Wednesday, September 9, 2009

ಸ್ಕೂಟರಿಗೊಂದು ಶ್ರದ್ಧಾಂಜಲಿ


ಒಂದು ದಿವಸ ಹೀಗೆ ವಿಜಯನಗರದಿಂದ ೧೭೦ನೇ ಬಸ್ಸು ಹತ್ತಿ ಮಿನರ್ವ ಸರ್ಕಲ್ ಕಡೆ ಹೊರಟಿದ್ದೆ. ಮಾಮೂಲಿನಂತೆ ಕಿಟಕಿ ಪಕ್ಕದ ಸೀಟೇ ಹಿಡಿದಿದ್ದೆ. ಘನ ಉದ್ದೇಶವೇನೂ ಇರದೆ ಸುಮ್ಮನೆ ಕಿಟಕಿಯಿಂದ ಹೊರನೋಡುತ್ತಾ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಗಮನಿಸುತ್ತಿದ್ದೆ.

ಕಾರಣವೇ ಇಲ್ಲದೆ ನನ್ನ ದೃಷ್ಟಿ ದಾರಿಯಲ್ಲಿ ಓಡಾಡುತ್ತಿದ್ದ ದ್ವಿಚಕ್ರ ವಾಹನಗಳ ಮೇಲೆ ಬೀಳುತ್ತಿತ್ತು. ಬೈಕ್ ಎಂದರೆ ನನಗೆ ಚಿಕ್ಕಂದಿನಿಂದಲೂ ಒಂಥರಾ ಮೋಹ. ಅದರ ಶಬ್ದ, ಅದರ ಠೀವಿ, ಆ ಗಾಂಬಿರ್ಯ, ಬಿರುಸು.. ಅದರಲ್ಲೂ ಬುಲೆಟ್ ಶಬ್ದ ಕೇಳಿದರೆ ಒಂಥರ ಉದ್ವೇಗ. ಈಗ ಬಿಡಿ, ಬುಲೆಟ್ ಬಂದರೆ ಯಾವನೋ ಪೋಲಿಸ್ ಬಂದಂತಾಗುತ್ತದೆ.

ಹೀಗೆ ನನ್ನ ಕಣ್ಣುಗಳು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನನಗೆ ಜ್ನಾನೋದಯವಾಯ್ತು; ಸ್ಕೂಟರ್ ಸವಾರರ ಹಿಂದಿನ ಸೀಟುಗಳೆಲ್ಲಾ ಖಾಲಿ ಖಾಲಿ. ಅಪರೂಪಕ್ಕೊಮ್ಮೆ ಭರ್ತಿಯಾದ ಸ್ಕೂಟರ್ ಕಂಡರೂ ಅದರಲ್ಲಿ ಸವಾರನಂತೆಯೇ ವಯಸ್ಸಾದ ಗಂಡಸೊಬ್ಬ ಕೂತಿರುತ್ತಿದ್ದ. ಆದರೆ ಬೈಕಿನ ಹಿಂದಿನ ಸೀಟು ಯಾವಾಗಲೂ ಭರ್ತಿ. ದೂರದಿಂದ ನೋಡಿದರೆ ಒಬ್ಬರೇ ಕೂತಿದ್ದಾರೆನೋ ಎಂಬಷ್ಟರ ಮಟ್ಟಿಗೆ ಅಂಟಿಕೊಂಡೇ ಕೂತಿರುವ ಯುವ ಜೋಡಿಗಳು. ಸ್ಕೂಟರೆಂಬ ಮಂದಗಮನೆಯೆದುರು ಬೈಕ್ ಚಿಮ್ಮುವ ಕುದುರೆ.

ಯಾವುದೋ ನಾಟಕ ನೋಡಲೆಂದು ಕಲಾಕ್ಷೇತ್ರಕ್ಕೆ ಹೊರಟಿದ್ದೆ. ಅದು ನನಗೆ ಮರೆತೇ ಹೋಯಿತು. ಸ್ಕೂಟರ್ ಅವಲೋಕನವೇ ನನಗೆ ಹೆಚ್ಚು ಇಂಟ್ರೆಸ್ಟಿಂಗ್ ಅನ್ನಿಸತೊಡಗಿತು. ಒಂದು ಘಂಟೆ ಅವಧಿಯ ನನ್ನ ಪಯಣದಲ್ಲಿ ಕನಿಷ್ಠ ಹತ್ತು ಸಿಗ್ನಲ್ ಗಳಾದರೂ ದೊರೆಯುತ್ತದೆ. ಇದು ನನ್ನ ಸ್ಕೂಟರ್ ಅವಲೋಕನಕ್ಕೆ ಹೆಚ್ಚು ಉತ್ತೇಜನ, ಪ್ರೋತ್ಸಾಹ ನೀಡಿತು.

ಹಳೆಯ ಕಾಲದ ಮುತ್ತೈದೆ ತರಹ ರಸ್ತೆಗಳಲ್ಲಿ ಸ್ಕೂಟರ್ ಓಡಾಡುತ್ತದೆ. ಇದನ್ನು ಯುವಕರು ಓಡಿಸಿದ್ದನ್ನು ನಾನು ನೋಡಿರುವುದು ಅಪರೂಪ. ಅಂಗಡಿಗಳನ್ನು ಇಟ್ಟುಕೊಂಡಿರುವ ಕೆಲವು ಮಾರ್ವಾಡಿ ಹುಡುಗರು ತಮ್ಮ ಅಪ್ಪಂದಿರ ಸ್ಕೂಟರ್ ಓಡಿಸುವುದನ್ನು ನೋಡಿದ್ದೇನೆ. ಅದು ಬಿಟ್ಟರೆ ರಿಯಲ್ ಎಸ್ಟೇಟ್ ನಡೆಸುವ ಕೆಲವು ತರುಣರು ಅಷ್ಟೇ.

ಸ್ಕೂಟರಿನಲ್ಲಿ ಕೂತು ಗೆಳೆಯನ ಸೊಂಟ ಬಳಸಿ ಪಿಸುಗುಡುತ್ತಾ ಸಾಗುವ ಸುಂದರಿಯನ್ನು ಇದುವರೆಗೂ ನಾನು ಕಂಡಿಲ್ಲ. ಸ್ಕೂಟರ್ ಏನಿದ್ದರೂ ದೇವಸ್ಥಾನಕ್ಕೆ ಹೊಗುವ ಮುತೈದೆಯರಿಗೆ, ಆಸ್ಪತ್ರೆಗೆ ಹೋಗುವ ಹೆಂಗಳೆಯರಿಗೆ, ಮಾರ್ಕೇಟಿಗೆ ಹೋಗುವ ವ್ಯಾಪಾರಿಗಳಿಗೇ ಸರಿ. ಸ್ಕೂಟರ್ ಸವಾರರ ಮೇಲೆ ನನಗೆ ಸಿಂಪತಿ ಇದೆ.

ಹೋದಲ್ಲಿ ಬಂದಲ್ಲಿ ಸ್ಕೂಟರ್ ನೋಡುವುದೇ ನನಗೊಂದು ಗೀಳಾಗಿ ಅಂಟಿಕೊಂಡಿತು. ಇದರಿಂದ ಅನೇಕ ರೀತಿಯಲ್ಲಿ ನನಗೆ ಉಪಕಾರವಾಯ್ತು. ಸ್ಕೂಟರ್ ಬಗ್ಗೆ ಅನೇಕ ಹೊಳಹುಗಳು ನನಗೆ ಸಿಕ್ಕವು. ನನ್ನ ವಿಮರ್ಶಾ ನೋಟ ತೀಕ್ಷ್ಣವಾಯಿತು. ಕೊಂಚಮಟ್ಟಿಗೆ ಗಂಡಸರ ಮನಸ್ಥಿತಿ ಅರ್ಥವಾಗತೊಡಗಿತು.

ಮನಸ್ಸು ಬಹಳ ಹಿಂದಕ್ಕೆ ಹೋಯಿತು. ನಾನು ಬೆಂಗಳೂರಿಗೆ ಬಂದ ಹೊಸತು. ಮುಗ್ಧತೆ ಇನ್ನೂ ಇತ್ತು. ಸಂಜೆ ಅಫೀಸ್ ಬಿಟ್ಟೊಡನೆ ನೇರ ಹಾಸ್ಟೇಲ್ ಗೆ ಹೋಗುತ್ತಿದ್ದೆ. ಹತ್ತಿರದ ದಾರಿ. ನಡೆದುಕೊಂಡೇ ಹೋಗುತ್ತಿದ್ದೆ. ನನಗೆ ಗೊತ್ತಿದ್ದುದು ಅದೊಂದೇ ದಾರಿ. ತಲೆ ತಗ್ಗಿಸಿ ನಡೆಯುತ್ತಿದ್ದವಳು ತಲೆ ಎತ್ತುತ್ತಿದ್ದುದು ಹಾಸ್ಟೇಲಿನಲ್ಲೇ. ಕೆಲಮಂದಿ ವಿಳಾಸ ಕೇಳುವವರು ಆಗೀಗ ಮಾತಾದಿಸುತ್ತಿದ್ದರು.

ವರ್ಕಿಂಗ್ ವಿಮೆನ್ಸ್ ಹಾಸ್ಟೇಲ್ ಇದೆಯಲ್ಲಾ, ಅದು ನಮಗೆ ಬಹಳಷ್ಟು ಪ್ರಪಂಚ ಜ್ನಾನವನ್ನು ಕಲಿಸಿಕೊಡುತ್ತದೆ. ಹೆಣ್ಣುಮಕ್ಕಳ ಮಾನಸಿಕ ಪ್ರಪಂಚವೊಂದು ಕಣ್ಣಿಗೆ ಕಂಡೂ ಕಾಣದಂತೆ ತೆರೆದುಕೊಳ್ಳುತ್ತದೆ. ವಿಷಯಾಂತರವಾಯ್ತು ಅಂದಿರಾ...? ಸಾರಿ. ಈಗ ರೋಡಿಗೆ ಬನ್ನಿ.

ನಾನು ನಡೆದುಕೊಂಡು ಹೋಗುತ್ತಿರುವಾಗ ಸ್ಕೂಟರ್ ಏನಾದರೂ ನನ್ನ ಹಿಂದಿನಿಂದ ಬಂದರೆ [ನಾನು ಫುಟ್ ಪಾತ್ ನಲ್ಲಿ ಇರುತ್ತೇನೆ. ಅದರಲ್ಲಿ ನಿಮಗೆ ಸಂಶಯ ಬೇಡ] ಅದು ನನ್ನ ಬಳಿ ಬಂದಾಗ ಸ್ಲೋ ಆಗುತ್ತಿತ್ತು. ಮುಂದೆ ಹಾದು ಹೋದ ಮೇಲೂ ಸವಾರ ಹಿಂದಿರುಗಿ ನೋಡ ನೋಡುತ್ತಲೇ ಹೋಗುತ್ತಿದ್ದ. ಆತ ನನಗೇನಾದರೂ ಪರಿಚಿತನಿರಬಹುದೇ ಎಂದು ನಾನೂ ಹಲವು ಬಾರಿ ಇಂಥವರ ಬಗ್ಗೆ ಯೋಚಿಸುತ್ತಿದ್ದುದುಂಟು.

ಇನ್ನು ಕೆಲವರು ಹತ್ತಿರ ಬರುತ್ತಿದ್ದಂತೆಯೇ ಬಾಯಲ್ಲೇನೋ ಮಣ ಮಣಗುಡಿಸುತ್ತಿದ್ದರು. ಕೆಲವರಂತೂ ತುಟಿ ಚಲನೆಯಿಲ್ಲದೆಯೇ ಹಲ್ಲು ಕಚ್ಚಿ ಗಂಟಲಿನೊಳಗಿನಿಂದಲೇ ’ಬರ್ತೀರಾ?’ ’ರೇಟ್ ಎಷ್ಟು?’ ಎನ್ನುತ್ತಿದ್ದರು. ಇದು ನಿಮಗೆ ಹೇಗೆ ಗೊತ್ತಾಯ್ತು ಎಂದು ಅನುಮಾನಿಸಬೇಡಿ ಮಾರಾಯ್ರೆ. ನಾನು ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿದ್ದೆ. ನಾಭಿಮೂಲದಿಂದ ತುಟಿ ಮೂಗುಗಳ ತನಕ ಯಾವ್ಯಾವ ಸ್ವರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದು ನನಗೆ ಗೊತ್ತು.

