Saturday, May 29, 2010

ಸುಚೇಂದ್ರಪ್ರಸಾದರ ’ಪ್ರಪಾತ’ಕ್ಕೆ ಹರಿದು ಬಂದ ತೊರೆಗಳು





ಅನ್ನವನ್ನು ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋದ ನನ್ನೂರ ಜನರನ್ನು ತವರೂರಿಗೆ ಹೊತ್ತು ತರುತ್ತಿದ್ದ ವಿಮಾನ ಮೇ ೨೨ರ ಶನಿವಾರ ಬೆಳಿಗ್ಗೆ ಬಜ್ಪೆ ಸಮೀಪದ ಕೆಂಜಾರು ಗುಡ್ಡದ ೩೦೦ ಅಡಿ ಪ್ರಪಾತಕ್ಕೆ ಬಿದ್ದು ಹೊತ್ತಿ ಉರಿಯಿತು. ೬ ಸಿಬ್ಬಂದಿ, ೧೮ ಕಂದಮ್ಮಗಳು ಸೇರಿದಂತೆ ೧೫೮ ಜನ ಉರಿದು ಕರಕಲಾದರು. ೮ ಜನ ಅದೃಷ್ಟವಂತರು ಬದುಕುಳಿದರು.

ಮೃತ್ಯು ಬಂದು ಅಪ್ಪಳಿಸಿದ ಪರಿಯನ್ನು, ಆಪ್ತರ ಆಕ್ರಂದನವನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿ ಭಾರವಾದ ಮನಸ್ಥಿತಿಯಲ್ಲಿರುವಾಗಲೇ ಗೆಳತಿ ಸುಧಾಶರ್ಮ ಚವತ್ತಿ ಪೋನ್ ಮಾಡಿ ಮರುದಿನ ಸುಚೇಂದ್ರಪ್ರಸಾದರ ’ಪ್ರಪಾತ’ದ ಶೋ ಇದೆ ಹೋಗೋಣ್ವಾ? ಎಂದರು.

ಒಂದು ಪ್ರಪಾತದಿಂದ ಇನ್ನೊಂದು ಪ್ರಪಾತಕ್ಕೆ ಯಾನ ಮಾಡಲು ಮನಸ್ಸನ್ನು ಸಿದ್ಧ ಮಾಡಿಕೊಳ್ಳತೊಡಗಿದೆ. ನಟ ಸುಚೇಂದ್ರಪ್ರಸಾದ್ ರಂಗಭೂಮಿಯ ಹಿನ್ನೆಲೆಯೆಯವರು. ರಂಗಭೂಮಿ ಎಂಬುದು ಎಲ್ಲಾ ಕಲೆಗಳ, ಇನ್ನೊಂದರ್ಥದಲ್ಲಿ ಎಲ್ಲಾ ತೆವಲುಗಳ ಸಂಗಮ ಸ್ಥಳ. ಹಾಗಾಗಿ ಅವರ ಸಾಹಸವನ್ನೊಮ್ಮೆ ನೋಡೋಣವೆಂದುಕೊಂಡು ಭಾನುವಾರ ಮಧ್ಯಾಹ್ನ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಿಜಾಯ್ಸ್ ಗೆ ಹೋದೆ.

