ಚಿತ್ರಕೃಪೆ; ಅಂತರ್ಜಾಲ |
ಸ್ವಲ್ಪ ಹೊತ್ತು
ತಲೆ ತಗ್ಗಿಸಿ ಕುಳಿತಳು. ಅನಂತರ ತಲೆಯೆತ್ತಿ ಶೂನ್ಯದತ್ತ ದೃಷ್ಟಿ ನೆಟ್ಟು ತನಗೆ ತಾನೇ ಎಂಬಂತೆ
ಹೇಳಿಕೊಂಡಳು.
’ಅದು ನಿಜವಾಗಿಯೂ ನನ್ನ
ಬದುಕಿನ ವಸಂತಕಾಲ’...ಎಲ್ಲೋ ಕಳೆದು ಹೋದವಳಂತೆ ಮತ್ತೆ ಅರೆಗಣ್ಣು ಮುಚ್ಚಿದಳು. ಕಾಲನ್ನು
ಸ್ವರ್ಣಲೇಖೆಯ ತಿಳಿ ಜಲದಲ್ಲಿ ಮೆಲ್ಲನೆ ಅದ್ದಿದಳು. ಬಗ್ಗಿ ಒಂದು ಚಪ್ಪಟೆ ಕಲ್ಲನೆತ್ತಿ ನದಿ
ಒಡಲನ್ನು ಸವರಿಕೊಂಡು ಹೋಗುವಂತೆ ನದಿಮೇಲ್ಮೈಯಿಂದ ಜಾರುಗುಪ್ಪೆಯಂತೆ ಓರೆಯಾಗಿ ಒಗೆದಳು. ಅದು
ಕಪ್ಪೆಯಂತೆ ಹಲವು ಬಾರಿ ಕುಪ್ಪಳಿಸುತ್ತಾ ನದಿ ಮಧ್ಯದವರೆಗೂ ಹೋಯಿತು. ಅವಳು ಚಿಕ್ಕಮಗುವಿನಂತೆ
ಸಡಗರದಿಂದ ಎದ್ದು ನಿಂತು ’ಹನ್ನೆರಡು ಕಪ್ಪೆ’
ಎಂದು ಚಪ್ಪಾಳೆ ತಟ್ಟಿದಳು.
ಅನುಪಮ ಅವಳತ್ತ
ಅವಕ್ಕಾಗಿ ನೋಡುತ್ತಾ ಕುಳಿತುಬಿಟ್ಟಳು. ತಟ್ಟನೆ ಅವಳು ವಾಸ್ತವಕ್ಕೆ ಬಂದು ಬಂಡೆಯ ಮೇಲೆ
ಕುಳಿತಳು. ಕೈಯ್ಯಲ್ಲಿದ ನುಣ್ಣನೆಯ ಹಾಲು ಬಿಳುಪಿನ ಬೆಣಚು ಕಲ್ಲನ್ನು ತಿರುಗಿಸುತ್ತಾ ಹೇಳತೊಡಗಿದಳು.
’ಎಲ್ಲರೂ
ಹೇಳುತ್ತಾರೆ ಒಂದು ಹೆಣ್ಣಿನ ಗುಣಾತ್ಮಕವಾದ ಬದುಕು ನಲವತ್ತನೇ ವಯಸ್ಸಿಗೆ ಮುಗಿದು ಹೋಗುತ್ತದೆ
ಎಂದು. ಆದರೆ ನನ್ನ ಪಾಲಿಗದು ಒಂದು ಮಿಥ್ಯೆ. ನನ್ನ ಬದುಕು
ಆರಂಭಗೊಂಡಿದ್ದೇ ನಲ್ವತ್ತಕ್ಕೆ. ಹದಿನೈದನೇ ವಯಸ್ಸಿನಿಂದ ಇಪ್ಪತ್ತರೆಡನೇ ವಯಸ್ಸಿನವರೆಗೆ
ನನ್ನದಲ್ಲದ ಬಾಳನ್ನು ಬದುಕಿಬಿಟ್ಟೆ. ಅದೊಂದು ರೀತಿಯಲ್ಲಿ ಉರ್ಧ್ವಮುಖಿಯಾದ ಚೇತನವನ್ನು ಪ್ರಥ್ವಿ
ತತ್ವ ಹಿಡಿದಿಟ್ಟಂತೆ ಇತ್ತು. ಸದಾ ಅಸ್ಥಿರತೆ. ಒಂದು ದಿನ ಜೀವಭಯದಲ್ಲಿ ಓಡಿ ಬಂದೆ. ರತ್ನಾಪುರ
ಬಿಟ್ಟು ಬೇರೆ ಆಯ್ಕೆ ನನ್ನಲಿರಲಿಲ್ಲ. ವಿಧವೆಯಾದ
ದಿನದಂದೇ ಗೌರಿಗೆ ತಾಯಿಯಾದೆ. ಅಪ್ಪ ನನ್ನನ್ನೂ ನನ್ನ ಮಕ್ಕಳನ್ನು ಎದೆಗೊತ್ತಿಕೊಂಡ.’
’ಅದು ನನಗೆ
ಗೊತ್ತಿರುವ ಸಂಗತಿಯೇ. ನಿನ್ನನ್ನು ಮತ್ತು ಮಕ್ಕಳನ್ನು ಕರೆದೊಯ್ಯಲು ನಿನ್ನ ಗಂಡನ ಮನೆಯವರು ಹಲವು
ಬಾರಿ ಇಲ್ಲಿಗೆ ಬಂದಿದ್ದರು ಎಂಬುದನ್ನೂ ಕೇಳಿದ್ದೇನೆ. ನೀನು ಯಾಕೆ ಹೋಗಿಲ್ಲ?’
’ಹೋಗಬಾರದು ಎಂದೇನೂ
ಇರಲಿಲ್ಲ. ಆದರೆ ಅಲ್ಲಿ ಹೋಗಿ ಮಾಡುವುದಾದರೂ ಏನಿತ್ತು? ಅಲ್ಲಿ ಹೋಗಿದ್ದರೆ ಹತ್ತರಲ್ಲಿ
ಹನ್ನೊಂದನೆಯವಳಾಗಿರುತ್ತಿದೆ. ಆದರೆ ಇಲ್ಲಿ. ಇದು ನನ್ನದೇ ಮನೆಯಾಗಿತ್ತು. ಈ ನದಿ, ಈ ಕಾಡು,
ಇಲ್ಲಿಯ ಪಶು-ಪಕ್ಷಿ, ಇಲ್ಲಿಯ ಹೂ-ಹಣ್ಣು, ಇಲ್ಲಿಯ ಗಂಧ ಎಲ್ಲವೂ ನನ್ನ ಉಸಿರಿನಷ್ಟೇ ಸಹಜವಾಗಿತ್ತು.ಇಲ್ಲಿ
ನಾನು ನಾನಾಗಿರಬಹುದಿತ್ತು. ಗೌರಿಗೆ ಒಂದು ವರ್ಷವಾಗುವತನಕ ಅಪ್ಪ ಏನೂ ಮಾತಾಡಲಿಲ್ಲ.
ದೊಡ್ಡಮನೆಯವರು ನಮ್ಮನ್ನು ನೋಡಲು ಬಂದಾಗ ಅವರನ್ನು ಆದರದಿಂದಲೇ ಬರಮಾಡಿಕೊಳ್ಳುತ್ತಿದ್ದರು. ಆದರೆ
ಅವರು ಯಾವಾಗ ತಾಯಿ-ಮಕ್ಕಳನ್ನು ಕರೆದುಕೊಂಡು ಹೋಗಲು ಬರುತ್ತಾರೆಂದು ಸುದ್ದಿ ಕಳುಹಿಸಿದರೋ ಆಗ
ಅಪ್ಪ ನಿರ್ಧಾರದ ಜವಾಬ್ದಾರಿಯನ್ನು ನನಗೆ ವರ್ಗಾಯಿಸಿಬಿಟ್ಟರು.
ನನ್ನ ಹೆತ್ತವರಿಗೆ ನಾನು ಏಕೈಕ ಸಂತಾನ. ಇಳಿಗಾಲದಲ್ಲಿ
ನಾನವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಈಗ ನನಗೆ ಆ ಅವಕಾಶ ಸಿಕ್ಕಿದೆ. ನಾನು
ನಿರ್ಧರಿಸಿಬಿಟ್ಟೆ. ಇದು ನನ್ನ ಕರ್ಮ ಭೂಮಿ. ನಾನು ಇಲ್ಲಿಯೇ ಬದುಕು ಕಂಡು ಕೊಳ್ಳುತ್ತೇನೆ. ನನ್ನ
ಮಕ್ಕಳನ್ನು ಇಲ್ಲಿಯ ಸ್ವಚ್ಛಂಧ ಪರಿಸರದಲ್ಲಿ ಮುಕ್ತವಾಗಿ ಬೆಳೆಸುತ್ತೇನೆ.
ಅಪ್ಪ-ಅಮ್ಮನಿಗೆ
ನೆಮ್ಮದಿಯಾಯಿತು. ಆದರೆ ಅಪ್ಪ ನನ್ನಿಂದ ಒಂದು ಭಾಷೆ ತೆಗೆದುಕೊಂಡರು. ಯಾವುದೇ ಸಂದರ್ಭದಲ್ಲೂ
ಮಕ್ಕಳಿಗೆ ತಾವು ಯಾವ ಮನೆತನಕ್ಕೆ ಸೇರಿದವರೆಂಬುದು ತಿಳಿಯಬಾರದು. ಮತ್ತು ಅವರ ವಿಧ್ಯಾಭ್ಯಾಸ
ದೂರದ ಮಂಗಳೂರಿನಲ್ಲಿ ನಡೆಯಬೇಕು. ಅವರು ಇಲ್ಲಿಗೆ ಅಪ್ಪಿತಪ್ಪಿಯೂ ಬರಬಾರದು. ಅವರ ರಜಾದಿನಗಳಲ್ಲಿ
ನಾವೇ ಅಲ್ಲಿಗೆ ಬರುತ್ತೇವೆ. ಮೊಮ್ಮಕ್ಕಳೊಂದಿಗೆ ಒಂದೆರಡು ತಿಂಗಳು ಇದ್ದು ಬರುತ್ತೇವೆ. ನೀನು
ಮಕ್ಕಳ ಜೊತೆ ಇದ್ದುಕೊಂಡು ನಿನ್ನ ವಿಧ್ಯಾಭ್ಯಾಸ ಮುಂದುವರಿಸಬೇಕು.
ಅವರ ಎಲ್ಲಾ
ಶರತ್ತುಗಳನ್ನೂ ನಾನು ಒಪ್ಪಿಕೊಂಡೆ.
ನಮ್ಮನ್ನು ಕರೆದುಕೊಂಡು
ಹೋಗಲು ಸ್ವತಃ ನನ್ನ ಮೈದುನನೇ ಬಂದಿದ್ದ. ಈಗವನು ಊರ ಪಟೇಲ . ಎರಡು ಗಾಡಿಗಳಲ್ಲಿ ಮನೆ ಮಂದಿ
ಬಂದಿದ್ದರು. ಅಪ್ಪ ಖಡಾಖಂಡಿತವಾಗಿ ಹೇಳಿದ; ತನ್ನ ಮಗಳಿಗೆ ಆ ಮನೆಯೊಂದಿಗಿನ ಋಣ ಕಡಿದು
ಬಿದ್ದಿದೆ. ಇನ್ನಾಕೆ ಅಲ್ಲಿಗೆ ಬರುವುದಿಲ್ಲ. ಶಕುಂತಲಾ ಅತ್ತೆ ಅಪ್ಪನೊಂದಿಗೆ ವಾಗ್ವಾದ
ನಡೆಸಿದಳು. ಹೆಣ್ಣಿನ ಅಸ್ತಿತ್ವ ಇರುವುದೇ ಗಂಡನ ಮನೆಯಲ್ಲಿ, ಅದು ಅವಳ ಹಕ್ಕು ಕೂಡ. ಇದು
ದೊಡ್ಡಮನೆಯ ಘನತೆ, ಗೌರವದ ಪ್ರಶ್ನೆ ಎಂದೆಲ್ಲಾ ವಾದಿಸಿದಳು. ಆದರೆ ಅಪ್ಪ. ತನ್ನ ಮಗಳ ಅಸ್ತಿತ್ವ
ಇರುವುದು ಅವಳ ವ್ಯಕ್ತಿತ್ವ ಅರಳುವುದರಲ್ಲಿ. ಅವಳು ಇಲ್ಲಿದ್ದರೆ ಅರಳುತ್ತಾಳೆ. ಅಲ್ಲಿ ಭಯದಲ್ಲಿ
ನಲುಗುತ್ತಾಳೆ. ಕಳುಹಿಸುವುದಿಲ್ಲ. ಎಂದು ಒಂದೇ ಮಾತಿನಲ್ಲಿ ಹೇಳಿಬಿಟ್ಟರು. ಗಂಡಸರು ಹೆಚ್ಚು
ಮಾತಾಡಲಿಲ್ಲ. ಅವರು ತಮ್ಮ ಕರ್ತವ್ಯವನ್ನು ಮಾಡಲು ಬಂದಂತಿತ್ತು.
ಮಾತಿನ್ನು ಸಾಕು
ಎಂಬಂತೆ ತಲೆಯ ಮೇಲಿನ ಮುಂಡಾಸನ್ನು ಬಿಚ್ಚಿ ಕೊಡವಿ ಹೆಗಲಮೇಲೆ ಹಾಕಿಕೊಂಡು ’ಏಳಿ ಊಟ ಮಾಡೋಣ’
ಎಂದು ಎದ್ದೇ ಬಿಟ್ಟರು. ಯಾರೂ ತುಟಿ ಪಿಟಕ್ ಎನ್ನಲಿಲ್ಲ.
ಚಿತ್ರಕೃಪೆ; ಅಂತರ್ಜಾಲ |
ಅಮ್ಮ ಬೀಗರಿಗಾಗಿ
ಒಳ್ಳೆಯ ಔತಣದ ಊಟವನ್ನು ಮಾಡಿಸಿದ್ದಳು. ಸ್ವರ್ಣಲೇಖೆಯ ಒಡಲಲ್ಲಿ ಯಥೇಚ್ಛವಾಗಿ ಸಿಗುವ ’ಕಲ್ಲುಮುಳ್ಳ’ವೆಂಬ
ಮೀನಿನ ಸಾರು. ಎಣ್ಣೆಯಲ್ಲಿ ಕರಿದ ಕಾಡುಹಂದಿಯ ಉಪ್ಪಣ. ಕಬ್ಬೆಕ್ಕು ಗಸಿ, ಪುಳಿಮುಂಚಿ ಮೀನು.
ಹುರಿದ ಕೋಳಿ, ಪೊಕ್ಕಳ ರೊಟ್ಟಿ, ಪದಂಜಿ ಪಾಯಸ. ಅಲಸಂಡೆ ಪಲ್ಯ. ಗೇರು ಬೀಜ; ಕಡ್ಲೆ;ತೊಂಡೆಕಾಯಿ
ಮಿಶ್ರಪಲ್ಯ....ಎಲ್ಲವನ್ನೂ ಒತ್ತಾಯಿಸಿ ಅಕ್ಕರೆಯಿಂದ ಬಡಿಸಿದರು ನಮ್ಮಮ್ಮ. ಅಮ್ಮನಿಗೆ ನಾನೂ
ಜೊತೆಯಾದೆ. ನನಗೆ ಒಳಗೊಳಗೇ ಅನ್ನಿಸುತ್ತಿತ್ತು. ಇನ್ನಿವರಿಗೆ ನಾನೆಂದೂ ಹೀಗೆ ಬಡಿಸುವ ಸಂದರ್ಭ
ಬರಲಾರದು. ಹಾಗಾಗಿ ಕಣ್ಣು-ಕರಳು ತುಂಬಿ ಬಂದಂತಾಗುತ್ತಿತ್ತು. ಮೌನದಲ್ಲೇ ಊಟ ಸಾಗಿತು.
ಎಲ್ಲರೂ ಕೈ
ತೊಳೆದುಕೊಂಡ ನಂತರ ನಾನು ನನ್ನ ಕೋಣೆಗೆ ಹೋಗಿ ಮಗುವಿಗೆ ಹಾಲೂಡಿಸುತ್ತಿದ್ದೆ. ಅಲ್ಲಿಗೆ ಬಂದ
ಅನುಸೂಯ ಮಗುವನ್ನು ಮುದ್ದಿಸಿ ಅವಳ ಕೈಗೆ ನೂರು ರೂಪಾಯಿಯ ಒಂದು ನೋಟನ್ನಿತ್ತು. ಮಗುವನ್ನು
ಚೆನ್ನಾಗಿ ನೋಡಿಕೋ ಅದು ಆ ಮನೆಯ ಕುಡಿ ಎಂಬುದನ್ನು ಯಾವತ್ತೂ ಮರೆಯದಿರು. ಅದನ್ನು ಸಮಯ ಬಂದಾಗ
ಅವುಗಳಿಗೂ ತಿಳಿಸು. ಎನ್ನುತ್ತಾ ನನ್ನ ಕೈಗೆ ಒಂದು ದೊಡ್ಡ ಬಟ್ಟೆಯ ಗಂಟನ್ನಿತ್ತು. ಇದು ಅಲ್ಲಿ
ನೀನು ಬಿಟ್ಟು ಬಂದಿದ್ದ ನಿನ್ನ ವಸ್ತುಗಳು ಎಂದಳು. ನಾನು ಅಚ್ಚರಿಯಿಂದ ಅವಳತ್ತ ನೋಡಿದೆ. ಅವಳ
ಮುಖದಲ್ಲೊಂದು ನಿಗೂಢ ನಗೆಯಿತ್ತು.
ಅವರು ಹೊರಟು
ಹೋದರು.. ಇದಾದ ಎರಡು ತಿಂಗಳ ನಂತರ ನಾನು ಮಂಗಳೂರಿಗೆ ಬಂದು ಬಿಟ್ಟೆ. ಅಪ್ಪ ನಮಗಾಗಿ ಬಿಜೈನಲ್ಲಿ
ಒಂದು ಮನೆಯನ್ನು ಖರೀದಿಸಿದರು. ನಮ್ಮನ್ನು ನೋಡಿಕೊಂಡು ಅಡುಗೆ ಮಾಡಿ ಹಾಕಲು ಕೆಲಸದವಳನ್ನು
ನೇಮಿಸಿದರು. ಆಗ ಮಂಗಳೂರಿನಲ್ಲಿ ತುಂಬಾ ಪ್ರಸಿದ್ಧಿಯಾಗಿದ್ದ ಹಂಪನಕಟ್ಟೆಯಲ್ಲಿರುವ ಸರಕಾರಿ
ಕಾಲೇಜಿನಲ್ಲಿ ಪಿಯುಸಿ ಕ್ಲಾಸಿಗೆ ಜಾಯಿನ್ ಆದೆ. ಶಾಂಭವಿಯನ್ನು ಕೊಡಿಯಾಲಬೈಲಿನಲ್ಲಿರುವ ಸೈಂಟ್
ಅಗ್ನೆಸ್ ಸ್ಕೂಲಿಗೆ ಅಪ್ಪ ಸೇರಿಸಿದರು.
ಕಾಡಿನ ನದಿ ದಂಡೆಯಿಂದ ಪಟ್ಟಣದ ಕಡಲತಡಿಗೆ ಬಂದೆ.
ಸಮುದ್ರದ ಅಬ್ಬರದ ತೆರೆಗಳನ್ನು ನೋಡ ನೋಡುತ್ತಲೇ ನನ್ನೊಳಗಿನ ಪಿಸು ಮಾತುಗಳು ನದಿಯಾಗಿ ಹರಿಯಲು ಆರಂಭಿಸಿದವು.
[ ಕಳೆದ ಸಂಚಿಕೆಯ ಕಥೆ ಮುಂದುವರಿದಿದೆ.....]
6 comments:
ಉಷಾ ಮೇಡಂ, ಪದಗಳು ಹೊರಚೆಲ್ಲುವ ಭಾವಗಳು ನನ್ನ ಮೂಕನ ಮಾಡಿಬಿಡುತ್ತದೆ. ಕೆಲವೊಮ್ಮೆ ಬಂಡೆಗಳ ನಡುವಿನ ಅಲೆಗಳ ಹಾಗೆ ರಪ್ಪನೆ ಮನಕ್ಕೆ ಬಡಿಯುತ್ತವೆ, ಇನ್ನೊಮ್ಮೆ ನಿಧಾನವಾಗಿ ಬಂದು ಮನದ ಪಾದಗಳನ್ನು ತೋಯಿಸಿ ಹೋಗುತ್ತವೆ. ಕುತೂಹಲ ಘಟ್ಟದಲ್ಲಿ ನಿಂತಿರುವ ಕಥೆ ಅಲೆಗಳಿಗಾಗಿ ಕಾಯುವ ಕಡಲ ತೀರದ ಹಾಗೆ ಆಗಿದೆ ನನ್ನ ಮನ. ಸೊಗಸಾಗಿದೆ ಮುಂದುವರೆಯಲಿ ಕಥಾ ಅಭಿಯಾನ.
ಕಥೆಯ ತಿರುವುಗಳು ನಮ್ಮ ಕುತೂಹಲಗಳನ್ನು ಮತ್ತೂ ಬಡಿದೆಬ್ಬಿಸುತ್ತಿವೆ... ಈ ಕಥೆಯನ್ನು ಓದುವಾಗೆಲ್ಲ ಮನ ಎಲ್ಲೆಲ್ಲೊ ಹೋಗಿ ಬರುತ್ತೆ.... ಮುಂದಿನ ಭಾಗ (ಗಳ) ನ್ನು ಓದಲು ಕಾಯುತ್ತಿದ್ದೇನೆ.. ಜೊತೆಗೆ ಕಥೆ ಮುಗಿದ ಮೇಲೆ ಮತ್ತೊಮ್ಮೆ ಭಾಗ ೧ ರಿಂದ ಕೊನೆಯವರೆಗೂ ಓದಲು ಕೂಡ.....
ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ ಮೇಡಂ
ನಮಸ್ತೆ ಉಷಾ ಮೇಡಂ, ಕುತೂಹಲಕಾರಿಯಾಗಿದೆ. ಹಿಂದಿನ ಭಾಗಗಳನ್ನು ಓದಬೇಕೆನ್ನುವ ತವಕ... ದಯವಿಟ್ಟು ಪೋಸ್ಟ್ ಮಾಡಿ.
Mundiana baga yelli ushaavare
mundina bagakagi kadhiruve usha avre
Post a Comment