Thursday, March 25, 2010

ಮೀಸಲಾತಿ; ಸ್ತ್ರೀ ಕುಲಂ ತಾನೊಂದೆ ವಲಂ
ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿಗೆ ರಾಜ್ಯಸಭೆ ಒಪ್ಪಿಗೆ ನೀಡಿದೆ. ಆದು ಶಾಸನ ರೂಪ ಪಡೆಯಲು ಲೋಕಸಭೆಯ ಅಂಗೀಕಾರ ಮುದ್ರೆ ಬೇಕು. ಅದು ಸಿಗಬಹುದೆ? ಎಂಬುದೀಗ ಪ್ರಶ್ನೆ.

ಬಿಹಾರದ ಅರ್ ಜೆಡಿಯ ಲಾಲೂ ಪ್ರಸಾದ್ ಯಾದವ್, ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮಹಾರಾಷ್ಟ್ರದ ನ್ಯಾಷನಲಿಸ್ಟ್ ಕಾಂಗ್ರೇಸ್ ಪಾರ್ಟಿಯ ಶರದ್ ಪವಾರ್ ಮತ್ತು ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ಮಾಯಾವತಿ ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ವಿರೋಧವಿದೆ ಎಂದು ಡಂಗೂರ ಸಾರಿದ್ದಾರೆ. ತೃಣಮೂಲ ಕಾಂಗ್ರೇಸಿನ ಮಮತಾ ಬ್ಯಾನರ್ಜಿ ಇವರಿಗೆ ಸಾಥ್ ನೀಡಿದ್ದಾರೆ.

ಅವರೆಲ್ಲರ ಒಕ್ಕೊರಲ ವಾದ ಏನೆಂದರೆ; ಮಹಿಳಾ ಮೀಸಲಾತಿಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಒಳಮೀಸಲಾತಿ ನೀಡಬೇಕು. ಇಲ್ಲವಾದರೆ ಈ ಸೌಲಭ್ಯವನ್ನು ಮೇಲ್ವರ್ಗದ ಪ್ರಭಾವಿ ಮಹಿಳೆಯರು ಮಾತ್ರ ಪಡೆದುಕೊಳ್ಳುತ್ತಾರೆ. ಮಹಿಳಾ ವಿಧೇಯಕದ ಸದುದ್ಧೇಶದ ದುರುಪಯೋಗವಾಗುತ್ತದೆ. ಯೋಚಿಸತಕ್ಕ ವಾದವೇ.

ಹೌದು, ಈ ವಿಧೇಯಕದ ನೆರವಿಲ್ಲದೆಯೂ ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಕುಟುಂಬದ, ಆಪ್ತ ವರ್ಗದ ಮಹಿಳೆಯರನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ. ಎಳೆದು ತಂದಿದ್ದಾರೆ ಎಂದು ಯಾಕೆ ಹೇಳುತ್ತಿದ್ದೇನೆಂದರೆ ಆ ಮಹಿಳೆಯರನ್ನು ಸೂತ್ರದ ಗೊಂಬೆಗಳನ್ನಾಗಿಸಿಕೊಂಡು ಗಂಡಸರು ಅದಿಕಾರ ಚಲಾಯಿಸುತ್ತಿದ್ದಾರೆ. ಇದಕ್ಕೆ ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿರುವ ಲಾಲೂಗಿಂತ ಬೇರೆ ಉದಾಹರಣೆ ಬೇಕೆ? ಅನಕ್ಷರಸ್ಥ ಪತ್ನಿಗೂ ಮುಖ್ಯಮಂತ್ರಿ ಪದವಿ ದಯಪಾಲಿಸಿದ ಮಹಾನ್ ವ್ಯಕ್ತಿ ಇವರು! ಮುಲಾಯಂ ಸಿಂಗ್ ಯಾದವ್ ಏನು ಕಮ್ಮಿಯಿಲ್ಲ ತಮ್ಮ ಸೊಸೆಯನ್ನು ಸಂಸತ್ತಿಗೆ ಕಳುಹಿಸಿದವರಿವರು. ಇವರನ್ನೇ ಮೇಲ್ಪಂಕ್ತಿಯಾಗಿಸಿಕೊಂಡು ಪ್ರಭಾವಿ ರಾಜಕಾರಣಿಗಳು ತಮ್ಮ ಕುಟುಂಬದ ಮಹಿಳಾ ಸದಸ್ಯರನ್ನು, ಗೆಳತಿಯರನ್ನು, ಪ್ರೇಯಸಿಯರನ್ನು ಶಾಸನ ಸಭೆಗಳಿಗೆ ಆರಿಸಿ ಕಳುಹಿಸಬಹುದೆಂಬ ಅನುಮಾನ ಜನ ಸಾಮಾನ್ಯರಿಗೆ ಇದ್ದೇ ಇದೆ.

ಆದರೆ, ಭಾರತದ ಪುರಾಣ, ಇತಿಹಾಸಗಳನ್ನು ಗಮನಿಸಿದರೆ ಎಲ್ಲಾ ವರ್ಗದ ಮಹಿಳೆಯರು ಒಂದೇ, ಅವರೆಲ್ಲಾ ಶೋಷಿತರು. ನಮ್ಮ ಶ್ರೇಣಿಕೃತ ಸಮಾಜ ವ್ಯವಸ್ಥೆಯಲ್ಲಿ ಅಂತ್ಯಜರು ಹೇಗೆ ಗುಲಾಮರಾಗಿದ್ದರೋ ಹಾಗೆಯೇ ಉತ್ತಮ ಕುಲದ ಸ್ತ್ರೀಯರಿಗೂ ಸ್ವಂತ ಅಸ್ತಿತ್ವವಿರಲಿಲ್ಲ. ಆದರೂ ಕ್ರೌರ್ಯ ತುಂಬಿದ ಸಮಾಜ ವ್ಯವಸ್ಥೆಯಲ್ಲಿ ಮಾನವೀಯತೆಯನ್ನು ತೋರಿದವರು ಅವರೇ. ಅದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಹೆಕ್ಕಿ ತೆಗೆಯಬಹುದು. ಚಾವಡಿಯಲ್ಲಿ ನಡೆಯುವ ಕ್ರೌರ್ಯಕ್ಕೆ ಹಿತ್ತಿಲ ಬಾಗಿಲಲ್ಲಿ ಸಾಂತ್ವನ ಸಿಗುತ್ತಿತ್ತು. ಮನೆಯೊಡತಿ ಆಳುಮಗನ ಸಂಕಷ್ಟಗಳಿಗೆ ತಾಯಾಗುತ್ತಿದ್ದಳು.

ಅಷ್ಟು ದೂರದ ಮಾತೇಕೆ, ಮೊನ್ನೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರ ಪಡೆದೊಡನೆ ಎಲ್ಲಾ ಸದಸ್ಯರೂ ಪಕ್ಷಭೇದ ಮರೆತು ಸಂತಸದಿಂದ ಪರಸ್ಪರ ಅಭಿನಂಧಿಸಿಕೊಳ್ಳಲಿಲ್ಲವೇ? ಅದು ತೋರಿಕೆಯದಂತೂ ಅಗಿರಲಿಕ್ಕಿಲ್ಲ. ಯಾಕೆಂದರೆ ಅವರು ಆ ಸ್ಥಾನಕ್ಕೆ ಏರಬೇಕಾದರೆ ತಮ್ಮದೇ ಪಕ್ಷದವರು ಸೇರಿದಂತೆ ಪುರುಷ ರಾಜಕಾರಣಿಗಳು ಒಡ್ಡಿದ ಸವಾಲುಗಳು, ರಚಿಸಿದ ಷಡ್ಯಂತರಗಳು ನೆನಪಿಗೆ ಬಂದಿರಬಹುದು. ಇಂಥ ಏಕತ್ವದ ಮನಸ್ಸನ್ನು ಒಡೆಯುವ ಪ್ರಯತ್ನವನ್ನು ಲಾಲೂತ್ರಯರು ನಡೆಸುತ್ತಿದ್ದರೇನೋ ಎಂಬ ಗುಮಾನಿ ನನಗೆ.

‘ಒಲ್ಲದ ಗಂಡಂಗೆ ಮೊಸರಲ್ಲಿ ಕಲ್ಲಂತೆ’ ಮಹಿಳಾ ಮೀಸಲಾತಿಯನ್ನು ವಿರೋಧಿಸುವವರಿಗೆ ’ಒಳಮೀಸಲಾತಿ ಬೇಕು’ ಎಂಬುದೊಂದು ಪಿಳ್ಳೆ ನೆವ. ಇಲ್ಲವಾದರೆ ಅವರವರ ಪಕ್ಷಗಳಲ್ಲೇ ಮಹಿಳೆಯರನ್ನು ಮುಂದಕ್ಕೆ ತರಬಹುದಲ್ಲ. ಅವರೇ ಆಂತರಿಕ ಮೀಸಲಾತಿ ಅಳವಡಿಸಿಕೊಳ್ಳಬಹುದಲ್ಲಾ. ಅವರು ಹಾಗೆ ಮಾಡಲಾರರು. ಮಹಿಳೆಯರು ಬರೀಯ ಕಾರ್ಯಕರ್ತರಾಗಿಯೇ ಉಳಿಯಬೇಕು. ಮೆರವಣಿಗೆ, ಪ್ರತಿಭಟನೆಗಳಿಗೆ ಜನ ಬೇಕಲ್ಲಾ..ಪುರುಷ ರಾಜಕಾರಣಿಗಳಿಗಿರೊದು ಮೂಲತಃ ಭಯ. ಮಹಿಳೆಯ ಕರ್ತೃತ್ವ ಶಕ್ತಿಯ ಭಯ. ಅವರನ್ನು ಎಷ್ಟೇ ತುಳಿದರೂ ಅವರು ಅಲ್ಲಿಂದಲೇ ಜೀವಶಕ್ತಿಯನ್ನು ತುಂಬಿಕೊಳ್ಳುತ್ತಾರೆ. ಜನಾನುರಾಗ ಗಳಿಸುತ್ತಾರೆ. ಒಂದು ವೇಳೆ ಅವರಿಗೆ ಮೀಸಲಾತಿ ದೊರಕಿಬಿಟ್ಟರೆ ತಾವು ನಿರುದ್ಯೋಗಿಗಳಾಗುವ ಭಯ. ಆ ಭಯವೇ ರಾಜ್ಯಸಭಾ ಸದಸ್ಯರೊಬ್ಬರ ಬಾಯಿಂದ ’ಮಸೂದೆಗೆ ಒಪ್ಪಿಗೆ ನೀಡುವುದೆಂದರೆ ಬಲಿದಾನ ಅಥವಾ ಆತ್ಮಹತ್ಯೆ ಮಾಡಿಕೊಂಡಂತೆ’ ಎಂದು ಹೇಳಿಸುತ್ತದೆ.

ಲೋಕಸಭೆಯ ಒಟ್ಟು ಸಂಖ್ಯೆ ೫೪೩. ಇದರಲ್ಲಿ ಮಹಿಳೆಯರು ಕೇವಲ ೫೯. ಮೀಸಲಾತಿ ದೊರೆತರೆ ಮಹಿಳೆಯರ ಸಂಖ್ಯೆ ೧೮೦ಕ್ಕೇರುತ್ತದೆ. ಕರ್ನಾಟಕದಲ್ಲಿ ವಿಧಾನಸಭೆಯ ಸಂಖ್ಯಾಬಲ ೨೨೪. ಮಹಿಳಾ ಶಾಸಕರ ಸಂಖ್ಯೆ ಕೇವಲ ೫. ಮೀಸಲಾತಿ ದೊರಕಿದರೆ ಅದು ೭೪ಕ್ಕೇರುತ್ತದೆ. ದೇಶದ೨೮ ರಾಜ್ಯಗಳಲ್ಲಿನ ಒಟ್ಟು ಶಾಸಕರು,೪೦೩೦. ಇದರಲ್ಲಿ ಮಹಿಳೆಯರ ಸಂಖ್ಯೆ ಕೇವಲ ೩೧೧. ಮೀಸಲಾತಿ ದೊರಕಿದರೆ ಇವರ ಸಂಖ್ಯೆ ೧೩೩೦ಕ್ಕೇರುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಶಕ್ತಿಯುತವಾದುದು. ಶಾಸನ ಸಭೆಗಳಲ್ಲಿ ಮಹಿಳೆಯರ ಬಲ ಹೆಚ್ಚಿದರೆ ಅವರು ಮಹಿಳಾ ಸಮಸ್ಯೆಗಳಿಗೆ ಧ್ವನಿಯಾಗಬಲ್ಲರು. ಪುರುಷ ಜಗತ್ತಿಗೆ ಅರ್ಥವಾಗದ ಹಲವಾರು ಸಮಸ್ಯೆಗಳು ಮಹಿಳೆಯಲ್ಲಿವೆ. ಅವನ್ನು ಮಹಿಳಾ ನೆಲೆಯಿಂದಲೇ ನೋಡಬೇಕಾಗುತ್ತದೆ; ಅದನ್ನು ಮಹಿಳೆ ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ಮೊನ್ನೆ ಮೊನ್ನೆ ಘಟಿಸಿದ ನೆರೆಹಾವಳಿ ದುರಂತವನ್ನೇ ನೋಡಿ; ಸಂತ್ರಸ್ತರನ್ನು ನೋಡಲು ನಮ್ಮ ಘನ ಸರಕಾರದ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿ ವರ್ಗ ಎಲ್ಲವೂ ಅಲ್ಲಿಗೆ ಹೋಗಿತ್ತು. ಆದರೆ ಅವೆಲ್ಲಾ ಮಾನವೀಯವಾಗಿ ವರ್ತಿಸಿತ್ತಾ ಎಂಬುದು ಪ್ರಶ್ನಾರ್ಹ. ಆದರೆ ಹಂಪೆಯ ಕನ್ನಡ ವಿ.ವಿಯ ಮಹಿಳಾ ಅಧ್ಯಯನ ಸಂಸ್ಥೆಯ ತಂಡವೊಂದು ಅಲ್ಲಿಗೆ ಹೋಗಿ ಪರಿಸ್ಥಿತಿಯ ಅವಲೋಕನ ನಡೆಸಿ ವರದಿಯನ್ನು ಸಿದ್ದಪಡಿಸಿತು. ಅದರಲ್ಲಿ ೧೦ ಅಡಿ ಅಗಲ ೧೫ ಅಡಿ ಉದ್ದದ ಶೆಡ್ಡುಗಳಲ್ಲಿ ಮಹಿಳೆಯರು, ಬಾಣಂತಿಯರು, ಬಾಲಕಿಯರು ಅನುಭವಿಸುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆಗಳ ವಿವರವನ್ನು ನೀಡಲಾಗಿದೆ. ಮಳೆಯ ಹೊಡೆತಕ್ಕೆ ಸಿಲುಕಿ ಎಲ್ಲವನ್ನು ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಓಡಿ ಬಂದಿದ್ದ ಮಹಿಳೆಯರು ತಮ್ಮ ಮಾಸಿಕ ಋತುಸ್ರಾವವನ್ನು ತಡೆಯುವುದಕ್ಕಾಗಿ ಬಟ್ಟೆಯಿಲ್ಲದೆ ಸಂಕಟಪಡುತ್ತಿದ್ದ ವಿಚಾರ ಒಬ್ಬ ಪುರುಷನ ಮನಸ್ಸಿಗೆ ಇಳಿಯಲು ಸಾಧ್ಯವೇ?. ಅದು ಮಹಿಳೆಗೆ ಮಾತ್ರ ಅರ್ಥವಾಗುವ ಸಂಗತಿ. ಲೇಖಕಿ ನಾಗವೇಣಿಯವರಿಗೆ ಒಮ್ಮೆ ಮಹಿಳಾ ಖೈದಿಗಳನ್ನು ಭೇಟಿ ಮಾಡುವ ಸಂದರ್ಭ ಬಂದಿತ್ತು. ಆಗ ಅಲ್ಲಿರುವ ಖೈದಿಗಳು ’ಇನ್ನೊಮ್ಮೆ ಬಂದಾಗ ಒಂದಷ್ಟು ಹಳೆಯ ಕಾಟನ್ ಬಟ್ಟೆಗಳನ್ನು ತರ್ತೀರಾ’ ಎಂದು ಕೇಳಿಕೊಂಡಿದ್ದರಂತೆ.

ಮಹಿಳೆಯರಿಗೆ ಮೀಸಲಾತಿ ದೊರಕಿದರೆ ಶಾಸನ ಸಭೆಗಳಲ್ಲಿ ಸಾಮಾಜಿಕ ಸಮಸ್ಯೆಗಳು ಹೆಚ್ಚು ಅರ್ಥಪೂರ್ಣವಾಗಿ ಚರ್ಚೆಯಾಗಬಹುದು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಪಿಡುಗು, ಕೌಟುಂಬಿಕ ಹಿಂಸೆ, ಕುಡಿಯುವ ನೀರು, ಶೌಚಾಲಯ ನಿರ್ಮಾಣದಂತ ಮೂಲಭೂತ ಸಮಸ್ಯೆಗಳ ಚರ್ಚೆಯಲ್ಲಿ ಪಕ್ಷ ಬೇಧ ಮರೆತು ಮಹಿಳೆಯರು ಪಾಲ್ಗೊಳ್ಳಬಹುದು. ರೈತರ ಸಮಸ್ಯೆಗಳನ್ನು ಹೆಚ್ಚು ಮಾನವೀಯವಾಗಿ ಆಲಿಸಬಹುದು. ಯಾಕೆಂದರೆ ಕೃಷಿಯನ್ನು ಕಂಡು ಹಿಡಿದವಳು ಮಹಿಳೆಯೇ. ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ, ಉಡುಪಿ ಶಾಸಕ ರಘುಪತಿಭಟ್ ಪತ್ನಿ ಪದ್ಮಪ್ರಿಯ ಸೇರಿದಂತೆ ಹಲವು ಆತ್ಮಹತ್ಯೆಗಳ ನಿಜ ಕಾರಣಗಳು ಗೊತ್ತಾಗಬಹುದು. ಕರ್ನಾಟಕದಲ್ಲಂತೂ ಶೋಭಾ ಕರಂದ್ಲಾಜೆಯಂತ ಮಹಿಳೆ ಪಕ್ಷಕ್ಕಿಬ್ಬರಿದ್ದರೂ ಸಾಕು, ಸರಕಾರಕ್ಕೆ ಮೂಗುದಾರ ಹಾಕಬಹುದು. ಮುಖ್ಯವಾಗಿ ರಾಜಕೀಯ ಅಪರಾಧಿಕರಣ ಕಡಿಮೆಯಾಗಬಹುದು. ನಮ್ಮ ದೇಶದಲ್ಲಿ ಹಲವಾರು ಮಹಿಳೆಯರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ. ಆದರೆ ಮಹಿಳೆಯೊಬ್ಬಳು ಹಣಕಾಸು ಮತ್ತು ಗೃಹ ಇಲಾಖೆಯನ್ನು ನಿರ್ವಹಿಸಿದ ದಾಖಲೆ ಇದ್ದಂತಿಲ್ಲ. ಮುಂಬರುವ ದಿನಗಳಲ್ಲಿ ಅದನ್ನೂ ನೋಡುವ ಭಾಗ್ಯ ಒದಗಬಹುದು.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಅನುಮೋದನೆಗೊಂಡರೆ ಅನಂತರದಲ್ಲಿ ಅದು ಕನಿಷ್ಟ ಹದಿನಾಲ್ಕು ರಾಜ್ಯಗಳ ವಿದಾನಸಭೆ ಮತ್ತು ಪರಿಷತ್ತುಗಳಲ್ಲಿ ಅಂಗೀಕಾರಗೊಳ್ಳಬೇಕು. ಅನಂತರವೇ ಅದು ರಾಷ್ಟ್ರಪತಿಗಳ ಮುದ್ರೆ ಪಡೆದು ಕಾನೂನಾಗುತ್ತದೆ. ಅದು ಬಹಳ ದೀರ್ಘವಾದ ಪ್ರಕ್ರಿಯೆ. ಈ ಮಧ್ಯೆ ಯಾರ್ಯಾರು ಕೈಕೊಡ್ತಾರೋ ಹೇಳಲಾಗದು. ಮುಖ್ಯವಾಗಿ ಬಿಜೆಪಿಯನ್ನು ನಂಬಲಾಗದು. ಅದು ಹಿಂದು ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಕ್ಷ. ಹಿಂದು ಸಂಸ್ಕೃತಿ ನಿಂತಿರುವುದೇ ಕುಟುಂಬ ವ್ಯವಸ್ಥೆಯೇ ಮೇಲೆ. ಮಹಿಳೆಯರು ರಾಜಕೀಯ ಪ್ರಜ್ನೆ ಬೆಳೆಸಿಕೊಂಡು ರಾಜಕಾರಣ ಮಾಡತೊಡಗಿದರೆ, ಸಮಾನತೆಯ ಕನಸು ಕಾಣತೊಡಗಿದರೆ ಕೌಟುಂಬಿಕ ರಚನೆ ಶಿಥಿಲಗೊಳ್ಳುತ್ತದೆ. ಅದು ಬಿಜೆಪಿಗೆ ಬೇಡ.

೨೦೦೬ರ ಘಟನೆಗಳನ್ನು ನೆನಪಿಸಿಕೊಳ್ಳಿ; ಪ್ರಧಾನ ಮಂತ್ರಿ ಗಾಧಿಗೆ ಸೋನಿಯಾ ಗಾಂಧಿಯ ಹೆಸರು ಕಾಂಗ್ರೇಸ್ ಪಕ್ಷದಿಂದ ಸೂಚಿತವಾಗಿತ್ತು. ಆಗ ಬಿಜೆಪಿ ಪಕ್ಷ ಘಟವಾಣಿ ಅತ್ತೆಯಂತೆ ಪೂತ್ಕರಿಸಿತ್ತು. ’ಸೋನಿಯ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಂಡು ವಿಧವೆಯ ಬಾಳು ಬದುಕುತ್ತೇನೆ’ ಎಂಬ ಹೇಳಿಕೆಯನ್ನು ಸುಷ್ಮಾ ಸ್ವರಾಜ್ ನೀಡಿಬಿಟ್ಟರು. ಬಳ್ಳಾರಿಯಲ್ಲಿ ಅರಶಿನ ಕುಂಕುಮ ಶೋಭಿತೆಯಾಗಿ ವರಮಾಹಾಲಕ್ಷ್ಮಿ ಪೂಜೆ ಮಾಡುವ ಸುಷ್ಮ, ದೆಹಲಿಯಲ್ಲಿ ಬಿಜೆಪಿಯ ವಕ್ತಾರರಾಗಿಬಿಡುತ್ತಾರೆ. ಅರ್ಥಾತ್ ಪುರುಷರಂತೆ ಯೋಚಿಸುವ ಮಹಿಳೆಯಾಗುತ್ತಾರೆ. ಇಂತಹ ಪಕ್ಷದಿಂದ ಮಹಿಳಾ ಮೀಸಲಾತಿಗೆ ಬೆಂಬಲವನ್ನು ನಿರೀಕ್ಷಿಸುವುದು ಕಷ್ಟ.

ಆದರೂ ಸೋನಿಯ ಪ್ರಯತ್ನದಲ್ಲಿ ನಂಬಿಗೆಯಿಡಬಹುದು. ಆಕೆಯಲ್ಲಿ ಇನ್ನೊಬ್ಬರನ್ನು ಅನುನಯಿಸುವ ಕಲೆ ಇದೆ. ಕ್ಷಮಾ ಗುಣವಿರುವವರಿಗೆ ಅನುನಯ ಕಲೆ ಒಲಿಯುತ್ತದೆ. ನಮ್ಮ ಪುರುಷರಲ್ಲಿ ಕೂಡ ನಮಗೆ ಭರವಸೆಯಿದೆ. ಯಾಕೆಂದರೆ ಅರ್ಧ ನಾರೀಶ್ವರನ ಕಲ್ಪನೆ ಹುಟ್ಟಿದ್ದು ಈ ಮಣ್ಣಿನಲ್ಲಿಯೇ; ಈ ಜಗತ್ತಿನ ಅತ್ಯುನ್ನತ ಶಕ್ತಿಯನ್ನು ಸ್ತ್ರೀಯೊಡನೆ ಸಮೀಕರಿಸಿದ್ದು ಇಲ್ಲಿಯೇ. ಮತ್ತು ಈ ಕಲ್ಪನೆ, ಹೋಲಿಕೆ ಮೊಳಕೆಯೊಡೆದದ್ದು ಪುರುಷನಲ್ಲಿಯೇ. ಇದು ನಮ್ಮ ನಂಬಿಕೆ.

[ ’ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ]

0 comments: