ಪ್ರೇಮದ ವಿಷಯದಲ್ಲಿ ನಾವು ಇನ್ನೊಬ್ಬರ ’ಆಯ್ಕೆ’ ಆಗಿರಬೇಕು ಎಂಬುದು ನನ್ನ ಆಸೆ ಮತ್ತು ನಂಬಿಕೆ. ಆಗ ನಾವು ಸದಾ ಖುಷಿಯಾಗಿರುತ್ತೇವೆ. ಯಾಕೆಂದರೆ ನಮ್ಮ ’ಅಹಂ’ ಈ ಮೂಲಕ ವಿಜೃಂಭಿಸುತ್ತಲೇ ತಣಿಯುತ್ತಿರುತ್ತದೆ.
ಶರೂ, ನೀನು ನನ್ನ ಆಯ್ಕೆ ಆಗಿಬಿಟ್ಟೆ. ನಾನು ನಿನ್ನ ಆಯ್ಕೆ ಆಗಿದ್ದೇನೆಯೇ ಎಂಬುದನ್ನು ತಿಳಿದುಕೊಳ್ಳಲು ಸತತ ಪ್ರಯತ್ನಪಡುತ್ತಲೇ ಇಷ್ಟು ದೂರ ಸಾಗಿ ಬಂದೆ. ದುರ್ಭಲವಾಗುತ್ತಿರುವ ಮನಸ್ಸನ್ನು ಮತ್ತೆ ಮತ್ತೆ ಗಟ್ಟಿಗೊಳಿಸುತ್ತಲೇ, ಒಳಗೊಳಗೆ ಟೊಳ್ಳಾಗುತ್ತಿದ್ದೆನೆನೋ ಎಂಬ ಭಯದಲ್ಲಿ ಬದುಕಿಬಿಟ್ಟೆ. ನಾನು ಸೋತು ಹೋಗುತ್ತಿದ್ದೆನೆಯೇ? ಸೋತರೇನಂತೆ ಅದು ಶರುವಿನೆದುರು ತಾನೇ? ಎಂದು ನನ್ನನ್ನು ನಾನು ಸಂತೈಸಿಕೊಳ್ಳಬಹುದು. ಆದರೂ ಸೋಲಿನಲ್ಲೂ ಒಂದು ಘನತೆಯಿರಬೇಕಲ್ಲವೇ?
ಸಮುದ್ರದೆದುರು ಸೋತರೆ ಅದು ನನ್ನ ಕಾಲನ್ನು ಚುಂಬಿಸಿ ನನ್ನ ಸೋಲನ್ನು ಗೌರವಿಸುತ್ತದೆ. ಹಿಮಾಲಯದೆದುರು ಸೋತರೆ ಅದು ಹಿಮಮಣಿಯನ್ನು ಸುರಿಸಿ ನನ್ನ ಕಣ್ಣರೆಪ್ಪೆಗಳನ್ನು ಅಲಂಕರಿಸುತ್ತದೆ. ಆಕಾಶದೆದುರು ಸೋತರೆ ಅದು ಬೆಳದಿಂಗಳ ತಂಪನ್ನೆರೆದು ಕ್ಷೋಭೆಗೊಂಡ ಮನಸ್ಸನ್ನು ಸಂತೈಸುತ್ತದೆ. ಆದರೆ ನಿನ್ನೆದುರು ಸೋಲುತ್ತಿದ್ದೇನೆ ಎಂಬ ಭಾವನೆಯೇ ನನ್ನಲ್ಲಿ ಅಸ್ಥಿರತೆಯನ್ನೂ, ಆತಂಕವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿದೆಯಲ್ಲಾ..ಅದೇ ನನಗೆ ಸೋಜಿಗ!.
