ಭಾರತಿಯರ ಬದುಕಿನೊಳಗಿನ ಮಂದಾಕಿನಿಯರು.
ನದಿಗಳ ಮೋಹಕ್ಕೆ
ಬಿದ್ದವಳು ನಾನು. ಅದಕ್ಕೆ ಕಾರಣವಿದೆ. ನಾನು ಹುಟ್ಟಿದ್ದು ಬೆಳೆದದ್ದು,ಕೊನೆಗೆ ಬಯಸಿ ಬಯಸಿ ಪುಟ್ಟದೊಂದು
ಕುಟೀರವನ್ನು ಕಟ್ಟಿಕೊಂಡದ್ದು ಕೂಡ ನದಿ ದಂಡೆಯ ಮೇಲೆಯೇ ನದಿದಂಡೆಯೊಂದರ ಮೇಲಿರುವ ಬೃಹತ್ ಮರವೊಂದರ
ಮೇಲೆ ಕಲಾತ್ಮಕವಾಗಿ ಕಟ್ಟಿರುವ ಟ್ರಿ ಹಟ್ ಒಂದರ ಪುಟ್ಟ ಕೋಣೆಯೊಂದರಲ್ಲಿ ನನ್ನ ಕನಸುಗಳೆಲ್ಲ ಜೋಕಾಲಿಯಾಡುತ್ತಿರುತ್ತವೆ.
ನಾ ಅಲೆಮಾರಿ ಥೇಟ್
ನದಿಯಂತೆ.
ದೇವರನ್ನು ನಾವಿರುವಲ್ಲಿಗೇ
ಕರೆಸಿಕೊಳ್ಳಬಹುದು. ಮನಸ್ಸಿಗೆ ಆಶಕ್ತಿಯಿದೆ. ಆದರೆ ನದಿಯನ್ನು ಹಾಗೆ ಕರೆಸಲಾಗದು. ಅದು ಇರುವಲ್ಲಿಗೇ
ನಾವು ಹೋಗಬೇಕು. ಅದಕ್ಕೇ ಪುಣ್ಯಸ್ನಾನ ಎಂಬ ಪರಿಕಲ್ಪನೆಯ ಬಗ್ಗೆ ನನಗೆ ಭಕ್ತಿ. ಆದರಗಳಿವೆ. ಭಾರತದ
ಉದ್ದಗಲಕ್ಕೂ ಹರಿಯುವ ಹಲವಾರು ನದಿಗಳನ್ನು ಹುಡುಕಿಕೊಂಡು ಹೋಗಿದ್ದೇನೆ. ಹಿಮಾಲಯದಲ್ಲಿ ಹುಟ್ಟುವ ಬಹುತೇಕ
ನದಿಗಳು ಪುಣ್ಯನದಿಗಳೆಂದು ಭಕ್ತರು ಭಾವಿಸುತ್ತಾರೆ. ಅದರಲ್ಲಿ ಮಿಂದು ಪುನೀತರಾಗುತ್ತಾರೆ. ನಾನು ಕೂಡಾ
ಕೆಲವು ನದಿಗಳಲ್ಲಿ ಸ್ನಾನ ಮಾಡಿದ್ದೇನೆ. ಕೆಲವು ನದಿಗಳ ದಡಲ್ಲಿ ಒಂದರೆಗಳಿಗೆಯಾದರೂ ಕಣ್ಮುಚ್ಚಿ ಕುಳಿತಿದ್ದೇನೆ.
ಅವುಗಳ ಮಡಿಲಲ್ಲಿ ದಿವ್ಯಶಾಂತಿಯನ್ನು ಅನುಭವಿಸಿದ್ದೇನೆ.
ನಾಗರೀಕತೆಗಳು ಅರಳಿದ್ದು
ನದಿದಂಡೆಗಳ ಮೇಲೆಯೇ. ಅದಕ್ಕೇ ಅವುಗಳನ್ನು ಜೀವನದಿಗಳು ಎಂದು ಕರೆಯುತ್ತಾರೆ.ನದಿಯ ಜಾಡು ಹಿಡಿದು ಸುಮ್ಮನೆ
ನಡೆಯುತ್ತಾ ಹೋದರೆ ಮನುಷ್ಯನ ಭೂತ, ವರ್ತಮಾನ, ಭವಿಷ್ಯತ್ ಗಳು ಮನಃಪಟಲದಲ್ಲಿ ತೆರೆದುಕೊಳ್ಳುತ್ತಾ
ಹೋಗುತ್ತದೆ
ಇಂತಹ ಶಾಂತ ನದಿಗಳ
ದಡದಲ್ಲಿ ನಡೆಯುವ ಗದ್ದಲದ ಜನನಿಭಿಡ ಜಾತ್ರೆಗಳನ್ನೂ ದೂರದಿಂದಲೇ ಗಮನಿಸಿದ್ದೇನೆ. ಅವುಗಳ ಬಗ್ಗೆ ತಿಳಿದುಕೊಂಡಿದ್ದೇನೆ.
ಅಂತಹ ಜನಜಾತ್ರೆಯ ಮುಕುಟಮಣಿಯಾದ ಕುಂಭಮೇಳದ ಬಗ್ಗೆ ನಾನೀಗ ಹೇಳ ಹೊರಟಿದ್ದೇನೆ.
ಕುಂಭಮೇಳ, ಹಾಗೆಂದರೇನು?
ಮಡಕೆಗಳ ಮೇಳವೇ? ಗಂಗೆಯಿಂದ ಕಾವೇರಿತನಕ ಹಿಮಾಲಯದಿಂದ ಸಹ್ಯಾದ್ರಿಯತನಕ ಉತ್ತರದಕ್ಷೀಣ ಪೂರ್ವಪಶ್ಚಿಮಗಳನ್ನು
ಅಷ್ಟೇಕೆ ಇಡೀ ಜಗತ್ತನ್ನು ತನ್ನತ್ತ ಸೆಳೆದುಕೊಳ್ಳುವ ಈ ಮಹಾಜಾತ್ರೆಗೆ ಅದ್ಯಾವ ಶಕ್ತಿಯಿದೆ? ಅದಕ್ಕಾಗಿ
ನಾವು ಪುರಾಣದತ್ತ ದೃಷ್ಟಿ ಹೊರಳಿಸಬೇಕು.
ಹಿಂದೆ ಕೃತಯುಗದಲ್ಲಿ
ದೇವದಾನವರು ಒಟ್ಟಾಗಿ ಸೇರಿ ಸಮುದ್ರಮಂಥನ ಮಾಡುತ್ತಾರೆ. ಆಗ ಸಮುದ್ರ ಮಧ್ಯೆಯಿಂದ ಲಕ್ಷ್ಮಿ ಉದ್ಭವಿಸುತ್ತಾಳೆ.
ಅವಳ ಕೈಯ್ಯಲ್ಲಿ ಅಮೃತಕಲಶವಿರುತ್ತದೆ. ಆ ಅಮೃತವನ್ನು ಕುಡಿದವರು ಚಿರಂಜೀವಿಗಳಾಗುತ್ತಾರೆ ಎಂಬುದು
ದೇವ ದಾನವರ ನಂಬಿಕೆ. ದಾನವರನ್ನು ಅಮೃತದಿಂದ ವಂಚಿಸುವ ಉದ್ದೇಶದಿಂದ ಶ್ರೀಮನ್ನಾರಾಯಣನು ಮೋಹಿನಿಯ
ರೂಪವನ್ನು ತಾಳಿ ಅದನ್ನು ದೇವತೆಗಳಿಗೆ ಮಾತ್ರ ಹಂಚುತ್ತಾಳೆ. ಆಗ ದೇವತೆಗಳ ಈ ದುರ್ಭುದ್ಧಿಯನ್ನು ಅರಿತ
ರಾಹು ಎಂಬ ದಾನವ ದೇವತೆಗಳ ಸರತಿಯಲ್ಲಿ ಕುಳಿತು ಅಮೃತಕ್ಕಾಗಿ ಕೈಯ್ಯೊಡ್ಡುತ್ತಾನೆ. ಇದನ್ನರಿತ ನಾರಾಯಣ
ಅಮೃತಕಲಶವನ್ನು ದೇವೇಂದ್ರನ ಮಗನಾದ ಜಯಂತನ ಕೈಯ್ಯಲ್ಲಿಟ್ಟು ರಾಹುವಿನ ತಲೆಯನ್ನು ಕತ್ತರಿಸುತ್ತಾನೆ.
