡವನ್ನು ’ಮೌನ ಕಣಿವೆ’ ಅಭಿನಂದಿಸುತ್ತಿದೆ

ಪ್ರಶಸ್ತಿ ವಿಜೇತ ಚಿತ್ರಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ; ಮನಸ್ಸನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಸಿದ್ಧಾಂತಗಳ ಹೊರೆಯನ್ನು ಹೊರಿಸುತ್ತವೆ.ಬಹು ಪ್ರಯಾಸದಿಂದ ಸಿನೆಮಾದ ಆಶಯವನ್ನು ಹುಡುಕಬೇಕಾಗುತ್ತದೆ. ಅದೇ ಅಳುಕಿನಿಂದ ’ಗಗ್ಗರ’ದ ಮುಂದೆ ಕೂತೆ.
೧೧೦ ನಿಮಿಷಗಳ ಈ ಚಿತ್ರ ನನ್ನ ಪೂರ್ವಾಗ್ರಹಗಳನ್ನೆಲ್ಲಾ ತೊಡೆದು ಹಾಕಿತು. ಒಂದು ಒಳ್ಳೆಯ ಕಲಾತ್ಮಕ ಸಿನೇಮಾ ನೋಡಿದ ಅನುಭವ ನನ್ನದಾಯಿತು. ನಿರ್ದೇಶಕರಾಗಿ ಶಿವಧ್ವಜ್ ಭರವಸೆ ಮೂಡಿಸಿದ್ದಾರೆ. ಗುರುದತ್ ಈ ಚಿತ್ರದ ನಿರ್ಮಾಪಕರು.

ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಮ್ಮ ಭಾಷೆ, ಸಂಸ್ಕೃತಿ, ಆಚರಣೆ, ಸಂಪ್ರದಾಯ ಎಲ್ಲವೂ ಬದಲಾಗುತ್ತಿದೆ; ರೂಪಾಂತರಗೊಳ್ಳುತ್ತಿದೆ; ಸ್ಥಿತ್ಯಂತರಗೊಳ್ಳುತ್ತಿದೆ. ಅಂತಹ ಸಂಕ್ರಮಣಾವಸ್ಥೆಯನ್ನು ಹಿಡಿದಿಡುವ ಪ್ರಯತ್ನವನ್ನು ’ಗಗ್ಗರ’ ಮಾಡಿದೆ.

ಭೂತಾರಾಧನೆ ತುಳುನಾಡಿನ ಒಂದು ವಿಶಿಷ್ಟ ಆರಾಧನಾ ಪದ್ಧತಿ. ’ಭೂತ’ ಅಂದರೆ ಅತಿಮಾನುಷ ಶಕ್ತಿ. ಅದು ಭೂಮಿ ದೈವವೂ ಹೌದು. ಅದು ಜನ, ಜಾನುವಾರು, ಬಿತ್ತಿದ ಬೆಳೆಯನ್ನು ಕಾಪಾಡುತ್ತದೆ ಎಂಬುದು ತುಳುವರ ನಂಬಿಕೆ. ಇಂತಹ ಭೂತವನ್ನು ವರ್ಷಕ್ಕೊಂದು ಬಾರಿ ಕೃತಜ್ನತೆಯಿಂದ ನೆನಪಿಸಿಕೊಳ್ಳುವ ಸಂದರ್ಭವೇ ’ಕೋಲ’

ಕೋಲದಲ್ಲಿ ’ಭೂತ’ ವ್ಯಕ್ತಿಯೊಬ್ಬನ ಮೈಯಲ್ಲಿ ಅವಾಹನೆಗೊಳ್ಳುತ್ತದೆ. ತುಳುನಾಡಿನಲ್ಲಿ ಭೂತ ಅಥವಾ ಕೋಲ ಕಟ್ಟಲು ಪರವ, ಪಂಬದ, ಅಜಿಲ, ನಲಿಕೆಯರೆಂಬ ಪ್ರತ್ಯೇಕ ಜನಾಂಗವಿದೆ. ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಬಹುತೇಕ ಜನರಿಗೆ ಸ್ವಂತ ಮನೆ-ಜಮೀನು ಇಲ್ಲ. ಕೂಲಿ ನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರು. ಉಳ್ಳವರ/ಮೇಲ್ಜಾತಿಯವರ ಮನೆಯೊಳಗೆ ಇವರಿಗೆ ಪ್ರವೇಶವಿಲ್ಲ.

ಈಗ, ವರ್ತಮಾನದಲ್ಲಿ ಭೂತ ಕಟ್ಟುವವರ ಮಕ್ಕಳು ವಿದ್ಯಾವಂತರಾಗಿದ್ದಾರೆ, ನೌಕರಿಯಲ್ಲಿದ್ದಾರೆ. ಅವರು ಭೂತ ಕಟ್ಟಲು ತಯಾರಿಲ್ಲ. ಹಳಬರಿಗೆ ಮೈಯಲ್ಲಿ ಕಸುವಿಲ್ಲ. ಇಂಥ ಸಂದರ್ಭವುಂದರ ಡಾಕ್ಯುಮೆಂಟೇಶನ್ನಿಗಾಗಿ ವಿದೇಶಿ ತಂಡವೊಂದು ಗ್ರಾಮಕ್ಕೆ, ಶಂಕರನ ಮನೆಗೆ ಬರುತ್ತದೆ. ಇದು ಸಿನೇಮಾ ಆರಂಭದ ಶಾಟ್. ಪ್ರಸ್ತುತ ಮೇಸ್ಟ್ರಾಗಿರುವ ಆತ ತನ್ನ ಭೂತ ಕಾಲದ ಬದುಕನ್ನು ಅವರೆದುರು ತೆರೆದಿಡುತ್ತಾನೆ. ಅವನ ನಿರೂಪಣೆ ಇಂಗ್ಲೀಷಿನಲ್ಲಿರುವುದರಿಂದ ನಿರ್ಮಾಪಕರು ಮೊದಲೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವಂತಿದೆ.

