Sunday, December 29, 2013

ಪೇಸ್ ಬುಕ್ಕಿನಲ್ಲಾದ ಜ್ನಾನೋದಯಗಳು..!


ನಿನ್ನನ್ನು ಪ್ರೀತಿಸಲು ಆರಂಭಿಸಿದ ಮೇಲೆ..
ಕನ್ನಡಿಯತ್ತ ತಿರುಗಿದೆ..
ನನ್ನ ಮುಖವೀಗ ಸುಂದರವಾಗಿ ಕಾಣಿಸುತ್ತಿದೆ...!

ನೀನೊಂದು ಸುಂದರವಾದ, ಸುದೀರ್ಘವಾದ ಕನಸಾಗಿದ್ದೆ.
ನನ್ನ ಪುಣ್ಯ; ಅದೊಂದು ಖಂಡಕಾವ್ಯ.
ಬದುಕಿನುದ್ದಕ್ಕೂ ಮೆಲುಕು ಹಾಕುವ ಭಾಗ್ಯ..!
.

ಎಲ್ಲಾ ಘಟನೆಗಳನ್ನು ಆಯಾಯ ಕಾಲಕ್ಕೆ ಎಳೆದೆಳೆದು ಬಿಸಾಕಿಬಿಡುತ್ತಿದ್ದೆ.
ಅದೊಂದು ನೆನಪು....
ಜನ್ಮ ಜನ್ಮ ಜನ್ಮಾಂತರದ ಕನವರಿಕೆಯಂತೆ ಕಾಡುತ್ತಿದೆ.
ನಾನು ಮಧುಮೇಹಿಯಲ್ಲ ಆದರೂ...
ಹುಣ್ಣು ವ್ರಣವಾಗುತ್ತಿದೆ..
ಇದು ಅಂಗ ಛೇಧಿಸದೆ ಬಿಡದು.

ನದಿ ದಾಟುತ್ತಿದ್ದೆ; ಪರ್ಸ್ ಜಾರಿ ಬಿತ್ತು.
ಅದು ತೇಲುವ-ಮುಳುಗುವ ಅಂದವನ್ನು ನೋಡುತ್ತಾ ನಿಂತು ಬಿಟ್ಟೆ.
ಅದರಲ್ಲಿದ್ದ ಒಡವೆಗಳು ನೆನಪಾಗಲೇ ಇಲ್ಲ;
ಬಹುಶಃ ನಾನು ಸತ್ತಿರಬೇಕು...!
ಅಂದು ಘಟಿಸಿದ ಕಂಕಣ ಸೂರ್ಯನ ಬೆಳಕಿನುಂಗರಕ್ಕಾಗಿ
ಇಂದು ಹಂಬಲಿಸುತ್ತಿದೆ ನನ್ನ ಬೋಳು ಬೆರಳು.
ಅಂದು-ಇಂದುಗಳ ಬೆಸೆಯಬಲ್ಲ ಬಂಧು, ನೀನೆಲ್ಲಿರುವೆ ಹೇಳು?


ದೇವಕಣ, ವೇವ್ಸ್, ಪಾರ್ಟಿಕಲ್ಸ್ ಗಳ ಗೊಂದಲದಲ್ಲಿ ಬಿದ್ದಿದ್ದೇನೆ.....
ಮುಂದೊಂದು ದಿನ ಅವನು....
ಕೋಟಿ ಯೋಜನ ದೂರವಿದ್ದರೂ ಕ್ಷಣಮಾತ್ರದಲ್ಲಿ ನನ್ನೆದುರು ಪ್ರತ್ಯಕ್ಷನಾಗಬಹುದು...
ಈ ಕಲ್ಪನೆಯಿಂದಲೇ ರೋಮಾಂಚನಗೊಳ್ಳುತ್ತಿದ್ದೇನೆ...!



ನಾಳೆ ಶುಕ್ರ ಸಂಗಮ; ಶತಮಾನಕ್ಕೊಮ್ಮೆ ಘಟಿಸುವುದಂತೆ.
ಈ ಭೂಮಿಯಲ್ಲಂತೂ ನಮ್ಮಿಬ್ಬರ ಕಣ್ಣುಗಳು ಸಂಗಮಿಸಲಿಲ್ಲ.
ಸುಮೂರ್ತ ನಾಳೆ; ಆಕಾಶಕ್ಕೆ ನೆಟ್ಟುಬಿಡು ದೃಷ್ಟಿ.
ತ್ರಿಕೋನ ಗೋಪುರವಾಗಲಿ.
ದೃಷ್ಟಿಸಂಗಮಕ್ಕೆ ಸೂರ್ಯ ಸಾಕ್ಷಿಯಾಗಲಿ



ಹೊರಜಗತ್ತು ಮಬ್ಬಾಗಿತ್ತು; ಒಳಗನ್ನು ತುಂಬಿಕೊಳ್ಳುವ ಹಂಬಲ.
ಧೂಮಕೇತುವಿನಂತೆ ಅಪ್ಪಳಿಸಿಬಿಟ್ಟೆ
ಪಂಚೇಂದ್ರಿಯಗಳಿಗೆ ದಕ್ಕಲಿಲ್ಲ; ಭಾವಸ್ಪರ್ಶಕ್ಕೆ ನಿಲುಕಲಿಲ್ಲ.
ಮನಸೀಗ ವೃಷಭಾವತಿ..!


ಅವನು ಹೂ ಬಿರಿದಂತೆ ನಗುತ್ತಿದ್ದ;
ನಾನು ಮೈ ಮರೆತು ನೋಡಿದೆ.
ಕೊನೆಯಲ್ಲಿ ನಾನು ಅಳುತ್ತಿದ್ದೆ;
ಅವನು ಸುಮ್ಮನೆ ನೋಡುತ್ತಿದ್ದ.
ಪೂರ್ವದಲ್ಲಿ ಉದಯಿಸಿದ್ದು, ಪಶ್ಚಿಮದಲ್ಲಿ ಬಾಡಿತ್ತು.

ಗ್ಯಾಲರಿಯಲ್ಲಿಟ್ಟ ಹುಚ್ಚು ಹಿಡಿಸುವ ಮೋಹಕ ಪೈಂಟಿಂಗ್;
ನನ್ನ ನೋಡಿ ಮುಗುಳ್ನಕ್ಕಿತು.
ಕೈ ಚಾಚಿದೆ.ನುಣುಚಿಕೊಂಡಿತು.
ಮೊನ್ನೆ ಚಿತ್ರಸಂತೆಯಲ್ಲಿ ಅದರ ಪ್ರತಿಕೃತಿಯ ಕಂಡೆ.
ತಡಮಾಡಲಿಲ್ಲ. ಖರೀದಿಸಿದೆ. 
ಬೆರಳ ತುದಿಯಲ್ಲಿ ಹಿಡಿದು,
ಎತ್ತಿ ಸಂಗಮದಲ್ಲಿ ಎಸೆದೆ.
ಎದೆಯಲ್ಲಿ ಹಸಿರು ಆವರಿಸಿತು.
ಕಣ್ಮುಚ್ಚಿದೆ; ಎದೆಯಲ್ಲಿ ಹೂಗಳು ತೊನೆದಾಡುತ್ತಿದ್ದವು

ರೆಂಜೆ ಮರದಡಿಯಲ್ಲಿ ನಿಂತಿದ್ದೆ.
ಟಪ್.. ಟಪ್..ಲಯ ಬದ್ದ ಹನಿಗಳು 
ಸೂರ್ಯ ಮಾರ್ಕಿನ ಕೊಡೆಯ ಓರೆ ಮಾಡಿ ನೋಡಿದ್ದೆ.
ಮರಕ್ಕೆ ಕತ್ತರಿಕಾಲನ್ನಾಕಿ ತಬ್ಬಿ, ಮೇಲೆರುತ್ತಾ.. ಜಾರುತ್ತಾ
ಸೀತೆ ಹೂನತ್ತ ಕೈ ಚಾಚುತ್ತಿದ್ದೆ.
ಈಗಲೂ ಮಳೆ ಸುರಿಯುತ್ತಿದೆ....
ಕನಸಲ್ಲೂ ಕಾಡುವ ಅದೇ ಜಾಗ; ನೀನಿಲ್ಲ.
ಪಾರಿಜಾತದ ಕಂಪಿನಲ್ಲಿ ಕಸುವಿಲ್ಲ.
ದಿಂಬಿನಲ್ಲಿ ತಲೆಯಿಟ್ಟಿದ್ದೇನೆ.
ಇಲ್ಲಿಳಿಯುವ ನೀರಿಗೆ ಶಬ್ದವಿಲ್ಲ.
ಅಂದಿನಂತೆ ಇಂದೂ ಅಂಜಲಿಬದ್ಧೆ,


ಹಡೆಯೆತ್ತಿದ ನಾಗರದ ದಾಳಿ ಕಟ್ಟ ನೀನು.
ಸೊಬಗಿಗೆ ಸೋತಿದ್ದೇನೆ.
ಮುಟ್ಟಬೇಕೆಂಬ ಬಯಕೆ.
ತಾಯಿತ ಕಟ್ಟುವ ಲಿಂಗಪ್ಪಜ್ಜ ಸತ್ತು ವರ್ಷಗಳು ಸಂದಿವೆ.
ಮಂತ್ರ ಸಿದ್ಧಿಯಾಗುವ ಲಕ್ಷಣಗಳಿಲ್ಲ.
ಫಲವಂತಿಕೆಯ ದೇವ ನೀನು.
ಕೇದಗೆಯ ಹೂ ಮುಡಿದಿರುವೆ.
ಬಾ, ಬಂದೆನ್ನ ಗರ್ಭದೊಳಗೆ ಹುದುಗಿಕೋ.
ಮಿಡಿ ನಾಗರವೊಂದು ಅಲ್ಲೇ ಈಜಾಡುತ್ತಿರಲಿ..

ನಿನ್ನ ನಿರಾಕರಣೆಯಲ್ಲಿ...
ನನ್ನ ಬದುಕಿನ ಹಾದಿ ತೆರೆಯಿತು.
ನಾನು ಜೀವನ್ಮುಖಿಯಾದೆ..

ನಿರಾಯುಧಳಾಗಿ ಜಗದೆದುರು ನಿಂತಿದ್ದೇನೆ ಮಾಧವ,
ನಿನ್ನ ಪಾದಗಳಿಗೆ ಹಣೆ ಹಚ್ಚಿದ್ದೇನೆ...
ಕುಮಾರವ್ಯಾಸ ಸ್ತುತಿಸಿದ ಕೈತವದ ಶಿಕ್ಷಾಗುರುವೇ..
ಶಸ್ತ್ರಸಜ್ಜಿತನಾಗಿ ಬಂದೆನ್ನ ಬೆನ್ನ ಹಿಂದೆ ನಿಲ್ಲು.
ಭವಸಾಗರವನ್ನು ಗೆದ್ದು ಬಿಡುತ್ತೇನೆ!



ನಟ್ಟ ನಡುರಾತ್ರಿಯಲಿ ಬಾಲ್ಕನಿಯ ನಿಶ್ಚಲ ಪ್ರತಿಮೆ.
ಆಕಾಶದೆಡೆಗೆ ಮುಖ ಎತ್ತಿದೆ; ಚಳಿಗಾಲದ ಚಂದಿರನೂ ನಿಶ್ಚಲ,
ಮಳೆಗಾಲದಲ್ಲಿ ಎದೆಗಿಳಿದ ಹನಿಗಳು
ಮೋಡಗಳಾಗಿ ಮೇಲೇರಿ ಚಂದ್ರನಿಗೆ ಹಾರವಾಗುತ್ತಿವೆ.
ಮನಸು ಸ್ವರ್ಗದ ಬಾಗಿಲ ಕಾವಲು ನಾಯಿ;
ನರಕದ ರೊಟ್ಟಿ ತುಂಡಿಗಾಗಿ ಹಂಬಲಿಸುತ್ತಿದೆ.

ನಾನು ನರಕಕ್ಕೆ ಬೇಕಾದರೂ ಬೀಳಲು ಸಿದ್ಧ.
ಆದರೆ ಅದು ಸ್ವರ್ಗ ಎಂದು ಕ್ಷಣಕಾಲವಾದರೂ
ನನ್ನನ್ನು ನಂಬಿಸು ದೊರೆಯೇ.
                      ***

[ಪೇಸ್ ಬುಕ್ ನಲ್ಲಿ ಮೂಡಿದ ಸಂಚಾರಿಭಾವಗಳಿವು; ಆದರೂ ಇವುಗಳ ಹಿಂದೆ ನೆನಪುಗಳ ಮಿಂಚಿದೆ. ಹಾಗಾಗಿ ಇದನ್ನಿಲ್ಲಿ ದಾಖಲಿಸುತ್ತಿದ್ದೇನೆ..
ಇದು ನನಗಾಗಿ, ನೀವೂ ಓದಿದರೆ ನಾನೂ ಧನ್ಯಳು.]

Thursday, September 12, 2013

’ಸನ್ನಿಧಿ’ಯಲ್ಲಿ ಧ್ಯಾನವೆಂಬ ಮನಸಿನ ಸ್ನಾನ



ನಾನು ವಾಸಿಸುವುದು ಬೆಂಗಳೂರೆಂಬ ಮಹಾನಗರದಲ್ಲಿ. ಕಾಲುಗಳಿಗೆ ಚಕ್ರ ಕಟ್ಟಿಕೊಂಡಂತೆ ಸದಾ ಓಡಾಟದಲ್ಲಿರೋಳು. ತಲೆಯ ಮೇಲೆ ಹೊತ್ತಿರುವ ಮಣ ಬಾರದ ಹೊರೆ. ಮುಖದ ಮೇಲೆ ನಗುವಿನ ಮುಖವಾಡ..ದಿನದ ಇಪ್ಪತ್ತನಾಲ್ಕು ಘಂಟೆಯೂ ತನಗೆ ಸಾಲದೇನೋ ಎಂಬ ಆತಂಕ...

ಇಲ್ಲಿಂದ ಎಲ್ಲಾದರೂ ಓಡಿ ಹೋಗಬೇಕೆಂಬ ತವಕ..ಯಾರಿಗೂ ಕಾಣದ ಜಾಗ...ಅಲ್ಲಿ ಮನುಷ್ಯರಿರಬಾರದು..ಇದ್ದರೂ ಅವರ ಗಮನ ನನ್ನೆಡೆಗೆ ಹರಿಯಬಾರದು... ಇದೆಲ್ಲಾ ಬಹಳ ಕಾಲದಿಂದ ನನ್ನ ಮಮಸ್ಸಿನಲ್ಲಿ ಮಿಡುಕಾಡುತ್ತಿದ್ದ ಭಾವಗಳು.  ಮನೆ ಮತ್ತು ಮನೆಯಿಂದಾಚೆ ದುಡಿದು ಹೈರಾಣಾಗಿರುವ ಎಲ್ಲರಲ್ಲೂ ಆಗೊಮ್ಮೆ- ಈಗೊಮ್ಮೆ ಮಿಂಚಿ ಮಾಯವಾಗುವ ಸಂಚಾರಿ ಭಾವಗಳಿವು.

ಹೀಗಿರುವಾಗಲೇ ಕಳೆದ ವಾರ ನನ್ನ ಗೆಳೆಯನೊಡನೆ ಜಗಳವಾಯ್ತು.  ನನ್ನ ಸಣ್ಣ-ಪುಟ್ಟ ತಲ್ಲಣಗಳನ್ನೂ ಅವನೊಡನೆ  ಹಂಚಿಕೊಳ್ಳುತ್ತಿದ್ದೆ. ಈಗ ಮಾತಿಗೆ ಮಾತು ಬೆಳೆದು ’ನೀನು ಎಲ್ಲಾದರೂ ಹಾಳಾಗಿ ಹೋಗು’ ಅಂದುಬಿಟ್ಟು ಪೋನ್ ಡಿಸ್ ಕನೆಕ್ಟ್ ಮಾಡಿಬಿಟ್ಟ.. ನನಗಿದ್ದ ಏಕೈಕ ಗೆಳೆಯನವನು. ಆದರೆ ಅವನಿಗೆ ನನ್ನಂತಹ ಹಲವಾರು ಗೆಳೆಯ-ಗೆಳತಿಯರಿದ್ದರು. ನಾನಿಲ್ಲದಿದ್ದರೂ ಅವನ ಬದುಕಿನಲ್ಲಿ ಯಾವ ಬದಲಾವಣೆಯೂ ಆಗದು. ಆದರೆ ನನಗೆ?
ಪೋನ್ ಇಟ್ಟ ಮೇಲೆ ನನ್ನಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು;
 ಆತ ನಿಜವಾಗಿಯೂ ನನ್ನ ಗೆಳೆಯನಾಗಿದ್ದರೆ, ನನ್ನನ್ನು ಪ್ರೀತಿಸಿದ್ದರೆ  ಹಾಗೆ ಹೇಳಲು ಸಾಧ್ಯವಿತ್ತೆ? ಆತನ ಮನದಲ್ಲಿ ನನ್ನ ಬಗ್ಗೆ ಅಷ್ಟೊಂದು ಅಸಹನೆ ಹೇಗೆ ತುಂಬಿತು? ಅಷ್ಟು ಒಳ್ಳೆಯ ವ್ಯಕ್ತಿ ಹಾಗೆ ರೂಕ್ಷವಾಗಿ ಪ್ರತಿಕ್ರಿಯಿಸಿದ್ದು ಯಾಕೆ? ಅಷ್ಟು ಕೆಟ್ಟದಾಗಿ ನಾನು ಅವನೊಡನೆ ವ್ಯವಹರಿಸಿದೆನೇ? ಒಂದು ವೇಳೆ ನಾನು ಹಾಗೆ ನಡೆದುಕೊಂಡಿದ್ದರೆ ಅದರ ಹಿಂದಿನ ಭಾವ ಗೆಳೆಯನಾದ ಅವನಿಗೆ ಗೊತ್ತಾಗಬೇಕಿತ್ತಲ್ಲವೇ?. ದುಃಖ ಒತ್ತರಿಸಿಬಂತು.  ಆಗ ನನಗೆ ನೆನಪಾಗಿದ್ದೇ ನಾನು ವರ್ಷಗಳಿಂದ ಭಾಗವಹಿಸಿಬೇಕೆಂದುಕೊಂಡಿದ್ದ ಓಶೋ ಮೆಡಿಟೇಷನ್ ಕ್ಯಾಂಪ್..

ಓಶೋ ಅಂದ ತಕ್ಷಣ ಕೆಲವರ ಹುಬ್ಬು ಮೇಲೇರಬಹುದು. ಅದಕ್ಕೆ ಅವರು ಕೊಡುವ ಕಾರಣ ಓಶೋ ಪ್ರತಿಪಾದಿಸುತ್ತಿದ್ದ ಮುಕ್ತ ಲೈಂಗಿಕತೆಯ ವಿಚಾರಗಳು.ಓಶೋ  ಪುಸ್ತಕಗಳನ್ನು ನಾನು ಹುಚ್ಚಳಂತೆ ಓದಿದ್ದೇನೆ. ಅವರ ’ಸ್ತ್ರೀ ಮುಕ್ತಿ’ ಪುಸ್ತಕವನ್ನು ಹಲವಾರು ಗೆಳತಿಯರಿಗೆ ಉಡುಗೋರೆಯಾಗಿ ನೀಡಿದ್ದೇನೆ. ಸದಾ ವರ್ತಮಾನದಲ್ಲಿ, ಈ ಕ್ಷಣದಲ್ಲಿ ಬದುಕುತ್ತಿದ್ದ ಓಶೋ ಭವಿಷ್ಯದ ಜಗತ್ತಿನ ಬಗ್ಗೆ ಗಂಭೀರವಾಗಿ ಚಿಂತಿಸಿದ ದಾರ್ಶನಿಕ.

ತಡಮಾಡಲಿಲ್ಲ ನಾನು, ಓಶೋ ಧ್ಯಾನಕೇಂದ್ರವನ್ನು ಸಂಪರ್ಕಿಸಿದೆ. ಇನ್ನೆರಡೇ ದಿನಕ್ಕೆ ಈ ತಿಂಗಳ ಕ್ಯಾಂಪ್ ಆರಂಭವಾಗಲಿದೆ ಎಂಬುದು ಅದರ ಆಯೋಜಕರಿಂದ ತಿಳಿಯಿತು. .ಪ್ರತಿಯೊಂದು ಘಟನೆಗೂ ಕಾರ್ಯಕಾರಣ ಸಂಬಂಧವಿರುತ್ತದೆ ಎಂದು ನಂಬಿರುವಳು ನಾನು. ನನ್ನೊಳಗಿನ ಮಹಾಸಾಗರವನ್ನೊಮ್ಮೆ ಕಡೆಯಬೇಕಾಗಿತ್ತು. ನಾನು ’ಸನ್ನಿಧಿ’ ಗೆ ಬಂದುಬಿಟ್ಟೆ.

ಸನ್ನಿಧಿಯಿರುವುದು ಮೈಸೂರಿನಿಂದ ೧೦ ಕಿ.ಮೀ ದೂರದಲ್ಲಿರುವ ಉತ್ತನಹಳ್ಳಿಯಲ್ಲಿ, ಸುತ್ತಮುತ್ತ ಹಚ್ಚ ಹಸಿರನ ಭತ್ತದ ಗದ್ದೆಗಳು.. ಅದರ ಗೇಟ್ ನಲ್ಲಿ ನಿಂತು ಎಡಕ್ಕೆ ನೋಡಿದರೆ ತಾಯಿ ಚಾಮುಂಡೇಶ್ವರಿ ನೆಲೆನಿಂತಿರುವ ಚಾಮುಂಡಿ ಬೆಟ್ಟದ  ವಿಹಂಗಮ ನೋಟ .

. ಓಶೋ ವಿಚಾರಧಾರೆಯಿಂದ ಪ್ರಭಾವಿತರಾದ  ಅಡ್ವೋಕೇಟ್ ವೇಣುಗೋಪಾಲ್ ಎಂಬ ತರುಣ ಭಾರತದಾದ್ಯಂತ ಜರಗುತ್ತಿದ್ದ ಓಶೋ ಕ್ಯಾಂಪ್ ಗಳಲ್ಲಿ ಭಾಗಿಯಾಗುತ್ತಿದ್ದರು. ಕೊನೆಗೆ ಈ ಅಲೆದಾಟ ಸಾಕು ಎಂದು  ತಮ್ಮ  ತೋಟದಲ್ಲಿ ’ಮೌನ’ ಎಂಬ ಪುಟ್ಟ ಗುಡಿಸಲೊಂದನ್ನು ಕಟ್ಟಿಕೊಂಡು ತಮ್ಮ ಬೆರಳೆಣಿಕೆಯ ಸ್ನೇಹಿತರೊಡನೆ ಧ್ಯಾನ ಮಾಡಲಾರಂಭಿಸಿದರು. ಅನಂತರದಲ್ಲಿ ಸ್ನೇಹಿತರ, ಅಸಕ್ತರ ಸಂಖ್ಯೆ ಜಾಸ್ತಿಯಾಗುತ್ತಾ ಈಗ ತಿಂಗಳೊಂದರಲ್ಲಿ ನೂರು ಜನ ಭಾಗವಹಿಸುವಂತಹ ಮೂರು ದಿನಗಳ ರೆಸಿಡೆನ್ಷಿಯಲ್ ಧ್ಯಾನ ಶಿಭಿರವಾಗಿ ಬೆಳೆದಿದೆ. ಅದರ ಹೆಸರೇ ’ಸನ್ನಿಧಿ’

  ”ಸನ್ನಿಧಿ’ ಇದೊಂದು ಧ್ಯಾನ ಪರಿಸರ. ಬಾಳೆ, ತೆಂಗು, ಹಣ್ಣಿನ ತೋಟದ ಮಧ್ಯೆ ನಿರ್ಮಿಸಲಾಗಿರುವ ಪುಟ್ಟ ಪುಟ್ಟ ಸರಳ ಕಾಟೇಜುಗಳು. ಇಲ್ಲಿ ಉಳಿದುಕೊಳ್ಳುವ ಶಿಭಿರಾರ್ಥಿಗಳು ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಲೇಕು. ಹಾಗಾಗಿ ತೋಟದಲ್ಲಿ ಮಧ್ಯೆ ಇರುವ ವಿಶಾಲ ಕೆರೆಯಿಂದ ಶೌಚಾದಿ ಕೆಲಸಗಳಿಗೆ ಸಮ್ರುದ್ಧವಾದ ನೀರಿನ ಪೂರೈಕೆಯಿದೆ.
ಮೊದಲೇ ಹೇಳಿಬಿಡುತ್ತೇನೆ ನನಗೆ ಗುಂಪೆಂದರೆ ಅಲರ್ಜಿ. ಆ ಜಾಗ ನನಗೆ ಎಷ್ಟು ಹಿಡಿಸಿತು ಎಂದರೆ ಅಷ್ಟು ಜನರಿದ್ದರೂ ನಾನಲ್ಲಿ ಏಕಾಂತವನ್ನು ಅನುಭವಿಸಿದೆ. ಮೌನದ ಮಹತ್ವವನ್ನು ಅರಿಯುವ ಪ್ರಯತ್ನ ಮಾಡಿದೆ...

ನಾವು ಆಧುನಿಕ ಮನುಷ್ಯರು ಸದಾ ಒತ್ತಡದಲ್ಲೇ ಬದುಕುತ್ತೇವೆ..ಪ್ರತಿ ಕ್ಷಣವೂ ನಾವು ಸ್ಪರ್ಧೆಗೆ ಬಿದ್ದು ಓಡುತ್ತಿರುತ್ತೇವೆ.ಸಂಬಂಧಗಳ ಗೋಜಲುಗಳು, ಅರ್ಥಿಕ ಸೋಲುಳು, ಪ್ರತಿಷ್ಠೆಯ ಮೇಲಾಟಗಳು, ದುಃಖ, ನೋವು, ನಿರಾಶೆ,ಪ್ರೇಮ ವೈಫಲ್ಯದಂತಹ ಹತ್ತಿಕ್ಕಿದ ಭಾವನೆಗಳು. ಇವೆಲ್ಲವುಗಳಿಂದ ಮನಸ್ಸು ಸುಟ್ಟ ಬದನೆಕಾಯಿಯಂತಾಗಿದ್ದರೆ ಮಿದುಳು ಕುದಿಯುವ ಹಂಡೆಯಾಗಿರುತ್ತದೆ. ಹೀಗಿರುವಾಗಲೇ ಮನೋ ಸಂಬಂಧಿ [ಸೈಕೋ ಸೊಮೋಟಿಕ್] ಕಾಯಿಲೆಗಳು ದೇಹವನ್ನು ಆಕ್ರಮಿಸಿಕೊಂಡು ಜೀವನ ಸಾಕಪ್ಪಾ ಎನಿಸಿಬಿಡುತ್ತದೆ.ಮನಸ್ಸಿನಾಳದಲ್ಲಿರುವ ಇಂತಹ ಜ್ವಾಲಾಮುಖಿಯನ್ನು ಒಮ್ಮೆ ಸ್ಪೋಟಿಸಿ ಮನಸ್ಸನ್ನು ಸಹಜ ಆನಂದಮಯ ಸ್ಥಿತಿಗೆ ತರುವ ಪ್ರಯತ್ನವನ್ನು ಸನ್ನಿಧಿಯ ಧ್ಯಾನ ಕ್ಯಾಂಪ್ ಮಾಡುತ್ತದೆ. ಅಲ್ಲಿ ಕೆಲವರ ಭಾವ ಸ್ಪೋಟ ಹೇಗಿತ್ತೆಂದರೆ ನನಗೆ ಗುಲ್ಭರ್ಗಾ ಜಿಲ್ಲೆಯ ಗಾಣಗಾಪುರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು. ಇದರ ಜೊತೆಗೆ ನನಗೆ ಅಚ್ಚರಿ ತಂದಿದ್ದು ಶಿಭಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದವರು ಯುವಕರು ಮತ್ತು ಯುವತಿಯರು. ಅದರಲ್ಲಿಯೂ ಐಟಿ ಜಗತ್ತಿಗೆ ಸೇರಿದವರು. ಅವರಲ್ಲಿ ಮೇಲ್ನೋಟಕ್ಕೆ ಎಲ್ಲವೂ ಇದೆ. ಯಾವುದನ್ನು ತುಂಬಿಕೊಳ್ಳುವುದಕ್ಕಾಗಿ ಅವರಿಲ್ಲಿಗೆ ಬಂದಿರಬಹುದು?

ಇಲ್ಲಿ ನಾನು ಯಾವುದರ ಪರಿವೇ ಇಲ್ಲದಂತೆ ಪರ್ವತಗಳು ಪ್ರತಿಧ್ವನಿಸುವಂತೆ ಕಿರುಚಿದೆ. ಒಳಗಿನ ಒತ್ತಡ ಸ್ಪೋಟಗೊಳ್ಳುವಂತೆ ನಕ್ಕೆ. ಸಾಗರ ಉಕ್ಕುವಂತೆ ಅತ್ತೆ. ಮೈಬೆವರು ಹರಿದು ಇಳೆ ತೋಯುವಂತೆ ಡ್ಯಾನ್ಸ್ ಮಾಡಿದೆ. ಇದೆಲ್ಲಾ ಹೊರಜಗತ್ತಿಗೆ ಕಾಣ ಬಹುದಾದ ನೋಟಗಳಾಯ್ತು.  ನನ್ನ ಅಂತರ್ ಮನಸ್ಸಿನಲ್ಲಿ ಏನಾಯ್ತು? ಅದನ್ನು ಹೇಳಬೇಕೆಂದರೆ ಇಲ್ಲಿ ನಮಗೆ ಹೇಳಿಕೊಟ್ಟ ಕೆಲವು ಧ್ಯಾನದ ಟೆಕ್ನಿಕ್ ಗಳನ್ನು ಹೇಳಬೇಕಾಗುತ್ತದೆ. ಆದರೆ ನಿಮಗೆ ಗೊತ್ತಿದೆ ಧ್ಯಾನವನ್ನು ಮಾತುಗಳಲ್ಲಿ ಹೇಳಲು ಬಾರದು ಅದನ್ನು ಅನುಭವಿಸಬೇಕು. ದೇಹ, ಮನಸ್ಸು,ಭಾವಗಳು ಒಂದಾಗುವ ದಿವ್ಯ ಕ್ಷಣಗಳವು.

ಇಲ್ಲಿ ಪ್ರಾತ್ಯಕ್ಷಿಕೆ ನೀಡಿದ  ನಾದ ಬ್ರಹ್ಮ [ಪತಂಜಲಿಯ ಯೋಗಸೂತ್ರವನ್ನು ಸಂಗೀತದ ಹಿನ್ನೆಲೆಗೆ ಅಳವಡಿದ ಟೆಕ್ನಿಕ್]
 ಕುಂಡಲಿನಿ [ಸೆಕ್ಸ್ ಎನರ್ಜಿಯನ್ನು ಉರ್ಧ್ವಮುಖಿಯಾಗಿ ಚಕ್ರ, ನಾಡಿಗಳಲ್ಲಿ ಹರಿಸಿ ಸಹಸ್ರಾರವನ್ನು ತಲುಪಿಸಿ ಆನಂದಮಯ ಸ್ಥಿತಿಯನ್ನು ತಲುಪುವುದು]  
ಸರ್ವಸಾರ [ದೈನಂದಿನ ಉಲ್ಲಾಸದ ಬದುಕಿಗೆ ಸುಲಭವಾಗಿ ಮಾಡಬಲ್ಲ ಬಸ್ತ್ರೀಕಾ, ಕಪಾಲಬಾತಿ, ತ್ರಿಬಂಧ, ಉಜೈ, ಅನುಲೋಮ-ವಿಲೋಮಾ ಅಥವಾ ನಾಡಿಶುದ್ಧಿ, ಭ್ರಮರಿ, ಓಂಕಾರ, ಶವಾಸನವನ್ನು ತಿಳಿಸುವ ಒಂದು ಘಂಟೆಯ ಮೆಡಿಟೇಷನ್]
 ಡೈನಾಮಿಕ್  ಮೆಡಿಟೇಷನ್ [ ಇದು ಭಾವಸ್ಪೋಟ, ಭಾವ ವಿರೇಚನ ಮತ್ತು ಸೆಲೆಬ್ರೇಷನ್]

ಆರೋಗ್ಯವಂತ ಸಮಾಜ ಸೃಷ್ಟಿಗೆ ಅತೀ ಅಗತ್ಯವಾಗಿ ಬೇಕಾದ, ಪ್ರತಿ ಮನುಷ್ಯನಲ್ಲಿರುವ ಮಾತೃತ್ವದ ಭಾವವನ್ನು ಉದ್ದೀಪಿಸುವ ಕಾರ್ಯವನ್ನು ಸನ್ನಿಧಿಯ ಶಿಭಿರ ಮಾಡುತ್ತದೆ. ಅದು ಇಂದಿನ ಅಗತ್ಯ ಕೂಡಾ ಹೌದು. 

ಈ ಎಲ್ಲಾ ಟೆಕ್ನಿಕ್ ಗಳ ಜೊತೆ ಬುದ್ದ ನಡಿಗೆ,ಝೆನ್ ಸ್ಟಿಕ್, ಸೂಫಿ ಸಂತನ ಜಿಬ್ರೀಶ್ ಭಾಷೆ, ವಿಪಶ್ಯನ, ಮುಂತಾದವುಗಳ ಪ್ರಾತ್ಯಕ್ಷಿತೆಯನ್ನು ನೀಡಲಾಗುತ್ತದೆ. ಬದುಕನ್ನು ಹೇಗೆ ಸಂಭ್ರಮವನ್ನಾಗಿಸಿಕೊಳ್ಳಬೇಕು ಎಂಬುದರ ಬಗೆಗೆನ ಕೀಲಿ ಕೈಯನ್ನು ನಮಗೆ ಹಸ್ತಾಂತರಿಸುವ ಒಂದು ಪ್ರಕ್ರಿಯೆಗೆ ಇಲ್ಲಿ ಚಾಲನೆ ದೊರೆಯುತ್ತದೆ. ಆ ಕಿಲಿ ಕೈಯೇ ಧ್ಯಾನ.
 

ನಾವು ಮಗುವಾಗಿರುವಾಗ ಮುಕ್ತವಾಗಿ ನಕ್ಕಿರಬಹುದು. ಆಮೇಲಾಮೇಲೆ ನಾವು ನಗುವುದನ್ನೇ ಮರೆತಿದ್ದೇವೆ.
 ಧ್ಯಾನದ ಬಗ್ಗೆ ಓಶೋ ಹೇಳುತ್ತಾರೆ;   ’ನೀವೊಮ್ಮೆ ಆಳದಿಂದ ನಿಜವಾಗಿ ನಕ್ಕಾಗ, ಆ ಕೆಲವು ಕ್ಷಣಗಳ ಮಟ್ಟಿಗೆ ನಿಮ್ಮೊಳಗೆ ಆಳವಾದ ಧ್ಯಾನ ಸ್ಥಿತಿ ಉಂಟಾಗುವುದು. ಆಗ  ನಿಮ್ಮ ಮನಸ್ಸು ಅದೃಶ್ಯವಾಗಿಬಿಡುತ್ತದೆ. ಇಡೀ ಝೆನ್ ಪದ್ಧತಿಯೇ ಮನೋ ರಹಿತವಾದ ಸ್ಥಿತಿಗೆ ತಲುಪುವುದು ಹೀಗೆಯೇ. ಇಂತಹ ಸ್ಥಿತಿಯನ್ನು ತಲುಪಲು ಇರುವ ಸುಂದರವಾದ ಮಾರ್ಗವೇ ನಗು ಮತ್ತು ನೃತ್ಯ. ನೀವು ನಿಜವಾಗಿಯೂ ನರ್ತಿಸುತ್ತಿದ್ದರೆ ನಿಮ್ಮ ಆಲೋಚನೆಗಳೆಲ್ಲ ನಿಂತು ಹೋಗುತ್ತವೆ. ನೀವು ನೃತ್ಯವನ್ನು ನಿಭಾಯಿಸದೇ, ನೃತ್ಯವೇ ನಿಮ್ಮನ್ನು ನಿಭಯಿಸಲು ಬಿಟ್ಟಲ್ಲಿ, ನೀವು ಆಲೋಚನಾ ರಹಿತ ಸ್ಥಿತಿಯನ್ನು ತಲುಪುವಿರಿ. ಅದೇ ಧ್ಯಾನ ಸ್ಥಿತಿ.’

ಪ್ರೀತಿಯಂತೆ ಅಳು ಮತ್ತು ನಗು ಅತ್ಯಂತ ಸಹಜ ಕ್ರಿಯೆಗಳು . ಅದನ್ನು ಹತ್ತಿಕ್ಕಬಾರದು. ಹೊರಚೆಲ್ಲಬೇಕು. ಅದು ನಿಮ್ಮೊಳಗೇ ಇದ್ದರೆ ನಿಮ್ಮನ್ನೇ ಕೊಳೆಯಿಸುತ್ತದೆ. ಅದುಮಿಟ್ಟ ಎಲ್ಲಾ ಭಾವನೆಗಳನ್ನು ಎಕ್ಸ್ ಪ್ರೆಸ್ ಮಾಡಿ ನಿರಾಳತೆಯನ್ನು ಅನುಭವಿಸಿಸಬೇಕು. ಅದನ್ನು ಧ್ಯಾನ ಕಲಿಸಿಕೊಡುತ್ತದೆ. ಧ್ಯಾನವೆಂಬುದು ಮನಸ್ಸಿನ, ಆತ್ಮದ ಸ್ನಾನವಂತೆ. ಆ ದಿವ್ಯ ಸ್ನಾನದಲ್ಲಿ ಮಿಂದು ಬಂದಿದ್ದೇನೆ. ಪ್ರತಿನಿತ್ಯ ಆ ಸ್ನಾನವನ್ನು ಮಾಡುವ ಸಂಕಲ್ಪ ತೊಟ್ಟಿದ್ದೇನೆ. 
ಒಂದು ವೇಳೆ ನಿಮಗೆ ಮತ್ತೆ ಮತ್ತೆ ಏಕಾಂತದಲ್ಲಿರಬೇಕು, ಮೌನದ ಮೂಲಕ ತನ್ನ ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದಿದ್ದರೆ ಅದಕ್ಕೂ ಇಲ್ಲಿ ಅವಕಾಶವಿದೆ. ಹೆಣ್ಣುಮಕ್ಕಳು ತವರಿಗೆ ಬಂದಷ್ಟೇ ಆರಾಮವಾಗಿ ನೀವಿಲ್ಲಿಗೆ ಬರಬಹುದು. ನನಗೂ ಇನ್ನೊಮ್ಮೆ ಅಲ್ಲಿಗೆ ಹೋಗುವ ಆಶೆಯಿದೆ.   
ನೀವು ಕೂಡಾ ಅಧ್ಯಾತ್ಮ ಮನೋಭಾವದವರಾಗಿದ್ದು, ಧ್ಯಾನ ಶಿಭಿರದಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತವಿದ್ದಲ್ಲಿ ನೀವು ಸಂಪರ್ಕಿಸಬೇಕಾದ ವಿಳಾಸ;

ಓಶೋ ಸನ್ನಿಧಿ, ಕೋಕೋನಟ್ ಫಾರ್ಮ್,
ಚಾಮುಂಡಿ ಬೆಟ್ಟದ ಹಿಂಬಾಗ,
ಉತ್ತನಹಳ್ಳಿ, ಮೈಸೂರು.
ದೂ; ಮನೀಷಾ-೯೪೮೦೨೭೮೧೪೪
    ಜಯರಾಂ-೯೧೬೪೩೮೫೫೫೧.


Wednesday, August 28, 2013

ಪ್ರೀತಿ ದೇವರ ಕಿರು ಬೆರಳು ಹಿಡಿದು..

[ ಹದಿಮೂರು ವರಷಗಳ ಹಿಂದೆ ನಿಯತಕಾಲಿಕವೊಂದರಲ್ಲಿ ನಾನು ಕೃಷ್ಣನ ಬಗ್ಗೆ ಬರೆದ ಮೊದಲ ಬರಹವಿದು. ಅಷ್ಟು ವರಷಗಳ ಹಿಂದೆ ನನ್ನ ಪ್ರೇಮದೇವತೆಯ ಬಗ್ಗೆ ನನ್ನಲ್ಲಿ ಯಾವ ಭಾವನೆಗಳಿದ್ದಿರಬಹುದು? ಅದೀಗ ಮಸುಕಾಗಿರಬಹುದೇ?, ಸ್ಥಿತ್ಯಂತರ ಹೊಂದಿರಬಹುದೇ? ಎಂಬ ಕುತೂಹಲಕ್ಕಾಗಿ ಅದನ್ನು ಹುಡುಕಿ ತೆಗೆದು ಓದಿದೆ. ಇದನ್ನು ದಾಖಲಿಸೋಣ ಅನ್ನಿಸಿತ್ತು. ಅದಕ್ಕಾಗಿ ಇದನ್ನು ನನ್ನ ಬ್ಲಾಗ್ ನಲ್ಲಿ ಕಾದಿರಿಸುತ್ತಿದ್ದೇನೆ.
ನಿಮಗೆ ಇಷ್ಟವಾದಲ್ಲಿ ನೀವೂ ಕೂಡಾ ಓದಿ.
ಚಿತ್ರಗಳು; ಇಂಟರ್ ನೆಟ್ ಕೃಪೆ.]

ನಾನೊಬ್ಬಳು ಕನಸುಗಾರ್ತಿ. ಕನಸು ಕಾಣುವುದೆಂದರೆ ನನಗೆ ಅತ್ಯಂತ ಪ್ರಿಯ. ಕನಸಿಗೆ ವಾಸ್ತವದ ಕಡಿವಾಣವಿರುವುದಿಲ್ಲ!

ನನ್ನ ಅತ್ಯಂತ ದುಃಖದ, ಏಕಾಕಿತನದ ಕ್ಷಣಗಳಲ್ಲಿ  ನಾನು ಅರಬ್ಬಿ ಸಮುದ್ರದ ಕರಾವಳಿಗುಂಟ ಅನ್ಯಮನಸ್ಕಳಾಗಿ ಬಾರವಾದ ಹೆಜ್ಜೆಗಳನ್ನಿಡುತ್ತಾ ಸಾಗುತ್ತಿರುತ್ತೇನೆ. ಆಗ ಆತ ನನಗೆದುರಾಗಿ ನಡೆದು ಬರುತ್ತಾನೆ. ಮುಖದ ತುಂಬಾ ಕಿರುನಗೆ. ಕಣ್ಣುಗಳಲ್ಲಿ ತುಂಟತನ. ಬಂದವನೇ ನನ್ನ ಕಿರುಬೆರಳಿಗೆ ತನ್ನ ಕಿರುಬೆರಳು ಸೇರಿಸಿ ಮೌನವಾಗಿ ಹೆಜ್ಜೆ ಹಾಕುತ್ತಾನೆ. ನನ್ನ ಕಣ್ಣುಗಳು ತಂತಾನೆ ಮುಚ್ಚಿಕೊಳ್ಳುತ್ತವೆ. ಅ ಕ್ಷಣಕ್ಕೆ ನಾನು ಪರಮಸುಖಿ.

 ಈತ ಹಲವಾರು ರೂಪಗಳಲ್ಲಿ ಸದಾ ನನ್ನನ್ನು ಕಾಡುತ್ತಿರುತ್ತಾನೆ. ಅಂತರಂಗದಲ್ಲಿ ಭಾವತರಂಗಳನೆಬ್ಬಿಸುವ ಮುರಳಿಲೋಲನಾಗಿ, ಕನಸುಗಳ ಲೋಕಕ್ಕೆ ಲಗ್ಗೆಯಿಡುವ ಮಾಧವನಾಗಿ, ನನ್ನ ಸಮಾನಮನಸ್ಕ ಗೆಳೆಯನಾದ ಶ್ಯಾಮನಾಗಿ, ಬಾಲ್ಯದ ಒಡನಾಡಿ ಗೋಪಾಲಕನಾಗಿ,ನನ್ನ ಅಸಹಾಯಕ ಕ್ಷಣಗಳಲ್ಲಿ ರಕ್ಷಣೆ ನೀಡುವ ರಕ್ಷಕನಾಗಿ ಈತ ಪ್ರತ್ಯಕ್ಷ.
ನನ್ನ ಹಾಗೆಯೇ ಸಾಮಾನ್ಯವಾಗಿ ಎಲ್ಲಾ ಸ್ತ್ರೀಪುರುಷರಿಗೂ ಈತ ಒಂದಲ್ಲ ಒಂದು ವಿಧದಲ್ಲಿ ಸದಾ ಕಾಡುತ್ತಿರುತ್ತಾನೆ. ಬೆಚ್ಚನೆಯ ಭಾವ ಕೊಡುತ್ತಿರುತ್ತಾನೆ. ಆತನೇ ಮಹಾಭಾರತದ ಶ್ರೀಕೃಷ್ಣ.

ಕೃಷ್ಣನೆಂದರೆ ಒಂದು ಪರಿಪೂರ್ಣವಾದ ವ್ಯಕ್ತಿತ್ವ. ವಾಸ್ತವದಲ್ಲಿ ಪರಿಪೂರ್ಣವಾದ ವ್ಯಕ್ತಿತ್ವವೆಂಬುದಿಲ್ಲ. ಅದೊಂದು ಆದರ್ಶ. ಆದರೆ ಪ್ರತಿ ಮನುಷ್ಯನೂ ಪರಿಪೂರ್ಣವಾದ ಸಂಬಂಧವೊಂದಕ್ಕಾಗಿ ಸದಾ ಹುಡುಕಾಟ ನಡೆಸುತ್ತಿರುತ್ತಾನೆ. ಅಂತವರಿಗೆ ಶ್ರೀಕೃಷ್ಣನ ತುಂಬು ಬಾಳ್ವೆ ಸದಾ ಆದರ್ಶ. ಅವರವರ ಭಾವಕ್ಕೆ ತಕ್ಕಂತೆ ಗೋಚರವಾಗುವ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಿರುವಾತ.

ಪ್ರೀತಿಯ ಎಲ್ಲಾ ಸಾಧ್ಯತೆಗಳನ್ನು ಅದರ ಆಳ, ವಿಸ್ತಾರಗಳೊಡನೆ ಜಗತ್ತಿನೆದುರು ತೆರೆದಿಟ್ಟವನು; ಪ್ರೇಮಕ್ಕೆ ವಿಶಿಷ್ಟ ಭಾಷ್ಯವನ್ನು ಬರೆದವನು. ರಾಧೆಯೊಡನೆಯ ಆತನ ಸಂಬಂಧಕ್ಕೆ ವ್ಯಾಖ್ಯಾನ ನೀಡುವುದು ಕಷ್ಟ. ಗೋಕುಲದಲ್ಲಿದ್ದಾಗ ಕೃಷ್ಣನಿನ್ನೂ ಬಾಲಕ. ಅವರಿವರ ಮನೆಯಲ್ಲಿ ಮೊಸರು, ಬೆಣ್ಣೆ ಕದಿಯುವ ಚೋರ. ಆದರೂ ವಯಸ್ಸಿನಲ್ಲಿ ತನಗಿಂತ ತುಂಬಾ ಹಿರಿಯಳಾದ ವಿವಾಹಿತ ರಾಧೆ ಆತನ ಪ್ರೇಯಸಿ. 

ಕೃಷ್ಣನ ವ್ಯಕ್ತಿತ್ವವೇ ಹಾಗೆ. ಅದು ಎಲ್ಲರನ್ನೂ, ಎಲ್ಲವನ್ನೂ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ. ಆತ ರಾಧೆಯೆದುರಿನಲ್ಲಿ ಅಪ್ಪಟ ಪ್ರೇಮಿಯಾಗುತ್ತಾನೆ. ಯಶೋಧೆಯ ಮುಂದೆ ಕಾಡುವ ಕೃಷ್ಣ., ಗೋಪಿಕೆಯರಿಗೆ ಮುರಳಿ ಲೋಲ. ಗೋಪಾಲಕರಿಗೆ ಮೆಚ್ಚಿನ ಸಂಗಾತಿ. ಇಂತಹ ಕೃಷ್ಣ, ಒಂದು ದಿನ ಇವರೆಲ್ಲಾ ತನಗೆ ಸಂಬಂಧಿಸಿದವರೇ ಅಲ್ಲ ಎಂಬಂತೆ ಮಥುರೆಗೆ ಹೊರಟು ಹೋಗುತ್ತಾನೆ.. ಆತ ಮುಂದೆಂದೂ ಗೋಕುಲಕ್ಕೆ ಹಿಂದಿರುಗುವುದಿಲ್ಲ. ಮಾತ್ರವಲ್ಲ ಕೊಳಲನ್ನು ಕೈಗೆತ್ತಿಕೊಳ್ಳುವುದಿಲ್ಲ. ಮೃದು ಮಧುರ ಭಾವದ ಬೆಣ್ಣೆ ಕೃಷ್ಣನ ಕೊಳಲಗಾನ ಗೋಕುಲದಲ್ಲೇ ಮಾಯವಾಗಿ ಮುಂದೆ ಆತನ ಪಾಂಚಜನ್ಯವೇ ವಿಜೃಂಭಿಸತೊಡಗುತ್ತದೆ.

ಬಹುಶಃ ಭೂತಕಾಲವನ್ನು ಅವನಂತೆ ಮರೆತವನು ಮಹಾಭಾರತದಲ್ಲಿ ಇನ್ನೊಬ್ಬನಿರಲಾರ. ಸದಾ ವರ್ತಮಾನದಲ್ಲಿ ಬದುಕಿದವನು ಆತ. ಸಂಸಾರದಲ್ಲಿ ಅಂಟಿಯೂ ಅಂಟದಂತಿದ್ದ ನಿರ್ಮೋಹಿ. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ ಸದಾ ನಿರ್ಲಿಪ್ತ. ಮಹಾಭಾರತದ ಎಲ್ಲಾ ಘಟನೆಗಳಲ್ಲೂ ಇದ್ದೂ ಇಲ್ಲದಂತಿರುತ್ತಾನೆ. ಅ ಕಾಲದ ಶ್ರೇಣಿಕೃತ ವರ್ಣ ವ್ಯವಸ್ಥೆಯ ಕೆಳಹಂತದಲ್ಲಿನ ಯಾದವ ಕುಲದಲ್ಲಿ ಜನಿಸಿ ಇಡೀ ಮಾಹಾಭಾರತದ ಕೇಂದ್ರ ವ್ಯಕ್ತಿಯಾಗಿ ಬೆಳೆದ. ಕುರುಕ್ಷೇತ್ರದ ಮಹಾಸಂಗ್ರಾಮವನ್ನು ನಿಯಂತ್ರಿಸಿದ. ಕೊನೆಗೆ ತೀರಾ ಸಾಮಾನ್ಯನಂತೆ ಬೇಡನೊಬ್ಬನ ಬಾಣಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ. ಕುರುಕ್ಷೇತ್ರ ಯುದ್ಧವನ್ನು ತಪ್ಪಿಸುವುದಕ್ಕೆ ಆತನಿಗೊಬ್ಬನಿಗೇ ಸಾಧ್ಯವಿತ್ತು. ಆದರೆ ಅದವನಿಗೆ ಬೇಕಿರಲಿಲ್ಲ. ಬಹುಶಃ ಆ ಕಾಲದ ಎಲ್ಲಾ ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ನಿರ್ನಾಮ ಮಾಡುವುದು ಆತನ ಉದ್ದೇಶವಿದ್ದಿರಬಹುದು.

ನಮಗೆ ಕೃಷ್ಣ ತೀರಾ ಹತ್ತಿರವಾಗುವುದು ಇಲ್ಲೇ.  ಆತನಿಗೆ ನಮ್ಮಂತೆ ರಾಗದ್ವೇಷಾಧಿ ಗುಣಗಳಿದ್ದವು. ಆತ ದೇವರಾಗಲು ಬಯಸಲೇ ಇಲ್ಲ. ಶಿವನಂತೆ ಮನುಷ್ಯ ಸಹಜವಾದ ಗುಣಗಳನ್ನು ಹೊಂದಿರುವ ಕೃಷ್ಣನನ್ನು ಜನರು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳಬಲ್ಲರು. ಸ್ತ್ರೀಲೋಲರಿಗೆ ಆತ ಹದಿನಾರು ಸಾವಿರ ಸ್ತ್ರೀಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ. ವ್ಯಭಿಚಾರಿಗಳಿಗೆ ಆತ ಜಾರಕೃಷ್ಣ. ಪರಸ್ತ್ರೀ ಲಂಪಟರಿಗೆ ರಾಧಾಪ್ರಿಯ. ಚೋರಶಿಖಾಮಣಿಗಳಿಗೆ ಬೆಣ್ಣೆಕಳ್ಳ. ಆಧ್ಯಾತ್ಮವಾದಿಗಳಿಗೆ ಭಗವದ್ಗೀತೆಯನ್ನು ಭೋದಿಸಿದ ಮಹಾಪುರುಷ. ರಾಜಕಾರಣಿಗಳಿಗೆ ಕುಟಿಲ ತಂತ್ರಗಾರ...ಇನೂ ಏನೇನೋ...

ರುಕ್ಮಿಣಿಯ ಮುಂದೆ ಅಪ್ಪಟ ಗೃಹಸ್ಥನಾಗಿ, ಸತ್ಯಭಾಮೆಯ ಎದುರಿನಲ್ಲಿ ಆಜ್ನಾಧಾರಕ ಪತಿಯಾಗಿ, ರಾಧೆಯ ಉತ್ಕಟ ಪ್ರೇಮಿಯಾಗಿ, ಯಶೋಧೆಯ ಪ್ರೇಮದ ಕಂದನಾಗಿ ಸದಾ ಮಂದಸ್ಮಿತನಾಗಿ ಕಾಣಿಸಿಕೊಳ್ಳುವ ಕೃಷ್ಣ ನಮ್ಮ ಮೈ-ಮನಸ್ಸನ್ನು ಆವರಿಸಿಬಿಡುತ್ತಾನೆ.

ಗೋಕುಲದಲ್ಲಿದ್ದಾಗ ಪೂತನಿಯನ್ನು ಕೊಂದು, ಗೋವರ್ಧನಗಿರಿಯನ್ನೆತ್ತಿ, ಕಾಳಿಂಗಮರ್ಧನ ಮಾಡಿ...ಅನೇಕ ಪವಾಡಗಳನ್ನು ತೋರಿಸಿದ.’ಕ್ರಿಯೆ’ಗಳಲ್ಲಿ ಸ್ವತಃ ಭಾಗಿಯಾದ.ಆದರೆ ಮುಂದೆ ಪ್ರಭುದ್ಧನಾಗಿ ಬೆಳೆದ ಕೃಷ್ಣ  ತಾನು ನೇರವಾಗಿ ಯಾವ ಕ್ರಿಯೆಯಲ್ಲೂ ಭಾಗಿಯಾಗದೆ ಬೇರೆಯವರ ಮುಖಾಂತರ ದುಷ್ಟ ಸಂಹಾರ ಮಾಡುತ್ತಾ ತಾನು ಕೇವಲ ನಿಮಿತ್ತ ಮಾತ್ರನಾಗಿ ಉಳಿದು ಬಿಡುತ್ತಾನೆ..

ಇಂತಹ ಬಹುಮುಖ ವ್ಯಕ್ತಿತ್ವದ ಕೃಷ್ಣನ ನಿಜಾಂತರಂಗ ಏನಿದ್ದಿರಬಹುದು? ಆತ ಎಲ್ಲರಿಗೂ ಪ್ರೀತಿಯನ್ನು ಹಂಚುತ್ತಾ ಹೋದ. ಎಲ್ಲರೂ ತಮಗೆ ಬೇಕಾದುದನ್ನು ಆತನಲ್ಲಿ ಕಂಡುಕೊಂಡರು. ಆದರೆ ಆತನ ಒಳತೋಟಿಯನ್ನು ಬಲ್ಲವರು ಯಾರು? ತನಗೆ ಅತ್ಯಂತ ಪ್ರೀತಿಪಾತ್ರನಾದ ಅರ್ಜುನನಲ್ಲಿ ಕೂಡಾ ಆತ ಮನಸ್ಸನ್ನು ತೆರೆದಿಡಲಾರ. ಏಕೆಂದರೆ ಅಲ್ಲಿರುವುದು ದೇವರು ಮತ್ತು ಭಕ್ತನ ನಡುವಿನ ಸಂಬಂಧ.

ಇಡೀ ಮಹಾಭಾರತದಲ್ಲಿ ಕೃಷ್ಣನಿಗೆ ಬೌದ್ಧಿಕ ನೆಲೆಯಲ್ಲಿ ಸರಿಸಾಟಿಯಾಗಿ ನಿಲ್ಲಬಲ್ಲ ಪಾತ್ರವೆಂದರೆ ದ್ರೌಪದಿ ಮಾತ್ರ..ಇಲ್ಲಿ ಮಾತ್ರ ಆತನ ಗಾಂಭೀರ್ಯತೆ ಕಾಣಿಸಿಕೊಳ್ಳುತ್ತದೆ. ಅವರಿಬ್ಬರ ನಡುವೆ ಹೃದಯ ಸಂವಾದವಿತ್ತು. ಅದು ಎರಡು ಪ್ರಭುದ್ಧ ವ್ಯಕ್ತಿತ್ವಗಳ ನಡುವಿನ ಮೌನ ಸಂವಾದ. ಅವಳ ಒಂದು ನಿಟ್ಟುಸಿರು, ಅವಳದೊಂದು ಚಲನೆ, ಅವಳ ಕಣ್ಣಿನ ನೋಟ ಕೃಷ್ಣನಿಗೆ ಅರ್ಥವಾಗುತ್ತಿತ್ತು. ಅವರ ಕಣ್ಣುಗಳು ಪರಸ್ಪರ ಮಾತಾಡಿಕೊಂಡುವೆಂದರೆ ಯಾವುದೋ ಮಹತ್ತರವಾದುದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆಯೆಂದೇ ಅರ್ಥ. 

ದ್ರೌಪದಿ ಕೃಷ್ಣನ ಅಂತರಂಗದ ಸಖಿ. ಗಂಡು-ಹೆಣ್ಣಿನ ನಡುವಿನ ಗೆಳೆತನಕ್ಕೆ ಹೊಸದೊಂದು ವ್ಯಾಖ್ಯೆಯನು ಬರೆದವರು ಅವರು. ದ್ರೌಪದಿಯ ಸ್ವಯಂವರಕ್ಕೆ ಕೃಷ್ಣನು ಕೂಡಾ ಬಂದಿದ್ದ ಎಂಬುದನ್ನು ಕುಮಾರವ್ಯಾಸ ತನ್ನ ಭಾರತದಲ್ಲಿ ಹೇಳಿಕೊಂಡಿದ್ದಾನೆ. ಅಣ್ಣ ಧೃಷ್ಟದ್ಯುಮ್ನ ಸ್ವಯಂವರಕ್ಕೆ ಬಂದ ರಾಜಕುಮಾರರೆಲ್ಲರನ್ನೂ ತಂಗಿಗೆ ಪರಿಚಯಿಸುತ್ತಾ ಬರುತ್ತಾ ಕೃಷ್ಣನ ಬಳಿ ಬಂದಾಗ ’ ಇತ್ತ ನೋಡಮ್ಮಾ ತಂಗೀ ಯದು ಭೂಪೋತ್ತಮನನು.. ಅಮರಾರಿಗಳೆಂಬ ಕದಳೀವನಕ್ಕೆ ಮತ್ತದಂತಿಯಾತ....ಎಂದೆಲ್ಲಾ ವರ್ಣಿಸುತ್ತಾ ಈತನನು ವರಿಸು ಎಂದಾಗ  ಅವಳು ಭಕ್ತಿಭಾವರಸದಲ್ಲಿ ಮುಳುಗಿ,ರೋಮಾಂಚನಗೊಂಡು ಮೈಯುಬ್ಬಿ ಮನದಲ್ಲಿ ಆತನಿಗೆ ವಂದಿಸಿ ’ಈತನಲಿ ಎನಗೆ ಗುರುಭಾವನೆ ಹುಟ್ಟಿದು. ಏಕೆಂದು ನಾನರಿಯೆ’ ಎಂದೆನುತ್ತಾ ಮುಂದೆ ಸಾಗುತ್ತಾಳೆ.

ಆಧುನಿಕ ಸ್ತ್ರೀವಾದಿ ಹೆಣ್ಣುಮಗಳೊಬ್ಬಳು ಕೂಡಾ ದ್ರೌಪದಿಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾಳೆ.ದ್ರೌಪದಿಯ ಕಣ್ಣಿನಲ್ಲಿ ನೀರು ಕಾಣಿಸಿಕೊಂಡಿದ್ದು ಒಂದೇ ಬಾರಿ. ಅದು ಆಕೆ ತನ್ನ ಮಕ್ಕಳಾದ ಉಪಪಾಂಡವರನ್ನು ಕಳೆದುಕೊಂಡಾಗ. ಆಗ ಅವಳನ್ನು ಸಂತೈಸಲು ಅವಳ ಅಂತರಂಗದ ಗೆಳೆಯ ಕೃಷ್ಣ ಕೂಡಾ ಹಾಜರಾಗುವುದಿಲ್ಲ. ಆದರೆ ಅವಳ ಕಣ್ಣು ಕಿಡಿ ಕಾರಿದಾಗಲೆಲ್ಲ ಅವನು ತಕ್ಷಣ ಹಾಜರು. ಅವಳು ಅಯ್ಯೋ ಎಂದು ನಲುಗಿದಾಗಲೆಲ್ಲ ಆತ ಪ್ರತ್ಯಕ್ಷ. ಹೆಣ್ಣಿನ ಕಣ್ಣೀರನ್ನು ಎದುರಿಸುವುದು ಗಂಡಿಗೆ ಯಾವತ್ತೂ ಕಷ್ಟವೇ.!

ದ್ರೌಪದಿಯ ಜೊತೆ ಅತ್ಯಂತ ಪ್ರಬುದ್ಧವಾಗಿ ವರ್ತಿಸಿದ ಕೃಷ್ಣ ನನ್ನನ್ನು ಸದಾ ಕಾಡುತ್ತಲೇ ಇರುತ್ತಾನೆ. ಗೋಕುಲದ ಕೃಷ್ಣ ಎಲ್ಲರಿಗೂ ಸಿಗುತ್ತಿದ್ದ. ಆತನನ್ನು ಎಲ್ಲರೂ ಪ್ರೀತಿಸಬಲ್ಲರು. ಆದರೆ ದ್ವಾರಕೆಯ ಕೃಷ್ಣನ ಒಲವು ಎಲ್ಲರಿಗೂ ದೊರೆಯಲಾರದು. ಅದು ದ್ರೌಪದಿಗೆ ದಕ್ಕಬಲ್ಲುದು. ಅಂತಹ ಕೃಷ್ಣನೆನ್ನ ಆತ್ಮ ಬಂಧು; ಸಖ. ಕನಸಿನಲ್ಲಾದರೂ ದ್ವಾರಕೆಯ  ಕೃಷ್ಣನ ಕಿರು ಬೆರಳು ಹಿಡಿದು ಸಮುದ್ರಕ್ಕೆದುರಾಗಿ ಹೆಜ್ಜೆ ಹಾಕುವ ಹೆಬ್ಬಯಕೆ ನನ್ನದು.

Monday, August 12, 2013

ನೀನೆನಗೆ ಪರಮ ಗುರು..



ಧ್ಯಾನ ಕೇಂದ್ರಕ್ಕೆ ಹೊರಟು ನಿಂತಿದ್ದೇನೆ.
ಗುರುಕಾಣಿಕೆಯೊಂದನ್ನು ಅರ್ಪಿಸಬೇಕಾಗಿದೆ.
’ವರ್ಣ ಮಾತ್ರಂ ಕಲಿಸಿದಾತಂ ಗುರು’
ನೀ ಬದುಕ ಪಥ ಬದಲಿಸಿದ ಮಹಾಗುರು !


ಚಿತ್ರಕೃಪೆ; ಅಂತರ್ಜಾಲ
ಹಗ್ಗದ ಮೇಲಿನ ನಡಿಗೆ...
 ’ಹಾಳಾಗಿ ಹೋಗು’ ಕಿರುಚಿದ ಬುದ್ದನಂತಿದ್ದ ನಿಯಂತ್ರಕ.
ಕೈಯ್ಯಲ್ಲಿದ್ದ ಕೋಲು ಜಾರಿತು.
ಆಯುಧಶಾಲೆಯಲ್ಲಿ ಉದಿಸಿದ ಚಕ್ರರತ್ನ ಗಾಳಿಯಲ್ಲಿ ತೇಲಿ ಬಂದು
ಅನಾಹತವನ್ನು ಬೇಧಿಸಿ
ಕಿವಿಗೆ ಕಾದ ಸೀಸವಾಗಿ, ಎದೆಗೆ ಚೂರಿಯ ಅಲಗಾಗಿ ಇರಿಯುತ್ತಿದ್ದಂತೆ
ಚಿತ್ತಬಿತ್ತಿಯಲ್ಲಿ ತಕ ತಕನೆ ಕುಣಿಯುತ್ತಿದ್ದ ನೀಲಾಂಜನೆ
’ಬೋಂಕನೆ’ ಮಾಯವಾಗಿ ಈ ಗೆಳೆತನವೇ ನಶ್ವರವೆನಿಸಿ
ಮೋಹದ ಕನ್ನಡಕವನ್ನು ಬಿಸುಟು ಪುಸ್ತಕದ ಕಪಾಟಿನತ್ತ ನಡೆದೆ.
ಭ್ರಮೆಯ ಪ್ರಪಂಚದಿಂದ ರಕ್ತ ಮಾಂಸದ ವಾಸ್ತವ ಜಗತ್ತಿಗೆ.


’ಹಾಳಾಗಿ ಹೋಗು’ ಎಂದೂ ಹೇಳಿದವಳಲ್ಲ; ಹೇಳಿಸಿಕೊಂಡವಳಲ್ಲ.
ತೂಕ ತಪ್ಪಿದ ನನ್ನ ನಡೆಗೆ ಲಜ್ಜೆಯೆನಿಸಿ ಭೂಮಿಗಿಳಿದು ಬೀಜವಾದೆ.
ಸೂರ್ಯರಶ್ನಿಗಾಗಿ ಹಂಬಲಿಸಿ, ಪಂಚಾಗ್ನಿಯಲ್ಲಿ ಬೆಂದೆ.
ಮಿತ್ರನಿಗೆ ವಂದಿಸಿ, ಆಲಂಗಿಸಿ, ಇಳೆಗೆ ಹಣೆ ಹಚ್ಚಿ
ಪೂರಕ, ಕುಂಭಕ, ರೇಚಕಗಳಲ್ಲಿ ಪ್ರಾಣಶಕ್ತಿಯನ್ನು ನಾಡಿಗಳಲ್ಲಿ ಹರಿಸಿ
ತಲೆಯೆತ್ತಿದಾಗ ಕಂಡದ್ದು ವರ್ಷಗಳ ಹಿಂದೆ ಮರೆತಿದ್ದ ಧ್ಯಾನ ಕೇಂದ್ರ.
ಹೊರಟಿದ್ದೇನೆ.....
ಚಿತ್ರಕೃಪೆ; ಅಂತರ್ಜಾಲ


ಗೆಳೆಯಾ, ಕಳವಳಿಸಬೇಡ. ನೀನೆಗೆ  ಪರಮಗುರುವಾದೆ .
ಪೋಲಾಗುತ್ತಿದ್ದ ಶಕ್ತಿಯನ್ನು ಮತ್ತೆ ಸಂಚಯಿಸಲು ದಾರಿ ದೀಪವಾದೆ.
ಮೊಣಕಾಲೂರಿದ್ದೇನೆ; ನಿನಗೆ ನಮೋ ನಮಃ.!





Monday, July 22, 2013

ಪೇಸ್ ಬುಕ್ ಎಂಬ ’ಪ್ರತಿಮಾ ಲೋಕ’



 ವೈಯ್ಯಕ್ತಿಕ ಸಂಬಂಧಗಳಲ್ಲಿ ಪೇಸ್ ಬುಕ್ ತಂದೊಡ್ಡುವ ಸಮಸ್ಯೆಗಳನ್ನು ನೀವು ಪತ್ರಿಕೆಗಳಲ್ಲಿ ಆಗಾಗ ಓದಿಯೇ ಇರುತ್ತೀರಿ. ಅದು ಸಂಸಾರಗಳನ್ನು ಒಡೆದಿದೆ. ಗೆಳೆತನದ ಮಧ್ಯೆ ಬಿರುಕು ತಂದಿದೆ. ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ.
ಚಿತ್ರಕೃಪೆ; ಅಂತರ್ಜಾಲ.
ಈಗ ನನ್ನ ಮುಂದೆ ಎರಡು ಪತ್ರಿಕಾ ವರದಿಗಳಿವೆ; ಇದು ಎಲ್ಲೆಲ್ಲಿಯೋ ನಡೆದದ್ದಲ್ಲ. ನನ್ನದೇ ಜಿಲ್ಲೆಯಾದ ಅವಿಭಜಿತ ದಕ್ಷಿಣಕನ್ನಡದಲ್ಲಿ ನಡೆದ ಘಟನೆಗಳಿವು..  ಪೇಸ್ ಬುಕ್ ನಲ್ಲಿ ಪರಿಚಯವಾದ ,ಪೇಸ್ ಬುಕ್ ನಿಂದಾಚೆ ಎಂದೂ ಬೇಟಿಯಾಗದ ಹುಡುಗನೊಬ್ಬನ ಸವಿನುಡಿಗಳಿಗೆ ಮರುಳಾಗಿ ಆತನ ಕಷ್ಟಗಳಿಗೆ ಮರುಗಿ ಮೊದಲ ಬೇಟಿಯಲ್ಲೇ ತನ್ನ ಕತ್ತಿನಲ್ಲಿದ್ದ ಚಿನ್ನದ  ಸರ, ಕೈಯ್ಯ ಬಳೆಗಳನ್ನು ಕೊಟ್ಟು ಇಂಗು ತಿಂದ ಮಂಗನಂತಾದ ಹುಡುಗಿಯೊಬ್ಬಳ ಕಥೆ. ಇನ್ನೊಂದು ಘಟನೆಯಲ್ಲಿ ಬೆಂಗಳೂರಿನ ಯುವಕನೊಬ್ಬ ತನ್ನ ಜೀವಮಾನದ ದುಡಿತವೆಲ್ಲವನ್ನೂ ಅಂದರೆ ಸುಮಾರು ಹದಿನಾಲ್ಕು ಲಕ್ಷದಷ್ಟು ಹಣವನ್ನು ಗುರುತು ಪರಿಚಯವಿರದ ಹುಡುಗಿಯೊಬ್ಬಳ ಪಾದಗಳಿಗೆ ಸುರಿದು ಅವಳನ್ನು ನೋಡಬೇಕೆಂಬ ಹಪಹಪಿಕೆಯಿಂದ ಅವಳು ಪೇಸ್ ಬುಕ್ ನಲ್ಲಿ ಕೊಟ್ಟ ವಿಳಾಸವನ್ನಿಡಿದುಕೊಂಡು ಪುತ್ತೂರಿನಲ್ಲೆಲ್ಲಾ ಸುತ್ತಾಡಿ ಅವಳು ಸಿಗದೆ ನೆಲ್ಯಾಡಿಯಲ್ಲಿ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ಅ ದುರಂತ ಘಟನೆ..

ಇದೆರಡು ಘಟನೆಗಳು ಕೇವಲ ಪ್ರಾಸಂಗಿಕವಷ್ಟೇ. ಇಂತಹ ಸಾವಿರ ಸಾವಿರ ಪೇಸ್ ಬುಕ್ ವಂಚನೆಯ ಉದಾಹರಣೆಗಳನ್ನು ನಾನು ನೀಡಬಲ್ಲೆ. ಪೇಸ್ ಬುಕ್ ಎಂಬುದು ಇಂಟರ್ ನೆಟ್ ನಲ್ಲಿರುವ ಒಂದು ಸಾಮಾಜಿಕ ತಾಣ. ಸೋಷಿಯಲ್ ನೆಟ್ ವರ್ಕ್ ಎಂಬುದು ನಿಮಗೆಲ್ಲಾ ಗೊತ್ತಿರುತ್ತೆ. ನಿಮ್ಮಲ್ಲಿ ಒಂದು ಕಂಪ್ಯೂಟರ್  ಮತ್ತು ಅದಕ್ಕೆ ಇಂಟರ್ ನೆಟ್ ಸಂಪರ್ಕ [ಪೋನ್ ಮೂಲಕ] ಇದ್ದರೆ ನೀವು ನಿಮ್ಮದೇ ಆದ ಒಂದು ಪೇಸ್ ಬುಕ್ ಅಕೌಂಟ್ ಅನ್ನು ಹೊಂದಬಹುದು..ಬ್ಯಾಂಕ್ ನಲ್ಲಿ ಹಣ ಜಮಾ ಮಾಡಿದ ಹಾಗೆ ನಿಮ್ಮ ಭಾವನೆಗಳನ್ನು, ಅಲೋಚನೆಗಳನ್ನು, ವಿಚಾರಗಳನ್ನು ನೀವಿಲ್ಲಿ ಬರೆಯುತ್ತಾ ಹೋಗಬಹುದು. ಅದನ್ನು ಓದಿದ ಇತರ ಅಕೌಂಟ್ ದಾರಾರು ಅವುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅಲ್ಲಿ ವ್ಯಕ್ತ ಪಡಿಸುತ್ತಾರೆ. ಅಲ್ಲೊಂದು ಬಹಿರಂಗ ಸಂವಾದ ಏರ್ಪಡುತ್ತದೆ. ಈ ಸಂವಾದದ ಬಗ್ಗೆ ಹೆಚ್ಚೇನಾದರೂ ಆಪ್ತವಾಗಿ ಹೇಳಬೇಕಾಗಿದ್ದರೆ ಅದಕ್ಕೂ ಅವಕಾಶವಿದೆ. ಅದೇ ಇನ್ ಬಾಕ್ಸ್ ಎಂಬ ಖಾಸಗಿ ಕೋಣೆ; ಆಪ್ತ ಆವರಣ. ಅಲ್ಲಿ ನೀವು ಎಷ್ಟು ಬೇಕಾದರೂ ಹರಟೆ ಹೊಡೆಯಬಹುದು. ವಾಗ್ವಾದ ನಡೆಸಬಹುದು ಲಲ್ಲೆ ಗೆರೆಯಬಹುದು. ಮೇಲೆ ಪ್ರಸ್ತಾಪಿಸಿದಂತಹ ಖಾಸಗಿ ದುರಂತಗಳಿಗೆ ಕಾರಣವಾಗುವುದೇ ಈ ಇನ್ ಬಾಕ್ಸ್ ಚಾಟಿಂಗ್.

ಕೇವಲ ಹುಡುಗ-ಹುಡುಗಿಯರಷ್ಟೇ ಈ ಪೇಸ್ ಬುಕ್ ಎಂಬ ಮಾಯಾಂಗನೆಯ ತೆಕ್ಕೆಯೊಳಗೆ ಬೀಳುತ್ತಾರೆಂದುಕೊಳ್ಳಬೇಡಿ. ಪ್ರೀತಿ, ವಿಶ್ವಾಸ, ನಂಬಿಕೆಗಾಗಿ ಹಂಬಲಿಸುವ ಎಲ್ಲಾ ವಯಸ್ಸಿನವರೂ ಇದರ ಮೋಹ ಜಾಲಕ್ಕೆ ಬೀಳುತ್ತಾರೆ, ಪಂಚೇಂದ್ರಿಯಗಳಿಗೆ ಎಂದೂ ಸಿಗದ ನಿಗೂಡ ವ್ಯಕ್ತಿಯೆದುರು ಕನ್ಪೆಕ್ಷನ್ ಬಾಕ್ಸ್ ನಲ್ಲಿ ನಿಂತು ಎಲ್ಲವನ್ನೂ ಹೇಳಿಕೊಂಡಂತೆ ಹೇಳಿಕೊಳ್ಳುವವರಿದ್ದಾರೆ. ಹಾಗೆ ಮಾತನಾಡುತ್ತಲೇ ಪರಸ್ಪರ ಆತ್ಮಬಂಧುವಾಗಿಬಿಡುವ ಸಹೃದಯರೂ ಇದ್ದಾರೆ. ಜೊತೆಗೆ ತಮ್ಮ ಸಿಹಿ ಮಾತುಗಳ ಬಲೆಯಲ್ಲಿ ಕೆಡವಿಕೊಂಡು ಅವರನ್ನು ಭಾವನಾತ್ಮಕವಾಗಿ ದೋಚಿ ಬಿಡುವ ವಿಕ್ಷಿಪ್ತರೂ ಇದ್ದಾರೆ. ಅದು ಇನ್ ಬಾಕ್ಸ್ ನಲ್ಲಿ ವ್ಯವರಿಸುವ ರೀತಿಯನ್ನು ಅವಲಂಭಿಸಿರುತ್ತದೆ.

  ’ಪೇಸ್ ಬುಕ್ ವಂಚನೆಯ ಬಗ್ಗೆ ನಾನೊಂದು ಲೇಖನ ಬರೆಯಬೇಕೆಂದಿರುವೆ. ವಂಚನೆಗೊಳಗಾಗಿರುವವರಲ್ಲಿ ಹುಡುಗಿಯರು ಹೆಚ್ಚಿರಬಹುದೋ..ಹುಡುಗರು ಹೆಚ್ಚಿರಬಹುದೋ’ ಎಂಬ ಸ್ಟೇಟಸ್ ಒಂದನ್ನು ನನ್ನ ಪೇಸ್ ಬುಕ್ ಟೈಮ್ ಲೈನ್ ನಲ್ಲಿ  ಹಾಕಿದ್ದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ವಂಚಿಸುವುದರಲ್ಲಿ ಇಬ್ಬರೂ ಸಮಾನರು ಎಂಬುದು ವ್ಯಕ್ತವಾಗುತ್ತಿತ್ತು. ಬಹಿರಂಗವಾಗಿ ಹೇಳಿಕೊಳ್ಳಲಾರದವರು ನನ್ನ ಇನ್ ಬಾಕ್ಸ್ ನಲ್ಲಿ ಮೆಸೇಜ್ ಹಾಕಿ ತಮ್ಮ ವೇದನೆಯನ್ನು ತೋಡಿಕೊಂಡಿದ್ದರು. ತಾವು ತಮ್ಮನ್ನು ನಂಬಿದವರಿಗಾಗಿ ಕೊಟ್ಟ ವಸ್ತು, ಹಣ ಒಡವೆಗಳ ಪಟ್ಟಿಯನ್ನು ಕೊಟ್ಟಿದ್ದರು. ಹೀಗೆ ವಸ್ತು, ಒಡವೆ, ಹಣ ಕೊಟ್ಟವುಗಳನ್ನು ನಾವು ಭವಿಷ್ಯದಲ್ಲಿ ಮತ್ತೆ ಸಂಪಾದಿಸಬಹುದು..ಕಾಲಕ್ರಮೇಣ ಅದನ್ನು ಮರೆಯಲೂ ಬಹುದು. ಆದ್ರೆ ಮನಸ್ಸು ಒಡೆದು ಹೋದರೆ.? ನಾವು ಮುಂದೆ ಯಾರನ್ನೂ ನಂಬಲಾರದ ಸ್ಥಿತಿಯನ್ನು ತಲುಪಿದರೆ..? ಆಗ ಅದು ನಿಜವಾದ ದುರಂತ!

 ಯಾಕೆ ಹೀಗೆ ನಾವೆಲ್ಲಾ ಮೋಸ ಹೋಗುತ್ತೇವೆ.? ಮೋಸ ಮಾಡುತ್ತೇವೆ. ಇಲ್ಲಿ ಯಾರನ್ನು ನಾವು ದೋಷಿಗಳನ್ನಾಗಿ ಮಾಡಬಹುದು ? ಹಾಗೆ ಯಾರನ್ನಾದರೂ ದೋಷಿ ಸ್ಥಾನದಲ್ಲಿ ನಿಲ್ಲಿಸುವುದೇ ಆದಲ್ಲಿ ಅದು ನಮ್ಮ ಮನಸ್ಸನ್ನೇ.. ಯಾಕೆಂದರೆ..ಮನುಷ್ಯನಿಗೊಂದು ಅವಲಂಬನೆ ಬೇಕು.ನಂಬಿಕೆ ಬೇಕು.

ಬದುಕು ನಿಂತಿರುವುದೇ ನಂಬಿಕೆಗಳ ಮೇಲೆ. ನಮಗೆ ನಂಬಲು ದೇವರು ಬೇಕು; ಆತನನ್ನು ಒಲಿಸಿಕೊಳ್ಳಲು ಆಚರಣೆಗಳು ಬೇಕು. ಅನುಕರಿಸಲು ಮಹಾಪುರುಷರು ಬೇಕು. ಅಂತರಂಗದ ಭಾವನೆಗಳನ್ನು ತೆರೆದಿಡಲು ನಂಬಿಕೆಯ ಹೆಗಲು ಬೇಕು; ನೆಮ್ಮದಿಯ ಮಡಿಲು ಬೇಕು. ಅದಕ್ಕಾಗಿ ನಮ್ಮ ಮನಸ್ಸು ಸದಾ ಅಲೆಮಾರಿಯಂತೆ ಅಲೆದಾಡುತ್ತಲೇ ಇರುತ್ತದೆ. ಹಾಗೆ ಅಲೆದಾದುವಾಗ ಸಿಗುವ ತಂಗುದಾಣಗಳಲ್ಲಿ ಈ ಪೇಸ್ ಬುಕ್ ಕೂಡಾ ಒಂದು.

ಚಿತ್ರಕೃಪೆ; ಅಂತರ್ಜಾಲ.
ಒಂದು ಹೆಣ್ಣು ಏಕಾಂತದಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿದಾಗ ಒಬ್ಬ ಗಂಡಸಿನ ನಡವಳಿಕೆ ಹೇಗಿರುತ್ತದೆ ಎಂಬುದರ ಮೇಲೆ ಒಬ್ಬ ಗಂಡಸಿನ ಸ್ವಭಾವ ನಿರ್ಧಾರಿತವಾಗುತ್ತದೆ. ಹಾಗೆಯೇ ಸಹೃದಯಿ ಗಂಡಸೊಬ್ಬ ತನ್ನ ಆಪ್ತ ಆವರಣಕ್ಕೆ ಪ್ರವೇಶ ಪಡೆದಾಗ ಒಬ್ಬ ಹೆಣ್ಣು ಮಗಳು ಹೇಗೆ ವರ್ತಿಸುತ್ತಾಳೆ ಮತ್ತು ಆತನಿಂದ ಏನನ್ನು ನಿರೀಕ್ಸಿಸುತ್ತಾಳೆ  ಎಂಬುದು ಕೂಡಾ ಅವಳ ಸಹಜ ಸ್ವಭಾವದ ಅನಾವರಣಕ್ಕೆ ಕಾರಣವಾಗುತ್ತದೆ .ಪೇಸ್ ಬುಕ್ ಅಂತಹ ಏಕಾಂತದ ಕ್ಷಣಗಳನ್ನು  ಹುಡುಗ-ಹುಡುಗಿಯರಿಗೆ ಯಥೇಚ್ಛವಾಗಿ ಒದಗಿಸಿಕೊಟ್ಟಿದೆ. ಇದು ತಪ್ಪಲ್ಲ. ಭಾವನೆಗಳನ್ನು ಹೊರಹಾಕಲು ಇದೊಂದು ರಹದಾರಿ ಅಷ್ಟೇ. ಆದರೆ ಈ ಪರಿಚಯ ಅವಲಂಬನೆಯಾಗಿ ಬೆಳೆಯುತ್ತಿದೆ..ಮನಸ್ಸು ಸದಾ ಅವನನ್ನೇ\ಅವಳನ್ನೇ ಧೇನಿಸುತ್ತಿದೆ..ಚಿತ್ತ ಚಾಂಚಲ್ಯದಿಂದಾಗಿ ತನ್ನ ಧೈನಂದಿನ ಕೆಲಸ ಕಾರ್ಯಗಳಲ್ಲಿ ಏರು ಪೇರಾಗುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಆ ಅಪರಿಚಿತ ಬಂಧುವನ್ನು ಪೇಸ್ ಬುಕ್ ನಿಂದಾಚೆ ಭೇಟಿಯಾಗಬೇಕು. ಹಾಗೊಮ್ಮೆ ಭೇಟಿಯಾಗಿಬಿಟ್ಟರೆ ’ ಓ ಅವರು..ಇವರೇನಾ?’ ಎಂಬ ಉದ್ಗಾರವೊಂದು ನಿಮ್ಮ ಬಾಯಿಯಿಂದ ಹೊರಡದಿದ್ದರೆ ಕೇಳಿ...!

ಯಾಕೆಂದರೆ ಬಹುತೇಕ ಎಲ್ಲರೂ ಮುಖವಾಡಗಳಲ್ಲೇ ಬದುಕುತ್ತಾರೆ. ನಮ್ಮ ಮನಸ್ಸಿನಲ್ಲೇ ಹುಟ್ಟಿ, ಅಲ್ಲಿಯೇ ರೂಪವೊಡೆದು ಅದನ್ನೇ ಅಪಾರವಾಗಿ ಪ್ರೀತಿಸಿದ ವ್ಯಕ್ತಿತ್ವಗಳು ಪರಸ್ಪರ ಎದುರು-ಬದುರಾದರೆ ಅಪರಿಚಿತರಂತೆ ವರ್ತಿಸಲಾರರೇ? ಪೇಸ್ ಬುಕ್ ಪ್ರೇಮದಿಂದ ಭ್ರಮ ನಿರಸನಗೊಂಡವರನ್ನು ಆತ್ಮೀಯತೆಯಿಂದ ಮಾತಾಡಿಸಿ, ಅನುನಯಯಿಸಿ ಕೇಳಿ..ತಮ್ಮ ಮೂರ್ಖತವನ್ನು ಅವರು ಮುಜುಗುರದಿಂದಲೇ ಒಪ್ಪಿಕೊಳ್ಳುತ್ತಾರೆ. ಹಾಗಾಗಿಯೇ ನಾನು ಹೇಳಿದ್ದು ಭಾವನೆಗಳಿಗೆ ಪಕ್ಕಾಗಿ ಮನಸ್ಸು ಒಪ್ಪಿಕೊಂಡಿದ್ದನ್ನು ಕಣ್ಣು ಪರಾಂಬರಿಸಿ ನೋಡುತ್ತದೆ. ನಮಗೆ ಬೇಕಾದ ಗುಣಗಳನ್ನು ಆ ವ್ಯಕ್ತಿಗೆ ಆರೋಪಿಸಿ ಅವನಿಗೊಂದು ವ್ಯಕ್ತಿತ್ವ ಕೊಟ್ಟ ನಾವು ಅವನ\ಅವಳ ನಿಜ ವ್ಯಕ್ತಿತ್ವ ಕಂಡು ದಂಗಾಗುತ್ತೇವೆ..

ಇನ್ನು ಕೆಲವರಿರುತ್ತಾರೆ, ತಮ್ಮ ಕೆಲಸದ ಒತ್ತಡದ ಮಧ್ಯೆ ರಿಲ್ಯಾಕ್ಸ್ ಆಗಲೆಂದೇ ಪೇಸ್ ಬುಕ್ ಪ್ರೆಂಡ್ಸ್ ಜೊತೆ ಹರಟೆ ಹೊಡೆಯುತ್ತಾರೆ. ಇಂತವರು ಕಾಲಹರಣ ಮಾಡಲೆಂದೇ ಮಾತಿನ ಮಂಟಪ ಕಟ್ಟುತ್ತಾರೆ. ಇವರು ಎಂದೂ ಪೇಸ್ ಬುಕ್ ನಿಂದಾಚೆ ನಿಮ್ಮನ್ನು ಬೇಟಿಯಾಗಲಾರರು. ಇಂತವರ ಬಗ್ಗೆ ಎಚ್ಚರದಿಂದಿರಬೇಕು. ಯಾವುದೇ ಮೋಹ ಬಂಧನಕ್ಕೆ ಒಳಪಡದ.ಇವರು ನಂಬಿದವರ ಎದೆ ಒಡೆದು ಬಿಡುತ್ತಾರೆ. ಇವರಿಗೆ ಯಾವುದೇ ಬಂದನಗಳು, ಜವಾಬ್ದಾರಿಗಳು ಬೇಡ. ಆದರೆ ಯಾವುದೇ ಒಂದು ಒಳ್ಳೆಯ ಸಂಬಂಧ ಕೆಲವೊಂದಷ್ಟು ಆದರ್ಶಗಳನ್ನು ಹೊಂದಿರುತ್ತದೆ.ಮತ್ತು ಜವಾಬ್ದಾರಿಯನ್ನು ಬೇಡುತ್ತದೆ.

ಚಿತ್ರಕೃಪೆ; ಅಂತರ್ಜಾಲ.
ಕಳೆದ ವರ್ಷ ಪೇಸ್ ಬುಕ್ ನಲ್ಲಿ ಪರಿಚಯವಾಗಿ ಮದುವೆಯ ಬಂಧನಕ್ಕೆ ಒಳಗಾದ ಸರಳ ಮದುವೆಯೊಂದರಲ್ಲಿ ನಾನು ಭಾಗಿಯಾಗಿದ್ದೆ. ವಾರ ಕಳೆಯುವಷ್ಟರಲ್ಲೇ ಅವರಲ್ಲಿ ಪರಸ್ಪರ ಜಗಳ ಆರಂಭವಾಗಿತ್ತು. ಅವರದನ್ನು ನನ್ನಲ್ಲಿ ದೂರಿಕೊಂಡಿದ್ದರು.  ತಿಂಗಳು ಕಳೆಯುವಷ್ಟ್ರಲ್ಲೇ ಆ ದಂಪತಿಯಿಂದ  ಒಂದು ಕಿರು ಕಾದಂಬರಿಗಳಾಗುವಷ್ಟು ಇಮೇಲ್ ಸಂಭಾಷಣೆಗಳು ನನಗೆ ರವಾನೆಯಾಗಿದ್ದವು. ಈಗವರು ವಿಛ್ಚೇದನಕ್ಕಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಇಲ್ಲಿ ತಪ್ಪಾಗಿರುವುದು ಎಲ್ಲಿ? ಖಂಡಿತಾವಾಗಿಯೂ ನಾನು ಮೇಲೆ ಹೇಳಿದಂತೆ ಪರಸ್ಪರ ಸುಳ್ಳು ವ್ಯಕ್ತಿತ್ವಗಳನ್ನು ಅವರು ಪ್ರೊಜೆಕ್ಟ್ ಮಾಡಿಕೊಂಡಿದ್ದೆ ಕಾರಣ. ಒಟ್ಟಾಗಿ ಬದುಕಲು ಆರಂಭಿಸಿದಾಗ ಒಂದೊಂದಾಗಿ ಭ್ರಮೆಗಳೆಲ್ಲಾ ಕಳಚಿಕೊಳ್ಳತೊಡಗಿದವು. ಹಾಗಾಗಿಯೇ ಒಂದು ಅಮೂರ್ತ ಸಂಬಂಧಕ್ಕಾಗಿ ಸರ್ವಸ್ವವನ್ನು ಒಪ್ಪಿಸಿಬಿಡುವ ಮೊದಲು, ಮನಸ್ಸು ಆಳಕ್ಕಿಳಿಯುವ ಮುನ್ನವೇ  ಪರಸ್ಪರ ಭೇಟಿಯಾಗಿ ಒಡನಾಟದಿಂದ ಅದಕ್ಕೊಂದು ಸ್ಪಷ್ಟ ರೂಪಕೊಟ್ಟು ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳುವುದು ಮುಖ್ಯವಾದುದು. ಬಹುತೇಕ ಪೇಸ್ ಬುಕ್ ಸಂಬಂಧಗಳು ಈ ಹಂತದಲ್ಲೇ ಕಳಚಿಕೊಳ್ಳುತ್ತವೆ. ಆಮೇಲೆಯೂ ಉಳಿದುಕೊಂಡು ನಂತರ ಏನೇ ನಡೆದರೂ ಅದು ;ವಿಧಿ ಚಿತ್ತ’ ಎಂಬ ಸಮಾಧಾನವಾದರೂ ನಮಗೆ ದೊರೆಯಬಹುದು..

ಪೇಸ್ ಬುಕ್ ನಿಂದಾಗಿ ಸಂಬಂಧಗಳು ಹಾಳಾಗುತ್ತವೆ. ನಂಬಿಕೆ ದ್ರೋಹಗಳಾಗುತ್ತವೆ ಎನ್ನುವವರಿಗೆ ನನ್ನದೊಂದು ಅನುಭವದ ಮಾತು; ನಾವು ಚಿಕ್ಕವರಿರುವಾಗ  ಹೆಚ್ಚು ರೇಡಿಯೋ ಕೇಳಿದರೆ ಈ ಮಕ್ಕಳೆಲ್ಲಾ ಹಾಳಗ್ತಿದ್ದಾರೆ ಅಂತ ನಮ್ಮ ಹೆತ್ತವರು ನಮಗೆ ಬಯ್ಯುತ್ತಿದ್ದರು. ಟೀವಿ ಬಂದಾಗ ನಮ್ಮ ಯುವ ಜನಾಂಗವೆಲ್ಲಾ ನೈತಿಕವಾಗಿ ಕೆಳಮಟ್ಟಕ್ಕೆ ಇಳಿದು ಹೋದರು ಎಂದು ಹಿರಿಯ ತಲೆಮಾರಿನವರು ಇದಕ್ಕಿಂತಲೂ ಜಾಸ್ತಿ ಕಳವಳಪಟ್ಟರು. ಈಗ ಇಂಟರ್ ನೆಟ್ ಬಂದ ಮೇಲಂತೂ ಬೇಕಾದ್ದು ಬೇಡದ್ದು ಎಲ್ಲವೂ ಬೆರಳ ತುದಿಯಲ್ಲಿ ಸಿಕ್ಕುತ್ತಿದೆ. ಅದು ಇಂದಿನ ಅಗತ್ಯ ಕೂಡಾ. ಅದಕ್ಕೆ ನಾವು ಬೆನ್ನು ಹಾಕಿ ಕೂರಲಾದೀತೆ?  ಎಲ್ಲಾ ಅವಿಷ್ಕಾರಗಳಿಗೂ ಒಳಿತು ಮತ್ತು ಕೆಡುಕಿನ ಎರಡು ಮುಖಗಳು ಇದ್ದೇ ಇರುತ್ತವೆ. ಆದರೆ ನಾನು ಯಾವುದಕ್ಕೆ ತೆರೆದುಕೊಳ್ಳಬೇಕು ಮತ್ತು ಎಷ್ಟು ತೆರೆದುಕೊಳ್ಳಬೇಕು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ಅರಿವಿರಬೇಕು. ಆ ಅರಿವು ಎಲ್ಲಿಂದ ಬರುತ್ತದೆ. ನಿಶ್ಚಯವಾಗಿ ಅದು ಬರುವುದು ನಮ್ಮ ಬಾಲ್ಯದಿಂದಲೇ..ನಮ್ಮ ಮಕ್ಕಳನ್ನು ಹತ್ತು ವರ್ಷದ ತನಕ ನಾವು ಹೇಗೆ ಬೆಳೆಸಿರುತ್ತೇವೆ ಮತ್ತು ಯಾವುದಕ್ಕೆ ಅವರು ಸ್ಪಂದಿಸುತ್ತಾರೆ ಎಂಬುದರ ಸೂಕ್ಷ್ಮ ಅವಲೋಕನೊಂದಿಗೆ ಅವರ ಬಾಲ್ಯ ಮತ್ತು ಕೌಮಾರ್ಯವನ್ನು ನಾವು ಕಟ್ಟಿಕೊಟ್ಟರೆ ಅವರು ನಿಶ್ಚಿತವಾಗಿ ತರತಮ ಜ್ನಾನವನ್ನು ಬೆಳೆಸಿಕೊಳ್ಳುತ್ತಾರೆ ಎಂಬುದು ನನ್ನ ಅಚಲವಾದ ನಂಬಿಕೆ. ಆದ್ರೆ ನಾವು ನಮ್ಮ ಮಕ್ಕಳನ್ನು ಅವರಿಷ್ಟದಂತೆ ಬೆಳೆಯಲು ಬಿಡುತ್ತೇವೆಯೇ? ನಮ್ಮ ಈಡೇರಲಾರದ ಆಸೆ ಆಕಾಂಕ್ಷೆಗಳನ್ನೆಲ್ಲಾ ಅವರಮೇಲೆ ಹೇರಲು ಪ್ರಯತ್ನ್ಸುತ್ತೇವೆ. ಪರಿಣಾಮವಾಗಿ ಅವರ ಭಾವನೆಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತವೆ. ಅತ್ತ ಅವರಿಗೆ ತಮಗಿಷ್ಟ ಬಂದದ್ದನ್ನು ಮಾಡಲಾಗದೆ ಇತ್ತ ಹೆತ್ತವರ ನಿರೀಕ್ಷೆಯನ್ನೂ ಪೂರೈಸಲಾಗದೆ ಅವರ ಹದಿ ಹರೆಯದ ದಿನಗಳೆಲ್ಲಾ ಸಹಿಸಲಸಾಧ್ಯವಾದ ಒತ್ತಡಗಳಲ್ಲೇ ಕಳೆದು ಹೋಗುತ್ತದೆ. ಅಂದರೆ ನಮ್ಮ ಮಕ್ಕಳು ಹಾಳಾಗುತ್ತಿದ್ದಾರೆಂದು ನಾವು ಹಳಹಳಿಸುವುದರಲ್ಲಿ ನಮ್ಮ ಅಂದರೆ ಸಮಾಜದ ಮತ್ತು ಹೆತ್ತವರ ಪಾಲೂ ಇದೆಯಲ್ಲವೇ?

ವೈಯಕ್ತಿಕವಾಗಿ ನನಗೆ ಪೇಸ್ ಬುಕ್ ನಿಂದಾಗಿ ಯಾವ ಹಾನಿಯೂ ಆಗಿಲ್ಲ. ನನ್ನ ಸ್ವಲ್ಪ ಸಮಯವನ್ನು ಅದು ಅಪಹರಿಸುತ್ತಿದೆ ಎಂಬುದು ನಿಜ. ಆದರೆ ಅದು ನನಗೆ ಕೊಟ್ಟಿದ್ದು ಇದಕ್ಕಿಂತಲೂ ಹೆಚ್ಚು.ನನ್ನ ಕೆಲವು ಹಳೆಯ ಸ್ನೇಹಕ್ಕೆ ಮತ್ತಷ್ಟು ಹೊಳಪು ಕೊಟ್ಟಿದೆ. ಹೊಸ ಸ್ನೇಹವನ್ನು ಕುತೂಹಲದಿಂದ ನೋಡುವಂತೆ ಮಾಡಿದೆ. ವಿಷಯ ಮತ್ತು ಅಭಿಪ್ರಾಯ ಕ್ರೋಢಿಕರಣಕ್ಕೆ ಸಹಾಯ ಮಾಡಿದೆ. ಎಲ್ಲಿಯೂ ಹೇಳಿಕೊಳ್ಳಲಾರದ ವಿಷಯಗಳನ್ನು ಅಪರೋಕ್ಷವಾಗಿ ಹೇಳಿಕೊಂಡು ಸಮಾಧಾನ ಪಟ್ಟುಕೊಂಡದ್ದಿದೆ.  ಅಡಿಗರ ಸಾಲುಗಳು ನೆನಪಾಗುತ್ತಿದೆ.

” ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರಿ ನೀರಲ್ಲಿ
ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ. ಒಂದು ನಡುಗಡ್ಡೆಯಿಂದಿನ್ನೊಂದಕ್ಕೆ
ಜಿಗಿದು ಹಾರಿ, ಈಜಾಡಿ ಪಾರಾಗಿ, ಬದುಕಿ ಉಳಿಯುವ ಬಂಟ
ರಿದ್ದರೂ ಸಿಕ್ಕುವುದೆಲ್ಲಾ ಪರಕೀಯ.ಅಕಸ್ಮಾತ್ತಾಗಿ
ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ
ಸಿಕ್ಕಿದವನೇ ಕೃತಾರ್ಥ, ಭಾಗ್ಯವಂತ.’’

ರಾಮಾಯಣದಲ್ಲೊಂದು ಪ್ರಸಂಗ ಬರುತ್ತದೆ [ಇದು ಯಾವ ರಾಮಾಯಣ ಎಂಬುದು ನನಗೆ ನೆನಪಿಲ್ಲ. ಬಹುಶಃ ಸಂಸ್ಕೃತದ ಭಾಸ ಬರೆದ ’ಪ್ರತಿಮಾಲೋಕ’  ನಾಟಕದಲ್ಲಿರಬೇಕು] ರಾಮನನ್ನು ಕಾಡಿಗಟ್ಟಿದ ಪ್ರಸಂಗ ಭರತನಿಗೆ ತಿಳಿದಿರುವುದಿಲ್ಲ. ಒಮ್ಮೆ ಆತ ತನ್ನ ಪೂರ್ವಜರ ಪ್ರತಿಮೆಗಳನ್ನು ಇಟ್ಟಿರುವ ಮಹಲಿನೊಳಗೆ ಪ್ರವೇಶಿಸುತ್ತಾನೆ. ಅಲ್ಲಿ ತನ್ನ ತಂದೆ ದಶರಥನ ಪುತ್ಥಳಿಯನ್ನು ಕಂಡು ದಂಗಾಗುತ್ತಾನೆ. ಆತನಿಗೆ ತನ್ನ ತಂದೆ ಧೈವಾದೀನರಾದ ವಿಷಯ ತಿಳಿದಿರುವುದಿಲ್ಲ. ಹಾಗೆಯೇ ನಾವು ಕೂಡಾ ಪೇಸ್ ಬುಕ್ ಎಂಬ ಮಹಲನ್ನು ಪ್ರವೇಶಿಸಿದ್ದೇವೆ. ಇಲ್ಲಿ ಯಾರು ಪ್ರತಿಮೆಗಳೋ..ಯಾರು ಜೀವಂತರೋ ಒಂದೂ ತಿಳಿಯದೇ ಒಮ್ಮೊಮ್ಮೆ ದಿಗ್ಭ್ರಾಂತರಾಗಿ ನಿಂತು ಬಿಡುತ್ತೇವೆ.! 


[ಮಂಗಳೂರಿನ ನಿಯತಕಾಲಿಕ ’ಸಂವೇದಿ’ ಗಾಗಿ ಬರೆದ ಲೇಖನ]




Sunday, June 9, 2013

ನಿವೇದನೆ

ನಿನ್ನೆ ಸುಚಿತ್ರ ಏರ್ಪಡಿಸಿದ ಬ್ಲಾಗ್ ಕುರಿತಾದ ಮಾಧ್ಯಮ ಚಿಂತನೆಯಲ್ಲಿ ಭಾಗವಹಿಸಿದ್ದೆ. ಬ್ಲಾಗ್ ಲೋಕ ಮಂಕಾಗುತ್ತಿದೆಯೇ ಎಂಬುದರ ಕುರಿತು ಚಿಂತನೆಗಳು ನಡೆದವು. 
ನಾನು ನನ್ನ ಬ್ಲಾಗ್ ಅನ್ನು ಅಪ್ಡೇಟ್ ಮಾಡದೆ ತಿಂಗಳುಗಳೇ ಕಳೆದವು. ಒಂಥರಾ ಪಾಪ ಪ್ರಜ್ನೆ ಕಾಡುತ್ತಿದೆ. ಮುಂದೆ ಬ್ಲಾಗ್ ಬರೆಯಬೇಕೆಂದಿರುವೆ. ಈಗ ಸಧ್ಯಕ್ಕೆ ಪೇಸ್ ಬುಕ್ ನಲ್ಲಿ ಆಗಾಗ ಗೀಚಿದ ಹನಿಗವನಗಳೆಂಬ ಮಾದರಿಗಳಿವು.





 ಕನವರಿಕೆ.?!




ನನ್ನ ಗೆಳೆಯನಿಗೊಂದು ಕವನ ಬೇಕಂತೆ.
ಇಲ್ಲವೆನಲಾರೆ; ಬಾಲ್ಯದಲಿ ಕಳೆದುಕೊಂಡ ಹುಡುಗನವನು.
ಚಿಟ್ಟೆ ಬಣ್ಣದ ಹುಡಿ ಅವನ ಅಂಗಿಗಂಟಿಸಿದ ನೆನಪಿದೆ.
ಅವನು ಕವನ ಕೇಳಿದ್ದು ನನಗಚ್ಚರಿ;
ಅವನು ಕೇಳಬಹುದಿತ್ತು; ಕೊಡು ನನ್ನ ಕೆನ್ನೆಗೊಂದು ಮುತ್ತು.
ಇಲ್ಲಾ..ಚಂದಮಾಮನ ಅಂಗಳದೊಲ್ಲೊಂದು ಸೈಟ್.
ಇಷ್ಟಕ್ಕೂ ಕವನ ನಿನಗ್ಯಾಕೆ ಬೇಕಿತ್ತು? ಉಪ್ಪು ಹಾಕಿ ನೆಕ್ಕಲೇ?
’ನೀ ಕವನ ನೆಯ್ದರೆ ಅದೇ ನನ್ನ ಹಣೆಯ ಬೊಟ್ಟು’
ಹುಬ್ಬು ಹಾರಿಸಿದಾಗ ಅವನೆನ್ನ ಮುಕ್ಕಣ್ಣ!
ಕವನದಲ್ಲಿ ಹೂ- ಹಣ್ಣು ಚಂದ್ರ- ಚಂದನ, ಬಾಹು ಬಂಧನ ಎಲ್ಲಾ ಬೇಕಂತೆ.
ಇಲ್ಲಿ ನನಗೇನೂ ಕಾಣುತ್ತಿಲ್ಲ;
ದರ್ಪಧೂಳು, ನಿಮಿರಿದ ಬಾಳ್, ರಕ್ತಚಂದನ.
ಹಾರುಗಂಬಳಿಯಲ್ಲಿ ಬಣ್ಣದೊಕುಳಿಯಿಟ್ಟಿದ್ದೇನೆ.
ಎಲ್ಲಿಯಾದರೂ, ಯಾರ ಮೇಲಾದರೂ ಎರಚಿಬಿಡು.
ಒಂದು ಹನಿ ಬಂದೆನ್ನ ರೆಪ್ಪೆಯನ್ನು ಮುದ್ದಿಸಲಿ.
ಕಣ್ಣು ಮುಚ್ಚಿದಾಗಲೂ ಇಂದ್ರಛಾಪದ ಕನಸು,,,!

...............................................................................................................





ಅಭಿಸಾರಿಕೆ

ಕಿರುಚಿದರೆ ಜೀರುಂಡೆ,
ಮೋಹಕ್ಕೆ ಬಿದ್ದರೆ ಚಕ್ರವಾಕ,
ಧೇನಿಸುತ್ತಾ ನಿಂತರೆ ಚಾತಕ,
ನಿನಗೆ ಪುನುಗು;
ಸ್ಪರ್ಷಕ್ಕೆ ಸಿಲುಕಿದರೆ ನಾ ಗಂಗೆ ಹುಳು
ಯಾರು ಏನೇ ಅಂದುಕೊಂಡರೂ ನಾ ಮಿಂಚುಹುಳ..
ಹಾಗೆಂದುಕೊಂಡು ಅಂಗಳದಲ್ಲಿ ನಿಂತರೆ...
ಭೂಮಿ ತೂಕದ ಹಕ್ಕಿ ನನ್ನ ನೋಡಿ ಅಣಕಿಸಿತು;
’ಬಾ ನನ್ನ ತೂಗಿ ನೋಡು..!’
ಪೆಚ್ಚಾಗಿ ಮೇಲೆ ನೋಡಿದರೆ..ಸಂಪಿಗೆ ಮರದಲ್ಲಿ ಹಾರ್ನ್ ಬಿಲ್..
ಬಣ್ಣಕ್ಕೆ ಸೋತೆ..
ನಿನ್ನ ನೆನಪಾಯ್ತು.
ನಾನೀಗ ಅಭಿಸಾರಿಕೆ..!!

..................................................................................................................





ಎದೆಪದಕ


ಯಾಕೋ ನಿನ್ನಲ್ಲಿ ತುಂಬಾ ಒಳ್ಳೆತನವಿದೆ’
ನೀನಂದು ನುಡಿದಾಗ ಬೆಚ್ಚಿ ಬಿದ್ದೆ.
ಒಳ್ಳೆತನ ದೋಷವೆ? ಹೇಗೆ?
ಮುಕುಟಮಣಿ ಪಾದಮೂಲಕ್ಕೆ ಜಾರಿದರೆ,
ಅದು ಎದೆಪದಕ ಸತ್ಯ!
ಗುರುತ್ವಾಕರ್ಷಣೆ..ಬೀಳುವುದು ಸಹಜ.
ಬೊಗಸೆಯೊಡ್ಡಿದ್ದರೆ...ಅದು ನಿನ್ನ ಬೆರಳಿನುಂಗರವಾಗಬಹುದಿತ್ತು!
ನಾನು ಭಾಗ್ಯಶಾಲಿ..ಅದು ಎದೆಪದಕವಾಯ್ತು.
..............................................................................................................................


ಶರಣಾಗತಿ.





ಕೊರತೆಗಳ ಸಮೇತವಾಗಿ ನಿನ್ನನ್ನು ಒಪ್ಪಿಕೊಳ್ಳಲು ನನ್ನೊಳಗಿನ ಪ್ರೀತಿ ಹಾತೊರೆಯುತ್ತಿದೆ...
ಜಿಜ್ನಾಸೆಯ ತಕ್ಕಡಿಯಲ್ಲಿ ನಿರಾಕರಣೆಯ ಭಾರ ಹೆಚ್ಚಾಗುತ್ತಿದೆ.
ಆಯ್ಕೆಯನ್ನು ನಿನಗೇ ಬಿಟ್ಟಿದ್ದೇನೆ..
ನನ್ನನ್ನು ಬದುಕಿಸು ಗೆಳೆಯಾ...!