ಕತ್ತರಿಸಲ್ಪಟ್ಟ ರಾಹುವಿನ ಮುಂಡವೇ ಕೇತು ಎಂಬ ಇನ್ನೊಬ್ಬ ದಾನವನಾಗುತ್ತಾನೆ.
ಇತ್ತ ಜಯಂತ ಅಮೃತ
ತುಂಬಿದ ಕಲಶವನ್ನು ತೆಗೆದುಕೊಂಡು ಆಕಾಶಮಾರ್ಗವಾಗಿ ಸ್ವರ್ಗದತ್ತ ಪಯಣಿಸುತ್ತಾನೆ. ಹಾಗೆ ಹೋಗುವಾಗ
ದಾರಿಮಧ್ಯೆ ಆತ ವಿಶ್ರಾಂತಿಗೆಂದು ನಾಲ್ಕು ಜಾಗಗಳಲ್ಲಿ ತಂಗುತ್ತಾನೆ. ಆ ಜಾಗಗಳೇ, ಮಹಾರಾಷ್ಟ್ರದ ಗೋದಾವರಿ
ನದಿ ದಂಡೆಯ ಮೇಲಿರುವ ನಾಸಿಕ್. ಮಧ್ಯಪ್ರದೇಶದ ಕ್ಷಿಪ್ರಾ ನದಿ ದಂಡೆಯ ಮೇಲಿರುವ ಉಜ್ವೈನಿ. ಉತ್ತರಪ್ರದೇಶದಲ್ಲಿರುವ
ಗಂಗಾ, ಯಮುನಾ, ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ದಂಡೆಯ ಮೇಲಿರುವ ಪ್ರಯಾಗ ಮತ್ತು ಉತ್ತರಾಖಂಡದ ಗಂಗಾ ನದಿ ದಂಡೆಯ ಮೇಲಿರುವ
ಹರಿಧ್ವಾರ,
ಇದನ್ನು ಬರೆಯುತ್ತಿರುವಾಗಲೇ
ಹೊಳೆದಿದ್ದು; ಹರಿದ್ವಾರವನ್ನು ದೇವಭೂಮಿಗೆ ಪ್ರವೇಶಿಸುವ ಹೆಬ್ಬಾಗಿಲು ಎಂದು ಆಸ್ತಿಕರು ಕರೆಯುತ್ತಾರೆ..
ನಮ್ಮ ಸ್ವರ್ಗದ ಕಲ್ಪನೆಯಿರುವುದು ಹಿಮಾಲಯದಲ್ಲಿ. ಹಿಮಾಲಯದ ಅಂಚಿನಲ್ಲಿರುವುದು ನಮ್ಮ ಉತ್ತರಾಖಂಡ
ರಾಜ್ಯ. ಭಾರತೀಯರ ಪರಮಪುಣ್ಯಕ್ಷೇತ್ರ ಗಳಾದ ಚಾರ್ ಧಾಮವಿರುವುದು, ಕೇದಾರನಾಥ, ಬದ್ರಿನಾಥ, ಗಂಗೋತ್ರಿ,
ಯಮುನೋತ್ರಿ ಇರುವುದು ಇದೇ ಉತ್ತರಾಖಂಡ ರಾಜ್ಯದಲ್ಲಿ. ಈ ರಾಜ್ಯವನ್ನು ದೇವಭೂಮಿ ಎಂದು ಕರೆಯುತ್ತಾರೆ. ಉತ್ತರಾಖಂಡದಲ್ಲಿ ಎಲ್ಲೇ ಸಂಚರಿಸಲಿ, ಅಲ್ಲಿ ನಿಮಗೆ’ ದೇವಭೂಮಿಗೆ
ಸ್ವಾಗತ’ ಎಂಬ ಫಲಕ ಕಾಣಸಿಗುತ್ತದೆ. ಹರಿದ್ವಾರದಿಂದ ಈ ಪುಣ್ಯಕ್ಷೇತ್ರಗಳಿಗೆ ಹೋಗುವುದು ಅತ್ಯಂತ ಕಠಿಣವಾದ
ಏರು ಹಾದಿಯಲ್ಲಿ. ಅಂದರೆ ನಮ್ಮ ಪಶ್ಚಿಮ ಕರಾವಳಿಯ ಹಿಂದೂಮಹಾಸಾಗರದಲ್ಲೆಲ್ಲೋ ಸಮುದ್ರ ಮಂಥನ ನಡೆದು
ಅಲ್ಲಿಂದ ಅಮೃತವನ್ನು ಸ್ವರ್ಗಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಪುರಾಣವನ್ನು ಹಣೆದಿರಬಹುದೇ?! ಗೊತ್ತಿಲ್ಲ.
ಆದರೆ ಹಾಗೆ ತರ್ಕಿಸಲು ಅವಕಾಶಗಳಿವೆ.
ಸಾಮನ್ಯರ ತಿಳುವಳಿಕೆಯ
ಪ್ರಕಾರ ಕುಂಭಮೇಳವೆಂಬುದು ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಜನಜಾತ್ರೆ. ಆದ್ರೆ ಇದು ಪೂರ್ಣ
ಸತ್ಯವಲ್ಲ. ಪ್ರತಿವರ್ಷವೂ ಜನವರಿ ತಿಂಗಳಿನಲ್ಲಿ ಮಾಘಮಾಸದಲ್ಲಿ
ಮಾಘ ಮೇಳ ನಡೆಯುತ್ತದೆ. ಇದೂ ಕುಂಭಮೇಳವೇ. ಹಾಗೆಯೇ ಮೂರು ವರ್ಷಗಳಿಗೊಮ್ಮೆ ವಿಶೇಷ ಕುಂಭಮೇಳವೂ ಜರಗುತ್ತದೆ.
ಆರುವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಅರ್ಧ ಕುಂಭಮೇಳ ಎಂದು ಕರೆಯುತ್ತಾರೆ. ಇದು ಹರಿದ್ವಾರ
ಮತ್ತು ಪ್ರಯಾಗಗಳಲ್ಲಿ ಮಾತ್ರ ಜರಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಪ್ರಯಾಗದಲ್ಲಿ ಅರ್ಧ ಕುಂಭಮೇಳ
ನಡೆಯುತ್ತದೆ,
ಹನ್ನೆರಡು ವರ್ಷಗಳಿಗೊಮ್ಮೆ
ನಡೆಯುವ ಪೂರ್ಣಕುಂಬ ಮೇಳ ನಾಸಿಕ್,ಉಜ್ಜೈನಿ, ಪ್ರಯಾಗ
ಮತ್ತು ಹರಿಧ್ವಾರಗಳಲ್ಲಿ ನಡೆಯುತ್ತದೆ. ಇದಲ್ಲದೆ ಹನ್ನೆರಡು ಕುಂಭಮೇಳಗಳ ನಂತರ ಅಂದರೆ ೧೪೪ ವರ್ಷಗಳಗಳ
ನಂತರ ಮಹಾಕುಂಭಮೇಳ ಜರಗುತ್ತದೆ. ಇದು ನಡೆಯುವುದು ಪ್ರಯಾಗದಲ್ಲಿ. ತ್ರಿವೇಣಿ ಸಂಗಮದಲ್ಲಿ. ಇಲ್ಲಿ
೨೦೧೩ರಲ್ಲಿ ಮಹಾಕುಂಭಮೇಳ ನಡೆದಿತ್ತು. ಇದನ್ನು ನೋಡಿದವರು ಭಾಗವಹಿಸಿದವರು ಮಹಾಪುಣ್ಯವಂತರು. ಯಾಕೆಂದರೆ
ಇನ್ನೊಂದು ಇಂತಹದೇ ಮಹಾಕುಂಭಮೇಳ ಬರುವುದು ೨೧೫೭ನೇ ಇಸವಿಯ ತನಕ ಕಾಯಬೇಕಾಗುತ್ತದೆ. ಆಗ ಎರಡು ತಲೆಮಾರು
ಉರುಳಿರುತ್ತದೆ. ಅಂದರೆ ನನ್ನ ಮೊಮ್ಮಗಳೂ ಇದನ್ನು ನೋಡಲಾರಳು. ಮರಿಮಗಳು ನೋಡಲೂಬಹುದು!
ತ್ರಿವೇಣಿ
ಸಂಗಮ.
ನಾಸಿಕ್, ಉಜೈನಿ,
ಹರಿಧ್ವಾರಗಳಲ್ಲಿ ನಡೆದರೂ ಕುಂಭಮೇಳಕ್ಕೆ ಸಂವಾಧಿಪದವಾಗಿ ಪ್ರಯಾಗವೇ ಯಾಕಿದೆ? ಯಾಕೆಂದರೆ ಇಲ್ಲಿ ಸಮಸ್ತ
ಭಾರತೀಯರು ಪವಿತ್ರ ನದಿಗಳೆಂದು ಪೂಜಿಸುತ್ತಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಿಸುತ್ತಿರುವ
ಪುಣ್ಯ ಕ್ಷೇತ್ರವಿದು
ಪ್ರಯಾಗ ಎಂಬುದರ
ಶಬ್ದಶಃ ಅರ್ಥವನ್ನು ನೋಡಿದರೆ ಸಂಗಮ ಎಂದಾಗುತ್ತದೆ. ಭಾರತದಲ್ಲಿ ಪವಿತ್ರವಾದ ಐದು ಸಂಗಮಕ್ಷೇತ್ರಗಳಿವೆ. ಅವೇ ದೇವಪ್ರಯಾಗ, ಕರ್ಣಪ್ರಯಾಗ,
ರುದ್ರಪ್ರಯಾಗ. ನಂದ ಪ್ರಯಾಗ ಮತ್ತು ವಿಷ್ಣುಪ್ರಯಾಗ. ಇವೆಲ್ಲವೂ ವಿಷ್ಣುಪ್ರಯಾಗದಲ್ಲಿ ಬದರಿಯಿಂದ
ಬರುವ ಅಲಕಾನಂದ ಮತ್ತು ದವಳಗಿರಿಯಿಂದ ಹರಿದು ಬರುವ ದವಳಿಗಂಗಾದ ಸಮಾಗಮವಾಗುತ್ತದೆ. ಅದರಿಂದ ಹತ್ತಾರು
ಕಿ.ಮೀಗಳ ಕೆಳಗೆ ಕರ್ಣಪ್ರಯಾಗದಲ್ಲಿ ಪಿಂಡಾರಿ ಹಿಮಪರ್ವತದಿಂದ ಬರುವ ಪಿಂಡಾರಿ ನದಿಯೊಡನೆ ಅಲಕಾನಂದೆಯ
ಸಂಗಮವಾಗುತ್ತದೆ. ಅದರಿಂದ ಇನ್ನೂ ಕೆಳಗೆ ಬಂದಾಗ ರುದ್ರಪ್ರಯಾಗ ಸಿಗುತ್ತದೆ. ಇಲ್ಲಿ ಅಲಕಾನಂದ ಮತ್ತು
ಭಾಗೀರಥಿ ನದಿಯ ಸಂಗಮವಾಗುತ್ತದೆ. ಮುಂದೆ ಸಿಗುವುದೇ ದೇವಪ್ರಯಾಗ ಇಲ್ಲಿ ಮಂದಾಕಿನಿ ಮತ್ತು ಅಲಕಾನಂದೆಯ
ಸಂಗಮವಾಗುತ್ತದೆ. ಇಲ್ಲಿಗೆ ಬರುವಾಗಲೇ ಮಂದಾಕಿನಿ ನಂದಪ್ರಯಾಗದಲ್ಲಿ ನಂದಾಕಿನಿ ನದಿಯನ್ನು ತನ್ನೊಳಗೆ
ಐಕ್ಯ ಮಾಡಿಕೊಂಡಿರುತ್ತಾಳೆ. ತನ್ನೊಡಲಲ್ಲಿ ಹಲವಾರು ಹಿಮನದಿಗಳನ್ನು ತನ್ನೊಳಗೆ ಐಕ್ಯಮಾಡಿಕೊಂಡು ಗಂಭೀರವಾಗಿ
ಹರಿದು ಬಂದ ಅಲಕಾನಂದ ದೇವಪ್ರಯಾಗದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮುಂದೆ ಗಂಗಾ ಮಾತೆಯೆಂಬ
ನಾಮಧೇಯವನ್ನು ಪಡೆದುಕೊಂಡು ಬಯಲುಸೀಮೆಯನ್ನು ಹಸನುಗೊಳಿಸಲು ಹಳ್ಳ ಕೊರಕಲುಗಳಲ್ಲಿ ಸಾಗುತ್ತಾ ಹರಿಧ್ವಾರದತ್ತ
ಇಳಿದುಬರುತ್ತಾಳೆ. ಅಂದರೆ ಅಲಕಾನಂದೆಯೇ ಗಂಗಾನದಿಯೇ?
ಉತ್ತರಪ್ರದೇಶದ ಪ್ರಯಾಗದಲ್ಲಿ
ಗಂಗಾ, ಯಮುನಾ ನದಿಗಳ ಸಂಗಮ ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಯಮುನಾ ನದಿಯ ನೀರು ಕಪ್ಪು
ಛಾಯಿಂದ ಕೂಡಿರುತ್ತದೆ. ಕೃಷ್ನ ಜಲಕ್ರೀಡೆಯಾಡಿದ್ದ, ಕಾಳಿಂಗಮರ್ಧನ ಮಾಡಿದ ನದಿಯ ಬಣ್ಣ ನಿಮಗೆ ನೆನಪಾಗಬಹುದು
ಗಂಗೆಯದ್ದು ಬೂದಿ ಮಿಶ್ರಿತ ಹಸುರು ಬಣ್ಣ. ಆದರೆ ಭೌತಿಕವಾಗಿ ನಮಗೆ ಸರಸ್ವತಿ ನದಿ ಗೋಚರವಾಗುವುದಿಲ್ಲ.
ಅದು ಗುಪ್ತಗಾಮಿನಿಯೆಂದು ಆಸ್ತಿಕರು ನಂಬುತ್ತಾರೆ. ಗಂಗಾನದಿ ಉಗಮಸ್ಥಳವಾದ ಗಂಗೋತ್ರಿಗೆ ಯಾರು ಬೇಕಾದರೂ
ಹೋಗಿ ಆಕೆಯ ದರ್ಶನ ಪಡೆಯಬಹುದು. ಹಾಗೆಯೇ ಯಮುನಾನದಿಯ ಉಗಮಸ್ಥಳವಾದ ಯಮುನೋತ್ರಿಗೂ ಹೋಗಬಹುದು. ಆದರೆ
ಸರಸ್ವತಿಯ ಉಗಮ ಸ್ಥಾನವನ್ನು ಎಲ್ಲಿ ಹುಡುಕುವುದು? ಋಗ್ವೇದದಲ್ಲಿ ಉಲ್ಲೇಖಿತವಾದ ಈ ನದಿ ರಾಜಸ್ಥಾನದ
ಮರುಭೂಮಿಯಲ್ಲಿ ಎಲ್ಲಿಯೋ ಒಂದು ಕಡೆ ಮಾಯವಾಗಿದೆ ಅಥವಾ ಭತ್ತಿಹೋಗಿದ್ದಾಳೆ ಅಂತ ಭೂವಿಜ್ನಾನಿಗಳು,
ಸಂಶೋಧಕರು ಅಭಿಪ್ರಾಯ ಪಡುತ್ತಿದ್ದಾರೆ. ಈಗಿನ ಗಗ್ಗರ್
ನದಿಯೇ ಆಗಿನ ಸರಸ್ವತಿ ನದಿ ಎಂದು ವಾದಿಸುವವರೂ ಇದ್ದಾರೆ. ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆ ಯಾವಾಗಲೂ
ಒಂದು ಕುತೂಹಲ, ಜಿಜ್ನಾಸೆ ಭಾರತಿಯರಲ್ಲಿ ಸದಾ ಜಾರಿಯಲ್ಲಿದೆ.
ವರ್ಷದಲ್ಲಿ ಕನಿಷ್ಟ
ಒಂದು ಬಾರಿಯಾದರೂ ಹಿಮಾಲಯ ಸುತ್ತವ ಹವ್ಯಾಸವುಳ್ಳ ನಾನು ಭಾರತದ ಕೊನೆಯ ಗ್ರಾಮವಾದ ಉತ್ತರಾಖಂಡದ ಮಾನ
ಎಂಬ ಗ್ರಾಮಕ್ಕೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಅಲ್ಲಿ ಸರಸ್ವತಿ ನದಿಯನ್ನು ನಾನು ನೋಡಿದೆ.
ಚಾರ್ ಧಾಮಗಳಲ್ಲಿ ಒಂದಾದ ಬದೈ ಪುಣ್ಯಕ್ಷೇತ್ರ ಅಲಕಾನದಿಯ ದಂಡೆಯ ಮೇಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ
ಸಂಗತಿ. ಆ ಅಲಕೆಯ ಜಾಡುಹಿಡಿದು ಸುಮಾರು ಮೂರು ಕಿ.ಮೀ ಉತ್ತರಕ್ಕೆ ಹೋದರೆ ನಿಮಗೆ ಮಾನಗ್ರಾಮ ಸಿಗುತ್ತದೆ.
ಅಲ್ಲಿ ಅಲಕೆ ಪುಟ್ಟ ತೊರೆಯಂತೆ ಶಾಂತವಾಗಿ ಹರಿಯುತ್ತಿರುತ್ತಾಳೆ. ಆದರೆ ಪಕ್ಕದಲ್ಲೆಲ್ಲೋ ನದಿಯೊಂದು
ಭೋರ್ಗೆರೆಯುವ ಸದ್ದು ಕೇಳಿಸುತ್ತದೆ. ಏರು ಹಾದಿಯನ್ನು ಹತ್ತಿ ಹೋದರೆ ಎತ್ತರದ ಬೆಟ್ಟದೆದೆಯಿಂದ ನದಿಯೊಂದು
ದುಮ್ಮಿಕ್ಕಿ ಹರಿಯುತ್ತಿರುತ್ತದೆ. ಸ್ವಲ್ಪ ಇಳಿಜಾರಿನ ಸಮತಟ್ಟಾದ ಜಾಗದಲ್ಲಿ ನದಿಯ ಎರಡೂ ದಂಡೆಗಳನ್ನು
ಜೋಡಿಸಲು ಬೃಹತ್ ಕಲ್ಲನ್ನು ಸೇತುವೆಯ ಹಾಗೆ ಜೋಡಿಸಲಾಗಿತ್ತು. ಅದರ ಹೆಸರು ಭೀಮಫೂಲ್ ಅಂತೆ. ಆ ಸೇತುವೆಯ
ಹಿಂದೊಂದು ಕಥೆಯಿದೆ. ಧರ್ಮರಾಯನು ದ್ರೌಪದಿ ಮತ್ತು ತಮ್ಮಂದಿರೊಂದಿಗೆ ಸಶರೀರನಾಗಿ ಸ್ವರ್ಗದತ್ತ ಪಯಣ
ಬೆಳೆಸುತ್ತಿದ್ದಾಗ [ಸ್ವರ್ಗಾರೋಹಿಗೆ ಟ್ರಕ್ಕಿಂಗ್ ಇಲ್ಲಿಂದಲೇ ಆರಂಭವಾಗುತ್ತದೆ] ಇಲ್ಲಿಗೆ ತಲುಪಿದಾಗ
ಸರಸ್ವತಿ ನದಿಯ ಅಬ್ಬರವನ್ನು ನೋಡಿ ದ್ರೌಪದಿ ಬೆದರಿದಳಂತೆ ಅವಳಿಗೆ ದಾಟಲು ಅನುಕೂಲವಾಗುವಂತೆ ಬೀಮ
ಈ ಸೇತುವೆಯನ್ನು ನಿರ್ಮಿಸಿದನೆಂದು ಸ್ಥಳಪುರಾಣ ಹೇಳುತ್ತದೆ. ನದಿಯ ಅಬ್ಬರಕ್ಕೆ ಬೆದರಿ ದ್ರೌಪದಿ,’
ನೀನು ಅದೃಶ್ಯಳಾಗು ಎಂದು ಶಾಪಕೊಟ್ಟಳು’ ಎಂದು ಇನ್ನೊಂದು ಕಥೆಯೂ ಇದೆ. ‘ಇದು ಸರಸ್ವತಿ ನದಿ’ ಎಂಬ
ನಾಮಫಲಕವೂ ಅಲ್ಲಿದೆ. ಪ್ರವಾಸಿಗರು ಕೂಡಾ’ ಅಷ್ಟೊಂದು ನೀರು ದುಮ್ಮಿಕ್ಕುತ್ತದೆಯಲ್ಲಾ ಅದೆಲ್ಲಾ ಎಲ್ಲಿ
ಹೋಗುತ್ತದೆ?’ ಎಂದು ಅಚ್ಚರಿಯಿಂದಲೂ ಭಕ್ತಿ ಭಾವದಿಂದಲೂ ತುದಿಗಾಲಿನಲ್ಲಿ ನಿಂತು ಇಣುಕಿ ನೋಡುವುದನ್ನು
ಕಂಡಿದ್ದೇನೆ. ಅಲ್ಲಿಂದ ಬಂದ ನೀರು ಪುಟ್ಟ ಝರಿಯಂತೆ
ಪಕ್ಕದಲ್ಲಿರುವ ಅಲಕಾನಂದದ ಜೊತೆ ಕೂಡಿಕೊಳ್ಳುತ್ತದೆ.ಇದು ವೇದದಲ್ಲಿ ಉಲ್ಲೇಖಿತವಾದ ಸರಸ್ವತಿ ನದಿ
ಹೌದೋ ಅಲ್ಲವವೋ ಅದರೆ ಇಲ್ಲಿಗೆ ಬಂದ ಆಸ್ತಿಕರು ಈ ನದಿಯಲ್ಲೇ ಪರಮ ಪವಿತ್ರಳಾದ ಸರಸ್ವತಿ ನದಿಯನ್ನು
ಕಾಣುತ್ತರೆ! ಎಂದೂ ನಾಮಫಲಕವೂ ಅಲ್ಲಿದೆ.
ಗಂಗಾ, ಯಮುನಾ, ಸರಸ್ವತಿ
ನದಿಗಳ ಸಂಗಮ ಸ್ಥಳವೇ ತ್ರವೇಣಿ ಸಂಗಮ. ಇದು ಉತ್ತರಪರದೇಶ ರಾಜ್ಯದ ಅಲಹಾಬಾದ್ [ ಈಗ ಅದನ್ನು ಉತ್ತರಾಪ್ರದೇಶದ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅದನ್ನು ಪ್ರಯಾಗರಾಜ್ ಎಂದು ನಾಮಕರಣ ಮಾಡಿದ್ದಾರೆ] ನಗರದ ಹೊರವಲಯದಲ್ಲಿದೆ.
ನಾಗ ಸಾಧುಗಳು
ಕುಂಭಮೇಳವನ್ನು ಹೊರಗಿನಿಂದ
ನಿಂತು ನೋಡುವವರಿಗೆ ತಟ್ಟನೆ ಆಕರ್ಷಿಸುವುದು ಇದರಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವ ನಾಗ
ಸಾಧುಗಳು. ಯಾಕೆಂದರೆ ಇವರು ಸಂಪೂರ್ಣ ಬೆತ್ತಲೆಯಾಗಿರುತ್ತಾರೆ. ಮೈಗೆಲ್ಲಾ ಬೂದಿಯನ್ನು ಬಳಿದುಕೊಂಡಿರುತ್ತಾರೆ.
ಕೈಯ್ಯಲ್ಲಿ ತ್ರಿಶೂಲ, ಡಮರುಗವನ್ನು ಹಿಡಿದಿರುತ್ತಾರೆ, ಜಟಾಧಾರಿಯಾಗಿರುತ್ತರೆ. ಒಟ್ಟಿನಲ್ಲಿ ಶಿವನ
ಪ್ರತಿರೂಪದಂತೆ ಗೋಚರಿಸುತ್ತಾರೆ. ಇವರು ತಾಂತ್ರಿಕರಾದ ಕಾರಣ ಅನೇಕ ಪವಾಡಗಳನ್ನು ಪ್ರದರ್ಸಿಸುತ್ತಾರೆ.
ನಾಗ ಸಾಧುಗಳ ಹೊರತಾದ ಕುಂಭಮೇಳವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಯಾರೀ ನಾಗಸಾಧುಗಳು?
ಅವರನ್ನು ಯಾಕೆ ಹಾಗೆ ಕರೆಯುತ್ತಾರೆ? ಅವರ ವಿಷೇಶತೆಗಳೇನು? ಕುಂಭಮೇಳದಲ್ಲಿ ಅವರಿಗೇಕೆ ಅಗ್ರಸ್ಥಾನ?
ನಾಗಸಾಧುವಾಗಲು ಬಯಸುವ
ವ್ಯಕ್ತಿ ಸಂಪೂರ್ಣವಾಗಿ ಸಂಸಾರ ಬಂಧನದಿಂದ ಹೊರಬಂದಿರಬೇಕು. ತನ್ನಲ್ಲಿಗೆ ಬಂದ ವ್ಯಕ್ತಿಯನ್ನು ನಾಗಾಸಾಧು
ಗುರು ಅಂದರೆ ಮಂಡಲಾದೀಶ್ವರ ಆತನ ಪೂರ್ವಾಪರಗಳನ್ನು ಕಲೆ ಹಾಕುತ್ತಾರೆ.ತನ್ನ ಬಂಧುಬಾಂಧವರ ಜೊತೆ ಯಾವುದೇ
ಮೋಹಪಾಶಗಳಿಲ್ಲವೆಂಬುದು ಮನದಟ್ಟಾದರೆ ಅಂತವನನ್ನು ತನ್ನಲ್ಲಿರಿಸಿಕೊಂಡು ಆತನಿಗೆ ಆರರಿಂದ ಹನ್ನೆರಡು
ವರ್ಷಗಳವರೆಗಿನ ಕಠಿಣ ಬ್ರಹ್ಮಚರ್ಯದ ವ್ರತವನ್ನು ವಿಧಿಸುತ್ತಾನೆ. ಇದರಲ್ಲಿ ಗುರುವಿಗೆ ಸಂತೃಪ್ತಿಯೆನಿಸಿದರೆ
ಮಾತ್ರ ಆತನಿಗೆ ನಾಗ ದೀಕ್ಷೆಯನ್ನು ಕೊಡುತ್ತಾನೆ.
ದೀಕ್ಷೆಗೆ ಮೊದಲು ಹಲವು ವಿಧಿ ವಿಧಾನಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಬಹುಮುಖ್ಯವಾದುದು
ಕೇಶಮುಂಡನ ಮಾಡಿ ಸ್ವತಃ ಆತನೇ ತನಗೆ ತರ್ಪಣವನ್ನು ಬಿಡಬೇಕಾಗುತ್ತದೆ ಪಿಂಡಪ್ರಧಾನ ಮಾಡಬೇಕು. ಈ ಆಚರಣೆಗಳೆಲ್ಲವೂ
ಕುಂಭಮೇಳದ ಸಂದರ್ಭದಲ್ಲಿ ಗಂಗಾನದಿಯ ದಡದಲ್ಲಿ ನಡೆಯುತ್ತದೆ.
ನಾಗಾ ಸಾಧುಗಳಾಗಲು
ಮಹಿಳೆಯರಿಗೂ ಅವಕಾಶವಿದೆ. ಅವರನ್ನು ನಾಗ ಸನ್ಯಾಸಿನಿಯರೆಂದು ಕರೆಯುತ್ತಾರೆ.ನಾಗ ಸನ್ಯಾಸಿಗಳಾಗಲು
ಅವರಿಗಿರುವ ನಿಬಂಧನೆಗಳು, ಆಚರಣೆಗಳು ಪುರುಷರಿಗಿರುವಂತಹದ್ದೇ ಆಗಿರುತ್ತದೆ, ಆದ್ರೆ ಅವರುನಾಗಸಾಧುಗಳ
ಹಾಗೆ ನಗ್ನವಾಗಿ ತಿರುಗಾಡುವಂತಿಲ್ಲ, ಹಳದಿ ಅಥವಾ ಬಿಳಿಯ ವಸ್ತ್ರದಿಂದ ಮೈಯ್ಯನ್ನು ಮುಚ್ಚಿಕೊಳ್ಳಬೇಕು,
ಅದೂ ಏಕವಸ್ತ್ರ ಮಾತ್ರ. ಕುಂಭಮೇಳದಲ್ಲಿ ಅವರೂ ನಾಗಸಾಧುಗಳ ಜೊತೆ ‘ಶಾಹಿ ಸ್ನಾನ’ ಮಾಡಬಹುದು. ಆದರೆ
ಅವರಂತೆ ನಗ್ನ ಸ್ನಾನಕ್ಕೆ ಅನುಮತಿಯಿಲ್ಲ. ಅಖಾಡದಲ್ಲಿ ಗಂಡು ಹೆಣ್ಣೆಂಬ ಬೇಧಭಾವವಿಲ್ಲ, ಎಲ್ಲರೂ ಸಮಾನರು.
ನಾಗಾ ಸನ್ಯಾಸಿನಿಯರನ್ನು ‘ಮಾತಾ’ ಎಂದೇ ಎಲ್ಲರೂ ಕರೆಯುತ್ತಾರೆ.
ನಾಗಾ ಸಾಧುಗಳು ಸಮರ
ಕಲೆಯಲ್ಲಿ ನಿಷ್ಣಾತರು. ದೇಶಕ್ಕೆ ಗಂಡಾಂತರ ಒದಗಿದಾಗ, ಸನಾತನ ಧರ್ಮಕ್ಕೆ ಕುತ್ತು ಒದಗಿದಾಗ ಇವರು
ಶಸ್ತ್ರಸಜ್ಜಿತರಾಗಿ ಕಣಕ್ಕೆ ದುಮುಕುತ್ತಾರಂತೆ. ಇವರಿಗೆಲ್ಲಾ ಧತ್ತಾತ್ರಯನು ಮೂಲಪುರುಷನೆಂದು ಹೇಳಲಾಗುತ್ತಿದ್ದರೂ
ಇವರನ್ನು ಶಂಕರಾಚಾರ್ಯರು ಸಂಘಟಿಸಿದರೆಂದು ಇವರ ಬಗ್ಗೆ ಇರುವ ಐತಿಹ್ಯ ಹೇಳುತ್ತದೆ. ಶಂಕರಾಚಾರ್ಯರು
ದೇಶ ಯಾತ್ರೆಯ ಕಾಲದಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳಕ್ಕೂ ಭೇಟಿ ನೀಡಿದ್ದರು. ಆಗ ಅಲ್ಲಿಯ ಸನ್ಯಾಸಿಗಳನ್ನು
ಒಟ್ಟು ಸೇರಿಸಿ ಅವರನ್ನು ದಶನಾಮ ಪದ್ಧತಿಗೆ ಅಳವಡಿಸಿ ಕುಂಭಮೇಳಕ್ಕೆ ಅವರನ್ನು ಸಜ್ಜುಗೊಳಿಸಿದರಂತೆ.
ದಶನಾಮ ಸನ್ಯಾಸಿಗಳು ತಮ್ಮ ಹೆಸರಿನ ಮುಂದೆ ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ,ಸರಸ್ವತಿ,
ಭಾರತಿ. ಮತ್ತು ಪುರಿ ಎಂಬ ಪದಗಳನ್ನು ಸೇರಿಸಿಕೊಳ್ಳುತ್ತಾರೆ. ಕುಂಭಮೇಳಗಳಲ್ಲಿ ಈ ಸನ್ಯಾಸಿಗಳ ಪಾತ್ರ
ವಿಶಿಷ್ಟವಾದುದು. ಶಂಕರಾಚಾರ್ಯರಿಗಿಂತಲೂ ಹಿಂದೆ ಭಾರತದಲ್ಲಿ ಕುಂಭಮೇಳ ನಡೆಯುತ್ತಿತ್ತು. ಚೀನಾ ಯಾತ್ರಿಕ
ಹುಯೆನ್ಸ್ ತ್ಸಾಂಗ್ ಈ ಮೇಳಕ್ಕೆ ಭೇಟಿ ನೀಡಿದ್ದನೆಂದು ಇತಿಹಾಸ ಹೇಳುತ್ತದೆ.
ಕುಂಬ ಮೇಳದಲ್ಲಿ
‘ಶಾಹಿ ಸ್ನಾನ’ ಅಥವಾ ಪವಿತ್ರ ಸ್ನಾನವೆಂಬುದು ಬಹು ಮುಖ್ಯವಾದುದು. 55 ದಿವಸ ನಡೆಯುವ ಕುಂಭಮೇಳ ಜನವರಿ ೧೫ ರ ಮಕರ ಸಂಕ್ರಾತಿಯಂದು
ಆರಂಭವಾಗುತ್ತದೆ. ೧೫ರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ತ್ರಿವೇಣಿ ಸಂಗಮದಲ್ಲಿ ಮೊದಲ ಪವಿತ್ರ
ಸ್ನಾನ –ಶಾಹಿ ಸ್ನಾನ್- ಆರಂಭವಾಗುತ್ತದೆ. ಅದರ ಹಕ್ಕುದಾರರು ನಾಗಾ ಸಾಧುಗಳು. ಅವರು ಸಾಗರೋಪಾದಿಯಲ್ಲಿ
ಬಂದು ಹರ್ಷೋದ್ಘಾರ ಮಾಡುತ್ತಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಎರಡನೆಯ ಶಾಹಿ ಸ್ನಾನ ಪೆಭ್ರವರಿ ೪ರ
ಮೌನಿ ಅಮಾವಾಸ್ಯೆಯಂದು ನಡೆಯುತ್ತದೆ. ಮೂರನೆಯ ಶಾಹಿ ಸ್ನಾನ ಪೆಭ್ರವರಿ ೧೦ರ ವಸಂತ ಪಂಚಮಿಯಂದು ನಡೆಯುತ್ತದೆ.
ಕುಂಭಮೇಳದಲ್ಲಿ ಮಾತ್ರ ಕಾಣಸಿಗುವ ಈ ಬೂದಿಲೇಪಿತ ದಿಗಂಬರ ಸನ್ಯಾಸಿಗಳನ್ನು ನೋಡುವುದಕ್ಕಾಗಿಯೇ ದೇಶ
ವಿದೇಶಗಳಿಂದ ಜನರು ಇಲ್ಲಿಗೆ ಆಗಮಿಸುವುದುಂಟು. ಒಂದು ಅಂಕಿಅಂಶಗಳ ಪ್ರಕಾರ ೫೦ ಲಕ್ಷ ನಾಗಾ ಸಾಧುಗಳಿದ್ದಾರೆಂದು
ಅಂದಾಜು ಮಾಡಲಾಗಿದೆ.
ಈ ನಾಗ ಸನ್ಯಾಸಿಗಳಲ್ಲಿಯೂ
ಅನೇಕ ಪಂಗಡಗಳಿವೆ. ಅವುಗಳನ್ನು ಅಖಾಡಗಳೆಂದು ಕರೆಯುತ್ತಾರೆ. ಭಾರತೀಯ ಸಾಧುಪರಂಪರೆಯಲ್ಲಿ ಒಟ್ಟು ೧೪
ಅಖಾಡಗಳಿವೆ. ಇವುಗಳಲ್ಲ ಕುಂಭಮೇಳದಲ್ಲಿ ಭಾಗವಹಿಸುತ್ತವೆ. ಇದರಲ್ಲ್ಲಿ ಏಳು ಅಕಾಡಗಳನ್ನು ಬಹುಮುಖ್ಯ
ಅಖಾಡಗಳೆಂದು ಪರಿಗಣಿಸಲಾಗಿದೆ. ಇವುಗಳನ್ನು ಶಂಕರಾಚಾರ್ಯರೇ ಸ್ಥಾಪಿಸಿದ್ದಾರೆ ಎನ್ನಲಾಗುತ್ತಿದೆ.
ಅವುಗಳು ಯಾವುದೆಂದರೆ ಮಹಾನಿರ್ವಾನಿ, ನಿರಂಜನಿ, ಜೂನಾ, ಅಟಲ್, ಅವಹಾರಿ. ಅಗ್ನಿ ಮತ್ತು ಆನಂದ.
ಈ ನಾಗಾ ಸಾಧುಗಳಲ್ಲಿ
ಹಠಯೋಗಿಗಳೆಂಬ ದೇಹದಂಡಧಾರಿಗಳಿರುತ್ತಾರೆ. ಸಾಧನೆಯ ಮಾರ್ಗಕ್ಕೆ ತಮ್ಮ ದೇಹವನ್ನೇ ವಾಹಕವಾಗಿಸಿಕೊಳ್ಳುತ್ತಾರೆ,
ಅದನ್ನೇ ದಂಡಿಸಿಕೊಳ್ಳುತ್ತಾರೆ. ಅಂತವರು ಒಂಟಿಕಾಲಿನಲ್ಲಿ ವರ್ಷಾನುಗಟ್ಟಲೆ ನಿಂತುಕೊಳ್ಳುತ್ತಾರೆ,
ವರ್ಷಾನುಗಟ್ಟಲೆ ಕೇವಲ ನೀರನ್ನು ಸೇವಿಸಿ ತಮ್ಮ ಜೀವ ಹಿಡಿಟ್ಟುಕೊಂಡಿರುತ್ತಾರೆ. ಬೂಮಿಯಲ್ಲಿ ಹಳ್ಳ
ತೋಡಿ ಅದರಲ್ಲಿ ಕುಳಿತು ಮೇಲಿನಿಂದ ಮಣ್ಣು ಮುಚ್ಚಿಸಿಕೊಂಡು ವಾರಗಟ್ಟಲೆ ಭೂಸಮಾಧಿಯಾಗುತ್ತಾರೆ. ತಮ್ಮ
ಜನನೇಂದಿಯಿಂದ ಕಾರು ಬಸ್ಸುಗಳನ್ನೇ ಎಳೆಯುತ್ತಾರೆ.
ಹತ್ತಾರು ಕೇಜಿ ತೂಗುವ ಕಲ್ಲುಗಳನ್ನು ತಮ್ಮ ಜನನೇಂದಿಯಕ್ಕೆ ಕಟ್ಟಿಕೊಂಡು ತೂಗುತ್ತಾರೆ. ನಾಗಾ
ಸನ್ಯಾಸಿಗಳು ಲೈಂಗಿಕ ಶಕ್ತಿಯನ್ನು ಅಧ್ಯಾತ್ಮೈಕ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ.
ಬೌತಿಕವಾಗಿಯೂ ಶಾರೀರಕವಾಗಿಯೂ
ಅತ್ಯಂತ ಸದೃಢರಾಗಿದ್ದರೂ ಇವರು ಸಂಪೂರ್ಣ ನಗ್ನರಾಗಿಯೇ ಇರುತ್ತಾರೆ. ಸಹರೀರವನ್ನು ಬೆಚ್ಚಗಿಡುವ ಕಾರಣದಿಂದಾಗಿಯೂ
ಇರಬಹುದು ಇವರು ಭಂಗಿಯನ್ನು ಸೇದುತ್ತಾರೆ, ಮೈಗೆಲ್ಲಾ ಬೂದಿಯನ್ನು ಬಳಿದುಕೊಳ್ಳುತ್ತಾರೆ. ಹಾಗಾಗಿಯೇ
ನಾಗರಿಕರಲ್ಲಿ ಒಂದು ರೀತಿಯ ಕುತೂಹಲ ಮತ್ತು ಭೀತಿಯನ್ನು ಹುಟ್ಟಿಸುತ್ತಾರೆ.
. ಕುಂಭ ಮೇಳದಲ್ಲಿ
ಕೋಟ್ಯಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಇಡೀ ಜಗತ್ತಿನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ jಜನರು
ಒಂದೆಡೆ ಸೇರುವ ಇನ್ನೊಂದು ಧಾರ್ಮಿಕ ಆಚರಣೆ ಇನ್ನೊಂದಿಲ್ಲ. ಹಾಗಾಗಿಯೇ ಇದನ್ನು ೨೦೧೭ರಲ್ಲಿ ಯುನೆಸ್ಕೋ
ಜಗತ್ತಿನ ಅತಿ ದೊಡ್ಡ ಶಾಂತಿಯುತ ಧಾರ್ಮಿಕ ಆಚರಣೆ ಎಂದು ಗುರುತಿಸಿ ತನ್ನ ಸಾಂಸ್ಕೃತಿಕ ಪಟ್ಟಿಗೆ ಸೇರಿಸಿದೆ.
ಮುಂಬರುವ
೨೦೧೯ರ ಅರ್ಧ ಕುಂಬಮೇಳ
೨೦೧೯ರ ಕುಂಭಮೇಳದ
ಉಸ್ತುವಾರಿಯನ್ನು ಸ್ವತಃ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರೇ ವಹಿಸಿದ್ದಾರೆ.
ಅದಕ್ಕೆ ಪೂರ್ವಭಾವಿಯಾಗಿ ಅವರು ಮೋಘಲ ಪಳೆಯುಳಿಕೆಯಾಗಿದ್ದ ಅಲಹಾಬಾದ್ ಎಂಬ ಹೆಸರನ್ನು ಈಗ ಪ್ರಯೋಗ
ರಾಜ್ ಎಂದು ಬದಲಾಯಿಸಿದ್ದಾರೆ. ಅಕ್ಬರ್ ಪೂರ್ವದಲ್ಲಿ ಅಲಹಾಬಾದಿಗೆ ಪ್ರಯಾಗ್ ರಾಜ್ ಎಂಬ ಹೆಸರಿತ್ತು.
ಅಕ್ಬರ್ ೧೫೭೫ರಲ್ಲಿ ಪ್ರಯಾಗದ ದಂಡೆಯಮೇಲೆ ಕೋಟೆಯೊಂದನ್ನು ಕಟ್ಟಿಸಿ ಅದಕ್ಕೆ ಇಲಹಾಬಾದ್ ಎಂದು ಹೆಸರಿಟ್ಟನು.
ಪರಿಷಿಯನ್ ಭಾಷೆಯಲ್ಲಿ ಹಾಗೆಂದರೆ ‘ದೇವರ ಜಾಗ’ ಎಂದಾಗಿತ್ತು. ಬ್ರಿಟಿಷರು ಅದನ್ನು ಅಲಹಾಬಾದ್ ಎಂದು
ಕರೆದರು. ನಮ್ಮ ಭಾರತದ ಮೊದಲ ಪ್ರಧಾನಿ ಜವಾಹರಲಾಲರ ವಂಶಸ್ಥರು ಬಾಳಿಬದುಕಿದ ಮನೆಯೂ ಇಲ್ಲಿದೆ.ಅಂದು
ಅದು ಸ್ವಾತಂತ್ರ್ಯಹೋರಾಟದ ರೂಪುರೇಶೆಗಳು ಸಿದ್ಧಗೊಳ್ಳುತ್ತಿದ್ದ ಜಾಗವಾಗಿತ್ತು. ಈಗದು ಮ್ಯೂಸಿಯಂ
ಆಗಿದೆ. ಅಲಹಾಬಾದ್ ಕಾಶಿಯ ನಂತರದ ಅತ್ಯಂತ ಹಳೆಯ ನಗರವಾಗಿದೆ ಪ್ರಯಾಗ್ ಅಲಹಾಬಾದ್ ನಗರದ ಹೊರವಲಯದಲ್ಲಿದೆ.
ರಾಜಧಾನಿ ಲಕ್ನೋದಿಂದ ೨೫೦ಕಿಮೀ ದೂರದಲ್ಲಿದೆ ಶ್ರೀರಾಮನು ವನವಾಸದ ಕಾಲದಲ್ಲಿ ಚಿತ್ರಕೂಟಕ್ಕೆ ಇದೇ
ದಾರಿಯಲ್ಲಿ ಹೋದನೆಂಬ ಪ್ರತಿತಿಯಿದೆ. ಇಲ್ಲಿಂದ ಅಯೋಧ್ಯೆಗೆ೧೫೪ ಕಿ.ಮೀ ದೂರವಿದ್ದರೆ ಚಿತ್ರಕೂಟಕ್ಕೆ
೯೪ ಕಿ,ಮೀ ದೂರ ಇದೆ.
ಈ ಮೇಳದಲ್ಲಿ ಸುಮಾರು
೧೫ ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪೂರ್ಣ ಕುಂಭಮೇಳದಲ್ಲಿ ಸುಮಾರು ೩೦ ಕೋಟಿ ಜನರು ಭಾಗವಹಿಸುತ್ತಾರೆ.
ಇಷ್ಟೊಂದು ಸಂಖ್ಯೆಯಲ್ಲಿ ಜನರು ಭಾಗವಿಸುತ್ತಿರುವಾಗ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು
ಒಂದು ಸವಾಲೇ ಸರಿ.
ಹೌದು ಇದಕ್ಕಾಗಿಯೇ
ಇಪ್ಪತ್ತು ಚದರ ಮೈಲಿನಲ್ಲಿ ವಸತಿ ಸೌಕರ್ಯದ ವ್ಯವಸ್ಥೆಯಾಗುತ್ತದೆ. ತಾತ್ಕಾಲೀಕ ಟೆಂಟ್ ಗಳ ನಿರ್ಮಾಣವಾಗುತ್ತದೆ.
ನಲ್ವತ್ತು ಸಾವಿರ ಟಾಯ್ಲೆಟ್, ಸುರಕ್ಷತೆಗಳಿಗಾಗಿ ಇಪ್ಪತೈದು ಸಾವಿರ ಪೋಲಿಸರು, ಎಲ್ಲಾ ಅಧುನಿಕ ಸಲಕರಣೆಗಳುಳ್ಳ
ವಿಶೇಷ ಪೋಲಿಸ್ ಚೌಕಿಗಳು ನೀರು, ವಿದ್ಯುತ್, ಸಾರಿಗೆ ವ್ಯವಸ್ಥೆ ಎಲ್ಲವೂ ಸಿದ್ಧವಾಗುತ್ತಿದೆ. ಹಾಗಿದ್ದರೂ
ಕೂಡಾ ಕೆಲವು ಅವಘಡಗಳು ಘಟಿಸಿಬಿಡುತ್ತವೆ. ೧೭೬೦ರಲ್ಲಿ ನಡೆದ ದುರಂತವೇ ಇದಕ್ಕೆ ಸಾಕ್ಷಿ.
೧೭೬೦ರಲ್ಲಿ ನಾಸಿಕ್
ನಲ್ಲಿ ನಡೆದಕುಂಭಮೇಳದಲ್ಲಿ ಶೈವ ಮತ್ತು ವೈಷ್ಣವ ಆರಾಧಕ ಸನ್ಯಾಸಿಗಳ ಮಧ್ಯೆ ನಡೆದ ವಾದ ವಿವಾದ ಹಿಂಸಾಚಾರಕ್ಕೆ ತಿರುಗಿ ಸುಮಾರು ಹದಿನೆಂಟು
ಸಾವಿರ ಸನ್ಯಾಸಿಗಳು ಮೃತಪಟ್ಟಿದ್ದರು. ಕೊನೆಗೆ ಈ ಜಗಳ ಆಗ ರಾಜ್ಯವಾಳುತ್ತಿದ್ದ ಪೇಶ್ವೆಗಳ ತನಕ ಹೋಗಿ
ಅವರು ಶೈವ ಪಂಥಿಯರು ಗೋದಾವರಿಯ ಉಗಮಸ್ಥಾನವಾದ ತ್ರೈಂಬಕೇಶ್ವರದಲ್ಲಿ ಶೈವಪಂಥೀಯರು ಮತ್ತು ನಾಸಿಕ್
ನಲ್ಲಿ ವೈಷ್ಣವ ಪಂಥಿಯರು ಸ್ನಾನಮಾಡಬೇಕೆಂದು ಆದೇಶಿಸಿದ್ದರು. ಅದು ಇವತ್ತಿಗೂ ನಡೆದುಕೊಂಡು ಬಂದಿದೆ.
೧೯೫೪ರಲ್ಲಿ ಅಲಹಾಬಾದಿನಲ್ಲಿ
ನಡೆದ ಕುಂಭಮೇಳದಲ್ಲಿಯೂ ಇದು ಭಾರತ ಸ್ವತಂತ್ರಗೊಂಡ
ಬಳಿಕ ನಡೆದ ಮೊದಲ ಕುಂಭಮೇಳವಾಗಿತ್ತು. ಹಾಗಾಗಿ ರಾಜಕಾರಣಿಗಳು ಕೂಡಾ ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಆ ಜನನಿಬಿಡ ಪ್ರದೇಶದಲ್ಲಿ ಅವರಿಗೆ ಭದ್ರತೆಗಾಗಿ ಅಂತರ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು. ಆದರೆ
ಜನರು ಅದನ್ನು ಮೀರಿ ಮುನ್ನುಗಿದ್ದಾಗ ಆದ ಕಾಲ್ತುಳಿತದಲ್ಲಿ ಸುಮಾರು ಎಂಟುನೂರು ಜನರು ಸತ್ತಿದ್ದರು.
ಅನಂತರಲ್ಲಿ ಪ್ರಧಾನಿ ನೆಹರು ಅವರು ಇನ್ನುಮುಂದೆ ರಾಜಕಾರಣಿಗಳು ಮತ್ತು ಗಣ್ಯರು ಕುಂಭ ಮೇಳ್ದಲ್ಲಿ ಭಾಗವಹಿಸಬಾರದು ಎಂದು ಎಂದು ಆದೇಶ ನೀಡಿದರು.
ಹಾಗಾಗಿ ಕುಂಭಮೇಳಕ್ಕೆ ಇವತ್ತಿಗೂ ಯಾವುದೇ ಸರಕಾರಿ ಸವಲತ್ತುಗಳೊಂದಿಗೆ ಗಣ್ಯರು ರಾಜಕಾರಣಿಗಳು ಬೇಟಿ
ನೀಡುವುದಿಲ್ಲ.
೨೦೧೩ರ ಮಹಾಪೂರ್ಣ
ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನ ಮುಗಿಸಿಕೊಂಡು ಬಂದ ಅಸಂಖ್ಯಾತ ಭಕ್ತರು ಅಲಹಾಬಾದಿನ
ರೈಲ್ವೆ ಸ್ಟೇಷನ್ನಿನಲ್ಲಿ ರೈಲಿಗಾಗಿ ಕಾಯುತ್ತಾ ನಿಂತಿದ್ದಾಗ
ಪ್ಲಾಟ್ ಪಾರಂ ೬ ಕುಸಿದು ಬಿದ್ದು 42 ಜನರು ಸತ್ತು ನೂರಾರು ಜನರು ಗಾಯಗೊಂಡಿದ್ದರು.
ಪ್ರತಿ ಕುಂಭಮೇಳದಲ್ಲೂ
ಕಾಲ್ತುಳಿತಕ್ಕೆ ಸಿಕ್ಕುವುದು , ಜನಜಂಗುಳಿಯಲ್ಲಿ ತಮ್ಮವರನ್ನು ಕಳೆದುಕೊಳ್ಳುವುದು ಮುಂತಾದ ಸಣ್ಣಪುಟ್ಟ
ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ಹಾಗೆಲ್ಲಾ ಇದ್ದರೂ ಕುಂಭಮೇಳಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ
ಇರುತ್ತದೆ. ದೂರದಲ್ಲಿ ನಿಂತು ಈ ಮಾನವ ಚಟುವಟಿಕೆಗಳನ್ನೆಲ್ಲಾ ನೋಡುವ ಪರಿಸರವಾದಿಗಳಿಗೆ ದಿನದಿಂದ
ದಿನಕ್ಕೆ ಕಲುಷಿತಗೊಳ್ಳುತ್ತಿರುವ ನದಿಗಳನ್ನು ನೋಡುವಾಗ ಆತಂಕವಾಗುತ್ತಿದೆ.
[ಉದಯವಾಣಿಯ ದೀಪಾವಳಿ
ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ]