Thursday, February 18, 2010

ಸಾಹಿತಿಗಳು ಅನ್ಯಗ್ರಹ ಜೀವಿಗಳಲ್ಲ




ಬರವಣಿಗೆಯೆನ್ನುವುದೊಂದು ಬಿಡುಗಡೆಯ ಭಾವ. ಒಳಗಿನ ಒತ್ತಡವನ್ನು ಹೊರ ಹಾಕಲೊಂದು ರಹದಾರಿ. ಅದಕ್ಕೆ ಲಿಂಗಬೇಧವಿಲ್ಲ. ಅನಕ್ಷರಸ್ತರಾಗಿದ್ದರೂ ಕಥೆ- ಕಾವ್ಯ ಕಟ್ಟಿ ಮನದಿಂಗಿತವನ್ನು ಬಿಚ್ಚಿಡುತ್ತಿದ್ದ ಜಾನಪದ ಸಾಹಿತ್ಯ ಲೋಕವನ್ನು ಒಮ್ಮೆ ಹೊಕ್ಕರೆ ಸಾಕು, ಸೃಜನಶೀಲ ಮಹಿಳಾ ಲೋಕವೊಂದು ಅನಾವರಣಗೊಳ್ಳುವ ಪರಿಗೆ ಬೆರಗುಗೊಳ್ಳುವ ಸರದಿ ನಮ್ಮದು. ಕುಟ್ಟುವುದು, ಬೀಸುವುದು, ಉಳುವುದು, ನೇಜಿ ನೇಡುವುದು,ಕೊಯ್ಯುವುದು; ತಮಗಿರುವ ಸೀಮಿತ ಅವಕಾಶದಲ್ಲೇ ಸಾಹಿತ್ಯ ಚಿಗುಗುರೊಡೆದ ಪರಿಯಿದು.

ಇಂದಿನ ಆಧುನಿಕ ಮಹಿಳೆ ಅದೇ ಜನಪದ ಮಹಿಳೆಯೇ. ಆಕೆಯ ಹೊರಜಗತ್ತಿನಲ್ಲಾಗಲಿ, ಒಳಪ್ರಪಂಚದಲ್ಲಾಗಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆದ ಹಾಗಿಲ್ಲ. ಅಂದು ಆಕೆ ತನ್ನ ದುಃಖ ದುಮ್ಮಾನಗಳನ್ನು, ಸುಖ-ಸಂತೋಷವನ್ನು ದೇವರೊಡನೆ ಅಥವಾ ಪ್ರಕೃತಿಯೊಡನೆ ತೋಡಿಕೊಳ್ಳುತ್ತಿದ್ದಳು; ಸಖಿಯರೊಡನೆ ಹಂಚಿಕೊಳ್ಳುತ್ತಿದ್ದಳು. ಆಕೆಯದು ಪುಟ್ಟ ಕ್ಯಾನ್ವಾಸ್. ಆದರೆ ಆಧುನಿಕ ಮಹಿಳೆಯ ಜಗತ್ತು ವಿಸ್ತಾರವಾದುದು. ಲಿಂಗಬೇಧವಿಲ್ಲದ ಜಗತ್ತೊಂದನ್ನು ಕಟ್ಟಿಕೊಳ್ಳುವ, ಸೃಷ್ಟಿಸಿಕೊಳ್ಳುವ ಎಲ್ಲ ಅವಕಾಶಗಳು ಆಕೆಗಿದೆ. ಆದರೂ ಆಕೆ ಒಂಟಿಯೇ. ಆಕಾಶದತ್ತ ಮುಖ ಮಾಡಿದವಳೇ. ಹಾಗಾಗಿ ಒಳಜಗತ್ತಿನಲ್ಲಿ ಇಬ್ಬರ ಭಾವವೂ ಒಂದೇ.

ಮೇಲಿನ ಇಬ್ಬರು ಮಹಿಳೆಯರ ಮಧ್ಯೆ ಉಲ್ಕೆಯಂತೆ ಜ್ವಾಜಲ್ಯಮಯವಾಗಿ ಉರಿದ ಮಹಿಳಾ ಗುಚ್ಛವೊಂದು ೧೨ನೇ ಶತಮಾನದಲ್ಲಿ ನಮಗೆ ಕಾಣಸಿಗುತ್ತದೆ. ಮಹಿಳೆಯರ ಅಂತರಂಗದ ಸ್ಫೋಟಕ್ಕೆ ಆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆ, ಲಿಂಗತಾರತಮ್ಯವೇ ಕಾರಣ. ಅವರು ನುಡಿದುದೆಲ್ಲವೂ ’ವಚನ’ಗಳಾಗಿ ಅನ್ಯರಿಗೆ ದಾರಿದೀಪಗಳಾದವು. ಅಂದು ಸಮಾಜದೆದುರು ಮಹಿಳೆಯರು ಮುಕ್ತವಾಗಿ ತೆರೆದುಕೊಂಡ ಪರಿ ನಮಗಿಂದು ಅಚ್ಚರಿ ಹುಟ್ಟಿಸುತ್ತದೆ. ಅವರು ಅಭಿವ್ಯಕ್ತಿಗಾಗಿ ಹೆದರಲಿಲ್ಲ; ತಿಣುಕಾಡಲಿಲ್ಲ. ಅನ್ನಿಸಿದ್ದನ್ನು ಹೇಳಿದರು. ಹೇಳಿದಂತೆ ಬದುಕಿದರು. ಆದರವರು ಉಲ್ಕೆಯಂತೆ ಉರಿದು ಮಾಯವಾದರು. ಅನಂತರ ತಮಗನ್ನಿಸಿದ್ದನ್ನು ನೇರವಾಗಿ, ಮುಕ್ತವಾಗಿ ಹೇಳಬಲ್ಲ ಮಹಿಳೆಯರಿಗಾಗಿ ನಾವು ೧೯ನೇ ಶತಮಾನದವರೆಗೂ ಕಾಯಬೇಕಾಯ್ತು. ಆದರೂ ವಚನಕಾರ್ತಿಯರ ನಿರ್ಭಿಡೆಯ ಅಭಿವ್ಯಕ್ತಿ ಅಧುನಿಕ ಮಹಿಳೆಯರಲ್ಲಿ ಇದ್ದಂತಿಲ್ಲ. ಅಥವಾ ಬಸವಣ್ಣನಂಥ ಸಹಚಾರಿಗಳು ಇವರಿಗೆ ಒತ್ತಾಸೆಯಾಗಿ ನಿಂತಿಲ್ಲವೆನಿಸುತ್ತದೆ.

೧೯ನೇ ಶತಮಾನದ ನಂತರದಲ್ಲಿ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಾಹಿತ್ಯವೂ ಸಾಥ್ ನೀಡಿತು. ಪುರುಷ ಜಗತ್ತಿಗೆ ತೀರಾ ಭಿನ್ನವಾದ ಮಹಿಳಾ ಆಂತರಿಕ ಜಗತ್ತೊಂದು ಅನಾವರಣಗೊಳ್ಳತೊಡಗಿತು. ಅದರ ಸಣ್ಣ ಸಣ್ಣ ವಿವರಗಳು ಮಹಿಳೆಯರ ಬರವಣಿಗೆಯಲ್ಲಿ ದಾಖಲಾಗತೊಡಗಿದವು. ಬರವಣಿಗೆಗೆ ಸಾಮಾಜಿಕ ಆಯಾಮ ದೊರಕತೊಡಗಿತು. ಅದನ್ನು ಸ್ತ್ರೀವಾದಿ ಸಾಹಿತ್ಯವೆಂಬ ಪ್ರತ್ಯೇಕ ನೆಲೆಯಲ್ಲಿ ಸಾಹಿತ್ಯ ಜಗತ್ತು ಗುರುತಿಸತೊಡಗಿತು. ಸ್ತ್ರೀವಾದಿ ವಿಮರ್ಶೆ ಕೂಡಾ ಸ್ಪಷ್ಟ ರೂಪ ಪಡೆಯತೊಡಗಿತು. ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳಲ್ಲಿ ’ಮಹಿಳಾ ಅಧ್ಯಯನ’ ಈಗ ಆಸಕ್ತಿಯ ಜ್ನಾನಶಾಖೆ.

ಕೇರಳದ ಮಾಧವಿ ಕುಟ್ಟಿ ಅಂತರಂಗದ ಹುಡುಕಾಟದಲ್ಲೇ ಕಮಲಾದಾಸಳಾಗಿ, ಮತ್ತೆ ಸುರೈಯಳಾಗಿ ತೀವ್ರ ವ್ಯಾಮೋಹಿಯಾಗಿ ಬದುಕಿದವರು. ಪ್ರೋತಿಮಾ ಬೇಡಿ, ಅಮೃತ ಪ್ರೀತಂ, ಮರಾಠಿಯ ಮಾಧವಿ ದೇಸಾಯಿ, ಕನ್ನಡದ ಪ್ರತಿಭಾ ನಂದಕುಮಾರ್ ಸೇರಿದಂತೆ ಎಲ್ಲಾ ಬರಹಗಾರ್ತಿಯರೂ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಡಿ ನರಳಿದವರೇ. ಹಾಗಿದ್ದರೂ ಪುರುಷನಿಲ್ಲದ ಸ್ತ್ರೀಯ ಬಾಳು ಅಪೂರ್ಣ ಎಂಬುದನ್ನು ಮನಗಂಡವರು. ಸ್ತ್ರೀಯ ಅನನ್ಯತೆಯನ್ನು ಗುರುತಿಸಿಕೊಂಡು ಪುರುಷನನ್ನು ಅನುಸರಿಸದೆ, ಅವರಂತಾಗಲು ಬಯಸದೆ ಪ್ರಕೃತಿಧರ್ಮವನ್ನು ಅರಿತುಕೊಂಡು ಅವನಲ್ಲೇ ಆತ್ಮಬಂಧುವನ್ನು ಹುಡುಕಿದವರು.

ಇಂತಹದೊಂದು ಸ್ತ್ರೀ ಬಳಗ ಸಮಾಜದಲ್ಲಿ ಒಳಗಿಂದೊಳಗೆ ಸೃಷ್ಟಿಯಾಗುತ್ತಿದೆ. ಅವರು ವಿದ್ಯಾವಂತರು. ಸ್ವತಂತ್ರ ಚಿಂತನೆ ಹೊಂದಿದವರು. ಹೀಗೆಯೇ ಬದುಕಬೇಕೆಂದು ನಿರ್ಧರಿಸಿಕೊಂಡವರು. ಆರ್ಥಿಕವಾಗಿ ಸಬಲರು. ನೆಮ್ಮದಿಯ ಬದುಕಿಗೆ ಮದುವೆ ಅನಿವಾರ್ಯ ಅಲ್ಲ ಎಂದು ತಿಳಿದುಕೊಂಡವರು. ಇಂತಹ ಟ್ರೆಂಡ್ ಬಗ್ಗೆ ಸಾಹಿತ್ಯ ವಲಯದಲ್ಲಿ ಚರ್ಚೆಯಾಗಬೇಕು. ಯಾಕೆಂದರೆ ಭಾರತೀಯ ಸಮಾಜ ನಿಂತಿರುವುದೇ ಕುಟುಂಬ ವ್ಯವಸ್ಥೆಯ ಮೇಲೆ. ಮಹಿಳೆ ಅದರ ಆಧಾರ ಸ್ತಂಭ. ಈ ವ್ಯವಸ್ಥೆಯೇ ಅಲ್ಲಾಡತೊಡಗಿದರೆ ಸ್ವಸ್ಥ ಸಮಾಜ ರೂಪುಗೊಳ್ಳಲಾರದು. ಮಹಿಳೆಯರಂತೆ ಮಕ್ಕಳು ಮತ್ತು ವೃದ್ಧರ ಮನಸ್ಥಿತಿಯ ಬಗ್ಗೆ ಕೂಡ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವಿದು.

ಈಗ ಸಾಹಿತ್ಯ ವಲಯದಲ್ಲಿ ಇದರ ಬಗ್ಗೆ ಚಿಂತನೆ ನಡೆಯುತ್ತಿಲ್ಲವೆಂದಲ್ಲ. ಅದು ಅಕಾಡಮಿಕ್ ಮಟ್ಟದಲ್ಲಾಗುತ್ತಿದೆ. ಅದು ಮಾತೃ ದೃಷ್ಟಿಕೋನದಿಂದ ಆಗಬೇಕು. ಸಾಹಿತ್ಯ ಮತ್ತು ಜನಸಾಮಾನ್ಯರ ನಡುವೆ ಬಹುದೊಡ್ಡ ಕಂದಕವಿದೆ. ಚಿಂತಕರು ಜನ ಸಾಮಾನ್ಯರತ್ತ ಇಳಿದು ಬರಬೇಕು. ಅರ್ಥವಾಗುವ ಸರಳ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕು. ಭಾಷೆ ಉಳಿದರೆ ತಾನೆ ಸಾಹಿತ್ಯ ಸೃಷ್ಟಿ? ಅವರ ಕಣ್ಣಮುಂದೆ ಕನ್ನಡವನ್ನು ನಿಜವಾಗಿ ಪ್ರೀತಿಸುವ ಐಟಿ,ಬಿಟಿ ಯುವ ಮನಸ್ಸುಗಳಿರಬೇಕು. ನವಸಾಕ್ಷರರಿರಬೇಕು. ದೇಸಿಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಗ್ರಾಮೀಣ ಜನರಿರಬೇಕು. ರೈತ ಸಮುದಾಯವಿರಬೇಕು. ಜನಪರ ಚಳುವಳಿಗಳಿರಬೇಕು. ಅವರೆಲ್ಲರಿಗೂ ಸಾಹಿತಿ ಕಿವಿಯಾಗಬೇಕು; ಧ್ವನಿಯಾಗಬೇಕು. ಆದರೆ ಆಗುತ್ತಿರುವುದೇನು? ಸಾಹಿತ್ಯ ನಗರಕೇಂದ್ರಿತವಾಗುತ್ತಿದೆ. ಸಾಹಿತಿಗಳೆಲ್ಲಾ ಭ್ರಮಾ ಲೋಕದಲ್ಲಿದ್ದಾರೆ. ಪರಸ್ಪರ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಅಕ್ಷರ ಬಲ್ಲವರೆಲ್ಲಾ ಸಾಹಿತಿಗಳಾಗುತ್ತಿದ್ದಾರೆ. ಅವರು ಬರೆದದ್ದೆಲ್ಲವನ್ನು ಪ್ರಕಟಿಸುವ ಪ್ರಕಾಶಕರಿದ್ದಾರೆ. ಸಿದ್ದ ಸೂತ್ರದ ವಿಮರ್ಶಕರಿದ್ದಾರೆ. ಓದುಗರಿಗೆ ಯಾವುದನ್ನು ಓದಬೇಕೆಂಬ ಗೊಂದಲವಿದೆ.

ಸಾಹಿತ್ಯ ಸಮ್ಮೇಳನವೆಂಬುದೊಂದು ಜಾತ್ರೆ. ಜಾತ್ರೆಯಲ್ಲಿ ಸಡಗರವಿರುತ್ತದೆ. ಸಂಭ್ರಮವಿರುತ್ತದೆ. ಅಲ್ಲಿ ಗಂಭೀರ ಚಿಂತನೆ ನಡೆಯದು. ಆದರೆ ಚಿಂತನೆಯ ಝಳಕು ತೋರಿಸಲು ಅವಕಾಶವಿದೆ. ಸುದ್ದಿಯನ್ನೂ ಮಸಾಲೆ ಸೇರಿಸಿ ಉಣಬಡಿಸುವ ಕಾಲವಿದು. ಹಳೆ ಮುತ್ತೈದೆಯ ಹಾಗಿರುವ ಸಾಹಿತ್ಯ ಪರಿಷತ್ತು ಬದಲಾಗಬೇಕು. ಸಮ್ಮೇಳನದ ರೂಪುರೇಷೆ ಬದಲಾಗಬೇಕು.

ಬರವಣಿಗೆಯೆನ್ನುವುದು ಸ್ವಗತದಂತೆ; ಅಂತರಂಗದ ಪಿಸುಮಾತಿನಂತೆ; ಆಪ್ತ. ಆದರೂ ಅದರೊಳಗೇ ಪ್ರತಿಭಟನೆ ಹುದುಗಿರುತ್ತದೆ. ಅದು ಜನರ ಆಲೋಚನಾ ಕ್ರಮವನ್ನು, ಮೌಲ್ಯಗಳ ಕುಸಿತವನ್ನು, ಸಾಂಸ್ಕೃತಿಕ ಪಲ್ಲಟವನ್ನು ಹಿಡಿದಿಡುತ್ತದೆ. ಗಡಿಸಮಸ್ಯೆ, ಭಾಷಾ ಸಮಸ್ಯೆ, ನದಿನೀರು ಹಂಚಿಕೆ ಇವೆಲ್ಲಾ ಭಾವಾನಾತ್ಮಕ ಸಮಸ್ಯೆಗಳು. ಶಾಸನ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು. ಅವುಗಳ ಪರಿಹಾರಕ್ಕೆ ರಾಜಕೀಯ ವೇದಿಕೆ ಬೇಕು. ಅವುಗಳನ್ನು ವೇದಿಕೆಯತ್ತ ತರುವ ಚಳುವಳಿಗಳು ಬೇಕು. ಅದನ್ನು ಸಾಹಿತ್ಯ ಮುನ್ನಡೆಸುತ್ತಿರಬೇಕು. ಸಾಹಿತಿಗಳು, ಸಾಹಿತ್ಯ ಪರಿಷತ್ತು ಇದನ್ನೆಲ್ಲಾ ಮಾಡುತ್ತಿದೆಯೇ ಎಂಬುದು ಈಗಿರುವ ಬಹುಮುಖ್ಯ ಪ್ರಶ್ನೆ.

[ ಸಾಹಿತ್ಯ ಸಮ್ಮೇಳನಕ್ಕಾಗಿಯೇ ವಿಶೇಷವಾಗಿ ರೂಪಿತವಾಗಿರುವ ”ನುಡಿನಮನ” ಬ್ಲಾಗ್ ಗಾಗಿ ಬರೆದ ಲೇಖನ]

Wednesday, February 10, 2010

’ರಣ್’ ಮಾಧ್ಯಮಕ್ಕೆ ಹಿಡಿದ ಕನ್ನಡಿ




ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡದೆ ವರ್ಷಗಳೇ ಆಗಿತ್ತು. ’ರಣ್’ ಸುದ್ದಿ ಚಾನಲ್ ಗಳ ನಡುವಿನ ರಣಾಂಗವೆಂದು ಪ್ರಚಾರ ಪಡೆದಿತ್ತು. ನಮ್ಮಲ್ಲೂ ಎರಡು ಸುದ್ದಿ ಚಾನಲ್ ಗಳ ನಡುವೆ ಟಿಆರ್ ಪಿ ಸಮರ ಇದೆಯಲ್ಲ! ಅಲ್ಲದೆ ನಮ್ಮ ಸುದೀಪ್, ಅಮಿತಾಭ್ ಎದುರು ಹೇಗೆ ನಟಿಸಿರಬಹುದೆಂಬ ಕುತೂಹಲ. ಪೂರ್ವಾಶ್ರಮದ ಸೆಳೆತ ಬೇರೆ. ರಾಮ್ ಗೋಪಾಲವರ್ಮರ ’ರಣ್’ ಸಿನಿಮಾಕ್ಕೆ ಹೋದೆ.

ವಿಜಯ್ ಹರ್ಷವರ್ಧನ್ ಮಲಿಕ್ [ಅಮಿತಾಭ್] ಸುದ್ದಿ ಚಾನಲ್ಲೊಂದರ ಮಾಲಿಕ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವವನ್ನು ರಕ್ಷಿಸುವ ಮೂರು ಸ್ತಂಭಗಳು. ಪತ್ರಿಕೋಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲಾಗುತ್ತದೆ. ಅದಕ್ಕೆ ಸಾಮಾಜಿಕ ಹೊಣೆಗಾರಿಕೆಯಿರುತ್ತದೆ. ಅದನ್ನು ನಂಬಿದವನು ವಿಜಯ್. ಆತನ ದೃಷ್ಟಿಯಲ್ಲಿರುವುದು ಜನ ಸಾಮಾನ್ಯರು. ಆತನ ಮಟ್ಟಿಗೆ ಸುದ್ದಿಯೆನ್ನುವುದು ಸತ್ಯಸೋಧನೆ.

ವಿಜಯ್ ನ ಪ್ರತಿಸ್ಪರ್ಧಿ ಚಾನಲ್ ಮಾಲೀಕ ಮೊಹನೀಶ್ ಬೆಹ್ಲ್ [ಪಾತ್ರದ ಹೆಸರು ನೆನಪಾಗುತ್ತಿಲ್ಲ]. ವಿಜಯ್ ಗರಡಿಯಲ್ಲಿ ಪಳಗಿದವನಾದರೂ ಈತನಿಗೆ ಪತ್ರಿಕೋಧ್ಯಮದ ಮೌಲ್ಯಗಳು ಮುಖ್ಯವಲ್ಲ, ಟಿಆರ್ ಪಿ ಮುಖ್ಯ. ಅದಕ್ಕಾಗಿ ಆತ ಸುದ್ದಿವಾಚಕರಿಗೆ ಕನಿಷ್ಟ ಉಡುಗೆ ಹಾಕಲು ಸೂಚಿಸುತ್ತಾನೆ.ಸುದ್ದಿಯನ್ನು ವೈಭವಿಕರಿಸುತ್ತಾನೆ; ಮಸಾಲೆ ಬೆರೆಸುತ್ತಾನೆ. ಹಾಗಾಗಿ ಟಿಅರ್ ಪಿ ಲಿಸ್ಟ್ ನಲ್ಲಿ ಸದಾ ನಂ೧. ಆದರೆ ನ್ಯೂಸ್ ಕ್ರೆಡಿಬಿಲಿಟಿಯನ್ನು ಉಳಿಸಿಕೊಂಡಿರುವುದು ವಿಜಯ್ ಚಾನಲ್.

ವಿಜಯ್ ಮಗ ಜಯ್. ಆ ಪಾತ್ರವನ್ನೇ ನಮ್ಮ ಕನ್ನಡದ ಹುಡುಗ ಸುಧಿಪ್ ಮಾಡಿರೊದು. ಪತ್ರಿಕೋದ್ಯಮವನ್ನು ವಿದೇಶದಲ್ಲಿ ಓದಿ ಬಂದವನು. ಆತ ತಮ್ಮ ಚಾನಲ್ ಅನ್ನು ನಂ೧ ಚಾನಲ್ ಮಾಡಲು ಹೊರಡುತ್ತಾನೆ. ಆತ ಮಹಾತ್ವಾಕಾಂಕ್ಷಿ. ಮಹಾತ್ವಾಕಾಂಕ್ಷಿಗಳಿಗೆ ಗುರಿ ಮುಟ್ಟುವುದೇ ಮುಖ್ಯ. ದಾರಿ ಮುಖ್ಯವಲ್ಲ. ಅವನ ಭಾವ ಪ್ರಭಾವಿ ವಾಣಿಜ್ಯೋದ್ಯಮಿ-ಅಮಿತಾಬ್ ಅಳಿಯ-ರಜತ್ ಕಪೂರ್[ಪಾತ್ರದ ಹೆಸರು ನೆನಪಿಲ್ಲ] ಅವನನ್ನು ವಿರೋಧ ಪಕ್ಷದ ನಾಯಕ ಮೋಹನ ಪಾಂಡೆಗೆ ಪರಿಚಯಿಸುತ್ತಾನೆ. ಆತನಿಗಾದರೋ ಪ್ರಧಾನ ಮಂತ್ರಿ ಗಾದಿಯ ಮೇಲೆ ಕಣ್ಣು. ಆತ ’ಸುದ್ದಿಯನ್ನು ಹುಡುಕುವುದಲ್ಲ; ಸೃಷ್ಟಿಸಬೇಕು’ ಎಂದು ನಕಲಿ ಸ್ಟಿಂಗ್ ಆಪರೇಷನ್ ಐಡಿಯಾ ಕೊಡುತ್ತಾನೆ. ವಿಜಯ್ ಅದನ್ನು ಕಾರ್ಯರೂಪಕ್ಕೆ ತರುತ್ತಾನೆ.

ಸ್ಟಿಂಗ್ ಅಪರೇಷನ್ ಚಾನಲ್ ನಲ್ಲಿ ಪ್ರಸಾರವಾಗುತ್ತದೆ[ ನಿಮಗೆ ಟಿವಿ೯ ನೆನಪಾಯಿತೇ?] ಸ್ವತಃ ವಿಜಯ್ ಸುದ್ದಿ ವಿಶ್ಲೇಷಣೆ ಮಾಡುತ್ತಾರೆ. ಪರಿಣಾಮವಾಗಿ ದಕ್ಷ ಪ್ರಧಾನಮಂತ್ರಿ ಕೆ.ಕೆ.ರೈನಾ ರಾಜಿನಾಮೆ ಕೊಡಬೇಕಾಗುತ್ತದೆ. ಟಿಆರ್ ಪಿ ಸಡನ್ನಾಗಿ ಏರಿ ನಂ೧ ಪಟ್ಟ ಸಿಕ್ಕಿ ಬಿಡುತ್ತದೆ. ಜಯ್ ಗೆ ಮಾಧ್ಯಮ ಪ್ರಶಸ್ತಿಯೂ ದೊರೆಯುತ್ತದೆ. ಆದರೆ ವಿಜಯನ ಆದರ್ಶಗಳನ್ನು ಮೆಚ್ಚಿ ಅವರಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡ ಯುವ ಪತ್ರಕರ್ತ ಪೂರಭ್ [ಭೂಮಿಕೆ ನಿಭಾಯಿಸಿದ್ದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರಮಂತ್ರಿ ವಿಲಾಶ್ ರಾವ್ ದೇಶ್ ಮುಖ್ ಮಗ ರಿತೇಶ್ ದೇಶ್ ಮುಖ್] ಈ ವಿದ್ಯಾಮಾನಗಳಿಂದ ಭ್ರಮನಿರಸಗೊಳ್ಳುತ್ತಾನೆ. ತಾನೇ ಸ್ಟಿಂಗ್ ಅಪರೇಷನ್ನಿನ ಪೂರ್ವಾಪರ ತನಿಖೆ ಮಾಡಿ ಸಿಡಿ ತಯಾರಿಸುತ್ತಾನೆ. ತನ್ನ ಚಾನಲ್ ನಲ್ಲಿ ಇದು ಪ್ರಸಾರವಾಗದೆಂದು ಎದುರಾಳಿ ಚಾನಲ್ ಮೊಹನೀಶ್ ಬೆಹ್ಲ್ ಬಳಿ ಹೋಗುತ್ತಾನೆ. ಆತ ಅದನ್ನು ಪ್ರಸಾರ ಮಾಡದೆ ಪಾಂಡೆಯೊಡನೆ ೫೦೦ ಕೋಟಿಗೆ ಡೀಲ್ ಕುದುರಿಸಿ,ಅದನ್ನು ಪೂರಭ್ ನೆದುರು ಹೆಮ್ಮೆಯಿಂದ ಹೇಳಿಕೊಂಡು ಆತನಿಗೂ ೧೦ ಕೋಟಿ ಕೊಡುವುದಾಗಿ ಹೇಳುತ್ತಾನೆ. ಪೂರಭ್ ಅದನ್ನೆಲ್ಲಾ ಚಿತ್ರಿಸಿಕೊಂಡು ತಂದು ಅಮಿತಾಭ್ ಕೈಗೆ ಕೊಟ್ಟು ಹೊರಟು ಹೋಗುತ್ತಾನೆ.

ಸಿಡಿ ನೋಡಿ ಅಮಿತಾಭ್ ದಿಗ್ಮೂಢನಾಗುತ್ತಾನೆ. ಅತ್ತ ಪಾಂಡೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಇತ್ತ ಅಮಿತಾಭ್ ವೀಕ್ಷಕರ ಕ್ಷಮೆ ಯಾಚಿಸುತ್ತ ತನ್ನ ಚಾನಲ್ ನಲ್ಲಿ ಈ ಷಡ್ಯಂತ್ರದ ಎಳೆ ಎಳೆಯನ್ನೂ ಬಿಚ್ಚಿಡುತ್ತಾನೆ. ಪ್ರಮಾಣ ವಚನ ಸಮಾರಂಭ ನಡೆಯುವುದಿಲ್ಲ. ಆದರೆ ಅವಮಾನಿತನಾದ ಜಯ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವಿಜಯ್ ಚಾನಲ್ ಜವಾಬ್ದಾರಿಯನ್ನು ಪೂರಭ್ ಗೆ ವಹಿಸಿಕೊಟ್ಟು ತಾನು ನಿವೃತ್ತನಾಗುತ್ತಾನೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮ ತನ್ನ ಸಿನೆಮಾದ ಬಗ್ಗೆ ಹೇಳಿಕೊಂಡದ್ದು ಹೀಗೆ; ಇದು ಮೀಡಿಯಾ ಬಗ್ಗೆ ನನ್ನ ಕಮೆಂಟ್ ಅಲ್ಲ. ಮೀಡಿಯಾ ಹೀಗೆಯೇ ಇರಬೇಕೆಂದು ನಾನು ಹೇಳಲಾರೆ. ನಾನು ಮಿಡಿಯಾವನ್ನು ಕಂಡಂತೆ , ಅರ್ಥ ಮಾಡಿಕೊಂಡಂತೆ ಸಿನೆಮಾ ಮಾಡಿದ್ದೇನೆ.

ಸಧ್ಯದ ಪರಿಸ್ಥಿತಿಯನ್ನು ನೋಡಿದರೆ ವರ್ಮ ಮೀಡಿಯವನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿದ್ದಾರೆಂದು ಅನ್ನಿಸುತ್ತದೆ. ಜಯ್ ನನ್ನು ಮಹಾತ್ವಾಕಾಂಕ್ಷಿಯಾದ ರೆಸ್ಟ್ಲೆಸ್ ಪತ್ರಕರ್ತನನ್ನಾಗಿ ಚಿತ್ರಿಸಿದ್ದಾರೆ. ಕೆಲವೊಮ್ಮೆ ವಾಚಾಳಿಯನ್ನಾಗಿ ಮಾಡಿದ್ದಾರೆ. ನಮ್ಮ ವಿಷುವಲ್ ಮೀಡಿಯಾದ ಬಹುತೇಕ ಪತ್ರಕರ್ತರು ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಹಾಗೆ.ಆತನ ವಿಕ್ಷಿಪ್ತ ವ್ಯಕ್ತಿತ್ವವನ್ನು ಅವನ ಮ್ಯಾನರಿಸನಲ್ಲಿ ತೋರಿಸಿದ್ದಾರೆ. ಆತನ ಕೈಯಲ್ಲೊಂದು ಸಿಗರ್ಲೈಟ್ ಕೊಟ್ಟು ಅದನ್ನು ಆತ ಮುಚ್ಚಿ ತೆರೆಯುವ ರೀತಿಯಲ್ಲೇ ಆತನ ಮನಸ್ಸು ಪ್ರತಿಫಲಿಸುವಂತೆ ಮಾಡಿದ್ದಾರೆ. ಅಮಿತಾಭ್ ನಂಥ ಅಭಿಜಾತ ಕಲಾವಿದನೆದುರು ಸುದೀಪ್ ಕಷ್ಟಪಟ್ಟು ಅಭಿನಯಿಸಿದಂತೆ ಭಾಸವಾಗುತ್ತದೆ. ಆದರೆ ಮೌನದಲ್ಲಿ ಗೆಲ್ಲುತ್ತಾರೆ.

ಸಿನೆಮಾ ನೋಡುತ್ತಿರುವಾಗಲೇ ನಿಮಗೆ ಇತ್ತೀಚೆಗೆ ನಡೆದ ’ಅಪರೇಷನ್ ಸುವರ್ಣ’ ನೆನಪಿಗೆ ಬರುತ್ತದೆ. ಜೋಕರ್ ಗಳಗಬೇಕಾದವರು [ರಾಜಪಾಲ್ ಯಾದವ್ ಪಾತ್ರ ], ಜ್ಯೋತಿಷಿಗಳಬೇಕಾದವರು ಗಂಭೀರ ಪತ್ರಕರ್ತರಾಗುತ್ತಿರುವುದು ನೆನಪಾಗಬಹುದು. ಪ್ರಿಂಟ್ ಮೀಡಿಯಾದ ಕೆಲವರು ಸೈಡ್ ವಿಂಗ್ ನಲ್ಲಿ ಕಾಣಿಸಿಕೊಳ್ಳಲೂಬಹುದು. ಸಕ್ಕರೆ ಕಾರ್ಖಾನೆ ಮಾಲೀಕರು, ಗಣಿಧನಿಗಳು ಪತ್ರಕರ್ತರನ್ನು ಪರ್ಚೇಸ್ ಮಾಡುತ್ತಿರುವುದು ನೆನಪಿಗೆ ಬಂದರೂ ಬರಬಹುದು! ಸುದ್ದಿಯ ವೈಭವಿಕರಣದಲ್ಲಿ ನಿಮಗೆ ಏನೇನೋ ನೆನಪಾಗಬಹುದು.

ನಾನು ಸಿನೆಮಾ ನೋಡಿದ್ದು ವೀರೇಶ್ ಚಿತ್ರ ಮಂದಿರದಲ್ಲಿ. ಅಲ್ಲಿಯ ಸೌಂಡ್ ಸಿಸ್ಟಮ್ ದೇವರಿಗೇ ಪ್ರೀತಿ! ಆದರೆ ಚಿತ್ರದ ಆರಂಭದಲ್ಲಿ ಬರುವ ರಾಷ್ಟ್ರಗೀತೆಗೆ ಇಡೀ ಚಿತ್ರಮಂದಿರವೇ ಎದ್ದು ನಿಂತು ಗೌರವ ತೋರಿಸಿದ್ದು ನಿಜಕ್ಕೂ ನಂಗೆ ಖುಷಿ ಕೊಟ್ಟಿತು.

Thursday, January 28, 2010

ತುಳು ಭಾಷೆಗೇ ಗಗ್ಗರ ಕಟ್ಟಿದ ’ಗಗ್ಗರ’








ತುಳು ಚಿತ್ರ ’ ಗಗ್ಗರ’ಕ್ಕೆ ೨೦೦೮ರ ಶ್ರೇಷ್ಟ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ದೊರಕಿದೆ. ತುಳು ಭಾಷೆ, ಸಂಸ್ಕೃತಿ, ಪರಂಪರೆ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಮಿಂಚಿತು.

’ಗಗ್ಗರ’ ಚಿತ್ರತಂಡವನ್ನು ’ಮೌನ ಕಣಿವೆ’ ಅಭಿನಂದಿಸುತ್ತಿದೆ

ಪ್ರಶಸ್ತಿ ವಿಜೇತ ಚಿತ್ರಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತವೆ; ಮನಸ್ಸನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಸಿದ್ಧಾಂತಗಳ ಹೊರೆಯನ್ನು ಹೊರಿಸುತ್ತವೆ.ಬಹು ಪ್ರಯಾಸದಿಂದ ಸಿನೆಮಾದ ಆಶಯವನ್ನು ಹುಡುಕಬೇಕಾಗುತ್ತದೆ. ಅದೇ ಅಳುಕಿನಿಂದ ’ಗಗ್ಗರ’ದ ಮುಂದೆ ಕೂತೆ.
೧೧೦ ನಿಮಿಷಗಳ ಈ ಚಿತ್ರ ನನ್ನ ಪೂರ್ವಾಗ್ರಹಗಳನ್ನೆಲ್ಲಾ ತೊಡೆದು ಹಾಕಿತು. ಒಂದು ಒಳ್ಳೆಯ ಕಲಾತ್ಮಕ ಸಿನೇಮಾ ನೋಡಿದ ಅನುಭವ ನನ್ನದಾಯಿತು. ನಿರ್ದೇಶಕರಾಗಿ ಶಿವಧ್ವಜ್ ಭರವಸೆ ಮೂಡಿಸಿದ್ದಾರೆ. ಗುರುದತ್ ಈ ಚಿತ್ರದ ನಿರ್ಮಾಪಕರು.

ಜಾಗತೀಕರಣದ ಹೊಡೆತಕ್ಕೆ ಸಿಲುಕಿ ನಮ್ಮ ಭಾಷೆ, ಸಂಸ್ಕೃತಿ, ಆಚರಣೆ, ಸಂಪ್ರದಾಯ ಎಲ್ಲವೂ ಬದಲಾಗುತ್ತಿದೆ; ರೂಪಾಂತರಗೊಳ್ಳುತ್ತಿದೆ; ಸ್ಥಿತ್ಯಂತರಗೊಳ್ಳುತ್ತಿದೆ. ಅಂತಹ ಸಂಕ್ರಮಣಾವಸ್ಥೆಯನ್ನು ಹಿಡಿದಿಡುವ ಪ್ರಯತ್ನವನ್ನು ’ಗಗ್ಗರ’ ಮಾಡಿದೆ.

ಭೂತಾರಾಧನೆ ತುಳುನಾಡಿನ ಒಂದು ವಿಶಿಷ್ಟ ಆರಾಧನಾ ಪದ್ಧತಿ. ’ಭೂತ’ ಅಂದರೆ ಅತಿಮಾನುಷ ಶಕ್ತಿ. ಅದು ಭೂಮಿ ದೈವವೂ ಹೌದು. ಅದು ಜನ, ಜಾನುವಾರು, ಬಿತ್ತಿದ ಬೆಳೆಯನ್ನು ಕಾಪಾಡುತ್ತದೆ ಎಂಬುದು ತುಳುವರ ನಂಬಿಕೆ. ಇಂತಹ ಭೂತವನ್ನು ವರ್ಷಕ್ಕೊಂದು ಬಾರಿ ಕೃತಜ್ನತೆಯಿಂದ ನೆನಪಿಸಿಕೊಳ್ಳುವ ಸಂದರ್ಭವೇ ’ಕೋಲ’

ಕೋಲದಲ್ಲಿ ’ಭೂತ’ ವ್ಯಕ್ತಿಯೊಬ್ಬನ ಮೈಯಲ್ಲಿ ಅವಾಹನೆಗೊಳ್ಳುತ್ತದೆ. ತುಳುನಾಡಿನಲ್ಲಿ ಭೂತ ಅಥವಾ ಕೋಲ ಕಟ್ಟಲು ಪರವ, ಪಂಬದ, ಅಜಿಲ, ನಲಿಕೆಯರೆಂಬ ಪ್ರತ್ಯೇಕ ಜನಾಂಗವಿದೆ. ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಬಹುತೇಕ ಜನರಿಗೆ ಸ್ವಂತ ಮನೆ-ಜಮೀನು ಇಲ್ಲ. ಕೂಲಿ ನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರು. ಉಳ್ಳವರ/ಮೇಲ್ಜಾತಿಯವರ ಮನೆಯೊಳಗೆ ಇವರಿಗೆ ಪ್ರವೇಶವಿಲ್ಲ.

ಈಗ, ವರ್ತಮಾನದಲ್ಲಿ ಭೂತ ಕಟ್ಟುವವರ ಮಕ್ಕಳು ವಿದ್ಯಾವಂತರಾಗಿದ್ದಾರೆ, ನೌಕರಿಯಲ್ಲಿದ್ದಾರೆ. ಅವರು ಭೂತ ಕಟ್ಟಲು ತಯಾರಿಲ್ಲ. ಹಳಬರಿಗೆ ಮೈಯಲ್ಲಿ ಕಸುವಿಲ್ಲ. ಇಂಥ ಸಂದರ್ಭವುಂದರ ಡಾಕ್ಯುಮೆಂಟೇಶನ್ನಿಗಾಗಿ ವಿದೇಶಿ ತಂಡವೊಂದು ಗ್ರಾಮಕ್ಕೆ, ಶಂಕರನ ಮನೆಗೆ ಬರುತ್ತದೆ. ಇದು ಸಿನೇಮಾ ಆರಂಭದ ಶಾಟ್. ಪ್ರಸ್ತುತ ಮೇಸ್ಟ್ರಾಗಿರುವ ಆತ ತನ್ನ ಭೂತ ಕಾಲದ ಬದುಕನ್ನು ಅವರೆದುರು ತೆರೆದಿಡುತ್ತಾನೆ. ಅವನ ನಿರೂಪಣೆ ಇಂಗ್ಲೀಷಿನಲ್ಲಿರುವುದರಿಂದ ನಿರ್ಮಾಪಕರು ಮೊದಲೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವಂತಿದೆ.

ಭೂತ ಕಟ್ಟುವ ವ್ಯಕ್ತಿ ಚನಿಯ ಮತ್ತು ಅವನ ವಿದ್ಯಾವಂತ ಮಗ ಶಂಕರ ’ಗಗ್ಗರ’ದ ಕೇಂದ್ರ ಪಾತ್ರಗಳು. ತುಳುವೇತರರಿಗೆ ’ಗಗ್ಗರ’ ಪರಿಚಯವಿರಲಾರದು. ಗಗ್ಗರ ಅಂದರೆ ಭೂತದ ಕಾಲಿನ ಹಿತ್ತಾಳೆಯ ಗೆಜ್ಜೆ ಆಭರಣ. ಭೂತಾರಾಧನೆಯಲ್ಲಿ ಗಗ್ಗರ ಕಟ್ಟುವುದೇ ಬಹಳ ಮುಖ್ಯವಾದ ಅಂಶ. ಭೂತ ಕಟ್ಟುವಾತ ಮೊದಲು ಅದನ್ನು ಪೂಜಿಸಿ. ಅರ್ಚಿಸಿ ಅದನ್ನು ಧರಿಸಲು ಊರ ಹತ್ತು ಸಮಸ್ತರಿಂದ ಅನುಮತಿಯನ್ನು ಬೇಡಿ ಅದನ್ನು ತನ್ನ ಕಾಲಿಗೆ ಕಟ್ಟಿಕೊಳ್ಳುತ್ತಾನೆ. ಆಗ ಅವನಿಗೆ ಆವೇಶ ಬರುತ್ತದೆ. ಭೂತ ಅವನಲ್ಲಿ ಅವಾಹನೆಗೊಳ್ಳುತ್ತದೆ. ಅಲ್ಲೊಂದು ’ಮಧ್ಯಂತರ ಜಗತ್ತು’ ಸೃಷ್ಟಿಯಾಗುತ್ತದೆ. ಊರ ಹತ್ತು ಸಮಸ್ತರ ಮನೆಯಲ್ಲಿ ಆಳಾಗಿ ದುಡಿಯುವ, ಆ ಅಸ್ಪ್ರಶ್ಯ ವ್ಯಕ್ತಿ ಆ ಹೊತ್ತಿಗೆ ಅತಿಮಾನುಷ ಶಕ್ತಿಯಾಗಿ ಮಾರ್ಪಡುತ್ತಾನೆ. ಭೂತ ನೀಡುವ ಅಭಯ ನುಡಿಗಾಗಿ ಮೆಲ್ವರ್ಗದ ಜನರು ಅವನೆದುರು ಕೈಮುಗಿದು ನಿಲ್ಲುತ್ತಾರೆ.

ಚನಿಯನ ಸೊಂಟ ಆಕಸ್ಮಿಕವಾಗಿ ಎತ್ತರದಿಂದ ಬಿದ್ದು ಮುರಿಯುತ್ತದೆ. ಅವನಿಂದ ಕೋಲ ಮಾಡಿಸಿಕೊಳ್ಳುತ್ತಿದ್ದ ಊರಿನ ಹತ್ತು ಸಮಸ್ತರು ಅವನಿಗೆ ಪುಡಿಕಾಸನ್ನು ನೀಡುತ್ತಾರೆಯೇ ಹೊರತು ಅವನ ಸಹಾಯಕ್ಕೆ ಬರುವುದಿಲ್ಲ. ಮಾನವೀಯತೆಯನ್ನೂ ತೋರುವುದಿಲ್ಲ. ಆದರೆ ವಾರ್ಷಿಕ ಕೋಲವನ್ನು ಶಂಕರ ಕಟ್ಟಬೇಕೆಂದು ಊರವರು ಹೇಳಿದಾಗ ಮೇಷ್ಟ್ರಾಗಿದ್ದ ಶಂಕರ ಒಪ್ಪುವುದಿಲ್ಲ. ಆತ ಊರವರಿಗೆ ಒಂದು ಪ್ರಶ್ನೆ ಕೇಳುತ್ತಾನೆ; ’ಈರೆಗ್ ದೈವ ಬೋಡು. ದೈವ ಕಟ್ಟುನಾಯೆ ಬೊಡ್ಚಿ’ [ನಿಮಗೆ ದೈವ ಬೇಕು, ದೈವ ಕಟ್ಟುವವನು ಬೇಡ ]. ಬಹುಶಃ ಈ ಪ್ರಶ್ನೆ ಸಿನೆಮಾದ ಅಂಡರ್ ಕರೆಂಟ್; ಸಮಾಜಕ್ಕೆಸೆದ ಪ್ರಶ್ನೆ.

ಶಂಕರನದೂ ತುಳುನಾಡ ಸಂಸ್ಕೃತಿಯೇ. ಅಲ್ಲಿ ದೇವರಿಗಿಂತಲೂ ದೈವದ [ಭೂತದ] ಮೇಲಿನ ನಂಬಿಕೆಯೇ ಹೆಚ್ಚು. ಆತ ಕೋಲ ಕಟ್ಟುತ್ತಾನೆ. ಕೋಲ ತೀರಿದ ಮೇಲೆ ಆತ ಊರವರಲ್ಲಿ ತಮ್ಮ ಜನಾಂಗದ ಬವಣೆಗಳ ಬಗ್ಗೆ ತಿಳಿಸಿ ಅದಕ್ಕೆ ಸೂಕ್ತ ಮಾನವೀಯ ಪರಿಹಾರವನ್ನು ಕೊಡಲು ಕೇಳಿಕೊಳ್ಳುತ್ತಾನೆ. ಅದನ್ನವರು ಒಪ್ಪಿಕೊಂಡರೂ ಗಂಭೀರವಾಗಿ ತೆಗೆದುಕೊಂಡ ಬಗ್ಗೆ ಸಮರ್ಥನೆಗಳು ಸಿನೆಮಾದಲ್ಲಿ ದೊರೆಯುವುದಿಲ್ಲ. ಶಂಕರ ಎಸೆದ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಸ್ವಲ್ಪ ಅಧ್ಯಯನ ನಡೆಸಿ ಸ್ಕ್ರಿಪ್ಟ್ ತಯಾರಿಸಿದ್ದರೆ ಅತ್ಯುತ್ತಮ ಸಿನೇಮಾವಾಗುವ ಕಸುವು ’ಗಗ್ಗರ’ದಲ್ಲಿತ್ತು. ಸಿನೇಮಾದ ಕೊನೆಯಲ್ಲೇನೊ ಶಂಕರ ಸ್ಕೂಟರಿನಲ್ಲಿ ಕೋಲದ ಪರಿಕರಗಳನ್ನಿಟ್ಟುಕೊಂಡು ಪತ್ನಿ ಮಗನೊಡನೆ ಕೋಲ ಕಟ್ಟಲು ತೆರಳುತ್ತಾನೆ. ಮಾತ್ರವಲ್ಲ ಮಗನ ಬಾಯಿಯಿಂದ ’ನಾನೂ ಕೋಲ ಕಟ್ಟುತ್ತೇನೆ’ ಎಂದು ಹೇಳಿಸುತ್ತಾನೆ. ಇದು ಕೆಳಜಾತಿಯ ವಿದ್ಯಾವಂತ ತರುಣನೊಬ್ಬನ ವೈಯಕ್ತಿಕ ನಿಲುವಿನಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ. ಸಮುದಾಯದ ಪಾಲ್ಗೊಳ್ಳುವಿಕೆಯ ಕುರುಹು ಸಿಗುವುದಿಲ್ಲ.

ನಿರ್ದೇಶಕರು ತಮ್ಮಷ್ಟಕ್ಕೆ ಸುಮ್ಮನೆ ಸಂಯಮದಿಂದ ಅಚ್ಚುಕಟ್ಟಾಗಿ ಸಿನೆಮಾ ಮಾಡಿಕೊಂಡು ಹೋಗಿದ್ದಾರೆ. ಆಚೀಚೆ ತಿರುಗಲಿಲ್ಲ. ಭಾರತದ ಎಲ್ಲಾ ಪ್ರದರ್ಶನ ಕಲೆಗಳ, ಆರಾಧನಾ ಕಲೆಗಳ ಇಂದಿನ ಪರಿಸ್ಥಿತಿ ಇದೇ ಆಗಿದೆ. ಯಾಕೆಂದರೆ ಅದು ಜಾತಿಯೊಡನೆ ತಳುಕು ಹಾಕಿಕೊಂಡಿದೆ. ನಮ್ಮ ಜಾನಪದ ಕಲೆ ನಮ್ಮ ಸಂಪತ್ತು. ಅದು ಉಳಿಯಬೇಕೆಂದು ನಾವು ಬಯಸುತ್ತೇವೆ. ಅಂದರೆ ಜಾತಿ ಪದ್ದತಿಯೂ ಉಳಿಯಬೇಕೆ?

ಕೆಲವು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ಆಟಿಕಳಂಜ ಮತ್ತು ಸಿದ್ಧವೇಶವನ್ನು ಯಾರೂ ಹಾಕುತ್ತಿರಲ್ಲಿಲ್ಲ. ಆಗ ಮೇಲ್ಜಾತಿಯ ಜಾನಪದ ಉಪನ್ಯಾಸಕರೊಬ್ಬರು ತಮ್ಮ ಆಸಕ್ತ ಬಳಗದೊಡನೆ ಈ ವೇಷಗಳನ್ನು ಹಾಕಿ ಮನೆ ಮನೆಗೆ ಹೋಗಿ ಕುಣಿದು ಅವರು ಕೊಟ್ಟ ಕಾಣಿಕೆಯನ್ನು ಸ್ವೀಕರಿಸಿದ್ದರು. ಅವರೇನೂ ತಮ್ಮ ಗುರುತನ್ನು ಬಹಿರಂಗಪಡಿಸಿರಲಿಲ್ಲ. ಮಹಾರಾಷ್ಟ್ರದಲ್ಲಿ ತಮಾಷಾ ನೃತ್ಯವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಸಲಾಗುತ್ತಿದೆ. ಹಿಂದೆ ಅದು ಮರ್ಯಾದಸ್ಥರ ಕಲೆಯಾಗಿರಲಿಲ್ಲ.

ಗಗ್ಗರದಲ್ಲಿ ಎನ್ನೇಬಿಯವರ ಸರಳವಾದ ಚಿಕ್ಕ ಚಿಕ್ಕ ಸಂಭಾಷಣೆ ಮನಸ್ಸನ್ನು ತಟ್ಟುತ್ತದೆ. ಆದರೆ ಶಂಕರ ಭೂತ ಕಟ್ಟುವ ಸಂದರ್ಭದಲ್ಲಿನ ಸಂಭಾಷಣೆ ಇನ್ನಷ್ಟು ಮೊನಚಾಗಿದ್ದರೆ ಸಿನೇಮಾದ ಆಶಯಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತಿತ್ತು ಮಾತ್ರವಲ್ಲ ಶಂಕರನಿಗೆ ಗಟ್ಟಿ ವ್ಯಕ್ತಿತ್ವ ದೊರೆಯುತ್ತಿತ್ತು. ಆತನಿಗೆ ಪ್ರತಿಭಟನೆಯ ಹಕ್ಕಿದೆ. ಕಲೆಗೊಂದು ಮುನ್ನೋಟವಿರಬೇಕು; ವಾಸ್ತವ ಸಂಗತಿಗಳನ್ನಷ್ಟೇ ತಿಳಿಸಿದರೆ ಸಾಲದು. ನಿರ್ದೇಶಕರು ತಮ್ಮ ಸ್ವಾತಂತ್ರ್ಯವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲಿಲ್ಲ. ಜಾತಿ ವ್ಯವಸ್ಥೆ, ಜಾನಪದ ಕಲೆಗಳ ಉಳಿವಿನಂತಹ ಮೂಲಭೂತ ಪ್ರಶ್ನೆಗಳನ್ನು ಗಂಭೀರ ನೆಲೆಯಲ್ಲಿ ತರಬಹುದಿತ್ತು. ಒಂದು ಸಾಮಾಜಿಕ ಸಂಘರ್ಷದ ಚಿತ್ರಣವನ್ನು ಹಿಡಿದಿಡಲು ಇಲ್ಲಿ ಅವರಿಗೆ ಅವಕಾಶವಿತ್ತು .

ಚನಿಯನಾಗಿ ಎಂ.ಕೆ.ಮಠ್ ಅವರದ್ದು ಅತ್ಯುತ್ತಮ ಅಭಿನಯ. ಅವರ ಪತ್ನಿಯಾಗಿ ಜಯಶೀಲ ತನ್ನ ಮುಗ್ದತೆಯಿಂದಾಗಿ ಮನ ಗೆಲ್ಲುತ್ತಾರೆ. ಭೂತ ಆವೇಶಗೊಳ್ಳುವ ಸಂದರ್ಭವೊಂದು ಬಿಟ್ಟರೆ ಸುಚೇಂದ್ರಪ್ರಸಾದ್ ಶಂಕರನ ಪಾತ್ರಕ್ಕೆ ಜೀವತುಂಬಿದ್ದಾರೆ. ಆದರೆ ನಿರೂಪಕ ಶಂಕರ ಸಿನೇಮಾದ ಓಘಕ್ಕೆ ಭಂಗ ತರುತ್ತಾರೆ. ಟೈಟಲ್ ಕಾರ್ಡ್ ಮತ್ತು ಅದಕ್ಕೆ ಬಳಸಿದ ಸಂಗೀತ ಕೂಡ ಆಕರ್ಷಕವಾಗಿಲ್ಲ. ಭೂತರಾಧನೆಯ ಮೌಖಿಕ ಸಾಹಿತ್ಯವಾದ ’ಪಾಡ್ದನ’ವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಅದರೆ ಚಿತ್ರದುದ್ದಕ್ಕೂ ಮೌನವನ್ನು ಸಮರ್ಥಕವಾಗಿ ಬಳಸಿಕೊಳ್ಳಲಾಗಿದೆ. ಸುರೇಶ ಬೈರಸಂದ್ರರ ಛಾಯಗ್ರಹಣವಂತೂ ಕೆಲವು ಸಂದರ್ಭದಲ್ಲಿ ಸುಪರ್ಭ್ ಅನ್ನಿಸುವಂತಿದೆ. ಚನಿಯನ ಮನೆಗೆ ಮಾಡಿದ ಬೆಳಕಿನ ಸಂಯೋಜನೆ ಕ್ಲಾಸಿಕ್. ಸಿನೇಮಾವನ್ನು ಒಟ್ಟಂದದಲ್ಲಿ ನೋಡಿದರೆ ಅದು ಇನ್ನೂ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಸಾಧ್ಯತೆಗಳಿವೆ.

Thursday, January 14, 2010

ರೈತನಿಗೆಲ್ಲಿ ಸುಗ್ಗಿಯ ಹುಗ್ಗಿ?

ಅರಮನೆ ಮತ್ತು ಕಪಿಲೆಯನ್ನು ಜೋಡಿಸುವ ಅಡಿಕೆ ತೋಟ
ಝುಳು ಝುಳು ಹರಿಯುವ ಕಪಿಲೆ
ನನ್ನ ಅರಮನೆ



ಆತ್ಮೀಯರಾದ ನಿಮಗೆಲ್ಲಾ ಸಂಕ್ರಾತಿಯ ಶುಭಾಶಯಗಳು.

ಸಂಕ್ರಾತಿ, ಮುಖ್ಯವಾಗಿ ರೈತಾಪಿ ವರ್ಗದ ಹಬ್ಬ; ಸುಗ್ಗಿಯ ಹಬ್ಬ. ರೈತ ಚಳಿಗಾಲದಲ್ಲಿ ಕಷ್ಟಪಟ್ಟು ಬೆಳೆದ ಬೆಳೆಯೆಲ್ಲವನ್ನು ಮನೆ ತುಂಬಿಸಿಕೊಳ್ಳುವ ಸಂಭ್ರಮದ ಹಬ್ಬ. ಆದರೆ ಸಂಭ್ರಮ ಪಡುವ ಸ್ಥಿತಿಯಲ್ಲಿದ್ದಾನೆಯೇ ನಮ್ಮ ರೈತ?

ಉತ್ತರ ಕರ್ನಾಟಕದ ರೈತರ ಸ್ಥಿತಿ ಏನಾಗಿದೆಯೆಂದು ವಿವರಿಸುವ ಅಗತ್ಯವೇ ಇಲ್ಲ. ಮಲೆನಾಡಿನ ರೈತರ ಸ್ಥಿತಿಯೂ ಈಗ ಚಿಂತಾಜನಕವಾಗತೊಡಗಿದೆ. ಕಾಫಿ ತೋಟದ ಮಾಲೀಕ ಚಿಂತಾಕ್ರಾಂತನಾಗಿದ್ದಾನೆ. ಮಳೆಯ ರಭಸಕ್ಕೆ ಕಾಫಿ ಬೀಜ ಗಿಡದ ಬುಡ ಸೇರಿದೆ

ನಾನು ಇಂದು ತಾನೆ ನನ್ನ ಅಡಿಕೆ ತೋಟದಿಂದ ಹಿಂದಿರುಗಿ ಬಂದೆ. ಮನಸ್ಸು ಭಾರವಾಗಿತ್ತು. ಅಂಗಳದಲ್ಲಿ ಬಿಸಿಲಲ್ಲಿ ಒಣಗಲು ಹಾಕಿದ ಅಡಿಕೆಯೆಲ್ಲಾ ಮಳೆಯಿಂದ ಒದ್ದೆಯಾಗಿತ್ತು. ನನ್ನೊಬ್ಬಳದಲ್ಲ. ಮಲೆನಾಡಿನ ಎಲ್ಲಾ ಅಡಿಕೆ ಬೆಳೆಗಾರರ ದುಸ್ಥಿತಿಯಿದು. ಈ ವರ್ಷ ಮಳೆಗಾಲಕ್ಕೆ ವಿರಾಮವೆಂಬುದೇ ಇಲ್ಲ. ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ, ಉತ್ತರ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಲೂರು, ಕೊಡಗು ಜಿಲ್ಲೆಗಳಲ್ಲಿ ಪ್ರತಿದಿನ ಸಂಜೆ ಮೋಡ ಕವಿಯುತ್ತದೆ. ದಿನಬಿಟ್ಟುದಿನವೆಂಬಂತೆ ಧಾರಾಕಾರ ಮಳೆ ಸುರಿಯುತ್ತದೆ. ಈ ಜಿಲ್ಲೆಗಳಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಅದು ನೆಲ ಕಚ್ಚಿದರೆ ರೈತ ಸತ್ತಂತೆಯೇ. ಇದಕ್ಕೆ ಕಾರಣವಿದೆ.

ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ರೈತರು ಹೆಚ್ಚಾಗಿ ತರಕಾರಿ ಮತ್ತು ಆಹಾರದ ಬೆಳೆಗಳನ್ನು ಬೆಳೆಯುತ್ತಾರೆ. ತರಕಾರಿಯಾದರೆ ಮೂರು ತಿಂಗಳ ಬೆಳೆ. ಹಾಗಾಗಿಯೇ ತರಕಾರಿ ಬೆಳೆದ ರೈತ ತಾನು ಹಾಕಿದ ಬೀಜದ ಬೆಲೆಯೂ ಸಿಗದೆಂದು ಗೊತ್ತಾದಾಗ ಸರಕಾರಕ್ಕೆ ಹಿಡಿಶಾಪ ಹಾಕುತ್ತಾ ಅದನ್ನು ಹೊಲದಲ್ಲಿಯೇ ಕೊಳೆಯಲು ಬಿಡುತ್ತಾನೆ. ಅದರ ಮೇಲೆಯೇ ಉಳುಮೆ ಮಾಡಿ ಹೊಸದೊಂದು ಬೆಳೆ ತೆಗೆಯಲು ಮಾನಸಿಕವಾಗಿ ಸಿದ್ಧನಾಗುತ್ತಾನೆ. ಆಹಾರದ ಬೆಳೆ ಬೆಳೆಯುವ ರೈತ ಕೂಡ ವರ್ಷದಲ್ಲಿ ಎರಡು ಬೆಳೆ ತೆಗೆಯುತ್ತಾನೆ. ಆದರೆ ಅಡಿಕೆ ಬೆಳೆಗಾರನದು ವರ್ಷದ ಬೆಳೆ. ಅದು ಹಾಳಾದರೆ ವರ್ಷದ ಆಧಾಯ ಹೋದಂತೆಯೇ. ಈಗ ಅಡಿಕೆ ಬೆಳೆಗಾರ ವರ್ಷದ ಆದಾಯ ಕಳೆದುಕೊಳ್ಳುತ್ತಿದ್ದಾನೆ. ಮಾತ್ರವಲ್ಲ, ಆತನ ಮುಂದಿನ ವರ್ಷದ ಆಧಾಯ ಕೂಡ ಕೈತಪ್ಪುವ ಲಕ್ಷಣಗಳಿವೆ. ಅಡಿಕೆ ಹಣ್ಣಾಗುತ್ತಿರುವ ಜೊತೆಯಲ್ಲಿಯೇ ಮುಂದಿನ ವರ್ಷದ ಫಸಲಿನ ಹಿಂಗಾರವೂ ಕುಡಿಯೊಡೆಯುತ್ತದೆ. ಈಗ ಸುರಿಯುತ್ತಲಿರುವ ಸತತ ಮಳೆಯಿಂದಾಗಿ ಅಡಿಕೆ ಮಿಡಿ ಒಣಗಿ ಬೀಳುತ್ತಲಿದೆ.

ಅಡಿಕೆ ಬೆಳೆಗಾರ ಅಡಿಕೆಯ ಜೊತೆ ಹಲವು ಉಪ ಬೆಳೆಗಳನ್ನು ಬೆಳೆಯುತ್ತಾನೆ. ಅವುಗಳಲ್ಲಿ ಕೊಕ್ಕೊ ಮಿಡಿಗಳು ಕಪ್ಪಾಗಿ ಉದುರುತ್ತಿದೆ; ಗೇರುಬೀಜದ ಹೂ ಕರಟಿ ಹೋಗಿವೆ. ಬಿಸಿಲು ಮಳೆಯಿಂದಾಗಿ ರಬ್ಬರು ಹಾಲು ಅರ್ಧಕ್ಕೆ ಇಳಿದಿದೆ. ಇದ್ದುದರಲ್ಲಿ ಬಾಳೆ ಬೆಳೆದ ರೈತನಿಗೆ ಹಾನಿಯಾದ [ಅಡಿಕೆ ತೋಟದ ಮಧ್ಯೆ ] ಬಗ್ಗೆ ಮಾಹಿತಿ ದೊರಕಿಲ್ಲ.

ಮಲೆನಾಡಿನ ರೈತ ಹಲವಾರು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾನೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯೇ ಇದರಲ್ಲಿ ಬಹು ದೊಡ್ಡದು. ಧರ್ಮಸ್ಥಳದ ಸ್ವಸಹಾಯ ಗುಂಪುಗಳ ಕೊಡುಗೆಯೂ ಇದರಲ್ಲಿದೆ. ನನ್ನ ಜಮೀನಿನ ಸುತ್ತ ಹಲವಾರು ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಅವರ ಮಕ್ಕಳು ದೂರದೂರುಗಳಲ್ಲಿ ಕೈತುಂಬಾ ಸಂಬಳ ತರುವ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಭೂಮಿಯ ಜೊತೆ ಭಾವಾನಾತ್ಮಕ ಸಂಬಂಧವಿಲ್ಲ.ರೈತನ ಮಕ್ಕಳಿಂದು ರೈತರಾಗಿ ಉಳಿದಿಲ್ಲ. ಹಾಗಾಗಿ ಸಂಕ್ರಾಂತಿ ಈ ವರ್ಷ ಹರ್ಷ ತರುವ ಹಬ್ಬವಾಗಿ ಬಂದಿಲ್ಲ. ರೈತನ ಕಷ್ಟ ಗೊತ್ತಿಲ್ಲದ ಪೇಟೆ ಮಂದಿಗೆ ಇದೊಂದು ಸಡಗರದ ಪ್ರದರ್ಶಕ ಹಬ್ಬವಾಗಿ ಬಂದಿದೆ ಅಷ್ಟೇ.

Monday, January 4, 2010

ಬಾಲ್ಯಕ್ಕೆ ಲಗ್ಗೆ ಇಟ್ಟ ’ರಾಮಾಚಾರಿ’





’ಈ ಎಲ್ಲ ಹಿಂಸೆಯಲು ಜೀವ ಕೇಳುವುದೊಂದೆ
ತಿರುತಿರುಗಿ ಜೀವ ಕೇಳುವದೊಂದೇ-ಒಂದೇ ಒಂದು;
ಎಲ್ಲಿಂದ ಬಂದು ಕಾಡಿತು ಈ ಅಗಮ್ಯ,
ವಾಚ್ಯಾತೀತ, ವಿಫಲ, ವಿಪರೀತ ವ್ಯಥೆ?’

ಗಂಗಾಧರ ಚಿತ್ತಾಲರ ‘ದುಃಖಗೀತ’ ಕವನದ ಸಾಲುಗಳಿವು. ಗಂಗಾಧರ ಚಿತ್ತಾಲ, ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಯಶವಂತ ಚಿತ್ತಾಲರ ಅಣ್ಣ. ಇವರ ತಂದೆಯವರು ೧೯೫೫ರಲ್ಲಿ ಮನೆಯ ಹಿತ್ತಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಬರೆದ ಕವನವಿದು.

ಸಾವೊಂದು ಗಾಢವಾಗಿ ತಟ್ಟಿದ ಸಂದರ್ಭದಲೆಲ್ಲಾ ಕಾಡುವ ಕವನವಿದು.
ಹೊಸ ವರ್ಷವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ನಾವೆಲ್ಲಾ ಪ್ರೀತಿ, ಅಭಿಮಾನಗಳಿಂದ ‘ಶರೀಫಜ್ಜ’ನೆಂದೇ ಕರೆಯುತ್ತಿದ್ದ ಅಶ್ವಥ್ ಅನಂತದಲ್ಲಿ ಲೀನವಾದರು. ಮರುದಿನವೇ ವಿಷ್ಣುವರ್ಧನ್ ಅವರನ್ನು ಹಿಂಬಾಲಿಸಿದರು. ಕನ್ನಡಿಗರ ಭಾವಪ್ರಪಂಚವನ್ನು ಶ್ರೀಮಂತಗೊಳಿಸಿದ ಎರಡು ಸಾಂಸ್ಕೃತಿಕ ಮನಸ್ಸುಗಳು ಒಟ್ಟೊಟ್ಟಿಗೆ ವರ್ಷದ ಕೊನೆಯಲ್ಲಿ ಕಣ್ಮರೆಯಾದವು. ಸಡಗರದ ಜಾಗದಲ್ಲಿ ವಿಷಾದ ಆವರಿಸಿಕೊಂಡಿತು.

೫೯ ಸಾಯುವ ವಯಸ್ಸು ಖಂಡಿತಾ ಅಲ್ಲ. ಆದರೂ ವಿಷ್ಣು ಇನ್ನಿಲ್ಲ.

ನಾನೇನು ವಿಷ್ಣುವರ್ಧನನ ಅಭಿಮಾನಿಯಲ್ಲ. ಆದರೆ ಸಾಹಿತ್ಯ, ಸಂಗೀತ. ನಾಟಕ, ನೃತ್ಯ, ಸಿನಿಮಾದಂತ ಕಲಾ ಮಾಧ್ಯಮಗಳಿಗೆ ಮನಸ್ಸನ್ನು ರೂಪಿಸುವ ಶಕ್ತಿ ಇದೆಯೆಂಬುದನ್ನು ಬಲ್ಲೆ. ಕನ್ನಡದ ಸಿನಿಮಾ ಜಗತ್ತಿನಲ್ಲಿ ಅನೇಕ ನಟರಿದ್ದಾರೆ; ಇದ್ದರು. ಅವರಲ್ಲಿ ಸ್ಟಾರ್ ಗಳಾಗಿ ಮೆರೆದವರು ಇಬ್ಬರೇ; ಅವರೇ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್.

ರಾಜಕುಮಾರ್ ಗಿಂತ ವಿಷ್ಣುವರ್ಧನ್ ನನ್ನ ಮನಸ್ಸಿಗೆ ಹೆಚ್ಚು ಹತ್ತಿರದವರು. ಅದಕ್ಕೆ ಕಾರಣವಿದೆ.ನಾನು ಬಾಲ್ಯವನ್ನು ಕಳೆದು ಕೌಮಾರ್ಯಕ್ಕೆ ಕಾಲಿಡುವ ಹೊತ್ತಿಗೆ ರಾಜಕುಮಾರ್ ತುಂಬಾ ಎತ್ತರದಲ್ಲಿದ್ದರು. ಎತ್ತರದಲ್ಲಿರುವವರನ್ನು ಆರಾಧಿಸಬಹುದು. ಆದರೆ ಸಮಾನ ನೆಲೆಯಲ್ಲಿ ಕಾಣಲಾಗದು. ರಾಜಕುಮಾರ್ ಹಿರಿಯಣ್ಣನಂತಿದ್ದರು, ಅಪ್ಪನಂತಿದ್ದರು, ಮಾರ್ಗದರ್ಶಕನಂತಿದ್ದರು. ಆದರೆ ಗೆಳೆಯನಲ್ಲ; ಪ್ರೇಮಿಯಲ್ಲ; ಆತ್ಮಬಂಧುವಲ್ಲ. ಆದರೆ ವಿಷ್ಣುವರ್ಧನ್ ಇದೆಲ್ಲವೂ ಆಗಬಲ್ಲವನಾಗಿದ್ದ.

‘ನಾಗರಹಾವು’ ತೆರೆಕಂಡದ್ದು ೧೯೭೨ರಲ್ಲಿ. ನವ್ಯ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲಘಟ್ಟ. ಯುವಕರಲ್ಲಿ ಒಂದು ರೀತಿಯ ವಿಕ್ಷಿಪ್ತತೆ ಆವರಿಸಿಕೊಂಡ ಕಾಲ. ಸಾಹಿತ್ಯ ಜಗತ್ತು ಅದನ್ನು ಗುರುತಿಸಿತ್ತು. ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಲಂಕೇಶರ ‘ಬಿರುಕು’[೧೯೬೭], ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ [೧೯೭೦] ಗಿರಿಯವರ ‘ಗತಿ-ಸ್ಥಿತಿ’[೧೯೭೧]- ಇಲ್ಲೆಲ್ಲಾ ಯುವಜನಾಂಗದ ಅಸಹನೆ, ಚಡಪಡಿಕೆ, ರೋಷ, ಪ್ರತಿಭಟನೆಯಿತ್ತು. ಯುವಕರ ನಾಡಿಮಿಡಿತವನ್ನು ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ಸೆರೆಹಿಡಿದರು. ‘ರಾಮಾಚಾರಿ’ ಯುವ ಮನಸ್ಸಿನ ಪ್ರತಿನಿಧಿಯಾದರು. ನವೋದಯ ಮನಸ್ಸಿನ ಕಾದಂಬರಿಕಾರ ತ.ರಾ.ಸುಗೆ ಇದು ‘ಕೇರೆಹಾವು’ ಆಗಿ ಕಂಡರೂ ರಾತ್ರಿ ಬೆಳಗಾಗುವುದರೊಳಗಾಗಿ ವಿಷ್ಣುವರ್ಧನ ಎಂಬ ‘ಆಂಗ್ರಿ ಯಂಗ್ ಮ್ಯಾನ್’ ಉದಯವಾಗಿದ್ದ.

‘ನಾಗರಹಾವು’ ನಾನು ನೋಡಿದ ನಾಲ್ಕನೆಯ ಸಿನಿಮಾ. ಅದು ಬಿಡುಗಡೆಯಾದ ನಾಲ್ಕೈದು ವರ್ಷಗಳ ನಂತರ ನಾನದನ್ನು ನೋಡಿದೆ. ಅದಕ್ಕೆ ಕಾರಣವಿದೆ. ನನ್ನೂರು ಕುಕ್ಕೆಸುಬ್ರಹ್ಮಣ್ಯ ಹತ್ತಿರದ ಒಂದು ಹಳ್ಳಿ. ಕುಕ್ಕೆಯಲ್ಲಿ ಇಂದಿಗೂ ಥಿಯೇಟರ್ ಇಲ್ಲ. ಸಿನಿಮಾ ನೋಡಬೇಕಾದರೆ ದೂರದ ಪುತ್ತೂರಿಗೆ ಹೋಗಬೇಕು. ಅದು ಆಗದ ವಿಚಾರ. ಯಾಕೆಂದರೆ ಸಿನಿಮಾ ನೋಡಬೇಕಾದರೆ ಆ ರಾತ್ರಿ ಅಲ್ಲಿ ಉಳಿಯಲೇ ಬೇಕಾಗಿತ್ತು. ಹಾಗಾಗಿ ನಾನು ಹತ್ತನೆಯ ತರಗತಿ ಕೊನೆಯವರೆಗೆ ಸಿನಿಮಾ ನೋಡಲೇ ಇಲ್ಲ.

ನಮಗೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಗೆ ಪುತ್ತೂರು ಸೆಂಟರ್ ಆಗಿತ್ತು. ಒಟ್ಟು ಹತ್ತು ದಿನ ಅಲ್ಲಿರಬೇಕಿತ್ತು. ಬೆಳಿಗ್ಗೆ ಪರೀಕ್ಷೆ ಬರೆದು ಸಂಜೆ ಫಸ್ಟ್ ಶೋ ಸಿನಿಮಾಕ್ಕೆ ಹೋಗುತ್ತಿದ್ದೆ .ಹತ್ತು ದಿನದಲ್ಲಿ ನಾಲ್ಕು ಸಿನೆಮಾ ನೋಡಿದ್ದೆ. ಬಂಗಾರದ ಮನುಷ್ಯ, ಮಯೂರ, ನಾಗರ ಹಾವು, ಕಿಟ್ಟುಪುಟ್ಟು. ಪುತ್ತೂರಲ್ಲಿ ಆಗ ಒಂದು ಥಿಯೇಟರ್ ಮತ್ತು ಎರಡು ಟೆಂಟ್ ಮಂದಿರಗಳಿದ್ದವು.
ನಾಗರಹಾವು ಸಿನೇಮಾ ನೋಡುವುದಕ್ಕೆ ಮೊದಲೇ ನನಗೆ ಅದರ ಹಾಡುಗಳ ಪರಿಚಯ ಆಗಿತ್ತು. ಯಾಕೆಂದರೆ ನನ್ನತ್ರ ರೇಡಿಯೋ ಇತ್ತು. ಹಾಗಾಗಿ ‘ಹಾವಿನ ದ್ವೇಷ ಹನ್ನೆರಡು ವರ್ಷ...’ ನನಗೆ ತುಂಬಾ ಇಷ್ಟದ ಹಾಡಾಗಿತ್ತು. ಅದಕ್ಕೂ ಒಂದು ಹಿನ್ನೆಲೆಯಿದೆ; ನಮ್ಮಜ್ಜನಿಗೆ ಇಬ್ಬರು ಹೆಣ್ಣುಮಕ್ಕಳು.ಅಜ್ಜ ತೀರಿಕೊಂಡ ಮೇಲೆ ಅಜ್ಜಿ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಪಾಲು ಮಾಡಿ ಕೊಟ್ಟರು. ಅಜ್ಜಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮಮ್ಮನಿಗೆ ಬಂತು. ‘ನೀನು ಅಜ್ಜಿಯನ್ನು ನೋಡಿಕೊಂಡು ಅಲ್ಲಿಯೇ ಶಾಲೆಗೆ ಹೋಗು’ ಎಂದು ನಮ್ಮ ಅಪ್ಪ-ಅಮ್ಮ ನನ್ನನ್ನು ಅಜ್ಜಿ ಮನೆಗೆ ಕಳುಹಿಸಿದರು. ಒಬ್ಬ ಅಡುಗೆಯವರನ್ನೂ ಗೊತ್ತು ಮಾಡಿದರು. ನಾನಾಗ ಏಳನೇ ತರಗತಿಯಲ್ಲಿದ್ದೆ.

ನಮ್ಮ ದೊಡ್ಡಮ್ಮನ ಆಸ್ತಿಯನ್ನು ಅವರ ಮಗ ನೋಡಿಕೊಳ್ಳುತ್ತಿದ್ದ. ಆಗ ಒಂದು ಘಟನೆ ನಡೆಯಿತು. ಅವರ ಇನ್ನೊಬ್ಬ ಮಗ ಪುರುಷೋತ್ತಮ ಬಿಳಿಮಲೆ, ತನಗೆ ಸೈನ್ಸ್ ನಲ್ಲಿ ಆಸಕ್ತಿಯಿಲ್ಲ, ಆರ್ಟ್ಸ್ ಓದುತ್ತೇನೆ ಎಂದು ಅಜ್ಜಿ ಊರಿಗೆ ಅಣ್ಣನ್ನಲ್ಲಿಗೆ ಬಂದ. ಅವರಿಬ್ಬರೂ ಅಜ್ಜಿ ಮನೆಯಲ್ಲಿರುವುದನ್ನು ಕೇಳಿ ನಮ್ಮೂರಿನಿಂದ ನನ್ನಣ್ಣನೂ ಬಂದ. ಮೂರು ಜನ ಅಣ್ಣ ತಮ್ಮಂದಿರೂ ಜೋತೆಯಾದರೆಂದರೆ ಕೇಳಬೇಕೆ? ನಮ್ಮ ಜಮೀನಿನ ಮೇಲೆ ಮೇಸ್ಟ್ರು ಒಬ್ಬರಿದ್ರು. ನಮ್ಮ ಗದ್ದೆಗೆ ನೀರು ಬಿಡಲು ಅವರದು ಯಾವಾಗಲೂ ತಕರಾರು. ಅವರ ಮನೆ ಸ್ವಲ್ಪ ತಗ್ಗಿನಲ್ಲಿತ್ತು. ಅವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳು. ಎಲ್ಲರೂ ನನ್ನ ಓರಗೆಯವರೇ. ನನ್ನ ಈ ಮೂವರೂ ಅಣ್ಣಂದಿರು ನಮ್ಮ ಮನೆಯ ಪಕ್ಕದಲ್ಲಿರುವ ಪೇರಲೆ ಮರವನ್ನೇರಿ ಕೋರಸ್ಸಿನಲ್ಲಿ ’ಹಾವಿನ ದ್ವೇಷ ಹನ್ನೆರಡು ವರುಷ... ನಮ್ಮ ದ್ವೇಷ ನೂರು ವರುಷ..ಮೇಸ್ಟ್ರೆ..’ ಎನ್ನುತ್ತಾ ಹಾಡಿದ್ದೇ ಹಾಡಿದ್ದು. ಆ ಹಾಡಿಗೆ ನಾನು ಜೊತೆಗೂಡಿಸಿ ’ಗಂಡು ಬೀರಿ’ ಎಂಬ ಹೆಸರು ಪಡೆದುಕೊಂಡಿದ್ದೆ. ಅದೇ ಪೇರಲೆ ಮರದಲ್ಲಿ ಮರಕೋತಿಯಾಡುತ್ತಿದ್ದೆವು. ನಾನು ಹತ್ತಾರು ಬಗೆಯಲ್ಲಿ ಸಿಳ್ಳೆ ಹೊಡೆಯಲು ಕಲಿತ್ತದ್ದೆ ಈ ಮರದಡಿಯಲ್ಲಿ.

ಈ ಮೂವರೂ ಆ ಕಾಲದಲ್ಲಿ ವಿಷ್ಣುವರ್ಧನನ ಅಭಿಮಾನಿಯಾಗಿದ್ದರು ಅಂತ ಕಾಣುತ್ತೆ. ವಿಷ್ಣು ತರಹ ಜೊಂಪೆ ಕೂದಲು ತಮ್ಮದಾಗಬೇಕೆಂದು ಆಗಾಗ ನೀರು ಹಾಕಿ ತಿದ್ದಿ ತೀಡಿ ಬಾಚಿಕೊಳ್ಳುತ್ತಿದ್ದರು. ವಿಷ್ಣುವರ್ಧನ್ ತುಂಬಾ ಬಟನ್ ಗಳಿಂದ ಕೂಡಿದ ಚಿತ್ರವಿಚಿತ್ರ ಶರ್ಟ್ ಗಳನ್ನು ಹಾಕುತ್ತಿದ್ದರು. ಗುತ್ತಿಗಾರಿನಲ್ಲಿ ಒಬ್ಬ ಒಳ್ಳೆಯ ಟೈಲರು ಇದ್ದರು. ಅವರಿಗೆ ನಾವೆಲ್ಲಾ ’ಟಿಪ್ ಟಾಪ್ ಟೈಲರ್’ ಎಂದೇ ಹೆಸರಿಟ್ಟಿದ್ದೆವು. ಇವರು ಒಂದು ಸೀರೆಯನ್ನು ಪರ್ಚೇಸ್ ಮಾಡಿ ಅದನ್ನು ಹರಿದು ಮೂರು ಲುಂಗಿಗಳನ್ನಾಗಿ ಆ ಟೈಲರ್ ನಿಂದ ಮಾಡಿಸಿಕೊಳ್ಳುತ್ತಿದ್ದರು. ಹುಡುಗಿಯರ ಸ್ಕರ್ಟ್ ಬಟ್ಟೆಯಿಂದ ಶರ್ಟ್ ಹೊಲಿಸಿಕೊಳ್ಳುತ್ತಿದ್ದರು. ಅದರ ಮೇಲೆಲ್ಲಾ ಚಿತ್ರ ವಿಚಿತ್ರ ಆಕಾರಗಳಲ್ಲಿ ಬಟನ್ ಗಳನ್ನು ಹೊಲಿಸಿಕೊಳ್ಳುತ್ತಿದ್ದರು. ಆ ಶರ್ಟ್- ಲುಂಗಿಗಳನ್ನು ಹಾಕಿಕೊಂಡು ಗುತ್ತಿಗಾರು ಪೇಟೆಗೆ ಹೊರಡುತ್ತಿದ್ದರು. ಅವರಿಗೆ ಪೇಟೆಯ ಜನ ’ತೀನ್ ಬ್ರದರ್ಸ್’ ಎಂದು ಹೆಸರಿಟ್ಟಿದ್ದರು. ನನ್ನ ಸ್ವಂತ ಅಣ್ಣನಂತೂ ನಮ್ಮ ಕಬ್ಬಿಣದ ಆಚಾರಿ ಚಂದ್ರಣ್ಣನತ್ರ ಹೇಳಿ ಎರಡು ಅಲಗಿನ ಚಾಕು ಮಾಡಿಸಿಕೊಂಡು ಅದನ್ನು ಸದಾ ತನ್ನ ಬಳಿಯೇ ಇಟ್ಟುಕೊಂಡಿರುತ್ತಿದ್ದ. ಇದು ಯುವಮನಸ್ಸಿನ ಮೇಲೆ ’ರಾಮಾಚಾರಿ’ ಮಾಡಿದ ಮೋಡಿ.

ಪುತ್ತೂರಿನಲ್ಲಿ ನಾನು ಪದವಿ ಓದುತ್ತಿದ್ದೆ. ಪ್ರೇಮದ ಬಗ್ಗೆ ಕನಸು ಕಾಣುವ ಕಾಲ.ಸುಂದರ, ವಿದ್ಯಾವಂತ, ಸುಸಂಸ್ಕೃತನಾದ ಹೀರೋ ವಿಷ್ಣುವರ್ಧನ್ ನಮ್ಮ ಕನಸುಗಳಿಗೆ ಮಾದರಿಯಾಗಿದ್ದ. ಹೊಂಬಿಸಿಲಿನ ಕನ್ನಡಕಧಾರಿ ಯುವ ವೈದ್ಯ ನಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿದ್ದ. ನನ್ನ ಗೆಳತಿಯೊಬ್ಬಳು ಈ ಚಿತ್ರದ ವಿಷ್ಣುವರ್ಧನನ ಪೋಸ್ಟ್ ಕಾರ್ಡ್ ಸೈಜಿನ ಸುಂದರ ಭಾವಚಿತ್ರವೊಂದನ್ನು ಕಳುಹಿಸಿಕೊಟ್ಟಿದ್ದಳು. ನಾನದನ್ನು ಬಹಳ ಕಾಲದವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದೆ. ಆತ ಭಾರತಿಯನ್ನು ಮದುವೆಯಾದಾಗ ನನಗೇನೂ ಅನ್ನಿಸಲಿಲ್ಲ. ಯಾಕೆಂದರೆ ಅದಾಗಲೇ ಅನಂತನಾಗ್ ನನ್ನ ಮನಸ್ಸಿನಲ್ಲಿ ಸದ್ದಿಲ್ಲದೆ ಬಂದು ಕೂತಿದ್ದ. ಆತ ಬಾಳ ಸಂಗಾತಿಯ ಕನಸಿಗೆ ಮಾದರಿಯಾಗಿದ್ದ. ಅಲ್ಲದೆ ಸಿನಿಮಾದ ಭ್ರಾಮಕ ಜಗತ್ತಿಗೂ ವಾಸ್ತವ ಬದುಕಿಗೂ ಇರುವ ಅಂತರದ ಸ್ಪಷ್ಟ ಅರಿವು ನನಗಿತ್ತು.

ನಾವು ಬೆಳೆಯುತ್ತಾ ಹೋದಂತೆ ನಮ್ಮ ಅಭಿರುಚಿಗಳೂ ಬದಲಾಗುತ್ತಾ ಹೋಗುತ್ತವೆ. ನಾಗರಹಾವನ್ನು ಮೆಚ್ಚಿದ್ದ ನಾನು, ಹೊಂಬಿಸಿಲಿಗೆ ಮನಸೋತಿದ್ದೆ. ಸುಪ್ರಭಾತವನ್ನು ಇಷ್ಟಪಟ್ಟಿದ್ದೆ. ಮಲಯ ಮಾರುತ, ಬಂಧನ, ನಿಶ್ಯಬ್ದ, ಲಾಲಿ, ಮುತ್ತಿನಹಾರಗಳು ನನ್ನಂಥ ಮಧ್ಯಮ ವರ್ಗದ ಮಹಿಳೆಯರ ಮನ ಗೆದ್ದಿದ್ದವು. ನಮ್ಮ ನೋವು ನಲಿವುಗಳಲ್ಲಿ, ಹತಾಶೆ-ಪ್ರತಿಭಟನೆಗಳಲ್ಲಿ ಆತನನ್ನು ಪಾಲುದಾರನನ್ನಾಗಿ ಕಾಣುತ್ತಿದ್ದೆವು. ಅತೀತದ ಆಕರ್ಷಣೆಯಿಂದ ’ಆಪ್ತ ಮಿತ್ರ’ವನ್ನೂ ನೋಡಿದ್ದೆ.
ಜನತೆ ರೂಪಿಸಿದ ಕಲಾವಿದನೊಬ್ಬ ಜನತೆಯ ಪ್ರತಿನಿಧಿಯಾಗಿ, ಅವರ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ನಾಯಕನಾಗಿ ಕಾಣಿಸಿಕೊಂಡದ್ದು ’ಮಾತಾಡ್ ಮಾತಾಡ್ ಮಲ್ಲಿಗೆ’ ಯಲ್ಲಿ. ಅವರ ಹೆಗಲ ಮೇಲೆ ಹಸಿರು ಶಾಲು ಕಂಡು ನನಗಂತೂ ಸಂತಸವಾಗಿತ್ತು. ರಾಮಾಚಾರಿ ಯುವ ಮನಸ್ಸಿನ ಪ್ರತಿನಿಧಿಯಾಗಿದ್ದ. ಮಲ್ಲಿಗೆಯ ಹೂವಯ್ಯ ಸ್ವಾಭಿಮಾನಿ ರೈತರ ಸಂಕೇತವಾಗಿದ್ದ.ಇದು ಕಲಾವಿದನೊಬ್ಬ ಸ್ವಕೇಂದ್ರಿತ ಇಮೇಜಿನಿಂದ ಸಮೂಹದೆಡೆಗೆ ಪಯಣಿಸಿದ ಯಶೋಗಾಥೆ.

ಇಂದಿನ ಯುವಜನಾಂಗಕ್ಕೆ ಯಾರು ಮಾದರಿ ನಟರೋ ನನಗೆ ಗೊತ್ತಿಲ್ಲ. ಸಮಾಜದ ಯಾವ ಸಮಸ್ಯೆಗಳಿಗೆ ಸಿನಿಮಾ ಕನ್ನಡಿಯಾಗುತ್ತಿದೆಯೋ, ಅದು ಕೂಡ ಗೊತ್ತಾಗುತ್ತಿಲ್ಲ. ಅಡಿಗರ ’ಭೂಮಿಗೀತ’ದ ಕೊನೆಯ ಸಾಲುಗಳು ನೆನಪಾಗುತ್ತಿವೆ;

’ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ;
ದಾರಿ ಸಾಗುವುದೆಂತೊ ನೋಡಬೇಕು’


[ಜನವರಿ ೩ರಂದು ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]

Thursday, December 24, 2009

ರೇಣುಕಾಚಾರ್ಯನಿಗೆ ಪಟ್ಟಾಭೀಷೇಕ- ಮಾನವಂತರಿಗಿದು ಕಾಲವಲ್ಲ.




ಅಂತೂ ಇಂತೂ ಹೊನ್ನಾಳಿಯ ರಸಿಕ ಚಕ್ರವರ್ತಿಗೆ ಕಿರೀಟಧಾರಣೆಯಾಯಿತು.
ಬ್ಲಾಕ್ ಮೈಲ್ ರಾಜಕೀಯ ಮೆಲುಗೈ ಪಡೆಯಿತು. ನನಗೆ ತಕ್ಷಣ ನೆನಪಿಗೆ ಬಂದದ್ದು ಕುಮಾರವ್ಯಾಸನ ಸಾಲುಗಳು;
”ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ,
ಪರಿವಾರ ಹದ್ದಿನ ನೆರವಿ, ಉರಿ ಉರಿಯುತಿದೆ ದೇಶ,
ಬಡವರ ಬಿನ್ನಪವಿನ್ನಾರು ಕೇಳುವರು......’

ಉತ್ತರ ಕರ್ನಾಟಕದ ಜನ ಕಂಡು ಕೇಳರಿಯದ ನೆರೆ ಹಾವಳಿಯಿಂದ ತತ್ತರಿಸಿ, ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅವರಿಗೆ ಸರಕಾರದ, ಜನಪ್ರತಿನಿಧಿಗಳ ನೆರವಿನ ಹಸ್ತವಿಲ್ಲ. ಸಂತೈಸಬೇಕಾದವರೇ, ಭರವಸೆಯ ಹಸ್ತ ಚಾಚಬೇಕಾದವರೇ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸಿ ನಗೆ ಪಾಟಲಿಗೆ ಗುರಿಯಾಗುತ್ತಿದ್ದಾರೆ. ಯಡಿಯೂರಪ್ಪ ಮತ್ತವರ ಪರಿವಾರ ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಚಾರಿತ್ರ್ಯ ಹೀನರಾಗುತ್ತಿದ್ದಾರೆ. ಕುದುರೆಗೆ ಕಣ್ಣ ಪಟ್ಟಿ ಕಟ್ಟಿದಂತೆ ದುಡ್ಡು ಬಾಚಿಕೊಳ್ಳುವುದೇ ಎಲ್ಲರ ಗುರಿಯಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ.
’ಬಡವರ ಬಿನ್ನಪವ ಕೇಳುವವರಿಲ್ಲ’

ಇಂದು ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ರೇಣುಕಾಚಾರ್ಯ ತಮ್ಮ ಬಳಗವನ್ನುದ್ದೇಶಿಸಿ ಮಾತನಾಡುತ್ತಾ, ತಾನು ಹನುಮಂತ ಮುಖ್ಯಮಂತ್ರಿಗಳ ನಮ್ರ ಸೇವಕ ಎಂದು ಹೇಳಿಕೊಂಡರು. ಹೆಂಡ ಕುಡಿದ ಮಂಗ ಎಂದಿದ್ದರೆ ಅವರ ವ್ಯಕ್ತಿತ್ವಕ್ಕೆ ಸರಿಯಾದ ಹೋಲಿಕೆಯಾಗುತ್ತಿತ್ತು.

ಅವರ ಮಾತುಗಳನ್ನು ದೃಶ್ಯ ಮಾಧ್ಯಮದಲ್ಲಿ ನೋಡಿದಾಗ ರಾಮಾಯಣದ ಘಟನೆಯೊಂದು ನೆನಪಿಗೆ ಬಂತು; ರಾವಣನನ್ನು ಕೊಂದು ಸೀತೆಯನ್ನು ಅಯೋಧ್ಯೆಗೆ ಕರೆ ತಂದ ಮೇಲೆ ಕೃತಜ್ನಾಪೂರ್ವಕವಾಗಿ ರಾಮನ ಅರಮನೆಯಲ್ಲಿ ಕಪಿಸೈನಕ್ಕೆ ಭೋಜನಕೂಟವನ್ನು ಏರ್ಪಡಿಸಲಾಗಿತ್ತು. ಭೂರಿಬೋಜನದಲ್ಲಿ ಉಪ್ಪಿನಕಾಯಿಯೂ ಇತ್ತು. ಒಂದು ಮರಿ ಮಂಗ ಅದನ್ನು ಅಂಗೈನಲ್ಲಿ ತೆಗೆದುಕೊಂಡು ಬೆರಳುಗಳಿಂದ ಮಡಚಿ ಒತ್ತಿ ಹಿಡಿದು ಚೀಪಲು ನೋಡಿದಾಗ ಅದರ ಗೊರಟು ಮೇಲಕ್ಕೆ ಹಾರಿತಂತೆ. ತಕ್ಷಣ ಮರಿಮಂಗ ’ನನಗಿಂತ ಎತ್ತರ ಜಿಗಿತಿಯಾ’ ಎಂದು ಊಟ ಬಿಟ್ಟು ಗೊರಟಿಗಿಂತ ಮೇಲಕ್ಕೆ ಜಿಗಿತಂತೆ. ಪಕ್ಕದಲ್ಲಿ ಕೂತ ಇನ್ನೊಂದು ಮಂಗ ಮರಿಮಂಗನ ಜಿಗಿತ ಕಂಡು, ’ನಿನಗಿಂತ ಎತ್ತರಕ್ಕೆ ನಾ ಜಿಗಿಯಬಲ್ಲೆ’ ಎನ್ನುತ್ತಾ ಮೇಲಕ್ಕೆ ಜಿಗಿಯಿತಂತೆ. ಅದನ್ನು ಕಂಡು ಇನ್ನೊಂದು, ಮಗದೊಂದು ಎನ್ನುತ್ತಾ ಊಟದ ಪಂಕ್ತಿಯಲ್ಲಿದ್ದ ಎಲ್ಲಾ ಮಂಗಗಳೂ ಲಾಗ ಹೊಡೆಯತೊಡಗಿದವಂತೆ. ಕೊನೆಗೆ ಹನುಮಂತನೂ ಇವರಲ್ಲಿ ಸೇರಿಕೊಂಡನಂತೆ.

’ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು.’ ಪಾಳೆಗಾರಿಕೆ ಗುಣಗಳನ್ನು ರಕ್ತಗತವಾಗಿಸಿಕೊಂಡಿರುವ ರೆಡ್ಡಿ ಬಳಗ, ಪುರುಷ ಪ್ರಾಧಾನ್ಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬಿಜೆಪಿ ಸರಕಾರ, ಸಿಕ್ಕಷ್ಟು ಬಾಚಿಕೊಳ್ಳೋಣ ಎನ್ನುವ ಆಸೆಬುರುಕ ಜನಪ್ರತಿನಿಧಿಗಳು- ಮಾನವಂತರಿಗಿದು ಕಾಲವಲ್ಲ.

Sunday, December 13, 2009

ರೈತರಿಗಿನ್ನು ದೇವರೇ ಗತಿ!





ಬಳ್ಳಾರಿಯ ವಿವಾದಿತ, ಉದ್ದೇಶಿತ ವಿಮಾನ ನಿಲ್ದಾಣದ ಸರ್ವೆ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಾಗ, ಕೊನೆಗೂ ರೈತರ ತಾಳ್ಮೆಯ ಕಟ್ಟೆಯೊಡೆಯಿತು; ಅವರ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯೊಂದು ಒದಗಿಬಿಟ್ಟಿತು, ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತದೆಯೆಂದು ಅಂದುಕೊಳ್ಳುತ್ತಿರುವಾಗಲೇ ಎಲ್ಲವೂ ಠುಸ್ಸಾಯಿತು.ರೈತರು ಆತನನ್ನು ಮುಕ್ತಗೊಳಿಸಿದರು.

’ನಾನು ದಾರಿ ತಪ್ಪಿದ್ದೆ. ರೈತರು ನನಗೆ ದಾರಿ ತೋರಿಸಿದರು.ಅವರೇನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ’ ಎಂದು ರೈತರೊಡನಿದ್ದಾಗ ಮಾಧ್ಯಮಕ್ಕೆ ಹೇಳಿದ್ದ ಆತ ತಿರುಗಿಬಿದ್ದು ಪೋಲಿಸ್ ಸ್ಟೇಷನ್ ನಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧವೇ ಅಪಹರಣದ ಕೇಸು ದಾಖಲಿಸಿದ. ಪೋಲಿಸರು ೫೦ ಮಂದಿಯನ್ನು ಬಂದಿಸಿದರು.

ಬಳ್ಳಾರಿಯಲ್ಲಿ ಏನು ಬೇಕಾದರೂ ಆಗಬಹುದು!

ತುಂಗಭದ್ರೆಯ ನೀರುಂಡು ಹಸಿರಿನಿಂದ ಕಂಗೊಳಿಸುತ್ತಿರುವ ಚಾಗನೂರು,ಸಿರಿವಾರ ಗ್ರಾಮಗಳು ಸರಕಾರಿ ಕಡತಗಳಲ್ಲಿ ಖುಷ್ಕಿ ಜಮೀನಾಗಿ ಪರಿವರ್ತನೆಗೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ಖರೀದಿ ಮಾಡಿ ’ರೆಸಾರ್ಟ್ ಅರೆಸ್ಟ್’ ಮಾಡಿ ಇಡಬಹುದು.

’ನಮ್ಮದು ಖುಷ್ಕಿ ಜಮೀನಲ್ಲ; ಅದು ನೀರಾವರಿ ಜಮೀನು; ಫಲವತ್ತಾದ ಕಪ್ಪು ಮಣ್ಣು; ಇಲ್ಲಿ ನಾವು ಹತ್ತಿ. ತೊಗರಿ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಕಡಲೆ,ತರಕಾರಿಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮ ಅನ್ನವನ್ನು ಕಿತ್ತುಕೊಳ್ಳಬೇಡಿ. ನಮ್ಮ ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ.

ಬಳ್ಳಾರಿಜಿಲ್ಲೆಯ ಉಸ್ತುವಾರಿ ಸಚಿವರೂ, ಗಣಿದೊರೆಗಳೂ ಆದ ಜನಾರ್ಧನ ರೆಡ್ಡಿ ಮತ್ತವರ ಬಳಗ ಇದನ್ನೊಂದು ಪ್ರತಿಷ್ಟೆಯ ವಿಷಯವಾಗಿ ಪರಿಗಣಿಸಿದ್ದಾರೆ. ಅವರ ದಾಕ್ಷಿಣ್ಯದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ’ ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ’ ಎನ್ನುತ್ತಿದ್ದಾರೆ.

ದೀನ-ದಲಿತರು, ನೊಂದವರು, ಅಸಹಾಯಕರೆಡೆಗೆ ಪ್ರಭುತ್ವವೇ ನಡೆದು ಬರಬೇಕು. ಆದರೆ ಆಡಳಿತ ಪಕ್ಷ ಯಾವುದು? ವಿರೋಧಪಕ್ಷ ಯಾವುದು? ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಅನುಕಂಪ ಈಗ ಅವರಿಗೇ ಬೇಕಾಗಿದೆ!

ಇನ್ನು ಸದಾ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗ ರಾಜಕಾರಣಿಗಳ, ಉದ್ದಿಮೆದಾರರ ಕೃಪಾಕಟಾಕ್ಷದಲ್ಲಿ ಸಮೃದ್ಧವಾಗಿ ಬೆಳೆಯುತ್ತಲಿದೆ! ರಾಜಧಾನಿಯನ್ನು ಬಿಟ್ಟರೆ ಬೇರೆಡೆ ಅವರ ಅರಿವು ವಿಸ್ತರಿಸುವುದಿಲ್ಲ. ಪತ್ರಕರ್ತರ ಆದ್ಯತೆಗಳೇ ಈಗ ಬೇರೆ. ಸಮಾಜದ ಧ್ವನಿಯಾಗಬೇಕಾಗಿದ್ದ ಸಾಹಿತಿ-ಕಲಾವಿದರು ಸ್ವಕೇಂದ್ರಿತ ಗುಂಪುಗಳನ್ನು ಕಟ್ಟಿಕೊಂಡು ಪರಸ್ಪರ ಹೊಗಳಿಕೊಳ್ಳುತ್ತಾ ಭ್ರಮಾಲೋಕದಲ್ಲಿ ಮುಳುಗಿದ್ದಾರೆ.
ಮಂಗಳವಾರ ಸಿರಿವಾರ, ಚಾಮಲಾಪುರಗಳಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಬುಧವಾರ ಹಾಸನ, ಚಾಮರಾಜನಗರದಲ್ಲಿ ಭೂಸ್ವಾದೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಗುರುವಾರ ದಾವಣಗೆರೆ, ಚಾಮರಾಜ ನಗರಗಳಲ್ಲಿ ಪೋಲಿಸರು ಲಾಠಿ ಬೀಸಿದರು. ಅಕ್ಷರಶಃ ಅಟ್ಟಾಡಿಸಿಕೊಂಡು ರಕ್ತ ಬರುವಂತೆ ಹೊಡೆದರು. ಮಹಿಳೆಯರನ್ನೂ ಬಿಡಲಿಲ್ಲ. ಜಿಲ್ಲಾ ದಂಡಾಧಿಕಾರಿಯೆಂದು ಕರೆಯಲಾಗುವ ಜಿಲ್ಲಾಧಿಕಾರಿಯವರೇ ಸ್ವತಃ ಕೈಯಲ್ಲಿ ಲಾಠಿ ಹಿಡಿದು ರೈತರನ್ನು ನಿಯಂತ್ರಿಸುತ್ತಿದ್ದರು. ಪುಣ್ಯಕ್ಕೆ ’ಚಡ್ಡಿ’ ಹಾಕಿರಲಿಲ್ಲ ಅಷ್ಟೇ!. ಇವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ ಸೇರಿ ೪೦ ಮಂದಿ ರೈತರನ್ನು ನ್ಯಾಯಾಂಗ ಬಂದನಕ್ಕೆ ತಳ್ಳಿದರು.

ಪೋಲಿಸರು ಲಾಠಿ ಚಾರ್ಜ್ ಮಾಡಿದ್ದನ್ನು ಶನಿವಾರ ದಾವಣಗೆರೆಯಲ್ಲಿ ಕೃಷಿ ಸಚಿವ ರವೀಂದ್ರನಾಥ್ ಸಮರ್ಥಿಸಿಕೊಂಡರು. ರೈತರು ಸಂಯಮದಿಂದ ವರ್ತಿಸಬೇಕೆತ್ತಿಂದು ಹೇಳಿದರು. ಕಳೆದ ವರ್ಷ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.ಅದಾದ ಒಂದು ವಾರಕ್ಕೆ ಇದೇ ಸಚಿವರ ಪಕ್ಕದ ಕ್ಶೇತ್ರದ ಇಬ್ಬರು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೇ ಕೃಷಿ ಸಚಿವರು ಹೇಳಿದ್ದೇನು ಗೊತ್ತೇ? ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’. ಇವರು ನಮ್ಮ ಕೃಷಿ ಸಚಿವರು!
ನಾಡಿಗೇ ಅನ್ನ ನೀಡುವ ರೈತ ಅಷ್ಟು ನಿಕೃಷ್ಟನೇ? ಅವರೇನು ಸಮಾಜಘಾತುಕ ಶಕ್ತಿಗಳೇ? ಪೋಲಿಸರ ದೃಷ್ಟಿಯಲ್ಲಿ ಕ್ರಿಮಿನಲ್ಸ್ ಗೂ ರೈತರಿಗೂ ವ್ಯತ್ಯಾಸವೇ ಇಲ್ಲವೇ? ಗೃಹಮಂತ್ರಿಗಳೇ ಉತ್ತರಿಸಬೇಕು. ”ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಔದಾರ್ಯವಾಗಿ ಮಾತನಾಡಿ ಬೀದಿಯಲ್ಲಿ ಹೊಡೆಸ್ತಾರೆ”ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಹೊಸ್ತಿಲಲ್ಲಿರುವಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರು ನಡೆಸಿದರು. ಆ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಲಿದೆ.

ರೈತರು ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆ, ಶೋಷಣೆ, ಮಾರುಕಟ್ಟೆ ತಾರತಮ್ಯ...ಇತ್ಯಾದಿಗಳ ಬಗ್ಗೆ ಆಳುವವರ ಮುಂದೆ, ಆಧಿಕಾರಿಗಳ ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿದ್ದಾರೆ. ಆದರೆ ಅವರಿಗೆ ಪುರುಸೊತ್ತಿಲ್ಲ. ಯಾರನ್ನಾದರೂ ಮಾತುಕತೆಗೆ ಕಳುಹಿಸುವ ವ್ಯವಧಾನವಿಲ್ಲ. ರೈತರ ಮೊರೆ ಅರಣ್ಯ ರೋಧನವಾಗುತ್ತಿದೆ.

ಉಳ್ಳವರಿಗೆ ತಮ್ಮ ಅತ್ಯುನ್ನತಿಗಾಗಿ ರೈತರ ಫಲವತ್ತಾದ ಭೂಮಿಯೇ ಬೇಕಾಗಿದೆ. ವಿಶೇಷ ಅರ್ಥಿಕ ವಲಯವನ್ನೇ ತೆಗೆದುಕೊಳ್ಳಿ; ಅಲ್ಲೆಲ್ಲಾ ವಶಪಡಿಸಿಕೊಂಡ, ವಶಪಡಿಸಿಕೊಳ್ಳುತ್ತಿರುವ ಭೂಮಿಯೆಲ್ಲವೂ ಫಲವತ್ತಾದ ಭೂಮಿಯೇ. ಯಾಕೆ ಇವರಿಗೆ ಒಣಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಗುವುದಿಲ್ಲವೇ? ಹೀಗೆ ಕೃಷಿ ಭೂಮಿಯೆಲ್ಲಾ ಕೈಗಾರಿಕ ವಲಯಗಳಾಗಿ, ವಸತಿನಿಲಯಗಳಾಗಿ ಬದಲಾದರೆ ಭವಿಷ್ಯದಲ್ಲಿ ಆಹಾರ ಭದ್ರತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರ ಜೊತೆಗೆ ಮೂಡುವ ಬಹು ಮುಖ್ಯ ಪ್ರಶ್ನೆ ಎಂದರೆ ನಮಗೆ ಯಾವ ರೀತಿಯ ಅಬಿವೃದ್ಧಿ ಬೇಕು? ಅಬಿವೃದ್ಧಿ ತಂದಿತ್ತ ಸಮಸ್ಯೆಗಳು ಈಗ ಕೊಪೆನ್ ಹೆಗನ್ ನಲ್ಲಿ ನಡೆಯುತ್ತಿರುವ ’ಹವಾಮಾನ ವೈಪರಿತ್ಯ ಶ್ರ‍ಂಗ ಸಭೆ’ಯಲ್ಲಿ ಚರ್ಚಿತವಾಗುತ್ತಲಿದೆ.

ಬಳ್ಳಾರಿಗೆ ಬನ್ನಿ; ಇಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳಿವೆ. ನಗರದ ಕಂಟೋನ್ಮೆಂಟ್ ಬಳಿ ಇರುವ ಐತಿಹಾಸಿಕ ವಿಮಾನ ನಿಲ್ದಾಣ. ಇದು ಎರಡನೇ ಮಹಾಯುದ್ದ ಕಾಲದಲ್ಲಿ ವಾಯುನೆಲೆಯಾಗಿ ಬಳಕೆಯಾಗಿದ್ದ ವಿಮಾನ ನಿಲ್ದಾಣ. ಇನ್ನೊಂದು ನಗರದಿಂದ ೪೦ ಕಿ.ಮೀ ದೂರದಲ್ಲಿರುವ ತೋರಣಗಲ್ಲಿರುವ ಜಿಂದಾಲ್ ಏರ್ ಪೋರ್ಟ್. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆ ಹಾಗು ಬೆಳೆಯುತ್ತಿರುವ ಕೈಗಾರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೆಯ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆಸಿ ನಗರದಿಂದ ೧೨ ಕಿ.ಮೀ ದೂರದಲ್ಲಿರುವ ಪಾಪಿನಾಯಕನಹಳ್ಳಿಯನ್ನು ಸೂಕ್ತ ಪ್ರದೇಶವೆಂದು ೧೯೯೬ರಲ್ಲಿ ಎಂ.ಪಿ.ಪ್ರಕಾಶ್ ಅಧಿಕಾರವಧಿಯಲ್ಲಿ ಗುರುತಿಸಲಾಗಿತ್ತು. ಆದರೆ ಅದಕ್ಕೆ ಚಾಲನೆ ದೊರೆತಿರಲಿಲ್ಲ.

ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಪಿನಾಯಕಹಳ್ಳಿಯ ಒಣಭೂಮಿಯನ್ನು ಬಿಟ್ಟು ಚಾಗನೂರು, ಸಿರಿವಾರದ ನೀರಾವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನಾರ್ಧನ ರೆಡ್ಡಿ ಆದೇಶ ನೀಡಿದರು. ’ವಿಜಯನಗರ ಅರ್ಬನ್ ಡೆವಲಪ್ ಮೆಂಟ್ ಏರಿಯಾ’ ದೊಳಗೆ ಈ ಜಮೀನು ಬರುತ್ತದೆಯೆಂಬುದು ರೆಡ್ಡಿಗಳ ವಾದ. ಇದನ್ನು ವಿರೋಧಿಸಿ ರೈತರು ಕಳೆದ ಪೆ.೨೪ರಂದು ಶಾಂತಿಯುತ ಬೃಹತ್ ಮೆರವಣಿಗೆ ನಡೆಸಿದರು. ಆಗ ಪೋಲಿಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ಅದರೂ ರೈತರು ಧೃತಿಗೆಡದೆ ಪ್ರಭುತ್ವದ ವಿರುದ್ಧ ಹೊರಾಡುತ್ತಲೇ ಬರುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ’ನರ್ಮದಾ ಬಚಾವೋ’ ಆಂದೋಲನದ ರೂವಾರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ನ.೧೦ರಂದು ಚಾಗನೂರು, ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರೊಡನೆ ಆಪ್ತ ಚರ್ಚೆ ನಡೆಸಿದ್ದರು.

ಈಗ ಮತ್ತೆ ರೈತರ ವಿರೋಧದ ನಡುವೆ, ಅವರನ್ನೆಲ್ಲಾ ಊರ ಹೊರಗಿಟ್ಟು, ಪೋಲಿಸ್ ಸರ್ಪಗಾವಲಿನಲ್ಲಿ ಸರಕಾರ ಸರ್ವೆ ಕಾರ್ಯ ಮುಗಿಸಿದೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಲಾಠಿ ಹಿಡಿದು ಹಸಿರು ಶಾಲು ಹಾಕಿದ ರೈತರನ್ನು ಬೆದರಿಸುತ್ತಿದ್ದಾರೆ. ಅಧಿಕಾರ ವರ್ಗ ಎಂದೂ ರೈತ ಪರವಾಗಿರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಓಟು ಹಾಕಿದವರ ಋಣದಲ್ಲಿರಬೇಕಲ್ಲವೇ? ಪಾಪ ಅವರಿಗೆ ಮರೆವಿನ ರೋಗ!

ಮುಂದೇನು? ಈಗ ಅವರ ಬೆಂಬಲಕ್ಕೆ ಜನಪರ ಸಂಘಟನೆಗಳು ಮುಂದಾಗಬೇಕು. ನಾಡು-ನುಡಿ, ನೆಲ-ಜಲ ಸಂರಕ್ಷಣೆಗಾಗಿ ಪಣತೊಟ್ಟಿರುವ ಹಲವು ಸಂಘಟನೆಗಳು ನಮ್ಮಲ್ಲಿವೆ.ಅವು ರೈತರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅವೆಲ್ಲಾ ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ಬರಲು ಸಾಧ್ಯವೇ?. ’ರೈತ ಸಂಘ’ ಮತ್ತೆ ಮೈಕೊಡವಿ ನಿಲ್ಲಬೇಕು. ಒಟ್ಟಾಗಬೇಕು.

ಅಷ್ಟಕ್ಕೂ ರೆಡ್ಡಿಗಳಿಗೆ ಈ ಭೂಮಿಯೇ ಯಾಕೆ ಬೇಕು? ಸ್ಥಳಿಯರು ಹೇಳುವ ಪ್ರಕಾರ ಚಾಗುವಾರ ಮತ್ತುಸಿರಿವಾರದ ಸುತ್ತಮುತ್ತಲಿನ ಸುಮಾರು ೨೮೦ ಎಕ್ರೆ ಜಮೀನನ್ನು ರೆಡ್ಡಿಗಳು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರಂತೆ. ಇಲ್ಲಿ ವಿಮಾನ ನಿಲ್ದಾಣ ಬಂದರೆ ಈ ಜಮೀನಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಬಹುದೆಂಬುದು ಅವರ ದೂರಾಲೋಚನೆ. ಅವರ ದೂರಾಲೋಚನೆ ರೈತರ ಪಾಲಿಗೆ ದುರಾಲೋಚನೆಯಾಗಿದೆ.

ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಎಕ್ರೆಗೆ ೧೨ ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂಬುದು ಸರಕಾರದ ಸಮರ್ಥನೆ. ಆದರೆ ದುಡ್ಡುತಗೊಂಡು ರೈತರೇನು ಮಾಡಬಲ್ಲರು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರೆಲ್ಲಾ ಎಕ್ರೆಗೆ ಕನಿಷ್ಟ ೫೦ ಲಕ್ಷದಿಂದ ಎರಡು ಕೋಟಿ ತನಕ ಪಡೆದುಕೊಂಡಿದ್ದರು. ಅದರಲ್ಲಿ ಬಹಳಷ್ಟು ಮಂದಿ ದುಂದುವೆಚ್ಚ ಮಾಡಿ ಇರುವ ದುಡ್ಡನ್ನೆಲ್ಲಾ ಕಳೆದುಕೊಂಡು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದಾರೆ.

ದುಡ್ಡು ಕರಗುತ್ತದೆ. ಅದರೆ ಭೂಮಿ ಹಾಗಲ್ಲ; ಅದು ಮೂಲಧನ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಲೇ ಹೋಗುತ್ತದೆ. ಅದರ ಬಡ್ಡಿಯಿಂದಲೇ ರೈತ ಜೀವನ ನಿರ್ವಹಣೆ ಮಾಡುತ್ತಾನೆ. ತನಗೆ ಅನ್ನ ನೀಡುವ ಭೂಮಾತೆಯನ್ನು ಆತ ದೇವರೆಂದು ಪೂಜಿಸುತ್ತಾನೆ; ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾನೆ. ಮಣ್ಣು ಮಾರಿ ದುಡ್ಡು ಬಾಚಿಕೊಳ್ಳುವವರಿಗಿದು ಅರ್ಥವಾಗದ ವಿಚಾರ.