ಚಿತ್ರಕೃಪೆ; ಅಂತರ್ಜಾಲ |
ಅದೊಂದು ದೊಡ್ಡಮನೆ. ಕೂಡು ಕುಟುಂಬ. ಅಲ್ಲಿ ಎಷ್ಟು
ಸಂಸಾರಗಳು ವಾಸ ಮಾಡುತ್ತವೆಯೆಂದು ಪಕ್ಕನೆ ಲೆಖ್ಖ ಸಿಕ್ಕುವುದಿಲ್ಲ. ಆ ಮನೆಗೆ ಸೇರಿದ ಮಕ್ಕಳೆಲ್ಲ
ಒಮ್ಮೊಮ್ಮೆ ಕೈ ಬೆರಳು ಮಾಡಚುತ್ತಾ ಆ ಕೊಣೆಗಳನ್ನು ಲೆಖ್ಖ ಹಾಕಲು
ಪ್ರಯತ್ನಿಸುತ್ತಿಸುತ್ತಿದ್ದರು. ಆದರೆ ಪ್ರತಿಭಾರಿಯೂ ಲೆಖ್ಖ ತಪ್ಪಿಹೋಗಿ ಎದುರಿಗೆ ಸಿಕ್ಕವರನ್ನು
ಕೇಳಿ ಅವರಿಂದಲೂ ಸರಿಯಾದ ಉತ್ತರ ಸಿಕ್ಕದೆ ಪೆಚ್ಚು ಮೋರೆ ಹಾಕಿಕೊಳ್ಳುತ್ತಿದ್ದುದ್ದುಂಟು. ಆದರೆ
ಮಕ್ಕಳೆಲ್ಲಾ ಸೇರಿಕೊಂಡು ’ಕಣ್ಣೇ ಮುಚ್ಚೇ ಕಾಡೇಗೂಡೇ’ ಆಡಲು ಇದಕ್ಕಿಂತ ಪ್ರಶಸ್ತ ಜಾಗ ಅವರಿಗೆ
ಇನ್ನೆಲ್ಲೂ ಸಿಕ್ಕಿರಲಿಲ್ಲ. ಪ್ರತಿಯೊಂದು ಕೋಣೆಯಲ್ಲೂ ಜೋಡಿ ಮಂಚ ಇರುತ್ತಿತ್ತು. ಮತ್ತು
ರಾತ್ರಿಯಲ್ಲಿ ಮಾತ್ರ ಅಲ್ಲಿ ದೀಪ ಉರಿಯುತ್ತಿತ್ತು. ಉಳಿದಂತೆ ಹಗಲಿನಲ್ಲಿ ಅವಕ್ಕೆ ಬೀಗ
ಹಾಕಿರದಿದ್ದರೂ ಅವು ಸದಾ ಮುಚ್ಚಿಯೇ ಇರುತ್ತಿದ್ದವು.
ಆ ಮನೆಯ ದೊಡ್ಡ ಮೊಗಸಾಲೆಯಲ್ಲಿ ಅತ್ಯಂತ ಸುಂದರ
ಕೆತ್ತನೆಗಳಿಂದ ಕೂಡಿದ, ಎರಡು ಜನ ತಬ್ಬಿ ನಿಲ್ಲಬಹುದಾದ ಚಿತ್ತಾರದ ಎರಡು ಗೋದಿಗಂಭಗಳಿದ್ದವು.
ಅದನ್ನು ಗೋದಿಗಂಬಗಳೆಂದು ಯಾಕೆ ಕರೆಯುತ್ತಿದ್ದರೆಂಬುದು ನನಗೆ ಗೊತ್ತಿಲ್ಲ. ಆದರೆ ಆ ಮೊಗಸಾಲೆ
ಪ್ರವೇಶ ಮಾಡುವಾಗ ಅದು ರಾಜನೊಬ್ಬನ ಆಸ್ಥಾನಕ್ಕೆ ಪ್ರವೇಶ ಮಾಡುವ ಹಾಗೆ ಅನ್ನಿಸುತ್ತಿತ್ತು.
ರಾಜನಿರಬಹುದಾಗಿದ್ದ ಜಾಗದಲ್ಲಿ ದೇವರ ಕೊಣೆಯಿತ್ತು. ಅಲ್ಲಿ ನಂದಾದೀಪದ ಬೆಳಕಿನಲ್ಲಿ
ಮಂದಸ್ಮಿತೆಯಾದ ಅಮ್ಮನ ಅಳೆತ್ತರದ ವಿಗ್ರವಿತ್ತು. ಆ ವಿಗ್ರಹದ ಕಾರಣದಿಂದಾಗಿಯೋ ಏನೋ ಆ
ಮೊಗಸಾಲೆಗೆ, ಆ ಮೊಗಸಾಲೆಯ ವೈಭವದಿಂದಾಗಿ ಆ ಮನೆಗೆ ಪ್ರವೇಶಿಸುವಾಗ ಭವ್ಯತೆಯ ಅನುಭವ
ಆಗುತ್ತಿತ್ತು.
ಆ
ಮನೆಯನ್ನು ಸುತ್ತಲಿನ ಹಳ್ಳಿಯವರೆಲ್ಲಾ ’ದೊಡ್ಡಮನೆ’ ಎಂದೇ ಕರೆಯುತ್ತಿದ್ದರು. ಹಾಗೆ ಕರೆಯಲು ಇನ್ನೂ
ಒಂದು ಕಾರಣವಿದ್ದಿರಬಹುದು; ಅಲ್ಲಿ ವಾಸ ಮಾಡುತ್ತಿದ್ದವರು ಆ ಊರಿನ ಪಟೇಲರು ಮತ್ತು ಅವರ ದೊಡ್ಡ
ಪರಿವಾರು. ನ್ಯಾಯ ಪಂಚಾಯಿತಿಕೆಯ ಕಟ್ಟೆ ಮೇಲೆ ಕುಳಿತುಕೊಳ್ಳವ ದೊಡ್ಡ ಮನುಷ್ಯರು ಅವರು..
ಬ್ರಿಟೀಶರ ಕಾಲದಲ್ಲಿ ಅವರ ಕಣ್ಣಳತೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಕ್ಕಿ, ಭತ್ತ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಬಚ್ಚಿಡುವುದಕ್ಕಾಗಿ, ಕೆಲವೊಮ್ಮೆ ದೇಶಭಕ್ತರನ್ನು ಅಡಗಿಸಿಡುವುದಕ್ಕಾಗಿ ಆ ಕೋಣೆಯನ್ನು ಬಳಸಿಕೊಳ್ಳಲಾಗುತ್ತಿತ್ತೆಂದು ನಾನು ದೊಡ್ಡವಳಾದ ಮೇಲೆ ಅವರಿವರಿಂದ ಕೇಳಿ ತಿಳಿದುಕೊಂಡ ಸಂಗತಿಯಾಗಿತ್ತು.
ನಾನು ಆ
ಮನೆ ಹೋದಾಗಲೆಲ್ಲ ಆ ಮನೆಯ ಕತ್ತಲ ಕೋಣೆ ಮತ್ತು ಆ ಕೋಣೆಯಲ್ಲಿ ನಡೆದ ಘಟನೆಯೊಂದು ನನಗೆ ನೆನಪಿಗೆ
ಬರುತ್ತದೆ. ಅದನ್ನು ನೆನೆಸುವಾಗಲೆಲ್ಲ ನನ್ನ ಮೈಮನ ನನಗರಿವಿಲ್ಲದೆ ಕಂಪಿಸುತ್ತದೆ.
ಅಂದು ಕೂಡಾ ನನಗೆ ಎಚ್ಚರವಾಗಿತ್ತು. ಅಮ್ಮನನ್ನು
ಹುಡುಕಿಕೊಂಡು ನಾನು ರೂಮಿಗೆ ಹೋದರೆ ಅಲ್ಲಿ ಅಮ್ಮನಿರಲಿಲ್ಲ. ಎಲ್ಲಿ ಹೋದರೆಂದು ನಾನು
ಹುಡುಕುತ್ತಾ ಬಂದಾಗ ಒಂದು ಕಿಟಕಿಯ ಬಳಿ ಚಿಮಿಣಿ ದೀಪದ ಬೆಳಕು ಕಂಡಿತು. ಜೊತೆಯಲ್ಲಿ ಕುಸು
ಕುಸು..ಪಿಸಪಿಸು...ಮಾತುಗಳು ಕೇಳಿ ಬಂದುವು..ನಾನು ಆ ಕಿಟಕಿಯನ್ನು ಮೆಲ್ಲನೆ ದೂಡಿದೆ..ಅದು
ತೆರೆದುಕೊಂಡಿತು. ಅಲ್ಲಿ ನನ್ನ ಅತ್ತೆಯಂದಿರು, ಚಿಕ್ಕಮ್ಮ-ದೊಡ್ಡಮ್ಮಂದಿರು ಎಲ್ಲರೂ ಸೇರಿಕೊಂಡು
ಯಾರೋ ಒಬ್ಬರಿಗೆ ಬಯ್ಯುತ್ತಿದ್ದರು. ಕೋಣೆಯ ಒಂದು ಮೂಲೆಯಲ್ಲಿ ಯಾರೋ ಒಬ್ಬರು ಮೊಣಕಾಲುಗಳ ಮೇಲೆ
ತಲೆಯಿಟ್ಟು ಬಗ್ಗಿ ಕುಳಿದ್ದರು. ’ಇದರಲ್ಲಿ ನನ್ನದೇನೂ ತಪ್ಪಿಲ್ಲ..ಅವರೇ..’ ಎಂದು ಅಳುತ್ತಲೇ
ತಲೆಯೆತ್ತಿ ಅಲ್ಲಿದ್ದ ಎಲ್ಲರತ್ರ ಮುಖ್ಯವಾಗಿ ನನ್ನಮ್ಮನತ್ರ ನೋಟ ಬೀರಿದಾಗಲೇ ನನಗೆ
ಗೊತ್ತಾಗಿದ್ದು, ಅವರು ನನ್ನ ಪ್ರೀತಿಯ ವನಜ ಚಿಕ್ಕಮ್ಮನೆಂದು. ತುಂಬಾ ಒಳ್ಳೆಯವರು ಅವರು. ಅಂತವರ
ಮೇಲೆ ಇವರೆಲ್ಲಾ ಯಾಕೆ ರೇಗಾಡುತ್ತಿದ್ದಾರೆ. ಅವರಿಂದ ಏನು ತಪ್ಪಾಗಿದೆ. ನನಗೆ ಅರ್ಥವಾಗಲಿಲ್ಲ.
’ನೋಡುವುದೇನು..ಅವಳ ಕೈಕಾಲುಗಳನ್ನು ಹಿಡಿದುಕೊಳ್ಳಿ’
ಎಂದು ಶಕುಂತಲಾ ಅತ್ತೆ ಹೇಳಿದಾಗ, ಅಲ್ಲಿದ್ದ ಕೆಲವು ಜನ ವನಜ ಚಿಕ್ಕಮ್ಮನನ್ನು ನೆಲಕ್ಕೆ
ದಬ್ಬಿದರು. ’ಇವತ್ತೂ ಅಲ್ಲಿಗೆ ಹೋಗುತ್ತಿಯೇನೇ ಮುಂಡೆ’ ಎಂದು ಒಬ್ಬಾಕೆ ಅವಳ ಜುಟ್ಟು ಹಿಡಿದು
ಕೇಳಿದಳು. ಅವಳು ’ ಹೌದು....’ ಎಂದು ಬಿಕ್ಕಳಿಸುತ್ತಲೇ ’ಹೋಗದೆ ಇದ್ದರೆ ನನ್ನನ್ನು ಈ ಮನೆಯಿಂದ ಹೊರಗೆ ಹಾಕುತ್ತಾರಂತೆ..ನಾನು ಎಲ್ಲಿಗೆ ಹೋಗಲಿ?’ ಎಂದು
ಅಸಹಾಯಕಳಾಗಿ ಎಲ್ಲರ ಮುಖ ನೋಡಿದಳು. ’ಎಷ್ಟು ಹೊತ್ತಿಗೆ?’ ಶಕುಂತಲಾ ಅತ್ತೆ ಅಬ್ಬರಿಸಿದರು. ಆಕೆ
ನಡುಗುತ್ತಾ ’ಈಗಲೇ ಹೋಗಬೇಕಂತೆ..ಸೂಚನೆ ನೀಡಿ ಹೋಗಿದ್ದಾರೆ... ಇದರಲ್ಲಿ ನನ್ನದೇನೂ ತಪ್ಪಿಲ್ಲ’ ಎನ್ನುತ್ತಾ ಆಕೆ
ತೆವಳುತ್ತಲೇ ಬಂದು ಅಮ್ಮನ ಕಾಲ ಮೇಲೆ ತಲೆಯಿಟ್ಟಳು. ಅಮ್ಮ ಸೆರಗನ್ನು ಬಾಯಿಗೆ ಅಡ್ಡ ಇಟ್ಟುಕೊಂಡು
ಜೋರಾಗಿ ಅಳುತ್ತಾ ಕಂಬದಂತೆ ನಿಂತು ಬಿಟ್ಟರು. ಅಲ್ಲಿದ್ದ ಎಲ್ಲರೂ ರಣೋತ್ಸಾಹದಲ್ಲಿದ್ದರು.ಅವಳ
ದೀನ ನುಡಿ ಅವರ ಕಿವಿಗೇ ಬಿದ್ದಂತಿರಲಿಲ್ಲ. ಅವರಲ್ಲಿ ಒಬ್ಬಾಕೆ ಅವಳ ಸೀರೆಯನ್ನು ಸೊಂಟದ ತನಕ
ಎತ್ತಿದಳು. ’ಹೋಗಲಿ ಬಿಟ್ಟು ಬಿಡಿ..ಅದೊಂದು ಹೆಣ್ಣು ಜೀವ ತಾನೆ? ಎಲ್ಲಾ ನನ್ನ ಹಣೆಬರಹ’
ಎನ್ನುತ್ತಾ ಅಮ್ಮ ಕೋಣೆಯಿಂದ ಹೊರಹೋಗಿಬಿಟ್ಟರು.
’ಅದನ್ನು ತಾ’ ಎಂದು ಶಕುಂತಲಾ ಅತ್ತೆ ಹೇಳಿದಾಗ ಪಾರ್ವತಿ
ಚಿಕ್ಕಮ್ಮ ಒಂದು ತಾಮ್ರದ ಗಿಂಡಿಯನ್ನು ಆಕೆಯ ಮುಂದೆ ಒಡ್ಡಿದರು. ಆಕೆ ಅದರಲ್ಲಿ ಕೈ ಅದ್ದಿ
ಮುಷ್ಟಿಯಲ್ಲಿ ಏನನ್ನೋ ತೆಗೆದುಕೊಂಡು ಅವಳ ತೊಡೆಗಳ ಮಧ್ಯೆ ಸವರಿಬಿಟ್ಟರು. ವನಜ ಅತ್ತೆಯ
ಬಾಯಿಯಿಂದ ಹೊರಟ ಚಿತ್ಕಾರ ಶಕುಂತಲಾ ಅತ್ತೆಯ ಎಡಗೈಯ ಅಡ್ಡದಲ್ಲಿ ಕೇವಲ ನರಳಿಕೆಯಾಗಿ ಹೊಮ್ಮಿತು.
’ತಕ್ಷಣ... ಈ ಕೂಡಲೇ ಆ ಕೋಣೆಗೆ ತೆರಳು ಅವರಿಗೆ ಒಂಚೂರು ಅನುಮಾನ ಬರಬಾರದು..ನಿನ್ನ ಕಣ್ಣಿಂದ
ನೀರು ಬಂದರೆ...ಬಾಯಿಯಿಂದ ಅಳುವಿನ ಧ್ವನಿ ಹೊರಟರೆ..ನಾವೆಲ್ಲಾ ಸೇರಿ ಈ ಮನೆಯಿಂದಲೇ ನಿನ್ನನ್ನು
ಅಟ್ಟಿಬಿಡುತ್ತೇವೆ.’ ಎಂದು ಆಕೆಯನ್ನು ದಬ್ಬಿಕೊಂಡೇ ದೇವರ ಕೋಣೆಯ ಪಕ್ಕದ ಕೋಣೆಯ ಮುಂದೆ ತಂದು
ನಿಲ್ಲಿಸಿದರು. ವನಜ ಅತ್ತೆ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುತ್ತಾ, ಕೆಳತುಟಿಯನ್ನು
ಮೇಲಿನ ಹಲ್ಲುಗಳಿಂದ ಕಚ್ಚಿ ಹಿಡಿದು, ತನ್ನೆಲ್ಲಾ ಧೀಶಕ್ತಿಯನ್ನ ಎಡಗೈಗೆ ವರ್ಗಾಯಿಸಿದಂತೆ
ಅದನ್ನು ಸೊಂಟದ ಮೇಲೆ ಒತ್ತಿ ಹಿಡಿದು ಬಸವಳಿದ ಬಲಗೈಯಿಂದ ಮುಚ್ಚಿದ ಬಾಗಿಲನ್ನು ತಟ್ಟಿದಳು. ಬಾಗಿಲು
ತೆರೆದುಕೊಂಡಿತು.
’ಕೋಣ ಪಳ್ಳ ಬಿದ್ದಿದೆ. ಮೈ ನೊಚ್ಚಗಾದ ಮೇಲೆ ಎದ್ದು
ಬರುತ್ತೆ. ನೀವು ಹೋಗಿ ಮಲಗಿಕೊಳ್ಳಿ ಅಕ್ಕಾ’ ಎಂದು ವ್ಯಂಗ್ಯದ ನಗುವೊಂದನ್ನು ನಕ್ಕು ಶಕುಂತಲಾ
ಅತ್ತೆ ತನ್ನ ಕೋಣೆಗೆ ಹೊರಟರು.’ ಅಲ್ಲೇ..ಆ ವನಜ.. ಪಾಪದು..ಅವಳು ಏನಾದಳೋ..’ ಎಂದು ಅಮ್ಮ
ಹೇಳಿದರೆ...’ಎಲ್ಲಾದರೂ ಬಿದ್ದುಕೊಂಡಿರ್ತಾಳೆ ಬಿಡಿ’ ಎಂದು ಉಢಾಪೆಯ ಉತ್ತರ ಕೊಟ್ಟು ಅವರು
ಕಣ್ಮರೆಯಾದರು.
ಅಮ್ಮ ಆ
ಕೋಣೆಯಲ್ಲೊಮ್ಮೆ ಇಣುಕಿ ನೋಡಿ ಅಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ರೂಮಿಗೆ ಬಂದು
ಮಲಗಿಕೊಂಡರು. ಆದರೆ ಅವರಿಗೆ ನಿದ್ದೆ ಬರಲಿಲ್ಲವೆಂಬುದು ಅವರ ಹೊರಳಾಟದಿಂದ ಗೊತ್ತಾಗುತ್ತಿತ್ತು.
ಅವರು ಇದ್ದಕ್ಕಿದ್ದಂತೆ ಒಮ್ಮೆಲೇ ಎದ್ದು ಕುಳಿತವರೇ ’ಕೋಣ ಪಳ್ಳ ಬಿದ್ದಿದೆ’ ಎಂಬುದನ್ನು
ಗಟ್ಟಿಯಾಗಿ ಹೇಳಿಕೊಂಡವರೇ ಕಯ್ಯಲಿ ಟಾರ್ಚ್ ಹಿಡಿದುಕೊಂಡು ದನದ ಕೊಟ್ಟಿಗೆಗೆ ಹೋದರು. ಅಲ್ಲಿ
ದನಗಳಿಗೆ ಕಲಗಚ್ಚು ಕೊಡುವ ದೊಡ್ಡ ಬಾನೆಯೆಡೆಗೆ ಟಾರ್ಚ್ ಬಿಟ್ಟಾಗ ಕಂಡ ದ್ರುಶ್ಯವನ್ನು ನೋಡಿ ಅವರ
ಕರುಳು ಬೆಂದು ಹೋದಂತಾಯ್ತು. ಅಲ್ಲಿ ನೀರು ತುಂಬಿದ ಬಾನೆಯಲ್ಲಿ ಬೆತ್ತಲೆಯಾಗಿ ವನಜ
ಕುಳಿತಿದ್ದಾಳೆ. ಅವಳ ಕಣ್ಣುಗಳು ಅತ್ತು ಅತ್ತು ಕೆಂಡದುಂಡೆಗಳಾಗಿವೆ. ಅಮ್ಮನನ್ನು ಕಂಡ ಒಡನೆ ಅವಳ
ಬಿಕ್ಕಳಿಕೆ ಮರುಕಳಿಸಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ರೋದಿಸಲಾರಂಭಿಸಿದಳು.
ಅಮ್ಮ ಆಕೆಯ ಬಳಿ ಸಾರಿದವಳೇ ಅವಳ ನೆತ್ತಿಯ ಮೇಲೆ
ಕೈಯಾಡಿಸುತ್ತಾ. ’ಹೆದರಬೇಡ ನಾನಿದ್ದೇನೆ. ಸ್ವಲ್ಪ ಹೊತ್ತು ಇಲ್ಲಿಯೇ ಕೂತಿರು ನಾನು ಈಗ
ಬರುತ್ತೇನೆ.’ ಎಂದವಳೇ ಸೀದಾ ಅಡುಗೆ ಮನೆಯತ್ತ ಧಾವಿದಳು. ಅಲ್ಲಿ ನೆಲುವಿನಲ್ಲಿ ತೂಗಾಡುತ್ತಿದ್ದ
ದೊಡ್ಡ ಬೆಣ್ಣೆಯ ಚೆಟ್ಟಿಯನ್ನು ಕೆಳಗಿಳಿಸಿ ರಟ್ಟೆ ಗಾತ್ರದ ಬೆಣ್ಣೆಯನ್ನು ಗಿಂಡಿಯೊಂದಕ್ಕೆ
ಹಾಕಿಕೊಂಡು ಇನ್ನೊಂದು ಕೈಯ್ಯಲ್ಲಿ ಕತ್ತಿಯನ್ನು ಹಿಡಿದು ಹಿತ್ತಿಲಿಗೆ ಬಂದವಳೇ ಅರಶಿನದ ಗಿಡವನ್ನು ಎಳ್ಳಿ
ದಪ್ಪನೆಯ ಹತ್ತಾರು ಕೊಂಬುಗಳನ್ನು ಹಾಗೂ ಮುರ್ನಾಲ್ಕು ಬಗೆಯ ಸೊಪ್ಪುಗಳನ್ನು ತೆಗೆದುಕೊಂಡು
ಬಚ್ಚಲು ಮನೆಗೆ ಬಂದು ಅವೆಲ್ಲವನ್ನೂ ಅಲ್ಲೇ ಇರುವ ಒರಳು ಕಲ್ಲಿನಲ್ಲಿ ಹಾಕಿ
ಜಜ್ಜತೊಡಗಿದಳು. ಅವು ಪುಡಿ ಪುಡಿಯಾಗುತ್ತಿದ್ದಂತೆಯೇ ಅದಕ್ಕೆ ಬೆಣ್ಣೆಯನ್ನು ಸೇರಿಸಿ ನಯವಾಗಿ
ಅರೆಯತೊಡಗಿದಳು. ಅದು ಬೆಣ್ಣೆಯಷ್ಟು ಮರುದುವಾದ ಮೇಲೆ ಅದಕ್ಕೆ ಇನ್ನಷ್ಟು ಬೆಣ್ಣೆಯನ್ನು ಸೇರಿಸಿ,
ಅದೆಲ್ಲವನ್ನೂ ಗಿಂಡಿಯಲ್ಲಿ ಹಾಕಿ ವನಜಳ ಮುಂದೆ ನಿಂತರು.
ವನಜ ಕಣ್ಣುಚ್ಚಿ ನೀರಿನಲ್ಲಿ ಹಾಗೆಯೇ ಕುಳಿತ್ತಿದ್ದಳು.
ಅಮ್ಮ ಅವಳನ್ನು ಮೈಮುಟ್ಟಿ ಎಬ್ಬಿಸಿದರು. ಜೊತೆಯಲ್ಲಿ ತಂದಿದ್ದ ಸೀರೆಯನ್ನು ಅವಳ ಮೈಗೆ
ಹೊದೆಸಿದರು. ನಂತರ ಆಕೆಯನ್ನು ಮೆಲ್ಲನೆ ನಡೆಸುತ್ತಾ ದೇವರ ಕೋಣೆಯೆಡೆಗೆ ಕರೆತಂದರು. ಅವಳನ್ನು
ಸುತ್ತಿದ್ದ ಸೀರೆಯನ್ನು ಕೆಳಗೆ ಸರಿಸಿದರು. ಅಷ್ಟು ಹೊತ್ತು ನೀರಲ್ಲಿ ಕುಳಿತ ಕಾರಣದಿಂದಲೋ ಅಥವಾ
ಜೀವಕ್ಕಂಟಿದ ಭಯದ ನೆರಳಿನಿಂದಲೋ ನಂದಾದೀಪದ ಬೆಳಕಿನಲ್ಲಿ ವನಜಳ ಮೈ ಬೂದಿ ಬಳಿದುಕೊಂಡಂತೆ
ಬೆಳ್ಳಗಾಗಿತ್ತು. ಅಮ್ಮ ಗಿಂಡಿಯನ್ನು ದೇವರ ಮುಂದಿಟ್ಟು, ಅಲ್ಲಿ ಹಿತ್ತಾಳೆ ಚೊಂಬಿನಲ್ಲಿದ್ದ
ನೀರನ್ನು ವನಜತ್ತೆಯ ಕೈಯ್ಯಲಿಟ್ಟರು. ಆಕೆ ಅದೆಲ್ಲವನ್ನೂ ಒಂದೇ ಉಸಿರಿನಲ್ಲಿ ಶತಮಾನಗಳ
ನೀರಡಿಕೆಯಿದೆಯೇನೋ ಎಂಬ ರೀತಿಯಲ್ಲಿ ಗಟಗಟನೆ ಕುಡಿದಳು.
ಚಿತ್ರಕೃಪೆ; ಅಂತರ್ಜಾಲ |
[”ಪದ ಪಾರಿಜಾತ’ ಕಾಲಂನಲ್ಲಿ ಪ್ರಕಟವಾದ ಕಥೆ]
5 comments:
ಸಮುದ್ರ ಮಂಥನದಲ್ಲಿ ಭಾಗಿಯಾದಂತ ಅನುಭವ ಮನದಲ್ಲಿ ಆಗುತ್ತಿದೆ...ಮನ ಕಲಕುವಂತಹ ಕಥಾ ನಿರೂಪಣೆ
ಮೇಡಂ ಅದ್ಭುತ ನಿರೂಪಣೆ... ಆದರೆ ಯಾಕೋ ಮಧ್ಯದಲ್ಲೇ ನಿಲ್ಲಿಸಿದಂತಾಯ್ತು..... ಯಾಕೋ ವನಜಾ ಚಿಕ್ಕಮ್ಮನ ಬಗ್ಗೆ ಇನ್ನೂ ತಿಳಿದುಕೊಳ್ಳುವ ಹಂಬಲವಾಗ್ತಾ ಇದೆ... ಕಥೆ ಹೇಳಿ ನೀವು....
'ಪದ ಪಾರಿಜಾತದಲ್ಲಿ ಬಂದ ಕಾಮೆಂಟ್ ಗಳು;
Tejaswini Hegde
Feb 11, 2013 @ 11:11:20
ಕಥೆ ಓದಿದ ಮೇಲೆ ಇದು ಸಶೇಷವಾಗಿರಬೇಕೆಂದೆನಿಸುತ್ತಿದೆ! ತುಂಬಾ ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿಬಿಟ್ಟಿದ್ದೀರಿ. ಕಥೆಯನ್ನು ಮುಂದುವರಿಸಿ. ಎದ್ದಿರುವ ಹತ್ತು ಹಲವು ಸಂದೇಹಗಳಿಗೆ ಉತ್ತರವಾಗಿರಲಿ ಮುಂದಿನಭಾಗ!
lalithakalyanapura
Feb 11, 2013 @ 11:22:17
ಅಲ್ಲೊಂದು ಕತ್ತಲ ಕೋಣೆ, ಕಥೆಯ ನಿರೂಪಣಾ ಕ್ರಮ ಚೆನ್ನಾಗಿದೆ. ಮಗುವಿನ ಕಣ್ಣಿನಲ್ಲಿ ನೋಡುತ್ತಾ ಒಂದು ಘಟನೆಯನ್ನು ಚಿತ್ರಿಸುತ್ತಾ ಮಾತಿನಲ್ಲಿ ಹೇಳದೆಯೇ ಅಲ್ಲಿ ನಡೆದ ಒಂದು ಕ್ರೌರ್ಯ, ದೌರ್ಜನ್ಯ, ಒಂದು ಹೆಣ್ಣಿಗೆ ಗಂಡಿನಂದಾದ ಅತ್ಯಾಚಾರ, ಅದಕ್ಕೆ ಬಲಿಪಶುವಾದವಳ ಮೇಲೆ ಇತರ ಹೆಂಗಸರ ಹಿಂಸೆ, ಆ ಹೆಣ್ಣು ವನಜ ಚಿಕ್ಕಮ್ಮನ ಮೂಕವೇದನೆ ಮೂಕರೋದನೆ, ಕಣ್ಮುಂದೆ ಕಂಡತಾಯಿತು.ಕಥೆಯೊಗಳಗಿನ ಮೌನದ ಮಾತು ಮನವನ್ನು ತಟ್ಟಿತು.
Suguna
Feb 11, 2013 @ 11:50:28
ಒಂದು ಹೆಣ್ಣಿಂದ ಇನ್ನೊಂದು ಹೆಣ್ಣಿಗೆ ನೋವು ತುಂಬಿದೆ. ಏಕೋ ಕಥೆ ಮಧ್ಯದಲ್ಲೇ ನಿಂತುಹೋಯಿತು ಅನಿಸಿತು, ಮುಂದುವರಿಸಿ ಮೇಡಂ,
Post a Comment