Tuesday, January 29, 2013

’ಯಾಕೆ ನನ್ನನ್ನು ತಿರಸ್ಕರಿಸಿದೆ?’

ಚಿತ್ರಕೃಪೆ; ಅಂತರ್ಜಾಲ.
ಅದೊಂದು ಸರ್ಕಾರಿ ಬಂಗಲೆ. ಅವನೊಬ್ಬನೇ ಇದ್ದಾನೆ. ಅವನ ಹೆಂಡತಿ ಮಕ್ಕಳು ದೂರದ ಊರಿನಲ್ಲಿದ್ದಾರೆ. ರಾತ್ರಿಯ ನೀರವತೆ. ನಗರ ಮೆಲ್ಲ ಮೆಲ್ಲನೆ ಸದ್ದು ಕಳೆದುಕೊಳ್ಳುತ್ತದೆ. ಒಂಟಿತನ ಅವನೊಳಕ್ಕೆ ಇಳಿಯುತ್ತಿದೆ. ಜ್ವರದ ಕಾವು ಇನ್ನೂ ಇದೆ. ಫೋನ್ ಎತ್ತಿಕೊಂಡು ಅವಳೊಡನೆ ಮಾತಾಡುತ್ತಾನೆ. ಇಪ್ಪತ್ತು ವರ್ಷಗಳ ಹಿಂದಿನ ನೆನಪುಗಳಿಗೆ ಮೆಲ್ಲ ಮೆಲ್ಲನೆ ಜಾರುತ್ತಾನೆ. “ಯಾಕೆ ನನ್ನನ್ನು ತಿರಸ್ಕರಿದೆ?” ಎಂದು ಬಿಕ್ಕಳಿಸುತ್ತಾನೆ. ಅವಳಿಗಿಲ್ಲಿ ಮೈಯ್ಯೆಲ್ಲ ಬಿಸಿಯಾಗುತ್ತದೆ. ತಲೆ ಭಾರವಾಗುತ್ತದೆ. ಅವನನ್ನು ಹೇಗೆ ಸಂತೈಸುವುದೆಂದು ಗೊತ್ತಾಗದೆ ಕುಸಿದು ಕುಳಿತವಳಿಗೆ….ಮುಂದೇನೂ ಕಾಣಿಸುತ್ತಿಲ್ಲ…..
ಅವನಂದ ಎರಡು ಮಾತುಗಳು ಆಕೆಯನ್ನು ಚೂರಿಯಂತೆ ಇರಿದವು; ಕ್ಷಮಿಸಿ, “ಆಕೆ” ಎಂದು ನಾನೇಕೆ ನನ್ನನ್ನು ವಂಚಿಸಿಕೊಳ್ಳಲಿ? ಈ ಕಥೆಯ ನಾಯಕಿ ನಾನೇ..! ಅವನು ಮಾತಾಡಿದ್ದು ನನ್ನೊಡನೆಯೇ…
“ನಾನು ಕಪ್ಪಗಿದ್ದೆ, ಕೆಳಜಾತಿಯವನಾಗಿದ್ದೆ, ಬಡವನಾಗಿದ್ದೆ. ಹಾಗಾಗಿ ನನ್ನನ್ನು ತಿರಸ್ಕರಿದ್ದೆ ಅಲ್ವಾ?”
ಹೌದಾ..ನಾನಂದು ಹಾಗೆ ಯೋಚಿಸಿದ್ದೆನಾ? ನನಗೆ ಬುದ್ಧಿ ಬಂದಾಗಿನಿಂದ, ಬದುಕಿನುದ್ದಕ್ಕೂ ಜಾತಿ ಭೇದದ ಬಗ್ಗೆ ಯೋಚಿಸಿದವಳೇ ಅಲ್ಲ. ಅರೇ ಈಗ ತಾನೇ ಹೊಳೆದದ್ದು. ನನಗಿಂದಿಗೂ ಅವನ ಜಾತಿ ಯಾವುದೆಂದೂ ಗೊತ್ತಿಲ್ವಲ್ಲಾ..! ಕಪ್ಪಗಿದ್ದಾನೆ, ಜೊತೆಗೆ ನಡೆ-ನುಡಿಯಲ್ಲಿ ನಾಜೂಕುತನವಿಲ್ಲ. ಹಾಗಾಗಿ ಆತ ಬ್ರಾಹ್ಮಣನಾಗಿರಲಾರ. ಗೌಡರ ಗತ್ತು ಅವನಲಿಲ್ಲ. ಪರ ಊರಿನವನಾಗಿರುವ ಕಾರಣ ಬಂಟನಾಗಿರಲಾರ. ಲಿಂಗಾಯಿತ ಎಂಬ ಜಾತಿ ಇದೆ ಎಂಬುದರ ಬಗ್ಗೆ ಆಗ ನನಗೆ ಗೊತ್ತೇ ಇರಲಿಲ್ಲ. ದ.ಕ ದ ಹಳ್ಳಿಯೊಂದರಲ್ಲಿ ಹುಟ್ಟಿದ ನನಗೆ ಜಾತಿಯ ಬಗ್ಗೆ ಯಾವುದೇ ಪೂರ್ವಾಗ್ರಹಗಳಿರಲಿಲ್ಲ. ಬಡವನಾಗಿದ್ದನೇ ಆತ…? ಇಲ್ವಲ್ಲ. ನನಗೆ ತಿಳಿದಂತೆ ಆತನ ಅಪ್ಪ ಸರಕಾರದ ಒಳ್ಳೆಯ ಹುದ್ದೆಯಲ್ಲಿದ್ದರು. ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದ. ಅವನ ತಂಗಿಯರಿಬ್ಬರು ಸುಂದರಿಯರು; ಓದಿನಲ್ಲಿ ಜಾಣೆಯರು. ನಾನು ಬಡವಳಾಗಿದ್ದೆ, ಕಪ್ಪಗಿದ್ದೆ ಎಂಬುದು ಸತ್ಯ….ಮತ್ತೆ..?
ನನ್ನ, ಅವನ ಪ್ರಥಮ ಭೇಟಿಯನ್ನು ನೆನಪಿಸಿಕೊಂಡೆ. ನನ್ನ ಅಣ್ಣನ ಮುಖಾಂತರ ಪರಿಚಯವಾದವನು ಅವನು. ನಂತರ ಪತ್ರಗಳ ಮುಖಾಂತರ ಅಭಿರುಚಿಗಳ ವಿನಿಮಯವಾಯ್ತು. ಒಂದು ದಿನ ನನ್ನನ್ನು ಭೇಟಿಯಾಗಬೇಕೆಂದು ಪಕ್ಕದ ಜಿಲ್ಲೆಯಿಂದ ನನ್ನ ಕಾಲೇಜಿಗೆ ಬಂದ. ನನಗೆ ಹುಡುಗರನ್ನು ಭೇಟಿಯಾಗುವುದು ಹೊಸತೇನೂ ಅಲ್ಲ. ಅದಾಗಲೇ ನನ್ನ ನೇರ ನಡೆ ನುಡಿಗಳಿಂದ ನನ್ನ ಮನೆಯವರಿಂದ, ಬಂಧು ಬಾಂಧವರಿಂದ, ಕೊನೆಗೆ ಕಾಲೇಜಿನಲ್ಲಿಯೂ “ಗಂಡುಬೀರಿ” ಎಂದು ಹೆಸರು ಪಡೆದಿದ್ದೆ.
ಚಿತ್ರಕೃಪೆ; ಅಂತರ್ಜಾಲ.
ಆಗೆಲ್ಲಾ ಭೇಟಿ ಹೋಟೇಲಿನಲ್ಲಿ ತಾನೇ? ಹೋಟೇಲ್ ಅಂದ್ರೆ ಈಗ ಬೇರೆಯೇ ಅರ್ಥ ಬರುತ್ತೆ..! ಅದು ಆ ಕಾಲ. ಬಸ್ ಸ್ಟ್ಯಾಂಡಿನಲ್ಲಿ ನಾನು ಕಾದಿದ್ದೆ. ಪೇಟೆಯ ಯಾವುದೋ ಹೋಟೇಲಿನಲ್ಲಿ ಎದುರಾ ಬದುರಾ ಕೂತು ಅವನು ಅವನು ಚಹಾ-ತಿಂಡಿಗೆ ಆರ್ಡರ್ ಮಾಡಿದ.. ನನಗೆ ಬರೀ ಚಾ ಮಾತ್ರ ಸಾಕು ಅಂದೆ. ಅವನು ತಾನು ಇತ್ತೀಚೆಗೆ ಬರೆದ ಕವನಗಳ ಬಗ್ಗೆ ಮಾತಾಡುತ್ತಿದ್ದ. ಬೆಳದಿಂಗಳ ರಾತ್ರಿಯಲ್ಲಿ ತನ್ನ ಪ್ರಿಯತಮೆಯ ಜೊತೆ ಕಳೆಯಲಿರುವ ರಮ್ಯ ಕಲ್ಪನೆಯ ಬಗ್ಗೆ ಹೇಳುತ್ತಿದ್ದ….
ಅವನು ತಿಂಡಿ ತಿನ್ನುತ್ತಿದ್ದ..ಆದರಲ್ಲಿ ನಾಜೂಕು ಇರಲಿಲ್ಲ; ಒರಟುತನವಿತ್ತು. ಕೊನೆಗೆ ತಟ್ಟೆಯಲ್ಲೇ ಕೈ ತೊಳೆದುಕೊಂಡ. (ನನ್ನ ಗಂಡನೂ ಹೀಗೇ ಮಾಡುತ್ತಾನೆ.) ನನಗೆ ತಟ್ಟೆಯಲ್ಲೇ ಕೈ ತೊಳೆದುಕೊಳ್ಳುವವರ ಬಗ್ಗೆ ಕೊಂಚ ಅಸಹನೆಯಿದೆ. ನನ್ನ ಮನೆಯಲ್ಲಿ ಊಟ ಮಾಡಿದವರು ತಟ್ಟೆಯಲ್ಲೇ ಕೈ ತೊಳೆದುಕೊಂಡರೆ ಇನ್ನೊಮ್ಮೆ ಅವರನ್ನು ಊಟ ಮಾಡಿ ಎನ್ನಲು ನಾನು ಸ್ವಲ್ಪ ಹಿಂದೆ ಮುಂದೆ ನೋಡುತ್ತೇನೆ.
ಸ್ವಲ್ಪ ಹೊತ್ತು ಅದೂ-ಇದೂ ಮಾತಾಡಿ ಅವನು ತನ್ನೂರಿಗೆ ಹೊರಡಲು ಸಿದ್ಧನಾದ. ನಾನು ಬಸ್ಟ್ಯಾಂಡ್ ತನಕ ಹೋಗಿ, ಅವನನ್ನು ಬಸ್ ಹತ್ತಿಸಿ, ಬಸ್ ಹೊರಟ ಮೇಲೆ ಕೈ ಬೀಸಿ ಹಾಸ್ಟೇಲಿಗೆ ಬಂದೆ…
ಅವನು ಆಗಾಗ ಕಾಗದ ಬರೆಯುತ್ತಿದ್ದ. ನೀವು ನಂಬುತ್ತೀರೋ ಇಲ್ಲವೋ…ಅವನೊಮ್ಮೆ ಫುಲ್ ಸ್ಕೇಪ್ ಹಾಳೆಯಲ್ಲಿ ಮೂವತ್ತೈದು ಪುಟಗಳ ಕಾಗದ ಬರೆದಿದ್ದ. ಅದರಲ್ಲಿ ಏನು ಬರೆದಿದ್ದ ಎಂಬುದು ನನಗೀಗ ನೆನಪಿಲ್ಲವಾದರೂ ಅದರಲ್ಲಿ “ರಾಜಾ ಪಾರ್ವೈ” ಎಂಬ ತಮಿಳು ಸಿನೇಮಾದ ಬಗ್ಗೆ ಪುಟಗಟ್ಟಲೆ ಬರೆದಿದ್ದ. ಅದರಲ್ಲಿ ಕಮಲ್ ಹಾಸನ್ ಒಬ್ಬ ಅಂಧ ವಯಲಿನ್ ವಾದಕ. ಮಾಧವಿ ಒಬ್ಬಳು ಶ್ರೀಮಂತಳಾದ ಚೆಲುವೆ. ಎಲ್ಲರ ವಿರೋಧದ ನಡುವೆ ಅವರ ಪ್ರೇಮ ಗೆಲ್ಲುವ ಪರಿಯನ್ನು ವಿವರವಾಗಿ ಬರೆದಿದ್ದ..
ಚಿತ್ರಕೃಪೆ; ಅಂತರ್ಜಾಲ.
ಅವನೊಮ್ಮೆ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೂ ಬಂದಿದ್ದ. ನಮ್ಮ ಮನೆಗೆ ಯಾರೇ ಬಂದರೂ, ಅವರು ಅಪರಿಚಿತರಾದರೂ ಆತ್ಮೀಯವಾದ ಆತಿಥ್ಯವಿರುತ್ತದೆ. ನಿನ್ನೆ ಕೂಡಾ ಅದನ್ನು ಫೋನಿನಲ್ಲಿ ನೆನಪಿಸಿಕೊಂಡ. “ನಿನ್ನಮ್ಮ..ಆ ತಾಯಿ ಮಾಡಿದ ಕೋಳಿ ಪದಾರ್ಥ, ಅವರು ಪ್ರೀತಿಯಿಂದ ಮಾಡಿ ಬಡಿಸಿದ ಆ ರೊಟ್ಟಿಯ ಸ್ವಾದ ಇವತ್ತಿಗೂ ನನ್ನ ನಾಲಗೆಯಲ್ಲಿ ಇದೆ…ಆದರೆ ನೀನು ಮಾತ್ರ…” ಎಂದು ಮೌನವಾಗಿದ್ದ.
ಹೌದು. ನನಗೆ ಆತ ಯಾಕೆ ಇಷ್ಟವಾಗಲಿಲ್ಲ.? ನನ್ನ ಮುಂದೆ ಒಂದು ಅಸ್ಪಷ್ಟ ಗುರಿಯಿತ್ತು. ಅದನ್ನು ನಾನು ಸಾಧಿಸಬೇಕಾಗಿತ್ತು. ಅಷ್ಟು ಬೇಗನೆ ನನಗೆ ಪ್ರೇಮದಲ್ಲಿ ಬೀಳುವುದು ಬೇಕಾಗಿರಲಿಲ್ಲ. “ದ್ವಂದ್ವಮಾನ- ಭೌತಿಕವಾದ”ದ ಓದು ಹೃದಯದ ಮಾತಿಗಿಂತ ಬುದ್ಧಿಯ ಮಾತಿಗೆ ಹೆಚ್ಚು ಒತ್ತು ಕೊಡುತ್ತಿತ್ತು. ಹಾಗಾಗಿಯೇ ಮುಂದೆ ಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ ನಾವು ಎರಡು ವರ್ಷ ಜೊತೆಯಾಗಿಯೇ ಇದ್ದರೂ “ಹಲೋ” “ಹಾಯ್” ಬಿಟ್ಟರೆ ಒಂದು ಟೀ ಗೂ ನಾವು ಜೊತೆಯಾಗಲಿಲ್ಲ.
ಆಮೇಲೆ ಹದಿನೆಂಟು ವರ್ಷ ಹಾಗೊಬ್ಬ ಪರಿಚಿತ ನನಗಿದ್ದ ಎಂಬುದನ್ನು ಮರೆತು ನಾನು ಬದುಕಿದ್ದೆ.
ಅದೊಂದು ಸಂಜೆ ನನಗೊಂದು ಫೋನ್ ಬಂದಿತ್ತು. ನಾನು ಆಫೀಸಿನಲ್ಲಿದ್ದೆ. ಅವನು ಸಂಭ್ರಮದಿಂದ ತನ್ನನ್ನು ಪರಿಚಯಿಸಿಕೊಂಡಿದ್ದ. ತಾನು ಬೆಂಗಳೂರಿನ ಹೊರವಲಯದಲ್ಲಿ ಒಂದು ಮನೆ ಕಟ್ಟಿರುವುದಾಗಿ ಅದರ ಗೃಹ ಪ್ರವೇಶ ದಿನಾಂಕ ತಿಳಿಸಿ, ತನ್ನ ಪತ್ನಿಯ ಕೈಗೂ ಫೋನ್ ಕೊಟ್ಟು ಅವಳ ಕೈಯ್ಯಿಂದಲೂ ಆಮಂತ್ರಿಸಿದ್ದ.  ಕಾಲೇಜು ಗೆಳೆಯನೊಬ್ಬ ಈ ಮಹಾನಗರದಲ್ಲಿ ಸಿಕ್ಕಿದ್ದು ನನಗೆ ನಿಜಕ್ಕೂ ಖುಷಿಯಾಗಿತ್ತು.
ಆಫೀಸಿಗೆ ರಜೆ ಹಾಕಿ, ಒಂದು ಸುಂದರವಾದ ಬುದ್ಧನ ವಿಗ್ರಹವನ್ನು ಖರೀದಿಸಿ ಅವನ ಮನೆಗೆ ಹೋಗಿದ್ದೆ. ಅವನ ಮನೆಯವರೆಲ್ಲಾ ತುಂಬಾ ಆದರದಿಂದ ನನ್ನನ್ನು ಬರಮಾಡಿಕೊಂಡರು. ಅವನ ಪತ್ನಿ ಅಪ್ರತಿಮ ಚೆಲುವೆಯಾಗಿದ್ದಳು. ಅವನ ಮಗನಂತೂ ನನ್ನನ್ನು ನೋಡಿ “ಅಪ್ಪನ ಗರ್ಲ್ ಫ್ರೆಂಡ್ ನೀವೇನಾ?” ಎಂದು ನನ್ನಲ್ಲಿ ಅಚ್ಚರಿ ಮೂಡಿಸಿದ. ಆತನ ಪತ್ನಿಯ ಮೊಗದಲ್ಲೂ ಮೂಡಿದ ಮಂದಹಾಸ ನನ್ನನ್ನು ನಿರಾಳವಾಗಿಸಿತ್ತು.  ಅವನ ತಂದೆ ಮತ್ತು ಅಣ್ಣ ನನ್ನನ್ನು ನೋಡಿ ತುಂಬಾ ಸಂತಸಪಟ್ಟರು. ನಮ್ಮೂರಿನ ಬಗ್ಗೆ ನಾವು ಪರಸ್ಪರ ತುಂಬಾ ಮಾತಾಡಿಕೊಂಡೆವು.  ಬ್ಲಡ್ ಕ್ಯಾನ್ಸರಿನಿಂದ ಒಬ್ಬ ಮಗಳನ್ನು ಕಳೆದುಕೊಂಡ ಸಂಗತಿಯನ್ನು ಹೇಳುತ್ತಲೇ ಆ ತಂದೆ ಕಣ್ಣೀರಾಗುತ್ತಾ ನನ್ನನ್ನೂ ಭಾವುಕರನ್ನಾಗಿಸಿದರು.
ಆಮೇಲೆ ನಾವೆಲ್ಲ ಆಗಾಗ ಫೋನಿನಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಆದರೆ ನಾನು ಅವನ ಮನೆಗೆ ಹೋಗಲಿಲ್ಲ. ಒಂದೆರಡು ಸಾರಿ ಆತ ನಮ್ಮ ಮನೆಗೆ ಬಂದಿದ್ದ. ಒಂದೆರಡು ಪುಸ್ತಕಗಳನ್ನು ಕೊಂಡು ಹೋಗಿದ್ದ.
ಒಂದು ಇಳಿಸಂಜೆ ನನಗವನ ಪತ್ನಿ ಫೋನ್ ಮಾಡಿದ್ದಳು. “ಅವರ ಸ್ಥಿತಿ ಚಿಂತಾಜನಕವಾಗಿದೆ. ನಿಮ್ಮನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ. ನೀವು ಅವರಿಗಿರುವ ಏಕೈಕ ಫ್ರೆಂಡ್ ಅಂತೆ. ದಯಮಾಡಿ ಒಮ್ಮೆ ಮನೆಗೆ ಬರ್ತೀರಾ?”  ಹೇಳುತ್ತಲೇ ಆಕೆ ಬಿಕ್ಕಳಿಸಿದಳು.
ಚಿತ್ರಕೃಪೆ; ಅಂತರ್ಜಾಲ.
ನಾನು ತಕ್ಷಣ ನಮ್ಮ ಡ್ರೈವರನ್ನು ಕರೆದು ಅವನ ಮನೆಗೆ ಧಾವಿಸಿದ್ದೆ. ಅದ್ಯಾವುದೋ ವಿಚಿತ್ರ ಹೆಸರಿನ ಮಾರಣಾಂತಿಕ ಕಾಯಿಲೆಯಿಂದ ಆತ ನರಳುತ್ತಿದ್ದ. ನಾನು ತಡರಾತ್ರಿಯವರೆಗೂ ಅಲ್ಲಿದ್ದು ನಂತರ ಮನೆಗೆ ಬಂದಿದ್ದೆ. ಆಮೇಲೆ ಬಹು ಸಮಯ ಆ ಕುಟುಂಬದೊಡನೆ ನಿರಂತರ ಸಂಪರ್ಕದಲ್ಲಿದ್ದೆ. ನಾನು ಫೋನ್ ಮಾಡಿದಾಗಲೆಲ್ಲ “ಅಪ್ಪಾ.. ನಿನ್ನ ಗರ್ಲ್ ಫ್ರೆಂಡ್ ಫೋನ್..” ಎಂದು ಆತನ ಮಗ ರಾಗ ಎಳೆಯುತ್ತಾ ತನ್ನಪ್ಪನನ್ನು ಕರೆಯುತ್ತಿದ್ದುದು ನಮ್ಮ ಸಹಜ ಮಾತುಕತೆಗೆ ಮುನ್ನುಡಿಯಾಗುತ್ತಿತ್ತು. ಆತ ಕ್ರಮೇಣ ಚೇತರಿಸಿಕೊಂಡ. ಆತನ ಪತ್ನಿ ಅವನನ್ನು ಉಳಿಸಿಕೊಂಡಳು.
ಈಗ ಒಂದೆರಡು ವರ್ಷಗಳಿಂದ ಮತ್ತೆ ಅವನ ಸಂಪರ್ಕ ಕಡಿದು ಹೋಗಿತ್ತು. ಈಗ ಫೋನ್ ಮಾಡಿ ಈ ರೀತಿ ಪ್ರಶ್ನಿಸಿದ್ದಾನೆ.
ನಾನು ಏನೆಂದು ಉತ್ತರಿಸಲಿ?
ಅವನಿಗೆ ನನ್ನಲ್ಲಿ ಪ್ರೀತಿ ಮೂಡಿರಬಹುದು. ನನಗೂ ಹಾಗೆ ಅನ್ನಿಸಬೇಕಲ್ಲವೇ? ಪ್ರೀತಿ ಎಂಬುದು ಒಳಗಿನಿಂದ ಕಾರಂಜಿಯಂತೆ ಚಿಮ್ಮಬೇಕು. ಬೆಂಕಿಯ ಹಾಗೆ ಸುಡಬೇಕು. ಪ್ರತಿಕೂಲ ಸಂದರ್ಭ ಬಂದರೆ ಜ್ವಾಲಾಮುಖಿಯಂತೆ ಸ್ಫೋಟಿಸಬೇಕು. ನನಗೆ ಹಾಗೆ ಆಗಿಲ್ವೆ? ನಾನೇನು ಮಾಡಲಿ?
[ ಕಥೆಗಳ ಮಾರಾಣಿ ಎಂಬ ಟ್ಯಾಗ್ ಲೈನ್ ಹೊತ್ತಿರುವ ”ಐರಾವತಿ’ ಬ್ಲಾಗ್ ನಲ್ಲಿ ನನ್ನ ಕಾಲಂ ’ ಪದ ಪಾರಿಜಾತ’ ಕ್ಕಾಗಿ ಬರೆದ ಮೊದಲ ಕಥೆಯಿದು ]

Thursday, January 3, 2013

ಶಂಕೆಯೆನಗೀಗ; ಈತನೊಳಗೊಬ್ಬ ಅತ್ಯಚಾರಿ ಅಡಗಿರಬಹುದೇ?

ಚಿತ್ರಕೃಪೆ; ಅಂತರ್ಜಾಲ


 ಒಂದು ವೈಯಕ್ತಿಕ ಅನುಭವದಿಂದ ನಾನೀ ಲೇಖನವನ್ನು ಆರಂಭಿಸುತ್ತೇನೆ;

ಇದು ಎರಡು ದಶಕಗಳ ಹಿಂದಿನ ಮಾತು. ನಾನು ಆಗತಾನೇ ಕನ್ನಡ ಎಂ.ಎ ಮುಗಿಸಿದ್ದೆ. ಉಡುಪಿಯಲ್ಲಿ ಕನ್ನಡ ಉಪನ್ಯಾಸಕ ಹುದ್ದೆಯೊಂದರ ಸಂದರ್ಶನಕ್ಕೆ ಹೋದವಳು ಅದನ್ನು ಮುಗಿಸಿಕೊಂಡು ಮಂಗಳೂರಿಗೆ ಬರುವಾಗ ನಾನು ನಮ್ಮೂರಿಗೆ ಹೋಗಬೇಕಾದ ಬಸ್ಸು ಹೊರಟು ಹೋಗಿಯಾಗಿತ್ತು. ಹೇಗಿದ್ದರೂ ಕೊಣಾಜೆಯಲ್ಲಿ ಅಣ್ಣನ ರೂಂ ಇದೆಯೆಲ್ಲಾ ಎಂದುಕೊಂಡು ಬಂದರೆ ಆತ ಅಂದೇ ಯಾವುದೋ ಕಾರ್ಯನಿಮಿತ್ತವಾಗಿ ಇನ್ನೊಂದು ಊರಿಗೆ ಹೊರಟು ಹೋಗಿದ್ದ. ಆಗಲೇ ಕತ್ತಲೆಯಾಗತೊಡಗಿತು. ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಅಲ್ಲೇ ಪಕ್ಕದ ರೂಂನಲ್ಲಿ ನಮ್ಮ ಡಿಪಾರ್ಟ್ ಮೆಂಟಿನಲ್ಲಿ ರಿಸರ್ಚ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಕಾರಣದಿಂದಾಗಿ ನನಗೆ ಪಾಠ ಮಾಡಿದ ಗುರುಗಳೂ ಆದ ನನ್ನ ಗೆಳೆಯನಂತಿರುವ ಆತನ ರೂಂನ ಬಾಗಿಲು ತಟ್ಟಿದೆ. ಆತನ ಪುಟ್ಟ ರೂಂನಲ್ಲಿ ಅಂದು ನಾನು ತಂಗಿದೆ.

ಅದನ್ನು ನಾನು  ಮರೆತೆ. ಆತ ಇತ್ತೀಚೆಗೆ ಕಾದಂಬರಿಯೊಂದನ್ನು ಬರೆದ. ಅದರಲ್ಲಿ  ಈ ಘಟನೆಯನ್ನು ಉಲ್ಲೇಖಿಸಿದ. ಮಾತ್ರವಲ್ಲ ಪೋನ್ ಮಾಡಿ ಕಾದಂಬರಿ ಬಗ್ಗೆ ಹೇಳುತ್ತಾ ; ’ಅಂದು ನಿನ್ನನ್ನು ನಾನು ಹಾಗೇ ಯಾಕೆ ಬಿಟ್ಟೆ? ನೀನಾದರೂ ನನ್ನನ್ನು ಹಾಳು ಮಾಡಬಾರದಿತ್ತೇ? ಈಗ ಬಾ ನೋಡೋಣ’ ಅಂದುಬಿಟ್ಟ.

ಆ ಘಟನೆಯನ್ನು ಈಗಿನ ಸಂದರ್ಭದಲ್ಲಿಟ್ಟು ನಾನು ನೋಡಬಯಸಿದರೆ....

ಇಂದು ನನಗೆ ಭುಜದೆತ್ತರ ಬೆಳೆದು ನಿಂತ ಮಗಳಿದ್ದಾಳೆ. ಆದರೂ ಒಬ್ಬಂಟಿ ಪುರುಷನಿರುವೆಡೆ, ಆತ ಪರಿಚಿತನಾಗಿದ್ದರೂ ನಾನು ಹೋಗಲಾರೆ. ಆತನನ್ನು ನಾನು ನಂಬಲಾರೆ ಎನ್ನುವುದಕ್ಕಿಂತಲೂ ನನ್ನನ್ನು ನಾನೇ ನಂಬದಿರುವಂತ  ಸ್ಥಿತಿ ನನ್ನದು. ಅದಕ್ಕೆ ಕಾರಣ ಬದಲಾದ ಸಾಮಾಜಿಕ ಸ್ಥಿತ್ಯಂತರಗಳು.  ಈಗ ನೋಡಿ, ದೆಹಲಿಯ ಘಟನೆ ನಡೆದ ನಂತರ ಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ಅತ್ಯಚಾರದ ವರದಿಗಳನ್ನು ಓದುತ್ತಿದ್ದರೆ ನಮ್ಮ ಮಹಿಳೆಯರು ಎಂತಹ ದುರ್ಭರ ಬದುಕನ್ನು ಬದುಕುತ್ತಿದ್ದಾರೆ ಎಂಬ ಝಳಕ್ ಸಿಕ್ಕಿಬಿಡುತ್ತದೆ. ನಮ್ಮ ನಡುವೆಯೇ, ನಮ್ಮ ಅಪ್ಪ, ಅಣ್ಣ-ತಮ್ಮ, ಗಂಡ ಸೇರಿದಂತೆ ನಮ್ಮ ಸ್ನೇಹ ಸಂಬಂಧಗಳಲ್ಲೇ ಅತ್ಯಚಾರಿಯೊಬ್ಬ ಹೊಂಚು ಹಾಕುತ್ತಾ ಕಾಯುತ್ತಿರಬಹುದೇ ಎಂಬ ಆತಂಕ ಮೂಡುತ್ತದೆ. ಯಾರನ್ನೂ ನಂಬಲಾಗದಂತಹ ಭಯದ ವಾತಾವರಣದಲ್ಲಿ ನಾವಿಂದು ಬದುಕುತ್ತಿದ್ದೇವೆ.

 ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಚಾರ ನಡೆದಾಗ ಪುರುಷರಂತೆ ಯೋಚಿಸುವ ಮಹಿಳೆಯರನ್ನೂ ಒಳಗೊಂಡಂತೆ, ಇಡೀ ಪುರುಷ ಜಗತ್ತು ಅದನ್ನು ಬಣ್ಣಿಸುವುದು ’ಶೀಲ ಕಳೆದುಕೊಳ್ಳುವುದು’ ಆದರೆ ಸ್ತ್ರೀ ಮನಸ್ಸು ಗ್ರಹಿಸುವುದು ’ಬದುಕು ಕಳೆದುಕೊಳ್ಳುವುದು’ ಗಂಡಿನ ದೃಷ್ಟಿಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯಲಾಗದು. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳಬಹುದು.

ಡಿಸೆಂಬರ್ ೧೬ರ ಭಾನುವಾರ ರಾತ್ರಿ ಕಾಮಾಂಧರ ಪೈಶಾಚಿಕ ಕ್ರೌಯಕ್ಕೆ ತುತ್ತಾಗಿ ಜೀವಚ್ಛವವಾಗಿ ಸಪ್ತರ್ ಜಂಗ್ ಆಸ್ಪತ್ರೆಯಲ್ಲಿ ಮಲಗಿದ್ದಾಗ ಆ ವಿದ್ಯಾರ್ಥಿನಿ ಮತ್ತೆ ಬದುಕಿನ ಬಗ್ಗೆ ಆಶಾವಾದಿಯಾಗಲು ಕಾರಣವೇ ಆಕೆಯಲ್ಲಿನ ”ಬದುಕನ್ನು ಕಟ್ಟಿಕೊಳ್ಳುವ’ ಛಲ. ಅದನ್ನಾಕೆ ಪೋಲಿಸರಿಗೆ ನೀಡಿದ ಹೇಳಿಕೆಯಲ್ಲೇ ಗೊತ್ತಾಗಿದೆ. ’ನನ್ನನ್ನು ಈ ಸ್ಥಿತಿಗೆ ತಂದವರಿಗೆ ಶಿಕ್ಷೆಯಾಗುತ್ತದೆಯಲ್ಲವೇ?’  ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಕೆಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ವಿವರಿಸಿದ್ದರು. ಆಕೆಯ ಮಾನಸಿಕ ಸ್ಥಿಮಿತ ಮತ್ತು ಜೀವನ ಪ್ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಮನುಷ್ಯ ಪ್ರಯತ್ನಗಳ್ಯಾವುದೂ ಅವಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆಕೆ ಮರಣಶಯ್ಯೆಯಲ್ಲಿ ಕೇಳಿದ ಪ್ರಶ್ನೆಗೆ ಇಂದು ಸಮಸ್ತ ಭಾರತವೇ ದನಿಗೂಡಿಸುತ್ತಿದೆ. ಪ್ರತಿಭಟನೆ ಆಂದೋಲದ ಸ್ವರೂಪ ಪಡೆದುಕೊಂಡಿದೆ. ಇದು ಇತರ ಪ್ರತಿಭಟನೆಗಳಂತೆ ಪ್ರಾಯೋಜಿತ ಕಾರ್ಯಕ್ರಮ ಅಲ್ಲ ಎಂಬುದಕ್ಕೇ ಇದರ ಫಲಶ್ರುತಿಯ ಬಗ್ಗೆ ದೇಶಕ್ಕೆ ದೇಶವೇ ಕಾತರದಿಂದ ಕಾದಿದೆ.
ಚಿತ್ರ ಕೃಪೆ; ಅಂತರ್ಜಾಲ
ನಮಗೆ ಗೊತ್ತಿದೆ; ಅತ್ಯಾಚಾರ ಪ್ರಕರಣಗಳಲ್ಲಿ ಅದು ಬಲತ್ಕಾರದ ದೈಹಿಕ ಸಂಪರ್ಕವೋ ಅಥವಾ ಒಪ್ಪಿತ ಲೈಂಗಿಕ ಕ್ರಿಯೆಯೋ ಎಂದು ನಿರ್ಧರಿಸುವುದು ಕಷ್ಟ ಸಾಧ್ಯ. ಹಾಗಾಗಿ ಅದರ ವಿಚಾರಣೆಯ ಪ್ರಕ್ರಿಯೆ ದೀರ್ಘವಾಗಿರುತ್ತದೆ. ಆದರೆ ಸಾಮೂಹಿಕ ಅತ್ಯಾಚಾರದಲ್ಲಿ ಘಟನೆ ಸ್ಪಷ್ಟವಿರುತ್ತದೆ. ಅಲ್ಲಿ ನಿಸ್ಸಂದೇಹವಾಗಿ ಹೆಣ್ಣು ಬಲಿಪಶುವಾಗಿರುತ್ತಾಳೆ. ಅಲ್ಲೊಂದು ಮೃಗೀಯ ವರ್ತನೆ ನಡೆದಿರುತ್ತದೆ.

ಪುರುಷಪುಂಗವನೆಂದು ತನ್ನನ್ನು ತಾನು ಹೆಮ್ಮೆಯಿಂದ ಕರೆದುಕೊಳ್ಳುವ ಗಂಡಸಿನ ಆಯುಧವೇ ’ಅದು’. ಅದೇ ಇಲ್ಲದಿದ್ದರೆ ಅವನೊಂದು ಹುಳು.ಕಾಲಲ್ಲಿ ಹೊಸಕಿ ಹಾಕಬಹುದಾದ ಜಂತು.ಸೆಕ್ಸ್ ವಿಚಾರದಲ್ಲಿ ಆತನಿಗೆ ವಿವೇಚನೆಯಿಲ್ಲ. ಕಂಡಲ್ಲಿ ನುಗ್ಗುವ ಗೂಳಿ ಅವನು.ಹೆಣ್ಣು ಸಿಗದಿದ್ದರೆ ಅವನಿಗೆ ಇನ್ನೊಂದು ಗಂಡೂ ಆದೀತು..ಕೊನೆಗೆ ಪ್ರಾಣಿಯಾದರೂ ಓಕೆ. ಅದಕ್ಕಾಗಿ ಅತ್ಯಚಾರ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಬಗ್ಗೆ ಈಗಿರುವ ಕಾನೂನಿಗೆ ತಿದ್ದುಪಡಿಯಾಗಬೇಕು. ಇದರ ವಿಚಾರಣೆ ಅತೀ ಕ್ಷಿಪ್ರವಾಗಿ ನಡೆದು ಶಿಕ್ಷೆ ಶೀಘ್ರವೇ ಜಾರಿಯಾಗಬೇಕು. ಇಂಥ ಕ್ರೂರಿಗಳಿಗೆ ಗಲ್ಲು ಶಿಕ್ಷೆಯಂತ ಶಿಕ್ಷೆಯನ್ನು ನೀಡಿ ಅವರಿಗೆ ಮುಕ್ತಿ ನೀಡಬಾರದು ಅವರು ಬದುಕಿದ್ದೂ ಸತ್ತಂತಿರಬೇಕು.  ”ಇಂತವರು ನೀವು’ ಎಂದು ಸಮಾಜ ಅವರನ್ನು ಪ್ರತಿಕ್ಷಣವೂ ಚುಚ್ಚಿ ಚುಚ್ಚಿ ಸಾಯುಸುತ್ತಲಿರಬೇಕು. ಹಾಗಾಗಿ ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನೇ ಜಾರಿಗೆ ತರಬೇಕು.

ನಾನು ಮತ್ತೆ ಮತ್ತೆ ನಂಬುವುದು ’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂಬುದನ್ನು. ನಾವು ನಮ್ಮ ಮಕ್ಕಳನ್ನು ಅವರ ಹದಿಹರೆಯದ ತನಕ ಯಾವ ಪರಿಸರದಲ್ಲಿ, ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪೋಷಕರು ಸ್ವತಃ ಮಾದರಿಯಾಗಿರದಿದ್ದಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಮಕ್ಕಳು ಬಹುಬೇಗನೆ ಎಲ್ಲವನ್ನೂ ಗ್ರಹಿಸಿಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಜೊತೆಗೆ ಸ್ವರಕ್ಷಣೆಯ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಹೇಳಿಕೊಡಬೇಕು. ಹಾಗೆಯೇ ಗಂಡು ಮಕ್ಕಳಿಗೂ ಸ್ತ್ರೀಯರನ್ನು ಗೌರವದಿಂದ ಕಾಣುವುದನ್ನು ಅವರಿಗೆ ಅರಿವಿಲ್ಲದಂತೆ ಮನಗಾಣಿಸುತ್ತಿರಬೇಕು. ಯಾಕೆಂದರೆ ಪುರುಷ ಪ್ರಧಾನ ಯೋಚನೆಯನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.

ನನಗೀಗಲೂ ನೆನಪಿದೆ. ನನ್ನ ಮಗನೊಮ್ಮೆ ಮಾತಿನ ಮಧ್ಯೆ ”ಹೆಂಗಸು’ ಎಂಬ ಪದವನ್ನು ಉಪಯೋಗಿಸಿದ. ನನಗೆ ಆ ಪದವನ್ನು ಕೇಳಿದರಾಗದು. ನಾನು ಎಂದೂ ಆ ಪದವನ್ನು ಉಪಯೋಗಿಸುವುದಿಲ್ಲ. ಹೆಂಗಸು ಅಂದರೆ ಹೆಣ್ಣು ಕೂಸು. ಹೆರುವವಳು ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆಯೆಂಬುದು ನನ್ನ ಭಾವನೆ., ಮಹಿಳೆಯ ಅಸ್ತಿತ್ವವನ್ನು ಅದು ಸೀಮಿತಗೊಳಿಸುತ್ತದೆಯೆಂಬುದು ನನ್ನ ಗ್ರಹಿಕೆ. ನನ್ನನ್ನು ಯಾರಾದರೂ ’ಆಯಮ್ಮ’ ಎಂದು ಸಂಭೋದಿಸಿದರೆ ನನ್ನ ಸಿಟ್ಟು ನೆತ್ತಿಗೇರುತ್ತದೆ!  ನನ್ನ ಮಗನಿನ್ನೂ ತುಂಬಾ ಚಿಕ್ಕವನು, ಆದರೂ ನಾನವನಿಗೆ ಹೇಳಿದೆ ’ಹೆಂಗಸು ಅನ್ನಬಾರದು, ಮಹಿಳೆ ಅನ್ನು’ ಅಂತ ಆಮೇಲೆ ನಾನದನ್ನು ಮರೆತು ಬಿಟೆ. ಆದರೆ ಒಂದೆರಡು ವರ್ಷಗಳ ಹಿಂದೆ ನಾನೇ ಬಾಯಿತಪ್ಪಿ ’ಆ ಹೆಂಗಸು..’ ಅಂದುಬಿಟ್ಟೆ. ಆಗ ಅಲ್ಲೇ ಇದ್ದ ನನ್ನ ಮಗ ’ ಅಮ್ಮಾ ಗೌರವ..ಮಹಿಳೆ ಅನ್ನು’ ಅಂದುಬಿಟ್ಟ..ನಾನು ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ಟೆ!

 ಟೈಮ್ಸ್ ನೌ ಚಾನಲ್ಲಿನ ವರದಿಗಾರ ಹೇಳುತ್ತಿದ್ದ, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಕಾರರ ಸರಾಸರಿ ವಯಸ್ಸು ೨೨. ಅಂದರೆ ಅದು ಲೈಂಗಿಕ ಪರ್ವಕಾಲ. ಶರೀರದಲ್ಲಿ ಲೈಂಗಿಕ ಹಾರ್ಮೋನ್ ಗಳು ಅತ್ಯಧಿಕವಾಗಿ ಸ್ರವಿಸುವ ಕಾಲಘಟ್ಟ.ಆದರೂ ಮನುಷ್ಯನ ಮೂಲಭೂತ ಅವಶ್ಯಕತೆಯಲ್ಲಿ ಒಂದಾದ ಸೆಕ್ಸ್ ಅನ್ನು ನಿಯಂತ್ರಣ್ದಲ್ಲಿ ಇಟ್ಟುಕೊಳ್ಳಲು ಇವರಿಗೆಲ್ಲಾ ಹೇಗೆ ಸಾಧ್ಯವಾಯಿತು? ಅದು ಸಂಸ್ಕಾರದಿಂದ, ಶಿಕ್ಷಣದಿಂದ, ವೈಯಕ್ತಿಕ ಬದುಕಿನಲ್ಲಿ ನೈತಿಕ ಮೊಲ್ಯಗಳನ್ನು ಅಳವಡಿಕೊಂಡಿರುವುದರಿಂದ ಸಾಧ್ಯವಾಗಿದೆ. ಅಲ್ಲಿ ಅವರೆಲ್ಲಾ ಸೇರಿ ಸಮಾಜಮುಖಿ ಹೋರಾಟವೊಂದರಲ್ಲಿ ತೊಡಗಿಕೊಂಡಿರುವುದನ್ನು ನೋಡಿದಾಗ ಭವಿಷ್ಯದ ಬಗ್ಗೆ ಆಶಾವಾದ ಮೂಡುತ್ತದೆ. ಇಂತಹ ಮನಸ್ಸುಗಳು ರಾಜಕೀಯಕ್ಕೆ ಬರಬೇಕು; ಕಾನೂನು ರಚನೆಯಲ್ಲಿ ಭಾಗಿಯಾಗಬೇಕು.ಆರೋಗ್ಯವಂತ ಸಮಾಜವನ್ನು ಕಟ್ಟಬೇಕು. ಆದರೆ ಅದು ಸಾಧ್ಯವೇ?

ನಮ್ಮ ಕೆಲವು ಜನಪ್ರತಿನಿಧಿಗಳನ್ನು ನೋಡಿದರೆ ಕಾನೂನನ್ನು ರೂಪಿಸುವವರೇ ಕಾನೂನನ್ನು ಉಲ್ಲಂಘಿಸುವವರೂ ಆಗಿರುತ್ತಾರೆ ಎಂಬುದು ಗೊತ್ತಾಗುತ್ತದೆ. ನಮ್ಮ ಜನಪ್ರತಿನಿಧಿಗಳಲ್ಲೇ ಎಷ್ಟೋ ಜನರು ಹಲವಾರು ಮಹಿಳೆಯರೊಡನೆ ವಿವಾಹಬಾಹಿರ ಸಂಬಂಧಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ಕೆಲವರು ಅತ್ಯಚಾರ ಪ್ರಕರಣ್ಗಳಲ್ಲಿ ಭಾಗಿಯಾಗಿದ್ದಾರೆ. ಅಷ್ಟೆಲ್ಲ ಯಾಕೆ ಪ್ರಜಾಪ್ರಭುತ್ವದ ದೇಗುಲದಂತಿರುವ ವಿಧಾನಸೌಧದಲ್ಲೇ ಬ್ಲೂಪಿಲಂ ನೋಡಿದ ಚಪಲಚೆನ್ನಿಗರಾಯರಿದ್ದಾರೆ. ಇಂತವರಿಂದ ಯಾವ ಕಾನೂನು ರಚನೆಯನ್ನು ನಾವು ನಿರೀಕ್ಷಿಸಬಹುದು?

ಚಿತ್ರ ಕೃಪೆ; ಅಂತರ್ಜಾಲ
 ಇದರ ಜೊತೆಗೆ ಮೀಡಿಯಾಗಳು, ಸಿನೇಮಾಗಳು,ಜಾಹೀರಾತುಗಳು, ಟೀವಿ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹೆಣ್ಣನು ಭೋಗದ ವಸ್ತುಗಳಾಗಿ, ಮಾರುಕಟ್ಟೆಯ ಸರಕುಗಳಾಗಿ ಕಾಣುತ್ತವೆ. ಹೆಣ್ಣಿನ ಕೊಬ್ಬು ಇಳಿಸಬೇಕಾದರೆ ಆಕೆಯ ಮೇಲೆ ಅತ್ಯಚಾರ ಮಾಡಬೇಕೆಂಬುದು ಸಿನೇಮಾರಂಗ ಒಪ್ಪಿಕೊಂಡ ಮೌಲ್ಯಗಳಲ್ಲಿ ಒಂದು. ನನಗೆ ಈಗಲೂ ನೆನಪಿದೆ. ಬಹುಶಃ ಅದು ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಸಿನೇಮಾವಿರಬೇಕು. ಒಂದು ಬ್ಯಾಂಕ್ ದರೋಡೆ ನಡೆಯುತ್ತದೆ. ಬ್ಯಾಂಕಿನೊಳಗಿದ್ದ ಸುಮನ್ ನಗರ್ ಕರ್ ಅದನ್ನು ಪ್ರತಿಭಟಿಸುತ್ತಾಳೆ.”ಅವಳ ಕೊಬ್ಬು ಇಳಿಸು’ ಎಂದು ಖಳ ನಾಯಕ ತನ್ನ ಸಹಚರನಿಗೆ ಹೇಳುತ್ತಾನೆ. ಆಗ ದಡಿಯನೊಬ್ಬ ಎಲ್ಲರ ಎದುರಿನಲ್ಲೇ ಅವಳ ಮೇಲೆ ಅತ್ಯಚಾರ ಎಸಗುತ್ತಾನೆ. ನನ್ನ ದೃಷ್ಟಿಯಲ್ಲಿ ಹೆಣ್ಣನ್ನು ಶೋಷಣೆ ಮಾಡುತ್ತಿರುವವರಲ್ಲಿ ಚಿತ್ರರಂಗ ಮತ್ತು ಮೀಡಿಯಾಗಳು ಮೊದಲ ಸಾಲಿನಲ್ಲಿ ಬರುತ್ತವೆ. ಹೆಣ್ಣನ್ನು ಸೂಕ್ಷ್ಮಸಂವೇದನೆಯಿಂದ ಕಾಣುವ ಮಾಧ್ಯಮವಿದ್ದರೆ ಅದು ರಂಗಭೂಮಿ ಮಾತ್ರ. ಅತ್ಯಾಚಾರಕ್ಕೆ ಒಳಗಾಗದ ಮಹಿಳೆಯೊಬ್ಬಳು ಆತನ ಮರ್ಮಾಂಗವನ್ನು ಕತ್ತರಿಸಿ ಸೇಡು ತೀರಿಕೊಳ್ಳವ ವಸ್ತುವುಳ್ಳ ’ಪುರುಷ’ ನಾಟ್ಕವನ್ನು ಕೆಲವು ತಿಂಗಳುಗಳ ಹೀದೆ ನಾನು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ದೆ. ಇದು ಸಮಕಾಲೀನ ಸಮಸ್ಯೆಯೊಂದಕ್ಕೆ ಕಲಾ ಮಾಧ್ಯಮವೊಂದು ಪ್ರತಿಕ್ರಿಯಿಸಿದ ರೀತಿ. ಆ ರೀತಿಯ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಾವು ಮಾಧ್ಯಮದಿಂದ ನಿರೀಕ್ಷಿಸುತ್ತೇವೆ.

ಪ್ರತಿ ಮಹಿಳೆಯೂ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಅತ್ಯಚಾರಕ್ಕೆ ಒಳಗಾಗಿಯೇ ಆಗಿರುತ್ತಾಳೆ. ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ದೈಹಿಕವಾಗಿ ಆಗಿರಬಹುದು. ಅದು ಕುಟುಂಬದ ಒಳಗೇ ಆಗಿರಬಹುದು ಅಥವ ಹೊರಗೇ ಅಗಿರಬಹುದು. ಆದರೆ ಆಕೆ ಲೈಂಗಿಕ ಆಟಿಕೆಯಾಗಿರುವುದು ಸತ್ಯ. ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲಾರೆವು. ಒಂದು ವೇಳೆ ಯಾರದರೂ ಅದನ್ನು ಹೇಳಿಕೊಳ್ಳುವ ದೈರ್ಯ ಮಾಡಿದರೆ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ. ಆಗ ನಡೆಯುವುದೇ ನಿಜವಾದ ಅತ್ಯಚಾರವಾಗುತ್ತದೆ. ಹಾಗಾಗಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅಲ್ಲಿ ಕ್ರೌರ್ಯ ಇತ್ತೋ ಇಲ್ಲವೋ ಗೊತ್ತಾಗುವುದಿಲ್ಲ. ಆದರೆ ಲೈಂಗಿಕ ಲಾಲಸೆಯೇ ಪರಾಕಾಷ್ಠೆಯಲ್ಲಿರುತ್ತದೆ ಎಂಬುದು ಸತ್ಯ. ಹಾಗಾಗಿ ಪುಟ್ಟ ಕಂದಮ್ಮಗಳ ಮೇಲೂ, ಇಳಿ ವಯಸ್ಸಿನವರ ಮೇಲೂ ಅತ್ಯಚಾರ ನಡೆಯುತ್ತದೆ. ಆದರೆ ಸಾಮೂಹಿಕ ಅತ್ಯಚಾರ ನಡೆದಾಗ ಅಲ್ಲಿ ವಿಜೃಂಭಿಸುವುದೇ ಕೌರ್ಯ. ಹಾಗಾಗಿ ಅಲ್ಲಿ ಮೃಗೀಯ ವರ್ತನೆಯಿರುತ್ತದೆ. ತಾವು ಧಾಳಿ ಮಾಡುತ್ತಿರುವುದು ಒಂದು ಜೀವಂತ ಹೆಣ್ಣಿನ ದೇಹದ ಮೇಲೆ, ಅದರಲ್ಲಿಯೂ ಮಿಡಿತವಿದೆ ಎಂಬುದನ್ನವರು ಮರೆತುಬಿಡುತ್ತಾರೆ. ಹಾಗಿಯೇ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಾರೆ, ಅವಳ ಜನನೇಂದ್ರಿಯಕ್ಕೆ ಕಬ್ಬಿಣದ ಸಲಾಕೆಯನ್ನು ತೂರಿಸುತ್ತಾರೆ. ಹಿಂದೊಮ್ಮೆ ಅಲ್ಲಿಂದಲೇ ತಾವು ಮಾಂಸದ ಮುದ್ದೆಯಂತೆ ಈ ಜಗತ್ತಿಗೆ ಅವತರಿಸಿದ್ದೆವು ಎಂಬುದನ್ನು ಅವರಿಗೆ ತಿಳಿಸಿ ಹೇಳುವವರು ಯಾರು? ಪುರುಷಪ್ರಧಾನವಾದ, ಪುರುಷ ಮನಸ್ಥಿತಿಯ ಪೋಲಿಸ್ ಇಲಾಖೆಯಲ್ಲಿ ಈ ಕಾರ್ಯಕ್ಕೆ ಲಾಠಿಯ ಬಳಕೆಯಾಗುತ್ತದೆ ಅಷ್ಟೇ. ಕ್ರಿಮಿನಲ್ ಕೇಸ್ ಗಳಲ್ಲಿ ಪೋಲಿಸ್ ಠಾಣೆಯಲ್ಲಿ ಅತೀಥ್ಯ ಪಡೆದು ಬಂದ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯವಾಗಿ ಮಾತಾಡಿಸಿ ನೋಡಿ, ಭೀಕರ ಸತ್ಯಗಳು ಹೊರಬರುತ್ತವೆ!.

ಆದರೆ ಲೈಂಗಿಕ ತಜ್ನರು ಹೇಳುವ ಸತ್ಯ ಬೇರೆಯದೇ ಆಗಿರುತ್ತದೆ. ಅವರು ಹೇಳುತ್ತಾರೆ. ಪುರಷನಿಗಿಂತಲೂ ಸ್ತ್ರೀಯ ಲೈಂಗಿಕ ಕಾಮನೆಗಳು ದುಪ್ಪಟ್ಟಾಗಿರುತ್ತವೆ. ಓಶೋ ತಮ್ಮ ’ಸ್ತ್ರೀ’ ಪುಸ್ತಕದಲ್ಲಿ ಇದಕ್ಕೆ ಸಮರ್ಥನೆಗಳನ್ನು ನೀಡುತ್ತರೆ. ಇದಕ್ಕೆ ವರ್ತಮಾನದಲ್ಲಿ ಪುರಾವೆಗಳು ಸಿಗುತ್ತವೆ. ಒಬ್ಬಳು ವೇಶ್ಯ ದಿನವೊಂದರಲ್ಲಿ ಹತ್ತು ಗಿರಾಕಿಗಳನ್ನಾದರೂ ತೃಪ್ತಿ ಪಡಿಸಬಲ್ಲಳು. ಆದರೆ ಒಬ್ಬ ಗಂಡಸು ಎಷ್ಟು ಜನರನ್ನು ಹಾಸಿಗೆಯಲ್ಲಿ ಗೆಲ್ಲಬಲ್ಲ ಹೇಳಿ? ಆಗ ಅವನಿಗೆ ನೆನಪಾಗುವುದೇ  ರಾಡ್, ಲಾಠಿಗಳು...

ಮೊನ್ನೆ ನನ್ನ ಸ್ನೇಹಿತರೊಬ್ಬರೊಡನೆ ದೆಹಲಿ ಘಟನೆ ಬಗ್ಗೆ ಮಾತಾಡುತ್ತಿದ್ದೆ. ಮಾತಿನ ಮಧ್ಯೆ ಅವರಲ್ಲಿ ಹೇಳಿದೆ. ನೀವು ಗಂಡಸರು ಮಾಡಿದ ಹಾಗೆ ಹುಡುಗಿಯರು ಕೂಡಾ ಮಾಡಿದರೆ ಹೇಗಿರುತ್ತೆ ಸ್ವಲ್ಪ ಕಲ್ಪ್ಪಿಸಿಕೊಳ್ಳಿ; ಒಂದು ಆರೇಳು ಹುಡುಗಿಯರು ಹುಡುಗನೊಭ್ಭನನ್ನು ಅಪಹರಿಸಿ ಅವನ ಬಾಯಿಗೆ ಒಂದೆರಡು ವಯಾಗ್ರ ಮಾತ್ರೆ ತುರುಕಿಸಿ ಅವನನ್ನು ಕಬ್ಬಿನ ರಸ ಹೀರಿದಂತೆ ಹೀರಿ ಬಿಟ್ಟರೆ ಹೇಗಿರುತ್ತೆ? ಎಂದೆ. ಬಿಟ್ಟ ಬಾಯಿ ಬಿಟ್ಟಂತೆ ನಿಂತ ಅವರನ್ನು ನಾನು ಮೈ ಮುಟ್ಟಿ ಎಚ್ಚರಿಸಬೇಕಾಯ್ತು. ವಿದೇಶದಲ್ಲಿ ಎಲ್ಲಿಯೋ ಒಂದು ಪ್ರಕರಣ ಈ ರೀತಿ ನಡೆದದ್ದು ವರದಿಯಾಗಿದ್ದು ಬಿಟ್ಟರೆ ಇನ್ನೆಲ್ಲೂ ನಡೆದಂತಿಲ್ಲ. ಆದ್ರೆ ಮುಂದೆ ನಡೆಯಲಾರದು ಎಂದು ಹೇಳುವುದು ಹೇಗೆ?.ಹಾಗಾಗಿ ನನ್ನ ಪುರುಷ ಸಂಗಾತಿಗಳಲ್ಲಿ ಕೇಳಿಕೊಳ್ಳುವುದಿಷ್ಟೇ; ನಿಮ್ಮ ಉಳಿವಿಗಾಗಿಯಾದರೂ ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಿ.......

[’ಅಗ್ನಿ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ ]

·          
·