ಭಾರದ್ವಾಜ ಮುನಿ ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ ಕುರಿತಾದ ’ಯಂತ್ರ ಸಾರಸ್ವ’ ಕ್ಕೆ ಭಾಷ್ಯವನ್ನು ಬರೆದಿರುವ ಅನೇಕಲ್ ಸುಬ್ಬರಾಯ ಶಾಸ್ತ್ರಿ ಕುರಿತಾದ ಚಿತ್ರ ’ಪ್ರಪಾತ’. ಹಾಗೆಂದು ಅದು ಸಾಕ್ಷ್ಯ ಚಿತ್ರವಲ್ಲ. ಸಾಕ್ಷ್ಯ ಚಿತ್ರದಂತೆ ಆರಂಭಗೊಂಡರೂ ಮುಂದೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಾ ಎರಡು ಗಂಟೆಗಳ ಪೂರ್ಣ ಪ್ರಮಾಣದ ಚಲನಚಿತ್ರವಾಗಿ ರೂಪಾಂತರ ಪಡೆದಿದೆ. ಇಂತಹ ಚಿತ್ರವನ್ನು ನಿರ್ಮಿಸುವ ಸಾಹಸ ಮಾಡಿದವರು ಮಾರುತಿ ಎಸ್ ಜಡಿ ಅವರ್.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರು ತಾಲೂಕಿನಲ್ಲಿ೧೮೧೬ರಲ್ಲಿ ಜನಿಸಿದ ಶಾಸ್ತ್ರಿಗಳು ’ಯಂತ್ರ ಸಾರಸ್ವ’ ವನ್ನು ಅಧ್ಯಯನ ಮಾಡಿ ೧೯೦೩ರಲ್ಲೇ ಸ್ವದೇಶಿ ನಿರ್ಮಿತ ವಿಮಾನವನ್ನು ಉಡಾಯಿಸಿದ್ದರೆಂಬ ಪ್ರತಿತಿಯಿದೆ. ಕೇವಲ ಒಂದೇ ಶತಮಾನದಲ್ಲಿ ಐತಿಹ್ಯವಾಗಿ ನಂತರ ದಂತಕಥೆಯಾಗಿ ವಿಸ್ಮೃತಿಗೆ ಸಂದಿದ ಸಾಧಕರಿವರು.

ಇಂಥ ಸಾಧಕರನ್ನು’ ಅವರ ಸಾಧನೆಯನ್ನು ಅನ್ವೇಶಕ ದೃಷ್ಟಿಯಿಂದ ನೋಡಿದ್ದಾರೆ ನಿರ್ದೇಶಕ ಸುಚೇಂದ್ರಪ್ರಸಾದ್. ಶಾಸ್ತ್ರೀಯಂಥ ಮೇರುಸದೃಷ ವ್ಯಕ್ತಿತ್ವದವರನ್ನು ಮತ್ತವರ ಸಾಧನೆಯನ್ನು ನಾವು ಪ್ರಪಾತದಲ್ಲಿ ನಿಂತು ನೋಡುತ್ತಿದ್ದೇವೆ. ಅಥವ ಅವರ ಜ್ನಾನದ ಆಳವನ್ನು ಶಿಖರದ ತುದಿಯಲ್ಲಿ ನಿಂತು ನೋಡುತ್ತಿದ್ದೇವೆ. ಅದು ಬೌದ್ಧಿಕತೆಯ ಪ್ರಪಾತ ಎಂಬುದು ಪ್ರಸಾದ್ ಗ್ರಹಿಕೆ.

ಅಪರೂಪಕ್ಕೆ ಆ ಜ್ನಾನಶಿಖರಗಳನ್ನು ಮುಟ್ಟುವ ಪ್ರಯತ್ನ ಮಾಡಿದವರು ಆ ಜ್ನಾನವನ್ನು ಬೇರೆಯವರಿಗೂ ಹಂಚದೆ ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನಿಸುತ್ತಾರೆ; ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಅಲ್ಪರಂತೆ ವರ್ತಿಸುತ್ತಾರೆ. ಇಂಥ ಅರೆಬೆಂದವರ ಪಾತ್ರದಲ್ಲಿ ದತ್ತಣ್ಣ, ಕೃಷ್ಣ ಅಡಿಗ, ಶಿವರಾಂ, ವಿದ್ಯಾಮೂರ್ತಿ, ಸೇತುರ್‍ಆಂ ಪಾತ್ರದ ಒಳಹೊಕ್ಕು ಅಭಿನಯಿಸಿದ್ದಾರೆ. ಮಾತ್ರವಲ್ಲ ವರ್ತಮಾನದಲ್ಲಿರುವ ಹಲವರನ್ನು ಅನುಕರಣೆ ಮಾಡಿದ್ದಾರೆ. ಅನ್ವೇಶಕನ ಪಾತ್ರದಲ್ಲಿ ಅಮಾನ್ ಅವರದು ಸಂಯಮದ ಅಬಿನಯ. ಆತನ ವಿದ್ಯಾರ್ಥಿ ಮಿತ್ರನ ಪಾತ್ರದಲ್ಲಿರುವ ಸಂತೋಷ್, ಅಡಿಗರ ’ವರ್ಧಮಾನ’ ಕವನದ ನಾಯಕನನ್ನು ನೆನಪಿಸುತ್ತಾರೆ. ಕೆ.ಎಸ್.ಎಲ್ ಸ್ವಾಮಿ, ಸ್ರೀನಿವಾಸಪ್ರಭು ಸೇರಿದಂತೆ ಪ್ರತಿಯೊಬ್ಬರದ್ದೂ ಸಹಜಾಭಿನಯ. ಚಿತ್ರದ ಒಟ್ಟಂದಕ್ಕೆ ಶಶಿಧರ್.ಕೆ ಅವರ ಕ್ಯಾಮರ ವರ್ಕ್ ಮತ್ತು ಎಡಿಟರ್ ಗಳಾದ ಲಿಂಗರಾಜು ಮತ್ತು ನಾಗೇಶ್ ರ ಕಾಣಿಕೆ ದೊಡ್ಡದು.

’ಪ್ರಪಾತ’ದಲ್ಲಿ ನಿರ್ದೇಶಕರ ಪ್ರತಿಭೆ ಚಿಕ್ಕಚಿಕ್ಕ ಶಶಕ್ತ ತೊರೆಗಳಾಗಿ ಪ್ರಪಾತಕ್ಕೆ ಹರಿದಿದೆ-ಆಹ್ವಾನಿತ ಪ್ರೇಕ್ಷಕರು ಕೂಡಾ ತೊರೆಗಳಾಗಿ ಹರಿದು ಬಂದಿದ್ದಾರೆ. ಆದರೆ ಅವೆಲ್ಲಾ ಒಂದಾಗಿ ಜೀವನದಿಯಾಗಿ ಹರಿದ ಅನುಭವವಾಗುವುದಿಲ್ಲ. ಅದರೂ ಇಷ್ಟೆಲ್ಲಾ ಚಿಂತನೆಗೆ, ವಾದಕ್ಕೆ, ಊಹೆಗೆ ಕಾರಣವಾದ ಈ ಚಿತ್ರವನ್ನು ಖಂಡಿತವಾಗಿಯೂ ಒಮ್ಮೆ ನೋಡಬಹುದು. ಸಧ್ಯದಲ್ಲಿಯೇ ನಿರ್ಧೇಶಕರು ಇದರ ಇನ್ನೊಂದು ಪ್ರದರ್ಶನವನ್ನು ಏರ್ಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

[ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ಬರಹ ]





Monday, May 10, 2010

.....ಎನ್ನನು ಮಾರಿ ಕಾಂಚಾಣವನ್ನು ಕೊಂಡರೇ?






’ಹರಕೆಯ ಕುರಿ’ ಎಂಬುದೊಂದು ನಾಟಕವನ್ನು ಚಂದ್ರಶೇಖರ ಕಂಬಾರರು ೧೯೮೩ರಲ್ಲಿ ಬರೆದಿದ್ದಾರೆ. ಇದರಲ್ಲಿ ರಾಜಕೀಯವೆಂಬುದು ನಮ್ಮ ಮನೆಯ ಪಡಸಾಲೆ, ಅಡುಗೆಮನೆಗಳನ್ನು ನಮಗರಿವಿಲ್ಲದಂತೆ ಆವರಿಸಿಕೊಳ್ಳುತ್ತಿರುವ ಪರಿಯನ್ನು ಸೂಕ್ಷವಾಗಿ ಹಿಡಿದಿಟ್ಟಿದ್ದಾರೆ. ಗಂಡ-ಹೆಂಡತಿಯೆಂಬ ಎರಡೇ ಪಾತ್ರವಿರುವ ಈ ನಾಟಕ ಬದಲಾಗುತ್ತಿರುವ ಮಧ್ಯಮ ವರ್ಗದ ತಳಮಳದ ಜೀವನಶೈಲಿಯನ್ನು ಹಿಡಿದಿಡುವ ಪ್ರಯತ್ನ ಮಾಡಿತ್ತು. ಅನಂತರ ಅದು ಸಿನಿಮಾ ಆಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆಯಿತು.

