Friday, March 1, 2013

ಸ್ವರ್ಣಲೇಖೆಯ ಬಾಳಲ್ಲೊಬ್ಬ ಕುಮಾರಧಾರಾ...!

ಚಿತ್ರಕೃಪೆ; ಅಂತರ್ಜಾಲ



ಹಾಂ..ನಾನು ಮರೆತೇ ಬಿಟ್ಟಿದ್ದೆ. ಇಷ್ಟರವರೆಗೆ ಹೆಸರಿಲ್ಲದಂತೆ ಬದುಕಿದ್ದ ನನ್ನಮ್ಮನ ಹೆಸರು ಹೇಳುವುದನ್ನೇ ಮರೆತುಬಿಟ್ಟಿದ್ದೆ. ಅವರ‍ ಹೆಸರು ಸ್ವರ್ಣಲೇಖಾ.  ಅವರಿಗೆ ಆ ಹೆಸರನ್ನಿಟ್ಟದ್ದು ನನ್ನಜ್ಜ. ಅದಕ್ಕೊಂದು ಹಿನ್ನೆಲೆಯಿದೆ. ನಮ್ಮ ಅಜ್ಜನ ಜಮೀನಿನ ಸುತ್ತ ಮೂರೂ ಬದಿಯಲ್ಲಿ ಒಂದು ನದಿ ಬಾಗಿ ಬಳುಕಿ ಮೈದುಂಬಿ ಹರಿಯುತ್ತಿದೆ. ಆ ಜೀವ ನದಿಯ ಕಾರಣದಿಂದಾಗಿ ನನ್ನಜ್ಜನ ಆಸ್ತಿ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಸುತ್ತಾ ಹೋಯಿತಂತೆ. ನಾಗರಿಕ ಜಗತ್ತಿನಿಂದ ತೀರ ದೂರದಲ್ಲಿ ಕಾಡಿನ ಮಧ್ಯೆ ತುಂಡರಸನಂತೆ ಬದುಕುತ್ತಿದ್ದ ನನ್ನಜ್ಜ. ತನ್ನ ಈ ಐಶ್ವರ್ಯಕ್ಕೆ ಪಶ್ಚಿಮ ಘಟ್ಟದಿಂದ ದುಮ್ಮಿಕ್ಕಿ ಹರಿಯುವ ಈ ನದಿಯೇ ಕಾರಣವೆಂದು ಬಲವಾಗಿ ನಂಬಿದ್ದ. ಹಾಗಾಗಿ ಹೆಸರಿಲ್ಲದ ಈ  ನದಿಗೆ ಸ್ವರ್ಣಲೇಖಾ ಎಂದು  ಹೆಸರಿಟ್ಟರಂತೆ. ತಮಗೆ ಮದುವೆಯಾಗಿ ಬಹುಕಾಲದ ನಂತರ ಹುಟ್ಟಿದ ಹೆಣ್ಣು ಮಗುವಿಗೂ ಅವರು ಅದೇ ಹೆಸರನ್ನು ಇಟ್ಟದ್ದು ಸಹಜವೇ ಆಗಿತ್ತು. ಅವಳೇ ನನ್ನಮ್ಮ ಸ್ವರ್ಣಲೇಖಾ.

ನನ್ನಪ್ಪನ ಅಪ್ಪ  ಅಂದರೆ ನನ್ನ ಮುತ್ತಜ್ಜ  ಎಲ್ಲಿಂದಲೋ ಬಂದು ಈ ಕಾಡಿನಲ್ಲಿ ನೆಲೆ ನಿಂತು ಇಲ್ಲಿ ಕೃಷಿ ಮಾಡಿ ಈ ಪ್ರದೇಶಕ್ಕೆ ’ರತ್ನಾಪುರ’ ಎಂಬ ಹೆಸರನ್ನಿಟ್ಟರಂತೆ. ಅದಕ್ಕೂ ಒಂದು ಕಾರಣವುಂಟು. ಬಹಳ ಸಾಹಸಿಯಾದ ನನ್ನಜ್ಜ ಗುಡ್ಡ ಬೆಟ್ಟ ಪರ್ವತಗಳನ್ನು ಹತ್ತುವುದರಲ್ಲಿ ನಿಸ್ಸಿಮನಂತೆ. ಹಾಗೊಂದು ದಿನ ಕುಮಾರಪರ್ವತವನ್ನು ಹತ್ತಿ ಅಲ್ಲಿಯ ಸೊಬಗಿಗೆ ಮೈಮರೆತು ಅಲ್ಲಿಯೇ ಹಣ್ಣು-ಹಂಪಲ, ಗೆಡ್ಡೆ-ಗೆಣಸುಗಳನ್ನು ತಿನ್ನುತ್ತಾ ಗುಹೆಯೊಂದರಲ್ಲಿ ಕೆಲಕಾಲ ತಂಗಿದ್ದನಂತೆ. ಆಗ ಅಲ್ಲಿ ಅವರಿಗೊಬ್ಬ ಸಾಧುವಿನ ಪರಿಚಯವಾಯಿತು. ಆತ ನನ್ನ ಮುತ್ತಜ್ಜನಿಗೆ ಹೇಳಿದರಂತೆ, ’ನೀನೊಬ್ಬ ಗೃಹಸ್ಥ. ಸನ್ಯಾಸಿಯ ತರ ಊರೂರು ಅಲೆಯಬಾರದು. ಅದಕ್ಕೂ ಒಂದು ಕಾಲವಿದೆ. ಈಗ ನೀನು ಒಂದು ಕಡೆ ನೆಲೆಯೂರಬೇಕು.’ ಎಂದು ಮುತ್ತಜ್ಜನನ್ನು ದೀರ್ಘವಾಗಿ ನೋಡುತ್ತಾ, ತಾನು ನಿಂತ ಜಾಗವನ್ನು ತೋರಿಸಿ, ’ಇದು ನೋಡು, ಇಲ್ಲಿಯೇ ಒಂದು ಕಾಲದಲ್ಲಿ ಪರಶುರಾಮ ನಿಂತಿದ್ದ. ಇಲ್ಲಿಂದಲೇ ಆತ ತನ್ನ ಕೊಡಲಿಯನ್ನು ಸಮುದ್ರದತ್ತ ಎಸೆದು ತನ್ನ ”ವಾಸಕ್ಕೆ ಒಂದಿಷ್ಟು ಜಾಗವನ್ನು ಕೊಡು’ ಎಂದು ಆಜ್ನಾಪಿಸಿದನಂತೆ.. ಅದೋ ನೋಡು ಕೆಳಗೆ ಹರಡಿಕೊಂಡಿರುವ ಪುಷ್ಪಗಿರಿ ಅರಣ್ಯ ಪ್ರದೇಶ. ಇಲ್ಲಿಂದ ನೇರವಾಗಿ ಕೆಳಗೆ ಇಳಿದು ಹೋಗು.’ ಎನ್ನುತ್ತಾ ದೂರದ ಪ್ರಪಾತದಂಚಿನಲ್ಲಿ ಬೆಳ್ಳಿರೇಖೆಯಂತೆ ಕಾಣುತ್ತಿರುವ ಕಿರು ತೊರೆ ಒಂದನ್ನು ತೋರಿಸಿ’ ಅದು ನೋಡು....ಪರುಷರಾಮ ನದಿ. ಭೂಮಿಯನ್ನು ಇಪ್ಪತ್ತೊಂದು ಬಾರಿ ಸಂಚರಿಸಿ, ಕ್ಷತ್ರಿಯ ಕುಲವನ್ನೆಲ್ಲಾ ನಾಶಪಡಿಸಿದ ಮೇಲೆ ತನ್ನ ರಕ್ತರಂಜಿತ ಕೊಡಲಿಯನ್ನು ಇದೇ ನದಿಯಲ್ಲಿ ಅದ್ದಿ ತೊಳೆದುಕೊಳ್ಳಲು ಪ್ರಯತ್ನಿಸಿದ. ಆದರೆ ಆತನ ಕೊಡಲಿಗಂಟಿದ ರಕ್ತ ಹಾಗೆಯೇ ಉಳಿಯಿತು. ಆಗ ಸಿಟ್ಟಿನಿಂದ ಆತ ನದಿಗೆ ಕೊಡಲಿನಿಂದ ಅಪ್ಪಳಿಸಿದ. ಬೆದರಿದ ಆ ನದಿ ಹಿಂದಕ್ಕೆ ಬಾಗಿ ಬಳುಕಿದಳು. ಹಾಗೆ ಹಿಂದಕ್ಕೆ ಸರಿದ ಜಾಗ ಅರ್ಧಚಂದ್ರಾಕೃತಿಯ ಭೂಭಾಗವಾಯ್ತು. ಅದು ವಸುಂಧರೆಯ ಗರ್ಭ.  ಅದೊರೊಳಗೆ ಹೊನ್ನಿದೆ.ಅನರ್ಘ್ಯ ರತ್ನ ಬಂಢಾರವಿದೆ. ಅದು ಯಾರದೋ ಬರವಿಗಾಗಿ ಕಾಯುತ್ತಿದೆ. ನೀನು ಅಲ್ಲಿಗೆ ಹೋಗು.’ ಎಂದು ಆ ಸಾಧು ಮುತ್ತಜ್ಜನ ನೆತ್ತಿಯ ಮೇಲೆ ಕಯ್ಯಿಟ್ಟನಂತೆ. ಅಜ್ಜನಿಗೆ ಆ ಕ್ಷಣದಲ್ಲಿ ಆಳವಾದ ಗುಹೆಯೊಂದಕ್ಕೆ ದುಮುಕಿದ ಅನುಭವ. ತನ್ನನ್ನು ಮರೆತು ಶಿಲೆಯಾದಂತೆ. ನಂತರ ಅಲ್ಲಿಂದ ನಿಧಾನವಾಗಿ ಇಳಿಯುತ್ತಾ ಬಂದ. ಸಾಧು ನಿರ್ಧೇಶಿಸಿದ ನದಿಯನ್ನು ತಲುಪಲು ಎರಡು ದಿನ ಬೇಕಾಯಿತಂತೆ. ಆ ನದಿಗುಂಟ ನಡೆಯುತ್ತಾ ಬಂದವನು ಆ ಸಾಧು ಹೇಳಿದ ನದಿ ಆ ಭೂಭಾಗಕ್ಕೆ ಬಂದವರು ದಿಗ್ಮೂಢರಾಗಿ ನಿಂತುಬಿಟ್ಟರು. ಆಗ ಅವರ ಬಾಯಿಯಿಂದ ಹೊರಟ ಶಬ್ದವೇ.’ ಅಹಾಹ..ಇದು ರತ್ನಾಪುರವೇ..!’

ಇಂತಪ್ಪ ರತ್ನಾಪುರದ ರಾಜಕುಮಾರಿ ಸ್ವರ್ಣಲೇಖಾ ಬೆಳೆದು ದೊಡ್ಡವಳಾಗುವ ಕಾಲಕ್ಕೆ ರತ್ನಾಪುರಕ್ಕೆ ಜಿಲ್ಲಾ ಕೇಂದ್ರವಾದ ಮಂಗಳೂರಿನೊಡನೆ ಸಂಪರ್ಕ ಬೆಳೆದಿತ್ತು. ಅದಕ್ಕೆ ಕಾರಣವಾಗಿದ್ದು ಟಿಂಬರ್ ಸಾಗಿಸುವ ಲಾರಿಗಳು. ನಿತ್ಯ ಹರಿದ್ವರ್ಣದಿಂದ ಸುತ್ತುವರಿದಿದ್ದ ರತ್ನಾಪುರ ಪಶ್ಚಿಮ ಘಟ್ಟದ ಸೆರಗಿನಲ್ಲಿತ್ತು. ಅತ್ಯಮೂಲ್ಯವಾದ ವನ್ಯಸಂಪತ್ತನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿತ್ತು. ಆಗ ತಾನೇ ನಮ್ಮ ದೇಶ ಬ್ರಿಟೀಷರ ಸೆರೆಯಿಂದ ಬಿಡುಗಡೆಯನ್ನು ಪಡೆದಿತ್ತು. ನಮ್ಮ ಜನನಾಯಕರೇ ನಮ್ಮನಾಳುವ ಪ್ರಭುಗಳಾದರು. ಅವರ ಕಾಕ ದೃಷ್ಟಿ ಈ ಕಾಡಿನಲ್ಲಿ ಸ್ವಚ್ಛಂದವಾಗಿ ಮುಗಿಲೆತ್ತರ ಬೆಳೆದು ನಿಂತ ಬೃಹತ್ ಮರಗಳೆಡೆಗೆ ಹರಿಯಿತು. ಅವು ಅವರ ಕಣ್ಣಿಗೆ ದುಡ್ಡಿನ ರಾಶಿಯಂತೆ ಕಾಣಿಸತೊಡಗಿದವು. ಪರಿಣಾಮವಾಗಿ ಸಾವಿರಾರು ಎಕ್ರೆ ಅರಣ್ಯವನ್ನು ಸರಾಸಗಟಾಗಿ ಹೊಡೆದುರುಳಿಸಲು ಖಾಸಗಿ ಗುತ್ತಿಗೆದಾರರಿಗೆ ಪರವಾನಾಗಿ ಕೊಡಲಾಯ್ತು. ಹುಣಸೂರಿನ ಲಾರಿಗಳು ರತ್ನಾಪುರದ ರನ್ನದ ಮಣಿಗಳಂತಿದ್ದ ಮರಗಳನ್ನು ಉರುಳಿಸಿ, ಉರುಳಿಸಿ ಲಾರಿಯಲ್ಲಿ ಹೇರಿಕೊಂಡು ಮಡಿಕೇರಿ ಮಾರ್ಗವಾಗಿ ಸಂಚರಿಸಲು ಶುರು ಮಾಡಿದವು. ಇನ್ನು ಕೆಲವು ಮಂಗಳೂರಿನ ಬಂದರನ್ನು ಸೇರತೊಡಗಿದವು. ಹಾಗೆ ಲಾರಿಗಳಲ್ಲಿ ಬಂದ ಅಪರಿಚಿತರು ಸುತ್ತಮುತ್ತಲಿನ ಹಳ್ಳಿಗಳಿಗೆ ಹೇಗೆ ಪರಿಚಿತರಾದರೋ ಹಾಗೆ ರತ್ನಾಪುರ ಪುರದ ನನ್ನಜ್ಜನಿಗೂ ಪರಿಚಿತರಾದರು. ಅಜ್ಜನೂರಿಗೆ ಒಂದು ಕಚ್ಚಾ ರಸ್ತೆ ಕಾಣಿಸಿಕೊಂಡಿತು.  

ರಸ್ತೆಯಾಯಿತು ಎಂದರೆ ಹೊರಜಗತ್ತಿಗೆ ತೆರೆದುಕೊಂಡಂತೆ ತಾನೇ..? ಅಜ್ಜಾ ಒಂದು ಎತ್ತಿನ ಗಾಡಿಯನ್ನು ಖರಿದಿಸಿದರು.. ಆ ಎತ್ತಿನ ಗಾಡಿಯಲ್ಲಿ ಎಂಟು ಮೈಲಿ ದೂರದ ಶಾಲೆಗೆ ನನ್ನಮ್ಮ ಹೋಗುತ್ತಿದ್ದರಂತೆ. ಸ್ವರ್ಣಲೇಖಾ ನದಿ ದಂಡೆಯಲ್ಲಿ ಆಡಿದ ನನ್ನಮ್ಮ ಇಂದುಮತಿ ನದಿಯ ದಡದಲ್ಲಿದ್ದ ಆ ದೊಡ್ಡಮನೆಯ ಪಟೇಲರನ್ನು ಮದುವೆಯಾಗಿದ್ದು ಹೇಗೆ?
ರತ್ನಾಪುರಕ್ಕೆ ಇತಿಹಾಸವಿಲ್ಲ. ಆದರೆ ದೊಡ್ಡಮನೆಯ ಇತಿಹಾಸವನ್ನು ಲಾವಣಿ ಕಟ್ಟಿ ಹಾಡುವವರಿದ್ದಾರೆ. ಇಂತವರ ಕಣ್ಣಿಗೆ ಎತ್ತಿನ ಗಾಡಿಯಲ್ಲಿ ಶಾಲೆಗೆ ಹೋಗುವ ಹೆಣ್ಣುಮಗಳು ಬೀಳದೆ ಇರಲು ಸಾಧ್ಯವೇ? ನನ್ನಪ್ಪನ ಅಪ್ಪ ಪಟೇಲ್ ಅಜ್ಜ ಈಕೆಯನ್ನು ಸೊಸೆಯಾಗಿ ತರಲು ನಿರ್ಧರಿಸಿದರು. ದೊಡ್ಡಮನೆಯ ಪಟೇಲರು ತಾವಾಗಿಯೇ ಹೆಣ್ಣು ಕೇಳಲು ಬಂದಾಗ ನನ್ನಜ್ಜ ಸುಲಭದಲ್ಲಿ ಒಪ್ಪಿಬಿಟ್ಟರಂತೆ. ಆದರೆ ಅಜ್ಜಿ ಹುಡುಗನಿಗೆ ವಯಸ್ಸಾಗಿದೆ ಎಂದು ತಕರಾರು ಎತ್ತಿದರಂತೆ. ಆದರೆ ಕೊನೆಯಲ್ಲಿ ಆ ಮನೆಯ ಇತಿಹಾಸವೇ ವರ್ತಮಾನವನ್ನು ಗೆದ್ದಿತು.. ಅಮ್ಮನ ಇಷ್ಟಾನಿಷ್ಟವನ್ನು ಯಾರೂ ಕೇಳದಿದ್ದರೂ ಆ ಮನೆ ಇಂದುಮತಿ ನದಿಯ ದಡದ ಮೇಲಿದೆ ತನ್ನ ಒಡನಾಟಕ್ಕೆ ಅಲ್ಲೊಂದು ನದಿಯಿದೆ ಮತ್ತು ಆ ಮನೆ ತುಂಬಾ ಜನರಿರುತ್ತಾರೆ ಎಂಬ ಕಾರಣಕ್ಕೆ ಅಮ್ಮನೂ ಆ ಮದುವೆಗೆ ಒಪ್ಪಿದಳಂತೆ. ಆಗ ಅಮ್ಮನ ವಯಸ್ಸು ಹದಿನೈದು.

ಅಮ್ಮನೂರಿನ ಸ್ವರ್ಣಲೇಖಾ ನದಿ ಮತ್ತು ಅಪ್ಪನೂರಿನ ಇಂದುಮತಿ ನದಿ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಕಡಲಿನನ್ನು ಸೇರುವ ಭರದಲ್ಲಿ ಸಮಾನಂತರವಾಗಿ ಹರಿಯುತ್ತಾ ಉಪ್ಪಂಗಳವೆಂಬ ಊರಿನಲ್ಲಿ ಹರಿಹರೇಶ್ವರನ ಸನ್ನಿದಿಯಲ್ಲಿ ಒಂದಾಗಿ ಬೆರೆತು, ಮುಂದೆ ಭವನಾಶಿಯೆಂಬ ಒಂದೇ ನದಿಯಾಗಿ ಚಾಗನೂರಿನಲ್ಲಿ ಕುಮಾರಾಧಾರವೆಂಬ ಗಂಡು ನದಿಯಲ್ಲಿ ಲೀನವಾಗುತ್ತಾರೆ.
ಗಂಡು ನದಿ ಎಂದಾಗ ನೆನಪಾಯ್ತು. ದೊಡ್ಡಮನೆಯ ಊಟದ ಹಾಲ್ ನಲ್ಲಿ ನಾವು ಮಕ್ಕಳೆಲ್ಲಾ ಮಲಗುತ್ತಿದ್ದೆವಲ್ಲಾ..ಅಗ ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲಿ ಕುಮಾರಧಾರಾ ಮತ್ತು ನೇತ್ರಾವತಿಯ ಪ್ರೇಮ ಕಥೆಯನ್ನೂ ಹೇಳಿದ್ದರು.
 ಸಾಮಾನ್ಯವಾಗಿ ನಾವೆಲ್ಲಾ ನದಿಯನ್ನು ಹೆಣ್ಣಿನ ರೂಪದಲ್ಲೇ ಕಂಡಿದ್ದೇವೆ. ಆದರೆ ಅಜ್ಜಿ ಹೇಳಿದ ಕಥೆಯಲ್ಲಿ ಕುಮಾರಧಾರಾ ಗಂಡಾಗಿದ್ದ; ತನ್ನ ಪಕ್ಕದಲ್ಲೇ ಹುಟ್ಟಿದ ಅಪೂರ್ವ ಸುಂದರಿಯಾದ ನೇತ್ರಾವತಿಯ ಮೇಲೆ ಕುಮಾರಧಾರನಿಗೆ ಪ್ರೀತಿ ಮೊಳಕೆಯೊಡೆಯುತ್ತದೆ. ಅವಳ ಬಾಗು ಬಳುಕುವಿಕೆಗೆ, ಮಿಂಚಿನ ಸೆಳವಿಗೆ ಈತ ಮೋಹ ಪರವಶನಾಗುತ್ತಾನೆ. ಪ್ರೇಮೊತ್ಕಂಠಿತನಾದ ಆತ ಅವಳ ಮುಂದೆ ಮಂಡಿಯೂರಿ ತನ್ನನ್ನು ಮದುವೆಯಾಗುವಿಯಾ? ಎಂದು ಕೇಳಿಕೊಳ್ಳುತ್ತಾನೆ. ಆಗ ಆಕೆ ಕೊರಳು ಕೊಂಕಿಸಿ, ಆತನನ್ನು ತಿರಸ್ಕಾರದಿಂದ ನೋಡುತ್ತಾ ’ ನಿನ್ನಂತಹ ಮುದ್ದಣ [ಮೊಡವೆ]ದ ಮುಖವುಳ್ಳವನನ್ನು ಮದುವೆಯಾಗಲಾರೆ’ ಎಂದು ರಭಸದಿಂದ ಮುಂದಕ್ಕೆ ಹರಿದು ಬಿಟ್ಟಳಂತೆ. [ಇಂದಿಗೂ ಕುಮಾರಧಾರ ನದಿಯಲ್ಲಿ ಕಲ್ಲು ಬಂಡೆಗಳೇ ಜಾಸ್ತಿ ಇವೆ.] ಮುಂದೆ ಅವಳು ಧರ್ಮಸ್ಥಳದಲ್ಲಿ ಜಗತ್ ಪಿತ ಶಿವನಿಗೆ ಅಭಿಶೇಕ ಜಲವಾದರೆ,  ಅವಳಿಂದ ಅವಮಾನಿತನಾದ ಕುಮಾರಧಾರ ಮುಂದಕ್ಕೆ ಹರಿದು ಕುಕ್ಕೇಸುಬ್ರಹ್ಮಣ್ಯದಲ್ಲಿ ಜಗತ್ ಪಿತನ ಮಗ ದೇವಸೇನಾನಿಯ ಪಾದವನ್ನು ತೊಳೆಯುತ್ತಾನೆ. ಏನಾದರೇನು ಕುಮಾರಧಾರನಿಗೆ ತನ್ನ ಮೊದಲ ಪ್ರೇಮವನ್ನು ಮರೆಯಲಾಗುವುದಿಲ್ಲ. ಆತ ನೇತ್ರಾವತಿಯ ಸಮಾನಂತರವಾಗಿ ಹರಿಯುತ್ತಾ ತನ್ನತನವನ್ನೆಲ್ಲಾ ಕಳೆದುಕೊಳ್ಳುತ್ತಾ ಸುಮಾರು ಅರುವತ್ತು ಮೈಲಿ ಹರಿದು ಬಂದು ಉಪ್ಪಿನಂಗಡಿಯಲ್ಲಿ ತನ್ನ ಅಸ್ತಿತ್ವವನ್ನೆಲ್ಲ ಇಲ್ಲವಾಗಿಸಿಕೊಂಡು ನೇತ್ರಾವತಿಯಲ್ಲಿ ಐಕ್ಯಗೊಳ್ಳುತ್ತಾನೆ. ಮುಂದೆ ಅಖಂಡ ನೇತ್ರಾವತಿ ಸಮುದ್ರದಲ್ಲಿ ಸಂಯೋಗ ಹೊಂದುತ್ತಾಳೆ.

ಅಜ್ಜಿ ಅಂದು ಹೇಳಿದ ಆ ಕಥೆಯಲ್ಲಿನ ಆ ಉತ್ಕಟ ಪ್ರೇಮಿ ಕುಮಾರಧಾರಾ ನನ್ನ ಚಿತ್ತ ಭಿತ್ತಿಯಲ್ಲಿ ಚಿರಸ್ಥಾಯಿಯಾಗಿ ಉಳಿದು ನನ್ನನ್ನು ಬೇಟಿಯಾದ ಪ್ರತಿ ಗಂಡಿನಲ್ಲಿಯೂ ಅವನನ್ನೇ ಹುಡುಕುವ ಒಬ್ಸೇಷನ್ ಆಗಿ ಮುಂದುವರಿದಿರಬೇಕು. ಇಲ್ಲವಾದರೆ ನೈಲ್ ನದಿಯ ದಡಲ್ಲಿ ಸಿಕ್ಕಿದ ಐರ್ವಿನ್ ಸ್ಟೊನ್ ನನ್ನ ಎದೆಯ ಕೊಳವನ್ಯಾಕೆ ಕಲಕುತ್ತಿದ್ದಾನೆ.?

ಅರೇ ನನ್ನ ಹೆಸರನ್ನೂ ನಾನು ಇದುವರೆಗೂ ನಿಮಗೆ ಹೇಳಲೇ ಇಲ್ಲವಲ್ಲ. ನನ್ನ ಹೆಸರು ಶಾಂಭವಿ. ನನ್ನ ತಮ್ಮನ ಹೆಸರು ಗೌರಿಶಂಕರ. ಅಮ್ಮ ತನ್ನ ಹದಿನೇಳನೇ ವಯಸ್ಸಿನಲ್ಲಿ ನನಗೆ ಜನ್ಮ ನೀಡಿದಳು. ನಾನು ಹುಟ್ಟಿದ ಐದು ವರಷಗಳ ನಂತರ ನನ್ನ ತಮ್ಮ ಹುಟ್ಟಿದ. ಅದೂ ತನ್ನಪ್ಪ ಸತ್ತ ದಿನವೇ, ನಿಗದಿತ ಸಮಯದ ಒಂದು ತಿಂಗಳ ಮೊದಲೇ ನಾಗೂರಿನ ಶಾಲೆಯಲ್ಲಿ ಗತಿ ಗೋತ್ರ ಇಲ್ಲದವನಂತೆ ಹುಟ್ಟಿದ ಎಂಬುದನ್ನು ನಾನು ನಿಮಗೆ ಹಿಂದೆಯೇ ಹೇಳಿದ್ದೇನೆ.

. ಇನ್ನು ಮುಂದೆ ಸ್ವರ್ಣಲೇಖಾ ತನ್ನ ಕಥೆಯನ್ನು ತಾನೇ ಹೇಳಿದರೆ ಹೇಗೆ? ಅದೇ ಸರಿ ಅಲ್ವಾ? ಇನ್ನೊಬ್ಬರ ಮನಸು ಹೀಗಿರಬಹುದು..ಹೀಗಿತ್ತೇನೋ...ಎಂದು ಹೊರಗೆ ನಿಂತು ನಾವು ತರ್ಕಿಸಬಹುದು.ಆದರೆ ಅದನ್ನು ಅನುಭವಿಸಲಾರೆವು. ’ತಾನು ಸಾಯಬೇಕು ಸತ್ತು ಸ್ವರ್ಗ ಕಾಣಬೇಕು.’

’ ನನ್ನ ಇಪ್ಪತ್ತೆರಡನೇ ವಯಸ್ಸಿಗೇ ನಾನು ಸತ್ತು ಹೋದೆ’ ಇಷ್ಟು ಹೇಳಿದವಳೇ ಅವಳು ಎದುರಿಗಿದ್ದ ಅನುಪಮಳ ಮುಖ ನೋಡಿದಳು. ಅನುಪಮ ಅವಳ ಕ್ಲಾಸ್ ಮೇಟ್.  ಇಬ್ಬರು ಪ್ರೈಮರಿಯಿಂದ ಹೈಸ್ಕೂಲ್ ತನಕ ಒಟ್ಟಿಗೆ ಓದಿದವರು.ಅವಳದು ಇನ್ನೊಂದು ದೊಡ್ಡ ಕತೆ. ಅದನ್ನು ಸಮಯ ಬಂದಾಗ ಮುಂದೆ ಹೇಳುವೆ ಈಗ ಅವಳು ತನ್ನ ಬಾಲ್ಯದ ಗೆಳತಿಯನ್ನು ನೋಡಲೆಂದೇ ಹದಿನೈದು ವರ್ಷಗಳ ನಂತರ ತನ್ನ ತವರೂರಿಗೆ-ತವರು ಮನೆಗಲ್ಲ- ಬಂದಿದ್ದಾಳೆ.
’ ಅಪ್ಪ ತೀರಿಕೊಂಡ ಮೇಲೆ ನಾನು ರತ್ನಾಪುರಕ್ಕೆ ಮತ್ತೆ ಬರಬೇಕಾಯ್ತು.’
’ಅಲ್ಲಿಯವರೆಗೆ ಎಲ್ಲಿದ್ದೆ?’
’ಮಂಗಳೂರಿನಲ್ಲಿ. ಅಪ್ಪ ನನ್ನನ್ನೂ ನನ್ನ ಮಕ್ಕಳನ್ನೂ ಈ ಊರಿನ ಜೊತೆ ಸಂಪರ್ಕವೇ ಇಲ್ಲದಂತೆ ಬೆಳೆಸಿಬಿಟ್ಟರು. ನಮಗೊಂದು ಮನೆಯನ್ನು ಮಾಡಿಕೊಟ್ಟು. ಶಾಂಭವಿ ಮತ್ತು ಗೌರಿಯನ್ನು ಅಲ್ಲೇ ಶಾಲೆಗೆ ಸೇರಿಬಿಟ್ಟರು. ರಾಜೆಗೂ ನಾವಿಲ್ಲಿ ಬರುತ್ತಿರಲಿಲ್ಲ.’
’ಮತ್ತೆ ಯಾವಾಗ ನೀನಿಲ್ಲಿಗೆ ಬಂದೆ?’
’ ಅಪ್ಪ ಸಡನ್ನಾಗಿ ಹೃದಯಾಘಾತದಿಂದ ತೀರಿಕೊಂಡರು. ಅಮ್ಮ ಒಂಟಿಯಾಗಿಬಿಟ್ಟರು. ಹಾಗಾಗಿ ನಾನಿಲ್ಲಿಗೆ ಬಂದೆ. ಇಷ್ಟು ದೊಡ್ಡ ಆಸ್ತಿಯನ್ನು ನೋಡಿಕೊಳ್ಳಬೇಕಾಗಿತ್ತಲ್ಲಾ. ಆಗ ಬಂದವನೇ ಕರುಣಾಕರ’
”ಕರುಣಾಕರ ಯಾರು?’
’ ಅವನು ನಮ್ಮ ಆಸ್ತಿ ಮೇಲ್ವಿಚಾರಣೆ ನೋಡಿಕೊಳ್ಳಲು ಬಂದ ರೈಟರ್.’
ಅಷ್ಟು ಹೇಳಿದವಳೇ ಸ್ವರ್ಣಲೇಖಾ ಸ್ವಲ್ಪ ಹೊತ್ತು ಮೌನ ತಾಳಿದಳು. ಆಮೇಲೆ ತನಗೆ ತಾನೇ ಎಂಬಂತೆ ಹೇಳಿಕೊಳ್ಳತೊಡಗಿದಳು.
’ ಆಗ ನನ್ನ ವಯಸ್ಸು ಮುವತ್ತೇಳು. ಒಂಟಿಯಾಗಿದ್ದೆ. ಅಸಾಯಕಳಾಗಿದ್ದೆ. ಅವಲಂಬನೆಯೊಂದು ಬೇಕಾಗಿತ್ತು. ಹಾಗಾಗಿ ಇದೆಲ್ಲ ನಡೆದು ಹೋಯ್ತೇನೋ...’ ಎಂದವಳೇ ಅನುಪಮಳತ್ತ ತಿರುಗಿ ಅವಳ ಎರಡೂ ಕೈಗಳನ್ನು ಹಿಡಿದುಕೊಂಡು ’ ಖಂಡಿತವಾಗಿಯೂ ನಾನು ನನ್ನ ಮಕ್ಕಳಿಗೆ ಅನ್ಯಾಯ ಮಾಡಲಿಲ್ಲ..’ ಹೇಳುತ್ತಲೇ ಅವಳ ಕಣ್ಣುಗಳು ತುಂಬಿಕೊಳ್ಳತೊಡಗಿದವು....

[ 'ಅಲ್ಲೊಂದು ಕತ್ತಲೆ ಕೋಣೆ’ಯ ಮುಂದುವರಿದ ಭಾಗ ]

3 comments:

Srikanth Manjunath said...

ನದಿಯನ್ನು ವರ್ಣಿಸುವ, ಭೂರಮೆಯನ್ನು ವಿವರಿಸುವ ಪರಿ ಸೊಗಸಾಗಿದೆ. ಜೊತೆಯಲ್ಲಿ ಭಾವ ಸಾರುವ ಪದಗಳು, ಕಥೆಗಳು, ಉಪಕಥೆಗಳು ಬರಹಕ್ಕೆ ಶಕ್ತಿ ತುಂಬಿ ಕೊಟ್ಟಿವೆ. ಮುಂದುವರೆಯಲಿ ಕಥೆಗಳ ಅಭಿಯಾನ.

Swarna said...

ಹೌದು, ಸ್ವರ್ಣಲೇಖಳ ಕಥೆಯನ್ನ ಅವಳ ಬಾಯಲ್ಲೇ ಕೇಳಬೇಕು. ಕಾಡೂರಿನ ಚಂದದ ಚಿತ್ರವನ್ನ ಕಟ್ಟಿ ಕೊಟ್ಟದ್ದಕ್ಕೆ ಉಷಾ 'ಶಾಂಭವಿ'ಗೆ ವಂದನೆಗಳು

ಭರತೇಶ ಅಲಸಂಡೆಮಜಲು said...

ನದಿಗಳ ಪ್ರೇಮ !! ಇಷ್ಟವಾಯಿತು ಅಕ್ಕ