ಭೂತ ಕಟ್ಟುವ ವ್ಯಕ್ತಿ ಚನಿಯ ಮತ್ತು ಅವನ ವಿದ್ಯಾವಂತ ಮಗ ಶಂಕರ ’ಗಗ್ಗರ’ದ ಕೇಂದ್ರ ಪಾತ್ರಗಳು. ತುಳುವೇತರರಿಗೆ ’ಗಗ್ಗರ’ ಪರಿಚಯವಿರಲಾರದು. ಗಗ್ಗರ ಅಂದರೆ ಭೂತದ ಕಾಲಿನ ಹಿತ್ತಾಳೆಯ ಗೆಜ್ಜೆ ಆಭರಣ. ಭೂತಾರಾಧನೆಯಲ್ಲಿ ಗಗ್ಗರ ಕಟ್ಟುವುದೇ ಬಹಳ ಮುಖ್ಯವಾದ ಅಂಶ. ಭೂತ ಕಟ್ಟುವಾತ ಮೊದಲು ಅದನ್ನು ಪೂಜಿಸಿ. ಅರ್ಚಿಸಿ ಅದನ್ನು ಧರಿಸಲು ಊರ ಹತ್ತು ಸಮಸ್ತರಿಂದ ಅನುಮತಿಯನ್ನು ಬೇಡಿ ಅದನ್ನು ತನ್ನ ಕಾಲಿಗೆ ಕಟ್ಟಿಕೊಳ್ಳುತ್ತಾನೆ. ಆಗ ಅವನಿಗೆ ಆವೇಶ ಬರುತ್ತದೆ. ಭೂತ ಅವನಲ್ಲಿ ಅವಾಹನೆಗೊಳ್ಳುತ್ತದೆ. ಅಲ್ಲೊಂದು ’ಮಧ್ಯಂತರ ಜಗತ್ತು’ ಸೃಷ್ಟಿಯಾಗುತ್ತದೆ. ಊರ ಹತ್ತು ಸಮಸ್ತರ ಮನೆಯಲ್ಲಿ ಆಳಾಗಿ ದುಡಿಯುವ, ಆ ಅಸ್ಪ್ರಶ್ಯ ವ್ಯಕ್ತಿ ಆ ಹೊತ್ತಿಗೆ ಅತಿಮಾನುಷ ಶಕ್ತಿಯಾಗಿ ಮಾರ್ಪಡುತ್ತಾನೆ. ಭೂತ ನೀಡುವ ಅಭಯ ನುಡಿಗಾಗಿ ಮೆಲ್ವರ್ಗದ ಜನರು ಅವನೆದುರು ಕೈಮುಗಿದು ನಿಲ್ಲುತ್ತಾರೆ.

ಚನಿಯನ ಸೊಂಟ ಆಕಸ್ಮಿಕವಾಗಿ ಎತ್ತರದಿಂದ ಬಿದ್ದು ಮುರಿಯುತ್ತದೆ. ಅವನಿಂದ ಕೋಲ ಮಾಡಿಸಿಕೊಳ್ಳುತ್ತಿದ್ದ ಊರಿನ ಹತ್ತು ಸಮಸ್ತರು ಅವನಿಗೆ ಪುಡಿಕಾಸನ್ನು ನೀಡುತ್ತಾರೆಯೇ ಹೊರತು ಅವನ ಸಹಾಯಕ್ಕೆ ಬರುವುದಿಲ್ಲ. ಮಾನವೀಯತೆಯನ್ನೂ ತೋರುವುದಿಲ್ಲ. ಆದರೆ ವಾರ್ಷಿಕ ಕೋಲವನ್ನು ಶಂಕರ ಕಟ್ಟಬೇಕೆಂದು ಊರವರು ಹೇಳಿದಾಗ ಮೇಷ್ಟ್ರಾಗಿದ್ದ ಶಂಕರ ಒಪ್ಪುವುದಿಲ್ಲ. ಆತ ಊರವರಿಗೆ ಒಂದು ಪ್ರಶ್ನೆ ಕೇಳುತ್ತಾನೆ; ’ಈರೆಗ್ ದೈವ ಬೋಡು. ದೈವ ಕಟ್ಟುನಾಯೆ ಬೊಡ್ಚಿ’ [ನಿಮಗೆ ದೈವ ಬೇಕು, ದೈವ ಕಟ್ಟುವವನು ಬೇಡ ]. ಬಹುಶಃ ಈ ಪ್ರಶ್ನೆ ಸಿನೆಮಾದ ಅಂಡರ್ ಕರೆಂಟ್; ಸಮಾಜಕ್ಕೆಸೆದ ಪ್ರಶ್ನೆ.

ಶಂಕರನದೂ ತುಳುನಾಡ ಸಂಸ್ಕೃತಿಯೇ. ಅಲ್ಲಿ ದೇವರಿಗಿಂತಲೂ ದೈವದ [ಭೂತದ] ಮೇಲಿನ ನಂಬಿಕೆಯೇ ಹೆಚ್ಚು. ಆತ ಕೋಲ ಕಟ್ಟುತ್ತಾನೆ. ಕೋಲ ತೀರಿದ ಮೇಲೆ ಆತ ಊರವರಲ್ಲಿ ತಮ್ಮ ಜನಾಂಗದ ಬವಣೆಗಳ ಬಗ್ಗೆ ತಿಳಿಸಿ ಅದಕ್ಕೆ ಸೂಕ್ತ ಮಾನವೀಯ ಪರಿಹಾರವನ್ನು ಕೊಡಲು ಕೇಳಿಕೊಳ್ಳುತ್ತಾನೆ. ಅದನ್ನವರು ಒಪ್ಪಿಕೊಂಡರೂ ಗಂಭೀರವಾಗಿ ತೆಗೆದುಕೊಂಡ ಬಗ್ಗೆ ಸಮರ್ಥನೆಗಳು ಸಿನೆಮಾದಲ್ಲಿ ದೊರೆಯುವುದಿಲ್ಲ. ಶಂಕರ ಎಸೆದ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಸ್ವಲ್ಪ ಅಧ್ಯಯನ ನಡೆಸಿ ಸ್ಕ್ರಿಪ್ಟ್ ತಯಾರಿಸಿದ್ದರೆ ಅತ್ಯುತ್ತಮ ಸಿನೇಮಾವಾಗುವ ಕಸುವು ’ಗಗ್ಗರ’ದಲ್ಲಿತ್ತು. ಸಿನೇಮಾದ ಕೊನೆಯಲ್ಲೇನೊ ಶಂಕರ ಸ್ಕೂಟರಿನಲ್ಲಿ ಕೋಲದ ಪರಿಕರಗಳನ್ನಿಟ್ಟುಕೊಂಡು ಪತ್ನಿ ಮಗನೊಡನೆ ಕೋಲ ಕಟ್ಟಲು ತೆರಳುತ್ತಾನೆ. ಮಾತ್ರವಲ್ಲ ಮಗನ ಬಾಯಿಯಿಂದ ’ನಾನೂ ಕೋಲ ಕಟ್ಟುತ್ತೇನೆ’ ಎಂದು ಹೇಳಿಸುತ್ತಾನೆ. ಇದು ಕೆಳಜಾತಿಯ ವಿದ್ಯಾವಂತ ತರುಣನೊಬ್ಬನ ವೈಯಕ್ತಿಕ ನಿಲುವಿನಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ. ಸಮುದಾಯದ ಪಾಲ್ಗೊಳ್ಳುವಿಕೆಯ ಕುರುಹು ಸಿಗುವುದಿಲ್ಲ.

ನಿರ್ದೇಶಕರು ತಮ್ಮಷ್ಟಕ್ಕೆ ಸುಮ್ಮನೆ ಸಂಯಮದಿಂದ ಅಚ್ಚುಕಟ್ಟಾಗಿ ಸಿನೆಮಾ ಮಾಡಿಕೊಂಡು ಹೋಗಿದ್ದಾರೆ. ಆಚೀಚೆ ತಿರುಗಲಿಲ್ಲ. ಭಾರತದ ಎಲ್ಲಾ ಪ್ರದರ್ಶನ ಕಲೆಗಳ, ಆರಾಧನಾ ಕಲೆಗಳ ಇಂದಿನ ಪರಿಸ್ಥಿತಿ ಇದೇ ಆಗಿದೆ. ಯಾಕೆಂದರೆ ಅದು ಜಾತಿಯೊಡನೆ ತಳುಕು ಹಾಕಿಕೊಂಡಿದೆ. ನಮ್ಮ ಜಾನಪದ ಕಲೆ ನಮ್ಮ ಸಂಪತ್ತು. ಅದು ಉಳಿಯಬೇಕೆಂದು ನಾವು ಬಯಸುತ್ತೇವೆ. ಅಂದರೆ ಜಾತಿ ಪದ್ದತಿಯೂ ಉಳಿಯಬೇಕೆ?

ಕೆಲವು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ಆಟಿಕಳಂಜ ಮತ್ತು ಸಿದ್ಧವೇಶವನ್ನು ಯಾರೂ ಹಾಕುತ್ತಿರಲ್ಲಿಲ್ಲ. ಆಗ ಮೇಲ್ಜಾತಿಯ ಜಾನಪದ ಉಪನ್ಯಾಸಕರೊಬ್ಬರು ತಮ್ಮ ಆಸಕ್ತ ಬಳಗದೊಡನೆ ಈ ವೇಷಗಳನ್ನು ಹಾಕಿ ಮನೆ ಮನೆಗೆ ಹೋಗಿ ಕುಣಿದು ಅವರು ಕೊಟ್ಟ ಕಾಣಿಕೆಯನ್ನು ಸ್ವೀಕರಿಸಿದ್ದರು. ಅವರೇನೂ ತಮ್ಮ ಗುರುತನ್ನು ಬಹಿರಂಗಪಡಿಸಿರಲಿಲ್ಲ. ಮಹಾರಾಷ್ಟ್ರದಲ್ಲಿ ತಮಾಷಾ ನೃತ್ಯವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಸಲಾಗುತ್ತಿದೆ. ಹಿಂದೆ ಅದು ಮರ್ಯಾದಸ್ಥರ ಕಲೆಯಾಗಿರಲಿಲ್ಲ.

ಗಗ್ಗರದಲ್ಲಿ ಎನ್ನೇಬಿಯವರ ಸರಳವಾದ ಚಿಕ್ಕ ಚಿಕ್ಕ ಸಂಭಾಷಣೆ ಮನಸ್ಸನ್ನು ತಟ್ಟುತ್ತದೆ. ಆದರೆ ಶಂಕರ ಭೂತ ಕಟ್ಟುವ ಸಂದರ್ಭದಲ್ಲಿನ ಸಂಭಾಷಣೆ ಇನ್ನಷ್ಟು ಮೊನಚಾಗಿದ್ದರೆ ಸಿನೇಮಾದ ಆಶಯಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತಿತ್ತು ಮಾತ್ರವಲ್ಲ ಶಂಕರನಿಗೆ ಗಟ್ಟಿ ವ್ಯಕ್ತಿತ್ವ ದೊರೆಯುತ್ತಿತ್ತು. ಆತನಿಗೆ ಪ್ರತಿಭಟನೆಯ ಹಕ್ಕಿದೆ. ಕಲೆಗೊಂದು ಮುನ್ನೋಟವಿರಬೇಕು; ವಾಸ್ತವ ಸಂಗತಿಗಳನ್ನಷ್ಟೇ ತಿಳಿಸಿದರೆ ಸಾಲದು. ನಿರ್ದೇಶಕರು ತಮ್ಮ ಸ್ವಾತಂತ್ರ್ಯವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲಿಲ್ಲ. ಜಾತಿ ವ್ಯವಸ್ಥೆ, ಜಾನಪದ ಕಲೆಗಳ ಉಳಿವಿನಂತಹ ಮೂಲಭೂತ ಪ್ರಶ್ನೆಗಳನ್ನು ಗಂಭೀರ ನೆಲೆಯಲ್ಲಿ ತರಬಹುದಿತ್ತು. ಒಂದು ಸಾಮಾಜಿಕ ಸಂಘರ್ಷದ ಚಿತ್ರಣವನ್ನು ಹಿಡಿದಿಡಲು ಇಲ್ಲಿ ಅವರಿಗೆ ಅವಕಾಶವಿತ್ತು .

ಚನಿಯನಾಗಿ ಎಂ.ಕೆ.ಮಠ್ ಅವರದ್ದು ಅತ್ಯುತ್ತಮ ಅಭಿನಯ. ಅವರ ಪತ್ನಿಯಾಗಿ ಜಯಶೀಲ ತನ್ನ ಮುಗ್ದತೆಯಿಂದಾಗಿ ಮನ ಗೆಲ್ಲುತ್ತಾರೆ. ಭೂತ ಆವೇಶಗೊಳ್ಳುವ ಸಂದರ್ಭವೊಂದು ಬಿಟ್ಟರೆ ಸುಚೇಂದ್ರಪ್ರಸಾದ್ ಶಂಕರನ ಪಾತ್ರಕ್ಕೆ ಜೀವತುಂಬಿದ್ದಾರೆ. ಆದರೆ ನಿರೂಪಕ ಶಂಕರ ಸಿನೇಮಾದ ಓಘಕ್ಕೆ ಭಂಗ ತರುತ್ತಾರೆ. ಟೈಟಲ್ ಕಾರ್ಡ್ ಮತ್ತು ಅದಕ್ಕೆ ಬಳಸಿದ ಸಂಗೀತ ಕೂಡ ಆಕರ್ಷಕವಾಗಿಲ್ಲ. ಭೂತರಾಧನೆಯ ಮೌಖಿಕ ಸಾಹಿತ್ಯವಾದ ’ಪಾಡ್ದನ’ವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಅದರೆ ಚಿತ್ರದುದ್ದಕ್ಕೂ ಮೌನವನ್ನು ಸಮರ್ಥಕವಾಗಿ ಬಳಸಿಕೊಳ್ಳಲಾಗಿದೆ. ಸುರೇಶ ಬೈರಸಂದ್ರರ ಛಾಯಗ್ರಹಣವಂತೂ ಕೆಲವು ಸಂದರ್ಭದಲ್ಲಿ ಸುಪರ್ಭ್ ಅನ್ನಿಸುವಂತಿದೆ. ಚನಿಯನ ಮನೆಗೆ ಮಾಡಿದ ಬೆಳಕಿನ ಸಂಯೋಜನೆ ಕ್ಲಾಸಿಕ್. ಸಿನೇಮಾವನ್ನು ಒಟ್ಟಂದದಲ್ಲಿ ನೋಡಿದರೆ ಅದು ಇನ್ನೂ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಸಾಧ್ಯತೆಗಳಿವೆ.

Thursday, January 14, 2010

ರೈತನಿಗೆಲ್ಲಿ ಸುಗ್ಗಿಯ ಹುಗ್ಗಿ?

ಅರಮನೆ ಮತ್ತು ಕಪಿಲೆಯನ್ನು ಜೋಡಿಸುವ ಅಡಿಕೆ ತೋಟ
ಝುಳು ಝುಳು ಹರಿಯುವ ಕಪಿಲೆ
ನನ್ನ ಅರಮನೆಆತ್ಮೀಯರಾದ ನಿಮಗೆಲ್ಲಾ ಸಂಕ್ರಾತಿಯ ಶುಭಾಶಯಗಳು.

ಸಂಕ್ರಾತಿ, ಮುಖ್ಯವಾಗಿ ರೈತಾಪಿ ವರ್ಗದ ಹಬ್ಬ; ಸುಗ್ಗಿಯ ಹಬ್ಬ. ರೈತ ಚಳಿಗಾಲದಲ್ಲಿ ಕಷ್ಟಪಟ್ಟು ಬೆಳೆದ ಬೆಳೆಯೆಲ್ಲವನ್ನು ಮನೆ ತುಂಬಿಸಿಕೊಳ್ಳುವ ಸಂಭ್ರಮದ ಹಬ್ಬ. ಆದರೆ ಸಂಭ್ರಮ ಪಡುವ ಸ್ಥಿತಿಯಲ್ಲಿದ್ದಾನೆಯೇ ನಮ್ಮ ರೈತ?

ಉತ್ತರ ಕರ್ನಾಟಕದ ರೈತರ ಸ್ಥಿತಿ ಏನಾಗಿದೆಯೆಂದು ವಿವರಿಸುವ ಅಗತ್ಯವೇ ಇಲ್ಲ. ಮಲೆನಾಡಿನ ರೈತರ ಸ್ಥಿತಿಯೂ ಈಗ ಚಿಂತಾಜನಕವಾಗತೊಡಗಿದೆ. ಕಾಫಿ ತೋಟದ ಮಾಲೀಕ ಚಿಂತಾಕ್ರಾಂತನಾಗಿದ್ದಾನೆ. ಮಳೆಯ ರಭಸಕ್ಕೆ ಕಾಫಿ ಬೀಜ ಗಿಡದ ಬುಡ ಸೇರಿದೆ

ನಾನು ಇಂದು ತಾನೆ ನನ್ನ ಅಡಿಕೆ ತೋಟದಿಂದ ಹಿಂದಿರುಗಿ ಬಂದೆ. ಮನಸ್ಸು ಭಾರವಾಗಿತ್ತು. ಅಂಗಳದಲ್ಲಿ ಬಿಸಿಲಲ್ಲಿ ಒಣಗಲು ಹಾಕಿದ ಅಡಿಕೆಯೆಲ್ಲಾ ಮಳೆಯಿಂದ ಒದ್ದೆಯಾಗಿತ್ತು. ನನ್ನೊಬ್ಬಳದಲ್ಲ. ಮಲೆನಾಡಿನ ಎಲ್ಲಾ ಅಡಿಕೆ ಬೆಳೆಗಾರರ ದುಸ್ಥಿತಿಯಿದು. ಈ ವರ್ಷ ಮಳೆಗಾಲಕ್ಕೆ ವಿರಾಮವೆಂಬುದೇ ಇಲ್ಲ. ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ, ಉತ್ತರ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಲೂರು, ಕೊಡಗು ಜಿಲ್ಲೆಗಳಲ್ಲಿ ಪ್ರತಿದಿನ ಸಂಜೆ ಮೋಡ ಕವಿಯುತ್ತದೆ. ದಿನಬಿಟ್ಟುದಿನವೆಂಬಂತೆ ಧಾರಾಕಾರ ಮಳೆ ಸುರಿಯುತ್ತದೆ. ಈ ಜಿಲ್ಲೆಗಳಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಅದು ನೆಲ ಕಚ್ಚಿದರೆ ರೈತ ಸತ್ತಂತೆಯೇ. ಇದಕ್ಕೆ ಕಾರಣವಿದೆ.

ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ರೈತರು ಹೆಚ್ಚಾಗಿ ತರಕಾರಿ ಮತ್ತು ಆಹಾರದ ಬೆಳೆಗಳನ್ನು ಬೆಳೆಯುತ್ತಾರೆ. ತರಕಾರಿಯಾದರೆ ಮೂರು ತಿಂಗಳ ಬೆಳೆ. ಹಾಗಾಗಿಯೇ ತರಕಾರಿ ಬೆಳೆದ ರೈತ ತಾನು ಹಾಕಿದ ಬೀಜದ ಬೆಲೆಯೂ ಸಿಗದೆಂದು ಗೊತ್ತಾದಾಗ ಸರಕಾರಕ್ಕೆ ಹಿಡಿಶಾಪ ಹಾಕುತ್ತಾ ಅದನ್ನು ಹೊಲದಲ್ಲಿಯೇ ಕೊಳೆಯಲು ಬಿಡುತ್ತಾನೆ. ಅದರ ಮೇಲೆಯೇ ಉಳುಮೆ ಮಾಡಿ ಹೊಸದೊಂದು ಬೆಳೆ ತೆಗೆಯಲು ಮಾನಸಿಕವಾಗಿ ಸಿದ್ಧನಾಗುತ್ತಾನೆ. ಆಹಾರದ ಬೆಳೆ ಬೆಳೆಯುವ ರೈತ ಕೂಡ ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಾನೆ. ಆದರೆ ಅಡಿಕೆ ಬೆಳೆಗಾರನದು ವರ್ಷದ ಬೆಳೆ. ಅದು ಹಾಳಾದರೆ ವರ್ಷದ ಆಧಾಯ ಹೋದಂತೆಯೇ. ಈಗ ಅಡಿಕೆ ಬೆಳೆಗಾರ ವರ್ಷದ ಆದಾಯ ಕಳೆದುಕೊಳ್ಳುತ್ತಿದ್ದಾನೆ. ಮಾತ್ರವಲ್ಲ, ಆತನ ಮುಂದಿನ ವರ್ಷದ ಆಧಾಯ ಕೂಡ ಕೈತಪ್ಪುವ ಲಕ್ಷಣಗಳಿವೆ. ಅಡಿಕೆ ಹಣ್ಣಾಗುತ್ತಿರುವ ಜೊತೆಯಲ್ಲಿಯೇ ಮುಂದಿನ ವರ್ಷದ ಫಸಲಿನ ಹಿಂಗಾರವೂ ಕುಡಿಯೊಡೆಯುತ್ತದೆ. ಈಗ ಸುರಿಯುತ್ತಲಿರುವ ಸತತ ಮಳೆಯಿಂದಾಗಿ ಅಡಿಕೆ ಮಿಡಿ ಒಣಗಿ ಬೀಳುತ್ತಲಿದೆ.

ಅಡಿಕೆ ಬೆಳೆಗಾರ ಅಡಿಕೆಯ ಜೊತೆ ಹಲವು ಉಪ ಬೆಳೆಗಳನ್ನು ಬೆಳೆಯುತ್ತಾನೆ. ಅವುಗಳಲ್ಲಿ ಕೊಕ್ಕೊ ಮಿಡಿಗಳು ಕಪ್ಪಾಗಿ ಉದುರುತ್ತಿದೆ; ಗೇರುಬೀಜದ ಹೂ ಕರಟಿ ಹೋಗಿವೆ. ಬಿಸಿಲು ಮಳೆಯಿಂದಾಗಿ ರಬ್ಬರು ಹಾಲು ಅರ್ಧಕ್ಕೆ ಇಳಿದಿದೆ. ಇದ್ದುದರಲ್ಲಿ ಬಾಳೆ ಬೆಳೆದ ರೈತನಿಗೆ ಹಾನಿಯಾದ [ಅಡಿಕೆ ತೋಟದ ಮಧ್ಯೆ ] ಬಗ್ಗೆ ಮಾಹಿತಿ ದೊರಕಿಲ್ಲ.

ಮಲೆನಾಡಿನ ರೈತ ಹಲವಾರು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾನೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯೇ ಇದರಲ್ಲಿ ಬಹು ದೊಡ್ಡದು. ಧರ್ಮಸ್ಥಳದ ಸ್ವಸಹಾಯ ಗುಂಪುಗಳ ಕೊಡುಗೆಯೂ ಇದರಲ್ಲಿದೆ. ನನ್ನ ಜಮೀನಿನ ಸುತ್ತ ಹಲವಾರು ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಅವರ ಮಕ್ಕಳು ದೂರದೂರುಗಳಲ್ಲಿ ಕೈತುಂಬಾ ಸಂಬಳ ತರುವ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಭೂಮಿಯ ಜೊತೆ ಭಾವಾನಾತ್ಮಕ ಸಂಬಂಧವಿಲ್ಲ.ರೈತನ ಮಕ್ಕಳಿಂದು ರೈತರಾಗಿ ಉಳಿದಿಲ್ಲ. ಹಾಗಾಗಿ ಸಂಕ್ರಾಂತಿ ಈ ವರ್ಷ ಹರ್ಷ ತರುವ ಹಬ್ಬವಾಗಿ ಬಂದಿಲ್ಲ. ರೈತನ ಕಷ್ಟ ಗೊತ್ತಿಲ್ಲದ ಪೇಟೆ ಮಂದಿಗೆ ಇದೊಂದು ಸಡಗರದ ಪ್ರದರ್ಶಕ ಹಬ್ಬವಾಗಿ ಬಂದಿದೆ ಅಷ್ಟೇ.

Monday, January 4, 2010

ಬಾಲ್ಯಕ್ಕೆ ಲಗ್ಗೆ ಇಟ್ಟ ’ರಾಮಾಚಾರಿ’

’ಈ ಎಲ್ಲ ಹಿಂಸೆಯಲು ಜೀವ ಕೇಳುವುದೊಂದೆ
ತಿರುತಿರುಗಿ ಜೀವ ಕೇಳುವದೊಂದೇ-ಒಂದೇ ಒಂದು;
ಎಲ್ಲಿಂದ ಬಂದು ಕಾಡಿತು ಈ ಅಗಮ್ಯ,
ವಾಚ್ಯಾತೀತ, ವಿಫಲ, ವಿಪರೀತ ವ್ಯಥೆ?’

ಗಂಗಾಧರ ಚಿತ್ತಾಲರ ‘ದುಃಖಗೀತ’ ಕವನದ ಸಾಲುಗಳಿವು. ಗಂಗಾಧರ ಚಿತ್ತಾಲ, ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಯಶವಂತ ಚಿತ್ತಾಲರ ಅಣ್ಣ. ಇವರ ತಂದೆಯವರು ೧೯೫೫ರಲ್ಲಿ ಮನೆಯ ಹಿತ್ತಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಬರೆದ ಕವನವಿದು.

ಸಾವೊಂದು ಗಾಢವಾಗಿ ತಟ್ಟಿದ ಸಂದರ್ಭದಲೆಲ್ಲಾ ಕಾಡುವ ಕವನವಿದು.
ಹೊಸ ವರ್ಷವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ನಾವೆಲ್ಲಾ ಪ್ರೀತಿ, ಅಭಿಮಾನಗಳಿಂದ ‘ಶರೀಫಜ್ಜ’ನೆಂದೇ ಕರೆಯುತ್ತಿದ್ದ ಅಶ್ವಥ್ ಅನಂತದಲ್ಲಿ ಲೀನವಾದರು. ಮರುದಿನವೇ ವಿಷ್ಣುವರ್ಧನ್ ಅವರನ್ನು ಹಿಂಬಾಲಿಸಿದರು. ಕನ್ನಡಿಗರ ಭಾವಪ್ರಪಂಚವನ್ನು ಶ್ರೀಮಂತಗೊಳಿಸಿದ ಎರಡು ಸಾಂಸ್ಕೃತಿಕ ಮನಸ್ಸುಗಳು ಒಟ್ಟೊಟ್ಟಿಗೆ ವರ್ಷದ ಕೊನೆಯಲ್ಲಿ ಕಣ್ಮರೆಯಾದವು. ಸಡಗರದ ಜಾಗದಲ್ಲಿ ವಿಷಾದ ಆವರಿಸಿಕೊಂಡಿತು.

೫೯ ಸಾಯುವ ವಯಸ್ಸು ಖಂಡಿತಾ ಅಲ್ಲ. ಆದರೂ ವಿಷ್ಣು ಇನ್ನಿಲ್ಲ.

ನಾನೇನು ವಿಷ್ಣುವರ್ಧನನ ಅಭಿಮಾನಿಯಲ್ಲ. ಆದರೆ ಸಾಹಿತ್ಯ, ಸಂಗೀತ. ನಾಟಕ, ನೃತ್ಯ, ಸಿನಿಮಾದಂತ ಕಲಾ ಮಾಧ್ಯಮಗಳಿಗೆ ಮನಸ್ಸನ್ನು ರೂಪಿಸುವ ಶಕ್ತಿ ಇದೆಯೆಂಬುದನ್ನು ಬಲ್ಲೆ. ಕನ್ನಡದ ಸಿನಿಮಾ ಜಗತ್ತಿನಲ್ಲಿ ಅನೇಕ ನಟರಿದ್ದಾರೆ; ಇದ್ದರು. ಅವರಲ್ಲಿ ಸ್ಟಾರ್ ಗಳಾಗಿ ಮೆರೆದವರು ಇಬ್ಬರೇ; ಅವರೇ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್.

ರಾಜಕುಮಾರ್ ಗಿಂತ ವಿಷ್ಣುವರ್ಧನ್ ನನ್ನ ಮನಸ್ಸಿಗೆ ಹೆಚ್ಚು ಹತ್ತಿರದವರು. ಅದಕ್ಕೆ ಕಾರಣವಿದೆ.ನಾನು ಬಾಲ್ಯವನ್ನು ಕಳೆದು ಕೌಮಾರ್ಯಕ್ಕೆ ಕಾಲಿಡುವ ಹೊತ್ತಿಗೆ ರಾಜಕುಮಾರ್ ತುಂಬಾ ಎತ್ತರದಲ್ಲಿದ್ದರು. ಎತ್ತರದಲ್ಲಿರುವವರನ್ನು ಆರಾಧಿಸಬಹುದು. ಆದರೆ ಸಮಾನ ನೆಲೆಯಲ್ಲಿ ಕಾಣಲಾಗದು. ರಾಜಕುಮಾರ್ ಹಿರಿಯಣ್ಣನಂತಿದ್ದರು, ಅಪ್ಪನಂತಿದ್ದರು, ಮಾರ್ಗದರ್ಶಕನಂತಿದ್ದರು. ಆದರೆ ಗೆಳೆಯನಲ್ಲ; ಪ್ರೇಮಿಯಲ್ಲ; ಆತ್ಮಬಂಧುವಲ್ಲ. ಆದರೆ ವಿಷ್ಣುವರ್ಧನ್ ಇದೆಲ್ಲವೂ ಆಗಬಲ್ಲವನಾಗಿದ್ದ.

‘ನಾಗರಹಾವು’ ತೆರೆಕಂಡದ್ದು ೧೯೭೨ರಲ್ಲಿ. ನವ್ಯ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲಘಟ್ಟ. ಯುವಕರಲ್ಲಿ ಒಂದು ರೀತಿಯ ವಿಕ್ಷಿಪ್ತತೆ ಆವರಿಸಿಕೊಂಡ ಕಾಲ. ಸಾಹಿತ್ಯ ಜಗತ್ತು ಅದನ್ನು ಗುರುತಿಸಿತ್ತು. ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಲಂಕೇಶರ ‘ಬಿರುಕು’[೧೯೬೭], ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ [೧೯೭೦] ಗಿರಿಯವರ ‘ಗತಿ-ಸ್ಥಿತಿ’[೧೯೭೧]- ಇಲ್ಲೆಲ್ಲಾ ಯುವಜನಾಂಗದ ಅಸಹನೆ, ಚಡಪಡಿಕೆ, ರೋಷ, ಪ್ರತಿಭಟನೆಯಿತ್ತು. ಯುವಕರ ನಾಡಿಮಿಡಿತವನ್ನು ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ಸೆರೆಹಿಡಿದರು. ‘ರಾಮಾಚಾರಿ’ ಯುವ ಮನಸ್ಸಿನ ಪ್ರತಿನಿಧಿಯಾದರು. ನವೋದಯ ಮನಸ್ಸಿನ ಕಾದಂಬರಿಕಾರ ತ.ರಾ.ಸುಗೆ ಇದು ‘ಕೇರೆಹಾವು’ ಆಗಿ ಕಂಡರೂ ರಾತ್ರಿ ಬೆಳಗಾಗುವುದರೊಳಗಾಗಿ ವಿಷ್ಣುವರ್ಧನ ಎಂಬ ‘ಆಂಗ್ರಿ ಯಂಗ್ ಮ್ಯಾನ್’ ಉದಯವಾಗಿದ್ದ.

‘ನಾಗರಹಾವು’ ನಾನು ನೋಡಿದ ನಾಲ್ಕನೆಯ ಸಿನಿಮಾ. ಅದು ಬಿಡುಗಡೆಯಾದ ನಾಲ್ಕೈದು ವರ್ಷಗಳ ನಂತರ ನಾನದನ್ನು ನೋಡಿದೆ. ಅದಕ್ಕೆ ಕಾರಣವಿದೆ. ನನ್ನೂರು ಕುಕ್ಕೆಸುಬ್ರಹ್ಮಣ್ಯ ಹತ್ತಿರದ ಒಂದು ಹಳ್ಳಿ. ಕುಕ್ಕೆಯಲ್ಲಿ ಇಂದಿಗೂ ಥಿಯೇಟರ್ ಇಲ್ಲ. ಸಿನಿಮಾ ನೋಡಬೇಕಾದರೆ ದೂರದ ಪುತ್ತೂರಿಗೆ ಹೋಗಬೇಕು. ಅದು ಆಗದ ವಿಚಾರ. ಯಾಕೆಂದರೆ ಸಿನಿಮಾ ನೋಡಬೇಕಾದರೆ ಆ ರಾತ್ರಿ ಅಲ್ಲಿ ಉಳಿಯಲೇ ಬೇಕಾಗಿತ್ತು. ಹಾಗಾಗಿ ನಾನು ಹತ್ತನೆಯ ತರಗತಿ ಕೊನೆಯವರೆಗೆ ಸಿನಿಮಾ ನೋಡಲೇ ಇಲ್ಲ.

ನಮಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಪುತ್ತೂರು ಸೆಂಟರ್ ಆಗಿತ್ತು. ಒಟ್ಟು ಹತ್ತು ದಿನ ಅಲ್ಲಿರಬೇಕಿತ್ತು. ಬೆಳಿಗ್ಗೆ ಪರೀಕ್ಷೆ ಬರೆದು ಸಂಜೆ ಫಸ್ಟ್ ಶೋ ಸಿನಿಮಾಕ್ಕೆ ಹೋಗುತ್ತಿದ್ದೆ .ಹತ್ತು ದಿನದಲ್ಲಿ ನಾಲ್ಕು ಸಿನೆಮಾ ನೋಡಿದ್ದೆ. ಬಂಗಾರದ ಮನುಷ್ಯ, ಮಯೂರ, ನಾಗರ ಹಾವು, ಕಿಟ್ಟುಪುಟ್ಟು. ಪುತ್ತೂರಲ್ಲಿ ಆಗ ಒಂದು ಥಿಯೇಟರ್ ಮತ್ತು ಎರಡು ಟೆಂಟ್ ಮಂದಿರಗಳಿದ್ದವು.
ನಾಗರಹಾವು ಸಿನೇಮಾ ನೋಡುವುದಕ್ಕೆ ಮೊದಲೇ ನನಗೆ ಅದರ ಹಾಡುಗಳ ಪರಿಚಯ ಆಗಿತ್ತು. ಯಾಕೆಂದರೆ ನನ್ನತ್ರ ರೇಡಿಯೋ ಇತ್ತು. ಹಾಗಾಗಿ ‘ಹಾವಿನ ದ್ವೇಷ ಹನ್ನೆರಡು ವರ್ಷ...’ ನನಗೆ ತುಂಬಾ ಇಷ್ಟದ ಹಾಡಾಗಿತ್ತು. ಅದಕ್ಕೂ ಒಂದು ಹಿನ್ನೆಲೆಯಿದೆ; ನಮ್ಮಜ್ಜನಿಗೆ ಇಬ್ಬರು ಹೆಣ್ಣುಮಕ್ಕಳು.ಅಜ್ಜ ತೀರಿಕೊಂಡ ಮೇಲೆ ಅಜ್ಜಿ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಪಾಲು ಮಾಡಿ ಕೊಟ್ಟರು. ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮಮ್ಮನಿಗೆ ಬಂತು. ‘ನೀನು ಅಜ್ಜಿಯನ್ನು ನೋಡಿಕೊಂಡು ಅಲ್ಲಿಯೇ ಶಾಲೆಗೆ ಹೋಗು’ ಎಂದು ನಮ್ಮ ಅಪ್ಪ-ಅಮ್ಮ ನನ್ನನ್ನು ಅಜ್ಜಿ ಮನೆಗೆ ಕಳುಹಿಸಿದರು. ಒಬ್ಬ ಅಡುಗೆಯವರನ್ನೂ ಗೊತ್ತು ಮಾಡಿದರು. ನಾನಾಗ ಏಳನೇ ತರಗತಿಯಲ್ಲಿದ್ದೆ.

ನಮ್ಮ ದೊಡ್ಡಮ್ಮನ ಆಸ್ತಿಯನ್ನು ಅವರ ಮಗ ನೋಡಿಕೊಳ್ಳುತ್ತಿದ್ದ. ಆಗ ಒಂದು ಘಟನೆ ನಡೆಯಿತು. ಅವರ ಇನ್ನೊಬ್ಬ ಮಗ ಪುರುಷೋತ್ತಮ ಬಿಳಿಮಲೆ, ತನಗೆ ಸೈನ್ಸ್ ನಲ್ಲಿ ಆಸಕ್ತಿಯಿಲ್ಲ, ಆರ್ಟ್ಸ್ ಓದುತ್ತೇನೆ ಎಂದು ಅಜ್ಜಿ ಊರಿಗೆ ಅಣ್ಣನ್ನಲ್ಲಿಗೆ ಬಂದ. ಅವರಿಬ್ಬರೂ ಅಜ್ಜಿ ಮನೆಯಲ್ಲಿರುವುದನ್ನು ಕೇಳಿ ನಮ್ಮೂರಿನಿಂದ ನನ್ನಣ್ಣನೂ ಬಂದ. ಮೂರು ಜನ ಅಣ್ಣ ತಮ್ಮಂದಿರೂ ಜೋತೆಯಾದರೆಂದರೆ ಕೇಳಬೇಕೆ? ನಮ್ಮ ಜಮೀನಿನ ಮೇಲೆ ಮೇಸ್ಟ್ರು ಒಬ್ಬರಿದ್ರು. ನಮ್ಮ ಗದ್ದೆಗೆ ನೀರು ಬಿಡಲು ಅವರದು ಯಾವಾಗಲೂ ತಕರಾರು. ಅವರ ಮನೆ ಸ್ವಲ್ಪ ತಗ್ಗಿನಲ್ಲಿತ್ತು. ಅವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಎಲ್ಲರೂ ನನ್ನ ಓರಗೆಯವರೇ. ನನ್ನ ಈ ಮೂವರೂ ಅಣ್ಣಂದಿರು ನಮ್ಮ ಮನೆಯ ಪಕ್ಕದಲ್ಲಿರುವ ಪೇರಲೆ ಮರವನ್ನೇರಿ ಕೋರಸ್ಸಿನಲ್ಲಿ ’ಹಾವಿನ ದ್ವೇಷ ಹನ್ನೆರಡು ವರುಷ... ನಮ್ಮ ದ್ವೇಷ ನೂರು ವರುಷ..ಮೇಸ್ಟ್ರೆ..’ ಎನ್ನುತ್ತಾ ಹಾಡಿದ್ದೇ ಹಾಡಿದ್ದು. ಆ ಹಾಡಿಗೆ ನಾನು ಜೊತೆಗೂಡಿಸಿ ’ಗಂಡು ಬೀರಿ’ ಎಂಬ ಹೆಸರು ಪಡೆದುಕೊಂಡಿದ್ದೆ. ಅದೇ ಪೇರಲೆ ಮರದಲ್ಲಿ ಮರಕೋತಿಯಾಡುತ್ತಿದ್ದೆವು. ನಾನು ಹತ್ತಾರು ಬಗೆಯಲ್ಲಿ ಸಿಳ್ಳೆ ಹೊಡೆಯಲು ಕಲಿತ್ತದ್ದೆ ಈ ಮರದಡಿಯಲ್ಲಿ.

ಈ ಮೂವರೂ ಆ ಕಾಲದಲ್ಲಿ ವಿಷ್ಣುವರ್ಧನನ ಅಭಿಮಾನಿಯಾಗಿದ್ದರು ಅಂತ ಕಾಣುತ್ತೆ. ವಿಷ್ಣು ತರಹ ಜೊಂಪೆ ಕೂದಲು ತಮ್ಮದಾಗಬೇಕೆಂದು ಆಗಾಗ ನೀರು ಹಾಕಿ ತಿದ್ದಿ ತೀಡಿ ಬಾಚಿಕೊಳ್ಳುತ್ತಿದ್ದರು. ವಿಷ್ಣುವರ್ಧನ್ ತುಂಬಾ ಬಟನ್ ಗಳಿಂದ ಕೂಡಿದ ಚಿತ್ರವಿಚಿತ್ರ ಶರ್ಟ್ ಗಳನ್ನು ಹಾಕುತ್ತಿದ್ದರು. ಗುತ್ತಿಗಾರಿನಲ್ಲಿ ಒಬ್ಬ ಒಳ್ಳೆಯ ಟೈಲರು ಇದ್ದರು. ಅವರಿಗೆ ನಾವೆಲ್ಲಾ ’ಟಿಪ್ ಟಾಪ್ ಟೈಲರ್’ ಎಂದೇ ಹೆಸರಿಟ್ಟಿದ್ದೆವು. ಇವರು ಒಂದು ಸೀರೆಯನ್ನು ಪರ್ಚೇಸ್ ಮಾಡಿ ಅದನ್ನು ಹರಿದು ಮೂರು ಲುಂಗಿಗಳನ್ನಾಗಿ ಆ ಟೈಲರ್ ನಿಂದ ಮಾಡಿಸಿಕೊಳ್ಳುತ್ತಿದ್ದರು. ಹುಡುಗಿಯರ ಸ್ಕರ್ಟ್ ಬಟ್ಟೆಯಿಂದ ಶರ್ಟ್ ಹೊಲಿಸಿಕೊಳ್ಳುತ್ತಿದ್ದರು. ಅದರ ಮೇಲೆಲ್ಲಾ ಚಿತ್ರ ವಿಚಿತ್ರ ಆಕಾರಗಳಲ್ಲಿ ಬಟನ್ ಗಳನ್ನು ಹೊಲಿಸಿಕೊಳ್ಳುತ್ತಿದ್ದರು. ಆ ಶರ್ಟ್- ಲುಂಗಿಗಳನ್ನು ಹಾಕಿಕೊಂಡು ಗುತ್ತಿಗಾರು ಪೇಟೆಗೆ ಹೊರಡುತ್ತಿದ್ದರು. ಅವರಿಗೆ ಪೇಟೆಯ ಜನ ’ತೀನ್ ಬ್ರದರ್ಸ್’ ಎಂದು ಹೆಸರಿಟ್ಟಿದ್ದರು. ನನ್ನ ಸ್ವಂತ ಅಣ್ಣನಂತೂ ನಮ್ಮ ಕಬ್ಬಿಣದ ಆಚಾರಿ ಚಂದ್ರಣ್ಣನತ್ರ ಹೇಳಿ ಎರಡು ಅಲಗಿನ ಚಾಕು ಮಾಡಿಸಿಕೊಂಡು ಅದನ್ನು ಸದಾ ತನ್ನ ಬಳಿಯೇ ಇಟ್ಟುಕೊಂಡಿರುತ್ತಿದ್ದ. ಇದು ಯುವಮನಸ್ಸಿನ ಮೇಲೆ ’ರಾಮಾಚಾರಿ’ ಮಾಡಿದ ಮೋಡಿ.

ಪುತ್ತೂರಿನಲ್ಲಿ ನಾನು ಪದವಿ ಓದುತ್ತಿದ್ದೆ. ಪ್ರೇಮದ ಬಗ್ಗೆ ಕನಸು ಕಾಣುವ ಕಾಲ.ಸುಂದರ, ವಿದ್ಯಾವಂತ, ಸುಸಂಸ್ಕೃತನಾದ ಹೀರೋ ವಿಷ್ಣುವರ್ಧನ್ ನಮ್ಮ ಕನಸುಗಳಿಗೆ ಮಾದರಿಯಾಗಿದ್ದ. ಹೊಂಬಿಸಿಲಿನ ಕನ್ನಡಕಧಾರಿ ಯುವ ವೈದ್ಯ ನಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ. ನನ್ನ ಗೆಳತಿಯೊಬ್ಬಳು ಈ ಚಿತ್ರದ ವಿಷ್ಣುವರ್ಧನನ ಪೋಸ್ಟ್ ಕಾರ್ಡ್ ಸೈಜಿನ ಸುಂದರ ಭಾವಚಿತ್ರವೊಂದನ್ನು ಕಳುಹಿಸಿಕೊಟ್ಟಿದ್ದಳು. ನಾನದನ್ನು ಬಹಳ ಕಾಲದವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದೆ. ಆತ ಭಾರತಿಯನ್ನು ಮದುವೆಯಾದಾಗ ನನಗೇನೂ ಅನ್ನಿಸಲಿಲ್ಲ. ಯಾಕೆಂದರೆ ಅದಾಗಲೇ ಅನಂತನಾಗ್ ನನ್ನ ಮನಸ್ಸಿನಲ್ಲಿ ಸದ್ದಿಲ್ಲದೆ ಬಂದು ಕೂತಿದ್ದ. ಆತ ಬಾಳ ಸಂಗಾತಿಯ ಕನಸಿಗೆ ಮಾದರಿಯಾಗಿದ್ದ. ಅಲ್ಲದೆ ಸಿನಿಮಾದ ಭ್ರಾಮಕ ಜಗತ್ತಿಗೂ ವಾಸ್ತವ ಬದುಕಿಗೂ ಇರುವ ಅಂತರದ ಸ್ಪಷ್ಟ ಅರಿವು ನನಗಿತ್ತು.

ನಾವು ಬೆಳೆಯುತ್ತಾ ಹೋದಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಾ ಹೋಗುತ್ತವೆ. ನಾಗರಹಾವನ್ನು ಮೆಚ್ಚಿದ್ದ ನಾನು, ಹೊಂಬಿಸಿಲಿಗೆ ಮನಸೋತಿದ್ದೆ. ಸುಪ್ರಭಾತವನ್ನು ಇಷ್ಟಪಟ್ಟಿದ್ದೆ. ಮಲಯ ಮಾರುತ, ಬಂಧನ, ನಿಶ್ಯಬ್ದ, ಲಾಲಿ, ಮುತ್ತಿನಹಾರಗಳು ನನ್ನಂಥ ಮಧ್ಯಮ ವರ್ಗದ ಮಹಿಳೆಯರ ಮನ ಗೆದ್ದಿದ್ದವು. ನಮ್ಮ ನೋವು ನಲಿವುಗಳಲ್ಲಿ, ಹತಾಶೆ-ಪ್ರತಿಭಟನೆಗಳಲ್ಲಿ ಆತನನ್ನು ಪಾಲುದಾರನನ್ನಾಗಿ ಕಾಣುತ್ತಿದ್ದೆವು. ಅತೀತದ ಆಕರ್ಷಣೆಯಿಂದ ’ಆಪ್ತ ಮಿತ್ರ’ವನ್ನೂ ನೋಡಿದ್ದೆ.
ಜನತೆ ರೂಪಿಸಿದ ಕಲಾವಿದನೊಬ್ಬ ಜನತೆಯ ಪ್ರತಿನಿಧಿಯಾಗಿ, ಅವರ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ನಾಯಕನಾಗಿ ಕಾಣಿಸಿಕೊಂಡದ್ದು ’ಮಾತಾಡ್ ಮಾತಾಡ್ ಮಲ್ಲಿಗೆ’ ಯಲ್ಲಿ. ಅವರ ಹೆಗಲ ಮೇಲೆ ಹಸಿರು ಶಾಲು ಕಂಡು ನನಗಂತೂ ಸಂತಸವಾಗಿತ್ತು. ರಾಮಾಚಾರಿ ಯುವ ಮನಸ್ಸಿನ ಪ್ರತಿನಿಧಿಯಾಗಿದ್ದ. ಮಲ್ಲಿಗೆಯ ಹೂವಯ್ಯ ಸ್ವಾಭಿಮಾನಿ ರೈತರ ಸಂಕೇತವಾಗಿದ್ದ.ಇದು ಕಲಾವಿದನೊಬ್ಬ ಸ್ವಕೇಂದ್ರಿತ ಇಮೇಜಿನಿಂದ ಸಮೂಹದೆಡೆಗೆ ಪಯಣಿಸಿದ ಯಶೋಗಾಥೆ.

ಇಂದಿನ ಯುವಜನಾಂಗಕ್ಕೆ ಯಾರು ಮಾದರಿ ನಟರೋ ನನಗೆ ಗೊತ್ತಿಲ್ಲ. ಸಮಾಜದ ಯಾವ ಸಮಸ್ಯೆಗಳಿಗೆ ಸಿನಿಮಾ ಕನ್ನಡಿಯಾಗುತ್ತಿದೆಯೋ, ಅದು ಕೂಡ ಗೊತ್ತಾಗುತ್ತಿಲ್ಲ. ಅಡಿಗರ ’ಭೂಮಿಗೀತ’ದ ಕೊನೆಯ ಸಾಲುಗಳು ನೆನಪಾಗುತ್ತಿವೆ;

’ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ;
ದಾರಿ ಸಾಗುವುದೆಂತೊ ನೋಡಬೇಕು’


[ಜನವರಿ ೩ರಂದು ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]