Saturday, December 10, 2011

ಸ್ಲಟ್ ವಾಕ್; ಸಾಂಸ್ಕೃತಿಕ ಧಾಳಿ



ಸ್ಲಟ್ ವಾಕ್ [slutwalk]- ಈ ಪದವೇ ನಮಗೆ ಅಂದರೆ ಭಾರತಿಯರಿಗೆ ಅಪರಿಚಿತವಾದುದು. ಯಾಕೆಂದರೆ ಈ ಪದ ನಮಗೆ ಪರಿಚಯವಾದುದೇ ಇತ್ತೀಚಗೆ. ಇದಕ್ಕೊಂದು ಹಿನ್ನೆಲೆಯಿದೆ;

ಇದೇ ವರ್ಷ ಜನವರಿ ೨೪ರಂದು ಕೆನಡಾದ ರಾಜಧಾನಿ ಟೊರಾಂಟೊದ yark ಯೂನಿವರ್ಸಿಟಿಯಯಲ್ಲಿ ಜರುಗಿದ ‘safety form’ ಎಂಬ ಸಭೆಯಲ್ಲಿ ವಿದ್ಯಾರ್ಥಿಗಳ್ನುದ್ದೇಶಿಸಿ ಮಾತಾಡಿದ michail sanguinetti ಎಂಬ ಪೋಲಿಸ್ ಅಧಿಕಾರಿಯೊಬ್ಬರು ಭಾಷಣದ ಮಧ್ಯೆ, ’women should avoid dressing like sluts in order not to be victimized’ ಎಂದು ಹೇಳಿದರು. ಅದು ಅಲ್ಲಿದ್ದ ಮಹಿಳೆಯರನ್ನು ಕೆರಳಿಸಿತು.”

’ಸ್ಲಟ್’ ಎಂಬ ಪದಕ್ಕೆ ಕನ್ನಡದಲ್ಲಿ ಸಂವಾದಿ ಪದವನ್ನು ಹುಡುಕುವುದಾದರೆ ಅದು ’ಸೂಳೆ’ ಯೇ ಸೂಕ್ತ ಪದ.”ಮಹಿಳೆಯರು ಅಶ್ಲೀಲವಾಗಿ ಡ್ರೆಸ್ ಮಾಡಿಕೊಳ್ಳುವುದನ್ನು ಬಿಟ್ಟರೆ ಲೈಂಗಿಕ ದೌರ್ಜನ್ಯದಿಂದ ಪಾರಾಗಬಹುದು’ ಎಂಬುದು ಆ ಪೋಲಿಸ್ ಅಧಿಕಾರಿಯ ಮಾತಿನ ಭಾವಾರ್ಥ. ಆತ ಆ ಪರಿಸರದಲ್ಲಿ ಹಾಗೆ ಮಾತಾಡಿದ್ದು ಸರಿಯಾಗಿಯೇ ಇತ್ತು. ಕ್ಯಾಂಪಸ್ ಸುರಕ್ಷತೆಯ ಬಗ್ಗೆ ಆತ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳುವುದು ಆತನ ಕರ್ತವ್ಯವಾಗಿತ್ತು.

ಆದರೆ ವಿದ್ಯಾರ್ಥಿಗಳು ವಿರುದ್ಧ ಸಿಡಿದೆದ್ದರು. ಅನೇಕ ಮಹಿಳಾ ಸಂಘಟನೆಗಳು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು.ಏಪ್ರೀಲ್ ೩ ರಂದು ಇವರೆಲ್ಲಾ ಸೇರಿ ಟೊರೆಂಟೊದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆ ಮೆರವಣಿಗೆಯಲ್ಲಿ ಅವರೆಲ್ಲಾ”ಸ್ಲಟ್’ ತರಹ ಡ್ರಸ್ ಮಾಡಿಕೊಂಡಿದ್ದರು. ’ನಾವು ಧರಿಸುವ ಬಟ್ಟೆ ಬದಲಾಗಬೇಕಿಲ್ಲ, ನಿಮ್ಮ ಚಿಂತನೆಯನ್ನು ಬದಲಾಯಿಸಿಕೊಳ್ಳಿ’ ಎಂಬುದು ಮೆರವಣಿಗೆಯ ಆಶಯವಾಗಿತ್ತು.

ಅಂದರೆ ಮಹಿಳೆಯರು ತೊಡುವ ಬಟ್ಟೆ-ಬರೆ ಪುರುಷರ ಲೈಂಗಿಕ ಕಾಮನೆಗಳನ್ನು ಕೆರಳಿಸುತ್ತದೆಯೇ? ಕೆನಡಾದಂಥ ಪಾಶ್ಚಾತ್ಯ ರಾಷ್ಟ್ರವೊಂದರ ಸಾಮಾಜಿಕ ಪರಿಸರದಲ್ಲಿ ಹುಟ್ಟಿದ ಪ್ರತಿಭಟನೆಯೊಂದು ಭಾರತದಂಥ ದೇಶದಲ್ಲಿ ಪ್ರಸ್ತುತವಾಗುತ್ತದೆಯೇ? ಇದು ಈಗಿರುವ ಪ್ರಶ್ನೆ. ಇಲ್ಲಿ ಒಂದು ಸ್ಪಷ್ಟಿಕರಣವುಂಟು; ಇದು ಕೇವಲ ಪ್ರತಿಭಟನೆ ಮಾತ್ರ, ಇದನ್ನು ಕೆಲವರು ಚಳುವಳಿ ಎಂದು ತಪ್ಪಾಗಿ ಕರೆದದ್ದುಂಟು. ಪ್ರತಿಭಟನೆಗೂ ಚಳುವಳಿಗೂ ವ್ಯತ್ಯಾಸವಿದೆ.

ದೂರದ ಟೊರಾಂಟದ ಅನ್ಯ ಪರಿಸರದಲ್ಲಿ ಹುಟ್ಟಿದ ಸ್ಲಟ್ ವಾಕ್ ದೆಹಲಿ, ಭೋಪಾಲ್, ಮುಂಬೈಗಳನ್ನು ಹಾದು ಈಗ ಬೆಂಗಳೂರಿಗೂ ಕಾಲಿಟ್ಟಿದೆ. ದೆಹಲಿಯಲ್ಲಿ ಅದು ’ಬೇಶರ್ಮಿ ಮೋರ್ಚಾ’ ಆಗಿತ್ತು. ಕನ್ನಡದಲ್ಲಿ ’ನಾಚಿಗೆಗೆಟ್ಟ ಮೆರವಣಿಗೆ’ ಎನ್ನಬಹುದೇನೋ ! ಮೊನ್ನೆ ಡಿ.೪ರಂದು ಹೆಜ್ಜೆ ಗೆಜ್ಜೆ ಎಂಬ ಎನ್.ಜಿ.ಓ ಈ ಮೆರವಣಿಗೆಯನ್ನು ಏರ್ಪಡಿಸಿತ್ತು. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯು ಇದಕ್ಕೆ ಅನುಮತಿಯನ್ನು ನಿರಾಕರಿತ್ತು. ಆದರೆ ಇದರ ಆಯೋಜಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮುಂದೆ ಸ್ಲಟ್ ವಾಕ್ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಜನವರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

”ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಚೆನ್ನ’ ಎಂಬ ಭಾರತೀಯ ಪರಿಸರದಲ್ಲಿ ರೂಪಿತಗೊಂಡದ್ದು ನಮ್ಮ ಮನಸು. ಹಾಗೆಯೇ ಬಿಚ್ಚಿಟ್ಟದ್ದನ್ನು ಕೂಡಾ ಪೂಜನೀಯವಾಗಿ ಕಂಡಿದೆ ಭಾರತೀಯ ಸಂಸ್ಕೃತಿ. ಇಲ್ಲಿ ಅಕ್ಕ ಮಾಹಾದೇವಿಯ ಬೆತ್ತಲೆ ಅಶ್ಲೀಲವಲ್ಲ. ದಿಗಂಬರ ಜೈನ ಯತಿಗಳ ನಗ್ನತೆ ನಮ್ಮ ಕಾಮನೆಗಳನ್ನು ಕೆರಳಿಸುದಿಲ್ಲ; ನಾಗಾ ಸಾಧುಗಳ ನಗ್ನತೆ ಅಸಹ್ಯ ಹುಟ್ಟಿಸುವುದಿಲ್ಲ. ಗೋಮಟೀಶ್ವರನ ಭವ್ಯತೆಯೆದುರು ಮನಸ್ಸು ಬಾಗುತ್ತದೆ. ಇಲ್ಲಿಯ ನಗ್ನತೆಗೆ ಅಧ್ಯಾತ್ಮದ ಆಯಾಮವಿದೆ. ಅದು ದೈವಿಕತೆಯ ಎತ್ತರಕ್ಕೆ ಏರುತ್ತದೆ. ದೈವಿಕವಾದುದು ಆತ್ಮ ನಿಷ್ಟವಾಗಿರುತ್ತದೆ. ಲೌಕಿಕವಾದುದು ದೇಹನಿಷ್ಟವಾಗಿರುತ್ತದೆ. ನಾವು ಲೌಕಿಕರು. ನಮಗೆ ದೇಹದ ಮೇಲೆ ಮೋಹವಿದೆ. ಆಕರ್ಷಣೆಯಿದೆ. ಇಲ್ಲಿ ಕೆಲವನ್ನು ನಾವು ಮುಚ್ಚಬೇಕಾಗುತ್ತದೆ. ಮುಚ್ಚದಿದ್ದರೆ ಅದು ಆಕರ್ಶಣೆಗೆ ಒಳಗಾಗುತ್ತದೆ.ಮನೋರಂಜನೆಯಾಗಿ ಕಾಡುತ್ತದೆ. ಆಗ ಅವಾಂತರಗಳಾಗುತ್ತವೆ.

ಶೀಲ- ಅಶ್ಲೀಲತೆ ಎಂಬುದು ನೋಡುವ ನೋಟದಲ್ಲಿದೆ. ಗ್ರಹಿಸುವ ಮನಸ್ಸಿನಲ್ಲಿದೆ.ವ್ಯವಹರಿಸುವ ನಡವಳಿಕೆಯಲ್ಲಿದೆ. ಟೊರೊಂಟಾದಲ್ಲಿ ಪ್ರತಿಭಟನೆ ನಡೆದಾಗ ಅಲ್ಲಿ ಎಲ್ಲರೂ ಕನಿಷ್ಠ ಉಡುಗೆ ತೊಟ್ಟು ಬಂದಿದ್ದರು. ಅಲ್ಲಿ ಅದು ಕಾಮನ್ ಡ್ರಸ್. ಆದರೆ ಭಾರತದಲ್ಲಿ ಪ್ರತಿಭಟನೆಗಳು ನಡೆದಾಗ ಇಲ್ಲಿನ ಮಹಿಳ್ಯರು ಜೀನ್ಸ್-ಕುರ್ತಾ, ಟೀಶರ್ಟ್ ಗಳಲ್ಲಿ ಭಾಗವಹಿಸಿದ್ದರು ಇಲ್ಲಿಗೆ ಇದು ಸಹ್ಯ. ಮಹಿಳೆ ಧರಿಸುವ ಬಟ್ಟೆ ಬರೆಗಳೇ ಆಕೆಯ ಮೇಲಿನ ಅತ್ಯಾಚಾರಕ್ಕೆ ಕಾರಣವಾಗುವುದಾದರೆ ವೃದ್ದೆಯ ಮೇಲೆ, ಮಕ್ಕಳ ಮೇಲೆ, ಮುಸ್ಲಿಂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಯಾವ ಸಮರ್ಥನೆಯನ್ನು ಕೊಡುತ್ತಿರಿ? ಅದೊಂದು ಮಾನಸಿಕ ಸ್ಥಿತಿ. ಅದು ಗಂಡಸಿನ ಮನಸ್ಥಿತಿ ಅದಕ್ಕೆ ಟೊರಂಟೊದ ಗಂಡಸು ಅಥವಾ ಭಾರತೀಯ ಗಂಡಸು ಎಂಬ ಬೇಧವಿಲ್ಲ. ಅದು ಸಂಸ್ಕೃತಿ ಹೀನ ಮನಸ್ಸು ಅಷ್ಟೇ..

ಸ್ಲಟ್ ವಾಕ್ ಅನ್ನು ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ಐರೋಪ್ಯದ ಸಾಂಸ್ಕೃತಿಕ ಧಾಳಿ ಎನ್ನಬಹುದು. ಮುಕ್ತ ಮಾರುಕಟ್ಟೆಯ ಪ್ರವೇಶದಿಂದಾಗಿ ಈಗ ಎಲ್ಲವೂ ಮಾರುಕಟ್ಟೆಯ ಸರಕುಗಳೇ ಆಗಿವೆ. ಸಾಂಸ್ಕೃತಿಕ ಅನನ್ಯತೆಯೆಂಬುದು ಕೂಡಾ ಕಲಬೆರಕೆಯಾಗತೊಡಗಿದೆ.

ಸ್ಲಟ್ ವಾಕ್ ಎಂಬ ಎರವಲು ಚಿಂತನೆಯ ಪ್ರೋತ್ಸಾಹಕರಿಗೆ ಕೇವಲ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಓಡಾಡುವ ಮಹಿಳೆಯಷ್ಟೇ ಕಾಣುತ್ತಾರೆಯೇ? ನಗರ-ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿರುವ ಮಹಿಳೆಯರು ಕಣ್ಣಿಗೆ ಬೀಳುವುದಿಲ್ಲವೇ? ಅವರ ಕಷ್ಟ-ಕಾರ್ಪಣ್ಯಗಳು ಅವರ ಕಿವಿಯನ್ನು ತಲುಪುವುದಿಲ್ಲವೇ? ಅವರಿಗೆ ಪ್ರತಿಭಟನೆಯೆಂಬುದು ಕೂಡಾ ಒಂದು ಹವ್ಯಾಸವೇ? ಅವರಿಗೆ ನಿಜವಾಗಿಯೂ ಸ್ತ್ರೀಪರ ಕಾಳಜಿಗಳಿದ್ದರೆ ನಮ್ಮ ಸಮಾಜದಲ್ಲಿ ಸ್ಥೀ ಸಮಸ್ಯೆಗಳಿಗೇನು ಬರವೆ? ಸ್ತ್ರೀ ಬ್ರೂಣ ಹತ್ಯೆ,ವರದಕ್ಶಿಣೆ ಸಾವು, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ…ಹೆಣ್ಣಿನ ಬಾಳೇ ಸಂಕಷ್ಟಗಳ ಸರಮಾಲೆ.

ಇದನ್ನೆಲ್ಲಾ ಬಿಟ್ಟು ಕೆಲಸವಿಲ್ಲದ ಬಡಗಿ ಅದೇನೋ ಕೆತ್ತಿದನಂತೆ ಎಂಬ ಗಾದೆಯಂತೆ ಆಗಿದೆ”ಸ್ಲಟ್ ವಾಕ್’ ಎಂಬ ಪರದೇಶಿ ಸರಕಿಗೆ ಇಲ್ಲಿ ಮಾರುಕಟ್ಟೆ ಹುಡುಕುವ ಪ್ರಯತ್ನ!

[ ವಿಜಯ್ಅ ನೆಕ್ಸ್ಟ್ ಪೇಪರಿನಲ್ಲಿ ಪ್ರಕಟವಾದ ಲೇಖನ ]

8 comments:

sunaath said...

ಸ್ಲಟ್‍ವಾಕ್ ಪ್ರತಿಭಟನೆಯ ಬಗೆಗೆ ಒಳ್ಳೆಯ ವಿವರಣೆ ಕೊಟ್ಟಿದ್ದೀರಿ. ನಾನು ಒಂದೇ ಮಾತನ್ನು ಸೇರಿಸಬಯಸುತ್ತೇನೆ. ಹೆಣ್ಣು ಗಂಡಸನ್ನು ಒಲಿಸಿಕೊಳ್ಳಬೇಕು ಹಾಗು ಆ ಕಾರಣಕ್ಕಾಗಿ ಅರೆಬತ್ತಲೆ ಉಡುಪು ಅಥವಾ ಸೌಂದರ್ಯಸಾಧನಗಳನ್ನು ಬಳಸಬೇಕು ಎನ್ನುವ motivationಏ ತಪ್ಪಾಗಿದೆ. ಇದು ನೂರಾರು ವರ್ಷಗಳಿಂದ ಪುರುಷಪ್ರಧಾನ ಸಮಾಜವು ಸ್ತ್ರೀಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯ ಫಲವಾಗಿದೆ. ಇದನ್ನು ಪ್ರತಿಭಟಿಸಲು ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ ತರಹದ ಪ್ರತಿಭಟನೆ ನಡೆಯುವದು ಸಹಜ. ಪಶ್ಚಿಮದಲ್ಲಿ ನಡೆಯುವ ವಿಧಾನವನ್ನು ನಾವು ಅನುಸರಿಸಬೇಕಾಗಿಲ್ಲ ಎನ್ನುವ ನಿಮ್ಮ ಹೇಳಿಕೆ ಸರಿಯಾಗಿದೆ.

ಸುಧೇಶ್ ಶೆಟ್ಟಿ said...

Thumba samayadha nanthara blog odalu praarambiside.. modalu shuru maadiddu nimma bloginindale... hindina baari odhidha lekhanadinda hididu indinavaregina yella lekhana odide :) thumba kushi kottitu barahgaLu :)

ಸುಧೇಶ್ ಶೆಟ್ಟಿ said...

Thumba samayadha nanthara blog odalu praarambiside.. modalu shuru maadiddu nimma bloginindale... hindina baari odhidha lekhanadinda hididu indinavaregina yella lekhana odide :) thumba kushi kottitu barahgaLu :)

prabhamani nagaraja said...

ಉತ್ತಮ ವಿಶ್ಲೇಷಣಾ ಬರಹ. ನಿಮ್ಮ ಅಭಿಪ್ರಾಯದೊಡನೆ ನನ್ನದೂ ಸಹಮತವಿದೆ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

V.R.BHAT said...

ಯಾವುದೋ ಒಂದು ಹೊಸ ವಿಚಾರ ಸಿಕ್ಕಿಬಿಟ್ಟರೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೆಸರುಮಾಡುವ ದುರುದ್ದೇಶದಿಂದ ಪಾಶ್ಚಾತ್ಯ ಅಂಧಾನುಕರಣೆ ಸಲ್ಲ. ನಮ್ಮ ಇತಿಹಾಸ-ಪುರಾಣಗಳೂ ರಾಮಾಯಣ್-ಮಹಾಭಾರತಗಳೂ ಹೆಣ್ಣನ್ನೂ ಗಂಡನ್ನೂ ಅರೆನಗ್ನವಾಗಿಯೇ ಚಿತ್ರಿಸಿವೆ-ಅಲ್ಲಿ ನೀವೇ ಹೇಳಿದಂತೇ ದೃಷ್ಟಿಕೋನ ವಿಭಿನ್ನವಾಗಿದೆ-ಪೂಜನೀಯವಾಗಿದೆ. ದುಷ್ಯಂತನ ಶಕುಂತಲೆಯನ್ನು ’ಕವಿರತ್ನ ಕಾಳಿದಾಸ’ಚಲನಚಿತ್ರದಲ್ಲಿ ಕಂಡ ನಾವು ಅದನ್ನು ಅಸಹ್ಯವೆನ್ನುವುದಿಲ್ಲ ಆದರೆ ಡರ್ಟಿ ಪಿಕ್ಚರ್ ನಲ್ಲಿ ವಿದ್ಯಾಬಾಲನ್ ಅಂಥದ್ದೇ ಉಡುಗೆ ಉಟ್ಟು ಸ್ವಲ್ಪ ಬಳುಕಿದರೆ ನೋಡಲಾಗದ ಮಡಿವಂತಿಕೆಯ ಮುಸುಕು ಧರಿಸುತ್ತೇವೆ. ಕ್ಯಾಟ್ ವಾಕ್ ಮಾಡಲಾಗದ ಕೆಲವು ಜನ ಸ್ಲಟ್ ವಾಕ್ ಗೆ ಬಂದಿದ್ದಾರೇನೋ. ಯಾಕೆಂದರೆ ಎರಡೂ ಅಲ್ಲಿಯ ಮೂಲದವೇ. ಸಮರ್ಪಕ ವಿಶ್ಲೇಷಣೆ.

suragi \ ushakattemane said...

ಪ್ರತಿಕ್ರಿಯಿಸಿದ ಸುನತ್,ಪ್ರಭಾಮಣಿ ಮತ್ತು ವಿ.ಆರ್.ಭಟ್ ಅವರಿಗೆ ವಂದನೆಗಳು.
ಸುಧೇಶ್ ಶೆಟ್ಟಿಯವರೇ ಇಲ್ಲಿ ಕಾಣೆಯಾಗಿದ್ರಿ? ನಿಮ್ಮ ಕಾಮೆಂಟ್ ಯಾವಾಗಲೂ ಭಿನ್ನವಾಗಿರುತ್ತಿತ್ತು. ನೀವು ಮತ್ತೆ ನನ್ನ ಬ್ಲಾಗ್ ಬರಹ ಓದಲು ಬಂದದ್ದು ನಂಗೆ ತುಂಬಾ ಖುಷಿಯಾಯ್ತು.

suragi \ ushakattemane said...

ಪ್ರತಿಕ್ರಿಯಿಸಿದ ಸುನತ್,ಪ್ರಭಾಮಣಿ ಮತ್ತು ವಿ.ಆರ್.ಭಟ್ ಅವರಿಗೆ ವಂದನೆಗಳು.
ಸುಧೇಶ್ ಶೆಟ್ಟಿಯವರೇ ಇಲ್ಲಿ ಕಾಣೆಯಾಗಿದ್ರಿ? ನಿಮ್ಮ ಕಾಮೆಂಟ್ ಯಾವಾಗಲೂ ಭಿನ್ನವಾಗಿರುತ್ತಿತ್ತು. ನೀವು ಮತ್ತೆ ನನ್ನ ಬ್ಲಾಗ್ ಬರಹ ಓದಲು ಬಂದದ್ದು ನಂಗೆ ತುಂಬಾ ಖುಷಿಯಾಯ್ತು.

ರವಿ ಮೂರ್ನಾಡು said...

ಸೂಕ್ಷ್ಮ ವಿಚಾರವನ್ನೇ ಮನಸ್ಸಿಗೆ ಅದ್ದಿದ್ದೀರಿ. ನನಗನ್ನಿಸಿದಂತೆ ಗಂಡು ಮತ್ತು ಹೆಣ್ಣು ಇವರಿಬ್ಬರ ನಡುವಿನ ದೃಷ್ಠಿಕೋನ ಅವಾಂತರಗಳಿಗೆ ಕಾರಣವಾಗುತ್ತವೆ. ಇಲ್ಲಿ ಕೆಲಸ ಮಾಡುವಂತಹದ್ದು ಮೋಹ.ಇಷ್ಟೆಲ್ಲಾ ಸುದ್ದಿಗಳು ದಿನ ಬೆಳಗಾಗುವುದರೊಳಗೆ ನಮಗೆ ಸತ್ಯ ದರ್ಶನ ಮಾಡಿಸುವಾಗ ಆಕರ್ಷಣೆ ಅನ್ನುವುದನ್ನು ವ್ಯಾಪಾರಕ್ಕಿಟ್ಟು, ದೌರ್ಬಲ್ಯಗಳನ್ನು ಹೆಚ್ಚಿಸಿದ್ದು ಅಂದಿನಿಂದ ಇಂದಿನವರೆಗೂ ಕಾಣುತ್ತಲೇ ಬಂದಿದ್ದೇವೆ. ಹೆಣ್ಣಿನ ಮೇಲಿನ ಹಲವು ಮುಖದ ದೌರ್ಜನ್ಯಕ್ಕೆ ಅವಳೇ ಶೇ.೫೦ರಷ್ಟು ಕಾರಣಳಾಗಿರುತ್ತಾಳೆ.ಅದನ್ನು ಬೆಳೆಸುವವರು ಮತಿಗೆಟ್ಟ ಗಂಡಸರು.ಇನ್ನೊಂದು ವಿಚಾರವೆಂದರೆ, ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಯ ಲೇಬಲ್‍ ಇಂದು ನಿನ್ನೆಯದಲ್ಲ.ಕೆಲವನ್ನು ಬ್ರಿಟೀಷರೇ ಇಲ್ಲಿ ಬಿಟ್ಟು ಹೋಗಿದ್ದಾರೆ. ಕೆಲವು ದಿನ ನಿತ್ಯ ಹರಿದು ಬರುತ್ತಿದೆ. ಅದರಲ್ಲಿ ಸ್ಲಟ್ ಸಂಸ್ಕೃತಿ ಒಂದು.ಕೆಲವು ಮನಸ್ಸುಗಳು ವಿದೇಶಿಯರಿಗೆ ಮಾರಾಟವಾಯಿತು.ಕೆಲವು ವಿದೇಶದಿಂದ ಇಲ್ಲಿ ಹರಾಜಾಯಿತು. ಅಂತೂ ಮನುಷ್ಯನ ದೌರ್ಬಲ್ಯ ಎಂಜಲು ನೆಕ್ಕುವುದನ್ನು ಬಿಡುವುದಿಲ್ಲ. ಅದು ಸತ್ತು ಮಸಣ ಸೇರುವವರೆಗೆ. ಅದರಲ್ಲಿ ಗಂಡು ಮತ್ತು ಹೆಣ್ಣು ಇಬ್ಬರ ಸಮಪಾಲು ಇದೆ. ಕೆಲವು ಗೋಚರಿಸುತ್ತದೆ. ಕೆಲವು ಗೋಚರಿಸುವುದಿಲ್ಲ. ನಿಮ್ಮ ಲೇಖನ್ ತುಂಬಾ ಚೆನ್ನಾಗಿದೆ ಮಾನ್ಯರೆ.