Friday, October 24, 2014

ಎರಡಲುಗಿನ ಕತ್ತಿ!



ಬೋಳು ಮರದಡಿಯಲ್ಲಿ ನಿಂತಿದ್ದೆವು.
ಮಾತಿನ ಸೇತುವೆ ಶಿಥಿಲಗೊಳ್ಳುತ್ತಿತ್ತು.
ಅವನಂದ; ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಕಣ್ಣು ಮಂಜಾಯಿತು, ತಲೆ ತಗ್ಗಿಸಿದೆ.
ಮರು ಮಾತಾಡಲಿಲ್ಲ.
ಓಡಿ ಹೋಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಮಕ್ಕಳನ್ನು ಕೂಗಿ ಕರೆದೆ.
ಹಿಂತಿರುಗಿದವು, ಎರಡು ಹೆಜ್ಜೆ ಹಿಂದೆ ಬಂದು ”ಏನಮ್ಮಾ?’ ಅಂದವು
ಏನಿಲ್ಲಾ.. ಅಂದು ಸ್ವಲ್ಪ ಹೊತ್ತು ಅಲ್ಲೇ ನಿಂತೆ.
ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಾ ನಡಿಗೆ ಮುಂದುವರಿಸಿದವು.
ಅಂಗೈ ನೋಡಿಕೊಂಡೆ; ಒದ್ದೆಯಾಗಿತ್ತು..

ಸಿರಿವಂತರ ನಾಲಗೆಯೆಂಬುದು ಎರಡಲುಗಿನ ಕತ್ತಿ.
ಕತ್ತರಿಸಲು ನಿಂತವರಿಗೆ ನಾನದರೇನು..ನೀನಾದರೇನು?
ಹಿಂದೊಬ್ಬ ರಸ್ತೆಯಲ್ಲೇ ಕಾಲಪ್ಪಳ್ಳಿಸಿದ್ದ.
ಮತ್ತೆ ಮನದಂಗಳಕ್ಕೆ ಬಂದು ಹೇಳಿದ್ದ ’ನೀನೆಷ್ಟು ಒಳ್ಳೆಯವಳು!’
ಹಾಗನ್ನುತ್ತಲೇ ಕಾಲನ ತೆಕ್ಕೆಯಲಿ ಕರಗಿಹೋದ.
ಈಗ ಇವನು ಹೇಳುತ್ತಿದ್ದಾನೆ., ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಇಬ್ಬರೂ ಅಕ್ಷರ ಸ್ನೇಹಿತರು; ಕಂಡಿಲ್ಲ ಮಾತಾಡಿಲ್ಲ.
ಯಾರ ಮಾತನ್ನು ನಂಬುವುದು?

ಎದೆ ಮೇಲೆ ಕೈಯಿಟ್ಟು ಕ್ಷಣಕಾಲ ಕಣ್ಮುಚ್ಚಿದೆ. 
ಒಳಗಿನ ಆಕಾಶಕ್ಕೆ ಯಾವ ಅಳತೆಗೋಲಿನ ಹಂಗು?  
ಆದರೂ ಒಂದು ಸಣ್ಣ ಚಲನೆ ನನ್ನನ್ನೀಗ ಆಳುತ್ತಿದೆ!


Monday, October 13, 2014

’ಒಪ್ಪಿಸುವಿಕೆಯ ಸೆಕ್ಸ್’ ಎಂಬುದೊಂದು ಇದೆಯಾ?




ರಾಘವೇಶ್ವರ ಭಾರತಿ-ಪ್ರೇಮಲತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಪ್ರಶ್ನಿಸುವುದು, ಪ್ರೇಮಲತಾ ಎಂಬ ಈ ಮಹಿಳೆ ತನ್ನ ಮೇಲೆ ವರ್ಷಗಳಿಂದ ಲೈಂಗಿಕ ಅತ್ಯಾಚಾರ ನಡೆದರೂ ಅದನ್ನು ಯಾರಿಗೂ ಹೇಳದೆ ಈಗ ಯಾಕೆ ಬಹಿರಂಗಗೊಳಿಸಿದ್ದಾರೆ? ಅದರ ಹಿಂದೆ ಇನ್ನೆನೋ ಹುನ್ನಾರ ಅಡಗಿರುವಂತಿದೆ!

’ಕಾನೂನು ಕತ್ತೆಯಿದ್ದಂತೆ’ ಎಂಬ ಮಾತಿದೆ. ಅದು ಸಾಕ್ಷ್ಯಾಧಾರಗಳನ್ನು ಮಾತ್ರ ಕಲೆ ಹಾಕುತ್ತದೆ ಮತ್ತು ಪರಿಶೀಲಿಸುತ್ತದೆ. ಆದರೆ ಕಾನೂನಿನ ತೆಕ್ಕೆಗೂ ನಿಲುಕದ ಹಲವಾರು ಅಂಶಗಳಿರುತ್ತವೆ.ಅದರಲ್ಲಿಯೂ ಒಂದು ಹೆಣ್ಣಿನ ಅಂತರಂಗವನ್ನು ಹೊಕ್ಕು ನೋಡುವ ಸಾಮರ್ಥ್ಯ ಈ ಜಗತ್ತಿಗೆ ಇನ್ನೂ ಸಾಧ್ಯವಾಗಿಲ್ಲವೇನೋ!. ಹೀಗೆ ಹೇಳುವಾಗ ಪುರುಷನ ರೀತಿಯಲ್ಲೇ ಯೋಚಿಸುವುದನ್ನು ರೂಢಿಸಿಕೊಂಡ ಸ್ತ್ರೀಯರು ಕೂಡಾ ನನ್ನ ಮುಂದಿದ್ದಾರೆ. ಅವೠ ಹಾಗೇ ಯೋಚಿಸುವುದು  ತಲೆತಲಾಂತರದಿಂದ ವಿನ್ಯಾಸಗೊಂಡತಿದೆ.

ಪ್ರೇಮಲತಾ ಯಕಃಶ್ಚಿತ್ ಒಬ್ಬಳು ಹೆಣ್ಣು. ಆಕೆ ತನ್ನ ಸೌಂದರ್ಯದಿಂದಲೇ ಒಬ್ಬ ಸ್ವಾಮೀಜಿಯನ್ನು ತನ್ನ ಮೋಹ ಪಾಶದಲ್ಲಿ ಕೆಡವಿಕೊಂಡಳು, ಅನಂತರ ಬ್ಲಾಕ್ ಮೈಲ್ ಮಾಡಿದಳು ಅಂದುಕೊಳೋಣ. ಈ ಸ್ವಾಮಿಜಿಯೇನು ಕಳ್ಳೆಪುರಿ ತಿನ್ನುವ ಗಮಾರನೇ?

ಶ್ರೀ ರಾಮಚಂದ್ರಾಪುರ ಮಠವೇ ಹೇಳಿಕೊಳ್ಳುವ ಹಾಗೆ ಅದು ಸಾವಿರಾರು ವರ್ಷಗಳ ಇತಿಹಾಸವಿರುವ ಮಠ. ನಿನ್ನೆ ಮೊನ್ನೆ ಹುಟ್ಟಿದ ಸಾಮನ್ಯ ಮಠವಲ್ಲ. ಆ ಮಠದ ಪೀಠಾಧಿಪತಿ ತನ್ನನ್ನು ತಾನು ’ಗೋಕರ್ಣ ಮಂಡಲಾದೀಶ್ವರ’ ಎಂದು ಕರೆದುಕೊಳ್ಳುತ್ತಾರೆ. ಅದು ಕೇವಲ ಗುರುಪೀಠವಲ್ಲ. ರಾಜಪೀಠವೂ ಹೌದು.. ಅದಕ್ಕೊಂದು ದಂತದ ಸಿಂಹಾಸನವಿದೆ..ಅಡ್ಡಪಲ್ಲಕ್ಕಿ ಉತ್ಸವದ ಪರಂಪರೆಯಿದೆ. ಶಂಕರಾಚಾರ್ಯರ ಪಾದುಕೆಗಳು ತಮ್ಮಲ್ಲಿದೆಯೆಂದು ಅದು ಹೇಳಿಕೊಳ್ಳುತ್ತದೆ. ಇಂತಹ ಪರಂಪರೆಯ ಅಧಿಕಾರಪೀಠದಲ್ಲಿರುವ ಸರ್ವಸಂಗ ಪರಿತ್ಯಾಗಿಯಾದ ಸ್ವಾಮೀಜಿಗೆ ಸಾಮಾನ್ಯ ಗಾಯಕಿಯೊಬ್ಬಳು ಲೈಂಗಿಕ ಅತ್ಯಾಚಾರದ ಕೇಸನ್ನು ಕೊಡಲು ಸಾಧ್ಯವೇ? ಹಾಗೆಯೇ ತನ್ನ ಸ್ಥಾನದ ಘನತೆಯನ್ನು ಮರೆತು ಒಬ್ಬ ಪೀಠಾಧಿಪತಿ ಲಂಪಟನಂತೆ ವರ್ತಿಸಲು ಸಾಧ್ಯವೇ? ಇದು ಯೋಚಿಸಬೇಕಾದ ವಿಷಯ.

ಪ್ರೇಮಲತಾ ಕೊಟ್ಟಿರುವ ದೂರಿನಲ್ಲಿ ತಾನು ವಶೀಕರಣಕ್ಕೆ ಒಳಗಾಗಿ ಸ್ವಾಮೀಜಿಯ ಜೊತೆ ದೈಹಿಕ ಸಂಪರ್ಕಕ್ಕೆ ಒಳಗಾದೆ ಎಂದು ಹೇಳುತ್ತಾರೆ. ಸ್ವಾಮೀಜಿಯೊಬ್ಬರು ಹೆಣ್ಣಿನ ಸಂಗ ಮಾಡಿರಬಹುದೇ? ಅದು ತನಿಖೆಯಿಂದ ಗೊತ್ತಾಗಲಿದೆ. ಅದರ ಬಗ್ಗೆ ಎಲ್ಲೂ ಚರ್ಚೆಯಾಗುತ್ತಿಲ್ಲ.. ಅದರೆ ಪ್ರೇಮಲತಾ ನಡತೆಯ ಬಗ್ಗೆ ಎಗ್ಗಿಲ್ಲದೆ ಚರ್ಚೆ ನಡೆಯುತ್ತಿದೆ.

ಗಂಡು-ಹೆಣ್ಣಿನ ನಡುವಿನ ಸಂಬಂಧ ಅತ್ಯಂತ ಸಂಕೀರ್ಣವಾದುದು. ಅದನ್ನು ಹೀಗೇ ಎಂದು ವ್ಯಾಖ್ಯಾನಿಸಲು ಬರದು...ಆದರೆ ಮದುವೆ ಎನ್ನುವುದು ವ್ಯಾಖ್ಯಾನಕ್ಕೆ ಸಿಗುತದೆ. ಆ ಮದುವೆಯ ಬಂಧನಕ್ಕೆ ಒಳಪಟ್ಟವಳು ಪ್ರೇಮಲತಾ..ಸುಸಂಸ್ಕ್ರುತ ಮನೆತನದ ಆಕೆ ಆ ಚೌಕಟ್ಟನ್ನು ಯಾಕೆ ಮೀರಿದಳು? 

ಪ್ರೇಮಲತಾ ಒಬ್ಬ ಗಾಯಕಿ, ನ್ರುತ್ಯಗಾತಿ..ಅವರ ಕುಟುಂಬ ಮಠದ ಪರಮ ಭಕ್ತರು. ಹಾಗಿರುವಾಗ ಆಕೆ ಆ ಮಠ ಆಯೋಜಿಸುತ್ತಿರುವ ರಾಮ ಕಥಾದಲ್ಲಿ ಮುಖ್ಯ ಗಾಯಕಿಯಾಗಿ ಹಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ಆಕೆಯ ಪ್ರತಿಭೆಗೆ ಸಂದ ಗೌರವ. ಆದರೆ ಆಕೆಯಿಂದ ಏಕಾಂತ ಸೇವೆಯನ್ನು ಸ್ವಾಮಿಜಿ ಯಾಕೆ ಬಯಸಿದರು? 

ಯಾವುದೋ ಒಂದು ಸನ್ನಿವೇಶದಲ್ಲಿ ಒಂದು ಗಂಡು-ಹೆಣ್ಣಿನ ನಡುವೆ ಆಕರ್ಷಣೆ ಹುಟ್ಟುತ್ತೆ..ಮುಂದೆ ಅದೊಂದು ಬಾಂಧವ್ಯವಾಗಿ ಬೆಳೆಯುತ್ತೆ..ದೈಹಿಕ ಮಿಲನಕ್ಕೂ ಎಡೆಮಾಡಿಕೊಡಬಹುದು..ಮನುಷ್ಯ ತಾನಾಗಿಯೇ ಕಟ್ಟಿಕೊಂಡ ಗೋಡೆಗಳನ್ನೊಡೆದು ಗಂಡು-ಹೆಣ್ಣಿನ ಸಹಜ ಸಂಬಂಧವೊಂದು ಏರ್ಪಡಬಹುದು.

ಅಂತಹ ಸಂಬಂಧವೊಂದು ಸ್ವಾಮೀಜಿ ಮತ್ತು ಪ್ರೇಮಲತಾ ಮಧ್ಯೆ ಏರ್ಪಟ್ಟಿದ್ದರೆ ಅದು ಸಹಜ ಎಂದು ಒಪ್ಪಿಕೊಳ್ಳುವ ಒಂದು ವರ್ಗ ಈ ಸಮಾಜದಲ್ಲಿದ್ದಾರೆ .”ಇದ್ದಾರೆ’ ಎಂದು ಯಾಕೆ ಹೇಳುತ್ತಿದ್ದೇನೆ ಎಂದರೆ ಅಂತಹ ಸಂಬಂಧವನ್ನು ’ಇಟ್ಟುಕೊಂಡ’ ಹಲವಾರು ಸನ್ಯಾಸಿಗಳು, ದೇವಮಾನವರು ಕಾಲನ ಗರ್ಭ ಸೇರಿ ಹೋಗಿದ್ದಾರೆ. ವರ್ತಮಾನದಲ್ಲಿ ಸಭ್ಯ ಸಮಾಜವೊಂದು ಅದನ್ನು ಕಂಡೂ ಕಾಣದಂತಿರುತ್ತದೆ.

ಹಾಗೊಂದು ಸಂಬಂಧ ಬಹಿರಂಗಗೊಂಡಾಗ ಸಮಾಜದ ಚೌಕಟ್ಟಿನೊಳಗಡೆ ಬದುಕುತ್ತಿರುವವರು ಅವರನ್ನು ಅಸ್ಪರ್ಶ್ಯರಂತೆ ಕಾಣಬಹುದು. ಇದೂ ಕೂಡಾ ಸಹಜವಾದುದೇ..ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ ಇಲ್ಲಿ ಹೆಣ್ಣು ಮಾತ್ರ ಯಾಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕು?  ಅತ್ಯಾಚಾರ ಪ್ರಕರಣಗಳಲ್ಲಿ, ಇದು ಅತ್ಯಾಚಾರವೇ ಅಥವಾ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆಯೇ ಎಂಬುದನ್ನು ನಿಖರವಾಗಿ ಹೇಳುವುದು ತುಂಬಾ ಕಷ್ಟಸಾಧ್ಯವಾದ ವಿಷಯ. ಆದರೆ ಈ ಪ್ರಕರಣದ ಸಂದರ್ಭವನ್ನು ಗಮನಿಸಿದರೆ ಅತ್ಯಾಚಾರ, ಸಮ್ಮತಿಯ ಸೆಕ್ಸ್ ಎಂಬುದರಾಚೆಗೂ  ’ಒಪ್ಪಿಸುವಿಕೆಯ ಸೆಕ್ಸ್’ ಎಂಬ ಇನ್ನೊಂದು ಆಯಾಮದ ಕಡೆಯೂ ಗಮನ ಹರಿಸಬೇಕಾಗಿದೆ..

ಆಯ್ತು..ಯಾವುದೋ ಮೋಹಪಾಶಕ್ಕೆ ಒಳಗಾಗಿ ಅವರಿಬ್ಬರೂ ದೈಹಿಕವಾಗಿ ಒಂದಾದರು ಅಂತಿಟ್ಟುಕೊಳ್ಳೋಣ..ಹಾಗೊಂದು ಸಂಬಂಧ ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದರೆ, ಅದು ವರ್ಷಗಳ ತನಕ ಮುಂದುವರಿದಿದ್ದರೆ, ಅಲ್ಲೊಂದು ಅನುಬಂಧ ಬೆಳೆದಿರುತ್ತದೆ.ಆ ಸಲಿಗೆಯಲ್ಲಿ ಅಲ್ಲಿ ಹಣದ ಪ್ರಸ್ತಾಪವೂ ಬಂದಿದ್ದರೆ ಅದು ತಪ್ಪು ಅಥವಾ ಸರಿ ಎನ್ನಲು ನಾವ್ಯಾರು? ಆದರೆ ಅದು ಪೋಲಿಸ್ ಸ್ಟೇಷನ್ ನಲ್ಲಿ ದೂರು ಕೊಡುವಷ್ಟರ ಮಟ್ಟಿಗೆ ಮುಂದುವರಿದಿದ್ದರೆ ಅದಕ್ಕೆ ಬಲವಾದ ಕಾರಣ ಇರಲೇ ಬೇಕಲ್ಲವೇ?

ಆ ಸ್ವಾಮಿಜೀಯವರು ನಿಷ್ಕಳಂಕರೇ ಆಗಿದ್ದರೆ ವಿಚಾರಣೆಯನ್ನು ಎದುರಿಸಬಹುದಲ್ಲಾ..ಅದನ್ಯಾಕೆ ಮುಂದೂಡುತ್ತಿದ್ದಾರೆ? ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.?

ತಾನು ದೇವಮಾನವ. ರಾಮನ ಅಪರಾವತಾರಿ, ತನಗೆ ನಿನ್ನನ್ನು ನೀನು ಒಪ್ಪಿಸಿಕೊಂಡರೆ ರಾಮನಲ್ಲೇ ಐಕ್ಯಗೊಂಡಂತೆ ಎಂದು ಮರುಳು ಮಾತುಗಳಿಂದ ಸ್ವಾಮಿಜಿಯವರು ತನ್ನನ್ನು ವಶೀಕರಣಕ್ಕೊಳಪಡಿಸಿ ಭೋಗಿಸಿದರು, ಕೆಲವೊಮ್ಮೆ ಪೈಶಾಚಿಕವಾಗಿಯೂ ವರ್ತಿಸಿದರು ಎಂದು ಪ್ರೇಮಲತಾ ದೂರಿದ್ದಾಳೆ. ಇಲ್ಲಿ ಒಂದು ಮಾತನ್ನು ನೆನಪಿಸಿಕೊಳ್ಳಬೇಕು. ವಶೀಕರಣವೆಂಬುದಕ್ಕೆ ಕಾಲಮಿತಿಯಿಂಟು..ಜೀವನಪೂರ್ತಿ ಯಾರೂ ಯಾರನ್ನೂ ವಶೀಕರಣಕ್ಕೆ ಒಳಪಡಿಸಲಾಗುವುದಿಲ್ಲ. ಮೋಹದ ಪರದೆ ಸರಿದಾಗ ವಾಸ್ತವದ ದರ್ಶನ ಆಗಿಯೇ ಆಗುತ್ತದೆ. ಈಗ ಇಬ್ಬರಿಗೂ ವಾಸ್ತವದ ಅರಿವಾಗಿದೆ.ಹಾಗಾಗಿ ಪರಸ್ಪರ ದೂರು ನೀಡಿದ್ದಾರೆ. ಆ ದೂರನ್ನು ಓದಿದರೆ ಪುರುಷನ ಮೂಲಭೂತ ಗುಣವಾದ ಅಕ್ರಮಣಶೀಲತೆಯ ಗಾಢ ಅನುಭವಾಗುತ್ತದೆ.ಜೊತೆಗೆ ಹೆಣ್ಣಿನ ಮನಸ್ಸನ್ನು, ಅಂಗರಚನೆಯನ್ನು ಹಾಗೆ ರೂಪಿಸಿದ ನಿಸರ್ಗದ ಮೇಲೆಯೂ ಕ್ಷಣಕಾಲ ಮುನಿಸುಂಟಾಗುತ್ತದೆ!.

 ಕಲಾವಿದರು ಸೂಕ್ಷಮತಿಗಳು, ಭಾವುಕರು ಎದುರಿಗಿರುವ ವ್ಯಕ್ತಿಯ ಭಾವನೆಗಳಿಗೆ ಪೂರಕವಾಗಿ ಸ್ಪಂಧಿಸುವವರು.ಅವರನ್ನು ವಶಪಡಿಸಿಕೊಳ್ಳುವುದು ಸುಲಭ. ಲಂಪಟರ ಕೈಯ್ಯಲ್ಲಿ ಭಕ್ತಿ,ಭಾವದ ಬೀಸಣಿಗೆಯಿದ್ದಲ್ಲಿ  ದುರ್ಭಲರನ್ನು ತನ್ನತ್ತ ಸೆಳೆದುಕೊಳ್ಳುವುದು ಕಷ್ಟವೇನಲ್ಲ.ತನ್ನೆದುರಿಗಿರುವವನು ದೇವಮಾನವನೇ..ಅವನು ತೋಳು ಚಾಚಿ ಕರೆಯುತ್ತಿರುವುದು ತನ್ನನ್ನು ಮಾತ್ರ ಎಂದು ಮನದಟ್ಟಾದಾಗ ಒಂದು ಕ್ಷಣ ಮನಸು ಚಂಚಲವಾಗದೇ? ಆದರೆ ’ಅಮ್ರುತಮತಿ ಯಾಕೆ ಜಾರಿದಳು’ ಎಂಬುದನ್ನು ಲೋಕ ಯಾಕೆ ವಿಮರ್ಶಿಸುತ್ತಿಲ್ಲ? ಜಾರುವಿಕೆಯಲ್ಲಿ ಪಾಲುದಾರರಾದವರು  ಲೌಕಿಕದ ನ್ಯಾಯಾಲಯದಲ್ಲಿ ಶಿಕ್ಷೆಗೆ ಅರ್ಹರಲ್ಲವೇ? ಅಲ್ಲ ಎಂಬುದು ಅವರನ್ನು ರಕ್ಷಿಸಲು ಹೊರಟಿರುವ ಎಲ್ಲಾ ಕಡೆ ಹರಡಿಕೊಂಡಿರುವ ಅವರ ಅಪಾರ ಪ್ರಮಾಣದ ಬೆಂಗಾವಲು ಪಡೆ ಹೇಳುತ್ತಿದೆ. ಅವರನ್ನು ರಕ್ಷಿಸುವುದೆಂದರೆ ಸನಾತನ ಧರ್ಮವನ್ನು ರಕ್ಷಿಸಿದಂತೆ ಎಂದು ಪ್ರಚಾರ ಮಾಡುತ್ತಿದೆ. ಅಷ್ಟು ಕೇವಲವಾಯಿತೇ ನಮ್ಮ ಧರ್ಮ? ಅದರಲ್ಲಿ ಹೆಣ್ಣೊಬ್ಬಳ ಆಕ್ರಂದನಕ್ಕೆ ಯಾವ ಬೆಲೆಯೂ ಇಲ್ಲವೇ?

ಅದಕ್ಕೇ ನಾನು ಮೊದಲಲ್ಲೇ ಹೇಳಿರುವುದು ಕಾನೂನು ಕತ್ತೆಯಿದ್ದಂತೆ..ಅದಕ್ಕೆ ಹೇರನ್ನು ಹೊರುವುದಷ್ಟೇ ಗೊತ್ತು. ಅದರೊಳಗೆ ಏನು ಹೂರಣವಿದೆ, ಅದು ಅದಕ್ಕೆ ಬೇಕಾಗಿಲ್ಲ. ಕಾನೂನು ಹ್ರುದಯದ ಮಾತನ್ನೂ ಕೇಳುವಂತಾದಾಗ ಮಾತ್ರ ಹೆಣ್ಣಿಗೆ ನಿಜವಾದ ನ್ಯಾಯ ದೊರಕಬಹುದೆನೋ!




Wednesday, February 26, 2014

ಕಣ್ಣೀರಲ್ಲಿ ಕಲ್ಮಶವನ್ನು ಕಾಣಲಾರೆ


ಇಂತಹದೊಂದು ಬರಹವನ್ನು ಬರೆಯಬೇಕೆಂದು ನನಗೆ ಅನ್ನಿಸಿದ್ದು ಎರಡು ಕಾರಣಗಳಿಗಾಗಿ- ನಮ್ಮ ಕನ್ನಡ ಚಿತ್ರರಂಗದ ಆಪ್ತರಕ್ಷಕ ಅಂಬರೀಶ್ ಅವರು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಅವರ ಆರೋಗ್ಯದ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಆಸ್ಪತ್ರೆಯ ವೈದ್ಯರು ಪತ್ರಿಕಾ ಗೋಷ್ಠಿಯನ್ನು ಏರ್ಪಡಿದ್ದರು. ಆದರೆ ಅವರ ಅರೋಗ್ಯದ ಬಗೆಗಿನ ಮಾಹಿತಿಯನ್ನು ಸ್ವತಃ ಶ್ರೀಮತಿ ಅಂಬರೀಶ್ ಅವರೇ ನೀಡಬೇಕೆಂದು ಮಾಧ್ಯಮದ ಮಂದಿ ಪಟ್ಟು ಹಿಡಿದು ಕುಳಿತರು. ಆಗ ಸುಮಲತಾ ಅಂಬರೀಶ್ ಅವರೇ ಪತ್ರಿಕಾಗೋಷ್ಠಿಗೆ ಬಂದು ಮ್ಲಾನ ವದನದಿಂದ ಎರಡೂ ಕೈ ಜೋಡಿಸಿ ಪ್ರಾರ್ಥಿಸಿಕೊಂಡ ಕ್ಷಣವಿದೆಯಲ್ಲಾ...ಅದು ನನ್ನ ಚಿತ್ತದಲ್ಲಿ ಅಚ್ಚೊತ್ತಿ ಬಿಟ್ಟಿತು..

ಅದಕ್ಕೆ ಎರಡು ದಿನಗಳ ಹಿಂದೆ ವೈಯಕ್ತಿಕವಾಗಿ ನನಗೊಂದು ಅನುಭವಾಗಿತ್ತು; ದೇವರ ಸನ್ನಿಧಿಯಲ್ಲಿ ನಿವೇದಿಸಿಕೊಂಡಂತೆ ಆಪ್ತರೊಬ್ಬರಲ್ಲಿ ಹೇಳಿಕೊಂಡಂತ ಮಾನಸಿಕ ತಳಮಳದ ಕೆಲವು ಸಂಗತಿಗಳು ಆ ಚೌಕಟ್ಟಿನಿಂದಾಚೆ ಹೊರಬಂದು ಏನೇನೋ ಕಲ್ಪನೆಗಳೊಂದಿಗೆ ಮತ್ತೆ ನನ್ನ ಕಿವಿಯನ್ನೇ ತಲುಪಿದಾಗ ನಾನು ತಲ್ಲಣಗೊಂಡಿದ್ದೆ.

ಈ ಎರಡೂ ಸಂದರ್ಭಗಳಲ್ಲಿ ಆಗಿದ್ದು ಖಾಸಗಿತನದ ಘನತೆಯ ಮೇಲಿನ ಧಾಳಿ. ಇದು ಕೊಂಬು ಕಹಳೆಯನ್ನೂದುತ್ತಾ ಬಂದ ಧಾಳಿಯಲ್ಲ.ಮಂದೆಲರು ಕೂರಲಗಿನಂತೆ ಬಂದು ತಿವಿದ ಪರಿ.ಇದು ಎಲ್ಲರಿಗೂ ಅರ್ಥವಾಗುವಂತಹದ್ದಲ್ಲ. ಇದನ್ನು ಅರಿಯಲು ಸೂಕ್ಷ್ಮಜ್ನರಾಗಿರಬೇಕು.ನಿಟ್ಟುಸಿರಿನ ಬಾರಕ್ಕೆ ನಲುಗಿದ ಅನುಭವವಿರಬೇಕು. ಕಣ್ಣೀರಲ್ಲಿ ಮಿಂಚಿದ ಕಪ್ಪು ಬಣ್ಣವನ್ನು ಎದೆಗೆ ಹಚ್ಚಿಕೊಂಡವರಾಗಿರಬೇಕು.

ಪ್ರತಿ ವ್ಯಕ್ತಿಗೂ ಒಂದು ಹೊರಜಗತ್ತಿರುತ್ತದೆ. ಹಾಗೆಯೇ ಇನ್ನೊಂದು ಒಳಜಗತ್ತಿರುತ್ತದೆ. ವೈಯಕ್ತಿಕ ಸಂಬಂಧವಿದ್ದಂತೆಯೇ ಸಾಮಾಜಿಕ ಸಂಬಂಧಗಳಿರುತ್ತವೆ. ವೈಯಕ್ತಿಕ ಸಂಬಂಧ ಎರಡು ವ್ಯಕ್ತಿಗಳ ನಡುವೆಯಲ್ಲಿರುತ್ತದೆ. ಅದು ಅಗೋಚರ ಮತ್ತು ನಿಗೂಢ. ತೀರಾ ಖಾಸಗಿ ಜಗತ್ತು ಅದು.  

ಸಾಮಾಜಿಕ ಸಂಬಂಧಗಳು ವ್ಯಕ್ತಿ ಮತ್ತು ಸಮಾಜದ ನಡುವೆ ಇರುತ್ತದೆ. ಅದು ಸಾರ್ವಜನಿಕವಾದುದು..ಅದೊಂದು ಇಮೇಜ್; ಪ್ರತಿಮೆ. ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು; ಸೆಲೆಬ್ರಿಟಿಗಳೆಂದು ಬಿಂಬಿತವಾದವರು ಪ್ರತಿಮೆಗಳಾಗುತ್ತಾರೆ. ಅಂದರೆ ಅವರಿಗೊಂದು ಇಮೇಜ್ ಆವರಿಸಲ್ಪಡುತ್ತದೆ. ಆ ಇಮೇಜ್ ಗೂ ಅವರ ಖಾಸಗಿಗೆ ಬದುಕಿಗೂ ಸಂಬಂಧವಿರುವುದಿಲ್ಲ. ಆದರೆ ಆ ವ್ಯಕ್ತಿಗೆ ಆ ಇಮೇಜನ್ನು ಕೊಟ್ಟ ಸಮೂಹ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವರ ನಿರ್ವಾಜ್ಯ ಪ್ರೀತಿಯಲ್ಲಿ ಕಳಂಕ ಇಲ್ಲ. ಆದ್ರೆ ಆ ಇಮೇಜನ್ನು ಧರಿಸಿದ ವ್ಯಕ್ತಿ ಕೂಡಾ ಹುಲುಮಾನವ್ನೇ ತಾನೇ? ಹಾಗಾಗಿ ಅವನಲ್ಲಿಯೂ ರಾಗ ದ್ವೇಷಾದಿ ಗುಣಗಳು ತುಂಬಿರುತ್ತವೆ. ಅಂಥ ಗುಣಗಳು ಸಮಾಜಕ್ಕೆ ತೆರೆದುಕೊಂಡರೆ ಅದನ್ನು ಸಹಿಸಲು ಅವರ ಅಭಿಮಾನಿ ಪಡೆಗಳಿಗೆ ಕಷ್ಟವಾಗುತ್ತದೆ. ಇದು ಒಂದು ವಿಚಾರ.

ಇನ್ನೊಂದು ವಿಚಾರ ಏನೆಂದರೆ ಇಂಥ ಪ್ರತಿಮೆಗಳನ್ನು ಒಡೆಯುವ ಕೆಲಸ ನಿರಂತರ ನಡೆಯುತ್ತಿರುತ್ತದೆ. ಅದು ರಾಮನಿಗಿಂತಲೂ ಹಿಂದೆಯೇ ಆರಂಭವಾಗಿ ರಾಮಣ್ಣನನ್ನೂ ಧಾಟಿ ಮುಂದುವರಿಯುತ್ತಲೇ ಇರುತ್ತದೆ. ಈಗ ಟೀವಿ ಕ್ಯಾಮರಾಗಳು, ಟಾಬ್ಲೈಡ್ ಪೇಪರ್ ಗಳು, ಪೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳು ಈ ಪ್ರತಿಮೆ ಭಂಜಕ ಗುಣಗಳನ್ನು ತುಂಬಾ ಯಶಸ್ವಿಯಾಗಿ ಮಾಡುತ್ತಾ ಬರುತ್ತಿವೆ.

ಖಾಸಗಿ ಮತ್ತು ಸಾರ್ವಜನಿಕ ಬದುಕು ಒಂದೇ ಆಗಬೇಕಿಲ್ಲ. ಹಾಗೆ ಇರಬೇಕೆಂದು ಬಹುಶಃ ಯಾರೂ ಬಯಸಲಾರರು. ಅವೆರಡನ್ನೂ ಒಂದೇ ಆಗಿ ಕಾಪಾಡಿಕೊಂಡು ಬಂದವರು ವಿರಾತಿವಿರಳ. ಗಾಂಧೀಜಿ ಒಬ್ಬರನ್ನು ಬಿಟ್ಟರೆ ಇನ್ನೊಬ್ಬರ ಹೆಸರು ನನಗೆ ಪಕ್ಕನೆ ಹೊಳೆಯುವುದಿಲ್ಲ. ವ್ಯಯಕ್ತಿಕ ಬದುಕಿನ ನಿರ್ಧಾರಗಳು ಸಾಮಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೇ ಹೊರಜಗತ್ತಿನ ಜೊತೆಗಿನ ನಮ್ಮ ಸಂಬಂಧಗಳು ನಮ್ಮ ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರುತ್ತವೆ. ಇವೆರಡರನ್ನು ಸಂತುಲನಗೊಳಿಸುವ ಜಾಣ್ಮೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ.

ತುಂಬಾ ಗಟ್ಟಿ ವ್ಯಕ್ತಿತ್ವವುಳ್ಳವರು ಎಂದು ಅನ್ನಿಸಿಕೊಂಡವರು ಪುಟ್ಟ ಮಗುವಿನ ಹಾಗೆ ಕಣ್ಣಿರು ಹಾಕಿದ್ದನ್ನು, ಕುಸಿದು ಕುಳಿತಿದ್ದನ್ನು ನಾನು ಕಂಡಿದ್ದೇನೆ.  ನಾವು ಹ್ರದಯಹೀನರೆಂದು ಬಹುಮಟ್ಟಿಗೆ ಭಾವಿಸುವ ಸಿನೇಮಾ, ಕಿರುತೆರೆಯ ಕಲಾವಿದರು, ರಾಜಕಾರಣಿಗಳು ನೋವು, ಹತಾಶೆಗಳಿಂದ ನರಳಿ ಕಣ್ಣೀರಟ್ಟ ಪ್ರಸಂಗಗಳನ್ನು ನನ್ನ ಆಪ್ತರ ಬಾಯಿಯಿಂದ ಕೇಳಿದ್ದೇನೆ. ಸಿಟ್ಟು, ರೋಷ-ದ್ವೇಷಗಳನ್ನು ನಾವು ಬಹಿರಂಗವಾಗಿ ವ್ಯಕ್ತಪಡಿಸಬಹುದು. ಆದರೆ ನೋವು, ಹತಾಶೆ,ಅಸಹಾಯಕತೆಗಳನ್ನು ಎಲ್ಲೆಡೆಗೆ ವ್ಯಕ್ತಪಡಿಸಲಾಗದು. ಅದಕ್ಕೆ ಅಂತಃಕರಣದ ಪರಿಸರ ಬೇಕು. ಹಾಗಾಗಿ ಕಣ್ಣೀರಲ್ಲಿ ಕಲ್ಮಶವನ್ನು ಕಾಣಲು ನನ್ನಿಂದಾಗದು.


ಲಂಕೇಶ್ ತಮ್ಮ ’ಟೀಕೆ ಟಿಪ್ಪಣಿ’ಯಲ್ಲಿ ಒಂದೆಡೆ ಬರೆಯುತ್ತಾರೆ, ’ಜೀವನದಲ್ಲಿ ಗಾಢವಾಗಿ ತೊಡಗಿದ ಪ್ರತಿಯೊಬ್ಬನೂ, ಮನುಷ್ಯ ಮೂಲಭೂತವಾಗಿ ಎಂತಹ ರಾಕ್ಷಸ ಎಂಬುದನ್ನು ತನ್ನ ಮಧ್ಯವಯಸ್ಸಿನಲ್ಲಿ ಕಂಡುಕೊಳ್ಳುತ್ತಾನೆ’ ನಾನು ಮಧ್ಯ ವಯಸ್ಸನ್ನು ಪ್ರವೇಶಿಸುತ್ತಿರುವುದರಿಂದ ನನಗೆ ಹೀಗನ್ನಿಸುತ್ತಿದೆಯೇ?.ಇದ್ದರೂ ಇರಬಹುದೆನೋ!..ಅದನ್ನು ನಾನೇ ನನ್ನೊಳಗಿಳಿದು ವಿಶ್ಲೇಷಿಕೊಳ್ಳಬೇಕು.        

Monday, February 24, 2014

ಸೆಲೆಬ್ರಿಟಿಗಳ ಖಾಸಗಿ ಮತ್ತು ಸಾರ್ವಜನಿಕ ಬದುಕು.


[ಅಕಸ್ಮತ್ತಾಗಿ ಕಣ್ಣಿಗೆ ಬಿದ್ದ ಹಳೆಯ ಬರಹ]

ಕನ್ನಡದ ಹಿರಿಯ ಸಾಹಿತಿ,  ಡಾ. ಯು.ಆರ್.ಅನಂತಮೂರ್ತಿ’ ಅಗ್ನಿ’ ವಾರಪತ್ರಿಕೆ ಕಛೇರಿ ಮುಂದೆ ಕುಟುಂಬ ಸಮೇತರಾಗಿ ಧರಣಿ ನಡೆಸಿದ ’ಪ್ರಹಸನ’ ಈಗ ಮುಗಿದೆದೆ. ಆದರೆ ಈ ಪ್ರಕ್ಲರಣ ಅನೇಕ ಪ್ರಕರಣಗಳಿಗೆ ಚಾಲನೆ ನೀಡಿದೆ. ಅವು ಹೊಸತೇನೂ ಅಲ್ಲ. ಹಲವು ದಶಕಗಳಿಂದಲೂ ಅಷ್ಟೇಕೆ ಹಲವು ಶತಮಾನಗಳಿಂದಲೂ ಈ ಪ್ರಶ್ನೆ ಸಾಹಿತ್ಯವಲಯದಲ್ಲಿ ಚರ್ಚಿತವಾಗುತ್ತಲೇ ಬಂದಿದೆ. ಅದೆಂದರೆ;ಸಾಹಿತ್ಯಕೃತಿಯಷ್ಟೇ ಅದನ್ನು ರಚಿಸಿದಾತನೂ ಮುಖ್ಯನಾಗುತ್ತನೆಯೇ/ ಕೃತಿಕಾರನನ್ನು ನಗಣ್ಯವಾಗಿಸಿ ಬರಿಯ ಕೃತಿಯನ್ನು ನೋಡಲು ಸಾಧ್ಯವಿಲ್ಲವೇ?

ಇದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಆದರೆ ಯಾವ ಕಾಲಘಟ್ಟದಲ್ಲಿ ಆ ಕೃತಿ ರಚನೆಯಾಯ್ತು ಮತ್ತು ಯಾವ ಕಾಲಘಟ್ಟದಲ್ಲಿ ನಿಂತು ಆ ಕೃತಿಯನ್ನು ನಾವು ಓದುತ್ತಿದ್ದೇವೆ ಎಂಬುದರ ಮೇಲೆ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

ನಮ್ಮ ಆದಿ ಕವಿ ಪಂಪ ತನ್ನ ಧರ್ಮ, ರೂಪ, ಸ್ವಭಾವ, ರಸಿಕತೆಗಳ ಬಗ್ಗೆ ಸ್ವತಹ ಸಾಕಷ್ಟು ಹೇಳಿಕೊಂಡಿದ್ದಾನೆ. ಆದರೆ ಅವನು ಹಾಗ್ಯೇ ಇದ್ದ,ಹಾಗೆಯೇ ಬದುಕಿದ್ದ ಎಂಬುದಕ್ಕೆ ಪುರಾವೆಗಳಿಲ್ಲ. ಹತ್ತನೇ ಶತಮಾನದ ಆತನನ್ನು ಬಿಟ್ಟು ಹತ್ತೊಂಬತ್ತನೆಯ ಶತಮಾನದ ನವೋದಯ ಸಾಹಿತ್ಯದ ಉದಯದ ತನಕ ತಮ್ಮ ಬಗ್ಗೆ ಹೇಳಿಕೊಂಡ ಪ್ರಮುಖ ಕನ್ನಡದ ಕವಿಗಳು ನಮಗೆ ಸಿಗುವುದಿಲ್ಲ.

ಹರಿಶ್ಚಂದ್ರ ಕಾವ್ಯವನ್ನು ಬರೆದ ರಾಘವಾಂಕ ನಿಜ ಜೀವನದಲ್ಲಿ ಸತ್ಯವಂತನಾಗಿದ್ದನೆ? ಗೊತ್ತಿಲ್ಲ. ' ಸ್ತೀ ರೂಪಮೆ ರೂಪಂ ಶೃಂಗಾರಮೇ ಕಾವ್ಯಂ’ ಎಂದ ನೇಮಿಚಂದ್ರ ಸ್ತ್ರೀ ಲೋಲನಾಗಿದ್ದಿರಬಹುದೇ? ಗೊತ್ತಿಲ್ಲ. ಅಷ್ಟೊಂದು ನಾಟಕಗಳನ್ನು ಬರೆದ ಕಾಳಿದಾಸ ಬಾಳಿ ಬದುಕಿದ ಕಾಲದಲ್ಲಿ ನಾಟಕಗಳಿಗೆ ಸಾಮಾಜಿಕ ಮನ್ನಣೆಯಿತ್ತೇ? ಗೊತ್ತಿಲ್ಲ.

ನಮ್ಮ ಹಿಂದಿನ ಸಾಹಿತಿ ಕಲಾವಿದರು ಬದುಕಿ ಬಾಳಿದ ಕಾಲಘಟ್ಟದ ಸಾಮಾಜಿಕ ಪರಿಸರವನ್ನು ’ಇಅದಮಿತ್ತಂ’ ಎಂದು ಹೇಳಲು ನಮಗೆ ಸಾಧ್ಯವಿಲ್ಲ. ಆದರೆ ಇತಿಹಾಸಕಾರರು, ಸಂಸ್ಕೃತಿ ವಿಶ್ಲೇಷಕರು ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಈ ಕೃತಿಗಳು ಸಹಾಯ ಮಾಡುತ್ತವೆ. ಅಂದರೆ ಸಾಹಿತಿಯೊಬ್ಬ ತನ್ನ ಕೃತಿಯಲ್ಲಿ ಎಲ್ಲೋ ಒಂದು ಕಡೆ ಬದುಕಿರುತ್ತಾನೆ.. ಯಾಕೆಂದರೆ ಸಾಹಿತ್ಯ ರಚನೆಯೆಂದರೆ ಸಾಹಿತಿಯೊಬ್ಬ ಏಕಕಾಲದಲ್ಲಿ ತನ್ನೊಡನೆ ಮತ್ತು ಸಮಾಜದೊಡನೆ ನಡೆಸುವ ಸಂವಾದವಾಗಿರುತ್ತದೆ. ಆದ ಕಾರಣ ಆತನನ್ನು ಸಮಾಜದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಸಮಕಾಲೀನ ಸಾಹಿತಿಯೊಬ್ಬನ ಬಗ್ಗೆ ಮಾತನಾಡುವ, ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ವಿಚಾರಗಳು ಬಹಳ ಮುಖ್ಯವಾಗುತ್ತವೆ.

ಆಧುನಿಕ ಬದುಕು ಹೆಚ್ಚು ಸಂಕೀರ್ಣಗೊಳ್ಳುತ್ತಿದೆ. ಜೊತೆಗೆ ಪಾರದರ್ಶಕವೂ ಆಗುತ್ತಿದೆ. ಸಾರ್ವಜನಿಕ ಮತ್ತು ವ್ಯಯಕ್ತಿಕ ಬದುಕಿನ ಅಂತರವೇ ಅಳಿಸಿ ಹೋಗುತ್ತಿದೆ. ಈಗ ನಾನೇ ಬೇರೆ, ನನ್ನ ಸಾಹಿತ್ಯವೇ ಬೇರೆ ಎಂದು ಯಾವ ಸಾಹಿತಿಯೂ ಹೇಳಲಾರ. ಸಾಮಾಜಿಕ ಹೊಣೆಗಾರಿಕೆ ಇರಬೇಕಾದ ಸಾಹಿತಿ ಹಾಗೆ ಹೇಳಬಾರದು ಕೂಡಾ. ತನ್ನ ಖುಷಿಗಾಗಿ ಮಾತ್ರ ಬರೆಯುತ್ತೇನೆ ಎನ್ನುವ ಬರಹಗಾರ ಅದನ್ನು ಬರೆದು ತನ್ನ ತಲೆದಿಂಬಿನಡಿಯಲ್ಲಿ ಇಡಬೇಕೇ ಹೊರತು ಪ್ರಕಟಿಸುವ ಗೋಜಿಗೆ ಹೋಗಬಾರದು. ಒಮ್ಮೆ ಪ್ರಕಟವಾದ ಮೇಲೆ ಅದು ಓದುಗರ ಸ್ವತ್ತಾಗುತ್ತದೆ. ಓದುಗರು ಅದನ್ನು ತಮಗೆ ಸರಿಕಂಡಂತೆ ಅರ್ಥೈಸಿಕೊಳ್ಳಬಹುದು. ಆದರೆ ಕೃತಿಕಾರನ ಬದುಕಿನ ರೀತಿಯ ಬಗೆಗೂ ಸಾರ್ವಜನಿಕರಿಗೆ ಹಕ್ಕೊತ್ತಾಯಗಳಿರುತ್ತವೆಯೇ?

ಸಾಹಿತಿಯೊಬ್ಬ ಸಾರ್ವಜನಿಕರಿಗೆ ಪರಿಚಯವಾಗುವುದು ತನ್ನ ಬರಹಗಳ ಮೂಲಕ. ಅದರಲ್ಲಿ ಆತ ಮಂಡಿಸುವ ವೈಚಾರಿಕ, ಭಾವನಾತ್ಮಕ ನಿಲುವುಗಳ ಮುಖಾಂತರ ಆತ ವೈಯಕ್ತಿಕವಾಗಿಯೂ ಓದುಗರಿಗೆ ಹತ್ತಿರದವನಾಗುತ್ತಾನೆ. ಪ್ರಭು ಸಮ್ಮಿತಕ್ಕಿಂತ ಕಾಂತ ಸಮ್ಮಿತ ಹೆಚ್ಚು ಪರಿಣಾಮಕಾರಿಯಲ್ಲವೇ? ಲೇಖಕ ತನ್ನ ಬರವಣಿಗೆಯ ಮುಖಾಂತರ ಸಾರ್ವಜನಿಕ ವ್ಯಕ್ತಿತ್ವವೊಂದನ್ನು ರೂಪಿಸಿಕೊಂಡಿರುತ್ತಾನೆ. ಸಾರ್ವಜನಿಕರಿಗೆ ಅದೇ ಸತ್ಯ. ಆ ವ್ಯಕ್ತಿತ್ವವೇ ಮುಖ್ಯ. ಇದಕ್ಕಿಂತ ಭಿನ್ನವಾದ ವ್ಯಕ್ತಿತ್ವವೊಂದು ತನ್ನ ನೆಚ್ಚಿನ ಸಾಹಿತಿಗಿದೆ ಎಂಬುದನ್ನು ಆತನಿಗೆ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.

ಇದು ಕೇವಲ ಒಬ್ಬ ಸಾಹಿತಿಯ ಬಗೆಗಿನ ಮಾತಲ್ಲ. ಸಿನಿಮಾ ನಟರು, ರಾಜಕಾರಣಿಗಳು, ಜನಪ್ರಿಯ ಕ್ರೀಡೆಗಳಲ್ಲಿ  ತ್ತೊಡ್ಗಿಗ್ಸಿಸ್ಕೊಿಕ್ವೊಂಡ್ರವರು ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿರುವ ಎಲ್ಲಾ ಪ್ರಮುಖರು ಎದುರಿಸುತ್ತಿರುವ ಸಮಸ್ಯೆಯಿದು.
ಒಬ್ಬ ಸೃಜನಶೀಲ ಬರಹಗಾರನ ಮ್ಟ್ಟಿಗೆ ಹೇಳುವುದಾದರೆ ಇವತ್ತಿನ ಸಂದರ್ಭದಲ್ಲಿ ಆತ ಮೂರು ಹಂತಗಳಲ್ಲಿ ಬದುಕುತ್ತಿರುತ್ತಾನೆ. ಅದು ಆತನೊಬ್ಬ ಬರಹಗಾರ, ಸಾರ್ವಜನಿಕ ವ್ಯಕ್ತಿ ಮತ್ತು ಕೌಟುಂಬಿಕ ವ್ಯಕ್ತಿ.. ಈ ಮೂರು ವ್ಯಕ್ತಿತ್ವಗಳು ಮೇಲ್ನೋಟಕ್ಕೆ ಒಂದೇ ಆಗಿ ಕಂಡು ಬಂದರೂ ಅವು ಮೂರೂ ವಿಭಿನ್ನವಾದ ಸ್ವತಂತ್ರ ವ್ಯಕ್ತಿತ್ವಗಳು.

ಬರವಣಿಗೆ ಎಂಬುದು ಏಕಾಂತದಲ್ಲಿ ನಡೆಯುವ ಸೃಷ್ಟಿ ಕಾರ್ಯ. ಪ್ರಾಪಂಚಿಕ ಅನುಭವ ಮತ್ತು ಕಲ್ಪನಎ ಅದರ ಮೂಲದ್ರವ್ಯ. ಒಬ್ಬ ವಿಜ್ನಾನಿಗೆ, ಒಬ್ಬ ತತ್ವಜ್ನಾನಿಗೆ ಇರುವಂತ ’ಕಾಣ್ಕೆ’ ಅವನಲ್ಲಿಯೂ ಇರುತ್ತದೆ. ವಾಸ್ತವ ಜಗತ್ತಿನಲ್ಲಿ ಇದ್ದೂ ಇಲ್ಲದಂತಹ ಸ್ಥಿತಿ ಅದು. ಆದ ಕಾರಣ ಅವನ ಸೃಷ್ಟಿಗೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇರುತ್ತದೆ. ಅದಕ್ಕೇ ಕವಿಗಳನ್ನು ಅನಧಿಕೃತ ಶಾಸನಕರ್ತರೆಂದು ಶೆಲ್ಲಿ ಬಹಳ ಹಿಂದೆಯೇ ಕರೆದಿದ್ದಾನೆ. ಇದು ಒಬ್ಬ ಬರಹಗಾರನ ವ್ಯಕ್ತಿತ್ವ. ಒಬ್ಬ ಕೌಟುಂಬಿಕ ವ್ಯಕ್ತಿಯಾಗಿ ಆತ ನಿರ್ವಹಿಸುವ ಹಕ್ಕು ಮತ್ತು ಕರ್ತವ್ಯಗಳಿಗೆ ಬಹಳ ಸೀಮಿತವಾದ ವರ್ತುಲವಿದ್ದರೂ ಅದೇ ಅವನ ಕ್ರಿಯಾಶಕ್ತಿಗೆ ಪ್ರೇರಕ. ಇಲ್ಲಿ ಆತನಿಗೆ ನೆಮ್ಮದಿಯ ವಾತಾವರಣವಿದ್ದರೆ ಆತನ ವ್ಯಕ್ತಿತ್ವದ ಉಳಿದೆರಡು ಮುಖಗಳು ಪುಷ್ಟಿಯನ್ನು ಪಡೆಯುತ್ತವೆ.

ಒಬ್ಬ ಬರಹಗಾರನ ಮೂರೂ ಮುಖಗಳನ್ನು ಒಂದಾಗಿ ನೋಡುವ, ಒಂದಾಗಿಯೇ ಇರಬೇಕೆಂದು ಅಪೇಕ್ಷಿಸುವವರ ಸಂಖ್ಯೆ ದೊಡ್ಡದಿದೆ. ಒಬ್ಬ ಹೊಣೆಗಾರಿಕೆಯುಳ್ಳ ಬರಹಗಾರನಿಗೆ ಈ ಮೂರೂ ಮುಖಗಳನ್ನು ಸಂತುಲನಗೊಳಿಸುವ ಶಕ್ತಿ, ಜಾಣ್ಮೆ ಇರಬೇಕಾಗುತ್ತದೆ.

ಕನ್ನಡದ ಶ್ರೇಷ್ಟ ನಾಟಕಕಾರ ಟಿ.ಪಿ.ಕೈಲಾಸಂ ನಿಜ ಜೀವನದಲ್ಲಿ ಅತ್ಯಂತ ಕೊಳಕು ಪರಿಸರದಲ್ಲಿದ್ದರು ಎಂಬುದನ್ನು ಓದಿದ್ದೇವೆ. ಆದರೆ ಅವರ ನಾಟಕಗಳು ಸಮಾಜದ ಕೊಳಕನ್ನು ಹೊಡೆದೊಡಿಸಬೇಕು ಎಂಬ ಸಂದೇಶವನ್ನು ಸಾರುತ್ತಿರಲಿಲ್ಲವೇ? ಕನ್ನಡದ ಶ್ರೇಷ್ಟ ಬರಹಗಾರರೊಬ್ಬರು ಸಲಿಂಗಿಗಳಾಗಿದ್ದರು ಎಂಬುದನ್ನು ಕೇಳಿದ್ದೇವೆ. ಅವರ ಬರಹಗಳಲ್ಲಿ ಸಲಿಂಗಕಾಮ ಪರದ ವಾಸನೆಯಿತ್ತೇ? ಹೆಚ್ಚೇಕೆ ನಮ್ಮ ಸುತ್ತಮುತ್ತಲಿನ ಅನೇಕ ಬರಹಗಾರರು ಇಬ್ಬರು ಹೆಂಡಿರ ಗಂಡರು; ಇನ್ನು ಕೆಲವರು ಸ್ತೀಲೋಲರು,ಲಂಪಟರು. ಅವರೆಲ್ಲರನ್ನು ನಾವು ನಮ್ಮ ಬದುಕಿನ ಮಾದರಿಯನ್ನಿಟ್ಟುಕೊಳ್ಳಬೇಕೆ?
ವೈಯಕ್ತಿಕಮಟ್ಟದ ದೋಷಾರೋಪಣೆಯಾಗಿದ್ದರೂ ಅದು ಒಂದು ಮಿತಿಯನ್ನು ಮೀರದೆ ಆರೋಗ್ಯಕಾರಿಯಾಗಿದ್ದರೆ ಸಮಾಜವನ್ನು ಮುನ್ನಡೆಸುವಂತೆ ಇದ್ದರೆ ಚೆನ್ನ. ಬೇಂದ್ರೆ-ಶಂಬಾ ಜೋಶಿ, ಲಂಕೇಶ್-ಚಂಪಾ, ರಾಮಚಂದ್ರಶರ್ಮ-ಲಕ್ಷ್ಮಿನಾರಾಯಣ ಭಟ್ಟರ ನಡುವೆ ನಡೆಯುತ್ತಿದ್ದ, ನಡೆಯುತ್ತಿರುವ ಆರೋಗ್ಯಕರ ಸಂವಾದಗಳ ಹಿಂದೆ ಚಾರಿತ್ರ್ಯವಧೆಯಂತೂ ಇರುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ.

ಇಂದು ನಮ್ಮಂಥ ಜನಸಾಮಾನ್ಯರೂ ಸೇರಿದಂತೆ ಎಲ್ಲಾ ಸಾರ್ವಜನಿಕ ವ್ಯಕ್ತಿಗಳ ಕೌಟುಂಬಿಕ ಬದುಕಿನೊಳಗೆ ಟಿ.ವಿ. ಕ್ಯಾಮಾರಗಳು, ಟ್ಯಾಬ್ಲಾಯಿಡ್ ಪತ್ರಿಕೆಗಳು ಇಣುಕಿ ನೋಡುತ್ತಿವೆ. ಸುದ್ದಿ ಮಾಧ್ಯಮಗಳ ಸುದ್ದಿ ಬಿತ್ತರದ ಭರಾಟೆಯಲ್ಲಿ ಸಾರ್ವಜನಿಕ ವ್ಯಕ್ತಿಗಳ ಖಾಸಗಿ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ. ಅವರು ಸಹಜವಾಗಿ ಆಡಿದ ಯಾವುದೋ ಒಂದು ಮಾತು, ಒಂದು ಹಾಸ್ಯದ ತುಣುಕು, ಆರೋಗ್ಯಕಾರಿಯಾದ ಟೀಕೆ ಇನ್ಯಾವುದೋ ಚೊಕಟ್ಟಿನೊಳಗೆ ಸೇರಿಕೊಂಡು ವಿಭಿನ್ನ ಅರ್ಥ ಪಡೆಯುತ್ತಿದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಯಾವುದೋ ಒಂದು ಸುರಕ್ಷಿತ ಗಮ್ಯವನ್ನು ತಲುಪುವುದಕ್ಕಾಗಿ ಇಂಗೆಂಡಿನ ರಾಜಕುಮಾರಿ ಡಯಾನ ಅಂದು ಓಡಿದ ಹಾಗೆ ನಾವೂ ಓಡುತ್ತಿದ್ದೇವೆ.

[ ನನ್ನ ಕಂಪ್ಯೂಟರನ್ನು ಜಾಲಾಡುತ್ತಿರುವಾಗ ಹಿಂದೆಂದೋ ಬರೆದ ಈ ಬರಹವೊಂದು ಕಣ್ಣಿಗೆ ಬಿತ್ತು..ಇದು ಎಲ್ಲಿಯಾದರೂ ಪ್ರಕಟವಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈಗ ಪ್ರಸ್ತುತವಾಗಬಹುದೆಂದು ಪೋಸ್ಟ್ ಮಾಡುತ್ತಿದ್ದೇನೆ.]

Sunday, January 19, 2014

ಪ್ರೀತಿ ಎಂದರೇನು ಗೆಳೆಯಾ?




ನನಗೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ ಮಾತ್ರ ಜನ್ಮ ಜನ್ಮಾಂತರಗಳ ಸಂಬಂಧಗಳ ಬಗ್ಗೆ ನನಗೆ ನಂಬಿಕೆ ಹುಟ್ಟಿಬಿಡುತ್ತದೆ.

ನಾವು ನಮ್ಮ ಬದುಕಿನಲ್ಲಿ ಎಷ್ಟೊಂದು ಜನರಿಂದ ಪ್ರೀತಿಯನ್ನು ಪಡೆದಿದ್ದೇವೆ ಮತ್ತು ಪಡೆಯುತ್ತಲೂ ಇದ್ದೇವೆ ಎಂಬುದನ್ನು ಯೋಚಿಸಿದರೆ ಅದರ ಋಣಭಾರದಿಂದ ನಮ್ಮ  ಮನಸು ಬಾಗಿ ಬಿಡುತ್ತದೆ. ಅವರೆಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸಲು ನಮಗಿರುವ ಏಕೈಕ ಮಾರ್ಗವೆಂದರೆ ನಾವೂ ಕೂಡಾ ನಮಗೆ ಸಾಧ್ಯವಿರುವಷ್ಟು ಜನರಿಗೆ ಪ್ರೀತಿಯನ್ನು ಹಂಚುತ್ತಾ ಹೋಗುವುದು.

ಮನುಷ್ಯನ ಬುದ್ಧಿಶಕ್ತಿಯೂ ಸೇರಿದಂತೆ. ಈ ಪ್ರಪಂಚದ ಎಲ್ಲಾ ಭೌತಿಕ ವಸ್ತುಗಳನ್ನು ಮೌಲ್ಯಮಾಪನ ಮಾಡಬಹುದು. ಒಂದು ಹಂತದಲ್ಲಿ ಅದು ಖಾಲಿಯಾಗಿಯೂ ಬಿಡಬಹುದು. ಆದರೆ, ಬೆಲೆ ಕಟ್ಟಲಾಗದ, ನಾವು ಹಂಚಿದಷ್ಟೂ ಖಾಲಿಯಾಗದೇ ಮತ್ತಷ್ಟು ತುಂಬಿಕೊಳ್ಳುವ ವಸ್ತು ಅಥವಾ ಭಾವ ಎಂದರೆ ಬಹುಶಃ ಅದು ಪ್ರೀತಿ ಮಾತ್ರ.

ಪ್ರೀತಿ ಎನ್ನುವುದು ಮನುಷ್ಯನ ಮನಸ್ಸಿನಾಳದಲ್ಲಿರುವ ಒಂದು ಸ್ಥಾಯಿ ಭಾವ. ಇದು ಸ್ನೇಹ, ವಿಶ್ವಾಸ, ಗೌರವ, ಭಕ್ತಿ, ವಾತ್ಸಲ್ಯ, ಕರುಣೆ, ಪ್ರೇಮ, ಅನುರಾಗ ಮುಂತಾದ ಸಂಚಾರಿ ಭಾವಗಳಲ್ಲಿ ಪ್ರಕಟಗೊಳ್ಳುತ್ತದೆ.

ಪ್ರೀತಿಯ ಸಮಾನ ನೆಲೆಯಿಂದ ಒಂದು ಮೆಟ್ಟಿಲು ಮೇಲಕ್ಕೆ ಏರಿದರೆ, ಅದು ಭಕ್ತಿ, ಗೌರವಗಳಾಗಿ ಮಾನ್ಯತೆ ಪಡೆಯುತ್ತದೆ. ಒಂದು ಮೆಟ್ಟಿಲು ಕೆಳಕ್ಕೆ ಇಳಿದರೆ ವಾತ್ಸಲ್ಯ, ಮಮತೆ, ಕರುಣೆ, ದಯೆಗಳಾಗಿ ಕೈ ಚಾಚಿಕೊಳ್ಳುತ್ತದೆ. ಪ್ರೀತಿಯ ಸಮಾನ ನೆಲೆಯಲ್ಲಿ ನಿಂತರೆ ಸ್ನೇಹ, ವಿಶ್ವಾಸ, ನಂಬಿಕೆಗಳಾಗಿ ಕವಲೊಡೆಯುತ್ತದೆ. ಇದೇ ನೆಲೆಯಲ್ಲಿ ಗಂಡು-ಹೆಣ್ಣು ಇದ್ದಾಗ ಅದು ಪರಸ್ಪರ ಅನುರಾಗವಾಗಿ ಪ್ರಣಯವಾಗುವ ಸಾಧ್ಯತೆಯಿದೆ.

ಪ್ರೀತಿ ಎಂದರೇನು? ಅದು ಯಾವ ಸ್ವರೂಪದಲ್ಲಿ ವ್ಯಕ್ಟವಾಗುತ್ತದೆ? ಪ್ರೀತಿಯ ನೆಲೆ ಯಾವುದು? ಅದೊಂದು ಕಲೆಯೇ? ಮುಂತಾದ ಪ್ರಶ್ನೆಗಳನ್ನು ಹಲವು ಜನರು ಕೇಳುತ್ತಾರೆ. ಇದಕ್ಕೆಲ್ಲಾ ಉತ್ತರ ನೀಡುವುದು ಕಷ್ಟ. ಯಾಕೆಂದರೆ ಪ್ರೀತಿ ಎನ್ನುವುದು ಒಂದು ಉತ್ಕಟವಾದ ಅನುಭವ. ಅದೊಂದು ಮನಸ್ಥಿತಿ. ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಸಾಧ್ಯವಿಲ್ಲ. ಅದು ಕಲೆಯೂ ಆಗಲಾರದು.ಯಾಕೆಂದರೆ ಕಲೆಗೆ ಉದ್ದೇಶವಿರುತ್ತದೆ; ಕಲೆಗಾರಿಕೆ ಇರುತ್ತದೆ; ಬಣ್ಣ ಇರುತ್ತದೆ. ಅದನ್ನು ಸೃಷ್ಟಿಸುವಾತ ಇರುತ್ತಾನೆ. ಅದನ್ನು ಇನ್ಯಾರೋ ಕಲಿಸಬೇಕಾಗುತ್ತದೆ. ಆದರೆ ಪ್ರೀತಿಯನ್ನು ಯಾರೂ ಯಾರಿಗೂ ಕಲಿಸಿಕೊಡುವುದಿಲ್ಲ; ಅದಕ್ಕೆ ಯಾವ ಬಣ್ಣವೂ ಇರುವುದಿಲ್ಲ. ಅದು ಸತ್ಯದ ಹಾಗೆ ನಿಚ್ಚಳ.

ಮಾನವತೆಯ ತಳಹದಿಯ ಮೇಲೆ ಮನುಷ್ಯ ಸಂಬಂಧಗಳ ನಡುವಿನ ಪ್ರೀತಿಯ ಬಗ್ಗೆ ಹೇಳ ಹೊರಟಾಗ ನನ್ನ ಕಣ್ಣ ಮುಂದೆ ಬರುವ ವ್ಯಕ್ತಿಗಳು ಮೂವರು. ಅವರಲ್ಲಿ ಒಬ್ಬಾತ ಪುರಾಣ ಪುರುಷನಾದ ಶ್ರೀ ಕೃಷ್ಣ.. ಇನ್ನಿಬ್ಬರು ಇತಿಹಾಸ ಪುರುಷರಾದ ತಥಾಗತ ಬುದ್ಧ ಮತ್ತು ಏಸು ಕ್ರಿಸ್ತ. ಈ ಮೂವರು ಕೇವಲ ವ್ಯಕ್ತಿಗಳಲ್ಲ. ಪ್ರೀತಿಗೆ ಸಂವಾದಿಯಾಗಿ ಬಾಳಿದವರು.ಕೃಷ್ಣನ ಕೈಯ್ಯಲ್ಲಿ ಪ್ರೀತಿಯ ಅಕ್ಷಯ ಪಾತ್ರೆ ಇತ್ತು. ಪ್ರೀತಿಯ ಎಲ್ಲಾ ಮುಖಗಳಿಗೂ ಅವನದೇ ಮೇರು ವ್ಯಕ್ತಿತ್ವ. ಆತ ಹಿರಿಯರೆದುರು ವಿನಯದಿಂದ ತಲೆಬಾಗುತ್ತಿದ್ದ. ಕಿರಿಯರ ತಲೆಯ ಮೇಲೆ ಸದಾ ಆತನ ಅಭಯ ಹಸ್ತವಿರುತ್ತಿತ್ತು.
ಇನ್ನೊಬ್ಬಾತ ಮನುಕುಲಕ್ಕೆ ಬೆಳಕನ್ನು ನೀಡಿದ ಬುದ್ಧ. ಮೊಟ್ಟಮೊದಲ ಬಾರಿಗೆ ದೀನ ದಲಿತರೆಡೆಗೆ ಪ್ರೀತಿಯ ನೋಟವನ್ನು ಬೀರಿದ ಮಹಾನುಭಾವ. ಸಮಾಜದ ಒಳಿತಿಗಾಗಿ ರಾಜ್ಯ, ಕೋಶ,ಸತಿ, ಸುತ ಎಲ್ಲವನ್ನೂ ತ್ಯಾಗ ಮಾಡಿದವನು. ಮನುಷ್ಯನ ದುಃಖಕ್ಕೆ ಕಾರಣವೇನಿರಬಹುದೆಂದು ಚಿಂತಿಸಿ, ಆ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಕಾರ್ಯಪ್ರವೃತ್ತನಾದ ಮೊಟ್ಟಮೊದಲ ಮಾನವ. ಅವನ ಅರೆನಿಮಿಲಿತ ನೇತ್ರಗಳಲ್ಲಿ ಜಗತ್ತಿನೆಡೆಗೆ ಪ್ರೀತಿ ಮತ್ತು ಶಾಂತಿಯ ಹೊಳೆಯೇ ಹರಿಯುತ್ತಿತ್ತು.
ಕ್ಷಮೆ ಮತ್ತು ಪ್ರೀತಿಯ ಸಂಕೇತದಂತಿರುವ ಏಸುಕ್ರಿಸ್ತ ತನ್ನವರಿಗಾಗಿ, ತಾನು ನಂಬಿರುವ ಮೌಲ್ಯಗಳಿಗಾಗಿ ನಗುನಗುತ್ತಲೇ ವಧಾಕಂಬವನ್ನೇರಿದ. ’ನಿನ್ನ ನೆರೆಹೊರೆಯವರನ್ನು ಪ್ರೀತಿಸು’ ಎಂಬ ಆತನ ಶಾಂತಿ ಸಂದೇಶ ಯುದ್ಧ ಮತ್ತು ಶಾಂತಿಯ ಎರಡೂ ಕಾಲಗಳಲ್ಲಿ ಪ್ರಸ್ತುತ ಎನಿಸುತ್ತದೆ.

ಜಿಡ್ಡು ಕೃಷ್ಣಮೂರ್ತಿ ಒಂದೆಡೆ ಹೇಳುತ್ತಾರೆ ’ ಪ್ರೀತಿ ಎಂಬುದು, ತುಂಬಿ ಹರಿಯುವ ನದಿಯಂತೆ. ಹರಿದೆಡೆಯಲೆಲ್ಲ ನದಿ ಜೀವ ತುಂಬುತ್ತದೆ. ಪ್ರೀತಿ ಇರುವ ಸಂಬಂಧಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳಬೇಕು’ ಅಂದರೆ, ಪ್ರೀತಿಯ ಎದುರಿನಲ್ಲಾದರೂ ಮನುಷ್ಯ ತನ್ನಲ್ಲಿರುವ ಅಹಂನ್ನು ಕಳೆದುಕೊಂಡು ಶೂನ್ಯವಾಗಬೇಕು. ಏನೋ ಆಗಿ ಮೆರೆಯುವ ವ್ಯಕ್ತಿಯೊಬ್ಬ ಎನೂ ಅಲ್ಲವಾಗಿಬಿಡುವ ಈ ಸ್ಥಿತಿಯನ್ನು ಹೊಂದಬೇಕು. ಪ್ರೀತಿಯ ಪರಿಪೂರ್ಣತೆ ಅಂದರೆ ಇದೇ. ’ನಾನು’ ಎಂಬುದು ಸಂಪೂರ್ಣ ಇಲ್ಲವಾಗಿ ನಾನೇ ನೀನಾಗಿಬಿಡುವ, ನೀನೇ ನಾನಾಗುವ ಅಥವಾ ಸಮಾಧಿ ಸ್ಥಿತಿಯನ್ನು ಹೊಂದುವ ಪರಮಾನಂದದ ಕ್ಷಣ.

ಇಂಥ ದಿವ್ಯ ಜಗತ್ತಿಗೆ ಕಾಲಿಡಲು, ಪ್ರಾಪಂಚಿಕ ಮೋಹದಲ್ಲಿ ಬಿದ್ದು ಒದ್ದಾಡುವವರಿಗೆ ಸ್ವಲ್ಪ ಕಷ್ಟವೇ. ಇದೆಲ್ಲಾ ಆದರ್ಶದ ಇಲ್ಲವೇ ತಾರ್ಕಿಕ ವಿಷಯಗಳಾದವು. ಈಗ ನಮ್ಮ ಮುಂದಿರುವ ವಾಸ್ತವದ ಚಿತ್ರಣಕ್ಕೆ ಬರೋಣ. ಇಲ್ಲಿ ಈಗ ಎಷ್ಟೊಂದು ದುಃಖ, ನೋವು, ಅಸಹಾಯಕತೆ ಇದೆಯೆಂದರೆ, ಮನುಷ್ಯ- ಮನುಷ್ಯರ ನಡುವಿನ ಸಂಬಂಧಗಳಿಗೆ ಅರ್ಥವೇ ಉಳಿದಿಲ್ಲ. ಆರ್ಥಿಕ ಮಾನದಂಡಗಳು ಮನುಷ್ಯನ ಭಾನನಾತ್ಮಕ ಸಂಬಂಧಗಳ ಮೇಲೆ ಮೇಲುಗೈ ಸಾಧಿಸಿವೆ. ಹಿಂದೆಲ್ಲಾ ಮನುಷ್ಯ ತನ್ನ ನಾಡಿಗಾಗಿ, ಸಮಾಜಕ್ಕಾಗಿ,ಊರಿಗಾಗಿ ಕೊನೆಯ ಪಕ್ಷ ತನ್ನ ಕುಟುಂಬದ ಏಳಿಗೆಗಾಗಿ ಬದುಕಿದ್ದ. ಈಗಿನ ಮನುಷ್ಯ ಕೇವಲ ತನ್ನ ಸುಖಕ್ಕಾಗಿ ಬದುಕುವಷ್ಟು ಸ್ವಾರ್ಥಿಯಾಗಿದ್ದಾನೆ.

ಹಾಗಿದ್ದರೂ ಆತ ಒಂದು ಹಿಡಿ ಪ್ರೀತಿಗಾಗಿ, ಒಂದು ಪ್ರೀತಿಯ ಸ್ಪರ್ಷಕ್ಕಾಗಿ, ಸಾಂತ್ವನದ ನೋಟಕ್ಕಾಗಿ, ಭರವಸೆಯ ಒಂದು ನುಡಿಗಾಗಿ ಸದಾ ತಹತಹಿಸುತ್ತಿದ್ದಾನೆ. ಈ ಪ್ರೀತಿಯ ಹಪಹಪಿಕೆಯೇ ಅನೇಕ ಸಂದರ್ಭಗಳಲ್ಲಿ ಅನೈತಿಕ ಹಾಗೂ ವಿವಾಹಬಾಹಿರ ಸಂಬಂಧಗಳಿಗೆ ಎಡೆ ಮಾಡಿಕೊಡುತ್ತದೆ.
ಪ್ರೀತಿಗೆ ಯಾವುದೇ ಚೌಕಟ್ಟು ಹಾಗೂ ಬಂಧನಗಳಿರುವುದಿಲ್ಲ. ಅದು ದೇಶ, ಭಾಷೆ, ಜಾತಿ, ಮತ, ಅಂತಸ್ತು, ವಯಸ್ಸು ಎಲ್ಲವನ್ನೂ ಮೀರಿ ನಿಲ್ಲುತ್ತದೆ. ಅದಕ್ಕೆ ಹೋಲಿಕೆಗಳಿಲ್ಲ. ಅದು ಆಕಾಶದ ಹಾಗೆ ಅನಂತವಾದುದು. ಸಮುದ್ರದಷ್ಟು ಆಳವಾದುದು. ಮೊಗೆ ಮೊಗೆದಷ್ಟು ಅದು ಉಕ್ಕಿ ಹರಿಯುತ್ತಲೇ ಇರುತ್ತದೆ. ವಸುಂಧರೆಯಷ್ಟೇ ಕೌತುಕವಾದುದು ಈ ಪ್ರೀತಿ. ಪ್ರೀತಿ ಏಕಾಂತದ ಒಂದು ಭಾಗ. ಪ್ರೀತಿಯ ಹಣತೆ ನಮ್ಮ ಎದೆಯೊಳಗೆ ಇದ್ದರೆ ಸರಳವಾದ, ಪ್ರಶಂತವಾದ, ನೆಮ್ಮದಿಯ, ಆನಂದದ ಬದುಕು ನಮ್ಮದಾಗುತ್ತದೆ.

ಇಲ್ಲಿ ಇನ್ನೊಂದು ಸೂಕ್ಷ್ಮ ವಿಚಾರವಿದೆ. ರೂಢಿಯಲ್ಲಿ ಪ್ರೀತಿ ಮತ್ತು ಪ್ರೇಮವನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಅವುಗಳ ಮಧ್ಯೆ ಸೂಕ್ಷ್ಮವಾದ ಆದರೆ ನಿಖರವಾದ ವ್ಯತ್ಯಾಸವಿದೆ. ’ನನಗೆ ನಿನ್ನಲ್ಲಿ ಪ್ರೀತಿಯಿದೆ’ ಅಥಾ ’ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀವು ಯಾರಿಗೆ ಬೇಕಾದರೂ, ಎಷ್ಟು ಜನರ ಮುಂದಾದರೂ ಹೇಳಬಹುದು.ಯಾಕೆಂದರೆ ಅದು ಸೃಷ್ಠಿಯ ಭಾಷೇಯೇ ಸರಿ. ಆದರೆ’ ನಾನು ನಿನ್ನನ್ನು ಪ್ರೇಮಿಸುತ್ತೇನೆ’ ಎಂದು ಹೇಳಿದಾಗ ಅದರಲ್ಲಿ ಲೈಂಗಿಕತೆಯೂ ತಳಕು ಹಾಕಿಕೊಂಡಿರುತ್ತದೆ. ಅದಕ್ಕೊಂದು ಸೀಮಿತ ಅರ್ಥ ಒದಗಿಬಿಡುತ್ತದೆ. ಪ್ರೀತಿ ಹಾಗಲ್ಲ. ಅದೊಂದು ರೀತಿಯಲ್ಲಿ ಆತ್ಮಗಳ ಆಕರ್ಷಣೆ. ಅಲ್ಲಿ ಎರಡು ವ್ಯಕ್ತಿಗಳ ನಡುವೆ ಅಥವಾ ವ್ಯಕ್ತಿ ಮತ್ತು ಸಮಾಜದ ನಡುವೆ ಅಲೌಕಿಕವಾದ ಒಂದು ಅಗೋಚರ ಸಂಬಂಧ ಇರುತ್ತದೆ. ಪ್ರೇಮದಲ್ಲಿರುವ ದೇಹ ಸಾಂಗತ್ಯಕ್ಕೂ, ಪ್ರೀತಿಯಲ್ಲಿರುವ ಆತ್ಮ ಸಾಂಗತ್ಯಕ್ಕೂ ಅಪಾರವಾದ ವ್ಯತ್ಯಾಸವಿದೆ. ಆತ್ಮ ಸಾಂಗತ್ಯದೊಂದಿಗೆ ದೇಹ ಸಾಂಗತ್ಯವೂ ಸೇರಿದಾಗ ಅದು ಅಪರೂಪದ ದಾಂಪತ್ಯವಾಗುತ್ತದೆ.

ಗಂಡು ಹೆಣ್ಣಿನ ನಡುವೆ ನಡೆಯುವ ದೇಹ ಸಾಂಗತ್ಯಕ್ಕೆ ಸಮಾಜ ನೈತಿಕತೆಯ ಬೇಲಿಅಯನ್ನು ಕಟ್ಟಿ ವಿವಾಹವೆಂಬ ಸಂಸ್ಥೆಯಡಿ ದೈಹಿಕ ಮಿಲನಕ್ಕೆ ಅನುಮತಿಯನ್ನು ನೀಡುತ್ತದೆ. ದಾಂಪತ್ಯದ ಚೌಕಟ್ಟಿನೊಳಗಿನ ಈ ಪ್ರೇಮದಲ್ಲಿ ಬಂಧಿಯಾಗುವ ಗಂಡು-ಹೆಣ್ಣಿನಲ್ಲಿ ಪ್ರರಸ್ಪರ ಪ್ರೀತಿ ಇರಲೇಬೇಕೆಂದಿಲ್ಲ. ಏಕೆಂದರೆ, ಮದುವೆಯ ಉದ್ದೇಶವೇ ಬೇರೆಯಾಗಿರುತ್ತದೆ. ಅದು ವಂಶದ ಮುಂದುವರಿಕೆ ಹಾಗೂ ಆಸ್ತಿ ಮತ್ತು ಅಧಿಕಾರದ ಕೇಂದ್ರೀಕರಣದ ಜತೆ ಕೌಟುಂಬಿಕ ಅವಲಂಬನೆಯ ನೆಲೆಯೂ ಆಗಿರುತ್ತದೆ.

ಈ ದಿಸೆಯಲ್ಲಿ ಆಚಾರ್ಯ ರಜನೀಶರ ಮದುವೆಯ ಕುರಿತಾದ ಕ್ರಾಂತಿಕಾರಕ ಚಿಂತನೆಗಳು ಹೊಸ ತಲೆಮಾರಿನ ಯುವಕ ಯುವತಿಯರಿಗೆ ಅಪ್ಯಾಯವೆನಿಸುತ್ತದೆ.”ಸ್ತ್ರೀ ಪುರುಷರಿಬ್ಬರೂ ಪರಿಪೂರ್ಣ ಪ್ರೀತಿ ಮತ್ತು ಆನಂದದಿಂದ ಮಿಲನಗೊಂಡಾಗ ಅದು ಅಧ್ಯಾತ್ಮಿಕ ಕ್ರಿಯೆ ಎನಿಸುವುದು. ಅದರಲ್ಲಿ ಕಾಮವಾಂಛೆ ಇರುವುದಿಲ್ಲ. ಅದು ಯೋಗಿಯೊಬ್ಬನ ಸಮಾಧಿ ಸ್ಥಿತಿಗೆ ಸಮ. ಇದು ಎರಡು ಆತ್ಮಗಳ ಮಿಲನ.ಇದು ಅತ್ಯಂತ ಪವಿತ್ರವಾದುದು. ಇದು ಪರಮಾತ್ಮನ ವ್ಯವಸ್ಥೆ. ಆದರೆ ವಿವಾಹ ಎಂಬುದು ಮನುಷ್ಯನ ಅನ್ವೇಷಣೆ. ವಿವಾಹದಲ್ಲಿ ಪ್ರೀತಿಯು ಜೀವದಾಳದಿಂದ ಸಹಜವಾಗಿ ಮೂಡಿ ಬರುವುದಿಲ್ಲ.’ ಎಂದು ವಿವಾಹ ವ್ಯವಸ್ಥೆಯನ್ನೇ ನಿರಾಕರಿಸಿಬಿಡುವ ರಜನೀಶ್ ಮುಕ್ತ ಲೈಂಗಿಕತೆಯ ಹರಿಕಾರರಾಗಿ ಅನೇಕ ವಿವಾದಗಳಿಗೆ ಸಿಕ್ಕಿ ಹಾಕಿಕೊಂಡದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಪ್ರೀತಿ ಬಗ್ಗೆ ನಾವು ಎಷ್ಟೇ  ಉದಾತ ವಿಚಾರಗಳನ್ನು ಹೊಂದಿದ್ದರೂ ವೈಯಕ್ತಿಕ ನೆಲೆಯಲ್ಲಿ ಅದು ಗಂಡು ಹೆಣ್ಣುಗಳ ಮಧ್ಯೆ ಲೈಂಗಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಪ್ಲೆಟಾನಿಕ್ ವಲ್ ಎನ್ನುವುದು ಕೇವಲ ಆದರ್ಶವಾಗಿ ಉಳಿದುಬಿಡುತ್ತದೆ. ಈ ಹಿನ್ನೆಲೆಯಲ್ಲಿ ದೇಹ ಸಾಂಗತ್ಯವನ್ನು ಮೀರಿ ಬೆಳೆದ ಮೀರಾ, ಅಕ್ಕಾಮಹಾದೇವಿಯ ಪ್ರೀತಿಯ ಪರಾಕಾಷ್ಠೆ ಪ್ರೀತಿಗೆ ಹೊಸ ಆಯಾಮವನ್ನು ನೋಡುತ್ತದೆ. ಭಕ್ತಿ ಪಂಥದಲ್ಲಿ ಪ್ರಕಟಗೊಂಡ ದೇವರು ಮತ್ತು ಭಕ್ತರ ನಡುವಿನ ಸಂಬಂಧ ಕೂಡಾ ಪ್ರೀತಿಯ ಉತ್ತುಂಗದ ಇನ್ನೊಂದು ರೂಪ.

ಭಿನ್ನ ಭಿನ್ನ ಪರಿಸರದಲ್ಲಿ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಬೆಳೆದು ಬಂದ ಗಂಡು-ಹೆಣ್ಣು ದಾಂಪತ್ಯ ಚೌಕಟ್ಟಿನೊಳಗೆ ಒಂದೇ ಸೂರಿನಡಿ ಬದುಕಬೇಕಾದಾಗ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಯಶಸ್ವಿ ದಾಂಪತ್ಯದ ಭದ್ರ ಬುನಾದಿಯೇ ಪರಸ್ಪರ ನಂಬಿಕೆ. ಈ ಬುನಾದಿ ಅಲುಗತೊಡಗಿದಾಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
ಹಾಗಾದರೆ ಗಂಡು-ಹೆಣ್ಣು ಪರಸ್ಪರ ವಿಶಿಷ್ಟತೆಗಳನ್ನು ಬಿಟ್ಟುಕೊಡದೇ ಪ್ರೀತಿಸುವುದು ಹೇಗೆ? ಪರಸ್ಪರ ಪ್ರೀತಿ, ಗೌರವವನ್ನು ಸಾಧಿಸುವುದು ಹೇಗೆ?
ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಿಗಿಂತ ರೂಪ, ಗುಣ, ನಡತೆಗಳಲ್ಲಿ ವಿಭಿನ್ನ. ತನ್ನಷ್ಟಕ್ಕೆ ತಾನೇ ಅವನೊಬ್ಬ ಸ್ವತಂತ್ರ ವ್ಯಕ್ತಿ. ಅಂದರೆ ಒಂದರ್ಥದಲ್ಲಿ ಆತ ಸರಳ ರೇಖೆ. ಸರಳ ರೇಖೆಗಳು ಎಂದೂ ಪರಸ್ಪರ ಸಂಧಿಸುವುದಿಲ್ಲ. ಆದರೆ ಸಮಾನ ಅಭಿರುಚಿಯೆಂಬ ವಕ್ರ ರೇಖೆಗಳು ಇಬ್ಬರು ಸ್ವತಂತ್ರ ವ್ಯಕ್ತಿಗಳನ್ನು ಪರಸ್ಪರ ಸಂಧಿಸುವಂತೆ ಮಾಡಬಹುದು. ಬಹಳಷ್ಟು ಮಂದಿ ಪ್ರೇಮಿಗಳು ನಾವು ಮದುವೆಯಾದರೆ ನಮ್ಮ ಬದುಕು ಹೇಗಿರಬಹುದು ಎಂದು ನನ್ನನ್ನು ಕೇಳುತ್ತಾರೆ. ಆಗ ನಾನು ಅವರಿಗೆ ಹೇಳುವುದಿಷ್ಟೇ; ಈಗ ನಿಮ್ಮ ವಯಸ್ಸಿಗೆ ಸಹಜವಾಗಿ ಪರಸ್ಪರ ಆಕರ್ಷಣೆ, ಬದುಕುವ ಕೆಚ್ಚು, ಛಲ ಇರಬಹುದು. ಆದರೆ, ಇನ್ನು ಹತ್ತಾರು ವರ್ಷ ಕಳೆದಂತೆಲ್ಲಾ ಇದು ಕುಂದುತ್ತಾ ಬರುತ್ತದೆ. ಬದುಕಿನ ಬವಣೆಗಳು ನಿಮ್ಮ ನಂಬಿಕೆಗಳನ್ನು ತಲೆಕೆಳಗು ಮಾಡಬಹುದು. ಆಗ ನಿಮ್ಮ ಮನೆ ಮತ್ತು ಮನಸ್ಸುಗಳನ್ನು ಮೌನ ಮತ್ತು ವಿಷಾಧ ಆಳಲು ಪ್ರಾರಂಭಿಸುತ್ತದೆ. ರೋಷ, ಸಿಟ್ಟು, ಪರಸ್ಪರ ದೋಷಾರೋಪವೇ ಮೇಲುಗೈ ಸಾಧಿಸುತ್ತದೆ. ತಾವು ಪರಸ್ಪರ ಮೆಚ್ಚಿ ಮದುವೆಯಾದದ್ದು ಸುಳ್ಳಿರಬಹುದೇ ಎಂದು ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಬಹುದು. ಅದ್ದರಿಂದಲೇ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎರಡು ಬಹು ಮುಖ್ಯ ಅಂಶಗಳತ್ತ ಗಮನಹರಿಸಬೇಕು.

ಒಂದು, ಆತನ\ ಆಕೆಯ ದೌರ್ಭಲ್ಯಗಳನ್ನು ಅರಿತು ಅದರ ಸಮೇತ ಒಪ್ಪಿಕೊಳ್ಳುವುದು  ಇನ್ನೊಂದು, ಹತ್ತಾರು ವರ್ಷಗಳು ಕಳೆದ ಮೇಲೂ ತಾವು ಪರಸ್ಪರ ಎದುರು-ಬದುರು ಕುಳಿತು ಆಸಕ್ತಿಯಿಂದ ಚರ್ಚಿಸಬಹುದಾದ ಸಮಾನ ಅಭಿರುಚಿ ನಮ್ಮ ನಡುವೆ ಇದೆಯೇ ಎಂಬುದು. ಇವೆರಡೂ ಸಾಧ್ಯವಾದರೆ, ಅಂತಹ ದಾಂಪತ್ಯ ಸುಮಧುರವಾಗುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿ ಯಾರೂ ಹೆಚ್ಚಲ್ಲ,ಯಾರೂ ಕಡಿಮೆಯಲ್ಲ. ಪರಸ್ಪರ ಹಕ್ಕು ಸ್ಥಾಪನೆಯ ಪ್ರಶೆಯೂ ಉದ್ಭವಿಸುವುದಿಲ್ಲ. ಮೇಲಿನ ಮನಸ್ಥಿತಿಯನ್ನು ಹೊಂದಿರುವ ಗಂಡು-ಹೆಣ್ಣು ಮಾತ್ರ ದೇಷ, ಭಾಷೆ, ಜಾತಿ, ಮತ, ವಯಸ್ಸು, ಅಂತಸ್ತು ಎಲ್ಲವನ್ನೂ ಮೀರಿ ಮದುವೆಯಾಗಬಲ್ಲರು. ಇಲ್ಲವೇ ಪರಸ್ಪರ ಒಟ್ಟಿಗೆ ಬದುಕಬಲ್ಲರು. ಸಮಾಜದ ಕಟ್ಟು ಪಡುಗಳು ಇಂತವರನ್ನು ಏನೂ ಮಾಡಲಾಗದು.
ಮನುಷ್ಯರಲ್ಲಿ ಪ್ರೀತಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಬಹಳಷ್ಟು ಜನ ವಿಷಾಧದಿಂದ ಹೇಳುವುದನ್ನು ನಾನು ಕೇಳಿದ್ದೇನೆ. ಆತ ಭಾವನೆಗಳನ್ನು ಅದುಮಿಟ್ಟುಕೊಂಡು ಬದುಕುವುದನ್ನು ರೂಢಿಸಿಕೊಂಡಿದ್ದಾನೆ. ಒಂದೇ ಒಂದು ಮಿಡಿತಕ್ಕೆ ಈ ಭಾವನೆಗಳ ಕಟ್ಟೆಯೊಡೆದು ಪ್ರೀತಿಯ ಝರಿ ಹರಿದುಬಿಡಬಹುದು. ಅದಕ್ಕೆ ಮಿಡಿಯುವ ಬೆರಳಿನ ಅವಶ್ಯಕತೆ ಇದೆ.

ಪ್ರತಿ ಮನುಷ್ಯನ ಎದೆಯಾಳದಲ್ಲಿ ಸದಾ ಒಂದು ಶೂನ್ಯ ಇರುತ್ತದೆ. ಅದನ್ನು ತುಂಬಿಕೊಳ್ಳಲು ಆತ ಪ್ರಯತ್ನಿಸುತ್ತಲೇ ಇರುತ್ತಾನೆ. ನಿಷ್ಕಲ್ಮಶವಾದ, ಯಾವುದೇ ನಿರೀಕ್ಷೆಗಳಿಲ್ಲದ ಪ್ರೀತಿ ಮಾತ್ರ ಅದನ್ನು ತುಂಬಬಲ್ಲುದು ಎಂಬುದು ಆತನಿಗೆ ಗೊತ್ತು. ಆದರೆ, ಇಲ್ಲಿ ಒಂದು ವಿಷಯವನ್ನು ಆತ ಮರೆತು ಬಿಡುತ್ತಾನೆ. ಪ್ರೀತಿ ಯಾವಾಗಲೂ ಕಳೆದುಕೊಂಡು ಪಡೆದುಕೊಳ್ಳುವ ಕ್ರಿಯೆ. ಆದರೆ, ಆತನಿಗೆ ಪಡೆದುಕೊಳ್ಳುವಲ್ಲಿ ಇರುವ ಹಪಹಪಿಕೆ ನೀಡುವಲ್ಲಿ ಇರುವುದಿಲ್ಲ.

ಪ್ರೀತಿಯ ಅಕ್ಷಯ ಪಾತ್ರೆಯನ್ನು ತನ್ನಲ್ಲಿ ಇಟ್ಟುಕೊಂಡು ಪ್ರೀತಿ ಹಸಿವು ಎಂಬ ಬಿಕ್ಷಾಪಾತ್ರೆಯನ್ನು ಆತ ಎದುರಿಗಿರುವವರ ಮುಂದೊಡ್ಡುತ್ತಾನೆ. ಒಮ್ಮೆ ಆತ ಅಕ್ಷಯ ಪಾತ್ರೆಯನ್ನು ಖಾಲಿ ಮಾಡಲು ಆರಂಭಿಸಿದರೆ, ಬಿಕ್ಷಾಪಾತ್ರೆ ತನ್ನಿಂದ ತಾನೇ ತುಂಬಿಕೊಳ್ಳುತ್ತಾ ಹೋಗುತ್ತದೆ. ಇದು ಆತನಿಗೆ ಗೊತ್ತಿರಬೇಕು. ಇದುವೇ ಜೀವನ. ನದಿಯೊಂದು ತನ್ನಷಟಕ್ಕೆ ತಾನೇ ಹರಿಯುತ್ತದೆ. ಹೂವೊಂದು ಕಾರಣವಿಲ್ಲದೆ ಅರಳುತ್ತದೆ. ಋತುಮಾನಗಳು ಸ್ವಯಂ ಬದಲಾಗುತ್ತವೆ. ಮಳೆ ಸುಮ್ಮನೆ ಹೊಯ್ಯುತ್ತದೆ. ಹಾಗೆಯೇ ಪ್ರೀತಿ ಕೂಡಾ; ಎರಡು ಹೃದಯಗಳ ಮಧ್ಯೆ ಘಟಿಸಿಬಿಡುತ್ತದೆ. ಉದ್ದೇಶವಿಲ್ಲದ ಈ ಪ್ರೀತಿಯಲ್ಲಿ ಪ್ರೀತಿಸುವ ವ್ಯಕ್ತಿಗಳೇ ಪ್ರೀತಿಯಾಗಿ ಬಿಡುತ್ತಾರೆ.

ಆದರೆ ಈ ಜಗತ್ತಿನಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲಾ ತಡೆಗೋಡೆಗಳನ್ನು ಮೀರಿ ಪ್ರೀತಿ ತನ್ನ ಅಧಿಪತ್ಯವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇಲ್ಲಿ ಈಗ ಕ್ಷುಲಕ ಕಾರಣಗಳಿಗಾಗಿ ದೇಶ- ದೇಶಗಳ ನಡುವೆ ದ್ವೇಷಾಗ್ನಿ ಹೊತ್ತಿ ಉರಿಯುತ್ತಿದೆ. ಭಯೋತ್ಪಾದನೆ ತಾಂಡವವಾಡುತ್ತಿದೆ. ಹುಸಿ ಆದರ್ಶಗಳ ಬೆನ್ನು ಹತ್ತಿ ಅಮಾಯಕ ಜನರ ಮಾರಣ ಹೋಮವಾಗುತ್ತಿದೆ. ಅಧಿಕಾರ ಮತ್ತು ಭೋಗಲಾಲಸೆ ಮನುಷ್ಯನ ಆಳದಲ್ಲಿರುವ ಪ್ರೀತಿಯನ್ನು ಹತ್ತಿಕ್ಕಿ ಕ್ರೌರ್ಯವನ್ನು ವಿಜೃಂಭಿಸುವಂತೆ ಮಾಡುತ್ತಿದೆ. ಆದರೆ ನಾವು ತೀರಾ ನಿರಾಶೆ ಪಡುವ ಅಗತ್ಯ ಇಲ್ಲ. ಅತ್ಯಂತ ದಟ್ಟ ಕತ್ತಲೆಇದ್ದಾಗಲೇ ಬೆಳಕಿನ ಕಿರಣವೊಂದು ಥಟ್ಟನೆ ಮೂಡಿ ಬರಬಹುದು. ವರ್ಣ ಭೇದ ನೀತಿಯನ್ನು ಸಮರ್ಥವಾಗಿ ಎದುರಿಸಿದ ನೆಲ್ಸನ್ ಮಂಡೇಲಾ, ಹಿಂದೂ-ಮುಸ್ಲಿಂ ಏಕತೆಗಾಗಿ ಹೋರಾಡಿ ಬಲಿದಾನಗೈದ ಗಾಂಧೀಜಿ, ಸಾಮಾಜಿಕವಾಗಿ ಹಿಂದುಳಿದವರ ಬದುಕಿಗೊಂದು ಘನತೆಯನ್ನು ತಂದುಕೊಟ್ಟ ಬಸವಣ್ಣ ಎಲ್ಲರೂ ಕೂಡಾ ಪ್ರೀತಿಯ ವಿವಿಧ ನೆಲೆಗಳಲ್ಲಿ ಕಂಡು ಬಂದ ನಕ್ಷತ್ರಗಳು. ’ಪರಮಾತ್ಮನ ಕಡೆಗೆ ಹೋಗಲು ಇರುವುದು ಒಂದೇ ಬಾಗಿಲು. ಅದುವೇ ಪ್ರೀತಿಯ ಬಾಗಿಲು. ಅಲ್ಲಿರುವ ಪ್ರೀತಿಯ ಜ್ಯೋತಿಯನ್ನು ನಂದಿಸಲು ಮಂದಿರ ಮಸೀದಿಗಳ ಧರ್ಮಗುರುಗಳು ಮುಂದಾಗಿದ್ದಾರೆ’ ಎಂದು ಓಶೋ ಹೇಳುತ್ತಾರೆ. ಇದು ಭಾರತದ ಸಧ್ಯದ ಸ್ಥಿತಿಗಂತೂ ನೂರಕ್ಕೆ ನೂರಷ್ಟು ನಿಜ.
ಆದರೆ ನನಗೆ ಮನುಷ್ಯ್ರರಲ್ಲಿ ನಂಬಿಕೆಯಿದೆ. ಪ್ರೀತಿಗಿರುವ ಶಕ್ತಿಯ ಅರಿವಿದೆ.

ಈ ಬದುಕು ನನಗೆ ಬಹಳಷ್ಟನ್ನು ನೀಡಿದೆ. ಆ ಬಗ್ಗೆ ನನಗೆ ಕೃತಜ್ನತೆಯಿದೆ. ತೀರಾ ವೈಯಕ್ತಿಕ ಮಟ್ಟದಲ್ಲಿ, ಬಸಿರು ಬಾಣಂತನ ಮುಂತಾದ ಸಂದರ್ಭಗಳಲ್ಲಿ ಅತೀ ಅಗತ್ಯವಾಗಿ ಬೇಕಾಗಿದ್ದ ಪ್ರೀತಿಯ ಆಸರೆ ನನಗೆ ದೊರಕಿಲ್ಲದಿರಬಹುದು. ಆದರೆ ಹಾಗೆಂದು ನನಗೆ ದುಃಖವಿಲ್ಲ. ನನ್ನಲ್ಲಿ ನನಗೆ ಭರವಸೆಯಿದೆ. ಅಪರಿಚಿತ ವ್ಯಕ್ತಿಗಳು ಹಾಗೂ ಕುಟುಂಬದವರು ಸೇರಿದಂತೆ ಎಷ್ಟೊಂದು ಜನರಿಂದ ನಾನು ಉಪಕಾರ, ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಂಡಿದ್ದೇನೆಂದರೆ, ಈ ಜಗತ್ತು ಎಷ್ಟೊಂದು ಪ್ರೀತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಅವರೆಲ್ಲರ ಅಂತಃಕರಣ ಹಾಗೂ ಪ್ರೀತಿಯನ್ನು ನಾನು ಪಡೆದುಕೊಳ್ಳುವಾಗಲೆಲ್ಲಾ ಇವರು ಮತ್ತು ನನ್ನ ನಡುವೆ ಜನ್ಮ ಜನ್ಮಾಂತರಗಳ ಸಂಬಂಧಗಳಿರಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಳ್ಳುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೂ ಪ್ರೀತಿ ಎಂದರೆ ಇದಲ್ಲ, ಇನ್ನೇನೋ ಇದೆ ಎನಿಸುತ್ತದೆ. ಅದು ಹೃದಯಗಳ ನಡುವಿನ ಪಿಸುಮಾತೇ? ಉದಾತ ಮನಸುಗಳ ನಡುವಿನ ಸಂವಾದವೇ? ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ತೋರುವ ಕನಿಷ್ಠ ಕಾಳಜಿಯೇ? ಅದು ಬದುಕಿನ ನಿಗೂಢ ಪಯಣದಲ್ಲಿ ಸಿಗುವ ಆನಂದವೇ? ಗೊತ್ತಿಲ್ಲ. ಪ್ರೀತಿಯ ವಿಶ್ಲೇಷಣೆಗಿಂತ ಸುಮ್ಮನೆ ಪ್ರೀತಿಸುತ್ತಾ ಸಾಗೋಣ..ಅದುವೇ ಪ್ರೀತಿ ಇರಬಹುದು.

[ಶಿವಮೊಗ್ಗಾದ ’ನೆನಪು ಪ್ರಕಾಶನ’ದವರು ೨೦೦೩ ರ ವ್ಯಾಲೈಂಟೈನ್ ಡೇ ಯ ಸಂದರ್ಭದಲ್ಲಿ ಕೆ. ಗಿರೀಶ್ ಸಂಪಾದಕತ್ವದಲ್ಲಿ

ಪ್ರೀತಿಯ ಕುರಿತಂತೆ ’ಪ್ರೀತಿಗಾಗಿ’ ಎಂಬ ಲೇಖನ ಸಂಕಲನವೊಂದನ್ನು ಹೊರತಂದಿದ್ದರು. ಅದರಲ್ಲಿ ಪ್ರಕಟವಾಗಿದ್ದ ಲೇಖನ]