Monday, May 7, 2012

’ಬೌತಿಕದ ಹಸಿವು ಮತ್ತು ಅಧ್ಯಾತ್ಮದ ಸೆಳೆತ




ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಲಾಯಿತಯ್ಯಾ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತಯ್ಯಾ
ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ

ಅಲ್ಲಮನ ಈ ವಚನವನ್ನು ಮತ್ತೆ ಮತ್ತೆ ಗುನುಗುಣಿಸಲು ಕಾರಣವಾಗಿದ್ದು ಇತ್ತೀಚೆಗೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ ಕಾಲ ನಡೆದ ’ಜನಪರ ಸಂಸ್ಕೃತಿ ಉತ್ಸವ’ ಎಂಬ ನಾಟಕೋತ್ಸವ.
ರಂಗಚೇತನ ಕಲಾವಿದರು ಆಯೋಜಿಸಿದ ಈ ನಾಟಕೋತ್ಸವದಲ್ಲಿ ಒಟ್ಟು ನಾಲ್ಕು ನಾಟಕಗಳು ಪ್ರದರ್ಶನಗೊಂಡವು. ಜೊತೆಗೊಂದು ಬೀದಿ ನಾಟಕವೂ ಇತ್ತು. ಎಲ್ಲಾ ನಾಟಕೋತ್ಸವದಂತೆ ಇಲ್ಲಿಯೂ ವಿಚಾರಸಂಕಿರಣ, ಕವಿಗೋಷ್ಠಿ, ಜಾನಪದ ಮೇಳ, ಪ್ರಶಸ್ತಿ ವಿತರಣೆಗಳಿದ್ದವು.

ನಾಟಕೋತ್ಸವದ ಆರಂಭದ ದಿನ ಪ್ರದರ್ಶಿತಗೊಂಡ ನಾಟಕ ’ಅರಿವಿನಮನೆ. ಈ ನಾಟಕೋತ್ಸವದ ಆಯೋಜಕರಾದ ನಂಜುಂಡಸ್ವಾಮಿ ರಚಿಸಿ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶಿಸಿದ ಈ ನಾಟಕವನ್ನು ರಂಗಚೇತನ ತಂಡದ ಕಲಾವಿದರು ಅಭಿನಯಿಸಿದ್ದರು.

ಮಾದಾರ ಚೆನ್ನಯ್ಯ ಕೀಳು ಜಾತಿಯವನು ವೃತ್ತಿಯಿಂದ ಚಪ್ಪಲಿ ಹೊಲಿಯುವವನು. ಆದರೆ ಕರಸ್ಥಳದಲ್ಲಿ ಲಿಂಗವನ್ನಿಟ್ಟು ಭಕ್ತಿ ನೈವೇಧ್ಯವನ್ನು ಅರ್ಪಿಸುವಾತ.  ಆ ರಾಜ್ಯದ ಒಡೆಯ ಚೋಳ ಮಹಾರಾಜ ಭಕ್ಷ್ಯಬೋಜ್ಯಗಳನ್ನಿತ್ತು ನೈವೇದ್ಯ ಮಾಡಿದರೂ ಸ್ವೀಕರಿಸದ ಶರಣವೇಷದಾರಿ ಶಿವ. ಚೆನ್ನಯ್ಯನ ಮನೆಯ ಅಂಬಲಿಯನ್ನು ಅಕ್ಕರೆಯಿಂದ ಉಣ್ಣುತ್ತಾನೆ. ಇದನ್ನು ತಿಳಿದ ರಾಜ ’ನನ್ನ ಶಿವನಿಗೆ ಅಂಬಲಿ ಕುಡಿಸಿದನೇ’ ಎಂದು ಚೆನ್ನಯ್ಯನ ಮೇಲೆ ಮೊದಲು ಕುಪಿತಗೊಂಡರೂ ಅಮೇಲೆ ಚೆನ್ನಯ್ಯನ ಮನೆಗೆ ಬಂದು ಅವನ ಭಕ್ತಿ ಪಾರಮ್ಯವನ್ನು ಕಂಡು ಮನಪರಿವರ್ತನೆಗೊಂಡು ಅವನನ್ನು ಆಸ್ಥಾನಕ್ಕೆ ಅಹ್ವಾನಿಸುತ್ತಾನೆ.
 ಚೆನ್ನಯ್ಯ ಆ ರಾಜ್ಯವನ್ನು ಬಿಟ್ಟು ಬಸವಣ್ಣನಿರುವ ಕಲ್ಯಾಣಕ್ಕೆ ತಪ್ಪಿಸಿಕೊಂಡು ಬರುತ್ತಾನೆ. ಅಲ್ಲಿ ಬಸವಣ್ಣನ ಜೊತೆಗೂಡಿ ಅರಿವಿನ ಮನೆಯನ್ನು ಹುಟ್ಟು ಹಾಕುತ್ತಾನೆ. ಅಕ್ಷರ ಕ್ರಾಂತಿಯ ಕನಸು ಕಾಣುತ್ತಾನೆ. ಅರಿವಿನ ಮನೆಗೆ ರಾಜಾಶ್ರಯವನ್ನು ನಯವಾಗಿ ತಿರಸ್ಕರಿಸುವ ಮಾದಾರ ಚೆನ್ನಯ್ಯ, ಮುಂದೆ ಬಿಜ್ಜಳನೇ ಅರಿವಿನ ಮನೆಯನ್ನು ಉದ್ಘಾಟಿಸುವ ಕ್ಷಣಕ್ಕೆ ಸಾಕ್ಷಿಯಾಗಬೇಕಾಗುತ್ತದೆ.  ಆ ಐತಿಹಾಸಿಕ ಕ್ಷಣದಲ್ಲಿಯೇ ಚೆನ್ನಯ್ಯ ಬ್ರಮ ನಿರಸನಗೊಂಡು ಅಲ್ಲಿಂದ ಕಣ್ಮರೆಯಾಗುತ್ತಾನೆ.

ಬಯಲು ಎನ್ನುವುದು ಅಧ್ಯಾತ್ಮಿಕತೆಯ ಅತ್ಯುನ್ನತ ಸಂಕೇತ; ಶೂನ್ಯ ಸ್ಥಿತಿ. ಅದನ್ನೇ ಅಲ್ಲಮ ’ಬಯಲು’ ಎನ್ನುತ್ತಾನೆ. ಅದಕ್ಕೆ ಆದಿಯಿಲ್ಲ ಅಂತ್ಯವಿಲ್ಲ.ಅದು ಅನಂತ.  ಈ ನಾಟಕದಲ್ಲಿ ಚೆನ್ನಯ್ಯ ಅಲ್ಲಮನಿಗೆ ಆಪ್ತನಾಗುತ್ತಾನೆ.
ಒಂದುಮುಕ್ಕಾಲು ಘಂಟೆಯ ಈನಾಟಕವನ್ನು ನಿರ್ದೇಶಕರು ಎಪ್ಪತ್ತು ನಿಮಿಷಗಳಿಗೆ ಇಳಿಸಿಕೊಂಡರೂ ನಾಟಕದ ಆಶಯಕ್ಕೆ ಧಕ್ಕೆಯಾಗಲಿಲ್ಲ. ನಾಟಕದುದ್ದಕ್ಕೂ ಬಳಸಿಕೊಂಡ ಅಲ್ಲಮ, ಬಸವಣ್ಣ ಮತ್ತು ಮಾದಾರ ಚೆನ್ನಯ್ಯನ ವಚನಗಳು ನಾಟಕದ ಸರಾಗ ಚಲನೆಗೆ ಕಾರಣವಾಗಿದ್ದವು.
ನಾಟಕೋತ್ಸವದ ಎರಡನೆಯ ನಾಟಕವಾಗಿ ಪ್ರದರ್ಶನಗೊಂಡದ್ದು ಅಮರೇಶ ನಿಡುಗೋಣಿಯವರ  ಸಣ್ಣ ಕಥೆಯಾಧಾರಿತ ನಾಟಕ ’ನೀರು ತಂದವರು’.ಶಶಿಧರ್ ಭಾರೀಘಾಟ್ ರಂಗರೂಪಕ್ಕೆ ಅಳವಡಿಸಿದ ಈ ನಾಟಕವನ್ನು ರಂಗನಿರಂತರ ತಂಡಕ್ಕಾಗಿ ನಿರ್ದೇಶಿಸಿದವರು ಎಂ. ರವಿ.
ಮೂರನೆಯ ದಿನ ದಾಕ್ಷಾಯಣಿ ಭಟ್ ನಿರ್ದೇಶನದ ’ಮರುಗಡಲು ನಾಟಕ ಪ್ರದರ್ಶನವಾಯಿತು.ಗ.ಸು.ಭಟ್ ರಚಿಸಿದ ಈ ನಾಟಕವನ್ನು ದೃಶ್ಯ ತಂಡದವರು ಅಭಿನಯಿಸಿದ್ದರು.

ಸಮಾರೋಪದಂದು ಪೂರ್ವನಿಗಧಿತವಾದ ನಾಟಕ ’ಕರ್ವಾಲೋ’ ಪ್ರದರ್ಶಿತವಾಗದೇ ಅದೇ ತಂದದವರಿಂದ ’ರಾಮಧಾನ್ಯ’ ನಾಟಕ ಪ್ರದರ್ಶಿತಗೊಂಡಿತು.ನಿರ್ದೇಶನ ಕೆ.ಎಸ್.ಡಿ.ಎಲ್ ಚಂದ್ರು ಅವರದೇ. ಹಾಗಾಗಿ ಒಂದೇ ನಾಟಕೋತ್ಸವದಲ್ಲಿ ಒಬ್ಬರೇ ನಿರ್ದೇಶಕರ, ಒಂದೇ ತಂಡದ ಎರಡು ನಾಟಕಗಳನ್ನು ನೋಡುವಂತಾದುದು ವಿಶೇಷ !
ರಾಮಧಾನ್ಯದ ಕಥೆ ಎಲ್ಲರಿಗೂ ಗೊತ್ತಿರುವಂತಹದೇ. ಇದು ಕನಕದಾಸರ ಕೃತಿ. ಆಕ್ಕಿ ಮತ್ತು ರಾಗಿ ಮಧ್ಯೆ ಯಾರು ಶ್ರೇಷ್ಟರೆಂಬ ವಾಗ್ವಾದ ಶುರುವಾಗಿ ನ್ಯಾಯ ತೀರ್ಮಾನಕ್ಕಾಗಿ ರಾಮನ ಬಳಿ ಬರುತ್ತಾರೆ. ರಾಮ ಅವರಿಬ್ಬರ ವಾದವನ್ನು ಆಲಿಸಿ ರಾಗಿಯೇ ಶ್ರೇಷ್ಟವೆಂದು ತೀರ್ಪು ಕೊಡುತ್ತಾನೆ.
ಈ ನಾಟಕದ ರಾಮ ಕ್ಯಾಲೆಂಡರಿನ ರಾಮನಲ್ಲ. ಕಾಲಿಗೆ ಸ್ಕೆಟಿಂಗ್ ಕಟ್ಟಿಕೊಂಡು ರಂಗದಲೆಲ್ಲಾ ಕರಾರುವಕ್ಕಾಗಿ ಹರಿದಾಡುತ್ತಾನೆ.
ನಾಟಕೋತ್ಸವದ ಆರಂಭ ಮತ್ತು ಅಂತ್ಯದ ನಾಟಕಗಳೆರಡರ ನಿರ್ದೇಶಕ ಮತ್ತು ತಂಡ ಒಂದೇ ಆದ ಕಾರಣದಿಂದಾಗಿಯೋ ಏನೋ ಪರಿಣಾಮದ ದೃಷ್ಟಿಯಿಂದ ಉತ್ತಮ ಪ್ರಯೋಗವೆಂದೇ ಹೇಳಬಹುದು. ಮೊದಲನೆಯದು ಹೊಸ ನಾಟಕ. ಕೊನೆಯದು ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ನಾಟಕ. ಎರಡರಲ್ಲು ಉತ್ತಮ ಲೈವ್ ಸಂಗೀತವಿತ್ತು. ಆರಂಭದಿಂದ ಅಂತ್ಯದ ತನಕ ಬಿಗಿಯಾದ ನಿರೂಪಣೆಯಿತ್ತು.ಒಂದೇ ಲಯವಿತ್ತು. ಕೆಲವು ಕಡೆ ಅದ್ದ್ಭುತವೆನಿಸುವಂತ ಬೆಳಕಿನ ವಿನ್ಯಾಸವಿತ್ತು.ಏಕಾತನತೆಯನ್ನು ಭಂಗಗೊಳಿಸಲು ಸಂಗೀತ ಮತ್ತು ನೃತ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು.

 ’ಅರಿವಿನ ಮನೆ’ ನಾಟಕದುದ್ದಕ್ಕೂ ನಾಟಕದ ಆಶಯಕ್ಕೆ ಪೂರಕವಾಗಿ ರಿಂಗುಣಿಸಿದ ’ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು”ಎಂಬ ಅಲ್ಲಮನ ವಚನದ ಧ್ವನಿ ಸಮಾರೋಪದ ನಾಟಕವಾದ ’ರಾಮಧಾನ್ಯ’ದಲ್ಲೂ ಮುಂದುವರಿದಿತ್ತು. ವ್ಯ್ತತ್ಯಾಸ ಇಷ್ಟೆ.ಅಲ್ಲಿ ಇದ್ದುದು ಅಧ್ಯಾತ್ಮದ ಹಸಿವು. ಇಲ್ಲಿ ಇದ್ದುದು ಬೌತಿಕ ಹಸಿವು. ಅಲ್ಲಿಯ ಎಳೆ ಇಲ್ಲಿಯವರೆಗೂ ಹರಿದಿತ್ತು ಅದು ಈ ನಾಟಕೋತ್ಸವದ ಯಶಸ್ಸು.

[ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ ]