Saturday, January 28, 2012

ಗಂಡಸರಿಗೆ ’ಅಮ್ಮ' ಯಾಕೆ ಕಾಡುತ್ತಾಳೆ?
ನನಗೊಬ್ಬ ಗೆಳೆಯನಿದ್ದಾನೆ. ಆತನಿಗೆ ತುಂಬಾ ದುಃಖವಾದಾಗ ಅಥವಾ ಒಳಗಿಂದೊಳಗೆ ಯಾವುದೋ ಯಾತನೆ ಒದ್ದುಕೊಂಡು ಬರುತ್ತಿರುವಾಗ ಆತ ಎರಡು ಪೆಗ್ ಏರಿಸುತ್ತಾನೆ. ಅನಂತರದ್ದೆಲ್ಲಾ ಸ್ವಗತವೇ….ಕೊನೆ ಕೊನೆಗೆ ಆತ, ’ಅಮ್ಮಾ…ಅಮ್ಮಾ..ಎಂದು ಹಲುಬಲು ಪ್ರಾರಂಭಿಸಿಬಿಡುತ್ತಾನೆ. ಅದರ ಅಂತಿಮ ದೃಶ್ಯವೆಂದರೆ, ದೂರದ ಊರಿನಲ್ಲಿರುವ ಅವನ ಅಮ್ಮನಿಗೆ ಪೋನ್ ಮಾಡಿ ಮಾತಾಡುವುದು.

ಕನ್ನಡದ ಹಿರಿಯ ಹಾಸ್ಯ ನಟರೊಬ್ಬರಿದ್ದರು.ಅವರು ಗುಂಡು ಜಾಸ್ತಿಯಾದಂತೆಲ್ಲಾ, ’ಅಮ್ಮಾ..ಅಮ್ಮಾ…’ಎಂದು ಕಣ್ಣೀರು ಹಾಕುತ್ತಾ ಭೋರಿಟ್ಟು ಆಳುತ್ತಿದ್ದರಂತೆ. ಸಿನೇಮಾ ಪತ್ರಕರ್ತರೊಬ್ಬರ ಬಾಯಿಂದ ಈ ಕುರಿತು ರಸವತ್ತಾದ ವರ್ಣನೆಯನ್ನು ನಾನು ಕೇಳಿದ್ದೇನೆ.

ನಮ್ಮ ಹೆಣ್ಣುಮಕ್ಕಳಿಗೆ ಅಮ್ಮ ಮತ್ತು ಅಮ್ಮನ ಮನೆಯೆಂದರೆ ವಿಪರೀತ ಮೋಹ ಎಂದು ಹೇಖುತ್ತಾರೆ. ಕಲಾ ಮಾಧ್ಯಮಗಳಲ್ಲಿ ಅದನ್ನೇ ಬಿಂಬಿಸಲಾಗಿದೆ. ಚಿತ್ರರಂಗದ ಅರ್ಧಕರ್ಧ ಸಿನೇಮಾಗಳು ನಿಂತಿರುವುದೇ ಮಾತೃಪ್ರೇಮದ ಮೇಲೆ.ಅಂತಹದೊಂದು ಅನ್ಯೂಹ ಕಲ್ಪನೆ ಇಲ್ಲದಿರುತ್ತಿದ್ದರೆ ಅಬ್ಬಯ್ಯನಾಯುಡು ಸಿನೇಮಾ ನಿರ್ಮಾಪಕರಾಗುತ್ತಲೇ ಇರಲಿಲ್ಲ!

ಅದರೆ ನನ್ನ ಗ್ರಹಿಕೆಗೆ ಸಿಕ್ಕಷ್ಟು ಹೇಳುವುದಾದರೆ, ’ಅಮ್ಮ’ ಎನ್ನುವ ಪರಿಕಲ್ಪನೆ ಗಂಡಸರನ್ನು ಕಾಡಿದಷ್ಟು ಹೆಣ್ಣು ಮಕ್ಕಳನ್ನು ಕಾಡಿಲ್ಲ! ಹೆಣ್ಣು ಮಕ್ಕಳಿಗೆ ಅಮ್ಮ ಎನ್ನುವುದು ವಾಸ್ತವ. ಗಂಡಸರಿಗೆ ಅದು ಆದರ್ಶ. ಹೆಣ್ಣು ಎಂದಾದರೊಮ್ಮೆ ತಾಯಿಯಾಗಬಹುದು. ಗಂಡು ಎಂದೂ ಅಮ್ಮನಾಗಲಾರ. ಆಕೆ ಅವನಿಗೊಂದು ವಿಸ್ಮಯ.

ಕನ್ನಡದ ಪ್ರಮುಖ ಸೃಜನಶೀಲ ಬರಹಗಾರರಾಗಿದ್ದ ಲಂಕೇಶರ ’ಅವ್ವ’ ಕವನ ಎಲ್ಲಾ ಪ್ರಜ್ನಾವಂತ ಮನಸ್ಸುಗಳ ಪ್ರಾತಿನಿಧಿಕ ಕವಿತೆಯಂತಿದೆ. ’ನನ್ನವ್ವ ಫಲವತ್ತಾದ ಕಪ್ಪು ನೆಲ’ ಎಂದೇ ಆರಂಭವಾಗುವ ಈ ಕವನದಲ್ಲಿ ಅಮ್ಮನನ್ನು ಭೂಮಿತಾಯಿಯೊಡನೆ ಸಮೀಕರಿಸುತ್ತಾ ಇಡೀ ಕವನವೇ ಒಂದು ಸಶಕ್ತ ರೂಪಕವಾಗಿ ಮೈದಳೆಯುತ್ತದೆ.

ಯಾಕೆ ಅಮ್ಮ ಎಲ್ಲರನ್ನೂ ನಿರಂತರವಾಗಿ ಕಾಡುತ್ತಾಳೆ? ಅತ್ಯಂತ ಯಾತನೆಯ ನೋವಿನ ಘಳಿಗೆಯಲ್ಲಿ ನಮ್ಮ ಬಾಯಿಯಿಂದ ’ಅಮ್ಮಾ!’ ಎಂಬ ಉದ್ಗಾರ ಯಾಕೆ ಹೊರಹೊಮ್ಮುತ್ತದೆ?

ನಾನು ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿನ ಪರಿಸರದಲ್ಲಿ ನನ್ನ ಬಾಲ್ಯವನ್ನು ಕಳೆದವಳು.ಹಾಡುವ ಸ್ವಾಮಿಗಳೆಂದೇ ಪ್ರಖ್ಯಾತರಾಗಿದ್ದ, ನಂತರ ಗೃಹಸ್ಥಾಶ್ರಮ ಸೇರಿದ ವಿದ್ಯಾಭೂಷಣ ತೀರ್ಥ ಸ್ವಾಮೀಜಿಯವರ ತಂಗಿ ನಮ್ಮ ಗೆಳತಿಯರ ಬಳಗದಲ್ಲಿ ಒಬ್ಬಳಾಗಿದ್ದಳು. ಅವಳು ಆಗೀಗ ಮಠದಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ವಿಷಯಗಳನ್ನು ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದಳು. ಅವುಗಳ್ಯಾವುವೂ ಈಗ ನನಗೆ ನೆನಪಿಲ್ಲ. ಆದರೆ ಚಿಕ್ಕ ಪ್ರಾಯದಲ್ಲಿ ಸ್ವಾಮಿಯಾದ ಅವಳಣ್ಣ ತನಗೆ ಭಕ್ತರು ತಂದುಕೊಟ್ಟ ಕೆಲವು ಕಾಣಿಕೆಗಳನ್ನು ತನ್ನಮ್ಮನ ಕೈಯಲ್ಲಿ ಕೊಡುತ್ತಿದ್ದರಂತೆ. ಇದು ನಮಗೆ ಆಶ್ಚರ್ಯದ ವಿಷಯವಾಗಿರಲಿಲ್ಲ. ಆದರೆ, ಆವರು ತನ್ನ ’ತಾಯಿಗೆ ನಮಸ್ಕರಿಸುತ್ತಿದ್ದರಂತೆ’ ಅನ್ನುವುದು ಮಾತ್ರ ನಮಗೆ ಸೋಜಿಗದ ವಿಷಯವಾಗಿತ್ತು.

ಸನ್ಯಾಸಿಯಾದವರು ಎಳೆಯ ಪ್ರಾಯದವರಾಗಿದ್ದರೂ, ಮುಪ್ಪಾನ ಮುದುಕರೂ ಕೂಡಾ ಅವರ ಕಾಲಿಗೆ ಬಿದ್ದು ನಮಸ್ಕರಿಸುವುದನ್ನು ನಾವು ನೋಡುತ್ತೇವೆ. ಸನ್ಯಾಸಿ ಸರ್ವಸಂಗ ಪರಿತ್ಯಾಗಿ. ಆತ ಮಠದ ಪೀಠವನ್ನೇರಿದಾಗ ಉತ್ತರ ಕ್ರಿಯಾದಿ ಕರ್ಮಗಳನ್ನು ಮಾಡಿಸಿಕೊಂಡು ಲೌಕಿಕದ ಎಲ್ಲಾ ಬಂಧನಗಳನ್ನು ಹರಿದುಕೊಂಡಿರುತ್ತಾನೆ. ಅಂಥ ಸ್ವಾಮೀಜಿ ತನ್ನ ಅಮ್ಮನ ಕಾಲಿಗೆ ನಮಸ್ಕರಿಸುತ್ತಾನೆಂದರೆ..? ಅದು ನಿಜವಿದ್ದಿರಬಹುದೇ? ಆ ಬಗ್ಗೆ ನಾವ್ಯಾರೂ ವಿಚಾರಿಸಲಿಲ್ಲ. ಆದರೆ ಬಾಲ್ಯದ ಆ ಸಂಗತಿ ನನ್ನ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಟ್ಟಿದೆ.

ಯಾರ ಅಳವಿಗೂ ನಿಲುಕಲಾರದೆ ಅತ್ಯುನ್ನತ ಸ್ಥಾನದಲ್ಲಿರುವ ಈ ’ಅಮ್ಮ’ ಯಾರು? ಅವಳ, ಆ ಪದದ ಅರ್ಥವ್ಯಾಪ್ತಿ ಏನು? ಯಾಕೆ ಈ ಅಮ್ಮ ನಿರಂತರವಾಗಿ ಎಲ್ಲರನ್ನೂ ಕಾಡುತ್ತಲೇ ಇರುತ್ತಾಳೆ? ಅಮ್ಮನ ಬಗ್ಗೆ ಬರೆಯುವಾಗ ಎಲ್ಲಿಂದ ಆರಂಭಿಸಲಿ?- ಈ ಪ್ರಶ್ನೆಗಳು, ಸಂದೇಹಗಳು ನನ್ನ ಮುಂದಿದೆ.

ನಾನೊಬ್ಬಳು ಅಮ್ಮ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಮಕ್ಕಳಿದ್ದಾರೆ. ತಾಯ್ತನ ನನ್ನಲ್ಲಿ ಊಹೆಗೂ ಮೀರಿದ ಬದಲಾವಣೆಯನ್ನು ತಂದಿದೆ ಎಂಬುದು ನಾನು ಕಂಡುಕೊಂಡ ಸತ್ಯ. ತೀರಾ ಒರಟಳಾದ, ಜಗಳಗಂಟಿಯಾದ ನನ್ನನ್ನು ಅದು ಸಹನಾಶೀಲಳನ್ನಾಗಿ ಮಾಡಿದೆ. ಕ್ಷಮಾವಂತಳನ್ನಾಗಿ ಮಾಡಿದೆ.

ನನ್ನ ಹೊಟ್ಟೆಯಿಂದ ಮಗು ಜಾರಿ, ಅದು ನನ್ನ ಕಿಬ್ಬೊಟ್ಟೆಯಲ್ಲಿ ಕರುಳಬಳ್ಳಿ ಸಮೇತವಾಗಿ ಸ್ಪರ್ಶಿಸಿದ ಕ್ಷಣವಿದೆಯಲ್ಲಾ…, ಅದು ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣ…ಕಾಲ ಚಲಿಸದೆ ಸ್ಥಗಿತಗೊಂಡ ಕ್ಷಣ. ನನ್ನನ್ನು ಹೆಣ್ಣಾಗಿ ಹುಟ್ಟಿಸಿದ ನಿಸರ್ಗಕ್ಕ್ರ್ ಕೃತಜ್ನತೆಗಳನ್ನರ್ಪಿಸಿದ ಕ್ಷಣ.

ಅದುವರೆಗೆ ಪುರುಷ ಸಮಾಜದ ಬಗ್ಗೆ ಒಂದು ರೀತಿಯ ಅಸೂಯೆ, ಅಸಹನೆ,ಮತ್ಸರಗಳನ್ನಿಟ್ಟುಕೊಂಡು ಹೆಣ್ಣಾಗಿ ಹುಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೆ. ನಿಸರ್ಗವು ಪುರುಷ ಪಕ್ಷಪಾತಿ ಎಂದು ರೇಗುತ್ತಿದ್ದೆ. ಆದರೆ ಒಡಲ ಒಳಗೇ ಇನ್ನೊಂದು ಜೀವವನ್ನು ಸೃಷ್ಠಿಸಿ ಅದನ್ನು ಪೋಷಿಸುವ ಅವಕಾಶವನ್ನು ನೀಡಿದ ನಿಸರ್ಗ ಖಂಡಿತವಾಗಿಯೂ ಸ್ತ್ರೀ ಪಕ್ಷಪಾತಿಯೇ! ಏನೇ ಮಾಡಿದರೂ ಒಬ್ಬ ಗಂಡಸು ಇನ್ನೊಂದು ಜೀವಕ್ಕೆ ಜನ್ಮ ಕೊಡಲಾರ!!

ಈ ವಿಸ್ಮಯ ಬಹುಶಃ ನಮ್ಮ ಹಿಂದಿನ ಪುರುಷವರ್ಗಕ್ಕೂ ಕಾಡಿರಬೇಕು. ಆದ ಕಾರಣವೇ ಅವರು ಸ್ತ್ರೀಯನ್ನು ಬ್ರಹ್ಮಾಂಡದ ಶಕ್ತಿಗೆ ಹೊಲಿಸಿದ್ದಾರೆ. ಆಕೆಯನ್ನು ಆದಿಶಕ್ತಿ ಎಂದು ಕರೆದಿದ್ದರೆ.’ಅಮ್ಮಾ’ ಎಂದು ಅವಳೆದುರು ಮೊಣಕಾಲೂರಿದ್ದಾರೆ.ಪ್ರಪಂಚದ ಎಲ್ಲಾ ಜನಾಂಗಗಳೂ ಅತ್ಯುನ್ನತ ಶಕ್ತಿಯನ್ನು ಹೆಣ್ಣಿನ ರೂಪದಲ್ಲಿಯೇ ಕಂಡುಕೊಂಡಿವೆ.

ಸ್ತ್ರೀಯನ್ನು ಆದಿಶಕ್ತಿಗೆ ಪುರುಷನೇ ಹೋಲಿಸಿರಬೇಕು. ಯಾಕೆಂದರೆ ಅವಳು ಅವನಿಗೆ ಎಂದೆಂದೂ ನಿಗೂಢವೇ. ಹಾಗೆಯೇ ತಾಯಿಯನ್ನು ಭೂಮಿಯ ಜೊತೆ ಅತನೇ ಸಮೀಕರಿಸಿದ್ದಾನೆ.ಸೃಸ್ಟಿಸುವ, ಪಾಲಿಸುವ ಮತ್ತು ಪೊರೆಯುವ ಗುಣ ಪ್ರಕೃತಿಯದ್ದೇ ತಾನೇ? ಇದೇ ಗುಣ ತಾನೇ ಅಮ್ಮನಲ್ಲಿರುವುದು? ತನ್ನ ಸಂತತಿಯನ್ನು ರಕ್ಷಿಸಿಕೊಳ್ಳಲು, ಪಾಲಿಸಲು, ಪೊರೆಯಲು,ಅವಳು ಏನನ್ನು ಬೇಕಾದರೂ ಮಾಡಬಲ್ಲಳು. ಈ ದಾರಿಯಲ್ಲಿ ಅವಳಿಗೆ ಪುರುಷ ನೆರವಾಗುತ್ತಾನೆ. ನೆರವಾಗದಿದ್ದರೂ ಏಕಾಂಗಿಯಾಗಿ ಅವಳು ಸಾಗಬಲ್ಲಳು.

ಸ್ತ್ರೀಯನ್ನು ಆದಿಶಕ್ತಿಗೆ ಮತ್ತು ಭೂಮಿಗೆ ಹೋಲಿಸಿದ ಆ ಮೊದಲ ಪುರುಷ ನನ್ನೆದುರಿಗೇನಾದರೂ ಬಂದರೆ ಆತನ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸಲೂ ನಾನು ಸಿದ್ಧಳಿದ್ದೇನೆ.ಯಾಕೆಂದರೆ ಹೆಣ್ಣಿನ ಕರ್ತೃತ್ವ ಶಕ್ತಿಗೆ ಸಿಕ್ಕಿದ ಮೊದಲ ಮತ್ತು ಕೊನೆಯ ಹೋಲಿಕೆ ಅದು. ಆ ಮೊದಲ ಪುರುಷ ಪರಂಪರೆಯೇ ’ಶಕ್ತಿ ಪೂಜೆ’ಗೆ ನಾಂದಿ ಹಾಡಿರಬೇಕು. ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದ ಈ ತಾಂತ್ರಿಕ ಪೂಜೆಯಲ್ಲಿ ಹೆಣ್ಣಿನ ಆರಾಧನೆಯೇ ಪ್ರಮುಖವಾದುದು.

ಪುರುಷನ ಅತ್ಯುನ್ನತ ಕಲ್ಪನೆಯಲ್ಲಿ ಹೆಣ್ಣು ಆಧಿಶಕ್ತಿಯಾಗಿ ಮೈದಾಳಿದರೆ, ಅವನ ಭಾವುಕ ಕಲ್ಪನೆಯಲ್ಲಿ ಆಕೆ ಮಮತಾಮಯಿ ಅಮ್ಮ. ಈ ಕಥೆ ಗೊತ್ತಲ್ಲ? ತನ್ನ ಪತ್ನಿಯ ಬಯಕೆಯಂತೆ ತನ್ನ ಹೆತ್ತಮ್ಮನ ಎದೆ ಬಗೆದು ಅವಳ ಹೃದಯವನ್ನು ಕೊಂಡೊಯ್ಯುತ್ತಿದ್ದವನು, ಎಡವಿ ಬಿದ್ದಾಗ ಆ ತಾಯಿ ಹೃದಯ ’ಮಗೂ ಪೆಟ್ಟಾಯ್ತೇ?’ ಎಂದು ಕೇಳಿತಂತೆ-ಇದು ಭಾವುಕ ಮನಸ್ಸೊಂದು ಅಮ್ಮನನ್ನೌ ಕಂಡುಕೊಂಡ ಬಗೆ.

ಇನ್ನು ಜನಸಾಮಾನ್ಯರ ಮಟ್ಟಕ್ಕಿಳಿದು ನಮ್ಮ ನಿಮ್ಮಂತೆ ಯೋಚಿಸಿದರೆ ’ಅಮ್ಮ’ ಎಂಬುದು ಗಂಡಸರಿಗೆ ಬೆಚ್ಚನೆಯ ತೋಳು, ನೆಮ್ಮದಿಯ ಮಡಿಲು; ಹೆಂಗಸರಿಗೆ ನಿಭಾಯಿಸಲೇ ಬೇಕಾದ ಜವಾಬ್ದಾರಿ.

ತನ್ನೊಡನ್ನು ಸೀಳಿಕೊಂಡು ಬಂದ, ಅಂಗೈನಲ್ಲಿ ತೂಗಬಲ್ಲಂಥ, ಮಾಂಸದ ಮುದ್ದೆಯಂತಿರುವ ಜೀವವೊಂದನ್ನು ಸ್ವತಂತ್ರವಾಗಿ ನಡೆದಾಡುವಷ್ಟರಮಟ್ಟಿಗೆ ಮಾಡುವ ದೀರ್ಘಸ್ರಮವಿದೆಯಲ್ಲಾ, ಆ ಜವಾಬ್ದಾರಿಗಳಿಗೆ ಹೋಲಿಕೆಗಳಿಲ್ಲ. ರಾತ್ರಿಯ ನೀರವತೆಯಲ್ಲಿ ಎಚ್ಚೆತ್ತ ಮಗು ಅತ್ತಿತ್ತಾ ಮುಲುಗಾಡುತ್ತಾ ಕರಾರುವಕ್ಕಾಗಿ ತಾಯಿಯ ಎದೆಗೇ ಬಾಯಿ ಹಾಕಿ ತನ್ನ ಒಸಡುಗಳಲ್ಲಿ ಮೊಲೆತೊಟ್ಟನ್ನು ಕಚ್ಚಿ ಹಿಡಿದು ಹಾಲು ಹೀರುವುದು್; ಎಳೆಮಗು ಎಂದೂತನ್ನ ಮೈಮೇಲೆ ಹೊದಿಕೆಯನ್ನಿಟ್ಟುಕೊಳ್ಳುವುದಿಲ್ಲ. ಅದನ್ನು ತಾಯಿ ಮತ್ತೆ ಮತ್ತೆ ಸರಿಪಡಿಸುವುದು, ಒದ್ದೆ ಬಟ್ಟೆ ಬದಲಾಯಿಸುವುದು- ಪ್ರತಿ ರಾತ್ರಿಯೂ ಪುನರಾವರ್ತನೆಗೊಳ್ಳುವ ಈ ಕ್ರಿಯೆಗಳೆಲ್ಲಾ ನಡೆಯುವುದು ಅರೆ ಎಚ್ಚರದ ಮಂಪರಿನ ಸ್ಥಿತಿಯಲ್ಲೇ. ತಾಯಿ ಮಗುವಿನ ಈ ಅನುಬಂಧ, ಅವಲಂಬನೆಯ ಅವಧಿ ಹೆಚ್ಚೆಂದರೆ ಎರಡೂರು ವರ್ಷಗಳು ಮಾತ್ರ. ಅಮೇಲೆಯೂ ಮಗು ರಚ್ಚೆ ಹಿಡಿದರೆ, ತಾಯಿ ಬೆನ್ನಿಗೊಂದು ಬಾರಿಸುತ್ತಾಳೆ.. ಮಗು ಮತ್ತಷ್ಟು ಕಿರುಚಿ, ಅರಚಿ ತನ್ನ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತದೆ. ಮಗುವಿನ ಸ್ವತಂತ್ರ ಬುದ್ಧಿ ಬಲಿಯಲಾರಂಭಿಸುತ್ತಿದ್ದಂತೆ ತಾಯಿ ಅದರ ಮೇಲೆ ನಿಯಂತ್ರಣ ಸಾಧಿಸಲು ನೋಡುತ್ತಾಳೆ. ಆಗ ತಾಯಿ-ಮಗುವಿನ ನಡುವೆ ತಿಕ್ಕಾಟ ಆರಂಭವಾಗುತ್ತದೆ.

ಈ ಹಂತದಲ್ಲೇ ತಂದೆತನದ ಪ್ರವೇಶ ಬೇಕಾಗುತ್ತದೆ.ಒಳ್ಳೆಯ ಅಂದರೆ ತಾಳ್ಮೆಯುಳ್ಳ, ಮುಂದಾಲೋಚನೆಯುಳ್ಳ ಜವಾಬ್ದಾರಿಯುಳ್ಳ ತಾಯ್ತಂದೆಯರಾದರೆ ಮಕ್ಕಳು ಸನ್ಮಾರ್ಗದಲ್ಲಿ ಮುಂದುವರಿಯುತ್ತಾರೆ.ಇಲ್ಲವಾದರೆ ಮುಂಗೋಪಿಗಳೂ, ಹಟವಾದಿಗಳೂ,ನಿಷ್ಪ್ರಯೋಜಕರೂ ಆಗಿಬಿಡುತ್ತಾರೆ. ಜಗತ್ತಿನ ಬಹುತೇಕ ಹೆಣ್ಣು-ಗಂಡುಗಳು ಅಪ್ಪ ಅಮ್ಮ ಆಗುತ್ತಾರೆ. ಆದರೆ ಒಳ್ಳೆಯ ಅಪ್ಪ ಅಮ್ಮ ಆಗುವುದಕ್ಕೆ ಒಂದಷ್ಟು ತಯಾರಿ ಬೇಕು. ಮುಖ್ಯವಾಗಿ ಬೇಕಾದ್ದು ತಾಳ್ಮೆ, ನಮ್ಮ ಕಾಲಘಟ್ಟಕ್ಕೆ ಮಕ್ಕಳನ್ನು ಎಳೆದು ತರುವುದಲ್ಲ.ಅವರ ಕಾಲಕ್ಕೆ ಹೋಗಿ ಅವರನ್ನು ಅರಿತುಕೊಳ್ಳುವುದು ಮುಖ್ಯ.

ಇದು ಎಲ್ಲರಿಗೂ ಸಾಧ್ಯವಿಲ್ಲ. ನಾನು ಮತ್ತು ನನ್ನ ಮಕ್ಕಳು ಎಷ್ಟೊಂದು ಜಗಳವಾಡುತ್ತೇವೆಂದರೆ ಪ್ರತಿ ಜನವರಿಯಲ್ಲೂ ಮಗಳನ್ನು ಯಾವ ರೆಸಿಡೆನ್ಸಿಯಲ್ ಸ್ಕೂಲಿಗೆ ಸೇರಿಸುವುದೆಂದು ಯೋಚಿಸುತ್ತೇನೆ! ಏಪ್ರಿಲ್ ನಲ್ಲಿ ಅವರ ಅಜ್ಜನ ಮನೆಗೆ ಅಟ್ಟಿಬಿಡುತ್ತೇನೆ. ಮನೆ ಭಣ ಭಣ ಅನ್ನತೊಡಗುತ್ತದೆ. ಮೇ ಮೊದಲ ವಾರದಲ್ಲಿ ಪುನಃ ಅವರನ್ನು ಕರೆದುಕೊಂಡು ಬರುತ್ತೇನೆ. ಜೂನ್ ನಲ್ಲಿ ಶಾಲೆ ಆರಂಭವಾದಾಗ ಪುನಃ ಜಗಳ ಸ್ಟಾರ್ಟ್. ಮತ್ತೆ ಯಥಾಪ್ರಕಾರ ರೆಸಿಡೆನ್ಸಿಯಲ್ ಸ್ಕೂಲ್ ಹುಡುಕಾಟ.ಇದು ಇಂದಿನವರೆಗೂ ಯಥಾಪ್ರಕಾರ ನಡೆದುಕೊಂಡು ಬರುತ್ತಿದೆ. ಬಹುಶಃ ಇದು ಎಲ್ಲಾ ಅಮ್ಮಂದಿರ ಅನುಭವವೂ ಆಗಿರಬಹುದು.

ನನ್ನ ಅಮ್ಮ ಮತ್ತು ನಾನು ಕೂಡಾ ಹೀಗೆಯೇ ಮಾರಾಮಾರಿ ಜಗಳ ಆಡುತ್ತಿದ್ದೆವು ಅವರು ಏನೂ ಹೇಳಿದರೂ ಅಲ್ಲ ಅನ್ನುವುದೇ ನನ್ನ ಅಭ್ಯಾಸವಾಗಿತ್ತು. ಅವರು ಬೇಡವೆಂದರೂ ದೂರದ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದೆ. ಉದ್ಯೋಗ ಮಾಡಿದೆ. ಕೊನೆಗೆ ಅವರ ಮನಸ್ಸಿಗೆ ವಿರುದ್ಧವಾಗಿ ಅನ್ಯ ಜಾತೀಯ ಹುಡುಗನನ್ನು ಮದುವೆಯಾದೆ. ಆದರೆ ಮುಂದೆ ಇದೇ ಅಮ್ಮ ನನ್ನ ಮಗುವನೆತ್ತಿಕೊಂಡು ಎಲ್ಲಾ ದುಃಖ ದುಮ್ಮಾನಗಳನ್ನೂ ಮರೆತಳು. ನನ್ನ ಸಲುವಾಗಿ ಅಪ್ಪನೊಡನೆ, ಅಣ್ಣನೊಡನೆ ವಕಾಲತ್ತು ವಹಿಸಿದಳು. ಈ ಅಮ್ಮನ ಪರಂಪರೆಯನ್ನು ನಾನು ಅನುಭವಿಸುತ್ತಿದ್ದೇನೆ. ನಾಳೆ ನನ್ನ ಮ್ಗಳು ಅದನ್ನು ಮುಂದುವರಿಸುತ್ತಾಳೆ. ಇದಲ್ಲವೇ ಅಮ್ಮನ ಮಹಿಮೆ?

ಸ್ನೇಹಿತನಂತೆ, ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲ ಒಳ್ಳೆಯ ಅಪ್ಪ ಸಿಕ್ಕಿದರೆ ಮಕ್ಕಳು ಮೆಧಾವಿಗಳಾಗಬಹುದು.ಇದರ ಜೊತೆಗೆ ಒಳ್ಳೆಯ ಅಮ್ಮ ದೊರಕಿದರೆ ಆ ಮಗು ಮೇಧಾವಿಯೂ, ಸಹೃದಯನೂ ಆಗುತ್ತಾನೆ. ಅಂತಹ ಭಾಗ್ಯಶಾಲಿಗಳು ಈ ಲೋಕದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿರುತ್ತಾರೆ.

ಒಳ್ಳೆಯ ಅಮ್ಮನಾಗುವುದು ಎಷ್ಟು ಕಷ್ಟದ, ಜವಾಬ್ದಾರಿಯುತ ಕೆಲಸ ಎಂಬುದು ಅದನ್ನು ಅನುಭವಿಸಿದವರಿಗೆ ಗೊತ್ತು. ಮಕ್ಕಳಿಲ್ಲ ಎಂದರೆ ಮಕ್ಕಳಿಲ್ಲ ಎಂಬ ಒಂದೇ ಚಿಂತೆ ಇರುತ್ತದೆ. ಆದರೆ ಮಕ್ಕಳಿದ್ದವರಿಗೆ ನೂರೆಂಟು ಚಿಂತೆ. ಒಂದು ಹುಡುಗಿ ಒಮ್ಮೆ ಅಮ್ಮನಾಗುವ ಜವಾಬ್ದಾರಿ ಹೊತ್ತುಕೊಂಡಳೆಂದರೆ ಆಕೆ ತನ್ನ ಭೂತ, ವರ್ತಮಾನಕಾಲವನ್ನು ಹುಗಿದು ಗೋರಿ ಕಟ್ಟಿದಂತೆಯೇ ಆಕೆಯ ಕಣ್ಣೆಲ್ಲವೂ ಭವಿಷ್ಯದಲ್ಲಿ ನಾಟಿ ಬಿಡುತ್ತದೆ. ಯಾರ ಮುಂದೆಯೂ ಬಾಗದ ಮನಸ್ಸು ಮಕ್ಕಳ ಮುಂದೆ ಬಾಗಿಬಿಡುತ್ತದೆ. ಮೆತ್ತಗಾಗಿ ಬಿಡುತ್ತದೆ.

ಮಕ್ಕಳೂ ಅಷ್ಟೇ. ಮೊದಲ ಮೂರುವರ್ಷ ಹೆತ್ತವರಿಗೆ ಸ್ವರ್ಗ ಸುಖವನ್ನೇ ನೀಡಿ ಬಿಡುತ್ತಾರೆ. ಅವರ ಹೂನಗು, ತೊದಲ ನುಡಿ, ದುಂಡು ಕೈಗಳ ಹಾರದ ಮುಂದೆ ಯ್ಯಾವ ಸಾಧನೆಯ ಪ್ರಶಸ್ತಿ ಫಲಕಗಳೂ ತೃಣವೆನಿಸಿಬಿಡುತ್ತದೆ. ಈ ಖುಷಿಯ ಪಲಕುಗಳ ನೆನಪಲ್ಲೇ ’ಅಮ್ಮ’ ಬದುಕಿನ ಕೊನೆಗಾಲದವರೆಗೂ ಮಕ್ಕಳನ್ನು ಕಾಪಾಡುತ್ತಾಳೆ.

ಗಂಡಸರಿಗೆ ’ಅಮ್ಮ’ ನಿರಂತರವಾಗಿ ಕಾಡುವ ಮೂಲ ಪ್ರತಿಮೆ. ತಾನು ಕಂಡ ಮೊದಲ ಮುಖ; ತಾನು ಅನುಭವಿಸಿದ ಮೊದಲ ಸ್ಪರ್ಶ; ಅದವನ ಸ್ಥಾಯಿ ಭಾವ. ಮುಂದೆ ತನ್ನ ದೇಹದ ವಾಂಛೆಗಳನ್ನು ಪೂರೈಸಿಕೊಳ್ಳಲು ಹೆಣ್ಣೊಬ್ಬಳು ಪಕ್ಕಕ್ಕೆ ಬಂದಾಗಲೂ ಕೊನೆಗೆ ಆತ ಅವಳಲ್ಲಿ ಹುಡುಕುವುದು ತನ್ನ ’ಅಮ್ಮ’ನನ್ನೇ. ಹಾಗಾಗಿ ಒಬ್ಬ ಹೆಣ್ಣು ಒಂದು ಗಂಡಿಗೆ ತನ್ನ ದೇಹವನ್ನು ನೀಡಿ ಸಂಗಾತಿಯಾಗುವುದು ಎಷ್ಟು ಮುಖ್ಯವೋ ಅವನನ್ನು ತಾಯ್ತನದಿಂದ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಜೊತೆಗೆ ಆತನ ಮಗುವಿಗೆ ಯಾಯಾಗಿ ಆತನಿಗೆ ತಂದೆತನದ ಅನುಭವವನ್ನು ಕೂಡಾ ಕಟ್ಟಿಕೊಡಬೇಕು. ತುಂಬಾ ಆಳವಾಗಿ ಯೋಚಿಸಿದರೆ ಗಂಡಿನದು ಅವಲಂಬನೆಯ ಬದುಕು.

ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದರು; ’ನಮ್ಮ ಸಮಾಜ ಮಹಿಳೆಯರನ್ನು ಎಷ್ಟೊಂದು ಅದುಮಿಟ್ಟಿದೆ; ಅವರ ಆಸೆಗಳನ್ನು ಹತ್ತಿಕ್ಕಿದೆ. ಆದರೂ ಅವರು ಎಷ್ಟೊಂದು ಶಕ್ತಿಶಾಲಿಗಳು, ನಾವು ಅವರಿಗೆ ಎಷ್ಟೊಂದು ಅವಲಂಬಿತರಾಗಿದ್ದೇವೆ’ ಎಂದು ಅಚ್ಚರಿ ಪಡುತ್ತಾ, ’ಒಂದು ವೇಳೆ ಅವರ ಶಕ್ತಿ ಪೂರ್ತಿ ಹೊರಹೊಮ್ಮಲು ನಾವು ಅವಕಾಶ ಕೊಟ್ಟಿದ್ದರೆ ಈ ಭೂಮಿ ಮೇಲೆ ಗಂಡು ಸಂತತಿಯೇ ಇರುತ್ತಿರಲಿಲ್ಲ!’ ಎಂದು ಉದ್ಗಾರವೆತ್ತಿದ್ದರು. ಅವರ ಮಾತು ಎಷ್ಟು ನಿಜ ಅಲ್ಲವೇ?

”ಅಮ್ಮಾ’ ಎಂಬ ಪೂಜ್ಯ ಭಾವನೆಯನ್ನು ಇಟ್ಟುಕೊಳ್ಳುವುದು ತುಂಬಾ ಸುಲಭ. ಗಂಡಸರಿಗಂತೂ ಇನ್ನೂ ಸುಲಭ. ಅಲ್ಲಿ ಒಂದು ಅಂತರವಿರುತ್ತದೆ. ಆದರೆ ತಾಯಿ ಮಗಳ ಮಧ್ಯೆ ಅಂತಹ ಅಂತರವಿರುವುದಿಲ್ಲ. ಯಾಕೆಂದರೆ ಅವಳು ಒಂದು ದಿನ ಅಮ್ಮನಾಗುತ್ತಾಳೆ. ಅದವಳಿಗೆ ಗೊತ್ತು. ಬಯಸಿದರೆ ಅದವಳ ಭವಿಷ್ಯ.

ಅಮ್ಮನ ಬಗ್ಗೆ. ಅಮ್ಮನಾದ ಅನುಭವದ ಬಗ್ಗೆ ಎಷ್ಟು ಬರೆದರೂ ಅದು ಅಪೂರ್ಣವೇ. ಹಿಂದೆಯೇ ಹೇಳಿದಂತೆ ಅದು ಗಂಡಸರ ಪಾಲಿನ ಆದರ್ಶ. ಹೆಂಗಸರ ಪಾಲಿಗೆ ವಾಸ್ತವ. ಎರಡನ್ನೂ ಕೂಡಾ ಭಾಷೆಯಲ್ಲಿ, ಶಬ್ದದಲ್ಲಿ ಹಿಡಿದಿಡುವುದು ಕಷ್ಟ!.

[ ೨೦೦೫ ರಲ್ಲಿ”ಓ ಮನಸೇ’ ಯಲ್ಲಿ ಪ್ರಕಟವಾದ ಬರಹ. ]

Thursday, January 26, 2012

’ಟ್ರೈನ್ ಟು ಪಾಕಿಸ್ತಾನ’ ದಿಂದ ’ಬುದ್ಧ ಪ್ರಬುದ್ಧ’ನಾದ ಹಾದಿಸಂಸ್ಕೃತಿ- ಸಾಮರಸ್ಯದ ಘೋಷ ವಾಕ್ಯವನ್ನಿಟ್ಟುಕೊಂಡು ರಾಜ್ಯ ಸಾಂಸ್ಕೃತಿಕ ಸಂಘಟನೆ ’ಸಮುದಾಯ’ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ಜನವರಿ ೨೧ರಿಂದ ಐದು ದಿನಗಳ ಕಾಲ ರಂಗಚಟುವಟಿಗಳನ್ನು ಹಮ್ಮಿಕೊಂಡಿದೆ.
ಉದ್ಘಾಟನೆಯ ದಿನದಂದು ಪ್ರದರ್ಶಿತವಾದ ನಾಟಕ ’ಟ್ರೈನ್ ಟು ಪಾಕಿಸ್ತಾನ್’ ನಮ್ಮ ದೇಶದ ಪ್ರಖ್ಯಾತ ಬರಹಗಾರರಾದ ಖುಷ್ವಂತ್ ಸಿಂಗ್ ಅವರ ಇದೇ ಹೆಸರಿನ ಬಹು ಪ್ರಸಿದ್ಧ ಕಾದಂಬರಿಯನ್ನು ನಾಟಕ ರೂಪಕ್ಕೆ ಅಳವಡಿಸಿದವರು ಚಿದಾನಂದ ಸಾಲಿ. ರಾಯಚೂರಿನ ಸಮುದಾಯ ತಂಡಕ್ಕಾಗಿ ಇದನ್ನು ನಿರ್ದೇಶಿಸಿದವರು ತಾಯಣ್ಣ ಯರಗೇರ.
.ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದು ಮುಸ್ಲಿಮರ ಮಾರಣ ಹೋಮದ ನಡುವೆಯೂ ಪಂಜಾಬಿನ ಮನೋ ಮಜ್ರಾ ಎಂಬ ಪುಟ್ಟ ಹಳ್ಳಿ ಭಾವೈಕತೆಯನ್ನು ಕಾಪಾಡಿಕೊಂಡು ಬರುತ್ತದೆ. ಅಲ್ಲಿನ ಸಿಖ್ ಯುವಕನೊಬ್ಬ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೇಮಿಸುತ್ತಾನೆ. ಟ್ರೈನ್ ಗಳು ಆ ದೇಶದಿಂದ ಹಿಂದುಗಳ ಹೆಣಗಳು ಹೇರಿಕೊಂಡು ಬಂದರೆ ಇಲ್ಲಿಂದ ಮುಸ್ಲಿಂರ ಹೆಣಗಳು ರವಾನೆಯಾಗುತ್ತವೆ. ಇಂತಹ ಸಂದರ್ಭದಲ್ಲಿ ವಯ್ಯಕ್ತಿಕ ಪ್ರೇಮ ಸಾರ್ವತ್ರಿಕಗೊಳ್ಳುವ, ವಿಶ್ವಪ್ರೇಮದ ಸಂದೇಶವನ್ನು ಸಾರುವ ಈ ನಾಟಕದ ವಸ್ತು ಮತ್ತು ಆಶಯ ಎಲ್ಲಾ ಕಾಲಕ್ಕೂ ಸಲ್ಲುವಂತಾಗಿದೆ.
ಬಹುಶಃ ನಿರ್ದೇಶಕರಿಗೆ ಇದು ನಿರ್ದೇಶನದ ಮೊದಲ ಅನುಭವವಾಗಿರಬೇಕು. ಹಾಗಾಗಿ ಅವರು ಪಾತ್ರಧಾರಿಗಳ ಆಯ್ಕೆಯಿಂದ ಹಿಡಿದು ನಾಟಕದ ಆಶಯವನ್ನು ಗ್ರಹಿಸುವಲ್ಲಿಯವರಿಗೆ ಎಡವಿದ್ದಾರೆ. ಮಾತ್ರವಲ್ಲ ರಿಹರ್ಸಲ್ ನ ಕೊರತೆಯೂ ಎದ್ದು ಕಾಣುತ್ತಿತ್ತು. ರಂಗದಲ್ಲಿ ಚಲನೆಯಿರಲಿಲ್ಲ. ನಟರ ಮಾತಿನಲ್ಲಿ ಏರಿಳಿತಗಳಿರಲಿಲ್ಲ. ಸೂಕ್ತ ರಂಗ ಪರಿಕರಗಳಿಲ್ಲ, ಇದ್ದುದರ ಬಳಕೆಯಾಗಲಿಲ್ಲ, ಬೆಳಕಿನ ವಿನ್ಯಾಸದಲ್ಲಿ ಹೊಸತನವಿರಲಿಲ್ಲ. ಈ ಎಲ್ಲಾ ಕೊರತೆಗಳ ಕಾರಣವೋ ಅಥವಾ ರೂಪಾಂತರದ ದೋಷವೋ ಸಂಭಾಶಣೆಯಲ್ಲಿ ತೂಕ, ಹರಿತಗಳಿರಲಿಲ್ಲ.
ಎರಡನೆಯ ದಿನದಂದು ಪ್ರದರ್ಶಿತವಾದ ನಾಟಕ, ’ಬುದ್ಧ ಪ್ರಬುದ್ಧ’ ಧಾರವಾಡದ ಸಮುದಾಯ ತಂಡ ಅಭಿನಯಿಸಿದ ಈ ನಾಟಕವನ್ನು ನಿರ್ದೇಶಕರು ವಾಸುದೇವ ಗಂಗೇರ. ರಚನೆ ಡಾ.ಶ್ರೀಶೈಲ ಹುದ್ದಾರ.
ನಾವೆಲ್ಲಾ ಓದಿದಂತೆ, ತಿಳಿದುಕೊಂಡಂತೆ ಬುದ್ಧ ಅರಿವಿನ ಹರಿಕಾರ. ಅಂಗುಲಿಮಾಲ ಹಿಂಸೆಯ ಪ್ರತಿರೂಪ. ಈ ಎರಡು ವ್ಯಕಿತ್ವಗಳು ನಾಟಕದುದ್ದಕ್ಕೂ ಹರಡಿಕೊಂಡಿದೆ.
ಬೆಳಕಿನ ವಿನ್ಯಾಸ ,ವೇಷಭೂಷಣ,ಅಭಿನಯ ಸಂಗೀತ, ಧ್ವನಿ ಎಲ್ಲವೂ ಕೂಡಾ ಒಂದಕ್ಕೊಂದು ಪೂರಕವಾಗಿ ನಾಟಕವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದರಲ್ಲಿ ಸಹಕಾರಿಯಾಗಿತ್ತು. ನಾಟಕದಲ್ಲಿ ಹಲವು ಸಂಕೇತಗಳನ್ನು ಬಳಸಿಕೊಂಡದ್ದು ನಾಟಕದ ಅರ್ಥ ವಿಸ್ತಾರಕ್ಕೆ ಕಾರಣವಾಗಿತ್ತು.ಪೌರ್ಣಮಿಯೆಂಬುದು ಬುದ್ಧನ ಹುಟ್ಟು, ಜ್ನಾನೋದಯ ಮತ್ತು ನಿರ್ವಾಣದ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು.ಅದನ್ನು ಹಿಂಬದಿಯ ಪರದೆಯಲ್ಲಿ ಬೆಳಕಿನ ವಿನ್ಯಾಸದಲ್ಲಿ ಶಾಶ್ವತಗೊಳಿಸಲಾಗಿತ್ತು, ಬುದ್ಧ, ಗಾಂಧೀಜಿಯ ಅಹಿಂಸಾ ತತ್ವದ ಬಗ್ಗೆ ಮಾತಾಡುವಾಗ ಗಾಂದೀಜಿಯ ಜನಪ್ರಿಯ ಭಂಗಿಯಾಗಿದ್ದ ಎರಡೂ ಕಾಲುಗಳನ್ನು ಹಿಂಮಡಿಚಿ ಕುಳಿತುಕೊಂಡಿದ್ದ. ಗಾಂದೀಜಿಯ ’ವೈಸ್ಣೋವ ಜನತೋ….’ ಹಾಡನ್ನು ಬಳಸಿಕೊಂಡದ್ದು ಬುದ್ಧನ ತತ್ವಗಳನ್ನು ಸಾರ್ವತ್ರಿಕರಣಗೊಳಿಸುವ ಪ್ರಯತ್ನವಾಗಿತ್ತು. ಮತ್ತೊಮ್ಮೆ ಆತ ಮಾತಾಡುವ ಭಂಗಿ ಅಂಬೇಡ್ಕರ್ ಅವರನನ್ನು ನೆನಪಿಗೆ ತಂದಿತ್ತು.
ಬೋಧಿ ವೃಕ್ಷವನ್ನು ಸಂಕೇತಿಸುವ ಅರಳಿ ಎಲೆಯ ಅಡಿಯಲ್ಲಿ ನಿಂತ ಬುದ್ಧ ಮತ್ತು ಪ್ರಾಪ್ತಾ ಎಂಬ ಹೊಸ ಹೆಸರಿನೊಂದಿಗೆ ಜನರ ಆಶ್ರಯದಲ್ಲಿ ನಿಂತಂತೆ ಭಾಸವಾಗುವ, ದುಡಿಯುವ ಜನರ ಪ್ರತಿನಿಧಿಯಾಗಿ ಬಿಂಬಿಸಲ್ಪಟ್ಟ ಅಂಗುಲಿಮಾಲನೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ಸಾರಥಿ, ಸೈನಿಕ, ಮಂತ್ರಿ , ಹಾಸ್ಯಗಾರನಂತೆ ಕಾಣುವ ರಾಜ, ಬೌದ್ಧ ಬಿಕ್ಕುಗಳು ಸೇರಿದಂತೆ ಎಲ್ಲಾ ಪಾತ್ರ್ಧಾರಿಗಳಿಗೂ ನಾಟಕದಲ್ಲಿ ಪ್ರತ್ಯೇಕ ಅಸ್ತಿತ್ವವಿತ್ತು. ಅಭಿನಯಕ್ಕೆ ಅವಕಾಶವಿತ್ತು.’ ಎಲ್ಲಾ ಪಾತ್ರದಾರಿಗಳ ಆಂಗೀಕ ಭಾಷೆಗೆ ಒತ್ತು ನೀಡಲಾಗಿತ್ತು.
ಸಮುದಾಯದ ರಂಗಚಟುವಟಿಕೆ ಎಂದಾಕ್ಷಣ ನಮಗೆ ನೆನಪಾಗುವುದು ಬೀದಿ ನಾಟಕಗಳು. ಪ್ರತಿಭಟನೆ ಮತ್ತು ಚಳುವಳಿಗಳಿಗೆ ನಾಟಕವನ್ನು ಪ್ರಭಲ ಅಸ್ತ್ರವಾಗಿ ಬಳಸಿಕೊಂಡದ್ದು ಸಮುದಾಯದ ವಿಶೇಷತೆ. ಜನರ ಮಧ್ಯದಲ್ಲಿಂದಲೇ ಎದ್ದು ಬರುವ ಪಾತ್ರಗಳು, ಯಾವುದೇ ರಂಗಪರಿಕರಗಳಿಲ್ಲದೇ, ಸಮಯ ಸಂದರ್ಭಕ್ಕನುಗುಣವಾಗಿ ಅವರೇ ರಂಗಪರಿಕರಗಳಾಗಿಯೂ ಪರಿವರ್ತನೆಗೊಳ್ಳುವ ಪರಿ, ರಂಗಭೂಮಿಯ ಪರಿಚಯವಿಲ್ಲದವರ ಮನಸಿನೊಳಗೂ ನಾಟಕ ತಲುಪುವ ಪ್ರಯತ್ನ ಮಾಡುತ್ತದೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರದರ್ಶಿತಗೊಂಡ ಬೀದಿ ನಾಟಕ’ಧನ್ವಂತರಿಯ ಚಿಕಿತ್ಸೆ’ .ಕುವೆಂಪುರವರ ಇದೇ ಹೆಸರಿನ ಕಥೆಯನ್ನಾಧರಿಸಿ ಡಾ.ವಿಜಯಾ ನಾಟ್ಅಕಕ್ಕೆ ರೂಪಾಂತರಿಸಿದ್ದಾರೆ.. ಇದರ ನಿರ್ಧೇಶನ ಶಶಿಧರ್ ಭಾರಿಘಾಟ್ ಅವರದು. ಬೆಂಗಳೂರಿನ ಸಮುದಾಯ ತಂಡ ಇದನ್ನು ಪ್ರದರ್ಶಿಸಿತ್ತು. ಸುಮಾರು ಆರು ದಶಕಗಳಿಗೂ ಹಿಂದೆ ಬರೆದ ಈ ಕಥೆಯಲ್ಲಿ ರೈತನ ಧಾರುಣ ನರಳಿಕೆಗೆ ದೈಹಿಕ ರೋಗ ಕಾರಣವಲ್ಲ, ಬದಲಾಗಿ ಪರಿಸರ ಮತ್ತು ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಹೇಳಲಾಗಿತ್ತು. ಅಂದು ಅವರು ಕಂಡುಕೊಂಡ ಸತ್ಯ ಇವತ್ತಿಗೂ ಪ್ರಸ್ತುತ. ಹಾಗಾಗಿಯೇ ಈಗ ಗಣಿ ರಾಜಕೀಯ, ಟುಜಿ ಹಗರಣ, ರೈತರ ಆತ್ಮಹತ್ಯೆ, ಮಡೆಸ್ನಾನ ಮುಂತಾದ ಸಮಸ್ಯೆಗಳ ಹಿನ್ನೆಲೆಯಲ್ಲಿಟ್ಟು ನೋಡಲಾಗಿದೆ.
ಸದಾ ಬಿಝಿಯಾಗಿರುವ, ಒತ್ತಡದಲ್ಲಿ ಬದುಕುತ್ತಿರುವ ಬೆಂಗಳೂರಿಗರು ನಾಟಕದಂಥ ಕಲಾಪ್ರಕಾರದಿಂದ ದೂರವಾಗುತ್ತಿದ್ದರೆನೋ ಎಂದು ಭಾಸವಾಗುತ್ತಿರುವ ಸಮಯದಲ್ಲೇ ಈ ಪ್ರದರ್ಶನಗಳಿಗೆ ಕಲಾಕ್ಷೇತ್ರ ತುಂಬುತ್ತಿರುದು ಆಶಾಧಾಯಕ ಬೆಳವಣಿಗೆ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

Tuesday, January 17, 2012

ದೆಹಲಿ ನಾಟಕೋತ್ಸವದಲ್ಲಿ ಕರ್ನಾಟಕದ ಮೂರು ನಾಟಕಗಳುಹ್ಯಾಮ್ಲೆಟ್, ಡೆನ್ಮಾರ್ಕಿನ ಯುವರಾಜ, ಆತನ ಮಾನಸಿಕ ತೊಳಲಾಟವನ್ನು ನೋಡಿ; ತಂದೆ ತನ್ನ ತಮ್ಮನಿಂದಲೇ ಕೊಲೆಯಾಗಿ ಪ್ರೇತವಾಗಿ ಅಂಡಲೆಯುತ್ತಿದ್ದಾನೆ. ಚಿಕ್ಕಪ್ಪ ಆ ಕೊಲೆಯನ್ನು ದಕ್ಕಿಸಿಕೊಂಡು ತನ್ನಮ್ಮನನ್ನು ಮದುವೆಯಾಗಿದ್ದಾನೆ. ತಾನು ಮನಸಾರೆ ಪ್ರೀತಿಸಿದ ಹುಡುಗಿ ತನ್ನಿಂದ ದೂರವಾಗಿದ್ದಾಳೆ. ಇಡೀ ರಾಜ್ಯ ಸುಖಲೋಲಪ್ತತೆಯಲ್ಲಿ ಮುಳುಗಿ ನೈತಿಕವಾಗಿ ಕುಸಿಯುತ್ತಿದೆ.
ಂತಹ ಹ್ಯಾಮ್ಲೆಟ್ ನ ಮನಕ್ಲೇಶವನ್ನು ರಂಗದ ಮೇಲೆ ತರುವ ಪ್ರಯತ್ನವನ್ನು ಮಾಡಿದವರು ನಿರ್ದೇಶಕ ಇಕ್ಬಾಲ್ ಅಹ್ಮದ್. ಇತ್ತೀಚೆಗಿನ ವರ್ಶಗಳಲ್ಲಿ ರಂಗಭೂಮಿಯಲ್ಲಿ ಹೆಸರು ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿಯ ”ಕಿನ್ನರ ಮೇಳ’ ತಂಡಕ್ಕಾಗಿ ಅಹ್ಮದ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡದ್ದು. ಡಾ. ರಾಮಚಂದ್ರ ದೇವ ಅವರು ಅನುವಾದಿಸಿರುವ ಷೇಕ್ಸಪೀಯರನ ’ಹ್ಯಾಮ್ಲೆಟ್ ’ ನಾಟಕವನ್ನು.
ವಿಲಿಯಂ ಷೇಕ್ಸಪಿಯರ್ ಜಗತ್[ಪ್ರಸಿದ್ಧ ನಾಟಕಕಾರ. ಅವನ ನಾಟಕಗಳು ಇಂದಿಗೂ ಜಗತ್ತಿನಾದ್ಯಂತ ಪ್ರದರ್ಶನ ಕಾಣುತ್ತಲೇ ಇವೆ. ಹಾಗಾಗಿ ಇಂತಹ ನಾಟಕಗಳನ್ನು ನಿರ್ದೇಶಕನೊಬ್ಬ ಪ್ರದರ್ಶನಕ್ಕೆ ಕೈಗೆತ್ತಿಕೊಂಡಾಗ ಆತನಿಗೆ ಹಲವು ಸವಾಲುಗಳಿರುತ್ತವೆ. ಹಾಗ್ಯೇ ಪ್ರೇಕ್ಷಕರಿಗೆ ಈ ನಿರ್ದೇಶಕ ನಾಟಕವನ್ನು ಹೇಗೆ ನೋಡಿದ್ದಾನೆ ಎಂಬ ನಿರೀಕ್ಷೆ, ಕುತೂಹಲಗಳಿರುತ್ತವೆ. ಇದೇ ಪ್ರಶ್ನೆಯನ್ನು ಇಕ್ಬಾಲ್ ಮುಂದಿಟ್ಟಾಗ ಅವರು ಹೇಳಿದ್ದು ಹೀಗೆ ”ನನಗೆ ಹ್ಯಾಮ್ಲೆಟ್ ನ ಒಳತೋಟಿ ಮುಖ್ಯವಾಗಿತ್ತು. ಹಾಗಾಗಿ ಆತ ತನ್ನ ಬಂಧುಗಳ ಜೊತೆ, ಆಪ್ತರ ಜೊತೆ ಹೊಂದಿದ್ದ ಸಂಬಂಧಗಳ ಬಗ್ಗೆ ನಾನು ಹೆಚ್ಚು ಗಮನ ಹರಿಸಿದೆ”.
ನಿಜ, ಅದಕ್ಕಾಗಿ ಅವರು ನಾಟಕವನ್ನು ತಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡಿದ್ದಾರೆ.ಸುಮಾರು ಎರಡು ಘಂಟೆಗೂ ಮೀರಿ ನಡೆಯಬಹುದಾದ ಈ ನಾಟಕವನ್ನು ಅವರು ತೊಂಬತ್ತು ನಿಮಿಷಗಳಿಗೆ ಇಳಿಸಿದ್ದಾರೆ. ಆ ಕಾರಣದಿಂದಲೇ ಏನೋ ನಾಟಕದ ಸರಾಗ ಓಘಕ್ಕೆ ಆಗಾಗ ಧಕ್ಕೆಯಾಗುತ್ತಿತ್ತು. ಮಾತ್ರವಲ್ಲ ಕಥೆ ಗೊತ್ತಿಲ್ಲದವರಿಗೆ ಸಂವಹನದ ಕೊರತೆಯಾಗುತ್ತಿತ್ತು.
ಹ್ಯಾಮ್ಲೆಟ್ ನ ಮನೋವಿಪ್ಲವಕ್ಕೆ ಒತ್ತು ಕೊಟ್ಟ ಕಾರಣದಿಂದ ಇಡೀ ರಂಗವನ್ನು ಹ್ಯಾಮ್ಲೆಟ್ ಆಳಿಬಿಟ್ಟಿದ್ದಾನೆ. ಆ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ನಾಗರಾಜ್ ಮಳವಳ್ಳಿ ತನ್ನ ಅಭಿನಯದಲ್ಲಿ ನವರಸಗಳನ್ನು ಚೆಲ್ಲಿ ವಿಜೃಂಬಿಸಿಬಿಟ್ಟಿದ್ದಾರೆ. ಆದರೆ ನಾಟಕವೆಂಬುದು ಒಂದು ಟೀಂ ವರ್ಕ್. ಎಲ್ಲಾ ಪಾತ್ರಗಳ ಪಾತ್ರ ಪೋಷಣೆ ಶಕ್ತವಾಗಿ ಮೂಡಿ ಬಂದಾಗ ಮಾತ್ರ ಒಟ್ಟು ನಾಟಕ ಪರಿಣಾಮಕಾರಿಯಾಗಲು ಸಾಧ್ಯ. ಹ್ಯಾಮ್ಲೆಟ್ ಗೆಳೆಯ ಹೊರೇಷಿಯೋ ಸೇರಿದಂತೆ ಕೆಲವು ಪಾತ್ರಗಳಲ್ಲಿ ಭಾಷಾ ಶುದ್ಧತೆ ಇರಲಿಲ್ಲ. ಆದರೆ ಎಲ್ಲಾ ಪಾತ್ರಗಳ ದೈಲಾಗ್ ದೆಲಿವರಿಯಲ್ಲಿ ಹೊಸತನವಿತ್ತು. ಅದು ಒಮ್ಮೆ ಗಮಕದ ಶೈಲಿಯನ್ನು ನೆನಪಿಸಿದರೆ ಇನ್ನೊಮ್ಮೆ ಯಕ್ಷಗಾನದ ಭಾಗವತಿಕೆಯನ್ನು ಕೇಳಿದಂತಾಗುತ್ತಿತ್ತು ವೇಷಭೂಷಣ ಮತ್ತು ಬಣ್ಣಗಾರಿಕೆಯಲ್ಲಿ ಕಥಕ್ಕಳಿ ಹಾಗೂ ಯಕ್ಷಗಾನದ ಮಿಶ್ರಣವಿದ್ದುದರಿಂದ ದೇಶೀಯತೆ ಎದ್ದು ಕಾಣುತ್ತಿತ್ತು.
ಪ್ರತಿವರ್ಷ ರಾಷ್ಟ್ರೀಯ ನಾಟಕ ಶಾಲೆ [NSD ] ದೆಹಲಿಯಲ್ಲಿ ’ಭಾರತ ರಂಗ ಮಹೋತ್ಸವ; ಎಂಬ ನಾಟಕೋತ್ಸವವನ್ನು ನಡೆಸುತ್ತದೆ. ಅದರಲ್ಲಿ ಭಾರತದ ಉಪಭಾಷೆಗಳೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ನಾಟ್ಕಗಳು ಭಾಗವಹಿಸುತ್ತವೆ. ಈ ಬಾರಿ ಕರ್ನಾಟಕದಿಂದ ಮೂರು ನಾಟಕಗಳು ಭಾಗವಹಿಸುತ್ತಿವೆ. ಅವುಗಳೆಂದರೆ, ಮಣಿಪಾಲದ ’ಸಂಗಮ ಕಲಾವಿದರು’ ಅಭಿನಯಿಸುವ, ಉಡುಪಿಯ ಶ್ರೀಪಾದ ಭಟ್ ನಿರ್ದೇಶನದ ತುಳು ನಾಟಕ ’ಕರ್ಣಭಾರ’. ಭಾಸನ ಸಂಸ್ಕೃತ ನಾಟಕವನ್ನು ತುಳುವಿಗೆ ಅನುವಾದಿಸಿದವರು ಸತ್ಯ ಉಡುಪಿ, ಬೆಂಗಳೂರಿನ ಅನೇಕ ತಂಡ ಅಭಿನಯಿಸುವ ಎಚ್.ಎಸ್. ಶಿವಪ್ರಕಾಶ್ ಅವರ ’ಮಸ್ತಕಾಭಿಷೇಕ ರಿಹರ್ಸಲ್’ ಇದರ ನಿರ್ದೇಶನ ಸುರೇಶ ಅನಗಳ್ಳಿ.
’ಹ್ಯಾಮ್ಲೆಟ್ ’ ಜನವರಿ ೧೮ ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿದೆ. ಅದಕ್ಕಾಗಿ ಹೊರಟ ತಂಡ ಮಾರ್ಗ ಮಧ್ಯದಲ್ಲಿ ಬೆಂಗಳೂರಿನಲ್ಲಿ ಅಚಾನಕ್ ಆಗಿ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಒಂದು ಪ್ರದರ್ಶನ ಏರ್ಪಡಿಸಿತ್ತು.
ಕರ್ಣಭಾರ ಈಗಾಗಲೇ ಜನವರಿ ೧೪ರಂದು ಪ್ರದರ್ಶನಗೊಂಡಿದೆ. ಹ್ಯಾಮ್ಲೆಟ್ ನಂತೆಯೇ ಕರ್ಣಭಾರ ಕೂಡಾ ಕರ್ಣನ ಮನೋಕ್ಲೇಶಗಳಿಗೆ ಸಂಬಂಧಪಟ್ಟದು. ಮಹಾಭಾರತ ಯುದ್ಧ ನಿಶ್ಚಯವಾಗಿದೆ, ಅಂಥ ಸಂದರ್ಭದಲ್ಲಿ ಕೃಷ್ಣ ಮತ್ತು ಕುಂತಿ ಅವನನ್ನು ಭೇಟಿ ಮಾಡಿ ಅವನ ಜನ್ಮ ವೃತ್ತಾಂತವನ್ನು ತಿಳಿಸಿ ಅವನನ್ನು ದ್ವಂದಕ್ಕೆ ಕೆಡವುತ್ತಾರೆ. ಸಾಲದಕ್ಕೆ ಇಂದ್ರ ಬಂದು ಕರ್ಣಕುಂಡಲಗಳನ್ನು ಬೇಡುತ್ತಾನೆ. ಈ ಮೂವರ ಮಾತುಗಳೇ ಅವನಿಗೆ ಭಾರವಾಗಿ ಕರ್ಣ ಕುಸಿದು ಹೋಗುತ್ತಾನೆ. ಅವನ ಮಾನಸಿಕ ಕುಸಿತವನ್ನು ಯಕ್ಷಗಾನದ ಚಕ್ರತಾಳವನ್ನು ಬಳಸಿಕೊಂಡು ಅತ್ಯದ್ಬುತವಾಗಿ ರಂಗದ ಮೇಲೆ ತರಲಾಗಿದೆ. ಆದರೆ ತಾಂತ್ರಿಕ ಅಂಶಗಳು ನಾಟಕದ ವಸ್ತುವನ್ನು ಮಸುಕಾಗಿಸಿದವೆನೋ ಎಂಬ ಸಂಶಯವನ್ನೂ ಈ ನಾಟ್ಕವನ್ನು ದೆಹಲಿಯಲ್ಲಿ ನೋಡಿದ ಪುರುಷೋತ್ತಮ ಬಿಳಿಮಲೆಯವರು ಹೇಳುತ್ತಾರೆ. ಆದರೆ ಮೊತ್ತಮೊದಲ ಭಾರಿಗೆ ತುಳು ನಾಟಕವೊಂದು ರಂಗಮಹೋತ್ಸವದಲ್ಲಿ ಭಾಗವಹಿಸುತ್ತಿರುವುದು ತುಳು ರಂಗಪ್ರೇಮಿಗಳಿಗೆ ಹೆಮ್ಮೆಯ ವಿಷಯ.
’ಮಸ್ತಕಾಭಿಷೇಕದ ರಿಹರ್ಸಲ್’ ಕಥೆ ಎಲ್ಲರಿಗೂ ಗೊತ್ತಿರುವ ಭರತ-ಭಾಹುಬಲಿ ಎಂಬ ಅಣ್ಣತಮ್ಮಂದಿರ ಕಥೆ; ಬಾಹುಬಲಿಯ ತ್ಯಾಗದ ಕಥೆ ಜೈನಧರ್ಮದ ಮೌಲ್ಯಗಳು ನಾಟಕದ ಆವರಣವಾಗಿ ಬಂದರೆ,
ಈ ನಾಟ್ಕದೊಳಗೊಂದು ನಾಟಕದ ರಿಹರ್ಸಲ್ ಇದೆ. ಅದು ಅಂಬಾನಿ ಸಹೋದರರ ಜೊತೆ ತಳುಕು ಹಾಕಿಕೊಂಡಿದೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರೀಕರಣಗೊಂಡು ಅದೊಂದು ಸರಕಾಗಿ ಬದಲಾವಣೆಗೊಂಡಿರುವುದನ್ನು ಹೇಳುವ ಪ್ರಯತ್ನವನ್ನು ನಾಟಕ ಮಾಡುತ್ತದೆ. ವಿಚಾರವಾದಿಗಳ ವಿರೋಧ, ಮಾಧ್ಯಮದವರ ಎಡೆಬಿಡಂಗಿತನ, ಅಧುನಿಕ ತಂತ್ರಜ್ನಾನ್,ಕೋರ್ಟ್-ಕಛೇರಿ ಎಲ್ಲವೂ
ಈ ನಾಟಕದಲ್ಲಿ ಒಳ ಹೂರಣವಾಗಿ ಬರುತ್ತದೆ. ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ವಿಡಿಯೋ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ, ಹಾಗಾಗಿ ಇದೊಂದು ”ಡಾಕ್ಯು ಡ್ರಾಮ’ ಎಂದು ನಿರ್ದೇಶಕ ಸುರೇಶ್ ಅನಗಳ್ಳಿ ಹೇಳುತ್ತಾರೆ. ಈ ನಾಟಕ ಜ.೨೦ ರಂದು ಪ್ರದರ್ಶನಗೊಳ್ಳಲಿದೆ.
ಕಳೆದ ವರ್ಷ ಬಿ. ಜಯಶ್ರೀ ಆಯ್ಕೆ ಸಮಿತಿಯಲ್ಲಿದ್ದರೂ ಕರ್ನಾಟಕದಿಂದ ಒಂದೂ ನಾಟಕ ಆಯ್ಕೆಯಾಗಿರಲಿಲ್ಲ. ಆದರೆ ಈ ಬಾರಿ ಮೂರು ನಾಟಕ ಆಯ್ಕೆಯಾಗಿರುವುದು ಕನ್ನಡಕ್ಕೆ ಹೆಮ್ಮೆಯ ವಿಚಾರ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]

Thursday, January 12, 2012

ನೀರು ತಂದೇವಾ…ನಿಮಗಾ…!
ಆಧುನಿಕ ಕನ್ನಡ ರಂಗಭೂಮಿಯಲ್ಲಿ ಸಿಜಿಕೆಯವರದ್ದು ದೊಡ್ಡ ಹೆಸರು. ಅವರೇ ಹುಟ್ಟು ಹಾಕಿದ ಸಂಸ್ಥೆ. ’ರಂಗ ನಿರಂತರ”. ಈ ಸಂಸ್ಥೆ ಸಿಜಿಕೆಯವರ ನೆನಪಿನಲ್ಲಿ ಹೊಸ ನಾಟವೊಂದನ್ನು ರಂಗದ ಮೇಲೆ ತಂದಿದೆ. ಅದು ಡಾ. ಅಮರೇಶ ನುಗಡೋಣಿಯವರ ಸಣ್ಣ ಕಥೆಯಧಾರಿತ ’ನೀರು ತಂದವರು’
ಕಥೆಯನ್ನು ರಂಗರೂಪಕ್ಕೆ ತಂದವರು ಕನ್ನಡದ ಮತ್ತೊಬ್ಬ ನಿರ್ದೇಶಕ ಶಶಿಧರ್ ಭಾರಿಘಾಟ್. ಸಿಜಿಕೆಯ ಒಡನಾಟದಲ್ಲೇ ರಂಗಭೂಮಿಯ ಒಳ ಹೊರಗನ್ನು ಅಭ್ಯಸಿಸುತ್ತಾ ನಾಟಕ ಪ್ರೀತಿಯನ್ನು ಬೆಳೆಸಿಕೊಂಡ ರವಿ.ಎಂ ಇದರ ನಿರ್ದೇಶಕರು.
ನೀರು ಎನ್ನುವುದು ಜೀವದ್ರವ್ಯ. ಗಾಳಿ-ಬೆಳಕುಗಳ ಹಾಗೆ. ಅದು ಯಾರೊಬ್ಬರ ಸ್ವತ್ತೂ ಅಲ್ಲ. ಅದು ಸಕಲ ಜೀವರಾಶಿಗಳಿಗೂ ಬೇಕು. ಅಂಥ ನೀರನ್ನು ಮೇಲ್ವರ್ಗದ ಜನ ತಮ್ಮ ಸ್ವತ್ತಾಗಿಸಿಕೊಂಡು, ಬಡಜನರ ಶೋಷಣೆಯ ಅಸ್ತ್ರವಾಗಿ ಬಳಸುತ್ತಿರುವುದನ್ನು ಮತ್ತು ಅದೇ ಶೋಷಿತ ಜನಾಂಗ ಮಾನವೀಯ ನೆಲೆಯಲ್ಲಿ ಮೇಲ್ವರ್ಗದವರಿಗೆ ನೀರನ್ನು ಹೊತ್ತು ತರುವುದು ನಾಟಕದ ಕಥಾ ಹಂದರ.
ನಾಟಕ ತೆರೆದುಕೊಳ್ಳುವುದೇ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಟೀ ಅಂಗಡಿ ಮತ್ತು ಅದರ ಸುತ್ತಲಿನ ಗ್ರಾಮೀಣ ಚಟುವಟಿಕೆಗಳಿಂದ. ಮೇಲ್ಜಾತಿಗೆ ಸೇರಿದ ಈ ಅಂಗಡಿಯ ಮಾಲೀಕ ಕೀಳು ಜಾತಿಯವರಿಗೆ ನೀರು ಕೊಡಲೂ ಹಿಂದು ಮುಂದು ನೋಡುತ್ತಾನೆ. ಅವರಿಗೆ ಪ್ರತ್ಯೇಕ ಲೋಟದಲ್ಲಿ ಚಹಾ ನೀಡುತ್ತಾನೆ. ಅವರು ದೂರದಲ್ಲಿಟ್ಟ ದುಡ್ಡಿನ ಮೇಲೆ ನೀರು ಪ್ರೋಕ್ಷಿಸಿ ತೆಗೆದುಕೊಳ್ಳುವ ಆತ ಮಠದವ್ವ ಹಾದಿಯಲ್ಲಿ ಬಂದರೆ ಓಡಿ ಹೋಗಿ ಅಡ್ಡ ಬೀಳುತ್ತಾನೆ. ಅಂದರೆ ನಾಟಕದ ವಸ್ತು ಏನೆಂಬುದನ್ನು ನಿರ್ದೇಶಕರು ಮೊದಲ ದೃಶ್ಯದಲ್ಲಿ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಶಕ್ತರಾಗಿದ್ದಾರೆ.
ಎರಡನೆಯ ದೃಶ್ಯದಲ್ಲಿ ಗುಡಿಸಲಿನ ಹೊರಗೆ ಲಾಟೀನ್ ಬೆಳಕಲ್ಲಿ ನಡೆಯುವ, ನೀರಿಗಾಗಿ ಪರಿತಪಿಸುವ ಜನರ ಪರದಾಟ, ಹಿಂದುಳಿದ ಯುವಕರ ರೊಚ್ಚು, ಅವೇಶ ಎಲ್ಲವೂ ಕೂಡಾ ಬಿಗುವಾಗಿಯೇ ಮೂಡಿ ಬಂದಿದೆ. ಅಸ್ಪೃಶ್ಯ ಕೇರಿಯ ಜನರೆಲ್ಲಾ ಮಲಗಿರುವ ವೇಳೆಯಲ್ಲಿ ಮೇಲ್ಜಾತೀಯ ಜನರೆಲ್ಲಾ ಗುಡಿಸಲುಗಳಿಗೆ ನುಗ್ಗಿ ಅಲ್ಲಿ ತುಂಬಿಟ್ಟಿದ ನೀರನ್ನೆಲ್ಲಾ ಚೆಲ್ಲಿದ ಮತ್ತು ಅದನ್ನೆಲ್ಲಾ ಕಂಡು ಆಕ್ರಂದನಗೈದ ಜನರ ಭಾವಾಭಿವ್ಯಕ್ತಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಡೈಲಾಗ್ ಇಲ್ಲದ. ಕೇವಲ ಸಂಗೀತ ಮತ್ತು ಬೆಳಕು ವಿನ್ಯಾಸದಲ್ಲಿ ಬಹಳಷ್ಟನ್ನು ಪ್ರೇಕ್ಷಕರಿಗೆ ದಾಟಿಸಿದೆ. ನಾಲ್ಕನೆಯ ದೃಶ್ಯದಲ್ಲಿ ಅಳವಡಿಸಿಕೊಂಡ ಡೊಳ್ಳು ಕುಣಿತ ನಾಟಕದ ಗಾಂಭೀರ್ಯ ಹೆಚ್ಚಿಸುವಂತಿತ್ತು. ಆದರೆ ಈ ಬಿಗಿಯನ್ನು ಮುಂದಿನ ದೃಶ್ಯಗಳಲ್ಲಿ ಕಾಯ್ದುಕೊಳ್ಳುವಲ್ಲಿ ನಾಟಕ ವಿಫಲವಾಗಿದೆ. ಅದಕ್ಕೆ ಕಾರಣ ನಾಟಕ ವಾಚ್ಯವಾಗುತ್ತಾ ಸಾಗಿದ್ದು. ಅದರ ಜೊತೆಗೆ ವಚನಗಳ ಬಾರಕ್ಕೆ ನಾಟಕದ ವಸ್ತು ಜಗ್ಗತೊಡಗಿದ್ದು. ಆದರೆ ಸಹಬಾಳ್ವೆಯ ಬದುಕಿನ ಮಹತ್ವವನ್ನು ಸಾರುವ ಈ ನಾಟಕ ಈ ಕಾಲಘಟ್ಟದ ಅವಶ್ಕಕತೆಯೂ ಹೌದು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ನಾಟ್ಕದ ಅವಧಿ; ಒಂದು ಘಂಟೆ ಇಪ್ಪತ್ತು ನಿಮಿಷ. ಅದರೆ ಅದು ಇನ್ನೂ ದೀರ್ಘವಾಗಿತ್ತೆನೋ ಎಂಬ ಅನುಭವ ಬಂದರೆ ಅದು ಸ್ಕ್ರಿಪ್ಟ್ ನಲ್ಲಿನ ಕೊರತೆಯೇ ಕಾರಣ. ಆದರೆ ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸುಮಾರು ಮೂವತ್ತೆರಡು ಕಲಾವಿದರು ರಂಗದ ಮೇಲೆ ಅಭಿನಯಿಸಿದ್ದರೆ, ರಂಗದ ಹಿಂದೆ ಇಪ್ಪತ್ತುಕ್ಕೂ ಹೆಚ್ಚು ತಂತ್ರಜ್ನರು ದುಡಿದಿದ್ದಾರೆ.
ನಾಟಕಕ್ಕೊಂದು ಉದ್ದೇಶವಿರಬೇಕು ನಿಜ. ಆದರೆ ಅದು ಕಲಾತ್ಮಕ ಚೌಕಟ್ಟಿನೊಳಗೆ ಬಿಂಬಿತವಾಗಬೇಕು. ಹಾಗಾಗದಿದ್ದರೆ ಅದು ಕೇವಲ ಘೋಷಣೆಗಳಾಗಿ, ಹೇಳಿಕೆಯ ಮಟ್ಟದಲ್ಲಿ ಉಳಿದು ಬಿಡುತ್ತದೆ. ಆದರೂ ಇಂಥ ನಾಟಕಗಳನ್ನು ನೋಡುತ್ತಿರುವಾಗಲೇ ’ಇನ್ನೊಂದರ’ ನೆನಪಾಗುತ್ತದೆ. ’ನೀರು ತಂದವರು’ ನಾಟ್ಕವನ್ನು ನೋಡುತ್ತಿರುವಾಗ ಮಂಡ್ಯದ ಅಂಬಲವಾಡಿಯಲ್ಲಿ ನಡೆದ ’ಮರ್ಯಾದ ಹತ್ಯೆ’ ಘಟನೆ ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು. ಅದು ಈ ನಾಟಕದ ಯಶಸ್ಸು.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]