ನಿನಗ್ಗೊತ್ತಾ ಶರೂ, ರಾತ್ರಿ ನಿನ್ನ ಕನಸಿನೊಂದಿಗೆ ದಿಂಬಿಗೆ ತೋಳು ಚೆಲ್ಲುತ್ತೇನೆ. ಬೆಳಿಗ್ಗೆ ಏಳುವಾಗಲೂ ಮನಸ್ಸಿನ ತುಂಬಾ ನಿನ್ನದೇ ನೆನಪು. ಹೊತ್ತು ಮೇಲೇರಿದಂತೆಲ್ಲಾ ಕಲ್ಪನಾ ಕುದುರೆಯ ನಾಗಾಲೋಟ. ಕೆಲವೊಮ್ಮೆ ಚಿಕ್ಕಪುಟ್ಟ ಸಂಗತಿಗಳನ್ನೂ ಕೂಡಾ ನಿನ್ನಲ್ಲಿ ಹೇಳಿಕೊಳ್ಳಬೇಕೆಂಬ ತೀವ್ರ ತುಡಿತ. ನಾನು ಇಲ್ಲೇ ಇದ್ದರೂ ಕುಣಿದು ಕುಪ್ಪಳಿಸುವ ಮನಸ್ಸು ನಿನ್ನ ತೋಳುಗಳಲ್ಲಿ ತೋಳು ಸೇರಿಸಿ ವಾಕಿಂಗ್ ಹೊರಟಿರುತ್ತೆ.
ದೊಡ್ಡ ದೊಡ್ಡ ವಿಚಾರಗಳನ್ನು ಹೇಳಿಕೊಳ್ಳಲಿಕೆ, ಚರ್ಚಿಸಲಿಕ್ಕೆ ಬಹಳಷ್ಟು ಜನ ಸ್ನೇಹಿತರು ಸಿಗುತ್ತಾರೆ. ಆದರೆ ಆ ಕ್ಷಣದ ಖುಷಿಗಳನ್ನು ಅನುಭವಿಸಲು, ಬಿಂದುವಿನಲ್ಲೂ ಸಿಂಧುವನ್ನು ಕಾಣುವವರು ಯಾರೂ ಇಲ್ಲ. ಎಂತಹ ಗಂಭೀರ ವ್ಯಕ್ತಿಗೂ ಕೂಡಾ ಮನಸ್ಸು ಬಿಚ್ಚಿಕೊಳ್ಳಲೊಂದು ಕಂಫರ್ಟ್ ಝೋನ್ ಬೇಕು; ಅಳಲೊಂದು ಹೆಗಲು ಬೇಕು.ಸಾಂತ್ವನದ ಸ್ಪರ್ಷವೊಂದು ಬೇಕು. ಆದರೆ ಬಹಳಷ್ಟು ಜನರಿಗೆ ಆ ಭಾಗ್ಯ ಇರುವುದಿಲ್ಲ. ನಿನ್ನಿಂದ ಆ ಭಾಗ್ಯ ನನಗೆ ಒಲಿದು ಬರಲಿ ಎಂದು ನನ್ನ ಮನಸ್ಸು ಹಂಬಲಿಸುತ್ತಿತ್ತು. ಆದರೆ ಅದು ನಿಜವಾಗಲಾರದು ಎಂದು ನನಗೆ ಗೊತ್ತಿತ್ತು. ಯಾಕೆ ಗೊತ್ತಾ?
ಭಾವನೆಗಳೇ ಇಲ್ಲದ ಬರಡು ನೆಲ ನೀನು. ನಿನ್ನ ಬಾಹ್ಯ ವ್ಯಕ್ತಿತ್ವವನ್ನು ನೋಡಿ ನಾನು ಮನಸೋತು ಹೋದೆ. ನಿನ್ನ ಹೊರ ವ್ಯಕ್ತಿತ್ವಕ್ಕೆ ಆಂತರಿಕ ಗುಣಗಳನ್ನು ನಾನೇ ಆರೋಪಿಸಿಕೊಂಡೆ. ಆ ಗುಣಗಳನ್ನು ಆರಾಧಿಸತೊಡಗಿದೆ. ನಿನ್ನಲ್ಲಿ ಇಲ್ಲದಿರುವುದನ್ನು ಇದೆ ಎಂದು ಭಾವಿಸತೊಡಗಿದೆ. ಆ ಮೂಲಕ ನೀನು ನನ್ನ ಕಲ್ಪನೆಯಲ್ಲೇ ಬೆಳೆಯುತ್ತಾ...ಬೆಳೆಯುತ್ತಾ..ಪರಿಪೂರ್ಣ ಮಾನವನಾಗುತ್ತಾ ಹೋದೆ.
ನೀನು ಇದ್ದಲಿಯೇ ಇದ್ದೆ. ಹಾಗೆಯೇ ಇದ್ದೆ. ಅದನ್ನು ಒಪ್ಪಿಕೊಳ್ಳುವುದು ನನ್ನ ಮನಸ್ಸಿಗೆ ಕಷ್ಟವಾಗುತ್ತಿತ್ತು. ಜಗತ್ತು ನೋಡುವವರ ಕಣ್ಣಲ್ಲಿದೆ ಎಂಬುದು ನನಗೆ ಗೊತ್ತಿತ್ತು. ಶರಧಿ ಎಂಬ ನೀನು ನನ್ನ ದೃಷ್ಟಿಯಲ್ಲಿ ’ಏನೋ ’ ಆಗಿ ಕಂಡು ಬರುತ್ತಲಿದ್ದೆ.
ನೀನೊಬ್ಬ ನನ್ನವನಾಗುತ್ತಿದ್ದರೆ ನನ್ನ ಬದುಕೆಷ್ಟು ಸುಂದರ ಆಗುತ್ತಿತ್ತು. ’ನನ್ನವನಾಗುವುದು’ ಅನ್ನುತ್ತಿಯಲ್ಲ ಹಾಗೆಂದರೇನು? ಎಂದು ನೀನು ಕೇಳಲೂಬಹುದು. ಅದು ನನ್ನೊಳಗಿನ ಭಾವನೆ ಅಷ್ಟೇ. ಅದಕ್ಕೆ ಪುಷ್ಟಿ ಹೊರಜಗತ್ತಿನಿಂದ ದೊರೆಯುತ್ತದೆ. ಅದು ನಿನ್ನ ವರ್ತನೆಯಿಂದ ನನಗೆ ದೊರೆಯಬೇಕಿತ್ತು.
ಬದುಕಿನ ಖುಷಿ ಮತ್ತು ಸತ್ಯದ ಅವಿಷ್ಕಾರ ಅತೀ ಸಣ್ಣ ಅನುಭವಗಳಲ್ಲಿರುತ್ತದೆ. ನಾವು ದೊಡ್ಡ ಘಟನೆಗಳಿಗೆ ತಕ್ಷಣ ಸ್ಪಂದಿಸುತ್ತೇವೆ.ಆದರೆ ನವಿರಾದ ಸೂಕ್ಷ್ಮ ಭಾವಗಳಿಗೆ? ಮೊನ್ನೆ ಅರಮನೆ ಮೈದಾನದಲ್ಲಿ ಏರ್ಪಾಡಾಗಿದ್ದ ಪುಸ್ತಕ ಮೇಳಕ್ಕೆ ’ನೀನು ಬರುವಿಯಾ?’ ಎಂದು ನಾನು ಕರೆದಿದ್ದೆ. ನೀನು ನಿರಾಕರಿಸಿದ್ದೆ. ನಾನೊಬ್ಬಳೇ ಹೋಗಿದ್ದೆ. ಮುನ್ನೂರಕ್ಕೂ ಹೆಚ್ಚು ಮಳಿಗೆಗಳಿದ್ದವು . ಒಂದು ವಾರದ ಅವಧಿಯಲ್ಲಿ ಒಂದೂವರೆ ಲಕ್ಷ ಜನರು ಇದಕ್ಕೆ ಭೇಟಿ ನೀಡಿದ್ದರು. ಅಂದರೆ ದಿನಕ್ಕೆ ಸುಮಾರು ಇಪ್ಪತ್ತೈದು ಸಾವಿರ ಜನರು. ಓದುವ ಅಭಿರುಚಿ ಜಾಸ್ತಿಯಾಗುತ್ತಿದೆಯೆಂದು ಹೆಮ್ಮೆಪಟ್ಟುಕೊಳ್ಳಬೇಡ. ಸೀಡಿ ಮತ್ತು ವ್ಯಕ್ತಿತ್ವ ವಿಕಸನದಂತಹ ಮಾಹಿತಿಗಳನ್ನು ನೀಡುವ ಇಂಗ್ಲೀಷ್ ಬುಕ್ ಸ್ಟಾಲ್ ಗಳ ಎದುರು ಜನರ ಜಾತ್ರೆಯಿರುತ್ತಿತ್ತು. ಕಲೆ ಮತ್ತು ಸಾಹಿತ್ಯ ಸಂಬಂಧಿ ಪುಸ್ತಕಗಳ ಅಂಗಡಿಯೆದುರು ಬೆರಳೆಣಿಕೆಯ ಜನರಿದ್ದರು.