ಈಗ ರಾಜಕೀಯವೆಂಬುದು ಮನೆಯನ್ನು ಮಾತ್ರವಲ್ಲ ಮನಸ್ಸಿನೊಳಗೂ ಪ್ರವೇಶ ಪಡೆದಿದೆ. ಭಾವನೆಗಳನ್ನೂ ಆಳತೊಡಗಿದೆ. ಮನುಷ್ಯ ಸಂಬಂಧಗಳನ್ನು ಹಾಳುಮಾಡತೊಡಗಿದೆ. ಮಾನವೀಯವಾಗಿ ನೋಡಬೇಕಾದ ಘಟನೆಗಳಿಗೂ ರಾಜಕೀಯ ಮೆತ್ತಲಾಗುತ್ತಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿಯಾಗಿದ್ದ ಹಾಲಪ್ಪನವರ ಅತ್ಯಾಚಾರ ಪ್ರಕರಣವನ್ನೇ ನೋಡಿ; ಅಲ್ಲಿ ಸಚಿವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಚಂದ್ರಾವತಿ ಎಂಬ ಮಹಿಳೆ ದೂರು ಕೊಟ್ಟಿದ್ದಾರೆ. ಜೊತೆಗೆ ಅತ್ಯಾಚಾರ ನಡೆಯಿತ್ತೆನ್ನಲಾದ ಸಂದರ್ಭದ ವಿಡಿಯೋ ಕ್ಲಿಪ್ಪಿಂಗ್ಸ್ ಅನ್ನು ಸಾಕ್ಶ್ಯವಾಗಿ ನೀಡಲಾಗಿದೆ. ಕೇಸ್ ರಿಜಿಸ್ಟರ್ ಮಾಡಿಕೊಂಡು ಅರೋಪಿಯನ್ನು ಬಂದಿಸಲು ಇಷ್ಟು ಸಾಕು. ಯಾಕೆಂದರೆ ಭಾರತೀಯ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿದೆಯೆಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದೇ ಘಟನೆಯ ಗಂಭೀರತೆಯನ್ನು ಸೂಚಿಸುತ್ತದೆ. ಆಕೆಗೆ ಗೊತ್ತಿದೆ. ಭವಿಷ್ಯದಲ್ಲಿ ತನ್ನನ್ನು ಮತ್ತು ತನ್ನ ಮಕ್ಕಳನ್ನು ಸಮಾಜ ತುಚ್ಚವಾಗಿ ಕಾಣುತ್ತದೆಯೆಂದು. ಹಾಗಿದ್ದು ಕೂಡಾ ಆಕೆ ಆ ರಿಸ್ಕ್ ತೆಗೆದುಕೊಳ್ಳುತ್ತಾಳೆಂದರೆ ಅದಕ್ಕೆ ಬಲವಾದ ಕಾರಣವಿರಲೇಬೇಕು. ಆ ಕಾರಣ ಏನೆಂಬುದು ನಿಷ್ಪಕ್ಷಪಾತವಾದ ತನಿಖೆಯಿಂದ ಗೊತ್ತಾಗಬೇಕು.
ದೃಶ್ಯಮಾಧ್ಯಮದಲ್ಲಿ ಬಾಡಿಲಾಂಗ್ವೇಜ್ ಎಂಬುದು ಬಹಳ ಪ್ರಮುಖವಾದುದು. ಹಾಲಪ್ಪ ಅತ್ಯಾಚಾರ ಪ್ರಕರಣದ ವಿಡಿಯೋ ಕ್ಲಿಪ್ಪಿಂಗ್ಸ್ ನೋಡುತ್ತಿದ್ದರೆ ಇದರ ನಿರ್ದೇಶಕ ಆಕೆಯ ಗಂಡ ವೆಂಕಟೇಶಮೂರ್ತಿಯೇ ಇರಬಹುದೆಂಬ ಸಂಶಯ ಮೂಡುತ್ತದೆ. ಮನೆಯ ಮರ್ಯಾದೆಯನ್ನು ಬೀದಿಗೆ ತರುವುದರಿಂದ ಆತನಿಗೇನು ಲಾಭವಿದೆ ಎನ್ನುವ ಪ್ರಶ್ನೆ ಸಹಜ. ಗಾಳಿ ಸುದ್ದಿಯ ಪ್ರಕಾರ ಹಾಲಪ್ಪನ ರಾಜಕೀಯ ಎದುರಾಳಿಗಳ ಜೊತೆ ವ್ಯವಹಾರ ಕುದುರಿಸಿ ಕಾಂಚಾಣವನ್ನು ಬಾಚಿಕೊಂಡಿದ್ದಾನೆ. ಆತನ ರಾಜಕೀಯ ವರ್ಚಸ್ಸು ಹೆಚ್ಚಾಗಿದೆ. ಗಂಡು ಹೆಣ್ಣಿನ ಆಪ್ತ ಸಂಬಂಧ ಕೂಡಾ ವ್ಯಾಪಾರಿಕರಣಗೊಳ್ಳುತ್ತಿರುವ ಪರಿಯಿದು.

ಸಭಾಪರ್ವದಲ್ಲಿ ದ್ರೌಪದಿಯನ್ನು ದುಶ್ಯಾಸನ ರಾಜಸಭೆಗೆ ಎಳೆದು ತಂದಾಗ ಆಕೆ ಅಲ್ಲಿದ್ದವರನ್ನು ಉದ್ದೇಶಿಸಿ ಹೀಗೆನ್ನುತ್ತಾಳೆ ” ಪತಿಗಳೆನ್ನನು ಮಾರಿ ಧರ್ಮ ಸ್ಥಿತಿಯನ್ನು ಕೊಂಡರು” ಈಗ ಚಂದ್ರಾವತಿಯದೂ ಅದೇ ಸ್ಥಿತಿ. ’ಎನ್ನ ಮಾನವನು ಮಾರಿ ಕಾಂಚಣವನು ಕೊಂಡರು’ ಎಂದು ಆಕೆ ಕಣ್ಣೀರು ಸುರಿಸಬೇಕಾಗಿದೆ. ಯಾಕೆಂದರೆ ಈಗ ಆಕೆಯ ಮೇಲೆ ನಿಜವಾದ ಅತ್ಯಾಚಾರ ನಡೆಯುತ್ತಿದೆ. ಮಾದ್ಯಮಗಳು ಆ ಕೆಲಸವನ್ನು ನಿರಂತರವಾಗಿ ನಡೆಸುತ್ತಿವೆ. ದೇಹದ ಮೇಲಾಗುವ ಅತ್ಯಾಚಾರ ತೊಳೆದರೆ ಹೋಗುತ್ತದೆ. ಆದರೆ ಮನಸ್ಸಿನ ಮೇಲಾಗುವ ಅತ್ಯಾಚಾರ? ಬಹುಶಃ ಪದ್ಮಪ್ರಿಯ ನೆನಪಿಗೆ ಬರುತ್ತಾರೆ. ಅದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇವತ್ತಿಗೂ ಗೊತ್ತಾಗಿಲ್ಲ. ಅದೊಂದು ”ಮರ್ಯಾದೆ ಕೊಲೆ” ಎಂಬ ಅನುಮಾನ ಆಗಲೂ ಇತ್ತು ಈಗಲೂ ಇದೆ..
ಗಂಡ ಅಂದರೆ ರಕ್ಷಕ. ಅರ್ಜುನನ ಬಿರುದೇ ನೋಡಿ ಮೂರು ಲೋಕದ ಗಂಡ. ರಕ್ಷಕನಾದವನೇ ಭಕ್ಷಕನಾದರೆ? ಮಹಿಳೆಯರನ್ನು ಮಾತೆಯರೆಂದು ಮಾತುಗಳಲ್ಲಿ ಗೌರವಿಸುವ ನಮ್ಮಬಿಜೆಪಿ ಸರಕಾರ ಕೃತಿಯಲ್ಲಿ ಅವರ ಮಾನವನ್ನು ಬೀದಿಯಲ್ಲಿ ಹರಾಜು ಹಾಕುತ್ತಿದೆ. ರಾಜಕೀಯದ ಚದುರಂಗದಾಟದಲ್ಲಿ ಅವರನ್ನು ದಾಳಗಳಂತೆ ಉಪಯೋಗಿಸಿಕೊಳ್ಳುತ್ತಿದೆ. ಶೋಭಾ ಕರಂದ್ಲಾಜೆಯ ಉದಾಹರಣೆಯೇ ಸಾಕಲ್ಲ...! ಯೆಡಿಯೂರಪ್ಪನನ್ನು ಮಣಿಸಲು ಶೋಭಳ ಚಾರಿತ್ಯವಧೆ ಮಾಡಲಾಯ್ತು. ಹಾಲಪ್ಪನನನ್ನು ಕೆಡವಲು ಚಂದ್ರಾವತಿಯ ಬಲಿ ಪಡೆಯಲಾಯಿತೇ? ರಾಜಕಾರಣಿಗಳು ಅಷ್ಟಮದಗಳಿಂದ ಬೀಗುತ್ತಿದ್ದಾರೆ. ಇದಕ್ಕೆ ರೇಣುಕಾಚಾರ್ಯ, ಗಣಿದೊರೆಗಳಿಗಿಂತ ಬೇರೆ ಉದಾಹರಣೆ ಬೇಕೆ?

ಇದನ್ನೆಲ್ಲಾ ಗಮನಿಸುತ್ತಿರುವಾಗ ಮತ್ತೆ ಕುಮಾರವ್ಯಾಸನೇ ನೆನಪಾಗುತ್ತಾನೆ. ”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ,ಬಡವರ ಬಿನ್ನಪವವಿನ್ನಾರು ಕೇಳುವರು, ಉರಿವುರಿವುತಿದೆ ದೇಶ ” ಅಧಿಕಾರದ ಚುಕ್ಕಾಣಿ ಹಿಡಿದವರು, ಸಾರ್ವಜನಿಕ ಬದುಕಿನಲ್ಲಿರುವವರು ಸಾಧ್ಯವಾದಷ್ಟೂ ಸಚ್ಛಾರಿತ್ಯ ಹೊಂದಿರಬೇಕು. ಇಲ್ಲವಾದರೆ ಇವರೆಲ್ಲಾ ವಿಷಯ ಲಂಪಟರು ಎಂಬ ಭಾವನೆ ಜನ ಸಾಮಾನ್ಯರಲ್ಲಿ ಮೂಡಿಬಿಡುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹಾಲಪ್ಪನ ಅತ್ಯಾಚಾರ ಪ್ರಕರಣದಂಥ ಘಟನೆಗಳು ಪದೇ ಪದೇ ನಡೆಯುತ್ತಿದ್ದರೆ, ಅದನ್ನು ಮಾಧ್ಯಮಗಳು ಅತಿರಂಜಿತವಾಗಿ ವರ್ಣಿಸುತ್ತಿದ್ದರೆ, ಅದು ಸಮಾಜದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ಮನೆಗೆ ಬರುವ ಪುರುಷ ಅಥಿತಿಗಳನ್ನು ಪತಿಯ ಅನುಪಸ್ಥಿತಿಯಲ್ಲೂ ನಾವು ಗೌರವದಿಂದ ಆಧರಿಸಿ ಸತ್ಕರಿಸುತ್ತೇವೆ. ಅದನ್ನು ಅಕ್ಕಪಕ್ಕದವರು ಅನುಮಾನದಿಂದ ನೋಡುವ ಸಂದರ್ಭ ಬಂದರೆ...?ಬಹುಶಃ ಬಿಜೆಪಿ ಸರಕಾರ ಮಹಿಳೆಯರನ್ನು ಹದಿನೈದನೆ ಶತಮಾನಕ್ಕೆ ಕೊಂಡೊಯ್ಯುತ್ತಿರಬೇಕು.
ಲೇಖನದ ಆರಂಭದಲ್ಲಿ ನಾಟಕಕಾರರನ್ನು ಪ್ರಸ್ತಾಪಿಸಿರುವುದು ಪ್ರಾಸಂಗಿಕವಲ್ಲ; ಉದ್ದೇಶ ಪೂರ್ವಕ. ಯಾಕೆಂದರೆ ಹಿಂದೆಲ್ಲಾ ಅನ್ಯಾಯವಾದಾಗ ನೈತಿಕ ಬೆಂಬಲಕ್ಕಾಗಿ ನಾವು ಸಾಹಿತಿ-ಕಲಾವಿದರತ್ತ ನೋಡುತ್ತಿದ್ದೆವು; ಮಾಧ್ಯಮದ ಬೆಂಬಲ ಕೋರುತಿದ್ದೆವು.ಅವರ ಪ್ರತಿಕ್ರಿಯೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೆವು. ಆದರೆ ಇಂದು ಸಾಹಿತಿಗಳು ಮೌನಕ್ಕೆ ಜಾರಿದ್ದಾರೆ. ಪತ್ರಿಕಾರಂಗ ಉಧ್ಯಮವಾಗಿದೆ. ಪತ್ರಕರ್ತರೆಲ್ಲಾ ಮದ್ಯವರ್ತಿಗಳಾಗುತ್ತಿದ್ದಾರೆ.ಸುದ್ದಿಯನ್ನೂ ಔತಣವನ್ನಾಗಿ ನೀಡುತ್ತಿದ್ದಾರೆ. ಅವರೆಲ್ಲರ ಒಂದು ಕೈ ಉಳ್ಳವರ ಜೇಬಿನಲ್ಲಿದೆ. ಕಾಲೊಂದು ರಾಜಕೀಯದಂಗಣದಲ್ಲಿದೆ.

ಮೊನ್ನೆ ಹಾಲಪ್ಪನವರು ರಾಜೀನಾಮೆ ಕೊಟ್ಟ ಮರುದಿನ ಕನ್ನಡದ ಸುದ್ದಿವಾಹಿನಿಯೊಂದು ಅವರ ಸಂದರ್ಶನ ಮಾಡುತ್ತಿತ್ತು. ಸಂದರ್ಶಕನ ಪ್ರಶ್ನೆಗಳಿಗೆ ಮಾಜಿ ಸಚಿವರು ತುಂಬು ಆತ್ಮವಿಶ್ವಾಸದಿಂದ ಉತ್ತರಿಸುತ್ತಿದ್ದರು. ತನ್ನ ರಕ್ಷಣೆಗೆ ಸರಕಾರ ಮತ್ತು ಪಕ್ಷ ಟೊಂಕ ಕಟ್ಟಿ ನಿಂತಿದೆ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಹಿಂದಿನ ದಿನ ಪತ್ರಿಕೆಯಲ್ಲಿ ಬಂದ ವರದಿಯ ಬಗ್ಗೆ ಕೇಳಿದಾಗ ”ಬರೆದವರೇನು ಕುಲದೀಪ್ ನಯ್ಯರಾ?” ಎಂದು ಪ್ರಶ್ನಿಸಿಬಿಟ್ಟರು ಮಾಜಿ ಸಚಿವ ಹರತಾಳ್ ಹಾಲಪ್ಪ. ಅದು ಪತ್ರಿಕೋಧ್ಯಮದ ನೈತಿಕತೆಗೆ ಎಸೆದ ಪ್ರಶ್ನೆಯಾಗಿತ್ತು. ಅರೋಪಿ ಸ್ಥಾನದಲ್ಲಿರುವ ರಾಜಕಾರಣಿಯೊಬ್ಬ ಲೈವ್ ಸಂದರ್ಶನವೊಂದರಲ್ಲಿ ಪತ್ರಕರ್ತನೊಬ್ಬನ ಬಗ್ಗೆ ಆ ರೀತಿ ವ್ಯಂಗ್ಯವಾಡುತ್ತಾನೆ ಎಂದರೇ? ಅಪರಾಧಿ ಭಾವದಿಂದ ಕುಗ್ಗಿ ಹೋಗಬೇಕಾದ ಸಂದರ್ಭವದು.

ಹೊಣೆಗಾರಿಕೆಯನ್ನು ಹೊರಬೇಕಾದವರೆ ಹೊಂದಾಣಿಕೆಯನ್ನು ಮಾಡಿಕೊಂಡರೆ ಜನಸಾಮಾನ್ಯರ ಪಾಡೆನು? ದುಡ್ಡು ಎಲ್ಲವನ್ನೂ ಆಳುತ್ತದೆ, ಕೊನೆಗೆ ಹೆಂಡತಿಯ ಶೀಲವನ್ನೂ ಕೂಡಾ ಎಂದಾಗಬಾರದಲ್ಲವೇ?

[ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ]