ಕಳೆದ
ವಾರ ನಾನು ನನ್ನ ತವರೂರಿಗೆ ಹೋಗಿದ್ದೆ. ಕುಕ್ಕೆಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಎಂಬ
ಹಳ್ಳಿಯದು.ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟಶ್ರೇಣಿಯ ಸೆರಗಿನೂರು. ನನ್ನ ಮನೆಗೆ ಹೋಗುವ ರಸ್ತೆಯ
ಎರಡೂ ಬದಿಗಳಲ್ಲಿ ದಟ್ಟವಾದ ಬಿದಿರುಹಿಂಡಿಲುಗಳಿವೆ. ಪ್ರತಿ ಬಾರಿ ಊರಿಗೆ ಹೋದಾಗಲೂ ಅವು ರಸ್ತೆಗೆ
ಬಾಗಿ ನನಗೆ ಸ್ವಾಗತ ಕೋರುವುದು ಸಾಮಾನ್ಯ ಸಂಗತಿ. ಆದರೆ ಈ ಬಾರಿಯ ಸ್ವಾಗತ ಸಾಮಾನ್ಯವಾಗಿರಲಿಲ್ಲ.
ಅವು ತೆನೆ ತುಂಬಿ ಭತ್ತದ ಬಾರಕ್ಕೆ ಬಳುಕುತ್ತಿದ್ದವು.
ನನ್ನ
ಮನಸ್ಸು ಸುಮಾರು ನಲ್ವತ್ತು ವರ್ಷಗಳ ಹಿಂದಕ್ಕೆ ಓಡಿತು.
ಅಂದು
ಮಂಗಳವಾರ.ಇನ್ನೂ ಬೆಳಕು ಹರಿದಿರಲಿಲ್ಲ. ನನ್ನಮ್ಮ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡಳು.
ಇನ್ನೊಂದು ಕಯ್ಯಲ್ಲೆ ಒಂದು ದೊಡ್ಡ ಕುಕ್ಕೆ, ಕುಕ್ಕೆಯೊಳಗೊಂದು ಕತ್ತಿ. ತಲೆಯ ಮೇಲೆ ತುಳು
ಭಾಷೆಯಲ್ಲಿ ’ತಡ್ಪೆ’ ಎಂದು ಕರೆಯುವ ತುಳುವೇತರರು
ಮೊರ ಎನ್ನುವ ಅಗಲವಾದ ಗೆರಸೆ. ಅದರ ಮೇಲೊಂದು ಪೊರಕೆ. ಬಿರಬಿರನೆ ಹೆಜ್ಜೆ ಹಾಕುತ್ತಾ
ಕುಡುಮುಂಡೂರು ಹೊಳೆಯನ್ನು ದಾಟಿ, ಅದರ ಪಕ್ಕದ ಅಡ್ಕದಲ್ಲಿದ್ದ ಬಿದಿರು ಮೆಳೆಯತ್ತ ಸಾಗಿದವಳೇ
ನನ್ನನ್ನು ಒಂದೆಡೆ ಕುಳ್ಳಿರಿಸಿದಳು. ಬೆಳ್ಳುಳ್ಳಿ ಮತ್ತು ಈರುಳ್ಳಿ ನಾಯಿಗಳು ನನಗೆ ಕಾವಲಾಗಿ
ಅಕ್ಕ-ಪಕ್ಕ ಕುಳಿತವು. ಒಂದು ವಿಶಾಲವಾದ ಬಿದಿರು ಹಿಂಡಲನ್ನು ಆಯ್ಕೆ ಮಾಡಿದವಳೇ ಅಮ್ಮ
ಅದರಡಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಬಿದಿರಕ್ಕಿಯನ್ನು ಗುಡಿಸಿ ಗುಡ್ಡೆ ಮಾಡತೊಡಗಿದಳು. ಮಂಗಳವಾರವನ್ನೇ
ಆಯ್ಕೆ ಮಾಡಿಕೊಳ್ಳಲು ಕಾರಣವಿತ್ತು. ಅಂದು ಬಿದಿರಕ್ಕಿಯನ್ನು ಯಾರೂ ಸಂಗ್ರಹಿಸುವುದಿಲ್ಲ..
ಕಾಡನ್ನು ರಕ್ಷಿಸುವ ಚಾಮುಂಡಿ ತಾಯಿಗೆ ಆ ದಿನದ ಅಕ್ಕಿ ಮೀಸಲು. ಬಹುಶಃ ನನ್ನಮ್ಮ ದೇವರಿಗೆ ತಪ್ಪು
ಕಾಣಿಕೆಯನ್ನು ತೆಗೆದಿಟ್ಟು ಬಿದಿರಕ್ಕಿ ಆರಿಸಲು ಬಂದಿರಬೇಕು. ಇಲ್ಲಿ ಬಿದಿರಕ್ಕಿ ಅಂದರೂ
ವಾಸ್ತವದಲ್ಲಿ ಅದು ಭತ್ತವೇ. ಅದನ್ನು ಗುಡ್ಡದಿಂದ ತಂದು ಕಲ್ಲು ಮಣ್ಣನ್ನು ಬೇರ್ಪಡಿಸಿ, ಕುಟ್ಟಿ
ಹೊಟ್ಟು ತೆಗೆದು ಅಕ್ಕಿ ಮಾಡಲು ದೀರ್ಘ ಪರಿಶ್ರಮ ಬೇಕು.
ಬರವನ್ನು
ಎದುರಿಸಲು ಪ್ರಕೃತಿಮಾತೆ ತನ್ನ ಮಕ್ಕಳಿಗೆ ಹಲವಾರು ಒಳದಾರಿಗಳನ್ನು ಹೇಳಿಕೊಟ್ಟಿದ್ದಾಳೆ.
ತನ್ನೊಡಲೊಳಗೇ ಹಲವಾರು ಗೆಡ್ಡೆಗೆಣಸುಗಳನ್ನು ಹುದುಗಿಟ್ಟುಕೊಂಡಿರುತ್ತಾಳೆ. ’ನೊರೆ’ ಎಂದು
ಕರೆಯಲ್ಪಡುವ ಬಳ್ಳಿಯ ಹಿಟ್ಟು ತುಂಬಿದ ಉದ್ದವಾದ
ಬೇರಿನ ಗೆಡ್ಡೆಗಳನ್ನು ಕಾಡಿನಿಂದ ಅಗೆದು ತಂದು ಬೇಯಿಸಿ ಬಾಯಿ ಚಪ್ಪರಿಸುತ್ತಾ ತಿಂದ ನೆನಪು
ನನಗಿದೆ. ಹಾಗೆಯೇ ಬೈನೆ ಮರದ ಹಿಟ್ಟು ಕೂಡಾ ಬರಗಾಲದಲ್ಲಿ ಹಸಿದ ಹೊಟ್ಟೆಗೆ ಹಿಟ್ಟಾಗುತ್ತಿತ್ತು.
ಇದು ನಮ್ಮೂರಿನ ಕಥೆಯಾದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗೋಟಿ ಹಾಗು
ಕತ್ತಾಳೆಗಡ್ಡೆಯನ್ನು ಬೇಯಿಸಿಕೊಂಡು ತಿನ್ನುತ್ತಿದ್ದರೆಂದು ಕೇಳಿದ್ದೇನೆ.
ಇದನ್ನೆಲ್ಲಾ
ಯೋಚಿಸುತ್ತಾ ಮನೆಗೆ ಬಂದರೆ ಸಂಬಂಧದಲ್ಲಿ ನನಗೆ ಅತ್ತೆಯಾಗಬೇಕಾಗಿದ್ದ, ಅಂದಿನ ಬರಗಾಲದ
ದಿನಗಳಲ್ಲಿ ನಮ್ಮ ಗೇಣಿ ಒಕ್ಕಲಾಗಿದ್ದ ಅಜ್ಜಿ ನಮ್ಮ ಮನೆಯಲ್ಲಿ ಕೂತಿದ್ದರು. ನನ್ನನ್ನು ಕಂಡು, ’ಹೇಗೂ
ಉಷಾ ಬಂದಿದ್ದಾಳೆ. ಅವಳಿಗೆ ಇದನ್ನು ರೊಟ್ಟಿಮಾಡಿ ಕೊಡು’ ಎಂದು ಕುಕ್ಕೆಯಲ್ಲಿದ್ದ ನುಚ್ಚಿನಂತ
ಅಕ್ಕಿಯನ್ನು ಅಮ್ಮನ ಕೈಯ್ಯಲ್ಲಿಟ್ಟು ಹೋದರು. ಅದು ಬಿದಿರಕ್ಕಿ. ಈ ಬಾರಿ ಒಂದು ಕೇಜಿ ಅಕ್ಕಿಗೆ ನೂರೈವತ್ತು ರೂಪಾಯಿಯಂತೆ.
ದುಡ್ಡು ಕೊಡಲು ಹೋದರೆ ಎಷ್ಟೇ ಒತ್ತಾಯಿಸಿದರೂ ಅತ್ತೆ ತಗೊಳ್ಳಲೇ ಇಲ್ಲ ಎಂದು ಅಮ್ಮ ನನ್ನಲ್ಲಿ
ಅವಲತ್ತುಕೊಂಡರು. ಈ ವಯಸ್ಸಿನಲ್ಲೂ ಅವರು ಸುಮಾರು ಐವತ್ತು ಕೇಜಿಯಷ್ಟು ಅಕ್ಕಿಯನ್ನು
ಸಂಗ್ರಹಿಸಿದ್ದಾರೆ ಎಂಬುದನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ
ಬಿದಿರು
ಹೂ ಹೋದ ವರ್ಷ ಬರಗಾಲ ಬರುತ್ತದೆಯೆಂಬುದು ವಾಡಿಕೆ. ಪ್ರಕೃತಿ ಯಾವಾಗಲೂ ತಾಯಿಯೇ. ಆಕೆ ತನ್ನ
ಮಕ್ಕಳನ್ನು ಪೊರೆಯಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ. ಒಂದು ಬಿದಿರ ಹಿಂಡಲಿನಲ್ಲಿ
ಕನಿಷ್ಟ ೨೫ ಕೇಜಿ ಭತ್ತ ದೊರೆಯುತ್ತದೆ. ಬಿದಿರು
ಹೂ ಬಿಡುವುದು ಅರುವತ್ತು ವರ್ಷಕ್ಕೊಮ್ಮೆ, ಅದೂ ಸಾವಿರಾರು ಎಕರೆ ವಿಸ್ತಾರದಲ್ಲಿ. ಹಾಗೆ ಹೂ
ಬಿಟ್ಟು, ಬೀಜವಾಗಿ ತನ್ನ ಸಂತತಿ ಬೆಳೆಯಲು ಅನುವು ಮಾಡಿಕೊಟ್ಟು ತಾನು ಸತ್ತು ಹೋಗುತ್ತದೆ.
ಸಾಮೂಹಿಕ ನಾಶದ ಕಾರಣದಿಂದಾಗಿ ಅದನ್ನು”ಕಟ್ಟೆ ರೋಗ’ ಎಂದೂ ಕರೆಯುತ್ತಾರೆ. ಸ್ಥಳೀಯವಾಗಿ ಅದನ್ನು
’ರಾಜನ್ ಹೋಗುವುದು’ ಎಂದೂ ಕರೆಯುತ್ತಾರೆ. ಹಾಗೆಂದರೆ ಏನು ಎಂಬುದು ನನಗೂ ತಿಳಿದಿಲ್ಲ. ಬಹುಶಃ
’ರಾಜನ್ ದೈವ’ಗಳಿಗೂ ಇದಕ್ಕೂ ಸಂಬಂಧವಿದ್ದರೂ ಇರಬಹುದು; ಯಾಕೆಂದರೆ ಇದು ತುಳುನಾಡು.
ಬರಗಾಲ
ಅಂದರೆ ಏನು? ಮಳೆ ಆಗದಿರುವುದು. ಮಳೆ ಆಗದಿದ್ದರೆ ಭೂಮಿ ಬರಡಾಗುತ್ತದೆ. ಬೆಳೆ
ಬೆಳೆಯಲಾಗುವುದಿಲ್ಲ. ಪರಿಣಾಮವಾಗಿ ಜನರ ಹೊಟ್ಟೆಗೆ ಹಿಟ್ಟಿಲ್ಲ. ಜನ-ಜಾನುವಾರು ಸೇರಿದಂತೆ
ಪ್ರಾಣಿಸಂಕುಲಕ್ಕೆ ಕುಡಿಯಲು ನೀರಿಲ್ಲ. ಚಿಕ್ಕಂದಿನಲ್ಲಿ ನಾವು ಹಾಡಿದ್ದೇವೆ ’ಹುಯ್ಯೋ ಹುಯ್ಯೋ
ಮಳೆರಾಯ, ಬಾಳೆಯ ತೋಟಕ್ಕೆ ನೀರಿಲ್ಲ’ ಆದರೆ ನಮ್ಮ ಮಕ್ಕಳು ’rain rain go away’ಎಂದು
ಹಾಡುತ್ತಿರುವುದು ವಿಪರ್ಯಾಸ ಅಲ್ಲವೇ? ಬರಗಾಲದ ಭೀಕರತೆಯನ್ನು ಹೇಳುವ ಒಂದು ಜನಪದ ಹಾಡು ಯವಾಗಲೂ
ನನಗೆ ನೆನಪಿಗೆ ಬರುತ್ತದೆ. ಅದು ’ಬಣ್ಣಾದ ಗುಬ್ಯಾರು ಮಳೆರಾಯ..ಮಕ್ಕಳಾ ಮಾರ್ಯಾರು
ಮಳೆರಾಯ…ರೊಕ್ಕವಾ ಹಿಡಕೊಂಡು ಭತ್ತಂತ ತಿರುಗ್ಯಾರು ಮಳೆರಾಯ..’ ಮಕ್ಕಳನ್ನೇ ಮಾರಿ ಕಯ್ಯಲ್ಲಿ
ದುಡ್ಡು ಹಿಡ್ಕೊಂಡು ಅನ್ನಕ್ಕಾಗಿ ಅಲೆದಾಡುವ ಧಾರುಣ ಸ್ಥಿತಿ ಬರಗಾಲದ ಭೀಕರತೆಯ ಸಮರ್ಥ
ಚಿತ್ರಣವನ್ನು ಕಟ್ಟಿಕೊಡುತ್ತದೆ.
ಪ್ರಕೃತಿ
ವಿಕೋಪಗಳು ಸಂಭವಿಸುವುದು ಅತ್ಯಂತ ಸಹಜ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು
ಸಮರ್ಥವಾಗಿ ಎದುರಿಸಲು ಬುದ್ಧಿವಂತನಾದ ಮಾನವ ಹಲವಾರು ದಾರಿಗಳನ್ನು ಕಂಡುಕೊಂಡಿದ್ದಾನೆ. ಹಿಂದೆ
ಜನಾನುರಾಗಿ ನಾಯಕನೊಬ್ಬ ಹೇಗೆ ರೂಪುಗೊಳ್ಳುತ್ತಿದ್ದ ಎಂದರೆ ಆತ, ಕೆರೆಗಳನ್ನು ಕಟ್ಟಿಸುತ್ತಿದ್ದ,
ಬಾವಿಯನ್ನು ತೋಡಿಸುತ್ತಿದ್ದ, ಅರವಟ್ಟಿಗೆ [ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ]
ಗಳನ್ನು ನಿರ್ಮಿಸುತ್ತಿದ್ದ. ಅನ್ನ ಛತ್ರಗಳನ್ನು ಕಟ್ಟಿಸುತ್ತಿದ್ದ, ಸಾಲುಮರಗಳನ್ನು
ನೆಡಿಸುತ್ತಿದ್ದ.
ಇದನ್ನು
ಒಬ್ಬ ಸೂಳೆಯೂ ಮಾಡುತ್ತಿದ್ದಳು. ನಮ್ಮ ನಾಡಿನುದ್ದಕ್ಕೂ ಹರಡಿಕೊಂಡಿರುವ ಅಸಂಖ್ಯಾತ ಬೃಹತ್ ’ಸೂಳೆ
ಕೆರೆ’ಗಳನ್ನು ನೆನಪಿಸಿಕೊಳ್ಳಿ. ಸಮಾಜದಿಂದ ಗಳಿಸಿದ ಹಣವನ್ನು ಪಶ್ಚಾತ್ತಾಪದ ರೀತಿಯಲ್ಲಿ ಮತ್ತೆ
ಅದನ್ನು ಜನೋಪಯೋಗಿ ಕೆಲಸಕ್ಕೆ ಆಕೆ ವಿನಿಯೋಗಿಸುತ್ತಿದ್ದಳು. ಜೀವ ಜಲಕ್ಕಿರುವ ಮಹತ್ವ ಆಕೆಗೂ
ಗೊತ್ತಿತ್ತು. ಆ ತಾಯಂದಿರು ಕಟ್ಟಿಸಿದ ವಿಶಾಲ ಕೆರೆಗಳಲ್ಲಿ ಇವತ್ತಿಗೂ ಅಪಾರ ಜಲರಾಸಿಯಿದೆ. ಆಕೆಯ
ಜೊತೆ ನಮ್ಮ ರಾಜಕಾರಣಿಗಳನ್ನು, ಮಠಾದೀಶರನ್ನು, ದಿಡೀರ್ ಶ್ರೀಮಂತರಾಗುವುದಕ್ಕೆ ಹೊರಟ
ಪ್ರಕೃತಿಭಂಜಕರನ್ನು ಒಮ್ಮೆ ಹೋಲಿಸಿ ನೋಡಿ…
ಈಗ
ಕೆರೆಗಳೆಲ್ಲಾ ಸೈಟ್ ಗಳಾಗುತ್ತಿವೆ. ಕಾಡುಗಳೆಲ್ಲಾ ರೆಸಾರ್ಟ್ ಗಳಾಗುತ್ತಿವೆ. ನೀರಿನ
ಆಗರಗಳಾಗಿರುವ ಬೆಟ್ಟ ಗುಡ್ಡಗಳು ದುಡ್ಡಿನ ಖಜಾನೆಗಳಂತೆ ಗೋಚರಿಸುತ್ತವೆ.
ಬರಗಾಲ ಬಂತೆಂದರೆ ಕಂಟ್ರಾಕ್ಟ್ ದಾರರು, ದಲ್ಲಾಳಿಗಳು
ಹಬ್ಬವನ್ನಾಚರಿಸುತ್ತಾರೆ. ನಲ್ವತ್ತು ವರ್ಷಗಳ ಹಿಂದೆ ಸಂಭವಿಸಿದ ಬರಗಾಲದಲ್ಲಿ ಅಮೇರಿಕಾದಂತಹ
ಕೊಬ್ಬಿದ ರಾಷ್ಟ್ರ ಸಮುದ್ರಕ್ಕೆಸೆಯುವ ಹುಳು ಹಿಡಿದ ರವೆಯನ್ನು ಜೊತೆಗೆ ಪಾಮ್ ಆಯಿಲ್ ನ
ಬಿಕ್ಷೆಯನ್ನು ಹಾಕಿ, ಪಾರ್ಥೆನಿಯಮ್ ಅನ್ನು ಉಚಿತವಾಗಿ ನೀಡಿತ್ತು! ಆಗಲೇ ಆರಂಭವಾಗಿದ್ದು ಶಾಲಾ
ಮಕ್ಕಳಿಗೆ ಮಧ್ಯಾಹ್ನ ಊಟವನ್ನು ನೀಡುವ ಕೇರ್ ಪ್ರೋಜೆಕ್ಟ್ ಯೋಜನೆ. ಇದನ್ನು ಸಮಾಜವಾದಿಗಳು ತೀವ್ರವಾಗಿ ಪ್ರತಿಭಟಿಸಿದ್ದರು. ಆಗ
ಹರಡಿದ ಪಾರ್ಥೆನಿಯಮ್ ಅನ್ನು ನಿಯಂತ್ರಿಸಲು ಮೆಕ್ಸಿಕೋದಿಂದ ’ಮೆಕ್ಸಿಕನ್ ಭೀ’ ಯನ್ನು ಆಮದು
ಮಾಡಿಕೊಳ್ಳಲಾಗಿತ್ತು!.
ಅಂದು
ಕುಡಿಯಲು ನೀರಿತ್ತು; ತಿನ್ನಲು ಆಹಾರವಿರಲಿಲ್ಲ. ಇಂದು ಸರಕಾರದ ಹಲವಾರು ಯೋಜನೆಗಳಿಂದ ಬಡ ಜನರ
ಹೊಟ್ಟೆ ಅನಾಯಸವಾಗಿ ತುಂಬುತ್ತಿದೆ. ಹಾಗಾಗಿ ಅವರೀಗ ಹಸಿವೆಯಿಂದ ಸಾಯಲಾರರು. ’ಉದ್ಯೋಗ
ಖಾತ್ರಿ’ಯೆಂಬ ದೂರದರ್ಶಿತ್ವವಿಲ್ಲದ ಯೋಜನೆಯಿಂದಾಗಿ ಸುಲಭದಲ್ಲಿ ಒಂದಷ್ಟು ದುಡ್ಡು ಅವರ
ಕೈಸೇರುತ್ತಿದೆ. ಹೇಗೂ ಬಿಪಿಎಲ್ ಕಾರ್ಡ್ ನಲ್ಲಿ ಅತೀ ಕಡಿಮೆ ದರದಲ್ಲಿ ಪಡಿತರ ದೊರೆಯುತ್ತದೆ.
ಇದರ ನೇರ ಪರಿಣಾಮ ಕೃಷಿಕ್ಷೇತ್ರದ ಮೇಲಾಗಿದೆ. ಅಲ್ಲೀಗ ಕೃಷಿಕಾರ್ಮಿಕರ ಕೊರತೆಯುಂಟಾಗಿ
ಕೃಷಿಭೂಮಿಯೆಲ್ಲ ಪ್ಲಾಂಟೇಷನ್ ಬೆಳೆ ಬೆಳೆಯುವ ಜಾಗಗಳಾಗಿ ಪರಿವರ್ತನೆಯಾಗುತ್ತಿದೆ.
ಮುಂದಿನ
ದಿನಗಳಲ್ಲಿ ಜನರು ಸತ್ತರೆ ನೀರಿಲ್ಲದೆ
ಸಾಯಬೇಕಷ್ಟೇ.ಮನುಷ್ಯ ಪ್ರಕೃತಿಯ ಮೇಲೆ ಹೀಗೆಯೇ ದೌರ್ಜನ್ಯ ನಡೆಸುತ್ತಾ ಹೋದರೆ ಆ ದಿನಗಳೂ
ದೂರವಿಲ್ಲವೆನಿಸುತ್ತಿದೆ
[
ಮೇ ೮ರ ವಿಜಯಕರ್ನಾಟಕದ ನನ್ನ ಅಂಕಣ ’ಅನುರಣನ’ದಲ್ಲಿ ಪ್ರಕಟವಾದ ಬರಹ.]
1 comments:
Nostalagic memories of Bidarakki(bamboo rice) and ponds built during the history by certain women make heartwarming recollections.. But in the end,why be pessimistic about conceived scarcity of water in future? Earth has ample water resources at its disposal and it only requires proper planning so that it is made available conveniently to everyone.
Post a Comment