Tuesday, June 14, 2011

ವರ್ಷ ಕಾಲದಲ್ಲಿ ಒದ್ದೆಯಾಗುವ ಮನಸು
ಮಳೆ ಮತ್ತು ಪ್ರೀತಿ!
ನನ್ನ ಮನಸ್ಸಿನಲ್ಲೊಂದು ಸ್ತಬ್ಧ ಚಿತ್ರವಿದೆ.
ರಾಜಕಪೂರ್ ಅವರ ’ಅವಾರ’ ಚಿತ್ರವದು.
ಸುತ್ತಲೂ ’ಧೋ’ ಎಂದು ಸುರಿಯುವ ಮಳೆ.
ನಾಯಕ ರಾಜ್ ಕಪೂರ್ ಮತ್ತು ನಾಯಕಿ ನರ್ಗೀಸ್ ಒಂದೇ ಕೊಡೆಯಡಿಯಲ್ಲಿ ನಿಂತಿದ್ದಾರೆ. ನಾಯಕಿಯ ಮುಖ ಸ್ವಲ್ಪವೇ ಮೇಲಕ್ಕೆತ್ತಿದೆ. ನಾಯಕ ಅವಳೆಡೆಗೆ ಬಾಗಿದ್ದಾನೆ.
ಈ ಚಿತ್ರವನ್ನು ನೋಡಿದಾಗ ನನಗೆ ಥಟ್ಟನೆ ನೆನಪಿಗೆ ಬರುವುದು ರಾಧಾಮಾಧವರ ಜೋಡಿ. ಪ್ರೇಮೋತ್ಕಂಠಿತರಾದ ರಾಧ-ಮಾಧವರ ಜನಪ್ರಿಯ ಭಂಗಿ ಇದು.
ಮಳೆಯ ಹಿನ್ನೆಲೆಯಲ್ಲಿ ಮುಂದೆ ಈ ಜೋಡಿ ಏನನ್ನೆಲ್ಲಾ ಸೂರೆಗೊಳ್ಳಬಹುದು ಎಂಬುದು ರಸಿಕರ ಊಹೆಗೆ ಬಿಟ್ಟದ್ದು.
ಈ ಮಳೆಯೇ ಹಾಗೆ; ಅದು ನಮ್ಮನ್ನು ಭಾವುಕರನ್ನಾಗಿಸುತ್ತದೆ. ಅಂತರ್ಮುಖಿಯನ್ನಾಗಿಸುತ್ತದೆ. ಒಳಜಗತ್ತಿಗೆ ಕೊಂಡೊಯ್ಯುತ್ತದೆ. ಏಕಾಂತವನ್ನು ಪ್ರೀತಿಸುವ ಸೂಕ್ಷ್ಮಜ್ನರಿಗೆ ಚೆನ್ನಾಗಿ ಗೊತ್ತಿದೆ; ಹೊರಗೆ ಲಯ ಬದ್ಧವಾಗಿ ಬೀಳುವ ಮಳೆ ನಮ್ಮೊಳಗಿನ ಕವಿಮನಸ್ಸನ್ನು ಜಾಗೃತಗೊಳಿಸುತ್ತದೆ. ಕಲಾವಿದನನ್ನು ಬಡಿದೆಬ್ಬಿಸುತ್ತದೆ.

ಇಂತಹ ಜಡಿಮಳೆಯ ನೀರವ ರಾತ್ರಿಯಲ್ಲಿ ಮುದ್ದಣ ’ರಾಮಾಶ್ವಮೇಧ’ದ ರಚನೆಗೆ ತೊಡಗುತ್ತಾನೆ. ಪಕ್ಕದಲ್ಲಿ ಆತನ ಮನದನ್ನೆ ಮನೋರಮೆಯಿದ್ದಾಳೆ. ಆಕೆ ಎಲೆಯಡಿಕೆಯನ್ನು ಮಡಚಿ ಆತನ ಬಾಯಲ್ಲಿಡುತ್ತಿದ್ದರೆ, ಗದ್ಯ-ಪದ್ಯ ಮಿಶ್ರಿತವಾದ ಕಾವ್ಯ ಪುಂಖಾನುಪುಂಖವಾಗಿ ಹಾಳೆಯ ಮೇಲೆ ಪಡಿ ಮೂಡುತ್ತಿತ್ತು. ನವೋದಯ ಸಾಹಿತ್ಯದ ಮೊದಲ ಕಾವ್ಯವೊಂದು ಮುದ್ದಣ ಮನೋರಮೆಯರ ಸರಸ ಸಲ್ಲಾಪದೊಂದಿಗೆ ಮಳೆಯ ಹಿಮ್ಮೇಳನದಲ್ಲಿ ಮೈದಾಳಿ ಬಂದಿತ್ತು.
ಆದರೆ ಮುದ್ದಣ್ಣನ ಹಾಗೆ ಎಲ್ಲಾ ಕವಿಗಳಿಗೂ ಮಳೆಗಾಲ ಕಾಡಲಿಲ್ಲ. ಅವರಿಗೆ ಚಳಿಗಾಲವೇ ಹೆಚ್ಚು ಪ್ರಚೋದನೆ ನೀಡಿತ್ತು. ಜಾನಪದ ಕವಿಗಳಂತೂ ಹೊಳೆದಂಡೆಯ ಬದಿ, ಕೆರೆ-ಬಾವಿ ಕಟ್ಟೆಗಳ ಮೇಲೆ ಪ್ರೀತಿ ಮಾಡಿದಷ್ಟು ಸಲೀಸಾಗಿಮಳೆಯಲ್ಲಿ ನೆನೆಯುತ್ತಾ ಪ್ರೀತಿ ಮಾಡಿಲ್ಲ.

ಬಹುಶಃ ನಮ್ಮ ಜಾನಪದರಿಗೆ ಪ್ರೀತಿ ಮಾಡುವುದಕ್ಕಿಂತಲೂ ಮುಖ್ಯವಾಗಿ ತುತ್ತಿನ ಚೀಲ ತುಂಬುವುದು ಮುಖ್ಯವಾಗಿರಬೇಕು. ಹಾಗಾಗಿಯೇ ಅವರು ’ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವಾ....ಇಳೆಯೊಡನೆ ಜಳಕ ಮಾಡೋಣ..ನಾವೂನೂ ಮೋಡಗಳ ಕೂಡೆ ಆಡೋಣ’ ಎಂದಿದ್ದಾರೆ. ಇಳೆಯೊಡನೆ ಜಳಕ ಮಾಡುವ ಮಂದಿ; ಆಕಾಶದತ್ತ ಕಣ್ಣೆತ್ತಿ ನೋಡುತ್ತಾ ಮಳೆಯ ಬರುವಿಗಾಗಿ ಕಾತರಿಸಿ ನಿಂತ ಮಂದಿ, ನಮ್ಮ ರೈತಾಪಿ ಜನ. ಮಳೆಯನ್ನು ಪ್ರೀತಿಸಿದ ಜನ ಇವರು. ಮಳೆ ನಕ್ಷತ್ರಗಳನ್ನು ಒಂದೊಂದು ನುಡಿಗಟ್ಟಿನಿಂದ ಬಣ್ಣಿಸಿದವರು.

ಆರಿದ್ರಾ ಮಳೆ ಬಂದರೆ ದಾರಿದ್ರ್ಯಾ ಹೋಗುತ್ತದೆ; ಸ್ವಾತಿ ಮಳೆ ಬಂದರೆ ಬ್ಃಮಿಯಲ್ಲಿ ಮುತ್ತು ಬೆಳೆಯುತ್ತದೆ.; ಪುನರ್ವಸು ಮಳೆ ಹೆಣ ಎತ್ತುವುದಕ್ಕೂ ಬಿಡುವುದಿಲ್ಲ; ಭರಣಿ ಮಳೆಗೆ ಕೈ ಬೀಜ ಬಿತ್ತಬೇಕು; ಹಲಸಿನ ಬೀಜ ಇದ್ದವನು ಆಶ್ಲೇಷ ಮಳೆಯಲ್ಲಿ ಮನೆ ಬಿಟ್ಟು ಕದಲಲಾರ...ಇತ್ಯಾದಿ ನುಡಿಗಟ್ಟುಗಳು ಬಳಕೆಯಲ್ಲಿವೆ. ಮಳೆ ಅವರ ಬದುಕಿನಲ್ಲಿ ಹಾಸುಹೊಕ್ಕಾದ ಪರಿ ಇದು.

ಮಳೆ ಎಂದರೆ ನೀರು. ನಮ್ಮ ಪೂರ್ವಿಕರು ದಾರ್ಶಕರ ಹಾಗೆ ಬಾಳಿದವರು. ಅವರು ಬದುಕು ಅಥವಾ ಜೀವನ ಎನ್ನುವುದನ್ನು ನೀರು ಎಂದು ಕೂಡಾ ಕರೆದಿದ್ದಾರೆ. ನೀರು ಎಂದೂ ಹಿಂದಕ್ಕೆ ಹರಿಯುವುದಿಲ್ಲ.ದು ತನ್ನ ಪಾತ್ರವನ್ನು [ಹರಿಯುವಿಕೆ] ತಾನೇ ಕಂಡುಕೊಳ್ಳುತ್ತದೆ. ಯಾವ ಆಕಾರದಲ್ಲಿಯೂ ಹೊಂದಿಕೊಳ್ಳುತ್ತದೆ. ಪಾರದರ್ಶಕವಾಗಿರುತ್ತದೆ.ಅನೇಕ ಖನಿಜಾಂಶಕಗಳನ್ನು, ಲವಣಾಂಶಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಹರಿವೆಡೆಯಲೆಲ್ಲಾ ಜೀವರಾಶಿಯನ್ನು ಪೋಷಿಸುತ್ತದೆ. ಪ್ರಾಣಚೈತನ್ಯವನ್ನು ತುಂಬುತ್ತದೆ. ಹಾಗಾಗಿಯೇ ಜೀವನ ಎನ್ನುವುದಕ್ಕೆ ನೀರು ಎಂಬ ಅರ್ಥವೂ ಬಂದಿರಬೇಕು. ಪ್ರೀತಿಯ ಗುಣವಿಶೇಷಗಳು ಕೂಡಾ ಇವುಗಳೇ ತಾನೆ?

ನೀರುಕ್ಕಿಸುವ ಇಂತಹ ಮಳೆಗಾಗಿ ನಾವು ಕಾಯುತ್ತೇವೆ. ಹಾಗೆಯೇ ಪ್ರೀತಿಗೂ ಕೂಡಾ. ಇಲ್ಲಿ ’ಕಾಯುವಿಕೆ’ ಅನ್ನುವುದು ನಿರಂತರವಾಗಿರುತ್ತದೆ. ಮಳೆಗಾಲದಲ್ಲಿ ಮಳೆ ಬಂದೇ ಬರುತ್ತದೆ. ಮಳೆ ಸುರಿಯುವ ಪ್ರಮಾಣದಲ್ಲಿ ಹೆಚ್ಚು ಕಮ್ಮಿ ಇರಬಹುದು. ಆದರೆ ಪೂರ್ತಿ ನಿರಾಶೆ ನೀಡಲಾರದು. ಆದರೆ ಪ್ರೀತಿ ಹಾಗಲ್ಲ. ಅದು ಒಲಿಯುತ್ತದೆ ಎಂಬ ಬಗ್ಗೆ ಭರವಸೆಯಿಲ್ಲ. ಒಲ್ಲಿದರೆ ಅದೇ ಮಹಾಭಾಗ್ಯ.

ನನಗೊಬ್ಬಳು ಅಜ್ಜಿಯಿದ್ದಳು. ನಾನು ನೋಡಿದಾಗಲೇ ಅವಳು ಬೆನ್ನು ಬಾಗಿದ ಅಜ್ಜಿ. ಗೋದಿ ಮೈಬಣ್ಣದ ದಪ್ಪ ದೇಹದ ಆ ನನ್ನಮ್ಮನ ಅಮ್ಮ, ಯೌವನದಲ್ಲಿ ಹೇಗಿದ್ದಿರಬಹುದು ಎಂಬುದು ನಮ್ಮ ಮತ್ತು ದೊಡ್ಡಮ್ಮನ ಮಕ್ಕಳ ಕುತೂಹಲದ ಸಂಗತಿ. ಆಕೆ ರಾಜಮಾತೆಯ ಹಾಗಿದ್ದಿರಬಹುದು ಎಂಬುದು ನಮ್ಮೆಲ್ಲರ ಒಕ್ಕೊರಲ ತೀರ್ಮಾನ. ಆದರೆ ಆಕೆಗೆ ಗಂಡು ಸಂತತಿಯೇ ಇರಲಿಲ್ಲ. ಅದು ಬೇರೆ ವಿಷಯ.
ಆ ಅಜ್ಜಿ ನನ್ನ ಬಾಲ್ಯದ ಸಖಿಯಾಗಿದ್ದಳು. ನಾನು ಅವಳ ಪಕ್ಕದಲ್ಲೇ ಮಲಗುತ್ತಿದ್ದೆ. ಮಳೆಗಾಲದ ರಾತ್ರಿಗಳಲ್ಲಿ ಆಕೆ ರಸವತ್ತಾದ ಕಥೆಗಳನ್ನು ಹೇಳುತ್ತಿದ್ದಳು. ಇಡೀ ಮನೆಯಲ್ಲಿ ನಾನು ಮತ್ತು ಅಜ್ಜಿ ಮಾತ್ರವೇ ಇರುತ್ತಿದ್ದೆವು. ಅಜ್ಜಿಗೆ ಆಸರೆಯಾಗಿರಲೆಂದು ನನ್ನ ಅಪ್ಪ-ಅಮ್ಮ ಅಜ್ಜಿಮನೆಯಲ್ಲಿ ನನ್ನನ್ನು ಶಾಲೆಗೆ ಹೋಗಲು ಬಿಟ್ಟಿದ್ದರು.ಆದರೆ ಇಲ್ಲಿ ಯಾರು ಯಾರಿಗೆ ಆಸರೆಯಾಗಿದ್ದರೆಂಬುದನ್ನು ನನ್ನೂರಿನ ಜನರೇ ಹೇಳಬೇಕು.

ಗುತ್ತಿಗಾರಿನ ಶಾಲೆಯಿಂದ ನನ್ನ ಅಜ್ಜಿಮನೆ ಇರುವ ಕಮಿಲಕ್ಕೆ ಮೂರು ಮೈಲಿ ನಡೆದು ಬರಬೇಕು. ಹಾಕಿದ ಉದ್ದ ಲಂಗ ಒದ್ದೆ ಮುದ್ದೆಯಾಗಿ ಎಡಗೈಯಲ್ಲಿ ಪುಸ್ತಕ, ಬಲಗೈಯಲ್ಲಿ ಕೊಡೆ ಹಿಡಿದು ನಾನು ಬರುತ್ತಿದೆ. ಅಜ್ಜಿ ದಿನಾ ಬಾಗಿಲಲ್ಲೇ ನನಗಾಗಿ ಕಾಯುತ್ತಾ ನಿಂತಿರುತ್ತಿದ್ದಳು. ತನ್ನ ಸೆರಗಿನಿಂದಲೇ ತಲೆ ಒರಸಿ ಬಟ್ಟೆ ಬದಲಿಸುವಂತೆ ಗದರಿಸುತ್ತಿದ್ದಳು. ಆಮೇಲೆ ಒಗ್ಗರಣೆ ಹಾಕಿ ಬೇಯಿಸಿದ ಹಳಸಿನ ತೊಳೆಯನ್ನು ತೆಂಗಿನ ಕಾಯಿ ಬೆರೆಸಿ ಕೊಡುತ್ತಿದ್ದಳು. ನಮ್ಮೆಲ್ಲರ ಬಾಯಲ್ಲಿ ಅದು ’ಕೆಟ್ಟ ತಿನಿಸು’ ಆದರೆ ಅಜ್ಜಿಗೆ ಅದು ಇಷ್ಟ. ಯಾಕೆಂದರೆ ಹಲ್ಲಿಲ್ಲದ ಬಾಯಲ್ಲಿ ಅದನ್ನು ’ಗುಳುಂ’ ಎಂದು ನುಂಗಲು ಸಾಧ್ಯವಾಗುತ್ತಿತ್ತು.

ಒಮ್ಮೊಮ್ಮೆ ಅಜ್ಜಿ ’ತಂಬಿಟ್ಟು’ ಮಾಡಿ ಇಡುತ್ತಿದ್ದಳು. ಕುಚ್ಚಿಗೆ ಅಕ್ಕಿಯನ್ನು ಹುರಿದು, ಒರಳಲ್ಲಿ ಕುಟ್ಟಿ, ಅದಕ್ಕೆ ತೆಂಗಿನಕಾಯಿಯನ್ನು ಹಾಕಿ, ಮೈಸೂರು ಬಾಳೆಹಣ್ಣನ್ನು ಕಿವುಚಿ ಹಾಕಿ, ಎಲ್ಲವನ್ನು ಸೇರಿಸಿ ದೊಡ್ಡ ದೊಡ್ಡ ಉಂಡೆ ಮಾಡಿದರೆ ಅಜ್ಜಿಯ ತಂಬಿಟ್ಟು ರೆಡಿ. ಏನೂ ಇಲ್ಲವಾದರೆ ಹಲಸು ಅಥವಾ ಗೇರು ಬೀಜವನ್ನಾದರೂ ಸುಟ್ಟು ಇಡುತ್ತಿದ್ದರು. ಮೊಮ್ಮಗಳ ಸೇವೆ ಮಾಡಲು ಅಜ್ಜಿಯ ಶಿಥಿಲ ರಟ್ಟೆಗಳಲ್ಲಿ, ಬಾಗಿದ ಬೆನ್ನಿನಲ್ಲಿ ಎಲ್ಲಿಯೋ ಶಕ್ತಿ ಅಡಗಿಕೊಂಡಿರುತ್ತಿತ್ತು.

ಈಗ ನನ್ನ ಅಜ್ಜಿ ಇಲ್ಲ. ಆದರೆ ಅವರು ನನ್ನ ಕನಸಿನಲ್ಲಿ ಆಗಾಗ ಬರುತ್ತಿರುತ್ತಾರೆ. ನಾವು, ಅಜ್ಜಿಗಾಗಿ ಕಟ್ಟಿಸಿದ ಹೊಸ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಮ್ಮಜ್ಜ ಕಟ್ಟಿಸಿದ ಹಳೆಯ ಮನೆಯ ಬಾಗಿಲ ಮುಂದೆ ಬಾಗಿಕೊಂಡು ನಡೆದು ಬರುತ್ತಿರುವಂತೆ ಕಾಣಿಸಿಕೊಳ್ಳುತ್ತಾರೆ.

ಮಳೆಯಲ್ಲಿ ನೆನೆಯುವುದು ಎಂದರೆ ಹೀಗೆಯೇ. ಇಲ್ಲಿ ’ನೆನೆಯುವುದು’ ಎಂದರೆ ಈ ಮಳೆಗಾಲದಲ್ಲಿ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕುವುದು ಎಂದಾಗುತ್ತದೆ. ಇಲ್ಲವೇ ದೈಹಿಕವಾಗಿ ಮಳೆಗೆ ಒಡ್ಡಿಕೊಳ್ಳುವುದು ಎಂದು ಕೂಡಾ ಅರ್ಥವಾಗುತ್ತದೆ. ’ಅಕ್ಕಿ ನೆನೆ ಹಾಕುವುದು’ ಎನ್ನುತ್ತೇವೆ.ಇಲ್ಲಿ ನೆನೆ ಎಂದರೆ ಹೀರಿಕೊಳ್ಳುವುದು, ಉಬ್ಬಿಕೊಳ್ಳುವುದು ಎಂದಾಗುತ್ತದೆ.

ಇಲ್ಲಿ ನಾನು ನೆನೆಯುವುದು ನನ್ನ ಬಾಲ್ಯವನ್ನು. ಅಲ್ಲಿ ನಾನು ಮಳೆಯಲ್ಲಿ ನೆಮ್ದಿದ್ದೆನೆ. ಅದು ನನ್ನ ಸುಕೋಮಲ ಭಾವನೆಗಳನ್ನು ಉದ್ದೀಪನಗೊಳಿಸಿದೆ. ಬಹುಶಃ ನನ್ನ ಮನೋಭೂಮಿಕೆಯಲ್ಲಿ ಪ್ರೀತಿಯ ಒಂದು ಬೀಜ ಬಿದಿದ್ದು ಇದೇ ಮಳೆಗಾಲದಲ್ಲಿ.

ಕುಕ್ಕೆಸುಬ್ರಹ್ಮಣ್ಯವನ್ನು ಬಗಲಲ್ಲಿಟ್ಟುಕೊಂಡ ಪಶ್ಚಿಮ ಘಟ್ಟಶ್ರೇಣಿ. ದಟ್ಟ ಅರಣ್ಯದ ಕಾಲುಹಾದಿ. ಮಳೆಗಾಲದ ದಿನಗಳು. ಸೂರ್ಯ ಮಾರ್ಕಿನ ಕೊಡೆ ಹಿಡಿದು ತಲೆತಗ್ಗಿಸಿ ನಡೆಯುತ್ತಿದ್ದರೆ ಸುಬ್ರಹ್ಮಣ್ಯದ ದೇವರ ಗದ್ದೆ ತಲುಪಿದಾಗಲೇ ತಲೆ ಎತ್ತುವುದು. ಯಾಕೆಂದರೆ ಕಾಲಿಗೆ ಹತ್ತಿ ಬರುವ ಜಿಗಣೆಗಳನ್ನು ಕೋಲಿನಿಂದಲೋ, ಕಲ್ಲಿನಿಂದಲೋ ಸರಿಸುವ ಕಾಯಕದಲ್ಲಿ ಮಗ್ನರಾಗಬೇಕಲ್ಲಾ!

ಇಂತಹ ಒಂದು ಮಳೆಗಾಲದಲ್ಲಿ ಜೋರಾಗಿ ಹಾಡು ಹೇಳಿಕೊಳ್ಳುತಾ ನಾನು ನಡೆದುಕೊಂಡು ಬರುತ್ತಿದ್ದೆ. ಹೇಗಿದ್ದರೂ ಮಳೆಯ ಹಿಮ್ಮೇಳ ಇತ್ತಲ್ಲಾ. ಆಗ ನನ್ನ ಹೆಸರಿಡಿದು ಕೂಗಿದಂತಾಯ್ತು. ಹಿಂತಿರುಗಿ ನೋಡಿದರೆ ದೂರದಲ್ಲಿ ಶರು ಓಡೋಡಿ ಬರುತ್ತಿದ್ದಾನೆ. ಕೈಯಲ್ಲಿ ಸೀತೆ ಹೂವಿನ ಗೊಂಚಲು. ಅದನ್ನು ನನ್ನೆಡೆಗೆ ಚಾಚಿ, ’ವರ್ಷದ ಅತ್ಯಂತ ದೀರ್ಘ ಹಗಲಿನ ದಿನದಂದು ಹುಟ್ಟಿದ ಉಷೆಗೆ ಜನ್ಮ ದಿನದ ಶುಭಾಶಯಗಳು’ ಎಂದ ನನಗೆ ಆಶ್ಚರ್ಯವಾಯಿತು. ಅವನತ್ತ ನೋಡಿದೆ. ಮೊಳಕೈಯಲ್ಲಿ ತರಚಿದ ಗಾಯಗಳಾಗಿದ್ದವು. ಚಡ್ಡಿ-ಶರ್ಟ್ ನೆಂದಿದ್ದವು; ಅಲ್ಲಲ್ಲಿ ಕೊಳೆಯೂ ಆಗಿತ್ತು. ಮರಹತ್ತಿ, ಜಾರಿ, ಕಷ್ಟಪಟ್ಟು ಹೂ ಕೊಯ್ದಿರಬೇಕು. ಆ ಕ್ಷಣ ನನ್ನಲ್ಲಿ ಸ್ಥಾಯಿಯಾಗಿ ಉಳಿದುಬಿಟ್ಟಿತು.

ಮಳೆಗಾಲದಲ್ಲಿ ನನ್ನೊಡನೆ ಜತೆಯಾಗಿ ನಡೆದವನು, ನನಗೆ ಕನಸು ಕಾಣುವುದನ್ನು ಹೇಳಿಕೊಟ್ಟವನು,ಈ ಶರು.
ಮಳೆ ಮತ್ತು ಪ್ರೀತಿ ಎರಡೂ ಕೂಡಾ ನೈಸರ್ಗಿಕವಾದುದು. ಎರಡೂ ಕೂಡಾ ಸಹಜ ಕ್ರಿಯೆಗಳು. ತನ್ನಷ್ಟಕ್ಕೆ ಘಟಿಸುವಂತಹದು. ಎರಡು ಕೂಡಾ ಮನಕ್ಕೆ ಮುದ ನೀಡುವಂತಹುದು.
ಈ ಶರೂ ಎನ್ನುವ ವ್ಯಕ್ತಿ, ವ್ಯಕ್ತಿಯೋ ಅದು ನನ್ನೊಳಗಿನ ಭಾವವೋ ಸ್ಪಷ್ಟವಾಗಿ ಗೊತ್ತಿಲ್ಲ. ವ್ಯಕ್ತಿಯನ್ನೂ ಮೀರಿ ಭಾವ ಬೆಳೆಯುತ್ತಲೇ ಹೋಯಿತು. ಆ ಪಾತ್ರವನ್ನು ನಾನು ಎಷ್ಟೊಂದು ಪೋಷಿಸಿಕೊಂಡು ಬಂದೆನೆಂದರೆ, ಇಂದು ನಾನು ಕಾಣುತ್ತಿರುವ ಪ್ರತಿ ಪುರುಷನಲ್ಲೂ ನಾನು ಶರೂವನ್ನೇ ಅರಸುತ್ತೇನೆ. ಶರು ಎಷ್ಟು ಪರಿಪೂರ್ಣ ಆಗಿದ್ದಾನೆಂದರೆ ಭೇಟಿಯಾದ ಯಾವ ವ್ಯಕ್ತಿಯೂ ನನಗೆ ಪೂರ್ತಿ ಇಷ್ಟವಾಗುವುದಿಲ್ಲ. ಹಾಗಾಗಿ ನನ್ನ ಭಾವುಕ ಜಗತ್ತಿನಲ್ಲಿ ನಾನು ಒಂಟಿ. ಹಾಗೆಂದರೂ ತಪ್ಪಾಗುತ್ತದೆ; ಅಲ್ಲಿ ಶರು ಸದಾ ನನ ಜತೆಗಿರುತ್ತಾನೆ.

ಬಹುಶಃ ನನ್ನ ಬಾಲ್ಯದ ಶರುವನ್ನು ನಾನು ಹುಡುಕಿಕೊಂಡು ಹೋಗಿದ್ದರೆ ಆತ ಈಗ ಹೆಗಲ ಮೇಲೆ ಗುದ್ದಲಿ ಇಟ್ಟುಕೊಂಡು ಅಡಿಕೆ ತೋಟದ ಕಡೆ ಹೊರಟಿರಬಹುದು. ಇಲ್ಲವೇ ಯಾವುದೋ ಗ್ರಾಮೀಣ ಬ್ಯಾಂಕಿನ ಕಚೇರಿಯಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿರಬಹುದು. ಇನ್ನೂ ಹೆಚ್ಚೆಂದರೆ ಸ್ಕೂಲ್ ಟೀಚರ್ ಆಗಿರಬಹುದು. ಅವನನ್ನು ಈಗ ಬೇಟಿ ಮಾಡಿ ನನ್ನ ಭಾವುಕ ಜಗತ್ತನ್ನು ಛಿದ್ರಗೊಳಿಸಿಕೊಳ್ಳುವುದು ನನಗೆ ಇಷ್ಟವಿಲ್ಲ.

ಸುರಿಯುವ ಸೋನೆ ಮಳೆಯನ್ನು ನೋಡುತ್ತಾ, ಭೂತ ಕಾಲಕ್ಕೆ ಜಾರಿ ಹೋಗುವುದರಲ್ಲಿ ಎಂತಹ ಸುಖವಿದೆ! ಮೌನದ ಭಾಷೆ ಗೊತ್ತಿರುವವರಿಗೆ ಮಳೆಗಾಲ ಮುದ ನೀಡುತ್ತದೆ. ಆ ಭಾಷೆ ಶರೂಗೆ ಗೊತ್ತಿತ್ತು. ಶಬ್ದಗಳ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ನಾವು ಮತ್ತೆ ಬಾಲ್ಯಕ್ಕೆ ಮರಳಲು ಸಾಧ್ಯವೇ?

ನನಗೊಬ್ಬ ಗೆಳೆಯನಿದ್ದಾನೆ. ಸ್ವಲ್ಪ ಮಟ್ಟಿಗೆ ಆತ ನನ್ನ ಶರುವನ್ನೇ ಹೋಲುತ್ತಾನೆ. ತುಂಬಾ ಬೇಸರವಾದಾಗ ’ ನೀನು ನನ್ನ ಶರು ಆಗಬಲ್ಲೆಯಾ?’ ಎಂದು ಕೇಳೋಣವೆಂದುಕೊಳ್ಳುತ್ತೇನೆ. ಆದರೆ ಕೇಳೋದಿಲ್ಲ. ವರ್ತಮಾನದ ಆತ ನನ್ನ ಬಾಲ್ಯಕ್ಕೆ ಹೇಗೆ ಬರಬಲ್ಲ. ಬಾಲ್ಯದ ಕನಸುಗಳೆ ಬೇರೆ, ವರ್ತಮಾನದ ಅಗತ್ಯಗಳೇ ಬೇರೆ. ನಾವು ಈ ಮಳೆಗಾಲಕ್ಕೆ ಮೈಯೊಡ್ಡಿ ನಿಂತರೂ ನಮ್ಮ ಒಳಜಗತ್ತಿನಲ್ಲಿರುವುದು ಬಾಲ್ಯದ ಮಳೆಗಾಲ. ಅಲ್ಲಿ ತೊಟ್ಟಿಕ್ಕಿದ ಪ್ರೀತಿ. ಅಲ್ಲಿ ಅನುಭವಿಸಿದ ನೋವು ನಲಿವುಗಳು. ಅದು ನಮ್ಮ ಸುಖದ ಜಗತ್ತು.

ಮಳೆಗಾಲದಲ್ಲಿ ತನ್ನಿನಿಯನ ಓಲವಿನ ಓಲೆಯನ್ನು ಓದುತ್ತಾ ಜಗತ್ತನ್ನು ಮರೆಯುವುವ ಸೊಗಸಿದೆಯಲ್ಲಾ...ಆ ಸುಖವನ್ನು ಅನುಭವಿಸಿದವರೇ ಧನ್ಯರು. ಮಳೆಗಾಲದಲ್ಲಿ ಪ್ರೇಮಿಗಳಿಗೆ ಆತ್ಮಬಂಧುವಾಗಿ ಕಾಣುತ್ತಿದ್ದವನು ಯಾರು ಗೊತ್ತೇ? ಅಂಚೆಯಣ್ಣ. ಜಡಿಮಳೆ ಸುರಿಯುತ್ತಿದ್ದರೂ ಅಂಚೆ ಇಲಾಖೆಯವರು ಕೊಟ್ಟ ಊರಗಲದ ಕೊಡೆಯನ್ನು ಹಿಡಿದು ಮನೆಮನೆಗೆ ಪತ್ರ ತಲುಪಿಸುತ್ತಿದ್ದ. ನನ್ನ ಶರು ಬರೆದ ಚೀಲಗಟ್ಟಲೆ ಪತ್ರಗಳನ್ನು ಆತ ಜೋಪಾನವಾಗಿ ಮಳೆಗೆ ಒದ್ದೆಯಾಗದಂತೆ ತಂದೊಪ್ಪಿಸಿದ್ದಾನೆ. ಹೃದಯಗಳನ್ನು ಬೆಸೆಯುವ ಪವಿತ್ರ ಕಾರ್ಯವನ್ನು ಮಾಡುವ ಈ ಅಂಚೆಯವನಿಗಾಗಿ ಈಗಲೂ ಕಾಯುವ ಪ್ರೀಮಿಗಳಿದ್ದಾರೆಯೇ? ಗೊತ್ತಿಲ್ಲ.

ಇದೇ ಸಂದರ್ಭದಲ್ಲಿ ನಾನು ನೋಡಿದ ಎರಡು ನಾಟಕಗಳು ನೆನಪಿಗೆ ಬರುತ್ತವೆ. ಮಹಾಕವಿ ಕಾಳಿದಾಸನ ಬದುಕಿನಲ್ಲಿ ನಡೆದಿರಬಹುದು ಎನ್ನಲಾದ ಘಟನೆಯೊಂದರ ಸುತ್ತ ಹಣೆಯಲಾದ ಕಥೆಯ ’ಆಷಾಢದ ಒಂದು ದಿನ’. ಕಾಳಿದಾಸನ ಕಲ್ಪನಾ ಸುಂದರಿ ಮಲ್ಲಿಕಾ ಮತ್ತು ಕಾಳಿದಾಸ ಇದರ ನಾಯಕ-ನಾಯಕಿಯರು. ಒಂದು ಜಡಿಮಳೆಯ ರಾತ್ರಿಯಲ್ಲಿ ಅವರಿಬ್ಬರೂ ಮನೆಯೊಂದರಲ್ಲಿ ಏಕಾಂತದಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಬಾವನೆಗಳನ್ನು ಹಂಚಿಕೊಳ್ಳುತ್ತಾರೆ. ಮಳೆಯ ಹಿನ್ನೆಲೆಯಲ್ಲಿ ನಡೆಯುವ ಇನ್ನೊಂದು ನಾಟಕ ’ಮಳೆನಿಲ್ಲುವವರೆಗೆ..’ ನಿರ್ಜನ ಮನೆಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹಣೆಯಲಾದ ಪತ್ತೆದಾರಿ ನಾಟಕ ಇದು. ಇದಕ್ಕೂ ಜಡಿಮಳೆಯ ಹಿನ್ನೆಲೆಯಿದೆ.

ನಡು ಮಳೆಗಾಲದಲ್ಲಿ ಬರುವ ಆಷಾಢ ಮಾಸ ನವ ದಂಪತಿಗಳ ಪಾಲಿಗೆ ವಿರಹದ ತಿಂಗಳು. ಈ ತಿಂಗಳಲ್ಲಿ ದಂಪತಿಗಳು ಪರಸ್ಪರ ನೋಡಬಾರದು ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಎರಡು ವ್ಯಕ್ತಿಗಳ ನಡುವೆ ಯಾವುದೇ ಭಾವುಕ ಸಂಬಂಧ ಏರ್ಪಟ್ಟರೂ ಅಗಲಿಕೆ ಎಂಬುದು ಅವರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ. ಪ್ರೀತಿ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಹಿರಿಯರು ನಿಂತು ಮಾಡಿಸಿದ ಮದುವೆಯಲ್ಲಿ ದಂಪತಿಗಳು ಪರಸ್ಪರ ದೂರವಿದ್ದುಕೊಂಡೇ ತಮ್ಮನ್ನು ಅರಿತುಕೊಂಡು ಮಾನಸಿಕವಾಗಿ ಹತ್ತಿರ ಬರಲಿ ಎಂಬ ಕಾರಣಕ್ಕೆ ಈ ಪದ್ದತಿ ರೂಢಿಯಲ್ಲಿ ಬಂದಿರಬಹುದು. ಇದಲ್ಲದೆ ರಸಿಕರು ಕೊಡುವ ಇನ್ನೊಂದು ಕಾರಣವೂ ಇದೆ; ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಅದು ಫಲವಂತಿಕೆಯನ್ನು ಕಂಡರೆ ಕಡು ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ಮೊದಲ ಭಾಗದಲ್ಲಿ ಮಗು ಜನಿಸುತ್ತದೆ. ಇದು ಬಾಣಂತಿ ಮತ್ತು ಮಗು ಇಬ್ಬರಿಗೂ ತ್ರಾಸದಾಯಕ ದಿನಗಳು.

ಈ ವರ್ಷದ ಜೂನ್ ಹತ್ತೊಂಬತ್ತರಿಂದ ಇಪ್ಪತ್ತೆಡರವರೆಗೆ ಕರಾವಳಿ ಮತ್ತು ಘಟ್ಟ ಪ್ರದೇಶದಲ್ಲಿ ಕುಂಭದ್ರೋಣ ಮಳೆ ಸುರಿಯಿತು. ಆ ಸಂದರ್ಭದಲ್ಲಿ ನಮ್ಮ ರಿಯಾಲಿಟಿ ಶೋ ಒಂದರ ಶೂಟಿಂಗ್ ಗಾಗಿ ನಾನು ಆ ಪ್ರದೇಶದಲ್ಲಿದ್ದೆ. ನದಿಗಳು ಮೈದುಂಬಿ ಹರಿಯುತ್ತಿದ್ದವು. ದಟ್ಟ ಕಾನನ, ಹಗಲಲ್ಲಿ ಬಿಳ್ಳಿಮೋಡಗಳಿಂದ ಮುಚ್ಚಿದ್ದರೆ ರಾತ್ರಿ ಅಳ್ಳೆದೆಯವರಲ್ಲಿ ನಡುಕ ಹುಟ್ಟಿಸುತ್ತಿತ್ತು. ಧರ್ಮಸ್ಥಳ. ಉಜಿರೆ, ಚಾರ್ಮಾಡಿ ಘಾಟ್, ಕುಕ್ಕೆಸುಬ್ರಹ್ಮಣ್ಯ, ಶಿರಾಡಿ ಘಾಟ್, ಸಕಲೇಶಪುರ, ಸೋಮವಾರಪೇಟೆ, ಬಿಸಲೆ ಅರಣ್ಯ ಪ್ರದೇಶಗಳಲ್ಲಿ ಮೂರುರಾತ್ರಿ ಮೂರು ಹಗಲು ಕ್ವಾಲಿಸ್ ನಲ್ಲಿ ಸುತ್ತಾಡಿದ್ದೆ. ಹೊರಗೆ ಜಡಿಮಳೆ; ಮನದಲ್ಲಿ ನೆನಪುಗಳ ಸೋನೆಮಳೆ.

ಪಕ್ಕದ ಸೀಟ್ ಖಾಲಿಯಾಗಿತ್ತು.ಮನಸ್ಸು ಬಾಲ್ಯಕ್ಕೆ ಜಾರಿತ್ತು. ಬೆಚ್ಚನೆಯ ಕನವರಿಕೆಗಳು. ಗ್ಲಾಸ್  ಸರಿಸಿ ಹೊರಗೆ ಸುರಿಯುವ ಮಳೆಯನ್ನೇ ದಿಟ್ಟಿಸುತ್ತಿದ್ದೆ. ಬದುಕಿನ ಯಾವುದೋ ತಿರುವಿನಲ್ಲಿ ಶರು ಮೆಲ್ಲನೆ ಬಂದು ನನ್ನ ಪಕ್ಕದಲ್ಲಿ ನಿಲ್ಲಬಹುದು, ಸೀತೆ ಹೂವನ್ನು ನನ್ನೆಡೆಗೆ ಚಾಚಿ ’ತಗೋ ಉಷೆ’ ಅನ್ನಬಹುದು....

ಯಾವ ಪ್ರಲೋಭನೆಗಳೂ ಇಲ್ಲದೆ ಸುಮ್ಮನೆ ಒಳಜಗತ್ತಿಗೆ ಸರಿದು ಹೋಗಲು ಈ ವರ್ಷಋತು ಎಷ್ಟೊಂದು ಅನುವುಗಳನ್ನು ಮಾಡಿಕೊಟ್ಟಿದೆ! ಅದಕ್ಕೇ ಕವಿ ಹೇಳಿರಬೇಕು; ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲ ನೆನಪಾಗುತ್ತಿದೆ....

[ಹಳೆಯ ಮ್ಯಾಗಜಿನ್ ಗಳನ್ನು ರದ್ದಿಗೆ ಹಾಕುತ್ತಿದ್ದಾಗ ’ಓ ಮನಸೇ’ ನಿಯತಕಾಲಿಕದಲ್ಲಿ  ಈ ಲೇಖನ ಸಿಕ್ಕಿತು.]