Friday, June 24, 2016

ಓಡಿ ಹೋಗುವ ಹಂಬಲ.ಎಲ್ಲಿಯಾದರೂ ಓಡಿ ಹೋಗಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದ್ದಲ್ಲ. ಅದು ಜನ್ಮಾಂತರಗಳಿಂದ ನನ್ನ ಬಿನ್ನಿಗೆ ಬಿದ್ದ ಭೂತವಾಗಿರಬೇಕು. ಬಹುಶಃ ಓಡಿ ಹೋಗಬೇಕೆಂಬ ಹಂಬಲ ಏಕಾಂತದ ಒಂದು ಭಾಗವಾಗಿರಬೇಕು.
ಓಡಿ ಹೋಗುವುದು ಅಂದರೇನು? ಈಗಿರುವ ಸ್ಥಿತಿಯನ್ನು ಮೀರುವುದು, ಇನ್ನೊಂದರ್ಥದಲ್ಲಿ ಪಲಾಯನ. ತುಳುವಿನಲ್ಲಿ ಇದಕ್ಕೊಂದು ಒಳ್ಳೆಯ ನುಡಿಗಟ್ಟಿದೆ. ’ಪದರಾಡು ಪಾಡುನ’ ಈ ನುಡಿಗಟ್ಟಿಗೆ ಕನ್ನಡದ ಹತ್ತಿರದ ಸಂವಾದಿ ನುಡಿಗಟ್ಟು ಇದ್ದಂತಿಲ್ಲ.’ಕುಂಡೆಗೆ ಕಾಲು ಕೊಟ್ಟು ಓಡಿದ’ ಇದು ಓಟದ ತೀವ್ರತೆಯನ್ನು ಹೇಳುತ್ತದೆಯೇ ಹೊರತು. ಓಡಿ ಹೋಗುವುದಕ್ಕಿರುವ ಅಲೌಕಿಕ ಸ್ಪರ್ಶವನ್ನು ಪ್ರತಿಫಲಿಸುವುದಿಲ್ಲ.

ಈ ’ಓಡಿ ಹೋಗುವುದು’ ಇದೆಯಲ್ಲಾ.. ಇದು ಗಂಡುಮಕ್ಕಳಿಗೆ ಸಾಧ್ಯವಾದಷ್ಟು ಹೆಣ್ಣು ಮಕ್ಕಳಿಗೆ ಸುಲಭವಲ್ಲ.. ನನಗೀಗಲೂ ನೆನಪಿದೆ. ನಮ್ಮಣ್ಣ ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಿರಬೇಕು. ನಮ್ಮಪ್ಪನಿಗೂ ಅವನಿಗೂ ಯಾತಕ್ಕೋ ಜೋರು ಜಗಳವಾಯ್ತು. ನಮಗಾದರೆ ಅಂದರೆ ಹೆಣ್ಣು ಮಕ್ಕಳಿಗೆ ಅಪ್ಪ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದರು. ಆದರೆ ಗಂಡು ಮಕ್ಕಳಿಗೆ ಅಪ್ಪಂದಿರು ಹೊಡೆಯುತ್ತಿದ್ದುದು ಕಡಿಮೆ. ಕುಲೋದ್ದಾರಕ ಮನೆ ಬಿಟ್ಟು ಹೋಗುವುದೆಂದರೇನು?! ಜಗಳವಾಯ್ತು ಅಂದೆನಲ್ಲಾ, ನಮ್ಮಣ್ಣ ನೇಲೆಯಲ್ಲಿದ್ದ [ಬಟ್ಟೆ ಹಾಕಲು ಮಾಡಿನ ಜಂತಿಯಲ್ಲಿ ಆ ಕಡೆಯಿಂದ ಈ ಕಡೆಯವರೆಗೆ ಕಟ್ಟಿದ್ದ ಹಗ್ಗ] ತನ್ನ ಬಟ್ಟೆಗಳನ್ನು ಎಳೆಯುತ್ತಾ ತಾನು ಮನೆ ಬಿಟ್ಟು ಹೋಗುವುದಾಗಿ ಅನೌನ್ಸ್ ಮಾಡಿದ. ನಮ್ಮಮ್ಮ ಬಹುದೊಡ್ಡ ಅನಾಹುತವೊಂದು ಜರುಗಿ ಹೋದಂತೆ ಜೋರಾಗಿ ದನಿಯೆತ್ತಿ ಅಳತೊಡಗಿದರು. ತಂಗಿಯರು ದನಿಗೂಡಿಸಿದರು. ನಮ್ಮಪ್ಪ ಕೋಪ ಜರ್ರಂತ ಇಳಿದು ಬೆಪ್ಪಾಗಿ ನಿಂತುಕೊಂಡರು. ನಾನೂ ಸುಮ್ಮನೆ ನಿಂತಿದ್ದೆ.

ನನ್ನ ಈ ನಿರ್ಲಿಪ್ತತೆಯನ್ನು ಮನೆಯವರೆಲ್ಲಾ ತಪ್ಪಗಿ ಭಾವಿಸಿಕೊಂಡು ಇವಳಿಗೆ ಅಹಂಕಾರ. ಹಂದಿ ಗರ್ವ ಎಂದೆಲ್ಲಾ ಮೂದಲಿಸುತ್ತಿದ್ದರು. ನನಗೊತ್ತು, ಆದು ಅಹಂಕಾರವಾಗಿರಲಿಲ್ಲ; ಮತ್ತೆ ಸ್ವಾಭಿಮಾನವಾಗಿತ್ತೇ? ಗೊತ್ತಿಲ್ಲ
 ಸ್ವಾಭಿಮಾನವೆಂಬುದು ಹುಟ್ಟಿನಿಂದ ಬರುವುದೇ? ಸ್ವಾಭಿಮಾನಿಗಳೆಲ್ಲಾ ಏಕಾಂತ ಪ್ರಿಯರೇ? ಅದೂ ಗೊತ್ತಿಲ್ಲ. ಆದರೆ ನಂಗೆ ಒಬ್ಬಳೇ ಇರುವುದು ತುಂಬಾ ಇಷ್ಟವಾಗುತ್ತಿತ್ತು.

ಹೆಣ್ಣು ಮಕ್ಕಳು ಹುಡುಗರ ಹಾಗೆ ಲಾರಿ ಹತ್ತಿ ಎಲ್ಲಿಗೋ ಓಡಿ ಹೋಗುವ ಹಾಗಿರಲಿಲ್ಲ. ಅವರು ಓಡಿಹೋಗುವುದೆಂದರೆ ಒಬ್ಬ ಹುಡುಗನ ಜೊತೆ ಓಡಿ ಹೋಗುವುದೇ ಆಗಿತ್ತು. ಅದು ಮನೆ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕುವ ದುರಂತವೇ ಆಗಿತ್ತು. ಅವಳು ಆ ಹುಡುಗನನ್ನು ಮದುವೆಯಾಗಿ ಸುಖ ಸಂಸಾರ ಮಾಡುತ್ತಿದ್ದರೂ ಅವಳೆಂದೂ ಮತ್ತೆ ಆ ಮನೆಯ ಮೆಟ್ಟುಕಲ್ಲನ್ನು ಹತ್ತುವಂತಿರಲಿಲ್ಲ. ಆದರೆ ಗಂಡು ಹುಡುಗನೊಬ್ಬ ಓಡಿ ಹೋದರೂ ಕಾಲಾಂತರದಲ್ಲಿ ತಾನು ಆ ಮನೆಮಗನೆಂಬ ಗತ್ತಿನಿಂದ ಹಿಂದಿರುಗಲೂಬಹುದು. ಆತನನ್ನು  ಎಲ್ಲವನ್ನು ಮರೆತು ಕುಟುಂಬ ಆದರದಿಂದ ಬರಮಾಡಿಕೊಳ್ಳುತ್ತದೆ.

ಅದೇನು ಕಾರಣವೋ ಗೊತ್ತಿಲ್ಲ, ನಾನು ಏಳನೇ ಕ್ಲಾಸಿನಲ್ಲಿ ಪೈಲಾದರೆ ಸತ್ತು ಹೋಗುವುದೆಂದು ತೀರ್ಮಾನಿಸಿದ್ದೆ. ವಿಧ್ಯೆ ಕಲಿಯುವುದು, ಶಾಲೆಗೆ ಹೋಗುವುದೆಂದರೆ ಬಿಡುಗಡೆಯೆಂದೇ ನನಗಾಗಲೇ ಅರ್ಥವಾಗಿತ್ತು. ಹಾಗಾಗಿ ಇಲಿ ಪಾಷಾಣದ ಡಬ್ಬವೊಂದನ್ನು ತಂದು ಕಿಂಡಿ ಗೂಡಿನಲ್ಲಿಟ್ಟಿದ್ದೆ. ಆಗ ಅದಕ್ಕೆ ಟಿಕ್ ಟ್ವೆಂಟಿ ಎಂದು ಕರೆಯುತ್ತಿದ್ದರೆಂದು ನೆನಪು. ಅಥವಾ ಇವರೆಡೂ ಬೇರೆ ಬೇರೆಯಾಗಿದ್ದವೇ? ನೆನಪಿಲ್ಲ. ನಾನಾಗ ಶಾಲೆಗೆ ಹೋಗಲೆಂದು ಅಜ್ಜಿಮನೆಯಲ್ಲಿದ್ದೆ. ಮನೆಯಲ್ಲಿ ನಾನು ಅಜ್ಜಿ ಇಬ್ಬರೇ ಇದ್ದೆವು. ಆದರೆ ನಾನು ಪಾಸಾಗಿಬಿಟ್ಟೆ.

ಚೊರೆ ಮಾಡುವವರಿಂದ, ಗುಂಪಿನಿಂದ, ಜಾತ್ರೆಯ ಮನಸ್ಸಿನವರಿಂದ ನಾನು ಆಗಾಗ ಓಡಿ ಹೋಗುವುದಿದೆ. ಇದೆಲ್ಲಾ ಬಿಡಿ, ನನ್ನನ್ನು ಪ್ರೀತಿಸುತ್ತಿದ್ದ ಹುಡುಗನ ವಲಯದಿಂದಲೂ ಒಮ್ಮೆ ಓಡಿ ಹೋಗಿದ್ದೆ. ಅವನು ನಾನು ಊರಿಗೆ ಹೋಗಿರಬಹುದೆಂದು ಮಂಗಳೂರು, ಸುಳ್ಯದಲ್ಲೆಲ್ಲಾ ಅಲೆದಾಡಿ ನನ್ನಣ್ಣನನ್ನು ಪ್ರಥಮ ಬಾರಿಗೆ ಬೇಟಿಯಾಗಿ ನಿರಾಳವಾಗಿ ಬೆಂಗಳೂರಿಗೆ ಹಿಂದಿರುಗಿದ್ದ. ನಾನು ಆಪೀಸಿಗೂ ಹೋಗದೆ ಆರಾಮವಾಗಿ ಹಾಸ್ಟೇಲ್ ನಲ್ಲಿದ್ದೆ.
ಯಾವುದೋ ಜನ್ಮದ ವಾಸನೆಯ ಈ ಓಡಿ ಹೋಗುವ ಹಂಬಲ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಈಗ ಪ್ರತಿವರ್ಷ ಹಿಮಾಲಯಕ್ಕೆ ಓಡಿ ಹೋಗುತ್ತಿದ್ದೇನೆ. ಒಂದು ದಿನ ಅಲ್ಲಿಂದಲೂ ಓಡಿ ಹೋಗಬಹುದು. ಆದರೆ ಎಲ್ಲಿಗೆ? ಅದಂತೂ ದೇವರಾಣೆ ಗೊತ್ತಿಲ್ಲ!

ಈ ಓಡಿ ಹೋಗುವ ಹಂಬಲದ ಮುಂದುವರಿಕೆಯಾಗಿ ದಟ್ಟ ಅರಣ್ಯದ ನದಿ ದಂಡೆಯ ಮೇಲೆ ನಾನೊಂದು ಜಮೀನು ಖರೀದಿಸಿದೆ. ಆದರೆ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ..

 [ ಚಲಿತ ಚಿತ್ತ ಕಲಾಂ ಬರಹ ]
Monday, June 20, 2016

ಸಿಂಧು ಉತ್ಸವದಲ್ಲಿ ಅನುರಣಿಸಿತು- ನಾವೆಲ್ಲಾ ಭಾರತಿಯರು! ಐದು ಸಾವಿರ ವರ್ಷಗಳಷ್ಟು ಪುರಾತನವಾದ ಸಿಂಧು ಕೊಳ್ಳದ  ನಾಗರೀಕತೆ, ಸಿಂಧು ನದಿಯ ದಡದಲ್ಲಿ ಅರಳಿತ್ತು ಮತ್ತು ಹಿಂದುಸ್ತಾನಕ್ಕೆ ಆ ಹೆಸರು ಬರಲು  ಕಾರಣವಾಗಿತ್ತು ಎಂಬುದನ್ನು ಚರಿತ್ರೆಯಲ್ಲಿ ಓದಿದ್ದೇವೆ. ಆದರೆ ಆ ನದಿ ಮತ್ತು ನಾಗರೀಕತೆಯ ಪಳೆಯುಳಿಕೆಗಳು ಇಂದು ಪಾಕಿಸ್ತಾನದ ಆಸ್ತಿ. ಹಾಗಾಗಿ ನಮಗೆ ಬೇಕೆಂದಾಗಲೆಲ್ಲಾ ಅದನ್ನು ನೋಡುವುದು ಸಾಧ್ಯವಿಲ್ಲ. [ಹಾಗೆಂದು ಭಾವಿಸಿದ್ದೆ] ಆದರೂ..ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ಅರ್ಚಿಸುವಾಗ ಸಪ್ತನಧಿಯಲ್ಲಿ ಸಿಂಧುವನ್ನು ಸೇರಿಸಿಸುತ್ತೇವೆ;

’ಗಂಗೇಚಾ ಯಮುನೇ ಚೈವಾ ಗೋಧಾವರಿ ಸರಸ್ವತಿ, ನರ್ಮದೇ, ಸಿಂಧು, ಕಾವೇರಿ ಜಲಸ್ಮಿನ್ ಸನ್ನಿಧಿಂಕರು’
ಹೀಗೆ ಭಾರತೀಯರು ಪರಮ ಪವಿತ್ರವಾದುದೆಂದು ಪೂಜಿಸುವ, ನಮ್ಮ  ಭಾವಕೋಶದಲ್ಲಿ ಸೇರಿ ಹೋಗಿರುವ,  ನಮ್ಮ ರಾಷ್ಟ್ರಗೀತೆಯಲ್ಲಿ ಉಲ್ಲೇಖಿತವಾಗಿ ನಮ್ಮವಳಾಗಿದ್ದ ಸಿಂಧು  ಭಾರತದಲ್ಲಿಯೂ ಸ್ವಲ್ಪ ದೂರ ಹರಿಯುತ್ತಾಳೆಂದು ನನಗೆ ಬಹುಕಾಲದವರೆಗೂ ಗೊತ್ತಿರಲೇ ಇಲ್ಲ. ಆದರೆ ಕಳೆದ ವರ್ಷ ಯೋಗ ದಿನದಂದು [ಜೂನ್ ೨೧] ಆ ನದಿ ದಂಡೆಯಲ್ಲಿ ಅಡ್ಡಾಡಿದೆ, ಅ ಪವಿತ್ರ  ಜಲವನ್ನು ಸ್ಪರ್ಶಿಸಿದೆ, ನದಿಗಿಳಿದು ಮಿಂದೆ. ಆಕೆಯನ್ನು ತಾಯಿ ಎಂದು ಪರಿಭಾವಿಸಿ ಪುನೀತರಾದ ಭಕ್ತ ಜನ ಮತ್ತು ಇತ್ತೀಚೆಗೆ ವಾಸ್ತವದ ನೆಲೆಗಟ್ಟಿನಲ್ಲಿ ಲೇಹ್ ನಲ್ಲಿ ಆಚರಿಸಿಕೊಂಡು ಬರುತ್ತಿರುವ ’ಸಿಂಧು ಉತ್ಸವ’ ದಲ್ಲಿ ಭಾಗಿಯಾಗಿ ಬಂದೆ.

ಕಳೆದ ಕೆಲವರ್ಷಗಳಿಂದ ಪ್ರತಿವರ್ಷ ನಾವು ಐದು ಮಂದಿ ಸ್ನೇಹಿತರು ಹಿಮಾಲಯದ ಕೆಲವು ಗಿರಿ ಶೃಂಗಗಳಿಗೆ ಟ್ರೆಕ್ಕಿಂಗ್ ಹೋಗುತ್ತಿದ್ದೆವು. ಕಳೆದ ವರ್ಷ ಸ್ವಲ್ಪ ಬದಲಾವಣೆ ಇರಲೆಂದು ಜಮ್ಮು ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದೆವು. ಆ ಬಗ್ಗೆ ಮಾಹಿತಿ ಕಲೆ ಹಾಕಿಕೊಳ್ಳುತ್ತಿರುವಾಗ ನಾವು ಹೋಗುವ ಸಮಯದಲ್ಲೇ ಆ ರಾಜ್ಯದ ಲಡಾಕ್ ಜಿಲ್ಲೆಯ ಲೇಹ್ ನಲ್ಲಿ ’ಸಿಂಧು ಉತ್ಸವ’ ನಡೆಯುತ್ತಿದೆಯೆಂದು ಗೊತ್ತಾಯ್ತು. ಅದರಲ್ಲಿ ಭಾಗಿಯಾಗಬೇಕೆಂಬ ಉತ್ಸಾಹದಿಂದ ನಾವು ಬೆಂಗಳೂರಿನಿಂದ ಐದು ಮಂದಿ ರಾಜಧಾನಿ ರೈಲು ಏರಿದ್ದೆವು

ಸಿಂಧು ನದಿ ಟಿಬೇಟ್ ಪ್ರಸ್ಥಭೂಮಿಯಲ್ಲಿರುವ [ಈಗ ಚೀನಾದೇಶದ] ಮಾನಸಸರೋವರದ ಸಮೀಪ ಹುಟ್ಟಿ ಕಾರಕೋರಂ ಹಿಮ ಪರ್ವತಗಳೆಡೆಯಲ್ಲಿ  ಬಳುಕಿ ಬಾಗುತ್ತಾ ಜಮ್ಮು ಕಾಶ್ಮೀರದ ಲಡಾಕಿನಲ್ಲಿ ಭಾರತವನ್ನು ಪ್ರವೇಶಿಸುತ್ತಾಳೆ. ಉಗಮದಿಂದ ಪಾಕಿಸ್ತಾನದ ಕರಾಚಿಯಲ್ಲಿ ಕಡಲ ಸೇರುವವರೆಗಿನ ಸಿಂಧು ನದಿಯ ಒಟ್ಟು ಉದ್ದ ೩೧೮೦ ಕಿ.ಮೀ. ಇದರಲ್ಲಿ ಕೇವಲ ೩೦೦ ಕಿ. ಮೀ ಮಾತ್ರ ಆಕೆ ಭಾರತದ ಭೂಭಾಗಕ್ಕೆ ಸೇರಿದವಳು.
ನಮ್ಮ ದೇಶಕ್ಕೆ ’ಹಿಂದುಸ್ತಾನ್’ ಎಂಬ ಹೆಸರನ್ನು ತಂದುಕೊಟ್ಟ,ಋಗ್ವೇದದಲ್ಲಿ ೧೭೬ ಬಾರಿ ಉಲ್ಲೇಖಿತವಾದ, ಪುರಾತನವಾದ ಸಿಂಧು ನಾಗರೀಕತೆಯನ್ನು ತನ್ನ ಸೆರಗಿನಲ್ಲಿ ಪೋಷಿಸಿದ ಸಿಂಧು ನದಿಯನ್ನು ಈಗ ಭಾರತದ ಐಕ್ಯತೆ ಮತ್ತು ಕೋಮು ಸೌಹಾರ್ಧದ ಸಂಕೇತವನ್ನಾಗಿಸಿಕೊಂಡು ಪ್ರತಿ ವರ್ಷ ಜೂನ್ ತಿಂಗಳ ಹುಣ್ಣಿಮೆಯಂದು ’ಸಿಂಧು ದರ್ಶನ್ ಉತ್ಸವ್ ಅನ್ನು ಆಚರಿಸಲಾಗುತ್ತಿದೆ. ಅದನ್ನು ನಮ್ಮ ಗಡಿ ಕಾಯುವ ವೀರ ಸೈನಿಕರಿಗೆ ಅರ್ಪಿಸಲಾಗುತ್ತಿದೆ. ಈ ವರ್ಷ ಜೂನ್ ೨೩ರಿಂದ ೨೬ರ ತನಕ ನಡೆಯಲಿದೆ.

ಈ ಉತ್ಸವಕ್ಕೊಂದು ಹಿನ್ನೆಲೆಯಿದೆ. ೧೯೯೬ರಲ್ಲಿ ಬಿಜೆಪಿಯ ನೇತಾರ ಲಾಲ್ ಕ್ರುಷ್ಣ ಅಡ್ವಾಣಿ ಮತ್ತು ಆಗ ಪತ್ರಕರ್ತರಾಗಿದ್ದ ಈಗ  ರಾಜಕಾರಣಿಯಾಗಿರುವ ತರುಣ್ ವಿಜಯ್ ಲೇಹ್ ಗೆ ಭೇಟಿ ನೀಡಿದ್ದರು. ಲೇಹ್ ನಲ್ಲಿ ಸಿಂಧು ನದಿಯನ್ನು ನೋಡಿದ ತರುಣ್ ವಿಜಯ್ ಬಹುಪುರಾತನ ಇತಿಹಾಸವನ್ನು ಹೊಂದಿರುವ ಇದರ ದಂಡೆಯಲ್ಲಿ ಇಂತಹದೊಂದು ಉತ್ಸವವನ್ನು ಏರ್ಪಡಿಸುವ ಕನಸು ಕಂಡರು. ಮರು ವರ್ಷ ೧೯೯೭ರಲ್ಲಿ ಇದು ಸಾಕಾರವಾಯ್ತು.  ಸಿಂಧು ನದಿಯ ಹಿನ್ನೆಲೆಯಲ್ಲಿ ಆ ನಾಗರೀಕತೆಯ ಸಿಂಬಲ್ ಆದ ಎತ್ತು ಮತ್ತು ಸಿಂಧು ನದಿಯನ್ನು ವ್ಯಾಖ್ಯಾನಿಸುವ ಋಗ್ವೇದದ ಸಾಲುಗಳನ್ನು ಒಳಗೊಂಡ ಸ್ಟಾಂಪ್ ಅನ್ನು ಭಾರತ ಸರಕಾರವು ೧೯೯೯ ರಲ್ಲಿ ಬಿಡುಗಡೆ ಮಾಡಿತ್ತು.  ೨೦೦೦ ನೇ  ಇಸವಿಯ ಜೂನ್ ೭ರಂದು ನಡೆದ ಸಿಂಧು ಉತ್ಸವದಲ್ಲಿ ಆಗ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪಯಿಯವರು ಭಾಗವಹಿಸಿದ್ದರು. ಅಂದು ಅವರು ಸಿಂಧು ಕಲ್ಚರಲ್ ಸೆಂಟರ್ ಗೆ ಶಂಕುಸ್ಥಾಪನೆ ಮಾಡಿದ್ದರು.

ಸಿಂಧು ಉತ್ಸವಕ್ಕೆ ರಾಷ್ಟ್ರದಾದ್ಯಂತ ಪ್ರವಾಸಿಗರು ಬರುತ್ತಾರೆ. ಹಾಗೆ ಬರುವಾಗ ಅವರು ತಂತಮ್ಮ ರಾಜ್ಯಗಳ ನದಿಗಳ ಪವಿತ್ರ ಜಲವನ್ನು ಮಣ್ಣಿನ ಕುಂಭಗಳಲ್ಲಿ ಹೊತ್ತು ತಂದು ಸಿಂಧು ನದಿಯಲ್ಲಿ ಸೇರಿಸಿ ವೈವಿದ್ಯತೆಯಲ್ಲಿ ಏಕತೆಯನ್ನು ಕಾಣುತ್ತಾರೆ.ನಾವು ಅಲ್ಲಿಗೆ ಹೋದಾಗ ನಮ್ಮ ರಾಜ್ಯದಿಂದಲೂ ೧೭೦ ಮಂದಿ ಕನ್ನಡಿಗರು ಭಾಗವಹಿಸಲೆಂದೇ ಇಲ್ಲಿಗೆ ಬಂದಿದ್ದರು. ಅವರನ್ನೆಲ್ಲಾ ಅಲ್ಲಿ ಕಂಡು ಮಾತಾಡಿಸಿದ್ದು ನಮಗೆ ಮುದವನ್ನು ನೀಡಿತ್ತು.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ, ರಾಷ್ಟ್ರೀಯ ಭಾವೈಕತೆಯನ್ನು ಬಿಂಬಿಸುವ ಈ ಉತ್ಸವವನ್ನು ಎಲ್ಲಾ ಮತಧರ್ಮವರು ಒಟ್ಟಾಗಿ ಸೇರಿ ಆಚರಿಸುತ್ತಾರೆ. ನಿಮಗೆ ಗೊತ್ತಿರಬೇಕು, ಇಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಬೌದ್ಧರ ಬಾಹುಳ್ಯವಿರುವ ಲಡಾಕಿನಲ್ಲಿ ಮುಸ್ಲಿಂ ಸಮುದಾಯ ಎರಡನೇ ಸ್ಥಾನದಲ್ಲಿದ್ದಾರೆ. ಲಡಾಕ್ ಬುದ್ದಿಸ್ಟ್ ಅಸೋಶಿಯನ್, ಶಿಯಾ ಮಜ್ಲೀನ್,ಸುನ್ನಿ ಅಂಜುಮಾನ್, ಕ್ರಿಶ್ಚಿಯನ್ ಮೊರಾವಿಯನ್ ಚರ್ಚ್, ಹಿಂದು ಟ್ರಸ್ಟ್, ಸಿಖ್ ಗುರುದ್ವಾರ ಪ್ರಬಂಧಕ್ ಸಮೀತಿ- ಇವರೆಲ್ಲಾ ಒಟ್ಟಾಗಿ ಭಾರತದ ಪುರಾತನ ನಾಗರೀಕತೆ ಮತ್ತು ಸಂಸ್ಕ್ರುತಿಯನ್ನು ಕೇಂದ್ರವಾಗಿಟ್ಟುಕೊಂಡು ಮೂರು ದಿವಸಗಳ ಸಿಂಧು ಉತ್ಸವದ ಕಾರ್ಯಕ್ರಮಗಳ ರೂಪರೇಶೆಯನ್ನು ತಯಾರಿಸುತ್ತಾರೆ..ಇಲ್ಲಿಯ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಈಶಾನ್ಯ ರಾಜ್ಯಗಳ ತಂಡಗಳು ಕೂಡಾ ಭಾಗವಹಿಸಿದ್ದನ್ನು ನಾವು ಕಂಡೆವು. ಉತ್ಸವ ನಡೆಯುವ ಸಮಯದಲ್ಲೇ ಪ್ರಥಮ ಅಂತರಾಷ್ಟ್ರೀಯ ಯೋಗ ದಿನವೂ ಬಂದಿತ್ತು. ಹಾಗಾಗಿ ನದಿ ದಂಡೆಯಲ್ಲೇ ಸಾಮೂಹಿಕ ಯೋಗವನ್ನೂ ಮಾಡಲಾಯ್ತು.

ಅತ್ಯಂತ ಬಿಗಿ ಬಂದೋಬಸ್ತಿನಲ್ಲಿ ಸಿಂಧು ಉತ್ಸವ ನಡೆಯುತ್ತದೆ; ಯಾಕೆಂದರೆ ಅದು ಕಾಶ್ಮೀರ. ಅಥಿತಿಗಳು ಭಾಷಣ ಮಾಡುವಾಗ ಯಾವ ಕೋನದಿಂದ ನೋಡಿದರೂ ಅವರ ಮುಖ್ದ ಕಿಂಚಿತ್ ದರ್ಶನವೂ ಆಗಲಿಲ್ಲ. ಅವರ ಗನ್ ಮ್ಯಾನ್ ಗಳು, ಸೇನಾ ಸಿಬ್ಬಂದಿ ಮೆಷಿನ್ ಗನ್ ಹಿಡಿದು. ಅವರನ್ನು ಎರಡ್ಮೂರು ಸುತ್ತು ವರ್ತುಲಾಕಾರದಲ್ಲಿ ಕೋಟೆ ಕಟ್ಟಿದ್ದರು. ನಮ್ಮ ಪ್ರವಾಸೋಧ್ಯಮ ಮತ್ತು ಸಂಸ್ಕ್ರುತಿ ಸಚಿವರಾದ ಮಹೇಶ್ ಶರ್ಮ, ಜಮ್ಮು ಕಾಶ್ಮೀರದ ಸ್ಪೀಕರ್ ಕವೀಂದರ್ ಗುಪ್ತಾ, ಉಪಮುಖ್ಯಮಂತ್ರಿ ನಿರ್ಮಲ್ ಕುಮಾರ ಸಿಂಗ್, ಲೇಹ್ ನ ಸಂಸತ್ ಸದಸ್ಯರಾದ ತುಪ್ತಾನ್ ಚುವಾಂಗ್, ಸಿಂಧು ಉತ್ಸವ ಸಮಿತಿಯ ಪೋಶಕರಾದ ಇಂದ್ರೇಶ್ ಕುಮಾರ ಮುಂತಾದ ಗಣ್ಯರು ಉತ್ಸವದಲ್ಲಿ ಭಾಗಿಯಾಗಿ ಸಿಂಧು ನದಿಯ ಪ್ರಾಚೀನತೆ ಮತ್ತು ಅದನ್ನು ಪುನರುಜ್ಜೀವಗೊಳಿಸುವ ಬಗ್ಗೆ ಲಡಾಕಿ ಸಂಸ್ಕ್ರುತಿಯ ಬಗ್ಗೆ, ಅಖಂಡ ಭಾರತದಲ್ಲಿ ತಮಗಿರುವ ನಂಬುಗೆಯ ಬಗ್ಗೆ, ಲಡಾಕಿನ ಬೌಗೋಳಿಕ ವಿಶಿಷ್ಟತೆಯ ಬಗ್ಗೆ ಮಾತಾಡಿದರು. ಇದೆಲ್ಲವೂ ಪೋಲಿಸ್ ಮತ್ತು ಸೇನೆಯ ಸರ್ಪಗಾವಲಿನಲ್ಲೇ ನಡೆದವು. ಹೆಜ್ಜೆ ಹೆಜ್ಜೆಗೂ ಅಲ್ಲಿ ಸೇನಾ ಸಿಬ್ಬಂದಿಯೇ ಕಾಣುತ್ತಿದ್ದರು.
ಸಿಂಧು ಕೊಳ್ಳ-ಮ್ಯಾಗ್ನಟಿಕ್ ಹಿಲ್ ಹತ್ತಿರ
ಅವರೆಲ್ಲರ ಮಾತಿನ ಸಾರಾಂಶ ಇಷ್ಟು; ಸಮುದ್ರ ಮಟ್ಟದಿಂದ ೧೧೫೦೦ ಅಡಿ ಎತ್ತರದಲ್ಲಿರುವ ಲಡಾಕ್ ನಲ್ಲಿ ಆಮ್ಲಜನಕದ ಕೊರತೆಯಿದೆ, ಹಸಿರಿಲ್ಲ. ಸುತ್ತ ಬೋಳು ಪರ್ವತಗಳು. ಅಲ್ಲಲ್ಲಿ ಗಿಡ್ಗಳಿದ್ದರೂ ಅವು ೩-೪ ಅಡಿಗಳಿಗಿಂತ ಜಾಸ್ತಿ ಎತ್ತರ ಬೆಳೆಯಲಾರವು.. ಹಾಗಾಗಿ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಇಲ್ಲಿ ತಲೆ ನೋವು ಬರುವುದು ಸಾಮಾನ್ಯ. ಅದಕ್ಕಾಗಿ ಯಾಥೇಚ್ಛ ನೀರು ಕುಡಿಯಿರಿ. ಇದು ಭಾರತದ ಮರುಭೂಮಿ. ಈ ಮಣ್ಣಿನ ಧಾರಣಾಶಕ್ತಿ ಕಡಿಮೆ. ಹಾಗಾಗಿ ಅತೀ ಎತ್ತರದ ಕಟ್ಟಡಗಳನ್ನು ಕಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ.  ತಾವು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾದ ಕಾರಣ ಭಾರತದ ಇತರ ಜನರಿಗಿಂತ ಭಿನ್ನವಾಗಿ ಕಾಣುತ್ತೇವೆ. ಹಾಗಾಗಿ ಅವರು ನಮ್ಮನ್ನು ವಿದೇಶಿಯರೆಂದು ಭಾವಿಸುತ್ತಾರೆ. ಆದ್ರೆ ನಾವು ದೇಶಭಕ್ತರು. ಕಾರ್ಗಿಲ್ ಯುದ್ಧದಲ್ಲಿ ಅತಿ ಹೆಚ್ಚು ಬಲಿದಾನಗೈದವರು ನಾವೇ. ಅದಕ್ಕಾಗಿಯೇ ನಾವು ಮತ್ತೆ ಮತ್ತೆ ಹೇಳುತ್ತಿದ್ದೇವೆ;ನಾವೂ ನಿಮ್ಮವರೇ!
ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ.
ನಮ್ಮ ದೇಶದ ಮುಕುಟ ಮಣಿಯಂತಿರುವ ಜಮ್ಮು ಕಾಶ್ಮೀರ ರಾಜ್ಯದ  ಲಡಾಕ್ ನಲ್ಲಿ ನಡೆಯುವ ಈ ಉತ್ಸವದಲ್ಲಿ ನೀವು ಭಾಗವಹಿಸಬೇಕೆಂದು ಬಯಸಿದ್ದಲ್ಲಿ ಒಂಚೂರು ಸಿದ್ಧತೆಗಳೊಡನೆ ಹೋಗುವುದು ಒಳ್ಳೆಯದು. ಯಾಕೆಂದರೆ ಜಮ್ಮು ಕಾಸ್ಮೀರ ನಮ್ಮ ದೇಶದ ಉಳಿದ ರಾಜ್ಯಗಳಂತಲ್ಲ.ಅದಕ್ಕೆ ವಿಶೇಷ ಅಧಿಕಾರವಿದೆ. ಕಾನೂನಿದೆ; ಪ್ರತ್ಯೇಕ ಅಸ್ತಿತ್ವವಿದೆ. ಅದು ಸೇನೆಯ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿರುವ ನಾಡು. ಅಲ್ಲಿ ನಿಮ್ಮ ಪ್ರೀ ಪೆಯ್ಡ್ ಮೊಬೈಲ್ ಪೋನ್ ಕೆಲಸ ಮಾಡುವುದಿಲ್ಲ.  ಇದರ ಒಂದು ಜಿಲ್ಲೆಯಾದ ಲಡಾಕ್ ನಲ್ಲಿ  ಸಿಂಧು ಯಾತ್ರ ಉತ್ಸವ್ ನಡೆಯುತ್ತದೆ. ಇದು ಸಮುದ್ರಮಟ್ಟದಿಂದ ೧೧೫೦೦ ಕಿ ಮೀ ಎತ್ತರದಲ್ಲಿದೆ. ಸುತ್ತಮುತ್ತ ಹಿಮಾಲಯ ಪರ್ವತ ಶ್ರೇಣಿ. ಗಿಡಮರಗಳಿಲ್ಲ. ಆಮ್ಲಜನಕದ ಕೊರತೆಯಿದೆಖಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿಯ ಹವಮಾನಕ್ಕೆ ಒಗ್ಗಿಕೊಳ್ಳುವಂತೆ ಒಂದು ದಿವಸ ಕಡ್ಡಾಯವಾಗಿ ರೂಮಿನೊಳಗೆ ಇರಬೇಕಾಗುತ್ತದೆ. ಸಣ್ಣಗೆ ತಲೆನೋಯುವುದು, ಒಮ್ಮೊಮ್ಮೆ ವಾಕರಿಕೆ ಬರುವುದು ಇವೆಲ್ಲ ಅಲ್ಟಿಟ್ಯೂಡ್ ಸಿಕ್ನೆಸ್ ಗಳೇ. ಹಾಗಾಗಿಯೇ ಇಲ್ಲಿಯ ಎಲ್ಲಾ ಪ್ರವಾಸಿ ವಾಹನಗಳಲ್ಲಿ ಅಕ್ಸಿಜನ್ ಸಿಲಿಂಡರ್ ಗಳನ್ನು ಇಟ್ಟಿರುತ್ತಾರೆ.

ತುಂಬಾ ಮಿತವ್ಯಯದಲ್ಲಿ ನಮ್ಮ ಪ್ರವಾಸ ಹಮ್ಮಿಕೊಳ್ಳುತ್ತಿದ್ದುದರಿಂದ ರೈಲಿನಲ್ಲಿ ದೆಹಲಿ ತಲುಪಿದೆವು. ದೆಹಲಿಯಿಂದ ಲೇಹ್ ತಲುಪಲು  ಇರುವುದು ಎರಡೇ ರಸ್ತೆ ಮಾರ್ಗಗಳು. ಒಂದು ಮನಾಲಿ ರೂಟ್. ಇನ್ನೊಂದು ಶ್ರೀನಗರ ರೂಟ್. ಶ್ರೀನಗರ ಮಾರ್ಗದಲ್ಲಿ ಹೋದರೆ ನಿಸರ್ಗದ ಅನುಪಮ ಐಸಿರಿಯ ದರ್ಶನವಾಗುತ್ತದೆಯೆಂದು ಆ ರೂಟನ್ನೇ ಆಯ್ಕೆಮಾಡಿಕೊಂಡೆವು. ಇದಲ್ಲದೆ ಮನಾಲಿ ರೂಟ್ ಇನ್ನೂ ಪ್ರಯಾಣಕ್ಕೆ ತೆರವಾಗಿರಲಿಲ್ಲ. ರಸ್ತೆಗಳಲ್ಲಿ ಆಳೆತ್ತರದ ಹಿಮ ಆವರಿಸಿಕೊಂಡಿತ್ತು. 
ಹಸಿರು ಕಾಣಿಸುತ್ತಿರುವುದು ಸಿಂಧು, ಬೂದು ಬಣ್ಣದ್ದು ಝನ್ಸ್ ಕಾರ್-ಲೇಹ್ ಸಮೀಪ ನಿಮು ಎಂಬ ಊರಲ್ಲಿ

ದೆಹಲಿಯಿಂದ ವಿಮಾನದಲ್ಲಿ ಜಮ್ಮು ಮೂಲಕವಾಗಿ ಶ್ರೀನಗರ ತಲುಪಿ ಅಲ್ಲಿ ಆ ದಿನ ತಂಗಿ ಅಲ್ಲಿಂದ ಸರಕಾರಿ ಬಸ್ಸಿನಲ್ಲಿ  ಕಾರ್ಗಿಲ್ ಮೂಲಕವಾಗಿ ಲೇಹ್ ತಲುಪುವುದು ನಮ್ಮ ಪ್ಲಾನ್ ಆಗಿತ್ತು. ರಸ್ತೆ ಮೂಲಕ ಹೋಗಿದ್ದರೆ ದೆಹಲಿಯಿಂದ ಶ್ರೀನಗರ ತಲುಪಲು ಎರಡು ದಿನ ಅಲ್ಲಿಂದ ಲೇಹ ತಲುಪಲು ಇನ್ನೆರಡು ದಿನ. ಒಟ್ಟು ನಾಲ್ಕು ದಿನಗಳಾಗುತ್ತಿತ್ತು. ಇನ್ನೊಂದು ಮನಾಲಿ ರೂಟ್.ಇಲ್ಲಿಯೂ ದೆಹಲಿಯಿಂದ ಮನಾಲಿ ಮೂಲಕವಾಗಿ  ಲೇಹ್ ತಲುಪಲು ನಾಲ್ಕು ದಿನಗಳು ಬೇಕು. ಅಂದರೆ ನಿಮ್ಮ ಪ್ರವಾಸದ ಒಟ್ಟು ದಿನಗಳಲ್ಲಿ ಎಂಟು ದಿನಗಳು ದಾರಿ ಕ್ರಮಿಸುವುದರಲ್ಲೇ ಕಳೆದು ಹೋಗುತ್ತದೆ. ಆದರೆ ವಿಮಾನ ಪ್ರಯಾಣದಲ್ಲಿ ಸಿಗದ ಕಣಿವೆ ರಾಜ್ಯದ ಅದ್ಭುತವಾದ ಗಿರಿ ಶಿಖರಗಳ ಸೌಂದರ್ಯ, ನಮ್ಮ ಗಡಿ ಕಾಯುವ ಯೋದರ ಅಸಂಖ್ಯ ಸೇನಾನೆಲೆಗಳನ್ನು ನೋಡುವ ಭಾಗ್ಯ ರಸ್ತೆ ಪಯಣದಲ್ಲಿ ನಮ್ಮದಾಗುತ್ತದೆ. ಶ್ರೀನಗರ ದಾರಿಯಂತೂ ಅತ್ಯಂತ ರಮಣೀಯವೂ, ರುದ್ರಭಯಂಕರವೂ ಆಗಿರುತ್ತದೆ. ಸೋನು ಮಾರ್ಗವಾಗಿ ಬರುವಾಗ ಬಾಲ್ಟಾಲ್ ಹತ್ತಿರ ಏರಿ ಬರುವ ಸುತ್ತು ಹಾದಿಯಲ್ಲಿ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಕುಳಿತಿರಬೇಕಾಗುತ್ತಿತ್ತು. ಇಲ್ಲಿಯೇ ರಸ್ತೆ ಅಮರನಾಥ್ ಕಡೆಗೆ ಕವಲೊಡೆಯುತ್ತದೆ. ಬಲ್ಟಾಲ್ ನಿಂದ ಕೇವಲ ೨೫ ಕಿ.ಮೀ ದೂರ ನಡೆದರೆ ಅಮರನಾಥ್ ಗುಹೆಗಳು ಸಿಗುತ್ತವೆ. ನಾವು ಆದಾರಿಯಲ್ಲಿ ಬಂದಾಗ ಸೇನೆ ಯಾತ್ರಾರ್ಥಿಗಳಿಗಾಗಿ ಡೇರೆಯನ್ನು ಸಿದ್ಧಪಡಿಸುತ್ತಿತ್ತು.
ಜಮ್ಮು ಕಾಶ್ಮೀರಕ್ಕೆ ಪ್ರವಾಸ ಹೋಗಬೇಕೆನ್ನುವ ಹಂಬಲವುಳ್ಳವರು ಸಿಂಧು ಉತ್ಸವಕ್ಕೆ ತಮ್ಮ ಡೇಟ್ ಅನ್ನು ಹೊಂದಿಸಿಕೊಂಡರೆ ಅದು ನಿಶ್ಚಯವಾಗಿಯೂ ಪ್ರವಾಸದ ಬೋನಸ್ಸೇ !.

[ಉದಯವಾಣಿಯ ”ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟವಾದ ಲೇಖನ ]
 .
 

Wednesday, June 15, 2016

ಕಪ್ಪೆ ಶಿಬಿರಕ್ಕೆ ಹೊರಟು ನಿಂತೆ!ಮಗನನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿಗೆ ಬಿಟ್ಟು ಬಂದೆ.
ಮಗಳು ದೂರ ದೇಶದಲ್ಲಿದ್ದಾಳೆ.
ಮನೆ ಬಣಗುಡುತ್ತಲಿದೆ.
ಮೊನ್ನೆ ನನ್ನ ಗೆಳತಿಯೊಬ್ಬಳು ಅಮೇರಿಕಾದಿಂದ ಬಂದವಳು ನಿನ್ನೆ ತಾನೇ ಹಿಂತಿರುಗಿ ಹೋದಳು.
ಇತ್ತೀಚೆಗೆ ಗೆಳೆಯನೊಬ್ಬ ಇದ್ದಕ್ಕಿದ್ದಂತೆ ಮೌನ ವ್ರತ ಆರಂಭಿಸಿದವನು ನನ್ನೊಂದಿನ ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡ.
ಪಾರಿಜಾತ ಮರದಲ್ಲಿ ಜಕ್ಕವಕ್ಕಿಯಂತೆ ಕೂತಿರುತ್ತಿದ್ದ ಸೂರಕ್ಕಿಗಳಲ್ಲಿ ಒಂದು ಇದ್ದಕ್ಕಿದ್ದಂತೆ ಕಾಣೆಯಾಗಿ ಈಗ ಅದೂ ಕಾಣಿಸುತ್ತಿಲ್ಲ.
ಮರಕ್ಕೆ ಚಿಂತೆ ಆವರಿಸಿದೆ..
ಜೊತೆಯಾಗಿದ್ದದ್ದು ಬೇರೆಯಾಗುವುದು ಅತ್ಯಂತ ಸಹಜ. ಉಳಿದ ಒಂದು ಅಲ್ಲೇ ನಿಂತುಬಿಡಬಾರದು, ಮುಂದಡಿಯಿಡಬೇಕು. ಅದಿಲ್ಲವಾದರೆ ಹಿಂದಡಿ. ಪಕ್ಕಕ್ಕೆ ಸರಿದರೂ ಅದೊಂದು ಚಲನೆಯೇ. ಆದರೆ ನಿಶ್ಚಲತೆ ಸಲ್ಲ. ಅದು ಅಚೇತನ.
ಮೊನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಪಯಣಿಸುತ್ತಿದ್ದೆ. ಇಡೀ ಶಿರಾಡಿ ಘಾಟಿ ಹೂಹೊದ್ದು ಮಲಗಿತ್ತು. ಅರೇ ಇಷ್ಟು ವರ್ಷ ಇದು ನನಗ್ಯಾಕೆ ಕಾಣಿಸುತ್ತಿರಲ್ಲ ಎನಿಸಿತು.
ಕ್ಯಾಮರಾ ತಗೊಂಡ ಮೇಲೆ ನಂಗೆ ಎಲ್ಲೆಲ್ಲೂ ಹಕ್ಕಿಗಳೇ ಕಾಣುತ್ತಿದ್ದವು,
ಇತ್ತೀಚಿನ ವರ್ಷಗಳಲ್ಲಿ ಹಿಮಾಲಯದ ಗಿರಿ ಶ್ರೇಣಿಗಳನ್ನು ಸುತ್ತುತ್ತಿದ್ದೇನೆ. ಹಾಗಾಗಿ ಇರಬಹುದೇ?
ಶಿರಾಡಿ ಮತ್ತು ಚಾರ್ಮಾಡಿ ಘಾಟಿಯ ಬಾಗು ಬಳುಕುಗಳೆಲ್ಲ ಹಿಮಾಲಯದ ಹಾಗೇ ಕಾಣುತ್ತಿವೆ; ಅದು ಹಿಮ ಹೊದ್ದ ಪರ್ವತ ಸಾಲು, ಇದು ಹಸಿರು ಹೊದ್ದ ಪಶ್ಚಿಮ ಘಟ್ಟಶ್ರೇಣಿ.                                          
ಬೇಸರವಾಯ್ತೇ? ಮನೆಯಿಂದ ಹೊರಬನ್ನಿ. ಆಕಾಶದತ್ತ ಕತ್ತೆತ್ತಿ ನೋಡಿ. ಆ ಅನಂತ ಆಕಾಶದಲ್ಲಿ ನಿಮಗೆ ಏನೆನೆಲ್ಲಾ ಕಾಣಬಹುದು.
ಎರಡು ಹೆಜ್ಜೆ ಮುಂದಿಡಿ. ಊರಂಚಿಗೆ ಬನ್ನಿ. ಬರುವಾಗ ಜೀವಚೈತನ್ಯ ತುಂಬಿತುಳುಕುತ್ತಿರುವ ಎಲ್ಲವನ್ನೂ ಕಣ್ಣಲ್ಲಿ ತುಂಬಿಕೊಳ್ಳಿ.
ತೆರೆದ ಕಿವಿಗೆ ಎಲ್ಲರ ಮಾತುಗಳು ಇಳಿಯುತ್ತಿರಲಿ.
ಊರಂಚಿನ ಮರದ ಬುಡದಲ್ಲಿ ಸುಮ್ಮನೆ ಕೂತುಬಿಡಿ. ತಂಗಾಳಿ ನಿಮ್ಮ ಮೈಸವರುತ್ತಾ ನಿಮ್ಮ ಕುಶಲ ವಿಚಾರಿಸುತ್ತದೆ.
ನಿಸರ್ಗಕ್ಕೆ ಸ್ವಯಂ ಚಿಕಿತ್ಸಾಗುಣವಿದೆ; ಅದು ನಿಮ್ಮ ಎಲ್ಲಾ ಬೇಸರಿಕೆಗಳನ್ನು ಹೊಡೆದೊಡಿಸುತ್ತದೆ.
ನಾನು ಕಪ್ಪೆ ಮೇಳಕ್ಕೆ ಹೊರಟು ನಿಂತಿದ್ದೇನೆ.
ಬಿಸಿಲೆ ಅರಣ್ಯದ ದಟ್ಟ ಕಾಡಿನ ಮಧ್ಯೆ ನಾಗರಿಕ ಜಗತ್ತಿನಿಂದ ದೂರವಾಗಿ ಯಾವುದೇ ಸಂಪರ್ಕ ಸಾಧನಗಳಿಲ್ಲದೆ ಮೂರು ದಿನ ಕಳೆಯಲಿದ್ದೇನೆ. ನಿಸರ್ಗದ ಲಯಕ್ಕೆ ಕಿವಿಯಾಗಲಿದ್ದೇನೆ.
ಜೀವಂತವಾಗಿ ಇರಬೇಕೆಂದರೆ ಇಂತಹದ್ದನ್ನೆಲ್ಲಾ ನಾವು ಆಗಾಗ ಮಾಡುತ್ತಿರಬೇಕು.
ಭವಿಷ್ಯದ ಗರ್ಭದಲ್ಲಿ ಏನೇನು ಅಡಗಿದೆಯೋ ಬಲ್ಲವರಾರು?
ಅಲ್ಲಿ, ಆ ದಟ್ಟ ಕಾನನದ ಬಸಿರೊಳಗೆ ನಾವು ಕಪ್ಪೆಗಳ ಹುಡುಕಾಟದಲ್ಲಿದ್ದಾಗ  ಕಪ್ಪೆಯೊಂದಕ್ಕೆ ನನ್ನ ಉಂಗುಷ್ಠದ ಬೆರಳು ತಾಗಿ ಅದು ಸುಂದರವಾದ ರಾಜಕುಮಾರನಾಗಿ  ನನ್ನೆದುರು ಪ್ರತ್ಯಕ್ಷನಾಗಬಹುದು. ಅವನು ನಸುನಕ್ಕು ನನ್ನೆಡೆಗೆ ಉಂಗುರ ಚಾಚಬಹುದು.
ನನ್ನ ಕಾಲುಗಳಲ್ಲಿ ಕಾಲುಂಗರವಿಲ್ಲ!


Tuesday, June 7, 2016

ಕೊನೆಯ ಬಾರಿ ನೋಡಿದ್ದು ಮುಖವಲ್ಲ, ಬೆನ್ನು !
ಅವನು ಮಂಗಳೂರಿನ ಎ.ಜೆ. ಆಸ್ಪತ್ರೆಯ ಆರನೇ ಮಹಡಿಯ ೧೬ನೇ ಬೆಡ್ ಮೇಲೆ ಮಲಗಿದ್ದ. ’ಏನೋ ಮಾರಾಯ ಇದು.? ಅಂತ ಸಹಜತೆಯನ್ನು ನಟಿಸುತ್ತಾ ಕೇಳಿದೆ. ಎಂದಿನ ಹಾಗೆ ಮಗುವಿನಂತೆ ಮುಗುಳ್ನಕ್ಕ. ಮುಖದ ತುಂಬಾ ಹಲ್ಲು ಮಾತ್ರ ಕಾಣಿಸಿತು. ನನ್ನ ಗಂಡ, ಮಕ್ಕಳ ಬಗ್ಗೆ ವಿಚಾರಿಸಿಕೊಂಡ. ನನ್ನಣ್ಣ ಬಂದು ಮಾತಾಡಿಸಿಕೊಂಡು ಹೋಗಿದ್ದರ ಬಗ್ಗೆ ಹೇಳಿದ. ತನ್ನ ಜಾಂಡೀಸ್ ಕಾಯಿಲೆ ಇಲ್ಲಿ ಗುಣವಾಗುವಂತದ್ದಲ್ಲ, ಮನೆಗೆ ಹೋಗಿ ಹಳ್ಳಿ ಮದ್ದು ಮಾಡುವುದಾಗಿ ಹೇಳಿದ. ಅವನ ಮರಣಾಂತಿಕ ಕಾಯಿಲೆ ಬಗ್ಗೆ ಅವನಿಗೆ ಅರಿವಿದ್ದಂತಿರಲಿಲ್ಲ. ನಾನೂ ಅದರ ಸುಳಿವುಗೊಡದಂತೆ ಮಾತಾಡುತ್ತಿದ್ದೆ.

 ಬೆಂಗಳೂರಿಗೆ ಹಿಂತಿರುಗುವ ಹೊತ್ತಾಯಿತು. ಪಕ್ಕದಲ್ಲಿದ್ದ ಅವನ ತಮ್ಮನ ಕೈಗೆ ಒಂದಿಷ್ಟು ಐನೂರರ ನೋಟುಗಳನ್ನು ಕೊಡಲು ಹೋದೆ. ಆತ ಅಣ್ಣನ ಕೈಗೆ ಕೊಡಲು ಹೇಳಿದ. ನಾನು ಅವನತ್ತ ಕೈ ಚಾಚಿದ. ಅವನದನ್ನು ಕೈ ಚಾಚಿ ತಗೊಂಡ. ಹಾಗೆಯೇ ಕೈಯ್ಯಲ್ಲಿಟ್ಟುಕೊಂಡ. ಅದರತ್ತ ಕಣ್ಣು ಕೂಡಾ ಹಾಯಿಸಲಿಲ್ಲ.

ಅಷ್ಟಾಗುವಾಗ ಡ್ಯೂಟಿ ಡಾಕ್ಟರ್ ಬಂದರು. ಪರೀಕ್ಷಿಸಿದರು. ನಕ್ಕು ತಮಾಶೆ ಮಾತಾಡಿದರು. ಅವರು ಹೊರಹೋಗುವಾಗ ನಾನು ಹಿಂದೆಯೇ ಹೋದೆ. ಪೇಶೆಂಟ್ ಸ್ಥಿತಿಯ ಬಗ್ಗೆ ವಿಚಾರಿಸಿದೆ. ಅವರು ವಿವರಿಸಿದರು.ಹೋಪ್ಸ್ ಇದೆಯಾ ಅಂದೆ. ಅವರು ತಲೆಯಾಡಿಸುತ್ತಾ ’ಝೀರೋ ಪರ್ಸೆಂಟ್’ ಎಂದರು.

 ವಾರ್ಡಿಗೆ ಹಿಂದಿರುಗಿದೆ. ಅವನು ಬಾಗಿಲ ಕಡೆ ನೋಡುತ್ತಾ ಮಲಗಿದ್ದ. ನೋಟಿನ ಕಂತೆಗಳನ್ನು ಹಿಡಿದೇ ಇದ್ದ. ನಾನು ಅವನ ತಮ್ಮನ ಜೊತೆ ಅದು-ಇದು ಮಾತಾಡಿ ಇನ್ನು ಹೊರಡುತ್ತೇನೆ ಎಂದೆ. ಆಗಲಿ ಎನ್ನುವಂತೆ ತಲೆಯಾಡಿಸಿದ. ಆ ನೋಟುಗಳನ್ನು ತಮ್ಮನ ಕೈಗೆ ಕೊಟ್ಟ ಬೆನ್ನು ಮಾಡಿ ಆಚೆ ತಿರುಗಿ ಮಲಗಿದ.ಭ್ರೂಣದಾಕಾರದಲ್ಲಿ ಮಲಗಿದ ಆ ಪೀಚು ದೇಹವನ್ನು ನೋಡುವುದು ಕಷ್ಟವಾಯಿತು. ನನಗಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಆ ಬದಿಗೆ ಹೋದೆ. ಅವನು ಕಣ್ಣೆತ್ತಿ ನೋಡಲಿಲ್ಲ. ಕಣ್ಣುಗಳು ತುಂಬಿಕೊಂಡಿದ್ದುವಾ? ಗೊತ್ತಿಲ್ಲ. ಬುಜ ತಟ್ಟಿ ಕೂದಲುಗಳಲ್ಲಿ ಬೆರಳಾಡಿಸಿ. ’ಮನೆಗೆ ಬನ್ನಿ, ಅಲ್ಲಿ ನಿಮ್ಮನ್ನು ಬಂದು ಮಾತಾಡಿಸುತ್ತೇನೆ’ ಎಂದು ಅಲ್ಲಿಂದ ಹೊರಟೆ. ಬಾಗಿಲು ದಾಟುವಾಗ ಒಮ್ಮೆ ಹಿಂದಿರುಗಿ ನೋಡಿದೆ. ಅವನ ಬೆನ್ನು ಮಾತ್ರ ಕಾಣಿಸಿತು.

ಅಲ್ಲಿ ಹಾಗೆ ನಿಸ್ಸಾಯಕನಾಗಿ ಮಲಗಿರುವಾತ ವಾಸು, ನನ್ನ ಅಡಿಕೆ ತೋಟಕ್ಕೆ ಮದ್ದು ಬಿಡುವ ಕೊಳೆರೋಗ ಸ್ಪಷಲಿಸ್ಟ್ . ಯಾರಿಂದಲೂ ತಹಬಂದಿಗೆ ತರಲಾಗದ ನನ್ನ ತೋಟದ ಕೊಳೆರೋಗವನ್ನು ಅವನು ಕಂಟ್ರೋಲ್ ಮಾಡಿದ್ದ. ನಾನು ಆತನ ಬಗ್ಗೆ ನನ್ನ ಪೇಸ್ಬುಕ್ ಸ್ಟೇಟಸ್ ಗಳಲ್ಲಿ ಆಗೀಗ ಪ್ರಸ್ತಾಪಿಸುತ್ತಿದ್ದುದುಂಟು. ಹಾಗಾಗಿ  ಕೆಲವರಿಗಾದರೂ ಅತನ ಬಗ್ಗೆ ಗೊತ್ತಿದೆ. ಆತನನ್ನು ಕರ್ವಾಲೋದ ಮಂದಣ್ಣನಿಗೆ ಹೋಲಿಸಿದ್ದುಂಟು. ಆತ ಒಳ್ಳೆಯ ಬೇಟೆಗಾರ, ಮರ,ಗಿಡ, ನದಿ, ಹಕ್ಕಿ, ಹಾವುಗಳ ಬಗ್ಗೆ ಆತನಿಗೆ ಅಪಾರ ಜ್ನಾನವಿತ್ತು. ಹಾರ್ನ್ ಬಿಲ್ ಗಳ ವಿಶಿಷ್ಟ ದಾಂಪತ್ಯದ ಬಗ್ಗೆ ಅವನ ಬಾಯಿಯಿಂದಲೇ ಮೊದಲ ಬಾರಿಗೆ ನಾನು ಕೇಳಿದ್ದು. ಮೀನು ಹಿಡಿಯುವುದರಲ್ಲಂತೂ ಎಕ್ಸ್ ಪರ್ಟ್. ಪೇಸ್ಬುಕ್ ಪ್ರೆಂಡ್ ರಾಜೇಂದ್ರ ಆಗಾಗ ನನ್ನ ತೋಟದಲ್ಲೊಮ್ಮೆ ಕವಿಗೋಷ್ಟಿ ಏರ್ಪಡಿಸೋಣ. ಅಗ ವಾಸುವಿನ ಕೈನಲ್ಲಿ ಹೊಳೆಮೀನಿನ ಊಟ ಮಾಡಿಸ್ಬೇಕು ಅಂದಿದ್ದ. ನಾನದನ್ನು ವಾಸುವಿಗೆ ಹೇಳಿದ್ದೆ. ಆತ ಒಪ್ಪಿಕೊಂಡಿದ್ದ. ಹೊಳೆದಂಡೆಯ ಮೇಲೆ ಒಲೆ ಹೂಡಿ ಮೀನಿನೂಟ ಬಡಿಸುವುದಾಗಿ ಹೇಳಿದ್ದ. ಈಗ?

ನಾನು ಮಂಗಳೂರಿಗೆ ಹೋಗಿ ಬಂದು ಒಂದು ವಾರವೂ ಕಳೆದಿರಲಿಲ್ಲ. ಮೊನ್ನೆ ಬೆಳಿಗ್ಗೆ ನನ್ನ ತವರಿನಿಂದ ವರ್ತಮಾನ ಬಂತು; ವಾಸು ಇನ್ನಿಲ್ಲ, ಅಂತ. ಆತ ನನ್ನ ಕುಟುಂಬದವನು, ಕಟ್ಟೆಮನೆಯ ಕುಡಿ. ಸುಮಾರು ನಲ್ವತ್ತರ ಪ್ರಾಯದವನು. ಅಂತ್ಯಸಂಸ್ಕಾರಕ್ಕೆ ನಾನು ಹೋಗಲಿಲ್ಲ. ಆದರೆ ನಿನ್ನೆ ನಡೆದ ಐದನೆಯ ದಿನದ ”ಶುದ್ಧ’ ದ ವಿಧಿ ವ್ಧಾನಗಳಾಳಲ್ಲಿ ಭಾಗವಹಿಸಿ ಬಂದಿದ್ದೇನೆ. ಈಗ ಮನಸಿನಲ್ಲಿ ಅದೇ ತುಂಬಿಕೊಂಡಿದೆ.ಹಾಗಾಗಿ ಅದನ್ನೇ ನಿಮ್ಮ ಮುಂದಿಡುತ್ತಿದ್ದೇನೆ.

 ಅವನನ್ನು ಸುಟ್ಟ ಜಾಗದಲ್ಲಿ ಬೂದಿಯಾಗದೆ ಉಳಿದ ಎಲುಬುಗಳಿದ್ದವು. ಕರ್ಮಕ್ಕೆ ನಿಂತಾತ ಕುಟುಂಬದ ಹಿರಿಯನ ನಿರ್ದೇಶನದಂತೆ ಎಡಗೈಯ್ಯಲ್ಲಿ ಕಾಲಿನ ಒಂದು ಮೂಳೆಯನ್ನು ಎತ್ತಿಕೊಂಡು ಪುಟ್ಟ ಮಡಕೆಯಲ್ಲಿ ಹಾಕಿಕೊಂಡ. ಅನಂತರ ತೊಡೆಯದು, ಆಮೇಲೆ ತಲೆ ಬುರುಡೆಯದು. ಆಮೇಲೆ ಎಡಗೈಯಿಂದ ಹಾರೆಯಿಂದ ಅಲ್ಲಿಯ ಬೂದಿಯನ್ನು ಮೂರು ಬಾಗ ಮಾಡಿ ಗುಡ್ಡೆ ಹಾಕಿದರು. ಅಲ್ಲೇ ಹೊಂಡ ತೆಗೆದು ಮೊದಲು ಕಾಲಿನ ಕಡೆಯ, ನಂತರ ಮಧ್ಯದ ಭಾಗದ ಆಮೇಲೆ ತಲೆ ಕಡೆಯ ಬೂದಿಯನ್ನು ಹಾಕಿ ಮುಚ್ಚಿದರು. ಅದರ ಮೇಲೆ ಸ್ವಲ್ಪ ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ಕಲಸಿ ಗೋಪಾಕ್ರುತಿಯನ್ನು ರಚಿಸಿದರು. ಅದರ ಸುತ್ತಲೂ ಸರೋಳಿ ಮರದ ಗೆಲ್ಲುಗಳನ್ನು ನೆಟ್ಟು ನೆರಳು ಮಾಡಿದರು. ಅದರ ಆರೇಳು ಅಡಿ ಅಂತರದಲ್ಲಿ ನಾಲ್ಕೂ ಮೂಲೆಗಳಲ್ಲಿ ಕಂಬ ನೆಟ್ಟರು. ದೇಹ ಸುಟ್ಟ ಕಾಲು ಕಡೆಯ ಭಾಗಿಲಿನ ಹಾಗೆ ಜಾಗಬಿಟ್ಟು ಅಲ್ಲಿ ಫಲಭರಿತ ಎರಡು ಬಾಳೆಕಂಬಗಳನ್ನು ಕಮಾನಿನಂತೆ ಕಟ್ಟಿದರು. ಗೋಪುರಾಕ್ರುತಿಯ [ತುಳುವಿನಲ್ಲಿ ಧೂಪೆ] ಮೇಲೆ ದೊಡ್ಡ ಗಳುವಿಗೆ ತೆಂಗಿನ ಹೂವನ್ನು ಕಟ್ಟಿ ನೆಟ್ಟರು. ಕ್ಷಣಾರ್ಧದಲ್ಲಿ ಅಲ್ಲೊಂದು ಸುಂದರ ಮಂಟಪ ಸ್ರುಷ್ಟಿ ಮಾಡಿದರು. ನಂತರ ಅಲ್ಲಿ ನೆರೆದಿದ್ದವರೆಲ್ಲಾ ಆ ಮಂಟಪದೆಡೆ ಅಕ್ಕಿಯನ್ನು ಬೀರಿ. ’ಸ್ವರ್ಗಕ್ಕೆ ಹೋಗು’ ಎಂದು ದೇವರಲ್ಲಿ ಬೇಡಿಕೊಂಡರು.

ಆದರೆ ಅನಂತರದ ದ್ರುಶ್ಯವನ್ನು ನೋಡುವುದು ಸ್ವಲ್ಪ ಕಷ್ಟವಾಯ್ತು. ವಾಸುವಿನ ಹೆಂಡತಿಯನ್ನು ಕಾಲಿನ ಭಾಗದಲ್ಲಿ ಮಂಡಿಯೂರಿ ಕುಳ್ಳಿರಿಸಲಾಯ್ತು. ಅವಳು ಕೂದಲು ಹರಡಿಕೊಂಡಿದ್ದಳು. ಅವಳ ಎರಡೂ ಕೈಯ್ಯನ್ನೆತ್ತಿ ತಲೆಯ ಮೇಲಿರಿಸಲಾಯ್ತು. ಆಕೆಯ ರೋಧನದ ಮಧ್ಯೆಯೇ ಕುಟುಂಬದ ಹಿರಿಯರು ವಾಸುವಿನ ಬಗ್ಗೆ  ಮಾತಾಡಿದರು. ಅವನ ಚಟದ ಬಗ್ಗೆಯೂ ಮಾತಾಡಿ ಅದೇ ಅವನಿಗೆ ಮುಳುವಾಯ್ತು ಎಂಬರ್ಥದಲ್ಲಿ ಮಾತಾಡಿದ್ದು ಇದ್ದುದರಲ್ಲಿ ನನಗೆ ಸಮಾಧಾನವೆನಿಸಿತ್ತು.

ಅಕಾಲ ಮ್ರುತ್ಯುವಿಗೆ ನಾವು ಕಾರಣಗಳನ್ನು ಹುಡುಕುತ್ತೇವೆ. ಹಾಗೆ ಹುಡುಕಿದ್ದೇ ಆದಲ್ಲಿ. ವಾಸುವಿನ ಬಲಹೀನತೆಗಳಾದ ತುಂಡು ಮತ್ತು ಗುಂಡು ಅವನ ಜೀವಕ್ಕೆ ಎರವಾಯ್ತೇ? ಅವನನ್ನು ಹತ್ತಿರದಿಂದ ಕಂಡವರು  ’ಹೌದು ’ಎನ್ನುತ್ತಾರೆ. ವೈದ್ಯರು ಅವನ ಲಿವರ್ ಪೂರ್ತಿ ಡ್ಯಾಮೇಜ್ ಆಗಿತ್ತು ಅಂದಿದ್ದರು.  ಕ್ಯಾನ್ಸರ್ ಅವನನ್ನು ಒಳಗಿಂದೊಳಗೇ ಇಂಚಿಂಚಾಗಿ ಕೊಂದಿತ್ತು.
ಇಂತಹ ಸಾವು ಬದುಕಿದ್ದ ಅವರ ಪ್ರೀತಿ ಪಾತ್ರರನ್ನೂ ಕೊಂದುಬಿಡುತ್ತದೆ.
ನಮ್ಮ ದೇಹದ ಮೇಲೆ ನಮಗೆ ಪ್ರೀತಿಯಿರಬೇಕು. ಅದರ ಮೇಲೆ ನಾವೇ ದೌರ್ಜನ್ಯ ಎಸಗಿಕೊಳ್ಳಬಾರದು.

[ ’ಚಲಿತ ಚಿತ್ತ’ ಕಾಲಂಗಾಗಿ ಬರೆದ ಬರಹ ]


Friday, June 3, 2016

ಚಂದಿರನೇತಕೆ ಕಾಡುವನಮ್ಮ?


’ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು’ ಬೆಳಿಗ್ಗೆಯಿಂದ ಈ ಸಾಲು ನಾಲಗೆಯಲ್ಲಿ ಕುಣಿಯುತ್ತಿತ್ತು... ಅದಕ್ಕೆ ನೆಪವಾಗಿದ್ದು ಮುಂಜಾನೆ ಕಂಡ  ಥಳಥಳಿಸುತ್ತಿರುವ ಪೂರ್ಣಚಂದ್ರ. ಬಾಲಭಾಸ್ಕರ ಇನ್ನೂ ತನ್ನ ಹೊನ್ನಕರಗಳನ್ನು ಚಾಚಿರಲಿಲ್ಲ..ಮಬ್ಬು ಬೆಳಕಿದ್ದರೂ ಕ್ಯಾಮರಾ ತಂದು ಪೋಕಸ್ ಮಾಡಿದೆ. ಆಗಲೇ ನನ್ನ ಮನಸು ಗುಣುಗುಣಿಸಿದ್ದು. ’ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು. ಅಲ್ಲಿಯ ಒಡೆತನ ಸಿಗುವಂತಿದ್ದರೆ ನನಗೇ ಸಿಗಬೇಕು’

ಅದು ಯಾವಾಗಲೂ ಹೀಗೆಯೇ, ಬೆಳಿಗ್ಗೆ ಎದ್ದೊಡನೆ ’ಚುಕ್ಕಿ ಪುಟ್ಟ’ನ [ಪಗ್ ನಾಯಿ] ಬಾಯಿಗೊಂದು ಬಿಸ್ಕತ್ತು ಹಾಕಿ, ಮುಂಬಾಗಿಲು ತೆರೆದು ಪಾರಿಜಾತದ ಮರದಲ್ಲಿ ಕುಳಿತ ಜೋಡಿ ಹೂ ಹಕ್ಕಿಗಳನ್ನು ನೋಡಿ ’ಅಪ್ಪುಚ್ಚಿ ಕೂಚು’ ಎನ್ನುತ್ತಾ ಬಂದು ಹಿಂಬಾಗಿಲು ತೆರೆಯುವುದು. ಅಲ್ಲೇ ಬಾಗಿಲ ಚೌಕಟ್ಟಿಗೊರಗಿ ನಿಂತು ಅಶ್ವಥ ಮರದಲ್ಲಿ ಕುಳಿತ ಹಕ್ಕಿಗಳನ್ನು ನೋಡುವುದು. ಇದು ನನ್ನ ದಿನಚರಿಯ ಆರಂಭ. ಆದರೆ ಇವತ್ತು ಚಂದಮಾಮ ನನ್ನನ್ನು ಸೆಳೆದಿದ್ದ.

ಅವನ ಮತ್ತು ನಮ್ಮ ನಂಟು ನಿನ್ನೆ ಮೊನ್ನೆಯದಲ್ಲ. ಅಮ್ಮ ನಮ್ಮ ಬಾಯಿಗೆ ಮೊದಲು ತುತ್ತನಿಟ್ಟ ಸುವರ್ಣ ಘಳಿಗೆಯಿಂದ ಇಂದಿನವರೆಗೂ ಅದು ನಮ್ಮ ಸಂಗಾತಿ. ’ಚಂದಿರನೇತಕ್ಕೆ ಓಡುವನ್ನಮ್ಮ ಮೋಡಕ್ಕೆ ಹೆದರಿಹನೇ?’ ಹಾಡು ಯಾರಿಗೆ ನೆನಪಿಲ್ಲ?. ಅದು ಕನ್ನಡದ ಕಂದಮ್ಮಗಳ ಜೊಗುಳ ಹಾಡು. ಇಂಥ ಮುದ್ದುಮಕ್ಕಳ ಭಾವಕೋಶ ಬಿರುಕು ಬಿಟ್ಟದ್ದು ಚಂದ್ರನ ಮೇಲೆ ಮನುಷ್ಯನ ಪಾದಸ್ಪರ್ಶವಾದಾಗ. ಆಗ ಮಕ್ಕಳೆಲ್ಲ ಒಕ್ಕೊರಲಿನಿಂದ ಕೇಳಿದ್ದರು; ಚಂದ್ರಲೋಕದೊಳಿನ್ನು ಮನೆಯ ಕಟ್ಟುವರಂತೆ. ಇರುವೊಬ್ಬ ಚಂದ್ರನನ್ನು ಅಂದಗೆಡಿಸುವರೇ? ಚಂದಮಾಮ ಎಂದು ಕರೆವುದಾರನು ಅಮ್ಮ?
ಚಂದ್ರನಲ್ಲೊಂದು ಮೊಲವಿದೆ. ಅದು ಹುಣ್ಣಿಮೆಯಂದು ಕೈ ಜೋಡಿಸಿ ದೇವರಿಗೆ ನಮಸ್ಕರಿಸುತ್ತದೆಯೆಂದು ನನ್ನಜ್ಜಿ ಹೇಳುತ್ತಿದ್ದರು. ನಾನದನ್ನು ನಂಬಿದ್ದೆ ಮತ್ತು ಬೆಳದಿಂಗಳ ರಾತ್ರಿಗಳಲ್ಲಿ ತಲೆಯೆತ್ತಿ ಚಂದ್ರನನ್ನು ನೋಡುತ್ತಿದ್ದೆ. ಅಲ್ಲಿರುವ ಮೊಲವನ್ನು ಹುಡುಕುತ್ತಿದ್ದೆ. ಅದು ನನಗೆ ಕಂಡಿತ್ತು ಕೂಡಾ.

ಈ ಕಥೆಯನ್ನು ಮುಂದುವರಿಸಿದ್ದು ನನ್ನಮ್ಮ. ಅದು ಹೇಗೆಂದರೆ; ಪಶ್ಚಿಮ ಘಟ್ಟದ ದಟ್ಟ ಕಾಡಿನ ಅಂಚಿನೂರು ನಮ್ಮದು. ಹಾಗಾಗಿ ಕಾಡುಪ್ರಾಣಿಗಳು ನಮ್ಮ ಜಮೀನಿಗೆ ಧಾಳಿಯಿಡುವುದು ಸಾಮಾನ್ಯ. ನನ್ನೂರಿನಲ್ಲಿ ಎಲ್ಲರೂ ಸ್ವರಕ್ಷಣೆಗಾಗಿ ಬಂದೂಕಿನ ಪರವಾನಾಗಿ ಹೊಂದಿದ್ದಾರೆ. ನನ್ನಣ್ಣ ತುಂಬಾ ಒಳ್ಳೆಯ ಬೇಟೆಗಾರ.  ಆತನಿಗೆಮ್ರುಗಯಾವ್ಯಾಜದ ಹುಕ್ಕಿ ಬಂದಾಗ ತಲೆಗೆ ಫವರ್ಪುಲ್ಲಾದ ಟಾರ್ಚ್ ಕಟ್ಟಿ ಕೈಯ್ಯಲ್ಲಿ ಡಬ್ಬಲ್ ಬ್ಯಾರಲ್ ಗನ್ ಹಿಡಿದು ರಾತ್ರಿಯೆಲ್ಲಾ ಈ ಕಾಡಿನಲ್ಲಿ ಅಲೆದಾಡುತ್ತಿದ್ದ. ಹಾಗೆ ಆತ ಹೊರಟಾಗ ನಮ್ಮಮ್ಮ ತನ್ನೊಳಗೆ ಮಾತಾಡಿಕೊಂಡಂತೆ ಎನೋ ಮಣಮಣ ಅನ್ನುತ್ತಿದ್ದುದನ್ನು ಗಮನಿಸಿದ್ದೆ. ಅಮ್ಮ ಒಮ್ಮೆ ಹೀಗೆ ಗೊಣಗುತ್ತಿರುವಾಗ ನಾನು ’ಏನದು ನಿಮ್ಮ ಮಣ ಮಣ?’ ಎಂದು ಕೇಳಿದ್ದೆ.  ಅದಕ್ಕಮ್ಮ ಹೇಳಿದ್ರು; ಬೆಳದಿಂಗಳಿನಲ್ಲಿ ಮೊಲ ಎರಡು ಕಾಲಲ್ಲಿ ನಿಂತು ದೇವರಿಗೆ ಕೈಮುಗಿಯುತ್ತಿರುತ್ತದೆ. ಈ ನಿಷ್ಕರುಣಿ ಬೇಟೆಗಾರರು ಅದು ಭಕ್ತಿಪರವಶದಲ್ಲಿ ಮೈಮರೆತಿರುವಾಗ ಅದರತ್ತ ಗುಂಡು ಹಾರಿಸುತ್ತಾರೆ. ಅದಕ್ಕಾಗಿ ಅಣ್ಣ ಬೇಟೆಗೆ ಹೊರಟಾಗಲೆಲ್ಲ ”ಅವನ ಕಣ್ಣಿಗೆ ಮೊಲ ಬೀಳದಿರಲಿ ಸ್ವಾಮಿ ದೇವರೇ’ ಅಂತ ಬೇಡಿಕೊಳ್ಳುತ್ತಿದ್ದೇನೆ ಅಂತ ಪಿಸುದನಿಯಲ್ಲಿ ಹೇಳಿದ್ದರು.

ಚಂದ್ರನಲ್ಲಿ ಮೊಲ ಇದೆಯೆಂಬುದು ಜಾನಪದರ ಸಾರ್ವತ್ರಿಕ ನಂಬಿಕೆಯಾಗಿರಬೇಕು. ನಮ್ಮ  ಮನೆಗೆ ಅಂಧ್ರಮೂಲದ ಹೆಂಗಸೊಬ್ಬಳು ಮನೆಗೆಲಸಕ್ಕೆ ಬರುತ್ತಿದ್ದಳು. ಅವಳ ಪ್ರಕಾರ ಚಂದ್ರನಲ್ಲಿ ಮೊಲ ಇದೆ. ಸೂಕ್ಶ್ಮವಾಗಿ ನೋಡಿದರೆ ಅದು ಕಾಣುತ್ತಂತೆ. ಇನ್ನೂ ಸೂಕ್ಶ್ಮವಾಗಿ ನೋಡಿದರೆ ಅಲ್ಲಿ ಒಂದು ದೊಡ್ಡ ಮರಕ್ಕೆ ಒರಗಿ ಕುಳಿತ ಒಬ್ಬ ಹೆಂಗಸು ಕಾಣಿಸ್ತಾಳೆ. ಅದು ಚಂದ್ರನ ತಾಯಿಯಂತೆ. ಅವಳಿಗೆ ಮೂರು ಮಕ್ಕಳು. ಅವರ ಹೆಸರು ಚುಕ್ಕಿ,ಚಂದ್ರ,ಸೂರ್ಯ. ಆಕೆಗೆ ಒಮ್ಮೆ ಮಕ್ಕಳ ಮೇಲೆ ಸಿಟ್ಟು ಬಂದು  ಶಾಪ ಕೊಟ್ಟಳಂತೆ. ಹಾಗೇ ಶಾಪ ಕೊಟ್ಟುಬಂದು ವಿಷಾಧದಿಂದ ಮರಕ್ಕೆ ಒರಗಿ ಕೂತಳು. ಅನ್ನ ನೀರಿಲ್ಲ. ಯಾವುದೋ ಸಮಾರಂಭಕ್ಕೆ ಹೋದ ಸೂರ್ಯ ಮತ್ತು ಚಂದ್ರ ಗಡದ್ದಾಗಿ ಊಟ ಮಾಡಿ ಬಂದರಂತೆ. ಅವರಿಗೆ ಶಾಪ ಕೊಟ್ಟ ಅಮ್ಮನ ಮೇಲೆ ಸಿಟ್ಟಿತ್ತು. ಆದರೆ ಚಂದ್ರ ಊಟ ಮಾಡಿದ್ರೂ. ಅಮ್ಮನಿಗಾಗಿ ಉಗುರಿನೆಡೆಗಳಲ್ಲಿ ಆಹಾರವನ್ನು ಗುಟ್ಟಾಗಿ ಅಡಗಿಸಿಟ್ಟುಕೊಂಡು ತಂದು ಅಮ್ಮನಿಗೆ ತಿನ್ನಿಸುತ್ತಾನೆ.  ಮಗ ತಂದು ಕೊಟ್ಟ ರೊಟ್ಟಿ ತಿನ್ನುತ್ತ್ತಾ ಮರಕ್ಕೊರಗಿ ಕುಳಿತ ತಾಯಿಯನ್ನು ನಾವು ಭೂಮಿಯಿಂದ ನೋಡಬಹುದಂತೆ.
ಎಂತಹ ಸುಂದರ ಕಥೆಯಲ್ವಾ? ತಂಪು ತಂಪು ಚಂದ್ರ. ಪ್ರೇಮಿಗಳ ಸಂಗಾತಿ, ಕಡಲ ಮೋಹಿತ!

ಆಕಾಶದಲ್ಲಿರುವ ಅಸಂಖ್ಯ ನಕ್ಷತ್ರಗಳು ಸತ್ತವರ ಕಣ್ಣುಗಳಂತೆ, ಸತ್ತವರ ಆತ್ಮ ಅಂತಲೂ ಇನ್ನೊಂದು ನಂಬಿಕೆ. ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರ ಆತ್ಮದ ಸಿಂಬಲ್. ಬೆಳದಿಂಗಳ ರಾತ್ರಿಗಳಲ್ಲಿ ನಾನ್ಯಾಕೆ ಗಂಟೆಗಟ್ಟಲೆ ಆಕಾಶವನ್ನೇ ದಿಟ್ಟಿಸುತ್ತಾ ಕೂತುಬಿಡುತ್ತೇನೆ.? ತೆಂಗಿನ ಮರಗಳ ಗರಿಗಳೆಡೆಯಿಂದ ಇಣುಕುವ ಚಂದಿರನೇಕೆ ನನ್ನ ಮನಸೂರೆಗೊಳ್ಳುತ್ತಾನೆ? ಇದು ಆತ್ಮದ ಆಕರ್ಷಣೆಯಿರಬಹುದೇ? ಸ್ವಂತ ಬೆಳಕಿಲ್ಲದ ಈತನ ಹಿಂದೆ ನಾನೇಕೆ ಬಿದ್ದಿದ್ದೇನೆ?.

ಪದೇ ಪದೇ ನನಗೊಂದು ಕನಸು ಬೀಳುತ್ತಿರುತ್ತದೆ. ಆಕಾಶದಿಂದ ಬೆಳ್ಳಿರೇಖೆಯಂತ ದಾರವೊಂದು ಕೆಳಗಿಳಿಯುತ್ತಲಿದೆ.ನಾನು ಆ ಇಂದ್ರಛಾಪವನ್ನು ಹಿಡಿದು ಮೇಲೇರಿ ಹೋಗುತ್ತಿದ್ದೇನೆ.. ನನ್ನ ಕೈಯ್ಯಲೊಂದು ಹಕ್ಕಿಯಿದೆ, ಹಕ್ಕಿ ಕೊಕ್ಕಿನಲ್ಲೊಂದು ಹಸಿರೆಲೆಯಿದೆ. ಹಕ್ಕಿಯನ್ನು ನಾನು ತಂದಿದ್ದಲ್ಲ. ಅದು ನನ್ನ ಕೈಗೆ ಹೇಗೆ ಬಂತೋ ನನಗೆ ಗೊತ್ತಿಲ್ಲ. ಇದು ಚಂದ್ರನಿಗೆ ಜೊತೆಯಾಗಲೆಂದು ಹೊರಟಿದೆಯಾ? ಮೇಲೆರುತ್ತಾ ಮೇಲೆರುತ್ತಾ ಹಗ್ಗ ಕಾಣಿಸುತ್ತಿಲ್ಲ..ಕೆಳಗೆ ನೋಡಿದರೆ ಕಣ್ಣೆಟುಕದಷ್ಟು ದೊಡ್ಡ ಹೊಂಡ. ಕಿರುಚಲೆಂದು ಬಾಯಿ ತೆರೆದರೆ ಶಬ್ದ ಹೊರಡುತ್ತಿಲ್ಲ. ಹಕ್ಕಿ ಕೂಗುವುದು ಕೇಳಿಸುತ್ತಿದೆ, ಕಾಣುತ್ತಿಲ್ಲ.
ಇದರರ್ಥ ಏನು?

ಹೋಗಬೇಕು ಒಂದು ಹುಣ್ಣಿಮೆಯಲ್ಲಿ, ಅವನೊಡನೆ ಮರವಂತೆಯ ಕಡಲ ತಡಿಗೆ. ಅಲ್ಲಿಂದ ಸೌಪರ್ಣಿಕಾ ನದಿಯೆಡೆಗೆ ಪಂಥಕಟ್ಟಿ ಓಡಬೇಕು. ಅಲ್ಲಿಂದಿಲ್ಲಿಗೆ...ಇಲ್ಲಿಂದಲ್ಲಿಗೆ.ಹತ್ತಿಳಿಯಬೇಕು. ಕಡಲುಬ್ಬರದಲ್ಲೊಮ್ಮೆ ಪಾದ ತೋಯಿಸಬೇಕು,  ಇನ್ನೊಮ್ಮೆ ಸಿಹಿನೀರ ಮುಕ್ಕಳಿಸಬೇಕು. ಓಡಿ ಬರುವಾಗ ಹೆದ್ದಾರಿಯಲ್ಲೊಮ್ಮೆ ನಾವು ಪರಸ್ಪರ ಡಿಕ್ಕಿ ಹೊಡೆಯಬೇಕು. ಇದ ನೋಡಿ ಚಂದಮಾಮನಲ್ಲಿರುವ ಮೊಲ ಜಿಗಿ ಜಿಗಿದು ನಗಬೇಕು.


['ಚಲಿತ ಚಿತ್ತ’ ಕಾಲಂ ಗಾಗಿ ಬರೆದ ಲೇಖನ ]