Sunday, December 10, 2017

’ಮಜೂಲಿ ’ ಬ್ರಹ್ಮಪುತ್ರನ ಕಂದ!



ಏಳು ಸಮುದ್ರಗಳ ನಡುವೆಯೊಂದು ದ್ವೀಪ. ಅಲ್ಲಿ  ಬಂಧನದಲ್ಲಿರುವ ರಾಜಕುಮಾರಿ. ಅವಳನ್ನು ಬಿಡಿಸಿಕೊಂಡು ಬರಲು ಹೊರಟ್ ರಾಜಕುಮಾರ್. ಅವನು ಎದುರಿಸುವ ಸಂಕಷ್ಟಗಳು...ಇದೆಲ್ಲಾ ಬಾಲ್ಯದಲ್ಲಿ ನಾವು ಕಣ್ಣರಳಿಸಿಕೊಂಡು ಕೇಳುತ್ತಿದ್ದ ರಮ್ಯ ಕಥೆ.  ಆ ರಾಜಕುಮಾರಿ ನಾನಾಗಿದ್ದರೆ? ಆ ದ್ವೀಪಕ್ಕೆ ಹೋಗಲು ಸಾಧ್ಯವಾಗಿದ್ದರೆ?

ಹೌದು, ಕನಸುಗಾರರ. ಸಾಹಸಿಗಳ. ಏಕಾಂತಪ್ರಿಯರ ಮನಸ್ಸನ್ನು ಸೆಳೆಯುವ ನಿಗೂಡಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ. ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯಿಂದ ಸೆಳೆಯಲ್ಪಟ್ಟು ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ. ನನ್ನ ಪ್ರವಾಸದ ಪಟ್ಟಿಯಲ್ಲಿ ಮಜೂಲಿಯ ಹೆಸರಿರಲಿಲ್ಲ. ನನ್ನ ಗಮ್ಯ ಬ್ರಹ್ಮಪುತ್ರ ಎಂಬ ಮಹಾನದಿಯ ಚೊಚ್ಚಲ ಉತ್ಸವ ’ ನಮಾಮಿ ಬ್ರಹ್ಮಪುತ್ರ’ವನ್ನು ನೋಡುವುದಾಗಿತ್ತು ಆದರೆ ನಾನವನ ಮಗುವಿನ ಮೋಹದಲ್ಲಿ ಬಿದ್ದೆ.!

ಹೌದು! ಮಾಜೂಲಿ ಬ್ರಹ್ಮಪುತ್ರ ಸ್ರುಜಿಸಿದ ದ್ವೀಪ. ಜಗತ್ತಿನಲ್ಲಿಯೇ ನದಿಯೊಂದು ಹುಟ್ಟು ಹಾಕಿದ  ಅತ್ಯಂತ ದೊಡ್ಡ ದ್ವೀಪವಿದು. ಹಾಗೆಂದು ಗಿನ್ನಿಸ್ ಬುಕ್ ನಲ್ಲಿಯೂ ದಾಖಲಾಗಿದೆ.
ಸತ್ರದೊಳಗಿನ ಮೂಲದೇವರು ಕೃಷ್ಣ.
ಜಗತ್ತಿನ ಅತೀ ದೊಡ್ಡ ನದಿಗಳ ಪಟ್ಟಿಯಲ್ಲಿ ಭಾರತದ ಬ್ರಹ್ಮಪುತ್ರವೂ ಸೇರಿದೆ. ಅದೊಂದು ಉನ್ಮತ್ತ ನದಿ. ಬ್ರಹ್ಮದೇವನ ಪುತ್ರನಾದ ಕಾರಣ ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವೆನ್ನಬಹುದೇ?. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ.

ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು.
ಬ್ರಹ್ಮಪುತ್ರನ ಪುಟ್ಟ ಮಗು ಮಾಜುಲಿ. ಇದಕ್ಕಿರುವುದು ಕೇವಲ ನಾಲ್ಕು ಶತಮಾನಗಳ ಇತಿಹಾಸ.ಇದರ ಹುಟ್ಟಿನ ಕಥೆ ಕೇಳಿ;
ಮಾಜುಲಿ ಅಂದರೆ ಅಸ್ಸಾಮಿ ಭಾಷೆಯಲ್ಲಿ ಸಮಾನಂತರವಾಗಿ ಹರಿಯುವ ಎರಡು ನದಿಗಳ ನಡುವಿನ ಭೂಮಿ ಎಂದರ್ಥ. ಈಗ ನಮಗೆ ಗೋಚರವಾಗುವ ಮಾಜುಲಿ ದ್ವೀಪ ಹಿಂದೊಮ್ಮೆ ಬ್ರಹ್ಮಪುತ್ರನ ಒಡಲೊಳಗಿತ್ತು. . ಡಿಬಾಂಗ್ ಮತ್ತು ಬ್ರಹ್ಮಪುತ್ರ ನದಿಗಳು ಪರಸ್ಪರ ೧೯೦ ಕಿ.ಮೀ ದೂರದಲ್ಲಿ ಸಮಾನಂತರವಾಗಿ ಹರಿಯುತ್ತಿದ್ದವು. ಅದು ೧೭೫೦ ರ ಸಮಯ.ಸತತ ಹದಿನೈದು ದಿನಗಳ ಕಾಲ ಮಳೆ ಸುರಿಯಿತು. ಜೊತೆಗೆ ಆ ಪ್ರದೇಶದಲ್ಲಿ ಭೂಕಂಪನವೊಂದು ಸಂಭವಿಸಿತು. ಎರಡೂ ನದಿಗಳು ಹುಚ್ಚೆದ್ದು ಕುಣಿದು ತಮ್ಮ ತಮ್ಮ ಪಾತ್ರಗಳ ಮೇರೆ ಮೀರಿ ಹರಿದು ಒಂದನ್ನೊಂದು ಅಪ್ಪಿಕೊಂಡವು. ಆವರಿಬ್ಬರೂ ಸೇರಿ ಬಳುಕಿದ ಜಾಗದಲ್ಲಿ ಭೂಭಾಗವೊಂದು ನಿರ್ಮಾಣವಾಯ್ತು, ಅದುವೇ ಮಜೂಲಿ ದ್ವೀಪ.

ಸತ್ರದ ಹೊರಮೈ
ಮಜೂಲಿ ದ್ವೀಪ ಉದಯವಾದ ಕಾಲಕ್ಕೆ ಅದರ ವಿಸ್ತೀರ್ಣ ೧೨೨೫ ಚದರ ಕಿ.ಮೀ ಆಗಿತ್ತು. ಕ್ರಮೇಣ ಬ್ರಹ್ಮಪುತ್ರ ಅದನ್ನು ಕಬಳಿಸುತ್ತಾ ಬಂದು ಈಗ ಕೇವಲ ೫೨೦ ಚದರ ಕಿ.ಮೀ ಭೂಭಾಗ ಉಳಿದುಕೊಂಡಿದೆ. ಭೂಮಿಯ ತಾಪಮಾನ ಏರುತ್ತಲೇ ಇದೆ. ವಾತಾವರಣದಲ್ಲಿ ಅಸಾಧಾರಣವಾದ ಏರುಪೇರುಗಳಾಗುತ್ತಿದೆ. ಹಿಮಾಲಯ ಕರಗುತ್ತಿದೆ. ಹಾಗಾಗಿ ಬ್ರಹ್ಮಪುತ್ರನ ನೆರೆ ಹೆಚ್ಚುತ್ತಲೇ ಇದೆ. ಹೀಗೇ ಮುಂದುವರಿದರೆ ಇನ್ನೆರಡು ದಶಕದಲ್ಲಿ ಮಾಜುಲಿ ದ್ವೀಪ ಮತ್ತೆ ಬ್ರಹ್ಮಪುತ್ರನ ಒಡಲನ್ನು ಸೇರಲಿದೆ ಎಂದು ತಜ್ನರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವರ್ಷ ಮಾರ್ಚ್ ೩೧ರಿಂದ ಏಪ್ರಿಲ್ ೪ ರತನಕ ಅಸ್ಸಾಂನಲ್ಲಿ ’ನಮಾಮಿ ಬ್ರಹ್ಮಪುತ್ರ’ ಉತ್ಸವ ನಡೆಯಿತು. ಅದರಲ್ಲಿ ಭಾಗವಹಿಸುವುದಕ್ಕಾಗಿ ಅಸ್ಸಾಂನ ರಾಜಧಾನಿ ಗೌಹಾಟಿಗೆ ಹೋಗಿದ್ದೆ. ಈ ಹಿಂದೆ ಕಾಶ್ಮೀರದ ಲಡಾಕ್ ನಲ್ಲಿ ನಡೆಯುತ್ತಿರುವ ’ಸಿಂಧು ಉತ್ಸವ’ ವನ್ನು ನೋಡಿದ್ದೆ. ಹಾಗಾಗಿ ಇದನ್ನೂ ನೋಡುವ ಬಯಕೆ ಹುಟ್ಟಿತ್ತು. ಆದರೆ ಈ ಬಾರಿ ಅಸ್ಸಾಂಗೆ ವಾಡಿಕೆಯ ಮೊದಲೇ ಮಳೆಗಾಲ ಆರಂಭವಾದಂತಿತ್ತು. ಉದ್ಘಾಟನೆಯಂದು ಆರಂಭವಾದ ಮಳೆ ಸಮಾರೋಪದ ತನಕ ಎಡೆಬಿಡದೆ ಸುರಿಯಿತು. ಬ್ರಹ್ಮಪುತ್ರದ ದಂಡೆಯ ಮೇಲೆ ನಿರ್ಮಿಸಿದ ಮುಖ್ಯ ವೇದಿಕೆಯಲ್ಲಿ ಒಂದೇ ಒಂದು ಸಾಂಸ್ಕ್ರುತಿಕ ಕಾರ್ಯಕ್ರಮವೂ ನಡೆಯಲಿಲ್ಲ. ನಾನು ಮತ್ತು ನನ್ನ ಪ್ರೆಂಡ್ ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಬೆಂಗಳೂರಿನ ರಣಬಿಸಿಲನ್ನು ನೆನಪಿಸಿಕೊಳ್ಳುತ್ತಾ ಎರಡು ದಿನ ಕಳೆದವು. ರಿಟರ್ನ್ ಟಿಕೇಟ್ ಬುಕ್ ಆಗಿದ್ದ ಕಾರಣದಿಂದ ಅಲ್ಲಿಯೇ ಉಳಿಯುವುದು ಅನಿವಾರ್ಯವಾಗಿತ್ತು. ಎರಡನೆಯ ರಾತ್ರಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾ  ಗೌಹಾಟಿಯ ಸುತ್ತಮುತ್ತ ಯಾವುದಾದರೂ ಪ್ರೇಕ್ಷಣಿಯ ಸ್ಥಳವಿದೆಯೇ ಎಂದು ಹುಡುಕಾಡತೊಡಗಿದೆವು. ಆಗ ಸಿಕ್ಕಿದ್ದೇ ಈ ಮಜೂಲಿಯೆಂಬ ಸ್ವರ್ಗ. ಸರಿ ಬ್ಯಾಗನ್ನು ಹೋಟೇಲ್ ನಲ್ಲೇ ಬಿಟ್ಟು ಬ್ಯಾಕ್ ಪ್ಯಾಕ್ ಏರಿಸಿಕೊಂಡು ರಾತ್ರಿ ಬಸ್ಸಿನಲ್ಲಿ ಕುಳಿತೆವು.

ಸತ್ರದ ಪ್ರವೇಶ ದ್ವಾರ.
 ಗೌಹಾಟಿಯಿಂದ ಮಜೂಲಿ ೩೦೦ ಕಿ.ಮೀ ದೂರದಲ್ಲಿದೆ. ಮಾಜುಲಿಗೆ ಹೋಗಲು ಎರಡು ಮಾರ್ಗಗಳಿವೆ, ಹತ್ತಿರದ ದಾರಿಯೆಂದರೆ ಗೌಹಾಟಿಯಿಂದ ಜೋರಾಟ್ ಗೆ ಹೋಗಬೇಕು. ಬಸ್ಸಿನಲ್ಲಾದರೆ ಆರು ಘಂಟೆ ಬೇಕು. ಅಲ್ಲಿಂದ ಶೇರ್ ಆಟೋ ಹಿಡಿದು ನಿಮಾಟಿ ಘಾಟ್ಗೆ ಬಂದರೆ ಅಲ್ಲಿ ಮಜೂಲಿಗೆ ಹೋಗುವ ಪೆರ್ರಿ ಸಿಗುತ್ತದೆ. ನಿಮಾಟಿ ಘಾಟ್ ಎಂಬುದು ಬ್ರಹ್ಮಪುತ್ರಾದ ನದಿ ಬಂದರು. ಗೌಹಾಟಿಯಿಂದ ಕಾರು ಮಾಡಿಕೊಂಡು ಬಂದರೆ ಕಾರು ಸಮೇತ ಪೆರ್ರಿಯಲ್ಲಿ ಸಾಗಬಹುದು. ನಿಮಟಿಘಾಟ್ ನಿಂದ ಮಜೂಲಿ ೨೦ ಕಿ.ಮೀ ದೂರದಲ್ಲಿದೆ. ಇನ್ನೊಂದು ಹಾದಿ ಲಕಮಿಪುರದ ಮೇಲೆ ನೇರ ಮಜೂಲಿಯನ್ನು ತಲುಪುವುದು. ಇದು ತುಂಬಾ ದೂರದ ಹಾದಿ ಒಂಬತ್ತು ಘಂಟೆಯ ಪಯಣ. ಈ ಹಾದಿಯಲ್ಲಿ ಪೆರ್ರಿಯಲ್ಲಿ ಹೋಗಬೇಕಾಗಿಲ್ಲ. ಬ್ರಹ್ಮಪುತ್ರ ಮತ್ತು ಮಜೂಲಿಯ ನಡುವೆ ಕಿರಿದಾದ ನದಿ ಹರಿವು ಇದ್ದೆಡೆಯಲ್ಲಿ ಭೂಮಿಯನ್ನೇ ಮುಂದೊತ್ತಿ ಒಂದು ಸೇತುವೆಯನ್ನು ನಿರ್ಮಿಸಿ ಅದರ ಮುಖಾಂತರ ಬಸ್ಸು ಹೋಗುವಂತೆ ಮಾಡಲಾಗಿತ್ತು. ನಾವು ಮಾಹಿತಿಯ ಕೊರತೆ ಕಾರಣವಾಗಿ ಈ ಬಸ್ಸಿನಲ್ಲಿ ಟಿಕೇಟ್ ರಿಸರ್ವ ಮಾಡಿಸಿದ್ದೆವು. ಬಸ್ಸು ಹತ್ತುವಾಗಲೇ ನಮಗೆ ಅನುಮಾನ ಮೂಡಿತ್ತು. ಅದರಲ್ಲಿದ್ದುದು ಕೆಲವೇ ಪ್ರಯಾಣಿಕರು. ಲಕುಮಿಪುರಕ್ಕೆ ಹೋಗುವ ಐದಾರು ಪ್ರಯಾಣಿಕರ ಜೊತೆ  ಮಜುಲಿಗೆ ಹೊರಟವರು ನಾವಿಬ್ಬರೇ!

ನಮ್ಮ ಗ್ರಹಚಾರ ನೆಟ್ಟಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಯಾವುದೋ ಊರಲ್ಲಿ ಬಸ್ಸು ಕೆಟ್ಟು ನಿಂತಿತು. ಡ್ರೈವರ್ ರಿಪೇರಿ ಮಾಡಿದ, ಬಸ್ಸು ಮುಂದೆ ಹೋಗುತ್ತಿತ್ತು. ಮತ್ತೆ ಕೆಟ್ಟು ನಿಲ್ಲುತ್ತಿತ್ತು..ಮತ್ತೆ ..ಮತ್ತೆ..
ಆದಿವಾಸಿಗಳ ಗುಡಿಸಲು
ಬೆಳಿಗ್ಗೆ ಮಜೂಲಿಗೆ ತಲುಪಬೇಕಾದವ್ರು ಅಂತೂ ಇಂತೂ ಮಧ್ಯಾಹ್ನ ಒಂದೂವರೆಗೆ ತಲುಪಿದೆವು. ಆದರೆ ಬಹಳಷ್ಟು ಸಂದರ್ಭದಲ್ಲಿ ನನಗೆ ನಾನೇ ಹೇಳಿಕೊಳ್ಳುವ ಹಾಗೆ ಗುರಿಯಷ್ಟೇ ಮುಖ್ಯವಲ್ಲ ಅದನ್ನು ಕ್ರಮಿಸುವ ಹಾದಿಯೂ ಅಷ್ಟೇ ಮುಖ್ಯ ಎಂಬುದು ಇಲ್ಲಿಯೂ ಮನದಟ್ಟಾಯ್ತು. ದಾರಿಯ ಎರಡೂ ಬದಿಯಲ್ಲೂ ಹಸಿರೇ ಹಸಿರು. ಪೈರಿನಿಂದ ಕಂಗೊಳಿಸುವ ಹೊಲಗದ್ದೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದವು.ಅಲ್ಲಲ್ಲಿ ಸಿಗುತ್ತಿದ್ದ ಸ್ಥಳೀಯ ಮುಗ್ಧ ಜನರು, ಅವರ ಪ್ರೀತಿ, ವಿಶ್ವಾಸದ ಮಾತುಗಳ ಮಧ್ಯೆ ಪ್ರಯಾಣ ಕಷ್ಟವೆನಿಸಲಿಲ್ಲ.

ಮಜೂಲಿ ಬಸ್ ನಿಲ್ದಾಣ್ದಲ್ಲಿ ಇಳಿದ ಜಾಗದಲ್ಲಿ ಪುಟ್ಟ ಕಟ್ಟಡದ ಮಹಡಿ ಮೇಲೊಂದು ಊಟದ ಹೋಟೇಲಿತ್ತು. ಆ ಹೋಟಿಲಿನ ಓನರ್ ಒಬ್ಬ ನಗುಮೊಗದ ಯುವಕ, ಕಲ್ಕತ್ತಾದವನಂತೆ, ಅತ್ಯಂತ ಆದರದಿಂದ ಬಿಸಿ ಬಿಸಿಯಾದ ರುಚಿಯಾದ ಊಟ ಬಡಿಸಿದಾಗ ಆತನೊಬ್ಬ ದೇವದೂತನಂತೆ ನಮಗೆ ಕಂಡ. ಯಾಕೆಂದರೆ ಕಳೆದ ರಾತ್ರಿಯಲ್ಲಿ ಯಾವುದೋ ಊರಿನಲ್ಲಿ ಒಂದು ಮೀನು ಪ್ರೈ ತಿಂದಿದ್ದು ಬಿಟ್ಟರೆ  ಏನನ್ನೂ ತಿಂದಿರಲಿಲ್ಲ. ಬ್ಯಾಗಲಿದ್ದ ಬಿಸ್ಕತ್ತು, ಕುರುಕಲು ತಿಂಡಿಗಳು ಬೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಾಗಿದ್ದವು. ನಮ್ಮೊಡನೆ ನಮ್ಮ ಡ್ರೈವರ್ ಕೂಡಾ ಉಪವಾಸವಿದ್ದ. ಅಷ್ಟು ಅಡೆತಡೆಗಳಾದರೂ ತಮಾಶೆಯಾಗಿ ಹರಟುತ್ತಾ ಇದ್ದ ಕೆಲವೇ ಮಂದಿ ಪ್ರಯಾಣಿಕರನ್ನು ಉಲ್ಲಾಸದಿಂದಿಡಲು ಪ್ರಯತ್ನಿಸುತ್ತಿದ್ದ ಅವರ ನೆನಪು ಊಟ ಮಾಡುತ್ತಿರುವಾಗ ಕಾಡಿತು.
ಇದು ತುಲಸಿ ಮರದ ದಿಮ್ಮಿಯಂತೆ!
ಗೌಹಾಟಿಯಿಂದ ಹೊರಡುವಾಗಲೇ ಮಜೂಲಿಯಲ್ಲಿ ಒಂದು ವೆಹಿಕಲ್ ತಗೊಂಡು ಇಡೀ ದಿನ ದ್ವೀಪ ಸುತ್ತುವ ಪ್ಲಾನ್ ಮಾಡಿದ್ದೆವು. ಸಾಧ್ಯಾವಾದರೆ ಅಲ್ಲಿಯ ಮೂಲನಿವಾಸಿಯ ಮನೆಯಲ್ಲಿ ಅವರದೇ ಶೈಲಿಯ ಊಟ ಮಾಡಬೇಕೆಂದಿದ್ದೆವು. ಆದರೆ ಈ ಲಟಾರಿ ಬಸ್ಸಿನ ದೆಸೆಯಿಂದ ನಮ್ಮ ಪ್ಲಾನ್ ಎಲ್ಲಾ ಉಲ್ಟಾ ಆಗಿತ್ತು. ಈಗ ನಮ್ಮಲ್ಲಿ  ಹೆಚ್ಚೆಂದರೆ ಎರಡು ಘಂಟೆಯಷ್ಟೇ ಸಮಯವಿತ್ತು. ನಮ್ಮ ಸಮಸ್ಯೆಯನ್ನು ನಮಗೆ ಅನ್ನ ನೀಡಿದ ಯುವಕನಲ್ಲಿ ತೋಡಿಕೊಂಡಾಗ ಆತ ಮಹಡಿ ಮೇಲಿನಿಂದಲೇ ಕೆಳಗಿದ್ದ ಕಾರಿನವನಿಗೆ ಏನೋ ಹೇಳಿ ನಮ್ಮತ್ತ ತಿರುಗಿ’ ಆ ಕಾರಿನಲ್ಲಿ ಹೋಗಿ ಆತ ನಿಮ್ಮನ್ನು ಊರಲ್ಲಾ ಸುತ್ತಾಡಿ ನಿಮ್ಮನ್ನು ಪೆರ್ರಿಗೆ ಸಕಾಲದಲ್ಲಿ ತಲುಪಿಸುತ್ತಾನೆ ಎಂದ. ನಿಮಿಟಿಘಾಟ್ ಗೆ ಹೋಗುವ ಕೊನೆಯ ಪೆರ್ರಿ ಮೂರೂವರೆಗೆ ಎಂದು ಗೊತ್ತಾಯ್ತು. ಅಷ್ಟರೊಳಗೆ ಅಂದರೆ ಒಂದೂಮುಕ್ಕಾಲು ಘಂಟೆಯೊಳಗೆ ನಾವು ಊರೆಲ್ಲಾ ಸುತ್ತಬೇಕಾಗಿತ್ತು; ಹೊರಟೆವು. ಪ್ರವಾಸ ಕಾಲದಲ್ಲಿ ಪ್ಲಾನ್ ಗಳು ತಲೆ ಕೆಳಗಾಗುವುದು ಸಾಮನ್ಯ. ಆಗ ಅದನ್ನು ತಮಗೆ ಅನುಕೂಲಕರವಾಗುವಂತೆ ಪರಿವರ್ತಿಸಿಕೊಳ್ಳುವುದೂ ಒಂದು ಕಲೆ. ’ಇದಲ್ಲದಿದ್ದರೆ ಅದು. ಅದು ಸಾಧ್ಯವಾಗದಿದ್ದರೆ ಇದು ” ಅಷ್ಟೇ. ಮುಖ ಬಾಡಿಸಿಕೊಂಡು ಯಾರನ್ನೋ ಬಯ್ದುಕೊಂಡು, ಅದ್ರುಷ್ಟವನ್ನು ಹಳಿದುಕೊಂಡು ಕೈಚೆಲ್ಲಿ ಕುಳಿತುಕೊಳ್ಳಬಾರದು. .

ತುಲಸಿ ಮರ!
೫೨೦ ಚದರ ಕಿ.ಮೀ ಸುತ್ತಳತೆಯ ಮಜೂಲಿ ಜಿಲ್ಲೆಯ ಜನಸಂಖ್ಯೆ ಸುಮಾರು ಒಂದು ಲಕ್ಷದ ಅರುವತ್ತೇಳು ಸಾವಿರ. ಕಾರಲ್ಲಿ ಕೂತ ಒಡನೆಯೇ ನಾವು ಭೇಟಿ ಕೊಟ್ಟದ್ದು ಇಲ್ಲಿಯ ಸತ್ರಗಳಿಗೆ. ಸತ್ರಗಳು ಮಾಜೂಲಿಯ ವೈಶಿಷ್ಟತೆಗಳಲ್ಲೊಂದು. ೧೬ನೇಯ ಶತಮಾನದ ಸಮಾಜ ಸುಧಾರಕ ಶಂಕರದೇವ ಈ ದ್ವೀಪಕ್ಕೆ ಭೇಟಿ ನೀಡಿ ೬೫ ಸತ್ರಗಳನ್ನು [ಧಾರ್ಮಿಕ ಕೇಂದ್ರ] ಸ್ಥಾಪಿಸಿ ವೈಷ್ಣವ ಧರ್ಮವನ್ನು ಪ್ರಚುರಪಡಿಸಿದರಂತೆ. [ ಅಂದರೆ ೧೬ ಶತಮಾನದಲ್ಲಿ ಈ ದ್ವೀಪ ಅಸ್ತಿತ್ವದಲ್ಲಿತ್ತು] ಈಗಲೂ ಅಲ್ಲಿ ೨೨ ಸತ್ರಗಳಿವೆ. ಇವುಗಳು ಪುರಾತನ ಸಾಹಿತ್ಯ, ಸಂಸ್ಕ್ರುತಿ, ಆಚಾರ ವಿಚಾರಗಳನ್ನು ಪೋಷಿಸುತ್ತವೆ ಮಾತ್ರವಲ್ಲ ದ್ವೀಪದ ಪರಂಪರೆಯ ಗುರುತುಗಳಾದ ಕಲಾಕ್ರುತಿಗಳು, ಆಯುಧಗಳನ್ನು ಸಂರಕ್ಷಿಸಿ ಇಡುವ ತಾಣಗಳಾಗಿವೆ. ನನ್ನನ್ನು ಹೆಚ್ಚು ಆಕರ್ಷಿಸಿದ್ದು ಔನಿಯಟಿ [Auniati ] ಸತ್ರ. ನಾವು ಹೋದಾಗ ಪುಟ್ಟ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಸ್ಥಳೀಯ ಜಾನಪದ ಶೈಲಿಯ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಗೀತದ ಆಲಾಪನೆ ಮತ್ತು ದೀಪದ ಪರಿಕರಗಳು ತುಂಬಾ ಆಸಕ್ತಿದಾಯಕವಾಗಿದ್ದವು. ಇದೆಲ್ಲಕ್ಕಿಂತಲೂ ನನಗೆ ಅತೀ ಅಚ್ಚರಿಯನ್ನು ಉಂಟು ಮಾಡಿದ್ದು ಅಲ್ಲಿನ ಮುಖ್ಯ ಪುಜಾರಿ\ ಮೇಲ್ವಿಚಾರಕರು ಪರಿಚಯಿಸಿದ್ದ  ತುಳಸಿ ಮರದ ದಿಮ್ಮಿಗಳು. ನನ್ನ ಜೀವಮಾನದಲ್ಲೇ ಮೂರಡಿಗಿಂತ ಎತ್ತರದ ತುಳಸಿ ಗಿಡವನ್ನು ನೋಡಿರಲಿಲ್ಲ. ಹಾಗಿರುವಾಗ ಅಷ್ಟು ದೊಡ್ಡ ಗಾತ್ರದ ಮರದ ದಿಮ್ಮಿಗಳನ್ನು ತೋರಿಸಿ ಇವು ತುಳಸಿ ಮರಗಳೆಂದು ತೋರಿಸಿದರೆ ನನಗೆ ಹೇಗಾಗಬೇಡ!.. ಸಮಯ ಕಮ್ಮಿ ಇತ್ತು. ಆದರೂ ಅದರ ಪೋಟೋ ಮತ್ತು ವಿಡಿಯೋ ತಗೊಂಡೆ. ಅಲ್ಲಿಂದ ಇನ್ನೊಂದು ಸತ್ರಕ್ಕೆ ಹೋದೆ ಅಲ್ಲಿಯ ಕಟ್ಟಡವನ್ನು ತುಳಸಿ ಮರದ ದಿಮ್ಮಿಗಳಿಂದಲೇ ಕಟ್ಟಲಾಗಿತ್ತು!.’

ಅಲ್ಲಿಯ ಮೂಲನಿವಾಸಿಗಳು ಸರಳಾತಿ ಸರಳರು.  ಸ್ಥಳೀಯವಾಗಿ ಹೇರಳವಾಗಿ ಸಿಗುವ ಬಿದಿರಿನಿಂದ ಕಟ್ಟಿರುವ ತಟ್ಟಿ ಮನೆಗಳು. ಅವು ನೆಲದಿಂದಲೇ ಗೋಡೆಯೆಬ್ಬಿಸಿ ಕಟ್ಟಿದ ಮನೆಗಳಲ್ಲ ; ಸದಾ ನೀರಲ್ಲಿ ಮುಳುಗುವ ಪ್ರದೇಶವಾದ ಕಾರಣ ಎತ್ತರದ ಕಂಬಗಳ ಮೇಲೆ ಮನೆ ಕಟ್ಟಿಕೊಂಡಿರುತ್ತಾರೆ. ಕಳೆದ ವರ್ಷದಿಂದ ಇದು ಜಿಲ್ಲೆಯಾಗಿ ಪರಿವರ್ತನೆಗೊಂಡಿರುವುದರಿಂದ ಇಲ್ಲಿ ಪೋಲಿಸ್, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಯೂ ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳು, ಸ್ಕೂಲ್ ಕಾಲೇಜುಗಳೂ ಇವೆ. ಚಿಕ್ಕದಾದ ಮೂರ್ನಾಲ್ಕು ಪೇಟೆಗಳಿವೆ. ಈಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಈ ಜಿಲ್ಲೆಗೆ ಸೇರಿದವರು.

 ಕೇಂದ್ರ ಸರಕಾರವು ಪ್ರೆಂಚ್ ಸರಕಾರದ ಸಹಯೋಗದಲ್ಲಿ ಇದನ್ನು ಕಾರ್ಬನ್ ಮುಕ್ತ ಜಿಲ್ಲೆಯಾಗಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಹಾಗಾದಲ್ಲಿ ಅದು ನಮ್ಮ ದೇಶದ ಮೊದಲ ಕಾರ್ಬನ್ ಮುಕ್ತ ಜಿಲ್ಲೆಯೆನಿಸಲಿದೆ..
ಮಾಜೂಲಿ ಜನರಿಗೆ ವ್ಯವಸಾಯವೇ ಮುಖ್ಯ ವ್ರುತ್ತಿ. ಭತ್ತ ಬಹುಮುಖ್ಯ ಬೆಳೆ. ಇಲ್ಲಿ ನೂರಕ್ಕೂ ಹೆಚ್ಚಿನ ಭತ್ತದ ತಳಿಗಳಿವೆ. ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡುತ್ತಾರೆ. ಡೈರಿ, ಕುಂಬಾರಿಕೆ, ಕೈಮಗ್ಗ ನೇಕಾರಿಕೆ ಇತರ ಉಪಉದ್ಯೋಗಗಳು. ಸಾಲ್ಮರ ವಿಲೇಜ್ ನಲ್ಲಿ ಕೈಗಳಿಂದಲೇ ಮಡಕೆ ಮತ್ತು ಮುಖವಾಡಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಈ ಕಲೆಗಾರಿಕೆಯ ಬಗ್ಗೆ ಅರ್ಕ್ಯಾಲಾಜಿಸ್ಟ್ ಗಳು ಆಳವಾದ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಇದು ಹರಪ್ಪಾ ಮೊಹೆಂಜದಾರೋ ನಾಗರಿಕತೆಯ ನಡುವಿನ ಮಿಸ್ಸಿಂಗ್ ಲಿಂಕ್ ಎನ್ನುತ್ತಾರೆ.
