ಧ್ಯಾನ ಕೇಂದ್ರಕ್ಕೆ ಹೊರಟು ನಿಂತಿದ್ದೇನೆ.
ಗುರುಕಾಣಿಕೆಯೊಂದನ್ನು ಅರ್ಪಿಸಬೇಕಾಗಿದೆ.
’ವರ್ಣ ಮಾತ್ರಂ ಕಲಿಸಿದಾತಂ ಗುರು’
ನೀ ಬದುಕ ಪಥ ಬದಲಿಸಿದ ಮಹಾಗುರು !
ಚಿತ್ರಕೃಪೆ; ಅಂತರ್ಜಾಲ |
ಹಗ್ಗದ ಮೇಲಿನ ನಡಿಗೆ...
’ಹಾಳಾಗಿ
ಹೋಗು’ ಕಿರುಚಿದ ಬುದ್ದನಂತಿದ್ದ ನಿಯಂತ್ರಕ.
ಕೈಯ್ಯಲ್ಲಿದ್ದ ಕೋಲು ಜಾರಿತು.
ಆಯುಧಶಾಲೆಯಲ್ಲಿ ಉದಿಸಿದ ಚಕ್ರರತ್ನ ಗಾಳಿಯಲ್ಲಿ ತೇಲಿ
ಬಂದು
ಅನಾಹತವನ್ನು ಬೇಧಿಸಿ
ಕಿವಿಗೆ ಕಾದ ಸೀಸವಾಗಿ, ಎದೆಗೆ ಚೂರಿಯ ಅಲಗಾಗಿ ಇರಿಯುತ್ತಿದ್ದಂತೆ
ಚಿತ್ತಬಿತ್ತಿಯಲ್ಲಿ ತಕ ತಕನೆ ಕುಣಿಯುತ್ತಿದ್ದ
ನೀಲಾಂಜನೆ
’ಬೋಂಕನೆ’ ಮಾಯವಾಗಿ ಈ ಗೆಳೆತನವೇ ನಶ್ವರವೆನಿಸಿ
ಮೋಹದ ಕನ್ನಡಕವನ್ನು ಬಿಸುಟು ಪುಸ್ತಕದ ಕಪಾಟಿನತ್ತ
ನಡೆದೆ.
ಭ್ರಮೆಯ ಪ್ರಪಂಚದಿಂದ ರಕ್ತ ಮಾಂಸದ ವಾಸ್ತವ ಜಗತ್ತಿಗೆ.
’ಹಾಳಾಗಿ ಹೋಗು’ ಎಂದೂ ಹೇಳಿದವಳಲ್ಲ;
ಹೇಳಿಸಿಕೊಂಡವಳಲ್ಲ.
ತೂಕ ತಪ್ಪಿದ ನನ್ನ ನಡೆಗೆ ಲಜ್ಜೆಯೆನಿಸಿ ಭೂಮಿಗಿಳಿದು
ಬೀಜವಾದೆ.
ಸೂರ್ಯರಶ್ನಿಗಾಗಿ ಹಂಬಲಿಸಿ, ಪಂಚಾಗ್ನಿಯಲ್ಲಿ ಬೆಂದೆ.
ಮಿತ್ರನಿಗೆ ವಂದಿಸಿ, ಆಲಂಗಿಸಿ, ಇಳೆಗೆ ಹಣೆ ಹಚ್ಚಿ
ಪೂರಕ, ಕುಂಭಕ, ರೇಚಕಗಳಲ್ಲಿ ಪ್ರಾಣಶಕ್ತಿಯನ್ನು
ನಾಡಿಗಳಲ್ಲಿ ಹರಿಸಿ
ತಲೆಯೆತ್ತಿದಾಗ ಕಂಡದ್ದು ವರ್ಷಗಳ ಹಿಂದೆ ಮರೆತಿದ್ದ ಧ್ಯಾನ
ಕೇಂದ್ರ.
ಹೊರಟಿದ್ದೇನೆ.....
ಚಿತ್ರಕೃಪೆ; ಅಂತರ್ಜಾಲ |
ಗೆಳೆಯಾ, ಕಳವಳಿಸಬೇಡ. ನೀನೆಗೆ ಪರಮಗುರುವಾದೆ .
ಪೋಲಾಗುತ್ತಿದ್ದ ಶಕ್ತಿಯನ್ನು ಮತ್ತೆ ಸಂಚಯಿಸಲು ದಾರಿ
ದೀಪವಾದೆ.
ಮೊಣಕಾಲೂರಿದ್ದೇನೆ; ನಿನಗೆ ನಮೋ ನಮಃ.!
3 comments:
ಆಹಾ ಉಷಕ್ಕ.. ಕವನ ಮಸ್ತ್.
...../\
this is excellent
Post a Comment