Monday, February 27, 2012

ಶಿಖರ ತಲುಪುವ ಮೊದಲೇ ಕುಸಿದ ’ಶಿಖರ ಸೂರ್ಯ’
”ಶಿಖರ ಸೂರ್ಯ’’ ರಂಗಾಯಣದ ಹೊಸ ನಾಟಕ. ಇದೇ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ’ಬಹುರೂಪಿ ನಾಟಕೋತ್ಸವ’ದ ಉದ್ಘಾಟನೆಯಂದು ಪ್ರದರ್ಶಿತವಾದ ನಾಟಕ. ಆ ಉತ್ಸವದಲ್ಲಿ ಜ್ನಾನಪೀಠ ವಿಜೇತರ ಕೃತಿಗಳನ್ನು ಆಯ್ದುಕೊಂಡು ಅದಕ್ಕೆ ’ಜ್ನಾನ ಪೀಠ ರಂಗೋತ್ಸವ’ ಎಂದು ಶೀರ್ಷಿಕೆಯನ್ನು ನೀಡಲಾಗಿತ್ತು.
ಶಿಖರ ಸೂರ್ಯ ಚಂದ್ರಶೇಖರ ಕಂಬಾರರ ಇತ್ತೀಚೆಯ ಮತ್ತು ಅವರ ಐದನೆಯ ಕಾದಂಬರಿ. ಜನಪದ ಮಾಹಾಕಾವ್ಯದ ಗುಣಲಕ್ಷಣಗಳನ್ನು ಹೊಂದಿರುವ ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದವರು ರಂಗಾಯಣದವರೇ ಆದ ಎಸ್. ರಾಮನಾಥ್ ಅವರು. ನಿರ್ದೇಶನ, ರಂಗಾಯಣದ ಪ್ರಸಕ್ತ ನಿರ್ದೇಶಕರಾದ ಬಿ.ವಿ. ರಾಜಾರಂ.
ಕಂಬಾರರಿಗೆ ರಂಗಗೌರವ ಸಮರ್ಪಿಸುವ ಸಲುವಾಗ ಬೆಂಗಳೂರಿನ ಸಾಂಸ್ಕೃತಿಕ ಸಂಘಟನೆ ’ಭಾಗವತರು’ ಕಂಬಾರರ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿತ್ತು. ಅಲ್ಲಿ ಸ್ಪಂದನ ತಂಡದಿಂದ ಬಿ. ಜಯಶ್ರೀ ನಿರ್ದೇಶನದ ’ಕರಿಮಾಯಿ. ಪ್ರಯೋಗರಂಗ ತಂಡದಿಂದ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ’ಶಿವರಾತ್ರಿ’ ಬೆನಕ ತಂಡದಿಂದ ಬಿ.ವಿ. ಕಾರಂತ ನಿರ್ದೇಶನದ ’ಜೋಕುಮಾರ ಸ್ವಾಮಿ’ ಮತ್ತು ರಂಗಾಯಣ ತಂಡದಿಂದ ಡಾ. ಬಿ.ವಿ.ರಾಜಾರಾಂ ನಿರ್ದೇಶನದ ’ಶಿಖರ ಸೂರ್ಯ’ ನಾಟಕಗಳು ಪ್ರದರ್ಶಿಸಲ್ಪಟ್ಟವು.
’ಶಿಖರ ಸೂರ್ಯ’ದ ಕಥೆ ಮೇಲ್ನೋಟಕ್ಕೆ ಸರಳ. ಅದು ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಬಿದ್ದ ಶಿಖರಸೂರ್ಯನೆಂಬ ಸಾಹಸಿಯ ದುರಂತ ಕಥೆ. ಅದು ಒಳಿತು ಕೆಡುಕುಗಳ ನಡುವಿನ ಸಂಘರ್ಷದ ಕಥೆಯೂ ಹೌದು. ಕಂಬಾರರನ್ನು ಓದಿದವರಿಗೆ ಗೊತ್ತಿದೆ. ಅವರ ಎಲ್ಲಾ ಕೃತಿಗಳಲ್ಲಿ ಒಂದು ಆದರ್ಶ ರಾಜ್ಯದ ಕಲ್ಪನೆಯಿರುತ್ತದೆ. ಅದು ಶಿವಾಪುರವೆಂಬ ಜನಪದರ ಕಲ್ಪನೆ..”ಶಿಖರ ಸೂರ್ಯ’ ನಾಟಕ ತೆರೆದುಕೊಳ್ಳುವುದೇ ಶಿವಾಪುರದಿಂದ ಮತ್ತು ’ಎಲ್ಲರೂ ಸುಖವಾಗಿದ್ದರು’ ಎಂಬ ಜನಪದದ ಆಶಯದೊಂದಿಗೆ ಇಲ್ಲಿಯೇ ಅಂತ್ಯಗೊಳ್ಳುತ್ತದೆ. ಇದರ ಮಧ್ಯೆ ನಡೆಯುವ ಹತ್ತಾರು ಘಟನೆಗಳು, ಅನಿರೀಕ್ಷಿತ ತಿರುವುಗಳು ನಾಟಕದಲ್ಲಿ ನಡೆಯುತ್ತದೆ. ಶಿವಾಪುರವೆಂಬ ಒಳಿತುನೂರಿಗೆ ವಿರುದ್ಧವಾಗಿ ಕನಕಗಿರಿಯೆಂಬ ಕೆಡುಕಿನೂರಿದೆ. ಅಲ್ಲಿ ವರ್ತಕರದೇ ಕಾರುಬಾರು.ಅಲ್ಲಿಯ ರಾಜ ವರ್ತಕರ ಕೈಗೊಂಬೆ. ರಾಣಿ ಮಂತ್ರಿಯ ತೋಳಬಂಧಿ. ಆ ರಾಣಿಗೂ ಆಂತರ್ಯದಲ್ಲಿ ಶಿವಾಪುರದ ಬೈರಾಗಿ ಶಿವಪಾದನ ಮೇಲೆ ಆಕರ್ಷಣೆ.
ಒಂದು ರೀತಿಯಲ್ಲಿ ’ಶಿಖರ ಸೂರ್ಯ’ ಚಿನ್ನಮುತ್ತನೆಂಬ ಯುವಕ ಕಲಾವಿದನಾಗಲು ಹಂಬಲಿಸಿ, ವಿಫಲನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ, ಶಿವಾಪುರದ ಮುಗ್ಧ ದಂಪತಿಗಳಾದ ಜಟ್ಟಿಗ ಮತ್ತು ಬೆಳ್ಳಿಯ ಆರೈಕೆಯಲ್ಲಿ ಮತ್ತೆ ಆರೋಗ್ಯಪಡೆದು, ಕೊನೆಗೆ ಆತ ಬೆಳ್ಳಿಯ ಮೇಲೆ ಆಸೆಪಟ್ಟು ಸಾಧ್ಯವಾಗದಾದಾಗ ಜಯಸೂರ್ಯನೆಂದು ಹೆಸರು ಬದಲಾಯಿಸಿಕೊಂಡು ಅಮ್ಮನ ಬೆಟ್ಟದಲ್ಲಿರುವ ಶಿವಪಾದನ ಬಳಿಬಂದು ಶಿಷ್ಯತ್ವ ಸ್ವೀಕರಿಸಿ ವಜ್ರದೇಹಿಯಾಗುತ್ತಾನೆ.ಅನಂತರದಲ್ಲಿ ಶಿವಪಾದನಿಂದ ಹೊರದೂಡಲ್ಪಟ್ಟು ಬೆಳ್ಳಿಯ ವ್ಯಾಮೋಹದಿಂದ ಜಟ್ಟಿಗನನ್ನು ಕೊಲೆಮಾಡಿ ಅವಳಿಂದ ತಿರಸ್ಕೃತನಾಗಿ ಕನಕಪುರಿಗೆ ಬಂದು ಶಿಖರಸೂರ್ಯನಾಗುತ್ತಾನೆ. ಅಲ್ಲಿ ರಾಜವೈದ್ಯನಾಗಿ ಜನಪ್ರಿಯನಾಗುತ್ತಾನೆ. ರಾಜಕುಮಾರಿಯನ್ನು ಮದುವೆಯಾಗುತ್ತಾನೆ. ಅನಂತರ ನಡೆಯುವುದೆಲ್ಲಾ ಆತನ ಮಹತ್ವಾಂಕ್ಷೆಯ ಕುತಂತ್ರಗಳೇ. ಕೊನೆಗೆ ಆತ ರಾಜ್ಯವನ್ನೂ ಪಡೆಯುತ್ತಾನೆ, ರಾಣಿಯನ್ನೂ ಕೂಡಾ. ಆದರೆ ಆತ ಆ ವೇಳೆಗೆ ವಿಷಪುರುಷನಾಗಿ ಬದಲಾಗಿದ್ದ ಕಾರಣದಿಂದ ರಾಣಿ ಸತ್ತು ಹೋಗುತ್ತಾಳೆ. ಕನಕ ಪುರಿಯಲ್ಲಿ ಎಲ್ಲೆಲ್ಲೂ ಚಿನ್ನವೇ ತಿನ್ನಲು ಧಾನ್ಯವಿಲ್ಲ. ಯಾಕೆಂದರೆ ಧಾನ್ಯವನ್ನೆಲ್ಲಾ ಶಿಖರ ಸೂರ್ಯ ಚಿನ್ನವಾಗಿ ಬದಲಾಯಿದ್ದಾನೆ. ಆತ ಮನುಷ್ಯತ್ವ ಕಳೆದುಕೊಳ್ಳುತ್ತಾ ಹೋಗುತ್ತಾನೆ.. ..ಅದರೆ ಶಿವಾಪುರದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ನಿನ್ನಡಿಯೆಂಬ ಶಿವಪಾದ ವಸ್ತ್ರದಲ್ಲಿ ಮೂರು ಪಾವು ಭತ್ತ ಕಟ್ಟಿಕೊಂಡು, ಅದರಲ್ಲಿ ಆನ್ನಮಾಡಿ ತನಗೆತೃಪ್ತಿಯಾಗುವಂತೆ ಊಟ ಬಡಿಸಬಲ್ಲ ಯೋಗ್ಯ ವದುವನ್ನು ಹುಡುಕಿಕೊಂಡು ಹೊರಟು ಶಿಖರಸೂರ್ಯನ ಮಗಳನ್ನೇ ಪಡೆಯುತ್ತಾನೆ. ಆದರೆ ಶಿಖರ ಸೂರ್ಯ ಆಕೆಯನ್ನೇ ಕೊಲ್ಲಲೆಳಸುತ್ತಾನೆ..ಕೊನೆಯಲ್ಲಿ ನಿನ್ನಡಿಯಿಂದ ತಿರುಮಂತ್ರ ಹಾಕಿಸಿಕೊಂಡು ಚಿನ್ನವೆಲ್ಲಾ ಮೂಲಸ್ಥಿತಿಗೆ ಬಂದು ಆತನಿಗೆ ರಸವಿಧ್ಯೆಯನ್ನು ಹೇಳಿಕೊಟ್ಟ ನಾಗಾರ್ಜುನ ಶಾಪಕ್ಕೆ ಗುರಿಯಾಗಿ ದುರಂತವಪ್ಪುತ್ತಾನೆ.
”ಶಿಖರ ಸೂರ್ಯ’’ದ ಶಿಖರ ಯಾವುದು? ಅದು ಗೊತ್ತಾದರೆ, ನಾಟಕದ ಓಘ ಆ ಕಡೆಗೇ ಇರುತಿತ್ತು.. ಕಂಬಾರರ ಎಲ್ಲಾ ಕೃತಿಗಳ ಮೂಲದ್ರವ್ಯ ಸೆಕ್ಸ್ ಮತ್ತು ಅಧ್ಯಾತ್ಮದ ಹುಡುಕಾಟ. ಅದಕ್ಕವರು ಜಾನಪದದ ಆಕರಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಹಾಗೆ ಮಾಡುತ್ತಲೇ ಸಮಕಾಲೀನ ಸಮಸ್ಯೆಗಳೊಡನೆ ಮುಖಾಮುಖಿಯಾಗುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಕೂಡಾ ಅದೇ ಹುಡುಕಾಟ. ಮತ್ತು ಅದೇ ಆಕರ. ಹಾಗಾಗಿ ನಾಟಕದುದ್ದಕ್ಕೂ ರೂಪಕಗಳೇ ತುಂಬಿವೆ. ಇಲ್ಲಿ ಚಿನ್ನದ ಹಪಹಪಿಕೆ ಭೋಗ ಸಂಕೇತವಾಗಿ ಬರುತ್ತದೆ.
ನಿಜ, ನಾಟಕದ ಹರವು ದೊಡ್ಡದು. ಅದನ್ನೆಲ್ಲಾ ಯಥಾವತ್ತಾಗಿ ತರುವ ಭರದಲ್ಲಿ ನಾಟಕ ಸೊರಗಿದೆ. ಅದರ್ ಜೊತೆಗೆ ನಾಟಕದ ನಿರೂಪಣೆಗೆ ಐದೈದು ಮಂದಿ ಜೋಗತಿಯರು ಮತ್ತು ಇತಿಹಾಸಕಾರರ ಮೇಳವನ್ನು ಬಳಸಿಕೊಳ್ಳಲಾಗಿದೆ. ಇಲ್ಲಿ ಇತಿಹಾಸಕಾರರ ಅಗತ್ಯವೇ ಇರಲಿಲ್ಲ, ಅವರು ಮಾತಿನಲ್ಲಿ ತಡವರಿಸುತ್ತಿದ್ದರು. ಅದರಲ್ಲಿ ಏರಿಳಿತಗಳಿರಲಿಲ್ಲ.. ಅವರ ಬದಲಿಗೆ ಜೋಗತಿಯರನ್ನೇ ಬಳಸಿಕೊಳ್ಳಬಹುದಾಗಿತ್ತು. ಉಳಿದಂತೆ ಎಲ್ಲಾ ಕಲಾವಿದರು ಲೀಲಾಜಾಲವಾಗಿ ತನ್ಮಯತೆಯಿಂದ ಅಭಿನಯಿಸಿದ್ದರು. ಶಿಖರ ಸೂರ್ಯನ ಪಾತ್ರದಲ್ಲಿ ಹುಲಗಪ್ಪ ಕಟ್ಟಿಮನಿಯವರುಅದ್ಭುತವಾಗಿ ಅಭಿನಯಿಸಿದ್ದರು. ಜೊತೆಗೆ ಚಂಡಿದಾಸ, ರಾಣಿ, ಶಿವಪಾದ, ಶುಕ್ರ ಇವರೆಲ್ಲರ ಅಭಿನಯ ಎದ್ದು ಕಾಣುತ್ತಿತ್ತು. ಅರ್ಥ ಕೌಶಲ್ಯನ ಆಂಗೀಕ ಅಭಿನಯವಂತೂ ಆತನ ದುರಳತನವನ್ನೂ ನಾಚಿಸುವಷ್ಟು ಸಹಜವಾಗಿತ್ತು. ರಂಗ ಸಜ್ಜಿಕೆ ಸರಳವಾಗಿತ್ತು. ಕಾಸ್ಟ್ಯೂಮ್ ಆಕರ್ಷಕವಾಗಿತ್ತು. ಬಸವಲಿಂಗಯ್ಯ ಹಿರೇಮಠ್ ಮತ್ತು ಶ್ರೀನಿವಾಸ್ ಭಟ್ ಅವರ ಸಂಗೀತ ವಸ್ತುವಿನ ಗಾಂಬೀರ್ಯಕ್ಕೆ ಪೂರಕವಾಗಿತ್ತು. ಇನ್ನು ನಾಟಕದ ಕಥೆಯ ಬೀಳಲುಗಳು ಎಷ್ಟೊಂದು ದಟ್ಟವಾಗಿತ್ತು ಎಂದರೆ ಪ್ರೇಕ್ಷಕನ ಏಕಾಗ್ರತೆ ಸ್ವಲ್ಪ ತಪ್ಪಿದರೂ ಕಥೆಯ ಎಳೆ ತಪ್ಪಿ ಹೋಗುತ್ತಿತ್ತು. ಇದೊಂದು ಓದುವ ನಾಟಕ, ನೋಡುವ ನಾಟಕ ಅಲ್ಲವೇನೋ ಎಂಬ ಗೊಂದಲ ಉಂಟಾಗುತ್ತಿತ್ತು.
ಶಿಖರ ತಲುಪುವ ಹಂತದಲ್ಲೇ ನಾಟಕ ಕುಸಿದಿದೆ. ಅದಕ್ಕೆ ಕಾರಣವಾಗಿದ್ದು ನಾಟಕದ ಸ್ಕ್ರಿಪ್ಟ್ ಮತ್ತು ನಿರೂಪಣಾ ತಂತ್ರ. ಕಾದಂಬರಿಗೆ ನ್ಯಾಯ ಒದಗಿಸುವ ಭರದಲ್ಲಿ ಸ್ಕ್ರಿಪ್ಟ್ ಬರೆದವರು ಕಾದಂಬರಿಯ ಎಲ್ಲಾ ಘಟನೆಗಳನ್ನು ಹಾಗಾಗೇ ತರಲು ಪ್ರಯತ್ನಿಸಿದ್ದಾರೆ. ಬಹುಶಃ ನಿರ್ದೇಶಕರು ಸ್ಕ್ರಿಪ್ಟ್ ಅನ್ನು ಎಡಿಟ್ ಮಾಡಿಕೊಂಡಿದ್ದರೆ ನಾಟಕ ಇನ್ನಷ್ಟು ಹರಳುಗಟ್ಟುತ್ತಿತ್ತೇನೋ..!
ಬದುಕಿನೆಡೆಗಿನ ಬೆರಗು ಮತ್ತು ವಿಸ್ಮಯ ಪ್ರೇಕ್ಷಕರನ್ನು ಖಂಡಿತಾ ಸೆರೆ ಹಿಡಿಯುತ್ತದೆ. ಆದರೆ ಅದನ್ನು ಹೇಗೆ ಪ್ರೆಸೆಂಟ್ ಮಾಡುತ್ತೇವೆ ಎಂಬುದು ಮುಖ್ಯ. ಆಗ ಮೊದಲ ಪ್ರಯೋಗಗಳಿಗೇ ರವೀಂದ್ರ ಕಲಾಕ್ಷೇತ್ರಕ್ಕೆ ಪ್ರೇಕ್ಷಕರ ಬರ ಬರಲಾರದು. ಇಲ್ಲಿ ಇನ್ನೊಂದು ಮಾತು ಹೇಳಲೇ ಬೇಕು. ಇದು ಧಾವಂತದ ಯುಗ. ಇಲ್ಲಿ ಎಲ್ಲರಿಗೂ ಸಮಯದ ಅಭಾವ ಇಂಥ ಸ್ಥಿತಿಯಲ್ಲಿ, ಟ್ರಾಪಿಕ್ ಕಿರಿಕಿರಿಯನ್ನು ಅನುಭವಿಸುತ್ತಾ ಮೂರು ಘಂಟೆಯ ನಾಟಕವನ್ನು ನೋಡಲು ಬಹುತೇಕರಿಗೆ ತಾಳ್ಮೆಯಿರುವುದಿಲ್ಲ. ರಾತ್ರಿಯಿಡೀ ನಡೆಯುವ ಯಕ್ಷಗಾನವನ್ನೇ ಮೂರು ಘಂಟೆಗೆ ಇಳಿಸಿದವರು ನಾವು. ಇನ್ನೂ ರಂಗಾಯಣ ಸಾಮಾನ್ಯ ರಂಗ ತಂಡದಂತಲ್ಲ; ಅದೊಂದು ರೆಪರ್ಟರಿ. ಅದರ ಬಗ್ಗೆ ರಂಗಪ್ರೇಮಿಗಳಿಗೆ ಹೆಚ್ಚಿನ ನಿರೀಕ್ಷೆಯಿರುತ್ತದೆ. ಹಾಗಾಗಿ ಅದರ ಜವಾಬ್ದಾರಿ ದೊಡ್ಡದು.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ. ]

Wednesday, February 22, 2012

ಅಶ್ಲೀಲ ಚಿತ್ರ ವೀಕ್ಷಣೆ ಶಿಕ್ಷಾರ್ಹ ಅಪರಾಧ.
ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಹಲವು ಮುಖಗಳನ್ನು ಹೊಂದಿದೆ. ನಿಜ. ಅಶ್ಲೀಲ ಎನ್ನುವದನ್ನು ಹೆಣ್ಣಿನ ದೇಹಕ್ಕೆ ಮಾತ್ರ ಸೀಮಿತಗೊಳಿಸಿ ಚರ್ಚಿಸುವ ವಿಷಯ ಅಲ್ಲವೇ ಅಲ್ಲ. ಅದನ್ನು ನಾನೂ ಒಪ್ಪುತ್ತೇನೆ. ಆದರೆ….

ಮಾನ್ಯ ಮಹಾಬಲಮೂರ್ತಿ ಕೊಡ್ಲೆಕೆರೆಯವರಿಗಾಗಲಿ ಅಥವಾ ಡಾ.ನಟರಾಜ ಹುಳಿಯಾರ್ ಅವರಿಗಾಗಲಿ ಸದನ ನಡೆಯುತ್ತಿರುವಾಗಲೇ ಸಚಿವರು ಅಶ್ಲೀಲ ವಿಡಿಯೋ ವೀಕ್ಷಿಸಿದ ಪ್ರಕರಣದ ಗಂಭೀರತೆಯ ಅರಿವಾದಂತಿಲ್ಲ.
ಯಾಕೆಂದರೆ ಭಾರತೀಯ ದಂಡ ಸಂಹಿತೆ[IPC] ಪ್ರಕಾರ ಅಶೀಲ ಚಿತ್ರ ವೀಕ್ಷಣೆ ಶಿಕ್ಷಾರ್ಹ ಅಪರಾಧ. ಕಾನೂನಿನ ಪ್ರಕಾರ ಅದು ಅಪರಾಧ ಎಂದಾದರೆ ಅಂಥ ಕಾನೂನುಗಳು ರೂಪುಗೊಳ್ಳುವ ಜಾಗದಲ್ಲೇ ಆ ಕಾನೂನಿನ ಉಲ್ಲಂಘನೆಯಾದರೆ?.. ಉಲ್ಲಂಘಿಸಿದವರಿಗೆ ಶಿಕ್ಷೇಯಾಗಬೇಡವೇ ಅದು ಈಗಿರುವ ಪ್ರಶ್ನೆ. ಡಿ.ಉಮಾಪತಿಯವರು ಇದನ್ನು ಸರಿಯಾಗಿ ಗ್ರಹಿಸಿದ್ದಾರೆ. ಅವರು ತಮ್ಮ ಬರಹದ ಕೊನೆಯಲ್ಲಿ ’ಆರು ವರ್ಷದ ಬಾಲೆಯನ್ನು ಭೋಗಿಸಿದ ಮೂವತ್ತರ ಮರಳನಿಗೆ ಮೊನ್ನೆ ಶಿಕ್ಷೆ ವಿಧಿಸಿದ ದಿಲ್ಲಿಯ ನ್ಯಾಯಾಲಯವೊಂದು ಇಂತಹ ಗಡವಗಳ ಗಂಡಸತ್ವವನ್ನೇ ನಾಶ ಮಾಡುವ ಕಾನೂನು ನಮ್ಮ ದೇಶದಲ್ಲಿ ಇಲ್ಲವಲ್ಲ ಎಂದು ಪರಿತಪಿಸಿತು’ ಎಂದು ಹೇಳಿದ್ದಾರೆ. ಹೌದು, ಅಂಥ ಕಾನೂನೊಂದು ರೂಪುಗೊಳ್ಳುವುದು ಜನಪ್ರತಿನಿಧಿಗಳು ಪಾಲ್ಗೊಳ್ಳುವ ಸಂಸತ್ತಿನಲ್ಲಿ ಮತ್ತು ಶಾಸನ ಸಭೆಗಳಲ್ಲಿ. ಅಂತಹ ಶಾಸನ ಸಭೆಗಳಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳಿಗೆ ಹೆಣ್ಣು ಎಂದೊಡನೆ ಯೋನಿಯ ಚಿತ್ರ ಮಾತ್ರ ಕಣುಂದೆ ಬಂದರೆ..? ಚಿಂತಿಸಬೇಕಾದ ವಿಷಯ.ಸಮಾಜವನ್ನು ಮುನ್ನಡೆಸುವ ಹೊಣೆಗಾರಿಕೆಯನ್ನು ಹೊತ್ತಿರುವ, ನೀತಿ ನಿರೂಪಕರ ಸ್ಥಾನದಲ್ಲಿರುವ ವ್ಯಕ್ತಿಯೇ ನೈತಿಕವಾಗಿ ಕೆಳಮಟ್ಟದಲ್ಲಿದ್ದರೆ?

ಮಹಾಬಲಮೂರ್ತಿಯವರ ಪ್ರಕಾರ ಸಚಿವರು ಸದನದಲ್ಲಿ ವೀಕ್ಷಿಸಿದ್ದು ಅಶ್ಲೀಲ ವಿಡಿಯೋ ಅಲ್ಲ. ಅವರು ಬರೆಯುತ್ತಾರೆ, ’ಉಡುಪಿಯ ಬಳಿ ನಡೆಯಿತ್ತೆನ್ನಲಾದ ರೇವ್ ಪಾರ್ಟಿಯ ಉನ್ಮತ್ತ ದೃಶ್ಯಗಳನ್ನು ಸದನದಲ್ಲಿ ನೋಡಿ ಆನಂದಿಸಿದರು-ಆನಂದಿಸಲು ಅವಕಾಶ ಮಾಡಿಕೊಂಡರು ಎಂಬ ಆರೋಪ ಕುರಿತು ನಾಡಿದಾದ್ಯಂತ ದೊಡ್ಡ ಬೊಬ್ಬೆಯೇ ಕೇಳಿ ಬರುತ್ತಿದೆ.’ ಬಹುಶಃ ಕೊಡ್ಲೆಕೆರೆಯವರು ಸತತವಾಗಿ ತೌಡು ಕುಟ್ಟಿದ ಸುದ್ದಿವಾಹಿನಿಗಳನ್ನು ಗಮನಿಸಿಲ್ಲವೇನೋ!
ಅವರಲ್ಲಿರುವ ಗೊಂದಲಗಳನ್ನು ಮರೆತು ನಟರಾಜ್ ಹುಳಿಯಾರ ಅವರ ಬರಹವನ್ನು ಗಮನಿಸಿದರೆ ಅವರು ಹೇಳುವುದು ಹೀಗೆ, ’ಮನೆಮನೆಗಳಲ್ಲಿ ಟೀವಿ ಮೂಲಕ ತಡೆಯಿಲ್ಲದೆ ಬಂದು ಬೀಳುತ್ತಿರುವ ’ಅಶ್ಲೀಲ’ ಎನ್ನಲಾದ ಚಿತ್ರಗಳನ್ನು ಆರಾಮವಾಗಿ ಸವಿಯುತ್ತಾ ನಮ್ಮ ಜನಪ್ರತಿನಿಧಿಗಳು ಮಾತ್ರ ಅವನ್ನು ನೋಡಬಾರದು ಎಂದು ಚೀರುವುದು ಅನೈತಿಕವಾಗುತ್ತದೆ.’

ಈ ಎರಡು ಅಬಿಪ್ರಾಯಗಳ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗಾದಲ್ಲಿ ಪತ್ರಕರ್ತರತ್ತ ಎಸೆದ ಪ್ರಶ್ನೆಯನ್ನು ನೋಡಿ.’ಸದನದಲ್ಲಿ ಕೆಲವರು ಆಕಸ್ಮಿಕವಾಗಿ ಅಶ್ಲೀಲ ಚಿತ್ರಗಳನ್ನು ನೋಡಿರಬಹುದು ಹಾಗೆಂದು ಎಲ್ಲಾ ಎಂಎಲ್ ಎಗಳು ಇದನ್ನೇ ಮಾಡ್ತಾರಾ? ನೀವು ಅದನ್ನೇ ವಾರಗಟ್ಟಲೆ ತೋರಿಸಿದ್ರಿ. ಅವರೂ ಮನುಷ್ಯರಲ್ವಾ? ನೀವು ಮನೆಯಲ್ಲಿ ಅಂಥ ಚಿತ್ರಗಳನ್ನು ನೋಡಿಲ್ವಾ?’ ಇದರ್ಥ ಏನು ಮುಖ್ಯ ಮಂತ್ರಿಗಳೂ ಮನೆಯಲ್ಲಿ ನೀಲಿ ಚಿತ್ರ ನೋಡ್ತಾರೆ ಎಂದಂತಾಯ್ತು.
ಯಾರು ಬೇಕಾದರೂ ನೀಲಿ ಚಿತ್ರ ನೋಡಿಕೊಳ್ಳಲಿ. ಅದವರ ವೈಯ್ಯಕಿಕ ಅಭಿರುಚಿ. ಆದರೆ ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಬೇಕಾಗಿರುವ ಜನಪ್ರತಿನಿಧಿಗಳು ಪಾಲ್ಗೊಳ್ಳುವ ವಿಧಾನಸಭೆಯಲ್ಲಿ, ಸದನದಲ್ಲಿ ಕಲಾಪ ನಡೆಯುತ್ತಿರುವ ವೇಳೆಯಲ್ಲೇ, ನ್ಯಾಯಾಧೀಶರ ಅಧಿಕಾರವನ್ನು ಹೊಂದಿರುವ ಸ್ಪೀಕರ್ ಎದುರುಗಡೆ ಜವಾಬ್ದಾರಿಯುತ ಸಚಿವರು ಅಸಭ್ಯರಾಗಿ,ಸುಖಲೋಲುಪ್ತತೆಯಿಂದ ವರ್ತಿಸಿದ್ದು ಎಷ್ಟರಮಟ್ಟಿಗೆ ಸರಿ ? ಅದನ್ನು ಸಮರ್ಥಿಸಿಕೊಳ್ಳುವವರನ್ನು ಏನೆನ್ನಬೇಕು?
ಇಂತಹ ಸಚಿವರ ವರ್ತನೆಯನ್ನು ಅವರ ಕುಟುಂಬವರ್ಗ ಮತ್ತವರ ಆಪ್ತರು ಬೇಕಾದರೆ ಸಮರ್ಥಿಸಿಕೊಳ್ಳಲಿ ಮತ್ತು ಕ್ಷಮಿಸಿಬಿಡಲಿ. ಆದರೆ ನಾವ್ಯಾಕೆ ಕ್ಷಮಿಸಬೇಕು? ಅವರು ನಮ್ಮ ಪ್ರತಿನಿಧಿಗಳು. ಅವರ ಕ್ರಿಯೆಯಲ್ಲಿ ನಾವೂ ಕೂಡಾ ಪಾಲುದಾರರು. ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಾಗ ಹೆಮ್ಮೆ ಪಡುವ ನಾವು ಅವರು ಸಮಾಜ ವಿರೋಧಿಯಾಗಿ ನಡೆದುಕೊಂಡಾಗ ಅದನ್ನು ಖಂಡಿಸುವ ದಿಟ್ಟತನ ತೋರಿಸಬೇಕು.

ಈಗೆಲ್ಲಿದ್ದಾರೆ ಪ್ರಗತಿಪರರು? ಮಠಾದೀಶರು? ಬುದ್ಧಿಜೀವಿಗಳು? ಮಹಿಳಾ ಆಯೋಗ? ಅಥವಾ ಅವರೆಲ್ಲಾ ಹತಾಶೆಯ ಅಂಚನ್ನು ತಲುಪಿರಬಹುದೇ? ಪ್ರಜಾಪ್ರಭುತ್ವದ ಹಿತದ ದೃಷ್ಟಿಯಿಂದ ಇಂತಹ ನಿಷ್ಕ್ರೀಯತೆ ಖಂಡಿತಾ ಶುಭ ಸೂಚಕವಲ್ಲ.
ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮಾಡಿದ್ದು ತಪ್ಪು ಎಂಬುದು ಮೋಲ್ನೋಟಕ್ಕೆ ಮುಖ್ಯಮಂತ್ರಿಗಳಿಗೆ ಅರಿವಾಗಿದೆ. ಹಾಗಾಗಿ ಅವರು ಸಚಿವರ ರಾಜಿನಾಮೆ ಪಡೆದಿದ್ದಾರೆ. ಆದರೆ ಸ್ಪೀಕರ್ ಇನ್ನೂ ಮೀನ ಮೇಷ ಎಣಿಸುತ್ತಿದ್ದಾರೆ. ಯಾಕೆ? ಇದು ನಮ್ಮೆಲ್ಲರ ಪ್ರಶ್ನೆ. ಯಾಕೆಂದರೆ ವಿಧಾನ ಸಬೆಯೆಂಬುದು ಸ್ಪೀಕರ್ ಅವರ ಕಾರ್ಯಕ್ಷೇತ್ರ. ಅಲ್ಲಿ ಅವರದೇ ಪರಮಾಧಿಕಾರ. ಅವರು ಕೊಡುವ ತೀರ್ಮಾನಗಳು ನ್ಯಾಯಾಧೀಶರು ಕೊಡುವ ತೀರ್ಪುಗಳಿದ್ದಂತೆ. ಅವರು ಮನಸ್ಸು ಮಾಡಿದ್ದರೆ ಅಂದೇ ಅವರ ಶಾಸಕತ್ವವನ್ನು ರದ್ದು ಮಾಡಬಹುದಿತ್ತು. ಅದರೆ ಅವರು ಹಾಗೆ ಮಾಡಲಿಲ್ಲ, ಯಾಕೆ?
ಇನ್ನು ಶೀಲ ಅಶ್ಲೀಲತೆಯ ಪ್ರಶ್ನೆಗೆ ಬಂದರೆ ಅದು ಕೂಡಾ ನಮ್ಮ ನಡವಳಿಕೆಗಳಿಗೆ ಸಂಬಂಧಿಸಿದ್ದು. ನಾವು ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸುತ್ತೇವೆ ಎಂಬುದಕ್ಕೆ ಸಂಬಂಧಿಸಿದ್ದು. ಈ ದೃಷ್ಟಿಯಿಂದ ನೋಡಿದರೂ ಸಚಿವರ ವರ್ತನೆ ಅನಾಗರಿಕವಾದುದು. ಮತ್ತು ಅದನ್ನು ಸಮರ್ಥಿಸಿಕೊಂಡದ್ದು ಸದನದ ಪಾವಿತ್ರ್ಯದ ಬಗೆಗಿನ ಅರಿವಿನ ಕೊರತೆಯಿಂದ ಉಂಟಾದದ್ದು.
ಹಾಗೆಯೇ ಮಾಧ್ಯಮಗಳು ಈ ಪ್ರಕರಣವನ್ನು ಅತಿ ರಂಜಿತವಾಗಿ ಪ್ರಸಾರ ಮಾಡಿವೆ ಎಂಬುದು ನಿಜವಾದರೂ ಆ ಕಾರಣದಿಂದಾಗಿಯೇ ಇದರ ಗಂಭೀರತೆಯೇನೂ ಕಡಿಮೆಯಾಗದು.

ಬಿಜೆಪಿಯ ರಾಜಕಾರಣಿಗಳ ನೈತಿಕ ಅದಃಪತನದ ವೇಗವನ್ನು ಗಮನಿಸಿದರೆ ಅದೊಂದು ಬ್ಲಾಕ್ ಹೋಲ್ ಎನೋ ಎಂಬ ಅನುಮಾನ ಬರುತ್ತದೆ. ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಸತ್ಯವೆನಿಸುತ್ತದೆ. ಪ್ರಾಮಾಣಿಕತೆ, ನಿಷ್ಠೆ, ನ್ಯಾಯ ನೀತಿ ದರ್ಮ, ಸತ್ಯ ಮುಂತಾದ ಎಲ್ಲಾ ಒಳ್ಳೆತನ ಮತ್ತು ಮಾನವೀಯ ಗುಣಗಳನ್ನು ಸ್ವಾಹ ಮಾಡುತ್ತಲೇ ಆ ಕಪ್ಪು ಕುಳಿ ಬೆಳೆಯುತ್ತಲೇ ಹೋಗುತ್ತಿದೆ. ಎಂದು ಬಿಗ್ ಬ್ಯಾಂಗ್ ನಡೆಯುತ್ತದೋ ಕಾದು ನೋಡೋಣ.
[ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ ]

Saturday, February 18, 2012

ಸೆಕ್ಸ್ ವಿಡಿಯೋ ವೀಕ್ಷಣೆ; ನಿಷ್ಪಕ್ಷಪಾತ ವರದಿ ಬರಬಹುದೇ?
” ಆಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ… ವಿಧಾನ ಸಭೆಯಲ್ಲಿ ಬ್ಲೂಪಿಲಂ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿಯ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ ರಾಜಿನಾಮೆ ಕೊಟ್ಟು ಇಲ್ಲಿಂದಲೇ ಹೊರಟೆ” ಹೀಗೆಂದು ಸರ್ಕಾರದ ಪ್ರಮುಖರಿಗೆ ಪೆ.೯ರಂದು ಎಚ್ಚರಿಕೆಯನ್ನು ಕೊಟ್ಟಿದ್ದರು ಕೊಡಗಿನ ವೀರ ಪುತ್ರ ಸ್ಪೀಕರ್ ಕೆ. ಜಿ. ಬೋಪಯ್ಯನವರು.
ಅವರಿಗೆ ಒತ್ತಡ ಹೇರಲು ಪ್ರಯತ್ನಿಸಿದವರು ಹಾಲಿ ಸಿಎಂ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿಯ ರಾಜ್ಯಧ್ಯಕ್ಷ ಈಶ್ವರಪ್ಪ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಕುಮಾರ್.

ಸ್ಪೀಕರ್ ಹೀಗೆ ಹೇಳಲು ಕಾರಣವಾಗಿದ್ದು ಪೆ. ೭ರಂದು ವಿಧಾನ ಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸಹಕಾರ ಸಚಿವರಾಗಿದ್ದ ಲಕ್ಷಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ.ಸಿ. ಪಾಟೀಲ್ ತಮ್ಮ ಮೊಬೈಲ್ ಗಳಲ್ಲಿ ಸೆಕ್ಸ್ ವಿಡಿಯೋವನ್ನು ನೋಡಿ ಎಂಜಾಯ್ ಮಾಡುತ್ತಿದ್ದದ್ದು..ಮತ್ತು ಆ ವಿಡಿಯೋವನ್ನು ಅವರ ಮೊಬೈಲ್ ಗೆ ಎಂಎಂಎಸ್ ಮಾಡಿದ ಕೃಷ್ಣ ಪಾಲೆಮಾರ್ ಅವರ ನಡವಳಿಕೆಗಳು. ಅಂತಹ ಸಚಿವರ ಬಗ್ಗೆ ಮೃದು ಧೋರಣೆಯನ್ನು ತಳೆಯುವಂತೆ ಒತ್ತಾಯಿಸಲು ಸ್ಪೀಕರ್ ಬೋಪಯ್ಯನವರ ಬಳಿಗೆ ಈ ಮಹನೀಯರು ತೆರಳಿದ್ದರು. ಅದಕ್ಕವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು.

ಅವರ ರಾಜಿನಾಮೆ ಬೆದರಿಕೆಯ ಪ್ರತಿಕ್ರಿಯೆಗೆ ತೂಕವಿಲ್ಲವೆಂಬುದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಹಿಂದೆ ಐದು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಸ್ಪೀಕರಿಗೆ ಛೀಮಾರಿ ಹಾಕಿ ಆ ಶಾಸಕರನ್ನು ಅರ್ಹರೆಂದು-ಸ್ಪೀಕರ್ ತೀರ್ಪಿಗೆ ವಿರುದ್ಧವಾಗಿ- ತೀರ್ಪು ನೀಡಿತ್ತು. ಆ ಸಂದರ್ಭದಲ್ಲಿ ಆತ್ಮಸಾಕ್ಷಿ ಉಳ್ಳ ಯಾರೇ ಆಗಿದ್ದರೂ ರಾಜಿನಾಮೆ ಕೊಡುತ್ತಿದ್ದರು. ಆದರೆ ಅವರು ಹಾಗೆ ಮಾಡಿರಲಿಲ್ಲ.

ನಿಜ.ವಿಧಾನ ಸಭೆಯೆಂಬುದು ಸ್ಪೀಕರ್ ಕಾರ್ಯಕ್ಷೇತ್ರ. ಅಲ್ಲಿ ಅವರೇ ಸರ್ವೋಚ್ಛ . ಅವರು ನ್ಯಾಯಾಧೀಶರಿದ್ದಂತೆ. ಅವರು ಕೈಗೊಳ್ಳುವ ತೀರ್ಮಾನಗಳು ನ್ಯಾಯಾಧೀಶರು ನೀಡುವ ತೀರ್ಪುಗಳಿದ್ದಂತೆ. ಅಲ್ಲಿ ಸದನದ ಘನತೆಗೆ ಕುಂದು ತರುವಂತಹ ’ಅನ್ ಪಾರ್ಲಿಮೆಂಟರಿ ಪದ’ಗಳನ್ನು ಬಳಸುವಂತಿಲ್ಲ. ಒಂದು ವೇಳೆ ಅಕಸ್ಮತ್ತಾಗಿ ಬಳಸಿದರೆ, ಬಳಸಿದವರು ಅದಕ್ಕಾಗಿ ಕ್ಷಮೆ ಯಾಚಿಸಿ ಅಂತಹ ಪದಗಳನ್ನು ಕಡತದಿಂದ ತೆಗಿದು ಹಾಕುವುದು ಅಲ್ಲಿಯ ನಿಯಮ. ಈಗ ’ಪದ’ದ ಜಾಗದಲ್ಲಿ ’ಘಟನೆ’ ನಡೆದಿದೆ.ಈಗ ಏನು ಮಾಡಬೇಕು.?
ವಿಧಾನ ಸಭೆಯ ಆವರಣದುಳಗೆ ಪೋಲಿಸರಿಗೂ ಪ್ರವೇಶವಿಲ್ಲ. ಪೋಲಿಸರು ಮಾಡುವ ಕೆಲಸವನ್ನು ಅಲ್ಲಿ ಬಿಳಿ ಸಮವಸ್ತ್ರವನ್ನು ತೊಟ್ಟ ಮಾರ್ಶಲ್ ಮತ್ತು ಅವರ ಸಿಬ್ಬಂದಿಗಳು ಮಾಡುತ್ತಾರೆ. ಮೊನ್ನೆ ಪೆ.೩ರಂದು ಸ್ಪೀಕರ್ ವಿರುದ್ಧ ಪ್ರತಿಭಟನೆ ಮಾಡಿದ ಗೂಳಿ ಹಟ್ಟಿ ಶೇಖರ್ ಅವರನ್ನು ಸದನದಿಂದ ಮಾರ್ಷಲ್ ಗಳು ಹೊರಗೆ ಕರೆದುಕೊಂಡು ಹೋದ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ.

ವಕೀಲ ಧರ್ಮಪಾಲ ಗೌಡರೆಂಬವರು ಈ ಮೂವರು ಕಳಂಕಿತ ಮಾಜಿ ಸಚಿವರ ವಿರುದ್ಧ ಖಾಸಗಿ ದೂರನ್ನು ಕೊಟ್ಟಾಗ ವಿಚಾರಣೆಗೆ ಮುಂದಾದ ೮ನೇ ಎಸಿಎಂಎಂ ನ್ಯಾಯಾಲಯದೆದುರು ಪೋಲಿಸರು ಹೇಳಿದ್ದು ಇದನ್ನೇ ’ ಸದನದ ಒಳಗೆ ಪೋಲಿಸರಿಗೆ ಪ್ರವೇಶ ನಿಷಿದ್ಧ. ಸ್ಪೀಕರ್ ಅನುಮತಿ ಇಲ್ಲದೆ ಸಚಿವರನ್ನು ನಾವು ಪ್ರಶ್ನಿಸುವಂತಿಲ್ಲ’ ಹಾಗಾಗಿ ಮಾಜಿ ಸಚಿವರ ಮೇಲೆ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲು ಪೋಲಿಸರಿಗೆ ಸಾಧ್ಯವಾಗಿಲ್ಲ.

ಸ್ಪೀಕರ್ ಮನಸ್ಸು ಮಾಡಿದ್ದರೆ ತಮ್ಮ ವಿವೇಚನೆಯನ್ನು ಬಳಸಿ ಸದನದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡಿದ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ, ಮೇಲ್ನೋಟಕ್ಕೆ ತಪ್ಪಿಸ್ತರೆಂದು ಕಂಡ ಆ ಮೂವರು ಕಳಂಕಿತ ಶಾಸಕರ ಶಾಸಕತ್ವವನ್ನು ರದ್ದುಗೊಳಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಆ ಸಚಿವರೇನೂ ಶಾಸನ ಸಭೆಗೆ ಹೊಸತಾಗಿ ಚುನಾಯಿತರಾದವರಲ್ಲ. ಆ ಸ್ಥಾನದ ಪಾವಿತ್ರ್ಯತೆಯನ್ನು ಅರಿತವರೇ ಆಗಿದ್ದಾರೆ. ಹಾಗಿರುವಾಗ ಅವರ ಬಗ್ಗೆ ಮೃದು ಧೋರಣೆ ತಳೆದದ್ದು ಎಷ್ಟರ ಮಟ್ಟಿಗೆ ಸರಿ?

ಇಂಥ ಜವಾಬ್ದಾರಿಯುತ, ಪವಿತ್ರ ಸ್ಥಾನದಲ್ಲಿ ಎಂತೆಂಥ ಮಹನೀಯರು, ಘನತೆವೆತ್ತವರು ಕುಳಿತಿದ್ದರು ಎಂಬುದನ್ನೊಮ್ಮೆ ಜ್ನಾಪಿಸಿಕೊಳ್ಳಿ; ವೈಕುಂಠ ಬಾಳಿಗಾ, ಕೆ.ಎಚ್. ರಂಗನಾಥ್, ರಮೇಶ್ ಕುಮಾರ್ ಅಂತವರ ಜೊತೆ ಯಡಿಯೂರಪ್ಪನವರ ಲೌಡ್ ಸ್ಪೀಕರ್ ಎಂಬ ಆರೋಪ ಹೊತ್ತಿರುವ ಬೋಪಯ್ಯನವರನ್ನು ಹೋಲಿಸಿ ನೋಡಿ.
ಆಗ ಗೊತ್ತಾಗುತ್ತದೆ ಈ ಕೊಡಗಿನ ಕಲಿಯ ಮಾತಿನಲ್ಲಿ ತೂಕವಿದೆಯೇ ಎಂದು. ಅವರ ಗುಡುಗು ಟುಸ್ ಎಂಬುದು ಸದನ ಸಮಿತಿಯ ರಚನೆಯಲ್ಲಿ ಬಹಿರಂಗಗೊಂಡಿದೆ.
ಸದನದಲ್ಲಿ ಸೆಕ್ಸ್ ಸಿಡಿ ವೀಕ್ಷಣೆ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಅವರು ರಚಿಸಿದ ಸದನ ಸಮಿತಿಯನ್ನು ನೋಡಿ; ಅಧ್ಯಕ್ಷರು ಬಿಜೆಪಿಯ ಸ್ರೀಶೈಲಪ್ಪ ವಿರೂಪಾಕ್ಷಪ್ಪ ಬಿದನೂರು. ಸದಸ್ಯರು, ಬಿಜೆಪಿಯ ಎಸ್.ಅರ್.ವಿಸ್ವನಾಥ್, ಬಿ.ಸುರೇಶ್ ಗೌಡ, ನೆಹರೂ ಓಲೆಕಾರ್ ಮತ್ತು ಕಾಂಗ್ರೇಸ್ ನ ಅಮರೇ ಗೌಡ ಬಯ್ಯಾಪುರ, ಡಾ.ಎಚ್.ಸಿ ಮಹಾದೇವಪ್ಪ.ಮತ್ತು ಜೆಡಿಎಸ್ ನ ದಿನಕರ್ ಶೆಟ್ಟಿ.
ಅಧ್ಯಕ್ಷರಾದ ಶ್ರೀ ಶೈಲಪ್ಪ ಬಿದನೂರು ಅವರು ಎಂದೂ ಸದನದಲ್ಲಿ ಮಾತಾಡಿದವರೇ ಅಲ್ಲ. ಈ ಪ್ರಕರಣದಲ್ಲಿ ಅವರ ಸ್ಟ್ಯಾಂಡ್ ಏನಿದ್ದರೂ ಅದು ಬಸ್ ಸ್ಟ್ಯಾಂಡೇ ಇದ್ದೀತು. ಸುರೇಶ ಗೌಡರಂತೂ ಬಿಜೆಪಿ ಅಸ್ಥಾನದ ಹೊಗಳುಭಟ. ನೆಹರು ಓಲೆಕಾರ ಮತ್ತು ಎಸ್.ಅರ್.ವಿಶ್ವನಾಥರ ಬಗ್ಗೆ ಲೋಕಕ್ಕೇ ತಿಳಿದಿದೆ. ಇನ್ನು ಜೆಡಿಎಸ್ ನ ದಿವಾಕರ ಶೆಟ್ಟಿ ಪಾಪದವರು. ಕಾಂಗ್ರೇಸ್ ನ ಎಚ್.ಸಿ ಮಹಾದೇವಪ್ಪ ಇದೇ ಕೆಟಗೆರಿಗೆ ಸೇರಿದವರು. ಒಳ್ಳೆತನ ನಿಷ್ಟೂರ ತನಿಖೆಗೆ ಸಹಾಯಕವಾಗಲಾರದು. ಹಾಗಾಗಿ ಸದನ ಸಮಿತಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಡುವೆ ಕಾಂಗ್ರೇಸಿನ ಎಚ್.ಸಿ ಮಹಾದೇವಪ್ಪ ಮತ್ತು ಅಮರೇ ಗೌಡ ಬೈಯ್ಯಾಪುರ ಅವರು ತಾವು ಸದನ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಹುಶಃ ವಿರೋಧ ಪಕ್ಷಗಳಿಂದ ಇಂಥ ಅಸಹಕಾರವನ್ನು ಸ್ಪೀಕರ್ ಮೊದಲೇ ನಿರೀಕ್ಷಿಸಿರಬೇಕು. ಇಲ್ಲವಾದರೆ ಏಳು ಮಂದಿ ಇರುವ ಸದನ ಸಮಿತಿಯಲ್ಲಿ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರಿರುವಾಗ ವಿರೋಧ ಪಕ್ಷದ ಸಮರ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನು ಮಾಡಬೇಕಾಗಿತ್ತು. ಅವರು ಹಾಗೆ ಮಾಡಲಿಲ್ಲ. ಘಟನೆ ನಡೆದ ಪೆ.೭ರಿಂದ ಸಮಿತಿ ನೇಮಿಸಿದ ಪೆ.೧೬ ರ ನಡುವೆ ಬೋಪಯ್ಯನವರ ಹುಟ್ಟಿದೂರಿನ ಕಾವೇರಿನದಿಯಿಂದ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ.
ಇಂಥ ಸಮಿತಿ ಎಂಥ ವರಧಿ ನೀಡಬಹುದು? ರಾಜಕಾರಣಿಗಳಿಗೀಗ ಮಾಧ್ಯಮ ತಮ್ಮ ಪರಮ ವೈರಿಯಂತೆ ಕಾಣಿಸುತ್ತಿದೆ. ಹಾಗಾಗಿ ಎಲ್ಲರೂ ಸೇರಿ ಮಾಧ್ಯಮದ ವರಧಿಗಾರಿಕೆಯ ಮೇಲೆ ನಿಯಂತ್ರಣ ಹೇರುವ ಬಗ್ಗೆ ಷಡ್ಯಂತರ ರೂಪಿಸಿ ನೀತಿ ನಿಯಾಮಾವಳಿಗಳ ಪಟ್ಟಿಯನ್ನು ನೀಡಬಹುದೇ ಹೊರತು ಮಾಜಿ ಸಚಿವರ ಬಗ್ಗೆ ಕ್ರಮ ಕೈಗೊಳ್ಳುವ ಸೂಚನೆಯಂತೂ ಸಧ್ಯದ ಪರಿಸ್ಥಿಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಬಲವಾದ ಸಾಕ್ಷಿ ಎಂದರೆ ಮೊನ್ನೆ ಚಿಕ್ಕ ಮಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ ಮಾತುಗಳು; ಅಲ್ಲಿ ಅವರು; ”ವಿಧಾನ ಮಂಡಲ ಕಲಾಪಗಳನ್ನು ಖಾಸಗಿ ವಾಹಿನಿಗಳು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡುವುದನ್ನು ನಿರ್ಭಂದಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ” ಎಂದು ಹೇಳಿದ್ದು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ ಕಳಂಕಿತರನ್ನು ಸಮರ್ಥಿಸಿಕೊಂಡ ಪರಿ ನೋಡಿ; ”ಲಕ್ಷಣ ಸವದಿ ಮತ್ತು ಸಿ.ಸಿ ಪಾಟೀಲ್ ಅತ್ಯುತ್ತಮ ಸಚಿವರಾಗಿದ್ದರು. ಕೃಷ್ಣ ಪಾಲೇಮಾರ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ತಿಂಗಳಲ್ಲಿ ಸತ್ಯ ಹೊರ ಬೀಳಲಿದೆ.ಈ ಘಟನೆ ಮಾಧ್ಯಮಗಳ ಸೃಷ್ಟಿ. ನಿಜವಾದ ಅಪರಾಧಿ ಯಾರು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಮೂವರು ಮಾಜಿ ಸಚಿವರಿಗೂ ಅವರ ಕ್ಷೇತ್ರದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಅವರ ಗ್ರಹಚಾರ ಸರಿ ಇರಲಿಲ್ಲ. ಕೆಟ್ಟ ಕಾಲ ಅಷ್ಟೇ” ಎಂದು ಮಂಗಳೂರಿನಲ್ಲಿ ಹೇಳಿದ್ದಾರೆ.

ಇನ್ನು ಪಕ್ಷದ ಅಧ್ಯಕ್ಷ ಈಶ್ವರಪ್ಪನವರ ಆತ್ಮ ವಿಶ್ವಾಸವನ್ನು ನೋಡಿ; ” ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿರುವ ಮೂವರು ಮಾಜಿ ಸಚಿವರ ವಿರುದ್ಧ ಪಕ್ಷ ತಕ್ಶಣ ಕ್ರಮ ಕೈಗೊಳ್ಳುವುದಿಲ್ಲ. ಸದನ ಸಮಿತಿ ವರಧಿಯೇ ಅಂತಿಮ. ಹೀಗಾಗಿ ಈ ಮೂವರೂ ಶಾಸಕರೂ ಕಳಂಕತ್ವದಿಂದ ಹೊರ ಬರುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ” ಈ ಮೂವರ ಹೇಳಿಕೆಗಳು ಅಧಿಕೃತ, ಯಾಕೆಂದರೆ ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದಕ್ಕೆಲ್ಲಾ ಸಂವಿಧಾನವನ್ನು ನಂಬಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟಿರುವ ನಮ್ಮಂಥ ಪಾಮರರು ಏನು ಹೇಳಲು ಸಾಧ್ಯ?
ಬಹುಶಃ ಇದನ್ನೆಲ್ಲಾ ನೋಡಿ ಪ್ರತಿಭಟಿಸಲಾಗದೆ, ತಮ್ಮ ಪಕ್ಷ ನೈತಿಕವಾಗಿ ಕುಸಿಯುತ್ತಿರುವುದನ್ನು ಕಂಡು ಒಳಗೊಳಗೆ ಸಂಕಟಪಟ್ಟ ಮೃದು ಮಾತಿನ, ಸುಸಂಸ್ಕೃತ, ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಅವರು ಎದೆಯೊಡೆದು ಇಹಲೋಕ ತ್ಯಜಿಸಿದರೇನೋ…!

ಶೌರ್ಯಕ್ಕೆ, ಕೆಚ್ಚಿಗೆ, ಹೋರಾಟಕ್ಕೆ ನಮಗೆ ನೆನಪಾಗುವುದು ಕೊಡಗರು, ನಮ್ಮ ಸೇನೆಯ ಮೊದಲ ಜನರಲ್ ಮೇಜರ್ ಪೀಲ್ಡ್ ಮಾರ್ಷಲ್ ಕರಿಯಪ್ಪ ಅವರು. ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಇದ್ದ ಹಾಗೆ ಕೂರ್ಗ್ ರೆಜಿಮೆಂಟ್ ಇದೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಬೋಪಯ್ಯನವರು….ಹಾಗೆ ವರ್ತಿಸುತ್ತಿದ್ದಾರಲ್ಲಾ..! ಹುಟ್ಟಿದ ಮಗು ಶೌರ್ಯವಂತನಾಗಿ ಬೆಳೆಯಲಿ ಎಂದು ಹುಲಿ ಹಾಲನ್ನು ತಂದು ಕುಡಿಸುವ ಪರಂಪರೆ ಆ ಮಣ್ಣಿನದು. ಈಗ ಆ ಪರಂಪರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅ ಜಿಲ್ಲೆಯ ಪಕ್ಕದ ಜಿಲ್ಲೆ ನಮ್ಮದು. ನಮ್ಮಲ್ಲಿ ಈಗಲೂ ಗಂಡು ಮಗುವಿಗೆ ಹುಲಿ ತುಪ್ಪವನ್ನು ನೆಕ್ಕಿಸುವ ಪದ್ಧತಿಯಿದೆ. ನನ್ನ ಮಗನಿಗೆ ನೆಕ್ಕಿಸಿದ್ದಾರೆ..

ನಾನು ಕಾಲೇಜಿನಲ್ಲಿದ್ದಾಗ ಪ್ರವಾಸ ಬಂದಾಗ ವಿಧಾನ ಸಭೆಯ ಕಲಾಪವನ್ನು ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಆಗ ನಾವು ಒಂದು ಪೂಜಾಸ್ಥಾನದ ಒಳಗೆ ಪ್ರವೇಶಿಸುವಷ್ಟೇ ಭಯ ಭಕ್ತಿಯಿಂದ ಅದರೊಳಗೆ ಪ್ರವೇಶಿಸಿದ್ದೆವು. ಮಾತ್ರವಲ್ಲ ಆ ಸನ್ನಿದಾನಕ್ಕೆ ಅಗೌರವ ತೋರಬಾರದೆಂದು ನಮ್ಮನ್ನು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದೆಂದು ನಮ್ಮ ಲೆಕ್ಚರರ್ ತಾಕೀತು ಮಾಡಿದ್ದರು. ಆ ಗೌರವದ ಭಾವನೆ ಇಂದಿಗೂ ನನ್ನ ಮನದಲ್ಲಿದೆ. ಆದರೆ ಮೊನ್ನೆ ಸದನದಲ್ಲಿ ನಡೆದ ಘಟನೆ ಈ ಸ್ಥಳದ ಪಾವಿತ್ರ್ಯತೆಯನ್ನು ಮಲೀನಗೊಳಿಸಿದೆ. ನಮ್ಮ ಎಳೆಯ ಮಕ್ಕಳ ಮೇಲೆ ಈ ಪ್ರಕರಣ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಯಾರೂ ಚಿಂತಿಸಿದಂತಿಲ್ಲ.

ಸೆಕ್ಸ್ ಸೀಡಿ ವೀಕ್ಷಣೆ ಪ್ರಕರಣದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಒಟ್ಟು ರಾಜಕಾರಣವೇ ’ನಾ ಹೊಡೆದ ಹಾಗೆ ಮಾಡುತ್ತೇನೆ, ನೀ ಅತ್ತ ಹಾಗೆ ಮಾಡು’ ಎಂಬ ರೀತಿಯಲ್ಲಿದೆ. ನಮ್ಮಲ್ಲಿ ಒಂದು ಮಹಿಳಾ ಆಯೋಗವಿದೆ. ಅದಕ್ಕೊಬ್ಬ ಅಧ್ಯಕ್ಷೆಯಿದ್ದಾರೆ. ಅವರು ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಬಹುದಿತ್ತು.ಅದನ್ನೂ ಮಾಡಲಿಲ್ಲ. ಮಹಿಳಾ ಸಂಘಟನೆಗಳೂ ತುಟಿ ಬಿಚ್ಚಲಿಲ್ಲ. ಒಬ್ಬ ಮಹಿಳೆಯಾಗಿ ಪುರುಷ ಮನಸ್ಥಿತಿಯ ಈ ಕಳಂಕಿತ ಲಾಲಸೆಯನ್ನ ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ

Sunday, February 12, 2012

ಸಂಸಾರ ಶರಧಿಯಲ್ಲಿರಬೇಕು ಕಂಪರ್ಟ್ ಝೋನ್ ಗಳು.
ಸಂಸಾರ ಶರಧಿ ಎಂಬ ಪದವನ್ನು ನೋಡಿದಾಗ ನನಗೆ ತಟ್ಟನೆ ನೆನಪಾಗಿದ್ದು, ನನ್ನ ಹೈಸ್ಕೂಲ್ ದಿನಗಳಲ್ಲಿ ನಮ್ಮ ಸಮಾಜ ಪಾಠದ ಮುತ್ತಪ್ಪ ಮೇಸ್ಟ್ರು ಆಗಾಗ ಹೇಳುತ್ತಿದ್ದ ಮಾತುಗಳು;”ಸಾಧಿಸಿದರೆ ಸಬಳವನ್ನೂ ನುಂಗಬಹುದು’

ನಿಜ. ಸಾಧನೆಯ ಛಲ ಇದ್ದರೆ ಸಬಳವನ್ನೂ ಅಂದರೆ ಸಮುದ್ರವನ್ನೂ ನುಂಗಬಹುದು. ಅಸಾಧ್ಯವಾದುದನ್ನು ತಮ್ಮ ಹಿಡಿತಕ್ಕೆ ತರಬಹುದು. ಸಬಳದ ಸಂವಾದಿ ಪದವೇ ಶರಧಿ. ಇದರ ಆಳ-ಅಗಲಗಳನ್ನು ಅರಿತವರಿಲ್ಲ. ಆದರೆ ಕಡಲಿನಲೆಗಳ ಲಯ, ಮಿಡಿತಗಳನ್ನು ಅರಿತವರಿಗೆ ಅದರಲ್ಲಿ ಈಜುವುದೊಂದು ಮೋಜಿನಾಟ. ಆಟ, ಆಡಾಡುತ್ತಲೇ ಅದು ಕಲೆಯಾಗಿ ಕರಗತವಾಗುತ್ತದೆ.

ಸಂಸಾರ ಶರಧಿಯಲ್ಲಿ ಹುಟ್ಟು ಹಾಕುತ್ತಿರುವವರು ಗಂಡು ಹೆಣ್ಣು ಇಬ್ಬರಾದರೂ ಅದರಲ್ಲಿ ಹೆಣ್ಣಿನ ಹೊಣೆಗಾರಿಕೆ ಹೆಚ್ಚು. ಯಾಕೆಂದರೆ ಸಂಸಾರವನ್ನು ಕಟ್ಟಿಕೊಂಡವಳು ಅವಳು. ಅಲೆಮಾರಿಯಾಗಿದ್ದ ಗಂಡನ್ನು ಕೃಷೀಯ ಕೈಂಕರ್ಯಕ್ಕೆ ಹಚ್ಚಿ, ಮನೆಯೆಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ, ಸಂಸಾರ ನೌಕೆಯನ್ನು ಕಟ್ಟಿದಾಕೆ ಅವಳು. ಅವಳ ಕರ್ತೃತ್ವ ಮತ್ತು ಧೀ ಶಕ್ತಿಗೆ ಬೆಚ್ಚಿ ಅವಳನ್ನು ಚೌಕಟ್ಟುಗಳಲ್ಲಿ ಬಂಧಿಸಿ ತನ್ನ ಆಳ್ತತನದಲ್ಲಿ ಅದುಮಿಟ್ಟುಕೊಂಡವನು ಗಂಡು. ಆದರೂ….’ನಾ ನಿಲ್ಲುವಳಲ್ಲಾ….’ ಎಂದು ಹರಿಯುತ್ತಲೇ ಇರುವಾಕೆ ಹೆಣ್ಣು.

ಸೃಷ್ಟಿಸುತ್ತಾ..ಪೊರೆಯುತ್ತಾ..ಎಲ್ಲವನ್ನೂ ಸ್ವೀಕರಿಸುತ್ತಾ..ತನ್ನೊಳಗೆ ಜೀರ್ಣಿಸಿಕೊಳ್ಳತ್ತಾ ಹೋಗುವ ಮಹಿಳೆ…ಸ್ವತಃ ತನಗೆ ತಾನೇ ಒಂದು ವಿಸ್ಮಯ.

ಈಗೀಗ ನಮ್ಮ ಹೆಣ್ಮಕ್ಕಳು, ಗಂಡು ಹುಡುಗರು ಕೂಡಾ ಈ ಸಂಸಾರ ಶರಧಿಯನ್ನು ಈಜುವ ಗೊಡವೆಯೇ ಬೇಡಪ್ಪಾ ಎಂದು ದೂರ ಓಡಿ ಹೋಗುವುದನ್ನು ನಾನು ಗಮನಿಸುತ್ತಿದ್ದೇನೆ. ಇದೊಂದು ಥರಾ ಪಲಾಯನ ಎನ್ನಬಹುದೇನೋ. ಯಾಕೆಂದರೆ ಹಾಗೆ ಓಡಿ ಹೋಗುವುದರಿಂದ ಆ ಒಂದು ಅನುಭವದಿಂದ ಅವರು ವಂಚಿತರಾದಂತೆ. ‘ಈಸಬೇಕು ಇದ್ದು ಜೈಸಬೇಕು’. ಅದನ್ನೊಂದು ಮೋಜಿನಾಟ ಎಂದು ಭಾವಿಸುತ್ತಾ….ಇದರ ಹುಟ್ಟು ನಾನು ಹಾಕಲಾರೆನಪ್ಪಾ ಎಂದು ಕೈ ಸೋತು ಹೋದರೆ ಅದರಿಂದ ಹೊರಬರಲು ಹಲವಾರು ದಾರಿಗಳಿವೆಯಲ್ಲಾ… ಹಾಗೆ ಹೊರ ಬರುವ ದಾರಿ ಕೂಡಾ ನಮ್ಮ ವಿವೇಚನೆಗೆ ಸಂಬಂಧಪಟ್ಟುದು.

”ಈ ಸಂಸಾರವನ್ನು ನಾನು ಹೇಗೆ ನಿಬಾಯಿಸಲಿ?’ ಎಂಬ ಭಾವನೆಯೇ ಬಾರವಾದುದು. ನಾನು ನಿಬಾಯಿಸಬಲ್ಲೆ; ನಿಬಾಯಿಸ್ತಾ ಇದ್ದೇನೆ ಎಂದು ಪದೇ ಪದೇ ನಮ್ಮೊಳಗೆ ಹೇಳಿಕೊಂಡರೆ, ಸಂಸಾರ ನೌಕೆ ತಾನಾಗಿಯೇ ಮುಂದೆ ಸಾಗುತ್ತಿರುತ್ತದೆ.

ಹಿಂದೆಲ್ಲಾ ಈ ಸಂಸಾರ ಶರಧಿ, ಸಂಸಾರ ನೌಕೆ, ಅದನ್ನು ನಿಭಾಯಿಸುವುದು ಎಂಬುದಕ್ಕೆಲ್ಲಾ ಅರ್ಥ ಇತ್ತು. ಈಗ ಸಂಸಾರ ಶರಧಿಯಲ್ಲಿ ಪ್ರತಿಯೊಬ್ಬರೂ ನಡುಗಡ್ಡೆಗಳನ್ನು ನಿರ್ಮಿಸಿಕೊಂಡಿದ್ದಾರೆ, ಅವರವರ ಅಭಿರುಚಿಗನುಗುಣವಾಗಿ, ಅದು ಸಾಹಿತ್ಯ, ಸಂಗೀತ, ಚಿತ್ರಕಲೆ, ಸಮಾಜ ಸೇವೆ,ಗಾರ್ಡನಿಂಗ್, ಅಡುಗೆ..ಯಾವುದೇ ಇರಬಹುದು ಮೈ ಮತ್ತು ಮನಸ್ಸು ಒಂದಾಗಿ ತೊಡಗಿಸಿಕೊಳ್ಳಲು ಅವಕಾಶವಿರುವ ಇವು ಅವರ ಕಂಪರ್ಟ್ ವಲಯಗಳು. ತಮಗೆ ಸ್ವಾತಂತ್ರ್ಯ ಮತ್ತು ಏಕಾಂತ ಬೇಕೆಂದಾಗ ಅವರು ಆ ನಡುಗಡ್ಡೆಯನ್ನು ಹೊಕ್ಕುಬಿಡುತ್ತಾರೆ. ಅಲ್ಲಿಂದ ಅವರು ಎನರ್ಜಿಯನ್ನು ತುಂಬಿಕೊಂಡು ಬರುವ ಪ್ರಯತ್ನ ಮಾಡುತ್ತಾರೆ. ಲಿಂಗ ಬೇಧವಿಲ್ಲದೆ, ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರಿಗೂ ಈ ಕಂಪರ್ಟ್ ಝೋನ್ ಬೇಕು. ಅಲ್ಲಿ ಅವರು ತಮಗೆ ಬೇಕಾದ ರಾಧೆಯನ್ನೋ, ಮಾಧವನನ್ನೋ, ಚೆನ್ನಮಲ್ಲಿಕಾರ್ಜುನನ್ನೋ ಹುಡುಕಿಕೊಳ್ಳಬಹುದು.

ಕೇವಲ ನಗರ ಕೇಂದ್ರಿತ, ವಿದ್ಯಾವಂತ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತಾಡುತ್ತಿದ್ದೀರಾ ಎಂದು ನೀವಂದುಕೊಳ್ಳಬಹುದು. ಇಲ್ಲಾ, ಗ್ರಾಮೀಣ ಪ್ರದೇಶದ ಜನರಿಗೂ ಇಂತಹ ಕಂಪರ್ಟ್ ವಲಯಗಳಿರುತ್ತವೆ. ಗಂಡಸರಿಗೆ ಅವರವರದೇ ಚ್ಟಟಗಳಿರುತ್ತವೆ ವ್ಯಸನಗಳಿರುತ್ತವೆ. ಗಂಡಸರ ಈ ಕಂಪರ್ಟ್ ವಲಯಗಳು ಸಂಸಾರ ನೌಕೆ ಅಲ್ಲಾಡಲು ಕಾರಣವಾಗಬಹುದು. ಆಗ ಹೆಂಗಸರು ತಮ್ಮ ಕಂಪರ್ಟ್ ವಲಯಗಳ ಮೊರೆ ಹೋಗುತ್ತಾರೆ.ಅವರ ಸಾಕು ಪ್ರಾಣಿಗಳು, ಕೈಯಾರೆ ನೆಟ್ಟು ಬೆಳೆಸಿದ ಗಿಡ, ಮರ ಸಸಿಗಳು; ಮಕ್ಕಳು , ಮೊಮ್ಮಕ್ಕಳು ಇವುಗಳ ಆರೈಕೆಯಲ್ಲಿ ಧೈನಿಕದ ಕ್ಷುದ್ರತೆಗಳನ್ನು ಮರೆಯಲೆತ್ನಿಸುತ್ತಾರೆ. ಜಾತ್ರೆ, ಉತ್ಸವ, ಮದುವೆ-ಮುಂಜಿಗಳಲ್ಲಿ ಭಾಗವಹಿಸುತ್ತಾ ಬದುಕನ್ನು ಸಹನೀಯಗೊಳಿಸಿಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದ ಪುರುಷರಿಗೆ ”ಬಂಧುತ್ವ’ ಮತ್ತು ಹೆಣ್ಣುಮಕ್ಕಳಿಗೆ”ತವರು ಮನೆ’ಯೆಂಬುದು ಬಹುದೊಡ್ಡ ಕಂಪರ್ಟ್ ವಲಯ. ನಗರ ಪ್ರದೇಶದ ಮಹಿಳೆಯರಿಗೆ ಮತ್ತು ಪುರುಷರಿಗೆ ಗೆಳೆತನವೇ ಕಂಪರ್ಟ್ ವಲಯ- ಇಲ್ಲಿಯೇ ಅವರ ಅಂತರಂಗ ಬಹಿರಂಗವಾಗುವುದು.

ಮುಖ್ಯವಾಗಿ ಸಂಸಾರವನ್ನು ಶರಧಿಗೆ ಹೊಲಿಸಿಕೊಳ್ಳಲೇ ಬಾರದು. ಸಮುದ್ರ ಅಂದರೆ ಅಗಾಧ, ನಿಗೂಢ, ಅದರ ಮುಂದೆ ತಾವು ಅಲ್ಪರು ಎಂಬ ಭಾವನೆ ಬಂದುಬಿಡುತ್ತದೆ. ಸಾಗರದಲ್ಲಿ ನೀರು ಎಷ್ಟಿದ್ದರೇನು? ಕುಡಿಯಲು ಒಂದು ತೊಟ್ಟು ಜೀವ ಜಲವೂ ಸಿಗಲಾರದು. ಹಾಗಾಗಿ ಅದನ್ನು ನದಿ ಅಥವಾ ತೊರೆ ಎಂದು ಅಂದುಕೊಂಡರೆ ಅದನ್ನು ಈಜುವ, ದಾಟುವ ದೈರ್ಯ ತಮ್ಮೊಳಗೆ ತಾವೇ ತುಂಬಿಕೊಳ್ಳಬಹುದು.

ಸಂಸಾರವೆಂಬ ನದಿಯಲ್ಲಿ ಪರಸ್ಪರ ನಂಬಿಕೆಯೆಂಬ ದೋಣಿಯಲ್ಲಿ ಸಂಗಾತಿಯೊಡನೆ ಕುಳಿತು ’ದೋಣಿ ಸಾಗಲಿ ಮುಂದೆ ಹೋಗಲಿ’ ಎಂದು ಹಾಡ್ತಾ ಇದ್ದರೆ ದಡ ತಲುಪಿದ್ದೇ ಗೊತ್ತಾಗುವುದಿಲ್ಲ. ದೋಣಿ ತೂತಾಯ್ತು ಎನ್ನಿ, ಒಳಬರುವ ನೀರನ್ನು ಎತ್ತಿ ಹೊರ ಚೆಲ್ಲುತ್ತಿದ್ದರಾಯು. ದೋಣಿ ಮುಳುಗುವ ಸಂದರ್ಭ ಬಂದರೆ ಈಜಿ ದಡ ಸೇರಿದರಾಯ್ತು. ಹಾಗೆ ದಡ ಸೇರುವ ದೈರ್ಯವನ್ನು ನಾವು ಒಳಗಿಂದೊಳಗೆ ಆಗಾಗ ತುಂಬಿಕೊಳ್ತಾ ಇರಬೇಕು. ಅದಕ್ಕೆ ಹಿಂದೆ ಹೇಳಿದ ಕಂಪರ್ಟ್ ವಲಯಗಳು ಒತ್ತಾಸೆಯಾಗಿ ನಿಲ್ಲುತ್ತವೆ.

ಅದಕ್ಕೆ ನಮ್ಮ ಹನಿಗವಿ ಡುಂಡಿರಾಜ್ ಹೇಳಿರುವುದು’ ನದಿ ದಾಟಲು ತೆಪ್ಪ ಇರಬೇಕು, ಸಂಸಾರ ಶರದಿ ದಾಟಲು ತೆಪ್ಪಗಿರಬೇಕು’ ಬಹಳಷ್ಟು ಸಂದರ್ಭಗಳಲ್ಲಿ ಮಾತಿಗೆ ಮಾತು ಬೆಳೆದು ಸಂಸಾರ ಬೀದಿ ಪಾಲಾಗುತ್ತದೆ. ಹಾಗಾಗಿ ಮಾತೆಲ್ಲವೂ ಅಂತರಂಗದಲ್ಲಿ ನಡೆಯುತ್ತಿರಬೇಕು. ಆಗಾಗ ಕಂಪರ್ಟ್ ವಲಯಗಳಿಗೆ ಭೇಟಿ ನೀಡುತ್ತಿರಬೇಕು ಆಗ ತೆಪ್ಪ ನಡೆಸುವುದು ಸುಲಭ. ನೋಡುಗರಿಗೂ ಅಲೆಗಳ ಬೆಳ್ನೊರೆಯಾಟ ಮುದವನ್ನು ಕೊಡುತ್ತದೆ. ಶರಧಿಯೊಳಗಿನ ವಡವಾಗ್ನಿ ಯಾರಿಗೂ ಗೊತ್ತಾಗದು.


[ 'ಸಿಹಿಗಾಳಿ’ ಮ್ಯಾಗಝಿನಿನ ’ಸಂಸಾರ ಶರಧಿ’ ಎಂಬ ಕಾಲಂಗಾಗಿ ಬರೆದ ಬರಹ ]

Friday, February 3, 2012

ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ
ಪಂಪ-ಕನ್ನಡದ ಆದಿ ಕವಿ. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಕಾಡುವ ಮಹಾನ್ ಪ್ರತಿಭೆ. ಈತ ಮತ್ತೆ ನೆನಪಾಗಿದ್ದು ಮೊನ್ನೆ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಂಡ ನಾಟಕ ’ಮಸ್ತಕಾಭಿಷೇಕ ರಿಹರ್ಸಲ್’ ನಲ್ಲಿ. ಎಚ್.ಎಸ್. ಶಿವಪ್ರಕಾಶ್ ರಚಿಸಿದ ಈ ನಾಟಕವನ್ನು ’ಅನೇಕ’ ತಂಡ ಅಭಿನಯಿಸಿತ್ತು. ನಿರ್ದೇಶನ ಸುರೇಶ್ ಅನಗಳ್ಳಿ ಅವರದು.
ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ್ ಟ್ಯಾಗೂರ್ ಪೀಠದ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶಿವಪ್ರಕಾಶ್ ರನ್ನು ಅಭಿನಂದಿಸಲು ಭಾರತ ಯಾತ್ರ ಕೇಂದ್ರವು ಅವರ ನಾಟಕೋತ್ಸವನ್ನು ಏರ್ಪಡಿಸಿತ್ತು. ಅಲ್ಲಿ ಪ್ರದರ್ಶಿತವಾದ ನಾಟಕವಿದು. ಈ ನಾಟ್ಅಕ ಈಗಾಗಲೇ ದೆಹಲಿಯಲ್ಲಿ ನಡೆದ ಎನ್.ಎಸ್.ಡಿ ಪ್ರಾಯೋಜಿತ ಭಾರತ ರಂಗೋತ್ಸವದಲ್ಲಿ ಪ್ರದರ್ಶಗೊಂಡಿದೆ. ಇದು ಅದರ ಎರಡನೇ ಪ್ರದರ್ಶನ.
ಎಚ್.ಎಸ್. ಶಿವಪ್ರಕಾಶ್ ಕನ್ನಡದ ಪ್ರಮುಖ ನಾಟಕಕಾರಲ್ಲಿ ಒಬ್ಬರು. ಅದಕ್ಕಿಂತಲೂ ಮಿಗಿಲಾಗಿ ಅವರೊಬ್ಬ ಅನುಭಾವ ಕವಿ.ಅವರನ್ನು ಬಸವಣ್ಣನಂತೆ ಅಲ್ಲಮನೂ ಕಾಡಿದ್ದಾನೆ. ಈ ನಾಟ್ಕದಲ್ಲಿ ಅವರನ್ನು ಕಾಡಿದ್ದು ಬಾಹುಬಲಿ. ಅದರಲ್ಲಿಯೂ ಪಂಪನ ’ಆದಿಪುರಾಣ’ದಲ್ಲಿ ಅಂತರ್ಗತವಾಗಿರುವ ಭೋಗ ನಶ್ವರತೆ ಮತ್ತು ವೈರಾಗ್ಯದ ಔನತ್ಯ.
ಮಸ್ತಕಾಭಿಷೇಕ ನಾಟಕದ ಪಠ್ಯವಿನ್ನೂ ಪ್ರಕಟಗೊಂಡಿಲ್ಲ. ಆದರೆ ಪಂಪನ ಪ್ರಭಾವ ಆ ನಾಟಕದ ಮೇಲೆ ದಟ್ಟವಾಗಿದೆ. ಅದಕ್ಕೆ ಕಾರಣಗಳಿವೆ; ಜಿನಸೇನನ ’ಪೂರ್ವ ಪುರಾಣ’ ದಲ್ಲಿ ಜೈನ ಧರ್ಮದ ಭವಾವಳಿಗಳನ್ನು ಹೇಳಲಷ್ಟೇ ಬರುವ ಈ ಕಥೆಯನ್ನು ಪಂಪ ವಿಸ್ತಾರವಾದ ಚಂಪೂ ಕಾವ್ಯವಾಗಿಸಿ ಜನಪ್ರಿಯಗೊಳಿಸಿದ್ದಾನೆ. ಆದಿಪುರಾಣದ ಮುಖ್ಯ ಶಿಖರಗಳೆಂದರೆ ನೀಲಾಂಜನೆಯ ನೃತ್ಯ; ಇದರಲ್ಲಿ ವ್ಯಕ್ತವಾಗುವ ಬದುಕಿನ ಕ್ಷಣ ಭಂಗುರತೆ. ಇನ್ನೊಂದು ಭರತ ದಿಗ್ವಿಜಯವನ್ನು ಮುಗಿಸಿಕೊಂಡು ವೃಷಭಾಚಲದ ಎದುರು ನಿಂತು ತನ್ನ ಕೀರ್ತಿಯನ್ನು ಕೆತ್ತಿಸಿಕೊಳ್ಳುವ ಸಂದರ್ಭದಲ್ಲಾಗುವ ಆತನ ಗರ್ವಬಂಗ. ಹಾಗೆಯೇ ಅಣ್ಣ ಭರತನನ್ನು ತಮ್ಮ ಭಾಹುಬಲಿ ಜಲಯುದ್ದ, ದೃಷ್ಟಿಯುದ್ಧಗಳಲ್ಲಿ ಸೋಲಿಸಿ ಕೊನೆಯ ಮಲ್ಲಯುದ್ಧದಲ್ಲಿ ಆತನ್ನನ್ನು ಮೇಲಕ್ಕೆ ಹಿಡಿದೆತ್ತಿ ನಿಂತಾಗ ಆತನ ಅಂತರಂಗದಲ್ಲಿ ಉಂಟಾಗುವ ಮಾನಸಿಕ ವಿಪ್ಲವ; ವೈರಾಗ್ಯದ ಅಂಕುರ-ಇವು ಆದಿಪುರಾಣದ ಹೈಲೈಟ್. ಐಶ್ವರ್ಯ, ಅಧಿಕಾರದ ಮದ ಇವುಗಳು ಅಣ್ಣ ತಮ್ಮಂದಿರನ್ನು, ತಂದೆ ಮಗನನ್ನು ಬೇರ್ಪಡಿಸುತ್ತದೆ; ಕಲಹವನ್ನು ತಂದಿಡುತ್ತದೆ, ಇಂಥ ರಾಜಶ್ರೀಯನ್ನು ತಾನು ಹೇಗೆ ಸ್ವೀಕರಿಸಲಿ ಎಂದು ವೈರಾಗ್ಯ ಹೊಂದಿ ಜೈನ ದೀಕ್ಷೆಯನ್ನು ಪಡೆಯುತ್ತಾನೆ. ಈ ಮೂರೂ ಘಟನೆಗಳು ನಾಟ್ಕದಲ್ಲಿಯೂ ಪ್ರಮುಖ ಘಟನೆಗಳೇ.
ಅದರೆ ಈ ನಾಟಕ ನಡೆಯುವುದು ನಾಟಕದೊಳಗಿನ ನಾಟಕದಲ್ಲಿ. ನಾಟ್ಕದ ಹೊರ ಆವರಣದಲ್ಲಿ ನಡೆಯುವ ನಾಟಕದ ರಿಹರ್ಸಲನಲ್ಲಿ ಅಂಬಾನಿ ಸಹೋದರರ ಕೌಟುಂಬಿಕ ಜಗಳ ಸಾಂಕೇತಿಕವಾಗಿ ಬಂದಿದೆ. ಅವರ ವ್ಯಾಜ್ಯ ಕೋರ್ಟಿನಲ್ಲಿ ಇರುವಾಗಲೇ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅದನ್ನು ಮಾಧ್ಯಮ ತನ್ನ ಟಿಅರ್ ಪಿ ಹೆಚ್ಚಳಕ್ಕೆ ಬಳಸಿಕೊಂಡರೆ. ಅಂಬಾನಿ ಸಹೋದರನೊಬ್ಬ ನಾಟಕ ನಿರ್ದೇಶಕನೊಬ್ಬನನ್ನು ಗೊತ್ತುಮಾಡಿ ಭರತ ಬಾಹುಬಲಿ ಬಗ್ಗೆ ನಾಟಕ ವಾಡಿಸುತ್ತಾನೆ. ಅವನ ರಿಹರ್ಸಲ್ ನೋಡಿದ ಯು.ಎಸ್. ಮೂಲದ ಟೀವಿ ಚಾನಲ್ಲೊಂದು ಅದರ ಟಿಲಿಕಾಸ್ಟ್ ಹಕ್ಕುಗಳನ್ನು ಪಡೆದುಕೊಳ್ಳುತ್ತದೆ.
’ಮಸ್ತಕಾಭಿಷೇಕ ರಿಹರ್ಸಲ್’ ನಾಟಕವನ್ನು ನೋಡಿದಾಗ ಅನ್ನಿಸಿದ್ದು ಈ ನಾಟಕಕ್ಕೆ ಹಲವು ಆಯಾಮಗಳಿವೆ. ಮೇಲ್ನೋಟಕ್ಕೆ ಇದು ಮಸ್ತಕಾಭಿಷೇಕ ನಾಟಕದ ರಿಹರ್ಸಲ್. ಆದರೆ ಅದರೊಳಗಡೆ ಹಲವಾರು ನೆಯ್ಗೆಗಳಿವೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವನ್ನಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರಿಕರಣಗೊಂಡು ಮಾರುಕಟ್ಟೆಯ ಸರಕ್ಕಾಗಿ ಬದಲಾಗಿರುವುದನ್ನು ನಾಟಕ ಹೇಳುತ್ತದೆಯಾದರೂ ಇಲ್ಲಿ ಎಲ್ಲವೂ ಬಿಕರಿಗಿಟ್ಟ ವಸ್ತುಗಳೇ. ಅದು ಮಾಧ್ಯಮಗಳ ಮೇಲಾಟ, ವಿಚಾರವಾದಿಗಳ ವೈಚಾರಿಕತೆ, ಕಲಾವಿದರ ಉಡಾಫೆ. ನಾಟಕದೊಳಗಿನ ನಾಟಕ ನಿರ್ದೇಶಕನ ಆಸೆಬುರುಕತನ ಎಲ್ಲವೂ ಕೂಡಾ ಜಾಗತೀಕರಣದ ಭರಾಟೆಯಲ್ಲಿ ಬಿಕರಿಗಿಟ್ಟ ವಸ್ತುಗಳೇ.
ನಾಟಕ ಪ್ರೇಕ್ಷಕರನ್ನು ತಲುಪುವ ಬಗ್ಗೆ ಅಥವಾ ಅವರ ಗ್ರಹಿಕೆಯ ಬಗ್ಗೆ ನಿರ್ದೇಶಕರಿಗೆ ಅನುಮಾನಗಳಿರಬೇಕು ಹಾಗಾಗಿ ಅವರು ಮಸ್ತಕಾಭಿಷೇಕದ ನೇರ ಪ್ರಸಾರವನ್ನು ’ಹೀಗೂ ಉಂಟೇ’ ಶೈಲಿಯಲ್ಲಿ ನಿರೂಪಿಸಿದ್ದಾರೆ. ಆ ಶೈಲಿ ಟೀವಿ ನಿರೂಪಕರ ದಡ್ಡತನವನ್ನು ತೋರಿಸುವುದರ ಜೊತೆಗೆ ನಾಟಕದ ಗಾಂಭೀರ್ಯವನ್ನು ಮಸುಕಾಗಿಸಿತ್ತು. ಒಂದು ಒಳ್ಳೆಯ ವಿಡಂಬನಾ ನಾಟಕವಾಗಬಹುದಾದ ಸಾಧ್ಯತೆಯನ್ನು ಈ ಪಾತ್ರ ಮಸುಕಾಗಿಸಿತೇನೋ ಎಂಬ ಅನುಮಾನ ಪಡುವಷ್ಟು ಆ ಪಾತ್ರ ಮಿಂಚಿತ್ತು.
ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ತನ್ಮಯತೆಯಿಂದ ನಟಿಸಿದ್ದಾರೆ.
ತಾಂತ್ರಿಕವಾಗಿಯೂ ನಾಟಕ ಉತ್ತಮವಾಗಿ ಮೂಡಿ ಬಂದಿದೆ ಇದಕ್ಕೆ ರಂಗಪರಿಕರವನ್ನು ಒದಗಿಸಿದ ಪ್ರಮೋದ್ ಶಿಗ್ಗಾಂವ್, ಬೆಳಕು ವಿನ್ಯಾಸ ಮಾಡಿದ ಅ.ನಾ.ರಮೇಶ್ ಮತ್ತು ಮಹಾದೇವಸ್ವಾಮಿ ಹಾಗೂ ಸೆಟ್ ಸಿದ್ಧಪಡಿಸಿದ ಶಂಕರ್, ಇದಲ್ಲದೆ ಸ್ವತಃ ಸಂಗೀತ ನೀಡಿದ ನಿರ್ದೇಶಕ ಅನಗಳ್ಳಿಯವರ ಕೊಡುಗೆ ಕಾರಣವಾಗಿದೆ
ನಾಟಕದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇರ ಪ್ರಸಾರದ ತುಣುಕುಗಳನ್ನು ಸಂದರ್ಭಕ್ಕೆ ತಖ್ಖಂತೆ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಇದನ್ನು ’ಡ್ಯಾಕು ಡ್ರಾಮ’ ಎಂದು ಕರೆಯಬಹುದೆಂದು ನಿರ್ದೇಶಕರು ಹೇಳುತ್ತಾರೆ. ಅದನ್ನು ಒದಗಿಸಿದವರು ಪ್ರಸಿದ್ದ ಇತಿಹಾಸಕಾರರಾದ ಷ.ಶೆಟ್ಟರ್ ಅವರು.
ವರ್ತಮಾನದಲ್ಲಿ ಅಧಿಕಾರಕ್ಕಾಗಿ ನಡೆಯುವ ಕಚ್ಚಾಟ ಮತ್ತು ಬದುಕಿನ ಕ್ಷಣಭಂಗುರತೆ ನಾಟಕಕಾರರನ್ನು ಕಾಡಿದ್ದರೆ, ನಾಟಕ ಪ್ರಯೋಗದ ಸಂಕಷ್ಟ ಮತ್ತು ಮಾಧ್ಯಮದ ಹುಚ್ಚಾಟಗಳು ನಿರ್ದೇಶಕರನ್ನು ಕಾಡಿರಬೇಕು.ಆದರೂ ’ಮಸ್ತಕಾಭಿಷೇಕ ರಿಹರ್ಸಲ್’ ಒಂದು ರಿಹರ್ಸಲ್ ಮಾತ್ರ.ಅಂದರೆ ಮುಂದೆ ನಡೆಯಬಹುದಾದ ನಾಟಕದ ತಾಲೀಮ್ . ಹಾಗಾಗಿ ತಿದ್ದಿಕೊಳ್ಳಲು ಇನ್ನೂ ಅವಕಾಶಗಳಿವೆ ಎಂಬ ಆಶಯವನ್ನು ನಾಟಕ ಸೂಚ್ಯವಾಗಿ ಹೇಳುತ್ತದೆ. ಅದಕ್ಕೆ ಸಾಕ್ಷಿಯಾಗಿ ರಂಗದ ಕೊನೆಯಲ್ಲಿ, ಸ್ಪಾಟ್ ಲೈಟ್ ನಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿ ನಿಶ್ಚಲನಾಗಿ ನಿಂತಿರುತ್ತಾನೆ. ನಾಟಕದೊಳಗಿನ ಆ ಪಾತ್ರದಾರಿ ನಾಟಕದ ರಿಹರ್ಸಲ್ ನಲ್ಲಿ ಪಾಲ್ಗೊಳ್ಳುತ್ತಲೇ ತನಗರಿವಿಲ್ಲದಂತೆ ಬಾಹುಬಲಿಯ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ನಾಟಕದೊಳಗಿನ ನಿರ್ದೇಶಕ ಮತ್ತು ಟೀವಿ ನಿರ್ದೇಶಕನ್ನು ಧಿಕ್ಕರಿಸಿ ಬೆತ್ತಲೆಯಾಗಿ ನಿಲ್ಲುವುದು ಒಟ್ಟು ನಾಟಕದ ಆಶಯವಾಗಿದೆ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ]

Wednesday, February 1, 2012

”ಪಿನಾಕಿನೀ ತೀರದಲ್ಲಿ’ ಇತಿಹಾಸದತ್ತ ಒಂದು ಇಣುಕು ನೋಟ.
ಇತಿಹಾಸದ ಘಟನೆಯೊಂದನ್ನು ವರ್ತಮಾನದಲ್ಲಿ ನಿಂತು ನೋಡುವ ಪ್ರಯತ್ನವೇ ’ಪಿನಾಕಿನೀ ತೀರದಲ್ಲಿ’ ಈ ನಾಟಕವನ್ನು ಕೆ.ಜಿ.ಎಫ್ ಸಮುದಾಯ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು.
ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉತ್ತರ ಪಿನಾಕಿನಿ ನದಿ ತೀರದಲ್ಲಿದೆ ವಿದುರಾಶ್ವತ್ಥ. ಮಹಾಭಾರತದ ವಿದುರನ ಹೆಸರಿನೊಂದಿಗೆ ತಳುಕು ಹಾಕಿಕೊಂದಿರುವ ಇಲ್ಲಿರುವ ಅರಳಿ ಮರದ ಕೆಳಗೆ ಸಾವಿರಾರು ನಾಗರ ಕಲ್ಲುಗಳಿವೆ. ಇದೊಂದು ಭಕ್ತರ ಆರಾಧನಾ ಕ್ಷೇತ್ರ. ಆದರೆ ಈ ಜಾಗ ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು ಎಂಬುದು ಬಹಳ ಜನಕ್ಕೆ ಗೊತ್ತಿದ್ದಂತಿಲ್ಲ.
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ನಡೆದ ಧ್ವಜ ಸತ್ಯಾಗ್ರ್ಹ ಚಳುವಳಿ ಮತ್ತು ಅದರಲ್ಲಿ ಹುತಾತ್ಮರಾದವರ ಇತಿಹಾಸ ವಿದುರಾಶ್ವತ್ಥದೊಂದಿಗೆ ಸೇರಿಕೊಂಡಿದೆ. ಇದನ್ನು ದಕ್ಷಿಣದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.
ಅದು ೧೯೩೮ ನೇ ಇಸವಿ. ವಿದುರರಾಶ್ವತ್ಥ ಜಾತ್ರೆಯ ಸಂದರ್ಭ. ಆಗ ನಡೆದ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ನಡೆದ ಗೋಲಿಬಾರಿನಲ್ಲಿ ಗರ್ಭಿಣಿ ಮಹಿಳೆಯೂ ಸೇರಿದಂತೆ ಒಂಬತ್ತು ಜನರು ಹುತಾತ್ಮರಾಗಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಡಾ. ರಂಗಾರೆಡ್ಡಿ ನಾಟಕವನ್ನು ರಚಿಸಿದ್ದಾರೆ. ನಿರ್ದೇಶನ ಅಚ್ಯುತ ಅವರದು.
ಒಂದೂವರೆ ಘಂಟೆಯ ಅವಧಿಯ ಈ ನಾಟಕ ಇತಿಹಾಸವನ್ನು ಮೆಲ್ಮಟ್ಟದಲ್ಲಿ ನೋಡುವ ಪ್ರಯತ್ನವನ್ನು ಮಾಡುತ್ತದೆ. ವರ್ತಮಾನದಲ್ಲಿ ನಿಂತು ಇತಿಹಾಸವನ್ನು ನೋಡುವಾಗ ಚಿಕಿತ್ಸಕ ದೃಷ್ಟಿಕೋನವಿರಬೇಕು. ಆ ಚಿಕಿತ್ಸಕ ನೋಟ ನಾಟಕದ ಪಠ್ಯದಲ್ಲಿರಲಿಲ್ಲ. ಆ ಕಾಲಘಟ್ಟದಲ್ಲಿ ಭಾರತ ಸ್ವಾತಂತ್ಯ ಚಳುವಳಿಯಲ್ಲಿ ನಡೆದ ಮಹತ್ವದ ಘಟನೆಗಳನ್ನು ನಾಟಕದಲ್ಲಿ ಒಪ್ಪವಾಗಿ ಜೋಡಿಸಲಾಗಿತ್ತು. ಈ ಜೋಡಣೆಗೆ ನಿರ್ದೇಶಕರು ಬಳಸಿಕೊಂಡದ್ದು ಕಥನ ಕಲೆಯ ಕೌಶಲ್ಯವನ್ನು, ಹಿನ್ನೋಟದ ತಂತ್ರವನ್ನು.
ಕಥೆಗಾರ ಮತ್ತು ಆತನ ಇಬ್ಬರು ಶಿಷ್ಯೆಯರು ವರ್ತಮಾನದಲ್ಲಿ ನಿಂತು ಇತಿಹಾಸದ ನಿರೂಪಣೆಯನ್ನು ಮಾಡುತ್ತಿದ್ದರು. ಇಲ್ಲಿ ವರ್ತಮಾನ ಅಂದರೆ೧೯೩೮ ನೇ ವರ್ತಮಾನ. ಹಾಗಾಗಿ ದೇಶಾದ್ಯಂತ ನಡೆಯುವ ಹೋರಾಟಕ್ಕೆ ಅವರು ಕಣ್ಣಾಗುತ್ತಿದ್ದರು. ರಂಗದ ಒಂದು ಬದಿಯಲ್ಲಿ ಸ್ಪಾಟ್ ಲೈಟ್ ಬೆಳಕಿನಲ್ಲಿ ಅವರು ನಿರೂಪಣೆ ಮಾಡುತ್ತಲಿದ್ದರೆ, ರಂಗದ ಮೇಲೆ ದೃಶ್ಯ ಬದಲಾವಣೆಯ ಪರಿಕರಗಳು ಚಕಚಕನೆ ಸಿದ್ದಗೊಳ್ಳುತ್ತಿದ್ದ ಕಾರಣದಿಂದಾಗಿ ಸಮಯ ಪೋಲಾಗುತ್ತಿರಲಿಲ್ಲ; ರಂಗ ಖಾಲಿಯಿರುತ್ತಿರಲಿಲ್ಲ.
ನಾಟಕದಲ್ಲಿ ರಿಹರ್ಸಲ್ ಕೊರತೆ ಎದ್ದು ಕಾಣುತಿತ್ತು. ಕಲಾವಿದರಲ್ಲಿ ಹೊಂದಾಣಿಕೆಯ ಕೊರತೆ ಇತ್ತು. ಸಂಭಾಷಣೆಯಲ್ಲಿ ಎಡವುತ್ತಿದ್ದರು. ಆದರೂ ನಾಟಕದ ಒಟ್ಟಂದಕ್ಕೆ ಇದರಿಂದ ಅಡ್ಡಿಯಾಗಲಿಲ್ಲ. ಅದಕ್ಕೆ ಕಾರಣ ಸಮರ್ಥವಾಗಿ ಬಳಸಿಕೊಂಡ ಹಾಡುಗಳು. ಸಮುದಾಯದ ನಾಟಕಗಳೆಂದರೆ ಹಾಗೆನೇ ಅಲ್ಲಿ ಯಾವಾಗಲೂ ಜಾನಪದ ಶೈಲಿಯ ಮತ್ತು ಹೋರಾಟದ ಹಾಡುಗಳದ್ದೇ ಪಾರುಪತ್ಯ. ಇಲ್ಲಿಯೂ ಅನೇಕ ಹಾಡುಗಳ ಸಮರ್ಥ ಬಳಕೆಯಾಗಿತ್ತು. ನಟರೇ ಮೇಳಗಾರರಾಗಿಯೂ ಬದಲಾಗುತ್ತಿದ್ದರು.
ದೃಶ್ಯಗಳ ವಿಂಗಡಣೆಯಲ್ಲಿ, ಅದರ ಕಾಲಮಿತಿಯಲ್ಲಿ ಬಿಗುವಿದ್ದ ಕಾರಣದಿಂದಾಗಿ ಎಲ್ಲೂ ನೀರಸ ಅನ್ನಿಸಲಿಲ್ಲ; ನಾಟಕದ ಉದ್ದಕ್ಕೂ ಏಕಸೂತ್ರತೆಯಿತ್ತು. ಸ್ಟೇಜ್ ಬ್ಯಾಲೆನ್ಸ್ ಇತ್ತು. ವಿದುರಾಶ್ವತಥವನ್ನು ಮಧ್ಯದಲ್ಲಿಟ್ಟು ಮಾಡಿದ ರಂಗ ವಿನ್ಯಾಸ ಸಾಂಕೇತಿಕವಾಗಿತ್ತು. ನಾಟಕವೆಲ್ಲಾ ಅದರ ಹಿನ್ನೆಲೆಅಲ್ಲೇ ನಡೆಯುತ್ತಿದ್ದವು. ನಾಟಕದ ಅಂತ್ಯದಲ್ಲಿ ಅದರ ಬಲ ಬದಿಯಲ್ಲಿ ಹುತಾತ್ಮರ ಸ್ಮಾರಕವನ್ನು ತೋರಿಸಿದರೆ ಎಡ ಬದಿಯಲ್ಲಿ ತ್ರಿವರ್ಣ ದ್ವಜ ಸ್ತಂಭವನ್ನು ತೋರಿಸಿದ್ದು ಕೂಡಾ ಆ ಮೂರು ಘಟನೆಗಳನ್ನು ವಿಭಿನ್ನವಾಗಿ ಆದರೆ ಒಂದಾಗಿ ನೋಡುವ ಪ್ರಯತ್ನವಾಗಿತ್ತು.
ಗಣರಾಜೋತ್ಸವದ ಮುನ್ನಾದಿನದಂದು, ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ’ಪಿನಾಕಿನೀ ತೀರದಲ್ಲಿ’ ಪ್ರದರ್ಶನಗೊಂಡದ್ದು ಅರ್ಥಪೂರ್ಣವಾಗಿತ್ತು. ರಂಗದ ತುಂಬೆಲ್ಲಾ ತ್ರಿವರ್ಣ ಧ್ವಜ; ನಟರ ಬಾಯಿಂದ ಹೊರಹೊಮ್ಮುತ್ತಿದ್ದ ’ಝಂಡಾ ಊಂಚಾ ರಹೇ ಹಮಾರ…’ ಹಾಡು ನಾಟಕದಲ್ಲಿ ಅನುರಣಿಸುತ್ತಿದ್ದರೆ ನಾಳೆಯ ಗಣ ರಾಜ್ಯೋತ್ಸವದ ನೆನಪು ಪ್ರೇಕ್ಶಕರಲ್ಲಿ ಮೂಡಿದ್ದರೆ ಅಶ್ಚರ್ಯವಿರಲಿಲ್ಲ.
ಸಮುದಾಯವು ’ಸಂಸ್ಕೃತಿ- ಸಾಮರಸ್ಯ’ ದ ಹೆಸರಿನಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ರಂಗಚಟುವಟಿಕೆಯ ಸಮಾರೋಪದಂದು ಪ್ರದರ್ಶಿತವಾದ ಈ ನಾಟಕದಲ್ಲಿ, ಕಥನಕಾರನ ’ಮಾಡಬೇಕಿದೆ ಮತ್ತೊಂದು ಹೋರಾಟ’ ಎಂಬ ಡೈಲಾಗ್ ನೊಂದಿಗೆ ನಾಟ್ಅಕ ಅಂತ್ಯಗೊಳ್ಳುತ್ತದೆ. ಅದು ಸಮುದಾಯ ತಂಡದ ಮೂಲ ಆಶಯವೂ ಹೌದು.
ನಾಟ್ಕ ರಚನೆಕಾರನೊಬ್ಬನಿಗೆ ವರ್ತಮಾನದ ಜೊತೆ ಮುಖಾಮುಖಿಯಾಗುವುದು ಯಾವಾಗಲೂ ಕಷ್ಟದ ಕೆಲಸವೇ. ಆದರೆ ವರ್ತಮಾನದಲ್ಲಿ ನಿಂತು ಭೂತಕಾಲವನ್ನು ನೋಡಿ ವಿಶ್ಲೇಷಿಸುವುದು ಅಂಥಹ ಕಷ್ಟವೇನಲ್ಲ. ಇಂತಹ ಕೃತಿಯೊಂದನ್ನು ನಿರ್ದೇಶಕನೊಬ್ಬ ಪ್ರದರ್ಶನಕ್ಕೆ ಕೈಗೆತ್ತಿಕೊಂಡಾಗ ಆತನ ಪ್ರತಿಭೆ ಒರಗೆ ಹಚ್ಚಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಈ ನಾಟಕ ನಿರ್ದೇಶಕರ ಪ್ರತಿಬೆಗೆ ಬಹುದೊಡ್ದ ಸವಾಲಾಗಿತ್ತು ಎಂಬುದು ನಿಜ.
[ ಪ್ರಜಾವಾಣಿಯಲ್ಲಿ ಪ್ರಕಟವಾದ ಬರಹ ]