Saturday, November 5, 2011

ಹಳೆ ಕಾದಂಬರಿಯ ಹೊಸಪ್ರಶ್ನೆ-’ಸಂಸ್ಕಾರ’ ಯಾರು ಮಾಡಬೇಕು?[ಏ.ಕೆ ರಾಮಾನುಜರ ”೩೦೦ ರಾಮಾಯಣಸ್’ ವಾದ- ವಿವಾದಗಳ ತೆಕ್ಕೆಯಲ್ಲಿ ನರಳುತ್ತಿದೆ. ನಾಲೈದು ವರ್ಷಗಳ ಹಿಂದೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅನಂತಮೂರ್ತಿಯವರ ’ಸಂಸ್ಕಾರ’ ಕಾದಂಬರಿ ಪಠ್ಯವಾಗಿದ್ದ ಸಂದರ್ಭದಲ್ಲಿ ಎದ್ದ ತಕರಾರುಗಳ ಸಂದರ್ಭದಲ್ಲಿ ನಾನು ಬರೆದ ಲೇಖನವೊಂದು ಕನ್ನಡ ಪ್ರಭದಲ್ಲ್ ಪ್ರಕಟವಾಗಿತ್ತು. ಈಗ ಅದು ಪ್ರಸ್ತುತವಾಗಬಹುದೆಂದು ಭಾವಿಸಿ ಪೋಸ್ಟ್ ಮಾಡುತ್ತಿದ್ದೇನೆ ]
ಇತ್ತೀಚೆಗೆ ಲೇಖಕರು ತಮ್ಮ ಕೃತಿಗಳನ್ನು ಅಳೆದು ತೂಗಿ ಬರೆಯಬೇಕಾದ ಸ್ಥಿತಿ ಉಂಟಾಗಿದೆ. ಸಾಹಿತ್ಯ ಕೃತಿಗಳು ಸಾಹಿತ್ಯೇತರ ಕಾರಣಗಳಿಂದಾಗಿ ಸುದ್ದಿ ಮಾಡುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ಅಧ್ಯಾಪಕರ ಸಂಘಕ್ಕೆ ”ಸಂಸ್ಕಾರ” ಕಾದಂಬರಿಯಲ್ಲಿ ಆಶ್ಲೀಲತೆ ಕಾಣಿಸಿದೆ. ಹಾಗಾಗಿ ಅದನ್ನು ಪಾಠ ಮಾಡಲು ಸಾಧ್ಯವಿಲ್ಲ ಎಂಬುದು ಅವರ ವಾದ.
ಇಲ್ಲಿ ನಾವು ಗಮನಿಸಬೇಕಾದ್ದು ’ಸಂಸ್ಕಾರ’ ನಾನ್ ಡಿಟೈಲ್ಡ್ ಪಠ್ಯವಾಗಿ ಆಯ್ಕೆಯಾದ ಹಿಂದಿ ಪಟ್ಯಪುಸ್ತಕ. ಇದನ್ನು ಸವಿಸ್ತಾರವಾಗಿ ಅಂದರೆ ಪ್ರತಿ ಪ್ಯಾರ, ವಾಕ್ಯ, ಶಬ್ದಗಳನ್ನು ವಿವರಿಸಿ ಹೇಳುವ ಅಗತ್ಯ ಇಲ್ಲ. ಉತ್ತಮ ಅಧ್ಯಾಪಕನಾದವನು ನಾನ್ ಡಿಟೈಲ್ಡ್ ಪುಸ್ತಕವನ್ನುತರಗತಿಯಲ್ಲಿ ತೆರೆದು ಪಾಠ ಮಾಡುವುದಿಲ್ಲ; ಮುಚ್ಚಿ ಮಾಡುತ್ತಾನೆ. ಕಾದಂಬರಿಯ ವಸ್ತು, ಆಶಯ, ರೂಪ, ಬಂಧ, ಕಾದಂಬರಿ ರಚನೆಗೊಂಡ ಕಾಲಘಟ್ಟ, ಅದರ ಸಾಂಸ್ಕೃತಿಕ ಹಿನ್ನೆಲೆ, ಲೇಖಕನ ಆಗಿನ ಸಾಮಾಜಿಕ ಸ್ಥಾನ ಮಾನ ಮುಂತಾದವುಗಳನ್ನು ತನ್ನ ವ್ಯಾಖ್ಯಾನದೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸುತ್ತಾನೆ. ಆ ಮೂಲಕ ಆ ಲೇಖಕನ ಇನ್ನಿತರ ಕೃತಿಗಳತ್ತ ವಿದ್ಯಾರ್ಥಿಗಳು ಗಮನ ಹರಿಸುವಂತೆ ಮಾಡುತ್ತಾನೆ.
ಇನ್ನು ’ಸಂಸ್ಕಾರ’ ಪಠ್ಯವಾಗಿರುವುದು ಬಿ.ಎಸ್ಸಿ ವಿದ್ಯಾರ್ಥಿಗಳಿಗೆ. ಅವರೆಲ್ಲಾ ೧೮-೨೦ರ ವಯೋಮಾನದವರು. ಮತದಾನ ಮತ್ತು ವಿವಾಹದ ವಯಸ್ಸು ಕೂಡಾ ಹದಿನೆಂಟು. ಅಂದರೆ ಅವರೆಲ್ಲಾ ಪ್ರಬುದ್ಧರು. ಮೇಲಾಗಿ ವಿಜ್ನಾನದ ವಿದ್ಯಾರ್ಥಿಗಳು. ಇವರೆದುರು ಪಾಠ ಮಾಡಲು ಮುಜುಗರವಾಗುತ್ತದೆಯೆನ್ನುವ ಅಧ್ಯಾಪಕರಲ್ಲೇ ಏನೋ ದೋಷವಿದ್ದಂತಿದೆ. ಅವರ ನಡವಳಿಕೆಗಳು ನೇರವಾಗಿದೆಯೆನ್ನಿಸುವುದಿಲ್ಲ. ಪಠ್ಯದ ಅವಶ್ಯವನ್ನು ಗುರುತಿಸುವಲ್ಲಿ ಅಧ್ಯಾಪಕರು ಸೋತಿದ್ದಾರೆ. ಇದು ಅವರ ಅಧ್ಯಯನಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗದಿದ್ದರೆ ಇಂತಹ ಮನಸ್ಥಿತಿ ರೂಪುಗೊಳ್ಳುವುದು ಸಾಧ್ಯ. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು. ಈಗ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೇಕೆ? ಬೇಡವೇ ಎಂಬ ಬಗ್ಗೆ ಪರ- ವಿರೋಧ ಚರ್ಚೆಗಳು ಬಹು ಬಿರುಸಾಗಿ ನಡೆಯುತ್ತಿದೆ. ಇದು ಅಧ್ಯಾಪಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ! ಬರದಿದ್ದರೆ ಅದರತ್ತಲೂ ಸ್ವಲ್ಪ ಗಮನ ಹರಿಸುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು!
ಶೀಲ-ಅಶ್ಲೀಲ ಎನ್ನುವುದು ನಮ್ಮ ಗ್ರಹಿಕೆಯಲ್ಲಿರುತ್ತದೆ; ನಮ್ಮ ನಡವಳಿಕೆಯಲ್ಲಿರುತ್ತದೆ; ವಿಷಯ ಮಂಡನೆಯಲ್ಲಿರುತ್ತದೆ. ಇದೇ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಾನು ಕನ್ನಡ ಎಂ.ಎ ಓದುತ್ತಿದ್ದ ಸಂದರ್ಭದಲ್ಲಿ ಕಾರಂತರ ”ಮೈ ಮನಗಳ ಸುಳಿಯಲ್ಲಿ” ಮತ್ತು ರತ್ನಾಕರವರ್ಣಿಯ ’ಭರತೇಶ ವೈಭವ” ನಮಗೆ ನಾನ್ ಡೀಟೈಲ್ಡ್ ಪಠ್ಯವಾಗಿತ್ತು. ಮೈಮನಗಳ ಸುಳಿಯಲ್ಲಿ ಕಾದಂಬರಿಯನ್ನು ಈಗ ಕುವೆಂಪು ವಿ.ವಿಯಲ್ಲಿ ಅಧ್ಯಾಪಕರಾಗಿರುವ ಡಾ. ಕೇಶವ ಶರ್ಮ ಪಾಠ ಮಾಡುತ್ತಿದ್ದರು. ಪಾಠ ಮಾಡುವ ಸಂದರ್ಭದಲ್ಲೊಮ್ಮೆ ವಿದ್ಯಾರ್ಥಿಗಳು ಕೇಳಿದ ಯಾವುದೋ ಸಂದೇಹಕ್ಕೆ ಆಗ ತುಂಬಾ ಜನಪ್ರಿಯವಾಗಿದ್ದ ಸೆಕ್ಸ್ ಪತ್ರಿಕೆ ’ರತಿ ವಿಜ್ನಾನ’ ವನ್ನು ಕೂಡಾ ಕೋಟ್ ಮಾಡಿದ್ದಂತೆ ನನಗೆ ನೆನಪು.
ಹಾಗೆಯೇ ಭರತೇಶ ವೈಭವವನ್ನು ದಿ. ಚಂದ್ರಶೇಖರ ಐತಾಳ್ ಮನ ಮುಟ್ಟುವಂತೆ ವಿವರಿಸುತ್ತಿದ್ದರು. ಇದರಲ್ಲಿ ’ಸ್ತ್ರೀ ರತ್ನ ಸಂಭೋಗ’ ಎಂಬ ಅಧ್ಯಾಯವೊಂದಿದೆ. ಚಕ್ರವರ್ತಿ ಭರತೇಶ ಮತ್ತು ಆತನ ಪಟ್ಟದ ರಾಣಿ ಕುಸುಮಾಜಿಯ ರತಿರಾತ್ರಿ ವರ್ಣನೆಯನ್ನು ಸುಮಾರು ಹನ್ನೆರಡು ಪುಟಗಳಲ್ಲಿ ರತ್ನಾಕರವರ್ಣಿ ವಿವರಿಸಿದ್ದಾನೆ. ಇದನ್ನು ಓದುತ್ತಿದ್ದರೆ ’ಕಾಮಶಾಸ್ತ್ರ’ ಬರೆದ ವಾತ್ಸಾಯನ ಕೂಡಾ ರತ್ನಾಕರವರ್ಣಿಯ ಮುಂದೆ ಎಳಸು ಎನಿಸುತ್ತದೆ.
ಇವೆರಡು ಪಠ್ಯಗಳನ್ನು ಆ ಅಧ್ಯಾಪಕರು ನಮಗೆ ಮನದಟ್ಟಾಗುವಂತೆ, ಎಷ್ಟು ಬೇಕೋ ಅಷ್ಟನ್ನು ಯಾವುದೇ ಮುಜುಗರವಿಲ್ಲದೆ ಪ್ರಬುದ್ಧತೆಯಿಂದ ವಿವರಿಸಿದ್ದಾರೆ. ಇಲ್ಲಿ ಪಠ್ಯದ ಒಟ್ಟು ಗ್ರಹಿಕೆ ಮತ್ತು ವಿಷಯ ಮಂಡನೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು; ನಮ್ಮ ಮಾತೃ ಭಾಷೆ ನಮ್ಮ ಭಾವಕೋಶದಲ್ಲಿ ಸೇರಿಕೊಂಡ ಭಾಷೆ. ಹಾಗಾಗಿ ಅದರಲ್ಲಿ ಯಾರಾದರೂ ಬಯ್ದರೆ ನಮಗೆ ನೋವಾಗುತ್ತದೆ. ಆದರೆ ಅದೇ ಬಯ್ಗಳು ಅನ್ಯ ಭಾಷೆಯಿಂದ ಬಂದರೆ ಆ ಮಟ್ಟಿನ ನೋವಾಗುವುದಿಲ್ಲ. ಹಾಗಾಗಿ ಸಂಸ್ಕೃತದಲ್ಲಿ ಬರುವ ಶೃಂಗಾರ ವರ್ಣನೆಗಳು ಮುಜುಗರವೆನಿಸುವುದಿಲ್ಲ. ಶಂಕರಾಚಾರ್ಯರು ತಮ್ಮ ’ಸೌಂದರ್ಯ ಲಹರಿ’ಯಲ್ಲಿ ದೇವಿಯ ಅಂಗಾಂಗಗಳನ್ನು ವರ್ಣಿಸಿದರೆ, ಬೆಳಗಾಗೆದ್ದು ವೆಂಕಟೇಶ್ವರ ಸುಪ್ರಭಾತದ ”ಕಮಲ ಕುಚ ಚೂಚತೇ” ಆಲಿಸಿದರೆ ಮುಜುಗರವಾಗುವುದಿಲ್ಲ.ಈ ಹಿನ್ನೆಲೆಯಲ್ಲಿ ಕನ್ನಡದ ’ಸಂಸ್ಕಾರ’ದಲ್ಲಿ ”ಚಂದ್ರಿಯ ಮೊಲೆಗಳನ್ನು ಮೆತ್ತಗೆ ಅಮುಕಬೇಕೆನಿಸುತ್ತದೆ” ಎನ್ನುವ ವಾಕ್ಯ ಉಂಟು ಮಾಡುವ ಮುಜುಗರಕ್ಕೂ ”ಚಂದ್ರಿ ಕೇ ಸ್ತನ್ಕೋ ಧೀರೆ ಧೀರೆ ದಬನೇಕಾ ಮನ್ ಹೋತಾ ಹೈ” ನೀಡುವ ಭಾವಕ್ಕೂ ವ್ಯತ್ಯಾಸವಿದೆಯಲ್ಲವೇ? ಆದರೂ ಕೆಲವು ಹಿಂದಿ ಅಧ್ಯಾಪಕರೇಕೆ ಕೊಂಕು ತೆಗೆಯುತ್ತಿದ್ದಾರೆ? ಶೃಂಗಾರ ವರ್ಣನೆ ಅಶ್ಲೀಲವೆಂದಾರೆ ಸಂಸ್ಕೃತ ಸಾಹಿತ್ಯವನ್ನೆಲ್ಲಾ ನಾವು ಸಾರಾಸಗಟಾಗಿ ತಿರಸ್ಕರಿಸಬೇಕಾಗುತ್ತದೆ.
ಅನಂತಮೂರ್ತಿಯವರು ೧೯೬೫ರಲ್ಲಿ ತಮ್ಮ ೩೬ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ’ಸಂಸ್ಕಾರ’ ೧೯೭೬ರಲ್ಲಿ ಅದನ್ನು ಕವಿ ಎ.ಕೆ ರಾಮಾನುಜನ್ ಇಂಗ್ಲೀಷ್ ಗೆ ಅನ್ವಾದಿಸಿದರು. ನೋಬೆಲ್ ಪ್ರಶಸ್ತಿ ವಿಜೇತ ನೈಪಾಲ್ ಸೇರಿದಂತೆ ಅನೇಕ ಪ್ರಸಿದ್ಧರು ಅದನ್ನು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿದ್ದಾರೆ. ಕನ್ನಡದಲ್ಲಿ ಚಲಚಿತ್ರವಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ’ಸಂಸ್ಕಾರ’ ದ ಪ್ರಮುಖ ಪಾತ್ರಗಳಾದ ಪ್ರಾಣೇಶಾಚಾರ್ಯ ಮತ್ತು ನಾರಣಪ್ಪನ ಪಾತ್ರಗಳಲ್ಲಿ ಕ್ರಮವಾಗಿ ಗಿರೀಶ್ ಕಾರ್ನಾಡ್ ಮತ್ತು ಲಂಕೇಶ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜಗತ್ತಿನ ಅನೇಕ ಸಾಹಿತ್ಯಾಸಕ್ತರಿಗೆ ಇಂದಿಗೂ ಕುತೂಹಲ ಹುಟ್ಟಿಸುವ ಕೃತಿ ’ಸಂಸ್ಕಾರ’
ಇಂತಹ ಕೃತಿಯನ್ನು ಅದು ರೂಪುವೊಡೆದ ನೆಲದಲ್ಲಿ, ನಮ್ಮದೇ ಭಾಷೆಯಲ್ಲಿ, ನಮ್ಮ ವಿದ್ಯಾರ್ಥಿಗಳಿಗೆ ಬೋದಿಸಲು ಸಾಧ್ಯವಿಲ್ಲವೆಂದರೆ…?
ಟೀವಿ ಚಾನಲ್ಲೊಂದರಲ್ಲಿ ಅಧ್ಯಾಪಕರೊಬ್ಬರು”ಸಂಸ್ಕಾರ ಓದುವುದರಿಂದ ನಮ್ಮ ಮಕ್ಕಳಲ್ಲಿ ಕಾಮಸಂಬಂಧಿ ಆಲೋಚನೆಗಳೇ ತುಂಬುತ್ತದೆ’ ಎಂದಿದ್ದಾರೆ. ಅದು ನಿಸರ್ಗ ಸಹಜ ಭಾವನೆ. ಒಂದು ವೇಳೆ ಶೃಂಗಾರ ವರ್ಣನೆ ಕೇಳಿದಾಗ ಅವರಲ್ಲಿ ಮಧುರಭಾನೆಗಳು ಮೂಡದಿದ್ದರೆ ಅವರು ’ನಾರ್ಮಲ್’ ಆಗಿಲ್ಲ ಎಂದಾಗುತ್ತದೆ. ೧೮-೨೦ರ ವಯೋಮಾನದಲ್ಲಿ ತಮ್ಮ ಮನಸು ಹೇಗಿತ್ತೆಂಬುದನ್ನು ಅಧ್ಯಾಪಕರೇ ಸ್ವವಿಮರ್ಶೆ ಮಾಡಿಕೊಳ್ಳಲಿ. ಜೊತೆಗೆ ನಮ್ಮ ಅಕ್ಷರ ಮತ್ತು ಮುದ್ರಣ ಮಾಧ್ಯಮ, ಸಿನೇಮಾ, ಇಂಟರ್ನೆಟ್ ಗಳಲ್ಲಿ ಲೈಂಗಿಕತೆ ಢಾಳಾಗಿ ವಿಜೃಂಭಿಸುತ್ತಿಲ್ಲವೇ? ನಮ್ಮ ಮಕ್ಕಳು ಕುತೂಹಲಕ್ಕಾದರೂ ಅವುಗಳೆಡೆಗೆ ನೋಡುತ್ತಿಲ್ಲವೆಂದು ನಾವೇಕೆ ಭಾವಿಸಬೇಕು?
ಈ ಕಾಲಘಟ್ಟದಲ್ಲಿ ಯಾರೂ ಕೂಡಾ, ಯಾವುದೂ ಕೂಡ ಹೊರ ನೋಟಕ್ಕೆ ಕಂಡಷ್ಟು ಮುಗ್ಧವಾಗಿಲ್ಲ.