**************************************************************************
ನಾನು ಬಿಹಾರದ ಬೋದಗಯದಲ್ಲಿದ್ದೆ.
ಗೌತಮ ಬುದ್ದನಿಗೆ ಜ್ನಾನೋದಯವಾದ ಬೋದಿ ವೃಕ್ಷವನ್ನು ನೋಡಲು ಇಳಿದು ಹೋಗುವ ಗೇಟಿನ ಎದುರು ನಿಂತಿದ್ದೆ.
ನನ್ನ ಬಲ ಬದಿಯ ರಸ್ತೆಯನ್ನು ಒಮ್ಮೆ ನೋಡಿದವಳೇ ಮತ್ತೆ ತಲೆಯೆತ್ತಿ ನೋಡಿದೆ... ಮೇಲೆ ಮೆಟ್ರೋ ಸೇತುವೆ ನಿರ್ಮಾಣ ಹಂತದಲ್ಲಿತ್ತು.
ಅಲ್ಲಿಂದ ಎಡಗಡೆ ದೃಷ್ಟಿ ಹಾಯಿಸಿದೆ.ಕಬ್ಬಿಣದ ಬೇಲಿಯನ್ನು ದಾಟಿ ರಸ್ತೆಯತ್ತ ಚಾಚಿದ ಬೋದಿಯ ವಿಶಾಲ ರೆಂಬೆಗಳನ್ನು ಕತ್ತರಿಸಲಾಗಿತ್ತು.
            ******************************************
ಕ್ಲಾಸ್ ಆರಂಭವಾಗಿದೆ. ಹೊತ್ತಾಗುತ್ತಿದೆ..ಹೋಗಲೇ ಬೇಕಾಗಿತ್ತು. ಕೈಯ್ಯ್ಯಲ್ಲಿ ಒಂದು ರೂಪಾಯಿಯೂ ಇಲ್ಲ. ಅಲ್ಲೇ ಪಕ್ಕದಲ್ಲಿ @ Bharathi b.v.ನಿಂತಿದ್ದರು. ಹೋಗಿ ಕೇಳಿದೆ ’ಇಪ್ಪತ್ತು ರೂಪಾಯಿ ಕೊಡ್ತೀಯಾ?’
ಆಕೆ ಮೇಜಿನ ಹಿಂದೆ ಏನೋ ಮಾಡುತ್ತಿದ್ದವಳು ಅಲ್ಲಿಂದಲೇ ಕೆಳಗೆ ಬಗ್ಗಿ ಐವತ್ತು ರೂಪಾಯಿಗಳ ಎರಡು ನೋಟುಗಳನ್ನು ಕೊಟ್ಟು ಅದಕ್ಕೆ ಲೆಖ್ಖವಿಡುವವಳಂತೆ ಏನನ್ನೋ ಬರೆದುಕೊಂಡಳು. ನಾನು ಆ ನೋಟುಗಳನ್ನು ತೆಗೆದುಕೊಂಡೆ. ಆ ಎರಡು ನೋಟುಗಳ ಮಧ್ಯೆ ಮಡಚಿದ ನೂರು ರೂಪಾಯಿಯ ನೋಟೋಂದು ಅಡಗಿಕೊಂಡಿತ್ತು.
ಭಾರತಿ ಹತ್ತಿರ ದುಡ್ಡು ಕೇಳಬೇಕೆಂದಾಗ. ಕಾಲೇಜು ಅಲ್ಲೇ ಹತ್ತಿರದಲ್ಲಿ ಕಾಣುತ್ತಿತ್ತು. ಮತ್ತು ನಾನು ಕೇಳಬೇಕೆಂದಿದ್ದ ಇಪ್ಪತ್ತು ರೂಪಾಯಿಗಳು ನಾನು ಕಾಲೇಜಿಗೆ ಹೋಗಲಷ್ಟೇ ಸಾಕು, ಪುನಃ ಬರಲು ಏನು ಮಾಡುವುದೆಂದು ಮನಸ್ಸು ಯೋಚಿಸುತ್ತಿತ್ತು.
ಭಾರತಿ ಐವತ್ತರ ಎರಡು ನೋಟು ಕೊಟ್ಟಾಗ ಅದರಲ್ಲಿ ಒಂದು ನೋಟಿನ ಅರ್ಧ ಭಾಗ ಗೆದ್ದಲು ಹಿಡಿದು ತೂತು ತೂತಾಗಿತ್ತು. 
 ನಾನು ಯೋಚಿಸಿದೆ; ನೂರರ ನೋಟು ಅಲ್ಲಿದ್ದುದು ಆಕೆಗೆ ತಿಳಿದಿರಬಹುದೇ? ಇದನ್ನು ಆಕೆ ಲೆಖ್ಖದಲ್ಲಿ ಸೇರಿಸಿರಬಹುದೇ?.........
ನನ್ನ ನಾನು ನೋಡಿಕೊಂಡೆ. ಬರ್ಮುಡ ಧರಿಸಿದ್ದೆ. ನನ್ನಲ್ಲೇ ಅಂದುಕೊಂಡೆ; ’ಹೀಗೆ ಕಾಲೇಜಿಗೆ ಹೋಗುವುದೆ?’
**********************************************************
ಅದೊಂದು ವೇದಿಕೆ. ಅಲ್ಲೊಬ್ಬ ಹಿಜಿಡಾ ಆಧುನಿಕ ಡ್ಯಾನ್ಸ್ ಮಾಡುತ್ತಿದ್ದ.
ಗೋದಿ ಮೈಬಣ್ಣದ ಅತ್ಯಂತ ಸುಂದರನಾಗಿರುವ ಅವನ ಮೈಮೇಲೆ ಒಂದು ತುಂಡು ಅರಿವೆಯೂ ಇರಲಿಲ್ಲ...
ನಾನು ಸ್ಟೇಜ್ ಬದಿಯಲ್ಲಿ ಹಾದು ಹೋದೆ...ಆತ ನನ್ನತ್ತ ನೋಡಿದ...
ಮುಖ ತುಂಬಾ ಪ್ರುಫಲ್ಲಿತವಾಗಿತ್ತು. ನನಗಾತ ಪರಿಚಯವಿದ್ದ ಹಾಗಿತ್ತು.
ನಾನು ತುಂಬಾ ಆಕರ್ಷಕವಾಗಿ ಸೀರೆ ಉಟ್ಟಿದ್ದೆ...ಹಾಗೆ ಅಲ್ಲಿಂದ ಹಾದು ಹೋದೆ.
****************************************************************
ತಟ್ಟನೆ ಎಚ್ಚರವಾಯಿತು. ಅದಕ್ಕೆ ಕಾರಣವಿತ್ತು. ರಾತ್ರಿ ಕಾರ್ಪೋರೇಷನ್ ನೀರು ಬಂದಿರಬಹುದೆಂದು ನಲ್ಲಿ ತಿರುಗಿಸಿದವಳು ಅದನ್ನು ಬಂದ್ ಮಾಡಲು ಮರೆತಿದ್ದೆ. ಹಾಗಾಗಿ ನೀರು ಹರಿದು ಅಡುಗೆ ಮನೆಯ ನೆಲದಲೆಲ್ಲಾ ಹರಿದು ಅಡುಗೆ ಕಟ್ಟೆಯಲ್ಲಿಂದ ತೊಟ್ಟಿಕ್ಕುತ್ತಿದ್ದ ನಿಯಮಿತವಾದ ಕ್ಷೀಣ ಶಬ್ದಕ್ಕೆ ನನಗೆ ಎಚ್ಚರವಾಗಿತ್ತು.
ಆಗ ಬೆಳಗಿನ ನಾಲ್ಕು ಘಂಟೇಯ ಸಮಯ..ನಲ್ಲಿ ಬಂದ್ ಮಾಡಿ ಮಲಗಿದವಳಿಗೆ ಮೇಲೆನ ಮೂರು ಸ್ತಬ್ದ ಚೆತ್ರಗಳಂತ ಕನಸು ಬಿದ್ದಿತ್ತು.
RAM ಸ್ಟೇಜ್ ನಲ್ಲಿ ಕನಸುಗಳು ಬೀಳುತ್ತವೆಯೆಂದು ನನಗೆ ಗೊತ್ತಿದೆ. ಆದರೆ ನನಗೆ ಕನಸುಗಳು ಬೀಳುವುದು ಕಡಿಮೆ. ಹಾಸಿಗೆಗೆ ಮೈ ಚೆಲ್ಲಿದ ಎರಡು ನಿಮಿಷಗಳೊಳಗೆ ನನಗೆ ನಿದ್ರೆ ಆವರಿಸಿಬಿಡುತ್ತದೆ. ಮತ್ತು  ಬೆಳಿಗ್ಗೆ ಅಂದುಕೊಂಡ ಸಮಯಕ್ಕೆ ಕರಾರುವಕ್ಕಾಗಿ ಎದ್ದು ಬಿಡುತ್ತೇನೆ. ನನಗೆ ಸರಾಸರಿ ಐದು ಘಂಟೆಗಳ ನಿದ್ರೆ ಸಾಕಾಗುತ್ತದೆ.
ಮೇಲಿನ ಸ್ತಬ್ದ ಚೆತ್ರದಂತಹ ಕನಸು ಬೀಳಲು ಕಾರಣವೇನಿರಬಹುದು? 
ನಾನು ಎರಡ್ಮೂರು ದಿನಗಳಿಂದ ನನ್ನ ಪುಸ್ತಕದ ಕಪಾಟುಗಳಲ್ಲಿನ ಪುಸ್ತಕಗಳನ್ನು ಮರು ಜೋಡಿಸುತ್ತಿದ್ದೆ. ಹಾಗೆ ಜೋಡಿಸುವಾಗ ಅವುಗಳನ್ನು ತಿರುವಿ ಹಾಕುತ್ತಲಿದ್ದೆ. ನಿನ್ನೆ ತಿರುವಿಹಾಕಿ ಮಲಗಿದ ಪುಸ್ತಕಗಳು ಗಂಗಾದರ ಚಿತ್ತಾಲ ಮತ್ತು ಸುದೇಶ್ ಮಹಾನ್ ಅವರ ಕಥಾ ಸಂಕನಗಳು;
ಸುದೇಶ್ ತಮ್ಮ”ಅಬ್ದುಲ್ಲಾನ ಕೈಲಾಸ’ ಕವನ ಸಂಕಲನದ ’ಬೇಕು’ ಕವನದಲ್ಲಿ  ಹೀಗೆ ಬರೆಯುತ್ತಾರೆ;

”ಬುದ್ಧನ ಮಾರಿ ಬದುಕಲು
ಬೋದಿ ವೃಕ್ಷಕ್ಕೆ ಗೊಬ್ಬರ ಹಾಕಬೇಕು. 
ಗಾಂಧಿಗೆ ಬೀಫ್ ತಿನ್ನಿಸಬೇಕು
ಮಾರ್ಕ್ಸನ ಗಡ್ಡದಲ್ಲಿ
ಹೇನಾಗಿದೆ...ಕ್ರಾಂತಿಯಾಗಬೇಕು !”

ಗಂಗಾಧರ ಚಿತ್ತಾಲರ ”ದುಃಖಗೀತ’ ನನಗೆ ಅಡಿಗರ ’ಭೂಮಿಗೀತ’ ದಷ್ಟೇ ಇಷ್ಟವಾಗಿರುವ ಕವನ. ಅವರ ತಂದೆ ತಮ್ಮ ಮನೆಯ ಹಿಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾಗ ಆ ಕವಿ ಮನ ತಲ್ಲಣಿಸಿ ಬರೆದ ಕವನವಿದು. ಅದರ ಈ ಸಾಲುಗಳು ನನಗೆ ಬಾಯಿ ಪಾಠವಾದಂತಿದೆ. ಅದನ್ನು ಇನ್ನೊಮ್ಮೆ ನಿನ್ನೆ ಓದಿದ್ದೆ. ಅದು ಹೀಗಿದೆ;

” ನಾ ಹುಟ್ಟಿ ಬರುವಾಗಲೇ ಪಿಂಡದಲಿ ಬಂತು
ಏನೋ ದುರ್ದೈವದೆಳೆ
[ಶುಭ್ರಲೋಲಕದಲಿ ಬಿರುಕಿನತಿಸೂಕ್ಷ್ಮಗೆರೆ]
ಅದುವೇ ಬೆಳೆಯುತ ಬಂತು ಬಾಳಿನುದ್ದಕು
ರಕ್ತಮಾಂಸಗತವಾಗಿ......

ಈ ಎಲ್ಲಾ ಹಿಂಸೆಯೊಲು ಜೀವ ಕೇಳುವುದೊಂದೆ
ತಿರುತಿರುಗಿ ಜೀವ ಕೇಳುವುದೊಂದೆ-ಒಂದೇ ಒಂದು
ಎಲ್ಲಿಂದ ಬಂದು ಕಾಡಿತು ಈ ಅಗಮ್ಯ, ವಾಚ್ಯಾತೀತ, ವಿಫಲ, ವಿಪರೀತ ವ್ಯಥೆ?
ಜನ್ಮ ಜನ್ಮಾಂತರದಿ ಬೇರೂರಿಬಹುದೆ ನಮ್ಮ ನೋವು-ನಲಿವುಗಳ ಕಥೆ?
ಜನನ-ಮರಣದ ಮಧ್ಯೆ ಹರಿವ ಬಾಳಿನ ಪಾತ್ರ
ಎಲ್ಲಿ ಇದರುಗಮ, ಎಲ್ಲಿದರ ನಿರ್ಗಮ-ಸತ್ರ?”

ನಿನ್ನೆ ಇದನ್ನೋದಿ ಮಲಗಿದ್ದೆ..

ಮೊನ್ನೆ ಪೇಸ್ ಬುಕ್ ನಲ್ಲಿ  ರಾಘವೇಂದ್ರ ಜೋಷಿ ಎಂಬ ನನ್ನ ಪೇಸ್ ಬುಕ್ ಗೆಳೆಯರೊಬ್ಬರು ಒಂದು ಸ್ಟೇಟಸ್ ಹಾಕಿದ್ದರು. ಅದರಲ್ಲಿ ಬುದ್ದ ಸಾಂದರ್ಭಿಕವಾಗಿ ಉಲ್ಲೇಖಿಸಲ್ಪಟ್ಟಿದ್ದ..ಅದಕ್ಕೆ ಹಲವಾರು ಜನ ಕಾಮೆಂಟ್ ಹಾಕಿದ್ದರು ನಾನೂ ಹಾಕಿದ್ದೆ. ಅದರಲ್ಲಿ ಶಮಾ ನಂದಿಬೆಟ್ಟ ಎನ್ನುವವರು, ಇನ್ನೆಲ್ಲಿಯ ಬೋದಿವೃಕ್ಷ? ಮೆಟ್ರೋ ಯೋಜನೆಗಾಗಿ ಅದನ್ನು ಕಡಿದು ಹಾಕಲಾಗಿದೆ ಎಂದರು. ಆಗ ನಾನು ಬೋದಿವೃಕ್ಷವನ್ನು ನೋಡಿದ್ದೇನೆ. ಅದರ ಗೆಲ್ಲುಗಳನ್ನಷ್ಟೇ ಕಡಿಯಲಾಗಿದೆ. ಅದರ ವಿಡಿಯೋ ಕ್ಲಿಪಿಂಗ್ಸ್ ನನ್ನಲ್ಲಿದೆ. ಯಾವತ್ತದರೂ ಅಪ್ಲೋಡ್ ಮಾಡ್ತೇನೆ ಅಂದೆ. ಆಗ ಅವರು ನಿಮ್ಮ ಪಾದಗಳ ಜೆರಾಕ್ಸ್ ಅನ್ನೂ ಅದರ ಜೊತೆ ಅಪ್ಲೋಡ್ ಮಾಡಿ ಎಂದರು..ಶಮಾ ನನಗೆ ಗೊತ್ತು. ಅವರು ತಮಾಶೆ ಮಾಡಿದ್ದು ಅದೂ ಗೊತ್ತು..ಆದರೂ..ಅದು ನನ್ನ ಮನಸ್ಸಿನಲ್ಲಿ ಹಾಗೇ ಕುಳಿತಿರಬಹುದೇ?
ಶಮಾ ಮನಃಶಾಸ್ತ್ರದ ವಿದ್ಯಾರ್ಥಿನಿ..ಆಕೆಯೇ ಈ ಬಗ್ಗೆ ಹೇಳಬೇಕು..!
ಇನ್ನೂ ಒಂದು ವಿಚಾರವಿದೆ. ಕಳೆದ ತಿಂಗಳಲ್ಲಿ ನಾನು Tilepathy ಮತ್ತು astral journey ಕ್ಲಾಸ್ ಗಳನ್ನು ಅಟೆಂಡ್ ಮಾಡಿದ್ದೆ. ಅದರ ಪ್ರಭಾವ ಇದಾಗಿರಬಹುದೆ?

psychoanalysis ಮುಖಾಂತರ ಬಿದ್ದ ಕನಸಿಗೆ ವ್ಯಾಖ್ಯಾನ[ Interpret] ನೀಡಿದ ಸಿಗ್ಮಂಡ್ ಪ್ರಾಯ್ಡ್ ಬದುಕಿದ್ದರೆ ಆತನತ್ರ ಕೇಳುತ್ತಿದ್ದೆ...
ಈ ಕನಸಿಗೆ ಅರ್ಥವೇನು?
ಈಗ ನಿಮ್ಮನ್ನು ಕೇಳುತ್ತಿದ್ದೇನೆ; ಈ ಕನಸಿಗೆ ಅರ್ಥವೇನು?


[ಇದು ಪೇಸ್ ಬುಕ್ ನಲ್ಲಿ ನಾನು ಕಂಡ ಕನಸಿನ ಬಗ್ಗೆ ಬರೆದ  ಬರಹ ]