ಮಜೂಲಿ ವೈಷ್ಣವಪಂಥದ ಆರಾಧನ ಭೂಮಿಯಾಗಿರುವ ಕಾರಣದಿಂದಾಗಿ ಹೋಳಿ\ ರಾಸಲೀಲಾ ಈ ದ್ವೀಪದ ಸಂಭ್ರಮದ ಹಬ್ಬ. ಇಲ್ಲಿಗೆ ಹಲವು ಜಾತೀಯ ಅಪರೂಪದ ಪಕ್ಷಿಗಳು ಬರುತ್ತವೆ. ಈ ಕಾರಣದಿಂದ ಪಕ್ಷಿಪ್ರಿಯರಿಗೂ ಇದು ಆಕರ್ಷಕ ಜಾಗ. ಇಲ್ಲಿ ಅಪರೂಪದ ಔಷಧಿಯ ಸಸ್ಯಗಳೂ ಇವೆ.

ನಮ್ಮಲ್ಲಿ ಸಮಯ ಬಹಳ ಕಮ್ಮಿ ಇತ್ತು. ಹಾಗಾಗಿ ಮಜೂಲಿಯಲ್ಲಿ ನಡೆಯುತ್ತಿದ್ದ ನಮಾಮಿ ಬ್ರಹ್ಮಪುತ್ರಾ ಉತ್ಸವನ್ನು ಕಾರಿನಲ್ಲೇ ನೋಡುತ್ತಾ ಪೆರ್ರಿ ನಿಲ್ಲುವ ಜಾಗಕ್ಕೆ ಬಂದೆವು. ಹಾಗೆ ಬರುತ್ತಿರುವಾಗ ಗೊತ್ತಾಯ್ತು, ಬ್ರಹ್ಮಪುತ್ರಾದ ಹರವು ಎಷ್ಟು ದೊಡ್ಡದೆಂದು. ನದಿ ಬೀಚ್ ಮೇಲೆಯೇ ನಾವು ಆರು ಕಿಮೀ ಬಂದೆವು. ಪೆರ್ರಿ ನಿಲ್ಲುವ ಜಾಗದಲ್ಲಿ ಟೀ ಸ್ಟಾಲ್, ಪ್ಯಾನ್ಸಿ ಸ್ಟೋರ್ ಸೇರಿದಂತೆ ಹಲವಾರು ಅಂಗಡಿಗಳಿದ್ದವು. ಪೆರ್ರಿಯಲ್ಲಿ ಬಂದ ಜನರನ್ನು ಕರೆದೊಯ್ಯಲ್ಲು ಹತ್ತರು ವಾಹನಗಳು ನಿಂತಿದ್ದವು.
ಮಜೂಲಿಗೆ ಬರುವಾಗ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಬಂದಿದ್ದೆವು. ಹೋಗುವಾಗ ಬ್ರಹ್ಮಪುತ್ರನ ಒಡಲಲ್ಲಿ ಓಲಾಡುತ್ತಾ ತೇಲಾಡುತ್ತಾ ಮೌನವಾಗಿ ಸಾಗುತ್ತಿದ್ದೆವು. ನಿಮಿಟಿ ಘಾಟ್ ಎಂಬ ನದಿ ಬಂದರು ತಲುಪಲು ಎರಡುವರೆ ಘಂಟೆಯ ನದಿ ಪಯಣ. ಆಗಾಗ ನೀಲ ಆಗಸದತ್ತ  ನೋಟ ಬೀರುತ್ತಾ ದಿಗದಂಚಿನಲ್ಲಿ ಎಲ್ಲಾದರೂ ಭೂಮಾತೆ ಬ್ರಹ್ಮಪುತನನ್ನು ಆಲಂಗಿಸುತ್ತಿರುವ ದ್ರುಶ್ಯ ಕಾಣಸಿಗಬಹುದೇ ಅಂತ ಕ್ಯಾಮಾರದಲ್ಲಿ ಕಣ್ಣಿಟ್ಟು ಕೂತೆ. ನಿರಾಶೆಯಾಯ್ತು.. ನೀರು ಎಲ್ಲೆಲ್ಲೂ ನೀರು.. ಹಿಂದೆ ತಿರುಗಿದರೆ ಮಜೂಲಿ ಬರಬರುತ್ತಾ ಚುಕ್ಕೆಯಾಗಿ ನೀರಿನಲ್ಲಿ ಲೀನವಾಯ್ತು.

[ ಪ್ರಜಾವಾಣಿಯ ಸಾಪ್ತಾಹಿಕ ’ಮುಕ್ತಛಂಧದಲ್ಲಿ ಪ್ರಕಟವಾದ ಬರಹ ]