ಇಂದಿಗೂ ಸ್ಕೂಟರ್ ನವರನ್ನು ಕಂಡಾಗ ನಂಗೊಂಥರಾ ಅನುಮಾನ. ಇವರೂ ಕೂಡ ಮೆಜೆಸ್ಟಿಕ್ ಸುತ್ತ ಮುತ್ತ ಸಂಜೆ ಹೊತ್ತಲ್ಲಿ ನಿಧಾನವಾಗಿ ಪುಟ್ ಪಾತ್ ಬದಿಯಲ್ಲಿ ಸವಾರಿ ಮಾಡುತ್ತಿರುವವರಾಗಿರಬಹುದೇ? [ಸಂಭಾವಿತ ಸ್ಕೂಟರ್ ಸವಾರರ ಕ್ಷಮೆ ನನ್ನ ಮೇಲಿರಲಿ] ಮತ್ತೆ ವಿಷಯಾಂತರವಾಯಿತು ಅಂತಿರಾ...? ಟ್ರಾಕ್ ಗೆ ಬಂದೆ.

ಒಂದು ಕಾಲದಲ್ಲಿ ಸ್ಕೂಟರ್ ಗೆ ಎಂಥ ರಾಜ ಮರ್ಯಾದೆ ಇತ್ತು ಅಂತೀರ! ಅಳಿಯನಿಗೆ ಮದುವೆಯಲ್ಲಿ ಸ್ಕೂಟರ್ ಕೊಡಿಸುವುದೆಂದರೆ ಮಾವನಿಗೆ ಸಡಗರ. ಮಗಳಿಗೆ ಸಂಭ್ರಮ. ತನ್ನ ಮಾವ ತನ್ನನ್ನು ಗಂಭೀರವಾಗಿ ಪರಿಗಣಿಸಿದ್ದಾನೆ ಎಂದು ಅಳಿಯನಿಗೂ ಹೆಮ್ಮೆ. ಆ ಭಾಗ್ಯ ಈಗೆಲ್ಲಿದೆ ಬಿಡಿ. ಈಗ ಯಾವ ಮಾವನಾದರೂ ಅಳಿಯನಿಗೆ ಸ್ಕೂಟರ್ ಕೊಡಿಸುತ್ತಾನೆಯೇ? ಕೊಟ್ಟರೂ ಅಳಿಯ ತಗೊಂಡಾನೆಯೇ?

’ಎರಡು ಕನಸು’ ಸಿನೇಮಾ ಎಲ್ಲರೂ ನೋಡೇ ನೋಡಿರ್ತಾರೆ. ಅದರಲ್ಲಿ ರಾಜಕುಮಾರ್ ಸ್ಕೂಟರ್ ಓಡಿಸುತ್ತಾ ಹಾಡುವ ’ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ’ ಹಾಡನ್ನು ಯಾರದರೂ ಸ್ಕೂಟರನ್ನು ಮರೆತು ಜ್ನಾಪಿಸಿಕೊಳ್ಳಲು ಸಾಧ್ಯವೇ? ’ಬಯಲು ದಾರಿ’ಯಲ್ಲಿ ಅನಂತನಾಗ್ ಸ್ಕೂಟರ್ ಓಡಿಸಿದಂತೆ ನೆನಪು.

ಸ್ಕೂಟರ್ ಎಂದೊಡನೆ ನೆನಪಾಗುವುದು ಲ್ಯಾಂಬ್ರೆಟಾ ವೆಸ್ಪಾ.ಈ ಹೆಸರಿನೊಡನೆ ತಳುಕು ಹಾಕಿಕೊಂಡಂತೆ ನೆನಪಾಗುವುದು ನಳಿನಿ ದೇಶಪಾಂಡೆಯ ’ಲ್ಯಾಂಬ್ರಟಾ-ವೆಸ್ಪಾ’. ಕವನ
’ಗ್ರಹಗತಿಯೋದುವ ಬ್ರಾಹ್ಮಣರೆಲ್ಲಾ ಸತ್ತೇ ಹೋಗಲಿ ವಿಪ್ಲವದಲ್ಲಿ
ಬಂಧುಬಾಂಧವರಿಷ್ಟರ ಗೊಟ್ಟಿಯ ಚಂದನ ಕಾಷ್ಠಕ್ಕೊಟ್ಟಿರಿ ಬೆಂಕಿಯ.
ಸುಟ್ಟೇ ಹೋಗಲಿ ಹಿಂದೂ ಧರ್ಮ.
ಆದುದ್ದಾಯ್ತು. ಒಳಿತೋ ಕೆಡುಕೋ ಏನೇ ಇರಲಿ, ಅಟಂಬಾಂಬಿನ ಅಣುಸಮರಕ್ಕೆ ನಾಂದಿಯಾದರೂ ನನಗೇನಿಲ್ಲ!.

ತುಂಟ ಹುಡುಗನ ಸೊಂಟಾ ಸುತ್ತಿ ಲ್ಯಾಂಬ್ರಟಾ, ವೆಸ್ಪಾ ಬೆನ್ನನ್ನು ಹತ್ತಿ ಕೀಲು ಕುದುರಿ ರಾಜಕುಮಾರಿ ಒಮ್ಮೆಯಾದರೂ ಆದೇನು! ನರಕಕ್ಕೂ ಹೋದೇನು.”
ಈ ಹುಡುಗಿಯ ಗತ್ತಿಗೆ ಕಾರಣ, ಲ್ಯಾಂಬ್ರೆಟಾ ವೆಸ್ಪಾ ಹತ್ತಿ ತುಂಟಾ ಹುಡುಗನ ಸೊಂಟ ಬಳಸಿದ್ದು. ಆ ಕಾಲಕ್ಕೆ ಅದು ಬಹು ದೊಡ್ಡ ಕ್ರಾಂತಿ. [ಈ ನಳಿನಿ ದೇಶಪಾಂಡೆ ಎಂಬ ನವೋದಯದ ಕವಿ, ನಮ್ಮ ದಿ. ಪೂರ್ಣಚಂದ್ರ ತೇಜಸ್ವಿಯವರ ಮಾನಸ ಪುತ್ರಿ.] ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಕಾಶ ರೈ ಮತ್ತು ಕನ್ನಡಪ್ರಭದ ಸಂಪಾದಕರಾದ ರಂಗನಾಥ್ ಬಳಿ ಕೂಡ ಬಹು ಹಿಂದೆ ಲ್ಯಾಂಬ್ರಟಾ ವೆಸ್ಪಾ ಇತ್ತು. ಅವುಗಳಲ್ಲಿ ನಾನು ಕೂಡ ನನ್ನ ಹುಡುಗನ ಜೊತೆ ಓಡಾಡಿದ್ದೇನೆ.

ಕೇಂದ್ರ ಮಂತ್ರಿಯಾಗಿದ್ದ ರಾಜೇಶ್ ಪೈಲೆಟ್ ಗೊತ್ತಲ್ಲ? ಅವರು ಮದುವೆಯಾದಾಗ ಅವರನ್ನು ಇಂದಿರಾಗಾಂದಿ ತಮ್ಮ ಮನೆಗೆ ಭೋಜನಕ್ಕೆ ಅಹ್ವಾನಿಸಿದ್ದರಂತೆ. ಆಗ ಅವರ ಮನೆಯಲ್ಲಿ ಅಷ್ಟೆಲ್ಲಾ ಕಾರುಗಳಿದ್ದರೂ, ಅವರು ತಮ್ಮ ಪ್ರೀತಿಯ ಸ್ಕೂಟರಿನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡು ಪ್ರಧಾನ ಮಂತ್ರಿಗಳ ಮನೆಗೆ ಹೋಗಿದ್ದರಂತೆ. ಇದನ್ನು ಎಲ್ಲಿಯೋ ಓದಿದ ನೆನಪು.

ಅಷ್ಟೆಲ್ಲಾ ಯಾಕೆ, ಸಹರಾ ಕಂಪೆನಿ ಮುಖ್ಯಸ್ಥ ಇದ್ದಾರಲ್ಲ, ಸುಬ್ರತೋ ಬ್ಯಾನರ್ಜಿ. ಅವರು ತಮ್ಮ ಉದ್ದಿಮೆಯತ್ತ ಮೊದಲ ಹೆಜ್ಜೆಯಿಟ್ಟಾಗ ಅವರಲ್ಲಿದ್ದುದು ಕೇವಲ ಒಂದು ಟೇಬಲ್ ಮತ್ತು ಕುರ್ಚಿ, ಹಾಗೂ ಒಂದು ಲ್ಯಾಂಬ್ರೆಟಾ ವೆಸ್ಪಾ ಸ್ಕೂಟರ್. ಇಂದಿಗೂ ಅವರ ಕಂಪೆನಿಯ ಎಲ್ಲಾ ಬ್ರೋಶರ್ ಗಳಲ್ಲಿ ಇದೇ ಅಧಿಕೃತ ಚಿಹ್ನೆಗಳಾಗಿವೆ. ಮನುಷ್ಯ ಇತಿಹಾಸವನ್ನು ಮರೆಯಬಾರದಲ್ಲವೇ?

ಸಾಲ ಮಾಡಿ ಸ್ಕೂಟರ್ ತೆಗೆದುಕೊಳ್ಳುವುದೆಂದರೆ ಒಂದು ಕಾಲದಲ್ಲಿ ಹರ ಸಾಹಸವಾಗಿತ್ತು. ಅದಕ್ಕಾಗಿ ಬ್ಯಾಂಕ್ ಗಳಿಗೆ ಅಲೆದಾಡಿ ಚಪ್ಪಲಿ ಸವೆದು ಹೋಗುತ್ತಿತ್ತು. ಆದರೆ ಈಗ ಪೇಪರಿನಲ್ಲಿ ಮೋಟಾರು ಕಂಪೆನಿಗಳೇ ಜಾಹೀರಾತು ನೀಡಿ ಕಾರು-ಬೈಕ್ ಗಳನ್ನು ಕೊಡುತ್ತಾರೆ.ಈಗ ಎಲ್ಲವೂ ಸಲೀಸು.

ಒಂದು ರೀತಿಯಲ್ಲಿ ನೋಡಿದರೆ ಸ್ಕೂಟರ್ ಸವಾರನ ಪಾಡು ಎಂದರೆ ಟೋಮೆಟೋ-ರಾಗಿ ಬೆಳೆದ ರೈತನ ಪಾಡು. ಬೈಕ್- ಕಾರು ಇಟ್ಟುಕೊಂಡವರೆಂದರೆ ಕಾಫಿ,ಟೀ ತೋಟದ ಮಾಲೀಕನ ವರಸೆ. ಹೋಲಿಕೆ ಸರಿ ಇಲ್ಲ ಅಂದಿರಾ....?

ಸ್ಕೂಟರ್ ಓನರ್ ನನ್ನು ಸ್ವಲ್ಪ ಹೊತ್ತು ಮಾತಾಡಿಸಿ ನೋಡಿ; ಆತ ಟಿಪಿಕಲ್ ಇಂಡಿಯನ್ ಮೆಂಟ್ಯಾಲಿಟಿಯ ಒಬ್ಬ ಗೃಹಸ್ಥ. ನನಗೊಬ್ಬ ಗೆಳೆಯನಿದ್ದಾನೆ. ಆತನ ಹತ್ತಿರ ಒಂದು ಸ್ಕೂಟರಿದೆ. ಯಾವುದೋ ಕೆಲಸಕ್ಕಾಗಿ ನನಗೆಲ್ಲಿಗೋ ಅರ್ಜೆಂಟ್ ಹೋಗಬೇಕಾಗಿತ್ತು. ’ಸ್ವಲ್ಪ ಅಲ್ಲಿ ತನಕ ಬಿಡೋ’ ಎಂದೆ. ಆತ ಅನುಮಾನಿಸಿದ. ಕೊನೆಗೆ ಒಲ್ಲದ ಮನಸ್ಸಿನಿಂದ ಹತ್ತಿಸಿಕೊಂಡ. ಅಪ್ಪಿತಪ್ಪಿಯೂ ಮೈ ಸೋಕದಂತೆ ಜಾಗೃತೆ ವಹಿಸಿಕೊಳ್ಳುತ್ತಿದ್ದ. ನನಗೆ ರೇಗಿ ಹೋಯಿತು. ಇಳಿಯುವಾಗ ಬೇಕೆಂತಲೇ ಅವನ ಭುಜದ ಮೇಲೆ ಕೈಯಿಟ್ಟು ಇಳಿದೆ. ಮುಂದೆಂದೂ ಆತನ ಸ್ಕೂಟರ್ ಏರುವ ಪ್ರಸಂಗ ಬರಲಿಲ್ಲ.

ಹೀಗೆ ಸ್ಕೂಟರ್ ಸವಾರರ ಜೊತೆ [ಪರಿಚಿತರು ಮಾತ್ರ!] ನನ್ನ ಕುಶಲ ಸಂಭಾಷಣೆಗಳು ನಡೆಯುತ್ತಲೇ ಇರುತ್ತವೆ. ಒಂದು ದಿನ ಪರಿಚಿತರ ಜೊತೆ ಕೇಳಿದೆ,’ನಿಮ್ಮ ಪತ್ನಿ ನಿಮ್ಮ ಜೊತೆ ಸ್ಕೂಟರಿನಲ್ಲಿ ಬರುತ್ತಾರೆಯೇ?” ’ಬರ್ತಾಳಲ್ಲಾ’ ಎಂದರವರು. ಆದರೂ ನನಗೆ ಸಂಶಯ. ಯಾಕೆಂದರೆ ನಾನೆಂದೂ ಅವರು ಸಪತ್ನಿಕರಾಗಿ ಸ್ಕೂಟರ್ ಸವಾರಿ ಮಾಡಿದ್ದನ್ನು ಕಂಡೇ ಇಲ್ಲ.

ಸ್ಕೂಟರ್ ಜೊತೆ ಬೈಕ್ ಬಗ್ಗೆ ಒಂದೆರಡು ಮಾತು ಹೇಳದೆ ಹೋದರೆ ಈ ಪ್ರಬಂಧಕ್ಕೆ ನ್ಯಾಯ ಸಲ್ಲಿಸಿದಂತಾಗುವುದೇ ಇಲ್ಲ. ಯಾಕೆಂದರೆ ಉಳಿವಿಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಬೈಕ್ ಯಾವಗಲೋ ಸ್ಕೂಟರನ್ನು ಹಿಂದಕ್ಕೆ ಹಾಕಿದೆ. ಇದಕ್ಕೆನು ಕಾರಣ?

ಕಾರಣ ; ಯುವ ಜನಾಂಗ ಬೈಕ್ ಗೆ ಒಲಿದಿದೆ. ಅದರ ನಿಲುವು, ವಿನ್ಯಾಸ, ಗಾಂಭೀರ್ಯ ಹಾಗಿದೆ. ಅದರಲ್ಲಿ ವೈಭವ ಇದೆ. ಹಿಂದೆಯೇ ಹೇಳಿದಂತೆ ಅದು ಚಿಮ್ಮುವ ಕುದುರೆ. ನಮ್ಮ ಗಮನಕ್ಕೆ ಬಂದಂತೆ ನಮ್ಮ ಯುವ ಜನಾಂಗದ ಭಾವನೆಗಳು ಈಗೀಗ ತೀವ್ರವಾಗುತ್ತಿದೆ. ಅವರ ಪ್ರೀತಿ, ದ್ವೇಷ, ಪ್ರಣಯ, ಅಭಿವ್ಯಕ್ತಿ ಎಲ್ಲದರಲ್ಲೂ ವೇಗ ಇದೆ; ತೀವ್ರತೆ ಇದೆ. ಅದು ಸ್ಕೂಟರಿನಂತೆ ಅಥವಾ ಭಾರತೀಯ ಸಂಗೀತದಂತೆ ಮನಸ್ಸಿಗೆ ಮುದ ನೀಡುವಂತಹದ್ದಲ್ಲ. ಬೈಕ್ ನಂತೆ ಕೆರಳಿಸುವಂತಹದು.

ಬೇಕಾದರೆ ನೋಡಿ; ಮಹಿಳಾ ಕಾಲೇಜುಗಳೆದುರು ಬೈಕ್ ಗಳ ಮೆರವಣಿಗೆ ಇರುತ್ತದೆ. ಸ್ಕೂಟರ್ ನಾಪತ್ತೆ. ಒಂದು ವೇಳೆ ಯಾವನಾದರೂ ಹುಡುಗ ಆಸೆಯಿಂದ ಅಲ್ಲಿ ಸುಳಿದಾಡಿದರೂ ಯಾವ ಹುಡುಗಿಯೂ ಲಿಪ್ಟ್ ಕೇಳಲಾರಳು. ಸೀಟಿನ ವಿನ್ಯಾಸವೂ ಇದಕ್ಕೆ ಕಾರಣವಿರಬಹುದು. ಬೈಕ್ ನಲ್ಲಿ ಕುಳಿತರೆ ಏಕತೆಯ ಭಾವನೆ ಮೂಡುತ್ತದೆ. ಗೇರ್ ಚೇಂಜ್ ಮಾಡಿದಾಗಲಂತೂ ಪರಸ್ಪರ ಅಂಟಿಕೊಳ್ಳಲೇಬೇಕಾಗುತ್ತದೆ. ಕೈಗಳು ತಾನಾಗಿಯೇ ಸವಾರನ ಬೆನ್ನನ್ನೋ ಸೊಂಟವನ್ನೋ ಹಿಡಿದುಕೊಳ್ಳಲೇ ಬೇಕಾಗುತ್ತದೆ. ಹಾಗಾಗಿ ಪ್ರೇಮಿಗಳಿಗೆ ಯುವ ಜೋಡಿಗಳಿಗೆ, ಮುನ್ನುಗ್ಗುವ ಮನೋಭಾವದವರಿಗೆ ಇದು ಇಷ್ಟವಾಗುತ್ತದೆ.

ಸ್ಕೂಟರ್ ತಯಾರು ಮಾಡಿದ್ದು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡಂತೆ. ಆದರೆ ಯಾಕೋ ಅದು ಮಹಿಳೆಯರಿಗೆ ಇಷ್ಟವಾಗಲೇ ಇಲ್ಲ. ಪುರುಷರಿಗೆ ಒಲಿಯಿತು. ಆದರೂ ಅದರ ಸೀಟಿನ ವಿನ್ಯಾಸದಿಂದಾಗಿ ಸವಾರರ ನಡುವೆ ಗೌರಯುತವಾದ ಅಂತರವಿರುತ್ತದೆ. ಅಂಟಿಕೊಳ್ಳಲು ಬಯಸುವವರಿಗೆ ಇದು ಎಂದೂ ಇಷ್ಟವಾಗುವುದಿಲ್ಲ!

ಸ್ಕೂಟರಿಗೊಂದು ಸ್ಥಿತಪ್ರಜ್ನತೆ ಇದೆ. ಹಳೆ ತಲೆಮಾರಿನ ಮನೆಯ ಯಜಮಾನನಂತೆ. ಒಂದು ಮಿತಿಯನ್ನು ಮೀರಿ ಅದು ಓಡುವುದಿಲ್ಲ. ಅಷ್ಟೇನೂ ಫೆಟ್ರ‍ೋಲ್ ಕುಡಿಯುವುದಿಲ್ಲ. ಆದರೂ ಅದು ಮ್ಯೂಸಿಯಂ ಸೇರುತ್ತಿದೆ ಅನ್ನಿಸುತ್ತಿದೆ. ಅಲ್ಲವೇ?

ಮನೆಯಲ್ಲಿ ಎರಡ್ಮೂರು ಕಾರು ಇಟ್ಟುಕೊಂಡಿದ್ದರೂ, ತಮ್ಮ ಸ್ಕೂಟರನ್ನು ಧೂಳು ಹೊಡೆದು, ಒರೆಸಿ,ಜೋಪಾನ ಮಾಡುವವರನ್ನು ನಾನು ನೋಡಿದ್ದೇನೆ. ’ಯಾಕೆ ಹೀಗೆ?’ ಅಂತ ಕೇಳಿದರೆ ’ಹೆಂಡತಿ ಹಳಬಳಾದ್ಲು ಅಂತ ದೂರ ತಳ್ಳೋಕಾಗುತ್ತಾ?’ ಅಂತಾರೆ!

ಈಗೀಗ ಅನ್ನಿಸುವುದುಂಟು, ಬೈಕಿನ ರಾಜ ಗಾಂಭೀರ್ಯಕ್ಕಿಂತ ಸ್ಕೂಟರ್ ನ ಸರಳತನವೇ ಸಾಕು ಅಂತ. ಹಾಗಾದರೆ ನಾನು ಕೂಡ ಮ್ಯೂಸಿಯಂ ಸೇರುತ್ತಿದ್ದೇನೆಯೇ? ಗೊತ್ತಿಲ್ಲ. ಇದ್ದರೂ ಇರಬಹುದು.

[ ’ಓ ಮನಸೇ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪ್ರಬಂಧ]