Saturday, November 28, 2015

ನಿನ್ನದೀ..ಒಲವಾಗ್ನಿ....!


                         

  ೧


ನಾನು... ಮಹಾಶ್ವೇತೆ;
ದೇವಲೋಕದ ಗಂಧರ್ವಕನ್ಯೆ.
ಮಾನುಷ ಪ್ರೀತಿಗಾಗಿ ಹಂಬಲಿಸಿದವಳು.
ಅಚ್ಛೋದ ಸರೋವರಕ್ಕೆ ಸ್ನಾನಕ್ಕೆಂದು ಬಂದಿದ್ದೇನೆ.
ಪುಂಡರೀಕಾ...
ನಿನ್ನನ್ನಿಲ್ಲಿ ಕಂಡೆ...ಮನಸೋತೆ.
ದೇವಲೋಕ ನರಕಲೋಕವಾಯ್ತು.
ನಿನ್ನೊಲವಿಗಾಗಿ ಜನ್ಮಜನ್ಮಾಂತರಗಳಲ್ಲೂ ಕಾಯಬಲ್ಲೆ.
ಈ ಒಂದು ಜನ್ಮದ ತಪಸ್ಸೇನು ಮಹಾ...! 


 ೨


 ಸಾಗರವನ್ನು ಎಂದೂ ನೋಡದವರ ಮುಂದೆ
ಅದರ ಅಗಾಧ ಜಲರಾಶಿಯನ್ನು ವರ್ಣಿಸಬಾರದು.

ಮನೆ ಮುಂದಿನ ಗುಡ್ಡವನ್ನೇ ಹತ್ತಲು ಮನಸ್ಸಿಲ್ಲದವರಿಗೆ
ಹಿಮಾಲಯದ ಔನತ್ಯದ ಬಗ್ಗೆ ಹೇಳಬಾರದು.

ಕಣ್ಣೀರಿಗೂ ಉಪ್ಪು ನೀರಿಗೂ ವ್ಯತ್ಯಾಸ ಅರಿಯದವರ ಮುಂದೆ
ಭಾವನೆಗಳ ಕಟ್ಟೆ ಹರಿಯಗೊಡಬಾರದು.

ನಾನೊಬ್ಬಳು ಹುಚ್ಚಿ; ಇಬ್ಬನಿಯಲ್ಲಿ ಕಾಮನಬಿಲ್ಲು ಕಾಣುತ್ತೇನೆ.

 


                       














 ೩


ಬಂದೆ.. ಎಂದೆ, ಮುಟ್ಟಿದೆ.. ಎಂದೆ.
ಮೈ ಝುಮ್ಮೆನ್ನಲಿಲ್ಲ;ಜೀವ ತಲ್ಲಣಿಸಲಿಲ್ಲ.
ಕವಿಸೃಷ್ಟಿಯ ನಾಯಕನಲ್ಲಿ ಮೈಮರೆತೆ. ಜೀವ ತಾಳಲಿಲ್ಲ.
ಮೇಘ ಸಂದೇಶಗಳೆಲ್ಲಾ ಭ್ರಮಾಸೃಷ್ಟಿಗಳು; ನೆರಳಿಲ್ಲ.ಉಸಿರಿಲ್ಲ
ಅನುಭಾವದ ಸುಖಕ್ಕೆ ಪಂಚೇಂದ್ರಿಯದ ಹಂಗಿಲ್ಲವಂತೆ.
ಸುಡಲಿ ಆ ಅನುಭಾವ; ನನ್ನ ಸ್ಪರ್ಷಕ್ಕೊಮ್ಮೆ ದಕ್ಕಿಬಿಡು.
ನನ್ನ ದಾಸಾನುದಾಸ ನೀನಾಗದಿದ್ದರೆ...
ನಾನೇ ನಿನ್ನ ತೋಳಿನ ಮಗುವಾಗಿಬಿಡುವೆ..
ಮುಟ್ಟಿದರೂ ಮುಟ್ಟದಂತಿರುವುದನ್ನು ನಾವಿಬ್ಬರೂ ಕೂಡಿ ಕಲಿಯೋಣ



   ೪

ಸುಮ್ಮನೆ 
ಜೊತೆ ಹೆಜ್ಜೆಗಳು, ಗುರಿಯಿರಲಿಲ್ಲ.
ವಾದ-ವಿವಾದ ನಡೆಯುತ್ತಿದ್ದವು, ಎಂದಿನಂತೆ
ಬೀದಿಯಲ್ಲಿದ್ದವರಿಗೆ ಕಾಡು, ಕಡಲು, ಬೆಳದಿಂಗಳ ಮೋಹ.
ಎದೆಯಲ್ಲೊಂದು ಪ್ರಶ್ನೆ ಕುದಿಯುತ್ತಿತ್ತು,
ಕೇಳಿದೆ.
ಕೈಮುಗಿದು ನುಡಿದ;
’ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡು’
ಎತ್ತರಕ್ಕೆ ಎಸೆಯಲ್ಪಟ್ಟೆ, 
ಅವನು ಕೆಳಗುಳಿದ.
ಈಗವನು ಪಂಚೇಂದ್ರಿಯಗಳಾಚೆಗಿನ ಇನಿಯ
ನೆನಪಾದೊಡನೆ ಅದೇ ಕೈಮುಗಿದ ಚಿತ್ರ.
ನನ್ನ ಚಿತ್ರಕ ಶಕ್ತಿಗೆ ನನಗೇ ಬೆರಗು;

ದೈನ್ಯಕ್ಕೆ ಪ್ರೀತಿ ಕೊಲ್ಲುವ ಶಕ್ತಿಯಿದೆ


                   














  ೫



ತುಂಬಾ ಹಿಂದೆ ಆ ಕಾಗದ ಬಂದಿತ್ತು.
ಸುಮ್ಮನೆ ಅದನ್ನೇ ತಿರುಗಿಸಿ ಮರುಗಿಸಿ ನೋಡಿದ್ದೆ.
ವಿಳಾಸವಿರಲಿಲ್ಲ.
ಬರೆದವರಾರೆಂದು ಗೊತ್ತಿತ್ತು.

ಒಳಗೇನಿರಬಹುದು?
ಎದೆಹಿಡಿದುಕೊಂಡೆ; ಹಣೆಯಲ್ಲಿ ಬೆವರೊಡೆದಿತ್ತು.
ಹಗುರಾಗಿ ತುಟಿ ತಾಗಿಸಿದೆ, ಎದೆಗೊತ್ತಿಕೊಂಡೆ.
ಸುಗಂಧವೊಂದು ತೇಲಿಬಂತು.
’....................................’
ಉಯಿಲು ಪತ್ರದೊಳಗೆ ಮೆಲ್ಲನೆ ಅದ ಹುದುಗಿಸಿ
ಸ್ಮೃತಿಸಂಪುಟದಲ್ಲಿಟ್ಟು ಕೀಲಿಕೈಯನು ಆಳ ಸಮುದ್ರಕ್ಕೆಸೆದೆ.
ಉರವಣಿಸಿ ಬರುತ್ತಿರುವ ಕಾಲತೆರೆಗಳನು ನೋಡುತ್ತಿದ್ದೇನೆ;
ಲೆಕ್ಕ ತಪ್ಪುತ್ತಿದೆ!





Friday, November 13, 2015

ಕಣ್ಣು; ಅಂತರಂಗ ಪ್ರವೇಶದ ಕೀಲಿಕೈ



ಒಬ್ಬ ವ್ಯಕ್ತಿ ನಮ್ಮೆದುರು ನಿಂತಾಗ ಮೊಟ್ಟ ಮೊದಲಿಗೆ ನಾವು ಗಮನಿಸುವುದು ಕಣ್ಣುಗಳನ್ನು. ಕಣ್ಣುಗಳು ಮನಸ್ಸಿನ ಕನ್ನಡಿ. ಅವು ಎಂದೂ ಸುಳ್ಳು ಹೇಳುವುದಿಲ್ಲ.
ನೂತನಳ ವಾತ್ಸಲ್ಯ ತುಂಬಿದ ಕಣ್ಣುಗಳು, ರಾಖಿಯ ಭಾವಪೂರ್ಣ ಕಣ್ಣು, ಮೌಸಮಿ ಚಟರ್ಜಿಯ ನಗುವ ಕಣ್ಣು, ಹೇಮಮಾಲಿನಿಯ ಪ್ರೀತಿಯ ಕಣ್ಣು, ಸಂಜೀವ ಕುಮಾರನ ಆಳವಾದ ಕಣ್ಣು, ನಾನಾಪಾಟೇಕರನ ಸುಡುವ ಕಣ್ಣು, ನಾಸೀರುದ್ದೀನ್ ಶಾನ ಚುರುಕು ಕಣ್ಣು, ರಾಜೇಶ್ ಖನ್ನಾನ ತೇಲುಗಣ್ಣು, ಧರ್ಮೇಂದ್ರನ ಅಮಲುಗಣ್ಣು ಅಮಿತಾಬ್ ನ ಆತ್ಮವಿಶ್ವಾಸದ ಕಣ್ಣು... ಇವರಿಗೆಲ್ಲಾ ಕಣ್ಣುಗಳಲ್ಲೇ ನವರಸಗಳನ್ನು ಬಿಂಬಿಸುವ ಸಾಮರ್ಥ್ಯವಿತ್ತು.
ಎಪ್ಪತ್ತರ ದಶಕದ ಚಲನಚಿತ್ರಗಳ ನಟ –ನಟಿಯರ ಭಾವಪೂರ್ಣ ಕಣ್ಣುಗಳು ನಮ್ಮಲ್ಲಿರುವ ನವೀರಾದ ಭಾವನೆಗಳನ್ನು ಬಡಿದೆಬ್ಬಿಸುತ್ತಿದ್ದವು. ಈಗಿನ ನಟ-ನಟಿಯರ ಕಣ್ಣುಗಳಲ್ಲಿ ವಿಪ್ರಲಂಭ ಸ್ರುಂಗಾರ ತಪ್ಪಿದರೆ ರೌದ್ರ, ಭಯಾನಕ ರಸಗಳೇ ಪ್ರಮುಖವಾಗಿ ವಿಜ್ರುಂಭಿಸುತ್ತವೆ. ಹೊಡೆದಾಟಕ್ಕೆ ಇಲ್ಲವೇ ನೇರವಾಗಿ ಪಲ್ಲಂಗಕ್ಕೇ ಅಹ್ವಾನ ನಿಡುವ ಕಣ್ಣುಗಳಿವು.
ಅಂದರೆ ಕಣ್ಣು ಮನಸ್ಸಿನ ಕೈಗನ್ನಡಿ ಅಲ್ಲವೇ?
ಮಾತು; ಸಂವಹನಕ್ಕೆ ಅತ್ಯುತ್ತಮ ಮಾಧ್ಯಮ. ಆದರೂ ಅದಕ್ಕೆ ಅದರದೇ ಆದ ಮಿತಿಗಳಿವೆ. ಹಲವು ಬಾರಿ ಮಾತು ವ್ಯಕ್ತಪಡಿಸಲಾಗದ ಭಾವನೆಗಳನ್ನು ಕಣ್ಣು ವ್ಯಕ್ತಪಡಿಸುತ್ತದೆ. ಪ್ರೇಮಿಗಳಿಗೆ ಇದು ಇನ್ನೂ ಚೆನ್ನಾಗಿ ಗೊತ್ತಿದೆ. ಅವರು ಮಾತಿಲ್ಲದೆ ಗಂಟೆಗಟ್ಲೆ ಮೌನವಾಗಿ ಪರಸ್ಪರ ನೋಡುತ್ತಾ ಕುಳಿತುಕೊಳ್ಳಬಲ್ಲರು. ಮೌನಸಂಭಾಷಣೆಯಿಂದಲೇ ಗುಂಪಿನಲ್ಲಿದ್ದರೂ ಏಕಾಂತ ಸ್ರುಷ್ಟಿಸಿಕೊಳ್ಳಬಲ್ಲರು.
ಮನದಲ್ಲಿ ಯಾವ ಕಲ್ಮಶವೂ ಇಲ್ಲದಾಗ ವ್ಯಕ್ತಿಯೊಬ್ಬ ನೇರವಾಗಿ ಇನ್ನೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬಲ್ಲ. ನೇರ ನೋಟವನ್ನು ಎದುರಿಸಲಾಗದ ವ್ಯಕ್ತಿ ಖಂಡಿತವಾಗಿಯೂ ನಂಬಿಕೆಗೆ ಅನರ್ಹ. ಆಚಾರ್ಯ ರಜನೀಶರ ಕಣ್ಣುಗಳನ್ನು ಎಂದಾದರೂ ನೋಡಿದ್ದೀರಾ? ಅವರ ಕಣ್ಣುಗಳಲ್ಲಿ ಎಂತಹ ಅದ್ಭುತ ಶಕ್ತಿಯಿತ್ತು! ಎದುರಿಗಿರುವವರ ಅಂತಃಸ್ವತ್ವವನ್ನೆಲ್ಲಾ ಒಂದು ಕಣ್ಣೋಟದಿಂದಲೇ ಅವರ ಅಳೆಯಬಲ್ಲವರರಾಗಿದ್ದರು, ಕ್ಷಣಾರ್ಧದಲ್ಲೇ ತಮ್ಮ ವಶಕ್ಕೆ ತೆಗೆದುಕೊಳ್ಳಬಲ್ಲವರಾಗಿದ್ದರು. ಅವರ ದುಂಡನೆಯ ಕಣ್ಣುಗಳಲ್ಲಿ ಸಮ್ಮೋಹನ ಶಕ್ತಿಯಿತ್ತು.

ನಮ್ಮ ಋಷಿ ಮುನಿಗಳ ಕಣ್ಣುಗಳಲ್ಲಿ ಅತೀಂದ್ರಿಯ ಶಕ್ತಿಯಿತ್ತು ಎಂಬುದನ್ನು ನಮ್ಮ ಪುರಾಣಗಳಲ್ಲಿ ಓದಿದ್ದೇವೆ..ಅವರು ಸಿಟ್ಟಿಗೆದ್ದಾಗ ಕಣ್ಣೋಟದಿಂದಲೇ ಎದುರಿಗಿರುವ ವಸ್ತು ಇಲ್ಲವೇ ಪ್ರಾಣಿಗಳನ್ನು ಸುಟ್ಟುಬಿಡುತ್ತಿದ್ದರು. ಅವರಿಗೆ ಅಂದರೆ ಅವರ ಕಣ್ಣಿಗೆ ಅಂತಹ ಶಕ್ತಿ ಎಲ್ಲಿಂದ ಬಂದಿರಬಹುದು? ಬಹುಶಃ ಅದು ಅವರು ಅಂತರಂಗದೊಡನೆ ನಡೆಸಿದ ದೀರ್ಘಕಾಲದ ಸಂಭಾಷಣೆಯಿಂದ ದೊರಕಿರಬಹುದು. ಅವರು ಏಕಾಂತದಲ್ಲಿ ಒಳಗಣ್ಣನ್ನು ತೆರೆದು ಅಲೌಕಿಕವಾದ ಶಕ್ತಿಯನ್ನು ತುಂಬಿಕೊಂಡಿರಬಹುದು.

ಪರಶಿವನಿಗೆ ಮೂರನೆಯ ಕಣ್ಣಿದೆಯೆಂದು ನಮ್ಮ ಪುರಾಣ ಹೇಳುತ್ತದೆ. ಅದು ಸಾಂಕೇತಿಕ; ಅದೇ ಒಳಗಣ್ಣು. ಎರಡು ಹುಬ್ಬುಗಳ ಮಧ್ಯೆ ಇರುವ ಒಳಗಣ್ಣಿನೆಡೆಗೆ ಹೊರಗಣ್ಣಿನ ದ್ರುಷ್ಟಿ ನೆಟ್ಟು ಕುಂಡಲಿನಿ ಶಕ್ತಿಯನ್ನು ಜಾಗ್ರುತಗೊಳಿಸುವ ವಿಧಾನದ ಬಗ್ಗೆಯೂ ನಾವು ಕೇಳಿದ್ದೇವೆ.

ಸಂಗೀತ ನಮಗೆ ಅಲೌಕಿಕ ಆನಂದವನ್ನು ಕೊಡುತ್ತದೆ. ಅದನ್ನು ಅನುಭವಿಸಲು ನಮಗೆ ಒಳಗಣ್ಣು ಬೇಕು. ಆದರೆ  ನ್ರುತ್ಯವನ್ನು ಅನುಭವಿಸಲು ನಮಗೆ ಹೊರಗಣ್ಣು ಸಾಕು. ಇಂದಿಗೂ ರೇಡಿಯೋ ಮತ್ತು ಪುಸ್ತಕಗಳು ನನ್ನ ಅತ್ಯುತ್ತಮ ಮನರಂಜನೆಯ ಸಾಧನಗಳು. ಇವೆರಡೂ ನಮ್ಮ ಕಲ್ಪನಾ ಸಾಮರ್ಥ್ಯವನ್ನು ವಿಸ್ತರಿಸುತ್ತಾ ಹೋಗುತ್ತವೆ. ರಾತ್ರಿಯ ನೀರವತೆಯಲ್ಲಿ ರೇಡಿಯೋದಿಂದ ಹೊರ ಹೊಮ್ಮುವ ಗೀತ್ ಮಾಲಾ. ಆಪ್ ಕಿ ಪರಮಾಯಿಸಿ, ರಾಷ್ಟ್ರೀಯ ನಾಟಕಗಳು, ಶಾಸ್ತ್ರೀಯ ಸಂಗೀತ, ಭಾವಗೀತೆಗಳು ನಮ್ಮ ಹೊರಗಣ್ಣನ್ನು ಮೀರಿ ಒಳಜಗತ್ತಿನಲ್ಲಿ  ಬೆಳೆಯುತ್ತಾ ಹೋಗುತ್ತವೆ.

ವಿಷಯ ಹಳಿತಪ್ಪುತ್ತಿದೆಯೇ?
ವೈಯಕ್ತಿಕ ಮಟ್ಟದಲ್ಲಿ ಕಣ್ಣುಗಳ ಬಗ್ಗೆ ನನ್ನಲ್ಲಿ ಅನುಭವಗಳ ಮೂಟೆಯೇ ಇದೆ. ಬಹುಶಃ ನಾನಗ ಒಂಬತ್ತನೆಯ ತರಗತಿ ವಿದ್ಯಾರ್ಥಿನಿಯಿರಬಹುದು. ನಮ್ಮ ಶಾಲೆಯಲ್ಲಿ ಒಬ್ಬ ಹುಡುಗನಿದ್ದ. ನನಗಿಂತ ಒಂದು ಕ್ಲಾಸ್ ಚಿಕ್ಕವನಿದ್ದ. ಹೆಸರು ಮರೆತಿದ್ದೇನೆ. ಆದ್ರೆ ಆತ ಹೂಗಳಿರುವ ಹಸಿರು ಶರ್ಟ್ ಹಾಕಿದ್ದ.  ದಿನಾ ಅದೇ ಶರ್ಟ್ ಹಾಕುತ್ತಿದ್ದಂತೆ ನೆನಪು. ಬಿಳಿ ಮುಂಡು ಧರಿಸುತ್ತಿದ್ದ.ಬೆಳ್ಳಗೆ ತುಂಬಾ ಸುಂದರವಾಗಿದ್ದ.ನಿಮಗೆ ಗೊತ್ತಲ್ಲ, ನಾನು ಕಪ್ಪಗಿದ್ದೇನೆ! ನಾನವನನ್ನು ಕದ್ದು ಕದ್ದು ನೋಡುತ್ತಿದ್ದೆ. ಒಂದು ದಿನ ಅವನು ತನ್ನ ಗೆಳೆಯರೊಡನೆ ಶಾಲೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ. ಪಕ್ಕನೆ ಹಿಂದೆ ತಿರುಗಿದವನೇ ನನ್ನೆಡೆಗೆ ನೋಡಿ ಕಿರುನಗೆ ನಕ್ಕು ಕಣ್ಣು ಹೊಡೆದ. ನನಗೆ ಮೈಯ್ಯಲ್ಲಿ ವಿದ್ಯುತ್ ಸಂಚಾರವಾದಂತಾಯ್ತು. ಒಂದು ವಾರ ಕಾಲ ಅ ಕ್ಷಣವನ್ನು ನೆನೆದು ಮತ್ತೆ ಮತ್ತೆ ಪುಳಕಗೊಂಡಿದ್ದೇನೆ. ಅನಂತರ ಇಂತಹ ಎಷ್ಟೋ ಅನುಭವಗಳಾಗಿವೆ. ಆದರೆ ಬಾಲ್ಯದ ಆ ಒಂದು ಕ್ಷಣದ ರೋಮಾಂಚನ ನನ್ನಲ್ಲಿ ಸ್ಥಾಯಿಭಾವವಾಗಿ ಇಂದಿಗೂ ಉಳಿದುಕೊಂಡಿದೆ.

ಮುಂದೆಂದೋ ’ನೀನು ನಕ್ಕಾಗ ನಿನ್ನ ಕಣ್ಣುಗಳು ಕೂಡಾ ನಗುತ್ತವೆ’ ಎಂದ ಆ ಹುಡುಗನ ನೆನಪು ಈಗಲೂ ನನ್ನಲ್ಲಿದೆ. ಪುತ್ತೂರಿನ ಬಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ನನ್ನ ಗೆಳೆಯನೊಬ್ಬ ನನ್ನ ಕಣ್ಣುಗಳನ್ನೇ ನೋಡುತ್ತಾ,’ನಿನ್ನ ಕಣ್ಣು ತುಂಬಾ ತೀಕ್ಷ್ಣವಾಗಿದೆ. ವಾರೆನೋಟ ಬೀರಿದರೆ ಎದುರಿಗಿದ್ದವ ಸತ್ತ’ ಎಂದಿದ್ದ. ಆ ಹುಡುಗ ಈಗ ವಿಶ್ವವಿದ್ಯಾಲಯವೊಂದರಲ್ಲಿ ಪ್ರೋಪೆಸರ್ ಆಗಿದ್ದಾನೆ. ಆತನನ್ನು ನೋಡದೆ ಎರಡು ದಶಕಗಳು ಕಳೆದಿವೆ. ಈಗ ಆತ ನನ್ನ ಕಣ್ಣುಗಳನ್ನು ನೋಡಿದರೆ ಹಿಂದಿನಂತೆ ಪ್ರತಿಕ್ರಿಯಿಸಬಹುದೇ? ಸಾಧ್ಯವಿಲ್ಲ, ಎಂಬುದು ನನಗೆ ಗೊತ್ತು.
ನಾವು ಮಾನಸಿಕವಾಗಿ ಸ್ಥಿತ್ಯಂತರಗೊಳ್ಳುತ್ತಾ ಹೋದಂತೆಲ್ಲಾ ನಮ್ಮ ಕಣ್ಣುಗಳು ಹೊರಸೂಸುವ ಭಾವನೆಗಳು ವ್ಯತ್ಯಾಸಗೊಳ್ಳುತ್ತಲೇ ಹೋಗುತ್ತದೆ.

ಮಂಗಳಗಂಗೋತ್ರಿಯಲ್ಲಿ ಓದುತ್ತಿದ್ದಾಗ ಉಷಾಳಂತಹ ಒಬ್ಬ ವಿದ್ಯಾರ್ಥಿನಿ ಕ್ಲಾಸಿನಲ್ಲಿದ್ದರೂ ಸಾಕು ಪಾಠ ಮಾಡಲು ಸ್ಪೂರ್ತಿ ಬರುತ್ತದೆ, ವಿಷಯಕ್ಕೆ ಅನುಗುಣ್ಅವಾಗಿ ಅದೇ ರಸಗಳನ್ನು ಆಕೆಯ ಕಣ್ಣುಗಳು ಹೊರಸೂಸುತ್ತವೆ ಎಂದು ಇನ್ಯಾರಲ್ಲೋ ಹೇಳಿದ ವಿಭಾಗ ಮುಖ್ಯಸ್ಥರ ಮಾತುಗಳನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ.

ಕಣ್ಣಿನ ಬಗ್ಗೆ ಅಷ್ಟು ಕಾನ್ಷಿಯಸ್ ಆಗಿದ್ದ ಕಾರಣವೇ ಆಗಿರಬಹುದು, ನನಗೆ ಎಲ್ಲರ ಜೊತೆ ಮುಕ್ತವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಕೆಲವು ವ್ಯಕ್ತಿಗಳ ಕಣ್ಣಿನಲ್ಲಿ ಚಿರತೆಯ ಹಸಿವಿರುತ್ತದೆ. ಅಂಥವರು ನಮ್ಮ ಎದುರಿನಲ್ಲಿದ್ದರೆ ನಾವು ಬೆತ್ತಲೆಯಾಗಿ ನಿಂತಿದ್ದೇವೆನೋ ಎಂಬಷ್ಟು ಮುಜುಗರವಾಗುತ್ತದೆ. ಮೈ ಮನಸು ಮುದುಡಿ ಹೋಗುತ್ತದೆ ಇಲ್ಲಿಂದ ಒಮ್ಮೆ ಪಾರಾಗಿ ಹೋದರೆ ಸಾಕೆನಿಸುತ್ತದೆ. ಇನ್ನು ಕೆಲವರ ಕಂಗಳು ಶಾಂತ ಸರೋವರದ ಹಾಗಿರುತ್ತದೆ. ಅಂತವರ ಜೊತೆ ಇರುವುದೇ ದಿವ್ಯಸಾನಿಧ್ಯದ ಅನುಭವ. ಆತ್ಮೀಯ ಜೀವವೊಂದರ ಕೈಯ್ಯನ್ನು ಹಿಡಿದು ಸುಮ್ಮನೆ ಕಣ್ಮುಚ್ಚಿ ಒಂದರೆಗಳಿಗೆ ಕೂತಾಗ ಸಿಗುವ ಆನಂದವನ್ನು ಜಗತ್ತಿನ ಯಾವ ಭೌತಿಕ ಸುಖಕ್ಕೆ ಹೋಲಿಸಬಹುದು?
ಹಿಂದೆ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆಯಿದು; ಅಂಧ ವ್ಯಕ್ತಿಯೊಬ್ಬರಿಂದ ಕೆಲವು ಮಾಹಿತಿಗಳನ್ನು ನಾನು ಪಡೆಯಬೇಕಾಗಿತ್ತು. ಅವರನ್ನು ಭೇಟಿಯಾಗಿ ನನ್ನ ಲೇಖನಕ್ಕೆ ಬೇಕಾದ ವಿಷಯಗಳನ್ನು ಸಂಗ್ರಹಿಸಿದೆ. ಆದರೂ ಮನಸಿಗೆ ಪೂರ್ತಿ ಸಮಾಧಾನ ಆಗಿರಲಿಲ್ಲ. ಎದುರಿಗಿದ್ದವರ ಕಣ್ಣುಗಳನ್ನೇ ನೋಡುತ್ತಾ ಮಾತಾಡುವ ಅಭ್ಯಾಸವಿದ್ದ ನನಗೆ ಇಲ್ಲಿ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ತಳಮಳವಿರಬಹುದು ಎಂದು ಅಂದುಕೊಳ್ಳುತ್ತಾ ಎದ್ದು ನಿಂತೆ. ಅವರು ಕೂಡಾ ಎದ್ದು ನಿಂತರು. ತಕ್ಷಣ ನಾನು ಮುಂದಕ್ಕೆ ಬಾಗಿ ಅವರ ಕೈ ಕುಲುಕಿದೆ. ನನ್ನ ಎಡಗೈಯಿಂದ ಅವರ ಬಲಗೈ ಮುಚ್ಚಿದೆ. ನನಗೆ ಪೂರ್ಣತೆಯ ಭಾವ ಮೂಡಿತು. ಮಾತಿನ ಮಿತಿ ಮತ್ತು ಸ್ಪರ್ಶದ ಮಾಂತ್ರಿಕತೆಯ ಅನುಭವ ಅಂದು ನನಗಾಯ್ತು.

ಕಣ್ಣಿನ ಬಗ್ಗೆ ಬರೆಯುತ್ತಿರುವಾಗ , ಗಾಢ ಅಂದಕಾರದಲ್ಲಿ ತಲೆಗೆ ತೀಕ್ಷ್ಣವಾದ ಟಾರ್ಚ್ ಕಟ್ಟಿ, ಹೆಗಲಿಗೆ ಬಂದೂಕು ಏರಿಸಿ, ಏಕಾಂಗಿಯಾಗಿ ದಟ್ಟ ಕಾಡುಗಳಲ್ಲಿ ಬೇಟೆಯಾಡುತ್ತಿದ್ದ ನನ್ನಣ್ಣನ ನೆನಪಾಗುತ್ತದೆ. ಕೇವಲ ಕಣ್ಣುಗಳ ಹೊಳಪನ್ನು ನೋಡಿಯೇ ಅದು ಇಂತಹ ಪ್ರಾಣಿಯೇ ಎಂದು ಆತ ಗುರುತಿಸುತ್ತಿದ್ದ. ಹಟ್ಟಿಗೆ ಬಾರದೆ ಕಾಡಲೆಲ್ಲಾ ಎಷ್ಟೋ ದನಕರುಗಳು ಸಂಚರಿಸುತ್ತಿದ್ದರೂ ಆತ ಒಂದು ದಿನವೂ ಈ ಸಾಕು ಪ್ರಾಣಿಗಳ ಮೇಲೆ ಅಪ್ಪಿತಪ್ಪಿಯೂ ಗುಂಡು ಹೊಡೆದಿರಲಿಲ್ಲ.

ಕಣ್ಣಿರಿನ ಬಗ್ಗೆ ಬರೆಯದೆ ಕಣ್ಣುಗಳ ಮೇಲಿನ ಪ್ರಬಂಧ ಮುಗಿಯುವುದಿಲ್ಲ ಅಲ್ಲವೇ? ಅತ್ಯಂತ ವೇದನೆಯಾದಾಗ  ಎದೆ ಕರಗಿ ಕಣ್ಣೀರಾಗಿ ಹರಿಯುತ್ತದೆ. ಅಳುವುದು ಹೇಡಿತನದ, ದೌರ್ಬಲ್ಯದ ಸಂಕೇತವೆಂದು ಕೆಲವರು ಹೇಳುವುದನ್ನು ಕೇಳಿದ್ದೇನೆ. ಅದು ಕೋಮಲ ಭಾವನೆಗಳ ಹುಚ್ಚು ಹೊಳೆ. ಕಣ್ಣಿರು ಹ್ರುದಯವನ್ನು ಜರಡಿ ಹಿಡಿಯುತ್ತದೆ. ಎದೆ ಕರಗಿ ಕಣ್ಣೀರಾಗಿ ಹರಿಯುತ್ತಿದ್ದರೂ ಅದನ್ನು ಬುದ್ಧಿಯ ಬಲದಿಂದ ಮೆಟ್ಟಿ ಕಠಿಣ ನಿರ್ಧಾರ ತೆಗೆದುಕೊಳ್ಳುವವರನ್ನು ನಾನು ಕಂಡಿದ್ದೇನೆ. ಇಂಥವರು ಮಾತ್ರ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಲ್ಲರು.

ಹೆಣ್ಣಿನ ಕಣ್ಣನ್ನು ಕಂಡು ’ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು’ ಎಂದು ಹಾಡಿದ ಕವಿಗಳು ಅವಳ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಗಮನಿಸಲಿಲ್ಲ ಎಂಬುದು ವಿಷಾಧದ ಸಂಗತಿ. ಮನಸು ಬಚ್ಚಿಟ್ಟುಕೊಂಡ ನೋವನ್ನು ಈ ವರ್ತುಲಗಳು ಹೊರಚೆಲ್ಲುತ್ತವೆ. ಇಷ್ಟೆಲ್ಲಾ ಗುಟ್ಟು, ವಿಸ್ಮಯ, ಅಚ್ಚರಿಗಳನ್ನು ಬಿಟ್ಟುಕೊಡುವ-ಬಚ್ಚಿಟ್ಟುಕೊಳ್ಳುವ ಕಣ್ಣುಗಳನ್ನು ಇನ್ನೊಬ್ಬರಿಗೆ ದಾನ ಮಾಡುವುದರ ಮುಖಾಂತರ ಅಂಧರ ಬಾಳಿಗೆ ಬೆಳಕು ನೀಡುವ ಮಹಾನ್ ಕಾರ್ಯವನ್ನು ಕೂಡಾ ವೈದ್ಯಲೋಕ ಮಾಡಿಕೊಟ್ಟಿದೆ.
ಇದನ್ನು ಓದುತ್ತಿರುವ ಸಹ್ರುದಯನೇ ನಿನ್ನಲ್ಲಿ ನನ್ನದೊಂದು ಮನವಿ;
ನನ್ನ ಅಂತರಂಗಕ್ಕೆ ಲಗ್ಗೆಯಿಡಬೇಕೆಂದು ನೀನು ಬಯಸಿದ್ದಲ್ಲಿ ಇದೋ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು;
ನನ್ನ ಕಣ್ಣು ನನ್ನ ಅಂತರಂಗ ಪ್ರವೇಶದ ಕೀಲಿ ಕೈ

[೨೦೦೨ರಲ್ಲಿ ’ಸೂರ್ಯ’ ಪತ್ರಿಕೆಯಲ್ಲಿ ಪ್ರಕಟವಾದ ಪ್ರಬಂಧ.]


.