ಆ ಬೆರಳೆಣಿಕೆಯ ಜನರಲ್ಲಿ ನೀನೂ ಒಬ್ಬನಾಗಿರಬೇಕೆಂದು ನಾನು ಬಯಸಿದ್ದೆ. ನನ್ನೊಡನೆ ಸುಮ್ಮನೆ ನಾಲ್ಕು ಹೆಜ್ಜೆ ಹಾಕಿದ್ದರೆ ಆ ಸಾನಿಧ್ಯ ಸುಖ ನನ್ನಲ್ಲಿ ಹೊಸ ಕನಸುಗಳ ಅಂಕುರಕ್ಕೆ ನಾಂದಿಯಾಗುತ್ತಿತ್ತು. ನೀನು ಬರಲಿಲ್ಲ. ಆದರೂ ನಿನಗೆಂದು ಕೆಲವು ಪುಸ್ತಕಗಳನ್ನು ಖರೀದಿ ಮಾಡಿದ್ದೆ. ’ಯಾವಾಗ ಸಿಗ್ತೀಯಾ? ನಿನಗಾಗಿ ಒಂದಷ್ಟು ಪುಸ್ತಕ ಖರೀದಿ ಮಾಡಿದ್ದೆ’ ಎಂದಾಗ ನೀನು, ’ಯಾರಿಗೆಂತ ಕೊಂಡಿದ್ದೆ?’ ಎಂದು ಉಢಾಪೆಯ ಮಾತಾಡಿದ್ದೆ.
ಕಳೆದ ವಾರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಬಿ,ವಿ.ರಾಜಾರಾಂ ಅವರ ’ಮೂಕಜ್ಜಿಯ ಕನಸುಗಳು’ ನಾಟಕಕ್ಕೆ ನಿನ್ನನ್ನು ಬರಹೇಳಿದ್ದೆ. ನೀನು ಬರಲಿಲ್ಲ. ನನಗೇನೂ ನಷ್ಟವಾಗಲಿಲ್ಲ. ನೀನು ಮಾತ್ರ ಈ ವರ್ಷದ ಅತ್ಯುತ್ತಮ ನಾಟಕವೊಂದರ ವೀಕ್ಷಣೆಯಿಂದ ವಂಚಿತನಾದೆ. ನಿನಗೆ ಕಡಿದು ಗುಡ್ಡೆ ಹಾಕುವಷ್ಟು ಕೆಲಸವೇನೂ ಇರುವುದಿಲ್ಲ ಎಂದು ನನಗೆ ಗೊತ್ತು. ಸುಮ್ಮನೆ ಮಲಗಿಕೊಂಡು ಸೂರು ನೋಡುತ್ತಾ ಹಗಲು ಕನಸು ಕಾಣುತ್ತಿರುತ್ತಿಯಾ..ಮನುಷ್ಯನಿಗೆ ಗರಿಷ್ಟ ನೂರು ವರ್ಷ ಆಯುಸ್ಸಿರುವುದು ಎಂಬುದನ್ನು ನೀನು ಆಗಾಗ ಮರೆಯುತ್ತಿಯಾ!
ಕೆಲವು ವರ್ಷಗಳ ಹಿಂದೆ ನನ್ನ ಮನೆಯ ಅಂಗಳದಲ್ಲಿ ನಿನ್ನನ್ನು ನೋಡಿದಾಗ ಹಲವು ಶತಮಾನಗಳಿಂದ ನಾನು ನಿನ್ನನ್ನೇ ಹುಡುಕುತ್ತಿದ್ದೇನೆ ಎನಿಸಿತ್ತು. ನನ್ನ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯಗೊಂಡಿತ್ತು ಎಂದು ರೋಮಾಂಚನಗೊಂಡಿದ್ದೆ. ಈತನ ಕಿರು ಬೆರಳು ಹಿಡಿದು ಎಂತಹ ದುರ್ಭರ ಕ್ಷಣಗಳನ್ನಾದರೂ ಗೆಲ್ಲಬಲ್ಲೆ ಎನಿಸಿತ್ತು. ಆದರೆ ಈಗ....?
ಸೋತು ಹೋಗಿದ್ದೇನೆ ಕಣೋ; ನಿನಗಲ್ಲ
ಬದುಕಿನ ಭ್ರಮೆಗಳಿಗೆ, ಮನಸ್ಸುಗಳ ನಿಗೂಢತೆಗೆ.
ಅಚ್ಚರಿಪಟ್ಟಿದ್ದೇನೆ; ನನ್ನಲ್ಲೇ ಹುಟ್ಟಿಕೊಳ್ಳುವ ಕ್ಷುಲ್ಲಕ ಬಯಕೆಗಳಿಗೆ,
ಬದಲಾಗುವ ಆಕಾಶದ ಬಣ್ಣಗಳಿಗೆ.
ಮನಸ್ಸು ಮ್ಲಾನಗೊಂಡಿದೆ; ಸಂಬಂಧಗಳ ಎಳೆ ಶಿಥಿಲಗೊಂಡಾಗ
ಹಾಲುಗಲ್ಲದ ಹಸುಳೆಗಳು ಬಿಕ್ಕಳಿಸಿದಾಗ.
ಸಂಬಂಧವೊಂದು ನಮ್ಮಲ್ಲಿ ಸದಾ ಅಸ್ಥಿರತೆಗೆ, ಆತಂಕಕ್ಕೆ ಕಾರಣವಾಗುತ್ತಿದ್ದರೆ, ಪ್ರಯತ್ನಪಟ್ಟಾದರೂ ಅಥವಾ ಯಾವ ಬೆಲೆ ತೆತ್ತಾದರೂ ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು. ಇದು ಗೊತ್ತಿದ್ದೂ ಕೂಡಾ ನಿನ್ನ ನೆನಪಿನಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಒಂದು ಒಳ್ಳೆಯ ಗೆಳೆತನವೆಂದರೆ, ಅದು ನಮಗರಿವಿಲ್ಲದಂತೆ ನಮ್ಮನ್ನು ಬದಲಾಯಿಸುತ್ತಿರಬೇಕು. ಮತ್ತು ಆ ಬದಲಾವಣೆ ಸಕಾರಾತ್ಮಕವಾಗಿರಬೇಕು. ನಿನ್ನಿಂದ ನಾನು ಏನು ಬದಲಾವಣೆ ಕಂಡೆ? ಅದು ನನಗೆ ಮಾತ್ರ ಗೊತ್ತು. ಅದನ್ನು ನಿನಗೆ ಹಲವು ಬಾರಿ ಹೇಳಲೆತ್ನಿಸಿದ್ದೆ. ಆದರೆ ನಿನಗೆ ಆ ಬಗ್ಗೆ ಗಮನವಿರಲಿಲ್ಲ.
ನನಗೊತ್ತು ಶರೂ, ಯಾರೂ ಯಾರಿಗೂ ಸಿಗಲಾರರು. ಆದರೂ ಯಾವುದೋ ಒಂದು ಮಿತಿಯೊಳಗೆ ನಾವು ಯಾರಿಗೋ ಸಿಗುತ್ತಲಿರಬೇಕು. ನನ್ನ ಮಟ್ಟಿಗೆ ಆ ’ಯಾರೋ’ ನೀನಾಗಿರಬೇಕೆಂದು ಆಸೆ ಪಟ್ಟಿದ್ದೆ. ಸಂಬಂಧಗಳಿಗೆ ನಿರಂತರತೆಯಿದೆ. ಅನುಭವಕ್ಕೊಂದು ಮಿತಿಯಿದೆ. ನಿನ್ನೊಂದಿಗಿನ ಸಂಬಂಧವನ್ನು ಅನುಭಾವವನ್ನಾಗಿಸಿಕೊಳ್ಳುವ ನಿರಂತರ ಪ್ರಯತ್ನ ನನ್ನದು. ಅದಕ್ಕೇ ಹೇಳುತ್ತಿದ್ದೇನೆ; ನೀನಿಲ್ಲದೆ ನಾನಿಲ್ಲ
[ ಐದಾರು ವರ್ಷಗಳ ಹಿಂದೆ ಸಾಗರಿಕಾ ಎಂಬ ಹೆಸರಿನಲ್ಲಿ ನಾನು ’ಓಮನಸೇ’ ಗಾಗಿ ಬರೆದ ಲಹರಿ ]

8 comments:
ಪ್ರತೀ ಸಾರಿಯು ನಿಮ್ಮ ಲೇಖನವನ್ನ ಬೆರಗುಗಣ್ಣಿನಿಂದ ನೋಡುತ್ತೆನೆ,ಮನಸ್ಸಿನ ತುಮುಲ,ಬಯಕೆ,ಮೌನ,ಎಲ್ಲವನ್ನು ನನ್ನದೇ ಭಾವವಿದು ಅನ್ನಿಸುವಂತೆ ಬರೆಯುತ್ತೀರಿ.ಅವ್ಯಕ್ತ ಆಕಾಶದ ಮಾತುಗಳಿಗೆ ಸಮಧಾನ ಸಿಕ್ಕಂತಯ್ತು.
ಕನವರಿಕೆಗಳು.... ನಮ್ಮ ಸುಪ್ತದಲ್ಲಿರುವ ಆಸೆಗಳು.... ನನ್ಗೂ ಹೀಗೊಂದು ಗೆಳೆತನ, ಪ್ರೀತಿ ಇದ್ದಿದ್ದರೆ ಎಷ್ಟು ಚೆನ್ನಿತ್ತು, ನಾನೂ ಹೀಗೆ ಬರೆಯಬಹುದಿತ್ತು..... ಎನ್ನುವಷ್ಟರ ಮಟ್ಟಿಗೆ ಚೆನ್ನಾಗಿದೆ ಲೇಖನ.....
ನೀರು ಸರಾಗವಾಗಿ ಯಾವ ಪಾತ್ರೆಗೂ ತುಂಬಿಕೊಂಡು..ತನ್ನ ಪಾತ್ರ ಬದಲಿಸುವ ಹಾಗೆ...ನಿಮ್ಮ ಯೋಚನಾಲಹರಿಯ ಓಟ ಇಷ್ಟವಾಗುತ್ತದೆ..ಇದು ನಿಜಕ್ಕೂ ಮೌನ ಕಣಿವೆಯ ಯಾನ ಮನಸಿಗೆ ಆಪ್ತವೆನಿಸುತ್ತದೆ.ಸುಂದರ ಲೇಖನ..ಭಾವನೆಗಳ ತೊಳಲಾಟ..ಸುಂದರ
ಉಷಾ ಜೀ -
ಮುಂಚೆ 'ಓ ಮನಸೇ'ನಲ್ಲಿ ಓದಿದ ಬರಹ. ಆದರೆ ಮತ್ತೆ ಅಷ್ಟೇ ಶ್ರದ್ಧೆಯಿಂದ ಓದಿದೆ.ಯಾವುದೇ ಒಂದು ವಾಖ್ಯಾನ ಇಷ್ಟವಾಯ್ತು ಅಂತ ಹೇಳುವಂತಿಲ್ಲ. ಪ್ರತೀ ಸಾಲೂ ಯಾವುದೋ ಒಂದು ಮಧುರ ಭಾವಾನ ಕೆಣಕುತ್ತೆ. ಪ್ರೀತಿ, ಗೆಳೆತನ, ಬದುಕು ಓಹ್ ಎಷ್ಟೊಂದು ಭಾವಗಳು. ಆಳದ ಮನಸಿನ ತಳಮಳಗಳು.
ಬರಹ ನೆನಪಾಗಿ ಕಾಡುತ್ತೆ ಅಂತಷ್ಟೇ ಹೇಳಬಲ್ಲೆ...
’ಇವು ನನ್ನವು’ ಅನ್ನಿಸಿದ ಸಾಲುಗಳು.... ’ಇಷ್ಟವಾಯಿತು’ಗಿಂತ ಒಂದು ಮೆಟ್ಟಿಲು ಮೇಲೆ ಹತ್ತಿ ಹತ್ತಿರವಾಯಿತು...
- ಸಂಧ್ಯಾ
"ಪ್ರೇಮದ ವಿಷಯದಲ್ಲಿ ನಾವು ಇನ್ನೊಬ್ಬರ ’ಆಯ್ಕೆ’ ಆಗಿರಬೇಕು ಎಂಬುದು ನನ್ನ ಆಸೆ ಮತ್ತು ನಂಬಿಕೆ..... " ಇಷ್ಟೇ ಸಾಕಾಗಿತ್ತು ನನಗೆ. You have stolen my thoughts.. :-)
-Rj
It is really good one madam....I Liked it...while reading I found myself...I had also found some person in my way of journey...and I imagined him as my kind of person still waiting for him.....:) I don't know when that will end....:...Thanks for beautiful article
Madam your articles stand somewhere between heart and brain. Heartly writings can become sentimental and brainy ones can be too judgemental,both lack sensitivity. Middle path approach may be the best way to avoid missing life.
Thanks
Post a Comment